ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯನ್ನು ಅಂತರಜಾಲದಲ್ಲಿ ತರಲು ಶ್ರೀ ಮಂಜುನಾಥರು ಪ್ರೇರಕರಾದ ಬಳಿಕ, ಅವರ ಪ್ರಯತ್ನದಲ್ಲಿ ಅಳಿಲುಸೇವೆಯನ್ನು ಸಲ್ಲಿಸುವ ಸುಯೋಗ ನನಗೂ ದೊರಕಿತು. `ಕುಮಾರವ್ಯಾಸ ಭಾರತ'ದ ಕೆಲ ಭಾಗಗಳನ್ನು ಮತ್ತೊಮ್ಮೆ ಓದಲು ಇದರಿಂದ ನನಗೆ ಅನುಕೂಲ ಒದಗಿ ಬಂದಿತು. ಹೀಗೆ ಓದುತ್ತಿರುವಾಗ ನನ್ನನ್ನು ಬಹುವಾಗಿ ಆಕರ್ಷಿಸಿದ ನುಡಿ ಎಂದರೆ ಈ ಮಹಾಕಾವ್ಯದ ಪ್ರಪ್ರಥಮ ನುಡಿ. ಆದಿಪರ್ವದ ಮೊದಲ ಸಂಧಿಯ ಆ ಮೊದಲ ನುಡಿ ಹೀಗಿದೆ:
ಶ್ರೀವನಿತೆಯರಸನೆ, ವಿಮಲ ರಾ
ಜೀವಪೀಠನ ಪಿತನೆ, ಜಗಕತಿ
ಪಾವನನೆ, ಸನಕಾದಿ ಸಜ್ಜನನಿಕರದಾತಾರ|
ರಾವಣಾಸುರಮಥನಶ್ರವಣಸು
ಧಾವಿನೂತನ ಕಥನಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ||
ಕುಮಾರವ್ಯಾಸನು ತನ್ನ ಮಹಾಕಾವ್ಯದ ಪ್ರಾರಂಭವನ್ನು ಸಂಪ್ರದಾಯಕ್ಕನುಸಾರವಾಗಿ ದೇವತಾಸ್ತುತಿಯೊಡನೆ ಮಾಡುತ್ತಾನೆ. ಕರ್ಣಾಟಭಾರತದ ಸೂತ್ರಧಾರನು ಶ್ರೀಕೃಷ್ಣನೇ ತಾನೆ. ಆದುದರಿಂದ ಶ್ರೀಕೃಷ್ಣನ ಅಂದರೆ ನಾರಾಯಣನ ಸ್ತುತಿಯಿಂದ ಭಾರತವು ಪ್ರಾರಂಭವಾಗುತ್ತದೆ. ಅಲ್ಲದೆ ನಾರಾಯಣನು ಆದಿಪುರುಷನು. ಆದುದರಿಂದ ಅವನಿಗೇ ಅಗ್ರಪೂಜೆ ಸಲ್ಲಬೇಕು. ಈ ನಾರಾಯಣನು ಲಕ್ಷ್ಮಿಯಿಂದ ಅಭೇದನಾದವನು. ಆದುದರಿಂದ ಲಕ್ಷ್ಮೀಸಹಿತನಾದ ನಾರಾಯಣನನ್ನೇ ಯಾವಾಗಲೂ ಸ್ಮರಿಸಬೇಕು. ಈ ಲಕ್ಷ್ಮಿಯಾದರೊ ಸಕಲ ಕಲಾಸಂಪನ್ನಳು, ಸಕಲವಿಭೂತಿರೂಪಳು. ಅರ್ಥಾತ್ ಅವಳು ನಾರಾಯಣನ ‘ಶ್ರೀ’. ಆದುದರಿಂದ ನಾರಾಯಣಸ್ತುತಿಯು ಶ್ರೀಲಕ್ಷ್ಮೀಸಹಿತನಾದ ನಾರಾಯಣನ ಅಂದರೆ ‘ಶ್ರೀವನಿತೆಯ ಅರಸ’ನ ಸ್ತುತಿಯೇ ಆಗಿದೆ.
