Wednesday, January 7, 2009

ವಿಚಾರಸ್ವಾತಂತ್ರ್ಯ ಹಾಗು ವಿಚಾರಕ್ರಾಂತಿ

೧೨ನೆಯ ಶತಮಾನದಲ್ಲಿ ಜರುಗಿದ ಶರಣರ ಕ್ರಾಂತಿಯು ಕರ್ನಾಟಕದಲ್ಲಿ ನಡೆದ ಅದ್ಭುತ ವೈಚಾರಿಕ ಕ್ರಾಂತಿ ಎನ್ನಬಹುದು.
ಬಸವಣ್ಣನವರನ್ನು ಈ ಕ್ರಾಂತಿಯ ನೇತಾರ ಎನ್ನಲಾಗುತ್ತದೆ.
ಆದರೆ ಈ ಕ್ರಾಂತಿ ಬಸವಣ್ಣನವರಿಗಿಂತಲೂ ಸಾಕಷ್ಟು ಪೂರ್ವದಲ್ಲಿಯೇ ಪ್ರಾರಂಭವಾಗಿತ್ತು.
ಈ ಪೂರ್ವಿಕರನ್ನು ಬಸವಣ್ಣನವರು ಆದ್ಯರು ಎಂದು ಕರೆದಿದ್ದಾರೆ.
ಅವರ ವಚನಗಳನ್ನು “ಆದ್ಯರ ವಚನ ಪರುಷದಂತೆ ಕಾಣಯ್ಯ” ಎಂದು ಬಣ್ಣಿಸಿದ್ದಾರೆ.

ಈ ವೈಚಾರಿಕ ಕ್ರಾಂತಿಯಲ್ಲಿ ಶರಣರು ಆರು ಅಂಶಗಳನ್ನು ಪ್ರತಿಪಾದಿಸಿದ್ದಾರೆ:
(೧) ಸಾಂಪ್ರದಾಯಕ ಅಂಧಶ್ರದ್ಧೆಗಳನ್ನು ತಿರಸ್ಕರಿಸುವದು,
(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು,
(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು,
(೪) ಧಾರ್ಮಿಕ ಆಚರಣೆಗಳ ಸರಳೀಕರಣ,
(೫) ವೈಯಕ್ತಿಕ ಉತ್ತಮಿಕೆಗೆ ಒತ್ತು,
(೬) ಸಾಮಾಜಿಕ ಸುಧಾರಣೆ.

ಈ ಅಂಶಗಳು ಬಸವಣ್ಣನವರ ಅನೇಕ ವಚನಗಳಲ್ಲಿ ವ್ಯಕ್ತವಾಗುತ್ತವೆ.
ಅಂತಹ ಕೆಲವು ವಚನಗಳು ಹಿಗಿವೆ:

(೧) ಸಾಂಪ್ರದಾಯಕ ಶ್ರದ್ಧೆಗಳನ್ನು ತಿರಸ್ಕರಿಸುವದು (Rational thinking):
ಶುಭಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವದು ಒಂದು ಸಾಂಪ್ರದಾಯಕ ಶ್ರದ್ಧೆ.
ಆದರೆ, ಶರಣರು ‘ಶುಭಮುಹೂರ್ತ’ ಎನ್ನುವ conceptಅನ್ನೇ ತಿರಸ್ಕರಿಸಿದರು.
ಇದರ ಬಗೆಗೆ ಬಸವಣ್ಣನವರ ವಚನವೊಂದು ಹೀಗಿದೆ:

“ ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ, ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮ ದೇವನ ಪೂಜಿಸಿದ ಫಲ ನಿಮ್ಮದಯ್ಯಾ.”

“ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ, ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ, ವ್ಯತಿಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥನರಿದವಂಗೆ
ಹೋಮ, ನೇಮ, ಜಪ, ತಪದಿಂದ ವೆಗ್ಗಳ,
ಕೂಡಲಸಂಗಮ ದೇವಾ ನಿಮ್ಮ ಮಾಣದೆ ನೆನೆವವಂಗೆ”

ಪಾರಮಾರ್ಥಿಕ ಸಾಧನೆಗೆ ದೇಹದಂಡನೆಯು ಅವಶ್ಯವೆನ್ನುವದು ಮತ್ತೊಂದು ಸಾಂಪ್ರದಾಯಕ ಶ್ರದ್ಧೆ.
ಬಸವಣ್ಣನವರ ಒಂದು ವಚನವು ಈ ಪರಿಕಲ್ಪನೆಯನ್ನು ವಿರೋಧಿಸುವ ಪರಿ ಹೀಗಿದೆ:

“ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ ಅಯ್ಯಾ
ಅಘೋರ ತಪವ ಮಾಡಿದೊಡೇನು?
ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮ ದೇವಾ?”

ಈ ವಚನದಲ್ಲಿ ಬಸವಣ್ಣನವರು ಸಾಂಪ್ರದಾಯಕ ಶ್ರದ್ಧೆಯನ್ನು ಟೀಕಿಸಿದ್ದಷ್ಟೇ ಅಲ್ಲ,
ತಮ್ಮ ವೈಚಾರಿಕ ಧಾರ್ಷ್ಟ್ಯವನ್ನೂ ನಿಚ್ಚಳವಾಗಿ ತೋರಿಸಿದ್ದಾರೆ.

ಭಾರತೀಯ ಸಾಂಪ್ರದಾಯಕ ವಿಚಾರಧಾರೆಯ ಮೇರೆಗೆ ಹಾವು ಅಥವಾ ಸರ್ಪವೆಂದರೆ ಕುಂಡಲಿನಿ ಶಕ್ತಿ.
ಈ ಶಕ್ತಿಯನ್ನು ಜಾಗೃತಗೊಳಿಸುವದು ಯೋಗಿಯ ಗುರಿಯಾಗಿದೆ.
ಕನಸಿನಲ್ಲಿ ಹಾವು ಕಂಡರೆ ಅದು ಕುಂಡಲಿನಿ ವ್ಯಕ್ತವಾಗುವ ಬಗೆ ಎಂದು ಸಾಂಪ್ರದಾಯಕವಾಗಿ ಭಾವಿಸಲಾಗುತ್ತದೆ.
ಆದರೆ ಬಸವಣ್ಣನವರು ಕನ್ನಡ ನಾಡಿನಲ್ಲಿ (ಬಹುಶಃ ಭಾರತದಲ್ಲಿಯೇ) ಮೊದಲ ಬಾರಿಗೆ ಹಾವನ್ನು ಕಾಮಪೂರಿತ ಮನಸ್ಸಿಗೆ ಹೋಲಿಸಿದ್ದಾರೆ.
ಜರ್ಮನಿಯ ಮನೋವಿಜ್ಞಾನಿ ಫ್ರಾ:ಯ್ಡನು ಕನಸುಗಳಲ್ಲಿ ಕಂಡುಬರುವ ಹಾವು ಲೈಂಗಿಕ ಪ್ರತೀಕ ಎಂದು ಹೇಳುವದಕ್ಕಿಂತ ಏಳುನೂರು ವರ್ಷ ಮೊದಲಿಗೇ, ಬಸವಣ್ಣನವರು ಹಾವನ್ನು ‘lust’ ಪ್ರತೀಕವಾಗಿ ಬಳಸಿದ್ದಾರೆ.
ಇದು ಅವರ ವೈಚಾರಿಕ ಧಾರ್ಷ್ಟ್ಯವನ್ನು ಎತ್ತಿ ತೋರಿಸುತ್ತದೆ.

ವಿಚಿತ್ರವೆಂದರೆ, ಎರಡು ಶತಮಾನಗಳ ನಂತರದ ಕವಿಯಾದ ಸರ್ವಜ್ಞನು ಇದಕ್ಕೆ ವಿರುದ್ಧವಾದ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿದ್ದಾನೆ:

“ದಂಡಿಸದೆ ದೇಹವನು, ಖಂಡಿಸದೆ ಕಾಯವನು
ಉಂಡುಂಡು ಸ್ವರ್ಗಕ್ಕೆ ಹೋಗಲಿಕೆ ಅದನೇನು,
ರಂಡೆಯಾಳುವಳೆ ಸರ್ವಜ್ಞ?”

(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು:

ಮತೀಯ ಶ್ರೇಣೀಕರಣವು ವೈದಿಕ ಧರ್ಮದ ಒಂದು ವಿರೂಪ ಸ್ವರೂಪವಾಗಿದೆ.
ಬಸವಣ್ಣನವರ ಅನೇಕ ವಚನಗಳಲ್ಲಿ ಇದರ ವಿರುದ್ಧದ ಹೋರಾಟವನ್ನು ನೋಡಬಹುದು.
ಒಂದು ಉದಾಹರಣೆ ಹೀಗಿದೆ:

“ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹಾರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದೆಡೆ ಕೂಡಲಸಂಗಮ ನಗುವನಯ್ಯಾ!”

“ ಶ್ವಪಚನಾದಡೇನು? ಲಿಂಗಭಕ್ತನೇ ಕುಲಜನು.
ನಂಬಿ, ನಂಬದಿದ್ದಡೆ ಸಂದೇಹಿ, ನೋಡಾ.
ಕಟ್ಟಿದಡೇನು, ಮುಟ್ಟಿದಡೇನು, ಹೂಸಿದಡೇನು
ಮನ ಮುಟ್ಟದನ್ನಕ್ಕ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಯ್ಯನೊಲಿದಂಗಲ್ಲದೆ.”

“ಜಾತಿವಿಡಿದು ಸೂತಕವನರೆಸುವೆ,
ಜ್ಯೋತಿವಿಡಿದು ಕತ್ತಲೆಯನರೆಸುವೆ!
ಇದೇಕೊ ಮರುಳುಮಾನವಾ?
ಜಾತಿಯಲ್ಲಿ ಅಧಿಕನೆಂಬೆ!
ವಿಪ್ರಶತಕೋಟಿಗಳಿದ್ದಲ್ಲಿ ಫಲವೇನು?
ಭಕ್ತಶಿಖಾಮಣಿ ಎಂಬುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಶವ ನಂಬು,
ಕೆಡಬೇಡ ಮಾನವಾ.”

ಶರಣರೆಲ್ಲರೂ ಒಂದೇ. ಯಾರಲ್ಲೂ ಮೇಲು, ಕೀಳಿಲ್ಲ ಎನ್ನುವ ತತ್ವವು
ಬಸವಣ್ಣನವರ ಈ ಮುಂದಿನ ವಚನದಲ್ಲಿ ವ್ಯಕ್ತವಾಗುತ್ತದೆ:

“ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮ ದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ!”

(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು:

ವೈದಿಕ ಧರ್ಮದಲ್ಲಿ ಬೇರೂರಿದ ಅನಾಚಾರ ಹಾಗೂ ಡಾಂಭಿಕತೆಯನ್ನು ತೊಳೆಯಲು, ಶರಣರು ಪ್ರಯತ್ನ ಪಟ್ಟಿದ್ದಾರೆ. ಇದರ ಉದಾಹರಣೆಯಾಗಿ ಅಕ್ಕಮಹಾದೇವಿಯ ವಚನವೊಂದನ್ನು ನೋಡಬಹುದು:

“ತನು ಕರಗದವರಲ್ಲಿ ಪುಷ್ಪವನೊಲ್ಲೆಯ್ಯ ನೀನು,
ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯ್ಯ ನೀನು,
ಹದುಳಿಗರಲ್ಲದವರಲ್ಲಿ ಮಜ್ಜನವನೊಲ್ಲೆಯ್ಯ ನೀನು,
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯ್ಯ ನೀನು,
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯ್ಯ ನೀನು,
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯ್ಯ ನೀನು,
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯ್ಯ ನೀನು,
ಹೃದಯಕಮಲವರಳದವರಲ್ಲಿ ಇರಲೊಲ್ಲೆಯ್ಯ ನೀನು,
ಎನ್ನಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ!”

ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ ಈ ಐದು ಉಪಕರಣಗಳನ್ನು ಬಳಸಿ ಮಾಡುವ ಪೂಜೆಗೆ ‘ಪಂಚೋಪಚಾರ ಪೂಜೆ’ ಎಂದು ಕರೆಯಲಾಗುತ್ತದೆ.
ಇದರಂತೆ ಶೋಡಷೋಪಚಾರ ಪೂಜೆಯೂ ಇದೆ.
ಪರಮಾತ್ಮನ ಪೂಜೆಯ ಅಂತಿಮ ಉದ್ದೇಶವೇ ‘ತನ್ನತನ’ ಕರಗುವದು.
ಇದನ್ನೇ ಕನಕದಾಸರು “ ‘ನಾನು’ ಹೋದರೆ ಹೋಗಬಹುದು” ಎಂದು ಹೇಳಿದ್ದು.
‘ನಾನು’ ನಾಶವಾಗದೆ, ಈ ಪಂಚೋಪಚಾರ ಅಥವಾ ಶೋಡಷೋಪಚಾರ ಪೂಜೆಯ ಸಾರ್ಥಕತೆ ಏನು?
ಅಕ್ಕಮಹಾದೇವಿ ತನ್ನ ವಚನದ ಮೂಲಕ ಇಂತಹ ವ್ಯರ್ಥ ಪೂಜೆಯನ್ನು ಟೀಕಿಸಿದ್ದಾರೆ.
ತನು ಹಾಗು ಮನಸ್ಸನ್ನು ಅಪರೋಕ್ಷವಾಗಿ ಪುಷ್ಪ ಹಾಗೂ ಅದರ ಗಂಧಕ್ಕೆ ಹೋಲಿಸಿರುವದು ಈ ವಚನದ ವೈಶಿಷ್ಟ್ಯವಾಗಿದೆ.

ಇದರಂತೆಯೇ, ಯಜ್ಞ ಯಾಗಾದಿಗಳಲ್ಲಿ ಜರಗುತ್ತಿದ್ದ ಪ್ರಾಣಿಬಲಿಯನ್ನು ಖಂಡಿಸಿ ಬಸವಣ್ಣನವರು ಹೇಳಿದ ವಚನವೊಂದು ಹೀಗಿದೆ:

“ ವಿಷ್ಣು ವರಾಹಾವತಾರದಲ್ಲಿ ಹಂದಿಯಂ ತಿಂಬುದಾವಾಚಾರವೊ?
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೊ ?
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೊ?
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೊ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,
ಹದಿನೆಂಟು ಪುರಾಣ, ಇಮ್ಮತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ, ಹೋತನ ಕೊಂದು
ತಿಂಬುದಾವಾಚಾರದೊಳಗೋ?
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮ ದೇವಂಗೆ ಅಧಿದೇವತೆಗಳು ಸರಿಯೆಂಬುವರ
ಬಾಯಲ್ಲಿ ಸುರಿಯವೆ ಬಾಲಹುಳಗಳು? ”

(೪) ಧಾರ್ಮಿಕ ಆಚರಣೆಗಳ ಸರಳೀಕರಣ:

ಧಾರ್ಮಿಕ ಡಂಭಾಚಾರವನ್ನು ತಿರಸ್ಕರಿಸಿದ ಶರಣರು, ಅದಕ್ಕೆ ಲಿಂಗಧಾರಣೆಯ ಪರ್ಯಾಯವನ್ನು ನೀಡಿದರು.
ಇಷ್ಟಲಿಂಗವನ್ನು ಸದಾಕಾಲ ಎದೆಯ ಮೇಲೆ ಧರಿಸುವದರಿಂದ ಶರಣನು ಸದಾಕಾಲ ಎಚ್ಚರದಿಂದ ನಡೆಯುತ್ತಾನೆ.
ಈ ಇಷ್ಟಲಿಂಗವನ್ನು ಕರಸ್ಥಳದಲ್ಲಿ ಇಟ್ಟುಕೊಂಡು ಮಾನಸಿಕ ಪೂಜೆಯನ್ನು ಮಾಡುವದರಿಂದ,
ಆತ ಸಾಧನಾಪಥದಲ್ಲಿ ಶೀಘ್ರವಾಗಿ ಮುಂದುವರೆಯಬಹುದು ಎನ್ನುವ ಹಾರೈಕೆ ಇಲ್ಲಿದೆ.
ಇದಕ್ಕೆ ಸಂಬಂಧಿಸಿದ ಬಸವಣ್ಣನವರ ವಚನವೊಂದು ಈ ರೀತಿಯಾಗಿದೆ:

“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀಮುಕುಟ!
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”

(೫) ವೈಯಕ್ತಿಕ ಉತ್ತಮಿಕೆಗೆ ಒತ್ತು:

ಕೇವಲ ಲಿಂಗಧಾರಣೆಯಿಂದ ಅಥವಾ ಕರಸ್ಥಲಪೂಜೆಯಿಂದ ವ್ಯಕ್ತಿಯ ಉನ್ನತಿ ಆಗದು ಎದು ತಿಳಿದ ಶರಣರು ವೈಯಕ್ತಿಕ ಉತ್ತಮಿಕೆಗೆ ತಮ್ಮ ವಚನಗಳಲ್ಲಿ ಒತ್ತು ನೀಡಿದ್ದಾರೆ.
ಈ ವಿಷಯದಲ್ಲಿ ಬಸವಣ್ಣನವರು ಅನೇಕ ವಚನಗಳನ್ನು ರಚಿಸಿದ್ದಾರೆ.
ಉದಾಹರಣೆ:

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.”

“ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲಾ, ಕೂಡಲಸಂಗಮ ದೇವಾ!”

“ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲಸಂಗಮ ದೇವ.”

(೬) ಸಾಮಾಜಿಕ ಸುಧಾರಣೆ:
ಧಾರ್ಮಿಕ ಸುಧಾರಣೆ, ವೈಯಕ್ತಿಕ ಸುಧಾರಣೆ ಇವುಗಳ ಜೊತೆಗೇ ಸಾಮಾಜಿಕ ಸುಧಾರಣೆಯೂ ಸಹ ಮಹತ್ವದ ವಿಷಯವಾಗಿದೆ.
ಸಮಾಜದಲ್ಲಿ ಈವರೆಗೆ ಬೇರೂರಿದ ತಪ್ಪು ಧೋರಣೆಗಳನ್ನು ಬದಲಾಯಿಸುವ ಉದ್ದೇಶದಿಂದ ವಚನಕಾರರರು ಅನೇಕ ವಚನಗಳನ್ನು ಹಾಡಿದ್ದಾರೆ.
“ಕಾಯಕವೇ ಕೈಲಾಸ” ಎನ್ನುವ ವಚನವು dignity of labourಅನ್ನು ವ್ಯಕ್ತಪಡಿಸುವದಲ್ಲದೆ, ಪರಿಶ್ರಮ ಪಡದೆ ಉಣ್ಣುವದು ತಪ್ಪು ಎನ್ನುವ ಭಾವವನ್ನು ಸಹ ವ್ಯಕ್ತ ಮಾಡುತ್ತದೆ.
ಸಮಾಜಸುಧಾರಣೆಯ ಉದ್ದೇಶವನ್ನು ಸ್ಪಷ್ಟ ಪಡಿಸುವ ಬಸವಣ್ಣನವರ ಎರಡು ವಚನಗಳು ಹೀಗಿವೆ:

“ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ,
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ,,
ಕೂಡಲಸಂಗಮ ದೇವಾ.”

“ಏನಿ ಬಂದಿರಿ, ಹದುಳವಿದ್ದಿರೆ ಎಂದರೆ
ನಿಮ್ಮ ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?
ಒಡನೆ ನುಡಿದರೆ ಸಿರ ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದ್ದೆಡೆ
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮ ದೇವನು?”

ಬಸವಣ್ಣನವರ ವಚನಗಳು ಹಾಗೂ ಶರಣರ ವಚನಗಳು ಈ ರೀತಿಯಾಗಿ ವೈಚಾರಿಕ ಕ್ರಾಂತಿಯ ಸಂದೇಶವನ್ನು ಬೀರುತ್ತವೆ.
ಆದರೆ ಈ ವೈಚಾರಿಕ ಕ್ರಾಂತಿ ಈಗ ಉಳಿದಿಲ್ಲ ಎನ್ನುವದು ಕನ್ನಡ ನಾಡಿನ ದುರ್ದೈವ.
ಕರ್ನಾಟಕದ ಖ್ಯಾತ ಸಂಶೋಧಕರಾದ ಶ್ರೀ ಎಮ್. ಎಮ್. ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ “ಮಾರ್ಗ”ದಲ್ಲಿ ಚೆನ್ನಬಸವಣ್ಣನ ಬಗೆಗೆ ಬರೆದ ವಿಷಯಗಳು ಕರ್ನಾಟಕದ ಕೆಲವೆಡೆ ತೀವ್ರ ಕ್ಷೋಭೆಯನ್ನು ಉಂಟು ಮಾಡಿದವು.
ಶ್ರೀ ಕಲಬುರ್ಗಿಯವರು ಮಠಾಧೀಶರ ಕ್ಷಮೆ ಕೋರಿದ ಬಳಿಕ ಈ ಪ್ರಕರಣ ಮುಕ್ತಾಯವಾಯಿತು.

ಇತ್ತಿಚೆಗೆ ಶ್ರೀ ಜಯಪ್ರಕಾಶ ಬಂಜಗೆರೆಯವರು ಬಸವಣ್ಣನು ಹುಟ್ಟಿನಿಂದ ಬ್ರಾಹ್ಮಣನಿರಲಿಕ್ಕಿಲ್ಲ ಎನ್ನುವ ಅನುಮಾನವನ್ನು “ ಆನು ಹೊರಗಣವನಯ್ಯಾ ” ಎನ್ನುವ ತಮ್ಮ ಕೃತಿಯೊಂದರಲ್ಲಿ ವ್ಯಕ್ತ ಪಡಿಸಿದರು.
ಅದರ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿ, ಕರ್ನಾಟಕ ಸರಕಾರವು ಕೊನೆಗೊಮ್ಮೆ ಆ ಕೃತಿಯನ್ನು ಮುಟ್ಟುಗೋಲು ಹಾಕುವದರಲ್ಲಿ ಮುಕ್ತಾಯವಾಯಿತು.

ಆದರೆ, ಡಾಃನ್ ಬ್ರೌನ್ ಬರೆದ “ಡಾ ವಿಂಚಿ ಕೋಡ್” ಕೃತಿಯು ಯೇಸು ಕ್ರಿಸ್ತನ ಬಗೆಗೆ ಅನೇಕ ಸಂಶಯಗಳನ್ನು ವ್ಯಕ್ತ ಪಡಿಸಿದರೂ ಸಹ ಪಾಶ್ಚಾತ್ಯ ದೇಶಗಳಲ್ಲಿ ಅದರ ವಿರುದ್ಧ ಯಾವುದೇ ಚಳುವಳಿಯಾಗಲಿಲ್ಲ.
ಅಷ್ಟೇ ಏಕೆ, ಯೇಸುವು ಓರ್ವ ಸೂಳೆಯಲ್ಲಿ ರೋಮನ್ ಸೈನಿಕನಿಗೆ ಹುಟ್ಟಿದ ಮಗನು ಎನ್ನುವ ಸಂಶೋಧನಾತ್ಮಕ ಲೇಖನಗಳೂ ಸಹ ಪ್ರಕಟವಾಗಿವೆ.
ಆದರೆ ಇದರ ವಿರುದ್ಧ ಸಹ ಪಾಶ್ಚಾತ್ಯ ಲೋಕದಲ್ಲಿ ಯಾವುದೇ ಆಕ್ರೋಶ ವ್ಯಕ್ತವಾಗಿಲ್ಲ.

ಶರಣರು ತೋರಿಸಿದ ವೈಚಾರಿಕ ಸ್ವಾತಂತ್ರ್ಯ , ಆ ಸ್ವಾತಂತ್ರ್ಯಕ್ಕೆ ಬೇಕಾಗುವ ಸಹನೆ ನಮ್ಮಲ್ಲಿ ಮಾಯವಾಗಿದೆಯೆ?
ಹದಿನೇಳನೆಯ ಶತಮಾನದಲ್ಲಿ ಬಾಳಿದ, ಫ್ರೆಂಚ್ ಕ್ರಾಂತಿಗೆ ಪ್ರೇರಣೆ ನೀಡಿದ ಚಿಂತಕರಲ್ಲಿ ಒಬ್ಬನಾದ ವೋಲ್ಟೇರ್ ಎನ್ನುವ ಲೇಖಕ ಈ ರೀತಿ ಹೇಳಿದ್ದಾನೆ:
I do not agree with what you have to say, but I will defend to the death your right to say it.
ಭಾರತದಲ್ಲಿ ಈಗಿರುವ ಪರಿಸ್ಥಿತಿ ಹೇಗಿದೆಯೆಂದರೆ:
If you do not agree with me, I will do you to death!

