ಬೇಂದ್ರೆಯವರು ಬರೆದ ‘ವಸಂತಮುಖ’ ಕವನವನ್ನು ಕವಿಗಳ ಕೈಪಿಡಿ ಎಂದು ಬಣ್ಣಿಸಬಹುದು.
ಕವನ ಇಲ್ಲಿದೆ:
೧
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ
೨
ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ
೩
ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ
ಬೇಂದ್ರೆಯವರಿಗೆ ಪ್ರಕೃತಿಯು ಕೇವಲ ದೃಶ್ಯವೈಭವವಲ್ಲ. ಅವರ ಪಾಲಿಗೆ ಅದು ಸಜೀವವಾದ ಚೈತನ್ಯದ ಚಿಲುಮೆ. ಪ್ರಕೃತಿಯ ಚಟುವಟಿಕೆಗಳಿಗೆ ಪ್ರೇರಣೆ ಕೊಡುವ ‘ಬೆಳಗು’ ಆಗಲೀ, ದಣಿದ ಜೀವಿಗಳನ್ನು ಮಡಿಲಲ್ಲಿ ಮಲಗಿಸಿ, ಮುದ್ದಿಸುವ ಬೆಳದಿಂಗಳೇ ಆಗಲಿ ಅಥವಾ ರಾವಣನಂತೆ ಕುಣಿಯುವ ಶ್ರಾವಣವೇ ಆಗಲಿ, ಇವೆಲ್ಲ ಬೇಂದ್ರೆಯವರ ಪಾಲಿಗೆ ನಿಸರ್ಗದ ಸಜೀವ ಚೇತನಗಳು. ಅಷ್ಟೇ ಏಕೆ, ಒಂದು ಹೂತ ಹುಣಿಸೆಯ ಮರವೂ ಸಹ ಬೇಂದ್ರೆಯವರಿಗೆ ಬದುಕಿನ ಸಜೀವ ಭಾಗವೇ ಆಗಿದೆ. ಈ ಮನೋಧರ್ಮದ ಪರಾಕಾಷ್ಠೆಯನ್ನು ನಾವು ‘ವಸಂತಮುಖ’ ಕವನದಲ್ಲಿ ನೋಡಬಹುದು.
ವಸಂತ ಋತುವಿನ ಒಂದು ಉಷಃಕಾಲದಲ್ಲಿ ಕವಿ ಅನುಭವಿಸಿದ ಆನಂದವನ್ನು ‘ವಸಂತಮುಖ’ ಕವನವು ವರ್ಣಿಸುತ್ತದೆ. ಕನ್ನಡ ಕವಿಗಳು ಸೂರ್ಯೋದಯದ ಸಮಯದಲ್ಲಿ ತಾವು ಅನುಭವಿಸಿದ ಆನಂದದ ಬಗೆಗೆ ಅನೇಕ ಕವನಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಈ ಕವನಗಳಲ್ಲಿ ಸೂರ್ಯೋದಯ ಸಮಯದ ನಿಸರ್ಗಸೌಂದರ್ಯದ ವರ್ಣನೆಯೇ ಪ್ರಧಾನವಾಗಿದೆ. ಬೇಂದ್ರೆಯವರೇ ಬರೆದ ಕವನ ‘ಬೆಳಗು’ ಅಂತೂ ಅತಿ ಪ್ರಸಿದ್ಧವಾದ ಕವನವೇ ಹೌದು. ಈ ಕವನದಲ್ಲಿಯೂ ಸಹ ಸೂರ್ಯೋದಯ ಸಮಯದ ಪ್ರಕೃತಿಯ ವೈಭವವನ್ನು ವರ್ಣಿಸಿ, ಕವಿಯು ಅದರಿಂದಾಗಿ ಹೇಗೆ ಆನಂದಪರವಶನಾದನು ಎನ್ನುವ ವರ್ಣನೆ ಇದೆ. ಆದರೆ, ‘ವಸಂತಮುಖ’ ಕವನವು ಹಾಗಿಲ್ಲ. ಈ ಕವನದಲ್ಲಿ ಕವಿಯು ಅಖಿಲ ವಿಶ್ವವೇ ಉಷಃಕಾಲದಲ್ಲಿ ಚೇತನಗೊಂಡು, ಆನಂದಪರವಶವಾದುದರ ದರ್ಶನವಿದೆ. ಕನ್ನಡದಲ್ಲಿ ನಾವು ಕೇಳುವ ಇಂತಹ ಇನ್ನೊಂದೇ ಗೀತೆಯೆಂದರೆ ಪುರಂದರದಾಸರು ಹಾಡಿದ ಕೀರ್ತನೆ.
