Monday, August 17, 2009

ಕಾವ್ಯದಲ್ಲಿ ವಿಸ್ಮಯರಸ

ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸುವದೇ ವಿಸ್ಮಯರಸದ ಪ್ರಯೋಜನವೆನ್ನಬಹುದು. ಭಾರತೀಯ ಕಾವ್ಯದಲ್ಲಿ ವಿಸ್ಮಯರಸದ ಉಗಮವನ್ನು ಹುಡುಕಿದರೆ, ಅದು ನಮ್ಮ ಪ್ರಪ್ರಥಮ ಮಹಾಕಾವ್ಯದಲ್ಲಿಯೇ ದೊರೆಯುತ್ತದೆ. ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಹನುಮಂತನು ಸಮುದ್ರಲಂಘನೆ ಮಾಡುವದು ಹಾಗು ಲಂಕೆಯಲ್ಲಿ ಅವನು ಮಾಡುವ ಸಾಹಸಗಳು ವಿಸ್ಮಯರಸದ ಉಜ್ವಲ ನಿದರ್ಶನಗಳಾಗಿವೆ.

ನಡುಗನ್ನಡ ಕನ್ನಡಸಾಹಿತ್ಯವನ್ನು ಅವಲೋಕಿಸಿದಾಗ, ಶರಣರ ವಚನಗಳಲ್ಲಿ ವಿಸ್ಮಯರಸದ ಅನೇಕ ನಿದರ್ಶನಗಳು ದೊರೆಯುತ್ತವೆ.
ಬಸವಣ್ಣನವರ ಈ ವಚನವನ್ನೇ ಉದಾಹರಣೆಗೆ ತೆಗೆದುಕೊಳ್ಳಿರಿ:
“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಲದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲ ಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”
ಭಗವಂತನ ಮಹತಿಗೆ ಬೆರಗಾದ ಭಕ್ತನ ಉದ್ಗಾರವನ್ನು ನಾವು ಈ ವಚನದಲ್ಲಿ ಕಾಣುತ್ತೇವೆ.

ಈ ವಿಸ್ಮಯರಸದ ಬಗೆಗೆ ಇತ್ತೀಚೆಗೆ ಕನ್ನಡದ ಖ್ಯಾತ ನಾಟಕಕಾರ ವ್ಯಾಸ ದೇಶಪಾಂಡೆಯವರ ಜೊತೆಗೆ ಚರ್ಚೆ ನಡೆದಾಗ, ಅವರು ಸರ್ವಜ್ಞನ ವಚನವೊಂದರ ವಿವರಣೆಯನ್ನು ನೀಡಿದರು.
ಆ ವಚನ ಹಾಗು ಅವರ ವಿವರಣೆ ಹೀಗಿದೆ:
“ ಎಲುವಿಲ್ಲ ನಾಲಗೆಗೆ, ಬಲವಿಲ್ಲ ಬಡವಂಗೆ
ತೊಲೆ ಕಂಬವಿಲ್ಲ ಗಗನಕ್ಕೆ, ದೇವರಲಿ
ಕುಲ ಗೋತ್ರವಿಲ್ಲ ಸರ್ವಜ್ಞ”

ನಾಲಿಗೆಗೆ ಎಲುವಿಲ್ಲ ಎನ್ನುವದು ಎಲ್ಲರ ಅನುಭವಕ್ಕೂ ಬರುವ ಭೌತಿಕ ಸತ್ಯ. ಅದರಂತೆ ಬಡವನಿಗೆ ಬಲವಿಲ್ಲ ಎನ್ನುವದು ಒಂದು ಲೌಕಿಕ ಸತ್ಯ. ಮೊದಲಿಗೆ ಈ ಎರಡು ಅನುಭವವೇದ್ಯ ಸತ್ಯಗಳನ್ನು ಹೇಳುವ ಸರ್ವಜ್ಞ, ಆ ಬಳಿಕ ’ತೊಲೆ ಕಂಬವಿಲ್ಲ ಗಗನಕ್ಕೆ’ ಎಂದು ಹೇಳುವ ಮೂಲಕ ಒಂದು meta physical ಸತ್ಯವನ್ನು ಹೇಳುತ್ತಾನೆ. ಆ ಬಳಿಕ ‘ಕುಲ ಗೋತ್ರವಿಲ್ಲ ದೇವರಲಿ’ ಎನ್ನುವ ‘ಅ--ಲೌಕಿಕ’ ಸತ್ಯವನ್ನು ಉಸುರುವ ಮೂಲಕ ಕೇಳುಗರನ್ನು ಪ್ರಭಾವಿತರನ್ನಾಗಿ ಮಾಡುತ್ತಾನೆ. ಇದು ವಿಸ್ಮಯರಸದ ಪ್ರಯೋಜನ.

ಕನಕದಾಸರ ಕೀರ್ತನೆಯಲ್ಲಿಯೂ ಸಹ ಇದೇ ರೀತಿಯ ವಿಸ್ಮಯರಚನೆ ಇದೆ:
“ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳೊ ದೇಹವೊ ಹರಿಯೆ”
ದೇಹವನ್ನು ಸೃಷ್ಟಿಸಿದವನು ಭಗವಂತ. ಆದುದರಿಂದ ಭಗವಂತನಲ್ಲಿ ದೇಹವಿದೆ. ಆದರೆ ಅದೇ ದೇಹದಲ್ಲಿ ಭಗವಂತನೂ ಇದ್ದಾನೆ. ಕನಕದಾಸರು ಭಗವಂತನ ಮಹತಿಯನ್ನು ಅನುಭವಿಸಲು, ಅನುಭವಿಸಿದ್ದನ್ನು ಸಾರಲು ಈ ರೀತಿಯಾಗಿ ವಿಸ್ಮಯವನ್ನು ಪ್ರದರ್ಶಿಸುತ್ತಾರೆ.

