Friday, January 23, 2009

‍ಹಂಪಿ ಎಕ್ಸ್ ಪ್ರೆಸ್

'ಹಂಪಿ ಎಕ್ಸ್ ಪ್ರೆಸ್' ಇದು ವಸುಧೇಂದ್ರರ ಹೊಚ್ಚಹೊಸ ಕಥಾಸಂಕಲನ.
ಬೆಂಗಳೂರಿನಲ್ಲಿ ನೆಲೆಸಿದ್ದರೂ ಸಹ ವಸುಧೇಂದ್ರರು ತಮ್ಮ ತವರನ್ನು ಮರೆಯಲಾರರು.
ಸಂಡೂರಿನಲ್ಲಿಯ ತಮ್ಮ ಬಾಲ್ಯದ ಗೆಳೆಯರ, ಅಲ್ಲಿಯ ಸಾಂಪ್ರದಾಯಕ ಸಮಾಜದ ನೆನಪುಗಳು ಅವರನ್ನು ಯಾವಾಗಲೂ ಕಾಡುತ್ತಲೇ ಇರುತ್ತವೆಯೇನೊ?
ಅಂತೆಯೇ ಬೆಂಗಳೂರನ್ನು ಸಂಡೂರಿಗೆ connect ಮಾಡುವ ಹಂಪಿ ಎಕ್ಸ್ ಪ್ರೆಸ್ ಹೆಸರನ್ನೇ ವಸುಧೇಂದ್ರರು ತಮ್ಮ ಕಥಾಸಂಕಲನಕ್ಕೆ ಕೊಟ್ಟಿದ್ದಾರೆ.

ಈ ಸಂಕಲನದಲ್ಲಿ ಸಂಡೂರಿನ ಕತೆಗಳಲ್ಲದೇ ಬೆಂಗಳೂರಿನ ಕತೆಗಳೂ ಇವೆ. ಸಂಡೂರು ಸಣ್ಣ ಊರಾದರೆ, ಬೆಂಗಳೂರು metro. ಸಂಡೂರು ಅವರ ಬಾಲ್ಯಕಾಲ; ಬೆಂಗಳೂರು ಅವರ ವರ್ತಮಾನ. ಈ ಎರಡೂ ಕಾಲಗಳನ್ನು connect ಮಾಡುವ ನೆನಪಿನ ಬಂಡಿ ಎಂದರೆ ಹಂಪಿ ಎಕ್ಸ್ ಪ್ರೆಸ್.

Small town ಹಾಗು metro ಈ ಎರಡೂ ಸಮಾಜಗಳ ಅಂತರಂಗವನ್ನು, ಸುಖ-ದುಃಖಗಳನ್ನು ವಸುಧೇಂದ್ರರು ಸಾಕ್ಷೀಪ್ರಜ್ಞೆಯಿಂದ ನೋಡುತ್ತ ಈ ಸಮಾಜಗಳ ಕತೆಗಳನ್ನು ಅತ್ಯಂತ ಕಲಾತ್ಮಕವಾಗಿ ಓದುಗರಿಗೆ ತಲುಪಿಸುತ್ತಿದ್ದಾರೆ.

ವಸುಧೇಂದ್ರರದು ಮೂಲಭೂತವಾಗಿ ಅನುಕಂಪದ ಮನಸ್ಸು.
ಇವರನ್ನು ‘ಹೆಂಗರುಳಿನ ಲೇಖಕ’ ಎಂದು ಬಣ್ಣಿಸಿದರೆ ತಪ್ಪಾಗಲಿಕ್ಕಿಲ್ಲ.
ವಸುಧೇಂದ್ರರ ಕೃತಿಗಳನ್ನು ಓದಿದವರಿಗೆ ಥಟ್ಟನೆ ಕಾಣುವ ಮಾತೆಂದರೆ ಅಸಹಾಯಕರಿಗಾಗಿ ಮಿಡಿಯುವ ಇವರ ಮನಸ್ಸು.
ಸಂಡೂರೇ ಆಗಲಿ, ಬೆಂಗಳೂರೇ ಆಗಲಿ, ಗಂಡೇ ಆಗಲಿ, ಹೆಣ್ಣೇ ಆಗಲಿ ಅಥವಾ ಅರೆಗಂಡೇ ಆಗಲಿ, ವಸುಧೇಂದ್ರರು ಎಲ್ಲರನ್ನೂ ಸಹಾನುಭೂತಿಯಿಂದಲೇ ನೋಡುತ್ತಾರೆ.
ಮನುಷ್ಯರಷ್ಟೇ ಅಲ್ಲ, ಕೋತಿಗಳೂ ಸಹ ಇವರ ಸಹಾನುಭೂತಿಗೆ ಪಾತ್ರವಾಗುತ್ತವೆ.
……………………………………………………………………..
‘ಹಂಪಿ ಎಕ್ಸ್ ಪ್ರೆಸ್’ ಸಂಕಲನದಲ್ಲಿ ೮ ಕತೆಗಳಿವೆ.
‘ಕ್ಷಮೆಯಿಲ್ಲದೂರಿನಲಿ’ ಹಾಗೂ ‘ಹೊಸ ಹರಯ’ ಈ ಎರಡು ಕತೆಗಳು metro ನಾಗರಿಕತೆಯ ಕತೆಗಳು.
‘ಸೀಳುಲೋಟ’, ‘ಎರಡು ರೂಪಾಯಿ’ ಹಾಗೂ ‘ಪೆದ್ದಿ ಪದ್ಮಾವತಿ’ ಇವು ಸಾಂಪ್ರದಾಯಕ ಸಮಾಜದಲ್ಲಿ ಬದಕುತ್ತಿರುವವರ ಕತೆಗಳು.
‘ಕೆಂಪು ಗಿಣಿ’, ಕತೆಯು ಬದಲಾಗುತ್ತಿರುವ ಪರಿಸ್ಥಿತಿಯ ಕತೆಯಾಗಿದೆ.
‘ಕೆಂಧೂಳಿ’, ಹಾಗೂ ‘ನವಿರುಗರಿ’ ಇವು ವೈಯಕ್ತಿಕ ಭಾವನಾಪ್ರಪಂಚಕ್ಕೆ ಸಂಬಂಧಿಸಿದ ಕತೆಗಳಾಗಿವೆ.

