Saturday, September 25, 2010

ವಿವೇಕಾನಂದರ ‘ಕಾಳೀಮಾತಾ’………ಬೇಂದ್ರೆಯವರ ‘ರೌದ್ರಿ’

ಸ್ವಾಮಿ ವಿವೇಕಾನಂದರು ಕಾಶ್ಮೀರದಲ್ಲಿರುವ  ಕ್ಷೀರಭವಾನಿ ದೇವಿಯ ದರ್ಶನ ಪಡೆದ ಬಳಿಕ ದಾಲ್ ಸರೋವರದಲ್ಲಿಯ ದೋಣಿ-ಮನೆಗೆ ಮರಳುತ್ತಾರೆ. ಆ ಸಂದರ್ಭದಲ್ಲಿ ಅವರು ಬರೆದ ಕವನವಿದು. ದೇವಿಯು ಜಗಜ್ಜನನಿಯಾದಂತೆಯೇ ಜಗತ್ತಿನ ಸಂಹಾರಕಾರಣಿಯೂ ಹೌದು. ದೇವಿಯ ಅಂತಹ  ಉಗ್ರ ಸ್ವರೂಪದ ಬಗೆಗಿನ ಚಿಂತನ ಅವರ ಈ ಕವನದಲ್ಲಿದೆ:
                                 Kali, the Mother
                        The stars are blotted out,
                        The clouds are covering clouds.
                        It is darkness vibrant, sonant.
                        In the roaring, whirling wind
                        Are the souls of a million lunatics
                        Just loosed from the prison-house,
                        Wrenching trees by the roots,
                        Sweeping all from the path.
                        The sea has joined the fray,
                        And swirled up mountain-waves,
                        To reach the pitchy sky.
                        The flash of lurid light
                        Reveals on every side
                        A thousand, thousand shades
                        Of Death begrimed and black-
                        Scattering plagues and sorrows,
                        Dancing mad with joy,
                        Come, Mother, come!
                        For terror is Thy name,
                        Death is in thy breath,
                        And every shaking step
                        Destroys a world for e'er.
                        Thou Time, the All-destroyer!
                        Come, O Mother, come!
                        Who dares misery love,
                        And hug the form of Death,
                        Dance in destruction's dance
                        To him the Mother comes.


ವಿವೇಕಾನಂದರ ಈ ಕವನದ ಅನುವಾದವನ್ನು ಬೇಂದ್ರೆಯವರು ಮಾಡಿದ್ದಾರೆ. ಅನುವಾದಿತ ಕವನವನ್ನು ‘ಹೃದಯಸಮುದ್ರ’ ಸಂಕಲನದಲ್ಲಿ ಅಳವಡಿಸಲಾಗಿದೆ. ಅದು ಇಂತಿದೆ:

                       
ರೌದ್ರಿ
                             ಭಾಗ-೧
                        ಚಿಕ್ಕೆ ಬಾನೊಳಿಂಗಿವೆ
                        ಮೋಡ ಮುಗಿಲನುಂಗಿವೆ
                        ಜಿರಗುಟ್ಟುವ ದುರಗುಟ್ಟುವ
                        ಕತ್ತಲೋ ಕತ್ತಲು
                        ಸುಟ್ಟುರೆಯೇ ಬಿರುಗಾಳಿಯೇ
                        ಲೋಕದತ್ತಲಿತ್ತಲೆ
                        ಮುರಿದು ಸೆರೆ ಬಂತು ನೆರೆ
                        ಮರುಳಪಡೆಯೆ ಬೆತ್ತಲೆ
                                    ಭಾಗ-೨
                        ಮರ ಕಿತ್ತಿವೆ ಬುಡ ತಳ
                        ಹಾದಿ ಉಡುಗೆ ಝಳಝಳ
                        ಕಡಲು ಕುಣಿಯೆ ಗೊಂದಣ
                        ತೆರೆ-ಮುರಿ-ನೊರೆ ಧಂಧಣ
                        ಮಬ್ಬೆ ಮಳೆಯು ನಾಡಿಗೆ
                        ಮುಗಿಲಿನಂಚು ಕಾಡಿಗೆ
                        ಸಾವು ಹೊಂಚು, ಅಯ್ಯೊ ಮಿಂಚು
                        ಕಣ್ತೆರೆದೆಡೆ ಸುತ್ತಿಗೊಂಡ
                        ಲಕ್ಷಕೋಟಿ ರೂಪುಗೊಂಡ
                        ಸಾವಿನಿಂದ ಮುತ್ತುತ
                        ಕಷ್ಟ ನಷ್ಟ ಬಿತ್ತುತ
                        ಹಿಗ್ಗುಗೊಂಡು ಹುಚ್ಚೆದ್ದು
                        ಕುಣಿವ ತಾಯಿ ಬಾ!
                               ಭಾಗ-೩
                        ರೌದ್ರಿ ನಿನ್ನ ಹೆಸರು
                        ಮೃತ್ಯು ನಿನ್ನ ಉಸಿರು
                        ನಿನ್ನ ಒಂದು ನಡೆ ಅಡಿ
                        ಜಗವ ಮಾಡೆ ಪುಡಿ ಪುಡಿ
                        ಪ್ರಳಯಂಕರಿ ಓ ಕಾಳಿ
                        ಬಾ ತಾಯಿಯೆ ಬಾ!

ಕವನರಚನೆಯ ಸಂದರ್ಭದಲ್ಲಿ ಕವಿಯ ಮನಸ್ಸಿನಲ್ಲಿ ಒಂದು ಭಾವ ಇರುತ್ತದೆ. ಅದು ಕವನದ ಆತ್ಮ. ಈ ಭಾವಕ್ಕೆ ಅನುರೂಪವಾದ ಛಂದಸ್ಸನ್ನು, ಪದಗಳನ್ನು ಹಾಗು toneಅನ್ನು ಕವಿಯು ಸೃಷ್ಟಿಸುತ್ತಾನೆ. ಅದು ಕವನದ ದೇಹ. ಅನುವಾದಕನು ಕವನವನ್ನು ಅನುವಾದಿಸುವಾಗ ಕವನದ ಆತ್ಮವನ್ನು ಹಾಗು ದೇಹವನ್ನು ತನ್ನ ಅನುವಾದದಲ್ಲಿ ಸಮರ್ಪಕವಾಗಿ ಮೂಡಿಸಿದರೆ ಅದು ಉತ್ತಮ ಅನುವಾದ. ಬೇಂದ್ರೆಯವರ ಅನುವಾದಗಳು ಇನ್ನೂ ಮೇಲ್ಮಟ್ಟದವು. ವಿವೇಕಾನಂದರ ಈ ಕವನವದ ಉದಾಹರಣೆಯನ್ನೇ ತೆಗೆದುಕೊಳ್ಳಿ.

ವಿವೇಕಾನಂದರು ಕಾಶ್ಮೀರದಲ್ಲಿ ದೇವಿಯ ದರ್ಶನವನ್ನು ಪಡೆದ ನಂತರ, ಪಾರಮಾನಸ ಪ್ರಜ್ಞೆಯಲ್ಲಿ, ದೇವಿಯ ಸಂಹಾರಕಾರಿ ರೂಪವನ್ನು ಅನುಭವಿಸಿ ಬರೆದಿರಬಹುದಾದ ಕವನವಿದು. ಆ ಅನುಭವಕ್ಕೆ ತಕ್ಕ ಛಂದಸ್ಸು ಹಾಗು ಪದಗಳನ್ನು ಅವರು ತಮ್ಮ ಕವನದಲ್ಲಿ ಬಳಸಿದ್ದಾರೆ. ಬೇಂದ್ರೆಯವರು ಕನ್ನಡದಲ್ಲಿ ಅಂತಹದೇ ಛಂದಸ್ಸು ಹಾಗು ಅದೇ ಜಾತಿಯ ಪದಗಳನ್ನು ಬಳಸಿದ್ದಾರೆ. ಮೂಲ ಕವನದ toneಅನ್ನು ಸಹ ಅನುವಾದದಲ್ಲಿ ಸಮರ್ಥವಾಗಿ ಇಳಿಸಿದ್ದಾರೆ. ಇಷ್ಟೇ ಆದರೆ ಇದೊಂದು ಉತ್ತಮ ಅನುವಾದವಾಗಬಹುದಾಗಿತ್ತು. ಆದರೆ ಇದೊಂದು ಶ್ರೇಷ್ಠ ಅನುವಾದವಾಗಲು ಬೇರೊಂದು ಕಾರಣವಿದೆ. ಬೇಂದ್ರೆಯವರು ತಮ್ಮ ಮನೋಲೋಕದ ಬಸಿರಲ್ಲಿ ಮೂಲಕವನವನ್ನು ಹೊತ್ತು, ಆ ಕವನಕ್ಕೆ ಮರುಹುಟ್ಟು ನೀಡಿದ್ದಾರೆ. ಇದು ಕೇವಲ ಪ್ರತಿಕೃತಿಯಲ್ಲ, ಇದು ಮೂಲಕವನದ ಮರುಜನ್ಮ.

ಮಗುವಿಗೆ ಜನ್ಮ ಕೊಡುವ ಕ್ರಿಯೆಗೆ ಕನ್ನಡದಲ್ಲಿ ‘ಹಡೆಯುವದು’ ಎನ್ನುತ್ತಾರೆ. ಇದು ‘ಪಡೆಯುವದು’ ಪದದಿಂದ ಬಂದಿದೆ. ‘ಹಡೆಯುವದಕ್ಕೆ’ ಮೊದಲು ‘ಪಡೆಯಬೇಕಾಗುತ್ತದೆ’. ಬೇಂದ್ರೆಯವರು ವಿವೇಕಾನಂದರಿಂದ ಮೂಲಕವನದ ಭಾವವನ್ನು ಹಾಗು ದೇಹವನ್ನು ‘ಪಡೆದರು’, ಬಳಿಕ ಅದನ್ನೇ ಕನ್ನಡದಲ್ಲಿ ‘ಹಡೆದರು’! ಈ ಪಡೆಯುವ ಹಾಗು ಹಡೆಯುವ ಕ್ರಿಯೆಯ ನಡುವೆ ಮಗುವಿನ ತಾಯಿಯು ತನ್ನದೇ ಆದ ಸತ್ವವನ್ನು ಮಗುವಿಗೆ ನೀಡುತ್ತಾಳೆ. Value addition ಎಂದು ಹೇಳುತ್ತಾರಲ್ಲ, ಆ ರೀತಿಯಲ್ಲಿ. ಈ ಕವನದಲ್ಲಿ ಬೇಂದ್ರೆಯವರು ಅದನ್ನೂ ಮಾಡಿದ್ದಾರೆ. ಹೀಗಾಗಿ ಮೂಲಕ್ಕೆ ವಿರೋಧವಾಗದೇ ಈ ಕವನಕ್ಕೆ ಹೆಚ್ಚಿನ ಸೊಬಗು ಬಂದಿದೆ.

