ಕನ್ನಡದ ಖ್ಯಾತ ನಾಟಕಕಾರರಾದ ಶ್ರೀ ವ್ಯಾಸ ದೇಶಪಾಂಡೆಯವರು ಶಾಸಕರ ಬಗೆಗಿನ ತಮ್ಮ ಅಭಿಪ್ರಾಯವನ್ನು ಕವನರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ. ಆಳುವ ಪಕ್ಷದವರೇ ಇರಲಿ, ವಿರೋಧ ಪಕ್ಷದವರೇ ಆಗಲಿ ಶಾಸಕರೆಲ್ಲ ಒಂದೇ. ಅವರು ಅಲ್ಲಿಯೂ ಸಲ್ಲದವರು, ಇಲ್ಲಿಯೂ ಸಲ್ಲದವರು.
ವ್ಯಾಸ ದೇಶಪಾಂಡೆಯವರ ಕವನವನ್ನು ಓದಿ ಆನಂದಿಸಿರಿ:
ಶಾಸಕರೆ, ಶಾಸಕರೆ,
ನೀವೇನೂಟವ ಮಾಡಿದಿರಿ?
ವಿಧಾನಸಭೆಯ ಒಳಗಡೆ ಮಲಗಿ,
ನಿಧಾನನೀತಿಯ ಜಗ್ಗಿದಿರಿ.
ನಿಧಾನ ನಡೆಯ ಪ್ರಧಾನಕರ್ತರೆ,
ಧರಣಿಯ ಶಯನವ ಮಾಡಿದಿರಿ.
ಶಾಸಕರೆ, ಶಾಸಕರೆ,
ನೀವೇನೂಟವ ಮಾಡಿದಿರಿ?
ಮೂರು ಕಾಲಿನ ಓಟವ ಓಡಿ,
ಮೂರಾಬಟ್ಟೆ ಕಲಾಪ ಮಾಡಿ,
ಮೂರೂ ಬಿಟ್ಟು ಬೈದಾಡಿದಿರಿ;
ಘನತೆಯ ಬಿಟ್ಟು ಗುದ್ದಾಡಿದಿರಿ,
ಧರಣಿಯ ಶಯನವ ಮಾಡಿದಿರಿ.
ಶಾಸಕರೆ, ಶಾಸಕರೆ,
ನೀವೇನೂಟವ ಮಾಡಿದಿರಿ?
ಗಣಿಗಣಿ ಝಣಝಣ ಹಪಿಹಪಿಸುವಿರಿ,
ನಿಮ್ಮಯ ಪಾಲನು ಎಣಿಸುವಿರಿ;
ಭೀಮ-ಬಕಾಸುರ ನುಂಗುವ ಕುಸ್ತಿ,
ಸದನದ ಬಾವಿಗೆ ಹಾರುವ ಮಸ್ತಿ,
ಧರಣಿಯ ಶಯನವ ಮಾಡಿದಿರಿ.
ಶಾಸಕರೆ, ಶಾಸಕರೆ,
ನೀವೇನೂಟವ ಮಾಡಿದಿರಿ?
ನೋಟಿನ ಹಾರವ ಕೊರಳಲಿ ಧರಿಸಿ,
ಓಟನು ಕಾಸಿಗೆ ಕೊಳ್ಳುವಿರಿ;
ಜನಹಿತವೆಂಬುದ ಮನದಲಿ ನೆನೆಯದೆ,
ದಿಲ್ಲಿಯ ಬಾಗಿಲಿಗೋಡುವಿರಿ;
ಧರಣಿಯಲ್ಲಿ ಉರಳಾಡುವಿರಿ,
ಧರಣಿಯಲ್ಲಿ ಹೊರಳಾಡುವಿರಿ.
ಶಾಸಕರೆ, ಶಾಸಕರೆ,
ನೀವೇನೂಟವ ಮಾಡಿದಿರಿ?
----ವ್ಯಾಸ ದೇಶಪಾಂಡೆ
.................................................................................
ಶಾಸಕರಷ್ಟೇ ರಾಜಕಾರಣ ಮಾಡುತ್ತಾರಂತಲ್ಲ. ರಾಜ್ಯಪಾಲರು ಇನ್ನೂ ಹೆಚ್ಚಿನ ರಾಜಕೀಯದಲ್ಲಿ ಮುಳುಗಿದ ನಿದರ್ಶನಗಳಿವೆ. ಕರ್ನಾಟಕದ ಸದ್ಯದ ರಾಜಕೀಯವನ್ನೇ ಗಮನಿಸಿ:
ಕರ್ನಾಟಕದ ರಾಜ್ಯಪಾಲರು ತಮ್ಮ ಸರಕಾರದ ವಿರುದ್ಧವೇ ರಣಕಹಳೆಯನ್ನು ಊದಿದ್ದಾರೆ. ತಮ್ಮ ಹೋರಾಟವು ಭ್ರಷ್ಟಾಚಾರದ ವಿರುದ್ಧವೇ ಹೊರತು, ಬಿಜೆಪಿ ಪಕ್ಷದ ಸರಕಾರದ ವಿರುದ್ಧ ಅಲ್ಲ ಎನ್ನುವ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ. ತಾವು ರಾಜ್ಯಪಾಲರಾಗಿರುವದರಿಂದ ಯಾವುದೇ ಪಕ್ಷಕ್ಕೆ ಸೇರಿದವರು ಅಲ್ಲ; ಆದರೆ ತಮ್ಮ ಅಂತರಂಗದಲ್ಲಿ ತಾವು ನಿಷ್ಠ ಕಾಂಗ್ರೆಸ್ಸಿಗರು ಎಂದು ಬಿಚ್ಚುಮನಸ್ಸಿನಿಂದ ಹೇಳಿದ್ದಾರೆ. ಇವೆಲ್ಲವನ್ನೂ ಪರೀಕ್ಷಿಸುವ ಮೊದಲು ರಾಜ್ಯಪಾಲರ ಸಾಂವಿಧಾನಿಕ ಸ್ಥಿತಿಯನ್ನು ಸ್ವಲ್ಪ ಅವಲೋಕಿಸೋಣ.