ಅದರ ಪಲ್ಲ ಹೀಗಿದೆ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು”
ರಂಗನ ಕೊಳಲಿನ ಸ್ವರದಿಂದ ಅಖಿಲ ಪ್ರಕೃತಿಯೇ ಹೇಗೆ ಸಚೇತನವಾಯ್ತು, ಹೇಗೆ ಆನಂದಪರವಶವಾಯ್ತು ಎಂದು ಪುರಂದರದಾಸರು ಹಾಡಿ, ಕುಣಿದು ಹೇಳುವ ಕೀರ್ತನೆ ಇದು.
ಈಗ ಬೇಂದ್ರೆಯವರ ‘ವಸಂತಮುಖ’ವನ್ನು ನೋಡೋಣ:
(ಮೊದಲ ನುಡಿ:)
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ
‘ಉದಿತ ದಿನ’ ಅಂದರೆ, ಇದೀಗ ಬೆಳಕು ಒಡೆದಿದೆ. ಇದು ಉಷ:ಕಾಲ. ಉಷಃಕಾಲದ ಆನಂದವು ಕೇವಲ ಮನುಷ್ಯನಷ್ಟೇ ಅನುಭವಿಸಬಹುದಾದ ಸುಖವಲ್ಲ. ಸುತ್ತಲಿರುವ ವನವೆಲ್ಲ ಸಚೇತನವಾಗಿದೆ, ಉಷಃಕಾಲದಿಂದ ಮುದಗೊಂಡಿದೆ. ವನರಾಜಿಯ ಈ ಆನಂದವು ‘ವನವಾಸಿ’ಗಳಾದ ಹಕ್ಕಿಗಳ ಚಿಲಿಪಿಲಿಯಲ್ಲಿ ಕೇಳಬರುತ್ತಿದೆ. ಇದು ಕಣ್ಣಿಗೆ ಬೀಳುವ ದೃಶ್ಯ ಸೌಂದರ್ಯವಷ್ಟೇ ಅಲ್ಲ, ಕಿವಿಗೆ ಬೀಳುವ ಶ್ರಾವ್ಯ ಸೌಭಾಗ್ಯವೂ ಹೌದು.
ಕೇವಲ ಒಂದು ಹಕ್ಕಿಯ ಸ್ವರ ಇಲ್ಲಿ ಕೇಳಬರುತ್ತಿಲ್ಲ. ಅನೇಕ ವಿಧದ ಹಕ್ಕಿಗಳು ಇಲ್ಲೀಗ ಹಾಡುತ್ತಿವೆ. ಇಲ್ಲಿ ಕೇಳಿಬರುತ್ತಿರುವದು ಈ ಸಾಮುದಾಯಿಕ ಸ್ವರಮೇಳ. ನಿಸರ್ಗದಲ್ಲಿರುವ ಈ ಸಾಮರಸ್ಯವನ್ನು ಕಂಡ ಕವಿ ‘ಇದುವೆ ಜೀವ, ಇದು ಜೀವನ’ ಎಂದು ಉದ್ಗರಿಸುತ್ತಾನೆ. ಅಲ್ಲದೆ ಇಂತಹ ಸಾಮರಸ್ಯದ ಜೀವನವೇ ಪಾವನಗೊಂಡ ಜೀವನ. ಪವನ ಅಂದರೆ ಗಾಳಿ. ಗಾಳಿಯು ಎಲ್ಲೆಡೆಗೆ ಬೀಸುತ್ತ ಸುಗಂಧವನ್ನು ಹರಡುತ್ತದೆ. ಅದರಂತೆ ದುರ್ಗಂಧವನ್ನು ದೂರೀಕರಿಸುತ್ತದೆ. ಉಷಃಕಾಲವೂ ಸಹ ವಾತಾವರಣವನ್ನು ಅದೇ ರೀತಿಯಲ್ಲಿ ಪಾವನಗೊಳಿಸುವದರಿಂದ, ಕವಿಯು, ‘ಪವನದಂತೆ ಪಾವನ’ ಎಂದು ಹೇಳುತ್ತಾನೆ.