ವಿವೇಕಾನಂದರ ಮೂಲಕವನದ ಪ್ರತಿಯೊಂದು ಸಾಲನ್ನು ಅರ್ಥವ್ಯತ್ಯಾಸವಿಲ್ಲದೆ ಬೇಂದ್ರೆಯವರು ಕನ್ನಡಕ್ಕೆ ಹೇಗೆ ಇಳಿಸಿದ್ದಾರೆ ಎನ್ನುವದನ್ನು ಅರಿಯಬೇಕಾದರೆ, ಪ್ರತಿ ಸಾಲಿನ ಮೂಲವನ್ನು ಹಾಗು ಅನುವಾದವನ್ನು ಜೊತೆಜೊತೆಗೇ ಇಟ್ಟು ಪರೀಕ್ಷಿಸಬೇಕು:

ಮೂಲ/ಅನುವಾದ:
The stars are blotted out,
ಚಿಕ್ಕೆ ಬಾನೊಳಿಂಗಿವೆ
The clouds are covering clouds.
ಮೋಡ ಮುಗಿಲ ನುಂಗಿವೆ.
It is darkness vibrant, sonant
ಜಿರಗುಟ್ಟುವ ದುರುಗುಟ್ಟುವ ಕತ್ತಲೋ ಕತ್ತಲು
(vibrant ಎನ್ನುವ ಪದಕ್ಕೆ ದುರುಗುಟ್ಟುವ ಎನ್ನುವ ಪದವನ್ನು ಹಾಗು sonant ಎನ್ನುವ ಪದಕ್ಕೆ ಜಿರಗುಟ್ಟುವ ಎನ್ನುವ ಪದವನ್ನು ಬೇಂದ್ರೆಯವರು ಬಳಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಅಥವಾ ಕಾಡಿನಲ್ಲಿ ಕತ್ತಲೆ ಕವಿದ ಇರುಳಿನಲ್ಲಿ ಏಕಾಕಿಯಾಗಿ ನಡೆಯುತ್ತಿರುವವನಿಗೆ ಈ ದುರುಗುಟ್ಟುವ ಹಾಗು ಜಿರಗುಟ್ಟುವ ಕತ್ತಲೆಯು ಅನುಭವಕ್ಕೆ ಬಂದಿರುತ್ತದೆ.)
In the roaring, whirling wind
ಸುಟ್ಟುರೆಯೆ ಬಿರುಗಾಳಿಯೆ ಲೋಕದತ್ತಲಿತ್ತಲೆ
Are the souls of a million lunatics just loosed from the prison house
ಮುರಿದು ಸೆರೆ ಬಂತು ನೆರೆ ಮರುಳ ಪಡೆಯೆ ಬೆತ್ತಲೆ.
(ಸೆರೆಯಲ್ಲಿ ಬಂಧಿಸಿಟ್ಟ ಹುಚ್ಚು ಆತ್ಮಗಳನ್ನೆಲ್ಲ ಥಟ್ಟನೆ ಬಿಡುಗಡೆ ಮಾಡಿದರೆ ಹೇಗಿರಬೇಕು? ಅಂತಹ ಒಂದು chaotic ಚಿತ್ರಣವನ್ನು ವಿವೇಕಾನಂದರು ಊಹಿಸಿಕೊಳ್ಳುತ್ತಾರೆ. ಬೇಂದ್ರೆಯವರು ಈ lunatic souls ಅನ್ನುವದನ್ನು ‘ಮರಳು ಪಡೆ’ ಎಂದು ಬಣ್ಣಿಸುತ್ತಾರೆ. ರಣರಂಗದಲ್ಲಿ  ಸತ್ತವರ ಮತ್ತು ಅರೆಸತ್ತವರ ದೇಹಗಳನ್ನು ಭಕ್ಷಿಸಲು ಬರುವ spirits ಇವು. ಕುರುಕ್ಷೇತ್ರದ ರಣರಂಗದಲ್ಲಿ ಇಂತಹ ಒಂದು ಸನ್ನಿವೇಷವನ್ನು ಕಲ್ಪಿಸಿ ರನ್ನನ ‘ಗದಾಯುದ್ಧ’ದಲ್ಲಿ ಮರಳು ಪಡೆಯ ಭೀಭತ್ಸ ಕಾರ್ಯವನ್ನು ಚಿತ್ರಿಸಲಾಗಿದೆ.)
Wrenching trees by the roots
ಮರ ಕಿತ್ತಿವೆ ಬುಡ ತಳ
Sweeping all from the path
ಹಾದಿ ಉಡುಗೆ ಝಳ ಝಳ
The sea has joined the fray
ಕಡಲು ಕುಣಿಯೆ ಗೊಂದಣ
And swirled up mountain waves
ತೆರೆ-ಮುರಿ-ನೊರೆ ಧಂಧಣ
To reach the pitchy sky
ಮಬ್ಬೆ ಮಳೆಯು ನಾಡಿಗೆ, ಮುಗಿಲಿನಂಚು ಕಾಡಿಗೆ.
The flash of lurid light reveals on every side a thousand thousand shades of Death begrimed and black
ಸಾವು ಹೊಂಚು, ಅಯ್ಯೊ ಮಿಂಚು, ಕಣ್ತೆರೆದೆಡೆ ಸುತ್ತಿಗೊಂಡ, ಲಕ್ಷಕೋಟಿ ರೂಪುಗೊಂಡ
Scattering plagues and sorrows
ಸಾವಿನಿಂದ ಮುತ್ತುತ, ಕಷ್ಟ ನಷ್ಟ ಬಿತ್ತುತ
Dancing mad with joy, Come, mother, come!
ಹಿಗ್ಗುಗೊಂಡು ಹುಚ್ಚೆದ್ದು ಕುಣಿವ ತಾಯಿ ಬಾ!
For terror is thy name
ರೌದ್ರಿ ನಿನ್ನ ಹೆಸರು
Death is in thy breath
ಮೃತ್ಯು ನಿನ್ನ ಉಸಿರು
And every shaking step
ನಿನ್ನ ಒಂದು ನಡೆ ಅಡಿ
Destroys a world for e’er
ಜಗವ ಮಾಡೆ ಪುಡಿ ಪುಡಿ
Thou Time,
ಓ ಕಾಳಿ(=ಕಾಲ ಅಂದರೆ Time)
Who dares misery love, and hug the form of Death, dance in the destruction’s dance
ಪ್ರಳಯಂಕರಿ
Come, O Mother, come!
ಬಾ, ತಾಯಿಯೆ ಬಾ!

ಸೃಷ್ಟಿಯನ್ನಷ್ಟೇ ಬಯಸುವದು ಪ್ರತಿ ಜೀವಿಗೂ ಸಹಜ. ಆದರೆ, ಸೃಷ್ಟಿ-ಸ್ಥಿತಿ-ಸಂಹಾರ ಇವು ಭಗವಂತನ ಅನಿವಾರ್ಯ ಕರ್ತವ್ಯಗಳು. ಈ ಸೃಷ್ಟಿ ಹಾಗು ಸಂಹಾರ ಕಾರ್ಯಗಳು ಲಕ್ಷ ಲಕ್ಷ ರೂಪದಲ್ಲಿ ಪ್ರತಿದಿನವೂ ನಡದೇ ಇರುತ್ತವೆ. ವಿವೇಕಾನಂದರು ತಮ್ಮ ಪಾರಮಾನಸ ಪ್ರಜ್ಞೆಯಲ್ಲಿ ಇದನ್ನು ಅನುಭವಿಸುತ್ತಿದ್ದಾರೆ. ದೇವಿಯ ಎಲ್ಲ ರೂಪಗಳೂ ಮನುಷ್ಯನಿಗೆ ಪೂಜ್ಯವೇ. ಆದುದರಿಂದಲೇ ಈ ಸಂಹಾರರೂಪಿಣಿ ದೇವಿಯನ್ನು ಈ ಕವನದಲ್ಲಿ ಅವರು ಆಹ್ವಾನಿಸಿದ್ದಾರೆ, ಭಜಿಸಿದ್ದಾರೆ. ಈ ಆಹ್ವಾನಕ್ಕೆ ಮತ್ತೂ ಒಂದು ಕಾರಣವಿರಬಹುದು. ಭಾರತದಲ್ಲಿ ಆ ಸಮಯದಲ್ಲಿ ಹರಡಿದ ಅಜ್ಞಾನ, ಬಡತನ, ಕ್ಷೋಭೆ ಇವೆಲ್ಲವುಗಳಿಂದ ನೊಂದ ವಿವೇಕಾನಂದರು ಇವು ನಿರ್ಮೂಲವಾಗಿ ಹೊಸ ಸೃಷ್ಟಿಯೊಂದು ಮೈದಳೆಯಲಿ ಎಂದು ಆಶಿಸಿರಬಹುದು. ಪ್ರಳಯದ ನಂತರ ಹೊಸ ಸೃಷ್ಟಿ ಎನ್ನುವದು ಕಾಲಗತಿಯೇ ಆಗಿದೆ. ಈ ಕಾರಣಕ್ಕಾಗಿಯೂ ವಿವೇಕಾನಂದರು ಪ್ರಳಯಕಾಳಿಯನ್ನು ಆಹ್ವಾನಿಸುತ್ತಿರಬಹುದು!

