Wednesday, March 18, 2009

ಹಿತ್ತಲಲ್ಲಿಯ ಹೂವು

ಚಾರ್ಲಿ ಚಾಪ್ಲಿನ್ !
ಈತ ಚಿತ್ರಜಗತ್ತು ಕಂಡ ಅದ್ಭುತ ಕಲಾವಿದ! ಅವನು ನನ್ನ ನೆಚ್ಚಿನ ಕಲಾವಿದನೂ ಹೌದು.
The Kid, Modern Times, The Great Dictator ಮೊದಲಾದ ಅಭಿಜಾತ ಚಲನಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಅವನದು. ಅಭಿನಯ ಹಾಗೂ ನಿರ್ದೇಶನ ಇವೆರಡರಲ್ಲೂ ಸರ್ವೋಚ್ಚನಾದ ಸವ್ಯಸಾಚಿ ಈತ.
ಇವನಂತೆಯೇ ಅನೇಕ ಪಾಶ್ಚಾತ್ಯ ಚಿತ್ರನಿರ್ಮಾಪಕರು ಹಾಗೂ ನಟ, ನಟಿಯರೂ ಸಹ ನನ್ನ ನೆಚ್ಚಿನವರಾಗಿದ್ದಾರೆ. Alfred Hitchcock, Ingmar Bergman, Steven Spielberg, Sophia Loren ಇವರೂ ನನ್ನ ಹೃದಯದಲ್ಲಿ ಸ್ಥಾನ ಪಡೆದವರೇ.
ಇತ್ತೀಚೆಗೆ ಶ್ರೀ ಅಮರರು ಕಳಿಸಿಕೊಟ್ಟ ಇರಾಣಿ ಚಿತ್ರಗಳನ್ನು ನೋಡಿದ ಬಳಿಕ ಮಜೀದ ಮಜೀದಿ ನನಗೆ ತುಂಬ ಇಷ್ಟವಾದರು. ಇವರೆಲ್ಲರ ಪ್ರತಿಮೆಗಳು ನನ್ನ ಹೃದಯರಂಗದಲ್ಲಿ ಪ್ರತಿಷ್ಠಾಪಿತವಾಗಿವೆ.

ಕನ್ನಡೇತರ ಭಾರತೀಯ ಚಿತ್ರರಂಗದಲ್ಲಿ ಸತ್ಯಜಿತ ರಾಯ, ಶ್ಯಾಮ ಬೆನೆಗಲ್, ಕಮಲಹಾಸನ್, ನಾಸಿರುದ್ದೀನ ಶಾ, ಅನುಪಮ ಖೇರ, ಶಬಾನಾ ಆಜ್ಮಿ, ಇವರು ನನಗೆ ಇಷ್ಟರಾದವರು.
ಇವರೆಲ್ಲರ ಪ್ರತಿಮೆಗಳನ್ನು ನಮ್ಮ ಕರಾವಳಿಯ ಕಡಲ ದಂಡೆಯ ಮೇಲೆ ಸ್ಥಾಪಿಸಿದರೆ ನನಗೆ ಖುಶಿಯಾಗುವದರಲ್ಲಿ ಸಂದೇಹವಿಲ್ಲ. ಆದರೆ ಸಂಪೂರ್ಣ ಖುಶಿಯಾದೀತೆ?

ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕನ್ನಡಿಗರಿಗೆ ಪರಮೋಚ್ಚ ಕಲಾವಿದರನ್ನು ಹಾಗೂ ಸಾಹಿತಿಗಳನ್ನು ಕೊಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆ ಎಂದ ತಕ್ಷಣ ನೆನಪಾಗುವವರು ಶಿವರಾಮ ಕಾರಂತರು. ಸಾಹಿತ್ಯ, ಯಕ್ಷಗಾನ, ವಿಜ್ಞಾನ ಮೊದಲಾದ ಅನೇಕ ವಿಷಯಗಳಲ್ಲಿ ಶಿವರಾಮ ಕಾರಂತರನ್ನು ಮೀರಿಸುವವರು ಸಿಗುವದು ದುಸ್ಸಾಧ್ಯ. ಕರ್ನಾಟಕಕ್ಕೆ ಶಿವರಾಮ ಕಾರಂತರು ಕೊಟ್ಟ ಕೊಡುಗೆಯನ್ನು ಬಹುಶಃ ಯಾರೂ ಕೊಟ್ಟಿಲ್ಲ.

ತಮ್ಮ ಜಮೀನನ್ನೆಲ್ಲ ರೈತರಿಗೆ ಕೊಟ್ಟುಬಿಟ್ಟ , ಕಾರ್ಮಿಕರಿಗಾಗಿ ಜೀವವನ್ನು ತೇಯ್ದ , ಚುಟುಕುಬ್ರಹ್ಮರೆಂದು ಖ್ಯಾತಿವೆತ್ತ, ಉತ್ತರ ಕನ್ನಡ ಜಿಲ್ಲೆಯ ಶ್ರೀ ದಿನಕರ ದೇಸಾಯಿಯವರ ಕೊಡುಗೆಯ ಬಗೆಗೆ ಏನು ಹೇಳಲಾದೀತು? ಶ್ರೀ ಜವಾಹರಲಾಲ ನೆಹರೂರು “ನನ್ನ ಚಿತಾಭಸ್ಮವನ್ನು ವಿಮಾನದ ಮೂಲಕ ಭಾರತದ ಎಲ್ಲೆಡೆ ಹಾರಿಸಿರಿ” ಎಂದು ತಮ್ಮ ಮೃತ್ಯುಪತ್ರದಲ್ಲಿ ಬರೆದಿದ್ದರು. ಇದಕ್ಕೂ ಅನೇಕ ವರ್ಷ ಮೊದಲೇ ಶ್ರೀ ದಿನಕರ ದೇಸಾಯಿ ತಮ್ಮ ಕವನದಲ್ಲಿ ಹಾಡಿದ್ದರು:
“ನನ್ನ ದೇಹದ ಬೂದಿ ಹಾರಿ ಬಿಡಿ ಗಾಳಿಯಲಿ…”

