ಕನ್ನಡ ತಾಯಿಯ ಆಶೀರ್ವಾದವನ್ನು ಪಡೆದ ಕರ್ಣಪಿಶಾಚಿಯು ಕಾಲ್ನಡಿಗೆಯಿಂದ ನೈಸ್ ಕಾ^ರಿಡಾ^ರ್ ತಲುಪಿತು. ಅನೇಕ ರಾಜಕಾರಣಿಗಳು ಧರಣಿ ಹಾಗು ಪಾದಯಾತ್ರೆಗಳ ಮೂಲಕ ಪವಿತ್ರಗೊಳಿಸಿದ ಆ ಮಾರ್ಗವನ್ನು ಕಂಡ ಕರ್ಣಪಿಶಾಚಿಗೆ ಮನಸ್ಸು ತುಂಬಿ ಬಂದಿತು.
“ಅಹೋ! ಇದು ವೇದೇಗೌಡರು ಧರಣಿ ಕುಳಿತ ಜಾಗವಲ್ಲವೆ? ಅಹೋ! ಇದು ಜೋಕುಮಾರಸ್ವಾಮಿ ಹಾಗು ವೇರಣ್ಣನವರ ಕಾಲಿನ ಧೂಳಿ ಬಿದ್ದ ಜಾಗವಲ್ಲವೆ? ಅಹೋ! ಇಲ್ಲಿಯೇ ಅಲ್ಲವೆ ಸಿದ್ದಮಾರಯ್ಯ ಹಾಗು ಪೇಶದಾಂಡೆಯವರು ಕುಣಿಯುತ್ತ, ತಮಟೆ ಬಾರಿಸುತ್ತ ವಾದಯಾತ್ರೆ ಮಾಡಿದ್ದು! ಅಹೋ! ಚಡ್ಯೂರಪ್ಪನವರು ಇಲ್ಲಿಯೇ ಅಲ್ಲವೆ ಡಿನೋಟಿಫಾಯ್ ಮಾಡಿದ್ದು!”
ಕರ್ಣಪಿಶಾಚಿಯ ಕಣ್ಣೀರು ಕೃಷ್ಣೆಯ ಪ್ರವಾಹದಂತೆ ಹರಿಯಿತು. ಭಾವಾವಿಷ್ಟವಾದ ಕರ್ಣಪಿಶಾಚಿ ನೈಸ್ ಕಾ^ರಿಡಾ^ರ್‍ದ ಮಣ್ಣನ್ನು ನೆತ್ತಿಯ ಮೇಲಿಟ್ಟುಕೊಳ್ಳಲು ಬಾಗಿತು. ಥೂ! ಇದೇನು ಹೊಲಸು ವಾಸನೆ ಬರ್ತಾ ಇದೆಯಲ್ಲ ಈ ಮಣ್ಣಿಗೆ ಎಂದು ಮೂಗು ಮುಚ್ಚಿಕೊಂಡಿತು. ಮತ್ತೊಮ್ಮೆ ಬಾಗಿ ಮಣ್ಣು ಎತ್ತಿಕೊಳ್ಳಲು ಹೋಯಿತು. ಮತ್ತೇ ಅದೇ ಹೊಲಸು ವಾಸನೆ. ಇದು ರಾಜಕಾರಣಿಗಳ ವಾಸನೆ ಎಂದು ಕರ್ಣಪಿಶಾಚಿಗೆ ಅರ್ಥವಾಯಿತು.
ಎಷ್ಟು ತೊಳೆದರೂ ಇದು ಹೋಗದ ವಾಸನೆ ಎಂದುಕೊಂಡ ಕರ್ಣಪಿಶಾಚಿಯು ವಾಯುಮಾರ್ಗಕ್ಕೇ ಹಾರಿ, ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು!
ಸ್ವಲ್ಪ ದೂರದ ಪ್ರಯಾಣದ ನಂತರ, ಕರ್ಣಪಿಶಾಚಿಗೆ ಕಿಷ್ಕಿಂಧೆಯಂತಹ ಸಣ್ಣ ತೋಪೊಂದು ಗೋಚರಿಸಿತು. ಆ ತೋಪಿಗೊಂದು ಆವರಣ.ಅದರ ನಟ್ಟನಡುವಿನಲ್ಲಿರುವ ಆಲದ ಮರದ ಮೇಲೆ ಒಂದು ಮಂಚಿಕೆ. ಆ ಮಂಚಿಕೆಯ ಮೇಲೆ ಗಟ್ಟಿಮುಟ್ಟಾದ ಶರೀರದ ವೃದ್ಧರೊಬ್ಬರು ಕೂತುಕೊಂಡಿದ್ದಾರೆ. ನಡುವಿಗೆ ತೊಪ್ಪಲಿನ ಅಲಂಕಾರ ಬಿಟ್ಟರೆ ಮೈಮೇಲೆ ಬೇರೆ ಅರಿವೆ ಇಲ್ಲ. ತಮ್ಮ ಎದುರಿಗೆ ಪೀಠವೊಂದನ್ನು ಇಟ್ಟುಕೊಂಡು ಗಲಗಿನಿಂದ ಏನೋ ಬರೆಯುತ್ತಿದ್ದಾರೆ. ಕರ್ಣಪಿಶಾಚಿಗೆ Tarzan ಸಿನೆಮಾ ಹಾಗು ಕಾರ್ಟೂನುಗಳ ನೆನಪಾಯಿತು. ಬಹುಶ: ಇವರೇ ವಯಸ್ಸಾದ Tarzan ಇರಬೇಕು ಎಂದುಕೊಂಡ ಕರ್ಣಪಿಶಾಚಿಯು ಕಿಷ್ಕಿಂಧೆಯ ಆವರಣದ ಹೊರಗೆ ಇಳಿಯಿತು.