41 comments:

hamsanandi said...

ಉದಾಹರಣೆಗಳು ಬಹಳ ಚೆನ್ನಾಗಿವೆ.

ಶಾಂತಲಾ ಭಂಡಿ (ಸನ್ನಿಧಿ) said...

ಅಂಕಲ್...
ನಿಮ್ಮ ಬರಹಗಳ ಬಗ್ಗೆ ಹೇಳುವಷ್ಟು ದೊಡ್ಡವಳಲ್ಲ ನಾನು. ಆದರೂ ಹೇಳಲೇಬೇಕೆನಿಸುತ್ತಿದೆ. ತಲೆದೂಗುತ್ತ ಓದಬೇಕು, ಹಾಗೆ ಬರೆದಿದ್ದೀರಿ.

"ಮನೆಯೊಳಗೆ ಮನೆಯೊಡೆಯನಿದ್ದಾನೆಯೋ ಇಲ್ಲವೋ" ಇದು
ಬಸವಣ್ಣನವರ ವಚನವೆಂದು ತಿಳಿದಿರಲಿಲ್ಲ.
ಆ ಸಾಲಿನ ರಚನೆಕಾರರ ಬಗ್ಗೆ, ಹಾಗೂ ಪೂರ್ತಿಪಾಠದ ಬಗ್ಗೆ ನಾನು, ಪಿ ಎಸ್ ಪಿಯವರು ಹಾಗೂ ತೇಜಸ್ವಿನಿ, ಮೂವರೂ ಹಿಂದೊಮ್ಮೆ ಹುಡುಕಾಟ ನಡೆಸಿದ್ದಾಗ ಸುಧೇಶ್ ಅವರು ಆ ಸಾಲು ಬಸವಣ್ಣನವರ ವಚನವೊಂದರ ಸಾಲು ಎಂಬುದಾಗಿ ತಿಳಿಸಿದ್ದರು. ನಿಮ್ಮಿಂದಾಗಿ ಈಗ ಅದರ ಪೂರ್ತಿಪಾಠ ಓದಲು ಸಿಕ್ಕಿತು. ಅದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು ಅಂಕಲ್.
ನಿಮ್ಮ ಬರಹಗಳು ಗೊತ್ತಿಲ್ಲದ ವಿಚಾರಗಳನ್ನು ತಿಳಿಸಿಕೊಡುತ್ತವೆ.
ಮತ್ತೆ ಮತ್ತೆ ಓದಬೇಕೆನಿಸುತ್ತದೆ.

Anonymous said...

ಲೇಖನ ತುಂಬ ಚೆನ್ನಾಗಿದೆ. ಆದರೆ ಲಘುವಾಗಿದೆ. ಇನ್ನೂ
ವಿಸ್ತೃತವಾಗಿದ್ದರೆ .....ಚೆನ್ನಾಗಿತ್ತಿತ್ತಲ್ಲವೆ ? ಅಂದಹಾಗೆ ಬಸವಣ್ಣನವರ ಕುರಿತು ಚಾರಿತ್ರಿಕ ವಿಷುಗಳನ್ನೂ ವಿವರಿಸಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು.

Unknown said...

ಸುನಾಥ್ ಕಾಕಾ,
ಲೇಖನ ತುಂಬಾ ಚೆನ್ನಾಗಿದೆ. ಉದಾಹರಣೆಗಳು ಬಹಳ ಖುಶಿಕೊಟ್ಟವು.
ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಅದು ನಮ್ಮ ಸುದೈವವೋ, ದುರ್ದೈವವೋ ಗೊತ್ತಿಲ್ಲ!

sunaath said...

ಧನ್ಯವಾದಗಳು, ಹಂಸಾನಂದಿ.
ಬಸವಣ್ಣನವರ ಅನೇಕ ವಚನಗಳಲ್ಲಿ ಕೆಲವನ್ನು ನಾನು random ಆಗಿ ಆರಿಸಿಕೊಂಡಿದ್ದೇನಷ್ಟೆ.

sunaath said...

ಶಾಂತಲಾ,
'ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ' ಎನ್ನುವ ವಚನವನ್ನು ಕೇಳಿದಾಗ ಶರೀಫರ 'ಸೋರುತಿಹಿದು ಮನೆಯ ಮಾಳಿಗೆ'ಹಾಡು ನೆನಪಾಗುವದಲ್ಲವೆ?

sunaath said...

ಕಟ್ಟಿಯವರೆ,
ಬಸವಣ್ಣನವರು ಸಮುದ್ರವಿದ್ದ ಹಾಗೆ. ಅವರ ಬಗೆಗೆ ಎಷ್ಟು ಬರೆದರೂ ಕಡಿಮೆಯೇ. ಆದುದರಿಂದ ಬೊಗಸೆಯಲ್ಲಿ ಸಿಕ್ಕಷ್ಟನ್ನು
ಮೊಗೆದು ತೆಗೆಯುತ್ತಿದ್ದೇನೆ.

sunaath said...

ಮಧು,
You are right!
ದೊಡ್ಡವರ ಉಪದೇಶ ಯಾವಾಗಲೂ ಪ್ರಸ್ತುತವಾಗಿಯೇ ಉಳಿಯುವದು ನಮ್ಮ ದುರ್ದೈವವೇ ಸರಿ!

Anonymous said...

ಪ್ರಿಯರೇ,
ಬಸವಣ್ಣನ ವಿಚಾರಕ್ರಾಂತಿಯ ಬಗ್ಗೆ ನೀವು
ಬರೆದಿದ್ದರಲ್ಲಿ ಎರಡು ಮಾತಿಲ್ಲ.
ಆದರೆ ಕಾಲಕಾಲಕ್ಕೆ ಅವತರಿಸಿದ ಇಂಥ ಮಹಾನ್
ನಾಯಕರ ಬಗ್ಗೆ ನನಗೊಂದು ವೈಯಕ್ತಿಕವಾದ ಅಸಮಾಧಾನವಿದೆ.
ಅದು ಬಸವಣ್ಣ ಇರಬಹುದು ಅಥವಾ ಬುದ್ಧ ಇರಬಹುದು ಅಥವಾ
ಪೈಗಂಬರರರೇ ಇರಬಹುದು..
ಇಲ್ಲಿ ಒಂದು ಕ್ಷಣ ಹೀಗೂ ಯೋಚಿಸೋಣ:
ಇವರೆಲ್ಲರೂ at the end of the day ಹೇಳಲಿಚ್ಛಿಸುವುದಿಷ್ಟೆ:
1.ಮನುಷ್ಯರೆಲ್ಲರೂ ಒಂದೇ:ಮೇಲು-ಕೀಳು ಭಾವ ಸಲ್ಲದು.
2.ಎಲ್ಲರನ್ನೂ ಪ್ರೀತಿಸಿ:ದ್ವೇಷ ಸಲ್ಲದು.
3.ಢಂಬಾಚಾರ-ಕಂದಾಚಾರ ಬಿಡಿ:ಸರಳಜೀವನ ಸಾಗಿಸಿ...

ಇಲ್ಲೊಂದು ಸೂಕ್ಷ್ಮ ಗಮನಿಸಿ.
ಇವರೆಲ್ಲರೂ ಸಮಾಜದಲ್ಲಿನ ಜನತೆಗೆ ತಂತಮ್ಮ
ವಿಚಾರಧಾರೆ ತಿಳಿಸುವ ಜೊತೆಜೊತೆಗೇ ತಮ್ಮದೇ ಹೊಸ ಹೊಸ ಮತ,ಧರ್ಮವನ್ನೂ ಆ ಜನತೆಯ ಮೇಲೆ ಹೊರೆಸಿಬಿಟ್ಟರು
ಮತ್ತು ಎಲ್ಲೋ ಒಂದು ಕಡೆ ತಮ್ಮದೇ ಮತ/ಧರ್ಮ ಶ್ರೇಷ್ಠವಾದದ್ದು ಎಂಬ ಸಂದೇಶವನ್ನೂ ಕೊಡಲು ಪ್ರಯತ್ನಿಸಿದರು..
ಪರಿಣಾಮವೇನಾಯಿತು?
ಬಸವಣ್ಣ ಶರಣರನ್ನು ಹುಟ್ಟುಹಾಕಿದ.ಬುದ್ಧ ಭೌದ್ಧರನ್ನ
ಪರಿಚಯಿಸಿದ ಮತ್ತು ಪೈಗಂಬರ ಮುಸ್ಲಿಂರನ್ನ ಬೆಳೆಸಿದರು..
ದ್ವೈತ,ಅದ್ವೈತ,ವಿಶಿಷ್ಟಾದ್ವೈತ,ಸಿಖ್,ಪಾರ್ಸೀಯಂಥ ಧರ್ಮಗಳೂ ಅಯಾ ಧರ್ಮಗುರುಗಳ ವಿಚಾರಧಾರೆಯ ಶಿಶುಗಳೇ!
ಮೇಲೆ ಹೆಸರಿಸಿದ ಧರ್ಮನಾಯಕರು ಹುಟ್ಟುವದಕ್ಕೂ ಮುಂಚೆ ಆಯಾ
ಧರ್ಮದವರು ಏನಾಗಿದ್ದರು?
ಅನಾಮಿಕರಾಗಿದ್ದರೂ ಆರಾಮಾಗಿಯೇ ಇದ್ದರಬಹುದಲ್ಲವೇ?
ಒಂದೇ ವಿಚಾರಗಳನ್ನ ಹೇಳಲು ಎಷ್ಟೊಂದು ನಾಯಕರು ಎಷ್ಟೊಂದು
ಮತ/ಧರ್ಮಗಳನ್ನು ಸುಖಾಸುಮ್ಮನೇ ಹುಟ್ಟುಹಾಕಿದಂತಾಗಲಿಲ್ಲವೇ?
ಆವತ್ತಿಗೂ ಇವತ್ತಿಗೂ ನಮಗೆ ಬೇಕಾಗಿರುವದು ಹೊಸ ವಿಚಾರಗಳಷ್ಟೆ;ಧರ್ಮವಲ್ಲ!
ಇವತ್ತಿನ ಅನೇಕ ಮತೀಯ ಕಲಹಗಳಿಗೆ ಎಲ್ಲೋ ಒಂದು ಕಡೆ
ಈ ಧರ್ಮನಾಯಕರೇ ಕಾರಣ ಅಂತ ಅನಿಸುವದಿಲ್ಲವಾ..
-ರಾಘವೇಂದ್ರ ಜೋಶಿ.

sunaath said...

rj,
ಬಹಳ ಮಹತ್ವದ ವಿಷಯವೊಂದನ್ನು ಹೇಳಿರುವಿರಿ.
ಪ್ರತಿಯೊಬ್ಬ ಧಾರ್ಮಿಕ ನಾಯಕನ ಅನುಯಾಯಿಗಳು ಇತರರೊಡನೆ ಕಾದುವದೇ ತಮ್ಮ ಕರ್ತವ್ಯವೆಂದು ಭಾವಿಸಿರುವಂತಿದೆ. ಆಷ್ಟೇ ಏಕೆ, ರಾಜಕೀಯ ನಾಯಕರುಗಳ ಗತಿಯೂ ಹೀಗಿಯೇ ಆಗಿದೆಯಲ್ಲ! ಗಾಂಧೀಜಿಯವರ ಅನುಯಾಯಿಗಳು ಇಂದು ಏನು ಮಾಡುತ್ತಿದ್ದಾರೆ?
ಒಟ್ಟಿನಲ್ಲಿ 'ದಾರಿ ಯಾವುದಯ್ಯಾ ವೈಕುಂಠಕೆ?'ಎಂದು ಹುಡುಕುವಂತಾಗಿದೆ?
Is there a road ahead?

Anonymous said...

