Saturday, February 28, 2009

ಕೃಷ್ಣ ಗೋಪಾಳ ಜೋಶಿ--ಅಗ್ನಿಸಂದೇಶ

ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ ಎಂದು ಹೇಳಬಹುದು. ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಈ ಮಾತು ಸರಿಯಾಗಿ ಅನ್ವಯಿಸುತ್ತದೆ. ದೇಶದ ಒಳಿತಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಅನೇಕ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದೂ ನಮಗೆ ಅದರ ಅರಿವೇ ಇಲ್ಲದವರಂತೆ ನಾವು ಬದಕುತ್ತಿದ್ದೇವೆ.

ಶ್ರೀ ಕೃಷ್ಣ ಗೋಪಾಳ ಜೋಶಿಯವರನ್ನು ನಾನು ಮೊದಲ ಸಲ ನೋಡಿದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ೧೪ ವರ್ಷಗಳ ಬಳಿಕ. ಆಗ ಇವರು ೫೨ ವರ್ಷದವರು. ಧಾರವಾಡದ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿದ್ದರು. ಸುಮಾರು ಆರಡಿ ಎತ್ತರದ ದೃಢಕಾಯ, ತಲೆಗೆ ಗಾಂಧಿ ಟೊಪ್ಪಿಗೆ, ಶಿಸ್ತು ಹಾಗೂ ಮಮತೆಗಳನ್ನು ಸೂಸುವ ಮುಖಭಾವ.
ಈ ವ್ಯಕ್ತಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವ್ಯಕ್ತಿ ಎಂದು ಆ ಶಾಲೆಯ ವಿದ್ಯಾರ್ಥಿಗಳಿಗಾಗಲೀ, ಅಲ್ಲಿಯ ಅನೇಕ ಶಿಕ್ಷಕರಿಗಾಗಲೀ ಗೊತ್ತೇ ಇರಲಿಲ್ಲ.

ಕೃಷ್ಣ ಗೋಪಾಳ ಜೋಶಿಯವರು ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಸಾಮಾನ್ಯ ಶಕೆ ೧೯೦೯ರಲ್ಲಿ ಜನಿಸಿದರು. ಏಳನೆಯ ಇಯತ್ತೆಯಲ್ಲಿ ತೇರ್ಗಡೆಯಾದ ಬಳಿಕ, ಇವರು ವೈದಿಕೀ ವೃತ್ತಿ ಮಾಡಿಕೊಂಡಿರಲಿ ಎನ್ನುವದು ಇವರ ಹಿರಿಯರ ಅಭಿಪ್ರಾಯವಾಗಿತ್ತು. ಆದರೆ ಕೃಷ್ಣ ಜೋಶಿಯವರದು ಬಾಲ್ಯದಿಂದಲೂ ಸಾಹಸದ ಸ್ವಭಾವ. ಮನೆ ಬಿಟ್ಟು ವಿಜಾಪುರಕ್ಕೆ ಓಡಿ ಹೋದರು. ಮಲ ಅಕ್ಕನ ಮನೆಯಲ್ಲಿ ಇದ್ದುಕೊಂಡು, ವಾರಾನ್ನ ಹಚ್ಚಿಕೊಂಡು ವಿದ್ಯಾಭ್ಯಾಸ ಸಾಗಿಸಿದರು.

ವಿಜಾಪುರದಲ್ಲಿ ಇವರ ಪಾಲಕರು ತೀರಿಕೊಂಡಿದ್ದರಿಂದ ಮಲ ಅಕ್ಕನ ಜೊತೆಗೆ ಇವರೆಲ್ಲ ಧಾರವಾಡಕ್ಕೆ ಬರಬೇಕಾಯಿತು. ಅಲ್ಲಿ ಕರ್ನಾಟಕ ಹಾಯ್‍ ಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಇದು ಜೋಶಿಯವರ ಜೀವನದಲ್ಲಿಯ turning point.

ಕರ್ನಾಟಕ ಹಾಯ್‍ಸ್ಕೂಲ ಎಂದರೆ ಸ್ವಾತಂತ್ರ್ಯ ಹೋರಾಟಗಾರರ ಕಮ್ಮಟವಾಗಿತ್ತು. ಶಿನೋಳಿಕರ ಎನ್ನುವ ತರುಣ ವಿಜ್ಞಾನಿ ಬೆಂಗಳೂರಿನಲ್ಲಿಯ ತಾತಾ ವಿಜ್ಞಾನ ಕೇಂದ್ರದಲ್ಲಿಯ ತಮ್ಮ ಆಕರ್ಷಕ ವೈಜ್ಞಾನಿಕ ಹುದ್ದೆಯನ್ನು ತ್ಯಜಿಸಿ, ಈ ಶಾಲೆಯ ಮುಖ್ಯಾಧ್ಯಾಪಕರಾಗಲು ಬಂದಿದ್ದರು. ಇದಲ್ಲದೆ ಧಾರವಾಡದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಡಾ^. ಕಬ್ಬೂರ, ಶ್ರೀ ದ.ಪ. ಕರಮರಕರ (--ಇವರು ಸ್ವಾತಂತ್ರ್ಯಾನಂತರ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು--), ಶ್ರೀ ಮುಧೋಳಕರ ಇವರೆಲ್ಲ ಈ ಸಂಸ್ಥೆಯ ಕಾರ್ಯಕರ್ತರು. “ಗುದ್ಲಿ ಪಾರ್ಟಿ” ಎನ್ನುವ ಗುಂಪೊಂದನ್ನು ನಿರ್ಮಿಸಿಕೊಂಡು ಇವರೆಲ್ಲ ತಮ್ಮ ಕೈಗಳಿಂದಲೇ ಶಾಲೆಗೆ ಅವಶ್ಯಕವಿರುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. (ಖ್ಯಾತ ಸಾಹಿತಿ ಹಾಗೂ ಕೇಂದ್ರ ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಶ್ರೀ ಗಂಗಾಧರ ಚಿತ್ತಾಳರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಅವರೂ ಸಹ ಇಂತಹ ಸಾಂಸ್ಕೃತಿಕ-ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೇ. ಶ್ರೀ ಚಿತ್ತಾಳರು ಆಗಿನ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ಉತ್ತೀರ್ಣರಾದರು.)

ಕೃಷ್ಣ ಗೋಪಾಳ ಜೋಶಿಯವರು ಈ ಧುರೀಣರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ೧೯೨೮ರಲ್ಲಿ ಡಾ^. ನಾ.ಸು. ಹರ್ಡೀಕರರ ಸೇವಾದಳ ಕಾರ್ಯಕರ್ತರಾಗಿ ಸೇವಾದಳ ಶಿಬಿರದಲ್ಲಿ ಭಾಗವಹಿಸಿದರು.

ಎಪ್ರಿಲ್ ೧೯೩೦ರಲ್ಲಿ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು. ಜೋಶಿಯವರು ಹಾಗೂ ಹೋರಾಟಕ್ಕಿಳಿದ ಇತರ ತರುಣರು ಸುಮಾರು ೪೦ ಕಿಲೊಮೀಟರ ದೂರದ ಬೆಣ್ಣಿಹಳ್ಳಕ್ಕೆ ಹೋಗಿ, ಉಪ್ಪು ತಯಾರಿಸಿ ತಂದು ಧಾರವಾಡದಲ್ಲಿ ಹಂಚಿದರು.

೧೯೩೧ರಲ್ಲಿ ಅಸಹಕಾರ ಚಳುವಳಿ ತಾರಕಕ್ಕೇರಿತು. ತಮ್ಮ ಜೊತೆಗಾರರೊಂದಿಗೆ ವಿದೇಶಿ ವಸ್ತ್ರಗಳ ವಿರುದ್ಧ ಪಿಕೆಟಿಂಗ್ ಪ್ರಾರಂಭಿಸಿದರು. ಅದೇ ಕಾಲದಲ್ಲಿ ಸೆರೆ-ಸಿಂದಿ ಅಂಗಡಿಗಳಿಗೆ ಬಹಿಷ್ಕಾರ ಹಾಕಲಾಯಿತು. ಜೋಶಿಯವರು ಹಾಗೂ ಜೊತೆಗಾರರು ಸಿಂದಿ ಅಂಗಡಿಗಳ ಎದುರಿಗೆ ಪಿಕೆಟಿಂಗ ಚಾಲೂ ಮಾಡಿದರು. ಅಷ್ಟೇ ಅಲ್ಲದೆ, ಶಿಂದಿಯ ಉತ್ಪಾದನೆಯನ್ನೇ ನಿಲ್ಲಿಸುವ ಉದ್ದೇಶದಿಂದ ಸಿಂದಿ ಮರಗಳನ್ನು ಕಡಿದು ಹಾಕತೊಡಗಿದರು. ಧಾರವಾಡದ ಜಕ್ಕಣಿ ಬಾವಿಯ ಬಳಿಯಲ್ಲಿ ನಡೆದ ಪಿಕೆಟಿಂಗ ಸಮಯದಲ್ಲಿ ಜರುಗಿದ ಪೋಲೀಸ್ ಗೋಳೀಬಾರಿನಲ್ಲಿ ಮಲಿಕಸಾಬ ಎನ್ನುವ ಹುಡುಗನ ಬಲಿದಾನವಾಯಿತು.


೧೯೩೧ರಲ್ಲಿ, ಶ್ರೀ ಕರಮರಕರರು ಅಂಕೋಲಾ ತಾಲೂಕಿನಲ್ಲಿ ಕರನಿರಾಕರಣೆ ಚಳುವಳಿಯನ್ನು ಸಂಘಟಿಸಿದರು. ಜೋಶಿಯವರು ಅಲ್ಲಿ ಅವರ ಸಹಾಯಕರಾಗಿ ಕೆಲಸ ಮಾಡಿದರು. ಅಂಕೋಲಾ ತಾಲೂಕಿನ ಈ ಕರನಿರಾಕರಣ ಚಳುವಳಿಯನ್ನು ಸರದಾರ ವಲ್ಲಭಭಾಯಿ ಪಟೇಲರು ಬಾರ್ಡೋಲಿಯಲ್ಲಿ ಸಂಘಟಿಸಿದ ಚಳುವಳಿಗೆ ಹೋಲಿಸಲಾಗುತ್ತದೆ. ಅಂಕೋಲಾ ತಾಲೂಕಿನ ಭೂಮಾಲೀಕರು ಹಾಗೂ ಗೇಣಿದಾರರು ಒಟ್ಟಾಗಿಯೇ ಈ ಚಳುವಳಿಯಲ್ಲಿ ಭಾಗವಹಿಸಿದರು. ಪೋಲೀಸರಿಂದ ಕ್ರೂರ ಅತ್ಯಾಚಾರಗಳು ಜರುಗಿದವು. ಆದರೆ ಅಂಕೋಲೆಯ ಜನತೆ ಎಲ್ಲವನ್ನೂ ಸಹಿಸಿಕೊಂಡು, ಕೆಚ್ಚಿನಿಂದ ಬ್ರಿಟಿಶರ ವಿರುದ್ಧ ಹೋರಾಡಿತು.