ಆದಿಪುರುಷನಾದ ಈ ನಾರಾಯಣನು ಸಕಲ ಸೃಷ್ಟಿಗೆ ಮೊದಲು ಬ್ರಹ್ಮನಿಗೆ ಜನ್ಮ ನೀಡಿದನು. ಆದುದರಿಂದ ಕುಮಾರವ್ಯಾಸನು ಸೃಷ್ಟಿಮೂಲನಾದ ಬ್ರಹ್ಮನ ತಂದೆ ಎಂದು ನಾರಾಯಣನನ್ನು ಸಂಬೋಧಿಸುತ್ತಾನೆ. ಈ ಬ್ರಹ್ಮನ ಸೃಷ್ಟಿಯು ಸತ್ವ, ರಜಸ್ ಹಾಗು ತಮಸ್ ಎನ್ನುವ ತ್ರಿಗುಣಗಳಿಂದ ಕೂಡಿದೆ. ನಾರಾಯಣನು ತ್ರಿಗುಣಾತೀತನು. ಆದುದರಿಂದ ಈತನು ಜಗಕತಿ ಪಾವನನು.
ಸೃಷ್ಟಿ, ಸ್ಥಿತಿ ಹಾಗು ಸಂಹಾರ ಇವು ಭಗವಂತನು ಮಾಡುವ ಮೂರು ಕ್ರಿಯೆಗಳು. ಇವುಗಳಲ್ಲಿ ಮೊದಲನೆಯದಾದ ಸೃಷ್ಟಿಕ್ರಿಯೆಯ ಕಾರಣಪುರುಷನಾದ ನಾರಾಯಣನನ್ನು ಕುಮಾರವ್ಯಾಸನು ಮೇಲೆ ಬಣ್ಣಿಸಿದನು. ಎರಡನೆಯದು ಸ್ಥಿತಿ ಅಥವಾ ಸಂರಕ್ಷಣೆ. ತನ್ನ ಭಕ್ತರಾದ ಸನಕ ಮೊದಲಾದ ಸಜ್ಜನರಿಗೆ ಅನುಗ್ರಹಿಸುವ ಮೂಲಕ ಭಗವಂತನು ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಾನೆ. ಈ ಭಕ್ತರಿಗೆ ಕುಮಾರವ್ಯಾಸನು ‘ಸಜ್ಜನ’ ಎನ್ನುವ ವಿಶೇಷಣವನ್ನು ಜೋಡಿಸುತ್ತಾನೆ. ಸದಾಕಾಲವೂ ಭಗವಚ್ಚಿಂತನೆಯಲ್ಲಿ ಮುಳುಗಿರುತ್ತ, ಸತ್ಸಂಗವಾಸಿಗಳಾದವರೇ ಸತ್+ಜನರು=ಸಜ್ಜನರು. ಇವರು ಭಗವಂತನ ಸ್ಮರಣೆಯ ಸುಖವನ್ನು ಬಿಟ್ಟು ಮತ್ತೇನನ್ನೂ ಅಪೇಕ್ಷಿಸುವದಿಲ್ಲ. ಭಗವಂತನು ಇವರಿಗೆ ಭಕ್ತಿಸುಖದ ಹೊರತಾಗಿ ಬೇರೆ ಏನನ್ನೂ ಕೊಡುವದೂ ಇಲ್ಲ! ಅವರ ನಿಕರಕ್ಕೆ ಅಂದರೆ ಬಳಗಕ್ಕೆ ಬೇಕಾದ್ದನ್ನು ಕೊಡುವ ‘ದಾತಾರ’ ಇವನು. ಇದೇ ಭಗವಂತನ ಸಂರಕ್ಷಣಾ ಕ್ರಿಯೆ.
ಮೂರನೆಯದು ಸಂಹಾರಕ್ರಿಯೆ. ಅನವರತವೂ ನಡೆಯುತ್ತಿರುವ ಮೃತ್ಯುವೇ ಸಂಹಾರಕಾರ್ಯ ಎನಿಸಬಹುದು. ಆದರೆ ಭಗವಂತನು ತಮೋಗುಣದ ಸಂಹಾರವನ್ನು ಪ್ರಕಟವಾಗಿ ಮಾಡುವದನ್ನು ಕುಮಾರವ್ಯಾಸನಿಗೆ ತೋರಿಸಬೇಕಾಗಿದೆ. ಇದರಿಂದ ‘ಶಿಷ್ಟರಕ್ಷಕ ಹಾಗು ದುಷ್ಟಸಂಹಾರಕ’ ಎನ್ನುವ ಭಗವಂತನ ಬಿರುದೂ ಸಾರ್ಥಕವಾಗುವದು. ಈ ಎರಡು ಕಾರ್ಯಗಳನ್ನು ಮಾಡಿದವನು ಕೃಷ್ಣನಿಗೂ ಮೊದಲಿನ ಅವತಾರವಾದ ಶ್ರೀರಾಮಚಂದ್ರನು. ಅಲ್ಲದೆ ಮಹಾಭಾರತಕ್ಕಿಂತ ಮೊದಲೇ ರಾಮಾಯಣವು ಆದಿಕವಿ ವಾಲ್ಮೀಕಿಯಿಂದ ರಚಿಸಲ್ಪಟ್ಟಿತು. ಆ ಆದಿಕವಿಯನ್ನು ಪರೋಕ್ಷವಾಗಿ ನೆನಸುತ್ತ, ರಾಮಾಯಣದ ಕಾರಣಪುರುಷನಾದ ಶ್ರೀರಾಮಚಂದ್ರನನ್ನು ಕುಮಾರವ್ಯಾಸನು ಸ್ತುತಿಸುತ್ತಾನೆ.