ಶ್ರೀ ಗೋವಿಂದ ಪೈ, ಶ್ರೀ ಪಂಜೆ ಮಂಗೇಶರಾಯರು ಇಂತಹ ಶ್ರೇಷ್ಠ ಸಾಹಿತಿಗಳು ದಕ್ಷಿಣ ಕನ್ನಡ ಜಿಲ್ಲೆಯವರು. ಕಾಸರಗೋಡು ತಾಲೂಕು ಕೇರಳದಲ್ಲಿಯೇ ಉಳಿದಿದ್ದರೂ ಸಹ ಕಯ್ಯಾರ ಕಿಞ್ಞಿಣ್ಣ ರೈಯವರನ್ನು ಇದೇ ಪಂಕ್ತಿಯಲ್ಲಿ ಸೇರಿಸಬೇಕು.

ಯಕ್ಷಗಾನದ ಶ್ರೇಷ್ಠ ಕಲಾವಿದ ಕೆರೆಮನೆ ಶಂಭು ಹೆಗಡೆ ಯಾವ ಜಿಲ್ಲೆಯವರು?
ಅಖಿಲ ಭಾರತದಲ್ಲಿ ಖ್ಯಾತಿ ಪಡೆದ ರಂಗಕರ್ಮಿ ಬಿ.ವ್ಹಿ.ಕಾರಂತ ಯಾವ ಜಿಲ್ಲೆಯವರು?
ಭಾರತೀಯ ಚಿತ್ರರಂಗದಲ್ಲಿ ಶ್ರೇಷ್ಠರಾದ ಗಿರೀಶ ಕಾರಂತ(=ಕಾಸರವಳ್ಳಿ) ಯಾವ ಜಿಲ್ಲೆಯವರು?
ವಿಶ್ವಸುಂದರಿ, Bollywood ತಾರಾಮಣಿ ಐಶ್ವರ್ಯಾ ರೈ ಹಾಗೂ ಶಿಲ್ಪಾ ಶೆಟ್ಟಿ ಇವರ ತವರುಮನೆ ಎಲ್ಲಿವೆ?
ವಿಶ್ವದ ಅತ್ಯುತ್ತಮ ಚಿತ್ರಕಾರರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರ ಎಲ್ಲಿಯವರು?
ಹೀಗೇ ಅನೇಕ ರಂಗಗಳಲ್ಲಿ ಖ್ಯಾತರಾದವರು ನಮ್ಮ ಕನ್ನಡ ಜಿಲ್ಲೆಯವರು.

ಈ ಶ್ರೇಷ್ಠರಲ್ಲಿ ಯಾರದಾದರೂ ಪ್ರತಿಮೆ ಕರಾವಳಿಯಲ್ಲಿದೆಯೆ?
ನಮ್ಮದೇ ಹಿತ್ತಲಲ್ಲಿಯ ಹೂವು ಎಷ್ಟೇ ಸುಗಂಧಭರಿತವಾಗಿದ್ದರೂ, ನಾವು ಪಕ್ಕದ ಮನೆಯ ಹೂವನ್ನೇ ಬಯಸುತ್ತೇವೆ, ಏಕೆ?

ಚಾರ್ಲಿ ಚಾಪ್ಲಿನ್ನನ ಪ್ರತಿಮೆಯನ್ನು ಕರಾವಳಿಯಲ್ಲಿ ಸ್ಥಾಪಿಸಬೇಕೊ, ಬೇಡೋ ಎನ್ನುವ ಚರ್ಚೆ ನಡೆಯುತ್ತಿರುವಾಗ, ನನ್ನ ಮನಸ್ಸು ನಮ್ಮ ಮನೆಯ ಹಿತ್ತಲಿನ ಹೂವುಗಳನ್ನು ನೆನಪಿಸಿಕೊಂಡಿತು.
ನಿಮ್ಮ ಖಾಸಗಿ ಜಮೀನಿನಲ್ಲಿ ನೀವು ಯಾರದಾದರೂ ಪ್ರತಿಮೆಯನ್ನು ಸ್ಥಾಪಿಸಿಕೊಳ್ಳಿ. ಸಾರ್ವಜನಿಕ ಭೂಮಿಯಲ್ಲಿ ಪ್ರತಿಮೆ ಸ್ಥಾಪಿಸುವದಾದರೆ, ಆ ನೆಲದ ಶ್ರೇಷ್ಠರಿಗೆ ಆದ್ಯತೆ ಸಿಗಬೇಕು. ಉದಾಹರಣೆಗೆ ಮೈಸೂರಿನಲ್ಲಿ ಶೇಕ್ಸಪಿಯರನ ಪ್ರತಿಮೆ ಸ್ಥಾಪಿಸುವ ಮೊದಲು ಕೈಲಾಸಂ ಪ್ರತಿಮೆಯ ಸ್ಥಾಪನೆಯಾಗಬೇಕು.
ಇದು ತಪ್ಪು ಎನ್ನುವಿರಾ?

ಕೆಲವರು ವಿಶ್ವಮಾನವರಿರುತ್ತಾರೆ. ಅಂಥವರಿಗೆ ಎಲ್ಲಿಯೇ ಆಗಲಿ, ಪ್ರಥಮ ಆದ್ಯತೆ ದೊರೆತರೆ ತಪ್ಪಿಲ್ಲ. ಉದಾಹರಣೆಗೆ ಅಬ್ರಾಹಮ್ ಲಿಂಕನ್. ಲಿಂಕನ್ ಏಕೆ ಅತ್ಯುತ್ತಮ ಮಾನವನೆಂದರೆ ಆತ ಸತ್ಯಕ್ಕಾಗಿ, ಮಾನವತೆಗಾಗಿ ತನ್ನವರ ವಿರುದ್ಧವೇ ಹೋರಾಡಿದವನು.