ತಮ್ಮ ಅನುವಾದ-ಕವನದಲ್ಲಿ ಬೇಂದ್ರೆಯವರು ಮೂರು ಭಾಗಗಳನ್ನು ಮಾಡಿರುವದನ್ನು ಗಮನಿಸಬೇಕು. ಮೂಲಕವನದ ಸೊಬಗನ್ನು ಸವಿಯಲು ಓದುಗನಿಗೆ ಇದು ನೆರವು ನೀಡುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪದ ಕರಾಳ ವರ್ಣನೆ ಇದೆ. ಇದು ಕಲಾವಿದನು ತನ್ನ ಚಿತ್ರಕ್ಕೆ ಕೊಡುವ ಹಿನ್ನೆಲೆಯ ವರ್ಣವಿದ್ದಂತೆ. ಈ ಭಾಗದಲ್ಲಿಯೇ ವಿವೇಕಾನಂದರು ‘ಮರಳು ಪಡೆ’ಯು ಸೆರೆಯಾಗಿ ಇರುವದನ್ನು ಚಿತ್ರಿಸಿದ್ದಾರೆ.

ಎರಡನೆಯ ಭಾಗದಲ್ಲಿ ಈ ಮರಳು-ಪಡೆಯು ಬಿಡುಗಡೆಗೊಂಡು ಮಾಡುವ ಅನಾಹುತವನ್ನು ಚಿತ್ರಿಸಲಾಗಿದೆ. ಮೊದಲ ಭಾಗದಲ್ಲಿ static ಇದ್ದ ಚಿತ್ರಣವು, ಎರಡನೆಯ ಭಾಗದಲ್ಲಿ dynamic ಆಗಿದೆ. ನಿಸರ್ಗವೆಲ್ಲ ಅಲ್ಲೋಲ ಕಲ್ಲೋಲವಾಗಿದೆ. ಇದರ ಪರಿಣಾಮವಾಗಿ ಎಲ್ಲೆಡೆಯೂ ಸಾವು, ನೋವು ಹಬ್ಬಿವೆ. ಈ ಸಾವು ನೋವಿನ, ಈ ವಿಧ್ವಂಸಕಾರ್ಯದ ಅಧಿಷ್ಠಾತ್ರಿಯು ಬೇರಾರೂ ಅಲ್ಲ; ಅವಳೇ ದೇವಿ!  ಇದು ಅವಳಿಗೆ ಹಿಗ್ಗು ನೀಡುತ್ತಿರುವ ಪ್ರಳಯ-ನೃತ್ಯ!

ಮೂರನೆಯ ಭಾಗದಲ್ಲಿ ವಿವೇಕಾನಂದರು ಈ ದೇವಿಯ ಲಕ್ಷಣಗಳನ್ನು ಬಣ್ಣಿಸುತ್ತಾರೆ. ಅವಳ ಹೆಸರೇ ಭಯಂಕರಿ (terror). ಮೃತ್ಯುವೇ ಅವಳ ಉಸಿರು! ವಿವೇಕಾನಂದರು ಅವಳ ಹೆಜ್ಜೆಯನ್ನು shaking step ಎಂದು ಬಣ್ಣಿಸುತ್ತಾರೆ. ಯಾಕೆಂದರೆ ತನ್ನ ಆನಂದದಲ್ಲಿಯೇ ಅವಳು ಮದೋನ್ಮತ್ತಳಾಗಿದ್ದಾಳೆ. ಈ ಹೆಜ್ಜೆಯ ಕೆಳಗೆ ಸಿಲುಕಿದ(--ಬೇರೆ ಮಾರ್ಗವೇ ಇಲ್ಲ!--) ಜಗತ್ತು ಪುಡಿಪುಡಿಯಾಗಿ ಹೋಗುತ್ತದೆ. ಇದು ಯಾಕೆ ಅನಿವಾರ್ಯವೆಂದರೆ ಈ ಸೃಷ್ಟಿ ಹಾಗು ಸಂಹಾರ ಇವು ಕಾಲನಿಯಾಮಕವಾಗಿವೆ. (ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ‘ಕಾಲೋ ಜಗದ್ಭಕ್ಷಕಃ’ = Time swallows the worlds ಎಂದು ಹೇಳಿದ್ದಾರೆ.) ದೇವಿಯು ‘ಕಾಲಿ’, ಅಂದರೆ ಅವಳೇ ಕಾಲದೇವತೆ.

ವಿವೇಕಾನಂದರು ತಮ್ಮ ಕಾಲಾವಧಿಯಲ್ಲಿ ತಮ್ಮ ಸುತ್ತಲೂ ಹರಡಿದ್ದ ಕಷ್ಟ, ಕಾರ್ಪಣ್ಯ ಹಾಗು ಸಾವು, ನೋವುಗಳನ್ನು ನೋಡಿದವರು. ಇದರಿಂದ ವ್ಯಥಿತರಾದ ಅವರು ‘Diabolical is the scheme of the universe!’ ಎಂದು ಉದ್ಗರಿಸಿದ್ದಾರೆ. ಅದರೆ ಇದೆಲ್ಲ ದೈವಯೋಜನೆ ಎಂದು ಅರಿತು, ಆ ದೈವಕ್ಕೆ ತಮ್ಮನ್ನು  ಒಪ್ಪಿಕೊಂಡಿದ್ದಾರೆ. ಹಾಗೆಂದು ಅವರು ಕೈಕಟ್ಟಿ ಕೂಡುವ ಸ್ವಭಾವದವರಲ್ಲ. ಜನಸೇವೆಯೆ ಜನಾರ್ದನನ ಸೇವೆ ಎಂದು ಘೋಷಿಸಿದ ವೀರಸನ್ಯಾಸಿ ಅವರು. ಈ ಕವನದಲ್ಲಿ ಅವರು ಆ ಪ್ರಳಯಂಕರಿ ಕಾಳಿಯನ್ನೇ ಆಹ್ವಾನಿಸುವ ಧೀರತೆಯನ್ನು ತೋರಿಸಿದ್ದಾರೆ. ಈ ವಿನಾಶವನ್ನು ಅವರು ‘souls of a million lunatics just losed' ಎಂದು ವರ್ಣಿಸಬೇಕಾದರೆ, ವಿಶ್ವದ ಈ diabolical scheme ಬಗೆಗೆ ಅವರಿಗಿರುವ ಅತೃಪ್ತಿಯನ್ನು ಅರಿಯಬಹುದು!

ವಿವೇಕಾನಂದರ ಕವನಕ್ಕೆ ಬೇಂದ್ರೆಯವರು ನೀಡಿದ ಕೆಲವು value-additions ಹೀಗಿವೆ:
(೧) ಕವನವನ್ನು ಮೂರು ಭಾಗಗಳಲ್ಲಿ ವಿಭಾಗಿಸಿರುವದರಿಂದ ಓದುಗನಿಗೆ, ಕವನದ ಆಂತರ್ಯವನ್ನು ಹಾಗು ಸೊಬಗನ್ನು ಗ್ರಹಿಸಲು ಅನುಕೂಲವಾಗುತ್ತದೆ.
(೨) ಎರಡನೆಯ ಭಾಗದ ಕೊನೆಯ ಸಾಲನ್ನು ಬೇಂದ್ರೆಯವರು ಅನುವಾದಿಸಿದ ರೀತಿ ಅಪೂರ್ವವಾದದ್ದು.
‘Dancing mad with joy, Come, mother, come!’ ಅನ್ನುವ ಸಾಲನ್ನು ಬೇಂದ್ರೆಯವರು
‘ಹಿಗ್ಗುಗೊಂಡು ಹುಚ್ಚೆದ್ದು ಕುಣಿವ ತಾಯಿ ಬಾ!’ ಎಂದು ಅನುವಾದಿಸಿದ್ದಾರೆ. ಮೂಲದಲ್ಲಿ ಇರದ ಆವೇಶ ಅನುವಾದದಲ್ಲಿ ಮೈದೋರಿದೆ.ಇದರ ತಾಂತ್ರಿಕ ಕಾರಣವೆಂದರೆ, ಈ ಪದಭಾಗದ ಮೇಲೆ ಒತ್ತು ಬರುವಂತೆ ಬೇಂದ್ರೆಯವರು ಕವನದ ಓಟವನ್ನು ರೂಪಿಸಿದ್ದಾರೆ.
(೩) ಉದ್ವೇಗ ತುಂಬಿದ ಎರಡನೆಯ ಭಾಗ ಮುಗಿದು ಮೂರನೆಯ ಭಾಗವು ಪ್ರಾರಂಭವಾದಾಗ, ಅನುವಾದದಲ್ಲಿ ಸುವ್ಯಕ್ತವಾಗಿ ಕಾಣುವ ತಾತ್ವಿಕ resignation, ಮೂಲಭಾಗದಲ್ಲಿ ಅಸ್ಪಷ್ಟವಿದೆ.

ವಿವೇಕಾನಂದರ ಕವನವು ಬೇಂದ್ರೆಯವರಲ್ಲಿ ಮರುಹುಟ್ಟು ಪಡೆದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

