Tuesday, December 28, 2010

‘ಹೂತsದ ಹುಣಸಿ’...............ದ.ರಾ.ಬೇಂದ್ರೆ

ಆಧುನಿಕ ನಾಗರಿಕತೆಯು  ಬಕಾಸುರನೂ ಹೌದು , ಭಸ್ಮಾಸುರನೂ ಹೌದು. ನಿಸರ್ಗದ ಸಂಪತ್ತನ್ನೆಲ್ಲ ಬಕಾಸುರನಂತೆ ನುಂಗುತ್ತಿರುವ ಈ ನಾಗರಿಕತೆಯು ಭಸ್ಮಾಸುರನಂತೆ ಸಾಂಸ್ಕೃತಿಕ ವಿನಾಶವನ್ನು ಮಾಡುತ್ತ ನಡೆದಿದೆ. ಇಂತಹ (ಅ)ನಾಗರಿಕ ವಾತಾವರಣದಲ್ಲಿ ಬದುಕುವ ಜೀವಿಯು ಪ್ರತಿ ದಿನವೂ ಉದ್ವಿಗ್ನತೆಯಲ್ಲಿ ಹಪಹಪಿಸುವದನ್ನು ನಾವು ಕಾಣುತ್ತಲೇ ಇದ್ದೇವೆ. ಈಗಿನ ನಗರಜೀವನವು ತನ್ನ ನಿವಾಸಿಗಳನ್ನು ಅನೇಕ ಮನೋವಿಕಾರಗಳಿಗೆ ಈಡು ಮಾಡಿದೆ ಎಂದು ಹೇಳಿದರ ತಪ್ಪಾಗಲಿಕ್ಕಿಲ್ಲ.

ಔದ್ಯೋಗೀಕರಣದ ಹಾಗು ನಗರೀಕರಣದ ಮೊದಲಿನ ಪರಿಸ್ಥಿತಿ ಹೀಗಿರಲಿಲ್ಲ. ಗ್ರಾಮೀಣ ಜೀವನವು ಪ್ರಶಾಂತವಾಗಿರುತ್ತಿತ್ತು. ಹಳ್ಳಿಗರು ಸುತ್ತಲಿನ ಪ್ರಕೃತಿಯೊಡನೆ ತಾದಾತ್ಮ್ಯತೆಯನ್ನು ಅನುಭವಿಸುತ್ತಿದ್ದರು. ವರಕವಿ ಬೇಂದ್ರೆಯವರು  ತಮ್ಮ ‘ಹೂತsದ ಹುಣಸಿ’ ಕವನದಲ್ಲಿ ಇಂತಹ ನೆಮ್ಮದಿಯ ಬದುಕಿನ ಒಂದು ಮುಖವನ್ನು ತೋರಿಸಿದ್ದಾರೆ.

‘ಹೂತsದ ಹುಣಸಿ’ ಕವನವು  ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ. ‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು.  ಆ ಸಮಯದಲ್ಲಿ ಔದ್ಯೋಗಿಕ ನಾಗರಿಕತೆಯು ಭಾರತದಲ್ಲಿ ಇನ್ನೂ ಕಾಲಿಟ್ಟಿರಲಿಲ್ಲ. ವಿಶೇಷತಃ ಹಳ್ಳಿಯ ಜನರು ನಿರುಮ್ಮಳವಾದ ಬದುಕನ್ನು ನಡೆಯಿಸುತ್ತಿದ್ದರು. ಹಳ್ಳಿಯ ಹಾಡುಹಸೆಗಳು, ಪುರಾಣ ಪುಣ್ಯಕತೆಗಳು ಹಾಗು ಬಯಲಾಟದಂತಹ ಸಂಗತಿಗಳು ಅವರ ಮನರಂಜನೆಗೆ ಹಾಗು ಕಲಾಭಿವೃದ್ಧಿಗೆ ಪೂರಕವಾಗಿದ್ದವು. ಇಂತಹ ವಾತಾವರಣದಲ್ಲಿಬದುಕುತ್ತಿರುವ ಹಳ್ಳಿಗರ ದೈನಂದಿನ ಜೀವನವು ಪ್ರಕೃತಿಯೊಡನೆ ಸಮರಸವಾಗಿ ಸ್ಪಂದಿಸುತ್ತಿತ್ತು.

‘ಹೂತsದ ಹುಣಸಿ’ ಕವನವು ಇಂತಹ ಹಳ್ಳಿಯ ವ್ಯಕ್ತಿಯೊಬ್ಬನ ಚಿತ್ರವನ್ನು ಕೊಡುತ್ತದೆ. ಕಡುಬೇಸಿಗೆಯಲ್ಲಿ ತನ್ನ ಹೊಲದ ಕಡೆಗೆ ತೆರಳುತ್ತಿದ್ದ ಹಳ್ಳಿಗನೊಬ್ಬನು ಹೂವು ಬಿಟ್ಟಂತಹ ಹುಣಸಿಯ ಮರವನ್ನು ನೋಡಿದಾಗ, ಅದರಲ್ಲಿ ಚೆಲುವಿಕೆಯನ್ನು ಗುರುತಿಸುವ, ಆ ಚೆಲುವಿನಲ್ಲೇ ಪರವಶನಾಗುವ, ಹಾಗು ಹಗಲುಗನಸಿನಲ್ಲಿ ತೇಲಿ ಹೋಗುವ ಚಿತ್ರವನ್ನು ಈ ಕವನದಲ್ಲಿ ನೀಡಲಾಗಿದೆ.
-------------------------------------------------------
ಕವನದ ಪೂರ್ಣಪಾಠವು ಹೀಗಿದೆ:

ಹೂತsದ ಹುಣಸಿಯಾ ಚಿಗುರು
ಮದರಂಗಿ ಬಣ್ಣದುಗುರು
ರುಚಿಗೆ ಹುಳಿಯೊಗರು
ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ || ಪಲ್ಲ ||

ಉಗುರ್ಗೆಂಪು ಹಸಿರು ಬಿಳಿನಿಂಬಿ
ಹುಣಸಿಯಾ ರೆಂಬಿ
ಚಿಗತೀತೇನೊ ಎಂಬಿ
ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ
ಮಧ್ಯಾಹ್ನದಾ ಪಾಹರೆ
ಯಾರಿಗಿಲ್ಲ ಹ್ವಾರೆ
ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು
ಕಾಗಿ ಚುಂಚಿನ ಹಳ್ಳು
ಬಿದ್ದು ಆಂತ್ಯು “ಹೊಳ್ಳು”
ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಅಡ್ಡಾಗತೇನಿ ನೆಳ್ಳಾಗ ಹೀಂಗ
ಹೂವು ಚಿಗುರು ಹ್ಯಾಂಗ
ಅವs ಹಾಸಿಧಾಂಗ
ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಬಿಸಿಲ್ಗುದರಿ ಕುಣಿಯಲಿ ದೂರ
ಯಾರಿಗೆ ಬೇಕು ನೀರ
ಹೀಂಗ ನನ್ನಿದಿರ
ಕಣ್ಣಳತಿಯೊಳಗ ನೀ ಬಾರ ||ಹೂತsದ

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಕಣಕಣ್ಣ ಚಕಮಕಿ ಇತ್ತ
ಕುಡಿಗಣ್ಣಿನತ್ತ
ತಾಕಿ ಹಾರಿತ್ತ
ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಅಗೊ ಗಾಳಿ ಧೂಳಿಯಾ ಬಂಬಾ
ನಿಂತ್ಹಾಂಗ ಅದ ಖಂಬಾ
ಅಲ್ಲಿ ರೌದಿ ತುಂಬಾ
ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ
ಒಂದಕ್ಕೊಂದ ನೋಡಿ
ಬಿಸಿಲ ತೆರೆ ದೂಡಿ
ಹಾರ್ತsದ ನೀಲಿಮುಗಿಲ್ಕೂಡಿ  ||ಹೂತsದ

೧೦
ಕಂಡಂಗಾತು ನೀರಿನ ಕೊಳ
ನೀಲಿ ಮುಗಿಲ ಜಳಾ
ಎಂಥ ಝಳ ಝಳಾ
ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

೧೧
ಕಾಲ ಹೋಗತಿತ್ತ ಹಿಂದ ಸರಿದು
ಮನಸು ಆತ ಬರಿದು
ಮಧ್ಯಾನ ಬ್ಯಾಸರ ಮುರಿದು
ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

೧೨
ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ ||ಹೂತsದ
------------------------------------------------------------

ಹುಣಸಿ ಮರವು ಚಿಗುರುವ ಕಾಲದಲ್ಲಿ ಅಂದರೆ ಬಹುಶಃ ವೈಶಾಖ ಮಾಸದಲ್ಲಿ ಈ ಹಳ್ಳಿಗನು ತನ್ನ ಹೊಲಕ್ಕೆ ಹೊರಟಿದ್ದಾನೆ. ಈ ಕಾಲದಲ್ಲಿ ಹೊಲದಲ್ಲಿ ಕೃಷಿ ಕೆಲಸವೇನೂ ಇರುವದಿಲ್ಲ. ಬಹಳವಾದರೆ ಸಣ್ಣ ಪುಟ್ಟ ದುರಸ್ತಿ ಕೆಲಸಗಳು, ನಟ್ಟು ಕಡಿಯುವದು, ಕಳೆ ಕೀಳುವದು ನಡೆಯುತ್ತಿರುತ್ತವೆ. ನಮ್ಮ ನಾಯಕನು ಹೀಗೇ ತನ್ನ ಹೊಲದ ಕಡೆಗೆ ನಡೆದಾಗ ಹೊಲದ ಒಂದು ಭಾಗದಲ್ಲಿ ಇರಬಹುದಾದ ಹುಣಸಿಯ ಮರವು ಇವನ ಕಣ್ಣಿಗೆ ಬೀಳುತ್ತದೆ. ಖಾಲಿಯಾದ ಹೊಲದಂತೆಯೇ ಖಾಲಿಯಾದ ಇವನ ಮನಸ್ಸು ಈಗಷ್ಟೇ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡು ಬೆರಗಾಗುತ್ತದೆ. ಆಗ ಇವನ ಮನಸ್ಸಿನಲ್ಲಿ ಉಕ್ಕುವ ಭಾವ ಹೀಗಿದೆ:

ಹೂತsದ ಹುಣಸಿಯಾ ಚಿಗುರು
ಮದರಂಗಿ ಬಣ್ಣದುಗುರು
ರುಚಿಗೆ ಹುಳಿಯೊಗರು
ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ

ಭಾರತದ ಆದಿಕವಿ ವಾಲ್ಮೀಕಿಗೆ ಕಾವ್ಯಸ್ಫುರಣವಾಗಲು ಕ್ರೌಂಚವಧೆಯು ಕಾರಣವಾಯಿತು. ಬೇಂದ್ರೆಯವರ ಕವನದ ನಾಯಕನಾದರೊ ಒಬ್ಬ ಅತಿ ಸಾಮಾನ್ಯ ಗ್ರಾಮೀಣ ವ್ಯಕ್ತಿ. ಈತನು ನಗರಜೀವಿ ಅಲ್ಲದ್ದರಿಂದಲೇ ಇವನ ಪ್ರಕೃತಿ-ಸಂವೇದನೆ ಇನ್ನೂ ಸುಸ್ಥಿತಿಯಲ್ಲಿದೆ ! ಆದುದರಿಂದ ಈಗತಾನೆ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡಾಗ ಇವನಿಗೆ ಸುಖವೆನಿಸುತ್ತದೆ. ಈ ಸಂಗತಿಯೇ ಇವನ ಭಾವಸ್ಫುರಣಕ್ಕೆ ಕಾರಣವಾಗುತ್ತದೆ. 

ಹುಣಸಿಯ ಚಿಗುರು ನಮ್ಮ ನಾಯಕನಿಗೆ ಮದರಂಗಿ ಬಣ್ಣ ಹಚ್ಚಿದ ಉಗುರಿನಂತೆ ಕಾಣುವದಂತೆ. ಇದರ ಕಾರಣವೇನು?  ಮನುಷ್ಯರ ಅಗ್ರಭಾಗದಲ್ಲಿ ಉಗುರುಗಳು ಇದ್ದಂತೆ, ಮರಗಳ ಅಗ್ರಭಾಗದಲ್ಲಿ ಚಿಗುರುಗಳು ಇರುತ್ತವೆ. ಆದುದರಿಂದ ಹಸಿರು ಎಲೆಗಳಿಂದ ತುಂಬಿದ ಹುಣಸಿಯ ಮರದಲ್ಲಿ ಮೂಡುತ್ತಿರುವಂತಹ  ಕೆಂಪು ಚಿಗುರುಗಳು ಇವನ ಕಣ್ಣಿಗೆ ಮೊದಲು ಬೀಳುತ್ತವೆ. ಇವುಗಳನ್ನು ಕಂಡಾಗಲೇ ಅವನಿಗೆ ಹುಣಸಿಯ ಮರವು ಹೂವು ಬಿಡುತ್ತಿರುವ ಅರಿವು ಆಗುತ್ತದೆ.