ಭಾರತದ ರಾಷ್ಟ್ರಪತಿಗಳನ್ನು ಲೋಕಸಭೆಯ ಸದಸ್ಯರು ಚುನಾಯಿಸುತ್ತಾರೆ. ಹೀಗಾಗಿ ಕೇಂದ್ರದಲ್ಲಿ ಬಹುಮತದಲ್ಲಿದ್ದ ಪಕ್ಷಕ್ಕೆ ಬೇಕಾದ ಅಭ್ಯರ್ಥಿಯೇ ರಾಷ್ಟ್ರಪತಿಯಾಗುವದು ಸಹಜ. ರಾಷ್ಟ್ರಪತಿಯಾದ ಬಳಿಕ ಅವರ ನಿಷ್ಠೆಯು ಸಂವಿಧಾನಕ್ಕೆ ಮಾತ್ರ ಮೀಸಲಾಗಿರಬೇಕು. ಆದರೆ ಇಂದಿರಾ ಗಾಂಧಿಯವರು ಪ್ರಧಾನಿಯಾದ ಬಳಿಕ ರಾಷ್ಟ್ರಪತಿಯವರ ಸಂವಿಧಾನ ನಿಷ್ಠೆಯು ‘ಇಂದಿರಾ-ನಿಷ್ಠೆ’ಯಾಗಿ ಬದಲಾಯಿತು. ಶ್ರೀ ವರಾಹಗಿರಿ ವೆಂಕಟರಮಣ ಗಿರಿಯವರು ಇಂತಹ ಮೊದಲ ‘ಇಂದಿರಾ ನಿಷ್ಠ’ ರಾಷ್ಟ್ರಪತಿಗಳು. ಬಳಿಕ ಬಂದ ಫಕರುದ್ದೀನ ಅಲಿ ಅಹಮದರಂತೂ ತುರ್ತು ಪರಿಸ್ಥಿತಿಯ ಆದೇಶಕ್ಕೆ ಮಧ್ಯರಾತ್ರಿಯಲ್ಲಿ ರುಜು ಹಾಕಿ ‘ರಬ್ಬರ ಸ್ಟ್ಯಾಂಪ ರಾಷ್ಟ್ರಪತಿ’ ಎಂದು ಖ್ಯಾತರಾದರು.
ರಾಜ್ಯಪಾಲರ ಆಯ್ಕೆಯ ವಿಧಾನ ಹೀಗಿಲ್ಲ. ರಾಜ್ಯಪಾಲರದು ಚುನಾಯಿತ ಹುದ್ದೆಯಲ್ಲ. ಕೇಂದ್ರಸರಕಾರವು ತನಗೆ ಬೇಕಾದ ಯಾರನ್ನಾದರೂ ರಾಜ್ಯಪಾಲರೆಂದು ಆಯ್ದುಕೊಂಡು ನಿಯುಕ್ತಿಗೊಳಿಸುವದು. ಈ ನಿಯುಕ್ತಿಗೆ ರಾಷ್ಟ್ರಪಾಲರು ರುಜು ಹಾಕಲೇಬೇಕು. ಆದುದರಿಂದ ರಾಜ್ಯಪಾಲರು ರಾಷ್ಟ್ರಪ್ರತಿಗಳ ಪ್ರತಿನಿಧಿಯಲ್ಲ. ತಾತ್ವಿಕವಾಗಿ ಹಾಗು ವಾಸ್ತವದಲ್ಲಿ ಅವರು ಕೇಂದ್ರಸರಕಾರದ ಪ್ರತಿನಿಧಿ. ಭಾರತದಲ್ಲಿ ಬ್ರಿಟಿಶ್ ಆಳಿಕೆಯಲ್ಲಿದ್ದ ಕಾಲದಲ್ಲಿ, ಬ್ರಿಟಿಶರು ಪ್ರತಿಯೊಂದು ಸಂಸ್ಥಾನದಲ್ಲಿ ತಮ್ಮ ಪರವಾಗಿ Resident ಎನ್ನುವ ಒಬ್ಬ ಏಜಂಟನನ್ನು ನಿಯಮಿಸುತ್ತಿದ್ದರು. ರಾಜ್ಯಪಾಲರನ್ನು ಕೇಂದ್ರಸರಕಾರದ Resident ಎಂದು ಕರೆಯಬಹುದು. ರಾಜ್ಯಪಾಲರು ಕೇಂದ್ರಸರಕಾರಕ್ಕೆ ವರದಿಗಳನ್ನು ಸಲ್ಲಿಸುತ್ತಾರೆಯೆ ವಿನ: ರಾಷ್ಟ್ರಪತಿಗಳಿಗಲ್ಲ. ಈ ವರದಿಗಳನ್ನು ಆಧರಿಸಿ ಕೇಂದ್ರಸರಕಾರವು ತನಗೆ ಉಚಿತವೆನಿಸಿದ ಕ್ರಮವನ್ನು ಕೈಗೊಳ್ಳುವದು. ನಮ್ಮದು Unitary ಹಾಗು Fedaral ಇವೆರಡರ ಸಂಯುಕ್ತ ಪದ್ಧತಿಯಾಗಿರುವದರಿಂದ, ಈ ತರಹದ ವಿಧಾನವನ್ನು ಮಾಡಲಾಗಿದೆ. ಹೀಗಿರುವಾಗ, ರಾಜ್ಯಪಾಲರು ಪಕ್ಷಾತೀತರಾಗಿರಬೇಕು ಹಾಗು ಸಂವಿಧಾನಕ್ಕೆ ಮಾತ್ರ ನಿಷ್ಠರಾಗಿರಬೇಕು ಎಂದು ಅಪೇಕ್ಷಿಸುವದು ಸಾಧ್ಯವಾದೀತೆ?
ರಾಜ್ಯಪಾಲರು ಪಕ್ಷಾತೀತರಾದರೆ, ಅವರು ಆನಂತರ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು, ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಸ್ಥಾನವನ್ನು (ಅಂದರೆ ಮಂತ್ರಿಸ್ಥಾನ ಇತ್ಯಾದಿ) ಹೊಂದಬಾರದು. ಆದರೆ, ವಸ್ತುಸ್ಥಿತಿ ಹಾಗಿಲ್ಲ. ಶ್ರೀ ಎಸ್.ಎಮ್. ಕೃಷ್ಣರು ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದರು. ಆ ಅವಧಿಯಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ತೀರ ಬೇಕಾದವರಾದರು. ಆದುದರಿಂದ ರಾಜ್ಯರಾಜಕಾರಣದಿಂದ ನಿವೃತ್ತರಾಗಬೇಕಾದ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಪದವಿಯನ್ನು ಗಿಟ್ಟಿಸಿಕೊಂಡರು. ಆಬಳಿಕ ಮತ್ತೆ ಕೇಂದ್ರ ಮಂತ್ರಿಗಳಾಗಿ ದಿಲ್ಲಿಗೆ ಹಾರಿದರು. ಇಂತಹ ರಾಜ್ಯಪಾಲರು ಪಕ್ಷಾತೀತರಾಗಿ ಉಳಿಯಬೇಕೆಂದು ಅಪೇಕ್ಷಿಸಲು ಸಾಧ್ಯವೆ? ಇವರ ನಿಷ್ಠೆ ಏನಿದ್ದರೂ ತಮ್ಮನ್ನು ನಿಯಮಿಸಿದ ಯಜಮಾನನಿಗೆ (ಯಜಮಾನಳಿಗೆ) ಮಾತ್ರ.
