‘ದೇಶ ಶ್ರೀಮಂತವಾಗಿರುವಾಗ ಓರ್ವ ವ್ಯಕ್ತಿ ಬಡತನದಲ್ಲಿದ್ದರೆ ಅವನು ತಪ್ಪುಗಾರ; ದೇಶ ಬಡತನದಲ್ಲಿದ್ದಾಗ ಓರ್ವ ವ್ಯಕ್ತಿ ಸಿರಿವಂತಿಕೆಯಲ್ಲಿದ್ದರೆ ಆ ವ್ಯಕ್ತಿ ಒಬ್ಬ ಪಾಪಿ’ ಎಂದು ಚೀನಾ ದೇಶದ ತತ್ವಜ್ಞಾನಿ ಕನ್‌ಫ್ಯೂಶಿಯಸ್ ಹೇಳಿದ್ದಾನೆ. ಕಾಲ ಹಾಗು ದೇಶದಿಂದ ದೂರದಲ್ಲಿದ್ದ ಆ ತತ್ವಜ್ಞಾನಿಯನ್ನು ಬಿಡೋಣ. ನಾವು ರಾಷ್ಟ್ರಪಿತ ಎಂದು ಸ್ಮರಿಸುವ ಮಹಾತ್ಮಾ ಗಾಂಧಿಯವರು ಅರೆಹೊಟ್ಟೆಯ ಅಡುಗೆ ಹಾಗು ಅರೆಬತ್ತಲೆಯ ಉಡುಗೆಯ ವ್ರತವನ್ನು ಏಕೆ ಆಚರಿಸಿದರು? ತಮ್ಮ ದೇಶವಾಸಿಗಳ ಹೀನಸ್ಥಿತಿಯನ್ನು ನೋಡಿ ಮರುಕಗೊಂಡಿದ್ದಕ್ಕಲ್ಲವೆ? ಮಾನವ ಸಂವೇದನೆಯಿರುವ ಹೃದಯವಂತರು ಮಾಡುವ ಕೆಲಸವಿದು. ಇಂತಹ ಸಂವೇದನೆಯನ್ನು ನಾವು ಚುನಾಯಿಸಿದ ನಮ್ಮ ಶಾಸಕರಲ್ಲಿ ಅಪೇಕ್ಷಿಸುವದು ಹುಚ್ಚುತನವೇ ಸರಿ.
ಇದೀಗ ನಮ್ಮ ಶಾಸಕರು ಅಂದರೆ ಲೋಕಸಭೆಯ ಸದಸ್ಯರು ತಮ್ಮ ಮಾಸಿಕ ವೇತನವನ್ನು ರೂ.೫೦,೦೦೦ಗಳಿಗೆ ಏರಿಸಿಕೊಳ್ಳುವ ಹುನ್ನಾರದಲ್ಲಿದ್ದಾರೆ.. ಅದರ ಜೊತೆಗೆ ರೂ.೪೫,೦೦೦/-ಗಳ ಕ್ಷೇತ್ರಭತ್ತೆ . ಲೋಕಸಭೆ ನಡೆಯುತ್ತಿರುವಾಗ ಪ್ರತಿದಿನ ರೂ.೨೦೦೦/-ಗಳ ಭತ್ತೆ ಬೇರೆ. ಲೋಕಸಭೆಯು ಒಂದು ವರ್ಷದಲ್ಲಿ ಕನಿಷ್ಠ ೧೨೦ ದಿನಗಳವರೆಗೆ ನಡೆಯುವದರಿಂದ ರೂ. ೨,೪೦,೦೦೦ಗಳ ಗಳಿಕೆ ಇಲ್ಲಿಯೇ ಆಗುತ್ತದೆ. ಇದಲ್ಲದೆ ಟೆಲಿಫೋನ್, ವಿಮಾನ ಹಾರಾಟ ಮೊದಲಾದವುಗಳ ಪುಕ್ಕಟೆ ಸೌಲಭ್ಯ. ಒಟ್ಟಿನಲ್ಲಿ ಓರ್ವ ಸದಸ್ಯನಿಗೆ ವರ್ಷಕ್ಕೆ ಸುಮಾರು ೨೦ ಲಕ್ಷಗಳವರೆಗಿನ ಗಳಿಕೆ. ಇದು ಸಾಮಾನ್ಯ ಭಾರತೀಯನ ವಾರ್ಷಿಕ ಆದಾಯದ ೬೮ ಪಟ್ಟು ಅಧಿಕವಾಗಿದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ೫೪೩. ಸಂಪುಟ ಸಚಿವರು ಹಾಗು ಉಪಮಂತ್ರಿಗಳಿಗೆ ಹೆಚ್ಚಿನ ಸಂಬಳ. ಅದನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸಹ, ಲೋಕಸಭೆಯ ವರ್ತಮಾನ ಸದಸ್ಯರಿಗಾಗಿ ಭಾರತೀಯರು ಮಾಡುವ ಖರ್ಚು ವರ್ಷಕ್ಕೆ ರೂ. ೧೦೫ ಕೋಟಿ. ಲೋಕಸಭೆಯ ಸದಸ್ಯರಾಗಿದ್ದವರು, ಮುಂದಿನ ಚುನಾವಣೆಯಲ್ಲಿ ಗೆಲ್ಲದೆ ಹೋದರೆ, ಅವರಿಗೆ ನಿವೃತ್ತಿವೇತನದ ಹೆಸರಿನಲ್ಲಿ ಸಮಾಧಾನಕರ ಬಹುಮಾನ ಲಭ್ಯವಾಗುತ್ತದೆ. (ಇನ್ನು ರಾಜ್ಯಸಭೆಯ ಸದಸ್ಯರ ಸಂಖ್ಯೆ ೨೫೦. ಇವರಿಗೂ ಸಹ ಇಷ್ಟೇ ವೇತನ ಹಾಗು ಇಷ್ಟೇ ಭತ್ತೆ ಇರಬಹುದಲ್ಲವೆ?)