(ಎರಡನೆಯ ನುಡಿ:)
ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ
ಈ ಚೈತನ್ಯಪೂರ್ಣ, ಉಲ್ಲಾಸಮಯ ವಾತಾವರಣವು ಕವಿಯಲ್ಲಿ ಯಾವ ಭಾವನೆಯನ್ನು ಮೂಡಿಸುತ್ತಿದೆ? ಅದು ಅನಿರ್ವಚನೀಯವಾದ, ಆಧ್ಯಾತ್ಮಿಕತೆಗೆ ಹತ್ತಿರವಾದ ಭಾವನೆಯಾಗಿದೆ. ಬ್ರಹ್ಮಭಾವನೆ, ವಿಶ್ವ-ಏಕಾತ್ಮ ಭಾವನೆ ಎಂದು ಹೇಳಬಹುದೇನೊ? ಅದು ಕವಿಯ ಅನುಭವಕ್ಕೆ ಬರುತ್ತಿದೆಯೇ ಹೊರತು, ಏನೆಂದು ಹೇಳಲು ಬರದಂತಿದೆ. (ಶಂಕರಾಚಾರ್ಯರು ಬ್ರಹ್ಮವನ್ನು ‘ನೇತಿ, ನೇತಿ’ ಎಂದು ಬಣ್ಣಿಸಿದ್ದನ್ನು ನೆನಪಿಸಿಕೊಳ್ಳಬಹುದು.) ಆದುದರಿಂದ ಕವಿ ಅದನ್ನು ‘ಏನೊ ವಿಧ!’ ಎಂದು ಬಣ್ಣಿಸುತ್ತಾನೆ. (ಆಮೂಲಕ ಅದು ‘ಬ್ರಹ್ಮಾನಂದ’ ಎಂದು ಸೂಚಿಸುತ್ತಾನೆ.) ಆ ಭಾವನೆ ಏನೆಂದು ಹೇಳಲು ಬರದಿದ್ದರೂ,ಅದು ಕವಿಯಲ್ಲಿ ಒಂದು ಭಾವಪಕ್ವತೆಯನ್ನು ಹುಟ್ಟಿಸಿದೆ. ಅದು ಕವಿಯ ಅನುಭವಕ್ಕೆ ಬರುತ್ತಿರುವ ‘ಹದ’! ಇಂತಹ ಹದ ಅಥವಾ ಪಕ್ವತೆ ಬರಲು ಕಾರಣವೆಂದರೆ, ಕವಿಯ ಅಹಂಭಾವವು ಇಲ್ಲಿ ಗಾಳಿಗೊಡೆದ ಬುದ್ಬುದ ಅಂದರೆ ನೀರಗುಳ್ಳೆಯಾಗಿದೆ. ಪ್ರಕೃತಿಚೈತನ್ಯದ ಎದುರಿಗೆ ಮನುಷ್ಯ ತಾನೆಷ್ಟು ಅಲ್ಪ ಎನ್ನುವದನ್ನು ಅರಿಯುತ್ತಾನೆ. ಆ ಕ್ಷಣದಲ್ಲಿ ಅವನಿಗೆ ‘ಯಾವುದು ಮಹತ್?’ ಎನ್ನುವ ಸತ್ಯದ ದರ್ಶನವಾಗುತ್ತದೆ. ಅದೇನೆಂದರೆ, ‘ಬೆಳಕೆ ಬದುಕು!’ ನಿಸರ್ಗದಲ್ಲಿರುವ ಗಿಡ,ಮರಗಳಿಗೆ ಬೆಳಕು ಬೇಕು; ಅಲ್ಲಿರುವ ಪಕ್ಷಿಗಳಿಗೆ ಬೆಳಕು ಬೇಕು. ಬೆಳಕು ಅವುಗಳಿಗೆ ಜೀವನವನ್ನು ಕೊಡುತ್ತದೆ. ಮನುಷ್ಯನಿಗೂ ಸಹ ಬೆಳಕು ಬೇಕು. ಆದರೆ ಇದು ಬರಿ ಹೊರಗಿನ ಬೆಳಕಲ್ಲ. ಮನುಷ್ಯನಿಗೆ ಬೇಕಾಗಿರುವದು ಅಂತರಂಗದ ಬೆಳಕು. ಈ ಸತ್ಯದರ್ಶನವೇ ಕವಿಗೆ ಮುದವನ್ನು ಅಂದರೆ ಸಂತೋಷವನ್ನು ಕೊಡುತ್ತದೆ. ಈ ಸಂತೋಷವು ಸ್ವಯಂಸ್ಫೂರ್ತ ಸಂತೋಷವು. ತನ್ನಿಂದ ತಾನೇ ಹೊರಹೊಮ್ಮಿದ್ದು. ಆದುದರಿಂದ ಕವಿ ಈ ಸಂತೋಷವನ್ನು ‘ಜೀವ ಹೊಮ್ಮಿ ಚಿಮ್ಮಿದ ಮುದ’ ಎಂದು ಕರೆಯುತ್ತಾನೆ.