ಹಳ್ಳಿಯ ವ್ಯಕ್ತಿಯಾದ ಈತನಿಗೆ ಈ ಕೆಂಪು ಬಣ್ಣವು ಹಳ್ಳಿಯ ಹೆಣ್ಣುಗಳು ತಮ್ಮ ಉಗುರುಗಳಿಗೆ ಹಚ್ಚಿಕೊಂಡಂತಹ ಮದರಂಗಿಯ ಕೆಂಪು ಬಣ್ಣವನ್ನು ಸ್ಮರಣೆಯಲ್ಲಿ ತರುತ್ತವೆ. ಅಂದರೆ ಈತ ಬದುಕನ್ನು ತೆರೆದ ಕಣ್ಣುಗಳಿಂದ ನೋಡಬಲ್ಲ ಹಾಗು ಅನುಭವಿಸಬಲ್ಲ ರಸಿಕ ಮನುಷ್ಯ ಎನ್ನುವದು ಸ್ಪಷ್ಟವಾಗುತ್ತದೆ.
(ಬೇಂದ್ರೆಯವರು ಉಪಮೆಗಳನ್ನು ಬಳಸುವಾಗಲೂ ಸಹ, ವಾಸ್ತವತೆಯನ್ನು ಲಕ್ಷದಲ್ಲಿಟ್ಟಿರುತ್ತಿದ್ದರು ಹಾಗು ಆ ಉಪಮೆಯ ಅನೇಕ ಪ್ರಯೋಜನಗಳನ್ನು ಪಡೆಯುವ ಪ್ರತಿಭೆ ಉಳ್ಳವರು ಎನ್ನುವದು ಇದರಿಂದ ವೇದ್ಯವಾಗುತ್ತದೆ!)

ಇಂತಹ ರಸಿಕ ಮನುಷ್ಯ ಆ ಚಿಗುರನ್ನು ನೋಡಿ ಸುಮ್ಮನೆ ಹೋಗುತ್ತಾನೆಯೆ? ಮುಂದಿನ ಕ್ರಮವೆಂದರೆ, ಆ ಚಿಗುರು ಇವನ ಬಾಯಿಗೆ ಇಳಿಯುತ್ತದೆ ! ಆ ಚಿಗುರಿನ ರುಚಿಯನ್ನು ಈತ ಹುಳಿ ಹಾಗು ಒಗರು ಎಂದು ಅನುಭವಿಸುತ್ತಾನೆ. ಆದರೆ ಇಂತಹ ಕಡುರುಚಿಯಿಂದ ಅವನ ಸುಖ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವದಿಲ್ಲ. ಯಾಕೆಂದರೆ ಪ್ರಕೃತಿಧರ್ಮವನ್ನು ಅನುಸರಿಸುತ್ತಿರುವ ಹುಣಸಿಯ ಮರದ ಚಿಗುರು ಇರಬೇಕಾದದ್ದೇ ಹೀಗೆ! ಅದು ಹೀಗಿದ್ದರೇನೆ ಆತನಿಗೆ ಸಮಾಧಾನ ಸಿಗುವದು. ಆದುದರಿಂದಲೇ ಆತ ಹೇಳುವದು: ‘ನೋಡ್ಯೆ ಜೀವಕ್ಕನಿಸಿತs ಹಗುರು’. 
ಋತುಧರ್ಮವು ಸರಿಯಾಗಿ ಕ್ರಮಿಸುತ್ತಿದ್ದರೆ ಮಾತ್ರ ಹಳ್ಳಿಗನ ಮನಸ್ಸಿಗೆ ನೆಮ್ಮದಿಯಿರುತ್ತದೆ.

ಹುಣಸಿಯ ಚಿಗುರನ್ನು ನೋಡಿದ ಬಳಿಕ ಹಾಗು ಮೆಲ್ಲಿದ ಬಳಿಕ ಈತನ ನೋಟವು ಸಹಜವಾಗಿ, ಮುಂದಿನ ಮಜಲಿಗೆ ಅಂದರೆ ಹುಣಸಿಮರದ ರೆಂಬೆಗಳ ಕಡೆಗೆ ಹರಿಯುತ್ತದೆ. ಆ ರೆಂಬೆಗಳು ಈತನಿಗೆ ಕಾಣುವ ಪರಿ ಹೀಗಿದೆ:

ಉಗುರ್ಗೆಂಪು ಹಸಿರು ಬಿಳಿನಿಂಬಿ
ಹುಣಸಿಯಾ ರೆಂಬಿ
ಚಿಗತೀತೇನೊ ಎಂಬಿ
ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಹುಣಸಿ ಮರದ ರೆಂಬೆಯ ಬಣ್ಣಗಳನ್ನು ಈತ ಎಷ್ಟು ಸೂಕ್ಷ್ಮ ವಿವರಗಳೊಡನೆ ಲಕ್ಷಿಸುತ್ತಾನೆ ಎನ್ನುವದನ್ನು ನೋಡಿರಿ. ಈ ರೆಂಬೆಗೆ ಉಗುರಿನ ಕೆಂಪಿದೆ ಹಾಗು ಇನ್ನೂ ಹಣ್ಣಾಗದಿರುವ ಬಿಳಿ-ಹಸಿರು ನಿಂಬಿಯ ಬಣ್ಣವಿದೆ. ಕಾಮನ ಬಿಲ್ಲಿನ ತುದಿಯು ಚಿಗಿತಂತೆ ಇವನಿಗೆ ಅದು ಭಾಸವಾಗುತ್ತದೆ. (ಈ ಬಿಲ್ಲು ಬಾನಿನಲ್ಲಿ ಮೂಡುವ ಕಾಮನ ಬಿಲ್ಲೂ ಹೌದು ; ಕಾಮದೇವನ ಬಿಲ್ಲೂ ಹೌದು !) ಕೆಂಪು, ಹಳದಿ ಹಾಗು ನೀಲಿ ಬಣ್ಣಗಳಿಂದ ಕೂಡಿದ ಕಾಮನ ಬಿಲ್ಲಿನ ವರ್ಣವ್ಯವಸ್ಥೆಯು ಈತನಿಗೆ ಹುಣಸಿಮರದ ರೆಂಬೆಯಲ್ಲಿ ಕಂಡರೆ ಆಶ್ಚರ್ಯವಿಲ್ಲ.
ಇಲ್ಲಿ ಅಡಗಿರುವ ಮತ್ತೊಂದು ಸೂಚನೆ ಎಂದರೆ, ಕಾಮದೇವನ ಬಿಲ್ಲು ಸೃಷ್ಟಿ ಸಂಕೇತವಾಗಿರುವದು. ಚಿಗುರಿನ ನಂತರ ಬರುವದು ಹೂವು, ಹೂವಿನ ನಂತರ ಬರುವದು ಹಣ್ಣು. ಇದು ಕಾಮದೇವನ ಸೃಷ್ಟಿಕ್ರಮ.

ಹುಣಸಿಯ ಮರವು ಹೂವು ಬಿಟ್ಟು ಚೆಲುವಾಗಿದ್ದನ್ನು ಗ್ರಹಿಸಿದ ಇವನ ನೇತ್ರೇಂದ್ರಿಯಕ್ಕೆ ಖುಶಿಯಾಯಿತು. ಚಿಗುರನ್ನು ತಿಂದ ಇವನ ಜಿಹ್ವೇಂದ್ರಿಯಕ್ಕೆ ಖುಶಿಯಾಯಿತು. ಹುಣಸಿಯ ಚೆಲುವಿನಲ್ಲಿ ಪರವಶನಾಗಿದ್ದ ಈತನೀಗ ಬಹಿರ್ಮುಖನಾಗುತ್ತಾನೆ ಹಾಗೂ ಇವನ ಸ್ಪರ್ಶೇಂದ್ರಿಯಕ್ಕೆ ತನ್ನ ಸುತ್ತಲಿನ ಪ್ರಕೃತಿಯ ವಾಸ್ತವ ಮುಖದ ಅಂದರೆ ಬಿಸಿಲಿನ ಅನುಭವವಾಗುತ್ತದೆ :

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ
ಮಧ್ಯಾಹ್ನದಾ ಪಾಹರೆ
ಯಾರಿಗಿಲ್ಲ ಹ್ವಾರೆ
ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ವೈಶಾಖ ಮಾಸವೆಂದರೆ ಬಿರುಬೇಸಿಗೆಯ ಕಾಲ. (‘ಬೇಸಿಗೆ’ ಇದು ‘ವೈಶಾಖ’ದ ತದ್ಭವ ಎನ್ನುವದನ್ನು ಗಮನಿಸಬೇಕು.)  ಇದೇನು ಕಡೆತನಕ ಇರುವಂತಹ ಋತು ಅಲ್ಲ. ಎಲ್ಲ ಅಲೆಮಾರಿಗಳಂತೆ ಬೇಸಿಗೆಯೂ ಸಹ ಈತನ ಊರಿನಲ್ಲಿಇದೀಗ ಡೇರೆ ಹೊಡೆದುಕೊಂಡು ಕೂತಿದೆ.

ಗಮನಿಸತಕ್ಕ ಅಂಶವೆಂದರೆ ಡೇರೆಯನ್ನು ಹೊಡೆಯುವದು ಸಮತಟ್ಟಾದ ಬಯಲಿನಲ್ಲಿ. ಅಂದರೆ ಈ ವ್ಯಕ್ತಿಯ ಊರು ಬಯಲಸೀಮೆಯಲ್ಲಿರುವ ಹಳ್ಳಿ. ಅಲ್ಲೊ ಇಲ್ಲೊ ಇರುವ ಬೇವಿನ ಅಥವಾ ಹುಣಸಿಯ ಗಿಡಗಳನ್ನು ಮಾತ್ರ ಇಲ್ಲಿ ಕಾಣಬಹುದು.

ಡೇರೆಯನ್ನು ಹೊಡೆದಿರುವವರು ಇಂದಿಲ್ಲ ನಾಳೆ ಕಿತ್ತುಕೊಂಡು ಹೋಗುತ್ತಾರೆ. ಬೇಸಿಗೆಯೂ ಹೋಗುವಂತಹದೇ. ಈ ವ್ಯಕ್ತಿಯೂ ಆ ಕಾಲಕ್ಕಾಗಿ ಕಾಯುತ್ತಿದ್ದಾನೆ. ಆದರೆ ಬಿಸಿಲು ಮಾತ್ರ ಸದ್ಯದ ಗಳಿಗೆಯಲ್ಲಿ ತನ್ನ ಡೇರೆಯ ಹೊರಗೆ ಮಧ್ಯಾಹ್ನದ ಪಾಳಿಯ ಕಾವಲುಗಾರನಂತೆ ಪಹರೆ ಮಾಡುತ್ತಿದೆ !  ಬೇಸಿಗೆಯ ಬಿಸಿಲಿಗಾದರೊ ಪಹರೆ ಕಾಯುವ ಕೆಲಸವಿದೆ. ಆದರೆ ಈ ಸುಡುಬೇಸಿಗೆಯಲ್ಲಿ ಹಳ್ಳಿಯ ಜನರಿಗೇನು ಕೆಲಸ ? ಬಹುತೇಕ ಜನರು ಎಳೆಬಿಸಿಲಿನಲ್ಲಿಯೇ ಸಣ್ಣ ಪುಟ್ಟ ದುರಸ್ತಿ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಹೋಗಿ ಬಿಟ್ಟಿರುತ್ತಾರೆ. ಯಾರಿಗೂ ಈಗ ಹ್ವಾರೆ(=ಕೆಲಸ) ಇಲ್ಲ. ಆದುದರಿಂದಲೇ ಇಲ್ಲಿ ಯಾವುದೇ ಸದ್ದಿಲ್ಲ ; ಯಾತರದೂ ಸುಳಿವೂ ಇಲ್ಲ.