ಆದರೆ ಚಾರ್ಲಿ ಚಾಪ್ಲಿನ್?
ನಮ್ಮ ಹಿತ್ತಲಿನ ಗಂಧಭರಿತ ಹೂವುಗಳಿಗಿಂತ ಈ ಹೂವು ಹೆಚ್ಚಿನದೆ?

37 comments:

ಬಿಸಿಲ ಹನಿ said...

ಸುನಾಥ್ ಸರ್,
ಚಾರ್ಲಿ ಚಾಪ್ಲಿನ್‍ಗಿಂತ ಮೊದಲು ಕನ್ನಡದ ಚಾಪ್ಲಿನ್ ಎಂದೇ ಹೆಸರಾದ ನರಸಿಂಹರಾಜುವರ ಪ್ರತಿಮೆಯನ್ನು ಕನ್ನಡ ನಾಡಿನಲ್ಲಿ ಪ್ರತಿಷ್ಟಾಪಿಸುವದು ಯೋಗ್ಯವಲ್ಲವೆ? ನಮ್ಮ ಹಿತ್ತಿಲಿನ ಅದೆಷ್ಟೋ ಹೂವುಗಳು ಈ ತರದ ಅಸಡ್ಡೆಯಿಂದ ಬಾಡಿವೆಯೋ! ಉತ್ತಮ ಲೇಖನಕ್ಕೆ ಧನ್ಯವಾದಗಳು.

Keshav.Kulkarni said...

ಸುನಾಥ್,
ಇನ್ನೊಂದು ದೃಷ್ಟಿಕೋನ ಇಲ್ಲಿದೆ:
http://kadalateera.blogspot.com/2009/03/blog-post_17.html

- ಕೇಶವ

shivu.k said...

ಸುನಾಥ್ ಸರ್,

ಚಾರ್ಲಿ ಚಾಪ್ಲಿನ್ ನೆಪದಲ್ಲಿ ನಮ್ಮ ರಾಜ್ಯದವರೇ ಅದರಲ್ಲೂ ಕರಾವಳಿ...ಮಹಾನ್ ಸಾಧಕರ ಹೆಸರನ್ನು ನೆನಪಿಸಿದಿರಿ...ನಿಮ್ಮ ಮಾತು ಈ ವಿಚಾರದಲ್ಲಿ ಅಕ್ಷರಸಹಃ ನಿಜವೆನಿಸಿದೆ....

PARAANJAPE K.N. said...

ಸರ್,
ತು೦ಬಾ ಚೆನ್ನಾದ ಸಕಾಲಿಕ ಲೇಖನ, ಇದರೊಳಗಿನ ಆಶಯ ನನ್ನ ಮನದ ಮಾತೂ ಹೌದು. ಬಹುಶಃ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಲ್ಪಟ್ಟ ಪ್ರದೇಶದ ಶೇ:೯೦ ಜನಕ್ಕೆ ಆತ ಯಾರೆ೦ದು ತಿಳಿದಿರಲಾರದು, ಏಕೆ೦ದರೆ ಆತ ಇಲ್ಲಿಯವನಲ್ಲ, ಈ ನೆಲದಲ್ಲಿ ಓಡಾಡಿಲ್ಲ, ಆತನ ಪ್ರತಿಮೆ ಸ್ಥಾಪಿಸುವ ಪ್ರಸ್ತುತತೆಯೂ ಕಾಣುವುದಿಲ್ಲ. ಹೀಗಿರುವಾಗ ಏಕಾಏಕಿ ಆತನ ಪ್ರತಿಮೆ ಸ್ಥಾಪಿಸುವುದು, ಅದಕ್ಕೆ ವಿರೋಧ ಬ೦ತೆ೦ದು ಜಾತಿ-ಧರ್ಮ-ರಾಜಕೀಯ ದ ಬಣ್ಣ ಬಳಿಯುವುದು ಖ೦ಡಿತ ಸರಿಯಲ್ಲ. ನೀವು ಹೇಳಿದ೦ತೆ ದ.ಕ.ಉ.ಕ ಗಳಲ್ಲಿ ಎಷ್ಟೊ೦ದು ಮ೦ದಿ ಪ್ರಾಥಃಸ್ಮರಣೀಯರು ಇದ್ದಾರೆ. ಅವರುಗಳ ಪ್ರತಿಮೆ ಸ್ಥಾಪಿಸುವುದು ಬೇಡ, ನೆನಪಿಸಿಕೊಳ್ಳಲು ನಮ್ಮ ಜನರಿಗೆ ಪುರುಸೊತ್ತಿಲ್ಲ. ನಿಮ್ಮ ಬರವಣಿಗೆಯೊಳಗಿನ ಆಶಯ ಅಕ್ಷರಶಃ ಸರಿ.

ಸಂದೀಪ್ ಕಾಮತ್ said...

ಸುನಾಥ್ ಸರ್ ,
ನಮ್ಮೂರ ಮಹನೀಯರ ಬಗ್ಗೆ ಬರೆದಿದ್ದಕ್ಕೆ ತುಂಬಾ ಥ್ಯಾಂಕ್ಸ್!

ಚಾರ್ಲಿ ಚಾಪ್ಲಿನ್ ಅಥವಾ ಇನ್ಯಾರದೆ ಪ್ರತಿಮೆ ಕಡಲತೀರದಲ್ಲಿ ಪ್ರತಿಷ್ಟಾಪಿಸೋದಕ್ಕೆ ನನ್ನ ಸಹಮತ ಖಂಡಿತ ಇಲ್ಲ(ನನ್ನೂರಾಗಿದ್ದಕ್ಕೆ ಹೇಳಿದೆ ಹೇಗೂ ನನ್ನ ಸಹಮತ ಯಾರೂ ಕೇಳೋದೂ ಇಲ್ಲ!)
ಇವತ್ತು ಚಾರ್ಲಿ ಚಾಪ್ಲಿನ್ ನಾಳೆ ನರಸಿಂಹ ರಾಜು ನಾಡಿದ್ದು ದೇವೇಗೌಡ್ರದ್ದು ಅದರಾಚೆ ದರ್ಶನ್ ,ಗಣೇಶ್ ಅವರು ಇವರದ್ದು ಅಂತ ಪ್ರತಿಮೆ ಮಾಡ್ತೀನಿ ಅಂತ ’32 ಲಕ್ಷದ ಥೈಲಿ ಇದ್ದವರು ಮುಂದೆ ಬಂದ್ರೆ ಪಾಪ ಬಡ ಕರಾವಳಿ ಜನರು ಏನ್ ಮಾಡೋದು?

ಸುಝ್ಲಾನ್ ಬೇಡ ನಾಗಾರ್ಜುನ ಬೇಡ ಅಂತ ಜನ ಚಳುವಳಿ ಮಾಡಿದಾಗ ಈ ಬುದ್ಧಿಜೀವಿಗಳು ಅಪ್ಪಿ ತಪ್ಪಿಯೂ ಬರೆಯಲಿಲ್ಲ .
ಈಗ ಪುಟಗಟ್ಟಲೆ ಬರೀತಾ ಇದ್ದಾರೆ.

Anonymous said...

ಕೆಲವೊಂದು ಪ್ರಶ್ನೆ ಕಾಡುತ್ತಿವೆ:

1. ಸದರಿ ಚಿತ್ರತಂಡ ಇಲ್ಲಿ ಯಾವ ಉದ್ದೇಶವಿಟ್ಟುಕೊಂಡು ಚಾಪ್ಲಿನ್ ಪ್ರತಿಮೆ ನಿಲ್ಲಿಸಬಯಸಿತ್ತು?
(ತಮ್ಮ ಚಿತ್ರಕ್ಕೆ ಪೂರಕವಾಗಿತ್ತೆಂಬ ಉದ್ದೇಶಕ್ಕೋ?)

2.ಯಾರೋ ಚಾಪ್ಲಿನ್ ಕ್ರಿಶ್ಚಿಯನ್ ಅಂದರೆಂಬ ವಾದಕ್ಕಿಂತ,ಅಯ್ಯೋ ಇಷ್ಟೆಲ್ಲ ಖರ್ಚು ಮಾಡಿದರೂ ಪ್ರತಿಮೆ ನಿಲ್ಲಿಸಲಾಗದೇ ಶೂಟಿಂಗ್ ನಿಲ್ಲಿಸಬೇಕಾಯ್ತು,ಅವಮಾನವೂ ಆಯ್ತು,ಇದನ್ನಾದರೂ encash ಮಾಡುವ-
ಅನ್ನುವ ಹುನ್ನಾರವೇನಾದರೂ ಗೋಚರಿಸುತ್ತಿದೆಯೇ?

3.ಪ್ರತಿಮೆ ನಿಲ್ಲಿಸಲು ಸದರಿ ಜಾಗದಲ್ಲಿ technical ತೊಂದರೆಗಳೇನಾದರೂ ಇದ್ದವೆ?
(ಉದಾ: CRZ ಅಥವಾ ಪ್ರಾರ್ಥನಾ ಮಂದಿರ ಅಥವಾ ಮಿಲಿಟರಿ ಜಾಗದಂಥ ನಿಶಿದ್ಧ ಸ್ಥಳ)

4.ಇದ್ದರೆ,ಸದರಿ ಚಿತ್ರತಂಡಕ್ಕೆ ಇದರ ಅರಿವಿತ್ತೇ?
ಅರಿವಿದ್ದರೆ,ಸಂಬಂಧಪಟ್ಟವರಿಂದ ಪ್ರತಿಮೆ ನಿಲ್ಲಿಸಲು ಅನುಮತಿ ತೆಗೆದುಕೊಂಡಿತ್ತೆ?

5.ದ.ಕ.ಜಿಲ್ಲೆ ನಿಜವಾಗಲೂ ಈ ಪರಿ ಧರ್ಮಾಂಧತೆ ಹೊಂದಿದ ಜಿಲ್ಲೆಯೇ?

6.ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಪ್ರತಿಮೆ ನಿಲ್ಲಿಸುವದು ಎಷ್ಟು ಸರಿ?

ದಯವಿಟ್ಟು ಯಾರಾದರೂ ಉತ್ತರಿಸುತ್ತೀರ?

-ರಾಘವೇಂದ್ರ ಜೋಶಿ.

ಧರಿತ್ರಿ said...

ಸುನಾಥ್ ಸರ್....
ನಮ್ಮ ಹಿತ್ತಲಿನ ಗಂಧಭರಿತ ಹೂವುಗಳಿಗಿಂತ ಈ ಹೂವು ಹೆಚ್ಚಿನದೆ? ಯಾರೂ ಕೇಳದ ಒಂದು ಪ್ರಶ್ನೆಯ ಮೂಲಕ ನಮ್ಮಲ್ಲಿನ, ನಮ್ಮದೇ ಸಾಧಕರ ನೆನಪು ಮಾಡಿಕೊಟ್ಟಿರಿ.ಬಹುಶಃ ಇವರ ಬಗ್ಗೆ ಯೋಚಿಸುವ ಕನಿಷ್ಠ ಪರಿಜ್ಞಾನ, ಸಮಯವೂ ಇಲ್ಲವಲ್ಲ! ಇದು ನಮ್ಮ ದುರಂತ. ಕೇವಲ ದ.ಕ ಮಾತ್ರವಲ್ಲ ಬಹುಪಾಲು ಭಾರತೀಯರ ಪಾಡೇ ಇದು ಎನ್ನೋದು ನೋವಿನ ಸಂಗತಿ.
ಸರ್..ನಾನು ಬ್ಲಾಗ್ ಲೋಕಕ್ಕೆ ಹೊಸಬಳು. ಬನ್ನಿ ಒಂದೇ ಒಂದು ಸಾರಿ ಧರಿತ್ರಿಯಲ್ಲಿ ಕಣ್ಣಾಡಿಸಿ..ಪ್ರೋತ್ಸಾಹಿಸಿ.
ಪ್ರೀತಿಯಿಂದ,
-ಧರಿತ್ರಿ

sunaath said...