ಈ ರೀತಿಯಾಗಿ ಸೃಷ್ಟಿ, ಸ್ಥಿತಿ ಹಾಗು ಸಂಹಾರಕಾರ್ಯಗಳಲ್ಲಿ ತೊಡಗಿಕೊಂಡ, ಶ್ರೀಸಹಿತನಾದ ಆದಿಪುರುಷ ನಾರಾಯಣನಿಗೆ ಪ್ರಾರ್ಥನೆ ಸಲ್ಲಿಸುವದರೊಂದಿಗೆ ಕರ್ಣಾಟಭಾರತ ಕಥಾಮಂಜರಿಯು ಪ್ರಾರಂಭವಾಗುತ್ತದೆ. ಈ ಸ್ತುತಿಪದ್ಯದ ಮುಕ್ತಾಯವು ‘ಗದುಗಿನ ವೀರನಾರಾಯಣನು ಆನತಜನರನ್ನು ಅಂದರೆ ಭಕ್ತರನ್ನು ಕಾಯಲಿ’ ಎಂದು ಮುಕ್ತಾಯವಾಗುತ್ತದೆ. ಇಲ್ಲಿ ‘ಗದುಗಿನ ವೀರನಾರಾಯಣ’ ಎನ್ನುವ ನಿರ್ದಿಷ್ಟ ದೇವತೆ ಏಕೆ ಬೇಕಾಯಿತು? ಇದಕ್ಕೆ ಅನೇಕ ಕಾರಣಗಳಿವೆ. ಗದುಗಿನ ವೀರನಾರಾಯಣನು ಕುಮಾರವ್ಯಾಸನ ಕುಲದೇವತೆಯೊ ಅಥವಾ ಇಷ್ಟದೇವತೆಯೊ ಆಗಿರಬಹುದು. ಅದಕ್ಕಿಂತ ಮುಖ್ಯವಾಗಿ ಅನಾದಿಪುರುಷನ ಅನಂತಸೃಷ್ಟಿಯಿಂದ ಪ್ರಾರಂಭವಾದ ಈ ಸ್ತುತಿಯು ಒಂದು ನಿರ್ದಿಷ್ಟ ಗ್ರಾಮದಲ್ಲಿ, ನಿರ್ದಿಷ್ಟ ದೇವತೆಯಲ್ಲಿ ಕೇಂದ್ರೀಕೃತಗೊಳ್ಳುವದರೊಂದಿಗೆ ಮುಕ್ತಾಯವಾಗುತ್ತದೆ. ಇದು ಸನಾತನ ಧರ್ಮದ ವೈಶಿಷ್ಟ್ಯವೇ ಆಗಿದೆ. ಆಧುನಿಕ ಧರ್ಮಗಳಲ್ಲಿ ದೇವರು ಅಮೂರ್ತನು ಹಾಗು ಅಜ್ಞೇಯನು. ಆದರೆ ಸನಾತನ ಧರ್ಮದ(ಗಳ)ಲ್ಲಿ ದೇವರ ತೀವ್ರ ವೈಯಕ್ತೀಕರಣವಿದೆ.
ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯ ಮೊದಲ ಸಂಧಿಯ ಸ್ತುತಿಪದ್ಯವೇ ಇಷ್ಟೆಲ್ಲ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪೂರ್ಣ ಕಾವ್ಯವನ್ನು ಸವಿದ ಓದುಗನಿಗಂತೂ ಕಾವ್ಯಸೌಂದರ್ಯದ ಮಹಾಪ್ರವಾಹದಲ್ಲಿ ತೇಲುತ್ತಿರುವ ಅನುಭವವಾಗುತ್ತದೆ. ಇಂತಹ ಮಹಾಕವಿ ತನ್ನನ್ನು ‘ಹಲಗೆ ಬಳಪವ ಪಿಡಿಯದವ’ ಎಂದು ಕರೆದುಕೊಳ್ಳುತ್ತಾನೆ! ಆ ಕವಿಗೆ ನನ್ನ ಅನಂತ ನಮನಗಳು. ಆ ಮಹಾಕಾವ್ಯದ ಓದುಗರನ್ನು ಗದುಗಿನ ವೀರನಾರಾಯಣನು ಅನವರತವೂ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ.
‘ಕಾವುದಾನತ ಜನವ ಗದುಗಿನ ವೀರನಾರಯಣ’.
34 comments:
ಕಾಕಾ,
ಇಷ್ಟು ಚಂದದ ವಿವರ ಕೊಟ್ಟದ್ದಕ್ಕೆ ತುಂಬಾ ಥಾಂಕ್ಸ್ !
ಪ್ರೀತಿಯಿಂದ,
ಅರ್ಚನಾ
ಸುನಾಥ್ ಕಾಕಾ,
ಕುಮಾರವ್ಯಾಸ ಭಾರತದ ಮೊದಲ ನುಡಿಯಲ್ಲೇ ಇಷ್ಟೆಲ್ಲಾ ವಿಶೇಷಗಳನ್ನು ನೋಡಿದ ಮೇಲೆ, ಇನ್ನೂ ಹೆಚ್ಚು ತಿಳಿಯುವ ಹಂಬಲ ಉಂಟುಮಾಡಿದ್ದೀರಿ.
ಮುಂದಿನ ನುಡಿಗಳನ್ನು ಆಗಾಗ ನಮಗೆ ಈ ರೀತಿ ಅರ್ಥೈಸಬೇಕೆಂದು ಕೋರಿಕೆ.
ಧನ್ಯವಾದಗಳು.
kumaaravyaasana daivabhakti kuritu helalu idondu padyavve saakeno...
nannadondu koorike hige ondonde kannada halegannda kaavyagalannu arthmaadisi namage... plz...
mundina baravanige kaaytaa irtini....
ಅರ್ಚನಾ,
ಪ್ರೀತಿಯಿಂದ ಓದಿ, ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ಅಪ್ಪ-ಅಮ್ಮ,
ನನಗೆ ಕಂಡ ಸೊಬಗನ್ನು ನಿಮ್ಮೊಡನೆ ಹಂಚಿಕೊಳ್ಳುವದರಲ್ಲಿಯೇ ನನಗೆ ಸುಖವಿದೆ.
ಚಂದ್ರಿಕಾ,
ಕುಮಾರವ್ಯಾಸನು ಪರಮ ಕೃಷ್ಣಭಕ್ತನು. ಕರ್ಣಾಟಭಾರತ ಕಥಾಮಂಜರಿಯು ಕೃಷ್ಣಲೀಲೆಯ ಕತೆಯೇ ಆಗಿದೆ!
ಕುಮಾರವ್ಯಾಸನ ಕರ್ನಾಟ ಭಾರತದ ಮೊದಲ ಸ೦ಧಿಯ ಸ್ತುತಿಪದ್ಯದ ವಿಶ್ಲೇಷಣೆ ಚೆನ್ನಾಗಿದೆ. ಅರ್ಥವತ್ತಾಗಿದೆ.
ಕುಮಾರವ್ಯಾಸ ಭಾರತದ ಈ ಪ್ರಾರ೦ಭಿಕ ಪದ್ಯವನ್ನು ಆಲಿಸುವುದೇ ಒ೦ದು ರೋಮಾ೦ಚಕ ವಿಚಾರ. ಗಮಕ ಧಾಟಿಯಲ್ಲಿ ಕೇಳುವುದು ಮತ್ತೂ ಸೊಗಸು. ಆಗಾಗ ಕೇಳುವ ಸೌಭಾಗ್ಯ ನನಗೆ ಸಿಕ್ಕುತಿರುತ್ತದೆ. ನಮ್ಮೊಡನೆ ಈ ವಿಚಾರ ಹ೦ಚಿಕೊ೦ಡ ಸುನಾತ್ ಸರ್ ತಮಗೆ ಧನ್ಯವಾದಗಳು.