[ಟಿಪ್ಪಣಿ:
Raghavendra said...
ಪ್ರೀತಿಯ ಸುನಾಥ್ ಸರ್, ವಿವೇಕಾನಂದರ ಈ ಕವನದ ಬೇಂದ್ರೆಯವರ ಅನುವಾದ ಅತ್ಯಂತ ಸುಂದರವಾಗಿದೆ. ಆದರೆ, ವಿವೇಕಾನಂದರ ಈ ಕವನದ ಆತ್ಮ ಎಂದು ಯಾವ ಭಾಗವನ್ನು ಕರೆಯಬಹುದೋ ಅದೇ ಬೇಂದ್ರೆಯವರ ಅನುವಾದದಲ್ಲಿ ಮಿಸ್ ಆಗಿಬಿಟ್ಟಿದೆ. ನನಗಂತೂ ತುಂಬ ನಿರಾಸೆಯಾಗಿದೆ. ನಾನು ಆ ಭಾಗವನ್ನು ಬೇಂದ್ರೆಯವರು ಹೇಗೆ ಅನುವಾದಿಸಿರಬಹುದು ಎಂಬ ಕುತೂಹಲದಿಂದ ಓದುತ್ತ ಹೋದರೆ ಅದು ಇಲ್ಲವೇ ಇಲ್ಲವಾಗಿದೆ. Who dares misery love, And hug the form of Death, Dance in destruction's dance To him the Mother comes. ಈ ಭಾಗ ಇಡೀ ಕವನದ ಆತ್ಮಭಾಗ ಅಂತ ನನಗೆ ಅನ್ನಿಸುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪವು ಎರಡನೆಯ ಭಾಗದಲ್ಲಿ ಅತ್ಯಂತ ರೌದ್ರವಾದ ಚಲನೆಯನ್ನು ಪಡೆದುಕೊಳ್ಳುತ್ತದೆ, ಮತ್ತು ಮೂರನೆಯ ಭಾಗದಲ್ಲಿ ಮೃತ್ಯುವೇ ಆದ ಆ ದೇವಿಯನ್ನು ವಿವೇಕಾನಂದರು ಬಣ್ಣಿಸುತ್ತಾರೆ. ಈ ಮೂರು ಭಾಗಗಳಲ್ಲಿಯೂ ಹೊರಗೇ ಘಟಿಸುವ ಈ ಘಟನೆ ನಾಲ್ಕನೆಯ ಭಾಗದಲ್ಲಿ ಆಂತರ್ಯಕ್ಕೆ ಸಾಗುತ್ತದೆ. ಆ ಸಾಲುಗಳನ್ನು ಸ್ಥೂಲವಾಗಿ ಅನುವಾದಿಸುವುದಾದರೆ: "ಯಾರು ಸಾವಿನ ದೇವತೆಯ ಪ್ರೇಮವನ್ನು ಒಪ್ಪಿಕೊಳ್ಳುತ್ತಾನೆ, ಯಾರು ಲಯಕಾರಕಳಾದ ಕಾಳಿಯನ್ನು ಅಪ್ಪಿಕೊಳ್ಳುತ್ತಾನೆ ಮತ್ತು ಆ ವಿಧ್ವಂಸಕ ನರ್ತನದ ಜೊತೆಗೇ ನರ್ತಿಸಲು ಸಿದ್ಧನಾಗುತ್ತಾನೆ ಅಂತವನಲ್ಲಿಗೆ ಆ ದೇವಿ ಬರುತ್ತಾಳೆ, ದೈವತ್ವ ಅವನದಾಗುತ್ತದೆ" ಬ್ರಹ್ಮಾಂಡದಲ್ಲಿ ಹುಟ್ಟು-ಸಾವು ಒಟ್ಟಿಗೇ ಘಟಿಸುತ್ತಿರುತ್ತದೆ, ಸೃಷ್ಠಿಯಾಗುತ್ತಿದ್ದಂತೆ ಲಯವೂ ಒಟ್ಟೊಟ್ಟಿಗೇ ಆಗುತ್ತಿರುತ್ತದೆ. (ಪ್ರತೀ ಒಳ-ಉಸಿರೂ ಹುಟ್ಟು, ಪ್ರತೀ ಹೊರ-ಉಸಿರೂ ಸಾವು.) ಆದರೆ ಎಷ್ಟು ಜನರಿಗೆ ಆ ಮರಣವು ಮಹಾನವಮಿ ಎಂದು ಸ್ವೀಕರಿಸುವ ಚೈತನ್ಯವಿದ್ದೀತು? ಅಂತಹ ಚೈತನ್ಯವಿದ್ದವನಿಗೆ ಮಾತ್ರ ದೇವಿ ದೊರೆಯುತ್ತಾಳೆ ಎಂಬುದು ಕೊನೆಯ ಪ್ಯಾರಾದ ಅರ್ಥ ಎಂದು ನನಗನ್ನಿಸುತ್ತದೆ. ತಾಂಡವವಾಡುವ ಕಾಳಿಯ ವಿನಾಶೀ ವಿಜ್ರಂಭಣೆಯನ್ನು ಒಪ್ಪಿಕೊಳ್ಳುವವ, ಆ ವಿಜ್ರಂಭಣೆಯನ್ನು ತನ್ನಲ್ಲಿ ಸ್ವೀಕರಿಸುವವ ದೇವೀ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಎಂಬುದೇ ಈ ಕವಿತೆಯ ಮುಖ್ಯ ಅರ್ಥ. ಆದರೆ ಬೇಂದ್ರೆಯವರು ಇದನ್ನು ಬಿಟ್ಟಿದ್ದಾರೆಯೇ? ನಿಮ್ಮ ವಿವರಣೆಯಲ್ಲಿಯೂ ಈ ಭಾಗ ನನಗೆ ಕಾಣಲಿಲ್ಲ. ಈ ನನ್ನ ಅನಿಸಿಕೆ ಸರಿಯೇ ತಿಳಿಸಿ.
sunaath said...
ರಾಘವೇಂದ್ರರೆ, ನೀವು ತೋರಿಸಿದ ಅನುವಾದ ಲೋಪವು ಅತ್ಯಂತ ಸಮಂಜಸವಾಗಿದೆ. ಮತ್ತು ಅದರ ಅನುವಾದವನ್ನು ನೀವು ಅತ್ಯಂತ ಸಮರ್ಪಕವಾಗಿ ಗದ್ಯರೂಪದಲ್ಲಿ ನೀಡಿದ್ದೀರಿ. ಬೇಂದ್ರೆ ಯಾಕೆ ಈ ಭಾಗವನ್ನು ಬಿಟ್ಟರು ಎನ್ನುವದನ್ನು ನಾನು ಊಹಿಸಿಕೊಳ್ಳಲಾರೆ.ಒಟ್ಟಿನಲ್ಲಿ ಇದು ಬೇಂದ್ರೆಯವರಿಂದ ಘಟಿಸಿದ ಲೋಪ ಎಂದು ಹೇಳಲೇಬೇಕು. ದೇವಿಯ ವಿನಾಶಕಾರಿ ರೂಪದಿಂದ ತನ್ನ ಮನಸ್ಸಿಗೆ ಆಘಾತವಾಗುತ್ತಿದ್ದರೂ ಸಹ, ತಾನು ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಲೇಬೇಕೆನ್ನುವದು ವಿವೇಕಾನಂದರ ಆಶಯ. ಆ ಆಶಯವನ್ನು ಬಿಟ್ಟು, ಕೇವಲ ದೇವಿಯ ರೂಪವನ್ನು ಚಿತ್ರಿಸುವದಷ್ಟೇ ಬೇಂದ್ರೆಯವರ ವಿಚಾರವಿದ್ದಿದ್ದೀತು. ಆದರೆ, ಅನುವಾದಕನು ಇಂತಹ ಸ್ವಾತಂತ್ರ್ಯವನ್ನು ವಹಿಸಬಾರದು. ನಿಮ್ಮ ಆಕ್ಷೇಪಣೆಯು ಮೌಲಿಕವಾಗಿರುವದರಿಂದ, ಈ ಆಕ್ಷೇಪಣೆಯನ್ನು ಹಾಗು ಅದಕ್ಕೆ ನನ್ನ ಸಮ್ಮತಿಯನ್ನು ನಾನು ಮೂಲಲೇಖನದ ಟಿಪ್ಪಣಿಯಲ್ಲಿ ಸೇರಿಸುತ್ತೇನೆ (ನಿಮ್ಮ ಅನುಮತಿಯ ಪೂರ್ವಗ್ರಹಿಕೆಯೊಂದಿಗೆ!)

44 comments:

ಮನದಾಳದಿಂದ............ said...

ಸುನಾಥ್ ಜೀ,
ಈ ಕವನವನ್ನು ಅನುವಾದ ಎನ್ನುವುದಕ್ಕಿಂತಲೂ ನೀವಂದಂತೆ ಮರು ಹುಟ್ಟು ಎಂಬುದೇ ಸೂಕ್ತ. ಯಾವ ನೆಲೆಯಲ್ಲೂ ಕೂಡ ಆಂಗ್ಲ ಕವನದ ಅನುವಾದ ಎಂಬ ಅನುಮಾನವೂ ಬರದಂತೆ ಕಾಪಾಡಿಕೊಂಡಿದ್ದಾರೆ. ತಮ್ಮ ದಿನ ಶೈಲಿ ಎಲ್ಲೂ ಲೋಪವಾಗದೆ ಉಳಿದುಕೊಂಡಿದೆ.
ಬೇಂದ್ರೆಯವರ ಸಾಹಿತ್ಯ ಕೃಷಿಯ ಸೊಬಗನ್ನು ಧಾರಾಳವಾಗಿ ಉಣಬಡಿಸುತ್ತ ಬಂದಿದ್ದೀರಾ, ನಾವೆಲ್ಲರೂ ನಿಮಗೆ ಚಿರಋಣಿಗಳು.

sunaath said...

ಪ್ರವೀಣ,
ಬೇಂದ್ರೆಯವರು ಅನುವಾದಿಸಿದ ಮತ್ತೊಂದು ಕವನವಿದೆ: "ನಾಳೆ ಬೆಳಿಗ್ಗೆ ಬಂದೈತಿ ಮಹಾಮರಣಾ.." ಎನ್ನುವದು. ಆ ಕವನವನ್ನು ಅನುವಾದ ಕವನಗಳಲ್ಲಿಯ masterpiece ಎನ್ನಬಹುದು. ಅದು ದೀರ್ಘ ಕವನವಾಗಿರುವದರಿಂದ blogನಲ್ಲಿ ಹಾಕಲು ಅನಾನುಕೂಲವಿದೆ. ಎಲ್ಲಾದರೂ ನಿಮಗೆ ದೊರೆತರೆ, ತಪ್ಪದೇ ಓದಿ.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಬೇಂದ್ರೆಯಜ್ಜನ ಮಾಂತ್ರಿಕ ಪದಗಳ ಆಟವನ್ನು ತೋರಿಸುವ ಮತ್ತೊಂದು ಕವನ. ಅನುವಾದಕ್ಕೂ ಭಾವಾನುವಾದಕ್ಕೂ ಇರುವ ವ್ಯತ್ಯಾಸ ಈ ಕವನದಲ್ಲಿ ಎದ್ದು ಕಾಣುತ್ತದೆ.

ಮರಳು ಪಡೆ- ಅದರ ಮೂಲ ಗೊತ್ತಾಗಲಿಲ್ಲ.