(ಮೂರನೆಯ ನುಡಿ:)
ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ
ನಾವು ಸಂಸ್ಕೃತಿ ಎಂದು ಕರೆಯುವ ಮಾನವ-ನಾಗರಿಕತೆಗಳಲ್ಲಿ ಎಲ್ಲ ಮಾನವರನ್ನು ಒಂದೇ ಶಿಸ್ತಿನ ಏಕತಾನತೆಗೆ ಒಳಪಡಿಸುವ ವಿಕೃತಿ ಇದೆ. ಆದರೆ ಪ್ರಕೃತಿಯಲ್ಲಿ ಇರುವದು ಸ್ವಚ್ಛಂದತೆ; ಏಕತಾನತೆ ಅಲ್ಲ. ಈ ವನರಾಜಿಯಲ್ಲಿ ನೂರಾರು ತರದ ಮರಗಳಿವೆ. ಅಲ್ಲಿರುವ ಹಕ್ಕಿಗಳು ನೂರಾರು ತರದ ಸ್ವರ ಹೊರಡಿಸುತ್ತಿವೆ. ಇಂತಹದೇ ಸ್ವರ ಹೊರಡಿಸಬೇಕೆನ್ನುವ ಕಟ್ಟುನಿಟ್ಟು ಅವುಗಳಿಗೂ ಇಲ್ಲ. ಇಂತಹ ಬಂಧನವು ಇರದ ಕಾರಣದಿಂದಲೆ ಇವುಗಳ ಹಾಡು ಬಂಧುರ ಅಂದರೆ ಉಲ್ಲಾಸದಾಯಕವಾಗಿದೆ. ಇವುಗಳ ಹಾಡು ಹಾಗು ಹಾರಾಟ ಸ್ವಚ್ಛಂದ ವಾಗಿರುವದರಿಂದಲೇ ಇವುಗಳ ಬದುಕು ಸುಂದರವಾಗಿದೆ. ಬದುಕಿನಲ್ಲಿ ವಿವಿಧ ಸ್ವರಗಳು ಬೇಕು. ಆದರೆ ಮಧುರವಾದ ಸ್ವರಮೇಳಕ್ಕಾಗಿ ಸಾಮರಸ್ಯವೂ ಬೇಕು. ಇದು ಕವಿಯು ಇಲ್ಲಿ ಅನುಭವಿಸಿದ ದರ್ಶನವಾಗಿದೆ. ಪ್ರಕೃತಿಯಲ್ಲಿ ಒಂದಾಗಿ, ಪ್ರಕೃತಿಯ ಉಲ್ಲಾಸವೇ ತನ್ನ ಉಲ್ಲಾಸವಾಗಿದ್ದನ್ನು ಕವಿ ಅನುಭವಿಸಿದ ಕಾವ್ಯವು ಇದಾಗಿದೆ.
...........................................................................
