Thursday, May 28, 2009

ಇವ ನಮ್ಮವ

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳವಳಿಯು ಕರ್ನಾಟಕದ ಇತಿಹಾಸದಲ್ಲಿಯೆ ಅತ್ಯಂತ ಮಹತ್ವದ ಸಾಂಸ್ಕೃತಿಕ ಘಟನೆಯಾಗಿದೆ. ಈ ಘಟನೆಯ ಕೇಂದ್ರವ್ಯಕ್ತಿಗಳಲ್ಲಿ ಬಸವಣ್ಣನವರು ಅಗ್ರಗಣ್ಯರು. ಬಸವಣ್ಣನವರ ವ್ಯಕ್ತಿತ್ವದಿಂದ ಬೆರಗುಗೊಂಡು, ಪ್ರಭಾವಿತರಾಗಿ ಅವರ ಬಗೆಗೆ ಸಾಹಿತ್ಯ ರಚಿಸಿದವರು ಅನೇಕರು. ಅವರ ಜೀವನಚರಿತ್ರೆಯನ್ನು ಕನ್ನಡದಲ್ಲಿ ರಚಿಸಿದವರಲ್ಲಿ ಹರಿಹರನು ಮೊದಲಿಗನು. ಆಧುನಿಕರಲ್ಲಿ, ದ. ರಾ. ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದರೂ ಸಹ ಅದು ಪ್ರಕಾಶನಗೊಳ್ಳಲಿಲ್ಲ. ಆಬಳಿಕ ಅ.ನ.ಕೃಷ್ಣರಾಯರು ‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ರಚಿಸಿದರೆ, ಪುಟ್ಟಸ್ವಾಮಿಗಳು ‘ಕಲ್ಯಾಣ ಕ್ರಾಂತಿ’ ಕಾದಂಬರಿಯನ್ನು ಬರೆದರು. ಶರಣ ಚಳುವಳಿಯನ್ನು ಸಾಮಾಜಿಕ ದೃಷ್ಟಿಕೋನದಿಂದ ಅರ್ಥೈಸಲು ಪ್ರಯತ್ನಿಸಿ ಲಂಕೇಶ ಹಾಗೂ ಶಿವಪ್ರಕಾಶ ಅವರು ‘ಸಂಕ್ರಾಂತಿ’ ಹಾಗು ’ಮಹಾಚೈತ್ರ’ ನಾಟಕಗಳನ್ನು ಬರೆದರು. ಗಿರೀಶ ಕಾರ್ನಾಡರು ತಾವು ರಚಿಸಿದ ನಾಟಕಕ್ಕೆ, ಬೇಂದ್ರೆಯವರ ಅನುಮತಿಯೊಂದಿಗೆ ’ತಲೆದಂಡ’ ಎನ್ನುವ ಹೆಸರನ್ನೇ ಬಳಸಿಕೊಂಡರು.

ಶ್ರೀ ವ್ಯಾಸ ದೇಶಪಾಂಡೆಯವರ “ಇವ ನಮ್ಮವ ” ನಾಟಕವು ಈ ಸರಣಿಯಲ್ಲಿಯೆ ಇತ್ತೀಚಿನ ಆದರೆ ಅತ್ಯಂತ ಭಿನ್ನವಾದ ನಾಟಕ. ೨೦೦೬ನೆಯ ಇಸವಿಯಲ್ಲಿ ರಚಿತವಾದ ಈ ನಾಟಕವು ಈವರೆಗೆ ಅನೇಕ ರಂಗಪ್ರಯೋಗಗಳನ್ನೂ ಕಂಡಿದೆ.

“ಇವ ನಮ್ಮವ ” ನಾಟಕವು ಕನ್ನಮಾರಿ ಎನ್ನುವ ಕಳ್ಳನೊಬ್ಬನು ಬಸವಣ್ಣನ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿ, ಸಿಕ್ಕಿಬಿದ್ದು, ಆ ಬಳಿಕ ಪರಿವರ್ತನೆಗೊಂಡು ಶರಣನಾದವನ ಕತೆಯನ್ನು ಆಧರಿಸಿದೆ. ಆದರೆ ಇದಿಷ್ಟೇ ಕತೆಯ ಮೂಲಕ ಲೇಖಕರು ಆ ಕಾಲದ ಸಾಮಾಜಿಕ, ಆರ್ಥಿಕ ಹಾಗು ರಾಜಕೀಯ ವಿಶ್ಲೇಷಣೆಯನ್ನು ಸಮಗ್ರವಾಗಿ ಮಾಡಿದ್ದಾರೆ. ಇದಲ್ಲದೆ ಆ ಕಾಲದ ಜನಸಾಮಾನ್ಯರ, ಶರಣಸಂಕುಲದ, ದುಡ್ಡುಳ್ಳವರ ಹಾಗೂ ಆಡಳಿತವರ್ಗದ ಅರ್ಥಪೂರ್ಣ ವಿಶ್ಲೇಷಣೆಯೂ ಇಲ್ಲಿದೆ. (ಆ ವಿಶ್ಲೇಷಣೆಯು ಇಂದಿಗೂ ಹಾಗೂ ಎಂದೆಂದಿಗೂ ನಮ್ಮೆಲ್ಲ ಸಮಾಜಗಳಿಗೆ ಅನ್ವಯಿಸುವಂತಿದೆ!)

ನಾಟಕದ ಪಾತ್ರಗಳು:
ಕನ್ನಮಾರಿ:
ನಾಟಕವನ್ನು ಮೊದಲಿನಿಂದ ಕೊನೆಯವರೆಗೂ ವ್ಯಾಪಿಸಿಕೊಂಡ ಕನ್ನಮಾರಿಯು ಈ ನಾಟಕದ ಮಹತ್ವದ ಪಾತ್ರ. ಆದರೂ ಆತ ನಾಟಕದ ನಾಯಕನಲ್ಲ. ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾಟಕದ ಪ್ರತಿಯೊಂದು ಚಿಕ್ಕ ಪಾತ್ರವೂ ಇಲ್ಲಿ ಮಹತ್ವದ ಪಾತ್ರವೇ. ಆದರೆ ನಾಟಕದ ನಾಯಕಪಟ್ಟ ಲಭ್ಯವಾಗುವದು ಬಸವಣ್ಣನಿಗೇ.

ಈವರೆಗೆ, ಕನ್ನಮಾರಿಯು ರಚಿಸಿದ ಮೂರು ವಚನಗಳು ಲಭ್ಯವಾಗಿವೆ. ಆತನ ಎರಡು ವಚನಗಳನ್ನು ಲೇಖಕರು ಈ ನಾಟಕದಲ್ಲಿ ಬಳಸಿಕೊಂಡಿದ್ದಾರೆ. ನಾಟಕದ ಆರಂಭದಲ್ಲಿಯೇ ಕನ್ನಮಾರಿಯು ತನ್ನ ಬಂಟರೊಡನೆ ರಂಗಪ್ರವೇಶ ಮಾಡುತ್ತ, ತನ್ನ ಕನ್ನಗಾರಿಕೆಯನ್ನು ಸಮರ್ಥಿಸುವ ತರ್ಕವನ್ನು ಪ್ರೇಕ್ಷಕಕರ ಎದುರಿಗೆ ಸಾರುತ್ತಾನೆ. ಬಸವಣ್ಣನವರು ಒಂದು ಧ್ರುವವಾದರೆ, ಕನ್ನಮಾರಿಯು ವಿರುದ್ಧ ಧ್ರುವ. ಕನ್ನಮಾರಿಯ ವಿಚಾರ ಹಾಗೂ ತರ್ಕಗಳನ್ನು ಎದುರಿಸುವದು ಸರಳವಲ್ಲ. ಕಲ್ಯಾಣರಾಜ್ಯವನ್ನೇ ಕಳ್ಳರ ರಾಜ್ಯವೆಂದು ಕರೆಯುತ್ತಾನೀತ.
ರಾಜ, ಆತನ ಅಧಿಕಾರಿಗಳು, ಸಮಾಜದ ಶ್ರೇಷ್ಠಿಗಳು ಇವರೆಲ್ಲ ಹಗಲುಗಳ್ಳರು, ಬಲುಗಳ್ಳರು ಎನ್ನುವದು ಇವನ ಅಭಿಪ್ರಾಯ. ಇವರೆಲ್ಲರೂ ದುಡಿಯುವ ಬಡವರನ್ನು ಶೋಷಿಸುತ್ತಾರೆ. ತಾನು ಉಳ್ಳವರ ಸಂಪತ್ತನ್ನು ಇಲ್ಲದವರಲ್ಲಿ ಹಂಚುತ್ತೇನೆ ಎನ್ನುವದು ಇವನ ಸಮರ್ಥನೆ!
ಸಮಾಜದ ವಿವಿಧ ಸ್ತರಗಳ ಜನತೆಯೊಡನೆ ಈತ ಮಾಡುವ ಸಂಭಾಷಣೆ ಹಾಗೂ ಮಂಡಿಸುವ ತರ್ಕಗಳ ಮೂಲಕ ಈತನ ವ್ಯಕ್ತಿತ್ವದ ಅನಾವರಣವಾಗುತ್ತದೆ. ಅನುಭವ ಮಂಟಪದಲ್ಲಿಯ ಶರಣರಿಗೇ ಎದುರಾಡಬಲ್ಲ ಧಾರ್ಷ್ಟ್ಯ ಈತನದು.
ಕನ್ನಮಾರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಸವಣ್ಣನವರ ವ್ಯಕ್ತಿತ್ವವು ಬೆಳಗಿದೆ. ಕನ್ನಮಾರಿಗೆ ಗೊತ್ತಿರುವ ತರ್ಕ ಹಾಗೂ ವಿಚಾರವೆಲ್ಲ ಬಸವಣ್ಣನವರಿಗೂ ಗೊತ್ತಿದೆ. ಅವರೂ ಸಹ ಕಲ್ಯಾಣಪ್ರಭುತ್ವವನ್ನು ಕಳ್ಳರ ಪ್ರಭುತ್ವವೆಂದೇ ಕರೆಯುತ್ತಾರೆ. ಆದರೆ ಕೇವಲ ತರ್ಕದಿಂದ ಸಮಾಜವನ್ನು ಸುಧಾರಿಸಲು ಸಾಧ್ಯವಿಲ್ಲವೆನ್ನುವದು ಅವರಿಗೆ ಗೊತ್ತಿದೆ.