ಅದೇಕೋ ಕಾಳಿಯ ರುದ್ರ ನರ್ತನ ಇನ್ನೂ ಆ ಕಾಶ್ಮೀರದಲ್ಲಿ ನಡದೇ ಇದೆ..

Guruprasad said...

ಸುನಾಥ ಸರ್,,
ತುಂಬಾ ಚೆನ್ನಾಗಿ ಇದೆ.. ಇಸ್ತೊಂದ್ ಅರ್ಥ ಇದೆ ಅಂತ ಇದನ್ನ ಓದಿದಾಗಲೇ ಗೊತ್ತಾಗಿದ್ದು.....

ಮನಮುಕ್ತಾ said...

ಕಾಕಾ,
ವಿವೇಕಾನ೦ದರ ಕಾಳೀ ಮಾತಾ... ಬೇ೦ದ್ರೆಯವರ ರೌದ್ರಿ..ಕವನದ ಮರುಹುಟ್ಟು ಎ೦ಬುದು,ಕವನಗಳ ಭಾವಾರ್ಥ,ವಿಶ್ಲೇಷಣೆಗಳು ಎಲ್ಲವನ್ನೂ ಒಳಗೊ೦ಡ ನಿಮ್ಮ ಬರಹವನ್ನು ಓದಿದೆ.
ಓದಿ ನನಗನಿಸಿದ್ದು..ಇಷ್ಟೋ೦ದು ಉನ್ನತ ಮಟ್ಟದ ಕವಿತೆಗಳು...ಅವುಗಳ ಅರ್ಥಗಳನ್ನೊಳಗೊ೦ಡ ನಿಮ್ಮ ಬರಹಗಳನ್ನು ಓದುವ ಭಾಗ್ಯ ನಮಗಿದೆ ಎ೦ಬುದೇ ಸ೦ತೋಷದ ವಿಚಾರ..
ಧನ್ಯವಾದಗಳು.

sunaath said...

ಅಪ್ಪ-ಅಮ್ಮ,
ಕುರುಕ್ಷೇತ್ರದ ರಣರಂಗದಲ್ಲಿ ಸತ್ತವರ, ಸಾಯುತ್ತಿರುವವರ ದೇಹಗಳನ್ನು ಭಕ್ಷಿಸಲು ಮರುಳ ಪಡೆ ನಲಿದಾಡುತ್ತಿತ್ತು ಎನ್ನುವ ವರ್ಣನೆ ಕನ್ನಡದ ಯಾವ ಮಹಾಕಾವ್ಯದಲ್ಲಿ ಬಂದಿದೆ ಎನ್ನುವದು ನನಗೆ ನೆನಪಾಗುತ್ತಿಲ್ಲ. ಶಾಕಿನಿ,ಡಾಕಿನಿ ಮೊದಲಾದ ಪ್ರೇತಭಕ್ಷಕ spiritಗಳಿಗೆ ‘ಮರಳು-ಪಡೆ’ ಎಂದು ಕರೆಯಲಾಗಿದೆ. ಬೇಂದ್ರೆಯವರು ಮರಳು-ಪಡೆ ಪದವನ್ನು ಬಳಸುವ ಕಾರಣ ಹೀಗಿದೆ:
ಮರಳು ಎನ್ನುವದಕ್ಕೆ ಹುಚ್ಚು ಎನ್ನುವ ಅರ್ಥ ಕನ್ನಡದಲ್ಲಿದೆ. ಇದು ವಿವೇಕಾನಂದರು ಬಳಸಿದ lunatic ಪದಕ್ಕೆ ಸಂವಾದಿಯಾಯಿತು. ಆದರೆ lunatic souls ಎನ್ನುವ ಪದವನ್ನು ‘ಮರಳು-ಆತ್ಮಗಳು’ ಎನ್ನುವದು ಮೂಲದ ಅರ್ಥಕ್ಕೆ ಅನುರೂಪವಾಗುವದಿಲ್ಲ. ಆದುದರಿಂದ ಮರಳು-ಪಡೆ ಎನ್ನುವ ಹಳಗನ್ನಡದಲ್ಲಿ ಬಳಸಲಾದ ಪದವನ್ನು ಬಳಸಿಕೊಂಡು ಬೇಂದ್ರೆಯವರು lunatic soul ಪದದ ಅರ್ಥವನ್ನು ಸಾಧಿಸಿದ್ದಾರೆ!

sunaath said...

ಗುರು,
ಬೇಂದ್ರೆಯವರ ಕವನದಲ್ಲಿ ಎಷ್ಟೆಲ್ಲ ಅರ್ಥ ಅಡಗಿರುತ್ತದೆ! ಅದು ಒಂದೇ ಓದಿಗೆ ತಿಳಿಯುವಂತಹದಲ್ಲ!

sunaath said...

ಮನಮುಕ್ತಾ,
ಕೇಳುವ ಆನಂದ ನಿಮ್ಮದಾದರೆ, ಹೇಳುವ ಭಾಗ್ಯ ನನ್ನದು!

Subrahmanya said...

ವಿವೇಕಾನಂದರ ಜೀವನದ ಸರಣಿ ಪುಸ್ತಕಗಳನ್ನು ಓದುತ್ತಿದ್ದಾಗ ಕೊನೆಯಲ್ಲಿ ಅವರ ಈ ಕವನವನ್ನೂ ಓದಿದ್ದೆ, ಆದರೆ ಸಂಪೂರ್ಣ ನಿರ್ಲಕ್ಷಿಸಿದ್ದೆ, ಕಾರಣ ನನಗದರ ಸಂಪೂರ್ಣ ಭಾವಾರ್ಥ, ಮಹತ್ವ ಅರ್ಥವಾಗಿರಲಿಲ್ಲ. ಬೇಂದ್ರೆಯವರನ್ನು ’ಭುವನದ ಭಾಗ್ಯ’ ಎಂದು ಏಕೆ ಕರೆದರೆಂದು ಈ ಅನುವಾದವನ್ನು (ಹಾಗನಿಸುವುದೇ ಇಲ್ಲ !) ಓದುವುದರಿಂದ ತಿಳಿದುಕೊಳ್ಳಬಹುದು. (ಉಪೇಕ್ಷಿಸುವ ವಿಮರ್ಶಕರು). ಇಲ್ಲಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.

'ಚಿಕ್ಕೆ ಬಾನೊಳಿಂಗೆವೆ, ಮೋಡ ಮುಗಿಲ ನುಂಗಿವೆ’ ಎನ್ನುವುದರಲ್ಲೇ ಕವಿಯ ಸಾಮರ್ಥ್ಯ ತಿಳಿದುಬಿಡುತ್ತದೆ.

ಹಾಗೆಯೇ , "ನಾಳೆ ಬಂದೈತಿ ಮಹಾಮರಣ" ವನ್ನು ಎರಡು ಅಥವ ಮೂರು ಪೋಸ್ಟ್ ಗಳಾಗಿ ವಿಂಗಡಿಸಿಕೊಂಡು ಕೊಡಮಾಡಲು ಯತ್ನಿಸಿರೆಂದು ವಿನಂತಿ.

sunaath said...

ಬೇಂದ್ರೆಯವರ ಅನುವಾದವನ್ನು ಓದಿದ ನಂತರವೇ ವಿವೇಕಾನಂದರ ಕವನವು ಅರ್ಥವಾಗುವದು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಅನುವಾದದ ಎದುರಿಗೆ ಮೂಲಕವನವು ಪೇಲವವಾಗಿ ಕಾಣುವದು. ಇದಕ್ಕೆ ಕಾರಣವೆಂದರೆ ವಿವೇಕಾನಂದರು ಒಬ್ಬ ಮಹಾನ್ ಯೋಗಿ, ಆದರೆ ಮಹಾನ್ ಕವಿ ಅಲ್ಲ. ಬೇಂದ್ರೆಯವರು ಮಹಾನ್ ಯೋಗಿ ಅಲ್ಲ, ಆದರೆ ಮಹಾನ್ ಕವಿ. ಬೇಂದ್ರೆಯವರು ಅರವಿಂದ ಮಹರ್ಷಿಗಳ ಮಾನಸ ಶಿಷ್ಯರು. ಅರವಿಂದರು ಸಾಹಿತ್ಯಕ್ಷೇತ್ರದಲ್ಲೂ ತುಂಬ ದೊಡ್ಡ ವ್ಯಕ್ತಿ. ಒಮ್ಮೆ ಬೇಂದ್ರೆಯವರನ್ನುಒಬ್ಬರು ಕೇಳಿದ್ದರಂತೆ:
"ಕವಿಯಾಗಿ ನೀವು ದೊಡ್ಡವರೋ, ಅರವಿಂದರೋ?" ಬೇಂದ್ರೆ ಥಟ್ಟನೆ ಉತ್ತರಿಸಿದರು,"ಕವಿಯಾಗಿ ನಾನೇ ದೊಡ್ಡವನು!"

PARAANJAPE K.N. said...

ವಿವೇಕಾನ೦ದರ ಕವನವನ್ನು ಬೇ೦ದ್ರೆಯವರು ಸಶಕ್ತವಾಗಿ ಅನುವಾದ ಮಾಡಿದ್ದಾರೆ, ಆ೦ಗ್ಲ ಕವನದ ಪ್ರತಿ ಸಾಲಿನ ಪ್ರತಿ ಶಬ್ದಕ್ಕೆ ಪ್ರತಿವಾದಿಯಾಗಿ ಬೇ೦ದ್ರೆಯವರು ಪಡಿಮೂಡಿಸಿದ ಹೊಸ ಪದಬಳಕೆ ಅನನ್ಯವಾದುದು.ಸ೦ಗ್ರಹಯೋಗ್ಯ

sunaath said...

ಪರಾಂಜಪೆಯವರೆ,
ತಾವು ಹೇಳುವದು ನಿಜವಾಗಿದೆ. ಬೇಂದ್ರೆಯವರ ಅನುವಾದ ಅನನ್ಯವಾದದ್ದು.

Unknown said...

Ok... Nice one..

Mahantesh said...

ಸುನಾಥ ಕಾಕಾ,

ಮೂಲ ಕವನಕ್ಕಿಂತ ಬೇಂದ್ರೆಯ ಅಜ್ಜರ 'ರೌದ್ರಿ’ ತುಂಬಾ ಮಸ್ತ ಅನ್ನಿಸಿತು.

sunaath said...