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು
ಕಾಗಿ ಚುಂಚಿನ ಹಳ್ಳು
ಬಿದ್ದು ಆಂತ್ಯು “ಹೊಳ್ಳು”
ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಪಂಚೇಂದ್ರಿಯಗಳಲ್ಲಿ ನಾಲ್ಕಾದ ನೇತ್ರ,ಜಿಹ್ವೆ, ಘ್ರಾಣ ಹಾಗು ಸ್ಪರ್ಶದ ನಂತರ ಇದೀಗ ಐದನೆಯದಾದ ಕರ್ಣೇಂದ್ರಿಯದ ಸರದಿ. ಇಲ್ಲಿಯ ವರೆಗೆ ಸ್ತಬ್ಧವಾಗಿದ್ದ ವಾತಾವರಣದಲ್ಲಿ ಇದೀಗ ಗಾಳಿಯಿಂದ ಚಲನೆ ಮೂಡುತ್ತದೆ. ಎಲ್ಲರೂ ಊಟ ಮುಗಿಸಿಕೊಂಡು ಮಲಗಿರುವಾಗ, ಈ ಗಾಳಿ ಮಾತ್ರ ಹರಿದಾಡುತ್ತ ಸಿಳ್ಳು ಹಾಕುತ್ತಿದೆ. ಹುಣಸಿಮರದ ಎಲೆಗಳಲ್ಲಿ ಹಾಯ್ದು ಹೋಗುವಾಗ ಅದರಿಂದ ಉಂಟಾಗುವ ಧ್ವನಿ ಸಿಳ್ಳಿನಂತೆ ಕೇಳಿಸುತ್ತದೆ. ಇದು ಕೆಲಸವಿಲ್ಲದ ಉಂಡಾಡಿ ತರುಣನ ನಿಶ್ಚಿಂತ, ವಿನಾಕಾರಣ ಸಿಳ್ಳು ; ಯಾಕೆಂದರೆ ಸಿಳ್ಳು ಹಾಕುವಂತಹ ಯಾವ ಕಾರಣವೂ ಗಾಳಿಗಿಲ್ಲ. ಆದುದರಿಂದ ಬೇಂದ್ರೆ ಇದನ್ನು ‘ಸುಳ್ಳ ಸುಳ್ಳ ಸಿಳ್ಳು’ ಎಂದು ಬಣ್ಣಿಸುತ್ತಾರೆ.  

ಈ ಸಿಳ್ಳಿನ ಪರಿಣಾಮವಾಗಿ ಮರದ ಟೊಂಗೆಯ ಮೇಲೆ ಕುಳಿತ ಕಾಗೆಯೊಂದು ಬೆಚ್ಚಿ ಬೀಳುತ್ತದೆ. ಅದು ಚುಂಚಿನಲ್ಲಿ ಹಿಡಿದುಕೊಂಡಂತಹ ಸಣ್ಣ ಹಳ್ಳೊಂದು ದೊಪ್ಪನೆ ಕೆಳಗೆ ಬೀಳುತ್ತದೆ. ಬಿದ್ದ ಹಳ್ಳು (=ಕಲ್ಲಿನ ಸಣ್ಣ ತುಣುಕು) ನೆಟ್ಟಗೆ ನಿಲ್ಲಲಾರದೆ ಹೊರಳುತ್ತದೆ. ಇಂತಹ ಸಣ್ಣ ಘಟನೆಯೂ ಸಹ ನಮ್ಮ ನಾಯಕನ ಅರಿವಿನಲ್ಲಿ ಮೂಡುತ್ತದೆ. ಇಂತಹದೇ ಮತ್ತೊಂದು ವಿಷಯವನ್ನೂ ಅವನು ಗಮನಿಸುತ್ತಾನೆ. ಅದೇನೆಂದರೆ, ಹುಣಸಿ ಮರದ ನೆರಳೂ ಸಹ ಮೈ ಚಾಚಿ ಮಲಗಿಕೊಂಡಿದೆ! (ಬೇಂದ್ರೆಯವರು ಅಪರಾಹ್ನದ ಕಾಲವನ್ನು ಸೂಚಿಸುತ್ತಿದ್ದಾರೆ.) ಇದೆಲ್ಲದರ ಅರ್ಥವೆಂದರೆ, ಸಚರಾಚರ ಜಗತ್ತೆಲ್ಲ, ಬಿಸಿಲಿನ ಧಗೆಯನ್ನು ಪರಿಹರಿಸಿಕೊಳ್ಳಲು ಒರಗಿಕೊಂಡಿದೆ. ಇನ್ನು ನಾಯಕನಿಗೇನು ಕೆಲಸ? ಅವನೂ ಸ್ವಗತವೆಂಬಂತೆ ನುಡಿಯುತ್ತಾನೆ:

ಅಡ್ಡಾಗತೇನಿ ನೆಳ್ಳಾಗ ಹೀಂಗ
ಹೂವು ಚಿಗುರು ಹ್ಯಾಂಗ
ಅವs ಹಾಸಿಧಾಂಗ
ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಇದೇ ಹುಣಸಿಯ ಮರದ ನೆರಳಿನ ಕೆಳಗೆ ತಾನೂ ಅಡ್ಡಾಗಬೇಕೆನ್ನುವ ಯೋಚನೆ ಅವನಲ್ಲಿ ಬರುತ್ತದೆ. ಮರದ ಕೆಳಗೆ ಒರಗಿದಾಗ, ಅವನಿಗೆ ಮೇಲೆ ಕಾಣುವದೇನು? ಮರದ ತುಂಬೆಲ್ಲ ಹರಡಿದ ಹೂವು ಹಾಗು ಚಿಗುರು ತನ್ನ ಮೇಲೆಯೇ ಹಾಸಿದಂತೆ ಅವನಿಗೆ ಕಾಣುತ್ತದೆ. ಅಲ್ಲಿ ಒರಗಿದಂತೆಯೇ, ಹುಳಿ ಹುಳಿ ಚಿಗುರನ್ನು ನುರಿಸುತ್ತ, ಆ ಕಡುರುಚಿಗೆ ಆತ ಮರುಳಾಗುತ್ತಾನೆ.

ಈಗ ಅವನ ದೃಷ್ಟಿ ಕೆಳಗೆ ಸರಿಯುತ್ತ ಬಯಲಿನ ಕಡೆಗೆ ಹೋಗುತ್ತದೆ. ಕಣ್ಣ ನೋಟವೇ ಮಿತಿಯಾಗಿರುವಂತಹ ವಿಶಾಲವಾದ ಈ ಬಯಲು ಪ್ರದೇಶದಲ್ಲಿ, ಈ ಬಿಸಿಲಿನ ಝಳಕ್ಕೆ ದೂರದಲ್ಲಿ ಮೃಗಜಲದ ಆಭಾಸವಾಗುವದು ಸಹಜ. ನಮ್ಮ ಕವನದ ನಾಯಕನ ಕಣ್ಣಿಗೂ ಇದು ಬೀಳುತ್ತದೆ. ಆದರೆ ಆರಾಮಾಗಿ ಮಲಗಿಕೊಂಡಿರುವ ನಮ್ಮ ನಾಯಕನು ಈ ಮೃಗಜಲಕ್ಕೆ ಗಮನ ಹರಿಸುವದಿಲ್ಲ. ಭ್ರಮೆಯಲ್ಲಿ ಕಾಣಿಸುವ ನೀರು ಆತನಿಗೆ ಬೇಕಾಗಿಲ್ಲ. ಆತನಿಗೆ ಬೇಕಾದದ್ದು ಪ್ರೀತಿಯ ನೀರು. ಬಿಸಿಲುಕುದುರಿ ಬೇಕಾದಷ್ಟು ಕುಣಿಯಲಿ, ಅದಕ್ಕೆ ಅವನು ಲಕ್ಷ್ಯ ಕೊಡಲಾರ. ಅವನನ್ನು  ತಣಿಸುವಂತಹದು ಅವನ ಕೆಳದಿಯ ಒಲವಿನ ಒಡನಾಟ ಮಾತ್ರ. ಆದರೆ ನಮ್ಮ ರಸಿಕ ನಾಯಕನ ಕೆಳದಿ ಇಲ್ಲಿಲ್ಲ. ಹೊಲದಲ್ಲಿ ಏನೂ ಕೆಲಸವಿಲ್ಲದಾಗ, ತನ್ನ ಗಂಡನಿಗೆ ಬುತ್ತಿಯನ್ನು ಕಟ್ಟಿಕೊಂಡು ಬರುವ ಪ್ರಸಂಗವು ಹೆಂಡತಿಗೆ ಬರುವದಿಲ್ಲ.ಅದಕ್ಕಾಗಿ ಆಕೆಯನ್ನು ಆತ ಕರೆಯುವದು ಹೀಗೆ :

ಬಿಸಿಲ್ಗುದರಿ ಕುಣಿಯಲಿ ದೂರ
ಯಾರಿಗೆ ಬೇಕು ನೀರ
ಹೀಂಗ ನನ್ನಿದಿರ
ಕಣ್ಣಳತಿಯೊಳಗ ನೀ ಬಾರ ||ಹೂತsದ

ನಾಯಕ ತನ್ನ ಕೆಳದಿಯನ್ನು  ‘ಕಣ್ಣಳತಿಯೊಳಗೆ ಬಾ’ ಎಂದು ಕರೆಯುತ್ತಾನೆಯೇ ಹೊರತು, ಮೈಗೆ ಮೈ ಹಚ್ಚಿ ಕೂಡುವಷ್ಟು ಹತ್ತಿರ ಕರೆಯುತ್ತಿಲ್ಲ. ಯಾಕೆಂದರೆ ಈ ರಸಿಕನಿಗೆ ಅವಳ ಚೆಲುವನ್ನು ಅಲ್ಪದೂರದಿಂದಲೇ ಕಂಡು ಸುಖಿಸಬೇಕಾಗಿದೆ. ಅದು ಯಾವ ರೀತಿಯ ಚೆಲುವು ಎನ್ನುವದು ಈ ನುಡಿಯಲ್ಲಿ ವ್ಯಕ್ತವಾಗಿದೆ :

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಬಿಸಿಲಿನಿಂದಾಗಿ ಏಳುತ್ತಿರುವ  ಬಯಲಸೀಮೆಯ ಗಾಳಿಗೆ ಅವಳ ಬಿಚ್ಚಿದ ಹೆರಳು ಹಾರಾಡುತ್ತಿರುವದನ್ನು ಈತ ಕಲ್ಪಿಸಿಕೊಳ್ಳುತ್ತಾನೆ. ಆ ಹಾರುತ್ತಿರುವ ಕೂದಲನ್ನು ಸರಿಪಡಿಸಿಕೊಳ್ಳಲು ಅವಳು ಕೊರಳನ್ನು ಕೊಂಕಿಸಿ, ತನ್ನ ಬೆರಳುಗಳಿಂದ ಬಾಚಿಕೊಳ್ಳುವದನ್ನು ಆತ ಮನದಲ್ಲಿಯೇ ಚಿತ್ರಿಸಿಕೊಳ್ಳುತ್ತಾನೆ. ಅವಳಿಗಿಂತ ಮೊದಲೇ ಅವಳ ನೆರಳು ಇವನ ಹತ್ತಿರಕ್ಕೆ ಬರುವದರಿಂದ, ಅವಳ ಕವಿಯುತ್ತಿರುವ ನೆರಳಿನಿಂದಲೇ ಅವಳು ತನ್ನ ಸನಿಹಕ್ಕೆ ಬಂದದ್ದನ್ನು ಈತ ಊಹಿಸಿಕೊಳ್ಳುತ್ತಾನೆ. ಎಂತಹ ಕಲ್ಪನಾಚತುರನಾಗಿದ್ದಾನೆ ನಮ್ಮ ರಸಿಕ ನಾಯಕ! ಅವನ ಮುಂದಿನ ಕಲ್ಪನೆಯು ಇನ್ನಿಷ್ಟು ಪ್ರಣಯಮಧುರವಾಗಿದೆ.

ಕಣಕಣ್ಣ ಚಕಮಕಿ ಇತ್ತ
ಕುಡಿಗಣ್ಣಿನತ್ತ
ತಾಕಿ ಹಾರಿತ್ತ
ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಈ ರಸಿಕ ನಾಯಕನ ರಸಿಕ ಕೆಳದಿಯು ತನ್ನ ನಲ್ಲನನ್ನು ಸಮೀಪಿಸುವದಿಲ್ಲ , ನೇರವಾಗಿ ನೋಡುವದಿಲ್ಲ. ಕೇವಲ ಕುಡಿಗಣ್ಣಿನ ನೋಟವನ್ನು ಬೀರುತ್ತಾಳೆ, ಮತ್ತೆ ನೋಟವನ್ನು ಹೊರಳಿಸುತ್ತಾಳೆ, ಮತ್ತೆ ಅವನೊಡನೆ ಕಣ್ಣುಗಳನ್ನು ಕೂಡಿಸುತ್ತಾಳೆ. ಅವನೂ ಅಷ್ಟೇ! ಬೇಂದ್ರೆಯವರು ಇದನ್ನು ‘ಕಣಕಣ್ಣ ಚಕಮಕಿ’ ಎಂದು ಬಣ್ಣಿಸುತ್ತಾರೆ. ಬೆಣಚುಕಲ್ಲುಗಳ  ಚಕಮಕಿಯಲ್ಲಿ ಕಿಡಿ ಹಾರುವಂತೆ ಈ ಕಣ್ಣುಗಳ ಚಕಮಕಿಯಲ್ಲಿಯೂ ಸಹ ‘ತಾಕಿ ಹಾರಿತ್ತ’. ಆದರೆ ಇಲ್ಲಿ ಹಾರಿದ್ದು ತುಂಟ ಪ್ರಣಯದ ಕಿಡಿ!