ಸುನಾತರೆ,
ನನಗೆ ಅಲ್ಲಮನ ವಚನಗಳು ಕಾಣಿಸಲಿಲ್ಲ. ನೀವು ವಿಚಾರಗಳ ಒಳವೊರಗಿನ ಬಗ್ಗೆ ಮಾತಾಡಿ ಅಲ್ಲಮನ ವಚನಗಳ ಬಗ್ಗೆ ಸೊಲ್ಲೆತ್ತದಿರುವುದರಿಂದ ನಿಮ್ಮ ಬರಹ ನೆಱೆಗೊಳ್ಳಲಿಲ್ಲ ಅನ್ನಿಸಿತು. ದಯವಿಟ್ಟು ಅಲ್ಲಮನ ವಚನಗಳನ್ನು ಕೂಡ ಸೇರಿಸಿದರೆ ಈ ಬರಹದ ತಿರುಳು ಚೆನ್ನಾಗಿರುತ್ತದೆ.
ತಮ್ಮ ಬರಹಕ್ಕೆ ತಮಗೆ ಸವಿಯೊದಗು
-ನನ್ನಿ
ಬರತ್
http://ybhava.blogspot.com

sritri said...

೧೨ನೆಯ ಶತಮಾನದಲ್ಲಿಯೇ ಶರಣರು ತೋರಿಸಿದ ವೈಚಾರಿಕ ಸ್ವಾತಂತ್ರ್ಯ ಈಗಲೂ ನಮಗೆ ದೊರಕಿಲ್ಲವೆಂಬುದು ಬೇಸರದ ಸಂಗತಿ.

http://www.vicharamantapa.net/content/ - ಈ ತಾಣದಲ್ಲಿ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿಯವರ ಬಹಳಷ್ಟು ವಚನಗಳಿವೆ.

sunaath said...

ಭರತರೆ,
ಪ್ರತಿಯೊಬ್ಬ ವಚನಕಾರನು ರತ್ನದ ಗಣಿಯಾಗಿದ್ದಾನೆ. ಅಲ್ಲಮಪ್ರಭುವಿನ ವಚನಗಳಂತೂ ವಿಚಾರಕೋಶಗಳೇ ಆಗಿವೆ.
ಆದರೆ, ಪ್ರಸ್ತುತ ಲೇಖನದಲ್ಲಿ ನಾನು ಎಲ್ಲ ಶರಣರ ವಚನಗಳನ್ನು ಆಯ್ದುಕೊಂಡಿಲ್ಲ. ಅಕ್ಕಮಹಾದೇವಿಯ ಒಂದು ವಚನ ಹಾಗೂ ಬಸವಣ್ಣನವರ ವಚನಗಳಷ್ಟೇ ಇದರಲ್ಲಿ ಬಂದಿವೆ. ಮತ್ತೆ ಬೇರಾವದೊ ಸಂದರ್ಭದಲ್ಲಿ ಪ್ರಭುದೇವರ ವಚನ ಬರಬಹುದು.

sunaath said...

ತ್ರಿವೇಣಿ,
ಭಾರತದಲ್ಲಿ ವೈಚಾರಿಕ ಅಸಹನತೆ ಹೆಡೆ ಎತ್ತಿ ನಿಂತಿದೆ ಹಾಗೂ
ಆಳುವ ಸರಕಾರಗಳು, ವೋಟಿನ ಲೆಕ್ಕದಲ್ಲಿ ಈ ಅಸಹನತೆಗೆ ಬಗ್ಗುತ್ತವೆ ಎನ್ನುವದು ದುಃಖದ ಸಂಗತಿ.
ಶ್ರೀ ಕಲಬುರ್ಗಿ ಹಾಗೂ ಬಂಜಗೆರೆ ಜಯಪ್ರಕಾಶ ಅಲ್ಲದೆ, ತಸ್ಲೀಮಾ ನಸ್ರೀನ್ ಸಹ ಈ victimisationದ
ಉದಾಹರಣೆ ಎನ್ನಬಹುದು.

shivu.k said...

ಸುನಾಥ್ ಸಾರ್,

ಎಂದಿನಂತೆ ಎರಡು ಬಾರಿ ಓದಿಕೊಂಡೆ. ಬಸವಣ್ಣನವರು ಕ್ರಾಂತಿಯ ನೇತಾರರಾದರೂ ಪೂರ್ವಿಕರನ್ನು ಆದ್ಯರು ಎಂದು ಬಸವಣ್ಣನವರು ಹೇಳುವ ವಿಚಾರ ಹೊಸದು.

ಮತ್ತು ಧಾರ್ಮಿಕ ಆಂದಶ್ರದ್ಧೆಗಳ ಬಗ್ಗೆ ಆದ್ಯರು ಮತ್ತು ಬಸವಣ್ಣನವರ ವಚನಗಳಲ್ಲಿ ಪ್ರತಿಬಿಂಬಿಸಿರುವ ವಿಚಾರಗಳ ಬಗ್ಗ್ಗೆ ಉದಾಹರಣೆ ಸಹಿತ ಚೆನ್ನಾಗಿ ವಿವರಿಸಿದ್ದೀರಿ... ನಮಗಂತೂ ಓದುವ ಕುತೂಹಲವಿದ್ದೇ ಇರುತ್ತದೆ...

ಸುಪ್ತದೀಪ್ತಿ suptadeepti said...

ಕಾಕಾ, ನನ್ನದು ಅದೇ ರಾಗ... ಚೆನ್ನಾಗಿದೆ ಲೇಖನ, ಧನ್ಯವಾದಗಳು.

ಇಲ್ಲಿ ರಾ.ಜೋಶಿ ಹೇಳಿದ ಮಾತಿಗೆ ನನ್ನ ಸಣ್ಣ ಆಕ್ಷೇಪವಿದೆ:
ಬುದ್ಧನಾಗಲೀ ಬಸವಣ್ಣರಾದಿಯಾಗಿ ಯಾವುದೇ ಶರಣರಾಗಲೀ ಸಾಮಾನ್ಯ ಜನರನ್ನು ಅವರ ಸಾಮಾಜಿಕ ನೆಲೆಯಿಂದ, ಧಾರ್ಮಿಕ ಅಂಧಶ್ರದ್ಧೆಯಿಂದ ಹೊರತರಲು ಪ್ರಯತ್ನಿಸಿದರಷ್ಟೇ. ಅದಕ್ಕಾಗಿ ತಮ್ಮದೇ ಆದ ಮಾರ್ಗಗಳನ್ನು (ಧರ್ಮಗಳಲ್ಲ!) ಸೂಚಿಸಿದರು. ಅವರುಗಳ ನಂತರ, ಅವರ ಅನುಯಾಯಿಗಳಿಂದ "ಬೌದ್ಧ ಧರ್ಮ" ಮತ್ತು "ಶರಣ ಧರ್ಮ"ಗಳು ಹುಟ್ಟಿಕೊಂಡವೇ ಹೊರತು ಇವರೇ "ಇದು ಹೊಸ ಧರ್ಮ, ಇದನ್ನೇ ನಿಮ್ಮದಾಗಿಸಿಕೊಳ್ಳಿ, ಇದೇ ಹಾದಿ ಹಿಡಿಯಿರಿ" ಅನ್ನಲಿಲ್ಲ. "ನಿಮ್ಮ ಅಂಧಶ್ರದ್ಧೆಯಿಂದ ಹೊರಬನ್ನಿ. ಸರಳ ಸುಲಲಿತ ಜೀವನ ನಡೆಸಿ" ಅಂದಿದ್ದನ್ನು ಅನುಯಾಯಿಗಳು ಬೇರೊಂದು ದಿಕ್ಕಿನಲ್ಲಿ ಒಯ್ದಿದ್ದಕ್ಕೆ ಮೂಲ ನೇತಾರರನ್ನು ಕಾರಣೀಭೂತರನ್ನಾಗಿಸುವದು ಸರಿಯಲ್ಲ ಅಂತ ನನ್ನ ಅಭಿಪ್ರಾಯ.

ಕ್ರೈಸ್ತ ಧರ್ಮ ಶುರುವಾಗಿದ್ದೂ ಇಂಥ ಅನುಯಾಯಿಗಳ ಕಾರ್ಯಾಚರಣೆಯಿಂದ. ಮುಸ್ಲಿಮ್ ಧರ್ಮವೂ ಅದಕ್ಕೆ ಹೊರತಲ್ಲ. ಸಿಕ್ಖ್, ಫಾರ್ಸೀ ಧರ್ಮಗಳೂ ಹೀಗೇ ಹುಟ್ಟಿಕೊಂಡಿವೆ ತಾನೇ. ಅಂದ ಮೇಲೆ, ಸಾಮಾನ್ಯ ಜನರನ್ನು ಅವರ ಸಾಮಾಜಿಕ, ಧಾರ್ಮಿಕ ಜೀವನದಲ್ಲಿ ವೈಚಾರಿಕತೆ ಮೂಡಿಸಿ, ಸರಳ ಜೀವನದ ದಿಕ್ಕಿನಲ್ಲಿ ನಡೆಸ ಹೊರಟ ಎಲ್ಲರ ಪ್ರಯತ್ನವೂ ಹೊಸದೊಂದು ಧರ್ಮದಲ್ಲಿಯೇ ಕೊನೆಗೊಂಡದ್ದು ಮತ್ತು ಲೋಕದಲ್ಲಿ ಮತ್ತಷ್ಟು ಕ್ಷೋಭೆ, ತಲ್ಲಣ, ಒಳಜಗಳ, ದ್ವೇಷಗಳನ್ನೇ ಹುಟ್ಟುಹಾಕಿದ್ದು ನಮ್ಮೆಲ್ಲರ (ಮಾನವರ) ದೌರ್ಭಾಗ್ಯ ಮತ್ತು ಬೌದ್ಧಿಕ ಅವನತಿಯ ಸಂಕೇತ.

ನಾವೆಲ್ಲರೂ "ಬರೀ ಮಾನವ"ರಾಗಿ ಪರಸ್ಪರ ಹೊಂದಾಣಿಕೆಯಿಂದ ಬಾಳುವುದನ್ನು ಕಲಿಯುವುದು ಯಾವಾಗ?

ಬಿಸಿಲ ಹನಿ said...

ಸುನಾಥ್ ಸರ್,:)
ನಿಮ್ಮ ಲೇಖನದಲ್ಲಿನ ಒಂದು ಅಂಶ-ಬಸವಣ್ಣನವರು ಬಹಳ ಹಿಂದೆಯೇ ಹಾವನ್ನು ಕಾಮದ ಸಂಕೇತವಾಗಿ ಬಳಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.ಇದೊಂದು ಆಶ್ಚರ್ಯಕರ ಮಾಹಿತಿ.ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ D.H.Lawerence ನ "Snake" ಪದ್ಯವನ್ನು ಬೇರೆ ಬೇರೆ ತರಗತಿಗಳಿಗೆ ಪಾಠ ಮಾಡುವಾಗಲೆಲ್ಲಾ ಹಾವು ಕಾಮದ ಸಂಕೇತವಾಗಿ ಕಾಣಿಸಿಕೊಳ್ಳುವದು ಪಾಶ್ಚಾತ್ಯರ ಪರಿಕಲ್ಪನೆಯಲ್ಲಿ ಮಾತ್ರ ಎಂದೂ ಮತ್ತು ಅದನ್ನು ಮೊಟ್ಟ ಮೊದಲಿಗೆ ಪ್ರತಿಪಾದಿಸಿದ್ದು ಫ್ರಾಯ್ಡ ಎಂದೂ ಆನಂತರ ಅದನ್ನು ಬಹಳಷ್ಟು ಲೇಖಕರು ತಮ್ಮ ಸಾಹಿತ್ಯದಲ್ಲಿ ಬಳಸಿಕೊಂಡರೆಂದು ಹೇಳುತ್ತಿದ್ದೆ.ನಾನೊಬ್ಬನೇ ಅಲ್ಲ.So called the great professors of English are also still under the same impression.It is really shame on my part and on their part as well.ಇನ್ನು ಮುಂದೆ ಈ ತಪ್ಪಾಗದಂತೆ ನೋಡಿಕೊಳ್ಳುತ್ತೇನೆ ಮತ್ತು ಈ ಕುರಿತು ನನಗೆ ಗೊತ್ತಿರುವ ಇಂಗ್ಲೀಷ ಅಧ್ಯಾಪಕರ ಜ್ಞಾನವನ್ನು update ಮಾಡುತ್ತೇನೆ.ನಿಮ್ಮ ಲೇಖನಕ್ಕೆ ಧನ್ಯವಾದಗಳು.

sunaath said...