ಆವರಣದ ಬಾಗಿಲಿಗೆ ಫಲಕವೊಂದನ್ನು ಹಾಕಲಾಗಿತ್ತು.
ಕೀಚಕ ೧೧೧೧ ೦೦ ೧೧೧ ೦೦ |
ಆವರಣದ ಒಳಭಾಗದಲ್ಲಿ ಸಣ್ಣದೊಂದು ಗಿಡ. ಅದರ ಸುತ್ತಲೂ ಕಟ್ಟೆ. ಕಟ್ಟೆಯ ಮೇಲೆ ಓರ್ವ ತರುಣ. ಆತ ಮಾತ್ರ ಆಧುನಿಕ ನಾಗರಿಕನಂತೆ ಸೂಟು ಬೂಟು ಹಾಕಿಕೊಂಡಿದ್ದಾನೆ. ಕರ್ಣಪಿಶಾಚಿಯನ್ನು ಕಂಡೊಡನೆ ಆತ ಎದ್ದು ಬಂದು, “Welcome, most welcome!” ಎಂದು ಇಂಗ್ಲೀಶಿನಲ್ಲಿ ಸ್ವಾಗತಿಸಿದ. ಕರ್ಣಪಿಶಾಚಿಗೆ ಭಯಂಕರ ಆಶ್ಚರ್ಯ.
“ನೀವಾರು? ಮಹಾಭಾರತದ ಕೀಚಕ ಮಹಾಶಯರು ಇಲ್ಯಾಕೆ ಇದ್ದಾರೆ?” ಎಂದು ತೊದಲಿತು.
ಆಧುನಿಕ ವೇಷದ ತರುಣನು ಮುಗಳ್ನಕ್ಕು ಹೇಳಿದ : “ನಾನು ಇಲ್ಲಿಯ ಕಾವಲುಗಾರ cum ಭಾಷಾಂತರಕಾರ. ಇಲ್ಲಿ ವಾಸ ಮಾಡುತ್ತಿರುವವರು ಮಹಾಭಾರತದ ಕೀಚಕರಲ್ಲ. ಕೀಚಕ ಎನ್ನುವದು ಅವರ ಸಂಕೇತ ನಾಮ. ಕೆಳಗೆ ಬರೆದಿರುವ ಅಂಕಿಗಳು ಕಪಿಲಿಪಿಯಲ್ಲಿವೆ. ಅದು ಅತ್ಯಾಧುನಿಕ ಕನ್ನಡ ಲಿಪಿ. ಅದರರ್ಥ: ‘ಪರವಾನಿಗೆ ಇಲ್ಲದೆ ಪ್ರವೇಶ ಇಲ್ಲ.’ ಇರಲಿ, ಒಳಗೆ ಬನ್ನಿ. ನಿಮ್ಮನ್ನು ಕೀಚಕರಿಗೆ ಭೆಟ್ಟಿ ಮಾಡಿಸುವೆ.
ಕ.ಪಿ. : ನೀವು ವಿದೇಶಿ ಪ್ರವಾಸಿಗಳಿಗಾಗಿ ಕನ್ನಡದಿಂದ ಇಂಗ್ಲೀಶಿಗೆ ಭಾಷಾಂತರ ಮಾಡುತ್ತೀರಾ?
ತರುಣ : ಇಲ್ಲ. ಕೀಚಕರು ಬಳಸುವ ಶುದ್ಧ ಕಪಿಕನ್ನಡವನ್ನು ನಿಮ್ಮ ವರ್ತಮಾನದ ಕನ್ನಡಕ್ಕೆ
ಅನುವಾದಿಸುತ್ತೇನೆ.
ಕ.ಪಿ. : ಕೀಚಕರು ಏನನ್ನು ಬರೆಯುತ್ತಿದ್ದಾರೆ?
ತರುಣ : ಅವರು ’ಲಿಪಿಸಂಹಾರ’ ಎನ್ನುವ ಶಾಸ್ತ್ರೀಯ ಗ್ರಂಥವನ್ನು ಬರೆಯುತ್ತಿದ್ದಾರೆ.