ಇದಲ್ಲದೆ ಲೋಕಸಭೆಯಲ್ಲಿ ಮತದಾನ ಮಾಡುವಾಗ ಅಡ್ಡಮತ ನೀಡಲು, ವಿಶ್ವಾಸಮತ ನೀಡಲು ಲಂಚ ಸ್ವೀಕರಿಸಿದ ಉದಾಹರಣೆಗಳು ನಮ್ಮ ಎದುರಿಗಿವೆ. ಪ್ರಶ್ನೆ ಕೇಳುವ ಸಲುವಾಗಿ ಕೆಲವು ಸದಸ್ಯರು ಆಸಕ್ತ ಉದ್ದಿಮೆಪತಿಗಳಿಂದ ಲಂಚ ಪಡೆಯುತ್ತಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಒಟ್ಟಿನಲ್ಲಿ ಲೋಕಸಭೆಯ ಸದಸ್ಯನಾಗಿರುವದು ಅತ್ಯಂತ ಲಾಭದಾಯಕ ಧಂಧೆಯಂತೆ ಭಾಸವಾಗುತ್ತದೆ. ಈ ಧಂಧೆಯಲ್ಲಿಯ ಅತ್ಯಂತ ಆಕರ್ಷಕ ಅಂಶವೆಂದರೆ, ಲೋಕಸಭೆಯಲ್ಲಿ ಪಡೆದ ಲಂಚವು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟುಬಿಟ್ಟಿದೆ. (ಸೋರೇನ ಶಿಬು ಮತ್ತು ನರಸಿಂಹರಾವ ಪ್ರಕರಣ.)
ಕಳ್ಳಧಂಧೆ ಮಾಡುವದರಲ್ಲಿ ಹೆಸರು ಮಾಡಿದ ಅನೇಕ ವ್ಯಕ್ತಿಗಳಿದ್ದಾರೆ: ಹಾಜಿ ಮಸ್ತಾನ, ಛೋಟಾ ಶಕೀಲ, ವೀರಪ್ಪನ್ ಇತ್ಯಾದಿ. ಕಾಯದೆಯ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವು ಅಪರಾಧಿಗಳು ಭಾರತೀಯ ಅಪರಾಧಿಗಳ ಸ್ವರ್ಗವಾದ ದುಬೈಯಲ್ಲಿ ನೆಲಸಿದ್ದಾರೆ. ಕೆಲವರು ಮುಖಾಮುಖಿಯಲ್ಲಿ ನೆಗೆದು ಹೋಗಿದ್ದಾರೆ. ಲೋಕಸಭೆಯ ಸದಸ್ಯರಿಗೆ ಮಾತ್ರ ಇಂತಹ ಯಾವುದೇ risk ಇಲ್ಲ. ಲೋಕಸಭೆಯಲ್ಲಿ ಘಟಿಸಿದ ಇವರ ಆರ್ಥಿಕ ಅಪರಾಧಗಳು ಭಾರತೀಯ ದಂಡಸಂಹಿತೆಯ ಅಡಿಯಲ್ಲಿ ಗಣನೆಗೆ ಬರುವದಿಲ್ಲ. ಇತರ ಕೆಲವು ಕ್ಷುಲ್ಲಕ ಅಪರಾಧಗಳಿಗಾಗಿ (ಉದಾ: ರೇಪ್, ಕೊಲೆ, ಅಪಹರಣ ಇ.) ಇವರು ಜೇಲಿನಲ್ಲಿ ಇರಬೇಕಾದರೂ ಸಹ, ಅಲ್ಲಿ ಅವರಿಗೆ ಸ್ವರ್ಗಸೌಲಭ್ಯಗಳು ಲಭ್ಯವಿರುತ್ತವೆ. ೨೦೦೪ರ ಲೋಕಸಭೆಯಲ್ಲಿ ೧೨೦ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು. ಆದುದರಿಂದ ನಮ್ಮ ಲೋಕಸಭೆಗೆ ‘ಅಪರಾಧಿಸಭಾ’ ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ.
ಲೋಕಸಭೆಯ ಸದಸ್ಯರಿಗಾಗಿ ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನವಿರಬೇಕು ಎನ್ನುವದು ಸನ್ಮಾನ್ಯ ಸದಸ್ಯರಾದ ಲಾಲೂ ಪ್ರಸಾದ ಯಾದವರ ಒತ್ತಾಯ. ಯಾಕೆಂದರೆ ಸರಕಾರದ ಕಾರ್ಯದರ್ಶಿಗಳು ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನ ಪಡೆಯುತ್ತಾರಂತೆ. ಲೋಕಸಭಾ ಸದಸ್ಯರ ದರ್ಜೆಯು ಸರಕಾರದ ಕಾರ್ಯದರ್ಶಿಗಳ ದರ್ಜೆಗಿಂತ ಹೆಚ್ಚಿನದಾಗಿರುವದರಿಂದ, ಇವರಿಗೆ ಮಾಸಿಕ ರೂ.೮೦ ಸಾವಿರಕ್ಕಿಂತ ಹೆಚ್ಚಿಗೆ ವೇತನ ಬೇಕಂತೆ. ಅಲ್ಲಾ ಸ್ವಾಮಿ, ಸರಕಾರದ ಕಾರ್ಯದರ್ಶಿಗಳು ಭಾರತೀಯ ಆಡಳಿತಾತ್ಮಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದಂತಹ ಪ್ರತಿಭಾವಂತರಾಗಿರುತ್ತಾರೆ. ದಯವಿಟ್ಟು ನಿಮ್ಮನ್ನು ಅವರ ಜೊತೆಗೆ ಹೋಲಿಸಿಕೊಳ್ಳಬೇಡಿ. ಲೋಕಸಭಾ ಸದಸ್ಯರಿಗೂ ಸಹ ಒಂದು common entrance test ಇಟ್ಟರೆ ನಿಮ್ಮ ಹೂರಣ ಹೊರಬೀಳುತ್ತದೆ. ಈ ಪರೀಕ್ಷೆಯಲ್ಲಿ ಎಷ್ಟು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ತೇರ್ಗಡೆ ಹೊಂದುತ್ತಾರೆ ಎನ್ನುವದು ಚರ್ಚಾತ್ಮಕ ವಿಷಯ!
ಆಶೆಬುರುಕತನ ತೋರಿಸುವ ಇಂತಹ ಶಾಸಕರಿಗೆ ನಾವು ಮತ ನೀಡಬೇಕೆ? ವೇತನ ಹೆಚ್ಚಿಸಿಕೊಳ್ಳಲು ಮತ ನೀಡಿದ ಯಾವ ಶಾಸಕನಿಗೂ ಮುಂದಿನ ಚುನಾವಣೆಯಲ್ಲಿ ನಾನು ಮತ ನೀಡಲಾರೆ. ಇಂತಹ ‘ಶಾಸಕ-ತಿರಸ್ಕಾರ’ ಚಳುವಳಿಯು ನಮ್ಮ ದೇಶದಲ್ಲಿ ರೂಪಗೊಳ್ಳಬೇಕು. ಶಾಸಕಾಂಗಕ್ಕೆ ಪರಮೋಚ್ಚ ಅಧಿಕಾರವಿದೆ ಎಂದು ಶಾಸಕರು ಹೇಳುತ್ತಾರೆ. ಪರಮೋಚ್ಚ ಅಧಿಕಾರವಿರುವದು ನಾಗರಿಕರಿಗೆ ಎನ್ನುವದನ್ನು ಪ್ರಜ್ಞಾವಂತ ನಾಗರಿಕರು ತೋರಿಸಿ ಕೊಡಬೇಕು.
ಮಹಾತ್ಮಾ ಗಾಂಧೀಜಿಯವರನ್ನು ೩೦ ಜನೆವರಿ ೧೯೪೮ರಂದು ನಾಥೂರಾಮ ಘೋಡಸೆ ಗುಂಡಿಟ್ಟು ಕೊಂದ ಎಂದು ಹೇಳುತ್ತಾರೆ. ಇದು ತಪ್ಪು ಹೇಳಿಕೆ. ನಮ್ಮ ಶಾಸಕರು ರಾಷ್ಟ್ರಪಿತನನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ.
ಹೇ ರಾಮ್!