ಶಿವು,
ವೈದಿಕ ಸಂಪ್ರದಾಯ ಹಾಗು ವಿಚಾರಗಳ ವಿರುದ್ಧದ ಕ್ರಾಂತಿಯ ರೂಪುರೇಷೆಗಳು ಮೊದಲೇ ಮೈದಾಳಿದ್ದವು. ಆ ಕಾರಣದಿಂದಲೇ ಬಸವಣ್ಣನವರಿಗೆ ಜನಿವಾರ ಹರಿದೊಗೆಯುವ ವಿಚಾರ ಹಾಗೂ ಧೈರ್ಯ ಬಂದಿದ್ದು. ಈ ಕಾರಣಗಳಿಂದಲೇ, ಬಸವಣ್ಣ ಬೇರೊಂದು ಗುರುಕುಲದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗಿದ್ದು ಹಾಗೂ ತನ್ನ ಸೋದರಮಾವನ ಆಶ್ರಯ ಪಡೆದು, ಅವನ ಮಗಳನ್ನು ಮದುವೆಯಾಗಲು ಸಾಧ್ಯವಾಗಿದ್ದು.

ಬಸವೇಶ್ವರ, ಅಲ್ಲಮಪ್ರಭು, ಚೆನ್ನಬಸವಣ್ಣ ಮೊದಲಾದ ವ್ಯಕ್ತಿಗಳು magnet ಇದ್ದಂತೆ. ಈ ಚುಂಬಕಗಳ ಸುತ್ತಲೂ
ಜನಸಾಮಾನ್ಯರು ಹಾಗೂ ಅಸಾಮಾನ್ಯರು ಮುತ್ತಿಕೊಂಡರು.
ಇದರಿಂದಾಗಿಯೇ 'ಶರಣಕ್ರಾಂತಿ' ಸಾಧ್ಯವಾಯಿತು. ಮಹಾತ್ಮಾ ಗಾಂಧಿಯ ಸುತ್ತಲೂ ಮುತ್ತಿಕೊಂಡ ಚಳುವಳಿಗಾರರನ್ನು ಇದಕ್ಕೆ ಹೋಲಿಸಬಹುದು.
Anyway, ಶರಣಕ್ರಾಂತಿ ಬಹುಶ: ಇಡೀ ಜಗತ್ತಿನ ಇತಿಹಾಸದಲ್ಲಿಯೇ ಅದ್ವಿತೀಯವಾದದ್ದು.

sunaath said...

ಜ್ಯೋತಿ,
ಇದೀಗ ನಿನ್ನ ಹಾಗೂ ರಾಘವೇಂದ್ರ ಜೋಶಿಯವರ ನಡುವೆ ಆಸಕ್ತಿಕರವಾದ ಚರ್ಚೆ ಪ್ರಾರಂಭವಾದಂತಾಯಿತು.
ತನ್ನ ಸುತ್ತಲಿನ ಕೊಳೆಯನ್ನು ತೊಳೆಯಲೆಂದೇ ಮಹಾತ್ಮನೊಬ್ಬನು ಹೊಸ ವಿಚಾರಗಳನ್ನು ಬೋಧಿಸುತ್ತಾನೆ ಹಾಗು ಹೊಸ ಮಾರ್ಗವನ್ನು ತೋರಿಸುತ್ತಾನೆ. ಆದರೆ ಅವನ ಅನುಯಾಯಿಗಳುಹೊಸ ಕೊಳೆಯನ್ನು ಒಟ್ಟಲು ಪ್ರಾರಂಭಿಸುತ್ತಾರೆ.
'ದಾರಿ ಯಾವುದಯ್ಯಾ ವೈಕುಂಠಕೆ?'

sunaath said...

ಉದಯ,
ಪಾಶ್ಚಾತ್ಯ ಸಾಹಿತ್ಯದಲ್ಲಿ ಹಾಗೂ ಮನಃಶಾಸ್ತ್ರದಲ್ಲಿ ಹಾವು ಕಾಮದ ಪ್ರತೀಕವಾಗಿ ಯಾವಾಗಿನಿಂದಲೂ ಸ್ಥಳ ಪಡೆದಿದೆ.ಇದು ಸರಿಯೂ ಹೌದು.
ಆದರೆ, ಭಾರತೀಯ ಯೋಗಶಾಸ್ತ್ರದಲ್ಲಿ ಹಾವು ಕುಂಡಲಿನಿ ಶಕ್ತಿಯ ಸಂಕೇತವಾಗಿದ್ದರಿಂದ, ಅದನ್ನು ಕಾಮದ ಪ್ರತೀಕವಾಗಿ ಬಳಸುವ ಕಲ್ಪನೆಯೇ ನಮ್ಮವರಿಗೆ ಬರಲಿಲ್ಲ.
ಕಾಮವನ್ನು lust ಪ್ರತೀಕವಾಗಿ ಬಳಸಿದ್ದು ಬಸವಣ್ಣನವರ ಕಲ್ಪನಾಶಕ್ತಿಯ ಧೈರ್ಯವನ್ನು ತೋರಿಸುತ್ತದೆ.

Anonymous said...

ಸುಪ್ತದೀಪ್ತಿಯವರೇ,
ನನ್ನ ಟಿಪ್ಪಣಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ
ಅಂತ ನನ್ನ ಭಾವನೆ.ನೀವು ಹೇಳಿದಂತೆ ಈ ಧರ್ಮನಾಯಕರ್‍ಯಾರೂ
ಹೊಸ ಧರ್ಮವನ್ನ ಹುಟ್ಟು ಹಾಕಲಿಲ್ಲ (ಅಷ್ಟೇ!).ಆದರೆ ಅದರ
ಬದಲಾಗಿ ಹೊಸ ಧರ್ಮವೊಂದು ಜನ್ಮತಾಳಲು ಏನೆಲ್ಲ ವ್ಯವಸ್ಥೆ
ಮಾಡಬೇಕೋ ಅದೆಲ್ಲವನ್ನೂ indirect ಆಗಿ ಖಂಡಿತ ಮಾಡಿದರು..
ಹೋಮ-ಹವನಗಳ ಬಗ್ಗೆ ಲೇವಡಿ ಮಾಡಿದ ಬಸವಣ್ಣ ಕೈಯಲ್ಲೊಂದು
ಲಿಂಗ ಹಿಡಿದು "ಇಷ್ಟಲಿಂಗ"ದ ಪೂಜೆ ಮಾಡಿರಿ ಎಂದು ಕರೆಕೊಟ್ಟರೆ ಆತ ತನ್ನ ಅನುಯಾಯಿಗಳಿಗೆ ಏನಂತ ಕರೆನೀಡುತ್ತಿದ್ದಾನೆಂದು ಅರ್ಥೈಸೋಣ?
its nothing but triggering!
ಇದೇ formula ಮುಸ್ಲಿಂ,ಕ್ರೈಸ್ತ,ಭೌದ್ಧ ಮುಂತಾದ ಧರ್ಮನಾಯಕರೂ ಅನುಸರಿಸಿದರು..
ನನ್ನ ಬಲವಾದ ನಂಬಿಕೆಯಿಷ್ಟೆ:
ಯಾವುದೇ ಧರ್ಮನಾಯಕನಿರಬಹುದು ಅಥವಾ ಜನನಾಯಕನಿರಬಹುದು,ದೊಡ್ಡದಾದ ಗುಂಪೊಂದು ಆತನ ಮಾತು/ಕೄತಿಗಳನ್ನು ಆಸಕ್ತಿಯಿಂದ
ಗಮನಿಸುತ್ತಿದೆ ಮತ್ತು ಹಿಂಬಾಲಿಸುತ್ತಿದೆಯೆಂದರೆ ಸದರಿ ನಾಯಕನಿಗೆ ತನ್ನ ಅಳಿವಿನ ನಂತರ ತನ್ನ ಬೋಧನೆ/ಕೃತಿಗಳ ಅಪಾಯಗಳ ಬಗ್ಗೆ ಒಂದು ನಿರ್ದಿಷ್ಟವಾದ ಅರಿವಿರಬೇಕು.ಸಾಧ್ಯವಾದರೆ ತನ್ನ ಜೀವಿತ ಕಾಲದಲ್ಲೇ
ಅಂಥದೊಂದು ಅಪಾಯದ ಬಗ್ಗೆ ತನ್ನ ಅನುಯಾಯಿಗಳನ್ನು ಎಚ್ಚರಿಸಿರಬೇಕು.ಬಹುಶಃ ಅದಕ್ಕೆಂದೇ ಗಾಂಧೀಜಿ ಅದ್ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ;
"ಕಾಂಗ್ರೆಸ್ಸನ್ನು ಮುಗಿಸಿಬಿಡಿ.ಇಲ್ಲದಿದ್ರೆ ಮುಂದೊಂದು ದಿನ ದೇಶವನ್ನೇ ಮುಗಿಸೀತು.." ಅಂತ ಹೇಳಿದ್ದರು..
ಎಲ್ಲಕ್ಕಿಂತ ಇಲ್ಲಿ ಕುವೆಂಪುರವರ ವಿಶ್ವಮಾನವನ ಪರಿಕಲ್ಪನೆ ಹೆಚ್ಚು
ಪ್ರಸ್ತುತ ಮತ್ತು ಅವಶ್ಯಕ ಅಂತನಿಸುತ್ತದೇನೋ...
-ರಾಘವೇಂದ್ರ ಜೋಶಿ.

ಚಂದ್ರಕಾಂತ ಎಸ್ said...

ಸುನಾಥ್ ಸರ್

ಇದೀಗ ತಾನೆ ನಿಮ್ಮ ಬರವಣಿಗೆ ಹಾಗೂ ಪ್ರತ್ಯಿಕ್ರಿಯೆಗಳ ಮಹಾಪೂರವನ್ನೇ ನೋಡಿದೆ.
ನಿಮ್ಮ ಲೇಖನ ಅತ್ಯಂತ ಆರೋಗ್ಯಕರವಾಗಿದೆ. ಇಲ್ಲಿ“ ಆದ್ಯರು ಎಂದರೆ ಹಿರಿಯರು.ಅಂದರೆ ಬಸವಣ್ಣನವರಿಗಿಂತ ಹಿರಿಯರಾದ ಸಕಲೇಶ ಮಾದರಸ , ಜೇಡರ ದಾಸಿಮಯ್ಯ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆಯೇ ಬಸವಣ್ಣನವರನ್ನು ನಾವು ಅರ್ಥೈಸಿಕೊಳ್ಳಬಹುದು. ದಾಸಿಮಯ್ಯನವರ ವಚನಗಳು ಅತ್ಯಂತ ಹೆಚ್ಚಿನ ವಿಚಾರಗಳ ಬಗ್ಗೆ ಚರ್ಚಿಸುತ್ತದೆ

ಸುಪ್ತದೀಪ್ತಿ ಹಾಗು ನಿಮ್ಮ ಅಬ್ಜಿಪ್ರಾಯಗಳು ಅತ್ಯಂತ ಆರೋಗ್ಯಕರವಾಗಿವೆ. ಬುದ್ಧ್, ಬಸವಣ್ಣ, ಕಬೀರ, ಏಸು ಮುಂತಾದವರು ಯಾರೂ ನಮ್ಮ ಹೆಸರಿನಲ್ಲಿ ಹಿಸಧರ್ಮ ಪ್ರಾರಂಭ ಮಾಡಿ ಎನ್ನಲಿಲ್ಲ. ಮತ್ತು rj ಅವರು ಹೇಳುವಂತೆ ಹೊಸ ಧರ್ಮ ಸೃಷ್ಟಿಯಾಗಲು ವೇದಿಕೆಯನ್ನು ಸಿದ್ಧಪಡಿಸಲೂ ಇಲ್ಲ. Dignity of labour concept ನ್ನು ಬಹಳ ಮುಂಚೆಯೇ ತಂದವರು. ನಿರಾಕಾರ ದೇವರನ್ನು ಪೂಜಿಸುವುದು ಎಲ್ಲರಿಗೂ ಸಾಧ್ಯವಿಲ್ಲವೆಂದೇ ಸರಳವಾದ ಕರಲಿಂಗದ ಬಗ್ಗೆ ಹೇಳಿದರು. ಹಾಗೂ ಇವರಾರೂ ತಮ್ಮ ಹಿಂದೆ ಅನುಯಾಯಿಗಳು ಬರುತ್ತಿದ್ದಾರೆಂದೇ ತಮ್ಮ ನಡವಳಿಕೆಗಳನ್ನು ಬೆಳೆಸಿಕೊಳ್ಳಲಿಲ್ಲ. ಕುವೆಂಪು ಅವರ ವಿಶ್ವಮಾನವ ಕಲ್ಪನೆ ತಪ್ಪೆಂದು ಯಾರೂ ಹೇಳುವುದಿಲ್ಲ. ಹಾಗೂ ಇವರೊಬ್ಬರದು ಸರಿ ಹಿಂದಿನವರದು ತಪ್ಪೆಂದು ನಾವು ಭಾವಿಸಬೇಕಾಗಿಯೂ ಇಲ್ಲ. ಪೂರ್ವಗ್ರಹವಿಲ್ಲದೆ ಇವರನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರೆ ಎಲ್ಲವೂ ಸ್ಪಷ್ಟವಾಗಿ ಗೋಚರವಾಗುತ್ತದೆ.