ಕ.ಪಿ. : ಓಹೋ! ಕನ್ನಡಮ್ಮನು ಉಟ್ಟುಕೊಂಡಿರುವಂತಹ ಲಿಪಿ ಎನ್ನುವ ಪೀತಾಂಬರವನ್ನು
ಚಿಂದಿ ಚಿಂದಿ ಮಾಡುತ್ತಿರುವ ಕಾರಣದಿಂದಾಗಿ ಇವರು ‘ಕೀಚಕ’ ಎನ್ನುವ ಸಂಕೇತನಾಮವನ್ನು
ಇಟ್ಟುಕೊಂಡಿದ್ದಾರೆಯೆ?
ತರುಣ : ತಪ್ಪು ತಿಳಿದುಕೊಂಡಿದ್ದೀರಿ! ಕೀಚಕ ಎನ್ನುವ ಸಂಕೇತನಾಮಕ್ಕೂ ಮಹಾಭಾರತದ
ಕೀಚಕನಿಗೂ ಏನೂ ಸಂಬಂಧವಿಲ್ಲ. ನಮ್ಮ ಕುರುವನ್ನು ಭೆಟ್ಟಿಯಾದರೆ ನಿಮ್ಮ ಎಲ್ಲಾ
ಸಂದೇಹಗಳಿಗೆ ಪರಿಹಾರ ಸಿಗುವದು.
ಕ.ಪಿ. : ಕುರು? You mean ಗುರು?
ತರುಣ : ಹೌದು, ಗುರು! ಕನ್ನಡದ ಸರಳೀಕರಣದ ಮೇರೆಗೆ ‘ಗುರು’ ಇದು ‘ಕುರು’ ಆಗುತ್ತದೆ.
ಅತ್ಯಾಧುನಿಕ ಕನ್ನಡ ಲಿಪಿಯಲ್ಲಿ ಅಂದರೆ ಕಪಿಲಿಪಿಯಲ್ಲಿ ಅದನ್ನು ೧೧೧೧೧೧೧ ಎಂದು
ಬರೆಯುತ್ತಾರೆ.
ಅಷ್ಟರಲ್ಲಿ ಕರ್ಣಪಿಶಾಚಿ ಹಾಗು ತರುಣರು ಬೋಧಿವೃಕ್ಷವನ್ನು ತಲುಪಿದ್ದರು. ಮಂಚಿಕೆಯ ಮೇಲಿಂದಲೇ ಇವರನ್ನು ಗಮನಿಸಿದ ಕುರುಗಳು ’ಕೀಚ್, ಕೀಚ್, ಕೀಚ್’ ಎಂದು ಉಲಿದರು.
ತರುಣ : ಕುರುಗಳು ನಿಮಗೆ ಸ್ವಾಗತ ಕೋರುತ್ತಿದ್ದಾರೆ. ಅವರಿಗೆ ‘ಕಿಚಕ್’ ಎಂದು
ವಂದನೆಗಳನ್ನು ಹೇಳಿರಿ.
ಕ.ಪಿ. : ಕಿಚಕ್, ಕುರು, ಕಿಚಕ್!
ಕುರು : ಕಿಚಕ್! ಕಿಚಕ್!! ಕಿಚಿ? ಕಿಚಿ?
ತರುಣ : “ನೀವು ಯಾರು?” ಎಂದು ಕೇಳುತ್ತಿದ್ದಾರೆ.
ಕ.ಪಿ. : ನಾನು ಕರ್ಣಪಿಶಾಚಿ. ನೀವು ಕೀಚಕ ಎನ್ನುವ ಸಂಕೇತನಾಮವನ್ನು ಇಟ್ಟುಕೊಂಡಿದ್ದು
ಯಾಕೆ?
ಕುರುಗಳು ಐವತ್ತು ಸಲ ‘ಕೀ’ ಎಂದು ನೂರು ಸಲ ‘ಚ’ ಎಂದು ಮತ್ತೆ ಅರುವತ್ತು ಸಲ ‘ಕೂ’ ಎಂದು ಉಲಿದರು!
ತರುಣನು ಅದನ್ನು ವರ್ತಮಾನದ ಕನ್ನಡದಲ್ಲಿ ಹೀಗೆ ಅನುವಾದಿಸಿದನು:
ಕನ್ನಡ ಭಾಷೆಯು ಬಹಳ ಸರಳವಾದ ಭಾಷೆ. ಶ್ರೀರಾಮಚಂದ್ರನು ಕಿಷ್ಕಿಂಧೆಗೆ ಬರುವ ಮೊದಲು ಇಲ್ಲಿದ್ದ ಕಪಿಗಳು ಅಂದರೆ ಕನ್ನಡಿಗರ ಪೂರ್ವಜರು ಕಪಿಕನ್ನಡ ಭಾಷೆಯನ್ನು ಬಳಸುತ್ತಿದ್ದರು. ‘ಕ’ ಹಾಗು ‘ಚ’ ಎನ್ನುವ ಎರಡೇ ಮೂಲ ಧ್ವನಿಗಳು ಕನ್ನಡದಲ್ಲಿ ಇದ್ದವು. ಇದೇ ಕನ್ನಡದ ಜಾಯಮಾನ. ಕನ್ನಡಿಗರು ತಮ್ಮ ಜಾಯಮಾನವನ್ನು ಬಿಡಬಾರದು. ಜಗತ್ತು ಎಷ್ಟೇ ಮುಂದುವರೆಯಲಿ, ಕನ್ನಡಿಗರು ಮಾತ್ರ, ತೊಪ್ಪಲನ್ನೇ ಸುತ್ತಿಕೊಂಡು, ಗಡ್ಡೆ ಗೆಣಸುಗಳನ್ನೇ ತಿನ್ನುತ್ತ, ಕೇವಲ ಎರಡೇ ಧ್ವನಿಗಳಲ್ಲಿ ತಮ್ಮ ಸಕಲ ಅಭಿವ್ಯಕ್ತಿಯನ್ನು ಮಾಡಬೇಕು. ಯಾಕೆಂದರೆ ಕಾಲಮಾನಕ್ಕಿಂತ ಜಾಯಮಾನ ಮುಖ್ಯ. ಈ ಮೂಲಧ್ವನಿಗಳನ್ನು ಸಂಕೇತಿಸುವ ಉದ್ದೇಶದಿಂದ ನಾನು ನನ್ನ ಹೆಸರನ್ನು ‘ಕೀಚಕ’ ಎಂದು ಇಟ್ಟುಕೊಂಡಿದ್ದೇನೆ. ಸಂಸ್ಕೃತದ ಸೋಂಕಿಲ್ಲದ ಕಪಿಕನ್ನಡವನ್ನು ಬಳಸುವದೇ ನನ್ನ ಧ್ಯೇಯ!
ಎಂಥಾ ಉದಾತ್ತ ವ್ಯಕ್ತಿ! ಎಂಥಾ ಕಪಿಕನ್ನಡಾಭಿಮಾನ!!
ಕರ್ಣಪಿಶಾಚಿಯು ಥಟ್ಟನೆ ನೆಗೆದು ಕುರುಗಳ ಕಾಲುಗಳನ್ನು ಪಿಡಿಯಿತು.
ಕ.ಪಿ. : ಕುರುವೆ! ಕುರುವೆ!
(ಕರ್ಣಪಿಶಾಚಿಯ ಕಣ್ಣಿನಿಂದ ಗಳಗಳ ಕಣ್ಣೀರು.)
ಕ.ಪಿ. : ಕುರುವೆ, ಈ ನಿಮ್ಮ ಧ್ಯೇಯಕ್ಕೆ ಪ್ರೇರಣೆ ಏನು ಎಂದು ಹೇಳುವಿರಾ?
ಕುರುಗಳು ೧೦೦ ಸಲ ಕಾ ಎಂದು ೨೦೦ ಸಲ ಕೇ ಎಂದು ೩೦೦ ಸಲ ಚಾ ಎಂದು ಧ್ವನಿ ಹೊರಡಿಸುತ್ತಾರೆ. ಕೊನೆಗೊಮ್ಮೆ
ಅನುವಾದಕನು ಕುರುಚರಿತ್ರೆಯನ್ನು ಕರ್ಣಪಿಶಾಚಿಯ ಎದುರಿಗೆ ಬಿಚ್ಚಿಡುತ್ತಾನೆ.
“ಇದು ಬಹಳ ಹಳೆಯ ಕತೆ. ನಾನಿನ್ನೂ ಚಿಕ್ಕ ಬ್ರಾಹ್ಮಣ ವಟು. ನಮ್ಮ ಮನೆಯಲ್ಲಿಯೇ ನಮ್ಮ ತಂದೆ ಸಂಸ್ಕೃತವನ್ನೂ ಕಲಿಸುತ್ತಿದ್ದರು. ನಮ್ಮ ಸಂಸ್ಕೃತ ಗ್ರಂಥದಲ್ಲಿ ‘ಕಚದೇವಯಾನಿ’ ಎನ್ನುವ ಪಾಠ ಒಂದಿತ್ತು. ಅದನ್ನು ನಾನು ತಪ್ಪಾಗಿ ‘ಕುಚದೇವಯಾನಿ’ ಎಂದು ಓದಿದೆ. ನಮ್ಮ ತಂದೆ ಕೆಂಡಾಮಂಡಲವಾದರು. ‘ಕಚದೇವಯಾನಿ ಎಂದರೆ ಏನು ಗೊತ್ತೇನಯ್ಯಾ?’ ಎಂದು ಕೇಳಿದರು. ‘ಕಚ ಎಂದರೆ ಕೂದಲು, ಕಚದೇವಯಾನಿ ಎಂದರೆ ದೇವಯಾನಿಯ ಕೂದಲು’ ಎಂದೆ. ತಂದೆಯವರ ಕೋಪ ನೆತ್ತಿಗೇರಿತು. ಆದರೂ ಸಹ ತಮ್ಮನ್ನು ನಿಯಂತ್ರಿಸಿಕೊಂಡು, ‘ಹೌದಾ! ಕುಚದೇವಯಾನಿ ಎಂದರೆ ಏನು?’ ಎಂದು ಕೇಳಿದರು. ‘ಗೊತ್ತಿಲ್ಲ’ ಎಂದೆ. ತಂದೆಯವರು ನನ್ನನ್ನು ನಂಬಲಿಲ್ಲ. ಒಂದು ಕುಚಕ್ಕೆ ಒಂದುನೂರರಂತೆ ನನಗೆ ಎರಡುನೂರು ಛಡಿ ಏಟುಗಳನ್ನು ಕೊಟ್ಟರು. ಆ ದಿನದಿಂದಲೇ ನಾನು ಸಂಸ್ಕೃತದ್ವೇಷಿಯಾದೆ. ಸಂಸ್ಕೃತ ವ್ಯಾಕರಣದ ಸಂಕಲನಕಾರನಾದ ಪಾಣಿನಿಗೆ ಪರ್ಯಾಯವಾಗಿ ನಾನು ‘ಕಪಿಕನ್ನಡ ವ್ಯಾಕರಣ’ವನ್ನು ರಚಿಸಿ, ಅವನಷ್ಟೇ ಪ್ರಸಿದ್ಧನಾಗಬೇಕೆನ್ನುವ ರೊಚ್ಚು ಮನದಲ್ಲಿ ಮೂಡಿತು. ಅದಕ್ಕಾಗಿ ಒಂದು ಯೋಜನೆಯನ್ನೂ ರೂಪಿಸಿಕೊಂಡೆ.
ಕ.ಪಿ. : ಅದು ಎಂತಹ ಯೋಜನೆ?
ಕುರು : ಕಾಚ, ಕಾಚ, ಕಚಕ್, ಕಚಕ್!
ತರುಣ : ನೋಡಿದಿರಾ? ವರ್ತಮಾನ ಕನ್ನಡದ ನೂರು ಪದಗಳಲ್ಲಿ ಹೇಳಬಹುದಾದದ್ದನ್ನು
ನಮ್ಮ ಕುರುಗಳು ನಾಲ್ಕೇ ನಾಲ್ಕು ಕಪಿಕನ್ನಡ ಪದಗಳಲ್ಲಿ ಹೇಳಿದರು. ಅವರ ಹೇಳಿಕೆ
ಹೀಗಿದೆ: ‘ನೀವು ಕಪಿಗಳು. ನಿಮ್ಮ ಮೇಲೆ ಸಂಸ್ಕೃತವನ್ನು ಅನ್ಯಾಯದಿಂದ
ಹೇರಲಾಗುತ್ತದೆ. ಈ ಕಾರಣದಿಂದಲೇ ನೀವು ಹಿಂದುಳಿದಿದ್ದೀರಿ’ ಎಂದು ಕನ್ನಡಿಗರಿಗೆ
ಮನದಟ್ಟು ಮಾಡಿದರೆ ಸಾಕು, ಕನ್ನಡಿಗರು ರೊಚ್ಚಿಗೇಳುತ್ತಾರೆ.
ಇದೇ ರೀತಿಯಲ್ಲಿ ಕನ್ನಡ ಲಿಪಿಯು ಸಂಸ್ಕೃತ ಲಿಪಿಯ ಅನುಕರಣ, ಕನ್ನಡ
ವ್ಯಾಕರಣವು ಸಂಸ್ಕೃತ ವ್ಯಾಕರಣದ ಅನುಕರಣ ಎನ್ನುವದನ್ನೂ ಸಹ ಕಪಿಗಳಿಗೆ
ತಿಳಿಸಿ ಹೇಳಬಹುದು.
ಕ.ಪಿ. : ಇದೆಲ್ಲ ಸರಿ. ಆದರೆ ಕುರುಗಳು ಕಚ, ಕುಚ ಬಿಟ್ಟು ಬೇರೆ ಧ್ವನಿಗಳಿಗೆ ಏಕೆ
ಹೋಗುವದಿಲ್ಲ?
ಕುರು :(ಕಾಚ ಎಂದು ಹನ್ನೆರಡು ಸಲ, ಕೋಚ ಎಂದು ಇಪ್ಪತ್ತೊಂದು ಸಲ ಹೇಳುತ್ತಾರೆ.)