ಯಜಮಾನ-ನಿಷ್ಠೆಯ (ಇಂದಿರಾ-ನಿಷ್ಠೆಯ) ಪರಮಾವಧಿಯನ್ನು ಪ್ರದರ್ಶಿಸಿದ ರಾಜ್ಯಪಾಲರೆಂದರೆ ೧೯೮೪ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ರಾಮಲಾಲರು. ಆ ಸಮಯದಲ್ಲಿ ಶ್ರೀ ಎನ್.ಟಿ.ರಾಮರಾವರು ವಿಧಾನಸಭೆಯ ಚುನಾವಣೆಯಲ್ಲಿ ಬಹುಮತ ಪಡೆದಿದ್ದರು. ಆದರೆ ರಾಜ್ಯಪಾಲರಾದ ರಾಮಲಾಲರು ರಾಮರಾವರ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದ ಭಾಸ್ಕರರಾವ ಎನ್ನುವವರ ನೇತೃತ್ವದಲ್ಲಿ ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟರು. ರಾಮರಾವರು ತಮ್ಮ ಶಾಸಕರನ್ನು ಕರೆದೊಯ್ದು ರಾಜ್ಯಪಾಲರಿಗೆ ತೋರಿಸಿದರೂ ಸಹ ರಾಮಲಾಲ ಮಣಿಯಲಿಲ್ಲ. ಆಗ ರಾಮರಾವ ಅವರು ತಮ್ಮೆಲ್ಲ ಶಾಸಕರನ್ನು ಕರೆದುಕೊಂಡು ದಿಲ್ಲಿಗೆ ಹೋಗಿ ಅಲ್ಲಿ ತಮ್ಮ ಬಹುಮತದ ಪ್ರದರ್ಶನ ಮಾಡಿದರು. ‘ತಲೆಗಳನ್ನು ಎಣಿಸಲು ಬಾರದ ಗಣಿತಪಂಡಿತ’ ಎಂದು ರಾಮಲಾಲರನ್ನು ಆಗ ಪತ್ರಿಕೆಗಳು ಗೇಲಿ ಮಾಡಿದವು. ರಾಮರಾವರು ಮತ್ತೆ ಸರಕಾರವನ್ನು ರಚಿಸಿದರು. ರಾಮಲಾಲರು ರಾಜ್ಯಪಾಲ ಹುದ್ದೆಯನ್ನು ಬಿಟ್ಟು ದಿಲ್ಲಿಗೆ ಮರಳಬೇಕಾಯಿತು. ರಾಮರಾವರಿಗೆ ಮಣ್ಣು ಕಾಣಿಸಲು ಹೋದ ರಾಮಲಾಲರು ತಾವೇ ಮಣ್ಣು ಮುಕ್ಕಿದರು. ಅವರ ಸ್ಥಾನದಲ್ಲಿ ಬಂದ ಶಂಕರ ದಯಾಳ ಶರ್ಮಾರ ವರದಿಯನ್ನು ಆಧರಿಸಿ, ಕೇಂದ್ರ ಸರಕಾರವು ಮೂರೇ ತಿಂಗಳುಗಳಲ್ಲಿ ಎನ್.ಟಿ. ರಾಮರಾವ ಸರಕಾರವನ್ನು ವಜಾ ಮಾಡಿ, ವಿಧಾನಸಭೆಯನ್ನು ವಿಸರ್ಜಿಸಿತು. ಮತ್ತೆ ಚುನಾವಣೆಯನ್ನು ನಡೆಯಿಸಲಾಯಿತು. ರಾಮರಾವರು ಮತ್ತೆ ಬಹುಮತ ಗಳಿಸಿ ಮತ್ತೊಮ್ಮೆ ಮುಖ್ಯ ಮಂತ್ರಿಯಾದರು !
೧೯೮೯ರಲ್ಲಿ ಕರ್ನಾಟಕದಲ್ಲಿ ಜನತಾಪಕ್ಷದ ಸರಕಾರವಿತ್ತು. ಎಸ್. ಆರ್. ಬೊಮ್ಮಾಯಿಯವರು ಮುಖ್ಯ ಮಂತ್ರಿಗಳಾಗಿದ್ದರು. ಸರಕಾರದ ಬಹುಮತ ಕುಸಿದಿದೆ ಎನ್ನುವ ಆಪಾದನೆಯನ್ನು ವಿಧಾನಸಭೆಯಲ್ಲಿ ಪರೀಕ್ಷಿಸದೆ, ಆಗಿನ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯನವರು ೨೦-೪-೧೯೮೯ರಂದು ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರಿಗೆ ವರದಿ ನೀಡಿದರು. ಅದೇ ದಿನ ಬೊಮ್ಮಾಯಿ ಸರಕಾರವನ್ನು ವಜಾ ಮಾಡಿ, ವಿಧಾನಸಭೆಯನ್ನು ವಿಸರ್ಜಿಸಲಾಯಿತು ಹಾಗು ರಾಷ್ಟ್ರಪತಿ ಆಳಿಕೆಯನ್ನು ಕರ್ನಾಟಕದ ಮೇಲೆ ಹೇರಲಾಯಿತು. ಇದೇ ರೀತಿಯಲ್ಲಿ ೧೯೮೮ರಲ್ಲಿ ನಾಗಾಲ್ಯಾಂಡ ಸರಕಾರವನ್ನು, ೧೯೯೧ರಲ್ಲಿ ಮೇಘಾಲಯ ಸರಕಾರವನ್ನು ವಜಾ ಮಾಡಲಾಗಿತ್ತು. ಬಾಬರಿ ಮಸೀದಿ ಪ್ರಕರಣದ ನಂತರ ೧೫-೧೨-೧೯೯೨ರಂದು ಬಿ.ಜೆ.ಪಿ.ಸರಕಾರಗಳನ್ನು ಹೊಂದಿದ ಮೂರು ರಾಜ್ಯಗಳಲ್ಲಿ (ಮಧ್ಯ ಪ್ರದೇಶ,ಹಿಮಾಚಲ ಪ್ರದೇಶ ಹಾಗು ರಾಜಸ್ಥಾನ) ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಇವೆಲ್ಲ ಸಂದರ್ಭಗಳಲ್ಲಿ ರಾಜ್ಯಪಾಲರು ಕೇಂದ್ರಸರಕಾರದ ಪ್ರತಿನಿಧಿಯಂತೆ ವರ್ತಿಸದೆ, ಕೇಂದ್ರದಲ್ಲಿಯ ಆಡಳಿತ ಪಕ್ಷದ ಪ್ರತಿನಿಧಿಯಂತೆ ವರ್ತಿಸಿದ್ದು ಸ್ಪಷ್ಟವಿದೆ. ಕರ್ನಾಟಕ, ಮೇಘಾಲಯ ಹಾಗು ನಾಗಾಲ್ಯಾಂಡಗಳ ಮೇಲ್ಮನವಿಗಳನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರು ವಿಧಾನಸಭೆಯ ವಿಸರ್ಜನೆಗೆ ವರದಿ ಸಲ್ಲಿಸುವ ಮೊದಲು, ವಿಧಾನಸಭೆಯಲ್ಲಿಯೇ ಪಕ್ಷಗಳ ಬಲಾಬಲವನ್ನು ಪರೀಕ್ಷಿಸಲು, ವಿಧಾನಸಭೆಯ ಸಭಾಪತಿಗಳಿಗೆ ಸೂಚನೆ ನೀಡುವದೇ ಸರಿಯಾದ ಏಕೈಕ ವಿಧಾನ ಎಂದು ನಿರ್ಣಯ ನೀಡಿತು. ಇದು ಕೇಂದ್ರಸರಕಾರಕ್ಕೆ ಆದ ಮುಖಭಂಗ. ಆದರೇನು, ಅದಾಗಲೇ ಕರ್ನಾಟಕದಲ್ಲಿ ಮರುಚುನಾವಣೆಗಳನ್ನು ಜರುಗಿಸಲಾಗಿತ್ತು. ಈ ಸಲವೂ ಸಹ ಜನತಾ ಪಕ್ಷವೇ ಅಧಿಕಾರಕ್ಕೆ ಬಂದಿತು. ಆದರೆ ಬೊಮ್ಮಾಯಿಯವರಿಗೆ ಆದ ಹಾನಿಯನ್ನು ಸರಿಪಡಿಸಲಾಗಲಿಲ್ಲ. ಏಕೆಂದರೆ ಅವರ ಬದಲು, ಈ ಬಾರಿ ದೇವೇಗೌಡರು ಮುಖ್ಯ ಮಂತ್ರಿಗಳಾದರು !