ನೀವು ಹೇಳೀದಂತೆ ವಿದೇಶೀಯರು ಯಾವುದೇ ವಿಚಾರವನ್ನು ಚರ್ಚೆಗೆ ಒಳಪಡಿಸುತ್ತಾರೆ. ಬಸವಣ್ಣ ಬುದ್ಧ ಇತರ ದೇಶಗಳಲ್ಲಿ ಜನಿಸಿದ್ದರೆ ಅವರನ್ನು ಹೆಚ್ಚಿನ ಜನ ಸರಿಯಾಗಿ ಅರ್ಥೈಸಿಕೊಳ್ಳುತ್ತಿದ್ದರೇನೋ ?

ನಿಮ್ಮ ಈ ಲೇಖನಕ್ಕೆ ಮತ್ತೊಮ್ಮೆ ಧನ್ಯವಾದಗಳು

Anonymous said...

Very healthy discussion. But, what is the contribution of Basavanna to the society for a change ? Even after his good advice, the society has remained the same ! What all he said, were told earlier also by many. The vedas, upnishats have said 'satyam vada, dharmam chara' thousands of years before Basavanna ! Though, veerashaiva, I dont find any thing great in him.
He was a controversial parson in his own time and even now also. He was charged with corruption, misuse of power and said to have suicided by jumping into river at Sangama inBagalktDt

ಚಿತ್ರಾ said...

ಸುನಾಥ್ ಕಾಕಾ,

ನಿಮ್ಮ ಬರೆಹಗಳು ಅಮೂಲ್ಯ ಖಜಾನೆಯಂತೆ .

ಕಾಕಾ, ನಮ್ಮ ದೇಶದಲ್ಲಿ , ವಿಚಾರ ಸ್ವಾತಂತ್ರ್ಯ ಹಾಗೂ ವಿಚಾರ ಕ್ರಾಂತಿ ಎರಡನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸುವುದಿಲ್ಲ ಎಂಬುದು ವಿಷಾದನೀಯ ಅಲ್ಲವೆ?
" ಡ ವಿಂಚಿ ಕೋಡ್ " ಗೆ ಯಾವುದೇ ಪಾಶ್ಚಾತ್ಯ ದೇಶದಲ್ಲಿ ವ್ಯಕ್ತವಾಗದ ವಿರೋಧ ಭಾರತದಲ್ಲಿ ಕಂಡುಬಂದಿದ್ದು ಇದಕ್ಕೊಂದು ಉದಾಹರಣೆಯಷ್ಟೆ !

sunaath said...

ಜ್ಯೋತಿ, rj, ಚಂದ್ರಕಾಂತ,
ಸ್ವತಃ ಬುದ್ಧನಿಗೇ ತನ್ನದೇ ಆದ ಧರ್ಮಸ್ಥಾಪನೆಯಲ್ಲಿ ಆಸಕ್ತಿ ಇರಲಿಲ್ಲ. ಅವನ ನಿಧನದ ನಂತರವೇ ಅವನ ಶಿಷ್ಯರು ಮಹಾಯಾನ ಹಾಗೂ ಹೀನಯಾನ ಮತಗಳನ್ನು ಕಟ್ಟಿಕೊಂಡರು.
ಕ್ರೈಸ್ತ ಧರ್ಮವಾದರೂ ಸಹ ಏಶುವಿನ ನಂತರವೇ ಹುಟ್ಟಿ ಬೆಳೆಯಿತು.
ಗುರುವಿನ ಮರಣದ ನಂತರ ಶಿಷ್ಯರು ಒಟ್ಟುಗೂಡಿ ಒಂದು ಸಂಸ್ಥೆಯನ್ನು ಕಟ್ಟಿಕೊಳ್ಳುವ ಅವಶ್ಯಕತೆಯನ್ನು ಅನುಭವಿಸುತ್ತಾರೆ. ಈ ಸಸ್ಥೆ ಮುಂದೆ ಒಂದು ಮಠವೋ, ಒಂದು ಮತವೋ ಆಗಬಹುದು. ಈ ಮಠ ಅಥವಾ ಮತವು ತನ್ನ ಉಳಿವಿಗಾಗಿ ಇತರ ಮತಗಳೊಡನೆ ಪೈಪೋಟಿಗಿಳಿಯುವದು ಅನಿವಾರ್ಯವಾಗುತ್ತದೆ.
ಇದು ನಮ್ಮ ಎಲ್ಲ ಧರ್ಮಗಳ ಇತಿಹಾಸವಲ್ಲವೆ?
ಆದರೆ ಇದಕ್ಕೆ ಪರ್ಯಾಯವಿದೆಯೆ?

sunaath said...

ಅನಾಮಿಕಾ,
ವೇದೊಪನಿಷತ್ತುಗಳಲ್ಲಿ ಹೇಳಿದ್ದನ್ನೇ ಬಸವಣ್ಣ ಹೇಳಿರಬಹುದು.
ಹಾಗಿದ್ದರೆ,ಆತ ಹೇಳಿದ್ದನ್ನು ಕೇಳಲು, ಅನುಸರಿಸಲು ಕಾಶ್ಮೀರದ ದೊರೆ, ತನ್ನ ರಾಜ್ಯ ಬಿಟ್ಟುಕೊಟ್ಟು ದೂರದ
ಕಲ್ಯಾಣಕ್ಕೆ ಏಕೆ ಬರುತ್ತಿದ್ದ?
ಕೆಲವರು ಮಹಾತ್ಮರಿರುತ್ತಾರೆ. ಅವರ ವ್ಯಕ್ತಿತ್ವದಲ್ಲಿಯ ನೈಜತೆ,integrityಗಳನ್ನು ನೋಡಿದ ಜನರು ಅವರ ಶಿಷ್ಯರಾಗುವದರಲ್ಲಿ ಆಶ್ಚರ್ಯವಿಲ್ಲ ಹಾಗೂ ತಪ್ಪಿಲ್ಲ. ಇಂತಹವರ ಬಗೆಗೂ ಆಪಾದನೆಗಳು ಇದ್ದೇ ಇರುತ್ತವೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಇವರೆಲ್ಲ ಕನ್ನಡ ನಾಡು ಕಂಡ ಶ್ರೇಷ್ಠ ವ್ಯಕ್ತಿಗಳು. ಇವರ ವಿರುದ್ಧ ಆಪಾದನೆಗಳು ಆಗಲೂ ಇದ್ದವು, ಈಗಲೂ ಇದ್ದಿರಬಹುದು.

sunaath said...

ಚಿತ್ರಾ,
ರವೀಂದ್ರನಾಥ ಠಾಕೂರರು ಭಾರತದ ಬಗೆಗೆ ಕಂಡ ಕನಸು ಇನ್ನೂ ಕನಸಾಗಿಯೇ ಉಳಿದಿದೆ:
"Where the mind is free
And the head is held high
........................
........................
.........................
Into that heaven of freedom
My father, let my country awake!"

Ittigecement said...

ಸುನಾಥ ಸರ್...


ಯಾವುದೇ "ಮತ" ಸ್ಥಾಪಕರು ಒಳ್ಳೆಯದನ್ನೇ ಹೇಳಿಅದರೂ ..
ಕಾಲಕ್ರಮೇಣ "ಸ್ಪರ್ಧೆಗೆ" ಬಿದ್ದು ..
ನಾವು ಶ್ರೇಷ್ಥ.. ಎನ್ನುವ ಭಾವನೆಗೆ ಒಳಗಾಗಿ..
ಅಸಹನೆ ಬೆಳೆಯಲು ಕಾರಣವಾಯಿತು..

ಅಸಹನೆಯಲ್ಲಿ "ಮಾನವ" ಧರ್ಮ ಕ್ಕೆ ಬೆಲೆ ಇಲ್ಲ...

ಇನ್ನು ಪ್ರಗತಿ ಪರ ವಿಚಾರಗಳಿಗೆ ಎಲ್ಲ ಕಾಲದಲ್ಲೂ ವಿರೋಧವಾಗಿದೆ..

ಬಸವಣ್ಣನವರಿರಲಿ, ಗಾಂಧಿಯವರಿರಲಿ..ಮಾರ್ಟಿನ್ ಲೂಥರ್ ಇರಲಿ.., ಗೆಲಿಲಿಯೋ ಇರಲಿ..
ಎಲ್ಲರಿಗೂ ವಿರೋಧ ಸಿಕ್ಕಿದೆ...
ಕ್ರಮೇಣ ಕಾಲವೇ.. ಒಪ್ಪಿಕೊಂಡಿದೆ

ನಮ್ಮ ವೈಚಾರಿಕತೆಯನ್ನು ಹೆಚ್ಚಿಸುವ ನಿಮಗೆ ..

ಸಾವಿರ..ಸಾವಿರ ವಂದನೆಗಳು...

ಸುಪ್ತದೀಪ್ತಿ suptadeepti said...

rj, ಕ್ಷಮಿಸಿ; ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿಲ್ಲ. ನೀವು ಬರೆದುದನ್ನು ಹಾಗೇ ಓದಿ, ಅಲ್ಲಿದ್ದ ಹಾಗೇ ಅರ್ಥೈಸಿಕೊಂಡಿದ್ದೇನೆ; ಅದಕ್ಕಷ್ಟೇ ಪ್ರತಿಕ್ರಿಯಿಸಿದ್ದೇನೆ. ಇದೀಗ ನೀವು ಕೊಟ್ಟ ವಿವರಣೆ ಮೊದಲ ಮಾತುಗಳಿಗಿಂತ ತುಸುವೇ ಭಿನ್ನವಾಗಿವೆ; ಪೂರ್ಣವಾಗಿ ಹೊಸ ಅರ್ಥವನ್ನು ಕೊಡುತ್ತಿಲ್ಲ. ಏಸುವಾಗಲೀ, ಬುದ್ಧನಾಗಲೀ, ಬಸವಣ್ಣನವರಾಗಲೀ ಹೊಸ ಧರ್ಮವನ್ನು ಹುಟ್ಟುಹಾಕುವದಕ್ಕಾಗಿ ಹೊಸ ವಿಚಾರ ಪ್ರವರ್ತಕರಾಗಲಿಲ್ಲ. ಅವರ ಜೀವನಾನಂತರವಷ್ಟೇ ಅವರ ಹೆಸರುಗಳಲ್ಲಿ ಹೊಸ ಧರ್ಮವೊಂದು ತಲೆಯೆತ್ತಿತು.