ಇದೇ ರೀತಿಯಲ್ಲಿ ಪುರಂದರದಾಸರ ಕೆಲವು ಕೀರ್ತನೆಗಳಲ್ಲಿಯೂ ವಿಸ್ಮಯಭಾವನೆಯು ಕಾಣಸಿಗುತ್ತದೆ.
ಉದಾಹರಣೆಗೆ ಅವರ ಈ ಕೀರ್ತನೆಯನ್ನು ನೋಡಿರಿ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು ||ಪಲ್ಲ||
ತೀಡಿದ ಮಾರುತ ಮಂದಗತಿಗೈಯೆ ಬಾಡಿದ ಅರಲು ಫಲಗೊಂಚಲು ಬಿಡೆ
ಪಾಡಲೊಲ್ಲವಳಿಕುಲಗಳು ಬಾಡಿದ ಮಾಮರ ಚಿಗುರೊಡೆಯೆ
................................."
ಕೃಷ್ಣನು ಕೊಳಲು ಊದಿದೊಡನೆ, ಪ್ರಕೃತಿಯು ಹೇಗೆ ಪರವಶವಾಯಿತು ಎನ್ನುವದನ್ನು ಪುರಂದರದಾಸರು ಇಲ್ಲಿ ತೋರಿಸಿದ್ದಾರೆ.
ದೈವೀ ಚೈತನ್ಯದಿಂದ ಜರಗುವ ವಿಸ್ಮಯಸಾಧನೆಯ ವರ್ಣನೆ ಇಲ್ಲಿದೆ.

ಕನ್ನಡದ ನವೋದಯ ಕಾವ್ಯದಲ್ಲಂತೂ ವಿಸ್ಮಯರಸವು ಹೇರಳವಾಗಿ ಸಿಗುತ್ತದೆ. ಜಿ.ಪಿ.ರಾಜರತ್ನಮ್ ಅವರ ಸೃಷ್ಟಿಯಾದ ಯೆಂಡ್ಕುಡುಕ ರತ್ನನ ಈ ಉದ್ಗಾರವನ್ನು ನೋಡಿರಿ:
“ಎಲೆಲೆ ರಸ್ತೆ,
ಏನು ಅವ್ಯವಸ್ಥೆ!”
ಇಲ್ಲಿ ಅವ್ಯವಸ್ಥೆಯಾಗಿರುವದು ಯೆಂಡ್ಕುಡುಕನ ಬುದ್ಧಿ.
ತೋಲಾಡುತ್ತಿರುವ ಅವನಿಗೆ ರಸ್ತೆಯೇ ಅಡ್ಡಾದಿಡ್ಡಿಯಾಗಿ ಕಾಣುತ್ತದೆ.

ಕೆ.ಎಸ್. ನರಸಿಂಹಸ್ವಾಮಿಯವರ ದಾಂಪತ್ಯಗೀತೆಗಳಲ್ಲೂ ಸಹ ವಿಸ್ಮಯರಸದ ಸುರಸ ಸೃಷ್ಟಿಯಾಗಿದೆ.
ಪತಿಪತ್ನಿಯರ ಪರಸ್ಪರ ಒಲವು ನರಸಿಂಹಸ್ವಾಮಿಯವರಿಗೆ ಯಾವಾಗಲೂ ಕಾವ್ಯಸ್ಫೂರ್ತಿಯನ್ನು ಒದಗಿಸಿದೆ.
“ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ,
ನನಗದುವೆ ಕೋಟಿ ರೂಪಾಯಿ”
ಎನ್ನುವ ಸಾಲುಗಳು ಕೊನೆಯ ಪಕ್ಷ ಹೆಂಗಸರಲ್ಲಾದರೂ ವಿಸ್ಮಯ ಹುಟ್ಟಿಸಲಾರವೆ?

ನರಸಿಂಹಸ್ವಾಮಿಯವರ ಮತ್ತೊಂದು ಕವನವನ್ನು ನೋಡಿರಿ:
“ಇವಳು ಯಾರು ಬಲ್ಲೆ ಏನು?
ಇವಳ ದನಿಗೆ ತಿರುಗಲೇನು?
ಇವಳ ಹೆಸರ ಹೇಳಲೇನು?
ಇವಳು ಏತಕೊ, ಎನ್ನ ಬಳಿಗೆ ಸುಳಿದಳು!”
ಈ ಕವನದಲ್ಲಿಯ “ಇವಳು” ಬೇರೆ ಯಾರೂ ಅಲ್ಲ. ಇವಳು ನರಸಿಂಹಸ್ವಾಮಿಯವರ ಹೆಂಡತಿಯೇ.
ಇಲ್ಲಿ ಕವಿಗೆ ವಿಸ್ಮಯವನ್ನು ಹುಟ್ಟಿಸುತ್ತಿರುವದು ಗಂಡಹೆಂಡಿರ ನಡುವಿನ ಒಲವಿನ ಶಕ್ತಿ.
“ಅಂತಿಂಥ ಹೆಣ್ಣು ನೀನಲ್ಲ,
ನಿನ್ನಂಥ ಹೆಣ್ಣು ಇನ್ನಿಲ್ಲ”,
ಎನ್ನುವಾಗಲೂ ಕವಿಯಲ್ಲಿ ಇರುವದು ಬೆರಗಿನ ಭಾವನೆಯೇ.

ಬೇಂದ್ರೆಯವರ ಅನೇಕ ಕವನಗಳನ್ನು ಮನೋಜ್ಞವಾಗಿಸುವ ವಿಶಿಷ್ಟ ಗುಣವೆಂದರೆ ಆ ಕವನಗಳಲ್ಲಿರುವ ವಿಸ್ಮಯಭಾವ.ಬೇಂದ್ರೆಯವರ ಅತ್ಯಂತ ಸರಳ ಕವನದ ಉದಾಹರಣೆಯನ್ನೇ ತೆಗೆದುಕೊಳ್ಳಿರಿ:
‘ಪಾತರಗಿತ್ತಿ ಪಕ್ಕಾ
ನೋಡೀದೇನ ಅಕ್ಕಾ!’
ಈ ಮೊದಲೆರಡು ಸಾಲುಗಳೇ ಕವಿ ಅನುಭವಿಸುತ್ತಿರುವ ಬೆರಗನ್ನು ಓದುಗನಿಗೆ ಹೃದಯಾಂತರಿಸುತ್ತವೆ.
ಕವನದಲ್ಲಿ ಮುಂದುವರೆದಂತೆ ಬೆರಗು ಹುಟ್ಟಿಸುವ ಸಾಲುಗಳಿಗೆ ಏನೂ ಕೊರತೆಯಿಲ್ಲ.
“ ಗಾಳೀ ಕೇನೀಲೇನs
ಮಾಡಿದ್ದಾರ ತಾನ!
ನೂರು ಆರು ಪಾರು
ಯಾರು ಮಾಡಿದ್ದಾರು!”
ಇಂತಹ ಸಾಲುಗಳು ಬೆರಗನ್ನು ಹೆಚ್ಚಿಸುತ್ತಲೇ ಹೋಗುತ್ತವೆ.