ಈ ರೀತಿಯಾಗಿ ಕೇಂದ್ರ ಸರಕಾರವು ಚುನಾಯಿತ ರಾಜ್ಯಸರಕಾರವನ್ನು ಉರುಳಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಲೇ ಬಂದಿದೆ. ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರಿಗೆ ಮೂಗುದಾಣ ಹಾಕಿದ ನಂತರವೇ ಈ ಕುಟಿಲ ತಂತ್ರಕ್ಕೆ ಕಡಿವಾಣ ಬಿದ್ದಿದೆ.
ಕರ್ನಾಟಕದ ಸದ್ಯದ ರಾಜ್ಯಪಾಲ ಭಾರದ್ವಾಜರು ಸಂವಿಧಾನವನ್ನು ಮೀರುವ ಕಾರ್ಯವನ್ನು ಮಾಡಿಲ್ಲ. ತಮ್ಮ ಯಜಮಾನರ ಆದೇಶ ಬಂದರೆ ಮಾಡಲೂ ಸಿದ್ಧ ಎನ್ನುವ ಧೋರಣೆಯನ್ನು ಅವರು ಪ್ರದರ್ಶಿಸಿದ್ದಾರೆ. ಅಂದರೆ ಅವರು ಒಬ್ಬ ರಾಜಕಾರಣಿಯಂತೆಯೇ ವರ್ತಿಸಿದ್ದಾರೆ. ರಾಜ್ಯಪಾಲರ ಗೌರವಯುತ ಹುದ್ದೆಯಲ್ಲಿದ್ದ ವ್ಯಕ್ತಿ ಸಾರ್ವಜನಿಕ ಮಾಧ್ಯಮಗಳ ಎದುರಿಗೆ ತಾನು ಒಂದು ಪಕ್ಷಕ್ಕೆ ಸೇರಿದವನು ಎಂದು ಘೋಷಿಸುವದು ಉಚಿತವೆ? ತನ್ನ ಸರಕಾರದ ವಿರುದ್ಧವೇ ಸಾರ್ವಜನಿಕವಾಗಿ ಟೀಕೆ ಮಾಡಬಹುದೆ? ಇದರಲ್ಲಿ ರಾಜಕೀಯ ದುರುದ್ದೇಶ ಇಲ್ಲವೆ? ಇದು ಶಿಷ್ಟಾಚಾರವೊ ಅಥವಾ ದುಷ್ಟಾಚಾರವೊ? ಅಥವಾ ಅವರು ತಮ್ಮ ಪಕ್ಷ ನಿಷ್ಠೆಯನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸುತ್ತಿದ್ದಾರೆಯೆ? ಯಾರಿಗೆ ಗೊತ್ತು, ಇಂತಹ ನಿಷ್ಠೆಯನ್ನು ಪ್ರದರ್ಶಿಸಿದ್ದಕ್ಕಾಗಿ, ಅವರಿಗೆ ಭವಿಷ್ಯದಲ್ಲಿ ಉಪರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಹುದ್ದೆ ದೊರೆಯಲೂ ಬಹುದು!
48 comments:
ದಿನೆ ದಿನೆ ಹುದ್ದೆ ಮತ್ತು ದುಡ್ಡಿನ ಕ೦ತೆಗೆ ತಕ್ಕ೦ತೆ ಆಚಾರ ಬದಲಾವಣೆ....!!!
ಪ್ರಿಫಿಕ್ಸ್ ಯಾವುದಾದರೂ ಇರಲಿ....
ವಾಸ್ತವಿಕ ವಿಚಾರ ಒಪ್ಪುವ೦ತಿದೆ...
ರಾಜ್ಯಪಾಲರ ರಾಜಕಾರಣದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದೀರಿ..ಅದಕ್ಕಾಗಿ ಅಭಾರಿ. ನಾಗರಿಕರ ನೆನಪಿನ ಶಕ್ತಿ ಕಡಿಮೆ!..ಹೊಸ ಹೊಸ ರಾಧ್ಧಾಂತಗಳು ಸೃಸ್ತಿಯಾಗುತ್ತಿದ್ದ ಹಾಗೆ ಹಿಂದಿನದು ಮರೆತು ಹೋಗುತ್ತದೆ..ಪ್ರಜಾಸತ್ತೆ ಚಿರಾಯುವಾಗಲಿ.
ತುಂಬಾ ವಿಚಾರ ಕಲೆ ಹಾಕಿದ್ದೀರಿ.
ಈಗಿನ ವಿಚಾರದಲ್ಲಿ ರಾಜ್ಯಪಾಲರು ಪಕ್ಷಾತಿತರಾಗಿರಬೇಕು. ಬಹುಷ್ಯ ಅಂತ ಮನುಷ್ಯ ರಾಜ್ಯಪಾಲರಾಗುದಿಲ್ಲವೇನೋ...?
ಶಾಸಕರೆ,ಶಾಸಕರೆ,
ನೀವೇನೂಟವ ಮಾಡಿದಿರಿ?
ತುಂಬಾ ಚೆನ್ನಾಗಿದೆ ಲೇಖನ.
ನಿಮ್ಮವ,
ರಾಘು .
ವಿಜಯಶ್ರೀ,
ಪ್ರಿಫಿಕ್ಸ ಯಾವುದೇ ಇರಲಿ, ಸಫಿಕ್ಸ ಬಂದರೆ ಸಾಕು!
ಭಟ್ಟರೆ,
Public memory is short. ಅದಕ್ಕೇ ನಾವು ಬಿದ್ದ
ಬಾವಿಯಲ್ಲಿಯೇ ಮತ್ತೆ ಮತ್ತೆ ಬೀಳುವದು!
ರಾಘು,
ಸರಿಯಾಗಿ ಹೇಳಿದಿರಿ. ನಿಷ್ಪಕ್ಷಪಾತಿ ರಾಜ್ಯಪಾಲರೆಂದರೆ ನಿರುಪಯೋಗಿ ರಾಜ್ಯಪಾಲರು!