ಉದಯ,
ನಮ್ಮಲ್ಲಿಯ ಶ್ರೇಷ್ಥರ ಪ್ರತಿಮೆಗಳನ್ನು ಸ್ಥಾಪಿಸಲು ಹೊರಟರೆ,
ಜಾಗ ಸಾಲಲಿಕ್ಕಿಲ್ಲ.
ಬಹುಶ: ಅದಕ್ಕೆಂದೇ ಪರದೇಶೀಯರ ಪ್ರತಿಮೆ ಸ್ಥಾಪಿಸುತ್ತಿದ್ದಾರೇನೊ?

sunaath said...

ಕೇಶವ,
ನೀವು ಹೇಳಿದ ಲಿಂಕಿನಲ್ಲಿಯ ಅಂದರೆ ಸಂದೀಪ ಕಾಮತರ ಲೇಖನ ಓದಿದ್ದೇನೆ. ವಿನೋದಮಯ ಶೈಲಿಯಲ್ಲಿಯೇ ಸಾಕಷ್ಟು
ಪಂಚ್ ಕೊಟ್ಟಿದ್ದಾರೆ. ಪಂಚ್ ತಿಂದವರು ಮುಟ್ಟಿ ನೋಡಿಕೊಂಡಿರಬೇಕು, ಆ ಥರಾ ಇದೆ.

sunaath said...

ಶಿವು,
ಇನ್ನೂ ಎಷ್ಟು ಹೆಸರು ನನ್ನ ನೆನಪಿಗೂ ಬಾರದೇ ಹೋಗಿವೆ ಏನೊ? ಉದಾ: ಕಮಲಾದೇವಿ ಚಟ್ಟೋಪಾಧ್ಯಾಯ, ವ್ಯಾಸರಾಯ ಬಲ್ಲಾಳ ಇತ್ಯಾದಿ.

sunaath said...

ಪರಾಂಜಪೆಯವರೆ,
ನೀವು ಹೇಳಿದ್ದು ಸರಿಯಾಗಿದೆ. ಚಾರ್ಲಿ ಚಾಪ್ಲಿನ್ ಬಗ್ಗೆ, ದಕ್ಷಿಣ ಕನ್ನಡ ಜಿಲ್ಲೆ ಹೋಗಲಿ ಬಿಡಿ, ಭಾರತದಲ್ಲಿಯೂ ಸಹ ಎಷ್ತು ಮಂದಿಗೆ ಗೊತ್ತಿದೆ?

sunaath said...

ಸಂದೀಪ,
ನಿಮ್ಮ blogನಲ್ಲಿ ನೀವು ಬರೆದ ವಿನೋದಮಯ ಲೇಖನ, ಪರಿಸ್ಥಿತಿಯ ಹಲವು ಮುಖಗಳನ್ನು ಚೆನ್ನಾಗಿ ತೋರಿಸಿದೆ. ಇನ್ನು ಬುದ್ಧಿಜೀವಿಗಳು ಕೇವಲ ಸುದ್ದಿಜೀವಿಗಳಾಗಿದ್ದಾರೆ, ಅಷ್ಟೆ!

sunaath said...

rj,
ನೀವು ಯಕ್ಷಪ್ರಶ್ನೆಗಳನ್ನು ಕೇಳಿರುವಿರಿ. ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಧೈರ್ಯ ಯಾರಿಗಿದೆ?

ಶಿವಪ್ರಕಾಶ್ said...

sunaath ಅವರೇ,
ನೀವು ಹೇಳಿದ್ದು ಸರಿಯಾಗಿದೆ...
ಅವರಿಗೆ ಆ ಪ್ರತಿಮೆ ಸ್ಥಾಪಿಸುವ ಮುಂಚೆ ನಮ್ಮಲ್ಲೇ ಹುಟ್ಟಿ ಬೆಳದು ಸಾಧನೆಗ್ಯದವರ ಪ್ರತಿಮೆ ಸ್ಥಾಪಿಸಲಿ.
ಧನ್ಯವಾದಗಳು...

sritri said...

ಕಾಕಾ ಚೆನ್ನಾಗಿ ಬರೆದಿದ್ದೀರಿ. ಸುಮ್ಮಸುಮ್ಮನೆ ವಿವಾದ ಸೃಷ್ಟಿಸಿ ಖುಷಿಪಡುವ ಸುದ್ದಿಜೀವಿಗಳಿಗೇನೆನ್ನಬೇಕೋ ತಿಳಿಯುತ್ತಿಲ್ಲ. ಮಹಾತ್ಮಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಬೇರೆ ಮಾಡ್ತಾರಂತೆ.

ಎಷ್ಟು ಗಾಳಿ ಹಾಕಿದ್ರೂ ಈ ವಿವಾದ ಯಾಕೋ ಹೊತ್ತಿಕೊಳ್ಳುತ್ತಲೇ ಇಲ್ಲ. ಛೇ!! :)

ಅಂತರ್ವಾಣಿ said...

ಅಂಕಲ್
ಹಿತ್ತಲ ಗಿಡ ಮದ್ದಲ್ಲ ಅನ್ನೋದು ಇದಕ್ಕೆ ಅಲ್ವಾ?

ಪ್ರತಿಮೆಯ ವಿಷಯ ಅಲ್ಲದೆ ಬೇರೆಷ್ಟೋ ವಿಷಯಗಳಲ್ಲಿ ಹೀಗೆ ಹಿತ್ತಲಲ್ಲಿದ್ದ ಗಿಡಗಳನ್ನು ಗಮನಿಸುತ್ತಿಲ್ಲ.

sunaath said...

ಧರಿತ್ರಿ,
ಬ್ಲಾ^ಗ್‍ಲೋಕಕ್ಕೆ ಸುಸ್ವಾಗತ.
ನಿಮ್ಮ ಲೇಖನಗಳಿಗಾಗಿ ಕಾತುರತೆಯಿಂದ ಕಾಯುತ್ತೇನೆ.

sunaath said...