ತರುಣ : ಸಾವಿರಾರು ವರ್ಷಗಳಷ್ಟು ಹಿಂದಿನ ಕಾಲದಲ್ಲಿ ಅಂದರೆ ಕನ್ನಡಿಗರು ಕಪಿಗಳಾಗಿದ್ದ
ಕಾಲದಲ್ಲಿ,ಅವರಿಗೆ ‘ಕ’ ಮತ್ತು ‘ಚ’ ಇವೆರಡೆನ್ನು ಬಿಟ್ಟು ಬೇರೆ ಧ್ವನಿಗಳ ಪರಿಚಯ
ಇರಲಿಲ್ಲ. ಆರ್ಯರ ಆಗಮನದ ನಂತರವೇ ಕಪಿಗಳು ಅಂದರೆ ಕನ್ನಡಿಗರು ಇತರ
ಧ್ವನಿಗಳನ್ನು ಕಲಿತರು. ಕನ್ನಡದ ಮೂಲಪದಗಳೆಲ್ಲ ‘ಕ’ದಿಂದಲೇ ಪ್ರಾರಂಭವಾಗುತ್ತವೆ.
ಉದಾಹರಣೆಗೆ, ಕತ್ತೆ! ಆದುದರಿಂದ ಕನ್ನಡಿಗರ ಜಾಯಮಾನವನ್ನು ಉಳಿಸಿಕೊಳ್ಳುವ
ಸಲುವಾಗಿ ಕುರುಗಳು ಕನ್ನಡ ಭಾಷೆಯನ್ನು ಪೂರ್ತಾ ಕ ಹಾಗು ಚ ಪದಗಳಲ್ಲಿ ಮಾತ್ರ
ಉಲಿಯುತ್ತಾರೆ.
ಕ.ಪಿ. : ಆದರೆ ನಮಗೆ ತಿಳಿಯದಂತೆಯೇ ಅನೇಕ ಸಂಸ್ಕೃತ ಪದಗಳ ತದ್ಭವಗಳನ್ನು ನಾವು
ಕನ್ನಡದಲ್ಲಿ ಬಳಸುತ್ತೇವಲ್ಲ. ಅವನ್ನು ಬಿಡಲು ಸಾಧ್ಯವಿಲ್ಲದಂತಾಗಿದೆ.
ಉದಾಹರಣೆಗೆ ‘ಬೇಗನೆ ಬಾ’ ಎಂದು ಹೇಳಿದರೆ, ಅದು ‘ವೇಗ’ವಾಗಿ ಎನ್ನುವದರ
ತದ್ಭವ. ‘ಲಗೂನೆ ಬಾ’ ಎಂದರೆ ಅದು ‘ಲಘು’ವಾಗಿ ಎನ್ನುವದರ ತದ್ಭವ.
‘ಜಲ್ದಿ’ ಅಥವಾ ‘ಜೋರ್’ ಇವು ಹಿಂದಿ ಪದಗಳು. ಕನ್ನಡದಲ್ಲಿ ಇದಕ್ಕೆ ಕನ್ನಡ ಪದವೇ
ಇಲ್ಲವೆ?
ತರುಣ : ನಮ್ಮ ಕುರುಗಳು ಅದರದೇ ಸಂಶೋಧನೆಯನ್ನು ನಡೆಸಿದ್ದಾರೆ. ಈ ಎಲ್ಲಾ
ಪದಗಳೂ ‘ಕ’ ಧ್ವನಿಯಿಂದಲೇ ಪ್ರಾರಂಭವಾಗುವದು ನಮ್ಮ ಕುರುಗಳ
‘ಕಪಿಕನ್ನಡ’ದ ವೈಶಿಷ್ಟ್ಯ!
ಕ.ಪಿ. : ವಾರೆವ್ವಾ! ಕ್ಯಾ ಬಾತ್ ಹೈ!
ತರುಣ : ಆ ಉದ್ದೇಶದಿಂದಲೇ ನಮ್ಮ ಕುರುಗಳು ‘ಲಿಪಿಸಂಹಾರ’ ಎನ್ನುವ ಗ್ರಂಥರಚನೆಯಲ್ಲಿ
ತೊಡಗಿದ್ದಾರೆ. ನೀವು ಹೊರಗಿನ ಫಲಕದಲ್ಲಿ ನೋಡಿದಿರಲ್ಲ? ಕೇವಲ ‘೦’ ಹಾಗು
‘೧’ ಅಂಕಿಗಳನ್ನು ಬಳಸಿ ‘ಪರವಾನಗಿ ಇಲ್ಲದೆ ಪ್ರವೇಶ ಇಲ್ಲ’ ಎಂದು ಬರೆದದ್ದನ್ನು?
ಕ.ಪಿ. : ಇದರ ಉದ್ದೇಶವೇನು?
ಕುರು : (ದುಃಖದ ಧ್ವನಿಯಲ್ಲಿ) ಕಚಕಚಾ(ಹತ್ತು ಸಲ)! ಕುಚಕುಚಾ(ಹದಿನೈದು ಸಲ)!
ಕೂಕೂಕೂ(ಎಂಟು ಸಲ)!
ತರುಣ : ಇದರ ಹಿಂದೆ ನಮ್ಮ ಕುರುಗಳ ಮತ್ತೊಂದು ಕರುಣಾಜನಕ ಕತೆ ಇದೆ. ಅವರು ಕನ್ನಡ
ಸಾಲೆಯಲ್ಲಿ ಕಲಿಯುತ್ತಿದ್ದಾಗ, ಅಂಕಗಣಿತದಲ್ಲಿ ಯಾವಾಗಲೂ ನಪಾಸಾಗುತ್ತಿದ್ದರು.
ಒಂದರಿಂದ ಹತ್ತರವರೆಗಿನ ಅಂಕಿಗಳನ್ನು ಎಣಿಸಲೂ ಸಹ ಅವರಿಗೆ
ಸಾಧ್ಯವಾಗುತ್ತಿರಲಿಲ್ಲ! ಇನ್ನು ಕೋಟಿ, ಅಬ್ಜ, ಪರಾರ್ಧ ಇವುಗಳನ್ನು
ತಿಳಿದುಕೊಳ್ಳುವದೂ ಸಹ ಅಸಾಧ್ಯ!
ಇವೆಲ್ಲ ಆರ್ಯರ ಕುತಂತ್ರ. ಕಪಿಗಳನ್ನು ಹಿಂದುಳಿದವರನ್ನಾಗಿ ಇಡಲೆಂದೇ ಇವರು
ಗಣಿತವನ್ನು ಇಷ್ಟೆಲ್ಲ ಸಂಕೀರ್ಣ ಮಾಡಿದ್ದಾರೆ ಎನ್ನುವದು ನಮ್ಮ ಕುರುಗಳಿಗೆ
ಮನದಟ್ಟಾಯಿತು. ಕಂಪ್ಯೂಟರಿನಲ್ಲಿಯೂ ಸಹ ‘೦’ ಮತ್ತು ‘೧’ ಅಂಕಿಗಳನ್ನು ಮಾತ್ರ
ಬಳಸುತ್ತಾರಲ್ಲವೆ? ಆದುದರಿಂದ ಕೇವಲ ಸೊನ್ನೆ ಮತ್ತು ಒಂದು ಅಂಕಿಗಳು ಇರುವ,
‘ಕಪಿಲಿಪಿ’ ಎನ್ನುವ ಹೊಸ ಲಿಪಿಯೊಂದನ್ನು ನಮ್ಮ ಕುರುಗಳು ಸಂಶೋಧಿಸಿದರು.
ಇದರಿಂದಾಗಿ ಗಣಿತದ ಸರಳೀಕರಣವೂ ಆಯಿತು. ಜೊತೆಗೆ ಬ್ರಾಹ್ಮೀಜನ್ಯ ಲಿಪಿಗಳ
ಸಂಹಾರವೂ ಆಯಿತು! ಇದೇ ‘ಲಿಪಿಸಂಹಾರ ಅರ್ಥಾತ್ ಕಪಿಗಳಿಗೊಂದು ಹೊಸಲಿಪಿ!’
ಕ.ಪಿ. : ನನಗೊಂದು ಸಂಶಯವಿದೆ. ಜಗತ್ತು ಮುಂದುವರೆಯುತ್ತಿರುವಾಗ ಕನ್ನಡಿಗರು
ಹಿಂದುಳಿಯಬೇಕೆ? ಭಾಷೆ, ಲಿಪಿ, ತಂತ್ರಜ್ಞಾನ ಇವು ಎಷ್ಟೆಲ್ಲ ಸಂಕೀರ್ಣವಾಗುತ್ತಿರುವಾಗ,
ನಾವು ಕನ್ನಡದ ಜಾಯಮಾನ ಎನ್ನುವ ಮೋಸದ ಪದವನ್ನು ಬಳಸಿ ಕನ್ನಡಿಗರ ಕಣ್ಣಿಗೆ
ಮಣ್ಣೆರಚುವದು ಸರಿಯೆ? ನೀವು ಹಿಂದುಳಿದವರು ಎಂದು ಕರೆಯುತ್ತಿರುವ ಜನರು,
ಜ್ಞಾನಸಂಪಾದನೆಯ ಮೂಲಕ ದೇಶ, ವಿದೇಶಗಳಲ್ಲಿ ಎಷ್ಟೆಲ್ಲ ಪ್ರಸಿದ್ಧರಾಗಿದ್ದಾರೆ!
ಅವರಿಗೆ ವರ್ತಮಾನ ಕನ್ನಡ ಅರ್ಥವಾಗಲಾರದೆ? ಅದನ್ನು ಕಪಿಕನ್ನಡ ಮಾಡುವ
ಅವಶ್ಯಕತೆ ಇದೆಯೆ? ಇದೆಲ್ಲ ನಿಮ್ಮ ಕೀರ್ತಿಕಾಮನೆಯ ಸ್ವಾರ್ಥವಲ್ಲವೆ?
ಕುರು : (ಸಿಟ್ಟಿನಿಂದ) ಕ್ಕೆಕ್ಕೆಕ್ಕೆ! ಕ್ಕೊಕ್ಕೊಕ್ಕೊ! ಕ್ಕುಕ್ಕುಕ್ಕೂ!
ಕ.ಪಿ. : (ತರುಣನಿಗೆ) ಕುರುಗಳು ಏನು ಹೇಳಿದರು?
ತರುಣ : Get out ಎಂದು ಹೇಳಿದರು!
ಕ.ಪಿ. : ಧನ್ಯವಾದಗಳು, Good bye!
ಕರ್ಣಪಿಶಾಚಿಯು ಆಕಾಶಕ್ಕೆ ನೆಗೆಯಿತು.
ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟದೇಶವು ಅದರ ಕೆಳಗೆ ಮೈ ಚಾಚಿಕೊಂಡು ಬಿದ್ದಿತ್ತು.
ಬೋಳು ಬೋಳಾದ ಗಣಿಗುಡ್ಡಗಳು, ನೇಣು ಹಾಕಿಕೊಳ್ಳುತ್ತಿರುವ ರೈತರು, ಬಕಾಸುರರಂತಹ ರಾಜಕಾರಣಿಗಳು, ಸ್ವಾರ್ಥಸಾಧನೆಯ ಸಂಶೋಧಕರು, ಇವರೆಲ್ಲರ ಸುತ್ತಲೂ ಕುಣಿಯುವ ಹುಚ್ಚು ಕಪಿಗಳು!
ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟದೇಶವು ಅದರ ಕೆಳಗೆ ಮೈ ಚಾಚಿಕೊಂಡು ಬಿದ್ದಿತ್ತು.
ಬೋಳು ಬೋಳಾದ ಗಣಿಗುಡ್ಡಗಳು, ನೇಣು ಹಾಕಿಕೊಳ್ಳುತ್ತಿರುವ ರೈತರು, ಬಕಾಸುರರಂತಹ ರಾಜಕಾರಣಿಗಳು, ಸ್ವಾರ್ಥಸಾಧನೆಯ ಸಂಶೋಧಕರು, ಇವರೆಲ್ಲರ ಸುತ್ತಲೂ ಕುಣಿಯುವ ಹುಚ್ಚು ಕಪಿಗಳು!
ಕರ್ಣಪಿಶಾಚಿಗೆ ಆಶ್ಚರ್ಯವಾಯಿತು. ಇಷ್ಟೆಲ್ಲಾ ಇದ್ದರೂ, ತನಗೆ ಸುಳ್ಳು ಹೇಳುವ ಒಬ್ಬನೂ ಸಿಗಲಿಲ್ಲವಲ್ಲ! ಥಟ್ಟನೆ ಅದಕ್ಕೆ ಕಟು ಸತ್ಯವು ಮಿಂಚಿನಂತೆ ಹೊಳೆಯಿತು. ಸುಳ್ಳು ಯಾರು ಹೇಳುತ್ತಾರೆ? ಸತ್ಯ ಹೇಳಿದರೆ ಮರ್ಯಾದೆ ಹೋಗುವದೆಂದು ಹೆದರಿಕೊಳ್ಳುವವರು ಸುಳ್ಳು ಹೇಳುತ್ತಾರೆ! ನಾಚಿಕೆ ಇಲ್ಲದವರು ಸತ್ಯ ಹೇಳಲು ಯಾಕೆ ಹಿಂಜರಿಯಬೇಕು?!
ಸ್ಮಶಾನದ ಪಕ್ಕದ ಮರದ ಕೆಳಗೆ ಮೊಂಡುಗೈ, ಮೊಂಡುಗಾಲುಗಳ ಮುದುಕಿಯೊಬ್ಬಳು ಕರ್ಣಪಿಶಾಚಿಯ ಕಣ್ಣಿಗೆ ಬಿದ್ದಳು.
ದೂರದಿಂದ ಹಾಡೊಂದು ತೇಲಿ ಬರುತ್ತಿತ್ತು:
“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ.
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ!”
ಕರ್ಣಪಿಶಾಚಿಯ ಕಣ್ಣುಗಳಿಂದ ಬಿದ್ದ ಎರಡು ಹನಿಗಳು ಆ ಮುದುಕಿಯ ಮೊಂಡುಗಾಲುಗಳನ್ನು ತೊಳೆದವು.
ಕರ್ಣಪಿಶಾಚಿಯು ಮೋಡಗಳ ಆಚೆ ಮರೆಯಾಯಿತು.