ವಸುಧೇಂದ್ರರ ‘ಸೀಳುಲೋಟ’ವು ಕನ್ನಡದ ಶ್ರೇಷ್ಠ ಕತೆಗಳಲ್ಲೊಂದಾಗಿದೆ ಎನ್ನುವದು ನಿಸ್ಸಂದೇಹ.
‘ಸೀಳುಲೋಟ’ದ ಕತೆಯಲ್ಲಿ ಕಾರ್ಪಣ್ಯದಲ್ಲಿಯೇ ಬದಕುತ್ತಿರುವ ಒಂದು ಸಾಂಪ್ರದಾಯಕ ಕುಟುಂಬದ ಚಿತ್ರಣವಿದೆ.
ಈ ಕತೆಯಲ್ಲಿ ಬರುವ ಹೆಣ್ಣುಮಗಳು, ರಮಾಬಾಯಿ ತನ್ನ ಸಂಸಾರವನ್ನು ತೂಗಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತಾಳೆ.
ಅವಳ ಗಂಡನೋ ಅಲ್ಪಸಂಬಳಕ್ಕಾಗಿ ದಿನವೆಲ್ಲ ದುಡಿಯುವ ನಿರುಪದ್ರವಿ, ನಿರುಪಯೋಗಿ ವ್ಯಕ್ತಿ.
ಇವಳ ಅಣ್ಣನಿಗೆ ಇವಳ ಮೇಲೆ ನೈಜ ಪ್ರೀತಿಯಿದ್ದರೂ ಸಹ, ತನ್ನ ಹೆಂಡತಿಯ ಕೈಯಲ್ಲಿ ಸಿಕ್ಕಿಕೊಂಡಿದ್ದಾನೆ. ಹೀಗಾಗಿ ಇವಳು ಕೆಲವರ ಎದುರಿಗೆ ಗಯ್ಯಾಳಿಯಂತೆ, ಇನ್ನು ಕೆಲವರ ಎದುರಿಗೆ ಅವನತ ಭಾವದಿಂದ ವರ್ತಿಸುತ್ತ ಸಂಸಾರವನ್ನು ನಡೆಯಿಸುತ್ತಿದ್ದಾಳೆ.
ಇವಳ ಸಾಂಪ್ರದಾಯಕ ವರ್ತನೆಯನ್ನು ಹಾಗೂ ಗಯ್ಯಾಳಿತನವನ್ನು ತೋರಿಸಲು, ವಸುಧೇಂದ್ರರು ಬಳಸುವ ವಿನೋದಮಯ ಶೈಲಿ ಹೀಗಿದೆ:
“ರಪರಪನೆ ಕಸ ಬಳಿದು, ಅಂಗಳಕ್ಕೆ ನಿರನ್ನು ಜಡಿದು, ಆಕಾಶಕ್ಕೆ ಒಂದು ತಂಬಿಗೆ ನೀರು ಉಗ್ಗಿ “ಏಬ್ರಾಸಿ ಮುಂಡೇದೆ, ಎದ್ದೇಳು” ಎಂದು ಸೂರ್ಯನಿಗೆ ಉಗಿಯುತ್ತಾಳೆ.”

ಪರಿಸ್ಥಿತಿಯ ಜೊತೆಗೆ compromise ಮಾಡಿಕೊಳ್ಳುವದು ರಮಾಬಾಯಿಯ ಜೀವನದ ಒಂದು ಅನಿವಾರ್ಯ ಭಾಗ.
ತನ್ನನ್ನು ಮದುವೆಯಾಗಲು ಒಪ್ಪಿದ ಗಂಡು ಇವಳಿಗಿಂತ ಕಡಿಮೆ ರೂಪ ಹಾಗೂ ತರಗತಿಯವನೇ ಆಗಿದ್ದರೂ ಸಹ, ರಮಾಬಾಯಿ ತನ್ನ ಅಣ್ಣನಿಗೆ ತನ್ನ ಒಪ್ಪಿಗೆಯನ್ನು ತಿಳಿಸುವ ಪರಿ ಹೀಗಿದೆ:
“ ಕೊಡದ ನೀರನ್ನು ಪೂರ್ತಿಯಾಗಿ ಬಳ್ಳಿಗೆ ಸುರಿದ ರಮಾಬಾಯಿ ‘ಗಂಡಂತೂ ಹೌದಲ್ಲಣ್ಣ…ಅಷ್ಟು ಸಾಕು…ವಾಮನ ರೂಪದಾಗೆ ಬಂದಿರೋ ದೇವರು ಅಂದುಕೊಳ್ತೀನಿ’ ಎಂದು ನಿರ್ಭಾವುಕವಾಗಿ ಹೇಳಿಬಿಟ್ಟಳು. ವರದಣ್ಣ ಪೆಚ್ಚಾಗಿ ನಿಂತ. ನನ್ನ ಹಂಗೆ ಹಲ್ಲು ಉಬ್ಬು ಇಲ್ಲ ಬಿಡು ವರದಣ್ಣ” ಎಂದು ನಕ್ಕಳು.ವರದಣ್ಣನೂ ನಕ್ಕ.”

ತನ್ನ ಬಗೆಗೆ ಸ್ವಲ್ಪ ಅನುಕಂಪವನ್ನು, ಸ್ವಲ್ಪ ಉದಾರತನವನ್ನು ತೋರಿಸುತ್ತಿರುವ ವ್ಯಕ್ತಿಗಳ ಬಗೆಗೆ ರಮಾಬಾಯಿಯು ಅವನತಭಾವದಿಂದ ವರ್ತಿಸುವದು ಅನಿವಾರ್ಯವೇ ಆಗಿದೆ.
ಇದನ್ನು ವಸುಧೇಂದ್ರರು ತೋರಿಸುವ ಬಗೆ ಹೀಗಿದೆ:
“ಕೆಲಸದ ನರಸಕ್ಕ ಕೈಕೊಟ್ಟಿದ್ದರಿಂದ ಪದ್ದಕ್ಕ ಎಲ್ಲಾ ಮುಸುರೆ ಪಾತ್ರೆಗಳನ್ನು ಹರಡಿಕೊಂಡು ಕುಳಿತಿದ್ದಳು.
‘ಎದ್ದೇಳ್ರಿ ಪದ್ದಕ್ಕ, ನೀವೇನು ತೊಳಿತೀರಿ ಬಿಡ್ರಿ….ಏಳ್ರಿ, ಏಳ್ರಿ…’ ಎಂದು ಪದ್ದಕ್ಕನನ್ನು ಎಬ್ಬಿಸಿದಳು.”