ವಿಸ್ಮಯಭಾವವು ಬೇಂದ್ರೆಯವರ ನಿಸರ್ಗಕವನಗಳಿಗೆ ಮಾತ್ರ ಸೀಮಿತವಾಗಿಲ್ಲ.
ಮಕ್ಕಳಾಟವು ಬೇಂದ್ರೆಯವರಲ್ಲಿ ಸಹಜವಾಗಿಯೇ ವಿಸ್ಮಯವನ್ನು ಹುಟ್ಟಿಸುತ್ತಿತ್ತು.
ಆ ಬೆರಗನ್ನು ಅವರು ಸಹೃದಯರೊಡನೆ ಹಂಚಿಕೊಳ್ಳುತ್ತಿದ್ದರು.
“ ಯಾರವ್ವಾ ಇವ ಚೆಲುವಾ
ತನ್ನಷ್ಟಕ್ಕs
ತಾನs ನೋಡಿ ನಲಿವಾ!”
ಎಂದು ಬೇಂದ್ರೆ ನಲಿದಾಡುವ ಶಿಶುವನ್ನು ಕಂಡು ಬೆರಗುಬಡುತ್ತಿದ್ದರು.

ಬೇಂದ್ರೆಯವರ ಪುಟ್ಟ ಮಗಳು ಮಂಗಲಾ ನೀರು ತರಲು ಹೋದಾಗ, ಬೇಲಿಯ ಬದಿಗೆ ಬೆಳೆದಿದ್ದ ಹೂವಿನ ಬಳ್ಳಿಗಳು ಅಚ್ಚರಿಪಟ್ಟವಂತೆ.
ಅವು ಬೆರಗುಗೊಂಡು ತಮ್ಮತಮ್ಮಲ್ಲಿಯೆ ಮಾತನಾಡುವದನ್ನು ಕೇಳಿರಿ :
“ಗುಲಬಾಕ್ಷಿ-ಮಲ್ಲಿಗೆ | ಕೇಳತಾವ ಕಲ್ಲಿಗೆ |
ಕಳಿಸೋದೆ ನೀರಿಗೆ | ಇಂಥ ಸುಕುಮಾರಿಗೆ ||”

ಗೊಂಬೆಯಾಟವಾಡಿ ದಣಿದು ಮಲಗಿಕೊಂಡ ಮಗಳನ್ನು ಕಂಡಾಗ ಬೇಂದ್ರೆಯವರು ವಿಸ್ಮಯಪಡುತ್ತಿದ್ದದ್ದು ಹೀಗೆ:
“ಆಟದ ಗೊಂಬಿ, ನಿಜವೆಂದು ನಂಬಿ
ಮಗ್ಗಲಲಿ ಮಲಗಿಸಿಕೊಂಡ ದಿನವೇಸೊ!”

ವೈರುಧ್ಯಗುಣಗಳುಳ್ಳ ವಸ್ತುಗಳನ್ನು ಒಂದೇ ಕಡೆಯಲ್ಲಿ ಪೋಣಿಸುವದರ ಮೂಲಕ ವಿಸ್ಮಯವನ್ನು ಸೃಷ್ಟಿಸುವದು ವರಕವಿಗಳ ಅಪೂರ್ವ ಸಿದ್ಧಿಗಳಲ್ಲೊಂದು. ಉದಾಹರಣೆಗೆ ಅವರ ‘ಬಾರೊ ಸಾಧನಕೇರಿಗೆ’ ಕವನದಲ್ಲಿ ‘ ಬೇಲಿಗೂ ಹೂ ಬೆರಳಿದೆ ’ ಎನ್ನುವ ಸಾಲು ಬರುತ್ತದೆ.

ಬೇಲಿಯ ಕೆಲಸವೇನು? Job of fence is defense. ಆದುದರಿಂದ ಬೇಲಿಗೆ ಇರಬೇಕಾದದ್ದು ಮುಳ್ಳು. ಆದರೆ ಇಲ್ಲಿ ಬೇಲಿಗೆ ಇದ್ದದ್ದು ‘ ಹೂ ಬೆರಳು ’. ಅಂದರೆ ಇಲ್ಲಿ ಬೇಲಿಯು ನಮ್ಮನ್ನು ಸ್ವಾಗತಿಸುತ್ತಿದೆಯೇ ಹೊರತು ಹೊರಗಿಡುತ್ತಿಲ್ಲ. ಇದು ಬೆರಗನ್ನು ಹುಟ್ಟಿಸುವ ಬೇಂದ್ರೆ ಪರಿ.

ಬೇಂದ್ರೆಯವರ ‘ಬೆಳುದಿಂಗಳ ನೋಡs ’ ಕವನವು ವಿಸ್ಮಯಸೃಷ್ಟಿಯ ಅದ್ಭುತ ಕವನ. ಆ ಕವನದ ಕೆಲವು ಸಾಲುಗಳು ಹೀಗಿವೆ:
“ಮರ ಮರದ ಗೊನೀಗೆ ಕೂತು
ಹಾರಿ ಮೈ ಸೋತು
ತೆಪ್ಪಗs ಗಾsಳಿs
ತೆಪ್ಪಗs ಗಾಳಿ||
ತೂಕಡಸತsದ ತಾನೀಗ
ಜಂಪು ಬಂಧಾಂಗ
ಜಂಪು ಬಂಧಾಂsಗs
ಇದು ಅದರ ತುಪ್ಪಳದ ಗೂsಡs
ಬೆಳುದಿಂಗಳ ನೋಡs ||”

ಈ ಕವನದಲ್ಲಿ ಗಾಳಿಯು ಬೆಳದಿಂಗಳಿನಲ್ಲಿ ಸಮರಸವಾದಂತಹ ಒಂದು ಸಜೀವವಾದ ವಸ್ತುವಾಗುತ್ತದೆ. ಬೆಳದಿಂಗಳು ಈ ಗಾಳಿಯ ತುಪ್ಪಳದ ಗೂಡಾಗುತ್ತದೆ. ನಿರ್ಜೀವ ವಸ್ತುಗಳನ್ನು ಸಜೀವವಾಗಿಸುವ ಮೂಲಕ ಬೇಂದ್ರೆಯವರು ವಿಸ್ಮಯದ ಪರಾಕಾಷ್ಠೆಯನ್ನು ತಲಪುತ್ತಾರೆ.