ಅನ೦ತ್
ಸುನಾಥ್ ಕಾಕಾ,
ಕುಮಾರ ವ್ಯಾಸ ಭಾರತದ ನುಡಿಗೆ ನೀಡಿದ ಸು೦ದರವಾದ ಅರ್ಥ ವಿಷ್ಲೇಷಣೆಯನ್ನು ಓದಿ ಖುಶಿಯಾಯ್ತು..ಧನ್ಯವಾದಗಳು.
ಪರಾಂಜಪೆಯವರೆ,
ಮೊದಲ ನುಡಿಯಲ್ಲಿಯೇ ಕುಮಾರವ್ಯಾಸನು ತನ್ನ ಮಹಾಕಾವ್ಯದ ಹರಹನ್ನು ತೋರಿಸಿದ್ದಾನೆ. ಮುಂದಿನ ನುಡಿಗಳು ಸಮುದ್ರಯಾನದಂತಿವೆ.
ಅನಂತರಾಜರೆ,
ಕುಮಾರವ್ಯಾಸ ಭಾರತವನ್ನು ಆಗಾಗ ಆಲಿಸಲು ನಿಮಗೆ ಅವಕಾಶ ಸಿಗುತ್ತಿದ್ದರೆ, ನೀವೇ ಧನ್ಯರು. ಭಾರತದ ಮೊದಲ ನುಡಿಯೇ ತನ್ನ ಧೀಮಂತಿಕೆಯ ಮೂಲಕ ನಮ್ಮ ಮನವನ್ನು ಸೆಳೆಯುತ್ತದೆ.
ಮನಮುಕ್ತಾ,
ಆ ಮಹಾಕವಿಯು ಮೊದಲ ನುಡಿಯಲ್ಲಿಯೇ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾನೆ. ಬೆರಗುಪಡುತ್ತ ಸವಿಯುವದೊಂದೇ ನಮ್ಮ ಕಾರ್ಯ!
".. ಆಕರ್ಷಿಸಿದ ನುಡಿ ಎಂದರೆ ಈ ಮಹಾಕಾವ್ಯದ ಪ್ರಪ್ರಥಮ ನುಡಿ..."
ಗುರುಗಳೇ ನೀವು ಪತ್ರಿಕೆಗಳಲ್ಲಿ ಬರುವ ತಪ್ಪುಗಳನ್ನು ಎತ್ತಿ ತೋರಿಸುವ ನೀವು ಈ ತಪ್ಪು ಮಾಡಬಹುದೇ?
ಪ್ರಪ್ರಥಮ ...ಯಾವ ಸೀಮೆ ಕನ್ನಡ ಇದು. ಅತ್ತಗೆ ಸಂಸ್ಕ್ರುತನೂ ಅಲ್ಲ ಇತ್ತಗೆ ಕನ್ನಡನೂ ಅಲ್ಲ....ತ್ರಿಶಂಕು ಪದ....!!! ’ಮೊತ್ತಮೊದಲು’ ಅನ್ನಕ್ಕೆ ಏನು? ಅತ್ವ ಬರಿ ’ಪ್ರಥಮ’ಅನ್ನಬಹುದಿತ್ತು.
’ಪ್ರಪ್ರಥಮ’ - ಈ ಪದ ಯಾವ ಸಂಸ್ಕ್ರುತ ಪದನೆರಕೆಯಲ್ಲಿ ಹುಡುಕಿದರೂ ಸಿಗಲ್ಲ
ಭರತ,
‘ಪ್ರಪ್ರಥಮ’ ಪದದಲ್ಲಿ ‘ಪ್ರ’ವನ್ನು ‘ಪ್ರಥಮ’ ಪದಕ್ಕೆ ವಿಶೇಷಣವಾಗಿ ಬಳಸಲಾಗಿದೆ. ಹೀಗಾಗಿ ನಿಮಗೆ ಇದು ಯಾವುದೇ ಅರ್ಥಕೋಶದಲ್ಲಿ ಸಿಗಲಾರದು. ‘ಪ್ರಪ್ರಥಮ’ ಪದವು ವ್ಯಾಕರಣನಿಯಮಗಳಿಗೆ ಅನುಸಾರವಾಗಿಯೇ ಇದೆ. ದಯವಿಟ್ಟು ವ್ಯಾಕರಣಶಾಸ್ತ್ರದ ಅಭ್ಯಾಸ ಮಾಡಿ ಎಂದು ವಿನಂತಿಸುತ್ತೇನೆ.