‘ಸೀಳುಲೋಟ’ ಕತೆಯ ಪ್ರತಿಯೊಂದು ವಾಕ್ಯವನ್ನು ಈ ರೀತಿಯಾಗಿ ವಿಶ್ಲೇಷಿಸುತ್ತ ಹೋಗಬಹುದು. ಕತೆಯನ್ನು ಓದದೇ ಇರುವ ಓದುಗರು ಕತೆಯ ಸ್ವಾರಸ್ಯವನ್ನು first hand ಆಗಿ ಆಸ್ವಾದಿಸಲಿ ಎನ್ನುವ ಉದ್ದೇಶದಿಂದ ಈ ವಿಶ್ಲೇಷಣೆಯನ್ನು ಕೊನೆಗೊಳಿಸುತ್ತಿದ್ದೇನೆ.

ಪರಿಸ್ಥಿತಿ ನೀಡಿದ ಕಾರ್ಪಣ್ಯ ಏನೇ ಇದ್ದರೂ, ರಮಾಬಾಯಿ ಬೆಳೆದು ಬಂದ ಸಂಪ್ರದಾಯವು ಅವಳಿಗೆ ಒಂದು ಜೀವನಮೌಲ್ಯವನ್ನು ನೀಡಿದೆ.
ಬದುಕಿನ ಹೋರಾಟದಲ್ಲಿ ಅವಳ ವ್ಯಕ್ತಿತ್ವವು ಬೆಲೆ ಕಳೆದುಕೊಂಡಿರಬಹುದು, ಆದರೆ ಅವಳು ಎದೆಗೊತ್ತಿಕೊಂಡಿರುವ ಜೀವನಮೌಲ್ಯವು ಬೆಲೆ ಕಳೆದುಕೊಂಡಿಲ್ಲ.
ವಸುಧೇಂದ್ರರ ‘ಸೀಳುಲೋಟ’ದಲ್ಲಿ ಹಾಗೂ ಅವರ ಇನ್ನೂ ಕೆಲವು ಕತೆಗಳಲ್ಲಿ ಈ ಮಹತ್ತರ ಆಶಯ ವ್ಯಕ್ತವಾಗಿದೆ. (ಈ ಕಥಾಸಂಕಲನದಲ್ಲಿಯ ಕತೆ ‘ಎರಡು ರೂಪಾಯಿ’ ಹಾಗೂ ಬೇರೊಂದು ಕಥಾಸಂಕಲನದ ಕತೆ
‘ಹೊಟ್ಟೆಯಲ್ಲಿಯ ಗುಟ್ಟು’ ಇವುಗಳನ್ನು ಉದಾಹರಣೆ ಎಂದು ಹೇಳಬಹುದು.)

‘ಸೀಳುಲೋಟ’ ದ climax ಅಂತೂ ಅದ್ಭುತ. ಆದರೆ ಆ climax ಬಗೆಗೆ ಬರೆದು ಮೊದಲ ಓದುಗರ ಆಸಕ್ತಿಯನ್ನು ಕಳೆಯುವದು ಅನ್ಯಾಯದ ಕೆಲಸವಾಗುತ್ತದೆ.
‘ಎರಡು ರೂಪಾಯಿ’ ಸಹ ಸಾಂಪ್ರದಾಯಕ ಜೀವನದ ಕಷ್ಟ ಕಾರ್ಪಣ್ಯಗಳ ನಡುವೆಯೇ, ಅದು ಕಲಿಸುವ ಜೀವನನೀತಿಯನ್ನು ಮೈಗೂಡಿಸಿಕೊಂಡ ಮುದುಕಿಯೊಬ್ಬಳ ಚಿತ್ರಣವಾಗಿದೆ.

ಆಧುನಿಕ metro ಸಮಾಜದ ಬೆಡಗನ್ನು ವರ್ಣಿಸುತ್ತಲೇ, ಇಂತಹ ಸಮಾಜವು ನೈಜ ಸಂಬಂಧಗಳ ಬದಲು, virtual relationಅನ್ನು ಹೇಗೆ ಬೆಳೆಸುತ್ತದೆ, ಹೇಗೆ ಇದು ಮನುಷ್ಯರನ್ನು dehumanize ಮಾಡುತ್ತದೆ ಎನ್ನುವದರ ವರ್ಣನೆಯು ‘ಕ್ಷಮೆಯಿಲ್ಲದೂರಿನಲಿ’ ಕತೆಯಲ್ಲಿ ವರ್ಣಿತವಾಗಿದೆ.
ವಿನೋದದಲ್ಲಿಯೇ ಪ್ರಾರಂಭವಾಗಿ, ವಿನೋದದಲ್ಲಿಯೇ ಸಾಗುವ ಈ ಕತೆ ದುರಂತದಲ್ಲಿ ಕೊನೆಯಾಗಿದೆ.
‘ಹೊಸ ಹರಯ’ ಇದು ಆಧುನಿಕ metro ಸಮಾಜದ ಮತ್ತೊಂದು ಕತೆ.
ಈ ಕತೆಯಲ್ಲಿ ಆಧುನಿಕ ಹಾಗೂ ಅತ್ಯಾಧುನಿಕ ತಲೆಮಾರುಗಳೆರಡರ ತಿಕ್ಕಾಟದ ವರ್ಣನೆಯಿದೆ.