ಧಾರವಾಡದಿಂದ ದ.ಪ.ಕರಮರಕರ, ಭಾಲಚಂದ್ರ ಘಾಣೇಕರ, ಕೆ.ಜಿ.ಜೋಶಿಯವರು ಕಾರ್ಯಕರ್ತರಾಗಿ ಬಂದಿದ್ದರು. ಇವರೊಡನೆ ಸೂರ್ವೆಯ ಬೊಮ್ಮಣ್ಣ ನಾಯಕರು, ಕಣಗಿಲದ ಬೊಮ್ಮಾಯ ತಿಮ್ಮಣ್ಣ ನಾಯಕರು, ಹಿಚಕಡದ ಹಮ್ಮಣ್ಣ ನಾಯಕರು ಮತ್ತು ಬೀರಣ್ಣ ನಾಯಕರು ಕೈಗೂಡಿಸಿದ್ದರು. ಕೊನೆಗೊಮ್ಮೆ ಜೋಶಿಯವರ ಹಾಗೂ ಶ್ರೀ ಕರಮರಕರರ ಬಂಧನವಾಯಿತು. ಜೋಶಿಯವರಿಗೆ ೧೧ ತಿಂಗಳ ಸಶ್ರಮ ಶಿಕ್ಷೆಯಾಯಿತು. ಅಹ್ಮದನಗರದ ವಿಸಾಪುರ ಜೇಲಿನಲ್ಲಿ ಇವರನ್ನು ಇಡಲಾಯಿತು.

ವಿಸಾಪುರದಿಂದ ಬಂದ ಬಳಿಕ ಜೋಶಿಯವರು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮತ್ತೆ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೩೪ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೩೮ರಲ್ಲಿ ಕರ್ನಾಟಕ ಕಾ^ಲೇಜಿನಿಂದ ಬಿ.ಏ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಕಾಂದೀವಲಿಯ ಶಾರೀರಕ ಶಿಕ್ಷಣ ಕಾ^ಲೇಜಿನಲ್ಲಿ ಒಂದು ವರ್ಷ ಕಲಿತು, ೧೯೩೯ರಲ್ಲಿ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಾರೀರಕ ಶಿಕ್ಷಕರೆಂದು ಕೆಲಸ ಮಾಡಹತ್ತಿದರು.

೧೯೪೨ರಲ್ಲಿ ಗಾಂಧೀಜಿಯವರ “Quit India” ಘೋಷಣೆ ಹೊರಬಿದ್ದಿತು. ಜೋಶಿಯವರು ಮತ್ತೇ ಅಂಕೋಲೆಗೆ ಮರಳಿದರು.
ಅಲ್ಲಿ ಶ್ರೀ ದಯಾನಂದ ಪ್ರಭು ಹಾಗೂ ಬೀರಣ್ಣ ನಾಯಕರ ಜೊತೆಗೆ ಹೋರಾಟದ ರೂಪು ರೇಷೆಗಳು ಸಿದ್ಧವಾದವು. ಬ್ರಿಟಿಶ ಆಡಳಿತದ ಸಂಪರ್ಕಜಾಲವನ್ನು ಕಡಿದು ಹಾಕುವ ಉದ್ದೇಶದಿಂದ ತಂತಿ ಸಂಪರ್ಕವನ್ನು ನಾಶಪಡಿಸಲಾಯಿತು. ಸಣ್ಣ ಪುಟ್ಟ ರಸ್ತೆ ಸೇತುವೆಗಳು ವಿಧ್ವಸ್ತವಾದವು.

ಇದಾದ ಬಳಿಕ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿದ್ಧಪಡಿಸಲಾಯಿತು :
ಉತ್ತರ ಕನ್ನಡ ಜಿಲ್ಲೆಯ ಕಾಡಿನ ಸಂಪತ್ತೆಲ್ಲವನ್ನೂ ಬ್ರಿಟಿಶರು ಕೊಳ್ಳೆ ಹೊಡೆಯುತ್ತಿದ್ದರು. ಇಲ್ಲಿಯ ತೇಗಿನ ಮರದ ಹಾಗೂ ಇತರ ಮರಗಳ ಮರಮಟ್ಟುಗಳನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಪರದೇಶಗಳಿಗೂ ಸಹ ಸಾಗಿಸಿ ಮಾರಲಾಗುತ್ತಿತ್ತು. ಮರಗಳನ್ನು ಕಡಿಯುವ ಗುತ್ತಿಗೆದಾರರು ಈ ಮರಗಳನ್ನು ಕಡಿದು, ಜಂಗಲ್‍‍ಗಳ ಮೂಲಕ ಬಂದರುಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಅವುಗಳನ್ನು ಹಡಗುಗಳ ಹಿಂಬದಿಗೆ ಕಟ್ಟಿದರೆ, ಅವು ಅನಾಯಾಸವಾಗಿ ಪರದೇಶ ಪ್ರಯಾಣ ಮಾಡುತ್ತಿದ್ದವು. ಇಂಗ್ಲಂಡಿನಲ್ಲಿರುವ ಬಕಿಂಗ್‍ಹ್ಯಾಮ ಅರಮನೆಯ ಕಿಟಕಿ, ಬಾಗಿಲು ಹಾಗೂ ಇತರ ಕಟ್ಟಿಗೆಯ ಉತ್ಪಾದನೆಗಳು ಈ ರೀತಿ ಪುಕ್ಕಟೆ ಪ್ರಯಾಣ ಮಾಡಿದ “ದಾಂಡೇಲಿ ತೇಗಿನ ಮರ”ದಿಂದಾಗಿವೆ. (ದಾಂಡೇಲಿ ತೇಗು ಉತ್ಕೃಷ್ಟತೆಗಾಗಿ ಜಗತ್ಪ್ರಸಿದ್ಧವಾದ ತೇಗು.)

ಜೋಶಿಯವರು, ಕಣಗಿಲ ಹಮ್ಮಣ್ಣ ನಾಯಕ, ಹಮ್ಮಣ್ಣ ಬೊಮ್ಮ ನಾಯಕ, ಸಗಡಗೇರಿಯ ವೆಂಕಟರಮಣ ನಾಯಕ, ಬೀರಣ್ಣ ನಾಯಕ ಹಾಗೂ ದಯಾನಂದ ಪ್ರಭುಗಳು ಇವರೆಲ್ಲ ಸೇರಿ “ಬ್ರಿಟಿಶರಿಗೆ ತೇಗಿನ ಉಡುಗೊರೆ” ಕೊಡಲು ನಿಶ್ಚಯಿಸಿ ಕೂರ್ವೆಯಲ್ಲಿ ಸೇರಿದರು. ಮರಮಟ್ಟು ಸಾಗಿಸುತ್ತಿರುವ ‘ಜಂಗಲ್’ ಹಾಗೂ ೪೦ ಜನ ಪೋಲಿಸರನ್ನು ಸಾಗಿಸುತ್ತಿದ್ದ ‘ಜಂಗಲ್’ ಇವರಿದ್ದಲ್ಲಿ ಬಂದ ತಕ್ಷಣ ಇವರೆಲ್ಲ ಪೋಲೀಸರ ಮೇಲೆ ಮುಗಿಬಿದ್ದು ಅವರನ್ನು ಕಟ್ಟಿ ಹಾಕಿ ನಿ:ಶಸ್ತ್ರಗೊಳಿಸಿದರು. ಆ ಬಳಿಕ ಕಟ್ಟಿಗೆಯ ಹೊರೆಗಳನ್ನು ಡೋಣಿಗಳಲ್ಲಿ ತುಂಬಿ, ಚಿಮಣಿ ಎಣ್ಣೆಯನ್ನು ಸುರುವಿ ಬೆಂಕಿ ಹಚ್ಚಿ ಹೊಳೆಯಲ್ಲಿ ದೂಡಲಾಯಿತು.
ಸುಮಾರು ೨೦ ಕಿಲೊಮೀಟರುಗಳಷ್ಟು ದೂರದವರೆಗೆ ಅಂದರೆ ಕಡಲು ಸೇರುವವರೆಗೂ ಧಗಧಗನೆ ಉರಿಯುವ ಆ ಮರಮಟ್ಟು ಬ್ರಿಟಿಶರಿಗೆ ಒಂದು ‘ಅಗ್ನಿಸಂದೇಶ’ವನ್ನು ನೀಡಿದವು: “ Quit India!
ಅದರಂತೆ ಅದನ್ನು ನೋಡುತ್ತಿದ್ದ ಭಾರತೀಯ ತರುಣರಲ್ಲೂ ಅವು ಒಂದು ಕಿಚ್ಚನ್ನು ಹೊತ್ತಿಸುತ್ತಿದ್ದವು: “ಮಾಡು ಇಲ್ಲವೆ ಮಡಿ!

ಈ ಘಟನೆಯಿಂದ ಅಂಕೋಲೆಗೆ ಹೋಗುವ ರಹದಾರಿ ಬಂದಾಯಿತು. ಕಾರ್ಯಕರ್ತರೆಲ್ಲರೂ ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಂಡರು. ಜೋಶಿಯವರು ಗೋಕರ್ಣಕ್ಕೆ ಹೋದರು. ಮರುದಿನ ಜಿಲ್ಲಾ ಪೋಲೀಸ ಅಧಿಕಾರಿ ನಾನಾವಟಿಯವರಿಂದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಚಾರ ಸತ್ರ ಪ್ರಾರಂಭವಾಯಿತು. ೩೯ ತರುಣರನ್ನು ಬಂಧಿಸಲಾಯಿತು. ರಾಮಚಂದ್ರ ನಾಯಕ ಸಗಡಗೇರಿ, ಮಂಜುಗೌಡ, ಗಣಪತಿ ರಾಮಕೃಷ್ಣ ನಾಯಕ, ಹಮ್ಮಣ್ಣ ಹಿಚಕಡ ಇವರನ್ನೆಲ್ಲ ಬಂಧಿಸಿ ಥಳಿಸಲಾಯಿತು. ರಾಮಾ ಬೀರಣ್ಣ ನಾಯಕರನ್ನು ಕೆಳಗೆ ಕೆಡವಿ ತುಳಿದಿದ್ದರಿಂದ ಅವರ ಹಲ್ಲುಗಳು ಮುರಿದು ಹೋದವು. ಆದರೆ ‘ದೋಶಿ’ (= ಜೋಶಿ)ಯವರ ಮಾಹಿತಿಯನ್ನು ಯಾರೂ ಬಿಟ್ಟು ಕೊಡಲಿಲ್ಲ.

‘ಅಗ್ನಿಸಂದೇಶ’ ನಡೆದಾಗ, ಜೋಶಿಯವರು ತಲೆಗೆ ಕಟ್ಟಿಕೊಂಡ ಪಂಜೆ ಉಚ್ಚಿ ಕೆಳಗೆ ಬಿದ್ದಿತ್ತು. ಜೋಶಿಯವರ ತಲೆಕೂದಲು ಅಕಾಲದಲ್ಲೇ ಬೆಳ್ಳಗಾಗಿದ್ದವು. ಅಲ್ಲದೆ, ಆರಡಿ ಎತ್ತರದ ದೇಹ. ಇದರಿಂದಾಗಿ, ಆ ಸಮಯದಲ್ಲಿಯೇ ಪೋಲೀಸನೊಬ್ಬನು ಜೋಶಿಯವರನ್ನು ಗುರುತಿಸಿದ್ದನು. ‘ಬದಾಮಿ’ ಎನ್ನುವ ಈ ಪೋಲೀಸನು ಜೋಶಿಯವರ ಜೊತೆಗೆ ವಿಸಾಪುರ ಜೈಲಿನಲ್ಲಿ ರಾಜಕೀಯ ಕೈದಿಯಾಗಿದ್ದನು. ಆ ಬಳಿಕ ಪೋಲೀಸ ಕೆಲಸಕ್ಕೆ ಭರ್ತಿಯಾಗಿದ್ದನು! ಜೋಶಿಯವರು ಗೋಕರ್ಣದಿಂದ ಮುಂಡಗೋಡಕ್ಕೆ ಯಾತ್ರಿಕನ ವೇಷದಲ್ಲಿ ತೆರಳುತ್ತಿದ್ದಾಗ, ಈ ಪೋಲೀಸನು ವೇಷ ಮರೆಸಿಕೊಂಡು ಅದೇ ಬಸ್ಸಿನಲ್ಲಿ ಬರುತ್ತಿದ್ದನು. ಮುಂಡಗೋಡಿನಲ್ಲಿ ಇವರನ್ನು ಕೆಳಗೆ ಇಳಿಸಿ ಬಂಧಿಸಲಾಯಿತು.

ಕಾರವಾರದಲ್ಲಿ ಎಲ್ಲ ೩೯ ಕೈದಿಗಳ ವಿಚಾರಣೆ ನಡೆಯಿತು. ಎಲ್ಲಾ ಕೈದಿಗಳು ತಾವು ಬ್ರಿಟಿಶ್ ಸತ್ತೆಯನ್ನು ಮಾನ್ಯ ಮಾಡುವದಿಲ್ಲ ಎಂದು ಘೋಷಿಸಿದರು. ಜೋಶಿಯವರಿಗೆ ೫+೫ ವರ್ಷಗಳ ಸಶ್ರಮ ಶಿಕ್ಷೆ ಹಾಗೂ ೧೦೦ ರೂ. ದಂಡ, ತಪ್ಪಿದರೆ ಮತ್ತೆ ೧ ವರ್ಷದ ಶಿಕ್ಷೆಯನ್ನು ನೀಡಲಾಯಿತು.
ಇವರನ್ನೆಲ್ಲ ಮೊದಲು ಹಿಂಡಲಗಿ ಜೇಲಿನಲ್ಲಿ ಒಂದೂವರೆ ವರ್ಷ ಇಡಲಾಯಿತು. ಬಳಿಕ ಯರವಡಾ ಜೇಲಿಗೆ ಒಯ್ಯಲಾಯಿತು. ಅಲ್ಲಿಂದ ನಾಸಿಕ ಜೈಲಿಗೆ ವರ್ಗಾವಣೆ.

೧೯೪೭ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಜೋಶಿಯವರ ಬಿಡುಗಡೆಯಾಯಿತು.
ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿಯಹತ್ತಿದರು.
ದ.ಪ.ಕರಮರಕರರು ಆಗ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು. ಜೋಶಿಯವರನ್ನು ದಿಲ್ಲಿಗೆ ಕರೆಯಿಸಿಕೊಂಡು ತಮ್ಮ ಆಪ್ತಸಹಾಯಕರನ್ನಾಗಿ ಮಾಡಿಕೊಂಡರು. ಆದರೆ, ಡಾ^. ಕಬ್ಬೂರರ ಒತ್ತಾಯದ ಮೇರೆಗೆ ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿಗೆ ಮರಳಿದರು. ೧೯೫೯ರಲ್ಲಿ ಜೋಶಿಯವರು ಮುಖ್ಯಾಧ್ಯಾಪಕರಾಗಿ ನಿಯುಕ್ತರಾದರು. ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಶಾರೀರಕ ಹಾಗೂ ನೈತಿಕ ಹೆಗ್ಗಳಿಕೆಯನ್ನು ತರಲು ಜೋಶಿ ಮಾಸ್ತರರು ಅಕ್ಷರಶ: ಹಗಲಿರುಳು ದುಡಿದರು.

ಕೆ.ಇ.ಬೋರ್ಡ ಸಂಸ್ಥೆಯ ಮೂರು ಶಾಲೆಗಳಾದ ಕರ್ನಾಟಕ ಹಾಯ್‍ಸ್ಕೂಲ, ವಿದ್ಯಾರಣ್ಯ ಹಾಯ್‍ಸ್ಕೂಲ ಹಾಗೂ ಕೆ.ಇ.ಬೋರ್ಡ ಹಾಯ್‍ಸ್ಕೂಲ ಇವು ಒಂದು ಘೋಷವಾಕ್ಯವನ್ನು ಹೊಂದಿವೆ:
ತೇಜಸ್ವಿನಾವಧೀತಮಸ್ತು.”

ಈ ವಾಕ್ಯದ ಪೂರ್ಣಪಾಠ ಹೀಗಿದೆ:
“ ಓಂ ಸಹನಾವವತು, ಸಹನೌ ಭುನಕ್ತು, ಸಹವೀರ್ಯಮ್ ಕರವಾವ ಹೈ
ತೇಜಸ್ವಿನಾವಧೀತಮಸ್ತು, ಮಾ ವಿದ್ವಿಷಾವಹೈ, ಓಂ ಶಾಂತಿ:, ಶಾಂತಿ:, ಶಾಂತಿ:”

ಉಪನಿಷತ್ತಿನ ಈ ವಾಕ್ಯವನ್ನು ಗುರುವು ತನ್ನ ಶಿಷ್ಯನಿಗೆ ಹೇಳುತ್ತಿದ್ದಾನೆ:
“ನಾವಿಬ್ಬರೂ ಕೂಡಿಯೇ ಕಲಿಯೋಣ,
ನಾವಿಬ್ಬರೂ ಕೂಡಿಯೇ ಸೇವಿಸೋಣ,
ನಾವಿಬ್ಬರೂ ಕೂಡಿಯೇ ಶಕ್ತಿವಂತರಾಗೋಣ,
ನಾವಿಬ್ಬರೂ ಕೂಡಿಯೇ ತೇಜಸ್ವಿಗಳಾಗೋಣ,
ನಾವು ಪರಸ್ಪರರನ್ನು ದ್ವೇಷಿಸುವದು ಬೇಡ,
ನಮ್ಮಿಬ್ಬರ ಮನಸ್ಸು ಶಾಂತವಾಗಿರಲಿ!”

ಈ ಘೋಷವಾಕ್ಯವೇ ಜೋಶಿ ಮಾಸ್ತರರ ಬಾಳಿನ ಧ್ಯೇಯವಾಕ್ಯವಾಗಿತ್ತು. ಇದರಂತೆಯೇ ಬಾಳಿದ ಅವರ ಮುಖದಲ್ಲಿ ಯಾವಾಗಲೂ ಶಿಸ್ತು, ಮಮತೆ ಹಾಗೂ ತೇಜಸ್ಸು ಎದ್ದು ಕಾಣುತ್ತಿದ್ದವು.

ಜೋಶಿಯವರು ಸುಮಾರು ೯೦ ವರ್ಷಗಳವರೆಗೆ ಜೀವಿಸಿದರು. ವೃದ್ಧಾಪ್ಯ ಬಂದಂತೆ ಅವರ ಸ್ಮರಣಶಕ್ತಿ ಕುಂದಲಾರಂಭಿಸಿತು. ತಮ್ಮ ಪ್ರೀತಿಯ ವಿದ್ಯಾರ್ಥಿಗಳ ಗುರುತೂ ಅವರಿಗೆ ಆಗುತ್ತಿರಲಿಲ್ಲ. ಅವರ ಆರ್ಥಿಕ ಚೈತನ್ಯ ಮೊದಲಿನಿಂದಲೂ ಕಡಿಮೆಯೇ ಇತ್ತು. ಸ್ವಾತಂತ್ರ್ಯದ ನಂತರ ಕೆಲವು ಹೋರಾಟಗಾರರು ಸರಕಾರದ ಸವಲತ್ತುಗಳನ್ನು ಪಡೆದರು. ಕೆಲವರು ಗಾಂಧಿ ಟೋಪಿಯನ್ನು ಭಾರತಕ್ಕೇ ತೊಡಿಸಿದರು. ಜೋಶಿಯವರು ಮಾತ್ರ ಶಿಕ್ಷಣವೃತ್ತಿಗೇ ತಮ್ಮನ್ನು ಅರ್ಪಿಸಿಕೊಂಡರು. ನಿವೃತ್ತಿಯ ನಂತರವೂ ಅವರು ಅಧ್ಯಾಪನ ಮಾಡುತ್ತಲೇ ಇದ್ದರು.
“ನಿವೃತ್ತನಾದ ಮೇಲೆ, ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗದಿದ್ದರೆ, ನಾನು ಕರ್ನಾಟಕ ಹಾಯ್‍ಸ್ಕೂಲಿನ ಅಂಗಳದ ಕಸ ಗುಡಿಸುತ್ತ ಬದುಕು ಸವೆಸುತ್ತೇನೆ” ಎಂದು ಅವರು ಒಮ್ಮೆ ಹೇಳಿದ್ದರು.

ನಾನು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಎರಡು ವರ್ಷಗಳ ಮಟ್ಟಿಗೆ ವಿದ್ಯಾರ್ಥಿಯಾಗಿದ್ದಾಗ, ಜೋಶಿ ಮಾಸ್ತರರು ನಮ್ಮ ಮುಖ್ಯಾಧ್ಯಾಪಕರಾಗಿದ್ದರು.
..................................................................................
[ಟಿಪ್ಪಣಿ:
ಮಾಧ್ಯಮಿಕ ಶಾಲೆಯಲ್ಲಿ ನಾವು ವಿದ್ಯಾರ್ಥಿಗಳಾಗಿದ್ದಾಗ ‘ಬೋಸ್ಟನ್ ಟೀ ಪಾರ್ಟಿ’ಯ ಬಗೆಗೆ ನಮಗೆ ರೋಮಾಂಚಕವಾಗಿ ಕಲಿಸಲಾಗುತ್ತಿತ್ತು. ಬ್ರಿಟನ್ ವಿರುದ್ಧ ಹೋರಾಡಲು ಅಮೆರಿಕನ್ ಜನತೆಗೆ ಹೇಗೆ ಈ ಘಟನೆ ಪ್ರೇರಕವಾಯಿತು ಎನ್ನುವದನ್ನು ಹೇಳಿಕೊಡಲಾಗುತ್ತಿತ್ತು.
ಬ್ರಿಟನ್ನಿನಿಂದ ಬಂದ ಚಹ ತುಂಬಿದ ಹಡಗುಗಳಲ್ಲಿಯ ಚಹದ ಪೆಟ್ಟಿಗೆಗಳನ್ನು ಬಂಡುಕೋರ ಅಮೆರಿಕನ್ ಯುವಕರು ಸಮುದ್ರದಲ್ಲಿ ಬಿಸಾಕಿದ ಕತೆಯಿದು.
ಈ ಘಟನೆಗಿಂತ ನೂರು ಪಟ್ಟು ರೋಮಾಂಚಕವಾದ ‘ಅಗ್ನಿಸಂದೇಶ’ಕ್ಕೆ ನಮ್ಮ ಇತಿಹಾಸದಲ್ಲಿ ಸ್ಥಾನವಿಲ್ಲ ಎನ್ನುವದು ವಿಚಿತ್ರ ಆದರೂ ಸತ್ಯ!]

49 comments:

ತೇಜಸ್ವಿನಿ ಹೆಗಡೆ said...

ಕಾಕಾ,

ಓದುತ್ತಿದ್ದಂತೇ ಯಾವುದೋ ಒಂದು ರೋಚಕ, ಕುತೂಹಲಕರ ಸಿನೆಮಾವನ್ನೇ ಕಂಡಂತಾಯಿತು! ಅಬ್ಬಾ ೮೦ ಕಿ.ಮೋ ವರೆಗೂ ಹೊತ್ತಿದ ಅಗ್ನಿಸಂದೇಶವನ್ನು ಕಲ್ಪಿಸಿಕೊಳ್ಳಲೂ ಆಗದು! ಜೋಶಿಯವರ ಸಾಹಸ, ತ್ಯಾಗ, ಧೈರ್ಯ, ದೇಶಕ್ಕಾಗಿ ಹೋರಾಡುವ ಮನೋಭಾವವನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು. ಅಂತಹ ಮಹಾನುಭಾವರು ಮುಖ್ಯೋಪಾಧ್ಯಾಯರಾಗಿದ್ದಾಗ ನೀವು ಆ ಶಾಲೆಯಲ್ಲಿ ಕಲಿಯುತ್ತಿದ್ದಿರೆಂದು ಕೇಳಿ ತುಂಬಾ ಸಂತೋಷವಾಯಿತು. ನಿಜಕ್ಕೂ ಇದೊಂದು ಹೆಮ್ಮೆಯ ವಿಷಯವಲ್ಲವೇ? ನನಗೆ ಇವರ ಹೆಸರು ಕೇಳಿಯೇ ಗೊತ್ತಿರಲಿಲ್ಲ. ಪರಿಚಯಿಸಿದ್ದಕ್ಕೆ ಮತ್ತೊಮ್ಮೆ ವಂದನೆಗಳು.
ನಮಗೆ ಸದಾ ವಿದೇಶಿವ್ಯಾಮೋಹದ ಹುಚ್ಚು. ಹಾಗಾಗಿಯೇ "ಬೋಸ್ಟನ್ ಟೀ ಪಾರ್ಟಿ" "ಅಗ್ನಿಸಂದೇಶದ" ಮುಂದೆ ದೊಡ್ಡದಾಯಿತು.. ಮೆರೆಯಿತು!!:(

PARAANJAPE K.N. said...

ಸುನಾಥ್ ಜೀ,
ಇತಿಹಾಸ ಗರ್ಭದಲ್ಲಿ ಅಡಗಿರುವ ಇ೦ತಹ ಅದೆಷ್ಟೋ ವ್ಯಕ್ತಿಗಳಿದ್ದಾರೆ. ಅವರನ್ನು ಗುರುತಿಸುವ ಮತ್ತು ಅವರ ಸಾಧನೆ ಯನ್ನು ದಾಖಲಿಸುವ ಕೆಲಸ ಆಗುತ್ತಿಲ್ಲ. ಇ೦ದಿನ ಪೀಳಿಗೆಗೆ ರೋಲ್ ಮಾಡೆಲ್ ಆಗಬಹುದಾದ ಇ೦ತಹ ವ್ಯಕ್ತಿಗಳನ್ನು ಉಪೇಕ್ಷಿಸಿ, ನಮ್ಮ ಪಠ್ಯಪುಸ್ತಕಗಳಲ್ಲಿ, ಇತಿಹಾಸ ಗ್ರ೦ಥಗಳಲ್ಲಿ, ಅವವೇ ವ್ಯಕ್ತಿಗಳ (ಗಾ೦ಧಿ, ನೆಹರು) ಹೆಸರು ವಿಜ್ರ೦ಭಿಸುತ್ತದೆ. ಅವರಷ್ಟೇ ಅಥವಾ ಅವರಿಗಿ೦ತ ಹೆಚ್ಚು ರಾಷ್ಟ್ರಪ್ರೇಮವಿದ್ದ ಅನೇಕ ಮಹನೀಯರನ್ನು ನಾವು ಮರೆಯುತ್ತಿದ್ದೇವೆ ಅನ್ಸುತ್ತೆ. ನಿಮಗೂ ಗೊತ್ತಿರಬಹುದು - ಕಾರ್ಕಳ ಸಮೀಪ ಮಾಳ ಎ೦ಬ ಹಳ್ಳಿಯಲ್ಲಿದ್ದ ಪ೦ಡಿತಾ ರಮಾಬಾಯಿ ಎ೦ಬವರೊಬ್ಬರಿದ್ದರು. ಅವರು ಮಹಿಳಾ ಸಬಲೀಕರಣದ ಬಗ್ಗೆ ಒ೦ದು ಶತಮಾನದ ಹಿ೦ದೆಯೇ ಹೋರಾಡಿದ ಮಹಿಳೆ. ಅವರ ಹೆಸರಲ್ಲಿ ಭಾರತ ಸರಕಾರ ಅ೦ಚೆಚೀಟಿಯನ್ನೂ ಬಿಡುಗಡೆ ಮಾಡಿದೆ. ಆದರೆ ಇವತ್ತಿನ ಪೀಳಿಗೆಗೆ ಅವರ ಬಗ್ಗೆ ಏನೇನು ಗೊತ್ತಿಲ್ಲ. ಅವರ ಬಗ್ಗೆ ಒ೦ದು ಲೇಖನ ಬರೆಯಬೇಕೆ೦ದಿದ್ದೇನೆ. ಅದಕ್ಕೆ ನಿಮ್ಮ ಈ ಬರಹ ಪ್ರೇರಣೆಯಾಯಿತು.

ಬಾನಾಡಿ said...

ಅದ್ಭುತ ಲೇಖನ. ಎರಡು ಮಾತಿಲ್ಲ.

sunaath said...

ತೇಜಸ್ವಿನಿ,
ನಾನು ಅಲ್ಲಿ ಕಲಿಯುತ್ತಿದ್ದಾಗ ಅವರನ್ನು ಒಬ್ಬ ವಿದ್ಯಾರ್ಥಿವತ್ಸಲ ಅಧ್ಯಾಪಕರನ್ನಾಗಿ ಮಾತ್ರ ತಿಳಿದಿದ್ದೆ. ಅವರ ದೇಶಪ್ರೇಮದ ಮುಖವನ್ನು ನಾನು ಮೂರು ದಶಕಗಳ ನಂತರವೇ ಅರಿತುಕೊಂಡೆ.

sunaath said...

ಪರಾಂಜಪೆಯವರೆ,
ಪಂಡಿತ ರಮಾಬಾಯಿಯವರ ಬಗೆಗೆ ಕೇಳಿದ್ದೇನೆ. ದಯವಿಟ್ಟು ಅವರ ಬಗೆಗೆ ಬರೆದು ನನ್ನ ಕುತೂಹಲವನ್ನು ತಣಿಸಿರಿ.

sunaath said...

ಬಾನಾಡಿ,
ಅದ್ಭುತ ವ್ಯಕ್ತಿಗಳ ಬಗೆಗೆ ಬರೆದಾಗ ಸ್ವಲ್ಪವೂ ಸಹ ಅದ್ಭುತವೇ
ಆಗುವದಲ್ಲವೆ?

Anonymous said...

ಸುನಾಥರಿಗೆ ನಮಸ್ಕಾರ,
ಸಲ್ಲಾಪದಲ್ಲಿ ನನ್ನ ಮೊದಲ ಪ್ರತಿಕ್ರಿಯೆ.. ಮುಂಚೆಯೂ ಬಂದಿದ್ದೇನೆ ಇಲ್ಲಿ, ಆದರೆ ಪ್ರತಿಕ್ರಿಯೆ ಹಾಕಿರಲಿಲ್ಲ. ಅಗ್ನಿಸಂದೇಶವನ್ನು ಓದಿದ ಮೇಲೆ ಪ್ರತಿಕ್ರಿಯೆ ಹಾಕಲೇಬೇಕು ಅನಿಸಿದೆ :).

ಇಂಥ ಮಹನೀಯರ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು. ಮತ್ತೊಮ್ಮೆ ಭಾರತ-ಭಾರತಿ ಪುಸ್ತಕದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕತೆ ಓದಿದಂತಾಯಿತು!

-
ಅನಿಲ

Ittigecement said...

ಸುನಾಥ ಸರ್..
ಇಂಥಹ ಮಹನೀಯರ ವಿಷಯ ನನಗೆ ಗೊತ್ತೇ ಇರಲಿಲ್ಲ..
ಓದುತ್ತಿದ್ದ ಹಾಗೆ ರೋಮಾಂಚನವಾಯಿತು..
"ವೀರ ಸಾವರ್ಕರ" ನೆನಪಾದರು..
ಇವರ ತ್ಯಾಗ, ದೇಶಪ್ರೇಮ,
ಸರಳ ಜೀವನ ಆದರ್ಶಪ್ರಾಯವಾಗಿದೆ..

ಇಂಥಹ ಮಹಾನ್ ನಾಯಕರು ನಮ್ಮಲ್ಲಿದ್ದರಲ್ಲ..

ನಮ್ಮ ನಾಡೇ ಧನ್ಯ..

ಆದರೆ ಈಗ...!

ಒಬ್ಬರೂ ಕಾಣುತ್ತಿಲ್ಲವಲ್ಲ...!

ಸರ್..
ಒಬ್ಬ ಧೀಮಂತ ನಾಯಕನ ಪರಿಚಯ ಮಾಡಿ ಕೊಟ್ಟಿದ್ದಕಾಗಿ
ಧನ್ಯವಾದಗಳು..

Anonymous said...

ಸುನಾಥ ಅವರೆ,
ಕೆ.ಇ.ಬೋರ್ಡ ಸಂಸ್ಥೆಯ ಶಾಲೆಗಳು ಹತ್ತನೆಯ ತರಗತಿಯಲ್ಲಿ ರಾಜ್ಯಕ್ಕೆ rank ಗಳನ್ನು ಗಳಿಸಿದ್ದು ಪೇಪರುಗಳಲ್ಲಿ ಒದಿದ್ದೆ.ಆದರೆ ಈ ಸಂಸ್ಥೆಯ ದೇಶಾಭಿಮಾನಿ ಮುಖ ನನಗೆ ತಿಳಿದಿರಲಿಲ್ಲ.

ಜೋಶಿಯವರ ಸಾಹಸಗಾಥೆಯನ್ನು ಓದಿ ರೋಮಾಂಚನವಾಯಿತು. ಪರಾಂಜಪ್ಪೆ ಅವರು ಹೇಳಿದ ಹಾಗೆ ಈಗಗ ನಮ್ಮ ಇತಿಹಾಸವು ಅಕ್ಟೋಬರ ೦೨ ಮತ್ತು ನವ್ಹಂಬರ ೧೪ಕ್ಕೆ ಮಾತ್ರ ಸಿಮಿತವಾಗಿದೆ.

"ನಿವೃತ್ತನಾದ ಮೇಲೂ ಸಹ ನಾನು ಕರ್ನಾಟಕ ಹಾಯ್ಸ್ಕೂಲಿನ ಅಂಗಳದ ಕಸ ಗುಡಿಸುತ್ತ ಬದುಕು ಸಲಿಸುತ್ತೇನೆ” ಎಂದು ಅವರು ಹೇಳಿದ್ದು ಅವರಲ್ಲಿ ಕೇವಲ ದೇಶಾಭಿಮಾನ ಮಾತ್ರವಲ್ಲಾ, ಶಾಲೆಯ ಬಗೆಗೂ ಸಹ ಅತೀವ ಪ್ರೇಮವಿತ್ತು ಎಂದು ಅನಿಸುತ್ತದೆ.
ಇವರಂಥ ಮನೋಭಾವದ ಶಿಕ್ಷಕರು ಸಿಗುವುದು ಇಗ ವಿರಳ. ಶಾಲೆಯಲ್ಲಿ ನಮ್ಮ ಇತಿಹಾಸ ನಮ್ಮ ಜನದ ಪಾಠಗಳು ಕಡಿಮೆಯಾಗಿ, cold war, second world war ಪಾಠಗಳೆ ಜಾಸ್ತಿ ಆಗಿವೆ.
ಹುಡುಗುರರಲ್ಲಿ ಸಹ ನಮ್ಮ ಇತಿಹಾಸದಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ.
ತೇಜಸ್ವಿನಿ ಅವರು ಹೆಳಿದಹಾಗೆ ನಮಗೆ ಸದಾ ವಿದೇಶಿವ್ಯಾಮೋಹದ ಹುಚ್ಚು. ಮಕ್ಕಳಿಗೆ Filmstar ಗಳ ಬಗ್ಗೆ ಇದ್ದಷ್ಟು ಮಾಹಿತಿ , ಸ್ವಾತ್ಯಂತ್ರ ತಂದು ಕೊಟ್ಟ ಜನರ ಬಗ್ಗೆ ಇರುವದಿಲ್ಲ. ಎಷ್ಟು ನೋವನ್ನು ಕೊಡುವ ಸಂಗತಿ.

ಬ್ಲಾಗಿನಲ್ಲಿ ಯಾವಾಗಲು ಉತ್ತಮ ಮಾಹಿತಿಗಳನ್ನು ಕೊಡುತ್ತಿರುವುದಕ್ಕಾಗಿ, ನೀವು ನಮಗೆ ಸುನಾಥ ಮಸ್ತರ್ ಆಗಿರುವಿರಿ. :)
ಜೋಶಿಯವರ ಬಗ್ಗೆ ತಿಳಿಸಿದಕ್ಕಾಗಿ ಧನ್ಯವಾದಗಳು.

ಪರಾಂಜೆಪ್ಪೆಯವರೆ, ಪ೦ಡಿತಾ ರಮಾಬಾಯಿ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೂ ಇದೆ. ನಿಮ್ಮ ಬರಹವನ್ನು ನಿರಿಕ್ಷಿಸುತ್ತಿದ್ದೆನೆ.

- ಕರುಣಾ

ಬಿಸಿಲ ಹನಿ said...

ಸುನಾಥ್ ಸರ್,
ನನ್ನ ಬ್ಲಾಗಿನಲ್ಲಿ ಪ್ರಕಟವಾದ "ಇಲ್ಲಿ ಎಲ್ಲವೂ ಒಬಾಮಯವಾಗುತ್ತಿದೆ" ಲೇಖನಕ್ಕೆ ಪ್ರತಿಕ್ರಿಯೆ ನೀಡುತ್ತಾ ಇವರ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಿರಿ. ಆದರೆ ಇವರು ಇಷ್ಟೊಂದು ಅದ್ಭುತ ವ್ಯಕ್ತಿಯಾಗಿದ್ದರೆಂದು ಹಾಗೂ ಅವರ ಬಗ್ಗೆ ತಿಳಿದೇ ಇಲ್ಲದ ನಾವು ಕನ್ನಡಿಗರು ನಿಜಕ್ಕೂ ಅಜ್ಞಾನಿಗಳು! ಬಿಡಿ, ನಾವು ಕನ್ನಡಿಗರೇ ಈ ತರದ ಜಾಯಮಾನದವರು. ನಮ್ಮ ಪಕ್ಕದವರು ಏನೆನೆಲ್ಲ ಸಾಧಿಸಿರುತ್ತಾರೆ. ಆದರೆ ಅವರನ್ನು ಗುರುತಿಸುವದನ್ನಾಗಲಿ ಅಥವಾ ಅವರ ಬಗ್ಗೆ ತಿಳಿಯುವ ಕುತೂಹಲವನ್ನಾಗಲಿ ನಾವು ಎಂದೂ ತೋರುವದಿಲ್ಲ. ನಾನು ಇದನ್ನು ನನ್ನ ಲೇಖನದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ಕೂಡ. Anyway, thanks for opening our eyes about such a wonderful personality.

Prabhuraj Moogi said...

ನಾನೂ ಧಾರವಾಡದಲ್ಲಿ ಎರಡು ವರ್ಷ ಇದ್ದೆ ಆದರೆ ಜೊಶಿಯವರ ಬಗ್ಗೆ ಎಲ್ಲೂ ಕೇಳಿಲ್ಲ.. ನಾವೆಲ್ಲ ಹಾಗೇನೇ ಹೋರಾಟ ಮಾಡಿದವರನ್ನು ಮರೆತು, ಕೆಲವೇ ಕೆಲವು ಜನರಿಗೆ ಜಾಸ್ತಿ ಪ್ರಾಶಸ್ತ್ಯ ಕೊಡುತ್ತೇವೆ. ಕಿತ್ತೂರಿನ ಸ್ವಾತಂತ್ರ್ಯ ಸಂಗ್ರಾಮವನ್ನು ಇನ್ನೂ ಭಾರತದ ಪ್ರಥಮ ಸ್ವತಂತ್ರ್ಯ ಸಂಗ್ರಾಮವೆಂದು ಒಪ್ಪಿಕೊಳ್ಳದ ನಾವು ಇದಕ್ಕಿಂತ ಇನ್ನೂ ಹೆಚ್ಚಿಗೆ ಏನು ಮಾಡಲು ಸಾಧ್ಯ ಹೇಳಿ. ನಿಮ್ಮ ಲೇಖನ ಓದಿದ ಮೇಲಾದರೂ ಅಲ್ಲಿ ನಡೆದ ಮತ್ತೊಂದು ಹೋರ್‍ಆಟದ ಬಗ್ಗೆ ತಿಳಿಯಿತು.

ಮಲ್ಲಿಕಾರ್ಜುನ.ಡಿ.ಜಿ. said...

ಇಂತಹ ಮಹಾತ್ಮರನ್ನು ಕಂಡ ನೀವೇ ಧನ್ಯರು. "ಅಗ್ನಿಸಂದೇಶ"ವಂತೂ ರೋಮಾಂಚನಗೊಳಿಸಿತು.
ಇತಿಹಾಸದಲ್ಲಿ ಮುಳುಗಿದ್ದ ಅನರ್ಘ್ಯ ರತ್ನಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಸರ್.

ಚಂದ್ರಕಾಂತ ಎಸ್ said...

ಸುನಾಥ್ ಸರ್
ನಿಮ್ಮ ಈ ಬರಹ ಓದುತ್ತಿದ್ದಂತೆಯೇ ಕಣ್ಣಲ್ಲಿ ನೀರು ತುಂಬಿತು.ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಇಂತಹ ನೂರಾರು ಜನರು ಹೋರಾಡಿ ಪ್ರಾಣ ತೆತ್ತಿದ್ದಾರೆ. ಅತ್ಯಂತ ಸರಳ ಜೀವನ ನಡೆಸಿದ್ದಾರೆ.ಆದರೆ ಅವರಾರೂ ನಮಗೆ ಗೊತ್ತಿಲ್ಲ,ಎಂತಹ ನಾಚಿಕೆಗೇಡಿನ ವಿಷಯವಲ್ಲವೇ?
ಅವರ ಶಿಷ್ಯರಾಗಿದ್ದು ನಿಮ್ಮ ಪುಣ್ಯ.
ಉತ್ತಮ ಬರಹಕ್ಕಾಗಿ ಧನ್ಯವಾದಗಳು

sunaath said...

ಅನಿಲ,
ಇಂತಹ ಎಷ್ಟು ಅನರ್ಘ್ಯ ರತ್ನಗಳು ನಮ್ಮ ಕಣ್ಣಿಗೆ ಕಾಣದೆ ಹೋದವೊ?

sunaath said...

ಪ್ರಕಾಶ,
ಜೋಶಿಯವರು ಎಲೆಮರೆಯ ಕಾಯಿಯಂತೆ ಇದ್ದು ಹೋದರು. ಅವರು ಕೀರ್ತಿಯನ್ನಾಗಲಿ, ಧನಕನಕವನ್ನಾಗಲೀ ಬಯಸಲಿಲ್ಲ. ರಾಷ್ಟ್ರಪ್ರೇಮ. ವಿದ್ಯಾರ್ಥಿಗಳ ಏಳ್ಗೆ ಇವೆರಡೇ ಅವರ ಗುರಿಯಾಗಿದ್ದವು.

sunaath said...

ಕರುಣಾ,
ಜೋಶಿಯವರಲ್ಲಿ ಇದ್ದ dedication ಈಗಿನ ಶಿಕ್ಷಕರಲ್ಲಿ
ಕಾಣುತ್ತಿಲ್ಲ ಎನ್ನುವದು ದುರ್ದೈವದ ಸಂಗತಿ.

sunaath said...

ಉದಯ,
ಹಿತ್ತಲಗಿಡ ಮದ್ದಲ್ಲ ಎನ್ನುವಂತೆ, ನಮ್ಮ ಪಕ್ಕದಲ್ಲಿರುವ ಸಾಧಕರನ್ನು ನಾವು ಅಂದರೆ ಕನ್ನಡಿಗರು ಅಲಕ್ಷಿಸುತ್ತಿದ್ದೇವೆ.
We are the losers!

sunaath said...

ಪ್ರಭುರಾಜ,
ನೀವು ಧಾರವಾಡದಲ್ಲಿ ಯಾವಾಗ ಇದ್ದಿರಿ?
ಜೋಶಿಯವರು ಸ್ವಾತಂತ್ರ್ಯಾನಂತರ ತಮ್ಮ ತುತ್ತೂರಿಯನ್ನು ತಾವೇ
ಊದಿಕೊಳ್ಳಲಿಲ್ಲ. ಹೀಗಾಗಿ ಇವರ ರೋಮಾಂಚಕ ಭೂಗತ ಚಟುವಟಿಕೆಗಳ ಬಗೆಗೆ ಧಾರವಾಡದ ಅನೇಕರಿಗೇ ಮಾಹಿತಿ ಇರಲಿಲ್ಲ!

sunaath said...

ಮಲ್ಲಿಕಾರ್ಜುನ,
ಜೋಶಿಯವರ ಶಿಷ್ಯನಾಗಿದ್ದದು ನಿಜವಾಗಿಯೂ ನನ್ನ ಭಾಗ್ಯ.

sunaath said...

ಚಂದ್ರಕಾಂತಾ,
ದೇಶದ ಸ್ವಾತಂತ್ರ್ಯಕ್ಕಾಗಿ ವಿವಿಧ ಸ್ತರಗಳಲ್ಲಿ, ವಿವಿಧ ರೀತಿಯಲ್ಲಿ
ಹೋರಾಡಿದ ಅನೇಕ ಜನರು ನಮ್ಮಲ್ಲಿ ಇದ್ದರು. ಕೆಲವರು ಹಳ್ಳಿಗಳಲ್ಲಿಯೇ ನೆಲಸಿದರು, ಕೆಲವರು ಪಟ್ಟಣವಾಸಿಗಳಾದರು.
ಬದುಕಿದ್ದ ಇಂತಹ ಕೆಲವರು ಈಗ ಎಂಬತ್ತಕ್ಕೂ ಮೇಲ್ಪಟ್ಟ ವಯಸ್ಸಿನವರು!

Prabhuraj Moogi said...

ನಾನು ಪಿಯುಸಿ ಮುಗಿಸಿದ್ದು ಧಾರವಾಡದ ಕೆಸಿಡಿ ಕಾಲೇಜಿನಲ್ಲಿ, ಬರೊಬ್ಬರಿ ಹತ್ತು ವರ್ಷಗಳ ಹಿಂದೆ... ಇಂಥ ಸ್ವಾತಂತ್ರ್ಯ ಹೊರಾಟಗಾರ ಅಲ್ಲಿದ್ದರೂ ಅವರ ಬಗ್ಗೆ ಅಲ್ಲಿ ಯಾರಿಗೂ ಗೊತ್ತಿಲ್ಲ, ಕೊನೆಗೆ ಒಂದು ರಸ್ತೆಗೂ ಅವರ ಹೆಸರಿಟ್ಟು ಅವರ ಬಗ್ಗೆ ಬರೆದು ಶಿಲಾಫಲಕ ನೆಟ್ಟಿದ್ದರೆ ಹೋಗು ಬರುವರಾದರೂ ನೋಡಿರಬಹುದಿತ್ತು(ಇಷ್ಟಕ್ಕೂ ಅವರು ಮಾಡಿದ ಸೇವೆಗೆ ಅದಷ್ಟೇ ಮಾಡಿದರೆ ಸಾಲದು ಅದರೂ.. ಅದದಾರೂ ಅವರ ಹೆಸರು ನೆಪಾಗುವಂತಿಟ್ಟಿರುತ್ತಿತ್ತಲ್ಲ ಅಂತಷ್ಟೇ...) ಇದ್ದರೆ ನಾ ಆಕಡೆಗೆ ಹೋಗಿಲ್ಲ ಅನಿಸತ್ತೆ. ಹೀಗೆ ಹೊರ್‍ಆಟಗಳ ಹೆಕ್ಕಿ ತೆಗೆದು ಬರೆಯುತ್ತಿರಿ ನಮಗೂ ನಮ್ಮ ನೆಲದ ಬಗ್ಗೆ ಹೆಮ್ಮೆಯಾಗುತ್ತದೆ...

Shiv said...

ಸುನಾಥ್ ಸರ್,

ಇತಿಹಾಸ ಒಂಥರ ವಿಚಿತ್ರ.

’Da Vinci Code' ಪುಸ್ತಕದಲ್ಲಿ ಒಂದು ಸಾಲಿದೆ.
"history has been written by the ’winners’ (those societies and belief systems that conquered and survived)".

ಜೋಶಿಯವರ ತರ ಇನ್ನೂ ಅದೆಷ್ಟು ಅನ್ಯರ್ಘ್ಯ ರತ್ನಗಳು ಇತಿಹಾಸದ ರತ್ನಗರ್ಭದಲ್ಲಿ ಅಡಗಿವೆಯೋ ಎನೋ..

ಅಂಥ ಮಹಾನುಭಾವರ ಬಗ್ಗೆ ಬರೆದಿದ್ದಕ್ಕೆ-ಪರಿಚಯಿಸಿದ್ದಕ್ಕೆ ಧನ್ಯವಾದಗಳು.

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

sunaath said...

ಪ್ರಭುರಾಜ,
ಧಾರವಾಡದಲ್ಲಿಯೇ ಇನ್ನೂ ಕೆಲವರು ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಅವರನ್ನು ನಾನು ನೋಡಿರುವೆ.
ಅವರು ಯಾವುದೇ ಪ್ರಚಾರವನ್ನು ಬಯಸದೆ, ತಮ್ಮ ಮಟ್ಟಿಗೆ
ತಾವಾಗಿ ಸಾದಾ ಬದಕನ್ನು ಬದಕುತ್ತಿದ್ದಾರೆ.

sunaath said...

ಶಿವ,
ನೀವು ಹೇಳುವದು ನಿಜ. ಇತಿಹಾಸವು ಗೆದ್ದ ರಾಜನ ಕತೆ ಹೇಳುವದೇ ಹೊರತು, ಮಡಿದ ಕಾಲಾಳುಗಳ ಕತೆಯನ್ನಲ್ಲ.

shivu.k said...

ಸುನಾಥ್ ಸರ್,

ನಿಮ್ಮ ಬರಹ ಹೊಸ ವಿಚಾರವಾದ್ದರಿಂದ ನಾನೇ ನಿದಾನವಾಗಿ ಓದಲು ಲೇಟಾಗಿ ಬಂದೆ....

ನಮ್ಮ ಇತಿಹಾಸದಲ್ಲಿ ಅದೆಷ್ಟೋ ಮಹಾನ್ ವ್ಯಕ್ತಿಗಳು...ನಮಗೆ ತಿಳಿದಿರೋಲ್ಲ....

ಈ ಲೇಖನ ಓದುತ್ತಿದ್ದಂತೆ ಅನೇಕ ಸ್ವಾತಂತ್ರ ಹೋರಾಟಗಾರರು...ನೆನಪಾದರು...

ಆಗ್ನಿ ಸಂದೇಶ ವಂತೂ ಮೈ ಜುಮ್ಮೆಂದಿತು....

ಶ್ರೀ ಕೃಷ್ಣ ಗೋಪಾಳ ಜೋಶಿಯವರ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್..

sunaath said...

ಶಿವು,
ನನ್ನ ಗುರುಗಳ ಬಗೆಗೆ ತಿಳಿದಷ್ಟು ಬರೆದು, ಅವರ ಋಣವನ್ನು ಸ್ವಲ್ಪವಾದರೂ ತೀರಿಸಿದ್ದೇನೆ ಎಂದು ಅನಿಸುತ್ತದೆ.

ಸುಪ್ತದೀಪ್ತಿ suptadeepti said...

ಕಾಕಾ, ಧೀಮಂತ ನಾಯಕರೆಷ್ಟೋ ಮಂದಿ ಆಗಿಹೋದ ದೇಶ ನಮ್ಮದು. ಇತಿಹಾಸ ಪುಟಗಳಲ್ಲಿ ಸೇರಿಹೋದವರು ಕೆಲವೇ ಕೆಲವರು. ದೇಶಕ್ಕೆ ಟೋಪಿ ಹಾಕಿದವರೂ ಹಲವರು. ಇಂಥ ಜಂಗುಳಿಯಿಂದ ರತ್ನವೊಂದನ್ನು ಹೆಕ್ಕಿ ತಂದು ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು.

ಅಗ್ನಿ ಸಂದೇಶದ ವಿವರ ಓದುತ್ತಿದ್ದಂತೆ, ಅದರ ಹಿಂದಿನ ಉದ್ದೇಶ ಅಮೋಘವಾದರೂ ಅಷ್ಟೊಂದು ಒಳ್ಳೆಯ ತೇಗದ ಮರಗಳನ್ನು ಸುಟ್ಟದ್ದು ಯಾಕೋ ಸರಿಕಾಣಲಿಲ್ಲ. ಯಾವುದೋ ಶಾಲೆ, ಯಾರದೋ ಮನೆ, ಮತ್ಯಾವುದೋ ದೇವಳಕ್ಕೆ ಬಳಕೆಯಾಗಬಹುದಾಗಿದ್ದ ನಮ್ಮದೇ ನೆಲದ ಮರಗಳು ಬೂದಿಯಾಗಿ ಹೋಗಿದ್ದು ಯಾವುದೇ ಉಪಯೋಗವೂ ಆಗಿಲ್ಲವಲ್ಲ (ನಿಮ್ಮಂಥ ಕೆಲವಾರು ಜನರ ಮನದಲ್ಲಿ ಉಳಿದಿತ್ತು, ಈಗ ನಮಗೆಲ್ಲ ತಲುಪಿತು; ಅಷ್ಟೇ) ಅನ್ನುವ ವಿಷಾದ ಆವರಿಸಿಕೊಂಡಿತು.

sunaath said...

ಜ್ಯೋತಿ,
ಈ ಮರಮಟ್ಟು ಇಂಗ್ಲಂಡಿಗೆ ಹೋಗುವಂಥಾದ್ದು. ಭಾರತದಲ್ಲಿ
ಅದರ ಉಪಯೋಗವಾಗುವಂತಿರಲಿಲ್ಲ. ಆದುದರಿಂದ ಅದನ್ನು ಸಂದೇಶವಾಹಕವೆಂದು ಬಳಸಿದ್ದರಲ್ಲಿ ಏನೂ ತಪ್ಪಿಲ್ಲ.

ಚಿತ್ರಾ said...

ಕಾಕಾ,
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.ಸ್ವಾತಂತ್ರ್ಯ ಹೋರಾಟ ಎಂದಕೂಡಲೇ ಕೆಲವೇ ಮಹನೀಯರುಗಳ ಹೆಸರು ನೆನಪಾಗುತ್ತವೆ. ಇಂಥ ಅದೆಷ್ಟೋ ರಾಷ್ಟ್ರ ಭಕ್ತರು ಎಲೆಮರೆಯ ಕಾಯಿಯಾಗಿಯೇ ಉಳಿದಿದ್ದಾರೆ. ಇಂಥವರ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ನೀವೇ ಧನ್ಯರು !

sunaath said...

ಚಿತ್ರಾ,
ಅವರ ವಿದ್ಯಾರ್ಥಿಯಾಗಿದ್ದದು ನನ್ನ ಪುಣ್ಯ.

Pavan said...

ಸುನಾಥ್ ಅವರೆ, ಈ ರೋಮಾಂಚನಕಾರಿ ಲೇಖನವನ್ನು ಓದಿದ ಮೇಲೆ ನಾವು ಎಷ್ಟು ಮುಖ್ಯ ಘಟನೆಗಳ ಅರಿವಿಲ್ಲದೆ ಇದ್ದೇವೆ ಅನ್ನಿಸುತ್ತದೆ. ಸ್ವಾತಂತ್ರದ ಮಹತ್ವ ಮತ್ತು ಅದನ್ನು ಪಡೆಯಲು ಮಾಡಿದ ಹೋರಾಟದ ಪ್ರಾಮುಖ್ಯತೆಯನ್ನು ಕಾಯ್ದಿರಸಲು ಈ ರೀತಿಯ ಲೇಖನಗಳು ಅತ್ಯವಶ್ಯಕ. ಈಗಾಗಲೇ ಸ್ವತಂತ್ರ ಹೋರಾಟ ನಮಗೆ ಒಂದು ಅಸಂಬ್ಧ ಘಟನೆ ಅಂದು ಭಾವಿಸಿರುವ ನಮ್ಮ ಪೀಳಿಗೆಗೆ ಈ ಲೇಖನ ಬೆಳಕು ತೋರಿಸುತ್ತದೆ. ನಾವು ಏನೂ ಮಾಡದೆಯೇ ಹೆಸರು ಮಾಡುವ ವ್ಯಕ್ತಿಗಳನ್ನು ನೋಡಿದ್ದೇವೆ. ಆದರೆ ಇಷ್ಟೆಲ್ಲಾ ಕಷ್ಟ ಪಟ್ಟ ವ್ಯಕ್ತಿಗಳು ಹೆಸರು ಆಗದೆ ಇರುವುದು ದುಖಮಯ. ಆದರೆ ಅದು ಅವರ ಉದ್ದೇಶವು ಆಗಿರಲಿಲ್ಲ. Their understated nature itself was their biggest asset and testimony of their achievement. But indeed they are recognized in such articles, and hence on, among it's readers.
Hearty Thanks for this enlightenment.

shivu.k said...

ಸುನಾಥ್ ಸರ್,

ಸ್ಲಂಡಾಗ್ ಮಿಲಿಯನೇರ್ ಸಿನಿಮಾ ನೋಡಿ ನನ್ನ ಕಾಮೆಂಟ್ ಅದೇ ಲೇಖನದಲ್ಲೇ ಹಾಕಿದ್ದೇನೆ...ನೋಡಿ...

sunaath said...

ಪ್ರಿಯ ಪವನ,
ಹಳೆಯ ಪೀಳಿಗೆಯ ಸ್ವಾತಂತ್ರ್ಯಹೋರಾಟಗಾರರು ನವಭಾರತಕ್ಕಾಗಿ ಅಕ್ಷರಶಃ ತಮ್ಮ ಅಸ್ಥಿಭಾರ ಹಾಕಿ ಹೋಗಿದ್ದಾರೆ. ಈ ಅಸ್ಥಿಭಾರದ ಮೇಲೆ ನಾವು ಗೋರಿಯನ್ನು ಕಟ್ಟುತ್ತಿದ್ದೇವೆಯೊ,
ಗೋಪುರವನ್ನು ಕಟ್ಟುತ್ತಿದ್ದೇವೆಯೊ ಗೊತ್ತಿಲ್ಲ!

sunaath said...

ಶಿವು,
ನೀವು ನೀಡಿದ ಉತ್ತಮ ವಿಮರ್ಶೆಗಾಗಿ ಧನ್ಯವಾದಗಳು.
Slumdog millionaireದ ತಾಂತ್ರಿಕ ಮೌಲ್ಯಗಳ ಬಗೆಗೆ
ಚೆನ್ನಾಗಿ ಬರೆದಿರುವಿರಿ.
ರೆಹಮಾನರ ಸಂಗೀತ ಅವರ ಇತರ ಚಿತ್ರಗಳ ಸಂಗೀತಕ್ಕಿಂತ ಹೆಚ್ಚಿನದೇನಲ್ಲ ಹಾಗೂ ನಮ್ಮಲ್ಲಿ ಇದಕ್ಕೂ ಚೆನ್ನಾಗಿ ಸಂಗೀತ ನೀಡಿದವರು ಇದ್ದಾರೆ ಎನ್ನುವ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.
ಚಿತ್ರವನ್ನು ನೋಡಿ ಗುಣಮಟ್ಟದ ವಿಮರ್ಶೆ ನೀಡಿದ್ದಕ್ಕಾಗಿ ಧನ್ಯವಾದಗಳು.

Anonymous said...

'ಅಗ್ನಿ ಸಂದೇಶ'ದಂಥ ಘಟನೆ ನಡೆಸಬೇಕೆಂದರೆ ಅವರೆಲ್ಲ ಎಷ್ಟೊಂದು Plan-work ಮಾಡಿರಬಹುದು...!
ಇತಿಹಾಸದ so called ಕಥೆಗಳ ಮಧ್ಯೆ ಇಂಥ ಅನೇಕ ಹೀರೋಗಳು ಮುಸುಕು ಮುಸುಕಾಗಿದ್ದಾರೆ.
ಸರಿಯಾದ ಉತ್ಖನನವಾಗಬೇಕಷ್ಟೆ..
ಈ ನಿಟ್ಟಿನಲ್ಲಿ ನೀವು ಚೆಂದದ,ಗೌರವಯುತ ಲೇಖನ ಬರೆದಿದ್ದೀರಿ.
ನಾವು ಮಾಡಬಹುದಾದ ಕೆಲಸವೆಂದರೆ ಇಷ್ಟೇ!

-ರಾಘವೇಂದ್ರ ಜೋಶಿ.

VENU VINOD said...

ಸುನಾಥರೇ,
ನಾನು ಕರ್ನಾಟಕ ಇತಿಹಾಸ ಓದಿದ್ದೆ ಅಲ್ಲಿ ಜೋಷಿಯವರ ಬಗ್ಗೆ ಮಾಹಿತಿ ಇರಲಿಲ್ಲ..ನಿಮ್ಮ ಮಾಹಿತಿಯಿಂದ ಖುಷಿಯಾಯ್ತು...ವಿಶ್ವಚರಿತ್ರೆಯಲ್ಲಿ ಬೋಸ್ಟನ್ ಟೀ ಪಾರ್ಟಿ ಓದಿದ್ದ ನೆನಪಿದೆ...ಅದಕ್ಕಿಂತ ಮಿಗಿಲಾದ ಅಗ್ನಿಸಂದೇಶ ನಮ್ಮಲ್ಲೆ ಇದ್ದುದು ಇದುವರೆಗೆ ತಿಳಿಯದ ಕೊರಗು ನನಗೆ:(

sritri said...

ಕಾಕಾ, ಅಗ್ನಿ ಸಂದೇಶದ ಬಗ್ಗೆ ತಿಳಿದೇ ಇರಲಿಲ್ಲ. ಈ ಬಗ್ಗೆ ಮತ್ತಷ್ಟು ತಿಳಿಸುವಂಥಹ ಪುಸ್ತಕಗಳಿವೆಯೇ?

sunaath said...

rj,
ಭೂಗತ ಹೋರಾಟದ ಪ್ರತಿಯೊಂದು ಘಟನೆಯಲ್ಲಿಯೂ ಸಾರ್ವಜನಿಕರ ಅರಿವಿಗೆ ಬಾರದ detailed planning ಮತ್ತು execution ಇರುತ್ತವೆ.
ಅಗ್ನಿಸಂದೇಶವನ್ನು ವ್ಯವಸ್ಥೆಗೊಳಿಸಲು, ಶ್ರೀ ಜೋಶಿಯವರು ಹಾಗೂ ಅವರ ಸಂಗಡಿಗರು ಕಾಡುಮೇಡುಗಳಲ್ಲಿ,ಗದ್ದೆಗಳಲ್ಲಿ ರಾತ್ರಿಯೆಲ್ಲ ಅಲೆದಿದ್ದಾರೆ. ಪ್ರಾಣಾಪಾಯವನ್ನು ಎದುರಿಸಿದ್ದಾರೆ. ಅದನ್ನೆಲ್ಲ ಬರೆದರೆ ಅದೇ ಒಂದು ಕಾದಂಬರಿಯಾದೀತು!

sunaath said...

ವೇಣುವಿನೋದ,
ನಮಗೆ ಅಗ್ನಿಸಂದೇಶದ ಬಗೆಗೆ ಗೊತ್ತಿರದಿದ್ದರೆ, ಅದು ನಮ್ಮ ಇತಿಹಾಸಕಾರರ ತಪ್ಪು.
ಭಾರತದ ಗೊತ್ತಿದ್ದ ಇತಿಹಾಸವನ್ನೇ ಈಗ ತಿರುಚಿ ಬರೆಯುತ್ತಿದ್ದಾಗ,ಇಂತಹ ಘಟನೆಗಳಿಗೆ ಸ್ಥಾನವೆಲ್ಲಿ?

sunaath said...

ತ್ರಿವೇಣಿ,
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗೆಗೆ ಕೆಲವು ಪುಸ್ತಕಗಳು ಹೊರಬಂದವು. ಅಗ್ನಿಸಂದೇಶದ ಬಗೆಗೆ ಅಲ್ಲಿ ಉಲ್ಲೇಖವಿದೆ. ಅಲ್ಲದೆ, ಈ ಘಟನೆಯ ನಂತರ ಅಂಕೋಲಾದ ಜನತೆ, ವಿಶೇಷತಃ ನಾಡವ ಸಮಾಜದವರು ಪಟ್ಟ
ಕಷ್ಟಗಳಂತೂ ಅತೀವ. ಅನೇಕ ನಾಡವರನ್ನು, ಗಂಡು ಹೆಣ್ಣೆದು ನೋಡದೆ ಜೈಲಿಗೆ ಹಾಕಿದ್ದರಿಂದ ಅವರ ಚಿಕ್ಕ ಮಕ್ಕಳು ಅನಾಥರಾದರು. ಒಬ್ಬ ಪುಣ್ಯಾತ್ಮರು ಈ ಅನಾಥ ಮಕ್ಕಳಿಗಾಗಿ ಶಾಲೆಯನ್ನು ತೆರೆದರು.
ಗಾಂಧೀಜಿಯವರು ಅಂಕೋಲೆಗೆ ಬಂದಾಗ ಈ ಶಾಲೆಯನ್ನು ಸಂದರ್ಶಿಸಲು ಅವರನ್ನು ಕರೆಯಲಾಯಿತು. ಆದರೆ ಗಾಂಧೀಜಿಯವರು "ನಾನು ಹರಿಜನೋದ್ಧಾರಕ್ಕೆ ಸಂಬಂಧಿಸಿದ
ಸಂಸ್ಥೆಗಳನ್ನಷ್ಟೇ ಸಂದರ್ಶಿಸುತ್ತೇನೆ" ಎಂದು ಹೇಳಿ, ಈ ಶಾಲೆಯನ್ನು ನೋಡಲು ಹೋಗಲಿಲ್ಲ.
ಬಹುಶ: ನಿಮಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ವಿಳಾಸದಲ್ಲಿ ಸಿಗಬಹುದು:
ಶ್ರೀ ವಿಷ್ಣು ನಾಯ್ಕ
ಅಂಚೆ: ಅಂಬಾರಕೊಡ್ಲ
ತಾಲೂಕು: ಅಂಕೋಲಾ
ಉತ್ತರ ಕನ್ನಡ ಜಿಲ್ಲೆ

Santhosh Rao said...

Sir,

ಕೃಷ್ಣ ಗೋಪಾಳ ಜೋಶಿ ಯವರ ಬಗ್ಗೆ ಗೊತ್ತಿರಲಿಲ್ಲ ತಿಳಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು

sunaath said...

ಸಂತೋಷ,
ಸಂತೋಷ ನನ್ನದು.

ಶಾಂತಲಾ ಭಂಡಿ (ಸನ್ನಿಧಿ) said...

ಸುನಾಥ ಅಂಕಲ್...
ಕೃಷ್ಣ ಗೋಪಾಳ ಜೋಶಿಯವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ‘ಅಗ್ನಿ ಸಂದೇಶ’ದ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಅಂದ ಹಾಗೆ ‘ಶ್ರೀ ವಿಷ್ಣು ನಾಯ್ಕ’ರೆಂದರೆ ‘ನೋವು ಪ್ರೀತಿಯ ಪ್ರಶ್ನೆ’ ಕವನ ಸಂಕಲನದ ಕವಿ/ಲೇಖಕರು ಇವರೆಯೇ?

ನಮ್ಮ ದೇಶದ ಚರಿತ್ರೆಯನ್ನು ಭಾವನಾತ್ಮಕವಾಗಿ, ಮಾಹಿತಿಭರಿತವಾಗಿ ಆಪ್ತವಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು.

sunaath said...

ಶಾಂತಲಾ,
You are right.
‘ನೋವು ಪ್ರೀತಿಯ ಪ್ರಶ್ನೆ’ಯು ವಿಷ್ಣು ನಾಯ್ಕರ ಕವನಸಂಕಲನ. ಬಹುಶಃ ಇದು ೧೯೯೮ರಲ್ಲಿ ಬಿಡುಗಡೆಯಾಗಿರಬಹುದು.

ಪ್ರಮೋದ ನಾಯಕ said...

ನೀವು ಹೆಸರಿಸಿದಿರಲ್ಲ ದಯಾನಂದ ಪ್ರಭುಗಳು, ಅವರು ಬರೆದ "ಭೂಗತನ ನೆನಪುಗಳು" ಎಂಬ ಪುಸ್ತಕದಲ್ಲಿ ಜೋಶಿಯವರ ಬಗ್ಗೆ ಹೇಳಿದ್ದಾರೆ. ಈ ಜಂಗಲ್ ಸತ್ಯಾಗ್ರಹದ ಬಗ್ಗೆ ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ ಅವರು.. ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಜೋಶಿಯಂಥವರನ್ನು ಕಂಡ ನೀವೆಲ್ಲಾ ಧನ್ಯರು. ಆದರೆ ಅಂಥವರ ಪುಸ್ತಕಗಳನ್ನೆ ಓದಿ ಆಗೇನು ನಡೆದಿತ್ತು ಎಂದು ತಿಳಿಯಬೇಕಾದ ಅನಿವಾರ್ಯತೆ ಈಗಿನ ಯುವಕರಿಗೆ.ನೀವು ಹೇಳಿದ ಹಾಗೆ ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ. ಆದ್ದರಿಂದ ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಎಷ್ಟೊಂದು ಕಷ್ಟಪಟ್ಟಿದ್ದರು ಎಂದು ನಾವೆಲ್ಲರೂ ತಿಳಿಯಲು ಇಂಥಹ ಲೇಖನಗಳನ್ನು ನಾವೆಲ್ಲರೂ ಇಂದು ಓದಲೇಬೇಕು.. ಒಳ್ಳೆಯ ಲೇಖನ.. ಇಂಥಹ ಇನ್ನೂ ಲೇಖನಗಳು ಬರಲಿ.

ಆನಂದ said...

ಕಾಕಾ,
ಮನಮುಟ್ಟುವ ಲೇಖನ.
ನಾನು ಹಾಸ್ಟೆಲ್ ನಲ್ಲಿ ಓದುತ್ತಿದ್ದಾಗ, ಊಟಕ್ಕೆ ಮುಂಚೆ 'ಸಹನಾವವತು' ಹೇಳ್ತಿದ್ವಿ.
ಆಮೇಲೆ, XII ಓದುತ್ತಿದ್ದಾಗ ಬೇಸಿಗೆ ರಜೆಯಲ್ಲಿ ಟ್ಯೂಶನ್ ಗಾಗಿ ಸ್ವಲ್ಪ ಕಾಲ ಧಾರವಾಡದಲ್ಲಿ ಸ್ಕೂಲ್ ಒಂದರಲ್ಲಿ ಇದ್ದೆ. ನರಸಿಂಹ ಗಲಗಲಿಯವರು ಆಗ ಅದನ್ನು ನಡೆಸುತ್ತಾ ಇದ್ದರು. ಅವರೂ ಸಹ ಊಟಕ್ಕೆ ಮುಂಚೆ ಆ ಶ್ಲೋಕವನ್ನು ಹೇಳಿಸುತ್ತಿದ್ದರು. ಇವತ್ತು ಅದರ ಅರ್ಥ ತಿಳಿಯಿತು. ಧನ್ಯವಾದಗಳು.

Unknown said...

i was very lucky to have been his direct student. I was his favourite students right from my fifth standard in 1966. He was teaching us english and geography. More than tha he was a great inspirer, friend, philosopher and guide. He was very gullible and straight forward. He did not know the trick of highlighting his achievements unlike his counterparts in the same institution. Some of us tried to push his name for some awards but gave it up because the awards have lost their values. Shri K G Joshi sir lives in the heart of all those who have come in contact with him. It is necessary not for him but for the next generation to know that K E Board had several such great figures apart from those who had the benefit of government awards and other benefits that come with such awards. Long Live Shri K G Joshi. Hats off to Mahesh hegde for posting this blog.

Vijay Inamdar said...

ಧನ್ಯವಾದಗಳು ಮಹೇಶ K.g.joshi sir was a great personality.when I joined karnataka high school in 1985.English was the subject I was worried n I joined then retired k.G.Joshi sir's FREE English classes which he used to take in Karnataka high school n then on wards ENGLISH became a very easy subject for me and I started teaching English grammer to many.He was such a good teacher he never used to give up if u make mistake in English.Like me so many students from k E.board,KARNATAKA HIGH School,K.N.K and vidyaranya SCHOOL got benefit from his immense knowledge n teaching skills.Hatss off to K.g.JOSHI SIR AND U FOR sharing such a wondeful article.--vijay Inamdar DHARWAD