ನಾಟಕದ ಆರಂಭದಲ್ಲಿ, ಮೊದಲಿಗೆ ಕನ್ನಮಾರಿಯ ಕೈಯಲ್ಲಿ ಸಿಗುವವರು ಭೋಳೇ ಜಂಗಮರು. ಅವರ ಭೋಳೇತನವನ್ನು ಹಂಗಿಸಿ ಈತ ಮಾತನಾಡುತ್ತಾನೆ. ಅವರೋ ಬಸವಣ್ಣನನ್ನು ಪವಾಡಪುರುಷನೆಂದು ಭಾವಿಸಿದವರು. ವಚನಗಳನ್ನು ಸಾರುವದರ ಮೂಲಕ ಕೆಡುಕರನ್ನು ಸುಧಾರಿಸಬಹುದೆನ್ನುವ ನಂಬಿಕೆ ಇಟ್ಟುಕೊಂಡವರು. ಜಂಗಮವೃತ್ತಿಯನ್ನೇ ಹೊಟ್ಟೆಪಾಡಿನ ಕಾಯಕ ಮಾಡಿಕೊಂಡವರು! ಹಾಗೂ ಪ್ರಸಂಗ ಬಂದಾಗ ಪ್ರಭುತ್ವಕ್ಕೆ ದಂಡನಮಸ್ಕಾರವನ್ನೂ ಹಾಕಬಲ್ಲವರು.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು, ಕನ್ನಮಾರಿಯು ಈ ಜಂಗಮರನ್ನೇ ಠಕ್ಕತನದಿಂದ ಕಟ್ಟಿಹಾಕಿ ಅವರೆಲ್ಲರ ವಸ್ತ್ರಭೂಷಣಗಳನ್ನು ಅಪಹರಿಸುವನು. ತಮ್ಮ ಸುರಕ್ಷತೆಯ ಉದ್ದೇಶದಿಂದ ಕನ್ನಮಾರಿ ಹಾಗೂ ಅವನ ಬಂಟರು ಶರಣರ ವೇಷದಲ್ಲಿ ಬಸವಣ್ಣನ ಮಹಾಮನೆಗೆ ತೆರಳುತ್ತಿರುವಾಗ ಅವರಿಗೆ ಭೆಟ್ಟಿಯಾಗುವಳು ಒಬ್ಬ ಹುಲ್ಲು ಹೊರುವ ಹೆಣ್ಣುಮಗಳು. ಸಮಾಜದ ಸಾಂಪ್ರದಾಯಕ ವ್ಯವಸ್ಥೆಯಲ್ಲಿ ತನ್ನ ಕೆಳಸ್ತರವನ್ನು ಒಪ್ಪಿಕೊಂಡು ಬಾಳುತ್ತಿರುವ ಈಕೆ ಬಸವಣ್ಣ ತನ್ನನ್ನು ಮೇಲೆತ್ತಿದ ರೀತಿಯನ್ನು ಕನ್ನಮಾರಿಗೆ ಹೇಳಿದಾಗ, ಆತ ಇವರೆಲ್ಲ ಮರಳು ಜನ ಎಂದು ಅಪಹಾಸ್ಯ ಮಾಡುತ್ತಾನೆ.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು ಕನ್ನಮಾರಿ ಬಸವಣ್ಣನ ಮಹಾಮನೆಗೇ ಬರುತ್ತಾನೆ. ಅಲ್ಲಿ ಅನುಭವ ಮಂಟಪದಲ್ಲಿ ಶರಣರು ದೈನಂದಿನ ಚರ್ಚೆಯನ್ನು ನಡೆಸಿರುತ್ತಾರೆ. ಕನ್ನಮಾರಿ ತನ್ನ ತಾರ್ಕಿಕ ಅಹಂಭಾವದಲ್ಲಿ, ಅವರಿಗೆ ಉದ್ಧಟ ಪ್ರಶ್ನೆಗಳನ್ನು ಕೇಳುತ್ತಾನೆ.
ಇದಿಷ್ಟು ಕನ್ನಮಾರಿಯ ಮೊದಲ ವ್ಯಕ್ತಿತ್ವ.
ಇಂತಹ ಕನ್ನಮಾರಿ ಶರಣನಾಗಿ ಪರಿವರ್ತಿತನಾಗುವದು ರೋಚಕವಾದ ಘಟನೆ.
ಕನ್ನಮಾರಿಯ ಮಾತುಗಳಲ್ಲಿಯೇ ಹೇಳುವದಾದರೆ :-
“ ಕಳ್ಳರು ಯಾರು, ಕಳ್ಳರ ಕಳ್ಳರು ಯಾರು, ಬಲುಗಳ್ಳರು ಯಾರಂತ ನಾನು ನಿಮ್ಮ ಮುಂದೆ ಒಗಟು ಇಟ್ಟೆ. ಬಸವೇಶ್ವರ, ಇದು ಕಳ್ಳರ ನಗರ. ಕಳ್ಳರ ನಗರದಲ್ಲಿ ನಾನು ಕಳ್ಳರ ಕಳ್ಳನಾಗಿದ್ದೆ. ಕದೀಲಿಕ್ಕೆ ಬಂದ ನನ್ನನ್ನು ನೀವು ನೆಟ್ಟನೇ ನುಂಗಿ ನಿಮ್ಮ ಹೊಟ್ಟೆಯೊಳಗೆ ಅರಗಿಸಿಕೊಂಡು ಬಿಟ್ರಿ. ನೀವೇ ಬಲುಗಳ್ಳರು!..”

ಬಿಜ್ಜಳ:
ಬಿಜ್ಜಳನು ಕಲ್ಯಾಣರಾಜ್ಯದ ಪ್ರಭು. ಬಸವಣ್ಣನ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಾಗಿ ರಾಜ್ಯಾಡಳಿತ ಸುಸೂತ್ರವಾಗಿ ನಡೆಯುತ್ತಿರುವದರಿಂದ ಈತನಿಗೆ ಬಸವಣ್ಣ ಬೇಕು. ಬಸವಣ್ಣ ರಾಜ್ಯದ ಮಂತ್ರಿಯಾಗಿ ಉಳಿಯಲೇ ಬೇಕು. ಅಲ್ಲದೆ ಬಸವಣ್ಣನನ್ನು ಆಡಳಿತದಲ್ಲಿ ಬಲವಂತವಾಗಿ ಇಟ್ಟುಕೊಳ್ಳಲು ಈತನಿಗೆ ಮತ್ತೊಂದು ಕಾರಣವಿದೆ. ಬಸವಣ್ಣನಿಗೇ ಬೇಕಾಗಿರದಿದ್ದರೂ ಸಹ ಆತ ಪ್ರಭುತ್ವಕ್ಕೆ ಹೊರತಾದ ಮತ್ತೊಂದು ಶಕ್ತಿಕೇಂದ್ರವಾಗಿರುವದನ್ನು ಬಿಜ್ಜಳ ಬಲ್ಲ. ಈ ಶಕ್ತಿಕೇಂದ್ರವನ್ನು ಜಾಣತನದಿಂದ ಸಂಭಾಳಿಸುವದು ಪ್ರಭುತ್ವದ ಹಿತದ ದೃಷ್ಟಿಯಿಂದ ಅವಶ್ಯವೆಂದು ಈತ ಅರಿತಿದ್ದಾನೆ.
ಬಸವಣ್ಣನ ಬಗೆಗೆ ಬಿಜ್ಜಳ ಹೇಳುವ ಮಾತುಗಳು ಹೀಗಿವೆ:
“…ಮಾರಾಯಾ ನಿನಗ ಯಾವ ಪದವಿನೂ ಬೇಕಾಗಿಲ್ಲ. ಇದು ನನಗ ಗೊತ್ತೈತಿ. ನಿನಗ ಪದವಿ ಯಾಕ ಬೇಕು? ನೀ ಎಲ್ಲಿ ಹೋಗಿ ನಿಲ್ಲತೀ ಅಲ್ಲಿ ದೀಪ ಬೆಳಗತಾರು; ಎಲ್ಲಿ ಹೋಗಿ ಕುಂದರತೀ ಅಲ್ಲಿ ಕಾಯಿ ಒಡೀತಾರು; ನೀ ಕಾಡು ಹೊಕ್ಕೊಂಡು ಮರದ ಕೆಳಗ ಕುಂತರೂ ಶರಣರ ಸಂತಿ ಅಲ್ಲೇ ನಡೀತೈತಿ….”

