Sunday, March 27, 2011

ಕರ್ಣಪಿಶಾಚಿಯ ಸಂದರ್ಶನಗಳು...೩


ಕನ್ನಡಮ್ಮ : ಬಾಳಾ, ನೀ ಈಗೇನು ನನ್ನ ರೂಪಾ ನೋಡತಿದ್ದೀಯಲ್ಲಾ, ಇದು ನಿನ್ನ
               ಸಲುವಾಗಿ ನಾ ತಾಳಿದ ಮಾನವ ರೂಪ. ನನ್ನ ಪರಮದಿವ್ಯರೂಪವನ್ನ
               ನಿನಗ ಮೊದಲ ತೋರಸ್ತೇನಿ. ಅದು ಸೂಕ್ಷ್ಮರೂಪ. ಆ ಸೂಕ್ಷ್ಮರೂಪದೊಳಗ
               ನನ್ನ ಎರಡು ಶರೀರ ಅವ. ಒಂದು ನಾದಮಯ ಶರೀರ. ಮತ್ತೊಂದು ಲಿಪಿಶರೀರ.
                 
ಕ.ಪಿ.        :   ಅಮ್ಮಾ, ಅಮ್ಮಾ! ನೀರಿಳಿಯದ ಗಂಟಲೊಳ್ ಕಡಬನ್ನು  ತುರುಕದಿರು!

ಕನ್ನಡಮ್ಮ : ಕರ್ಣಪಿಶಾಚಿ, ನನಗ ಖಾತ್ರಿ ಆತು ನೋಡು: ‘ನೀ ಖರೇನ ಕನ್ನಡಿಗ  ಇದ್ದೀ!’
                  ಇರಲಿ, ಇಗೊ ನನ್ನ ನಾದಶರೀರವನ್ನು ಕೇಳು.
                 
                  (ಕನ್ನಡಮ್ಮನ ದಿವ್ಯ ನಾದಶರೀರವನ್ನು ಕರ್ಣಪಿಶಾಚಿಯು ಕೇಳುವದು.)

ಕ.ಪಿ.         :  ಅಹಾ! ಎಂತಹ ಸುಮಧುರ ನಾದ! ವರಕವಿ ಅಂಬಿಕಾತನಯದತ್ತರು ಅನುಭವಿಸಿದ
                   ‘ಸಹಸ್ರತಂತ್ರೀ ನಿಃಸ್ವನ’ದಂತೆ ಈ ನಾದ ಕೇಳಸ್ತದಲ್ಲ! ಆನಂದಕಂದರೂ ಅದನ್ನs
                  ಹೇಳ್ಯಾರಲ್ಲಾ:
                                      ಎನಿತು ಇನಿದು ಈ ಕನ್ನಡ ನುಡಿಯು
                                       ಮನವನು ತಣಿಸುವ ಮೋಹನ ಸುಧೆಯು.

ಕನ್ನಡಮ್ಮ : ಹಾಂ, ಈಗ ಕೇಳು ನನ್ನ ಸದ್ಯದ ನಾದಶರೀರವನ್ನು.

ಕ.ಪಿ:        :   (ಆಘಾತವಾದವನಂತೆ ಕಿವಿ ಮುಚ್ಚಿಕೊಳ್ಳುತ್ತ), ಸಾಕು ಮಾಡಮ್ಮ! ಈ ಕರ್ಕಶ
                  ಅಪಲಾಪವನ್ನು ನಾ ಕೇಳಲಾರೆ. ಇದು ಕಾಗೆ ಹಾಗು ಗೂಗೆಗಳ ಜಗಳದಂತೆ
                  ಕೇಳುತ್ತಿದೆಯಲ್ಲಮ್ಮ!

ಕನ್ನಡಮ್ಮ : ಮಗೂ, ಕರ್ಣಪಿಶಾಚಿ, ಇದು ಕಾಗೆ,ಗೂಗೆಗಳ ಕಿರುಚಾಟವಲ್ಲ!
                  ಕನ್ನಡ ಎಫ್. ಎಮ್. ರೇಡಿಯೋದ ‘ಮಿರ್ಚಮಸಾಲಾ’ ಕಾರ್ಯಕ್ರಮ ಹಾಗು
                  ಕೆಲವೊಂದು ಕನ್ನಡ ಟೀವಿ ವಾಹಿನಿಗಳ `ಲಂಗರು’ಗಳ ವಾಗ್ಝರಿ! ಇವರೆಲ್ಲಾ ಕೂಡಿ
                  ನನ್ನ ಕಂಠದೊಳಗೆ ಗೂಟಗಳನ್ನು ಬಡಿಯುತ್ತಿದ್ದಾರಪ್ಪಾ! ಆಕಾಶವಾಣಿಯಲ್ಲಿ
                  ಬಿತ್ತರಿಸುತ್ತಿರುವ ಈ ಸುದ್ದಿಯನ್ನಷ್ಟು ಕೇಳು, ಮಗು!
                 
                  (ಆಕಾಶವಾಣಿಯಲ್ಲಿ: ಖನ್ನಡ ಖಂಟೀರವರಿಗೆ ಆಸನದಲ್ಲಿ ಹಾದರದ ಸ್ವಾಗತ!)

ಕ.ಪಿ:        :   ಇದೇನಮ್ಮಾ, ತಾಯಿ! ನನಗೆ ಸ್ವಲ್ಪವೂ ಅರ್ಥವಾಗದಲ್ಲ!

ಕನ್ನಡಮ್ಮ : ಪೆದ್ದ ನೀನು. ನೀನು ಕೇಳಿದ ಸುದ್ದಿ ಹೀಗಿದೆ: ಕನ್ನಡ ಕಂಠೀರವರಿಗೆ ಹಾಸನದಲ್ಲಿ
                  ಆದರದ ಸ್ವಾಗತ.

ಕ.ಪಿ.        : ಈ ತರಹ ಸರಿಯಾಗಿ ಉಚ್ಚರಿಸಲಿಕ್ಕೆ ಇವರ ಗಂಟೇನು ಹೋಗುತ್ತದಮ್ಮಾ?