ಈ ರೀತಿಯಲ್ಲಿ ನಮ್ಮ ನಾಯಕನ ಚಿತ್ತವು ಗಾಳಿಸವಾರಿಯನ್ನು ಮಾಡುತ್ತಿದೆ. ಅಂದರೆ ಗಾಳಿ ಹೇಗೆ ಎತ್ತೆತ್ತಲೊ ಬೀಸುವದೋ, ಅದೇ ತೆರದಲ್ಲಿ ಈತನ ಚಿತ್ತವೂ ಸಹ ಹಗಲುಗನಸಿನಲ್ಲಿ ಎತ್ತೆತ್ತಲೊ ಹರಿಯುತ್ತಿದೆ.
ಕವನದ ನಾಯಕನು ಈಗ ಹಗಲುಗನಸಿನಿಂದ ಹೊರಬಂದು  ವಾಸ್ತವ ಜಗತ್ತನ್ನು ನೋಡುತ್ತಾನೆ. ಆತನ ದೃಷ್ಟಿಯು ಸಮೀಪದಿಂದ ಸ್ವಲ್ಪ ದೂರದೆಡೆಗೆ ಸಾಗುತ್ತದೆ. ಅಲ್ಲಿ ಅವನಿಗೆ ಕಾಣುವದೇನು?

ಅಗೊ ಗಾಳಿ ಧೂಳಿಯಾ ಬಂಬಾ
ನಿಂತ್ಹಾಂಗ ಅದ ಖಂಬಾ
ಅಲ್ಲಿ ರೌದಿ ತುಂಬಾ
ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಸುಂಟರಗಾಳಿಯು ಸೃಷ್ಟಿಸಿದ ಧೂಳಿಯ ಬಂಬು (=bumb, ಪೊಳ್ಳಾಗಿರುವ ಸಿಲಿಂಡರಾಕಾರದ ರಚನೆ) ನಾಯಕನ ಕಣ್ಣಿಗೆ ಗಾಳಿಯ ಕಂಬವೊಂದು ನಿಂತುಕೊಂಡಂತೆ ಕಾಣುತ್ತದೆ. ಅದರ ಒಳಗೆಲ್ಲ ರವದಿಯಂತಹ (=ದಂಟಿನ ಸಿಪ್ಪೆ , ಕಸದಂತಹ) ಕ್ಷುಲ್ಲಕ ವಸ್ತು ತುಂಬಿಕೊಂಡಿದೆ. ಆದರೆ ಇಂತಹ ಸಾಮಾನ್ಯ ನೋಟವೂ ಸಹ ನಮ್ಮ ರಸಿಕ ನಾಯಕನಲ್ಲಿ ಕೌತುಕವನ್ನು ಹುಟ್ಟಿಸಬಲ್ಲದು. ಈ ಗಾಳಿಗಂಬದ ತಿರುಗುವಿಕೆಯು ಇವನ ಕಣ್ಣಿಗೆ ‘ಡೊಂಬರ ರಂಭೆ’ ಕುಣಿದಂತೆ ಕಾಣುವದು. ಹಳ್ಳಿಯಲ್ಲಿ ಕಸರತ್ತು ಮಾಡಿ ಮನರಂಜನೆ ನೀಡುವ ಕೆಲಸವನ್ನು ಡೊಂಬರು ಮಾಡುತ್ತಿದ್ದರು. ಆ ಕಸರತ್ತಿನಲ್ಲಿ ಕುಣಿಯುವ ಹುಡುಗಿ, ಈ ಹಳ್ಳಿಗರ ಪಾಲಿಗೆ ರಂಭೆ! ಈ ರೀತಿಯಾಗಿ ಗಾಳಿಯ ಬಂಬು ಕುಣಿಯುವ ರಂಭೆಯಾಗಿದೆ. ಇದು ರಸಿಕನ ಮನೋಧರ್ಮ.

ಈ ರೀತಿಯಾಗಿ ದೂರಕ್ಕೆ ಹರಿದ ಇವನ ದೃಷ್ಟಿಯು ಅಲ್ಲಲ್ಲಿ ಹರಿದಾಡುತ್ತ ಮತ್ತೆ ತನ್ನ ಸನಿಹದ ಹುಣಿಸೆ ಮರದ ಸನಿಹಕ್ಕೇ ಬರುವದು. ಅಲ್ಲಿ ಮರದ ಮೇಲುಭಾಗದಲ್ಲಿ ಇವನಿಗೆ ಪಾರಿವಾಳದ ಜೋಡಿಯೊಂದು ಕಾಣುವದು. ಬಿಸಿಲು, ಮಳೆ, ಚಳಿ ಇವೆಲ್ಲ ಮನುಷ್ಯಮಾತ್ರರಿಗೆ ಸಹನೀಯವಾಗದಿರಬಹುದು. ಆದರೆ ನಿಸರ್ಗದ ಶಿಶುಗಳಾದ ಪಕ್ಷಿ, ಪ್ರಾಣಿಗಳಿಗೆ ಈ ವೈಪರೀತ್ಯದ ಪರಿವೆಯೇ ಇಲ್ಲ.

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ
ಒಂದಕ್ಕೊಂದ ನೋಡಿ
ಬಿಸಿಲ ತೆರೆ ದೂಡಿ
ಹಾರ್ತsದ ನೀಲಿಮುಗಿಲ್ಕೂಡಿ  ||ಹೂತsದ

ಪಾರಿವಾಳದ ಜೋಡಿಯು ಪ್ರೇಮದ ಸಂಕೇತವೇ ಆಗಿದೆ. ಇವುಗಳ ಕೆಳೆತನವನ್ನು ನೋಡಿರಿ. ಅವು ಕ್ಷಣ ಬಿಟ್ಟು ಕ್ಷಣ, ಗೋಣು ಹೊರಳಿಸುತ್ತ ಒಂದನ್ನೊಂದು ನೋಡುತ್ತಲೇ ಇರುತ್ತವೆ. ಈ ಬಿಸಿಲಿನ ಬಾಧೆ ತಮಗೆ ಏನೂ ಅಲ್ಲ ಎಂಬಂತೆ, ಬಿಸಿಲಿನ ತೆರೆಯನ್ನು ದೂಡಿ ಹಾರುತ್ತವೆ. ಎಲ್ಲಿಗೆ?... ಬೇಸಿಗೆಯ ನಿರಭ್ರ, ನೀಲಿ ಆಕಾಶಕ್ಕೆ!

ಅವು ಎಷ್ಟು ಸಮರೂಪವಾಗಿ ಹಾರುತ್ತಿವೆ ಎಂದರೆ, ಅವುಗಳ ಹಾರಾಟವನ್ನು ಪ್ರತ್ಯೇಕಿಸದೆ, ‘ಹಾರುತ್ತಿದೆ ಜೋಡಿ…..ಕೂಡಿ’ ಎಂದು ಬಣ್ಣಿಸಲಾಗಿದೆ ! ಹಾರುತ್ತಿರುವ ಈ ಜೋಡಿಯನ್ನು ಕಂಡಾಗ, ನಮ್ಮ ನಾಯಕನೂ ಸಹ ಮುಗಿಲನ್ನು ನಿಟ್ಟಿಸುತ್ತಾನೆ. ನೀಲಿ ಬಣ್ಣದ ಆಕಾಶದ ಆ ಡುಬರಿಯು ಆತನಿಗೆ ನೀರಿನ ಕೊಳದಂತೆ ಕಾಣುವದು.

ಕಂಡಂಗಾತು ನೀರಿನ ಕೊಳ
ನೀಲಿ ಮುಗಿಲ ಜಳಾ
ಎಂಥ ಝಳ ಝಳಾ
ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

ಡುಬರಿಬಿದ್ದ ನೀಲಿ ಆಕಾಶವು ಇವನಿಗೆ ‘ಜಳಾ’ ಅಂದರೆ ‘ಜಲ’ದಿಂದ (=ನೀರಿನಿಂದ) ತುಂಬಿದ ಕೊಳದಂತೆ ಕಾಣುವದು. ಜಳ ಪದಕ್ಕೆ ಸ್ವಚ್ಛ ಎನ್ನುವ ಅರ್ಥವೂ ಇದೆ. ಈ ನೀಲಾಕಾಶವೂ ಸಹ ಸ್ವಚ್ಛವಾದ ನೀರಿನ ಕೊಳದಂತೆ, ‘ಜಳಜಳ’ (=ಸ್ವಚ್ಛ)ವಾಗಿ ಆತನಿಗೆ ತೋರುವದು.
( ‘ಜಳ’ ಅಂದರೆ ಸ್ವಚ್ಛ ; ‘ಜಲ’ ಅಂದರೆ ನೀರು. ಈ ಪದಕ್ಕೆ ಇರುವ ಎರಡೂ ಅರ್ಥಗಳನ್ನು ಬೇಂದ್ರೆಯವರು ಇಲ್ಲಿ ಬಳಸಿಕೊಂಡಿದ್ದಾರೆ.) ಸ್ವಚ್ಛವಾದ ಮುಗಿಲು ಹಾಗು ಅದು ಸೂಸುವ ತಾಪ ಎರಡೂ ಅವನ ಅನುಭವಕ್ಕೆ ಬಂದಾಗ, ಆತ ‘ಎಂಥ ಝಳ ಝಳಾ’ ಎಂದು ಉದ್ಗರಿಸುತ್ತಾನೆ! (ಝಳ ಎಂದರೆ ತಾಪ, ಸೆಕೆ ; ಝಳಝಳ ಎಂದರೆ ಸ್ವಚ್ಛ !)

‘ಶುದ್ಧವಾದ ವಸ್ತುವನ್ನು ನೋಡಿದಾಗ ನಾವೂ ಶುದ್ಧವಾಗುತ್ತೇವೆ’ ಎಂದು ಶಾಸ್ತ್ರ ಹೇಳುತ್ತದೆ. ಹಳ್ಳಿಯ ಈ ಸಾಮಾನ್ಯ ವ್ಯಕ್ತಿಗೆ ಶಾಸ್ತ್ರ ಗೊತ್ತಿಲ್ಲ. ಆದರೆ ಝಳಝಳ ಆಕಾಶದಲ್ಲಿ ಅವನ ನೋಟ ನೆಟ್ಟಾಗ, ಅವನ ಮನಸ್ಸಿನಲ್ಲಿರಬಹುದಾದ ಧೂಳೆಲ್ಲ ಹೊರಟು ಹೋಗಿ ಅವನು ನಿರ್ಮಲ ಚಿತ್ತನಾಗುತ್ತಾನೆ.  ಈ ರೀತಿಯಾಗಿ ಸಮಯ ಸಾಗುತ್ತಿರಲು, ಮನಸ್ಸಿನ ಎಲ್ಲ ಉಪಾಧಿಗಳು ಮಾಯವಾಗಿ ಋಷಿಗಳು ಹೇಳುವ ‘ಶೂನ್ಯಮನೋಸ್ಥಿತಿ’ಯನ್ನು ಈತ ಮುಟ್ಟುತ್ತಾನೆ.

ಕಾಲ ಹೋಗತಿತ್ತ ಹಿಂದ ಸರಿದು
ಮನಸು ಆತ ಬರಿದು
ಮಧ್ಯಾನ ಬ್ಯಾಸರ ಮುರಿದು
ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

ಬಿಸಿಲುಕಾಲದ ಮಧ್ಯಾಹ್ನದಲ್ಲಿ ಏನೂ ಕೆಲಸವಿಲ್ಲದೆ, ರಣರಣ ಹೊಡೆಯುವ ಬಿಸಿಲಿನಿಂದ ಬೇಸರಗೊಂಡ ಈತನ ಮನಸ್ಸು ಹೂತ ಹುಣಸಿಯ ಮರವನ್ನು ಕಂಡ ಬಳಿಕ, ಚಿತ್ತವಿಲಾಸದಲ್ಲಿ ತೊಡಗಿ, ಕೊನೆಗೆ ಅಲೆಗಳಿಲ್ಲದ ಸರೋವರದಂತಹ ನಿರ್ಭಾವವನ್ನು ಮುಟ್ಟುತ್ತದೆ. (ನಿರ್ವಾಣ ಸ್ಥಿತಿ ಎನ್ನೋಣವೆ?) ಇದೇ ರೀತಿ ಕಾಲ ಸರಿದು ಹೋಗುತ್ತಿದೆ, ಬಿಸಿಲು ಹರಿದು ಹೋಗುತ್ತಿದೆ. ಮನಸ್ಸು ನಿರಾಳಸುಖವನ್ನು ಅನುಭವಿಸುತ್ತಿದೆ.

