Thursday, July 15, 2010

ಶಾಸಕರ ವರ್ತನೆಯ ಮಾನದಂಡ ಹಾಗು ಸಾರ್ವಜನಿಕ ಕಣ್ಗಾವಲು

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಧರಣಿ ಕೂತಿದ್ದಾರೆ. ಧರಣಿ ಕೂಡುವ ಹಕ್ಕು ಶಾಸಕರಿಗೆ ಇದೆ. ಈ ಧರಣಿಯ ಮೂಲಕ ಈ ಶಾಸಕರು ಏನನ್ನು ಸಾಧಿಸಬಯಸುತ್ತಾರೆ ಎನ್ನುವದರ ಮಂಥನ ನನ್ನ ಗುರಿಯಲ್ಲ. ನನ್ನನ್ನು ತೀವ್ರ ಚಿಂತನೆಗೆ ಹಾಗು ಚಿಂತೆಗೆ ಒಡ್ಡಿರುವದು ಧರಣಿಯ ಸ್ವರೂಪ.

ಮಹಾತ್ಮಾ ಗಾಂಧಿಯವರು ಮೊದಲ ಸಲ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ‘Asiatic Registration Act’ದ ವಿರುದ್ಧ ನಡೆದ ಈ ಸತ್ಯಾಗ್ರಹದಲ್ಲಿ ಆಫ್ರಿಕಾದಲ್ಲಿದ್ದ ಅನೇಕ ಭಾರತೀಯರು (೨೦೩೭ ಜನ ಗಂಡಸರು, ೧೨೭ ಜನ ಹೆಂಗಸರು ಹಾಗು ೫೭ ಜನ ಬಾಲರು) ಚಾರ್ಲ್ಸ್‌ಟೌನಿನಿಂದ ಟ್ರಾನ್ಸವಾಲದ ರಾಜಧಾನಿ ಪ್ರಿಟೋರಿಯಾ ತಲುಪಲು ಸುಮಾರು ನೂರು ಕಿಲೊಮೀಟರಗಳನ್ನು  ಕಾಲ್ನಡಿಗೆಯಲ್ಲಿ ನಡೆದರು. ಮಾರ್ಗದುದ್ದಕ್ಕೂ ಭಜನೆಗಳು ನಡೆಯುತ್ತಿದ್ದವು. ರಾತ್ರಿಯ ಹೊತ್ತು  ಬಯಲಿನಲ್ಲಿ ಬೀಡು ಬಿಟ್ಟು, ಬೆಳಗಿನಲ್ಲಿ ಮತ್ತೆ ಮುನ್ನಡೆಯಬೇಕಾಗುತ್ತಿತ್ತು. ಮಾರ್ಗಮಧ್ಯದಲ್ಲಿ ಸಣ್ಣಪುಟ್ಟ ತೊರೆಗಳನ್ನು,  ದಾಟಬೇಕಾಗುತ್ತಿತ್ತು. ಆ ಸಮಯದಲ್ಲಿ ಎರಡು ಶಿಶುಗಳು ಮರಣ ಹೊಂದಿದವು. ಈ ಸತ್ಯಾಗ್ರಹಿಗಳ ಒಂದು ಪೂರ್ಣದಿನದ ಆಹಾರವೆಂದರೆ ಒಂದೂವರೆ ಪೌಂಡ್ ಬ್ರೆಡ್ ಹಾಗು ಒಂದು ಔನ್ಸ್ ಸಕ್ಕರೆ.

ಮಹಾತ್ಮಾ ಗಾಂಧಿಯವರ ಈ ಸತ್ಯಾಗ್ರಹವನ್ನು ಈಗ ನಮ್ಮ ಶಾಸಕರು ನಡೆಸುತ್ತಿರುವ ಸತ್ಯಾ(?)ಗ್ರಹದೊಂದಿಗೆ ಹೋಲಿಸಿ ನೋಡಿರಿ. ಧರಣಿ ಕೂತ ನಮ್ಮ ಶಾಸಕರಿಗೆ ದಿನಕ್ಕೊಂದು ಬಗೆಯ ತಿನಿಸುಗಳ ಏರ್ಪಾಡಾಗುತ್ತಿವೆ. ಬೇಕಾದವರಿಗೆ ಬಾಡೂಟ ಸಹ ಲಭ್ಯ. ಇದರಲ್ಲಿ ತಪ್ಪೇನಿಲ್ಲ. ಯಾವುದೇ ನಿಷೇಧಿತ ಪದಾರ್ಥವನ್ನು ಅವರು ಸೇವಿಸಿಲ್ಲ. ಬಹುಶಃ ಗೋಮಾಂಸವನ್ನು ತಿಂದರೂ ತಪ್ಪಾಗಲಿಕ್ಕಿಲ್ಲ. ಶಾಸಕ ಶ್ರೀ ನಾಣಯ್ಯನವರಂತೂ ಗೋಹತ್ಯಾನಿಷೇಧ ಶಾಸನದ ವಿರೋಧಿಗಳೇ ಆಗಿದ್ದಾರೆ. ಈ ತರ್ಕವನ್ನು ಮುಂದುವರಿಸಿದರೆ, ‘ಪಾನಸೇವನೆ’ಯಲ್ಲಿಯೂ ತಪ್ಪಿಲ್ಲ. ಯಾಕೆಂದರೆ ಗುಜರಾತ ರಾಜ್ಯದಲ್ಲಿ ಇರುವಂತೆ ನಮ್ಮಲ್ಲಿ ಪಾನಪ್ರತಿಬಂಧವಿಲ್ಲ. ಕರ್ನಾಟಕವನ್ನು ಗುಜರಾತ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವೆ ಎಂದು ಹೇಳುವ ಮು.ಮಂ. ಯಡ್ಯೂರಪ್ಪನವರಿಗೂ ಸಹ ಪಾನಪ್ರತಿಬಂಧ ಬೇಕಾಗಿಲ್ಲ. ಹಾಗಿರುವದರಿಂದ ಈ ಧರಣಿಯಲ್ಲಿ ಮಾಂಸಸೇವನೆ ಹಾಗು ಮದ್ಯಪಾನಕ್ಕೆ ಅವಕಾಶವಿದ್ದರೆ ತಪ್ಪೇನಿಲ್ಲ. ಕ್ಯಾಬರೆ ನೃತ್ಯವೂ ಸಹ ಮಧ್ಯರಾತ್ರಿಯವರೆಗೆ ಶಾಸನಬದ್ಧವೇ ಆಗಿರುವದರಿಂದ ಅವಕ್ಕೂ ಸಹ ವಿಧಾನಸೌಧದಲ್ಲಿ ಆಸ್ಪದವೀಯಬಹುದು! (ಸಭಾಧ್ಯಕ್ಷರು ರೂಲಿಂಗ್ ಕೊಡಬಹುದು!)

ಇದಲ್ಲದೆ ಶಾಸಕರು ವಿಧಾನಸೌಧದಲ್ಲಿ / ಲೋಕಸಭಾಭವನದಲ್ಲಿ ಏನು ಮಾಡಿದರೂ ಸಹ ಅದನ್ನು ಪ್ರಶ್ನಿಸುವಂತಿಲ್ಲ ಎಂದು ನಮ್ಮ ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟುಬಿಟ್ಟಿದೆ(----ಶಿಬು ಸೋರೆನ್ ಲಂಚ ಪ್ರಕರಣದಲ್ಲಿ). ಲಂಚವೇ ಆಗಲಿ, ಮಂಚವೇ ಆಗಲಿ ವಿಧಾನಸೌಧದ ಹೊರಗೆ ಜರುಗಿದರಷ್ಟೇ ಅಪರಾಧ(ಉದಾ: ಹರತಾಳ ಹಾಲಪ್ಪನವರ ಪ್ರಕರಣ.) ವಿಧಾನಸೌಧದ ಒಳಗೆ ಜರುಗಿದಾಗ ಇದು ಶಾಸಕರ privilegesನಲ್ಲಿ ಬರುವದರಿಂದ ಇದನ್ನು ಪ್ರಶ್ನಿಸುವಂತಿಲ್ಲ. 

ಹಾಗಿದ್ದರೆ ಶಾಸಕರು ಪ್ರಶ್ನಾತೀತರೆ? ಅವರ ನಡತೆಗೆ ಯಾವುದೇ ಮಾನದಂಡವಿಲ್ಲವೆ? ನಮ್ಮಲ್ಲಿ ಜಾರಿಯಲ್ಲಿರುವ ‘ಭಾರತದ ಸಂವಿಧಾನ’ದ ಪ್ರಕಾರ ವಿಧಾನಸೌಧದಲ್ಲಿ( ಅದರಂತೆ ಲೋಕಸಭಾ ಭವನದಲ್ಲಿ) ಅವರು ಪ್ರಶ್ನಾತೀತರು. ಆದರೆ ‘ನೈತಿಕ ಸಂವಿಧಾನ’ ಎನ್ನುವದು ಒಂದು ಇರುತ್ತದೆಯಲ್ಲವೆ? ನಮ್ಮ ಶಾಸಕರ ಧರಣಿ ಸತ್ಯಾಗ್ರಹವನ್ನು ಗಮನಿಸುತ್ತಿರುವ ಸಾರ್ವಜನಿಕರಿಗೆ ಇವರದು ಲಘು ವರ್ತನೆ ಮತ್ತು ಅಸಹ್ಯವರ್ತನೆ—obnoxious-- ಎನ್ನಿಸಲಿಕ್ಕಿಲ್ಲವೆ?

ಸಾರ್ವಜನಿಕ ಅಭಿಪ್ರಾಯಕ್ಕೆ ಹೆದರುವ ಶಾಸಕರಾದರೆ ತಮ್ಮ ವರ್ತನೆಗೆ ಒಂದು ಲಕ್ಷ್ಮಣರೇಖೆಯನ್ನು ಎಳೆದುಕೊಂಡಿರುತ್ತಾರೆ.  ‘ಸಾರ್ವಜನಿಕ ಕಣ್ಗಾವಲು’—public watch--- ಎನ್ನುವ ಮಾನದಂಡಕ್ಕೆ ಮರ್ಯಾದೆಯನ್ನು ಕೊಡುತ್ತಾರೆ. ಅಂಥವರು ಈಗೆಲ್ಲಿ ಸಿಗುತ್ತಾರೆ, ಹೇಳಿ.
ಮಹಾತ್ಮಾ ಗಾಂಧಿಯ ಕಾಲ ಈಗ ಮುಗಿದು ಹೋಗಿದೆ. ಇದೀಗ ‘ಮಜಾತ್ಮಾ ಗಾಂಧಿ’ಗಳ ಕಾಲ!

ಶಾಸಕರಿಗಾಗಿ ಒಂದು ನಗೆಹನಿ(?):
ಕೊಲ್ಲಾಪುರವು ಮರಾಠಾ ರಾಜ್ಯದ ರಾಜಧಾನಿಯಾಗಿತ್ತು. ಅಲ್ಲಿ ಶಿವಾಜಿ ಮಹಾರಾಜರ ಹಾಗು ಶಾಹೂ ಮಹಾರಾಜರ ಅನೇಕ ಪ್ರತಿಮೆಗಳಿವೆ. ಅವೆಲ್ಲ ಆಶ್ವಾರೂಢರಾಗಿ ಕೈಯಲ್ಲಿ ಖಡ್ಗ ಹಿಡಿದ ಪ್ರತಿಮೆಗಳು. ಗಾಂಧೀಜಿಯವರ ಪ್ರತಿಮೆ ಸಹ ಅಲ್ಲಿಯ ಒಂದು ಉದ್ಯಾನದಲ್ಲಿದೆ.

ಒಂದು ರಾತ್ರಿ, ಓರ್ವ ನಿರುದ್ಯೋಗಿ ತರುಣ ಆ ಉದ್ಯಾನವನದಲ್ಲಿ ಗಾಂಧೀಜಿಯ ಪ್ರತಿಮೆಯ ಕೆಳಗೆ ಚಿಂತಾಮಗ್ನನಾಗಿ ಕುಳಿತುಕೊಂಡಿದ್ದ. ಸರಿಯಾಗಿ ಮಧ್ಯರಾತ್ರಿಯ ಸಮಯದಲ್ಲಿ ಆ ತರುಣನ ತಲೆಯ ಮೇಲೆ ಟಪ್, ಟಪ್ ಎಂದು ಎರಡು ಹನಿಗಳು ಉದುರಿದವು. ಈ ಬೇಸಿಗೆಯಲ್ಲಿ ಎಂತಹ ಮಳೆ ಎಂದು ಆತ ಮುಖವೆತ್ತಿ ನೋಡಿದ. ಆಶ್ಚರ್ಯ ! ಗಾಂಧೀಜಿಯ ಕಣ್ಣುಗಳಿಂದ ಹನಿಗಳು ಉದುರುತ್ತಿವೆ ! ಆಘಾತಗೊಂಡ ಆತ ಕೇಳಿದ:
“ಬಾಪೂ, ಏಕೆ ಅಳುತ್ತಿದ್ದೀರಿ?”

ಪ್ರತಿಮೆ ನುಡಿಯಿತು: “ಮಗೂ, ಕೊಲ್ಲಾಪುರದಲ್ಲಿರುವ ಮರಾಠಾ ರಾಜರ ಪ್ರತಿಮೆಗಳನ್ನು ನೋಡು. ಎಲ್ಲರೂ ಕುದುರೆಯ ಮೇಲೆ ಕುಳಿತುಕೊಂಡಿದ್ದಾರೆ. ಇಷ್ಟು ವರುಷಗಳವರೆಗೆ ನಿಂತುಕೊಂಡಿದ್ದರಿಂದ ನನ್ನ ಕಾಲು ನೋಯತೊಡಗಿವೆ.  ನನಗೂ ಒಂದು ಕುದುರೆ ಇದ್ದರೆ, ನಾನೂ ಸಹ ಆರಾಮಾಗಿ ಕುಳಿತುಕೊಳ್ಳಬಹುದಾಗಿತ್ತು!”

ನಮ್ಮ ನಿರುದ್ಯೋಗಿ ತರುಣನ ಮನಸ್ಸು ಮಿಡಿಯಿತು. ತತ್‌ಕ್ಷಣವೇ ಹೇಳಿದ: “ಚಿಂತಿಸಬೇಡಿ, ಬಾಪೂ! ನಾಳೆಯೇ ನಿಮಗಾಗಿ ಒಂದು ಕುದುರೆಯ ವ್ಯವಸ್ಥೆ ಮಾಡುತ್ತೇನೆ.”

ಇಷ್ಟು ಹೇಳಿದ ಆ ತರುಣ ಮರುದಿನ ಬೆಳಿಗ್ಗೆ ಕೊಲ್ಲಾಪುರದ ಶಾಸಕರ ಮನೆಗೆ ಹೋಗಿ, ರಾತ್ರಿ ಜರುಗಿದ ಘಟನೆಯನ್ನು ಅವರಿಗೆ ವಿವರಿಸಿ, ಬಾಪೂಜಿಗೂ ಸಹ ಒಂದು ಕುದುರೆಯನ್ನು ಮಾಡಿಕೊಡಲು ವಿನಂತಿಸಿದ.
ಇಂತಹದನ್ನೆಲ್ಲ ನಂಬಲು ಶಾಸಕರೇನು ಹುಚ್ಚರೆ? ಆದರೆ ಈತ ತನ್ನ ಪಟ್ಟು ಬಿಡಲು ತಯಾರಿಲ್ಲ. “ನೀವೇ ಬೇಕಾದರೆ ಬಂದು ನೋಡಿರಿ”, ಎಂದು ಶಾಸಕರಿಗೆ ಒತ್ತಾಯ ಮಾಡಿದ. ಶಾಸಕರು ಸಹ ತಯಾರಾದರು.

ಆ ರಾತ್ರಿ ನಿರುದ್ಯೋಗಿ ತರುಣ ಹಾಗು ಶಾಸಕರು ಜೊತೆಯಾಗಿ ಉದ್ಯಾನವನಕ್ಕೆ ಹೋದರು. ಪ್ರತಿಮೆಯ ಬಳಿಗೆ ಬಂದ ತರುಣನು, “ಬಾಪೂಜಿ, ಶಾಸಕ ಮಹಾಶಯರನ್ನು ಕರೆದುಕೊಂಡು ಬಂದಿದ್ದೇನೆ” ಎಂದು ನುಡಿಯುತ್ತಿದ್ದಂತೆಯೇ, ಬಾಪೂಜಿಯ ಮೂರ್ತಿಯು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಆ ತರುಣನ ಮೇಲೆ ಬೀಸಿ ಉದ್ಗರಿಸಿತು:
“ಮೂರ್ಖಾ, ಕುದುರೆಯನ್ನು ತೆಗೆದುಕೊಂಡು ಬಾ ಎಂದು ನಿನಗೆ ಹೇಳಿದ್ದೆ ; ನೀನು ಕತ್ತೆಯನ್ನು ಕರೆದುಕೊಂಡು ಬಂದಿದ್ದೀಯಲ್ಲ!”

40 comments:

ಸೀತಾರಾಮ. ಕೆ. / SITARAM.K said...

ಶಾಸಕರ ದು೦ಡಾವರ್ತಿ ಮಿತಿ ಮೀರಿದೆ. ಅವರಿಗೆ ಸಂವಿಧಾನದಲ್ಲಿ ನಡೆ-ಸೂತ್ರಗಳು ಅವಶ್ಯ. ತಾವು ಹೇಳಿದ ಹಾಗೇ ಅವರಿಗೆ ಸಾರ್ವಜನಿಕ ಕಣ್ಗಾವಲು ನೀತಿಸ೦ಹಿತೆ ಅವಶ್ಯ! ಇದೆ ರೀತಿ ಜನಪ್ರತಿನಿಧಿಗಳ ಧೋರಣೆ ಮುಂದುವರೆದರೆ ಜನ ಮತ್ತೊ೦ದು ಸ್ವಾತಂತ್ರ ಸ೦ಗ್ರಾಮಕ್ಕೆ ಸಿದ್ದವಾಗಬೇಕಾದ ದಿನ ದೂರವಿಲ್ಲ ಎನಿಸುತ್ತಿದೆ!
ತಮ್ಮ ಕೊನೆಯ ಹಾಸ್ಯ ಅಂಕಣ ಓದಿ ಕತ್ತೆಗಳು ತಮ್ಮ ಮೇಲೆ ಮಾನನಷ್ಟ ದಾವೆ ಹೂಡಿದ್ದಾವಂತೆ! ಜೊತೆಗೆ ಧರಣಿ ಸತ್ಯಾಗ್ರಹ ನಡೆಸುತ್ತಿವೆಯಂತೆ -ಆದರೆ ಕರ್ನಾಟಕ ಶಾಸಕರ ತರಹವಲ್ಲ! ತುಂಬಾ ಸರಳ ಪ್ರತಿಭಟನೆ. ರಾಜಕೀಯದವರನ್ನು ಕತ್ತೆಗೆ ಹೋಲಿಸಿದ್ದಕ್ಕೆ ಅವು ಮನ ನೊಂದಿವೆ. ತಾವು ಕ್ಷಮೆ ಕೇಳಬೇಕಂತೆ!
ಅಂಕಣ ಮಾರ್ಮಿಕವಾಗಿದೆ.

PARAANJAPE K.N. said...

ಸುನಾಥ್ ಜೀ, ನಿಮ್ಮ ಲೇಖನ ಸಕಾಲಿಕವಾಗಿದೆ. ಹೌದು, ನಮ್ಮ ಜನಪ್ರತಿನಿಧಿ ಗಳು ಮಾಡಿದ್ದೆಲ್ಲ ಸರಿ. ಅವರೇನು ಮಾಡಿದರೂ ಜನಹಿತಕ್ಕಾಗಿಯೇ ಮಾಡುವುದು. ತಾವು ಪ್ರಶ್ನಾತೀತರು ಎ೦ಬ ಭಾವನೆ ಅವರಲ್ಲಿ ಇದೆ. ಈ "ಮಜಾತ್ಮ" ರಿಗೆ ಬುದ್ಧಿ ಹೇಳಲು ಇನ್ನೊಮ್ಮೆ "ಮಹಾತ್ಮ" ಹುಟ್ಟಿ ಬ೦ದರೂ ಸುಧಾರಣೆ ಸಾಧ್ಯವಿಲ್ಲೇನೋ ಅನ್ನುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ನಾವೆಲ್ಲಾ ಮೂಕಪ್ರೇಕ್ಷಕರಾಗಿ ಲೊಚಗುಟ್ಟುತ್ತ ಕೂರುವುದರ ವಿನಃ ಬೇರೇನೂ ಮಾಡಲಾಗುತ್ತಿಲ್ಲ ಎನ್ನುವುದೇ ವಿಪರ್ಯಾಸ. ನಾನು ಕೂಡ ಇದೆ ವಿಷಯದ ಬಗ್ಗೆ ಒ೦ದು ತಮಾಷೆಯ, ವಿಡ೦ಬನೆಯ ಲೇಖನ ಬರೆದಿದ್ದೆ, ಯಾಕೋ ಗೊತ್ತಿಲ್ಲ, ಅದನ್ನು ಪ್ರಕಟಿಸುವುದು ಬೇಡವೆ೦ದು ಬಗೆದು ಹಾಗೆಯೇ ಬಿಟ್ಟಿದ್ದೇನೆ.

ಶೆಟ್ಟರು (Shettaru) said...

ಕಾಕಾ,

ದಿನವಹಿ ಅವೇ ಅವೇ ಧಾರಾವಾಹಿಗಳು , ಅವವೇ ರೀಯಾಲಿಟಿ ಶೋ(?)ಗಳನ್ನೂ ನೋಡಿ ನೋಡಿ ಬೇಜಾರಾಗಿರುವ ರಾಜ್ಯ (ಮತ್ತು ರಾಷ್ಟ್ರ)ದ
ಜನಗಳಿಗೆ (ಅವರೇ ಆರಿಸಿ ಕಳಿಸಿದ್ದಕ್ಕಾಗಿ ) ಹೀಗಾದರೂ ಮನರಂಜನೆ ನೀಡುತ್ತಿದ್ದಾರೆ, ಅವರ ಈ ಕಾರ್ಯಗಳು ಅವರನ್ನು ಅಭಿನಂದಿಸಲು ಮತ್ತು ಸನ್ಮಾನಿಸಲು ಅವರನ್ನೂ ಇನ್ನೂ ಯೋಗ್ಯ(?)ರನ್ನಾಗಿಸಿದ್ದಾವೆ.

-ಶೆಟ್ಟರು

sunaath said...

ಸೀತಾರಾಮರೆ,
ಎಲ್ಲಿಯೋ ಹುಲ್ಲು ಮೇಯ್ದುಕೊಂಡು,ಭಾರ ಹೊತ್ತು ಪರಿಶ್ರಮ ಪಡುವ ಕತ್ತೆಗಳನ್ನು ಶಾಸಕರಿಗೆ ಹೋಲಿಸಿದ್ದು ತಪ್ಪೆಂದು ಒಪ್ಪಿಕೊಳ್ಳುತ್ತೇನೆ.
‘ಮನ್ನಿಸಿರಿ ಅಪರಾಧವನು’ ಎಂದು ಈ ಮೂಲಕ ಕತ್ತೆಗಳಲ್ಲಿ
ನಮ್ರವಾಗಿ ವಿನಂತಿಸುತ್ತ್ತೇನೆ!

sunaath said...

ಪರಾಂಜಪೆಯವರೆ,
ನಿಮ್ಮ ಲೇಖನ ಓದುವ ಕುತೂಹಲ ನಮ್ಮೆಲ್ಲರಲ್ಲಿ ಇದ್ದೇ ಇದೆ. ಈಗಲಾದರೂ, ನೀವು ಬೇಗನೇ ನಿಮ್ಮ ಲೇಖನವನ್ನು ಪ್ರಕಟಿಸಲು ಕೋರುತ್ತೇನೆ.

sunaath said...

ಶೆಟ್ಟರ,
ಹಂಗಾದರ, ವಿಧಾನಸಭೆಯ ಕಲಾಪಗಳನ್ನು ದೂರದರ್ಶನದ
ಮನರಂಜನಾ ವಿಭಾಗದಲ್ಲಿ ಹಾಕೋದೇ ಯೋಗ್ಯ ಅನ್ನಸತದ!

RJ said...

ಸರ್,
ಪ್ರತೀಸಲ ನಿಮ್ಮ ದೊಡ್ಡದಾದ ಮತ್ತು ಆಳವಾದ ಲೇಖನಗಳನ್ನು ಓದಿದವನಿಗೆ ಈ ಸಲದ ಲೇಖನ ಕೊಂಚ ಚಿಕ್ಕದಾಗಿರುವಂತೆ ಕಂಡು ಬಂತು.
ಬಹುಶಃ 'ಇಂಥ'ವರ ಬಗ್ಗೆ ಏನು ಬರೆಯೋದು ಎಂಬ ಬೇಜಾರವೂ ಇದಕ್ಕೆ ಕಾರಣವಿರಬಹುದು.
ಈ ರೀತಿ ಚಿಕ್ಕ ಚೊಕ್ಕ ಲೇಖನ ಬರೆದು ಓದುಗರಲ್ಲೇ ಒಂದು ಗಂಭೀರ discussion ಹುಟ್ಟು
ಹಾಕಬಲ್ಲ catalyst ಗುಣ ನಿಮ್ಮಲ್ಲಿದೆ.
ನಿಮ್ಮ ವಿಚಾರವೂ ಇದೇ ಆಗಿರಬಹುದು..
-RJ

ತೇಜಸ್ವಿನಿ ಹೆಗಡೆ said...

ಕಾಕಾ,

ಬಹಳ ದಿನಗಳನಂತರ ಒಂದು ಉತ್ತಮ ಲೇಖನವನ್ನು ಕೊಟ್ಟಿರುವಿರಿ. "ಯಾರೇ ಕೂಗಾಡಲಿ.. ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ.. ಎಮ್ಮೆ ನಿನಗೆ ಸಾಟಿಯಿಲ್ಲ..."ಎಂದು ಅಂದು ರಾಜ್‍ಕುಮಾರ್ ಹಾಡಿದ್ದರು. ಅದು ಇಂದಿನ ರಾಜಕಾರಣಿಗಳಿಗೆ ತಕ್ಕುದಾಗಿದೆ. ಜಗತ್ತೇ ಅವರೆಡೆ ನೋಡಿ ಅಪಹಾಸ್ಯ ಮಾಡಿದರೂ, ಮಾಡುತಿದ್ದರೂ ಅವರಿಗೆ ಮಾತ್ರ ತಮ್ಮ ತಮ್ಮ ಅಧಿಕಾರ, ಹಣ, (ಅಪ)ಯಶಸ್ಸಿನೆಡೆಗೇ ಕಣ್ಣು! ಇಂಥವರಿಗಾಗಿ ನಾವು ಓಟು ಹಾಕಬೇಕಾಗಿದೆ. ಇದಕ್ಕೆಲ್ಲಾ ಪರ್ಯಾಯ ಮಾರ್ಗ(ಪರಿಹಾರ ಮಾರ್ಗ ಕೂಡ) ಎಲ್ಲಿದೆ? ಯಾವುದು?

ನಗೆಹನಿ ಬಹಳ ಚೆನ್ನಾಗಿದೆ.....:)

ಮನಸಿನಮನೆಯವನು said...

sunaath ,

ಉತ್ತಮ ಸಕಾಲಿಕ ಲೇಖನ..
ನಗೆಹನಿ ಚೆನ್ನಾಗಿದೆ..
ನಿಮ್ಮ ನಗೆಹನಿಯಂತೆ ಬಾಪೂ ಬಗ್ಗೆ ಒಂದು ಕವನ ಇದೆ.. ಸಾಧ್ಯವಾದಲ್ಲಿ ಅದನ್ನು ಮುಂದೆ ಹಾಕುತ್ತೇನೆ...

Subrahmanya said...

ಕತ್ತೆಗಳು ಎಂದರೆ, ಪಾಪ ಅವುಗಳಿಗೆ ಬೇಸರವಾಗಬಹುದು !. ಸಾರ್ವಜನಿಕರ ಕಣ್ಗಾವಲಿನ ಚಿಂತನೆಯಿದ್ದಿದ್ದರೆ ಇಷ್ಟೆಲ್ಲಾ ರಂಪಾಟಗಳು ನಡೆಯುತ್ತಿರಲಿಲ್ಲ. ಚುನಾವಣೆಯ ಸಮಯದಲ್ಲಿ ಹಣ-ಹೆಂಡ ಹಂಚಿ ಮತವನ್ನು ಸಂಪಾದಿಸುತ್ತಾರೆ. ಪ್ರಜ್ಞಾವಂತರು ಮತ ಹಾಕುವುದಿಲ್ಲ. ಅದಕ್ಕೆ ಉದಾಹರಣೆ ಇತ್ತೀಚಿನ BBMP ಚುನಾವಣೆ. ಪ್ರಜ್ಞಾವಂತರಿಂದ ಓಟು ಹಾಕಿಸಿಕೊಳ್ಳುವ ಪ್ರತಿನಿಧಿ ಗೆಲ್ಲುವುದೆ ಇಲ್ಲ !. ಇಂದಿನ ನಾಟಕೀಯ ಧರಣಿಗಳ ಬಗೆಗೆ ಇತಿಹಾಸದ ಧರಣಿಯನ್ನು ನೆನಪಿಸಿ ಒಳ್ಳೆಯ ಚಿಂತನೆಯನ್ನು ಹೊರಡಿಸಿದ್ದೀರಿ.

ನನಗೆ ಬೀchi ಯ ಎರಡು "ಜೋಕೆ" ಗಳು ನೆನಪಾಯಿತು.

೧.

"ತಿಂಮಾ "

"ಏನಪ್ಪಾ ? "

"ದೇಶಸೇವೆಯ ಹೆಸರಿನಲ್ಲಿ ಜನರನ್ನು ವಂಚಿಸುವವರು ಬಹಳ ಅದರಲ್ಲವೋ ? "

"ಅಹುದಪ್ಪಾ "

"ಅವರನ್ನು ಏನು ಮಾಡಬೇಕೋ ? "

"ಮೂರು ಬಾರಿ ನೀರಿನಲ್ಲಿ ಮುಳುಗಿಸಿ, ಎರದೇ ಬಾರಿ ಮೇಲೆತ್ತಬೇಕಪ್ಪಾ ! "

--------

೨.

"ಅಪ್ಪಾ "

"ಏನೋ ತಿಂಮಾ ? "

"ನನಗೆ ಎಷ್ಟಪ್ಪಾ ವಯಸ್ಸು ? "

"ತಿಳಿಯದು"

"ನಿನ್ನ ವಯಸ್ಸು ?"

"ವಿಚಾರಿಸಿ ಹೇಳಬೇಕು "

"ಯಾವ ಊರಲ್ಲಪ್ಪಾ ನಾನು ಹುಟ್ಟಿದ್ದು ? "

"ಈ ಪ್ರಶ್ನೆಯನ್ನು ಪ್ರತ್ಯೇಕವಾಗಿ ಕೇಳಬೇಕು "

"ಯಾವ ಇಸವಿಯಲ್ಲಿ ನಾನು ಹುಟ್ಟಿದ್ದು ? "

"ಉತ್ತರ ಕೊಡಲು ಸಮಯ ಬೇಕು "

"ಅಪ್ಪಾ "

"ಏನೋ ಅದು ? "

"ಇಷ್ಟು ಚೆನ್ನಾಗಿ ಉತ್ತರ ಕೊಡಲು ಬಂದರೂ ನೀನೇಕಪ್ಪಾ ಮಂತ್ರಿಯಾಗಲಿಲ್ಲ !! ".


ನಗೆಹನಿಸಿದ್ದಕ್ಕೆ ಧನ್ಯವಾದಗಳು ನಿಮಗೆ.

sunaath said...

RJ,
ಜಾಲಿ ಮುಳ್ಳು ನಮ್ಮ ಅಂಗಾಲಿನಲ್ಲಿ ಚುಚ್ಚಿದೆ. ಇದರ ನೋವಿನ ಬಗೆಗೆ ಏನು ವ್ಯಾಖ್ಯಾನ ಮಾಡೋಣ? ‘ನೋವು’ ಎಂದು ಹೇಳಿದರೆ ಸಾಕು!

sunaath said...

ತೇಜಸ್ವಿನಿ,
"ಎಮ್ಮೆ ನಿನಗೆ ಸಾಟಿಯಿಲ್ಲ" ಎನ್ನುವದನ್ನು "ಎಮ್ಮೆಲ್ಲೆ ನಿನಗೆ ಸಾಟಿಯಿಲ್ಲ" ಎಂದು ಹೇಳಬಹುದೆ?

sunaath said...

ಜ್ಞಾನಾರ್ಪಣಮಸ್ತು,
ಬಾಪೂ ಬಗೆಗಿನ ಕವನವನ್ನು ಓದಲು ಉತ್ಸುಕನಾಗಿದ್ದೇನೆ. ನಿಮ್ಮ ಬ್ಲಾ^ಗಿನಲ್ಲಿ ಬೇಗನೇ ಹಾಕಿರಿ.

sunaath said...

ಪುತ್ತರ್,
ಬೀchiಯವರ ಸೊಗಸಾದ ನಗೆಹನಿಗಳನ್ನು ಕೊಟ್ಟಿದ್ದೀರಿ.
ಧನ್ಯವಾದಗಳು.

shivu.k said...

ಸುನಾಥ್ ಸರ್,

ನಮ್ಮ ಶಾಸಕರ ವರ್ತನೆ ಅದ್ದುಮೀರಿದೆ. ಅವರಿಗೆ ಸಾರ್ವಜನಿಕ ಭಯವೇ ಇದ್ದಂತಿಲ್ಲ. ಮುಂದೊಂದು ದಿನ ಇದು ಏನಾಗುತ್ತದೋ ಗೊತ್ತಾಗುತ್ತಿಲ್ಲ.

ಲೇಖನವೂ ಅದಕ್ಕೆ ತಕ್ಕಂತೆ ಸೂಕ್ತವಾಗಿದೆ. ಅವರನ್ನು ಕತ್ತೆಗೆ ಹೋಲಿಸಿರುವುದು ಮಾತ್ರ ನೂರಕ್ಕೆ ನೂರರಷ್ಟು ಸರಿ.
ಉತ್ತಮ ಬರಹಕ್ಕೆ ಧನ್ಯವಾದಗಳು.

Unknown said...

ಸುನಾಥರೆ,
ಶಾಸಕರ ಧರಣಿಯ ಒಂದು ಆಯಾಮವನ್ನು ತಾವು ತೋರಿಸಿದ್ದೀರಿ. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಈ ಶಾಸಕರು ಪ್ರತಿ ದಿನವೂ ಪಡೆಯುತ್ತಿರುವ ಸಂಬಳ ಹಾಗು ಭತ್ತೆ ಎಷ್ಟು? ಒಂದು ದಿನದ ಸಭೆಗೆ ತಗಲುವ ವೆಚ್ಚ ಎಷ್ಟು? ಅಷ್ಟೆಲ್ಲ ಹಣವನ್ನು ತೆರಿಗೆಗಳ ಮೂಲಕ ಕೊಡುತ್ತಿರುವ ಬಡಪಾಯಿಗಳು ನಾವೇ ತಾನೆ? ಈ ಶಾಸಕರು ವಿಧಾನಸಭೆಯ ಕಲಾಪಗಳನ್ನು ನಿಲ್ಲಿಸುವ ಮೂಲಕ ನಮ್ಮನ್ನೇ ವಂಚಿಸಿದಂತಲ್ಲವೆ? ಇದನ್ನು ಭ್ರಷ್ಟಾಚಾರದ ಇನ್ನೊಂದು ಮುಖ ಎಂದೇಕೆ ಭಾವಿಸಬಾರದು? CBI ವಿಚಾರಣೆಯೇ ಸರಿ ಎಂದು ಈ ಶಾಸಕರ ಭಾವನೆಯಾಗಿದ್ದರೆ, ವಿಧಾನಸೌಧದ ಎದುರಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಬೇಕಾಗಿತ್ತು ಆಥವಾ ತಮ್ಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಈ ಶಾಸಕರು ಆ ಪ್ರಾಮಾಣಿಕತೆಯನ್ನು ಹೊಂದಿಲ್ಲ. ಇವರಿಗೆ ಬೇಕಾಗಿರುವದು ಕೇವಲ ತಮಾಶೆ!

sunaath said...

ಶಿವು,
ಹದ್ದು ಮೀರಿದ ಶಾಸಕರು ಏನಾಗುತ್ತಾರೆ ಅಂತೀರಾ? ಇವರು ಆಧುನಿಕ ಭಸ್ಮಾಸುರರು. ದೇಶವನ್ನೇ ಸುಟ್ಟುಹಾಕುವರು!

sunaath said...

ವನಮಾಲಾ,
ಈ ‘ತಮಾಶೆ’ಯ ಮತ್ತೊಂದು ಮುಖವನ್ನು ತೋರಿಸಿದ್ದೀರಿ. ನಿಮಗೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

ಕಾಕ.. ವಿಧಾನ ಸೌಧದಲ್ಲಿ ಸತ್ಯಾಗ್ರಹ ನಡೆಸುತ್ತಿರುವ ಶಾಸಕರುಗಳಿಗೆ ಟೈಮ್ ಪಾಸ್ ಆಗುತ್ತಿಲ್ಲವ೦ತೆ...!!!
ಟೈಮ್ ಪಾಸ್ ಮಾಡಲು ಒ೦ದು ಒಳ್ಳೆಯ ಐಡಿಯಾ ಇದ್ರೆ ಕೊಡಬಹುದಾ... ಆಗಿನಿ೦ದ ಯೋಚಿಸುತ್ತಿದ್ದೇನೆ...!!!

ಛೀ.....................

ಚಂದ್ರು said...

ಸುನಾಥರೆ,

ನಿಮ್ಮ ಲೇಖನ ಚೆನ್ನಾಗಿದೆ. ಶಾಸಕರಿಗೆ ಕಾಶ್ಮೀರಿ ಶಾಲಿನಲ್ಲಿ ಅದನ್ನು ಇಟ್ಟು ಹೊಡೆದ ಹಾಗಿದೆ ನಿಮ್ಮ ಲೇಖನ. ಆದರೆ ಏನು ಮಾಡೋದು ಅವರೆಲ್ಲ ಎಮ್ಮೆ ಚರ್ಮದವರು. ಇದಕ್ಕೆಲ್ಲ ಬಗ್ಗುವರಲ್ಲ. ಶಾಸಕರೂ ಇದನ್ನು ಓದಿದರೆ ಚೆನ್ನಾಗಿರುತ್ತೆ :)- ಚಂದ್ರು

ಶಿವಪ್ರಕಾಶ್ said...

Sir,
tumba channagi barediddiri.. ivaru vartane mitimeeride.... :(

nagehani correct aagide ;)

ಮನಸು said...

ಕಾಕಾ,
ಲೇಖನ ಚೆನ್ನಾಗಿದೆ..... ಸಕಾಲಿಕ ಲೇಖನ ಎಲ್ಲಾ ಕಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಏನು ಮಾಡುವುದು... ಇತ್ತೀಚೆಗೆ ನನ್ನ ಕಚೇರಿಯಲ್ಲಿ ಒಂದು ಘಟನೆ ನೆಡೆಯಿತು.... ನನ್ನ ಜೊತೆ ಕೆಲಸ ಮಾಡುವಾಕೆ ಅವರೂ ಭಾರತದವರು ಆದರೆ ಗಂಡನಿಗೆ ಯು.ಕೆ ಪಾಸ್ ಪೋರ್ಟ್ ಇದೆ ಅದಕ್ಕಾಗಿ ಹೆಂಡತಿಯೂ ಸಹ ಯು.ಕೆ ಪಾಸ್ ಪೋರ್ಟ್ ಮಾಡಿಸಿಕೊಳ್ಳಲು ಓಡಾಡುತ್ತಿದ್ದಾಳೆ.... ಇದೆಲ್ಲಾ ಬೇಕಾ ಭಾರತದ ಪಾಸ್ ಪೋರ್ಟ್ ಇದ್ದರೆ ಸಾಕಲ್ಲವೇ ಎಂದರೆ.......ಇಂಡಿಯಾದ್ದಾ... ರಬ್ಬಿಷ್ ಪಾಸ್ ಪೋರ್ಟ್, ನೋಡುತ್ತಿದ್ದಂತೆ ನಮ್ಮನ್ನ ಸರಿಯಾಗಿ ಉಪಚರಿಸೋಲ್ಲ.... ನಮಗೆ ಮರ್ಯಾದೆ ಇರೋಲ್ಲ ಎಲ್ಲಿ ಹೋದರೂ, ಅದಕ್ಕೆ ನಾವು ಯು ಕೆ ಪಾಸ್ ಪೋರ್ಟ್ ತಗೋತೀವಿ ಅಂದಳು....... ಪಾಸ್ ಪೋರ್ಟ್ ಯಾವುದಾದರೇನು ಮೂಲ ಒಂದೇ ಅಲ್ಲವೇ ಎಂದು ಸುಮ್ಮನಾದೆ.... ಇಂತಹ ಭಾವನೆಗಳನ್ನು ತುಂಬಿಕೊಂಡಿರುವ ಜನಕ್ಕೆ ಈ ರಾಜಕಾರಣಿಗಳ ವರ್ತನೆ, ವ್ಯವಹಾರ ಎಲ್ಲದರಿಂದ ರೋಸುಹೋಗಿ ಭಾರತ್ಕ್ಕೆ ಮತ್ತಷ್ಟು ಕೆಟ್ಟ ಹೆಸರನ್ನು ತರುತ್ತಾರೆ ಇದಂತು ಸತ್ಯ.....

ಕೊನೆಯಲ್ಲಿ ಆ ನಗೆ ಕಿಡಿಯಂತೂ ಸೂಪರ್ ಇದೆ... ಒಳ್ಳೆಯ ನಗು ನೀಡಿದ್ದಕ್ಕೆ ಧನ್ಯವಾದಗಳು.....

dayanand j b said...

Sir.. Your posted articles are nice.. Why dont u publish some inspirational articles and motivate youngsters.. Its my request.. I hope u ll consider my request..
From dayanand

sunaath said...

ವಿಜಯಶ್ರೀ,
ಶಾಸಕರಿಗೆ ಒಳ್ಳೇ ಐಡಿಯಾ?......ಛೇ!

sunaath said...

ಚಂದ್ರು,
ಶಾಸಕರು ಒಳ್ಳೆಯದನ್ನು ಓದುತ್ತಾರಾ, ನೋಡುತ್ತಾರಾ, ಕೇಳುತ್ತಾರಾ?

sunaath said...

ಶಿವಪ್ರಕಾಶ,
ಜನಪ್ರತಿನಿಧಿಗಳ ಕಿವಿಯನ್ನು ಜನರೇ ಹಿಂಡಬೇಕು. ಆದರೆ, ಅದು ಆಗುತ್ತಿಲ್ಲವಲ್ಲ!

ಸಾಗರಿ.. said...

ಕಾಕಾ,
ತಮ್ಮ ಲೇಖನಗಳನ್ನು ಓದುವುದೇ ಖುಷಿ. ತಿಳಿಯದ ಎಷ್ಟೋ ವಿಷಯಗಳೂ ತುಂಬಾ ಇರುತ್ತದೆ. ವಿಧಾನಸಭೆಯಲ್ಲಿ ನಡೆದ ಗಲಾಟೆ ನೋಡಿದರಂತೂ ಅಸಹ್ಯ ಎನ್ನಿಸುತ್ತದೆ. language code, behaviour code ಎಲ್ಲಾ ಅವರಿಗೂ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು. atleast ಅಂತಹ ತಿಕ್ಕಲು ಜನರನ್ನ ಆರಿಸಿದ ನಮ್ಮ ಮರ್ಯಾದೆ ಸ್ವಲ್ಪವಾದರೂ ಮಣ್ಣು ಪಾಲಾಗುವುದು ತಪ್ಪುತ್ತಿತ್ತು. ತುಂಬಾ ಚೆನ್ನಾಗಿ ಬರ್ದಿದ್ದೀರಿ. ವಾರಕ್ಕೆ ಒಂದು ಲೇಖನ ಬರೆಯುತ್ತಿದ್ರೆ ಇನ್ನೂ ಖುಷಿ ಅಗುತ್ತೆ.

sunaath said...

ಮನಸು,
ಪಾಸ್ ಪೋರ್ಟ ವಿಷಯ ಓದಿದಾಗ ಆಶ್ಚರ್ಯವಾಯಿತು. ತಮ್ಮ ತಾಯಿಗೆ ತಾಯಿ ಎಂದು ಕರೆಯಲು ನಾಚಿಕೊಳ್ಳುವ ಇವರಿಗೆ ಯಾವ ಶಿಕ್ಷೆಯನ್ನು ಕೊಡಬೇಕೊ ತಿಳಿಯದು.

sunaath said...

ಪ್ರಿಯ ದಯಾನಂದ,
ತರುಣರಿಗೆ ಸತ್ ಪ್ರೇರಣೆ ನೀಡುವ ಯೋಗ್ಯತೆ ನನ್ನಲ್ಲಿ ಇಲ್ಲವಲ್ಲ!

sunaath said...

ಸಾಗರಿ,
ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು. ವಾರಕ್ಕೊಮ್ಮೆ ಬರೆಯುವ ಸಾಮರ್ಥ್ಯ ನನ್ನಲ್ಲಿ ಇಲ್ಲವಮ್ಮ!

Narayan Bhat said...

ಒಳ್ಳೆ ಲೇಖನವನ್ನ ಕೊಟ್ಟಿದ್ದೀರಿ. ನಮ್ಮ ರಾಜ್ಯದ ಸದ್ಯದ ರಾಜಕೀಯ ವಿದ್ಯಮಾನಗಳು ಬಹುಪಾಲು ಜನರಿಗೆ ಬೇಸರ ತರಿಸಿರುವದಂತೂ ನಿಚ್ಚಳವಾಗಿದೆ. ಪರಿವರ್ತನೆಯ ಕ್ರಾಂತಿಗೆ ಇದು ಬೀಜವಾಗಲಿ ಎಂಬುದೇ ಆಶಯ.

Prasad Shetty said...

ತುಂಬಾ ಚೆನ್ನಾಗಿದೆ, ದಿನ ಟಿವಿಯಲ್ಲಿ ಬೆಳಿಗ್ಗೆ ಅವರ ಜಾಗಿಂಗ್ ಮಸ್ತಿ ತೊರ್ಸಿ ತಲೆ ಚಚ್ಚಿಕೊಳ್ಳುವ ಅಂತ ಅನ್ನಿಸ್ತಾ ಇತ್ತು, ನಿಮ್ಮ ಬರಹ ನೋಡಿ ಅದ್ರ ಬಗ್ಗೆ ನಗು ಬಂತು, ಲಘುವಾಗಿ ಬರೆದರೂ ಚೆನ್ನಾಗಿ ಮೂಡಿಬಂದಿದೆ.

Raghu said...

tumba chennagide ee article. yeno madalu hogi yenu madidevu naavu..anno paristiti nammadu..namma vevasthe hanebaraha...!!
Raaghu

sunaath said...

ನಾರಾಯಣ ಭಟ್ಟರೆ,
ನಮ್ಮ ಜನ ಹಾಗು ನಮ್ಮ ರಾಜಕಾರಣಿಗಳು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸುವದು ಯಾವಾಗಲೊ ಎನ್ನುವದು ತಿಳಿಯದಂತಾಗಿದೆ!

sunaath said...

ಪ್ರಸಾದ,
ಶಾಸಕರು ಹೀರೊಗಳಾಗಲು ಹೊರಟಿದ್ದಾರೆ. ಆದರೀಗ ಅವರು zero ಆಗಿದ್ದಾರೆ!

sunaath said...

ರಾಘು,
ಧನ್ಯವಾದಗಳು. ’ಸಬಕೊ ಸನ್ಮತಿ ದೇ ಭಗವಾನ್’ ಎಂದು ಪ್ರಾರ್ಥಿಸುವದಷ್ಟೆ ನಮಗೀಗ ಸಾಧ್ಯ!

V.R.BHAT said...

ಉಹ್ಹುಂ ಉಹ್ಹುಂ ಉಹ್ಹುಂ ....ಅಂ ಅಂ ಅಂ .....ಸ್ವಾಮೀ ಯಾಕೋ ತಾವು ಬಹಳ ಗರಂ ಆದ ಹಾಗಿದೆ, ಲೇಖನ ಖುಷಿಕೊಟ್ಟ ಹಾಗೇ ನಗೆಹನಿ ನಗಿಸಿ ಕೆಮ್ಮು ಬಂದಾಗ ಬರೆಯಲು ಶುರುವಿಟ್ಟು ಅದನ್ನೇ ನಮಗೂ ಪ್ರಾರಂಭದಲ್ಲಿ ತೋರಿಸಿದೆ,ನೀವೇನೇ ಅಂದರೂ ನಾವು ಬರೇ ಧರ್ಮರಾಯರು ಸ್ವಾಮೀ, ನಾವು ಕುಂತಲ್ಲೇ ಮಾತಾಡುತ್ತೇವೆ ವಿನಃ ಅರ್ಜುನನ ಥರ ಬಾಣ ಹೂಡುವುದಿಲ್ಲ, ಬಾಣ ಹೂಡಬೇಕಾದ ಕಾಲ ಕೂಡ ದೂರವಿಲ್ಲ, ಸಿದ್ಧವಾಗಿರಿ, ಬರೆಯುವುದು ಬಿಟ್ಟು ಒಮ್ಮೆ ಎಲ್ಲಾಸೇರಿ ಹೋಗಬೇಕಾದೀತು, ಹೊಸರಾಜಕೀಯದ ಅಧ್ಯಾಯ ಬರೆಯಬೇಕಾದೀತು ಅಲ್ಲವೇ?ನಿಮ್ಮ ಅನಿಸಿಕೆಗೆ ೧೦೦ ಅಂಕಗಳು, ಧನ್ಯವಾದಗಳು

sunaath said...

ಭಟ್ಟರೆ,
ನೀವು ಹೇಳುವದು ನಿಜ. ಈ ಸಂದರ್ಭದಲ್ಲಿ ನನಗೆ ಒಂದು ಘಟನೆ ನೆನಪಾಗುತ್ತದೆ:
ಶಿವಾಜಿಯ ಗುರುಗಳಾದ ರಾಮದಾಸರು ಪಂಡರಪುರಕ್ಕೆ ಹೋಗಲು ಒಪ್ಪುತ್ತಲೇ ಇರಲಿಲ್ಲವಂತೆ. ಕೊನೆಗೊಮ್ಮೆ ಅವರ ಶಿಷ್ಯರ ತೀವ್ರ ಒತ್ತಡಕ್ಕೆ ಸಿಲುಕಿ, ಪಂಢರಪುರ ಯಾತ್ರೆಯನ್ನು ಕೈಗೊಂಡರಂತೆ. ಅಲ್ಲಿ ವಿಠ್ಠಲನ ಮೂರ್ತಿಎದುರಿಗೆ ನಿಂತಾಗ ಅವರು ಅಸಮಾಧಾನದಿಂದ ಈ ರೀತಿಯ ಅಭಂಗ ಹಾಡಿದರಂತೆ:
"ಎಲವೊ ರಾಮಚಂದ್ರಾ, ತ್ರೇತಾಯುಗದಲ್ಲಿ ರಾಕ್ಷಸಸಂಹಾರ ಮಾಡಿದ ನೀನು, ಈ ಕಲಿಯುಗದಲ್ಲಿ ಬಿಲ್ಲು ಬಾಣಗಳನ್ನು ಎಲ್ಲೊ ಒಗೆದುಬಿಟ್ಟು, ಟೊಂಕದ ಮೇಲೆ ಕೈಕಟ್ಟಿ ನಿಂತಿರುವಿಯೇನು?!"
ರಾಕ್ಷಸಸಂಹಾರವನ್ನು ಈಗ ಮಾಡುವವರು ಯಾರು?

ಅನಂತ್ ರಾಜ್ said...

ಮಹಾತ್ಮ ಗಾ೦ಧಿಯ ನಾಡಿನಲ್ಲಿ ಹುಟ್ಟಿಕೊ೦ಡಿರುವ ಮಜಾತ್ಮಾ ಗಾ೦ಧಿಗಳು, ಪ್ರಜಾ ಪ್ರಭುತ್ವವನ್ನು ಮಜಾ ಪ್ರಭುತ್ವ
ಮಾಡಿಕೊ೦ಡಿರುವ ಪ್ರಜೆ-ಪ್ರಭುಗಳು.. ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆ ನಿಮಗೆ ಇರುವ ಕಳಕಳಿಗೆ ನಮ್ಮ ದನಿಯೂ ಸೇರ್ಪಡೆಯಾಗಿದೆ. ಕೊನೆಯಲ್ಲಿ ಸೇರಿಸಿರುವ ನಗೆಹನಿ ಅರ್ಥಪೂಣ೯. ಉತ್ತಮ ವಿಚಾರ ಮ೦ಡನೆಗೆ ಧನ್ಯವಾದಗಳು.

ಅನ೦ತ್

sunaath said...

ಅನಂತರಾಜ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.