ಕನ್ನಡಮ್ಮ : ಹೊಸದೊಂದು ಅಲೆ ಎದ್ದಿದೆಯಪ್ಪಾ. ಆಡುನುಡಿಗೆ ಸಂಸ್ಕರಣೆ ಬೇಡ. ನಮ್ಮ
                  ಬಾಯಿಗೆ ಬಂದಂತೆ ನಾವು ಉಚ್ಚರಿಸುವದು ಸಹಜ ಮಾರ್ಗ!  

ಕ.ಪಿ.        : (ಸಿಟ್ಟಿನಿಂದ) ಥತ್ತೇರಿ! ಸಹಜ ಮಾರ್ಗವನ್ನು ಅನುಸರಿಸುವ ಇವರು ಬಟ್ಟೆಗಳನ್ನು
                  ಏಕೆ ಹಾಕಿಕೊಳ್ಳುತ್ತಾರೆ? ಬತ್ತಲೆಯಾಗಿರುವದೇ ಸಹಜಮಾರ್ಗವಲ್ಲವೆ?
                  ಇವರಿಗೆ ಬೇಯಿಸಿದ ಆಹಾರ ಏಕೆ ಬೇಕು? ಹಸಿ ಮಾಂಸ ತಿನ್ನುವದೆ
                  ಸಹಜಮಾರ್ಗವಲ್ಲವೆ?

ಕನ್ನಡಮ್ಮ  : ಇದೆಲ್ಲದರ ಹಿಂದೆ ರಾಜಕಾರಣ ಇದೆ, ಕರ್ಣಪಿಶಾಚಿ!

ಕ.ಪಿ.         : ಸಾಕು,ಸಾಕು! ನಾ ಕೇಳಲಾರೆ ಇದನ್ನೆಲ್ಲ!

ಕನ್ನಡಮ್ಮ  : ಸರಿ, ಬಿಡು. ಇನ್ನು ನನ್ನ ಲಿಪಿ-ಶರೀರವನ್ನಷ್ಟು ನೋಡು.
              
                  (ಕರ್ಣಪಿಶಾಚಿಯು ಆ ದಿವ್ಯ ಲಿಪಿಶರೀರವನ್ನು ನೋಡಿ ಬೆರಗಾಗುತ್ತಾನೆ.
                  ಸಾವಕಾಶವಾಗಿ ದಿವ್ಯಶರೀರವು ಬದಲಾಗುತ್ತ ರಕ್ತಸಿಕ್ತ ವಿಕೃತ
                  ಶರೀರವಾಗುತ್ತದೆ.)
                 
ಕ.ಪಿ.          : ಅಮ್ಮಾ, ನೋಡಲಾರೆ. ನಿಲ್ಲಿಸು ಈ ಘೋರರೂಪವನ್ನು!
                   
                  (ಕನ್ನಡಮ್ಮನು ಮತ್ತೆ ಮಾನವರೂಪವನ್ನು ತಾಳುತ್ತಾಳೆ.)

ಕನ್ನಡಮ್ಮ  : ಮಗೂ, ನನ್ನ ದಿವ್ಯ ಲಿಪಿ ಶರೀರವನ್ನು ನೋಡಿದೆಯಲ್ಲ? ಅಂತಹ ಶರೀರವನ್ನು
                  ಪಡೆಯಲು ನಾನು ಸಾವಿರಾರು ವರ್ಷಗಳ ತಪಸ್ಸು ಮಾಡಿದ್ದೆನಪ್ಪಾ.

ಕ.ಪಿ.         : ಏನಮ್ಮಾ ನೀ ಹೇಳುವದು? ಚಿಕ್ಕ ಮಕ್ಕಳು ಒಂದು ತಿಂಗಳಿನಲ್ಲಿ ಕಲಿಯುವ
                  ಅಕ್ಷರಮಾಲೆಯನ್ನು ರೂಪಿಲು ನೀನು ಸಾವಿರಾರು ವರ್ಷಗಳ ತಪಸ್ಸು
                  ಮಾಡಿದೆಯಾ? ನಿನ್ನಂತಹ ದಡ್ಡಿಯನ್ನು ನಾನೆಲ್ಲೂ ಕಂಡಿಲ್ಲ, ಬಿಡು!
                 
ಕನ್ನಡಮ್ಮ  : ಹುಚ್ಚಪ್ಪ! ಅಕ್ಷರಗಳು ಅಂದರೆ ಏನು? ಅವು ಧ್ವನಿಸಂಕೇತಗಳು ಎನ್ನುವದನ್ನು
                  ಮೊದಲು ತಿಳಿದುಕೊ. ಈವತ್ತು ಕನ್ನಡಿಗರು ಉಚ್ಚರಿಸುವ ಎಲ್ಲಾ ಧ್ವನಿಗಳು
                  ಒಂದೇ ದಿನದಲ್ಲಿ ಮೂಡಲಿಲ್ಲ. ಕನ್ನಡಿಗರು ಕಾಡು ಸ್ಥಿತಿಯಲ್ಲಿದ್ದಾಗ
                  ಅವರಿಗೆ ಬೇಕಾದದ್ದು ಬಹುಶ: ಒಂದೇ ಧ್ವನಿ.......... ಪ್ರಣಯದ ಕರೆ!
                  ನಾಗರಿಕತೆ ಬೆಳೆದಂತೆ ನನ್ನ ಮಕ್ಕಳು ಅವಶ್ಯಕತೆಗಳಿಗೆ ಅನುಸಾರವಾಗಿ
                  ಹೆಚ್ಚೆಚ್ಚು ಧ್ವನಿಗಳನ್ನು ಕಲಿತರು.
                   
ಕ.ಪಿ.          : ಗೊತ್ತಾಯ್ತು ಬಿಡಮ್ಮ. ಕೋಪ ಬಂದಾಗ ‘ಗುರ್’ ಎನ್ನುತ್ತಿದ್ದರು.
                  ಹಸಿವಾದಾಗ  ‘ಹೋ’ ಎನ್ನುತ್ತಿದ್ದರು!
                 