ಪ್ರಕೃತಿಯಲ್ಲಿ ಭಾವಸಮಾಧಿ ಹೊಂದುವ ಇಂತಹ ಮನೋಸ್ಥಿತಿಯು ಸಮಾಧಾನ ಚಿತ್ತವುಳ್ಳ ವ್ಯಕ್ತಿಗೆ ಮಾತ್ರ ಸಾಧ್ಯ! ಇವನೇ ನಿಜವಾದ ಕವಿಹೃದಯ ಉಳ್ಳವನು. ಈತ ಪಂಡಿತನಿರಬೇಕಿಲ್ಲ, ನಾಗರಿಕನಿರಬೇಕಿಲ್ಲ. (ಇರದಿರುವದೇ ಉತ್ತಮ!?) ಅದಕ್ಕೆಂದೇ ಈ ಕವನದ ಕೊನೆಯ ಭರತವಾಕ್ಯವನ್ನು ವರಕವಿ ಬೇಂದ್ರೆಯವರು ರೀತಿ ಹೇಳುತ್ತಾರೆ :

ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ ||ಹೂತsದ

ಕವಿಜೀವದ ಬೇಸರವು ಹರಿದ ಬಳಿಕ, ಕವಿಯ ಸುಖವು ಹಾಡಿನ ರೂಪದಲ್ಲಿಯೇ ಹೊರಹೊಮ್ಮಬೇಕಲ್ಲವೆ? ಆಗ ಆತನು ಹಾಡಿದ ಹಾಡು ಕವಿಗೆ ಸುಖ ನೀಡುವಂತೆಯೆ ಕೇಳುಗರಿಗೂ ಸುಖ ನೀಡುವದು. ಕವಿಗೆ ಹಾಗು ರಸಿಕರಿಗೆ ಸುಖ ನೀಡಲು ಹೂವು ಬಿಟ್ಟ ಹುಣಸಿ ಮರವೇ ಸಾಕು!
-------------------------------------------------------------

ಕವನದ ವೈಶಿಷ್ಟ್ಯಗಳು:
ಕವನಕ್ಕೆ ಸಮರ್ಪಕವಾದ ಛಂದಸ್ಸನ್ನು ಬಳಸುವದರಲ್ಲಿ ಬೇಂದ್ರೆಯವರನ್ನು ಸರಿಗಟ್ಟಬಲ್ಲವರಿಲ್ಲ. ‘ಪಾತರಗಿತ್ತಿ ಪಕ್ಕಾ’ ಕವನದಲ್ಲಿ ಅವರು brief and fluttering ಛಂದಸ್ಸನ್ನು ಬಳಸಿ, ಪಾತರಗಿತ್ತಿಯ ಹಿಂದೆಯೇ ಹಾರುತ್ತಾರೆ. ‘ಹೂತದ ಹುಣಸಿ’ ಕವನದ ಛಂದಸ್ಸನ್ನು ನೋಡಿರಿ. ಹಳ್ಳಿಯ ಸಾಮಾನ್ಯ ವ್ಯಕ್ತಿಯೊಬ್ಬನು ತನ್ನಷ್ಟಕ್ಕೆ ರಾಗವಾಗಿ ಮಾತನಾಡಿಕೊಳ್ಳುತ್ತಿರುವ ಛಂದಸ್ಸು ಈ ಕವನಕ್ಕಿದೆ. ಇಲ್ಲಿ ಬಳಸಲಾದ ಎಲ್ಲ ಪದಗಳೂ ಹಳ್ಳಿಗರು ಬಳಸುವ ದೇಸಿ ಪದಗಳೇ ಆಗಿವೆ. ಅಂತಹ ಪದಗಳಲ್ಲಿಯೇ ವಿವಿಧಾರ್ಥಗಳನ್ನು (pun) ಹೊರಡಿಸಬಲ್ಲ ಸಾಮರ್ಥ್ಯವನ್ನು  ಬೇಂದ್ರೆ ತೋರಿಸಿದ್ದಾರೆ.

ಬೇಂದ್ರೆಯವರ ಚಿತ್ರಕ ಶಕ್ತಿಯೂ ಅದ್ಭುತವಾದದ್ದು. ಕವನವನ್ನು ಓದುತ್ತಿದ್ದಂತೆಯೇ ಹೂವು ಬಿಟ್ಟ ಹುಣಸಿ ಮರವು ಕಣ್ಣಿಗೆ ಕಟ್ಟುತ್ತದೆ. ಅಷ್ಟೇ ಏಕೆ, ಬಿಸಿಲು ಹಾಗು ಗಾಳಿಯಂತಹ ನಿರ್ಜೀವ ವಸ್ತುಗಳಿಗೆ ಬೇಂದ್ರೆ ಇಲ್ಲಿ ಜೀವ ಕೊಟ್ಟಿದ್ದಾರೆ. ಡೇರೆಯನ್ನು ಹೊಡೆದುಕೊಂಡು ಪಹರೆ ಮಾಡುವ ಕಾವಲುಗಾರನ ರೂಪವನ್ನು ಬಿಸಿಲು ತಾಳುತ್ತದೆ. ದಿಕ್ಕು ನೋಡದೆ ಹರಿಯುವ ಗಾಳಿಯು ಸಿಳ್ಳು ಹಾಕುವ ನಿಶ್ಚಿಂತ ತರುಣನ ವ್ಯಕ್ತಿತ್ವವನ್ನು ಪಡೆಯುತ್ತದೆ.  ಸುಂಟರಗಾಳಿಯ ಬಂಬನ್ನು ಅವರು ಬಣ್ಣಿಸುವಾಗ, ಆ ಬಂಬು ಕಣ್ಣೆದುರಿಗೇ ನಿಲ್ಲುತ್ತದೆ. ನಾಯಕನ ಕೆಳದಿಯು ಒನಪು-ವೈಯಾರದ, ಹಳ್ಳಿಯ ಬೆಡಗಿಯಾಗಿ ನಮ್ಮ ಮನದಲ್ಲಿ ನಿಲ್ಲುತ್ತಾಳೆ.

‘ಉಪಮಾ ಕಾಲಿದಾಸಸ್ಯ’ ಎಂದು ಹೇಳುತ್ತಾರೆ. ಉಪಮೆಗಳನ್ನು ಕೊಡುವದರಲ್ಲಿ ಬೇಂದ್ರೆಯವರು ಕಾಲಿದಾಸನಿಗೆ ಸರಿಸಾಟಿ ಎನ್ನಬಹುದು. ಹುಣಸಿಯ ಚಿಗುರುಗಳನ್ನು ಮದರಂಗಿ ಹಚ್ಚಿದ ಉಗುರುಗಳಿಗೆ ಹೋಲಿಸುವದರಲ್ಲಿ , ಹುಣಸಿಯ ರೆಂಬೆಯನ್ನು ಕಾಮನಬಿಲ್ಲಿನ ತುದಿಗಳಿಗೆ ಹೋಲಿಸುವದರಲ್ಲಿ ಅಥವಾ ಸುಂಟರಗಾಳಿಯ ಕುಣಿತವನ್ನು ಡೊಂಬರ ರಂಭೆಯ ಕುಣಿತಕ್ಕೆ ಹೋಲಿಸುವದರಲ್ಲಿ ಇವರ ವಾಸ್ತವಪ್ರಜ್ಞೆ ಹಾಗು ಉಪಮಾ ಪ್ರತಿಭೆ ವ್ಯಕ್ತವಾಗುತ್ತವೆ. ಆದರೆ ನಮ್ಮ ನಾಯಕನ ರಸಿಕ ವ್ಯಕ್ತಿತ್ವವನ್ನು ಬಯಲುಗೊಳಿಸುವದೇ ಈ ಉಪಮೆಗಳ ನೈಜ ಉದ್ದೇಶವಾಗಿದೆ.

ಇಲ್ಲಿ ಮತ್ತೊಂದು ಸಾಮ್ಯವನ್ನು ಗಮನಿಸಬೇಕು. ಚಿಗುರು ಬಿಟ್ಟ ಹುಣಸಿಯ ಮರವು ಫಲಿತವಾಗಲು ದುಂಬಿಗಾಗಿ ಕಾಯುತ್ತದೆ. ಅದರಂತೆಯೇ, ಉಗುರಿಗೆ ಮದರಂಗಿಯನ್ನು ಹಚ್ಚಿಕೊಂಡ ಹುಡುಗಿಯು ತನ್ನ ನಲ್ಲನಿಗಾಗಿ ಕಾತರಿಸುತ್ತಾಳೆ. ಈ ಎರಡೂ ಕ್ರಿಯೆಗಳು ಸೃಷ್ಟಿಗಾಗಿ ಇವೆ. ಆದುದರಿಂದಲೇ, ನಮ್ಮ ನಾಯಕನು ತನ್ನ ಕೆಳದಿಯ  ಹಗಲುಗನಸು ಕಾಣುವ ವರ್ಣನೆ ಮುಂದಿನ ನುಡಿಗಳಲ್ಲಿ ಬರುತ್ತದೆ.

ಉಮರ ಖಯ್ಯಾಮನ ‘ರುಬಾಯತ್’ ಕಾವ್ಯವು ಜೀವನಪ್ರೀತಿಯ ತತ್ವಕ್ಕಾಗಿ ತುಂಬ ಪ್ರಸಿದ್ಧವಾಗಿದೆ. ಆ ಕಾವ್ಯದಲ್ಲಿ ಬರುವ  ‘Come, fill the cup ಎನ್ನುವ ಸಾಲಂತೂ ಎಲ್ಲೆಲ್ಲೂ ಉದ್ಧೃತವಾಗಿದೆ:
ನಮ್ಮ ಹಳ್ಳಿಯ ಗೃಹಸ್ಥನಿಗೆ ಇದಕ್ಕಿಂತ ಹೆಚ್ಚಿನ ತತ್ವಜ್ಞಾನವು ತನ್ನ ಗ್ರಾಮೀಣ ಸಂಸ್ಕೃತಿಯ ಮೂಲಕವೇ ಅರಿವಾಗಿದೆ. ಅದಕ್ಕೆಂದೇ ಆತ ತನ್ನ ಕೆಳದಿಯನ್ನು ಒಲವಿನಿಂದ ನೋಡಬಯಸುವದು ಹೀಗೆ:

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ರಚನೆಯ ವೈಶಿಷ್ಟ್ಯ:
ಹೂವು ಬಿಟ್ಟ ಹುಣಸಿಯ ಮರವು ಎಂತಹ ಮನೋವಿಲಾಸಕ್ಕೆ, ಎಂತಹ ನೆಮ್ಮದಿಗೆ ಕಾರಣವಾಗಬಹುದು ಎನ್ನುವದನ್ನು ಬೇಂದ್ರೆಯವರು ನುಡಿಗೆ ನುಡಿ ಜೋಡಿಸುತ್ತ ಅತ್ಯಂತ ಕ್ರಮಬದ್ಧವಾಗಿ ತೋರಿಸುತ್ತ ಹೋಗಿದ್ದಾರೆ. ನಿರುದ್ದಿಶ್ಯವಾಗಿ ಚಲಿಸುತ್ತಿರುವ ಮನಸ್ಸಿನ ವಿಲಾಸವನ್ನು ಚಿತ್ರಿಸುವ ಕಲ್ಪನಾಸಾಮರ್ಥ್ಯವು ಬೇಂದ್ರೆಯವರ ಕಾವ್ಯಪ್ರತಿಭೆಯ ಫಲವಾದರೆ, ಉದ್ದೇಶಪೂರ್ಣ ಕ್ರಮಬದ್ಧತೆಯು ಅವರ ಕಾವ್ಯರಚನಾಪ್ರತಿಭೆಯ ಫಲವಾಗಿದೆ. ಪ್ರತಿಭೆ ಹಾಗು ಪಾಂಡಿತ್ಯ ಇವೆರಡೂ ಬೇಂದ್ರೆಯವರಲ್ಲಿ ಸಮರಸವಾಗಿ ಮೇಳವಿಸಿರುವದರಿಂದಲೇ ‘ಹೂತದ ಹುಣಸಿ’ಯಂತಹ ಶ್ರೇಷ್ಠ ಕವನವು ಅವರ ಮನದಲ್ಲಿ ಮೂಡಲು ಸಾಧ್ಯವಾಗಿದೆ ಎನ್ನಬಹುದು.

‘ಒಂದು ಹೂತ ಹುಣಸಿಮರವನ್ನು ಕಂಡರೂ ಸಾಕು, ಪ್ರಕೃತಿಯಲ್ಲಿ ಭಾವಸಮಾಧಿ ಹೊಂದಬಲ್ಲ  ಸಾಮರ್ಥ್ಯ ಕವಿಜೀವಕ್ಕೆ ಇದೆ’, ಎಂದು ಬೇಂದ್ರೆ ಕೊನೆಯ ನುಡಿಯಲ್ಲಿ ಹೇಳುತ್ತಾರೆ. ಇಂತಹ ಕಾವ್ಯರಚನೆಯನ್ನು ಮಾಡುವ ಸಾಮರ್ಥ್ಯವು ಕಾವ್ಯದಲ್ಲಿ ಸಮಾಧಿಸ್ಥನಾಗಬಲ್ಲ ವರಕವಿಗೆ ಮಾತ್ರ ಸಾಧ್ಯ, ಅಲ್ಲವೆ!
------------------------------------------------------------
[ಟಿಪ್ಪಣಿ:
‘ಹೂತsದ ಹುಣಸಿ’ ಕವನದಲ್ಲಿ ಬೇಂದ್ರೆಯವರು ‘ಪ್ರಕೃತಿಸಮಾಧಿ’ಯನ್ನು ಬಣ್ಣಿಸಿದ್ದಾರೆ. ನಗರದ ವಾತಾವರಣದಿಂದಾಗಿ ಇಂತಹ ಪ್ರಕೃತಿಸಾಮರಸ್ಯಸುಖವು ಪಾಶ್ಚಾತ್ಯರಿಗೆ ಅಲಭ್ಯವಾಗಿದೆ. ಇದನ್ನು ಕೆಲವು ಹಳೆಯ ಪಾಶ್ಚಾತ್ಯ ಕವಿಗಳು ತಮ್ಮ ಕವನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.

ಉದಾಹರಣೆಗೆಂದು W.H.Davies ಇವರು ಬರೆದ ಕವನವೊಂದರ ಮೊದಲ ನುಡಿಯನ್ನು ಗಮನಿಸಬಹುದು :

What is this life if full of care,
There is no time to stand and stare?
No time to stand beneath the boughs
And stare as long as sheep and cows.

ಎರಡನೆಯ ಉದಾಹರಣೆ ಎಂದರೆ ಪ್ರಸಿದ್ಧ ಇಂಗ್ಲಿಶ್ ಕವಿ ಯೇಟ್ಸನ ಸುಪ್ರಸಿದ್ಧ ಕವನ:
‘The Lake isle of Innisfree’.

I will arise and go now, and go to Innisfree,
And a small cabin build there, of clay and wattles made:
Nine bean-rows will I have there, a hive for the honey-bee,
And live alone in the bee-loud glade.

And I shall have some peace there, for peace comes dropping slow,
Dropping from the veils of the morning to where the cricket sings;
There midnight's all a glimmer, and noon a purple glow,
And evening full of the linnet's wings.

I will arise and go now, for always night and day
I hear lake water lapping with low sounds by the shore;
While I stand on the roadway, or on the pavements grey,
I hear it in the deep heart's core.

ಈ ಇಬ್ಬರೂ ಇಂಗ್ಲಿಶ್ ಕವಿಗಳು ಆಧುನಿಕ ನಾಗರಿಕತೆಯು ಕಳೆದುಕೊಂಡ ಪ್ರಕೃತಿಯ ಕೆಳೆತನಕ್ಕಾಗಿ ಹಲಬುವ ಕವನಗಳನ್ನು ಬರೆದಿದ್ದಾರೆ. ಬೇಂದ್ರೆಯವರು ಆ ಕೆಳೆತನವು ಹೇಗೆ ಇರುವದು ಎನ್ನುವದನ್ನು ತೋರಿಸಿದ್ದಾರೆ.]

------------------------------------------------------------

ಒಂದು ಘಟನೆ:
ಈ ಘಟನೆಯನ್ನು ನನಗೆ ಶ್ರೀ ವ್ಯಾಸ ದೇಶಪಾಂಡೆ ಹೇಳಿದರು :
ಗದಗಿನಲ್ಲಿ (?) ನಡೆಯುತ್ತಿದ್ದ ಒಂದು ಸಾಹಿತ್ಯಸಮಾರಂಭದ ವೇದಿಕೆಯ ಮೇಲೆ ಶ್ರೀ ಬೇಂದ್ರೆ, ಶ್ರೀ ಆರ್.ಸಿ. ಹಿರೇಮಠ ಹಾಗು ಶ್ರೀ ಧಾರವಾಡಕರ ಉಪಸ್ಥಿತರಿದ್ದರು. ಶ್ರೀ ಆರ್.ಸಿ.ಹಿರೇಮಠರು ಬೇಂದ್ರೆಯವರಿಗೆ ಚೇಷ್ಟೆ ಮಾಡುವ ಉದ್ದೇಶದಿಂದ, “ಬೇಂದ್ರೆ ಅವರು ಬೇಕಾದ್ದರ ಮ್ಯಾಲೆ ಕವನಾ ಬರೀತಾರ; ಇಕಾ ನೋಡರಿ, ಆ ಎದುರಿಗಿರೋ ಹುಣಸಿ ಮರದ ಮ್ಯಾಲೂ ಒಂದ ಕವನಾ ಕಟ್ಟತಾರ ಅವರು” ಎಂದು ಅಂದರಂತೆ. ತಕ್ಷಣವೇ ಬೇಂದ್ರೆಯವರು ಎದ್ದು ನಿಂತು, ಕೈ ಮೇಲೆತ್ತಿ, ಹಸ್ತಚಲನೆ ಮಾಡುತ್ತ ಉದ್ಗರಿಸಿದರಂತೆ :
“ಕವಿಗೇನು ಬೇಕs
ಹೂತ ಹುಣಸಿ ಮರ ಸಾಕs”
---------------------------------------------------------
ಸರ್ವರಿಗೂ ೨೦೧೧ನೆಯ ವರುಷದ ಶುಭಾಶಯಗಳು.
------------------------------------------------

47 comments:

ಶ್ರೀನಿವಾಸ ಮ. ಕಟ್ಟಿ said...

ಸುನಾಥರೆ, ಅದ್ಭುತವಾದ ಲೇಖನ ಬರೆದಿರುವಿರಿ ! ನಿಮ್ಮ ಹತ್ತಿರ ಬಂದು, ಕೆಲವು ಸಮಯ ಇದ್ದು ( ಸಮಯ ಅಂದರೆ ಕೆಲವು ತಿಂಗಳುಗಳು) ಬೇಂದ್ರೆಯವರ ಕವಿತೆಗಳನ್ನು, ಖಂಡಕಾವ್ಯಗಳನ್ನು ನಿಮ್ಮಿಂದ ಕೇಳುವಾಸೆ. ಹುಣಸಿ ಮರದ ಮೇಲೆ ಬೇಂದ್ರೆಯವರ ದಿವ್ಯ ದೃಷ್ಟಿ ಬಿದ್ದಾಗ, ಅವರ ಕವಿ ಮನದ ಆಳದಲ್ಲಿ ಉದಯಿಸಿದ ಭಾವನೆ, ಕಾವ್ಯಪ್ರಜ್ಞೆ ಅತ್ಯದ್ಭುತ. ಅದಕ್ಕೆ ನೀವು ಬರೆದ ಲೇಖನ ಇನ್ನೂ ಅದ್ಭುತ. ಅವರ ಪ್ರತಿಯೊಂದು ಕವಿತೆಯನ್ನು ಹೀಗೆ ಅನುನಯಿಸಿ ಬರೆದು ಒಂದು ಪುಸ್ತಕವನ್ನು ನೀವೇಕೆ ಪ್ರಕಟಿಸಬಾರದು ?

PARAANJAPE K.N. said...

ಲೇಖನ ಅದ್ಭುತವಾಗಿದೆ. ಬೇ೦ದ್ರೆಯವರ ಚಿತ್ರಕ ಶಕ್ತಿ, ಛ೦ದಸ್ಸು ಬಳಕೆ, ಉಪಮಾಲ೦ಕಾರ ವೈಶಿಷ್ಟ್ಯಗಳ ಸಹಿತ ‘ಹೂತsದ ಹುಣಸಿ’ ಕವನದ ಸಶಕ್ತ ವಿಮರ್ಶೆ ಮಾಡಿದ್ದೀರಿ. ಸ೦ಗ್ರಹಯೋಗ್ಯ ಬರಹ. ಬೇ೦ದ್ರೆಯವರ ಕವನಗಳ ವಿಮರ್ಶೆಯನ್ನು ಇ೦ತಹ ವಿಮರ್ಶೆ ಓದುವ ಭಾಗ್ಯ ನನಗೆ ಸಿಕ್ಕಿದ್ದು ನಿಮ್ಮ ಬ್ಲಾಗಿನಲ್ಲಿಯೇ. ಸಖಿಗೀತ ನನ್ನ ಬಳಿ ಇದೆ. ನಿಮ್ಮ ಈ ಬ್ಲಾಗ್ ಬರಹ ಓದಿದ ನ೦ತರ ಇನ್ನೊಮ್ಮೆ ಅದನ್ನು ಓದಿ ಹೊಸ ಹೊಸ ಅರ್ಥಗಳನ್ನು ಗ್ರಹಿಸುವ ಮನಸ್ಸಾಗಿದೆ. ಅಭಿನ೦ದನೆಗಳು. ನಿಮ್ಮನ್ನೊಮ್ಮೆ ಭೇಟಿ ಮಾಡಬೇಕು ಎ೦ದೆನಿಸಿದೆ.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಹುಣಿಸೆ ಮರ,ಅದರ ಹೂವು,ಹುಳಿ ರುಚಿ..ಎಲ್ಲಾ ನೆನಪಾಯ್ತು ಇದನ್ನು ಓದಿ.

ಬೇಂದ್ರೆಯವರನ್ನು ವರಕವಿ ಅಂತಾ ಸುಮ್ಮನೆ ಹೇಳ್ತಾರ..

ಅದ್ಭುತ ಕವನದ ಪ್ರಭಾವಶಾಲಿ ವಿಶ್ಲೇಷಣೆ.

ನಿಮಗೂ ಮತ್ತು ಕಾಕಿಗೂ ಹೊಸ ವರ್ಷದ ಶುಭಾಶಯಗಳು !

kanasu said...

super writer up ka ka

ಜಲನಯನ said...

ಸುನಾಥಣ್ಣ.., ಬಹಳ ಸವಿ ಸವಿದು ಓದುವಾಸೆ ಆಗೋದು..ನಿಮ್ಮ ಹಾಗೆ ಕ್ಲಿಷ್ಟಕರ ಮೇಲ್ಕವಚ ತೆಗೆದು ರಸಭರಿತ ತೊಳೆಗಳನ್ನು ವಿವರಣೆಯ ಜೇನಿಂದ ಸವರಿ ನಮ್ಮಂಥ ಅಲ್ಪಮತಿಗಳಿಗೆ ಉಣಬಡಿಸಿದಾಗ...ಸಾಮಾನ್ಯ ಗೌಣ ವೆನಿಸುವ ಘಟನೆಗೆ ಅಸಾಮಾನ್ಯ ಕವನ ರೂಪಕೊಡುತ್ತಿದ್ದ ದ.ರಾ. ವರಕವಿ, ನಿಜ...ಅದನ್ನ ಮನದಟ್ಟು ಮಾಡೊದು ನಿಮ್ಮ ಈ ವಿವರಣೆಗಳು...ನಮನ..ಮತ್ತೊಮ್ಮೆ ಈರ್ವರಿಗೂ.

sunaath said...

ಕಟ್ಟಿಯವರೆ,
ನಿಮಗೆ ಸುಸ್ವಾಗತ. ಕಾವ್ಯಶಾಸ್ತ್ರವಿನೋದದಲ್ಲಿ ಜೊತೆಯಾಗಿ ಕಾಲ ಕಳೆಯೋಣ!

sunaath said...

ಪರಾಂಜಪೆಯವರೆ,
ಬೇಂದ್ರೆಯವರು ಅದ್ಭುತ ಕವಿ. ಅವರೇ ಹೇಳಿದ್ದಾರಲ್ಲ:
"ಕವಿಗೇನು ಬೇಕs
ಹೂತ ಹುಣಸಿ ಮರ ಸಾಕs"

sunaath said...