ವಿಸ್ಮಯಭಾವವನ್ನು ಕವನದಲ್ಲಿ ಹಾಸುಹೊಕ್ಕಾಗಿ ನೇಯ್ದಂತಹ ಅವರ ಉತ್ಕೃಷ್ಟ ಕವನವೆಂದರೆ ‘ಬೆಳಗು’.
ಈ ಕವನದ ಮೊದಲ ಎರಡು ನುಡಿಗಳಲ್ಲಿ ಸೂರ್ಯೋದಯವಾಗುತ್ತಿರುವ ವರ್ಣನೆ ಇದೆ. ಮುಂದಿನ ಮೂರು ನುಡಿಗಳಲ್ಲಿ ಸೂರ್ಯೋದಯದ ಸಮಯದಲ್ಲಿಯ ನಿಸರ್ಗದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಕವಿಯ ಮನಸ್ಸಿನ ಮೇಲಾದ ಪರಿಣಾಮದ ವರ್ಣನೆ ಇದೆ.

ಈ ಕವನದ ಮೊದಲ ಎರಡು ನುಡಿಗಳನ್ನು ನೋಡಿರಿ:
==೧==
ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲು ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ

==೨==
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ನಿದ್ರಿಸುತ್ತಿರುವ ಜಗವು ತನ್ನ ಬಾಗಿಲನ್ನು ತೆರೆದಾಗ, ಬೆಳಕು ಹರಿದು ಬಂದು ಇಡಿ ಜಗತ್ತೇ ಆ ಬೆಳಕಿನಿಂದ ತೊಯ್ದು ಹೋಯಿತು ಎಂದು ಬೇಂದ್ರೆ ಹೇಳುತ್ತಾರೆ. ಬೇಂದ್ರೆಯವರು ತಾನು ಅನುಭವಿಸಿದ ಅಚ್ಚರಿಯನ್ನು ಓದುಗರಿಗೂ ಈ ರೀತಿಯಲ್ಲಿ ನೀಡುತ್ತಿದ್ದಾರೆ.

ಮೊದಲ ನುಡಿಯಲ್ಲಿ ಬೆಳಕು ಮುತ್ತಿನ ನೀರಿನಂತೆ ಸೌಮ್ಯವಾಗಿದ್ದರೆ, ಎರಡನೆಯ ನುಡಿಯಲ್ಲಿ ಅದು ರತ್ನದ ರಸದಂತೆ ಪ್ರಖರವಾಗಿದೆ. ಬೇಂದ್ರೆಯವರು ವಾಸ್ತವತೆಗೆ ಬದ್ಧರಾಗಿರುತ್ತಾರೆ ಎನ್ನುವದಕ್ಕೆ ಇದೊಂದು ನಿದರ್ಶನ.
ಈ ಬೆಳಕು ಹರಡುವ ಕ್ರಮವನ್ನು ಬೇಂದ್ರೆ “ಮುಗಿದ ಮೊಗ್ಗಿ ಪಟಪಟನೆ ಒಡೆದು” ಎಂದು ಬಣ್ಣಿಸುತ್ತಾರೆ.
ಅಂದರೆ ಬೆಳಕು ಕ್ಷಣಕ್ಷಣಕ್ಕೆ ಹೆಚ್ಚುತ್ತಿರುವದರ ವರ್ಣನೆ ಇದು. ವಿಶ್ವನಿಯಾಮಕ ಭಗವಂತನಿಗೆ ಕೈಮುಗಿದು ಹುಟ್ಟುತ್ತಿರುವ ಸೂರ್ಯನು “ಮುಗಿದ ಮೊಗ್ಗಿ” ಇದ್ದಂತೆ. ಹೂವು ತನ್ನ ಪಕಳೆಗಳನ್ನು ಬಿಚ್ಚುವಂತೆ (unfolding in quick succession) ಆತನು ಪಟಪಟನೆ ಒಡೆದು ಬೆಳಕನ್ನು ನೀಡುತ್ತಾನೆ. ಅದ್ಭುತವಾದ ಕ್ರಿಯೆಯನ್ನು ಅದ್ಭುತವಾಗಿ ವರ್ಣಿಸುವ ಈ ಸಾಲುಗಳು ಓದುಗನಲ್ಲಿ ಬೆರಗನ್ನು ಹುಟ್ಟಿಸುತ್ತವೆ.

[ಟಿಪ್ಪಣಿ: ಶ್ರೀ ಪ್ರಭುಶಂಕರ ಅವರು ಕನ್ನಡದ ಖ್ಯಾತ ವಿಮರ್ಶಕರು. ಯಾಕೋ ಏನೊ ಅವರಿಗೆ “ಪಟಪಟನೆ ಒಡೆದು” ಎನ್ನುವ ಸಾಲುಗಳು ಅರ್ಥವಾಗಲಿಲ್ಲ. ಅವರು ತಮ್ಮ ಗುರುಗಳಾದ ಕುವೆಂಪು ಅವರ ಬಳಿಗೆ ಹೋಗಿ “ಬೇಂದ್ರೆಯವರು ‘ಪಟಪಟನೆ ಒಡೆದು’ ಎಂದು ಬರೆದಿದ್ದಾರಲ್ಲ ; ಸೂರ್ಯೋದಯದ ವೇಳೆಗೆ ಪಟಪಟ ಎನ್ನುವ ಶಬ್ದವಾಗುತ್ತದೆಯೆ?” ಎಂದು ಟೀಕಿಸಿದರು. ಅದಕ್ಕೆ ಕುವೆಂಪುರವರು “ದೊಡ್ಡ ಕವಿಗಳಿಗೆ ಹಾಗೆಲ್ಲ ಅನ್ನಬೇಡಿರಿ; ಅದರ ಅರ್ಥ ನಿಮಗೆ ಆಗುವದಿಲ್ಲ” ಎಂದು ಹೇಳಿ ಕಳಿಸಿದರು. ಪ್ರಭುಶಂಕರರು ಹಿರಿಯ ವಿಮರ್ಶಕರು. ಅಂಥವರಿಗೆ ‘ಪಟಪಟನೆ ಒಡೆದು= unfolding in quick succession’ ಎಂದು ಇಂಗ್ಲೀಶಿನಲ್ಲಿ ತಿಳಿಸಬೇಕಾದದ್ದು ಕನ್ನಡಿಗರ ದೌರ್ಭಾಗ್ಯ! ]

‘ಬೆಳಗು’ ಕವನದ ಮೂರನೆಯ ನುಡಿಯನ್ನು ನೋಡಿರಿ:
==೩==
“ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತsದ ಬಿಂದು
ಯಾರಿರಿಸಿರುವರು ಮುಗಿಲs ಮೇಲಿಂ-
ದಿಲ್ಲಿಗೇ ತಂದು
ಈಗ-ಇಲ್ಲಿಗೇ ತಂದು.”