ಕನ್ನಡಮ್ಮ    : ಗುಂಪಿನೊಳಗಿನ ಸಂಪರ್ಕ್ಕಾಗಿ ನನ್ನ ಮಕ್ಕಳಿಗೆ ಕೆಲವೇ ಧ್ವನಿಗಳು
                  ಸಾಕಾಗುತ್ತಿದ್ದವು. ಆದರೆ ಬೇರೆ ಬೇರೆ ಜನಾಂಗಗಳ ಸಂಪರ್ಕ ಬಂದಂತೆ,
                  ಕೊಡುಕೊಳ್ಳುವಿಕೆ ಪ್ರಾರಂಭವಾದಂತೆ, ಸಂಭಾಷಣೆಗಳು ಹುಟ್ಟಿದವು.
ಮುಖ್ಯವಾಗಿ ಹಿಮಾಲಯದ ತಪ್ಪಲಿನಲ್ಲಿದ್ದ ನನ್ನ ಮಕ್ಕಳಿಗೆ ಅಂದರೆ
                  ಕನ್ನಡಿಗರಿಗೆ, ಆರ್ಯ ಎನ್ನುವ ಹೊಸದೊಂದು ಜನಾಂಗದ ಸಂಪರ್ಕ ಬಂದಿತು.
                  ಅವರಾಡುವ ಮಾತು ಪ್ರಾಕೃತ. ನನ್ನ ಅಂದರೆ ಕನ್ನಡದ ಅನೇಕ ಪದಗಳನ್ನು
                  ಆರ್ಯರು ತೆಗೆದುಕೊಂಡರು. ಅವರ ಅನೇಕ ಪದಗಳನ್ನು ನನ್ನ ಮಕ್ಕಳು
                  ಪಡೆದರು.

ಕ.ಪಿ.          : ಆರ್ಯರ ಮಾತು ಸಂಸ್ಕೃತವಲ್ಲವೇನಮ್ಮ? ನೀನು ಪ್ರಾಕೃತ ಎಂದು
                  ಹೇಳುತ್ತಿದ್ದೀಯಲ್ಲ!

ಕನ್ನಡಮ್ಮ    : ನೋಡಪ್ಪಾ ಕರ್ಣಪಿಶಾಚಿ, ಸಾವಿರಾರು ವರ್ಷಗಳ ಹಿಂದೆ ಭಾಷೆಗೆ ಒಂದು
                  ಚೌಕಟ್ಟು ಇರದ ಕಾಲದಲ್ಲಿ ಜನರು ಚಿಕ್ಕ ಮಕ್ಕಳಂತೆ ತೊದಲು
                  ಮಾತನಾಡುತ್ತಿದ್ದರು. ವ್ಯವಹಾರದಲ್ಲಿ ಇದರಿಂದ ಅಪಾರ್ಥಗಳಾಗುತ್ತಿದ್ದವು.
                  ಇದನ್ನು ತಪ್ಪಿಸಲು ಆರ್ಯರು ತಮ್ಮ ನುಡಿಗೆ ಒಂದು ಚೌಕಟ್ಟನ್ನು ಹಾಕಿ ಅದಕ್ಕೆ
                  ಸಂಸ್ಕೃತ ಎಂದು ಕರೆದರು! ಸಂಸ್ಕೃತ ಇದರರ್ಥ ಸಂಸ್ಕರಿಸಲ್ಪಟ್ಟದ್ದು.
                  ನಿನಗೆ ತಿಳಿಯುವಂತೆ ಇಂಗ್ಲೀಶಿನಲ್ಲಿ ಹೇಳಬೇಕಾದರೆ, ಇದನ್ನು processed,
                  refined ಹೀಗೆಲ್ಲ ಕರೆಯಬಹುದು! ಈ ಚೌಕಟ್ಟಿಲ್ಲದ ನುಡಿಗೆ ಪ್ರಾಕೃತ
                  ಎಂದು ಕರೆದರು. ಈ ಚೌಕಟ್ಟಿಗೆ ಅವರು ವ್ಯಾಕರಣ ಎಂದು ಹೇಳುತ್ತಾರೆ.
                 
ಕ.ಪಿ.            : ನಾನು ಕೇಳುತ್ತಿರುವದೇನು, ನೀನು ಹೇಳುತ್ತಿರುವದೇನು?

ಕನ್ನಡಮ್ಮ    : ಭಾಷೆಗಳ ಹಿನ್ನೆಲೆಯನ್ನು ನೀನು ಅರಿಯದಿದ್ದರೆ, ನಾನು ನಿನಗೆ ಲಿಪಿಯ
                  ಹುಟ್ಟನ್ನು ತಿಳಿಸುವದಾದರೂ ಹೇಗೆ? ಈ ರೀತಿಯಾಗಿ ಕನ್ನಡ ಮತ್ತು
                  ಸಂಸ್ಕೃತಗಳು ಜೊತೆಯಾಗಿಯೇ ಬೆಳೆದವು. ಕೆಲಕಾಲಾನಂತರ ವ್ಯವಹಾರದ
                  ಕಾರಣಗಳಿಗಾಗಿ, ಲಿಪಿಯ ಅವಶ್ಯಕತೆ ಕಂಡು ಬಂದಿತು. ಆಗ ಚಿತ್ರಗಳನ್ನೇ
                  ಸಂಕೇತಗಳನ್ನಾಗಿ ಬಳಸಿದರು. ಅದೇ ಚಿತ್ರಲಿಪಿ.  ವ್ಯವಹಾರವನ್ನು
ಮೀರಿದ ಭಾವಾಭಿವ್ಯಕ್ತಿಗಾಗಿ ಧ್ವನಿಸಂಕೇತಗಳನ್ನು ರೂಪಿಸುವ ಕಾಲವೂ ಬಂದಿತು.
                  ಆಗ ಹುಟ್ಟಿದ್ದೇ ಬ್ರಾಹ್ಮೀ ಲಿಪಿ. ಈ ಬ್ರಾಹ್ಮೀ ಲಿಪಿಯೇ ಭಾರತದಲ್ಲಿರುವ ಎಲ್ಲ
                  ಲಿಪಿಗಳ ಮೂಲರೂಪ.
                   