ರವಿಕಾಂತ,
ಮೆಚ್ಚಿಕೊಂಡಿರಾ? ಧನ್ಯವಾದಗಳು.

sunaath said...

ಮಹಾಂತೇಶ,
ಬೇಂದ್ರೆಯವರ ಅನುವಾದವನ್ನು ಓದಿದ ನಂತರವೇ, ನನಗೆ ವಿವೇಕಾನಂದರ ಮೂಲಕವನವನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಇದು ಬೇಂದ್ರೆ-ಪ್ರತಿಭೆ.

V.R.BHAT said...

ಸುನಾಥ್ ಸಾಹೇಬರೇ, ಕವಿವರ್ಯ ಬೇಂದ್ರೆ ಅನುವಾದಿಸಿದರು ಎನ್ನುವುದಕ್ಕಿಂತ ಮರುಹುಟ್ಟು ಎನ್ನುವುದೇ ಸೂಕ್ತ! ಅದು ವಿವೇಕಾನಂದರಿಗೆ ಕವಿ ಕೊಟ್ಟ ಗೌರವ. ಅದನ್ನು ಅವರೇ ಹೇಳದಿದ್ದರೆ ತಿಳಿಯುತ್ತಲೇ ಇಲ್ಲವೇನೋ ! ಬೇಂದ್ರೆಯವರನ್ನು ಮತ್ತೆ ಮತ್ತೆ ಕರೆದು ನೆನೆಪಿನಂಗಳದಲ್ಲಿ ಸಾವಿರ ಸಾವಿರ ರಂಗೋಲಿ ಚಿತ್ರಿಸಿದ್ದೀರಿ, ತಮಗೆ ಎಲ್ಲರ ಪರವಾಗಿ ಹಾಗೂ ವೈಯಕ್ತಿಕವಾಗಿ ಶಿರಸಾ ಸಾಷ್ಟಾಂಗವೆರಗಿದ್ದೇನೆ, ನಮಸ್ಕಾರ.

sunaath said...

ಭಟ್ಟರೆ,
ನಿಜ. ಅನುವಾದವೆಂದು ಬೇಂದ್ರೆಯವರು ಹೇಳಿರದಿದ್ದರೆ, ಓದುಗನಿಗೆ ತಿಳಿಯುವ ಸಾಧ್ಯತೆಯೇ ಇಲ್ಲ.

ಮನಸಿನಮನೆಯವನು said...

ರೌದ್ರಿ ನಿನ್ನ ಹೆಸರು
ಮೃತ್ಯು ನಿನ್ನ ಉಸಿರು
ನಿನ್ನ ಒಂದು ನಡೆ ಅಡಿ
ಜಗವ ಮಾಡೆ ಪುಡಿ ಪುಡಿ
ಪ್ರಳಯಂಕರಿ ಓ ಕಾಳಿ
ಬಾ ತಾಯಿಯೆ ಬಾ!":
ಈ ಸಾಲುಗಳಲ್ಲಿ ಆಕೆಯ ರೌದ್ರತೆಯನ್ನು ಬಲವಾಗಿ ಒತ್ತಿ ಹೇಳಿದ್ದಾರೆ ಅಲ್ಲವೇ.

sunaath said...

ಬೆಳಕಿನ ಮನೆಯವರೆ,
ನಿಜ, ಆ ಸಾಲುಗಳಲ್ಲಿ ದೇವಿಯ ಭಯಂಕರ ರುದ್ರರೂಪಕ್ಕೆ ಒತ್ತು ಕೊಡಲಾಗಿದೆ..

ದಿನಕರ ಮೊಗೇರ said...

ಸುನಾಥ್ ಸರ್,
ನಾನು ನಿಮ್ಮ ಬ್ಲಾಗ್ ಓದಲು ಶುರು ಮಾಡಿದಾಗಿನಿಂದ ಒಂದಲ್ಲಾ ಒಂದು ಮಹಾನ್ ಕವಿತೆ, ಪುಸ್ತಕದ ಬಗ್ಗೆ ತಿಳಿಯುತ್ತಾ ಇದ್ದೇನೆ..... ಇಂದೂ ಕೂಡ ಮಹಾನ್ ಕವಿಯರ ಬಗ್ಗೆ ಸಾಲು ಸಾಲನ್ನೂ ತಿಳಿಸಿ ಹೇಳಿದ್ದೀರಾ ಸರ್.... ತುಂಬಾ ತುಂಬಾ ತುಂಬಾ ಧನ್ಯವಾದ.....

Manjunatha Kollegala said...

ವಿವೇಕಾನಂದರ ಇಂಗ್ಲಿಷ್ ಮೂಲಕ್ಕಿಂತ ಬೇಂದ್ರೆಯವರ ಕನ್ನಡ ’ಮೂಲ’ವೇ ಹೆಚ್ಚು ಸಹಜ-ಶಕ್ತವಾಗಿ ಬಂದಿದೆಯೆನ್ನುವುದಂತೂ ನಿಜ. ಆ ದೃಷ್ಟಿಯಿಂದ ಇದು ಮರುಹುಟ್ಟೇ ಸರಿ. ಇಂಗ್ಲಿಷು ವಿವೇಕಾನಂದರ ಮಾತೃಭಾಷೆಯಲ್ಲದ್ದೂ ಇದಕ್ಕೆ ಕಾರಣವಿರಬಹುದು.

ಆದರೆ ಅನುವಾದವೊಂದು ಮೂಲವನ್ನೇ ಮೀರಿ ಹೋಗುವ ಸ್ವಾತಂತ್ರ್ಯವನ್ನು ವಹಿಸಿಕೊಳ್ಳುವುದು, ಮೂಲದಲ್ಲಿಲ್ಲದ ಸೌಲಭ್ಯವನ್ನು ಅನುವಾದಕ ಹುಟ್ಟಿಸುವುದು ತಾತ್ತ್ವಿಕವಾಗಿ ಎಷ್ಟು ಸಾಧು ಎನ್ನುವುದೊಂದು ಪ್ರಶ್ನೆ.

ಉತ್ತಮ ಕವನ ಪರಿಚಯಿಸಿದ್ದಕ್ಕೆ ಧನ್ಯವಾದ

Manjunatha Kollegala said...

"ಕುರುಕ್ಷೇತ್ರದ ರಣರಂಗದಲ್ಲಿ ಸತ್ತವರ, ಸಾಯುತ್ತಿರುವವರ ದೇಹಗಳನ್ನು ಭಕ್ಷಿಸಲು ಮರುಳ ಪಡೆ ನಲಿದಾಡುತ್ತಿತ್ತು ಎನ್ನುವ ವರ್ಣನೆ ಕನ್ನಡದ ಯಾವ ಮಹಾಕಾವ್ಯದಲ್ಲಿ ಬಂದಿದೆ ಎನ್ನುವದು ನನಗೆ ನೆನಪಾಗುತ್ತಿಲ್ಲ" - ರನ್ನನ ಗದಾಯುದ್ಧ. ಅಲ್ಲಿ ಶವಮಾಂಸವಿಕ್ರಯ ನಡೆಸುವ ವರ್ತಕಪಿಶಾಚಿಗಳಿಂದ ಹಿಡಿದು ಹಾರುವ ಪಿಶಾಚಿಗಳವರೆಗೂ ತರಹೇವಾರಿ ಪಿಶಾಚಿಗಳ ಪರಿಚಯ ಮಾಡಿಸುತ್ತಾನೆ ಕವಿ. ಅದರಲ್ಲೆರಡು ದುರ್ಯೋಧನನ್ನು ಅಟಕಾಯಿಸಿಕೊಳ್ಳುತ್ತವೆ :)

shridhar said...

ಕಾಕಾ,
ಸುಂದರ ನಿರೂಪಣೆಯೊಂದಿಗೆ ಬೇಂದ್ರೆಯವರ ಅನುವಾದವನ್ನು ಸಾದರ ಪಡಿಸಿದ್ದೀರಾ ...
ತುಂಬಾ ತುಂಬಾ ಚೆನ್ನಾಗಿದೆ ... ವಿವೆಕಾನಂದರ ಮೂಲ ಕವನವೂ ಕೂಡ ಚೆನ್ನಾಗಿದೆ ...
ಎರಡನ್ನು ಪರಿಚಿಯಿಸಿದ್ದಕ್ಕೆ ಧನ್ಯವಾದಗಳು.

sunaath said...

ದಿನಕರ,
ನಮ್ಮ ಕನ್ನಡ ಸಾಹಿತಿಗಳ, ಅವರ ಕೃತಿಗಳ ಬಗೆಗೆ ಬರೆದಷ್ಟೂ ಸಂತೋಷವೇ ಸಿಗುತ್ತದೆ. ಯಾವ ಪುಣ್ಯದಿಂದ ಕನ್ನಡ ನಾಡಿನಲ್ಲಿ ಹುಟ್ಟಿದ್ದೇನೋ ತಿಳಿಯದು!

sunaath said...

ಮಂಜುನಾಥರೆ,
ನಿಮ್ಮ ತಾತ್ವಿಕ ಪ್ರಶ್ನೆ ಸಾಧುವಾಗಿದೆ. ಅನುವಾದಕನು ಮೂಲವನ್ನು ಮೀರಿ ಹೋಗಬಾರದು. ಈ ಅನುವಾದದಲ್ಲಿ ಬೇಂದ್ರೆಯವರು ಮೂರು ವಿಭಾಗಗಳನ್ನು ಮಾಡಿದ್ದು ವಿವೇಕಾನಂದರ ಕವನದ ಅರ್ಥವನ್ನು ಓದುಗರಿಗೆ ಸುಲಭವಾಗಿ ತಿಳಿಸಲು ಮಾತ್ರ. ಉಳಿದಂತೆ ಎಲ್ಲಿಯೂ ಅವರು ವಿವೇಕಾನಂದರ ಮೂಲವನ್ನು ದಾಟದೆ,ಹೆಚ್ಚಿನ ಸೊಬಗನ್ನು ನೀಡಿದ್ದಾರೆ. ವಿವೇಕಾನಂದರು ಬಂಗಾಲಿಯಲ್ಲಿ ಬರೆದಿದ್ದರೆ, ಈ ಕವನವು ಖಂಡಿತವಾಗಿಯೂ ಇನ್ನೂ ಚೆನ್ನಾಗಿರುತ್ತಿತ್ತು. ಇಂಗ್ಲೀಶಿನಲ್ಲಿಯೆ ಅತ್ಯುತ್ತಮವಾಗಿ ಬರೆಯಬಲ್ಲ ಏಕೈಕ ಕವಯಿತ್ರಿ ಎಂದರೆ ಸರೋಜಿನಿ ನಾಯಡು ಮಾತ್ರವೇನೊ?

sunaath said...