ಶಿವಪ್ರಕಾಶ,
ಬಹುಶ: ಚಾಪ್ಲಿನ್ನನ ಆತ್ಮ ಈ ಪ್ರತಿಮಾಸ್ವಾರ್ಥಿಗಳನ್ನು ಕಂಡು
ನಗುತ್ತಿರಬೇಕು. ಆವನಿಗೇ ಬೇಡವೆನಿಸಿರಬಹುದಾದ ಪ್ರತಿಮೆ ಇವರಿಗೆ ಬೇಕಾಗಿದೆ!

sunaath said...

ತ್ರಿವೇಣಿ,
"ಎಷ್ಟು ಗಾಳಿ ಹಾಕಿದ್ರೂ ಈ ವಿವಾದ ಯಾಕೋ ಹೊತ್ತಿಕೊಳ್ಳುತ್ತಲೇ ಇಲ್ಲ. ಛೇ!! :)"
---Beautiful comment!

sunaath said...

ಜಯಶಂಕರ,
ನಮ್ಮ ಹಿತ್ತಲಮದ್ದು ನಮ್ಮ ಪಾಲಿಗೆ ತಿಪ್ಪೆ!

ಚಂದ್ರಕಾಂತ ಎಸ್ said...

ಸುನಾಥ್ ಸರ್

ನಾವು ಹೇಗಾಗಿದ್ದೇವೆಂದರೆ ಯಾವುದೇ ಲೇಖನ ನೋಡಲಿ ಕೂಡಲೇ ಪ್ರತಿಕ್ರಿಯಿಸುತ್ತೇವೆ. ಅಲ್ಲಿರುವುದು ಸತ್ಯವಾಗಿದ್ದರು ಅದು ಅರ್ಧ ಸತ್ಯವಾಗಿರುತ್ತದೆ. ಆ ಸತ್ಯದ ಇನ್ನೊಂದು ಮುಖವನ್ನು ಮರೆಮಾಚುತ್ತೇವೆ. ನಿಜ ಹೇಳಬೇಕೆಂದರೆ ಆ ಪ್ರತಿಮೆ ಅಲ್ಲಿ ಏಕೆ ಸ್ಥಾಪಿಸಬೇಕೆಂದಿದ್ದರು?, ಯಾರು ಸ್ಥಾಪಿಸಬೇಕೆಂದಿದ್ದರು? ಈಗ ಏಕೆ ಸ್ಥಾಪಿಸುತ್ತಿಲ್ಲ?ಈ ಯಾವ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳದೆ ಸುಮ್ಮನೆ ಪ್ರತಿಕ್ರಿಯಿಸುತ್ತಿರುವೆನೇನೋ ಎಂಬ ದ್ವಂದ್ವದಿಂದ ಇದುವರೆಗೂ ಸುಮ್ಮನಾದೆ.

ಎಂದಿನಂತೆ ವಿಚಾರಪೂರ್ಣವಾದ ನಿಮ್ಮ ಬರಹ ಹೀಗೆ ಉತ್ತರಿಸಲು ಪ್ರೇರೇಪಿಸುತ್ತಿದೆ.ನೀವು ಎಷ್ಟೊಂದು ತಾಳ್ಮೆ,ಶ್ರದ್ಧೆ,ಮತ್ತು ಪರಿಶ್ರಮವಹಿಸಿ ಆ ಭಾಗದ ವಿಶೇಷ ವ್ಯಕ್ತಿಗಳನ್ನು ಹೆಸರಿಸುವಿರಿ.ಅವರಾರ ಪ್ರತಿಮೆ ಇಲ್ಲದಿದ್ದರೂ ಅವರು ನಮ್ಮ ಅಮ್ತರಂಗದಲ್ಲಿ ಪಡೆದಿರುವ ಸ್ಥಾನಕ್ಕೆ ಕುಂದಿಲ್ಲ.

ಪ್ರತಿಮೆ ವ್ಯಕ್ತಿಯ ಹಿರಿಮೆ ತೋರಿಸಲು ಇರುವ ಮಾನದಂಡವೇ? ಚಾಪ್ಲಿನ್ನನ ಪ್ರತಿಮೆ ಸ್ಥಾಪಿಸದಿದ್ದರೆ ಅವನ ಬಗ್ಗೆ ನಮಗಿರುವ ಗೌರವ ಕಡಿಮೆಯಾಗುತ್ತದೆಯೇ ?

Ittigecement said...

ಸುನಾಥ ಸರ್...

ಈ ಪ್ರತಿಮೆಗಳನ್ನು ಯಾಕೆ ಸ್ಥಾಪಿಸ ಬೇಕು..?
ಈಗಿರುವ ಪ್ರತಿಮೆಗಳ ಸ್ಥಿತಿ ಏನಾಗಿದೆ..?
ಕಾಗೆ ಹಕ್ಕಿಗಳು ಕುಳಿತು ಹಿಕ್ಕೆ ಹಾಕಲು ಬೇಕೆ..?

ವರ್ಷಕ್ಕೊಮ್ಮೆ ಮಾಲೆ ಹಾಕಲು ಇವುಗಳು ಬೇಕೆ..?

ಮಹಾನ್ ಸಾಧನೆ ಮಾಡಿದವರ ನೆನಪಿಡಲು ಮತ್ಯಾವ ಮಾರ್ಗವೇ ಇಲ್ಲವೆ..?
ಪ್ರತಿಮೆ ಭಗ್ನವಾಗಿ ಗಲಾಟೆ ಆಗುತ್ತದಲ್ಲ..!

ಸುಮ್ಮನೆ ಕೆಲಸಕ್ಕೆ ಬಾರದ ವಿವಾದಗಳು ಅನ್ನಿಸುವದಿಲ್ಲವೇ.. ಸರ್...?

sunaath said...

ಚಂದ್ರಕಾಂತಾ,
ತುಂಬ ವಿಚಾರಪೂರ್ಣವಾದ ಪ್ರತಿಕ್ರಿಯೆ ನೀಡಿರುವಿರಿ.
ಪ್ರತಿಮೆ ಇಲ್ಲದಿದ್ದರೂ ಸಹ ಒಬ್ಬ ವ್ಯಕ್ತಿಯ ಬಗೆಗೆ ನಮಗಿರುವ ಗೌರವ ಕಡಿಮೆಯಾಗುವದಿಲ್ಲ.ಆದರೆ ಅನೇಕ ಸಲ ಪ್ರತಿಮೆಗಳು ಸ್ಥಾಪಿಸಬಯಸುವವರ ಸ್ವಾರ್ಥಮೂಲವಾಗಿರುತ್ತವೆ.

sunaath said...

ಪ್ರಕಾಶ,
ಯಾರ ಕಣ್ಣಿಗೂ ಬೀಳದ ಒಂದು ಗುಟ್ಟನ್ನು ನೀವೀಗ ರಟ್ಟು ಮಾಡಿದಿರಿ. ಅದೇನೆಂದರೆ, ಪ್ರತಿಮೆಗಳು ಕಾಗೆಗಳ ಆಶ್ರಯಸ್ಥಾನ!

Anonymous said...

ಬಹಳ ದಿನಗಳ ನಂತರ "ಸಲ್ಲಾಪ"ವನ್ನು ನೋಡುತ್ತಿರುವೆ. ಏನೇನೋ ತಾಪತ್ರಯಗಳು. ಈ ಕಾಂಪ್ಯೂಟರ್‍ಗೆ ಏನಾದ್ರೂ ರೋಗ ಬಂದರೆ, ನಮ್ಮ ಎಲ್ಲ ಕೆಲಸಗಳಿಗೆ ವಿಘ್ನ. ಏನೂ ಮಾಡುವ ಹಾಗಿಲ್ಲ.

ನಾನು ಅಮೆರಿಕದಲ್ಲಿದ್ದಾಗ ಮಾಡಿದ ಒಂದು ಒಳ್ಳೆ ಕೆಲಸವೆಂದರೆ, ಅಲ್ಲಿಯ ವಾಚನಾಲಯದಲ್ಲಿ ಕುಳಿತು, ಸಾಧ್ಯವಿದ್ದಷ್ಟು ಅಬ್ರಾಹಮ್ ಲಿಂಕನ್ ಮತ್ತು ಈಗಿನ ಅಧ್ಯಕ್ಷ ಬರಾಕ್ ಓಬಾಮಾ ಅವರ ಬಗ್ಗೆ ಮತ್ತು ಅವರು ಬರೆದ ಪುಸ್ತಕ, ಪುಸ್ತಿಕೆಗಳನ್ನು ಓದಿದ್ದು. ಲಿಂಕನ್ ಯುಗಪುರುಷರು. ಓಬಾಮಾ ಅವರ ಭಾಷಣಕ್ಕೂ ಹೋಗಿದ್ದೆ. ಇತಿಹಾಸ ನಿರ್ಮಿಸುವ ಶಕ್ತಿ ಅವರಿಗಿದೆ. ಮನುಷ್ಯ ಅತ್ಯಂತ ಪ್ರಾಮಾಣಿಕ ಎಂದು ಅನಿಸಿತು. ಕಾಲವೇ ನಿರ್ಧರಿಸುವದು.

sunaath said...

ಕಟ್ಟಿಯವರೆ,
ಮತ್ತೆ ನಿಮ್ಮ ಭೆಟ್ಟಿಯಾಗುತ್ತಿರುವದು ಸಂತೋಷದ ವಿಷಯ.
ಓಬಾಮಾನಿಂದಾಗಿ ಅಮೇರಿಕೆಯ ವಿದೇಶ ನೀತಿ ಸುಧಾರಿಸುವದು ಎಂದು ಹಾರೈಸೋಣ.

guruve said...

ನಿಮ್ಮ ವಾದಕ್ಕೆ ನನ್ನ ಸಹಮತವಿದೆ. ಸಾರ್ವಜನಿಕ ಆಸ್ತಿಗೆ ಸಂಬದ್ಧಪಟ್ಟದ್ದಾದ್ದರಿಂದ ನಿಮ್ಮ ವಾದ ಬಹಳ ಸೂಕ್ತ.
ಮನುಷ್ಯ ಜಾಗತಿಕವಾಗಿ ಎಷ್ಟೇ ಬೆಳೆದರೂ, ಪ್ರಾದೇಶಿಕತೆ, ಅದನ್ನು ಪ್ರೀತಿಸುವ ಗುಣ ರಕ್ತದಲ್ಲಿರುತ್ತದೆ. ಇದನ್ನೇ ನಾವು ಅಭಿಮಾನ ಎನ್ನುವುದು. ಕೆಲವರ ದೃಷ್ಟಿ ವಕ್ರ, ಅವರು ಎಲ್ಲದರಲ್ಲೂ ಹುಳುಕು ಕಂಡು ಹಿಡಿಯುವ ಪ್ರಯತ್ನ ಮಾಡೂತ್ತಾರೆ.

sunaath said...

ಗುರುವೆ,
ಇದು ಸರಿಯಾದ ಮಾತು. ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಮೆ ಸ್ಥಾಪನೆಯ ಅಧಿಕಾರ ಯಾರಿಗಿದೆ?

Anonymous said...

ನೀವು ನಮ್ಮ ಬೇಂದ್ರೆಯವರನ್ನು ಮರೆತೇ ಬಿಟ್ಟಿದ್ದೀರಲ್ಲ ?

sunaath said...

ಕಟ್ಟಿಯವರೆ,
ಮರೆಯಬಹುದೆ ಆ
ಹಿರಿಯ ಚೇತನವನ್ನು?
ಆದರೆ, ಸದ್ಯಕ್ಕೆ to the background!

Anonymous said...

ಶಾಂತವಾಗಿದ್ದ ಊರಿನ ತಲೆಕೆಡಿಸುವ ಕೆಲಸ ಮಾಡುವ ಚಿತ್ರೀಕರಣ ತಂಡಕ್ಕೆ ಅನ್ನಬೇಕು.