‘ಕೆಂಪು ಗಿಣಿ’ ಈ ಸಂಕಲನದ ಮತ್ತೊಂದು ಮಹತ್ವದ ಕತೆ.
ಆಧುನಿಕ ಅರ್ಥವ್ಯವಸ್ಥೆ , ಅದರೊಳಗಿನ ದುರಾಸೆ ಇವೆಲ್ಲ ಹೇಗೆ ಒಂದು ಹಳ್ಳಿಯ ಹಣೆಬರಹವನ್ನೇ ಬದಲಾಯಿಸಿಬಿಡುಬಹುದೆನ್ನುವ ಚಿತ್ರಣ ಈ ಕತೆಯಲ್ಲಿದೆ.
ಹಳ್ಳಿಯ ಸಾಂಪ್ರದಾಯಕ ಸಮಾಜದಲ್ಲಿರುವ ಮುಗ್ಧ ಬಾಲಕನೊಬ್ಬ ಕಾಣುವ ಅದ್ಭುತರಮ್ಯ fantasyಯು, ಅವನು ಬೆಳೆದು, ಪಟ್ಟಣಕ್ಕೆ ಹೋಗಿ, ಮರಳಿದಾಗ nightmarish reality ಆಗಿ ಬದಲಾಗಿರುವದು ಈ ಕತೆಯ ಹಂದರ.

‘ಕೆಂಧೂಳಿ’ ಹಾಗೂ ‘ನವಿರುಗರಿ’ ಇವು ವ್ಯಕ್ತಿಗಳ ಭಾವನಾಪ್ರಪಂಚಕ್ಕೆ ಸಂಬಂಧಿಸಿದ ಕತೆಗಳು.
‘ನವಿರುಗರಿ’ಯ ಶೀರ್ಷಿಕೆಯೇ ಸೂಚಿಸುವಂತೆ ಇದು ನವಿರಾದ ನವಿಲುಗರಿ. ಈ ಕತೆಯ ಪಾತ್ರಗಳ ಭಾವನಾಲೋಕವನ್ನು, nostalgiaವನ್ನು ಇಲ್ಲಿ ನವಿರಾಗಿ ಬಿಚ್ಚಿ ತೋರಿಸಲಾಗಿದೆ.

ಈ ಸಂಕಲನದಲ್ಲಿ ಬರುವ ಎಂಟೂ ಕತೆಗಳು ಓದುಗನಿಗೆ ಸಾಹಿತ್ಯಕ ತೃಪ್ತಿಯನ್ನು ನೀಡುತ್ತವೆ.
ಕತೆಗಳನ್ನು ಇನ್ನೂ ಓದದ ಓದುಗನಿಗೆ ಅನ್ಯಾಯವಾಗಬಾರದೆನ್ನುವ ಉದ್ದೇಶದಿಂದ ಇಲ್ಲಿ ಪ್ರತ್ಯೇಕವಾಗಿ, ವಿಸ್ತಾರವಾಗಿ ವಿಶ್ಲೇಷಿಸಿಲ್ಲ.
ವಸುಧೇಂದ್ರರ ಕತೆಗಳಲ್ಲಿ ಕರುಣರಸವೇ ಪ್ರಧಾನವಾದರೂ ಸಹ ತೆಳುವಿನೋದದ ಲೇಪನದ ಶೈಲಿಯಿಂದಾಗಿ ಇವರ ಕತೆಗಳಲ್ಲಿಯ ಎಂತಹ ಕರುಣಾಮಯ ಪರಿಸ್ಥಿತಿಯೂ ಸಹ ಸಹ್ಯವಾಗುತ್ತದೆ.
ಓದುಗನ ಕಣ್ಣಿನಲ್ಲಿ ನೀರು ಹಾಗೂ ತುಟಿಯ ಮೇಲೆ ನಗು ಎರಡೂ ಒಟ್ಟಿಗೆ ಕಾಣುವಂತೆ ಮಾಡುವ ಸಾಮರ್ಥ್ಯ ಈ ಕತೆಗಳಿಗಿದೆ.

ವಸುಧೇಂದ್ರರು ತಮ್ಮ ಕತೆಗಳ ಪ್ರತಿಯೊಂದು ಪಾತ್ರವನ್ನೂ ಅನುಕಂಪದಿಂದ, ಪ್ರೀತಿಯಿಂದ, ಇಷ್ಟಪಟ್ಟು ರೂಪಿಸುತ್ತಾರೆ.
ಆ ಪಾತ್ರಗಳ ನೀತಿ, ನಿಲುವುಗಳ ಬಗೆಗೆ ಅವರು judgment ಕೊಡಲು ಬಯಸುವದಿಲ್ಲ.
ಹೀಗಾಗಿ ಈ ಕತೆಗಳ ಪಾತ್ರಗಳು ನೆರೆಮನೆಯ ವ್ಯಕ್ತಿಗಳಷ್ಟೇ ಜೀವಂತ ಪಾತ್ರಗಳಾಗುತ್ತವೆ.
ಈ ತರಹದ ಪಾತ್ರರಚನೆ ವಸುಧೇಂದ್ರರ ವೈಶಿಷ್ಟ್ಯವಾಗಿದೆ.
ಕನ್ನಡದ ಶ್ರೇಷ್ಠ ಕತೆಗಾರರಾದ ಮಾಸ್ತಿಯಾಗಲಿ, ಲಂಕೇಶ ಆಗಲಿ ಅಥವಾ ದೇವನೂರು ಮಹಾದೇವರೇ ಆಗಲಿ, ತಮ್ಮ ಪಾತ್ರಗಳ ಮೂಲಕ ಸಮಾಜದ ಒಂದು ರೂಪವನ್ನು ಓದುಗರಿಗೆ ತೋರಿಸಲು ಬಯಸುತ್ತಾರೆ.
ಆದರೆ ವಸುಧೇಂದ್ರರು ತಮ್ಮ ಪಾತ್ರಗಳ ಕತೆಯನ್ನು ಮಾತ್ರ ಓದುಗರ ಎದುರಿಗೆ ಇಡುತ್ತಾರೆ.
ಹೀಗಾಗಿ ವಸುಧೇಂದ್ರರ ಪಾತ್ರಗಳು ಓದುಗನ ಮನದಲ್ಲಿ ಚಿರಸ್ಥಾಯಿಯಾಗುತ್ತವೆ.

ವಸುಧೇಂದ್ರರಿಂದ ಇನ್ನೂ ಇಂತಹ ಅನೇಕ ಕತೆಗಳು ಬರಲಿ, ಕನ್ನಡ ಓದುಗರನ್ನು ಖುಶಿ ಪಡಿಸಲಿ ಎಂದು ಹಾರೈಸುತ್ತೇನೆ.