ಕ.ಪಿ.            : ಕನ್ನಡದ ಅಕ್ಷರಮಾಲೆಯಲ್ಲಿರುವ ೫೨ ಅಕ್ಷರಗಳು ಆಗ ಹುಟ್ಟಿದವೇನು?

ಕನ್ನಡಮ್ಮ    : ಯಾವ ಲಿಪಿಯಲ್ಲಿಯೂ ಅದರ ಎಲ್ಲ ಅಕ್ಷರಗಳು ಒಂದೇ ದಿನದಲ್ಲಿ
                  ಹುಟ್ಟಲಿಲ್ಲ, ಮಗೂ. ಭಾಷೆಯನ್ನು ಪ್ರೀತಿಸುವ ಪಂಡಿತರು, ಒಂದೊಂದೇ
                  ಅಕ್ಷರವನ್ನು ರೂಪಿಸುತ್ತ ನಡೆದರು. ಸ್ವರ ಹಾಗು ವ್ಯಂಜನಗಳ ಭೇದವನ್ನು
                  ಗುರುತಿಸಿದರು, ಬಳ್ಳಿಗಳನ್ನು ರೂಪಿಸಿದರು. ಆದುದರಿಂದಲೇ
                  ನಾನು ಅಕ್ಷರಮಾಲೆ ಹುಟ್ಟಿದ್ದು ನನ್ನ ತಪಸ್ಸಿನಿಂದ ಎಂದು ಹೇಳಿದ್ದು!

ಕ.ಪಿ.            : ಆದರೆ ಬ್ರಾಹ್ಮೀ ಲಿಪಿಗೆ ನಿನ್ನ ಸಂಬಂಧವೇನಮ್ಮಾ?

ಕನ್ನಡಮ್ಮ    : ನಾನು ನಿನಗೆ ಮೊದಲೇ ಹೇಳಲಿಲ್ಲವೇನಪ್ಪಾ? ಕನ್ನಡಿಗರ ಹಾಗು ಆರ್ಯರ
                  ಸಂಪರ್ಕದಿಂದಲೇ ಎರಡೂ ಭಾಷೆಗಳು ಬೆಳೆದವು. ಎಲ್ಲ ಭಾಷೆಗಳಿಗೂ ತಾಯಿ
                  ಲಿಪಿಯಾದ ಬ್ರಾಹ್ಮೀ ಮೊದಲಿಗೆ ಬಂದಿತು. ಕಾಲಾಂತರದಲ್ಲಿ ಲಿಪಿಗಳು ಬೇರೆ
                  ಬೇರೆಯಾದವು.
                 
ಕ.ಪಿ.            : ಅಮ್ಮಾ, ಬ್ರಾಹ್ಮೀ ಲಿಪಿಯಿಂದಲೇ ಹುಟ್ಟಿದರೂ ಸಹ, ನಾಗರಿ ಲಿಪಿಯಲ್ಲಿ
                  ಇರುವದಕ್ಕಿಂತ ಕನ್ನಡದಲ್ಲಿ ಎರಡು ಸ್ವರಗಳು ಜಾಸ್ತಿ ಇವೆ.
                  ಇದಕ್ಕೆ ಕಾರಣವೇನು?

ಕನ್ನಡಮ್ಮ    : ಮಗು, ಭಾರತದಲ್ಲಿರುವ ಎಲ್ಲಾ ಭಾಷೆಗಳ ಧ್ವನಿಗಳನ್ನು ನನ್ನ ಮಕ್ಕಳು
                  ಅಂದರೆ ಕನ್ನಡಿಗರು ಉಚ್ಚರಿಸಬಲ್ಲರು. ಭಾರತದ ಯಾವುದೇ ಭಾಷೆಗಿಂತಲೂ
                  ಹೆಚ್ಚಿನ ಧ್ವನಿಸಂಕೇತಗಳು ನನ್ನ ಕನ್ನಡ ಲಿಪಿಯಲ್ಲಿ ಇವೆ. ಇದು ನನ್ನ ಹೆಮ್ಮೆ!
                 
ಕ.ಪಿ.            :ಹೌದಮ್ಮಾ. ನಾನು ಇದರ ಕಾರಣವನ್ನು ಕೇಳುತ್ತಾ ಇದ್ದೇನೆ.

ಕನ್ನಡಮ್ಮ    : ನನ್ನ ಮಕ್ಕಳು ಅಂದರೆ ಕನ್ನಡಿಗರು ಸ್ನೇಹಜೀವಿಗಳು. ಸಾವಿರಾರು ವರ್ಷಗಳಿಂದ
                   ಎಲ್ಲರೊಡನೆಯೂ ಸರಳವಾಗಿ ಬೆರೆಯುತ್ತಿದ್ದಾರೆ. ಹೀಗಾಗಿ ಇವರ
                  ಧ್ವನಿಸಂಪತ್ತು, ಸಂಕೇತಸಂಪತ್ತು ಹಾಗು ಪದಸಂಪತ್ತು ಹೆಚ್ಚಿತು.
                  ಆದರೆ ತಾವೇ ಹೆಚ್ಚಿನವರು ಎಂದುಕೊಳ್ಳುವ ಜನಗಳ ಧ್ವನಿ ಹಾಗು
                  ಧ್ವನಿಸಂಕೇತಗಳು ಕಡಿಮೆಯಾಗಿವೆ.
                 
ಕ.ಪಿ.            : ಹೌದಮ್ಮ! ನಾಗರಿ ಲಿಪಿಯಲ್ಲಿ ‘ಎ’ ಮತ್ತು ‘ಏ’ ಧ್ವನಿಗಳಿಗೆ ಒಂದೇ ಸಂಕೇತವಿದೆ.
                  ಆದುದರಿಂದ ಮರಾಠಿ ಭಾಷಿಕರು Red ಹಾಗು Raid ಈ ಎರಡೂ ಪದಗಳನ್ನು
                  ‘ರೇಡ’ ಎಂದೇ ಉಚ್ಚರಿಸುತ್ತಾರೆ.

ಕನ್ನಡಮ್ಮ    : ನಾಗರಿ ಲಿಪಿಯಲ್ಲಿ ‘ಒ’ ಮತ್ತು ‘ಓ’ ಸ್ವರಗಳಿಗೂ ಸಹ ಒಂದೇ ಸಂಕೇತವಿದೆ.
                  ಹೀಗಾಗಿ ನನ್ನ ಕನ್ನಡ ಭಾಷೆಯಲ್ಲಿ ‘ಕೊಡು’ ಮತ್ತು ‘ಕೋಡು’ ಎನ್ನುವ
                  ಪದಗಳು ಸೃಷ್ಟಿಯಾದಂತೆ ಆರ್ಯಭಾಷೆಗಳಲ್ಲಿ ಸೃಷ್ಟಿಯಾಗುವದು ಸಾಧ್ಯವಿಲ್ಲ!
                 
ಕ.ಪಿ.            : ಇದಕ್ಕೂ ಹೆಚ್ಚಿನ ಮೋಜಿನ ಪ್ರಸಂಗವೊಂದನ್ನು ನಿನಗೆ ಹೇಳುತ್ತೇನೆ, ತಾಯಿ.
                  ಈ ಬಂಗಾಲಿ ಜನರು ‘ವ’ಕಾರವನ್ನು ‘ಬ’ಕಾರವಾಗಿ ಹಾಗು ‘ಅ’ಕಾರವನ್ನು
                  ‘ಒ’ತರಹಾ ಉಚ್ಚರಿಸುತ್ತಾರೆ. ವ್ಯಾಟ್‍ಸನ್ ಎನ್ನುವ ಆಂಗ್ಲ ಮನುಷ್ಯನನ್ನು
                  ಬಂಗಾಲಿಯೊಬ್ಬನು ಬ್ಯಾಟ್‍ಸೋನ್ ಎಂದು ಕರೆದು ಬೈಸಿಕೊಂಡಿದ್ದಿದೆ!
                 
ಕನ್ನಡಮ್ಮ    : ನಾಗರಿ ಲಿಪಿಯ ಹಾಗು ಆರ್ಯ ಭಾಷೆಗಳ ಬಡತನಕ್ಕಿಂತ, ತಮಿಳು ಭಾಷೆಯ
                  ಬಡತನವು ಇನ್ನೂ ಹೆಚ್ಚಿನದು. ತಮಿಳು ಜನ ‘ಗಾಂಧಿ’ ಅನ್ನೋದನ್ನ ‘ಕಾಂದಿ’
                  ಅಂತ ಬರೀತಾರ; ‘ಕಾಂತಿ’ ಅನ್ನೋದನ್ನೂ  ‘ಕಾಂದಿ’ ಅಂತ ಬರೀತಾರ! ಮತ್ತು
                  ಹಾಗೆಯೇ ಉಚ್ಚರಿಸುತ್ತಾರೆ. ಕನ್ನಡದಲ್ಲಿ ಕೆಳದಿ ಹಾಗು ಗೆಳತಿ ಇವುಗಳಿಗೆ ಬೇರೆ
                  ಅರ್ಥವಿದೆ. ಇಂತಹ ಪದಸಂಪತ್ತು ತಮಿಳಿನಲ್ಲಿ ಸಾಧ್ಯವಿಲ್ಲ. ಯಾಕೆಂದರೆ
                  ಅವರು ಈ ಎರಡೂ ಪದಗಳನ್ನು ಒಂದೇ ರೀತಿಯಲ್ಲಿ ಬರೆಯುತ್ತಾರೆ!
                 
ಕ.ಪಿ.            : ಇದಕ್ಕೆ ಕಾರಣವೇನು?

ಕನ್ನಡಮ್ಮ    : ತಮಿಳರ ಕೂಪಮಂಡೂಕ ವೃತ್ತಿ. ತಮ್ಮದೇ ದೊಡ್ಡದೆನ್ನುವ ಹುಚ್ಚು ಕಲ್ಪನೆ.
                  ಅವರಿಗೆ ಕೊಡುಕೊಳ್ಳುವ ಬುದ್ಧಿ ಇಲ್ಲ. ಹೀಗಾಗಿ ತಮಿಳಿನಲ್ಲಿ ಕಡಿಮೆ
                  ಅಕ್ಷರಗಳಿವೆ. ಅವರೂ ಸಹ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು
                  ತೆಗೆದುಕೊಂಡಿದ್ದಾರೆ. ಆದರೆ ಅವರಿಗೆ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇಲ್ಲ!
                 
ಕ.ಪಿ.            : ಓಹೋ, ಅದಕ್ಕೇ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆಯ ಗೌರವ
                  ಕೊಟ್ಟಿದ್ದಾರೊ? ಯಾವ ಭಾಷೆಯಲ್ಲಿ ಪ್ರಗತಿ ಇಲ್ಲವೊ, ಅದು ಅನಾಗರಿಕ      
                  ಅರ್ಥಾತ್ ಶಾಸ್ತ್ರೀಯ ಭಾಷೆ! ಆದುದರಿಂದಲೇ ಗಿರೀಶ ಕಾರ್ನಾಡರು ‘ಕನ್ನಡ
                  ಭಾಷೆಯು ಶಾಸ್ತ್ರೀಯ ಭಾಷೆ ಅಲ್ಲ’ ಎಂದು ಹೇಳಿದ್ದು. ನಿಜವಾಗಲೂ ಅವರೇ
                  ಸತ್ಯವಂತರು!
                 
ಕನ್ನಡಮ್ಮ    : (ನಿಟ್ಟುಸಿರುಗರೆಯುವಳು.)

ಕ.ಪಿ.            : ಇಂತಹ ಅನುಪಮ ಚೆಲುವಿನ ಹಾಗು ಸರ್ವಾಭರಣಭೂಷಿತೆಯಾದ ನೀನು ಈಗ
                  ನಿಟ್ಟುಸಿರುಗರೆಯಲು ಕಾರಣವೇನು?