ಬಸವಣ್ಣನನ್ನು ಮನಸಾ ಗೌರವಿಸುತ್ತಿದ್ದರೂ ಸಹ ಬಿಜ್ಜಳನು ಪ್ರಭುತ್ವಕ್ಕೆ ಅವಶ್ಯವಾದ ಕೋರೆಹಲ್ಲು ಹಾಗೂ ಹುಲಿಯುಗುರುಗಳನ್ನು ಬೆಳೆಸಿಕೊಂಡವನೇ. ವ್ಯವಸ್ಥೆಯ ರಕ್ಷಣೆಯ ಉದ್ದೇಶ ಹಾಗೂ ಅದಕ್ಕೆ ಬೇಕಾದ ಕ್ರೌರ್ಯ ಇವು ಬಿಜ್ಜಳನ ವ್ಯಕ್ತಿತ್ವದ ಭಾಗಗಳಾಗಿವೆ.
ತನ್ನ ದಂಡನಾಯಕ ಮಂಚಣ್ಣನಾಯಕನಿಗೆ ಬಿಜ್ಜಳನ್ನು ಕೊಡುತ್ತಿರುವ ಆದೇಶವನ್ನು ನೋಡಿರಿ:
“…ಮಧ್ಯರಾತ್ರಿಗೆ ಸರಿಯಾಗಿ ನಾಕೂ ಕಡೆಯಿಂದ ಮಹಾಮನಿಗೆ ಮಿಂಚು ಹೊಡಧಾಂಗ ಮುತ್ತಿಗೆ ಹಾಕಬೇಕು……ಹೊರಗಿನ ಸುತ್ತಿನ್ಯಾಗ ಬ್ಯಾಟಿ ನಾಯಿಗಳನ್ನು ಬಿಡಿರಿ, ಬಿಲ್ಲಿನವರನ್ನು ಮರದ ಮ್ಯಾಲ ಏರಸರಿ. ಎರಡು ಕಾಲು ಓಡ್ತಿರೋದು ಕಂಡ್ರ ಸಾಕು, ಬಾಣ ಹೊಡೆದು ಭೂಮಿಗೆ ಬೀಳಿಸತಕ್ಕದ್ದೆಂದು ಕಟ್ಟಪ್ಪಣೆ ಮಾಡ್ರಿ….”

ಶರಣರು:
ಶರಣರಲ್ಲಿ ಭೋಳೇ ಜನರು ಇದ್ದಂತಯೇ, ಬೌದ್ಧಿಕವಾಗಿ ಹಾಗು ಆಧ್ಯಾತ್ಮಿಕವಾಗಿ ಎತ್ತರದ ಮಟ್ಟವನ್ನು ಏರಿದವರೂ ಇದ್ದರು. ಅನುಭವ ಮಂಟಪದ ನಿರ್ವಾಹಕರೆಂದು ಇವರನ್ನು ಕರೆಯಬಹುದು. ಬಸವಣ್ಣನ ಹೊರತಾಗಿಯೂ, ಶರಣಚಳುವಳಿಯನ್ನು ಸಾರ್ಥಕಗೊಳಿಸಬಲ್ಲ ಸಾಮರ್ಥ್ಯ ಉಳ್ಳವರು. ಶರಣನ ವೇಷದಲ್ಲಿಯ ಕನ್ನಮಾರಿಯ ಉದ್ದಟತನದಿಂದ ಇವರಲ್ಲಿ ಕೆಲವರು ವಿಚಲಿತರಾದರೆ, ಮುಂದಾಳುಗಳು ಮಾತ್ರ ಎಲ್ಲರನ್ನೂ ಶಾಂತ ಮಾಡಬಲ್ಲವರು.

ಬಸವಣ್ಣ:
ಈಗಾಗಲೇ ರಚಿತವಾದ ಸಾಹಿತ್ಯದಲ್ಲಿ ಬಸವಣ್ಣನು ರಾಜ್ಯದ ಉನ್ನತ ಅಧಿಕಾರಿಯಂತೆ ಕಾಣುವ ವ್ಯಕ್ತಿತ್ವಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ನಾಟಕಗಳಲ್ಲಿಯೂ ಸಹ ಆತ ಮಂತ್ರಿಯ ಪೋಷಾಕನ್ನು ಧರಿಸಿ ರಂಗದ ಮೇಲೆ ಬರುವದೇ ಜನಪ್ರಿಯವಾಗಿದೆ. ಆದರೆ ಈ ನಾಟಕದಲ್ಲಿ ಬಸವಣ್ಣನು ಸಾಮಾನ್ಯರೊಡನೆ ಸಮಾನನಾಗಿ ಇರಬಯಸುವ ವ್ಯಕ್ತಿ.

ನಾಟಕದ ಮೊದಲಲ್ಲಿಯೆ ಆತ ಕೆಳ ಸ್ತರದ ಹೆಣ್ಣುಮಗಳೊಬ್ಬಳಿಗೆ ಹುಲ್ಲು ಹೊರಿಸುವದನ್ನು, ಅವಳೊಡನೆ ಆತ್ಮೀಯವಾಗಿ ಸಂಭಾಷಿಸುವದನ್ನು ಹಾಗೂ ಅವಳಿಗೆ ಲಿಂಗಧಾರಣೆ ಮಾಡುವದನ್ನು flashbackನಲ್ಲಿ ತೋರಿಸಲಾಗಿದೆ.

ಆನಂತರ ಬಸವಣ್ಣನ ಉಲ್ಲೇಖವಾಗುವದು ಬಿಜ್ಜಳನ ಮಾತುಗಳಲ್ಲಿ:
“ಆತ ಮೊದಲೇ ಮಹಾ ತಲೆತಿರುಕ. …………..ಅಲ್ಲಾ ಮಂತ್ರಿಪದವಿ ಬ್ಯಾಡಾ ಅನ್ನೋ ತಲೆತಿರುಕ ಮತ್ತೊಬ್ಬನದಾನೇನು ಈ ದೇಶದೊಳಗ?”

ಹುಲ್ಲು ಹೊರುವ ಹೆಣ್ಣುಮಗಳೊಡನೆ ಆತ್ಮೀಯವಾಗಿ ಮಾತನಾಡುವಾಗ, ಕನ್ನಮಾರಿಯ ಪರವಾಗಿ ಶರಣರೊಡನೆ ಮಾತನಾಡುವಾಗ, ಬಿಜ್ಜಳನ ದಂಡನಾಯಕನು ತಂದ ಆದೇಶವನ್ನು ಧಿಕ್ಕರಿಸುವಾಗ, ತನ್ನ ಹೆಂಡತಿಯ ಉಪಾಯಕ್ಕೆ ಅಸಮಾಧಾನ ವ್ಯಕ್ತಪಡಿಸುವಾಗ ಬಸವಣ್ಣನ ವ್ಯಕ್ತಿತ್ವ ಪ್ರೇಕ್ಷಕರೆದುರಿಗೆ ಹೊಳೆಯುತ್ತದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ಅಪೂರ್ಣ ವಚನವೊಂದರ ಕೊನೆಯ ಸಾಲನ್ನು ಆತ ತನ್ನ ಹೆಂಡತಿ ಗಂಗಾಂಬಿಕೆಗೆ ಪ್ರೀತಿಯಿಂದ ಪೂರ್ಣಗೊಳಿಸಿ ಹೇಳುವ ಸನ್ನಿವೇಶವು ಬಸವಣ್ಣನ ಆದರ್ಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ತೋರಿಸುತ್ತದೆ ಎನ್ನಬಹುದು.

ನಾಟಕದ ಕಥಾನಕ:
ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ. ಬಸವಣ್ಣನ ರಂಗಪ್ರವೇಶವಾಗುವದು ಸಂಜೆಯಲ್ಲಿ (flash back ಹೊರತುಪಡಿಸಿ), ಅಂದರೆ ನಾಟಕದ ಕೊನೆಯ ಭಾಗದಲ್ಲಿ.
ಅಲ್ಲಿಯವರೆಗೂ ಕನ್ನಮಾರಿ ಹಾಗೂ ಅವನನ್ನು ಹಿಡಿಯಲೆತ್ನಿಸುತ್ತಿರುವ ಬಿಜ್ಜಳನ ಸೈನಿಕರೇ ರಂಗವನ್ನು ವ್ಯಾಪಿಸಿದ್ದಾರೆ.
ರಂಗದ ಮೇಲೆ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಬಹುಜನರು ಪ್ರಭುತ್ವಕ್ಕೆ ಹೆದರುವ, ಪ್ರಭುತ್ವ ಎಸೆಯುವ ರೊಟ್ಟಿಯ ತುಣುಕುಗಳಿಗೆ ಆಸೆ ಪಡುವ ಜನತೆ. ಇವರು ಅನಾದಿ ಕಾಲದಿಂದಲೂ ಹೀಗೇ ಇದ್ದವರು. ಬಸವಣ್ಣನ ಕಾಲದಲ್ಲೂ ಹಾಗೇ ಇದ್ದರು. ಈಗಲೂ ಹಾಗೇ ಇದ್ದಾರೆ. ಅದರಂತೆಯೇ ರಂಗದ ಮೇಲೆ ಕಾಣಿಸಿಕೊಳ್ಳುವ ಶ್ರೇಷ್ಠಿಗಳು ವ್ಯವಸ್ಥೆಯ ಮುಂದುವರಿಕೆಯಲ್ಲಿಯೇ ಆಸಕ್ತಿ ಉಳ್ಳವರು.