ಚ೦ದದ ವಿವರಣೆ...ಧನ್ಯವಾದಗಳು
ಸುನಾಥರೇ, ನಿರ್ದಿಷ್ಟವಾಗಿ ಈ ಲೇಖನಕ್ಕೆ ನಾನು ತಮಗೆ ಅಭಾರಿಯಾಗಿರಬೇಕು, ಏಕೆಂದರೆ ನನ್ನ ಬಹುದಿನದ ಕೋರಿಕೆ ಇಂದು ಹೂಬಿಟ್ಟಿದೆ. ಅದು ಬೇಗನೇ ಹೀಚಾಗಿ, ಕಾಯಾಗಿ ಹಣ್ಣಾಗುವುದನ್ನು ನಿರೀಕ್ಷಿಸುತ್ತೇನೆ.
ತಮ್ಮ ಮಾತಿಗೆ ಒಂದು ತಿದ್ದುಪಡಿ; "ಅಳಿಲುಸೇವೆಯನ್ನು ಸಲ್ಲಿಸುವ ಸುಯೋಗ ನನಗೂ ದೊರಕಿತು" - ಅಲ್ಲ, "ದೊರೆತಿದೆ", ಮತ್ತು ಅದು ಅಳಿಲು ಸೇವೆಯೂ ಅಲ್ಲ, ಬಹುದೊಡ್ಡ ಕೊಡುಗೆಯೇ ಸರಿ. ಈ ದಿಸೆಯಲ್ಲಿ ನಮ್ಮ ಧಾರವಾಡದ ಸಂಭಾಷಣೆಯನ್ನು ತಮಗೆ ನೆನಪಿಸಬಯಸುತ್ತೇನೆ.
ನಿಮ್ಮ ನೇತೃತ್ವದಲ್ಲಿ ಗದುಗಿನಭಾರತದ ಯೋಜನೆಯ ಮುಂದಿನ ಹಂತ ರೂಪುಗೊಳ್ಳುವುದನ್ನು ನೋಡಲು ಉತ್ಸುಕನಾಗಿದ್ದೇನೆ.
ಧನ್ಯವಾದಗಳು
"...‘ಪ್ರಪ್ರಥಮ’ ಪದದಲ್ಲಿ ‘ಪ್ರ’ವನ್ನು ‘ಪ್ರಥಮ’ ಪದಕ್ಕೆ ವಿಶೇಷಣವಾಗಿ ಬಳಸಲಾಗಿದೆ..."
ಸಾರ್. ಹಾಗೆ ಬಳಸುವುದು ಕನ್ನಡದ ಪದಗಳಿಗೆ ಒಗ್ಗುತ್ತದೆ ಸಂಸ್ಕ್ರುತದ ಪದಗಳಿಗೆ ಒಗ್ಗುವುದಿಲ್ಲ. ಅದು ಕನ್ನಡ ಪದಗಳನ್ನು ಕಟ್ಟುವ ರೀತಿ. ನೀವು ಹೇಳುವ ಈ ಚಳಕವನ್ನೆ ನಾನು ಇಂಗ್ಲಿಶಿಗೆ ಬಳಸಿದರೆ ’Fifirst' ಅಂತ ಆಗುತ್ತದೆ. ಇಂಗ್ಲಿಶಿನಲ್ಲಿ ಇದಕ್ಕೇನಾದರೂ ತಿರುಳಿದಿಯೇ? Fifirst ಎಶ್ಟು ತಪ್ಪು ಬಳಕೆಯೋ ಅಶ್ಟೆ ತಪ್ಪು ’ಪ್ರಪ್ರಥಮ’ ಬಳಕೆ.
ಅಲ್ಲದೆ,
೧. ಪ್ರಪ್ರಥಮ - ಈ ಪದವನ್ನು ಯಾವ ಸಂಸ್ಕ್ರುತ ಕವಿ ಬಳಸಿದ್ದಾನೆ?
೨. ಪ್ರಪ್ರಥಮ - ಈ ಪದವನ್ನು ಯಾವ ಹಳೆಗನ್ನಡ-ನಡುಗನ್ನಡ-ಹೊಸಗನ್ನಡ ಕವಿ ಬಳಸಿದ್ದಾನೆ?
೩. ನಿಮ್ಮ ಮೆಚ್ಚಿನ ಕವಿ ಬೇಂದ್ರೆಯವರು ಈ ಪದವನ್ನ ಬಳಸಿದ್ದಾರೆಯೆ?