ಅಪ್ಪ-ಅಮ್ಮ,
ಹುಣಿಸೆ ಮರದ ಚಿಗುರ ರುಚಿಯನ್ನು ನೀವು ಸವಿಯುತ್ತಿದ್ದಿರಿ ಎಂದು ತಿಳಿಯಲೆ? ಆ ಕಾಲ ಮತ್ತೆ ಬಂದೀತೆ?
ಅಪ್ಪ, ಅಮ್ಮನಿಗೆ ಹಾಗು ಪುಟ್ಟ ಕಂದಮ್ಮನಿಗೆ ಪ್ರೀತಿಯ ಹೊಸ ವರ್ಷದ ಶುಭಾಶಯಗಳು.

sunaath said...

ಕನಸು,
ನಿಮಗೆ ಅನೇಕ ಧನ್ಯವಾದಗಳು.

sunaath said...

ಜಲನಯನ,
ನಮ್ಮ ಕಣ್ಣಿಗೆ ಸಾಮಾನ್ಯವಾದದ್ದು ಈ ಕವಿಜೀವಕ್ಕೆ ಅಸಾಮಾನ್ಯ ಚೆಲುವನ್ನು ತೋರುತ್ತಿತ್ತು. ಆ ಚೆಲುವನ್ನು ತಮ್ಮ ಕವನಗಳ ಮೂಲಕ ನಮಗೂ ಉಣಿಸುವ ಅವರ ಪ್ರತಿಭೆ ಅದ್ಭುತವಾದದ್ದು.

Narayan Bhat said...

ಸುನಾಥ್ ಅವರೆ,
ವರಕವಿ ಬೇಂದ್ರೆಯವರ ಕವನವನ್ನು ಕವಿಯ ಆಶಯಗಲೆಲ್ಲವೂ ಅರ್ಥವಾಗುವ ಹಾಗೆ ತುಂಬಾ ಸರಳವಾಗಿ ವಿವರಿಸಿದ್ದೀರಿ..ಸಿಪ್ಪೆ ಸುಲಿದು ತಿನ್ನಲು ನೀಡಿದ ಬಾಳೆಹಣ್ಣಿನ ರೀತಿಯಲ್ಲಿ...ನಿಮಗೆ ಕೃತಜ್ಞತೆಗಳು.

umesh desai said...

ಕಾಕಾ ನಿಮಗೂ ಹೊಸಾವರ್ಷದ ಶುಭಾಶಯಗಳು. "ಹೂತ ಹುಣಸೆ ಮರ" ಈ ಉಪಮಾನ ಎಷ್ಟು ಛಂದದ.
ಸೊಗಸಾದ ಕವಿತೆಯ ಸಾರ ಅಚ್ಛಾದಿಂದ ಉಣಬಡಿಸೀರಿ...ಧನ್ಯೊಸ್ಮಿ

sunaath said...

ನಾರಾಯಣ ಭಟ್ಟರೆ,
ಬೇಂದ್ರೆಯವರ ಕವನ ಎಂದರೆ ರಸಗವಳ. ಅದರ ರುಚಿಯನ್ನು ಸ್ವಲ್ಪಾದರೂ ನಿಮಗೆ ತಲುಪಿಸಿದರೆ ನಾನು ಧನ್ಯ.

sunaath said...

ಉಮೇಶ,
ಅಚ್ಛಾದ ಹುಡುಗರಿಗೆ/ಗೆಳೆಯರಿಗೆ ಅಚ್ಛಾ ತಿನಿಸನ್ನ ಉಣಿಸಬೇಕು, ಹೌದಲ್ಲೊ?

ಶ್ರೀನಿವಾಸ ಮ. ಕಟ್ಟಿ,Dublin,OH,USA said...

ಹೊಸ ವರ್ಷ ೨೦೧೧ ‘ಸಲ್ಲಾಪ’ದ ನಮಗೆಲ್ಲ ಶುಭ ತರಲಿ ! ನಿಮ್ಮಿಂದ ಹೊಸ ಆಯಾಮದ, ಹೊಸ ಹೊಸ ಲೇಖನಗಳನ್ನು ಬರೆಯಿಸಲಿ. ನಮಗೆಲ್ಲರಿಗೂ ಕನ್ನಡ ಸಾಹಿತ್ಯದ ಅಲೌಕಿಕ ಸೌಂದರ್ಯವನ್ನು ‘ಸಲ್ಲಾಪ’ದ ಮೂಲಕ ಪ್ರಕಟಿಸಿರಿ.

shivu.k said...

ಸುನಾಥ್ ಸರ್,

ಕಳೆದ ವಾರ ನಾನು ಊರಿಗೆ ಹೋಗಿದ್ದಾಗಲೂ ಹುಣಸೆ ಮರವನ್ನು ನೋಡಿದೆ. ಹೂವನ್ನು ನೋಡಲಾಗಲಿಲ್ಲ. ನಾನು ಊರಿನಲ್ಲಿದ್ದಷ್ಟು ದಿನವೂ ಎಷ್ಟು ಅರಾಮವಾಗಿದ್ದೆನೆಂದರೆ ಬೇಂದ್ರೆಯವರ ‘ಹೂತsದ ಹುಣಸಿ’ ಈಗ ನೆನಪಾಗುತ್ತದೆ. ಅ ಕವನದ ಬಗ್ಗೆ ತುಂಬಾ ಚೆನ್ನಾಗಿ ವಿಮರ್ಶಿಸಿ ಬರೆದಿದ್ದೀರಿ...
ಧನ್ಯವಾದಗಳು.

Shashi Dodderi said...

Dear sir,
wow, amazing writing. Bendre at his best and you managed to present and explain it exquisitely. Thanks. The blog brought tears of joy. You illustrated further with English poems. I would like to meet you once, wish to talk all night on Bendre.............. that would be wow.
If possible can you make one blog on Robert Frost, among many good poems this one "http://www.etymonline.com/poems/tramps.htm' I wish to read your commentary on this poem

ಸಿಂಧು sindhu said...

ಪ್ರಿಯ ಸುನಾಥ,

ಓದಿ ತುಂಬ ಮುದವೆನ್ನಿಸಿತು.
ನಾನೂ ಅಲ್ಲೆ ಹೂತ ಹುಣಸಿಯ ನೆಳ್ಳಲ್ಲೇ ಸುಳಿಧಾಂಗಾತು.
ಎಂತ ಕವಿ,ಎಂತ ಕವಿತೆ, ಎಂತ ವ್ಯಾಖ್ಯಾನ.
ಧನ್ಯೆ ನಾನು. ಓದಿ.
ನಮ್ಮ ಭಾವಕೋಶವನ್ನ ವಿಸ್ತರಿಸಿದ ಕವಿಯೂ, ಆ ವಿಸ್ತರಣೆಗೆ ನೇರ ಕಾರಣವಾದ ನಿಮ್ಮ ವ್ಯಾಖ್ಯಾನವೂ ಅನುಪಮ!

ಆದಷ್ಟು ಬೇಗ ಒಂದಿನ ಮುಕ್ತಿ ಇನ್ನೊಂದಿನ ಅಶ್ರು ಬಗ್ಗೆ ಬರೀರಿ.


ಪ್ರೀತಿಯಿಂದ
ಸಿಂಧು

sunaath said...

ಕಟ್ಟಿಯವರೆ,
"ಕೂಡಿ ಸವಿಯೋಣ,
ಕೂಡಿ ನಲಿಯೋಣ
ಕನ್ನಡ ಸಾಹಿತ್ಯ ಮಧುವ."
ಹೊಸ ವರ್ಷದ ಶುಭಾಶಯಗಳು.

sunaath said...

ಶಿವು,
ಹುಣಸಿ ಚಿಗುರನ್ನು ಮತ್ತೊಮ್ಮೆ ನೋಡಿದ ಬಳಿಕ ಕವನದ ಸವಿಯನ್ನು ಆಸ್ವಾದಿದಿರಿ.

sunaath said...

nostalgia,
ನಾನು ಇಂಗ್ಲಿಶ್ ಸಾಹಿತ್ಯದ ಅಧ್ಯಯನವನ್ನು ಮಾಡಿಲ್ಲ. ಹೀಗಾಗಿ
Robert Frostನ ಕವನದ ವ್ಯಾಖ್ಯಾನವನ್ನು ಬರೆಯಲು ನಾನು ಅರ್ಹ ವ್ಯಕ್ತಿಯಲ್ಲ ಎಂದು ನನ್ನ ಭಾವನೆ. ಏನೇ ಆದರೂ ಒಂದು ಉತ್ತಮ ಕವನದ ಲಿಂಕ್ ಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

sunaath said...

ಸಿಂಧು,
ನಿಮಗೆ ಧನ್ಯವಾದಗಳು. ನೀವು ಹೇಳಿದಂತೆ ಪ್ರಯತ್ನಿಸುತ್ತೇನೆ.

ಚುಕ್ಕಿಚಿತ್ತಾರ said...

ಕಾಕ..
ತು೦ಬಾ ಚ೦ದದ ವಿವರಣೆ. ಹಳ್ಳಿಗನ ರಸಿಕತನದ ವರ್ಣನೆಯಿ೦ದ ಮನಸ್ಸಿಗೆ ಚಳಿಯಲ್ಲಿ ಬೆಚ್ಚಗಾಯ್ತು..ಮತ್ತೆ ಬಿಸಿಲಿದ್ದಲ್ಲಿ ಶರಬತ್ತು... ಸಮಧಾತುವಾಯ್ತು.
ಸರಳವಾಗಿ ಅರ್ಥ ಮಾಡಿಸಿದ್ದೀರಿ.. ಥ್ಯಾ೦ಕ್ಸ್ ಕಾಕ..

sunaath said...

ವಿಜಯಶ್ರೀ,
ನಿಮ್ಮ ಪ್ರತಿಕ್ರಿಯಾತ್ಕಕ ವಿವರಣೆಯೂ ಸಹ ಅರ್ಥವತ್ತಾಗಿ ಇದೆ!

shridhar said...

ಕಾಕಾ .. ಬೇಂದ್ರೆಯವರ ಕವನಗಳನ್ನು ನಿಮ್ಮಷ್ಟು ಸರಳವಾಗಿ ವಿವರಿಸಿದವರನ್ನು ನಾಕಾಣೆ ..
ತುಂಬಾ ತುಂಬಾ ಚಂದದ ವಿವರಣೆ ...

ನಿಮಗೂ ಹೊಸ ವರುಷದ ಶುಭಾಶಯಗಳು ..

sunaath said...

ಶ್ರೀಧರ,
ನಿಮಗೂ ಸಹ ಧನ್ಯವಾದಗಳು ಹಾಗು ಹೊಸ ವರ್ಷ ಹಾರ್ದಿಕ ಶುಭಾಶಯಗಳು.

ವಸಂತ ಕುಮಾರ್ ಆರ್, ಕೋಡಿಹಳ್ಳಿ said...

ಅದ್ಭುತ ವಿವರಣೆ ಸರ್ ಓದಿ ಮನಸ್ಸಿಗೆ ಕುಶಿಯಾಯಿತು ನಿಮ್ಮ ಸಾಹಿತ್ಯ ಹೀಗೆಯೆ ಮುಂದುವರೆಯಲೆಂದು ಆಶಿಸುತ್ತ ನಿಮಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ ಧನ್ಯವಾದಗಳೊಂದಿಗೆ.....

ವಸಂತ್

sunaath said...

ವಸಂತ,
ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.

V.R.BHAT said...