ಕನ್ನಮಾರಿಯು ಅನುಭವ ಮಂಟಪದಲ್ಲಿ ಶರಣರ ಜೊತೆಗೆ ಸೇರಿಕೊಂಡಿರುವದು ಬಿಜ್ಜಳನ ಗುಪ್ತಚಾರರಿಗೆ ಗೊತ್ತಾಗಲು ತಡವಾಗುವದಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಬಸವಣ್ಣನವರ ಮಹಾಮನೆಗೆ ಸೈನಿಕರು ಮುತ್ತಿಗೆ ಹಾಕುತ್ತಾರೆ. ಕನ್ನಮಾರಿ ತಮ್ಮೊಳಗೇ ಇದ್ದದ್ದು ಬಸವಣ್ಣನ ಹೆಂಡತಿ ಗಂಗಾಂಬಿಕೆಯ ಅರಿವಿಗೂ ಬಂದಿರುತ್ತದೆ. ಅವನನ್ನು ಹಿಡಿದು ಹಾಕಲು ಗಂಗಾಂಬಿಕೆ ಉಪಾಯವೊಂದನ್ನು ರೂಪಿಸುತ್ತಾಳೆ. ಬಂಗಾರದ ತನ್ನ ಒಡವೆಗಳನ್ನು ಗುಪ್ತವಾಗಿ ನೆಲವಿನಲ್ಲಿ ಇಟ್ಟಿರುವದಾಗಿ ಕನ್ನಮಾರಿಗೆ ನಂಬಿಕೆ ಬರುವಂತೆ ನಟಿಸುತ್ತಾಳೆ. ಕನ್ನಮಾರಿ ಹಾಗೂ ಅವನ ಬಂಟರು ಕಳ್ಳತನ ಮಾಡುತ್ತಿರುವಾಗ ಶರಣರ ಕೈಯಲ್ಲಿ ಸಿಕ್ಕು ಬೀಳುತ್ತಾರೆ.

ಇಲ್ಲಿಯವರೆಗೆ ಬಸವಣ್ಣ ಎಲ್ಲಿದ್ದ? ಗಂಗಾಂಬಿಕೆಯು ತನ್ನ ಉಪಾಯದ ಅಂಗವಾಗಿ ಬಂಗಾರದ ಒಡವೆಗಳನ್ನು ಧರಿಸಿರುತ್ತಾಳೆ. ತನ್ನ ಹೆಂಡತಿ ಬಂಗಾರ ಧರಿಸಿರುವದು ಬಸವಣ್ಣನಿಗೆ ಸಹ್ಯವಾಗುವದಿಲ್ಲ. ಆತ ವ್ಯಥಿತನಾಗಿ, ದಾಸೋಹದಲ್ಲಿರುವದನ್ನು ಬಿಟ್ಟು ತನ್ನ ಅರುಹಿನ ಮನೆಗೆ ಹೋಗಿ ಬಿಟ್ಟಿರುತ್ತಾನೆ. ಇದು ಗಂಗಾಂಬಿಕೆಗೆ ಅರ್ಥವಾಗುವದಿಲ್ಲ. ಬೆಳಿಗ್ಗೆ ಒಂದು ವಚನವನ್ನು ಅರ್ಧ ರಚನೆ ಮಾಡಿದವರು ಎಲ್ಲಿ ಹೋದರು? ‘ನೀರಿಗೆ ನೈದಿಲೆಯೆ ಶೃಂಗಾರ…..’ ಎಂದು ಅರ್ಧ ವಚನ ಹೇಳಿದವರು ಆ ವಚನ ಪೂರ್ತಿಗೊಳಿಸಲು ಹೋದರೆ? ಎಂದುಕೊಳ್ಳುತ್ತಾಳೆ. ಆದರೆ ಬಸವಣ್ಣನನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಾಗವ್ವೆ ಮಾತ್ರ ‘ಶಟಗೊಂಡವರ ಹಂಗ ದುಡುದುಡು ಹೋದಾ…’ ಎನ್ನುತ್ತಾಳೆ.

ಬಸವಣ್ಣನನ್ನು ಅರುಹಿನ ಮನೆಯಿಂದ ಕರೆದುಕೊಂಡು ಬಂದಾಗ ಕನ್ನಮಾರಿಯನ್ನು ಹಿಡಿದದ್ದಕ್ಕಾಗಿ ಶರಣರೆಲ್ಲ ಸಂತೋಷದಲ್ಲಿ ಮುಳುಗಿದ್ದರು. ಮಹಾಕಳ್ಳ ಕನ್ನಮಾರಿಯನ್ನು ರಾಜನಿಗೆ ಒಪ್ಪಿಸಬೇಕು ಎನ್ನುವದೇ ಎಲ್ಲ ಶರಣರ ಅಭಿಪ್ರಾಯ. ಬಸವಣ್ಣ ಅದಕ್ಕೆ ಒಪ್ಪುವದಿಲ್ಲ.

ಕನ್ನಮಾರಿಯ ತರ್ಕವನ್ನಾಗಲಿ, ಶರಣರ ತರ್ಕವನ್ನಾಗಲಿ , ಪ್ರಭುತ್ವದ ತರ್ಕವನ್ನಾಗಲಿ ಬಸವಣ್ಣನು ಒಪ್ಪುವವನಲ್ಲ. ಅಷ್ಟೇ ಏಕೆ, ಗಂಗಾಂಬಿಕೆಯ ಸ್ತ್ರೀಧನದ ತರ್ಕವನ್ನೂ ಆತ ಕಡೆಗಣಿಸುತ್ತಾನೆ. ಕನ್ನಮಾರಿಗೆ ಆಶ್ರಯ ಕೊಟ್ಟರೆ ಬಸವಣ್ಣನೂ ಅಪರಾಧಿಯೇ ಆಗುತ್ತಾನೆ ಎನ್ನುವ ಮಾತಿಗೂ ಆತ ಬೆಲೆ ಕೊಡುವದಿಲ್ಲ.ಬಿಜ್ಜಳನ ಸೇನಾಪತಿಗೆ ಬಸವಣ್ಣನು ಹೇಳುವ ಮಾತುಗಳಿವು:
"ದೇಶಕ್ಕೊಂದು ಶಾಸನ ಐತಿ ನಿಜ.ಆದರ ಶಾಸನಕ್ಕಂಜಿ ನನ್ನ ಅಂತರಾತ್ಮ ಒಪ್ಪದಿರುವಂಥಾ ಯಾವ ಕೆಲಸವನ್ನೂ ನಾನು ಮಾಡಲಾರೆ."

ಕನ್ನಮಾರಿಯ ಜೀವ ಉಳಿಸಲು ಆತನನ್ನು ತನ್ನ ಅಂದರೆ ಮಂತ್ರಿಯ ಮುತ್ತಿನ ಪಲ್ಲಕ್ಕಿಯಲ್ಲಿ, ಮಂತ್ರಿಯ ಕಿರೀಟ ತೊಡಸಿ, ಗಂಗಾಂಬಿಕೆಯ ಎಲ್ಲ ಒಡವೆಗಳನ್ನೂ ಆತನಿಗೇ ಕೊಟ್ಟು ಆತನನ್ನು ಪಾರು ಮಾಡುತ್ತಾನೆ.
ಆ ಸಮಯದಲ್ಲಿ ಬಸವಣ್ಣನು ಅರ್ಧ ರಚಿಸಿದ ತನ್ನ ವಚನವನ್ನು ಪೂರ್ತಿಗೊಳಿಸಿ ಗಂಗಾಂಬಿಕೆಗೆ ಹೇಳುವ ಭಾಗವು ನಾಟಕದ ಉತ್ತುಂಗಭಾಗವೆನ್ನಬಹುದು.

ಬಸವಣ್ಣನ ತರ್ಕವು ಬುದ್ಧಿಯಿಂದ ಬಂದದ್ದಲ್ಲ, ಅದು ಆತನ ಹೃದಯದಿಂದ ಹೊಮ್ಮಿದ್ದು ಎನ್ನುವದು ಇತರರಿಗೆಲ್ಲ ಆಗ ಅರ್ಥವಾಗುತ್ತದೆ. ಬಸವಣ್ಣ ಬಯಸುವ ಸಮಾಜದ ಆದರ್ಶವೂ ಆ ವಚನದಿಂದಲೇ ಅರಿವಾಗುತ್ತದೆ.