ಈ ಕವನದ ವೈಶಿಷ್ಟ್ಯ:
ಸೂರ್ಯೋದಯದಿಂದಾಗಿ ಮೂಡುವ ನಿಸರ್ಗವೈಭವವು ಕವಿಗಳಲ್ಲಿ ಉಲ್ಲಾಸವನ್ನು ಮೂಡಿಸುವದು ಸಹಜ ಹಾಗು ಸಾಮಾನ್ಯ. ಇಂತಹ ಕವನಗಳು, ಸ್ವತಃ ಬೇಂದ್ರೆಯವರೇ ಬರೆದಂತಹವು, ಅನೇಕವಿವೆ. ಸಾಮಾನ್ಯವಾಗಿ, ಪ್ರಕೃತಿ ಅನುಭವಿಸುವ ಸಂವೇದನೆಗಳು ಮಾನವನ ಅನುಭವಕ್ಕೆ ಹೊರತಾಗಿವೆ. ಆದರೆ, ಈ ಕವನದಲ್ಲಿ, ಉಷಃಕಾಲವು ನಿಸರ್ಗದಲ್ಲಿ ಮೂಡಿಸಿದ ಉಲ್ಲಾಸದ ಅನುಭವವಿದೆ. ಈ ಅನುಭವವು ಕವಿಯನ್ನು ಮೂಕನನ್ನಾಗಿಸುತ್ತದೆ. (“ಏನೊ ವಿಧ! ಏನೊ ಹದ.”) ಪ್ರಕೃತಿಯ ಅಗಾಧತೆಯ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ತಿಳಿಸುತ್ತದೆ. ಬದುಕಿನಲ್ಲಿ ಸ್ವಾತಂತ್ರ್ಯ ಬೇಕು, ಅದರೊಡನೆಯೆ ಸಾಮರಸ್ಯವೂ ಬೇಕು ಎನ್ನುವ ದರ್ಶನವನ್ನು ಕವಿಯಲ್ಲಿ ಹುಟ್ಟಿಸುತ್ತದೆ. ಇಂತಹ ಬೃಹದ್ದರ್ಶನವನ್ನು ಮಾಡಿಸುವ ಈ ಕವನದಲ್ಲಿ ಇರುವದು ಕೇವಲ ಮೂರು ನುಡಿಗಳು ಅಥವಾ ಮೂವತ್ತಾರು ಪದಗಳು! ‘ಕಿರಿದರೊಳ್ ಪಿರಿದರ್ಥವನು’ ಪೇಳುವದು ಎಂದರೆ ಇದೇ ಇರಬೇಕು!
ಬೇಂದ್ರೆಯವರದು ಅಸೀಮ ಕಲ್ಪನಾವಿಲಾಸ ಹಾಗು ಅಪಾರವಾದ ಪದಸಾಮರ್ಥ್ಯ. ಅವರ ‘ಪಾತರಗಿತ್ತಿ ಪಕ್ಕಾ’, ‘ಬೆಳದಿಂಗಳ ನೋಡಾ’ ಮೊದಲಾದ ಕವನಗಳನ್ನು ಓದಿದವರಿಗೆ ಇದರ ಅನುಭವವಿದೆ. ಆದರೆ ‘ವಸಂತಮುಖ’ ಕವನದಲ್ಲಿ, ಬೇಂದ್ರೆಯವರು ನಿಸರ್ಗದ ಆನಂದದಲ್ಲಿ ಎಷ್ಟು ಪರವಶರಾಗಿದ್ದಾರೆಂದರೆ, ಅತಿ ಚಿಕ್ಕದಾದ ಕವನದಲ್ಲಿ ಅತಿ ಮಹತ್ವದ ದರ್ಶನ ಇಲ್ಲಿ ಹೊಮ್ಮಿದೆ. ಇದೇ ಈ ಕವನದ ವೈಶಿಷ್ಟ್ಯವಾಗಿದೆ.
……………………………………………
ಟಿಪ್ಪಣಿ:
(೧) ಪಾಂಡವರು ವನವಾಸದಲ್ಲಿದ್ದಾಗ, ಓರ್ವ ಮುನಿಯನ್ನು ಅವಮಾನಿಸಿದ್ದಕ್ಕಾಗಿ ಅರ್ಜುನನು ಶಪಿತನಾದನು. ಶಾಪಮುಕ್ತಿಗಾಗಿ ಆತನು ತೀರ್ಥಯಾತ್ರೆಯನ್ನು ಮಾಡಬೇಕಾಯಿತು.‘ಬುದ್ಬುದಾ’ ಎನ್ನುವ ಅಪ್ಸರೆಯು ಈ ಪ್ರಸಂಗಕ್ಕೆ ಸಂಬಂಧಿಸಿದ್ದಾಳೆ. ಬೇಂದ್ರೆಯವರು ಎರಡನೆಯ ಸಾಲಿನಲ್ಲಿ ಬಳಸಿದ ‘ಬುದ್ಬುದ’ ಪದವು ಈ ಕಾರಣದಿಂದಾಗಿ ಬಂಧ ಹಾಗು ಮೋಕ್ಷವನ್ನು ಸೂಚಿಸುತ್ತದೆ.
(೨) ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ದೇಸಿ ಶೈಲಿಯಲ್ಲಿವೆ ಎನ್ನುವದು ಕೆಲವು ವಿಮರ್ಶಕರ ಅಭಿಪ್ರಾಯ. ಈ ಕವನವು ಮಾರ್ಗ ಭಾಷೆಯಲ್ಲಿದ್ದೂ ಸಹ ಬೇಂದ್ರೆಯವರ ಕವನಗಳಲ್ಲಿಯೇ ಶಿಖರಸ್ಥಾಯಿಯಾಗಿರುವದನ್ನು ಗಮನಿಸಬೇಕು.
ಹೆಚ್ಚಿನ ಟಿಪ್ಪಣಿ:
(೧) ಒಂದೇ ಸಾಲಿನಲ್ಲಿ ಜೀವನದರ್ಶನವನ್ನು ಮಾಡಿಸುವ ಕವನಗಳು ಕನ್ನಡದಲ್ಲಿ ಇದ್ದೇ ಇವೆ. ಅನೇಕ ವರ್ಷಗಳ ಹಿಂದೆ, ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ‘ಕನ್ನಡ ಕವಿಗಳ ಪ್ರತಿಭೆಯ ಮಿಂಚು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕೆಲವು ಕವನಗಳ ಒಂದೊಂದು ಸಾಲನ್ನು ಕೊಡಲಾಗಿತ್ತು. ಸೂರ್ಯೋದಯಕ್ಕೆ ಸಂಬಂಧಿಸಿದಂತೆ ಅಂತಹ ಒಂದು ಸಾಲು ಇಲ್ಲಿದೆ:
“ಶಿವ ಬರೆದ ಕತೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು.”
ಕವಿಯ ದೈವಶ್ರದ್ಧೆಯನ್ನು, ಈ ಶ್ರದ್ಧೆ ಅವನಲ್ಲಿ ಮೂಡಿಸುವ ಸ್ಥೈರ್ಯವನ್ನು, ಶಿವವಾದುದನ್ನು ಅಂದರೆ ಮಂಗಲವನ್ನೇ ಬಯಸುವ ಅವನ ಮನೀಷೆಯನ್ನು ಈ ಸಾಲು ಅದ್ಭುತವಾಗಿ ಬಿಂಬಿಸುತ್ತದೆ. ಈ ಸಾಲಿನ ಕೆಳಗೆ ‘ಮಸಳಿ’ ಎನ್ನುವ ಅಂಕಿತವಿದ್ದುದ್ದಾಗಿ ನನ್ನ ಮಸುಕಾದ ನೆನಪು ಹೇಳುತ್ತಿದೆ. ಆದರೆ ಇದು ಹೀಗೇ ಎಂದು ಹೇಳಲು ಈಗ ಸಾಧ್ಯವಾಗದು.
(೨) ಇಂಗ್ಲಿಶ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ Reader’s Digest ತರಹದ ಮಾಸಿಕವನ್ನು ಕನ್ನಡದಲ್ಲಿ ತರಲು ಉದ್ದೇಶಿಸಿದ ಲೋಕಶಿಕ್ಷಣ ಸಂಸ್ಥೆಯು ‘ಕಸ್ತೂರಿ’ ಮಾಸಿಕವನ್ನು ಹೊರತಂದಿತು. Reader’s Digestನಲ್ಲಿ ಪ್ರಕಟವಾಗುತ್ತಿದ್ದ ಸ್ಥಿರಶೀರ್ಷಿಕೆ ‘Life’s like that’ ಗೆ ಸಂವಾದಿಯಾಗಿ ಕಸ್ತೂರಿ ಮಾಸಿಕದಲ್ಲಿ ’ಇದುವೇ ಜೀವ ಇದು ಜೀವನ’ ಶೀರ್ಷಿಕೆಯನ್ನು ತರಲಾಯಿತು. ಕನ್ನಡದ ಶೀರ್ಷಿಕೆಯು ‘ವಸಂತಮುಖ’ ಕವನದ ಮೊದಲನೆಯ ನುಡಿಯ ಮೂರನೆಯ ಸಾಲೇ ಆಗಿರುವದನ್ನು ಗಮನಿಸಬಹುದು.