ಮಂಜುನಾಥರೆ,
ಮರಳು ಪಡೆಯ ಆಟದ ಅಂಗಳ ರನ್ನನ ಗದಾಯುದ್ಧದಲ್ಲಿ ಎಂದು ತಿಳಿಸಿದ್ದಲ್ಲದೆ, ಅಲ್ಲಿಯ ಕೆಲವು ವಿಶೇಷತೆಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು.

sunaath said...

ಶ್ರೀಧರ,
ವಿವೇಕಾನಂದರ ಪಾರಮಾನಸಿಕ ಭಾವನೆಯು ಎಷ್ಟು ಅದ್ಭುತವಾಗಿದೆಯೋ, ಬೇಂದ್ರೆಯವರ ಅನುವಾದವೂ ಅಷ್ಟೇ ಅದ್ಭುತವಾಗಿದೆ. ಹೀಗಾಗಿ ಓದುಗನ ಸಂತೋಷವು ಇಮ್ಮಡಿಗೊಳ್ಳುತ್ತದೆ!

umesh desai said...

ಕಾಕಾ ಬೇಂದ್ರೆ ಅವರ ಕವಿತೆ ಅದಕ್ಕಿರುವ ವಿಶೇಷ ಒಳಾರ್ಥಗಳು ಅದು ನಿಮ್ಮಿಂದ ಕೇಳಿದಾಗ ಸಿಗೋ ಖುಷಿ
ಏನ್ ಹೇಳೂದು ಸುಬಾಃನಲ್ಲಾ

sunaath said...

ದೇಸಾಯರ,
ಅಲೇಕುಮ್ ಸಲಾಮ್!

Ittigecement said...

ಸುನಾಥ ಸರ್...

ಬೇಂದ್ರೆಯವರ ಕವನ ತುಂಬ ಸಹಜವಾಗಿ ಮೂಲ ಅವರೇ ರಚಿಸಿದ್ದಾರೇನೋ ಅನ್ನುವಂತಿದೆ..

ಅದರ ಅರ್ಥ,ವಿವರಣೆಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ..

ನಿಮ್ಮ ಬ್ಲಾಗ್ ಒಂದು ಜ್ಞಾನ ಭಂಡಾರ...

ನಮಗೆಲ್ಲ ಪ್ರತಿಸಾರಿಯೂ ಹೊಸ ಹೊಸ ವಿಷಯ ತಿಳಿಸುತ್ತಿರುವ ನಿಮಗೆ ನಮ್ಮೆಲ್ಲರ ಧನ್ಯವಾದಗಳು..

sunaath said...

ಪ್ರಕಾಶ,
ಬೇಂದ್ರೆಯವರು ‘ರೌದ್ರಿ’ ಕವನದ ಆಡಿಟಿಪ್ಪಣಿಯಲ್ಲಿ ಇದು ವಿವೇಕಾನಂದರ ಕವನದ ಅನುವಾದವೆಂದು ಕೊಟ್ಟಿದ್ದರಿಂದಲೇ, ನಾನು ಮೂಲವನ್ನು ಹುಡುಕಿದೆ. ಇಲ್ಲವಾದರೆ, ಇದು ಬೇಂದ್ರೆಯವರ ಕವನವೆಂದೇ ತಿಳಿಯುತ್ತಿದ್ದೆ!

ಜಲನಯನ said...

ಸುನಾಥಣ್ಣ,,,ಕಾಳಿಕಾ, ಚಂಡಿಕಾ, ಚಾಮುಂಡಿ, ಎಲ್ಲವನ್ನೂ ಶಕ್ತಿಯರೂಪಗಳನ್ನಾಗಿ ನೋಡಲಾಗುತ್ತೆ...ನನಗೆ ಅರ್ಥವಾಗದ ಅಂಶವೆಂದರೆ ಕ್ಷುದ್ರದೇವತೆಗಳಲ್ಲಿ ಚಂಡಿಯನ್ನೇಕೆ ಸಾಂಕೇತಿಕವಾಗಿ ಬಳಸಲಾಗುತ್ತೆ...ಕೆಲವು ಗೊಂದಲಗಳು ಪಾರ್ವತಿಯ ಎರಡು ಪರಸ್ಪರ ವಿರುದ್ದಾರ್ಥಕ ಅವತರಣಿಕೆಗಳು...ಮಾಟ..ಕ್ಷುದ್ರದೇವತೆಗಳ ಆರಾಧನೆ ಬಂಗಾಳದಲ್ಲಿಯೂ ಹೆಚ್ಚು ಎನ್ನುವುದು ನಿಮಗೆ ಗೊತ್ತಿರುವುದೇ..ಇದು ನನ್ನ ತಪ್ಪು ಗ್ರಹಿಕೆಯೇ ಅಥವಾ ದೈವದ ಎರಡೂ ರೂಪಗಳ ಸಾರ್ಥಕ್ಯಕ್ಕೆ ನಿದರ್ಶನವೋ..?

sunaath said...

ಜಲನಯನ,
The matter is very complex. ಭಾರತದಲ್ಲಿ
ಅನೇಕ tribes ಇದ್ದು, ಅವು ವಿಭಿನ್ನ ದೇವತಾ ಆರಾಧನೆ ಮಾಡುತ್ತಿದ್ದವು. ಕೆಲವು tribeಗಳು matriarcheal ಆಗಿದ್ದರೆ, ಕೆಲವು patriarcheal ಆಗಿದ್ದವು. ಸದ್ಯಕ್ಕೆ ಭಾರತದಲ್ಲಿ ಕಂಡು ಬರುವ general form of gods etc. ಆಗಲು ಸಾವಿರಾರು ವರ್ಷಗಳ fusion and assimilation ಬೇಕಾದವು. ಯಾವ ರೀತಿಯಲ್ಲಿ ಚಂಡಿ ಕ್ಷುದ್ರದೇವತೆಯಾದಳೋ, ಅದೇ ರೀತಿಯಲ್ಲಿ ಮಲ್ಲಾರಿ ಮೊದಲಾದ ಸಣ್ಣ ದೇವತೆಗಳ ಉನ್ನತೀಕರಣವೂ ಆಗಿದೆ. ತಿರುಪತಿಯ ವೆಂಕಟೇಶನು ಕೇವಲ ಅತಿ ಸಣ್ಣ ಪ್ರಾದೇಶಿಕ ದೇವತೆಯಾಗಿದ್ದವನು ಇಂದು all India ಅಷ್ಟೇ ಅಲ್ಲ, international ದೇವತೆ ಸಹ ಆಗಿದ್ದಾನೆ!

ಜಲನಯನ said...

ಸುನಾಥಣ್ಣ...ವಿಕಾಸೀಕರಣ..ಜೈವಿಕವಾದ ಸಮಾನಾಂತರದಲ್ಲೇ ಅತಿ ಪ್ರಾಚೀನ ವೆನಿಸಿರುವ ಹಿಂದೂ ಹಿನ್ನೆಲೆಯೂ ಬಹು ಕ್ಲ್ಶಿಷ್ಟತೆಗಳ ಅಥವಾ ಕಾಂಪ್ಲೆಕ್ಸ್ ಗಳ ಗೂಡಾಗಿರುವುದು ಸ್ವಾಭಾವಿಕ...ವಿಕಸನಗೊಂಡ ಎಲ್ಲದರಲ್ಲೂ ಕಾಂಪ್ಲೆಕ್ಸಿಟಿ ಹೆಚ್ಚು...ನಿಮ್ಮ ಕಾಲಾನುಗುಣ ಬದಲಾವಣೆಯ ತರ್ಕ..ಸರಿಯೆನಿಸುತ್ತೆ...

Unknown said...

`For terror is Thy name,
Death is in thy breath,'
ಎನ್ನುವ ಮೂಲಕವನದ ಸಾಲುಗಳಿಗಿಂತ, ‘ರೌದ್ರಿ ನಿನ್ನ ಹೆಸರು, ಮೃತ್ಯು ನಿನ್ನ ಉಸಿರು’ ಎನ್ನುವ ಅನುವಾದಿತ ಸಾಲುಗಳಲ್ಲೇ ಹೆಚ್ಚಿನ ಆವೇಶ ಕಂಡು ಬರುತ್ತದೆ.
ಈ ಅನುವಾದವು ಬೇಂದ್ರೆಯವರ ಪ್ರತಿಭೆಯನ್ನು ಬಿಂಬಿಸುತ್ತದೆ.
ಕವನಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.

sunaath said...

ವನಮಾಲಾ,
ಧನ್ಯವಾದಗಳು.

Anonymous said...

ಪ್ರೀತಿಯ ಸುನಾಥ್ ಸರ್,

ವಿವೇಕಾನಂದರ ಈ ಕವನದ ಬೇಂದ್ರೆಯವರ ಅನುವಾದ ಅತ್ಯಂತ ಸುಂದರವಾಗಿದೆ. ಆದರೆ, ವಿವೇಕಾನಂದರ ಈ ಕವನದ ಆತ್ಮ ಎಂದು ಯಾವ ಭಾಗವನ್ನು ಕರೆಯಬಹುದೋ ಅದೇ ಬೇಂದ್ರೆಯವರ ಅನುವಾದದಲ್ಲಿ ಮಿಸ್ ಆಗಿಬಿಟ್ಟಿದೆ. ನನಗಂತೂ ತುಂಬ ನಿರಾಸೆಯಾಗಿದೆ. ನಾನು ಆ ಭಾಗವನ್ನು ಬೇಂದ್ರೆಯವರು ಹೇಗೆ ಅನುವಾದಿಸಿರಬಹುದು ಎಂಬ ಕುತೂಹಲದಿಂದ ಓದುತ್ತ ಹೋದರೆ ಅದು ಇಲ್ಲವೇ ಇಲ್ಲವಾಗಿದೆ.