34 comments:

shivu.k said...

ಸುನಾಥ್ ಸಾರ್,

ಹಂಪಿ ಎಕ್ಸ್ ಪ್ರೆಸ್ ಬಗ್ಗೆ ಬರೆದಾಗಲೇ ನನಗೆ ಕುತೂಹಲ ಮತ್ತು ಸಂತೋಷವಿತ್ತು...

ವಸುಧೇಂದ್ರರು ತಮ್ಮ ಪಾತ್ರಗಳ ಕತೆಯನ್ನು ಮಾತ್ರ ಓದುಗರ ಎದುರಿಗೆ ಇಡುತ್ತಾರೆ.
ಹೀಗಾಗಿ ವಸುಧೇಂದ್ರರ ಪಾತ್ರಗಳು ಓದುಗನ ಮನದಲ್ಲಿ ಚಿರಸ್ಥಾಯಿಯಾಗುತ್ತವೆ.......

ನಿಮ್ಮ ಕೊನೆಯ ಮಾತು ನೂರಕ್ಕೆ ನೂರರಷ್ಟು ನಿಜ ವಸುದೇಂದ್ರ ಅವರ್ ಎಲ್ಲಾ ಕೃತಿಗಳನ್ನೂ ಓದಿದ್ದೇನೆ....ನನಗೆ ಕನ್ನಡದಲ್ಲಿ ತೇಜಸ್ವಿ ಬಿಟ್ಟರೆ ವಸುದೇಂದ್ರ ನನಗೆ ತುಂಬಾ ಇಷ್ಟ....

ಹಂಪಿ ಎಕ್ಸ್‌ಪ್ರೆಸ್ ಬಿಡುಗಡೆ ದಿನ ನಾನು ಮತ್ತು ಮಲ್ಲಿಕಾರ್ಜುನ್ ಅಲ್ಲಿದ್ದು ಫೋಟೊಗಳನ್ನು ತೆಗೆದಿದ್ದೆವು...ಅವನ್ನು ಅವರು ಮೆಚ್ಚಿದ್ದರೂ ಕೂಡ.....

ಹಂಪಿ ಎಕ್ಸ್‌ಪ್ರೆಸ್ ಮುಖಪುಟ ಸ್ಪರ್ಧೆಗೆ ನಾನು ಭಾಗವಹಿಸಿದ್ದೆ...

ನನ್ನ ಮುಂಜಾನೆ ದಿನಪತ್ರಿಕೆ ವಿಚಾರದ ಬಗ್ಗೆ ಲೇಖನ ಬರೆಯಲಿಕ್ಕೆ ನಾಗೇಶ್ ಹೆಗಡೆಯವರ ಜೊತೆಗೆ ವಸುದೇಂದ್ರರ ಪ್ರೋತ್ಸಾಹವೂ ಕಾರಣ....

ಈಗ ಅವರ ಎಲ್ಲಾ ಕಥಾ ಸಂಕಲನ ಒಟ್ಟುಗೂಡಿಸಿ...೩೦೦ ರೂಪಾಯಿಗೆ ಒಂದು ಪುಸ್ತಕ ತಂದಿದ್ದಾರೆ...
ಒಂದು ಒಳ್ಳೆಯ ಪುಸ್ತಕದ ಬಗ್ಗೆ ಬರೆದಿದ್ದೀರಿ....ಥ್ಯಾಂಕ್ಸ್....

Ittigecement said...

ಸುನಾಥ ಸರ್...

ವಸುಧೇಂದ್ರರ.. ಈ ಕಥಾಸಂಕಲನ.. ಬಹಳ ಚೆನ್ನಾಗಿದೆ...

ಅಂದಿನ ಪುಸ್ತಕ ಬಿಡುಗಡೆ ಸಭೆಗೆ ನನ್ನ ಮಿತ್ರರ ( ಶಿವು ಹಾಗು ಮಲ್ಲಿಕಾರ್ಜುನ್) ಸಂಗಡ ನಾನೂ ಹೋಗಿದ್ದೆ...

ಬಹಳ ಸುಂದರ ಪುಸ್ತಕ..

"ಅಪಾರ" ರವರ ಮುಖಪುಟವೂ ಅದ್ಭುತವಾಗಿದೆ..

ಅದರ ಮುಖಪುಟಕ್ಕಾಗಿ "ಸ್ಪರ್ಧೆ ಕೂಡ ಇತ್ತು...

ಎಲ್ಲ ಹೊಸತು..ಹೊಸದು..

ಓದಬೇಕಾದ ಪುಸ್ತಕ ಪರಿಚಯ ಮಾಡಿಕೊಟ್ಟಿದ್ದಕ್ಕೆ ವಂದನೆಗಳು...

Keshav.Kulkarni said...

ಸುನಾಥ,
ಸೀಳುಲೋಟದ ಲಿಂಕ್ ಇಲ್ಲಿದೆ:

http://raghuapara.blogspot.com/2007/12/blog-post_1854.html

ಮತ್ತು ಅದರ ಬಗ್ಗೆ ನಾನು ಬರೆದ ಎರಡು ಮಾತು ಇಲ್ಲಿದೆ:

http://kannada-nudi.blogspot.com/2008/03/blog-post.html

- ಕೇಶವ

Anonymous said...