ಬೇಂದ್ರೆಯವರನ್ನು ಛೇಡಿಸುವ ಸಲುವಾಗಿ ಹಿರೇಮಠರು ಹೇಳಿದರು ಎನ್ನುವುದಕ್ಕಿಂತ ಬೇಂದ್ರೆಯವರ ಬರೆಯುವ ಹವ್ಯಾಸಕ್ಕೆ ಅವರೊಂದು ಅನಿರೀಕ್ಷಿತ ಅವಕಾಶ ಒದಗಿಸಿದರು ಎಂದರೇ ಸರಿಯೇನೋ. ಕವಿಯೊಬ್ಬನ ಕಾವ್ಯಕ್ಕೆ ವಸ್ತುವಾಗಿ ವ್ಯಕ್ತಿಯೋ, ವಸ್ತುವೋ, ಸ್ಥಳವೋ ಹೀಗೇ ಯಾವುದೂ ನೆಪಮಾತ್ರವಾಗಿ ಕಂಡುಬರಬಹುದು. ಬಡರೈತನ ಹಗಲುಗನಸು ಒಂದೆಡೆಯಾದರೆ ಯಾವುದು ಸ್ಥಿರ ಮತ್ತು ಯಾವುದು ಅಸ್ಥಿರವೆಂಬ ಆಧ್ಯಾತ್ಮಿಕ ಆಯಾಮವನ್ನೂ ಬಿಸಿಲಿನೊಂದಿಗೆ ಹೋಲಿಸಿದ ಕವಿಗಳ ಕಾವ್ಯದ ಅರ್ಥವ್ಯಾಪ್ತಿ ಗಂಭೀರ. ಆಳಕ್ಕೆ ಇಳಿದಷ್ಟು ಇನ್ನೂ ಆಳ, ಅಗಲ-ವಿಸ್ತಾರವಾಗಿ ತೋರುವ ಕವನದ ಗಹನತೆಗೆ ತಮ್ಮ ಭಾಷ್ಯ ಬಲುಸೊಗಸು. ಊಟದಲ್ಲಿ ಮಧ್ಯೆ ಆಗಾಗ ಆಗಾಗ ಉಪ್ಪಿನಕಾಯಿ ನೆಕ್ಕಿಕೊಂಡಂತೇ ಬೇಂದ್ರೆಯವರ ಕಾವ್ಯಸಾರವನ್ನು ಹಂಚುತ್ತಿರುವ ತಮಗೆ ನನ್ನೊಳಗಿನವ ಅಡ್ಡಬಿದ್ದಿದ್ದಾನೆ. ಹಸಿ ಕಾಯಿತುರಿಗೆ ಪುಟ್ಬಾಳೇಹಣ್ಣು
ಕಿವುಚಿ ಬೆಲ್ಲಸೇರಿಸಿ ಮೆದ್ದರೆ ಸಿಗುವ ಆನಂದವನ್ನು ಅನುಭವಿಸುವ ಹೂರಣವನ್ನು ತಮ್ಮ ಲೇಖನ ಒದಗಿಸುತ್ತಿದೆ. ನಿಮ್ಮ ಈ ಕಾರ್ಯ ನಿರಂತರವಾಗಿ ನಡೆಯಲಿ ಎಂಬ ಆಶಯದೊಂದಿಗೆ ಮತ್ತೊಮ್ಮೆ ತಮಗೆ ನಮಸ್ಕರಿಸಿ ಮುಂದಿನ ಭಾಷ್ಯವನ್ನೂ ಮತ್ತು ಸನ್ನಿವೇಶವನ್ನೂ ನಿರೀಕ್ಷಿಸುತ್ತೇನೆ.

prabhamani nagaraja said...

ಅದ್ಭುತ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬೇ೦ದ್ರೆಯವರ ಕಾವ್ಯದ ಸೊಗಸು ಅನನ್ಯವಾಗಿದೆ.

sunaath said...

ಭಟ್ಟರೆ,
ನಿಮ್ಮ ಸಂವಾದಕ್ಕೆ ಧನ್ಯವಾದಗಳು. ಬೇಂದ್ರೆಯವರ ಕವನಕ್ಕೆ ಭಾಷ್ಯ ಬರೆಯುವ ಯೋಗ್ಯತೆ ನನ್ನದಲ್ಲ. ನನಗೆ ತಿಳಿದಷ್ಟನ್ನು ನಿಮ್ಮ ಎದುರಿಗೆ ಇಡುತ್ತ ಬಂದಿದ್ದೇನೆ! ಈ ಪ್ರಯತ್ನವನ್ನು ಮುಂದುವರಿಸುತ್ತೇನೆ.

sunaath said...

ಪ್ರಭಾಮಣಿವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

ಕಾಕ
ಅಭಿನ೦ದನೆಗಳು.
”ಸಲ್ಲಾಪ” ಅನ್ನು ಉದಯವಾಣಿ ಪತ್ರಿಕೆಯವರು ಪರಿಚಯಿಸಿ ತಮ್ಮ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸಿಕೊ೦ಡಿದ್ದಾರೆ.http://i.ixnp.com/images/v6.53/t.gif

sunaath said...

ವಿಜಯಶ್ರೀ,
ಮಾಹಿತಿಗಾಗಿ ಅನೇಕ ಧನ್ಯವಾದಗಳು. ಅಲ್ಲಿ ನೋಡುವೆ.

Mahantesh said...

ಸುನಾಥ ಕಾಕಾ,

ಹುಣಸಿ ಗಿಡದ ಮ್ಯಾಗು ಬೇಂದ್ರೆಯವರ ಕವನ. ಇಲ್ಲಿ ಬಳಿಸಿದ ಎಲ್ಲಾ ಪದಗಳು ನಮ್ಮ ಉತ್ತರ ಕರ್ನಾಟಕದ ಆಡುಭಾಷೆಯ ಪದಗಳು.....
ನಿವ್ವಂದದ್ದು ಸರಿ, "ಉಪಮೆಗಳನ್ನು ಕೊಡುವದರಲ್ಲಿ ಬೇಂದ್ರೆಯವರು ಕಾಲಿದಾಸನಿಗೆ ಸರಿಸಾಟಿ".

ಮತ್ತ ಅವರ ಜೊಡುಪದಗಳ ಬಳಕಿ ಮತ್ತು ವಿವಿಧಾರ್ಥಗಳ ಬೇಂದ್ರೆ ಅಜ್ಜನಿಗೆ ,ಅವರೇ ಸರಿಸಾಟಿ.

ನಿಮಗೂ ಸಹಾ ಹೊಸ ವರುಷದ ಹಾರ್ಧಿಕ ಶುಭಾಶಯಗಳು.

Subrahmanya said...

ಭಾವಾರ್ಥವನ್ನು ಓದಿದ ನಂತರ ಕವನದ ಹೆಚ್ಚುಗಾರಿಕೆ ತಿಳಿಯಿತು. ಬೇಂದ್ರೆಯವರಂತಹ ಅನುಪಮ ಭಾವಜೀವಿಗಳು ಸಾಹಿತ್ಯ ಲೋಕಕ್ಕೆ ಬೇಕಾಗಿದ್ದಾರೆ ಎನಿಸುತ್ತಿದೆ. ನಿಮ್ಮ ವಿವರಣೆಯೂ ಎಂದಿನಂತೆ ಸರಳ ಮತ್ತು ಸ್ವಾಭಾವಿಕವಾಗಿ ಮೂಡಿ ಬೇಂದ್ರೆಯವರ ಕಾವ್ಯಾರ್ಥವನ್ನು ತಿಳಿಯಲು ಸಹಕಾರಿಯಾಯಿತು.

’ದೊಂಬರಾಟ’ ವೂ ಸರಿಯಿರಬಹುದೇ ? ಅಥವಾ "ಡೊಂಬ" ವೇ ಸರಿಯೇ ?

sunaath said...

ಮಹಾಂತೇಶ,
ಬೇಂದ್ರೆಯವರು ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಎಲ್ಲ ಪದಗಳನ್ನೂ ತಮ್ಮ ಸಾಹಿತ್ಯದಲ್ಲಿ (ಕಾವ್ಯ,ನಾಟಕ,ಗದ್ಯ) ಬಳಸಿದಂತೆ ತೋರುತ್ತದೆ. ಬಹುಶಃ ಅವರಷ್ಟು ವಿಭಿನ್ನ ಪದಗಳನ್ನು ಬಳಸಿದ ಮತ್ತೊಬ್ಬ ಕವಿ ಇರಲಿಕ್ಕಿಲ್ಲ. ಹುಣಸಿ ರವಷ್ಟೇ ಅಲ್ಲ, ಹೇಸಿಗೆ ಹೂವನ್ನೂ ಸಹ ಅವರು ಉದಾಸೀನ ಮಾಡಿ ಬಿಟ್ಟಿಲ್ಲ. ಅವರ ‘ಪಾತರಗಿತ್ತಿ ಪಕ್ಕಾ’ದಲ್ಲಿ ಬರುವ ಈ ಸಾಲುಗಳನ್ನು ನೋಡಿರಿ:
"ಹೇಸಿಗೆ ಹೂವ ಬಳಿಗೆ
ಹೋಗಿ ಒಂದs ಗಳಿಗೆ."

sunaath said...

ಪುತ್ತರ್,
ದೊಂಬ ಹಾಗು ಡೊಂಬ ಎರಡೂ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಕರ್ನಾಟಕ ಹಾಗು ಮಹಾರಾಷ್ಟ್ರದಲಿರುವ ಕೆಲವು ಹಳ್ಳಿಗಳು ಈ ಕುಲದ ನಿವಾಸಸ್ಥಾನಗಳಾಗಿದ್ದವು.
ಉದಾಹರಣೆಗೆ, ಗದಗ ಜಿಲ್ಲೆಯಲ್ಲಿರುವ ಹಳ್ಳಿ ‘ಡಂಬಳ’ವು
’ಡೊಂಬಹಾಳ’ದಿಂದ ಬಂದಿದೆ. ಅದರಂತೆ ಮುಂಬಯಿ ಮಹಾನಗರದಲ್ಲಿರುವ ‘ಡೊಂಬಿವಿಲಿ’ಯು ‘ಡೊಂಬವಳ್ಳಿ’ಯ ಅಪಭ್ರಂಶ. ಆದುದರಿಂದ ‘ಡೊಂಬ’ ಪದಕ್ಕೆ ಹೆಚ್ಚಿನ ಪ್ರಾಚುರ್ಯ ಇರಬಹುದು ಎಂದು ಎನಿಸುತ್ತದೆ.

ಅನಿಕೇತನ ಸುನಿಲ್ said...

ಹೊಸ ವರ್ಷದ ಆರಂಭದಲ್ಲಿ ಸುಂದರ ಕವನ ಪರಿಚಯಿಸಿ ವಿವರಿಸಿದ್ದೀರಿ..ತಮಗೆ ನನ್ನ ನಮನಗಳು ಹಾಗು ಶುಭಾಶಯಗಳು.
ಸುನಿಲ್.

sunaath said...

ಸುನಿಲ,
ವರ್ಷಾರಂಭವನ್ನು ಹೂತ ಹುಣಸಿಯ ಮರದ ಕೆಳಗೆ ಮಾಡಿಸಿದ ಬೇಂದ್ರೆಯವರಿಗೆ ನಮ್ಮೆಲ್ಲರ ಕೃತಜ್ಞತೆಗಳು ಸಲ್ಲುತ್ತವೆ. ನಿಮಗೆ ಹೊಸ ವರ್ಷದ ಶುಭಾಶಯಗಳು.

ಮನಸಿನಮನೆಯವನು said...

ಎಂತಹ ಸೊಗಸಾದ ಸಾಲುಗಳು..
ತಮಗೂ ಶುಭಾಶಯಗಳು... ೨೦೧೧ರಲ್ಲಿ ಸವಿಕ್ಷಣಗಳು ಎದುರಾಗಲಿ..

sunaath said...

ಗುರುಪ್ರಸಾದರೆ,
ನಿಮಗೆ ಧನ್ಯವಾದಗಳು.

ಆನಂದ said...

ಕಾಕಾ, ಎಂದಿನಂತೆ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದೀರ.
ನಿಮ್ಮ ಲೇಖನಗಳನ್ನು ಸಮಾಧಾನವಾಗಿ ಓದಬೇಕೆಂದು ಇಲ್ಲಿಯವರೆಗೂ ಕಾದಿದ್ದು ಈಗ ಓದಿ ಮುಗಿಸಿದೆ :)
ಹೊಸ ವರ್ಷದ ಶುಭಾಶಯಗಳು

sunaath said...

ಆನಂದ,
ಧನ್ಯವಾದಗಳು ಹಾಗು ಹೊಸ ವರ್ಷದ ಶುಭಾಶಯಗಳು.

ಮನಮುಕ್ತಾ said...

ಕಾಕ,
ಬೇ೦ದ್ರೆಯವರ ಅಮೋಘ ಕಾವ್ಯ ಪ್ರತಿಭೆ... ಅದನ್ನು ನಿಮ್ಮ ಅದ್ಭುತ ಶಬ್ದ ಭ೦ಡಾರದ ಮೂಲಕ ಪರಿಚಯಿಸಿ ವರ್ಣಿಸಿದ ಬಗೆಗೆ ಏನು ಬರೆಯಲಿ?
ಅಮೋಘ....ಅದ್ಭುತ.......!!!

sunaath said...

ಮನಮುಕ್ತಾ,
ಧನ್ಯವಾದಗಳು.

ಡಾ. ಚಂದ್ರಿಕಾ ಹೆಗಡೆ said...

kavigu ommomme enu bareyali ... anisuvaduu ide... aa sadbhaavada herigege.. odu huuta hunasi maravaadaruu saaku.. ennuva bendre bhaava kaviya kalaatmakatege ondu nidarshana. kavi kriyaasheela ennuvadu bendre niluvu.. byaasarike harisaaka hechchigenu beekaa?....