ಇವತ್ತಿನ ಕರ್ನಾಟಕ ರಾಜಕಾರಣವನ್ನು ನೋಡುತ್ತಿದ್ದರೆ,
ಚಿಂದ್ಯಾಗಿ ಒಂದಾದ ಚೆಲುವ ಕನ್ನಡ ನಾಡು
ಗಂಟುಕಳ್ಳರ ಕೈಗೆ ಸಿಕ್ಕ ಕಥೆ ನೋಡು -
ಎಂಬ ಚಂಪಾ ಅವರ ಕವನವೊಂದು ನೆನಪಾಗುತ್ತದೆ, ಕಾಕಾ.
ಸುನಾತ ಸರ್...
ಕೇಂದ್ರದಲ್ಲಿ ವಾಜಪೇಯಿ ಸರಕಾರ ಬಂದ ಮೇಲೆ..
ವಿರೋಧ ಪಕ್ಷಗಳ "ರಾಜ್ಯ ಸರಕರಗಳ ವಿಸರ್ಜನೆ ಕಡಿಮೆಯಾಗಿದೆ...
ಇಂದಿರಾ ಗಾಂಧಿಯವರಿದ್ದಾಗ ನಡೆಯುವಷ್ಟು ವಿಸರ್ಜನೆ ಈಗ ನಡೆಯುತ್ತಿಲ್ಲ...
"ಡೊಂಕು ಬಾಲದ ನಾಯಕರೆ..." ಹಾಡಿನ ಥರಹದ ಈ ಹಾಡು ಬಹಳ ಸೊಗಸಾಗಿದೆ...
ನೀವು ಕೊಟ್ಟ ಸಂಗತಿಗಳನ್ನು ಓದಿದಾಗ "ನಮ್ಮದು ಪ್ರಜಾ ಪ್ರಭುತ್ವದ ಅಣಕ" ಅನ್ನಿಸಿಬಿಟ್ಟಿತು...
ರಾಜ್ಯಪಾಲರ ರಾಜಕಾರಣದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..ವ್ಯಾಸ
ದೇಶಪಾ೦ಡೆಯವರ ಕವನ ಸೊಗಸಾಗಿದೆ.
ತ್ರಿವೇಣಿ,
ಹಾ ಹಾ! ಚಂಪಾ ಕವನ ಸರಿಯಾಗಿದೆ, ನೋಡಿ!
ಪ್ರಕಾಶ,
ಇಂದಿರಾ ಗಾಂಧಿ ರಾಜ್ಯಸರಕಾರಗಳನ್ನು ವಿಸರ್ಜನೆ ಮಾಡಿದರು. ವಾಜಪೇಯಿ ಮಾಡಿದ ವಿಸರ್ಜನೆಯೇ ಬೇರೆ!
ಮನಮುಕ್ತಾ,
ವ್ಯಾಸ ದೇಶಪಾಂಡೆಯವರಿಗೆ ನಿಮ್ಮ ಮೆಚ್ಚುಗೆಯನ್ನು ತಿಳಿಸುವೆ.
ಧನ್ಯವಾದಗಳು.
ಸುನಾಥರೆ,
ನಮ್ಮ ವ್ಯವಸ್ತೆ ಯ ಬಗ್ಗೆ ಚೆನ್ನಾಗಿ ಬರೆದಿರುವಿರಿ.
ಆದರೆ ನಮ್ಮ ಪ್ರತಿನಿಧಿಗಳ ಹೊಲಸು ತನ ಚುನಾವಣಾ ಸಮಯದಲ್ಲಿ ನೆನಪಿಗೆ ಬರೋಲ್ವೆ?
ಕೇಂದ್ರ ದಲ್ಲಿ ಸರಕಾರ ಗಳು ಬದಲಾದರೆ, ಹಿಂದಿನ ಸರಕಾರ ನೇಮಿಸಿದ್ದ ರಾಜ್ಯಪಾಲರು ಗಳಿಗೆ ಗೇಟ್ ಪಾಸ್ ಕೊಡುತ್ತಾರೆ. ವಾಜಪೇಯಿ ಸರಕಾರ ದಲ್ಲಿ ಇದ್ದ ರಾಜ್ಯಪಾಲರು ಗಳು ಸೋನಿಯಾ ಕಾಲದಲ್ಲಿ ಕೆಲಸ ಕಳೆದು ಕೊಂಡರು!
ವ್ಯಾಸ ದೇಶಪಾ೦ಡೆಯವರ ಕವನ ಸೊಗಸಾಗಿದೆ, ಅವರಿಗೆ ನನ್ನ ಮೆಚ್ಚುಗೆ ತಿಳಿಸಿ.
ರಾಜಕೀಯದಲ್ಲಿ ಆಸಕ್ತಿ ಇಲ್ಲದ ನನ್ನಂತವರೂ ಒಮ್ಮೆ ನೋಡುವಂತೆ ಓದಿಸಿಕೊಂಡು ಹೋಗುವಷ್ಟು ಆಸಕ್ತಿದಾಯಕವಾಗಿರುತ್ತೆ ನಿಮ್ಮ ಬರಹಗಳು. ರಾಜಕೀಯದ ಬಗ್ಗೆ ಹೆಚ್ಚೇನೂ ಹೇಳುವುದಕ್ಕೆ ಬರುವುದಿಲ್ಲವಾದ್ದರಿಂದ ನಿಮ್ಮ ಬರಹಗಳಿಗೆ ಯಾವ ರೀತಿ ಕಾಮೆಂಟಿಸಬೇಕೋ ತಿಳಿಯುವುದಿಲ್ಲವಷ್ಟೆ..
sunaath ,
ಕವನ ಚೆನ್ನಾಗಿದೆ ..
ಉತ್ತಮ ಕವನ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.. ಇನ್ನು ಈ ರಾಜ್ಜಪಾಲರು, ರಾಜಕಾರಣಿಗಳು ಎಲ್ಲಾ ಒಂದೇ ... ಡೊಂಕು ಬಾಲದ ನಾಯಕರು..
ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ, ಅದು ಆಗಬಾರದು ಎಂದು ಹೇಳತ್ತಾ, ಅದೇ ವಿಚಾರವನ್ನು ದೆಹಲಿಯವರೆಗೆ ಕೊಂಡೊಯ್ದಿದ್ದು ಸ್ವತಃ ನ್ಯಾಯವಾದಿಗಳೂ ಆಗಿದ್ದ ರಾಜ್ಯಪಾಲರಿಗೆ ಸರಿಯೆನಿಸಿರಬಹುದು. ಮೇಲ್ನೋಟಕ್ಕೆ ಈ ಚಿಚಾರವನ್ನು ಎಲ್ಲರೂ ಒಪ್ಪಬಹುದು. ಅದೇ ಕಳಕಳಿಯನ್ನು ಕಾಂಗ್ರೇಸಿಗರು "ಆಸರೆ" ಹಣವನ್ನು ದುರ್ಬಳಕೆ ಮಾಡಿಕೊಂಡಾಗ ರಾಜ್ಯಪಾಲರೇಕೆ ವ್ಯಕ್ತಪಡಿಸಲಿಲ್ಲವೋ ಕಾಣೆ !. ಇಂದಿರಾ ನಿಷ್ಠೆಯ ಜೊತೆಗೆ ಸೋನಿಯಾ ಪ್ರತಿಷ್ಥೆಯೂ ಇದರಲ್ಲಿ ಇರಬಹುದು.