ಕನ್ನಡಮ್ಮ    : ನನ್ನ ನಾದಶರೀರವನ್ನು ವಿರೂಪಗೊಳಿಸುತ್ತಿರುವ ಆಕಾಶವಾಣಿ ಹಾಗು ಟೀವಿ
                  ಕಾರ್ಯಕ್ರಮಗಳನ್ನಂತೂ ನೀನು ಕೇಳಿದೆ. ಈಗ ನನ್ನ ಲಿಪಿಶರೀರವನ್ನು
                  ಚೂರಿಯಿಂದ ಚೂರುಚೂರಾಗಿ ಕತ್ತರಿಸುತ್ತಿರುವ ಕಾರ್ಯಕ್ರಮಗಳನ್ನಷ್ಟು
                  ನೋಡುವೆಯಾ?

ಕ.ಪಿ.            : ತಾಯಿ, ನಿನ್ನ ಅಂಗಚ್ಛೇದವನ್ನು ಮಾಡುತ್ತಿರುವ ಆ ಮಾತೃಹಂತಕರಾರು?

ಕನ್ನಡಮ್ಮ    : ಪಿಶಾಚಿ, ನೈಸ್ ಕಾರಿಡಾರ್ ಮೇಲೆ ಹಾರುತ್ತ ಮೈಸೂರಿನತ್ತ ತೆರಳು.
                  ಅಲ್ಲಿ ನಿನಗೆ ನನ್ನ ಸುಪುತ್ರನ ದರ್ಶನವಾಗುವದು!

ಕ.ಪಿ.            : ಜೈ ಕನ್ನಡಾಂಬೆ!

                  (ಮುಂದಿನ ಸಂಚಿಕೆಯಲ್ಲಿ ಸುಪುತ್ರದರ್ಶನ.) 

32 comments:

ಮಂಜುಳಾದೇವಿ said...

ಸುನಾಥ್ ರವರೆ,
ಕ.ಪಿ ಯ ರೂಪದಲ್ಲಿ ಕನ್ನಡ ಭಾಷೆಯ ಜನ್ಮ ವೃತ್ತಾಂತವನ್ನು ತುಂಬಾ ಚೆನ್ನಾಗಿ ಪರಿಚಯಿಸಿದ್ದೀರಿ. ನಿಮ್ಮ ಈ ಸಂದರ್ಶನ ಮುಂದುವರೆಯಲಿ.ಅಭಿನಂದನೆಗಳು.

Subrahmanya said...

ಆಹಾಹಾ ! ಕನ್ನಡಾಂಬೆಯ ದಿವ್ಯರೂಪವನ್ನು ಕಂಡು ಕೃತಾರ್ಥನಾದೆ. ಈ ಕರ್ಣಪಿಶಾಚಿಯ ಸಮಸ್ಯೆಗಳೇನೋ ಬಗೆಹರಿಯುವಂತೆ ಕಾಣುತ್ತಿದೆ, ಆದರೆ ನಿಜವಾದ ಕರ್ಣ’ಪಿಚಾಚಿ’ಗಳ ಮೂರ್ಖತನವನ್ನು ಸರಿಪಡಿಸಲು ಕನ್ನಡಾಂಬೆಗೂ ಸಾಧ್ಯವಿಲ್ಲವೇನೋ !.

ಇಲ್ಲಿರುವ ಎಷ್ಟೋ ವಿಚಾರಗಳು ನನಗೂ ಗೊತ್ತಿರಲಿಲ್ಲ, ಇದನ್ನು ಓದುವಾಗ almost ನಾನೂ ಕರ್ಣಪಿಶಾಚಿಯೇ ಆಗಿದ್ದೆ.

ಸುಪುತ್ರನ ದರ್ಶಾನಾರ್ಥವಾಗಿ ಕೈಯಿಗೆ ಟ್ಯಾಗ್ ಕಟ್ಟಿಸಿಕೊಂಡು ನಾಮ ಹಾಕಿಕೊಂಡು ಕಾಯುತ್ತಿದ್ದೇನೆ !

ಚುಕ್ಕಿಚಿತ್ತಾರ said...

ಕನ್ನಡಮ್ಮನ ಸ್ಥಿತಿ ಎಷ್ಟೊ೦ದು ಚಿ೦ತಾಜನಕವಾಗಿದೆ...
ಸೂಕ್ಷ್ಮವಾಗಿ ವಿಡ೦ಬನೆ ಮಾಡಿದ್ದು ಯಥೋಚಿತವಾಗಿದೆ..
ಮು೦ದುವರೆಯಲಿ..

ಸುಮ said...

ಕಾಕ , ಈ ಕ.ಪಿ ಮತ್ತು ಕನ್ನಡಮ್ಮನ ಲೇಖನಮಾಲಿಕೆ ತುಂಬ ಚೆನ್ನಾಗಿದೆ. ಎಷ್ಟೊಂದು ಮಾಹಿತಿಗಳಿವೆ ! ಇದು ಹೆಚ್ಚು ಜನರನ್ನು ತಲುಪಬೇಕು .

shivu.k said...

ಸುನಾಥ್ ಸರ್,

ಕರ್ಣ ಪಿಶಾಚಿಯನ್ನು ನೆಪವಾಗಿ ಇಟ್ಟುಕೊಂಡು ವ್ಯಂಗ್ಯವನ್ನು ನಿಮ್ಮ ಶೈಲಿಯಾಗಿಟ್ಟುಕೊಂಡು ಹೊಸ ಹೊಸ ಪ್ರಯೋಗಗಳಿಗೆ ಪ್ರಯತ್ನಿಸುತ್ತಿದ್ದೀರಿ...ಈ ಭಾಗದಲ್ಲಿ ಕನ್ನಡ ಭಾಷೆಯ ಬಗ್ಗೆ ಅದು ಬೆಳೆದುಬಂದ ಬಗ್ಗೆ ಮಾಹಿತಿಯನ್ನು ನೀಡುತ್ತಾ ವಿವರಿಸುತ್ತಿರುವುದು ನಿಜಕ್ಕೂ ನಮಗೆಲ್ಲಾ ಉಪಯುಕ್ತವೆನಿಸುತ್ತಿದೆ...

sunaath said...