ಸುನಾಥ ಅವರೆ,
ನಿವು ವಸುಧೇಂದ್ರ ಅವರ ಬಗೆಗೆ ಹೇಳಿದ್ದು ನಿಜ. ಅವರ ಕಥೆಗಳಲ್ಲಿ ನನಗೂ ತುಂಬಾ ಹಿಡಿಸಿದ್ದು ಎಂದರೆ ಸಿಳುಲೋಟ. ಒದುವಾಗ ಮನಸ್ಸು ಕರಗಿ ಹೋಗುತ್ತೆ.ಕೋತೆಗಳು ಸಾರ್ ಹಾಗು ಕೆಂಪು ಗಿಣಿ ಒದುವಾಗ ಕಡೆಯವರೆಗೆ ನಗು ಬರುವಂತೆ ಇದ್ದರು,ಕಥೆ ಮುಗಿದ ಮೇಲೆ ಅಯ್ಯೋ ಎಂದು ಮನಸ್ಸಿಗೆ ಅನಿಸುವಂತೆ ಇರುತ್ತವೆ. ಆದರೆ ಇಂಥ ಕಥೆಗಳು ಒದಿದ ಮೇಲೆ ಒಂದು ಸಮಾಧಾನವಾಗುವಂಥ ವಿಷಯವೆಂದರೆ, ನಾವು ತುಂಬಾ lucky ಅನಿಸುತ್ತೆ. ಜನರು ಯಾವ ಯಾವ ರಿತಿಯಲ್ಲಿ ಕಷ್ಟ ಪಟ್ಟಿರುತ್ತಾರೆ ಎಂಬುವುದು ಇಂಥ ಕಥೆಗಳಿಂದಾ ಗೊತ್ತಾಗುತ್ತೆ.ವಸುಧೇಂದ್ರ ಅವರ ಕಥೆಗಳು ನನಗೂ ತುಂಬಾ ಇಷ್ಟಾ.
-ಕರುಣಾ

Anonymous said...

ಸುನಾಥ ಅವರೆ,
ಬೆರಳಚ್ಚಿನ ದೋಷಗಳನ್ನು ಕ್ಷಮಿಸಿ :(
-ಕರುಣಾ

Unknown said...

ಸುನಾಥ್ ಅವರೆ,
ವಸುಧೇಂದ್ರ ಅವರೆ ಹಂಪಿ ಎಕ್ಸ್ ಪ್ರೆಸ್ ಓದಿದ ಮೇಲೆ ಬಹಳೆ ಖುಶಿ ಅಯಿತು. ಎಷ್ಟೊಂದು ವೈವಿಧ್ಯಮಯ ಕತೆಗಳಿವೆ. ನಿಮ್ಮ ವಿಮರ್ಷೆಯೂ ಸಹ ಚೆನ್ನಾಗಿದೆ.

Sushrutha Dodderi said...

ವಸುಧೇಂದ್ರರ ’ಯುಗಾದಿ’ ಕತೆಯ ನಂತರ ನನ್ನ ಕಣ್ಣಲ್ಲಿ ನೀರು ತರಿಸಿದ ಎರಡನೇ ಕತೆ ’ಕೆಂಪುಗಿಣಿ’. ಹುಚ್ಚಾಪಟ್ಟೆ ನಗಿಸುತ್ತಾ ಶುರುವಾಗುವ ಕತೆ ಕೊನೆಗೆ ಹೋಗಿ ಮುಗಿಯುವ ರೀತಿ ಇದೆಯಲ್ಲಾ, ಇಟ್ಸ್ ಮಾರ್ವಲಸ್! ನಾನಂತೂ ಹ್ಯಾಟ್ಸಾಫ್ ಅಂದುಬಿಟ್ಟೆ ವಸುಗೆ.. :-)

ಕೆ.ಎನ್. ಪರಾಂಜಪೆ said...

ಸುನಾಥ್ ಅವರೇ

ವಸುಧೇ೦ದ್ರ ಕನ್ನಡದ ಅಪರೂಪದ ಕಥೆಗಾರ. ಅವರ ಹೊಸ ಕೃತಿಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.Thanks.

sunaath said...

ಶಿವು,
ಧನ್ಯವಾದಗಳು. ವಸುಧೇಂದ್ರರ ಸಾಹಿತ್ಯವು ಸಂಗ್ರಹಿಸಲೇ ಬೇಕಾದ ಸಾಹಿತ್ಯ. ನೀವು ಅವರನ್ನು ವೈಯಕ್ತಿಕವಾಗಿ ಭೇಟಿಯಾದದ್ದು ಓದಿ ಸಂತೋಷವಾಯಿತು.

sunaath said...

ಪ್ರಕಾಶ,
ಅಪಾರ ಅವರ ತಾಣದಲ್ಲಿ ಕೊಡಲಾದ ಕೆಲವು ಮುಖಪುಟಗಳನ್ನು ನಾನೂ ನೋಡಿದ್ದೇನೆ. ಆಯ್ಕೆ ಮಾಡುವದು
ಕಷ್ಟದ ಕೆಲಸ ಎಂದು ನನಗೆ ಅನಿಸಿತ್ತು.
ಈಗ ಉತ್ತಮವಾದದ್ದನ್ನೇ ಆಯ್ದಿದ್ದಾರೆ ಎಂದು ಅನಿಸುತ್ತದೆ.

sunaath said...

ಕೇಶವ,
ನಿಮ್ಮ ತಾಣದಲ್ಲಿ ನೀವು 'ಸೀಳುಲೋಟ' ಹಾಗೂ 'ತಬ್ಬಲಿಗಳು' ಬಗೆಗೆ ಬರೆದ ಲೇಖನವನ್ನು ನಾನು ಆವಾಗಲೇ ಓದಿದ್ದೆ. ನಿಮ್ಮ ಲೇಖನ ಸತ್ಯವನ್ನೇ ಹೇಳುತ್ತದೆ.
'ಸೀಳುಲೋಟ'ವನ್ನು ನಾನು ಸಹ ಅಪಾರರವರ ತಾಣದಲ್ಲಿಯೇ
ಮೊದಲ ಬಾರಿಗೆ ಒದಿದ್ದು.

sunaath said...

ಕರುಣಾ,
ವಸುಧೇಂದ್ರರ ಕತೆಗಳ ಕೊನೆಯಲ್ಲಿಯೇ ಅವರ ಜಾದೂ ನೋಡಸಿಗುವದು, ಅಲ್ಲವೆ?

sunaath said...

ವನಮಾಲಾ,
ಧನ್ಯವಾದಗಳು.

sunaath said...

ಸುಶ್ರುತ,
Really, Hats off to Vasudhendra!

sunaath said...