ಯಾವ ಟೆರಿರಿಸ್ಟ್ ಗಿಂತಲೂ ಇವರು ಕಡಿಮೆ ಅನ್ನಿಸುವುದಿಲ್ಲ.

sunaath said...

ರಂಜಿತ,
You are absolutely right!

ಮನಸು said...

ಸುನಾಥ್ ಸರ್,
ನಿಮ್ಮ ಬ್ಲಾಗ್ಗೆ ಬಂದಾಗೆಲ್ಲ ನಾನು ಕಾಮೆಂಟ್ ಹಾಕಲು ಸಾಧ್ಯವಾಗಲೇ ಇಲ್ಲ... ನಿಮ್ಮ ಲೇಖನಗಳು ಬಹಳ ವಾಸ್ತವತೆಯನ್ನು ಬೀರುತ್ತೆ... ತುಂಬಾ ಇಷ್ಟ ಕೂಡ ಆಗಿದೆ.. ನಿಮ್ಮ ಬರವಣಿಗೆ ಶೈಲಿ ಹಿಡಿಸಿತು..
ಇನ್ನು ಈ ಲೇಖನಿ ಬಗ್ಗೆ ಹೇಳಬೇಕೆಂದರೆ ಹಿತ್ತಲ ಗಿಡ ಎಂದಿಗೂ ಮದ್ದಲ್ಲ... ದೂರದ ಬೆಟ್ಟ ನುಣ್ಣಗೆ ಕಾಣುತ್ತೆ ನಮಗೆ.....ನಮ್ಮಂತ ತಿಳಿದವರಿಂದಲೇ ಬದಲಾವಣೆ ನಡೆಯಲಿ ಏನು ಹೇಳುತೀರಿ... ನಮ್ಮ ಹತ್ತಿರ ಇರೋ ಪ್ರಥಿಬೇಗಳನ್ನ ಗುರುತಿಸಿ ಅವರ ಪ್ರತಿಬೇನ ಪೂಜಿಸೋಣ..
ವಂದನೆಗಳು..
ನಗಿಸೋ... ಮನಸು (ನಗಿಸು,ಮನಸು ಎರಡು ಬ್ಲಾಗಿನ ಪರವಾಗಿ ಈ ನನ್ನ ಕಾಮೆಂಟ್)

sunaath said...

ಮನಸು,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಪ್ರತಿಕ್ರಿಯೆ ನೀಡಿದರೆ,
ನಾನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ ದಯವಿಟ್ಟು ಪ್ರತಿಕ್ರಿಯೆ ನೀಡುತ್ತ ಇರಿ.

ತೇಜಸ್ವಿನಿ ಹೆಗಡೆ said...

ಕಾಕಾ,

ಸರಿಯಾಗಿಯೇ ಪ್ರಶ್ನಿಸಿದ್ದೀರಿ. ಆದರೆ ಇದಕ್ಕೆ ಉತ್ತರಿಸುವವರು ಯಾರು? ಈಗಂತೂ ಎಲ್ಲವನ್ನೂ ಬಲ್ಲವರಾದ ಬುದ್ಧಿಜೀವಿಗಳು ಹೇಳುವುದೇ ನಿತ್ಯ ಸತ್ಯ! ಇನ್ನು ಕೆಲವರಂತೂ(ಒಂದು ಬ್ಲಾಗಿನಲ್ಲಿ) ಚಾಪ್ಲಿನ್‌ ಪ್ರತಿಮೆಯನ್ನು ಮುಟ್ಟಲು ಈ ದೇಶಕ್ಕೆ ಯೋಗ್ಯತೆಯೇ ಇಲ್ಲ ಎಂದೆಲ್ಲಾ ವೀರಾವೇಶದಿಂದ ಮಾತಾಡಿ ಹಿತ್ತಲಗಿಡ ಮದ್ದಲ್ಲವೇ ಅಲ್ಲ ಎಂದು ಸಾರಿದ್ದಾರೆ.(ಈ ಕೆಳಗಿದೆ ಲಿಂಕ್ ನೋಡಿ)

http://avadhi.wordpress.com/2009/03/17/%e0%b2%9a%e0%b2%be%e0%b2%aa%e0%b3%8d%e0%b2%b2%e0%b2%bf%e0%b2%a8%e0%b3%8d-%e0%b2%97%e0%b3%8a%e0%b2%82%e0%b2%a6%e0%b3%81-%e0%b2%aa%e0%b2%a4%e0%b3%8d%e0%b2%b0/

ಇಂತಹ ಹುಚ್ಚುಮನಸಿನ ಹತ್ತುಮುಖಗಳಿಗೆ ಏನೆನ್ನೋಣ?!

sunaath said...

ತೇಜಸ್ವಿನಿ,
ನೀನು ಸೂಚಿಸಿದ link ಓದಿದೆ.
It is very funny!

Anonymous said...

"ಸಾರ್ವಜನಿಕ ಭೂಮಿಯಲ್ಲಿ ಪ್ರತಿಮೆ ಸ್ಥಾಪಿಸುವದಾದರೆ, ಆ ನೆಲದ ಶ್ರೇಷ್ಠರಿಗೆ ಆದ್ಯತೆ ಸಿಗಬೇಕು. ಉದಾಹರಣೆಗೆ ಮೈಸೂರಿನಲ್ಲಿ ಶೇಕ್ಸಪಿಯರನ ಪ್ರತಿಮೆ ಸ್ಥಾಪಿಸುವ ಮೊದಲು ಕೈಲಾಸಂ ಪ್ರತಿಮೆಯ ಸ್ಥಾಪನೆಯಾಗಬೇಕು."

ಇದು ಪೂರ್ಣ ಸತ್ಯ... ಆಕಸ್ಮಿಕವಾಗಿ ನಿಮ್ಮನೆಗೆ ಬಂದೆ. ನಿಮ್ಮ ಅಕ್ಷರ ಮನೆ ಖುಷಿ ಕೊಟ್ಟಿತು...