ಎಲ್ಲಾ ರಾಜಕಾರಣದ ಮಹಿಮೆ !.
ಕವನ ಇಂದಿನ ರಾಜಕೀಯ ಪರಿಸ್ಥಿಯ ಯಥಾವತ್ ದರ್ಶನದಂತಿದೆ. ಶ್ರೀ ವ್ಯಾಸ ದೇಶಪಾಂಡೆಯವರಿಗೆ ನನ್ನ ನಮನಗಳು.
ಕವನ ಸೂಪರ್ ಇದೆ, ನಮ್ಮ ಈಗಿನ ರಾಜಕೀಯ ಪರಿಸ್ಥಿತಿಗೆ ಹೊಣೆಯಾರು ಗೊತ್ತಿಲ್ಲ........? ಇದಕ್ಕೆ ಪರಿಹಾರ ಉಂಟೆ... ಗೊತ್ತಿಲ್ಲ... ಹೊಣೆ ಯಾರು, ಪರಿಹಾರವೇನು ಎಲ್ಲವೂ ಗೊತ್ತಿದ್ದರು... ಸರಿಪಡಿಸುವವರ್ಯಾರು ಎಂದೆನಿಸುತ್ತದೆ.... ಕಾಲವೇ ಇದಕ್ಕೆ ಉತ್ತರ ನೀಡಬೇಕು.
ಪ್ರಸ್ತುತ ವಿದ್ಯಮಾನಗಳನ್ನು ವ್ಯಾಸ ದೇಶಪಾ೦ಡೆಯವರ ಕವನ ಮತ್ತು ನಿಮ್ಮ ಬರಹ ಬಿ೦ಬಿಸಿದ್ದು, ರಾಜಕೀಯ ಹೇಗೆ ಕಲುಷಿತ ಗೊಂಡಿದೆ ಎಂಬುದಕ್ಕೆ ಕೈಗನ್ನಡಿ ಹಿಡಿದ೦ತಿದೆ. ವ್ಯಾಸರಿಗೆ ದೊಡ್ಡ ನಮಸ್ಕಾರ, ನಿಮಗೂ
ವ್ಯಾಸ ದೇಶಪಾಂಡೆಯವರ ಕವನ ಚೆನ್ನಾಗಿದೆ. ಜೊತೆಗೆ ರಾಜ್ಯಪಾಲರ ರಾಜಕಾರಣದ ಎಲೀಲೆಯನ್ನು ತಾವು ಸಮಗ್ರವಾಗಿ ಇತಿಹಾಸದಿಂದ ಕೆದಕಿ ಹರವಿದ್ದಿರಾ... ಅಪರೂಪದ ಅದ್ಯಯನ ತಮ್ಮದು. ಚೆಂದದ ಲೇಖನ!
ನಮ್ಮ ಭಾರದ್ವಾಜರ ನಿಷ್ಠೆ ವಿಶಿಷ್ಟದ್ದೆ!
ಶ್ರೀಯುತ ವ್ಯಾಸ ದೇಶಪಾಂಡೆಯವರ ಕವನ ಇಂದಿನ ರಾಜಕಾರಣಿಗಳಿಗೆ ಚನ್ನಾಗಿ ಒಪ್ಪುತ್ತದೆ!
ನಿಮ್ಮ ಲೇಖನ ಚಿಂತನಾರ್ಹವಾಗಿದೆ.
ಕಾಕಾ,
ವ್ಯಾಸರ ಕವನ ಚೆನ್ನಾಗಿದೆ.
ಕಾಕಾ, ಈ ರಾಜಕಾರಣಿಗಳ ಹಣೆಬರಹವೇ ಇಷ್ಟು, ಅವರ ಬಗ್ಗೆಯೇ ಓದಿ ಕೇಳಿ ಸಾಕಾಗಿದೆ, ಇವರ ಇತಿಹಾಸದಿಮ್ದಲೂ ಕಲಿಯಲಾರರು, ತಮ್ಮ ತಪ್ಪುಗಳಿಂದಲೂ ಕಲಿಯಲಾರರು, ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ, ಯಾರು ಆಳಿದರು ಅಂಬಳಿ ಕಾಸುವುದು ತಪ್ಪುವುದಿಲ್ಲ.
ಕಾಕಾ, ಬಹಳ ದಿನಗಳಾದವು ಬೇಂದ್ರೆ ಅಜ್ಜನ ಕವನಗಳ ನಿಮ್ಮ ವಿಶಿಷ್ಠ ಲೇಖನ ಓದಿ, ದಯವಿಟ್ಟು ಪ್ರಕಟಿಸಿ. ಸಾದ್ಯವಾದರೆ "ಕನಸಿನೊಳಗೊಂದು ಕಣಸು" ಕಾವ್ಯ ವಿಮರ್ಷೆ ಬರಲಿ (ಈ ಬಾರಿಯ ದೇಶಕಾಲದಲ್ಲಿ ನಾಯಕರು ಬರೆದ ವಿಶ್ಲೇಷನೆ ಪ್ರಕಟವಾಗಿದೆ)
-ಶೆಟ್ಟರು
ಬಾಲು,
ನಮ್ಮ ಮತದಾರರು ಅಂತಹ ಪೆದ್ದರೇನಲ್ಲ. ಭಾರತದಲ್ಲಿ ಜರುಗಿದ ಚುನಾವಣೆಗಳಲ್ಲಿ ದೊಡ್ಡವರನೇಕರು ಮಣ್ಣು ಮುಕ್ಕಿದ್ದಾರೆ. ಆದರ್ಶಗಳನ್ನು ಹೊತ್ತ ಅನಾಮಧೇಯರು ಆರಿಸಿ ಬಂದಿದ್ದಾರೆ. ಉದಾಹರಣೆಗೆ ಜೆಪಿ ಚಳುವಳಿಯ ಸಂದರ್ಭದಲ್ಲಿ ಆರಿಸಿ ಬಂದಂತಹ ನಾಯಕರು. ಆದರೇನು ಮಾಡುವದು?
Power corrupts and absolute power corrupts absolutely!
PaLa,
ನೀವು ಮೆಚ್ಚಿಕೊಳ್ಳುವದೇ OK!
Comments ಯಾಕೆ?
ಜ್ಞಾನಾರ್ಪಣಮಸ್ತು,
ಧನ್ಯವಾದಗಳು.ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಿಮ್ಮ ಮೆಚ್ಚುಗೆಯನ್ನು ತಿಳಿಸುವೆ.
ರವಿಕಾಂತ,
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಿಂಹಗಳಾಗಿದ್ದ ಹೋರಾಟಗಾರರೇ, ಆಬಳಿಕ ಗ್ರಾಮಸಿಂಹಗಳಾದದ್ದು ನಮ್ಮ ದುರಂತ. ಈ ಡೊಂಕು ಬಾಲದ ನಾಯಕರನ್ನು ಮತದಾರರೇ ಸುಧಾರಿಸಬೇಕು!
ಪುತ್ತರ್,
ಬಹುಶಃ ರಾಜ್ಯಪಾಲರಿಗೆ ಒಂದೇ ಕಣ್ಣು ಕಾಣುತ್ತಿರಬಹುದು?
ಪುತ್ತರ್,
ನಿಮ್ಮ ಅಭಿಪ್ರಾಯವನ್ನು ದೇಶಪಾಂಡೆಯವರಿಗೆ ತಿಳಿಸುವೆ.
ಮನಸು,
ಇಂದಿನ ರಾಜಕಾರಣದ ಬಗೆಗೆ ಬರೆದ ನಾಟಕದಲ್ಲಿ ಶ್ರೀರಂಗರು
"ದಾರಿ ಯಾವುದಯ್ಯಾ ವೈಕುಂಠಕೆ?" ಎಂದು ಕೇಳಿದ್ದಾರೆ.
ಆ ದಾರಿ ಈಗ ಯಾರಿಗೂ ಕಾಣುತ್ತಿಲ್ಲವೇನೊ?
ಪರಾಂಜಪೆಯವರೆ,
ನಿಮ್ಮ ನಮಸ್ಕಾರಗಳನ್ನು ವ್ಯಾಸ ದೇಶಪಾಂಡೆಯವರಿಗೆ ಖುದ್ದಾಗಿ ತಲುಪಿಸುವೆ!
ಸೀತಾರಾಮರೆ,
ಇಲ್ಲಿ ಬರೆದದ್ದು ಕೇವಲ tip of the iceberg! ರಾಜಕಾರಣವನ್ನು ನೋಡಬಾರದು, ಕೇಳಬಾರದು, ಹೇಳಬಾರದು!
ಪ್ರವೀಣ,
ವ್ಯಾಸ ದೇಶಪಾಂಡೆಯವರ ಕವನ ರಾಜಕಾರಣಿಗಳ ಹೂರಣವನ್ನು ಹೊರಗೆಳೆಯುತ್ತದೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಶೆಟ್ಟರ,
ನೀವು ಹೇಳೋದು ಸರಿ ಅದ. ತಿಪ್ಪೆಯ ಮೇಲೆ ಅಡ್ಡಾಡುವ ಬದಲು, ಹೂದೋಟಕ್ಕೆ ಹೋಗೋಣ!
ಸುನಾಥಣ್ಣ...ಜನಪ್ರತಿನಿಧಿಗಳು ಅಂದರೆ ಇವರೇ ಎನ್ನುವಾಗ ಆರಿಸುವವರೂ ಹೀಗೇ ಎಂದೂ ಹೇಳಬಹುದು...ಆಮಿಷಕ್ಕೆ ಅವರೂ ಬಲಿಯಾದುದರಿಂದಲೇವು ಅಲ್ಲವೇ ಅವರ ಪ್ರತಿರೂಪಿಗಳೂ ಲಂಗುಲಗಾಮಿಲ್ಲದೇ ವರ್ತಿಸುವುದು... ಪ್ರಾಣಿಗಳಾದರೂ ಒಂದಕ್ಕೆ ಶಿಕ್ಷೆ ಅಥವಾ ಪೆಟ್ಟು ಬಿದ್ದರೆ ಉಳಿದವು ಎಚ್ಚೆತ್ತುಕೊಳ್ಳುತ್ತವೆ....ನಮ್ಮ ಭ್ರಷ್ಠ ಜನಸೇವಕರು ಅವರನ್ನು ಬೆಳೆಸಿ ಪೋಷಿಸೋ ಜನಪ್ರತಿನಿಧಿಗಳು ಪ್ರಾಣಿಗಳಿಗಿಂತ ಕೀಳು...ಈ ಎಲ್ಲದರ ಸ್ಥೂಲ ಪರಿಚಯ ಆಗುತ್ತಿರುವುದು ವಿಧಾನ ಸಭೆಯಲ್ಲಿ...ಅದಕ್ಕೆಲ್ಲ ಮಕುಟಪ್ರಾಯಿಗಳು ನಮ್ಮ ಮಂತ್ರಿಗಳು....ಮು.ಮಂತ್ರಿಗಳು....ಛೀ..ಥೂ..., ಇನ್ನು ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವವರ ಚರ್ಯೆಗಳು.....!!!! ಕೇಳೋದೇ ಬೇಡ...ಎಲ್ಲವನ್ನೂ ಬಹಳ ಸೂಚ್ಯವಾಗಿ ಹೇಳಿದ್ದೀರಿ...
ಜಲನಯನ,
ಒಟ್ಟಾರೆ ನಮ್ಮ ರಾಜಕೀಯ ವ್ಯವಸ್ಥೆಯೇ ಒಂದು ಗೊಬ್ಬರ ಗುಂಡಿಯಾಗಿದೆ. ಇದನ್ನು ಸರಿಪಡಿಸುವದು ಹೇಗೆನ್ನುವದೇ ಅರ್ಥವಾಗುತ್ತಿಲ್ಲ.
ಅಲ್ಲಾ ಕಾಕಾ..., ಸುಮ್ಮನೆ ಕುಳಿತರೆ ಅಲ್ಲಿ ಮೇಡ ಅಮ್ಮರಿಗೆ ಇವರ ಇರುವಿಕೆ ಮರ್ತು ಹೋಗೋದಿಲ್ವಾ. ಅದಕ್ಕೆ ಯಾವಾಗಲೂ ಏನಾದರೂ ಮಾಡಿ ಸುದ್ದಿಯಲ್ಲಿರಬೇಡ್ವಾ?
ಏನೇ ಹೇಳಿ. ಪಕ್ಷ ಮೊದಲು. ಪಕ್ಷದಿಂದಾಗೇ ತಾನೇ ಸಾಂವಿಧಾನಿಕ ಹುದ್ದೆ ಲಭಿಸಿದ್ದು? ಹಾಗಾಗಿ ಪಕ್ಷದ ನೆಲೆಗಟ್ಟಿನಲ್ಲಿ ಸಾಂವಿಧಾನಿಕ ಕಾರ್ಯ ನೆರವೇರಿಕೆ!!!
ತುಂಬಾ ಚೆನ್ನಾಗಿ ಬರೆದಿದ್ದಿರಾ
ನಮ್ಮ ಶಾಸಕರು ಊಟ ಮಾಡುತ್ತಾರೆಯೇ ಹೊರತು ಜನತೆಗೆ ಭೋಧನೆಯ ಪಾಠ ಮಾಡುವುದಿಲ್ಲ
ಸರಿಯಾಗಿಯೇ ಬರೆದಿದ್ದಾರೆ...
ಈ ಕವನ "ಡೊಂಕು ಬಾಲದ ನಾಯಕರೇ... ನೀವೆನೂಟವ ಮಾಡಿದಿರಿ....?" ರೀತಿಯಲ್ಲಿ ಇದೇ ಅನ್ನಿಸುತ್ತೆ
ಶಾನಿ,
ನಿಮ್ಮ ವಿನೋದಪೂರ್ಣ ಪ್ರತಿಕ್ರಿಯೆ ಸೊಗಸಾಗಿದೆ: ‘ಪಕ್ಷದ ನೆಲೆಗಟ್ಟಿನಲ್ಲಿ ಸಾಂವಿಧಾನಿಕ ಕರ್ತವ್ಯ!‘
ಏನಕೇನ ಪ್ರಕಾರೇಣ ಮೇಡ-ಅಮ್ಮನವರ ಕಣ್ಣಿಗೆ ಬೀಳುತ್ತಲೇ ಇರಬೇಕಲ್ಲವೆ?
-ಕಾಕಾ
ಗುರುಮೂರ್ತಿಯವರೆ,
ನಮ್ಮ ಶಾಸಕರು ಊಟ ಹೊಡೆದು,ಹೊಡೆದಾಡದೆ ಸುಮ್ಮನೆ ಕುಳಿತರೆ ಸಾಕು. ಈ ದಿನದ ಸಮಾಚಾರ ನೋಡಿದಿರಾ? ಬಿಹಾರ ವಿಧಾನಸಭೆಯಲ್ಲಿ ಮಾರಾಮಾರಿ? ನಮ್ಮ ಶಾಸಕರಿಗೂ
ಇದರಿಂದ ಸ್ಫೂರ್ತಿ ಹಾಗು ಪ್ರೇರಣೆ ದೊರೆತರೆ?
ಶಿವಪ್ರಕಾಶ,
ಪುರಂದರದಾಸರ ‘ಡೊಂಕು ಬಾಲದ ನಾಯಕರೆ’ ಗೀತೆಯೇ ವ್ಯಾಸ ದೇಶಪಾಂಡೆಯವರ ಕವನಕ್ಕೆ ಪ್ರೇರಣೆ ನೀಡಿದೆ ಎಂದು ಅವರು ಹೇಳಿದ್ದಾರೆ.
‘ಶಾಸಕರೆ ಶಾಸಕರೆ’ ಎನ್ನುವ ಬದಲಾಗಿ ‘ಡೊಂಕು ಬಾಲದ
ಶಾಸಕರೆ’ ಎಂದು ಬರೆಯಬಹುದಾಗಿತ್ತು. ಆದರೆ ಅವಹೇಳನಕರ ಭಾಷೆಯನ್ನು ಬಳಸಬಾರದೆನ್ನುವ ಕಾರಣದಿಂದ ಹಾಗೆ ಬರೆದಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.
ನಾವು ಕನ್ನಡ ಶಾಲೆಯಲ್ಲಿ ಓದುತ್ತಿದ್ದಾಗಿನ ಒಂದು ಕಥೆ- ಬೇಡ ಬರುವ ಸಮಯ ನೋಡಿ ನೀನು ಸತ್ತಂತೆ ಮಲಗಿರು ನಾನು ನಿನ್ನನ್ನು ಕುಕ್ಕುತ್ತಿರುವಂತೆ ಮಾಡುತ್ತೇನೆ, ಬೇಡ ಬಲೆ ಎತ್ತುತ್ತಲೇ ಹಾರೋಡಿ ತಪ್ಪಿಸಿಕೋ -ಎಂದು ಮಿಕವೊಂದಕ್ಕೆ ಪಕ್ಷಿಯೊಂದು ಹೇಳುತ್ತದೆ. ಇಲ್ಲಿ ಆಳುವ ಪಕ್ಷ ಮಿಕವಾದರೆ ವಿರೋಧ + ಉಳಿದ ಪಕ್ಷಗಳು+ಪಕ್ಷೇತರ [ಯಾರನ್ನೂ ಸೇರದೆ ಇರುವವರು]ರು ಎಲ್ಲಾ ಬಕಗಳು, ಬೇಡನ ರೂಪದ ಜನತೆ ಬೇಸ್ತುಬಿದ್ದು ನೋಡುವಂತಾಗಿದೆ! ಕವನಿಸಿದ ವ್ಯಾಸ ದೇಶಪಾಂಡೆಯವರಿಗೂ ಅದನ್ನು ಪ್ರಸ್ತುತಪಡಿಸಿದ ನಿಮಗೂ ನಮನಗಳು, ಏನಿದ್ದರೂ ರಾಜಕೀಯ ರಾಡಿಯಾಗಿಬಿಟ್ಟಿದೆ, ಇದನ್ನು ಸಾಮಾನ್ಯದವರಿಂದ ಸರಿಪಡಿಸಲು ಸಾಧ್ಯವಿಲ್ಲವೇನೋ ಅನಿಸುತ್ತಿದೆ, ಹೌದಲ್ಲವೇ ?
ನೀವು ಹೇಳಿದ ಕತೆ ಇಂದಿನ ರಾಜಕೀಯಕ್ಕೆ ಯಥಾರ್ಥ ಹೋಲಿಕೆಯಾಗಿದೆ. ಆಳುವ ಪಕ್ಷ ಹಾಗು ವಿರೋಧ ಪಕ್ಷ ಇವೆರಡೂ ಜತೆಯಾಗಿಯೇ ಜನತೆಯನ್ನು ಶೋಷಿಸುತ್ತಿವೆ. ಆದುದರಿಂದ,ಈ ಬಲೆಯಿಂದ ಹೊರಬರುವದು ದುಸ್ಸಾಧ್ಯವಾಗಿದೆ.
ಡೊಂಕು ಬಾಲದ ನಾಯಕರ ನಡವಳಿಕೆಗೆ ಹಿಡಿದ ಕನ್ನಡಿ . ಕಲ್ಪನೆ ಕವಿತೆ ಅದ್ಭುತವಾಗಿದೆ.
ಬಾಲು,
ಮೆಚ್ಚುಗೆಗೆ ಧನ್ಯವಾದಗಳು. ಕವನದ ರಚಕ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಿಮ್ಮ ಮೆಚ್ಚುಗೆ ತಿಳಿಸುವೆ.
ಸುನಾಥ್ ಸರ್,
ಈಗಿನ ರಾಜ್ಯಪಾಲರ ರಾಜ್ಯಪಾಲನಾ ವಿಧಾನ ನಿಧಾನವಾಗಿ, ಎಳೆ ಎಳೆಯಾಗಿ ಹೇಳಿದ್ದಿರಿ.... ನೀವು ಕೊನೆಯಲ್ಲಿ ಹೇಳಿದ ಹಾಗೆ ಅವರಿಗೆ, ಅವರ ನಿಷ್ಠೆಗೆ ಉಪ ರಾಷ್ಟ್ರಪತಿ ಹುದ್ದೆ ದೊರೆಯುವ ಚಾನ್ಸ್ ಸಿಗಲೂ ಬಹುದು..... ಎಲ್ಲಿಗೆ ಬಂತು ಪ್ರಜಾಪ್ರಭುತ್ವ ಸರ್....
ದಿನಕರ,
‘ಅಲಿಬಾಬಾ ಚಾಲೀಸ ಚೋರ’ ಸಿನೆಮಾದಂತಿದೆ ನಮ್ಮ ಪ್ರಜಾಪ್ರಭುತ್ವ! ಎಲ್ಲರೂ ಕಳ್ಳರೆ. ಯಾರನ್ನು ನಂಬುವದು?
Post a Comment