ಹೊಸ ಧರ್ಮ ಅನ್ನುವುದು ಆದ್ಯ ಪ್ರವರ್ತಕರ ತದನಂತರ, ಅವರ ಅನುಯಾಯಿಗಳಿಂದ ಹುಟ್ಟಿಕೊಳ್ಳುವಂಥಾದ್ದು. ಅದನ್ನು ತಾವೇ ಮುಂದಾಗಿ ಯೋಚಿಸಿ "ನನ್ನ ಯೋಚನೆ/ ಸೂಚನೆಗಳನ್ನು ಹೊಸದೊಂದು ಮತವಾಗಿ, ಧರ್ಮವಾಗಿ ಮಾಡಬೇಡಿ; ಹೀಗೇ ಯೋಚನೆ/ ಸೂಚನೆಗಳಾಗಿಯೇ, ಜೀವನ ವಿಧಾನವಾಗಿಯೇ ಇರಲು ಬಿಡಿ" ಅನ್ನುವ ಸಂದೇಶವನ್ನೂ ಮುಂದಾಳುಗಳು ಹಿಂಬಾಲಕರಿಗೆ ಕೊಟ್ಟಿರಬೇಕಾಗಿತ್ತು ಅನ್ನುವುದು ನಿಮ್ಮ ವಾದದಂತೆ ತೋರುತ್ತದೆ (ನಾನು ಮತ್ತೆ ಅರ್ಥೈಸಿಕೊಳ್ಳುವಲ್ಲಿ ತಪ್ಪಿರಬಹುದು, ಕ್ಷಮಿಸಿ). ಇಷ್ಟಲಿಂಗದ ಪ್ರಾರ್ಥನೆ ಅನ್ನುವುದು ತೀರಾ ಸರಳ ಜೀವನದ ಪ್ರತೀಕ, ಪ್ರಯೋಗ. "ನಿಮ್ಮ ಇಷ್ಟದೇವತೆಯ ಪ್ರಾರ್ಥನೆಗಾಗಿ ನೀವು ಎಲ್ಲೆಲ್ಲಿಯೋ ಹೋಗುವ, ಹೋಮ-ಹವನ ಮಾಡಿಸುವ, ಏನೇನೋ ವ್ರತ ಪೂಜೆ ನೇಮ ನಿಷ್ಠೆಗಳಿಗೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ದೇವನು ನಿಮ್ಮ ಅಂಗೈಯಲ್ಲೇ ಇದ್ದಾನೆ. ಅವನನ್ನೇ ಪೂಜಿಸಿ, ಅರ್ಚಿಸಿ. ಏಕಾಗ್ರಚಿತ್ತರಾಗಿ ಧ್ಯಾನಿಸಿ. ಅಷ್ಟೇ ಸಾಕು" ಅನ್ನುವುದು ಮಾತ್ರ ಬಸವಣ್ಣನವರ ಉದ್ದೇಶ. ಅದನ್ನಷ್ಟೇ ಅವರು ಸಾರಿದ್ದು. ಹಾಗೇ ಬುದ್ಧನೂ, ಏಸುವೂ- ಸರಳ ಜೀವನದ ಪ್ರವರ್ತಕರಾದರು. ಅನುಯಾಯಿಗಳು, ತಮ್ಮ ತಮ್ಮ "ಐಡೆಂಟಿಟಿ"ಗಾಗಿ ಹೊಸ ಹೆಸರಿಟ್ಟು ಹೊಸ ಧರ್ಮವನ್ನೇ ಹುಟ್ಟಿಸಿದರು. ಇದನ್ನು ಪ್ರವರ್ತಕರು ಮೊದಲೇ ಕಂಡುಕೊಳ್ಳಬೇಕಿತ್ತು, ಅಂಥ ಹೊಸ ದಾರಿ ಕವಲೊಡೆಯದಂತೆ ತಡೆಯಬೇಕಿತ್ತು ಅನ್ನುವುದು ಈಗಿನ ಕಾಲದಲ್ಲಿ ನಿಂತು ತಿರುಗಿ ನೋಡುವಾಗ ಕಾಣುವ ಹಿನ್ನೋಟ ಮಾತ್ರ.

ಈಗಿನ ಸಾಮಾಜಿಕ ವಾತಾವರಣದಲ್ಲಿ ಹುಟ್ಟಿಕೊಳ್ಳುತ್ತಿರುವ ನೂರಾರು ಹೊಸ ಮತ-ಮಠಗಳಿಗೆ ಯಾರು ಹೊಣೆಯಾಗುತ್ತಾರೆ? ಹೇಳಬಲ್ಲೆವು. ಆದರೆ ತಡೆಯಬಲ್ಲೆವಾ? ಈ ವಿಷಯದಲ್ಲಿ ಇನ್ನು ಮುಂದೆ ಚರ್ಚಿಸುವಲ್ಲಿ ನನಗೆ ಆಸಕ್ತಿಯಿಲ್ಲ. ಈ ಅಂಗಳದಲ್ಲಿ ಗದ್ದಲ ಬೇಡ ಅಂತ ನನ್ನ ಅಭಿಪ್ರಾಯ.

ಕಾಕಾ, ನಿಮ್ಮ ಅಕ್ಷರಲೋಕವನ್ನು ಕೆಸರು ಮಾಡುವ ಉದ್ದೇಶ ನನಗಿಲ್ಲ. ಚರ್ಚೆ ಎದ್ದಾಗ ನನಗೆ ತೋಚಿದ ಉತ್ತರ ಕೊಡುತ್ತಿದ್ದೇನೆ. ನಾನೇ ಸರಿ ಎನ್ನುವ ಧಾರ್ಷ್ಟ್ಯವೂ ನನಗಿಲ್ಲ. ಇಷ್ಟವಾಗದಿದ್ದರೆ ಹೇಳಿ, ಕ್ಷಮಿಸಿ.

Anonymous said...

ದೇವರು ಎಂಬುವದು ಮಾನವ ನಿರ್ಮಿಸಿದ ಮಹಾಮಿಥ್ಯೆ.

ತೇಜಸ್ವಿನಿ ಹೆಗಡೆ said...

ಕಾಕಾ,

ನಾನು ನಿಮಗಿಂತ ಹೆಚ್ಚಿಗೆ ತಿಳಿದವಳಲ್ಲ. ಆದರೆ ನಿಮ್ಮ ಲೇಖನದೊಳಗಿತ ತಿಳಿಯನ್ನು ಖಂಡಿತ ತಿಳಿಯಬಲ್ಲೆ. ಶಾಂತಲಾ ಹೇಳಿದಂತೆ "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ.." ಎಂಬುದು ವಚನವೆಂದು ತಿಳಿದದ್ದೇ ಸುಧೇಶ್ ಅವರಿಂದ. ಈಗ ಈ ವಚನ ಪೂರ್ಣ ಪಾಠದ ಜೊತೆಗೆ ಇನ್ನೂ ಕೆಲವು ಸುಂದರ ಅರ್ಥವತ್ತಾದ ವಚನಗಳನ್ನು ಓದುವಂತಾಯಿತು. ಹಿಂದೆ ಶಾಲೆಗಳಲ್ಲಿ ಕಲಿತಿದ್ದ ಈ ವಚನಗಳನ್ನೆಲ್ಲಾ ಪುನರ್ ನೆನಪಿಸಿಂದಂತಾಯಿತು. ತುಂಬಾ ಧನ್ಯವಾದಗಳು.
ನನಗೆ ಬಸವಣ್ಣನವರ ವಚನಗಳು ಬಲು ಇಷ್ಟವಾದರೂ ಅಕ್ಕನ ವಚನಗಳು ಹೆಚ್ಚು ಆಪ್ತವೆನಿಸುತ್ತವೆ.

ಕಾಕಾ, ಬಸವಣ್ಣನವರು ಅದು ಹೇಗೆ ಹಾವನ್ನು ""ಗೆ ಹೋಲಿಸಿದರೋ ನಾ ಕಾಣೆ. ಅವರ ಭಾವಕ್ಕೆ ಹಾಗೆ ಹೊಳೆದಿರಬಹುದು. ಆದರೆ ಕುಂಡಲಿನಿ ಜಾಗೃತವಾಗುತ್ತಿರುವವರ, ಹಾಗೆ ಜಗೃತವಾಗಿರುವವರ ಅನುಭವಗಳನ್ನು ನಾನು ತೀರಾ ಹತ್ತಿರದಿಂದಲೇ ನೋಡಿದ್ದೇನೆ. ನನಗೆ ತೀರಾ ಬೇಕಾದ(ಹೆಸರನ್ನು ಇಲ್ಲಿ ಹೇಳಲಿಚ್ಚಿಸುವುದಿಲ್ಲ) ಆತ್ಮೀಯರಿಗೆ ಸಣ್ಣ ವಯಸ್ಸಿನಲ್ಲೇ ಕುಂಡಲಿನಿ ಜಾಗೃತವಾಗಿತ್ತು. ಆಗೆಲ್ಲಾ ಕನಸುಗಳಲ್ಲೆ ಹಾವನ್ನು ಕಂಡು ಹೆದರಿದ್ದು, ಅದಕ್ಕಾಗಿ ತುಂಬಾ ಸಂಕಟ ಅನುಭವಿಸಿದ್ದು ನಾನೇ ನೋಡಿದ್ದೇನೆ. ಇದರಲ್ಲಿ ಏನೂ ಸುಳ್ಳಿಲ್ಲ.. ಮಾಯ ಮಂತ್ರವಿಲ್ಲ. ಹಾಗೆ ಜಾಗೃತವಾದವರಿಗೆ ಭವಿಷ್ಯತ್ ಹಾಗೂ ಭೂತಕಾಲದ ಭೂಗತ ಸತ್ಯಗಳೂ ಅರಿವಾಗುತ್ತವೆ. ಇದನ್ನು ನಾನೇ ಸ್ವತಃ ಕಂಡಿರುವುದರಿಂದ ಒಪ್ಪಿದ್ದೇನೆ.

ಮಾತು ಎಲ್ಲಿಂದ ಎಲ್ಲೊಗೋ ಹೋಯಿತು. ಕ್ಷಮಿಸಿ. ಬಸವಣ್ಣನವರ ಎಲ್ಲಾ ವಚನಗಳೊಳಗಿನ ತಿಳಿಯನ್ನು ಇಷ್ಟಪಟ್ಟಿರುವೆ. ಆದರೆ ಅವರು ಹಾವನ್ನು "ಕಾಮಕ್ಕೆ" ಹೋಲಿಸಿರುವುದನ್ನು ಮನಸ್ಸು ಯಕೋ ಒಪ್ಪಿಕೊಳ್ಳುತ್ತಿಲ್ಲ ನೋಡಿ! ಬಹುಶಃ ನನ್ನೊಂದಿಗಾದ ಆ ಅನುಭವದಿಂದಾಗಿರಬಹುದು.

ಧನ್ಯವಾದಗಳು.

sunaath said...

ಜ್ಯೋತಿ,
ಚರ್ಚೆ ನಡೆದಾಗ Heat & Dust ಇರೋದೆ.
ಈ ಅಂಕಣ ನಿಮ್ಮೆಲ್ಲರದೂ ಹೌದು, ಅಂದರೆ ಜ್ಯೋತಿ ಹಾಗೂ
rjಯವರದೂ ಹೌದು.
ಆದಕಾರಣ ಯಾವುದೇ ಭಿಡೆ ಇಟ್ಟುಕೊಳ್ಳದೆ ಚರ್ಚೆ ಮಾಡೋಣ. ಅಂದರೆ some light may flash!

sunaath said...

Good God, ಏನು ಹೇಳ್ತಾ ಇದ್ದೀರಿ, ಅಬ್ದುಲ್ ಖಾದರ!
ಶಂಕರಾಚಾರ್ಯರು “ಬ್ರಹ್ಮ ಸತ್ಯಮ್, ಜಗನ್ಮಿಥ್ಯಾ” ಅಂತ ಬೋಧಿಸಿದ್ದರು. ನೀವೀಗ “ಜಗತ್ ಸತ್ಯಮ್, ಬ್ರಹ್ಮ ಮಿಥ್ಯಾ” ಅಂತ ಬೋಧಿಸ್ತಾ ಇದ್ದೀರಲ್ಲ!

sunaath said...