ಪರಾಂಜಪೆಯವರೆ,
ವಸುಧೇಂದ್ರರು ಈ ತಲೆಮಾರಿನ ಪ್ರಮುಖ ಲೇಖಕರು ಎನ್ನುವದರಲ್ಲಿ ಎರಡು ಮಾತಿಲ್ಲ.
ಅಂದ ಹಾಗೆ, ನಿಮ್ಮ "ಮನಸ್ಸಿನ್ಯಾಗಿನ ಮಾತು" ಹೊರಗೆ
ಬಂದಿಲ್ಲವೇಕೆ? ಬೇಗನೆ ಹೊರ ತನ್ನಿ.

ತೇಜಸ್ವಿನಿ ಹೆಗಡೆ said...

ಕಾಕಾ,

ನಿಮ್ಮ ವಿಮರ್ಶೆ ನೋಡಿದ ಮೇಲೆ ಅವರ ಪುಸ್ತಕವನ್ನು ಓದಲೇ ಬೇಕಾಗಿದೆ. ಈ ವರೆಗೂ ನಾನು ವಸುಧೇಂದ್ರರ ಪುಸ್ತಕಗಳನ್ನು ಓದಿಲ್ಲ. ಏನು ಮಾಡಲಿ ಸಮಯವೇ ಸಿಗದಂತಾಗಿದೆ ಓದಲು
:(...( ಪುಟ್ಟಿಯ ಕಾಟ :)) ಸಮಯ ಹೊಂದಿಸಿಯಾದರೂ ಉತ್ತಮ ಪುಸ್ತಕಗಳನ್ನು ಓದುತ್ತೇನೆ. ಸಧ್ಯ "ಕರ್ವಾಲೊ" ಓದುತ್ತಿರುವೆ.. ಅದ್ಭುತ ನಿರೂಪಣೆ. ಅತ್ಯುತ್ತಮ ಬರಹ.. ನೀವೂ ಓದಿರಬಹುದು. ಅಲ್ಲವೇ?

sunaath said...

ತೇಕಸ್ವಿನಿ,
ಪುಟ್ಟಿಯೇ ಓಂದು ಅದ್ಭುತ ಪುಸ್ತಕವಾಗಿದ್ದಾಳೆ. ಮೊದಲ ಆದ್ಯತೆ ಅವಳಿಗೆ, ಬಳಿಕ ಉಳಿದ ಓದು.

ಆಲಾಪಿನಿ said...

ಅಂಕಲ್‌, ನಿನ್ನೆ ವಸುಧೇಂದ್ರ ಹತ್ರ ಮಾತಾಡ್ತಿದ್ದೆ. ನಿನ್ನೆಯಷ್ಟೇ ನಾನು ಕಥೆಗಳನ್ನ ಓದಿದ್ದು. ಸ್ವಲ್ಪ ಲೇಟು ನಾನು. ಅದಕ್ಕೆ ವಸುಧೇಂದ್ರ ಮೊದಲು ಕಥೆ ಓದಿ ಆಮೇಲೆ ಅಂಕಲ್‌ ವಿಮರ್ಶೆ ಓದಿ ಅಂದ್ರು. ಒಂದ್ರೀತಿ ಟ್ರಾನ್ಸ್‌ಪರೆಂಟ್‌ ವಿಮರ್ಶೆ ನೋಡ್ರಿ. ಖುಷಿಆತು. ನಿಮ್ಮ ವಿಮರ್ಶೆ, ವಸುಧೇಂದ್ರ ಕತೆಗಳು.... ಎಲ್ಲ.

ನಾನು ಅರವಿಂದ್‌ ಗೆ ’ಎಕ್ಸ್‌ಪ್ರೆಸ್‌’ ನಲ್ಲಿನ ಕಥೆಗಳನ್ನು ಓದಿ ಹೇಳ್ತಿದ್ದೆ. ತುಂಬಾ ಎಂಜಾಯ್‌ ಮಾಡ್ತಿದ್ದ. ಬಹುಶಃ ವಸುಧೇಂದ್ರ ಅರವಿಂದ್‌ ಗೆ ಇಷ್ಟದ ಲೇಖಕ ಆಗಿದಾರೆ ಈಗ...

sunaath said...

ಶ್ರೀದೇವಿ,
ವಸುಧೇಂದ್ರರ ಕತೆಗಳನ್ನು ಓದುತ್ತಿರುವಂತೆ, ಅವರು ಸೃಷ್ಟಿಸಿದ ಪಾತ್ರಗಳ ಮೇಲೆ ಪ್ರೀತಿ ಮೂಡುತ್ತದೆ, ಅಲ್ವಾ?
By the way, ಅರವಿಂದರಿಗೆ ಕತೆ ಹೇಳಿ ಮಲಗಸ್ತೀಯಾ ಹೇಗೆ?
-ಕಾಕಾ

Anonymous said...

ವಸುಧೇಂದ್ರರ "ಹಂಪಿ.." ನಾನಿನ್ನೂ ನೋಡಿಲ್ಲ.
ಆದರೆ ಅವರ ಹಿಂದಿನ ಕೃತಿಗಳನ್ನು ಗಮನಿಸಿದಾಗ
ಅವರನ್ನು ನಿಸ್ಸಂಕೋಚವಾಗಿ soft guy ಅಂತ ಕರೆಯಬಹುದು..
ಬಹುಷಃ ಅವರು ಪಾತ್ರಗಳನ್ನು ಸೃಷ್ಟಿಸಿರಲಿಕ್ಕಿಲ್ಲ;
ಅವೆಲ್ಲ ನಿಜಜೀವನದಲ್ಲಿ ಇಲ್ಲೋ ಅಲ್ಲೋ ಹಾಸುಹೊಕ್ಕಾಗಿರುವ
ಮುಖಗಳೇ!

-ರಾಘವೇಂದ್ರ ಜೋಶಿ

Anonymous said...

Pls go through below link:
http://odubazar.wordpress.com/2008/08/29/ನಿಮ್ಮಮ್ಮ-ಅಂದ್ರೆ-ನಂಗಿಷ್ಟ/

-rj

Anonymous said...

ಸುನಾಥ್ ಸರ್‍,

ಕನ್ನಡದ ಸಣ್ಣಕಥೆಗಾರರಲ್ಲಿ ಪೂಚಂತೇ ಬಳಿಕ ವಸುಧೇಂದ್ರ ಅನ್ನುವುದರಲ್ಲಿ ಎರಡು ಮಾತಿಲ್ಲ.ಸಧ್ಯಕ್ಕೆ ಹಂಪಿ ಎಕ್ಸ್ ಪ್ರೆಸ್ಸ್ ಓದ್ತಿದ್ದೇನೆ.