ನಾಟಕದ ಕೊನೆಯ ದೃಶ್ಯದಲ್ಲಿ ಬಿಜ್ಜಳನ ದಂಡನಾಯಕನು ಬಸವಣ್ಣನ ಸೆರೆ ಹಿಡಿಯಲು ಸನ್ನದ್ಧನಾಗಿ ಬರುತ್ತಾನೆ. ಅದೇ ಸಮಯದಲ್ಲಿ ಬಿಜ್ಜಳನು ಕನ್ನಮಾರಿಯೊಂದಿಗೆ ಅಲ್ಲಿಗೆ ಬರುತ್ತಾನೆ. ಯಾಕೆಂದರೆ ಕನ್ನಮಾರಿಯು ತನ್ನ ಜೀವ ಉಳಿಸಿದ ಬಸವಣ್ಣನ ಜೀವವು ಅಪಾಯದಲ್ಲಿರುವದನ್ನು ಅರಿತುಕೊಂಡು, ತಾನೇ ಸ್ವತಃ ಬಿಜ್ಜಳನ ಅರಮನೆಗೆ ತೆರಳಿ, ಅಲ್ಲಿ ತನ್ನನ್ನೇ ಒಪ್ಪಿಸಿಕೊಂಡಿರುತ್ತಾನೆ.

ಕನ್ನಮಾರಿಯ ಬಿಡುಗಡೆಯಾಗುತ್ತದೆ ಹಾಗು ಆತನೂ ಸಹ ಶರಣಜೀವನಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ.
ಇದಿಷ್ಟು ನಾಟಕದ ಕಥಾನಕ.

ನಾಟಕದ ವೈಶಿಷ್ಟ್ಯಗಳು:
ಕೇವಲ ಕಳ್ಳನೊಬ್ಬನು ಶರಣನಾದ ಕತೆಯನ್ನು ಹೇಳುವ ನಾಟಕವಲ್ಲವಿದು. ಕಳ್ಳನನ್ನು ಶರಣನನ್ನಾಗಿ ಪರಿವರ್ತಿಸಿದ ಬಸವಣ್ಣನ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಮಾಡಿದ ಪ್ರಯತ್ನವು ಇಲ್ಲಿದೆ. ಬಸವಣ್ಣನ ವ್ಯಕ್ತಿತ್ವ ಎಂತಹದು?
ಅಂಗುಲಿಮಾಲಾನನ್ನು ಪರಿವರ್ತಿಸಿದ ಬುದ್ಧನ ವ್ಯಕ್ತಿತ್ವವೆ? ಅಥವಾ ಸಮಾಜಸುಧಾರಕನ ವ್ಯಕ್ತಿತ್ವವೆ?
ಬಸವಣ್ಣನ ಬಗೆಗೆ ಬರೆದ ಲೇಖಕರೆಲ್ಲ ಆತನನ್ನು ಅರಿತುಕೊಳ್ಳಲು ಪ್ರಯತ್ನಿಸಿ ಬರೆದವರೇ.

ವ್ಯಾಸ ದೇಶಪಾಂಡೆಯವರು ಇಲ್ಲಿ ಬಸವಣ್ಣನ ವ್ಯಕ್ತಿತ್ವವನ್ನು ಇತರ ಪಾತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದ್ದಾರೆ.
ಕನ್ನಮಾರಿ vs ಬಸವಣ್ಣ , ಬಿಜ್ಜಳ vs ಬಸವಣ್ಣ , ಶರಣರು vs ಬಸವಣ್ಣ , ಕೊನೆಗೆ ಗಂಗಾಂಬಿಕೆ vs ಬಸವಣ್ಣ.

ಜೊತೆಜೊತೆಗೇ ಆ ಸಮಯದ ಸಮಾಜದ ವ್ಯವಸ್ಥೆ, ದುಡಿವ ವರ್ಗದ ಶೋಷಣೆ, ಪ್ರಭುತ್ವದ ರಾಜಕೀಯ ಇವೆಲ್ಲ ನಾಟಕದಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಇಂತಹ ವ್ಯವಸ್ಥೆಗೆ ಒಂದು ಪ್ರತಿವ್ಯವಸ್ಥೆ ಇದೆಯೆ?
ಆಧುನಿಕ ಭಾರತದಲ್ಲಿ,ಗಾಂಧೀಜಿ, ವಿನೋಬಾ, ಜಯಪ್ರಕಾಶ ನಾರಾಯಣ ಇವರೆಲ್ಲ ಇದಕ್ಕಾಗಿ ಪ್ರಯತ್ನಿಸಿದವರೆಂದು ನಾವು ಬಲ್ಲೆವು.

ಇಲ್ಲಿ ಬರುವ ಕನ್ನಮಾರಿ ಹಳೆಯ ಕಾಲದ Robin Hood ಹಾಗೂ ಈ ಕಾಲದ ನಕ್ಸಲೀಯರನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಾನೆ ಎನ್ನಬಹುದಾದರೂ ಲೇಖಕರು ಇಂತಹ ಸುಳಿವುಗಳು ನುಸಳದಂತೆ ಪ್ರಯತ್ನಪೂರ್ವಕವಾಗಿ ನಾಟಕವನ್ನು ರಚಿಸಿದ್ದಾರೆ. ಅದರಂತೆಯೆ ಮಾರ್ಕ್ಸಿಸ್ಟ್ ಗುರುತುಗಳನ್ನೂ ಸಹ ಇಲ್ಲಿ ಸುಳಿಯಗೊಟ್ಟಿಲ್ಲ.
(ಕಮ್ಯುನಿಸ್ಟ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ಮಾರ್ಕ್ಸನನ್ನು ಬಸವಣ್ಣನಿಗೆ ಹೋಲಿಸುವದು ದೊಡ್ಡ ತಪ್ಪು. ಏಕೆಂದರೆ ಮಾರ್ಕ್ಸನು State Ownershipಅನ್ನು ಹೇಳುತ್ತಿದ್ದ ಹಾಗೂ ಆಧ್ಯಾತ್ಮವನ್ನು ತಿರಸ್ಕರಿಸಿದ್ದ.)
ಬಸವಣ್ಣನವರು ಮಾನವ ಘನತೆಯನ್ನು ಸಾಮಾಜಿಕ ಸಮಾನತೆಯನ್ನು, ಕಾಯಕದ ಮಹತ್ವವನ್ನು ಹಾಗೂ ಆಧ್ಯಾತ್ಮಿಕ ಅವಶ್ಯಕತೆಯನ್ನು ಜೀವಿಸಿ ತೋರಿಸಿದವರು. ಈ ಎಲ್ಲ ಅಂಶಗಳು ೫೩ ಪುಟಗಳ ಈ ಚಿಕ್ಕ ನಾಟಕದಲ್ಲಿ ಸಮರ್ಥವಾಗಿ ಬಂದಿವೆ.

ಎರಡನೆಯದಾಗಿ ಬಸವಣ್ಣನವರ ಈ ಆದರ್ಶಸಮಾಜದ ಅಂಗವ್ಯಕ್ತಿಗಳು ಯಾರು ಅನ್ನುವದನ್ನೂ ಸಹ ನಾಟಕವು ಸ್ಪಷ್ಟಪಡಿಸುತ್ತದೆ. ಶರಣಚಳವಳಿಯು ಕೇವಲ ಕೆಳಸ್ತರದವರ ಚಳವಳಿಯಲ್ಲ ಅಥವಾ ಕೇವಲ ಚಿಂತಕರ ಚಳವಳಿಯೂ ಅಲ್ಲ. ಇದೊಂದು ಸರ್ವಸಮನ್ವಯ ಚಳವಳಿ. ಈ ಆದರ್ಶ ಸಮಾಜಕ್ಕೆ ಯಾರೂ ಹೊರತಲ್ಲ. ಇದರಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಅದಕ್ಕೆಂದೇ ಈ ನಾಟಕದ ಶೀರ್ಷಿಕೆ: “ಇವ ನಮ್ಮವ”.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಐತಿಹಾಸಿಕ ನಾಟಕವೂ ಹೌದು ಹಾಗೂ ಸಾಮಾಜಿಕ ನಾಟಕವೂ ಹೌದು ಎನ್ನುವದು ಸ್ಪಷ್ಟವಾಗುತ್ತದೆ. ಆದುದರಿಂದ ಇದನ್ನು ಐತಿಹಾಸಿಕ-ಸಾಮಾಜಿಕ ನಾಟಕವೆಂದು ಕರೆಯಬಹುದೇನೊ?