ಮಂಜುಳಾದೇವಿಯವರೆ,
ಧನ್ಯವಾದಗಳು. ಕನ್ನಡ ಭಾಷೆಯ ಜನ್ಮವೃತ್ತಾಂತದ ಸ್ಥೂಲ ಮಾಹಿತಿಯಿದು. ಆ ಕಾಲದ ಪರಿಸ್ಥಿತಿ ಸಂಕೀರ್ಣವಾಗಿತ್ತು. ಅದನ್ನೆಲ್ಲ ಈ ಲೇಖನದಲ್ಲಿ ಬರೆಯಲು ಸಾಧ್ಯವಾಗದು.

sunaath said...

ಪುತ್ತರ್,
ನೀವು ಹೇಳುವುದು ಸರಿಯಾಗಿದೆ. ನಿಜವಾದ ಪಿಶಾಚಿಗಳನ್ನು
ನಿಯಂತ್ರಿಸುವದು ಅಬಲೆ ಕನ್ನಡಾಂಬೆಗೆ ಸಾಧ್ಯವೆ?

sunaath said...

ವಿಜಯಶ್ರೀ,
ಕನ್ನಡಮ್ಮನ ಕರುಳಿನ ಕರೆಗೆ ಕರ್ಣಪಿಶಾಚಿಯದೇ ಆಲಂಬನ!

sunaath said...

ಸುಮಾ,
ಕನ್ನಡದ ಇತಿಹಾಸ ಎಷ್ಟು ದೀರ್ಘಕಾಲದ್ದು ಹಾಗು ಎಷ್ಟು ಸಂಕೀರ್ಣವಾಗಿದ್ದು! ಈ ಲೇಖನದಲ್ಲಿ ಅದರ ಸಣ್ಣ ಹೊಳವನ್ನು ತೋರಿಸಲು ಮಾತ್ರ ಸಾಧ್ಯವಾಗಿದೆ.

sunaath said...

ಶಿವು,
ಪಂಚದ್ರಾವಿಡ ಭಾಷೆಗಳು ಒಂದು ಕಾಲದಲ್ಲಿ ಒಂದೇ ರೂಪದಲ್ಲಿದ್ದು, ಬೇರೆ ಬೇರೆಯಾಗಿ ಬೆಳೆದು ನಿಂತವು. ಇವುಗಳ ಇತಿಹಾಸ ಸಂಕೀರ್ಣ ಹಾಗು ರೋಚಕ.

ಗಿರೀಶ್.ಎಸ್ said...

ಸರ್ ,ಕನ್ನಡ ಭಾಷೆಯ ಈಗಿನ ಸ್ಥಿತಿ ಗತಿಯನ್ನು ತುಂಬ ಚೆನ್ನಾಗಿ ತೋರಿಸಿದ್ದೀರ ಎ ಸಂದರ್ಶನದಲ್ಲಿ

sunaath said...

ಗಿರೀಶ,
ಕನ್ನಡಾಂಬೆಯ ಈಗಿನ ಸ್ಥಿತಿ ಸುಧಾರಿಸೀತು; ಅವಳ ಹಳೆಯ ವೈಭವ ಅವಳಿಗೆ ಮರಳೀತು ಎಂದು ಹಾರೈಸೋಣ!

ಮನಮುಕ್ತಾ said...

ಅನೇಕ ವಿಚಾರಗಳ ವಿವರಣೆಗಳೊ೦ದಿಗೆ ನವಿರಾದ ವಿಡ೦ಬನಾತ್ಮಕ ಬರಹ .. ಚೆನ್ನಾಗಿದೆ.. ಕಾಕಾ..ವಿಚಾರಗಳ ಸರಣಿ ಮು೦ದುವರಿಯಲಿ.

ಮನಸು said...

ವಿಡಂಬನಾತೀತವಾಗಿ ಕನ್ನಡಾಂಬೆ ಮತ್ತು ಮಕ್ಕಳ ಸಂಭಾಷೇ ಚೆನ್ನಾಗಿದೆ. ಒಟ್ಟಲ್ಲಿ ದಿವ್ಯರೂಪನ್ನೇ ನೀಡಿದ್ದೀರಿ...

sunaath said...

ಮನಮುಕ್ತಾ,
ಕರ್ಣಪಿಶಾಚಿಗೆ ಮುಕ್ತಿ ದೊರೆಯುವವರೆಗೆ ಸರಣಿ ಸಾಗುತ್ತದೆ!

sunaath said...

ಮನಸು,
ಕನ್ನಡಮ್ಮನು ದಿವ್ಯರೂಪದಲ್ಲಿಯೇ ಇರಲಿ ಎನ್ನುವದು ನಮ್ಮೆಲ್ಲರ ಹಾರೈಕೆ. ಏನಾದೀತೊ ನೋಡೋಣ!

ಜಲನಯನ said...