ಚಿಂತಿಸಿ ನೋಡಿ. ಈ ಸಿನಿಮಾ ಹಾಡು ನೆನಪಿಗೆ ಬಂತು
’ತಪ್ಪು ಮಾಡೋದು ಸಹಜ ಕಣೊ
ತಿದ್ದಿ ನಡೆಯೋದು ಮನುಜ ಕಣೊ’
ಇದರ ಮೇಲೆ ನಿಮ್ಮಿಶ್ಟ
ದನ್ಯವಾದಗಳು ಕಾಕಾ.
ಭಾರತವನ್ನು ಮೊದಲಾಗಿ ಬರೆದಾಗ ಗಣೇಶ ಆನಂದತುಂದಿಲನಾಗಿ ಗೇಯರೂಪದ ಅದನ್ನು ಪಂಚಮವೇದವಾಗಲಿ ಎಂದು ಹರಸಿದನಂತೆ, ಅದು ವ್ಯಾಸರ ಉತ್ಕಟೇಚ್ಛೆ ಕೂಡ ಆಗಿತ್ತು. ಈಗ ಭಾರತದ ಭಾಗವಾದ ಭಗವದ್ಗೀತೆಯನ್ನು ನಾವೆಲ್ಲಾ ಮಾನವಧರ್ಮ ಸೂತ್ರವೆಂದು ಗುರುತಿಸಿದ್ದೇವೆ ಅಲ್ಲವೇ ? ಅಂತಹ ಕ್ಲಿಷ್ಟವಾದ ಶಬ್ದಗಳುಳ್ಳ ಸಂಸ್ಕೃತದಲ್ಲಿ ಬರೆಯಲ್ಪಟ್ಟ ಭಾರತವನ್ನು ಕನ್ನಡಕ್ಕೊಬ್ಬನೇ ಕುಮಾರವ್ಯಾಸ ನಮಗೆ ಒದಗಿಸಿದ್ದು ನಿಜಕ್ಕೂ ನಮ್ಮೆಲ್ಲರ ಸೌಭಾಗ್ಯ, ಅದರ ಅರ್ಥವ್ಯಾಪ್ತಿಯನ್ನು ಉದ್ಧರಿಸುತ್ತಾ ನಡೆದ ನಿಮ್ಮ ಹಾಗೂ ಇನ್ನೊಬ್ಬ ಮಿತ್ರರಾದ ಕೊಳ್ಳೇಗಾಲ ಮಂಜುನಾಥರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದೇನೆ, ನಿಮ್ಮ ಕಾರ್ಯ ಶ್ಲಾಘನೀಯ.
ದಿಗ್ವಾಸರೆ,
ಧನ್ಯವಾದಗಳು.
ಮಂಜುನಾಥರೆ,
ಕುಮಾರವ್ಯಾಸ ಭಾರತದ ಯಾವುದೇ ಯೋಜನೆಯಲ್ಲಿ ಕೈಗೂಡಿಸಲು ನಾನು ಸಿದ್ಧನೇ ಇದ್ದೇನೆ. ಆದರೆ ನನ್ನ ಸಾರಥ್ಯ ಬೇಡ, ನನಗೆ ಕಾಲಾಳು ಪಟ್ಟ ಸಾಕು. ನನಗಿರುವ ಪರಿಮಿತಿಗಳಲ್ಲಿ ಇದೇ ಹೆಚ್ಚಿನದು. ನನಗೆ ಕೊಟ್ಟ ಕೆಲಸವನ್ನು ನಾನು ಮಾಡಿ ಕೊಡುತ್ತೇನೆ.
ಭರತ,
ಅಲಂ ವಿಸ್ತರೇಣ. ಒಣ ವಾದ ವಿವಾದದಿಂದ ಯಾವ ಸಾಧನೆಯೂ ಆಗುವದಿಲ್ಲ.
Anonymus,
ನಿಮಗೂ ಧನ್ಯವಾದಗಳು.
ಭಟ್ಟರೆ,
ಮಂಜುನಾಥರು ನೆರವೇರಿಸುತ್ತಿರುವ ಮಹಾಕಾರ್ಯದಲ್ಲಿ ನಾನು ಹಾಗು ಇತರ ಅನೇಕರು ಸಹಭಾಗಿಗಳಾಗಿದ್ದೇವೆ. ಆ ಕಾವ್ಯಸಮುದ್ರದ ಒಂದು ಬೊಗಸೆಯನ್ನು ನಿಮ್ಮ ಎದುರಿಗೆ ಹಿಡಿದು ತೋರಿಸಲು ನನ್ನಿಂದ ಶಕ್ಯವಾಯಿತು, ಅಷ್ಟೆ.