ಈ ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ , ಮುಕ್ತಾಯವಾಗುವದು ಮರುದಿನದ ಬೆಳಗಿನಲ್ಲಿ. ಹುಲ್ಲು ಹೊರುವ ಹೆಣ್ಣುಮಗಳು ಬಸವಣ್ಣನ ಜೊತೆಗೆ ಮಾತನಾಡುವ flashback ಹೊರತುಪಡಿಸಿ ನಾಟಕದ ಕಾಲ ಒಂದೇ ದಿನಮಾನದ್ದು.
ಸರಳ ಆಡುನುಡಿಯ ಸಂಭಾಷಣೆ ನಾಟಕದ ಸೊಬಗನ್ನು ಹೆಚ್ಚಿಸಿದೆ.
ನಾಟಕದ ಅಂತರಾಳ ಎಷ್ಟೇ ಗಂಭೀರವಾಗಿದ್ದರೂ ಸಹ ಸನ್ನಿವೇಶಗಳು ಹಾಗೂ ಸಂಭಾಷಣೆಗಳು ಸಹಜ ವಿನೋದವನ್ನು ಹೊಮ್ಮಿಸುತ್ತವೆ. ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎನ್ನುವ ಆಶಾಭಾವವನ್ನು ಹೊಮ್ಮಿಸುವ ಈ ನಾಟಕವು ಬಸವಣ್ಣನವರ ಬಗೆಗೆ ರಚಿಸಲಾದ ಉಳಿದೆಲ್ಲ ದುರಂತ ನಾಟಕಗಳಿಗಿಂತ ಮನಸ್ಸನ್ನು ತಟ್ಟುತ್ತದೆ.

ಈ ನಾಟಕಕ್ಕೆ ಒಂದು ಮಿತಿಯೂ ಇದೆ. ಕಿರಿದರೊಳ್ ಪಿರಿದರ್ಥವಂ ಹೇಳುವಾಗ ಹುಟ್ಟುವ ಮಿತಿ ಅದು. ನಾಟಕದ ವಸ್ತು ಎಷ್ಟೇ ಜಟಿಲವಾಗಿದ್ದರೂ ಸಹ, ರಚನೆ ಸರಳವಾಗಿದೆ. ಇದು ಈ ನಾಟಕದ ಅನಿವಾರ್ಯತೆ ಹಾಗೂ ಮಿತಿ.
ಒಟ್ಟಿನಲ್ಲಿ ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಇದು ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.
……………………………………………………………………………….
ಟಿಪ್ಪಣಿ: ವ್ಯಾಸ ದೇಶಪಾಂಡೆಯವರ ಬಗೆಗೆ ಹೆಚ್ಚಿನ ಮಾಹಿತಿಯನ್ನು
http://kn.wikipedia.org/wiki/%E0%B2%B5%E0%B3%8D%E0%B2%AF%E0%B2%BE%E0%B2%B8_%E0%B2%A6%E0%B3%87%E0%B2%B6%E0%B2%AA%E0%B2%BE%E0%B2%82%E0%B2%A1%E0%B3%86 ದಲ್ಲಿ ಪಡೆಯಬಹುದು.

32 comments:

PARAANJAPE K.N. said...

ವ್ಯಾಸ ದೇಶಪಾ೦ಡೆಯವರ " ಇವ ನಮ್ಮವ" ನಾಟಕವನ್ನು ಸ್ಥೂಲವಾಗಿ ಅದರೊಳಗಿನ ಪಾತ್ರಗಳ ವಿವರಣೆಯೊ೦ದಿಗೆ ಬಹಳ ಚೆನ್ನಾಗಿ ವಿವರಿಸಿದ್ದೀರಿ. ದೇಶಪಾ೦ಡೆಯವರ ಬಗೆಗಿನ ಮಾಹಿತಿಯನ್ನು ವಿಕಿಪಿಡಿಯಾದಲ್ಲಿ ನೋಡಿದೆ. ಕನ್ನಡದ ಶ್ರೇಷ್ಠ ನಾಟಕಕಾರರ ಮತ್ತು ನಾಟಕದ ಪರಿಚಯ ಮಾಡಿಸಿದ್ದೀರಿ. ತು೦ಬ ಉಪಯುಕ್ತ ಮಾಹಿತಿಗಳಿವೆ. ಚೆನ್ನಾಗಿದೆ.

shivu.k said...

ಸುನಾಥ್ ಸರ್,

ವ್ಯಾಸ ದೇಶಪಾ೦ಡೆಯವರ " ಇವ ನಮ್ಮವ" ನಾಟಕ ಅದ್ಬುತ ಪರಿಚಯ ಮಾಡಿಕೊಟ್ಟಿರುವುದಲ್ಲದೇ ಅದರ ಎಲ್ಲಾ ಸ್ಥರಗಳನ್ನು ಇಲ್ಲಿ ಬಸವಣ್ಣ, ಕನ್ನಮಾರಿ, ಬಿಜ್ಜಳ, ಗಂಗಾಂಬಿಕೆ...ಇತ್ಯಾದಿ ವ್ಯಕ್ತಿತ್ವಗಳ ಮುಖಾಂತರ ತೆರೆದಿದ್ದೀರಿ. ನಿಜಕ್ಕೂ ಇದೊಂದು ಸಂಗ್ರಹ ಯೋಗ್ಯವಾದ ಮಾಹಿತಿ..

ನಾಟಕದಲ್ಲಿ ಬಸವಣ್ಣ ಸಂಜೆ ಬಂದರೂ ಆತನ ವ್ಯಕ್ತಿತ್ವ ಮಹತ್ವವನ್ನು ತೋರಿಸುವಲ್ಲಿ ಕೃತಿ ಯಶಸ್ಸು ಗಳಿಸುತ್ತದೆ.

ಕನ್ನಮಾರಿ vs ಬಸವಣ್ಣ , ಬಿಜ್ಜಳ vs ಬಸವಣ್ಣ , ಶರಣರು vs ಬಸವಣ್ಣ , ಕೊನೆಗೆ ಗಂಗಾಂಬಿಕೆ vs ಬಸವಣ್ಣ.

ಎಲ್ಲರನ್ನೂ ತನ್ನದೇ ವ್ಯಕ್ತಿತ್ವದಿಂದ ಗೆಲ್ಲುವ ಬಸವಣ್ಣನ ಎಲ್ಲಾ ಪ್ರಕಾರದ ಕೃತಿಗಳು, ನಾಟಕಗಳು, ಸಿನಿಮಾ ಇತ್ಯಾದಿಗಳನ್ನು ಎಷ್ಟು ನೋಡಿ ಅರಿತರು...ಅದೊಂದು ಮುಗಿಯದ ಭಂಡಾರ.

ಇಲ್ಲಿ ಇಂಥದನ್ನು ಪ್ರಸ್ತುತ ಪಡಿಸಿದ ನಿಮ್ಮ ಕೊಡುಗೆ ದೊಡ್ಡದು ಸುನಾಥ್ ಸರ್...ಮುಂದುವರಿಯಲಿ ನಿಮ್ಮ ಅಭಿಯಾನ...
ಅಭಿನಂದನೆಗಳು.

umesh desai said...

ಸುನಾಥ ಅವರೆ ಅಭಿನಂದನೆಗಳು ಬೇಂದ್ರೆಯವರನ್ನು ಬಿಟ್ರೋ ಹೆಂಗ ಯಾಕಂದ್ರ ನಿಮ್ಮಿಂದ ಬೇಂದ್ರೆ ಪಾರಾಯಣ ಇನ್ನೂ
ಓದುವ ಹಂಬಲ ಇರ್ಲಿ...ಇನ್ನೇನು ಮಳಿ ಹತ್ತರನ ಅದ "ಮಳಿ ಬರುವ ಕಾಲಕ್ಕ ಒಳಗ್ಯಾಕ ಕೂತೇವೋ " ನಿನ್ನಿಯಿಂದ ಗುನಗುನಸುದು ನಡದದ...ಧಾರವಾಡದ ಹವಾಮಾನ ಹೆಂಗದ ...

sunaath said...

ಪರಾಂಜಪೆಯವರೆ,
ಈ ನಾಟಕದ ಸೊಬಗನ್ನು ಸೆರೆ ಹಿಡಿಯಲು ನನ್ನ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. ಎಷ್ಟೇ ಪ್ರಯತ್ನಿಸಿದರೂ ಸಹ, ನಾಟಕದ ಎಲ್ಲ ವಿವರಗಳನ್ನು ಕೊಡುವದು ಸಾಧ್ಯವಾಗುವದಿಲ್ಲ, ನೋಡ್ರಿ!

ಚಂದ್ರಕಾಂತ ಎಸ್ said...

ನಮಸ್ಕಾರ ಸುನಾಥ್ ಸರ್.

ಈ ನಾಟಕವನ್ನು ನಾನು ಓದಿಲ್ಲ. ಆದರೆ ನೀವು ವಿಶ್ಲೇಷಿಸಿರುವ ರೀತಿಯಲ್ಲಿ ಇಡೀ ನಾಟಕ ನನಗೆ ಪರಿಚಯವಾಗಿದೆಯೇನೋ ಅನಿಸುತ್ತಿದೆ.

ಈ ನಾಟಕದ ಬಗ್ಗೆ ನೀವು ಬರೆದ ಬರಹವೇ ಎಲ್ಲವನ್ನೂ ಹೇಳುತ್ತಿದೆ.ಸಾಧ್ಯವಾದ ಕೂಡಲೇ ನಾಟಕ ಕೊಂಡು ಓದುವುದೊಂದೇ ಈಗ ನನಗುಳಿದಿರುವ ಕೆಲಸ.

sunaath said...

ಶಿವು,
ಬಸವಣ್ಣ ಹಾಗೂ ಆ ಕಾಲದ ಶರಣರು ಒಂದು ಆದರ್ಶ ಸಮಾಜವನ್ನು ಕಟ್ಟಬಯಸಿದರು. ಅವರ ವ್ಯಕ್ತಿತ್ವ ಹಾಗು ಸಾಧನೆ ಇವೆಲ್ಲ ನಮ್ಮನ್ನು ಚುಂಬಕದಂತೆ ಸೆಳೆಯುವದರಲ್ಲಿ ಆಶ್ಚರ್ಯವಿಲ್ಲ.

sunaath said...

ದೇಸಾಯರ,
‘ತೊರೆದು ಜೀವಿಸಬಹುದೆ,ವರಕವಿಯ ಕವನಗಳ?’
ಸಾಧ್ಯವೇ ಇಲ್ಲ!
ಊಟದ ನಡುವೆ ಉಪ್ಪಿನಕಾಯಿಯಂತೆ ವಿಷಯಾಂತರ ಅಷ್ಟೆ.
ಇನ್ನು ಧಾರವಾಡದ ಹವಾ ಅಂದರ ಕಳ್ಳಬೆಕ್ಕಿನ್ಹಾಂಗ. ಯಾವಾಗ ಬಿಸಲು, ಯಾವಾಗ ಮಳಿ ಗೊತ್ತಾಗೂದ ಇಲ್ಲಾ.
ಗಾದಿ ಮಾತು ಒಂದನ್ನ ಕೇಳೀರಿಲ್ಲೊ:
"ಧಾರವಾಡದ ಮಳೀನ, ಬೆಳಗಾವಿ ಹುಡುಗೀನ ನಂಬಬಾರದು"!

ಸದ್ಯಕ್ಕಂತೂ:
ಧಾರವಾಡದ ಮ್ಯಾಗ, ಏರಿ ಬಂದಾವ ಮೋಡ|
ದೊರೆಯ ನೋಡಪ್ಪ ಕಮಕಾಳ ಕಟ್ಟೀ ಮ್ಯಾಲ|
ಭೋರಾಡತಾನ ಮಳಿರಾಯ||

Ittigecement said...

ಸುನಾಥ ಸರ್...

ವ್ಯಾಸ ದೇಶಪಾಂಡೆಯವರ ಈ ನಾಟಕದ ಬಗೆಗೆ ನನ್ನ ಮಿತ್ರ
ದಿವಾಕರ ಹೆಗಡೆಯವರ ಬಳಿ ಕೇಳಿದ್ದೆ..
(ಆಕಾಶವಾಣಿ ಧಾರವಾಡ)

ಕಳ್ಳನ ಹ್ರದಯ ಪರಿವರ್ತನೆಯ ಕಥಾವಸ್ತು,
ಬಸವಣ್ಣನವರ ಹ್ರದಯ ವೈಶಾಲ್ಯ ಇಷ್ಟವಾಗುತ್ತದೆ..

ನೀವು ವಿಮರ್ಶಿಸಿದ ರೀತಿಯೂ ಇಷ್ಟವಾಯಿತು...

ಧನ್ಯವಾದಗಳು...

sunaath said...

ಚಂದ್ರಕಾಂತಾ,
‘ಇವ ನಮ್ಮವ’ ನಾಟಕದ ಪ್ರಕಾಶಕರ ವಿಳಾಸ ಹೀಗಿದೆ:
ಶ್ರೀ ವಿಷ್ಣು ನಾಯ್ಕ
ರಾಘವೇಂದ್ರ ಪ್ರಕಾಶನ
ಅಂಬಾರಕೊಡ್ಲ,
ಅಂಚೆ: ಅಂಕೋಲಾ,
ಉತ್ತರ ಕನ್ನಡ ಜಿಲ್ಲೆ.

ನಾಟಕದ ಪ್ರತಿ ಅಲ್ಲಿ ಲಭ್ಯವಾಗಬಹುದು.

sunaath said...

ಪ್ರಕಾಶ,
ನಿಮಗೂ ನನ್ನ ಧನ್ಯವಾದಗಳು.

ಶಿವಪ್ರಕಾಶ್ said...

ವ್ಯಾಸ ದೇಶಪಾಂಡೆಯವರ ಹಾಗು ಅವರ "ಇವ ನಮ್ಮವ" ನಾಟಕದ ಬಗ್ಗೆ ಮಾಹಿತಿಯುಕ್ತ ಲೇಖನದ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

ಶಿವಪ್ರಕಾಶ್ said...

ದೇಸಾಯಿಯವರಿಗೆ ನೀವು ಕೊಟ್ಟ ಉತ್ತರದಲ್ಲಿ ಇರುವ ಗಾದೆ "ಧಾರವಾಡದ ಮಳೀನ, ಬೆಳಗಾವಿ ಹುಡುಗೀನ ನಂಬಬಾರದು"! ನನಗೆ ಇಷ್ಟ ಆಯ್ತು... ಹ್ಹಾ ಹ್ಹಾ ಹ್ಹಾ

Anonymous said...

ಕಾಕಾ,

ಪ್ರತಿ ಸಲದಂತೆ ಒಳ್ಳೆಯ ಸಂಗ್ರಹಯೋಗ್ಯ ವಿಶ್ಲೇಷನೆ.

ಬಸವಣ್ಣ ಯಾಕೆ "ವಿಶ್ವಗುರು" ಎಂಬುದರ ಮಹತ್ವ ಹಾಗೂ ೧೨ನೆಯ ಶತಮಾನದಲ್ಲಿಯೇ ಬಸವಣ್ಣ ಮಂಡಿಸಿದ "ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು" ವಿಚಾರವನ್ನು, ವ್ಯಾಸ ದೇಶಪಾ೦ಡೆಯವರ " ಇವ ನಮ್ಮವ" ನಾಟಕವನ್ನು ಮತ್ತು ಅದರೊಳಗಿನ ಪಾತ್ರಗಳ ವಿವರಣೆಯೊ೦ದಿಗೆ ಛಲೊತಂಗೆ ವಿವರಿಸಿರಿ.

ಒಂದು ಒಳ್ಳೆಯ ನಾಟಕ ಮತ್ತು ಒಬ್ಬ ಒಳ್ಳೆಯ ನಾಟಕಕಾರನನ್ನು ಪರಿಚಯಿಸಿದ್ದಿರಿ, ಧನ್ಯವಾದಗಳು.

ಮುಂದಿನ ತಿಂಗಳು ಧಾರವಾಡಕ್ಕ ಬೆಟ್ಟಿ ಕೊಡಂವಿದ್ದಿನಿ, ನಿಮ್ಮ ದರ್ಶನಭಾಗ್ಯ ಸಿಗಲಿ.

ಧನ್ಯವಾದಗಳೊಂದಿಗೆ
-ಶೆಟ್ಟರು

ಶಿವಪ್ರಕಾಶ್ said...

ಹಾಗೆ ನನ್ನೊಬ್ಬ ಧಾರವಾಢ ಗೆಳೆಯನಿಗೆ "ಧಾರವಾಡದ ಹುಡಗನ್ನ, ಬೆಳಗಾವಿ ಹುಡುಗೀನ ನಂಬಬಾರದು" ಅಂತ ಬದಲಾಯಿಸಿ ಚೂಡಯಿಸಿದೆ....

sunaath said...

ಶೆಟ್ಟರ,
ನಿಮ್ಮ ದರ್ಶನಭಾಗ್ಯ ನನಗಾಗಲಿ!

sunaath said...

ಶಿವಪ್ರಕಾಶ!
ಧಾರವಾಡದ ಹುಡುಗೂರು ನಂಬಿಕಸ್ತರೆಪಾ!
(ನಾ ಧಾರವಾಡದಂವಾ ನೋಡ್ರಿ!)

Unknown said...

ಸುನಾಥ ಅವರೆ,
‘ಇವ ನಮ್ಮವ’ ನಾಟಕವನ್ನು ನಾನು ಓದಿರುತ್ತೇನೆ.
ಪಾತ್ರಗಳ ಬೆಳವಣಿಗೆ ಹಾಗೂ ಸಂಭಾಷಣೆ ನನಗೆ ತುಂಬಾ ಹಿಡಿಸಿತು.
ನಿಮ್ಮ ವಿವರಣೆ ಓದಿ ಮತ್ತಷ್ಟು ಖುಶಿಯಾಯಿತು. ನಿಮ್ಮ ವಿಮರ್ಶೆ
ಚೆನ್ನಾಗಿ ಬಂದಿದೆ.

sunaath said...

ಸುಮಾಲಿನಿಯವರೆ,
ಮೂಲ ನಾಟಕವನ್ನೇ ಓದಿದ ನಿಮಗೆ, ಆ ನಾಟಕದಲ್ಲಿಯ ಸಂಭಾಷಣೆಗಳು ಹೆಚ್ಚಿನ ಖುಶಿಯನ್ನು ಕೊಟ್ಟಿರಲಿಕ್ಕೇ ಬೇಕು.

ಜಿ.ಎಸ್.ಬಿ. ಅಗ್ನಿಹೋತ್ರಿ said...

baal pasand iatri....

sunaath said...

ಅಗ್ನಿ,
ಧನ್ಯವಾದಗಳು.ನಿಮ್ಮ ಲಿಂಕ್ ಮೂಲಕ ನಿಮ್ಮ ಎರಡೂ blogs
ನೋಡಲು ಸಾಧ್ಯವಾಯಿತು. ಅರಬಸ್ತಾನದ ವಿಚಿತ್ರ ಚೆನ್ನಾಗಿದೆ.
ನಿಮ್ಮ paintings ಅದ್ಭುತವಾಗಿವೆ.