ತೇಜಸ್ವಿನಿ,
ಪಾಶ್ಚಾತ್ಯಪ್ರಣೀತ Classical ಮನಃಶಾಸ್ತ್ರವು ಸಾಮಾನ್ಯ ಮಾನವನ ಮನಸ್ಸನ್ನು ಅಧ್ಯಯನ ಮಾಡಿದೆ. ಈ ಅಧ್ಯಯನದಲ್ಲಿ ಅದು ಅನೇಕ common ಸಂಕೇತಗಳನ್ನು ಗುರುತಿಸಿದೆ.ಆ ಮೇರೆಗೆ ಹಾವು ಕಾಮದ ಸಂಕೇತ, ನೀರು ಗರ್ಭದ ಸಂಕೇತ ಇತ್ಯಾದಿ.
ಯೋಗಿಗಳಿಗೆ ಈ ಮನಃಶಾಸ್ತ್ರ ಅನ್ವಯಿಸುವದಿಲ್ಲ. ಅವರು higher ಮನೋಲೋಕದಲ್ಲಿ ಸ್ವಸ್ಥರಿದ್ದಾಗ, ಹಾವು ಅಲ್ಲಿ
ಕುಂಡಲಿನಿ ಚೈತನ್ಯದ ಶಕ್ತಿಯಾಗಿ ಕಾಣಿಸುತ್ತದೆ.

ಭಾರತದಲ್ಲಿ ಯೋಗವಿಜ್ಞಾನ ಪ್ರಾರಂಭವಾದಾಗಿನಿಂದ, ಭಾರತೀಯರ ಮಟ್ಟಿಗೆ ಹಾವು ಕುಂಡಲಿನಿಯ ಪ್ರತೀಕವಾಗಿದೆ.
ಬಸವಣ್ಣನವರು ಅಸಾಮಾನ್ಯರ ಅಂದರೆ ಯೋಗಿಗಳ ಈ ಸರ್ಪಸಂಕೇತವನ್ನು ತಿರಸ್ಕರಿಸಿ, ಸಾಮಾನ್ಯ ಮನಸ್ಸುಳ್ಳವರ ಸರ್ಪಸಂಕೇತವನ್ನು (ಅಂದರೆ lustನ ಸಂಕೇತವಾಗಿ) ತಮ್ಮ ವಚನದಲ್ಲಿ ಪ್ರಪ್ರಥಮವಾಗಿ ಬಳಸಿದರು. ಏಕಾಏಕಿ ಈ ಕಲ್ಪನೆಯ ಬದಲಾವಣೆಗೆ ಧೈರ್ಯ ಬೇಕು, ಕಲ್ಪನಾಶಕ್ತಿ ಬೇಕು. ಅದು ಬಸವಣ್ಣನವರ ಹೆಗ್ಗಳಿಕೆ.

ಆದುದರಿಂದ,ಸರ್ಪಪ್ರತೀಕವು ಸಾಮಾನ್ಯರಿಗೆ ಹಾಗು ಯೋಗಿಗಳಿಗೆ ಭಿನ್ನವಾಗಿದೆ ಎನ್ನುವದನ್ನು ನಾವು ಅರಿಯಬೇಕು. ಇದರಂತೆಯೇ ಕಮಲದ ಪ್ರತೀಕವೂ ಸಹ
ಸಾಮಾನ್ಯರಿಗೆ ಹಾಗೂ ಯೋಗಿಗಳಿಗೆ ಭಿನ್ನವಾಗಿಯೇ ಇದೆ.

Anonymous said...

ಸಾರ್,
ಅತ್ಯಂತ ತೂಕವಾದ ಮಾತು ಹೇಳಿದಿರಿ.
ಚರ್ಚೆ,ಮಾತು,ವಿತಂಡವಾದ ಎಲ್ಲ ಇದ್ದಿದ್ದೇ..
ಇವೆಲ್ಲವನ್ನೂ ಮೀರಿಯೂ ಆರೋಗ್ಯಕರ ಚರ್ಚೆ ಸಾಧ್ಯವಾದರೆ
ಅದಕ್ಕಿಂತ ಖುಶಿ ಮತ್ತೊಂದಿಲ್ಲ.
ಒಮ್ಮೊಮ್ಮೆ ನಾವೆಷ್ಟೇ ನಾಸ್ತಿಕವಾದಿಗಳೆಂದು ತೋರ್ಪಡಿಸಿಕೊಂಡರೂ
ಕೂಡ ಯಾವುದೋ ಅನೂಹ್ಯವಾದ ಶಕ್ತಿಗೆ ಮೊರೆಯಿಟ್ಟಿರುತ್ತೇವೆ.
ಅದು ಆಸ್ತಿಕರಿಗೆ ದೇವರು;ನಾಸ್ತಿಕರಿಗೆ Super natural Power!
ಇಂಥದೇ ಒಂದು ಸಂದಿಗ್ಧ ಘಳಿಗೆಯಲ್ಲಿ ಪ್ರಖ್ಯಾತ ಸಂಪಾದಕರೊಬ್ಬರು
ನನ್ನೆದುರಿಗೆ ಹೇಳಿದ್ದು ನೆನಪಿಗೆ ಬರುತ್ತಿದೆ:
"ನೋಡೂ..ನೀನು ನಾಸ್ತಿಕನೇ ಇರಬಹುದು.ನಾನೂ ಕೂಡ.ಆದರೂ ಕೂಡ ನಮ್ಮಮ್ಮ
ಪ್ರತಿದಿನ ನಮಸ್ಕರಿಸುತ್ತಿದ್ದ ರಾಯರ ಫೋಟೊ ಮೇಲೆ ನನಗೆ ಕಾಲಿಡಲಾಗದು..
ಹಾಗೆಯೇ ಆಕೆ ಪೂಜಿಸುತ್ತಿದ್ದ ತುಳಸೀಕಟ್ಟೆಯ ಮೇಲೆ ಮೂತ್ರಿಸಲಾರೆ!"

ಆವರು ಹೇಳಿದ್ದರಲ್ಲ್ಲಿ ಸ್ವಲ್ಪ harsh ಇರಬಹುದು.ಆದರೆ ಎಷ್ಟೊಂದು ಸತ್ಯ!

-ರಾಘವೇಂದ್ರ ಜೋಶಿ.

Anonymous said...

ಸುನಾಥರೆ,

ಒಬ್ಬ ಆಚಾರ್ಯರು 'ಬ್ರಹ್ಮ ಸತ್ಯಂ, ಜಗನ್ಮಥ್ಯಾ' ಎಂದು ಹೇಳಿದರೆ, ಇನ್ನೊಬ್ಬ ಆಚಾರ್ಯರು ಜಗತ್ತೂ ಸತ್ಯವೆಂದೇ ಹೇಳಿದರು. ವಿಶ್ವ, ಜೀವ, ಪರಮಾತ್ಮ ಮುಂತಾದವುಗಳ ಬಗ್ಗೆ ಎಲ್ಲ ಧರ್ಮ ಪ್ರವರ್ತಕರೂ ತಮ್ಮ-ತಮ್ಮ ವಿಚಾರಗಳನ್ನು ಭಿನ್ನವಾಗಿಯೇ ಹೇಳಿದ್ದಾರೆ. ಅದು ಐದು ಅಂಧರು ಆನೆಯನ್ನು ವರ್ಣಿಸಿದಂತೆ ಇದೆ. ಸೃಷ್ಟಿಯಲ್ಲಿ ಜೀವೋತ್ಪತ್ತಿ ಒಂದು ಆಕಸ್ಮಿಕ.ಮಾನವರ ಪಾಶವೀ ವೃತ್ತಿಗಳಿಗೆ ಕಡಿವಾಣ ಹಾಕಲು, ಕೆಲವು ಸಜ್ಜನರು, ಬೇರೆ ಬೇರೆ ಸಮಯದಲ್ಲಿ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ದೇವರು-ಧರ್ಮ-ಸ್ವರ್ಗ-ನರಕಗಳನ್ನು ಹುಟ್ಟಿಸಿದರು. ಚಾರ್ವಾಕನೊಬ್ಬನೆ ಸರಿಯೆಂಬುದು, ಪೂರ್ವಾಗ್ರಹಗಳಿಲ್ಲದೆ ಚಿಂತಿಸುವ ಎಲ್ಲ ವಿಚಾರವಾದಿಗಳೂ ಒಪ್ಪುವರು. ಯಜ್ಞ, ಇಷ್ಟಲಿಂಗ, ಅಲ್ಲಾ, ವಿಷ್ಣು, ಶಿವ ಎಲ್ಲವೂ ಭ್ರಮೆ. ಶಾಂತವಾಗಿ ವಿಚಾರಿಸಿ. ಸತ್ಯ ತಾನೇ ಹೊಳೆಯುವದು.

Anonymous said...

ಅಬ್ದುಲ್ ಖಾದರರೆ,
ಚಾರ್ವಾಕವಾದವು ಪುನರ್ಜನ್ಮವನ್ನು ನಂಬುವದಿಲ್ಲ.ಚಾರ್ವಾಕನ ಪ್ರಕಾರ ಸಾಲ ಮಾಡಿಯಾದರೂ ಸುಖ ಭೋಗ ಮಾಡಬೇಕು. ಇಂತಹ ಸಿದ್ಧಾಂತವನ್ನು ನೀವು ಒಪ್ಪುವಿರಾ?
ನಮ್ಮ ಕರ್ಮಫಲಗಳನ್ನು ಉಣ್ಣಲು ಮುಂದಿನ ಜನ್ಮವೇಕೆ, ಇದೇ ಜನ್ಮದಲ್ಲಿಯೇ ಉಣ್ಣಬಹುದು.

ಕಾಡಿನಲ್ಲಿ ಏಕಾಕಿಯಾಗಿ ನೀವು ಹೊರಟಾಗ ನಿಮ್ಮ ಎದುರಿಗೆ ಒಂದು ಹುಲಿ ಧುತ್ತೆಂದು ಬಂದಿತೆಂದು ತಿಳಿಯಿರಿ. ಆಗ ನಿಮಗೆ ದೇವರ ನೆನಪು ಆಗಲಿಕ್ಕಿಲ್ಲವೆ?
- ಕರುಣಾ

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಮಾತಿಗೆ ಶರಣು.

Anonymous said...

ಕರುಣಾರವರೆ,

ನಾವಿರುವ ಜಗತ್ತು ಕಾಡಿಗಿಂತಲೂ ದುಸ್ತರವಾದುದು. ಕ್ರೂರ ಮಾನವರನ್ನು ಹೋಲಿಸಿದರೆ, ಹುಲಿಯು ಸಭ್ಯ ಪ್ರಾಣಿಯೇ ! ತನ್ನ ಹಸಿವೆಗಾಗಿ ಅಥವಾ ರಕ್ಷಣೆಗಾಗಿ ಮಾತ್ರ ಬೇಟೆಯಾಡುತ್ತದೆ. ಮೋಜಿಗಾಗಿ ಬೆರೆಯವರ ಬೇಟೆಯಾಡುವವ ಮಾನವ ಮಾತ್ರ. ಪುನರ್ಜನ್ಮ, ಪಾಪ, ಪುಣ್ಯ, ದೇವರು , ಸ್ವರ್ಗ, ನರಕ ಎಲ್ಲವೂ ಅಡಗೂಲಜ್ಜೆಯ ಕಥೆಗಳೆ ! ಚಾರ್ವಾಕ ವಾದದಲ್ಲಿ 'ಸಾಲ ಮಾಡಿದರೂ ಸರಿ, ಸುಖ ವಾಗಿರಬೇಕು' ಎನ್ನುವ ತತ್ವದಲ್ಲಿ ನನಗೆ ನಂಬಿಕೆ ಇಲ್ಲ ! ನಾಸ್ತಿಕತೆ ಸರಿಯೆಂದು ನನ್ನ ಅಭಿಪ್ರಾಯ.

Harisha - ಹರೀಶ said...

ಉತ್ತಮವಾದ ಚರ್ಚೆ :-)

ಸೋಮಶೇಖರ ಹುಲ್ಮನಿ said...

ತಲೆದೂಗುತ್ತ ಓದಬೇಕು, ಹಾಗೆ ಬರೆದಿದ್ದೀರಿ. ಲೇಖನ ಚೆನ್ನಾಗಿದೆ ಧನ್ಯವಾದಗಳು.