ಹೊಸ ಹರೆಯ ಮತ್ತು ೨ ರೂಪಾಯಿ ಓದಿದೆ. ೨ ರೂಪಾಯಿಯ ಅಜ್ಜಿ ಮನಸಿನಾಳದಲ್ಲಿನ್ನೂ ಕಾಡುತ್ತಿದ್ದಾಳೆ...

ಚಿತ್ರಾ said...

ಕಾಕಾ,
ವಸುಧೇಂದ್ರರ ಕಥೆಗಳನ್ನು ಓದಿದ್ದೇನೆ.ಮೆಚ್ಚಿದ್ದೇನೆ . ಆದರೆ, ನಿಮ್ಮ ವಿಮರ್ಶೆ ಓದಿದಮೇಲೆ ’ ಹಂಪಿ ಎಕ್ಸ್ ಪ್ರೆಸ್’ ಓದುವ ಹಂಬಲ ಬಹಳವಾಗಿದೆ.ಈ ಸಲ ಊರಿಗೆ ಹೋದಾಗ ಪುಸ್ತಕ ತರಬೇಕು .

sunaath said...

rj,
ನಿಮ್ಮ ಬಿರುದು ಸರಿಯಾದದ್ದು: ವಸುಧೇಂದ್ರರು soft guy!

ನೀವು ಕೊಟ್ಟ 'ಓದುಬಜಾರ' ಲಿಂಕಿಗೆ ಹೋಗಿ ತುಂಬಾ ಪ್ರಭಾವಿತನಾದೆ. ಇದು ಒಂದು ಅತ್ಯುತ್ತಮ ತಾಣವಾಗಬಹುದು.
Thank you!

sunaath said...

ನೀಲಿಹೂವು,
ನಾನು ನಿಮ್ಮ ಅಭಿಪ್ರಾಯಕ್ಕೆ ಸಹಮತನಿದ್ದೇನೆ.

sunaath said...

ಚಿತ್ರಾ,
ವಸುಧೇಂದ್ರರು ಈ ಸಲವೂ ಉತ್ತಮವಾದ ಕತೆಗಳನ್ನು ಕೊಟ್ಟಿದ್ದಾರೆ. ಅವನ್ನು ಕತೆ ಎಂದು ಕರೆಯಲು ಮನಸ್ಸು ಆಗುವದಿಲ್ಲ. ನಮ್ಮ ಪಕ್ಕದಲ್ಲಿಯೇ ನಡೆಯುತ್ತಿರುವ ಘಟನೆಯಂತೆ ಭಾಸವಾಗುವದು.

ಶಾಂತಲಾ ಭಂಡಿ (ಸನ್ನಿಧಿ) said...

ಅಂಕಲ್...
ವಸುಧೇಂದ್ರರ ಕಥೆಗಳು ತುಂಬ ಇಷ್ಟವಾಗುತ್ತವೆ. ನಾವು ಮನೆ ಮಂದಿಯೆಲ್ಲ ವಸುಧೇಂದ್ರರ ಕಥೆಗಳನ್ನು ತುಂಬ ಇಷ್ಟಪಡುತ್ತೇವೆ. ‘ಹಂಪಿ ಎಕ್ಸ್ ಪ್ರೆಸ್’ ಓದಬೇಕೆನಿಸುತ್ತಿದೆ ನಿಮ್ಮ ಲೇಖನ ಓದಿದ ಮೇಲೆ. ವಸುಧೇಂದ್ರರ ಕಥೆಗಳ ಬಗ್ಗೆ ಬಹಳ ಚೆಂದವಾಗಿ ಹೇಳಿಕೆ ಕೊಟ್ಟಿದ್ದೀರಿ. ಧನ್ಯವಾದಗಳು.

sunaath said...

That's right, Shantala!
Take a jolly ride in Hampi Express!

Anonymous said...

ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ಧನ್ಯವಾದಗಳು,
ಶಮ, ನಂದಿಬೆಟ್ಟ
http://minchulli.wordpress.com

kanasu said...

ka ka...seems like its a "must read" one. Shall read it :)

sunaath said...

ಕನಸು,
ವಸುಧೇಂದ್ರರ ಇತರ ಸಂಕಲನಗಳನ್ನೂ ನೀನು ಓದಿರಬಹುದಲ್ಲವೆ?
೧) ನಮ್ಮಮ್ಮ ಅಂದ್ರೆ ನಂಗಿಷ್ಟ
೨) ಮನೀಷೆ
೩) ಯುಗಾದಿ
೪) ಚೇಳು

PARAANJAPE K.N. said...

Sir,
ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ post ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ

ಸತೀಶ್ ನಾಯ್ಕ್ said...

ಸೀಳುಲೋಟ.. ಕನ್ನಡದ ಮಹತ್ವದ ಕಥೆಗಳಲ್ಲಿ ಒಂದು.. ಒಪ್ಪುವ ಮಾತು.

ನಾನು ನಿಮ್ಮ ಬ್ಲಾಗನ್ನು ಈ ಮೊದಲೇ ಯಾಕೆ ಓದಲಿಲ್ಲ ಅನ್ನುವ ಖೇದವೊಂದು ಉಂಟಾಗುತ್ತದೆ ಸಾರ್.. ಬಹಳ ಅಮೂಲ್ಯ ಪರಿಚಯ, ವಿಮರ್ಶೆ, ವಿಚಾರ ಧಾರೆಗಳಿವೆ.. ಕಾಮೆಂಟಿಸಲು ಕಂಜೂಸ್ ತನ ತೋರಿದರೂ ಖಂಡಿತ ಪೂರ್ತಿ ಓದುವ ಹಠವನ್ನಂತೂ ಬಿಡುವ ಮಾತಿಲ್ಲ. ಸುಂದರ ಬರವಣಿಗೆಗಳಿಗೆ ಧನ್ಯವಾದಗಳು.. :)

sunaath said...

Thank you, Satish. (My computer not working. Can not write in Kannada!)