ಧರಿತ್ರಿ said...

ಅಂಕಲ್..
ಇವ ನಮ್ಮವ ಕುರಿತಾದ ನಿಮ್ಮ ಬರಹ..ಇಡೀ ನಾಟಕವನ್ನೇ ನೋಡಿದಂಗೆ ಮಾಡಿತ್ತು. ಈ ನಾಟಕವನ್ನು ನಾನು ನೋಡಿಲ್ಲ..ರಂಗದ ಮೇಲೆ ನೋಡೋ ಆಸೆ
-ಧರಿತ್ರಿ

sunaath said...

ಧರಿತ್ರಿ,
ಬೆಳದಿಂಗಳನ್ನು ಅನುಭವಿಸುವದು ಹಾಗೂ ಬೆಳದಿಂಗಳನ್ನು ವರ್ಣಿಸುವದು ಬೇರೆ ಬೇರೆ ಅಲ್ಲವೆ? ಈ ನಾಟಕವನ್ನು ನೋಡಲು ಸಿಗದಿದ್ದರೆ, ಓದಿಯಾದರೂ ಸವಿಯಬೇಕು.

Godavari said...

ಸುನಾಥ್ ಅವರೇ,

ಈ ನಾಟಕದ ವಿವರಣೆಯನ್ನು ಬಹಳ ಸುಂದರವಾಗಿ ಮಾಡಿದ್ದೀರಿ.. ನಾನೂ ಈ ನಾಟಕ ಓದಿಲ್ಲ.. ಖಂಡಿತ ಓದುತ್ತೇನೆ..

ಬಸವಣ್ಣನಂತಹ ವ್ಯಕ್ತಿತ್ವದಿಂದ ಆಕರ್ಷಿತರಾಗದವರು ಯಾರಿದ್ದಾರೆ..

ಧನ್ಯವಾದಗಳು..

sunaath said...

ಗೋದಾವರಿ,
ನಿಮಗೂ ನನ್ನ ಧನ್ಯವಾದಗಳು.

ಜಲನಯನ said...

ಸುನಾಥ್ ಸರ್
ನಿಮ್ಮ ಕಣ್ಣಿಗೆ ಕಟ್ಟುವಂತಿರುವ ವಿವರಣೆಯೇ ಈ ಪರಿ ಅಂದ್ರೆ ನಾಟಕ ಓದಿದ್ರೆ ಹೇಗಿರಬೇಡ,..? ಅದನ್ನು ಅಭಿನಯಿಸಿದವ ನಿಜಕ್ಕೂ ಇದನ್ನು ಅನುಭವಿಸುತ್ತಾನೆ. ನಾನು ನಾಟಕಗಳಲ್ಲಿ ಮೊದಲಿನಿನಿಂದಲೂ ಆಸಕ್ತಿ ಇಟ್ಟುಕೊಂಡೇ ಬಂದಿದ್ದೇನೆ..ಊರಿನ ರಾಮನವಮಿ, ಗಣೇಶ ಚತುರ್ಥಿ ಸಮಯದಲ್ಲಿ ನಾಟಕಗಳಲ್ಲಿ ಯಾವಿದಾದರೂ ಸಣ್ಣ ಪಾತ್ರ ಸಿಗುತ್ತೇನೋ ಎಂದು ಮಾಸ್ತರು ಹಾರ್ಮೋನಿಯಂ ಶುರು ಮಾಡಿದ್ರೆ ಸಾಕು..ಚಾವಡಿಕಡೆ ಹೋಗ್ತಾ ಇದ್ವು. ನಿಮ್ಮ ವಿಷವ ಪ್ರಸ್ತಾವನೆ ತುಂಬಾ ಮೆಚ್ಚುಗೆಯಾಯಿತು.

sunaath said...

ಜಲನಯನ,
ನೀವು ರಂಗಾಸಕ್ತರೆಂದು ತಿಳಿದು ಖುಶಿಯಾಯಿತು. ಈ ನಾಟಕವನ್ನು ನಾನು ಓದಿ ಖುಶಿಪಟ್ಟಿದ್ದೇನೆಯೇ ಹೊರತು ನೋಡಿಲ್ಲ.

Shiv said...

ಸುನಾಥ್,

ಈ ನಾಟಕದ ವಿವರಣೆ ತುಂಬಾ ಚೆನ್ನಾಗಿದೆ.

ಅಣ್ಣ ಬಸವಣ್ಣ ಒಂದೆಡೆ ’ಕಳ್ಳನ ಮನೆಗೆ ಮತ್ತೊಬ್ಬ ಕಳ್ಳ ನುಗ್ಗಿದ’ ಅಂದದ್ದು ಓದಿದ ನೆನಪು

Anonymous said...

ಸುನಾಥರೆ,
‘ಇವ ನಮ್ಮವ’ ನಾಟಕದ ತತ್ವ ಜಟಿಲವಾಗಿದ್ದರೂ ರಚನೆ ಸರಳವಾಗಿದೆ ಎಂದು ಹೇಳಿರುವಿರಿ. ನವ್ಯಸಾಹಿತ್ಯದ ಯುಗದಿಂದ ಕನ್ನಡ ನಾಟಕಗಳು ಜಟಿಲವಾಗುತ್ತ ಸಾಗಿರುವ ಹಾಗಿದೆ. ಇದಕ್ಕೆ ಕಾರಣ ಬಹುಶಃ ಮೊದಲಿನ ನಾಟಕಗಳು ಕಥಾಪ್ರಧಾನವಾಗಿದ್ದರೆ, ನವ್ಯ ನಾಟಕಗಳು ತಂತ್ರಪ್ರಧಾನವಾದವು. ನಾಟಕಗಳು ಕೂಡ ನವ್ಯ ವೈಚಾರಿಕತೆಗೆ ಒಳಗಾಗಿ ದುರ್ಬಲ ನಾಯಕನನ್ನು ಸೃಷ್ಟಿಸಿದವು. ನಾಟಕಗಳು climaxಗೆ ಬದಲಾಗಿ anticlimaxನಲ್ಲಿ ಕೊನೆಗೊಳ್ಳತೊಡಗಿದವು.
‘ಇವ ನಮ್ಮವ’ ನಾಟಕವು ಕಥಾಪ್ರಧಾನವಾಗಿ ಸರಳ ರಚನೆಯನ್ನು ಹೊಂದಿದೆ. ಸಮಾಜದಲ್ಲಿ ಉತ್ತಮ ಮೌಲ್ಯಗಳ ಸ್ಥಾಪನೆಯ ಕುರಿತು ಆಶಾವಾದವನ್ನು ಪ್ರತಿಪಾದಿಸುತ್ತಿದ್ದ ಶರಣ ಚಳುವಳಿಯ ಮುಖವನ್ನು ಈ ನಾಟಕವು ಬಿಂಬಿಸುತ್ತಿದೆ. ನಾಟಕ ಮಾಧ್ಯಮದಲ್ಲಿ ತಂತ್ರದ ಜಟಿಲತೆಯು ತೋರಿಕೆಯದಾಗಿದ್ದು, ನಾಟಕವು ಮೂಲಭೂತವಾಗಿ ಸರಳ ಮಾಧ್ಯಮವಾಗಿದೆ.
-ವ್ಯಾಸ ದೇಶಪಾಂಡೆ

Chennaraju. M said...

ಇವ ನಮ್ಮವ ಪುಸ್ತಕ ಬೇಕಿತ್ತು. ಎಲ್ಲಿ ಸಿಗುತ್ತದೆ ಹೇಳುವಿರಾ?

sunaath said...

Chennarajuರವರೆ, ಸದ್ಯಕ್ಕೆ ಈ ಪುಸ್ತಕ ಎಲ್ಲಿಯೂ ಸಿಗುವಂತೆ ಕಾಣುತ್ತಿಲ್ಲ. ಶ್ರೀ ವ್ಯಾಸ ದೇಶಪಾಂಡೆಯವರ ನಾಟಕಗಳ ಸಂಕಲನ ಪ್ರಕಟವಾಗುವದಿದೆಯಂತೆ. ಆನಂತರ ನಿಮಗೆ ತಿಳಿಸಿ ಹೇಳುವೆನು.

Unknown said...

ಈ ನಾಟಕದ PDF ಎಲ್ಲಿ ಸಿಗುತ್ತೆ....

sunaath said...

ನನಗೆ PDF ಬಗೆಗೆ ಮಾಹಿತಿ ಇಲ್ಲ. ವ್ಯಾಸ ದೇಶಪಾಂಡೆಯವರ ನಾಟಕಸಂಕಲನವು ಮೇ ತಿಂಗಳಿನ ಕೊನೆಯಲ್ಲಿ ಪ್ರಕಟವಾಗಬಹುದು ಎಂದು ಅವರು ತಿಳಿಸಿದ್ದಾರೆ. ಪ್ರಕಟವಾದ ತಕ್ಷಣವೇ ನಿಮಗೆ ವಿವರಗಳನ್ನು ತಿಳಿಸುತ್ತೇನೆ.