ಎಲೆಗಳ ಮೇಲೆ ಹಾಗೂ ಹೂವುಗಳ ಒಳಗೆ ಕಾಣುವ ಇಬ್ಬನಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಹೋಗುವ ವಸ್ತುಗಳು. ಇವು ಕವಿಗೆ ಅಮೃತದ ಬಿಂದುಗಳಂತೆ ಅಂದರೆ ಶಾಶ್ವತವಾದ ವಸ್ತುಗಳಂತೆ ಕಾಣುವವು. ಇಂತಹ ವೈರುಧ್ಯವು ಕವಿಯಲ್ಲಿ ಪ್ರಕೃತಿಯಲ್ಲಿಯ ಬೆರಗನ್ನು ತೋರಿಸುತ್ತದೆ. ಇದು ದೃಶ್ಯದ ಅನುಭವ.
ಇದರ ಮುಂದಿನ ನುಡಿಯಲ್ಲಿ ಸ್ಪರ್ಶದ ಹಾಗೂ ಗಂಧದ ಅನುಭವವಿದೆ.

=೪=
ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.

ಮುಂಜಾವಿನ ತಂಗಾಳಿ ಬೀಸಿದಾಗ ಹೂವು ಅಲುಗಾಡುತ್ತವೆ. ಇದು ಕವಿಯ ಕಣ್ಣಿಗೆ ಚಾಮರವನ್ನು ಬೀಸಿದಂತೆ ಕಾಣುತ್ತದೆ.
ಹೂವು ಅಲುಗಾಡಿದಾಗ ಅಲ್ಲಿ ಕುಳಿತ ತುಂಬಿಗಳು ಹಾರಿ ಬಿಡುತ್ತವೆ.
ತುಂಬಿಗಳ ಮೈಗೆ ಗಂಧ ಸವರಿ ಹಾರಿಸಿಬಿಟ್ಟರು ಎಂದು ಬೇಂದ್ರೆಯವರು ಹೇಳುತ್ತಾರೆ.
ಹೀಗೆ ಹಾರಿಸಿಬಿಟ್ಟವರು ಯಾರು? ಅದು ನಿಸರ್ಗಚೈತನ್ಯ. ಆ ಚೈತನ್ಯವನ್ನು ಭಗವಂತ ಎಂದು ಕರೆಯಬಹುದು.
ಈ ರೀತಿಯಾಗಿ ನಿಸರ್ಗಚೈತನ್ಯದ ಬಗೆಗೆ ಬೆರಗಿನ ಭಾವವನ್ನು ಬೇಂದ್ರೆಯವರು ಓದುಗನಲ್ಲಿ ಹುಟ್ಟಿಸುತ್ತಾರೆ.
ಇದೇ ರೀತಿಯಲ್ಲಿ ಇದರ ಮುಂದಿನ ನುಡಿಯಲ್ಲಿ ಶ್ರವಣದ ಅನುಭವವಿದೆ:

==೫==
“ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು-ಹಕ್ಕೀಗಳ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು ”
ಹಕ್ಕಿಗಳ ಹಾಡು ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು ಎಂದು ಹೇಳುವ ಮೂಲಕ ಬೇಂದ್ರೆಯವರು ಚರಾಚರ ಪ್ರಕೃತಿಯು ಸಜೀವವಾಗಿ ಎದ್ದು ಬರುವದನ್ನು ಅನುಭವಿಸುತ್ತಾರೆ ಹಾಗು ಹಾಡುತ್ತಾರೆ.
ಈ ರೀತಿಯಲ್ಲಿ ಪಂಚೇಂದ್ರಿಯಗಳ ಅನುಭವವು ಕಾಡಿನ ನಾಡನ್ನು ಗಂಧರ್ವರ ನಾಡನ್ನಾಗಿ ಮಾರ್ಪಡಿಸುತ್ತದೆ. ಆದರೆ ಈ ಎಲ್ಲ ಅನುಭವಗಳನ್ನು ಅನುಭವಿಸಬೇಕಾದದ್ದು ಮನಸ್ಸೇ ತಾನೆ? ಅದು ಎಂತಹ ಮನಸ್ಸು? ದೇವರು ನೀಡಿದ ಮನಸ್ಸು. ಆ ಅನುಭವವು ಆರನೆಯ ನುಡಿಯಲ್ಲಿದೆ.

==೬==
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.

ಈ ರೀತಿಯಾಗಿ ಪಂಚೇಂದ್ರಿಯಗಳ ಮೂಲಕ ಪಡೆದ ಲೌಕಿಕ ಅನುಭವವು ‘ಅ--ಲೌಕಿಕ’ ಅನುಭವವಾಗಿ ಮಾರ್ಪಡುವ ವಿಸ್ಮಯಜನಕ ಕ್ರಿಯೆಯನ್ನು ಕವಿಯು ಅನುಭವಿಸುತ್ತಾನೆ ಹಾಗು ಸಹೃದಯ ಓದುಗರೊಡನೆ ಹಂಚಿಕೊಳ್ಳುತ್ತಾನೆ.
ಆ ‘ಅಲೌಕಿಕತೆ’ಯ ವರ್ಣನೆ ಮುಂದಿನ ನುಡಿಯಲ್ಲಿದೆ.

==೬==
ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ-ಕಾಣsದೋ ಬಣ್ಣಾ.
ಶಾಂತೀರಸವೇ ಪ್ರೀತೀಯಿಂದಾ
ಮೈದೋರಿತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.

ಈ ರೀತಿಯಾಗಿ ಪ್ರಕೃತಿಯಲ್ಲಿಯ ವಿಸ್ಮಯರಸವನ್ನು ತಾವು ಅನುಭವಿಸಿ, ತಮ್ಮ ಕವನದ ಮೂಲಕ ಸಹೃದಯ ಓದುಗನಲ್ಲಿ ರಸಾನುಭವ ಹುಟ್ಟಿಸುವದರ ಮೂಲಕ ಬೇಂದ್ರೆಯವರು ಕನ್ನಡ ಕಾವ್ಯಕ್ಕೆ ಅಪೂರ್ವ ಕಾಣಿಕೆಯನ್ನಿತ್ತಿದ್ದಾರೆಂದು ಹೇಳಬಹುದು.
ಕನ್ನಡ ಕವಿಗಳು ತಮ್ಮ ಕಾವ್ಯದಲ್ಲಿ ವಿಸ್ಮಯರಸವನ್ನು ಬಳಸಿಕೊಂಡು ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸಿದ್ದಾರೆ ಹಾಗೂ ಕನ್ನಡ ಕಾವ್ಯಕ್ಕೆ ವೈಭವ ತಂದುಕೊಟ್ಟಿದ್ದಾರೆ ಎನ್ನಬಹುದು.

(ನನ್ನೊಡನೆ ಚರ್ಚಿಸಿ, ಈ ಲೇಖನಕ್ಕೆ ಕಾರಣರಾದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ಹಾಗು ಲೇಖನ ಸಿದ್ಧಪಡಿಸುವಾಗ ನೆರವು ನೀಡಿದ ನನ್ನ ನಿರಂತರ ವಿಮರ್ಶಕಿಯಾದ ನನ್ನ ಅರ್ಧಾಂಗಿನಿ ಶ್ರೀಮತಿ ವನಮಾಲಾ ಇವರಿಗೆ ಕೃತಜ್ಞನಾಗಿದ್ದೇನೆ.)

25 comments:

ಸುಪ್ತದೀಪ್ತಿ said...

ಸುನಾಥ್ ಕಾಕಾ, ಬೇಂದ್ರೆರಸವನ್ನುಣಿಸಿದ್ದಕ್ಕೆ ಧನ್ಯವಾದಗಳು.

ನಿಮ್ಮೆಲ್ಲ ವಿಶ್ಲೇಷಣೆಗಳನ್ನು ಬೆರಗಿನಿಂದಲೇ ಓದುವ ನಾನು ಬೇಂದ್ರೆಯವರ ಕವನಗಳತ್ತ ಇನ್ನೂ ಹೆಚ್ಚು ವಾಲಿದ ಒಲವನ್ನೂ ಸೇರಿಸಿಕೊಳ್ಳುತ್ತೇನೆ. ಅಂಥ ಒಲವು-ಬೆರಗು ಬೆರೆತ ಕವನ ಬೆಳಗು. ಎಂ.ಎ. ಪರೀಕ್ಷೆಗಾಗಿ ಅದರ ಪೂರ್ಣಪಾಠವನ್ನು ಮೊದಲ ಬಾರಿ ಓದಿದಾಗ ತುಸುಕಾಲ ಅದರ ಗುಂಗಿನಿಂದ ಹೊರಬರಲು ಅಸಮರ್ಥಳಾಗಿದ್ದೆ. ಇದೀಗ ಮತ್ತೊಮ್ಮೆ ಗುಂಗು ಹತ್ತಿಸಿದ್ದಕ್ಕೆ ಸಲಾಂ ನಿಮಗೆ.

umesh desai said...

ಕಾಕಾ ವಿಸ್ಮಯ ರಸದ ನಿಮ್ಮ ವಿಶ್ಲೇಷಣಾ ಹಿಡಿಸಿತು.ಹಂಗ ನೋಡಿದ್ರ ಈ ಜಗತ್ತು ಒಂದು ವಿಸ್ಮಯದ ಕಣಜ ಆದ್ರ ನಾವು ನೋಡೂದಿಲ್ಲ ಅದು ಬ್ಯಾರೇ ಮಾತು. ವಿಸ್ಮಯ ಇದು ಪುರಂದರದಾಸರಿಗೂ ಬಿಟ್ಟಿಲ್ಲ ಅವರ "ಏಳೇಳು ಶರಧಿಯು ಏಕವಾಗಿದೆ ಕಂಡ್ಯ"ನೋಡಿ..ಬೇಂದ್ರೆ ಮಾಸ್ತರರಂತೂ ಜೀನಿಯಸ್ ಆದ್ರ ನಾ ಓದಿದ ಇದ ಪದ್ಯದಾಗ "ಹೋಯ್ತೋ..." ಅನ್ನೋ ಶಬ್ದಾನೂಇತ್ತು
ಕೆಲ ವಿಮರ್ಶಕರು ಆ ಪದಕ್ಕ ಬ್ಯಾರೆ ಬ್ಯಾರೆ ಅರ್ಥ ಹಚ್ಚಿ ವಿಶ್ಲೇಷಣಾನೂ ಮಾಡ್ಯಾರ..! ವಿಸ್ಮಯ ಜಗತ್ತಿನ್ಯಾಗ ಅದ ಇನ್ನಾದ್ರೂ
ನಾವು ಕಣ್ಣು ತಗದು ಜಗತ್ತು ನೋಡೋಣಂತ.. !

sunaath said...

ಜ್ಯೋತಿ,
ಓದುಗನಿಗೆ ಗುಂಗು ಹಿಡಿಸಬಲ್ಲ ಕವಿಯೇ ವರಕವಿ!

sunaath said...

ಉಮೇಶ,
"ಏಳೇಳು ಶರಧಿಯು ಏಕವಾಗಿದೆ ಕಂಡ್ಯ..." ಓದಿದಾಗ ಅಥವಾ ಕೇಳಿದಾಗ ಮಾರುತಿಯ ಮಹಾನ್ ರೂಪವನ್ನು ಕಂಡಂತಹ ಬೆರಗು ಉಂಟಾಗುತ್ತದೆ!

ಬೆರಗುಪಡೋದನ್ನ ಕಡೆತನಕಾ ಉಳಿಸಿಕೊಂಡು ಹೋಗೋದು ಕಠಿಣ ಅದ. ಅದಕ್ಕಂತs Wordsworth ಕವಿ ಹೇಳ್ಯಾನಲ್ಲ?
"So be it or let me die!"
-ಕಾಕಾ

ಗೋಪಾಲ್ ಮಾ ಕುಲಕರ್ಣಿ said...

ವಿಸ್ಮಯ ರಸವನ್ನು ಉಣ್ಣಿಸಿ. ಬೇರೊಂದು ವಿಸ್ಮಯ ಲೋಕಕ್ಕೆ ಕರೆದು ಕೊಂಡು ಹೋಗಿದ್ದಕ್ಕೆ ತಮಗೆ ಧನ್ಯವಾದಗಳು. ಬೇಂದ್ರೆಯವರ ಕವನಗಳು ತುಂಬಾ ಚೆನ್ನಾಗಿವೆ.

sunaath said...

ಗೋಪಾಲ,
ವಿಸ್ಮಯರಸವನ್ನು ಮೆಚ್ಚಿಕೊಂಡಿದ್ದೀರಿ. ಧನ್ಯವಾದಗಳು.

sunaath said...

ಉಮೇಶ,
spelling mistake ಆಗಿತ್ತು.ತೋರಿಸಿದ್ದಕ್ಕಾಗಿ ಧನ್ಯವಾದಗಳು. ‘ಹೊಯ್ತೋ’ ಅನ್ನು ಈಗ ‘ಹೋಯ್ತೋ’ ಎಂದು ಸರಿಪಡಿಸಿದ್ದೇನೆ.
-ಕಾಕಾ

Anonymous said...

ಸುನಾಥ ಅವರೆ,
:( ತಿಳಿದುಕೊಳಲ್ಲು ಪ್ರಯತ್ನಿಸಿದೆ, ಆದ್ರೆ ತಿಳಿಯಲಿಲ್ಲ.ನೀವು ಬರೆಯುವುದನ್ನು ನೊಡಿದರೆ ನಿವು ಎಷ್ಟು ಆಳವಾಗಿ ಓದಿಕೊಂಡಿದ್ದಿರಿ,ಎಷ್ಟು ಅರ್ಥ ಮಾಡಿಕೊಂಡಿದ್ದಿರಿ comparisonಗಳನ್ನು ಎಷ್ಟು ಚನ್ನಾಗಿ ಮಾಡುತ್ತಿರಿ. ಕವನಗಳನ್ನು ಓದಿದರೂ ಒಳ ಅರ್ಥ ತಿಳಿಯುವದಿಲ್ಲಾ ನನಗೆ. ನಿವು ಬರೆದಿರುವದ್ದನ್ನು ಓದಿದನಂತರ ಇದು ಹಿಗೆ ಇರುವುದಾ ಎಂದು ಅನಿಸುತ್ತದ್ದೆ. ನಿಮ್ಮ blog ಅಂತೂ ನನಗೆ ತುಂಬಾ ಉಪಯೋಗವಾಗಿದೆ. ಧನ್ಯವಾದಗಳು:)

ಕರುಣಾ

ಮನಸು said...

sunath sir,

nimma lekhanagaLalli bahaLa upayukta haagu istavaguvantaha mahiti irutte indu kooda aste manasige muda needo vismya rasavannu uNabadisiddeeri

dhanyavadagaLu..

ಧರಿತ್ರಿ said...

ಅಂಕಲ್ ತುಂಬಾ ದಿನಗಳಾಗಿತ್ತು. ಬ್ಲಾಗ್ ಕಡೆ ಬರದೆ. ವಿಸ್ಮಯ ರಸದ ಕುರಿತು ತುಂಬಾ ಚೆನ್ನಾಗಿ ಹೇಳಿದ್ದೀರಿ ಅಂಕಲ್. ಧನ್ಯವಾದಗಳು. ಇದನ್ನೆಲ್ಲ ಒಂದು ಪುಸ್ತಕ ಮಾಡಿ ನಮಗೆ ಉಣಬಡಿಸಿ
-ಧರಿತ್ರಿ

ಭೃಂಗಮೋಹಿ said...

ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.

ಇಂಥಾ ಸಾಲುಗಳು ಈಗೆಲ್ಲಿ

sunaath said...

ಕರುಣಾ,
ಚಿಕ್ಕವನಿದ್ದಾಗ ನನಗೂ ಪೂರ್ಣ ಅರ್ಥ ಆಗುತ್ತಿರಲಿಲ್ಲ. ವಯಸ್ಸು ಜಾಸ್ತಿ ಆದ ಹಾಗೆ ತಿಳಿವೂ ಜಾಸ್ತಿ ಆಗುತ್ತದೆ. ನೀನಿನ್ನೂ ಚಿಕ್ಕವಳು. ಓದುತ್ತ ಹೋಗು, ಜಾಸ್ತಿ ಜಾಸ್ತಿ ತಿಳಿಯುತ್ತ ಹೋಗುತ್ತದೆ.

sunaath said...

ಧರಿತ್ರಿ,
ಈಗ ಪುಸ್ತಕ ಓದುವವರೇ ಕಮ್ಮಿಯಾಗಿದ್ದಾರೆ;ಬ್ಲಾ^ಗ್ ರೂಪದಲ್ಲೇ ಈ ಲೇಖನಗಳು ಇರಲಿ ಬಿಡಿ.

sunaath said...

ನಗಿಸು,
ನೀವು ಲೇಖನಗಳನ್ನು enjoy ಮಾಡಿದರೆ, ನನಗೆ ಸಾರ್ಥಕ ಭಾವನೆ ಬರುತ್ತದೆ. ಅದಕ್ಕಾಗಿ ನಿಮಗೂ ನನ್ನ ಧನ್ಯವಾದಗಳು.

sunaath said...

ಭೃಂಗಮೋಹಿ,
ಇಂತಹ ಸಾಲುಗಳು ಬೇಂದ್ರೆಯವರ ಜೊತೆಗೇ ಮಾಯವಾದವು.
ಕನ್ನಡಿಗರ ಮನ ತಣಿಸುವ ಇಂತಹ ವರಕವಿ ಇನ್ಯಾವ ಕಾಲಕ್ಕೆ ಬರುತ್ತಾನೊ?

PARAANJAPE K.N. said...

ಸುನಾಥ್ ಜಿ,
ವಿಸ್ಮಯರಸದ ಬಗೆಗಿನ ನಿಮ್ಮ ಬರಹ ನನ್ನನ್ನು ವಿಸ್ಮಯಗೊಳಿಸಿತು. ಧರಿತ್ರಿ ಹೇಳಿದ೦ತೆ ನಿಮ್ಮ ಇ೦ತಹ ಅಪೂರ್ವ ಬರಹ ಗಳ ಸ೦ಕಲನ ಪುಸ್ತಕರೂಪದಲ್ಲಿ ಬರಬೇಕು. ತು೦ಬಾ chennaagide.

sunaath said...

ಪರಾಂಜಪೆಯವರೆ,
ವಿಸ್ಮಿತರಾಗಿದ್ದಕ್ಕೆ ಧನ್ಯವಾದಗಳು.

shridhar said...

ಸುನಾಥ ಸರ್,
ವಿಸ್ಮಯ ರಸದ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು .. ನನಗೆ ವಿಮರ್ಶೆ ಅಂದರೆ ಯಾವತ್ತು ಒಂದು ರೀತೀಯ ಒಲವು ಹಾಗು ವಿಸ್ಮಯ ಕೂಡಾ . ನಿಮ್ಮ ವಿಮರ್ಶಾತ್ಮಕ ಶೈಲಿ ಅಧ್ಬುತ. ಹೀಗೆ ನಿಮ್ಮ ವಿಮರ್ಶೆಗಳನ್ನು ಉಣಿಸುತ್ತಿರಿ. ನಾವು ಸವಿದು ಧನ್ಯರಾಗುತೆವೆ.

ಶ್ರೀಧರ ಭಟ್ಟ .

Umesh Balikai said...

ಸುನಾಥ ಅಂಕಲ್,

ಕನ್ನಡ ಸಾಹಿತ್ಯಾದಾಗ ವಿಸ್ಮಯ ರಸವನ್ನ ಉಪಯೋಗಿಸಿದ ಬಗೆಯನ್ನ ಭಾಳ ಚಂದ ತಿಳಿಸಿ ಹೇಳೀರಿ. ಹಳೆ ಕವಿಗಳು ಮತ್ತು ನವ್ಯ ಕವಿಗಳು ತಮ್ಮ ಪದ್ಯದೊಳಗ ವಿಸ್ಮಯ ರಸವನ್ನ ಇಷ್ಟು ಚಂದ ಉಪಯೋಗ ಮಾಡ್ಕೊಂಡಾರ ಅಂತ ನನಗ ಗೊತ್ತಾ ಇರ್ಲಿಲ್ಲ.. ಸುಮ್ನ ಎಲ್ಲ ಕವಿತಾ ಓದ್ಕೊಂಡು ಹೋಗ್ತಿದ್ದೆ ಹೊರಟು ಅದ್ರಲ್ಲಿ ವಿಸ್ಮಯ ರಸ ಇದೆ ಅಂತ ಗೊತ್ತೇ ಆಗಿರಲಿಲ್ಲ. ವಿಶೇಷವಾಗಿ ನಂ ಬೇಂದ್ರೆ ಅಜ್ಜನ ಪದಗಳೊಳಗ.. ನಮಗ ಇಷ್ಟೆಲ್ಲಾ ಸಾಹಿತ್ಯ ಭೋಜನ ಹಾಕ್ತೀರೋ ನಿಮಗ ಭಾಳ ಥ್ಯಾಂಕ್ಸ್ ರೀ ಅಂಕಲ್.

- ಉಮೇಶ್

sunaath said...

ಶ್ರೀಧರ,
ಬನ್ನಿ, ಜೊತೆಯಾಗಿ ಸಾಹಿತ್ಯಾಪಥದಲ್ಲಿ ಸಾಗೋಣ.

sunaath said...

ಉಮೇಶ,
ನೀವು ಥಾಂಕ್ಸ್ ಹೇಳಬೇಕಾದದ್ದು ಆ ಕವಿಗಳಿಗೆ ಅಂತ ಅನಸ್ತದ.
ನಾ ಏನ್ರೀ ಬರೇ ಪೋಸ್ಟಮನ್ ಇದ್ದ್ಹಾಂಗ. ಆ ಕವನಗಳ ಒಳಗಿನ ಹೂರಣ ಕವಿಗಳದs ನೋಡ್ರಿ!

ಬಾಲು said...

ಅಧ್ಬುತ ವಿವರಣೆ.
ವಚನ, ದಾಸ ಸಾಹಿತ್ಯ, ನವ್ಯ ದಲ್ಲಿನ ವಿಸ್ಮಯ ರಸದ ಬಗ್ಗೆ ವಿಮರ್ಶೆ ಮಾಡಿ ನನಗೆ ವಿಸ್ಮಯ ವನ್ನು ಉ೦ಟು ಮಾಡಿದ್ದಿರಿ. ವರಕವಿಯ ಸಾಹಿತ್ಯ ದ ಬಗ್ಗೆ ನಿವು ವಿಮರ್ಶಾ ಪುಸ್ತಕ ಹೊರತನ್ನಿ. ನ೦ನ್ನ೦ತ ಹೊಸ ಒದುಗರಿಗೆ ಸಹಾಯವಾಗುವುದು.

sunaath said...

ಬಾಲು, ನಿಮಗೆ ಧನ್ಯವಾದಗಳು.

Keshav.Kulkarni said...

ಬೆಳಗನ್ನು ಇಷ್ಟು ಸುಂದರವಾಗಿ ಅನುಭವಿಸಿ ಶಬ್ದಗಳಲ್ಲಿ ಸೆರೆ ಹಿಡಿದ ಇನ್ನೊಂದು ಕವನ ನಾನು ಇದುವರೆಗೂ ಓದಿಲ್ಲ.

ಬೆಳಕು ಜಗತ್ತನ್ನು ತೊಯ್ಯಿಸುವುದು!ಗಿಡಗಂಟೆಯ ಕೊರಳಿಂದ ಹಾಡು!!

ಬೇಂದ್ರೆಯಂಥ ಕವಿಯನ್ನು ಕೊಟ್ಟ ಕನ್ನಡಾಂಬೆ ಧನ್ಯ.

ಅನಿಕೇತನ ಸುನಿಲ್ said...

Sunnath Sir,
Nimma article title nodi vismayadindale odoke shuru maadide...vismayakara maahitiye haudu ;-)
Thanks a lot for this one...
Sunil.