ನಿಮ್ಮ ಈ ರೀತಿಯ ಬರಹ ಬಹಳ ಸೊಗಸಾಗಿರುತ್ತದೆ. ಕುಮಾರವ್ಯಾಸ ಭಾರತವನ್ನು ನಮ್ಮ ಸೋದರತ್ತೆ ಸುಶ್ರಾವ್ಯವಾಗಿ ಹಾಡುವುದನ್ನು ಕೇಳುತ್ತಾ ಬೆಳೆದೆ. ಈಗ ಅದರ
ಅರ್ಥ ವೈಶಾಲ್ಯವನ್ನು ತಿಳಿದು ತು೦ಬಾ ಸ೦ತಸವಾಯಿತು. ಧನ್ಯವಾದಗಳು ಸರ್.
ಕುಮಾರವ್ಯಾಸ ಭಾರತದ ಆದಿಪರ್ವದ ಷಟ್ಪದಿಯ ಅರ್ಥವನ್ನು ಸೊಗಸಾಗಿ ತಿಳಿಸಿಕೊಟ್ಟಿದ್ದೀರಿ. ಹಲವು ಹೊಸ ವಿಷಗಳನ್ನೂ ತಿಳಿದಂತಾಯಿತು. ನಿಮ್ಮ ಈ ಕಾರ್ಯ ಭಾರತದ ಇತರ ಷಟ್ಪದಿಗಳಿಗೂ ವಿಸ್ತರಿಸಲೆಂದು ವಿನಂತಿಸಿಕೊಳ್ಳುತ್ತೇನೆ.
"ಕುಮಾರವ್ಯಾಸ ಭಾರತದ ಯಾವುದೇ ಯೋಜನೆಯಲ್ಲಿ ಕೈಗೂಡಿಸಲು ನಾನು ಸಿದ್ಧನೇ ಇದ್ದೇನೆ." ..>
ಇದಕ್ಕಿಂತ ಇನ್ನೇನು ಬೇಕಿದೆ ? ಮುಂದಿನ ಕಾರ್ಯ ಹೂವೆತ್ತಿದಷ್ಟು ಸುಲಭವಾಗಲಿದೆ.
Sunath sir,
sundaravivarane....intaha innu aneka padygala anuvadavannu neerikshitutta iddene...kaaranaantaragalinda kelvu samyadinda blog kade baralaagalilla....nimma hindina ella postgalannu iga odta iddini..Dhsanyavadgalu...
ಪ್ರಭಾಮಣಿಯವರೆ,
ಕುಮಾರವ್ಯಾಸನ ಭಾರತಕ್ಕೆ ನೀವು ಬಾಲ್ಯದಿಂದಲೂ ಪರಿಚಿತರು ಎನ್ನುವದನ್ನು ಓದಿ ಸಂತಸವಾಯ್ತು. ಓದಿದಷ್ಟೂ ಇದು ಸುಖವನ್ನೇ ಕೊಡುವ ಕಾವ್ಯವಾಗಿದೆ.
ಸುಬ್ರಹ್ಮಣ್ಯರೆ,
ನಿಮ್ಮ ಸದಾಶಯಕ್ಕೆ ಧನ್ಯವಾದಗಳು. ನಿಮ್ಮ ಜೊತೆ ಇರುವಾಗ ಯಾವುದು ಅಸಾಧ್ಯ?
ಅಶೋಕ,
ನೀವು ಮತ್ತೆ ಬ್ಲಾಗ್-ಪ್ರವೃತ್ತರಾಗಿರುವದು ಸಂತಸದ ವಿಷಯ.
ಧನ್ಯವಾದಗಳು.
ಕಾಕ,
ಚೆಂದದ ವಿವರಣೆ, ವಿಶೇಷತೆಯನ್ನು ನಮಗೆಲ್ಲ ನೀಡಿದ್ದೀರಿ. ಕುಮಾರವ್ಯಾಸರ ಮತ್ತಷ್ಟು ಪರಿಚಯ ನಮಗಾಗಲಿ
ಧನ್ಯವಾದಗಳು
ಮನಸು,
ನಿಮಗೆ ಧನ್ಯವಾದಗಳು. ಕುಮಾರವ್ಯಾಸನನ್ನು ನಾವೆಲ್ಲರೂ ಅಭ್ಯಸಿಸೋಣ.
ಧನ್ಯವಾದಗಳು :)
chendada visshleshane
Post a Comment