Who dares misery love,
And hug the form of Death,
Dance in destruction's dance
To him the Mother comes.

ಈ ಭಾಗ ಇಡೀ ಕವನದ ಆತ್ಮಭಾಗ ಅಂತ ನನಗೆ ಅನ್ನಿಸುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪವು ಎರಡನೆಯ ಭಾಗದಲ್ಲಿ ಅತ್ಯಂತ ರೌದ್ರವಾದ ಚಲನೆಯನ್ನು ಪಡೆದುಕೊಳ್ಳುತ್ತದೆ, ಮತ್ತು ಮೂರನೆಯ ಭಾಗದಲ್ಲಿ ಮೃತ್ಯುವೇ ಆದ ಆ ದೇವಿಯನ್ನು ವಿವೇಕಾನಂದರು ಬಣ್ಣಿಸುತ್ತಾರೆ.

ಈ ಮೂರು ಭಾಗಗಳಲ್ಲಿಯೂ ಹೊರಗೇ ಘಟಿಸುವ ಈ ಘಟನೆ ನಾಲ್ಕನೆಯ ಭಾಗದಲ್ಲಿ ಆಂತರ್ಯಕ್ಕೆ ಸಾಗುತ್ತದೆ. ಆ ಸಾಲುಗಳನ್ನು ಸ್ಥೂಲವಾಗಿ ಅನುವಾದಿಸುವುದಾದರೆ: "ಯಾರು ಸಾವಿನ ದೇವತೆಯ ಪ್ರೇಮವನ್ನು ಒಪ್ಪಿಕೊಳ್ಳುತ್ತಾನೆ, ಯಾರು ಲಯಕಾರಕಳಾದ ಕಾಳಿಯನ್ನು ಅಪ್ಪಿಕೊಳ್ಳುತ್ತಾನೆ ಮತ್ತು ಆ ವಿಧ್ವಂಸಕ ನರ್ತನದ ಜೊತೆಗೇ ನರ್ತಿಸಲು ಸಿದ್ಧನಾಗುತ್ತಾನೆ ಅಂತವನಲ್ಲಿಗೆ ಆ ದೇವಿ ಬರುತ್ತಾಳೆ, ದೈವತ್ವ ಅವನದಾಗುತ್ತದೆ"

ಬ್ರಹ್ಮಾಂಡದಲ್ಲಿ ಹುಟ್ಟು-ಸಾವು ಒಟ್ಟಿಗೇ ಘಟಿಸುತ್ತಿರುತ್ತದೆ, ಸೃಷ್ಠಿಯಾಗುತ್ತಿದ್ದಂತೆ ಲಯವೂ ಒಟ್ಟೊಟ್ಟಿಗೇ ಆಗುತ್ತಿರುತ್ತದೆ. (ಪ್ರತೀ ಒಳ-ಉಸಿರೂ ಹುಟ್ಟು, ಪ್ರತೀ ಹೊರ-ಉಸಿರೂ ಸಾವು.) ಆದರೆ ಎಷ್ಟು ಜನರಿಗೆ ಆ ಮರಣವು ಮಹಾನವಮಿ ಎಂದು ಸ್ವೀಕರಿಸುವ ಚೈತನ್ಯವಿದ್ದೀತು? ಅಂತಹ ಚೈತನ್ಯವಿದ್ದವನಿಗೆ ಮಾತ್ರ ದೇವಿ ದೊರೆಯುತ್ತಾಳೆ ಎಂಬುದು ಕೊನೆಯ ಪ್ಯಾರಾದ ಅರ್ಥ ಎಂದು ನನಗನ್ನಿಸುತ್ತದೆ.

ತಾಂಡವವಾಡುವ ಕಾಳಿಯ ವಿನಾಶೀ ವಿಜ್ರಂಭಣೆಯನ್ನು ಒಪ್ಪಿಕೊಳ್ಳುವವ, ಆ ವಿಜ್ರಂಭಣೆಯನ್ನು ತನ್ನಲ್ಲಿ ಸ್ವೀಕರಿಸುವವ ದೇವೀ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಎಂಬುದೇ ಈ ಕವಿತೆಯ ಮುಖ್ಯ ಅರ್ಥ. ಆದರೆ ಬೇಂದ್ರೆಯವರು ಇದನ್ನು ಬಿಟ್ಟಿದ್ದಾರೆಯೇ? ನಿಮ್ಮ ವಿವರಣೆಯಲ್ಲಿಯೂ ಈ ಭಾಗ ನನಗೆ ಕಾಣಲಿಲ್ಲ.

ಈ ನನ್ನ ಅನಿಸಿಕೆ ಸರಿಯೇ ತಿಳಿಸಿ.

sunaath said...

ರಾಘವೇಂದ್ರರೆ,
ನೀವು ತೋರಿಸಿದ ಅನುವಾದ ಲೋಪವು ಅತ್ಯಂತ ಸಮಂಜಸವಾಗಿದೆ.
ಮತ್ತು ಅದರ ಅನುವಾದವನ್ನು ನೀವು ಅತ್ಯಂತ ಸಮರ್ಪಕವಾಗಿ ಗದ್ಯರೂಪದಲ್ಲಿ ನೀಡಿದ್ದೀರಿ. ಬೇಂದ್ರೆ ಯಾಕೆ ಈ ಭಾಗವನ್ನು ಬಿಟ್ಟರು ಎನ್ನುವದನ್ನು ನಾನು ಊಹಿಸಿಕೊಳ್ಳಲಾರೆ.ಒಟ್ಟಿನಲ್ಲಿ ಇದು ಬೇಂದ್ರೆಯವರಿಂದ ಘಟಿಸಿದ ಲೋಪ ಎಂದು ಹೇಳಲೇಬೇಕು.

ದೇವಿಯ ವಿನಾಶಕಾರಿ ರೂಪದಿಂದ ತನ್ನ ಮನಸ್ಸಿಗೆ ಆಘಾತವಾಗುತ್ತಿದ್ದರೂ ಸಹ, ತಾನು ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಲೇಬೇಕೆನ್ನುವದು ವಿವೇಕಾನಂದರ ಆಶಯ. ಆ ಆಶಯವನ್ನು ಬಿಟ್ಟು, ಕೇವಲ ದೇವಿಯ ರೂಪವನ್ನು ಚಿತ್ರಿಸುವದಷ್ಟೇ ಬೇಂದ್ರೆಯವರ ವಿಚಾರವಿದ್ದಿದ್ದೀತು. ಆದರೆ, ಅನುವಾದಕನು ಇಂತಹ ಸ್ವಾತಂತ್ರ್ಯವನ್ನು ವಹಿಸಬಾರದು.

ನಿಮ್ಮ ಆಕ್ಷೇಪಣೆಯು ಮೌಲಿಕವಾಗಿರುವದರಿಂದ, ಈ ಆಕ್ಷೇಪಣೆಯನ್ನು ಹಾಗು ಅದಕ್ಕೆ ನನ್ನ ಸಮ್ಮತಿಯನ್ನು ನಾನು ಮೂಲಲೇಖನದ ಟಿಪ್ಪಣಿಯಲ್ಲಿ ಸೇರಿಸುತ್ತೇನೆ (ನಿಮ್ಮ ಅನುಮತಿಯ ಪೂರ್ವಗ್ರಹಿಕೆಯೊಂದಿಗೆ!)

ಸೀತಾರಾಮ. ಕೆ. / SITARAM.K said...

ತಡವಾಗಿ ಓದಿದ್ದಕ್ಕೆ ನನಗೆ ರಾಘವೇಂದ್ರರ ಟಿಪ್ಪಣೆಯೊಡನೆ ಬೇಂದ್ರೆಯವರ ಅನುವಾದ ಕವನ, ವಿವೇಕಾನಂದರ ಮೂಲಕವನ ಒಟ್ಟಿನಲ್ಲಿ ಸೇರಿಸಿ ಪೂರ್ಣರಸಸ್ವಾದನಕ್ಕೆ ಕಾರಣವಾಗಿರುವದರಿಂದ ಸಂತಸವಾಗಿದೆ.
ಇದೊಂದು ಅದ್ಭುತ ಕವನ. ಆಧ್ಯಾತ್ಮ ತತ್ವದಲ್ಲಿ ಮೇರುವೆನಿಸುವಂತಹುದು.
ನಾಲ್ಕನೆಯ ಭಾಗ ನಿಜಕ್ಕೂ ಕವಿತೆಯ ಆತ್ಮ.
ಎರಡರ ಅದ್ಭುತ ತುಲನೆ ಮಾಡಿದ ನಿಮಗೂ, ಬಿಟ್ಟು ಹೋದ ಮುಖ್ಯ ಭಾಗವೊಂದರ ಗಧ್ಯರೂಪ ಕೊಟ್ಟ ರಾಘವೇ೦ದ್ರರಿಗೂ ನಮನಗಳು.

Ashok.V.Shetty, Kodlady said...
This comment has been removed by the author.
Ashok.V.Shetty, Kodlady said...

ಸುನಾಥ್ ಸರ್,

ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ...ವಿವೇಕಾನಂದರ ಮೂಲ ಕವನವನ್ನು ಬೇಂದ್ರೆಯವರು ತುಂಬಾ ಚೆನ್ನಾಗಿ ಅನುವಾದಿಸಿದ್ದಾರೆ. ಆದರೆ ನನಗೆ ಇಷ್ಟವಾಗುವುದು ಈ ಅನುವಾದವನ್ನು ನೀವು ನಿರೂಪಿಸಿದ ರೀತಿ. ಅನುವಾದದ ಅರ್ಥ ವಿವರಣೆಯನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ಹೃದಯ ಪೂರ್ವಕ ಧನ್ಯವಾದಗಳು...

Abhishek Umesh said...

ನಾಳೆ ಬೆಳಿಗ್ಗೆ ಐತಿ ಮಹಾಮರಣ..
ಪೂರ್ತಿ ಕವನ ಇದ್ದರೆ ಹಾಕಿ...

sunaath said...

ಪ್ರಿಯ ಅಭಿಷೇಕರೆ,
ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ.