Tuesday, January 5, 2010

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ರೈತರ ಆತ್ಮಹತ್ಯೆಗಳು ೨೦೦೯ನೆಯ ವರ್ಷದಲ್ಲಿ ಎಂದಿನಂತೆ ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಭರವಸೆ ನೀಡಿದರು.
 ‘ರೈತರು ಸಾಲಕ್ಕೆ ಅಂಜಬಾರದು, ಗಟ್ಟಿ ಮನಸ್ಸಿನವರಾಗಬೇಕು, ಸರಕಾರ ರೈತರ ಹಿಂದೆಯೇ ಇದೆ’, ಎಂದು ರೈತರಲ್ಲಿ ವಿಶ್ವಾಸ ತುಂಬುವ, ಮನ:ಶಾಸ್ತ್ರ ಆಧಾರಿತ  ಕಾರ್ಯಕ್ರಮ ನಡೆಯಿತು. ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಮಾಡಲು ಆಯೋಗವನ್ನು ರಚಿಸಲಾಯಿತು. ‘ರೈತರ ಆತ್ಮಹತ್ಯೆಗೆ ಸರಕಾರ ಕಾರಣವಲ್ಲ ; ಕೌಟಂಬಿಕ ಕಾರಣಗಳಿಗಾಗಿ ಸಾಲ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆಯೋಗ ಗಿಳಿಪಾಠ ಹೇಳಿತು.

ಬೆಳೆಸಾಲ ತೀರಿಸಲಾರದ ರೈತ ತನ್ನ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವದನ್ನು ನಮ್ಮ ಮಾನಗೇಡಿ ಸಚಿವರು ಹೇಗೆ ತಾನೆ ಅರ್ಥ ಮಾಡಿಕೊಂಡಾರು? ಇತ್ತ ಗ್ರಾಹಕನಿಗೂ ಸಹ ಏನೂ ಸುಖವಿಲ್ಲ. ಆಹಾರ ಧಾನ್ಯಗಳ ಬೆಲೆ ಆಕಾಶವನ್ನು ಮುಟ್ಟಿದೆ. ನಮ್ಮ ಸಚಿವರು ಮಾತ್ರ ಭರವಸೆ ನೀಡುತ್ತಲೇ ಇದ್ದಾರೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ಮುಂಬಯಿಯಲ್ಲಿ, ಬೆಂಗಳೂರಿನಲ್ಲಿ ಉಗ್ರವಾದಿಗಳ ದಾಳಿಗಳು ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಮತ್ತೊಮ್ಮೆ ಭರವಸೆ ನೀಡಿದರು.
ಸಿಕ್ಕಿ ಬಿದ್ದ ಉಗ್ರವಾದಿಗಳಿಗೆ ಕಾರಾಗೃಹದಲ್ಲಿ ರಾಜೋಪಚಾರ ನಡೆಯುತ್ತಿದ್ದರೆ ಉಗ್ರವಾದಿಗಳಿಗೆ ಬಲಿಯಾದವರ ಕುಟುಂಬದ ಸದಸ್ಯರು ದಿಕ್ಕೇಡಿಗಳಾಗಿದ್ದಾರೆ. ಮತ್ತೊಮ್ಮೆ ಉಗ್ರರ ದಾಳಿ ನಡೆಯುವವರೆಗೆ, ಪರಿಸ್ಥಿತಿ ಹತೋಟಿಯಲ್ಲಿಯೇ ಇರುತ್ತದೆ.

ಪರದೇಶಗಳ ಆಕ್ರಮಣದ ವಿರುದ್ಧ ಭಾರತವು ಅನೇಕ ಸಲ ನೆಲ ಕಚ್ಚಿದೆ. ಈ ಅಪಜಯಕ್ಕೆ ಎರಡು ಮಹತ್ವದ ಕಾರಣಗಳಿವೆ. ಮೊದಲನೆಯದು ಭಾರತೀಯರಲ್ಲಿ ಭದ್ರವಾಗಿ ಮನೆ ಮಾಡಿರುವ ಅಹಿಂಸಾ ಮನೋಭಾವ. ಎರಡನೆಯ ಕಾರಣವು ನಮ್ಮ  inferior weaponry.

ಇದನ್ನು ಅರಿತಿದ್ದ ನೆಹರೂರವರು ಭಾರತವು ಅಣ್ವಸ್ತ್ರ ಶಕ್ತ ರಾಷ್ಟ್ರವಾಗಲು ತಳಪಾಯವನ್ನು ಹಾಕಿದರು.
ಉತ್ತರ ಪ್ರದೇಶದ ನರೋರಾದಲ್ಲಿ ಸ್ಥಾಪಿಸಿದ ‘ಅಣು ಶಕ್ತಿ ಕೇಂದ್ರ’ವು ಅಯಶಸ್ವಿಯಾಗಿದೆ ಎನ್ನುವ ಸುದ್ದಿಯನ್ನು ಗಾಳಿಯಲ್ಲಿ ತೇಲಿ ಬಿಡಲಾಗಿತ್ತು. ಆ ಸಮಯದಲ್ಲಿ, ಆ ಕೇಂದ್ರದಲ್ಲಿ ನಮ್ಮ ಅಣು ವಿಜ್ಞಾನಿಗಳು ದೇಸಿ ಅಣು ಬಾಂ^ಬಿನ ಉತ್ಪಾದನೆಯ ಪ್ರಯತ್ನದಲ್ಲಿ ತೊಡಗಿಕೊಂಡಿದ್ದರು. ಕಾಲಾಂತರದಲ್ಲಿ ಈ ಪ್ರಯತ್ನಕ್ಕೆ ಯಶಸ್ಸು ದೊರೆತದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

‘ಕುಂಬಾರನಿಗೊಂದು ವರುಷ, ಡೊಣ್ಣೆಗೊಂದು ನಿಮಿಷ’ ಎನ್ನುವಂತೆ, ಈಗಿನ ಪ್ರಧಾನಿ ಮನಮೋಹನ ಸಿಂಗರು ನಮ್ಮ ಅಣುಶಕ್ತಿ ಉತ್ಪಾದನ ಕೇಂದ್ರಗಳನ್ನು ಅಮೇರಿಕಾದ ಪರಿಶೀಲನೆಗೆ ಸಮರ್ಪಿಸಿ ಬಿಟ್ಟರು. ಭಾರತದ ಅಣುವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಬೇಕಾಗುವ ಇಂಧನವನ್ನು  ಪೂರೈಸಲು ನಮಗೆ ಅಮೆರಿಕಾದ ಮರ್ಜಿ ಹಿಡಿಯಲೇ ಬೇಕು ಎನ್ನುವ ಸೋಗನ್ನು ಮನಮೋಹನ ಸಿಂಗರು ಅಮಾಯಕ ಭಾರತೀಯರ ಎದುರಿಗೆ ಹಾಕಿದರು. ಈಗಿನ ಪರಿಸ್ಥಿತಿ ಏನೆಂದರೆ ಅಣುಶಕ್ತಿ ಸಬಲ ರಾಷ್ಟ್ರಗಳು ಭಾರತದ ಅಣು ಕೇಂದ್ರಗಳಿಗೆ ಇಂಧನ ಪೂರೈಸಲು ಹೊಸ ಹೊಸ ಶರತ್ತುಗಳನ್ನು ಹಾಕುತ್ತಿವೆ. ಅಲ್ಲದೆ, ಈ ಇಂಧನದ ಬೆಲೆಯನ್ನು ಆಕಾಶದೆತ್ತರಕ್ಕೆ ಏರಿಸುವದರಲ್ಲಿ ಏನೂ ಸಂದೇಹವಿಲ್ಲ. ಇಂತಹ ಮೋಸದ ವರ್ತನೆಯೂ ಮೊದಲೂ ಆಗಿದೆ.

ಭಾರತವು ಸ್ವದೇಶಿ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುವ ಹಂತದಲ್ಲಿದ್ದಾಗ, ಈ ಕ್ಷಿಪಣಿಗಳಿಗೆ ಅವಶ್ಯವಿರುವ ಇಂಧನವನ್ನು (ಆಗಿನ) ಸೋವಿಯಟ್ ರಶಿಯಾದಿಂದ ಖರೀದಿಸಲು ಪ್ರಾರಂಭಿಸಿತು. ತಕ್ಷಣವೇ ಅಮೆರಿಕಾವು ಒಂದು ‘Cryogenic Fuel Suppliers’ Club’ಅನ್ನು ಸ್ಥಾಪಿಸಿ, ಇಂಧನದ ಬೆಲೆಯನ್ನು ಎತ್ತರಿಸಿತು.
ಇದೆಲ್ಲಾ ಮನಮೋಹನ ಸಿಂಗರಿಗೆ ಗೊತ್ತಿಲ್ಲವೆಂತಲ್ಲ. ಆದರೆ ಅವರಿಗೆ ಒಂದು International Good Boy Image ಬೇಕಾಗಿದೆ,  at the cost of his motherland!

ಈ International Good Boy Image ಅಂದರೆ, ಕಾಲು ಕೆರೆದು ಒದೆಯಲು ಸಿದ್ಧವಿರುವ ರೌಡಿ ರಾಷ್ಟ್ರಗಳಿಂದ ಒದೆಯಿಸಿಕೊಳ್ಳಲು ಬೆನ್ನು ಕೊಟ್ಟು ನಿಂತ ಮೆದುಗ ಹುಡುಗನಂತೆ.
ಮನಮೋಹನ ಸಿಂಗರೆ, ನಿಮ್ಮ Good Boy Imageಗಾಗಿ ನಿಮಗೇನೂ Nobel Prize for Peace ಸಿಗುವದಿಲ್ಲ. ಅದೆಲ್ಲ ದಾಳಿಕೋರ USA Presidentರಿಗೇ ಮೀಸಲು!

ಚೀನಾ ಅಂತೂ ಭಾರತವನ್ನು ಒದೆಯುತ್ತಲೇ ಇದೆ. ಬ್ರಹ್ಮಪುತ್ರಾ ನದಿಯ ಮಾರ್ಗವನ್ನು ಚೀನಾ ತಿರುಗಿಸಲು ಹೊರಟರೆ, ಅದಕ್ಕೆ ಭಾರತದಿಂದ ಯಾವುದೇ ಪ್ರತಿಭಟನೆ ಇಲ್ಲ. ನಮ್ಮ ಪ್ರದೇಶದಲ್ಲಿ ಅವರು ತಮ್ಮ ಗಡಿಕಲ್ಲುಗಳನ್ನು ನೆಟ್ಟರೆ, ಅದಕ್ಕೆ ನಮ್ಮ ಪ್ರತಿಭಟನೆ ಇಲ್ಲ. ನಮ್ಮದೇ ಪ್ರದೇಶವಾದ ಲಡಾಖದಲ್ಲಿ ನಾವು ರಸ್ತೆ ನಿರ್ಮಿಸುತ್ತಿರುವಾಗ, ಚೀನಾ ಪ್ರತಿಭಟಿಸಿದರೆ, ನಮ್ಮ ಕೆಲಸವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು! ಆ^ಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಚಚ್ಚುತ್ತಲೇ ಇದ್ದಾರೆ. ಈ ನೀಚ ಕೃತ್ಯವನ್ನು Racist ಎಂದು ಕರೆದು ಆ^ಸ್ಟ್ರೇಲಿಯಾಕ್ಕೆ ಅಂತಾರಾಷ್ಟ್ರೀಯ ಛೀಮಾರಿ ಹಾಕಿಸುವ ಧೈರ್ಯವನ್ನು ನಮ್ಮ ಸರಕಾರ ತೋರಿಸುತ್ತಿಲ್ಲ.
ಇದೆಂತಹ ಛಕ್ಕಾ ಸರಕಾರ!
ಇದಕ್ಕೆಲ್ಲ ಮನಮೋಹನ ಸಿಂಗರದು ಒಂದೇ ಪ್ರತಿಕ್ರಿಯೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
ಯಾರ ಹತೋಟಿಯಲ್ಲಿ?

೧೯೬೨ರಲ್ಲಿ ಚೀನಾ ಭಾರತವನ್ನು ಪೂರ್ಣವಾಗಿ ಸದೆ ಬಡಿದದ್ದು ಎಲ್ಲರಿಗೂ  ಗೊತ್ತಿರುವ ಸಂಗತಿಯೇ. ಆದರೆ, ಈ ಸಂದರ್ಭದಲ್ಲಿ ಜರುಗಿದ ಒಂದು ಘಟನೆ ಬಹುಶ: ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಒಂದು ಪ್ರದೇಶದಲ್ಲಿ ಶತ್ರುಸೈನಿಕರ ಕೈ ಮೇಲಾಗುತ್ತಿರುವಂತಹ ಪರಿಸ್ಥಿತಿ ಒದಗಿದಲ್ಲಿ, ಕೇಂದ್ರಸರಕಾರವು ತನ್ನ ಪ್ರಭುತ್ವವನ್ನು ಆ ಪ್ರದೇಶದಿಂದ ತೆರವು ಮಾಡಿರುವದಾಗಿ ಘೋಷಿಸಬಹುದು. ಆ ಸಂದರ್ಭದಲ್ಲಿ ಅಲ್ಲಿಯ ನಾಗರಿಕರನ್ನು ರಕ್ಷಿಸುವ ಹೊಣೆಗಾರಿಕೆ ಸರಕಾರಕ್ಕೆ ಇರುವದಿಲ್ಲ.

೧೯೬೨ರ ಚೀನೀ ಆಕ್ರಮಣದ ಸಂದರ್ಭದಲ್ಲಿ, NEFA (ಈಗಿನ ಅರುಣಾಚಲ ಪ್ರದೇಶ)ದಲ್ಲಿಯ ತವಾಂಗ ಜಿಲ್ಲೆಯು ಚೀನೀ ಸೈನಿಕರ ಕೈವಶವಾಯಿತು. ಅಲ್ಲಿಂದ ಆಸಾಮ ರಾಜ್ಯದಲ್ಲಿಯ ದರಾಂಗ ಜಿಲ್ಲೆಯ ಕೇಂದ್ರಸ್ಥಳವಾದ ತೇಜಪುರವು  ಕೆಲವೇ ತಾಸುಗಳ ದೂರದಲ್ಲಿದೆ. ಚೀನೀ ಸೈನಿಕರು ತೇಜಪುರವನ್ನೂ ಆಕ್ರಮಿಸಬಹುದೆನ್ನುವ ಭೀತಿಯಿಂದ  ದರಾಂಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲ್ಲಿಯ ನಿವಾಸಿಗಳ ವಿತ್ತ, ಜೀವಿತಗಳಿಗೆ ಸರಕಾರವು ಹೊಣೆಯಾಗುವದಿಲ್ಲವೆಂದು ಘೋಷಿಸಿ, ನಗರವನ್ನು ತ್ಯಜಿಸಲು ನಾಗರಿಕರಿಗೆ ಸೂಚನೆ ನೀಡಿದರು. ಸೆರೆಮನೆಯಲ್ಲಿರುವ ಕೈದಿಗಳನ್ನೆಲ್ಲ ಬಿಡುಗಡೆ ಮಾಡಲಾಯಿತು. ಸರಕಾರಿ ಕೋಶದಲ್ಲಿರುವ ಹಣವನ್ನೆಲ್ಲ ಸುಟ್ಟು ಹಾಕಲಾಯಿತು. ಆ ಅವಧಿಯಲ್ಲಿ ಭಾರತ ಸರಕಾರದ ಪ್ರಭುತ್ವವು ಆ ಜಿಲ್ಲೆಯಲ್ಲಿ NIL ಆಯಿತು. ಜಿಲ್ಲಾಧಿಕಾರಿಗಳು ಈ ಎಲ್ಲ ಕ್ರಮಗಳನ್ನು ಕೈಕೊಳ್ಳುತ್ತಿದ್ದಾಗ, ಲೋಕಸಭೆಯಲ್ಲಿ ನಮ್ಮ ಪ್ರಧಾನಿಗಳು  ಜನತೆಗೆ ಭರವಸೆ ನೀಡುತ್ತಿದ್ದರು:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!

ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಸ್ಥಿತಪ್ರಜ್ಞನ ಲಕ್ಷಣಗಳನ್ನು ಸಾರಿದ್ದಾನೆ. ಯಾರು ಲಾಭ,ಹಾನಿಗಳಲ್ಲಿ ; ಜಯ, ಅಪಜಯಗಳಲ್ಲಿ ಮನಸ್ಸಿನ ಸಮಸ್ಥಿತಿಯನ್ನು ಕಾಯ್ದುಕೊಳ್ಳುತ್ತಾರೊ ಅವರೇ ಸ್ಥಿತಪ್ರಜ್ಞರೆಂದು ಭಗವಂತನು ಅಪ್ಪಣೆ ಕೊಡಿಸಿದ್ದಾನೆ. ಈ ಪ್ರಮಾಣದ ಮೇರೆಗೆ ನಮ್ಮ ರಾಜಕಾರಣಿಗಳೆಲ್ಲರೂ ಸ್ಥಿತಪ್ರಜ್ಞರೇ. ಯಾಕೆಂದರೆ ಇವರೆಲ್ಲರ ಸಂಪತ್ತು ಸ್ವಿಸ್ ಬ್ಯಾಂಕುಗಳಲ್ಲಿ ಭದ್ರವಾಗಿದೆ. ಇವರ ಮಕ್ಕಳು ವಿದೇಶಗಳಲ್ಲಿ ನೆಲಸಿದ್ದಾರೆ! ಭಾರತಕ್ಕೆ ಏನೇ ಆದರೂ ಇವರಿಗೆ ಆತಂಕವಿಲ್ಲ. ಪುರಾಣಕಾಲದಲ್ಲಿ ಮಿಥಿಲಾ ಪಟ್ಟಣವು ಬೆಂಕಿ ಬಿದ್ದು ಉರಿಯುತ್ತಿರುವಾಗ, ಆ ದೇಶದ ರಾಜನಾದ ಜನಕ ಮಹಾರಾಜನು ಹೇಳಿದನಂತೆ: “ಉರಿಯುತ್ತಿರುವ ಮಿಥಿಲೆಯಲ್ಲಿ ನನ್ನದೇನೂ ಉರಿಯುತ್ತಿಲ್ಲ!”
ನಮ್ಮ ರಾಜಕಾರಣಿಗಳೂ ಜನಕನಂಥವರೇ! ಉರಿಯುತ್ತಿರುವ ಭಾರತದಲ್ಲಿ ಇವರದೇನೂ ಉರಿಯುವದಿಲ್ಲ!
ಇಂತಹ ರಾಜಕಾರಣಿಗಳನ್ನು ಪ್ರಭುಗಳನ್ನಾಗಿ ಪಡೆದ ಪ್ರಜೆಗಳ ಭಾಗ್ಯವೇ ಭಾಗ್ಯ.

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
Happy New Year!

38 comments:

ಆನಂದ said...

ಸುನಾಥ ಕಾಕಾ,

ಚೀನಾ ಮತ್ತು ನೆಹರ ಬಗ್ಗೆ ಪ್ರಸ್ತಾಪ ಬಂದಿದ್ದರಿಂದ ಜೆ.ಪಿ.ದಳವಿ ಯವರು ಬರೆದ ’ಹಿಮಾಲಯನ್ ಬ್ಲಂಡರ್’ ನೆನಪಾಯ್ತು. ರಾಜಕಾರಣಿಗಳ (ಅದರಲ್ಲೂ ಮುಖ್ಯವಾಗಿ ನೆಹರೂ ಮತ್ತು ಕೃಷ್ಣ ಮೆನನ್ ) ಸೋಗಲಾಡಿತನವನ್ನು ಎತ್ತಿ ತೋರಿಸುವಂತಹ ಪುಸ್ತಕವದು.

ಕಾಲದಿಂದ ಕಾಲಕ್ಕೆ ರಾಜಕಾರಣಿಗಳು ಬದಲಾದರೂ ಅವರ ಸ್ವಭಾವದಲ್ಲಿ ಏನೂ ಬದಲಾಗಿಲ್ಲ ಎಂದು ನನಗನ್ನಿಸುತ್ತದೆ.
ಹಿಂದೆ, ಚೀನಾ ಆಕ್ರಮಣ ಮಾಡ್ತಿದ್ದಾಗ, ನೆಹರೂ ’ಹಿಂದಿ-ಚೀನಿ ಭಾಯಿ ಭಾಯಿ’ ಅಂತ ಭಾಷಣ ಬಿಗೀತಾ ಇದ್ರು. ಅದೇ ಸಂಪ್ರದಾಯವನ್ನು ಇಂದಿನವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೆ ಅವರನ್ನೇ ದೂಷಿಸುತ್ತಾ ಕೂತರೆ ಅನ್ಯಾಯ ಮಾಡಿದಂತಾಗುತ್ತದೆ. ಜನಸಾಮಾನ್ಯರಾಗಿ, ನಾವೇನು ಮಾಡಿದೆವು ಅನ್ನುವುದೂ ಮುಖ್ಯ ಅಲ್ಲವೇ. ಪ್ರತೀ ಚುನಾವಣೆಯಲ್ಲೂ ರೇಣುಕಾಚಾರ್ಯ, ಸೊರೇನ್ ನಂತಹವರನ್ನ ಗೆಲ್ಲಿಸುವ ನಾವು ಅವರು ಗೆದ್ದ ಮೇಲೆ ಹಾಗೆ ಮಾಡಬಾರದಿತ್ತು, ಹೀಗೆ ಹೇಳಬಾರದಿತ್ತು ಅಂತ ಹೇಳುವುದು ಎಷ್ಟು ಸರಿ? ಚುನಾವಣೆಯ ಸಮಯದಲ್ಲಿ ರಜೆ ಬಂತೆಂದು ಬೀಗಿ, ಮನೆಯಲ್ಲಿ ಕೂತು ಟೀವಿ ನೋಡುವ ಜನರಿನ್ನೂ ಇರುವವರೆಗೂ ದಕ್ಷರನ್ನು, ಧೈರ್ಯವಂತರನ್ನು ಗೆಲ್ಲಿಸಿ ಕಳಿಸುವುದು ದೂರದ ಮಾತು. ಪ್ರತಿಯೊಬ್ಬನೂ (ಯೋಚಿಸಿ ) ಮತ ಚಲಾಯಿಸಿದರೆ ಒಂದಿಬ್ಬರಾದರೂ ಒಳ್ಳೆಯವರು ಗೆದ್ದಾರೇನೋ...

ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.

ಚುಕ್ಕಿಚಿತ್ತಾರ said...

ಕಾಕಾ..
ಕೊಚ್ಚೆ ಗು೦ಡಿಯಲ್ಲಿ ಹೊರಳಾಡುವವರಿ೦ದ ಜೇನುತುಪ್ಪ ನಿರೀಕ್ಷಿಸಲಾದೀತೇ... ?
ರಾಜಕಾರಣವೆ೦ಬುದು ಗಠಾರವಾಗಿದೆ.ಕೆಲವರು ಒಳ್ಳೆಯ ಜನರಿದ್ದರೂ ಗಠಾರದಲ್ಲಿರುವ ಮಲ್ಲಿಗೆ ಹೂವಿನ ಸುವಾಸನೆ ತಿಳಿಯಬಲ್ಲುದೇ...?
ಯಾವುದಕ್ಕೂ,
"“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”"

ಸೀತಾರಾಮ. ಕೆ. / SITARAM.K said...

ಮಠಾಧೀಶರಿಗೆ ಕೋಟಿಗಟ್ಟಲೇ ಹಣವನ್ನು ನೀಡಿ, ಮತ್ತು ಕೋಟಿಗಟ್ಟಲೇ ಹಣ ಖರ್ಚು ಮಾಡಿ ತಮ್ಮ ಬಚ್ಚಲುಗಳನ್ನು ರೀಪೇರಿ ಮಾಡಿಕೊ೦ಡು ಸಾರ್ವಜನಿಕ ಹಣ ಪೋಲು ಮಾಡಿದ ಸರ್ಕಾರಕ್ಕೇ, ನೆರೆ-ಬರದಿ೦ದ ಬೆಳೆ ಕಳೆದುಕೊ೦ಡು- ಸಾಲಭಾಧೇಯಿ೦ದ ಆತ್ಮಹತ್ಯೆಗೆ ಮೊರೆ ಹೊಗುವ ರೈತರಿಗೆ, ಸಾಲ ಮನ್ನಾ ಮಾಡಿ, ಧೈರ್ಯ ತು೦ಬಲು ಹಣವಿಲ್ಲ. ಹ೦ಪೆಯಲ್ಲೊ೦ದು ಕೃಷ್ಣದೇವರಾಯನ ಪಟ್ಟಾಭಿಷೇಕದ ೫೦೦ ನೇ ವರ್ಷದ ಸಮಾರ೦ಭಕ್ಕೇ ಕೋಟಿಗಟ್ಟಲೇ ಹಣ ಸುರಿಯಲಾಗುತ್ತಿದೆ. ಜಾಗತಿಕ ಮಾಲಿನ್ಯ ನಿಯ೦ತ್ರಣ ಬಧ್ಧತೆಗೆ ಬರದ ಅಭಿವೃಧ್ಧಿ ಹೊ೦ದಿದ ದೇಶಗಳ ಎದುರು ಈಗ ಭಾರತ ಮ೦ಡಿಯೂರಿ ನಿ೦ತಿದೆ. ಪರಮಾಣು ಶಕ್ತಿಯಲ್ಲಿ ತಾವೂ ಹೇಳಿದ ಹಾಗೇ ನಡೆದಿದೆ. ಎಲ್ಲಕ್ಕೂ ನಮ್ಮ ಅಹಿ೦ಸಾಮಾರ್ಗವೇ ಕಾರಣ ಅನಿಸುತ್ತಿದೆ. ಇದಕ್ಕೆ ಕೊನೆ ಹೇಗೆ???????

umesh desai said...

ಕಾಕಾ ಹೊಸಾವರ್ಷದ ಧಮಾಲ್ ನಿಮ್ಮ ಲೇಖನ. ಸಾಹಿತ್ಯಿಕ ನೆಲೆ ಬದಿಗೊತ್ತಿ ಮೊದಲಬಾರಿ(?)
ಬೇರೆ ವಿಷಯ ಬರೆದಿರುವಿರಿ.ಅಭಿನಂದನೆಗಳು. ಇನ್ನು ನಿಮ್ಮ ಲೇಖನದಲ್ಲಿ ಅಡಗಿದ ವಿಷಯ
ನಾವು ಕೇಳುತ್ತಲೇ ಇದ್ದೇವೆ. ಆಸ್ಟ್ರೇಲಿಯಾದ ವಿಷಯವೇ ಇರಲಿ, ಕಸಬ್ ವಿಷಯವೇ ಇರಲಿ ನಾವು
ಎಡವಿದ್ದೇವೆ ಹಾಗೂ ಇನ್ನೂ ಸುಧಾರಿಸಿಕೊಂಡಿಲ್ಲ.

ಮನಮುಕ್ತಾ said...

ಸುನಾಥ್ ಕಾಕಾ,
ನಿಮ್ಮ ಬರಹ ಚಿ೦ತನಾತ್ಮಕವಾಗಿದೆ.
ರಾಜಕಾರಣದಲ್ಲಿನ ಒ೦ದು ನಾಚಿಕೆಗೇಡಿತನ ನೆನಪಾಯಿತು.
ಮು೦ಬಯಿಯ ತಾಜ್ ಹೊಟೆಲಿಗೆ ಭಯೋತ್ಪಾದಕರು ನುಗ್ಗಿ ಒಳಗಿರುವವರನ್ನು ಮಾರಣಹೋಮ ಮಾಡುತ್ತಿದ್ದ ಸಮಯ.
ಸುರಕ್ಷಾದಳದವರು ಹಾಗೂ ಪೋಲಿಸರು ಜೀವದ ಹ೦ಗು ತೊರೆದು ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದರು.ಅ೦ತಹ ಸಮಯದಲ್ಲಿ ಒಬ್ಬ ಸಚಿವರು ಜನರನ್ನು ಕುರಿತು ಹೇಳಿದಮಾತು.
"ಇಷ್ಟು ದೊಡ್ಡ ದೇಶದಲ್ಲಿ ಇ೦ತಹ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುತ್ತವೆ."

ರಾಜಕಾರಣದಲ್ಲಿ ಇಳಿದ ನ೦ತರ ಜನ ಹೀಗಾಗುತ್ತಾರೋ,ಅಥವಾ ನಾವು ಆರಿಸಿದ್ದೇ ಅ೦ಥವರನ್ನೋ,
ನಾ ಬೇರೆ ಕಾಣೇ.

ತೇಜಸ್ವಿನಿ ಹೆಗಡೆ said...

ಕಾಕಾ,

ನಮ್ಮ ದೇಶದ (ಅ)ರಾಜಕೀಯದ ಬಗ್ಗೆ ರಾಜಕಾರಣಿಗಳ ಬಗ್ಗೆ ಎಷ್ಟು ಹೇಳಿದರೂ ಸಾಕಾಗದು. ಆದರೆ ವಿಪರ್ಯಾಸವೆಂದರೆ ಇವರು ಇಂತಹವರು ಎಂದು ನಮಗೆ ಗೊತ್ತಿದ್ದೂ ನಾವು ಅಂತಹವರನ್ನೇ ಆರಿಸಿ ಕಳಿಸುತ್ತೇವೆ. ಯಾಕೆ ಜನತೆಯ ಮುಂದೆ ಬೇರೆ ಆಯ್ಕೆ ಸಿಗುತ್ತಿಲ್ಲವೋ ಕಾಣೆ. ಆ ಆಯ್ಕೆಗಳನ್ನೆಲ್ಲಾ ಈ ಘಟಾನುಘಟಿಗಳೇ ಮುಚ್ಚಿಹಾಕುತ್ತಿರುವುದೂ ಕಾಣುತ್ತಿದೆ. ಭಾರತ ಮತ್ತೆ ವಿದೇಶಿಗಳ ಕೈವಶವಾಗದಿದ್ದರೆ ಪುಣ್ಯ. ಇದೇ ಮುಂದುವರಿದರೆ ಖಂಡಿತ ಈ ಒಂದು ದೊಡ್ಡ ದುರಂತವೂ ಘಟಿಸುವ ದಿನ ದೂರವಿಲ್ಲ ಎಂದೆನಿಸುತ್ತದೆ. ನಮ್ಮ ಪ್ರಧಾನಿಯಿಂದ ಹಿಡಿದು ರಾಜ್ಯದ ಮಂತ್ರಿಯವರೆಗೂ ಎಲ್ಲರೂ ದೇಶಾಭಿಮಾನವನ್ನು ಕಿಂಚಿತ್ತೂ ಹೊಂದಿರದವರು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ!

ಇದಕ್ಕೆಲ್ಲಾ ಪರಿಹಾರವಿಲ್ಲವೇ? ಜನರು ಯಾಕೆ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ?! ಯಾರ ಹತೋಟಿಯಲ್ಲಿ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಕಟು ಸತ್ಯ. ಆದರೂ ಸತ್ಯ ಹಾಗೂ ಪ್ರೇಮ ಎರಡೂ ಕುರುಡೆಂದಿದ್ದಾರೆ ಯಾರೋ ತಿಳಿದವರು!!!

Unknown said...

ಬಹಳ ಉತ್ತಮ ಲೇಖನ... ಮಾನಗೆಟ್ಟ ರಾಜಕಾರಣಿಗಳಿಂದ ಇನ್ನೇನು ಸಾಧ್ಯ?? "ಪರಿಸ್ತಿತಿ ಹತೋಟಿಯಲ್ಲಿದೆ" ಅಂತ ಅವರು ಹೇಳೋದು ಅವರ ವಯಕ್ತಿಕ ಜೀವನದ ಬಗ್ಗೆ ಅಷ್ಟೇ... ಅವ್ರದ್ದೆಲ್ಲವೂ ಸೇಫ್ ಸೇಫ್... ಬಡ ಜನರು, ನಮ್ಮ ಸೈನಿಕರು ಎಲ್ಲರೂ ಸಾಯಬೇಕು ಅಷ್ಟೇ... ಇದ್ಯಾವಾಗ ಉದ್ಧಾರವಾದೀತು?? "A Wednesday" ಚಿತ್ರದ ನಾಸಿರುದ್ದೀನ್ ಶಾಹ್ ಪಾತ್ರದ ಆ ಚಿಂತನೆ ನಮ್ಮಲ್ಲಿ ಹುಟ್ಟಿಕೊಳ್ಳಬೇಕಷ್ಟೇ ...

ಸಂದೀಪ್ ಕಾಮತ್ said...

aal iz well!

sunaath said...

ಆನಂದ,
ನಮ್ಮ ಮತದಾರರು ದಡ್ಡರು.ಠಕ್ಕ ರಾಜಕಾರಣಿಗಳು ಈ ಮತದಾರರನ್ನು ಸುಲಭವಾಗಿ ಮೋಸ ಮಾಡುತ್ತಿದ್ದಾರೆ.

sunaath said...

ವಿಜಯಶ್ರೀ,
ಕರ್ನಾಟಕದ ಇಂದಿನ ರಾಜಕೀಯವಂತೂ ಚರಂಡಿಗಿಂತಲೂ ಕಡೆಯಾಗಿದೆ, ಅಲಲ್ವೆ?

sunaath said...

ಸೀತಾರಾಮರೆ,
ಪ್ರಜೆಗಳ ಹಣವನ್ನು ಪೋಲು ಮಾಡುವ ಇಂತಹ ರಾಜಕಾರಣಿಗಳಿರುವಾಗ, ದೇಶಕ್ಕೆ ಒಳ್ಳೆಯದಾದೀತೆಂದು ನಿರೀಕ್ಷಿಸುವದಾದರೂ ಹೇಗೆ? ಕೃಷ್ಣದೇವರಾಯರ ಪಟ್ಟಾಭಿಷೇಕಕ್ಕೆ
ಕೋಟಿಗಟ್ಟಲೆ ಖರ್ಚು ಮಾಡುತ್ತಿರುವ ನಮ್ಮ ಮುಖ್ಯ ಮಂತ್ರಿಗಳು ತಮ್ಮ ‘ಪಟ್ಟ’ ಉಳಿಸಿಕೊಳ್ಳಲು ಎಷ್ಟು ಖರ್ಚು ಮಾಡಿರಬಹುದೊ?

sunaath said...

ದೇಸಾಯರ,
ಎಡವಿ ಬೀಳೋದನ್ನ ಒಂದು ಕಸಬು ಮಾಡಿಕೊಂಡಾರ ಈ ಮಂದಿ. ತಮ್ಮ ಸಂಗಾತ ದೇಶಾನ್ನೂ ಕೆಡವಿ ಬೀಳಿಸ್ಯಾರ!

sunaath said...

ಮನಮುಕ್ತಾ,
ಇಂಥವರನ್ನು ಆರಿಸಿದ್ದು ನಮ್ಮ ತಪ್ಪು ಅನ್ನೋದರಲ್ಲಿ ಸಂದೇಹವಿಲ್ಲ. ಆದರ, ರಾಜಕಾರಣಕ್ಕ ಇಳಿದವನು ಎಂಥಾ ಸನ್ಯಾಸಿ ಇದ್ದರೂ, ಬದಲಾಗಿ ಬಿಡ್ತಾನೇನೊ ಅಂತ ಅನಸ್ತದ.

sunaath said...

ತೇಜಸ್ವಿನಿ,
People get a government they deserve
ಅಂತ ಹೇಳ್ತಾರ. ಆದರ, ರಾಜಕಾರಣಿಗಳಂಥಾ ಠಕ್ಕ ಮಂದಿ ಜನರಿಗೆ ಕಣ್ಕಟ್ಟು ಮಾಡಿ ಸ್ವರ್ಗವನ್ನು ತೋರಿಸ್ಕೋತ, ನರಕಕ್ಕ
ತಳ್ಳಿದರ, ಏನು ಮಾಡಲಿಕ್ಕಾದೀತು?

sunaath said...

ರವಿಕಾಂತ,
A Wednesdayದ ನಾಸಿರುದ್ದೀನ ಶಾಹನಂತಹ ಪ್ರಜೆಗಳು ಅವತಾರವೆತ್ತೋ ದಿನ ದೂರ ಇರಲಿಕ್ಕಿಲ್ಲ ಅಂತ ಅನಸ್ತದ.

sunaath said...

ಸಂದೀಪ,
All is well that ends in DEEP WELL!

ಸಾಗರದಾಚೆಯ ಇಂಚರ said...

ರಾಜಕಾರಣಿಗಳು ಯಾವ ಪಕ್ಷದವರೇ ಆಗಲಿ
ಜನರನ್ನು ಮೋಸ ಮಾಡುವಷ್ಟರ ಮಟ್ಟಿಗೆ ಎಲ್ಲರಲ್ಲೂ ಒಗ್ಗಟ್ಟಿದೆ
ಯಾರೂ ಬಂದರೂ ಅಷ್ಟೇ ಅನ್ನುವಂತಾಗಿದೆ
ತುಂಬಾ ಚೆನ್ನಾಗಿ ಘಟನೆ ವಿವರಿಸಿದ್ದಿರಾ

sunaath said...

ಗುರುಮೂರ್ತಿಯವರೆ,
ನೀವು ಹೇಳುವದು ಸರಿ.
ರಾಜಕಾರಣಿಗಳೆಲ್ಲ ಒಂದೇ ಪಕ್ಷ=ಠಕ್ಕರ ಪಕ್ಷ!

ದಿನಕರ ಮೊಗೇರ said...

ಸುನಾಥ್ ಸರ್,
ರಾಜಕಾರಣ, ರಾಜಕಾರಣಿಗಳ ಬಗ್ಗೆ ಎಷ್ಟು ಬರೆದರೂ, ಮಾತನಾಡಿದರೂ ಅವರು ಸುದಾರಿಸೋಲ್ಲ..... ಪರಿಸ್ತಿತಿ ಸುಧಾರಿಸೋಲ್ಲ..... ಅರುಣಾಚಲ, ಕಾಶ್ಮೀರ, ಬಾಬ್ರಿ ಮಸೀದಿ ಈ ಎಲ್ಲಾ ಸಮಸ್ಯೆ ಇದ್ದಸ್ತೂ ಅವರಿಗೆ ಒಳ್ಳೆಯದು...... ಗುಜರಾತ್ ಸರಕಾರ ತಂದ compulsary voting ಬಂದರೆ ಒಳ್ಳೆಯದಾಗತ್ತೆ ಅದರಲ್ಲೂ ನಮಗೆ ಬೇಡವಾದ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅಧಿಕಾರ ಸಿಕ್ಕರೆ ಒಳ್ಳೆಯದು..... ನಿಮ್ಮ ಲೇಖನ ಸಾಕಷ್ಟು ವಿಮರ್ಶೆ ಹುಟ್ಟು ಹಾಕಿತು...... ಧನ್ಯವಾದಗಳು......

PARAANJAPE K.N. said...

ಸುನಾಥ್ ಜೀ
ಸಾಹಿತ್ಯಕ ವಿಷಯಗಳ ವಿಶ್ಲೇಷಣೆಯ ನಡುವೆ ನಿಮ್ಮಿ೦ದ ಬ೦ದ ಈ ಬರಹ ಚೆನ್ನಾಗಿದೆ. ಹೌದು ಠಕ್ಕ ರಾಜಕಾರಣಿಗಳಿ೦ದ ಒಳ್ಳೆಯದನ್ನು ನಿರೀಕ್ಷಿಸುವುದು ಖ೦ಡಿತ ಅಸಾಧ್ಯ. ನಾನು ನನ್ನ ಬ್ಲಾಗಿನಲ್ಲಿ ಅನೇಕ ಬಾರಿ ಈಗಿನ ಕಲುಷಿತ ರಾಜಕೀಯ ವ್ಯವಸ್ಥೆ ಬಗ್ಗೆ ಬರೆದಿದ್ದೆ. ರಾಜಕೀಯ ವಿಷಯಗಳ ಬಗ್ಗೆ ಬೇರೆ ಯಾರು ಹೆಚ್ಚಾಗಿ ಬರೆಯುತ್ತಿಲ್ಲವಾದ್ದರಿ೦ದ ನನಗೆ ಒ೦ಟಿತನದ ಅನುಭವ ವಾಗಿತ್ತು . ಪೂರಕವಾಗಿ, ಮಾಹಿತಿಯುಕ್ತವಾದ ನಿಮ್ಮ ಬರಹ ಓದಿ ಒ೦ಥರ ಖುಷಿ ಆಯ್ತು, ಹಾಗೇನೆ ಇವತ್ತಿನ ಪರಿಸ್ಥಿತಿ ನೆನೆದು ಖೇದವೂ ಆಯ್ತು.

sunaath said...

ದಿನಕರ,
ನೀವು ಹೇಳುವದು ಸರಿ. Compulsory voting ಹಾಗು
Right to reject ಇವೆರಡೂ ಬಂದರೆ, ಪರಿಸ್ಥಿತಿ ಸುಧಾರಿಸಬಹುದೇನೊ?

sunaath said...

ಪರಾಂಜಪೆಯವರೆ,
ನಿಮ್ಮ blogನಲ್ಲಿಯ ಲೇಖನಗಳನ್ನು ಓದಿದ್ದೇನೆ.
ರಾಜಕೀಯ ಇಂದು ಕೊಳತು ಹೋಗಿರುವದರಿಂದ ರಾಜಕೀಯದ ಬಗೆಗೆ ಹೆಚ್ಚು ಲೇಖನಗಳು ಬರುತ್ತಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ, ರಾಜಕೀಯದ ಬಗೆಗೆ ಎಲ್ಲ ಬ್ಲಾ^ಗಿಗರಿಗೂ
ನಾಗರಿಕ ಪ್ರಜ್ಞೆ ಇದ್ದೇ ಇದೆ.
ಆಶೆಯನ್ನು ಇಟ್ಟುಕೊಳ್ಳೋಣ!

ಶಿವಪ್ರಕಾಶ್ said...

ನಿಜ ಸರ್. ಅವರು ಬದಲಾಗುವುದಿಲ್ಲ..
ನಾವೂ ಎಷ್ಟು ಬಡಿದುಕೊಂಡರು ಅಸ್ಟೆ...
ಚುನಾವಣೆಗೆ ನಿಲ್ಲುವವರು ಅಂತಹವರೇ...
ಒಳ್ಳೆಯವರು ನಿಂತು ಗೆದ್ದರೂ, ನಂತರ ಅವರು ಹಾಗೆ ಆಗಿಬಿಡುತ್ತಾರೆ...

ಹೋಗಲಿ ಬಿಡಿ... “ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”! :D

ಹೊಸ ವರ್ಷದ ಹಾರ್ದಿಕ ಶುಭಾಶಯಗಳು....

ಬಾಲು said...

ಚೀನಾ ದವರು ನಮ್ಮ ಮೇಲೆ ಆಕ್ರಮಣ ಮಾಡಿ, ಒಂದಿಷ್ಟು ಪ್ರದೇಶವನ್ನು ಗೆದ್ದಿರಬಹುದು. ಆದರೆ ಆ ಪ್ರದೇಶದಲ್ಲಿ ಹುಲ್ಲು ಕೂಡ ಬೆಳೆಯುವುದಿಲ್ಲ ವೆಂದು ಅಂದಿನ ಪ್ರಧಾನಿ ನೆಹರು ಆವರೇ ಹೇಳಿಲ್ಲವೇ? ಇನ್ನು ಪಾಕಿಗಳು ನಮ್ಮೊಡನೆ ಯುದ್ದ ಮಾಡಿ ಆಕ್ರಮಿಸಿ ಕೊಂಡಿದ್ದು ಒಂದಿಷ್ಟು ಕಣಿವೆ ಪ್ರದೇಶ ಅಷ್ಟೇ.

ರೈತರು ಆತ್ಮ ಹತ್ಯೆ ಮಾಡಿಕೊಂಡರು, ರಾಜಕಾರಣಿಗಳು ಅವರ ಜೀವ ವಾಪಸು ಕೊಡಲಿಕ್ಕೆ ಆಗುತ್ತದ? ಅಷ್ಟಕ್ಕೂ ನಮ್ಮ ಜನರು ಅವರಿಂದ ಅಪೇಕ್ಷಿಸುವುದು ಚುನಾವಣ ಸಮಯದಲ್ಲಿ ಒಂದಿಷ್ಟು ದುಡ್ಡು, ಕೊಟ್ಟೆ ಸಾರಾಯಿ, ಬಟ್ಟೆ ಹಾಗು ಇನ್ನಿತರ ವಸ್ತುಗಳನಷ್ಟೇ ಅಲ್ಲವೇ?

ಮುಂಬೈ ಮೇಲೆ ಧಾಳಿ ನಡೆಯಿತು, ನಮ್ಮ ಸಚಿವರು ಅಲ್ಲಿಗೆ ದೌಡಾಯಿಸಿದರು, ಆದರೆ ದುರಾದೃಷ್ಟ ವಶಾತ್ ಅಷ್ಟರಲ್ಲಿ ಆ ಉಗ್ರರು ತಮ್ಮ ಕೆಲಸ ಮುಗಿಸಿದ್ದರು. ಉಗ್ರರು ಸ್ವಲ್ಪ ಸಮಾಧಾನದಿಂದ ಗುಂಡು ಹಾರಿಸಿ, ಪೆಪ್ಸಿ ಕುಡಿದು, ರೆಸ್ಟ್ ತಗೊಂಡು ಇದ್ದಿದ್ದರೆ, ನಮ್ಮ ರಕ್ಷಣಾ ಸಚಿವರು ಅವರನ್ನು ಜೀವ ಸಮೇತ ಹಿಡಿದು ಬಿಡುತ್ತಾ ಇದ್ದರು.

ಸುನಾತರೆ ಎಲ್ಲೋ ಏನೋ ಒಂದು ನೂರೋ, ಸಾವಿರನೋ ಸತ್ತರೆ ನಮಗೇನಂತೆ? ನಮ್ಮ ಮಕ್ಕಳು ಓದಿ ಪಾಸಾಗಿ, ಟಿ ವಿ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ, ಆಮೇಲೆ ಅಮೆರಿಕ ದಲ್ಲಿ ನೆಲೆ ಗೊಂಡರೆ ಸಾಕಲ್ಲ? ನನ್ನ ಪ್ರಕಾರ ಉಗ್ರರಿಂದ ಸಾಯೋದಿಕ್ಕೆ, ನಮ್ಮ ರಾಜಕಾರಣಿಗಳು ಕಾರಣ ಅಲ್ಲವೇ ಅಲ್ಲ. ಯಾವ ರೀತಿಯಿಂದಲೂ.. ಅದಕ್ಕೆಲ್ಲ ನರಕಾಧಿಪತಿ ಯಮ ನೆ ಕಾರಣ. ಶಿಕ್ಷೆ ಆಗಬೇಕಾದ್ದು ಅವನಿಗೆ, ನಮ್ಮ ಶ್ರೀಮಂತ, ಅಹಿಂಸಾವಾದಿ ರಾಜಕಾರಣಿ ಗಳಿಗಲ್ಲ.

Subrahmanya said...

ಆತಂಕಪಡಬೇಡಿ ಸುನಾಥರೆ...ಒಂದು ದಿನ ಎಲ್ಲವೂ ಹತೋಟಿಗೆ ಬರುತ್ತದೆ. ಆಗ ಸಂತೋಷಪಡಲು ನಾವಿರಬೇಕು ಅಷ್ಟೆ !!!

ಜಲನಯನ said...

ಸುನಾಥ್ ಸರ್, ನಮ್ಮ ಪುರುಷ ...ಉತ್ತರನ ಪೌರುಷ ಆಗುತ್ತಿದೆಯೇ ಎನ್ನುವ ಬಲವಾದ ಸಂದೇಹ ಮೂಡುತ್ತೆ...ಹೊಸವರ್ಷದ ಒಗ್ಗರಣೆಗೆ ಬೆಳ್ಳಾರಿ ಮೆಣಸಿನಕಾಯಿ ಘಾಟು...ನಮಗೆ ತಟ್ಟಿದ ಹಾಗೆ ಸಮಾನ್ಯಮತದಾರನಿಗೆ ತಟ್ಟಿದರೆ ಎಷ್ಟು ಚನ್ನ...? ಅದರ ಘಾಟು..ಸ್ವಾರ್ಥ ..ಹಣ ಮತ್ತು ಅಧಿಕಾರದ ರಕ್ತಪೀಪಾಸು ರಾಜಕಾರಣಿಗೆ ತಟ್ಟಿದರೆ ಎಷ್ಟು ಚನ್ನ? ನಮ್ಮ ರಾಷ್ಟ್ರ ಬಹು ಸಂಪತ್ ಭರಿತ ಎಂದು ಯಾರ್ಯಾರೋ ಮೈಲ್ ಕಳುಹಿಸಿದಾಗ ಇದೊಂದು ಬೋಗಸ್ ಬಡಾಯಿ ಎಂದು ಕೊಂಡೆ...ಅಲ್ಲ...ಖಂಡಿತಾ...ಅಲ್ಲ...ನಮ್ಮ ದೇಶ ಬಹು ಸಂಪತ್ ಭರಿತ......ಬರೀ ಸ್ವಿಸ್ ಬ್ಯಾಂಕಿನಲ್ಲಿ ಜಮ್ಮವಣೆಯಾಗಿರುವ ಕಪ್ಪುಹಣ ಸಾಕು...ಇಲ್ಲಿಂದ ದೋಚಿದ್ದು ಬ್ರಿಟೀಷರು ಅಂತೀವಿ...ಆದ್ರೆ ಅವರು ನಮಗಾಗಿ ತುಂಬಾ ಸಾರ್ವಜನಿಕ ಕಾರ್ಯಮಾಡಿದ್ದರು...ಆದರೆ ನಮ್ಮವರೇ..ನಮಗಾಗಿ ಏನೂ ಮಾಡಿಲ್ಲ...ಎಂಥ ವಿಪರ್ಯಾಸ..?? ಒಳ್ಲೆಯ ಲೇಖನ....ಚಿಂತನೆಗೆ ನೂಕುತ್ತೆ...

Narayan Bhat said...

ನಿಮ್ಮ ಲೇಖನ ವಿಚಾರ ಪ್ರಚೋದಕವಾಗಿದೆ. ಜನ ಸಾಮಾನ್ಯರು ಮಾಧ್ಯಮಗಳ ಮೂಲಕ ತಲುಪಿದ, ತಮ್ಮ ಯೋಚನೆಗೆ ನಿಲುಕಬಹುದಾದ ರಾಜಕೀಯ ನಿರ್ಧಾರಗಳನ್ನ, ದೊಂಬರಾಟಗಳನ್ನ ಗಮನಿಸುತ್ತಿರುತ್ತಾರೆ ಮತ್ತು ಅದು ಮಿತಿ ಮೀರಿದ ಸಂಧರ್ಭದಲ್ಲಿ ಪ್ರತಿಕ್ರಿಸುವದರ ಮೂಲಕ ಹದಗೆಟ್ಟ ಪರಿಸ್ಥಿತಿಯನ್ನು ಕೆಲಮಟ್ಟಿಗಾದರೂ ನಿಯಂತ್ರಣಕ್ಕೆ ತರುತ್ತಾರೆ ಅನ್ನುವ ಭರವಸೆ ನನಗಿದೆ. ಬಹುಶಃ, ಈ ಹಿಂದೆ ತುರ್ತುಪರಿಸ್ಥಿತಿ ಹೇರಿಕೆಯ ಪರಿಣಾಮದಿಂದ ಜನರು ಎಚ್ಚೆತ್ತು ಒಗ್ಗೂಡಿ ಪ್ರತಿಕ್ರಿಯಿಸಿದ್ದು (ರಾಜಕೀಯ ಕ್ರಾಂತಿಯೆನ್ನಬಹುದೇ?) ಒಂದು ಉತ್ತಮ ನಿದರ್ಶನವಾಗಬಲ್ಲುದೇನೋ.

sunaath said...

ಶಿವಪ್ರಕಾಶ,
ಈಗಂತೂ ರಾಜಕೀಯ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಕೈ ಪಕ್ಷದಿಂದ ಚುನಾವಣೆ ಗೆದ್ದು, ಕಮಲದ ಪಕ್ಷಕ್ಕೆ ಜಿಗಿದು ಸಚಿವರಾಗಬಹುದು. ಈಗ ಪಕ್ಷಭೇದ ಎನ್ನುವದೇ ಇಲ್ಲ, ನೋಡಿ!

Ittigecement said...

ಸುನಾಥ ಸರ್...

ರಾಜಕಾರಣಿಗಳು ನಮ್ಮ ದೇಶದ ದೌರ್ಭಾಗ್ಯ..

ಮಾನ ಮರ್ಯಾದೆ ಸ್ವಲ್ಪವೂ ಇಲ್ಲದ ನಿರ್ಲಜ್ಜಗೇಡಿಗಳು.
ತಮ್ಮ ಬಗೆಗಾದರೂ ಸ್ವಾಭಿಮಾನ ಇರಬಾರದೆ...?

ದೇಶವನ್ನು ಮೂರುಕಾಸು ಸಿಗುತ್ತದೆ ಎಂದಾದರೆ ಮಾರಲಿಕ್ಕೂ ರೆಡಿ ಇವರು.

ಮೊಸಳೆ ಕಣ್ಣೀರು ಹಾಕಲು ಅಡ್ಡಿಯಿಲ್ಲ..

ಛೇ...!!

ಧಿಕ್ಕಾರ ಇಂಥಹ ರಾಜಕಾರಣದವರಿಗೆ.!!

ಬಹಳ ಬೇಸರವಾಗುತ್ತದೆ..
ನಮ್ಮ ಮುಂದಿನ ಭವಿಷ್ಯ ನೆನೆದರೆ ಹೆದರಿಕೆಯೂ ಆಗುತ್ತದೆ...

"ಆತಂಕ ಬೇಡ.. ಪರಿಸ್ಥಿತಿ ಹತೋಟಿಯಲ್ಲಿದೆ" ಅಲ್ಲವಾ...?

sunaath said...

ಬಾಲು,
ಭಾರತ ದೇಶವೆನ್ನುವದು ಉಳಿದೀತೇ ಎನ್ನುವದೇ ಈಗ ಸಂಶಯಾಸ್ಪದವಾಗಿದೆ!

sunaath said...

ಸುಬ್ರಹ್ಮಣ್ಯರೆ,
ಶಂಭುಲಿಂಗನೇ ನಮ್ಮನ್ನು ಕಾಪಾಡಬೇಕು!?

sunaath said...

ಜಲನಯನ,
ಬ್ರಿಟಿಶರು ನೂರು ವರ್ಷಗಳಲ್ಲಿ ದೋಚಿದಷ್ತನ್ನು ನಮ್ಮವರು ಐವತ್ತೇ
ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ!

sunaath said...

ನಾರಾಯಣ ಭಟ್ಟರೆ,
ನಮ್ಮ ಪ್ರಜೆಗಳು ಸದ್ಯಕ್ಕೆ ಕಣ್ಣು ಮುಚ್ಚಿಕೊಂಡು ಮತದಾನ ಮಾಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಬಂದಾಗ ಮಾತ್ರ ಇವರು ಕಣ್ಣು ತೆರೆಯುತ್ತಾರೆ!

sunaath said...

ಪ್ರಕಾಶ,
ಕೇಳಿಲ್ಲವೆ ನೀವು:
Power corrupts and absolute power corrupts
absolutely!

Archu said...

ಕಾಕಾ,
ಹೊಸ ವರ್ಷದ ಶುಭಾಶಯಗಳು.

ಸುಮಾರು ದಿನಗಳ ನಂತರ ಬಂದೆ ನಿಮ್ಮ ಬ್ಲಾಗ್ ಗೆ..
ಬೇಂದ್ರೆ ಕವನಗಳಿಗೆ ಸ್ವಲ್ಪ ಹುಡುಕಾಡಿದೆ ಕೂಡಾ!
ಇನ್ಯಾವಾಗ ಬರೀತೀರಿ ಅವರ ಕವನಗಳ ಬಗ್ಗೆ?

ನೀವು ಮುಂಚೆ ಬರೆದ ಕವನಗಳ ವಿವರಣೆಯ ಪ್ರಿಂಟ್ ಔಟ್ ತೆಗೆದು ವಿರಾಮದ ಕಾಲದಲ್ಲಿ ಓದುವುದು ನನ್ನ ಇತ್ತೀಚೆಗಿನ ಹವ್ಯಾಸ :)

ಪ್ರೀತಿಯಿಂದ,
ಅರ್ಚು

sunaath said...

ಅರ್ಚನಾ,
ನಮ್ಮ ಗಾಡಿ ಸ್ವಲ್ಪ derail ಆಗಿದೆಯಾ?
OK, ಬೇಂದ್ರೆಯವರ ನಿಲ್ದಾಣಕ್ಕೆ ಬೇಗನೇ ಬರುವೆ.

ಚಿತ್ರಾ said...

ಕಾಕಾ,
ಏನು ಹೇಳುವುದೋ ತಿಳಿಯುತ್ತಿಲ್ಲ ! ಎಲ್ಲಿ ಬಾಂಬ್ ಸ್ಫೋಟವಾಗಲಿ , ಗಲಭೆ , ದೊಂಬಿಗಳಾಗಲಿ , ಯಾರ ಹತ್ಯೆಯಾಗಲಿ, ಯಾರು ಆತ್ಮಹತ್ಯೆ ಮಾಡಿಕೊಳ್ಳಲಿ,ಜನಸಾಮಾನ್ಯರ ಜೀವನದಲ್ಲಿ ಏನು ಬೇಕಾದರೂ ಆಗಲಿ , ಅಕ್ಕ ಪಕ್ಕದ ದೇಶಗಳು ನಮ್ಮಮೇಲೆ ಆಕ್ರಮಣ ಮಾಡಲಿ , ನಮ್ಮ ನೆಲದ ಮೇಲೆ ಹಕ್ಕು ಸ್ಥಾಪಿಸಲಿ , ದೇಶ ಬೇಕಾದರೆ ಮುಳುಗಿಯೇ ಹೋಗಲಿ .....ರಾಜಕಾರಣಿಗಳು ಹೇಳುವುದು ಇದನ್ನೇ " ಆತಂಕ ಬೇಕಿಲ್ಲ . ಪರಿಸ್ಥಿತಿ ಹತೋಟಿಯಲ್ಲಿದೆ ! "
ಇಂಥಾ ರಾಜಕಾರಣಿಗಳ ಮನೆಯ ಫ್ಯೂಸ್ ಹೋದರೆ, ಅವರ ನಾಯಿಗೆ ಯಾರಾದರೂ ಕಲ್ಲು ಹೊಡೆದರೆ , ಅವರ ಕಾರು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲ್ಲುವ ಪ್ರಸಂಗ ಬಂದರೆ ಮಾತ್ರ ... ಪರಿಸ್ಥಿತಿ ಕೈ ಮೀರಿರುತ್ತದೆ !
ಸ್ಥಿತ ಪ್ರಜ್ಞ ರಾಜಕಾರಣಿಗಳ ಜೊತೆ , ನಿರ್ಲಿಪ್ತ ಪ್ರಜೆಗಳೂ ಸೇರಿರುವಾಗ " ಆತಂಕ ಬೇಡ , ಪರಿಸ್ಥಿತಿ ಹತೋಟಿಯಲ್ಲಿದೆ ! "

Anonymous said...

Hi,

Article is good but quite not agree with comparison of current politicians with Rajarshi Janaka & quotation of his.

In fact KuVemPu remembers him as Janakana holuva Doregala Dhama in Jaya Bharata Jananiya Tanujate....hope you agree to this - Krishna.