ಕರ್ಣ ಪಿಶಾಚಿ ಮತ್ತು ಕನ್ನಡಮ್ಮ ಅಷ್ಟು ಸವಿಸ್ತಾರವಾಗಿ ನಮ್ಮ ಭಾಷಾ ಸಂಪತ್ತಿನ ಮತ್ತು ಅದರ ಗಾಢ ಹಾಗೂ ಪ್ರಾಚೀನ ಹಿನ್ನೆಲೆಯ ಬಗ್ಗೆ ಚರ್ಚಿಸುವಂತೆ ತಂದ ಈ ನಿಮ್ಮ ಪ್ರಸ್ತುತಿ ..ಬಹಳ ಹಿಡಿಸಿತು ಸುನಾಥಣ್ಣ,,,,ನಿಜ ನೋಡಿ ಕನ್ನಡವೊಂದೇ ನುಡಿದಂತೆ ಬರೆಯಬಲ್ಲ ಮತ್ತು ಬರೆದಂತೆ ಉಚ್ಛರಿಸಬಲ್ಲ ಭಾಷೆ...ಇದರ ಅನುಭವ ನಾನು ಮಣಿಪುರದಲ್ಲಿ ಮತ್ತು ಮದ್ರಾಸಿನಲ್ಲಿ ನೌಕರಿಯಲ್ಲಿದ್ದಾಗ ಆಗಿದೆ.
ಕ, ಚ, ಟ, ತ, ಪ ಗಳ ಉಚ್ಛಾರದಲ್ಲಿರುವ ವಿಶೇಷತೆ ಗಮನಿಸಿದೆ. ನಾಲಗೆಯ ಮಧ್ಯಭಾಗ ಬಾಯ ಮೇಲ್ಚಾವಣಿಯನ್ನು ಮುಟ್ಟಿ ಕ ..ಆದರೆ ಚ- ನಾಲಗೆ ತುದಿಯ ಪ್ರಾರಂಭ (ಕಡೆಯ ನಾಲ್ಕನೇ ಭಾಗ)ಬಾಯ ಮೇಲ್ಚಾವಣಿಯನ್ನು ಮುಟ್ಟಿ ಉಚ್ಛರಿಸಲಾಗುತ್ತದೆ, ಹಾಗೇ ಟ ಗೆ ನಾಲಗೆಯ ತುದಿ ಹೊರಳಿ ಮುಟ್ಟಿದರೆ, ನಾಲಗೆಯ ತುತ್ತ ತುದಿ ಮೇಲಿನ ಮುಂಭಾಗದ ಹಲ್ಲಿನ ಬುಡವನ್ನು ಮುಟ್ಟಿದರೆ ’ತ’, ಮತ್ತೆ ’ಪ’ ಗೆ ನಾಲಗೆ ಸಹಾಯವಿಲ್ಲದೇ ತುಟಿಗಳ ಮೂಲಕ...ಇತ್ಯಾದಿ...
ನಿಮ್ಮ ಮುಂದಿನ ಕಂತಿಗೆ ಕಾಯ್ತೇನೆ..

sunaath said...

ಜಲನಯನ,
ಭಾರತದ ವಿವಿಧ ಭಾಗಗಳಲ್ಲಿ ನೀವಿದ್ದಾಗ ಅಲ್ಲಿಯ ಭಾಷಾರೂಪಗಳನ್ನು ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿದ್ದು, ನಿಜವಾಗಿಯೂ ಪ್ರಶಂಸನೀಯ. ಇದೀಗ ವಿದೇಶದಲ್ಲಿಯೂ ಸಹ
ಕನ್ನಡದ ಕಂಪನ್ನು ಹರಡುತ್ತಿದ್ದೀರಿ. ನಿಮಗೆ ಶುಭ ಹಾರೈಕೆಗಳು.

V.R.BHAT said...

ಸಾರಾಸಗಾಟಾಗಿ ಹಲವು ಮಾಹಿತಿಗಳನ್ನೂ ಲಘು ಹಾಸ್ಯವನ್ನೂ ಮತ್ತಷ್ಟು ನೈಜ ಅನಿಸಿಕೆಗಳನ್ನೂ ಮಿಶ್ರಣಮಾಡಿ ಬರೆಯುವ ಕ.ಪಿ.ಯ ಸಂವಾದ ಬಹಳ ಮುದನೀಡುತ್ತದೆ. ಅಂದಹಾಗೇ ಕ.ಪಿ. ಹೋದ ಜನ್ಮದಲ್ಲಿ ಕ್ರಿಕೆಟ್ ಆಟಗಾರನಾಗಿತ್ತೋ ಏನೋ ...ಕ್ರಿಕೆಟಿಗರ ಕುರಿತು ಕ.ಪಿ.ಯ ಸಂದರ್ಶನ ನಡೆದರೆ ಸ್ವಲ್ಪ ಒಳ್ಳೆಯದೆನಿಸುತ್ತದೆ, ನಮಸ್ಕಾರ

sunaath said...

ಭಟ್ಟರೆ,
ಕ.ಪಿ.ಯ ಸಂದರ್ಶನವನ್ನೇ ಒಮ್ಮೆ ತೆಗೆದುಕೊಳ್ಳೋಣ. ಅಂದರೆ ಅದರ ಪೂರ್ವಜನ್ಮದ ಮಾಹಿತಿ ಸಿಕ್ಕೀತು!

ಅನಂತ್ ರಾಜ್ said...

ಸುನಾತ್ ಸರ್ - ಈ ಪ್ರಯೋಗ ತು೦ಬಾ ಪರಿಣಾಮಕಾರಿಯಾಗಿದೆ. ಎಷ್ಟೊ೦ದು ವಿಚಾರಗಳು ತಿಳಿದವು. ವಿಡ೦ಬನೆಯ ಮೂಲಕ ಪ್ರಸ್ತುತ ಪಡಿಸಿದ ನೈಜ ವಿಚಾರಗಳ ಹಿ೦ದೆ ನೋವಿದೆ, ಕಳಕಳಿಯಿದೆ. ಸುಪುತ್ರನ ದರ್ಶನಾಭಿಲಾಷಿಗಳಲ್ಲಿ...ನಾನೂ ಟ್ಯಾಗ್ ಕಟ್ಟಿಕೊ೦ಡು ಪಾಳಿಯಲ್ಲಿ ನಿ೦ತಿದ್ದೇನೆ..!

ಧನ್ಯವಾದಗಳು
ಅನ೦ತ್

sunaath said...

ಅನಂತರಾಜರೆ,
ಸುಪುತ್ರನ ದರ್ಶನವನ್ನು ಶೀಘ್ರದಲ್ಲಿಯೇ ಪಡೆಯೋಣ!

ಶ್ರೀನಿವಾಸ ಮ. ಕಟ್ಟಿ said...

ಕರ್ಣ ಪಿಶಾಚಿಯ ಸಂದರ್ಶನ ತುಂಬ ಮಾರ್ಮಿಕವಾಗಿದೆ. ಕನ್ನಡಿಗರ ಮನೋಸ್ಠಿತಿಯನ್ನು ಸರಿಯಾಗಿ ತೋರಿಸುತ್ತದೆ. ಕಳೆದ ೬ ತಿಂಗಳು ಅಮೆರಿಕದಲ್ಲಿದೆ. ಅಲ್ಲಿ ಇಂಡಿಯನ್ ಸ್ಟೋರ್ಸಗೆ ಹೋದರೆ, ಕಿವಿಗೆ ಬೀಳುವದು ಮುಖ್ಯವಾಗಿ ತೆಲುಗು, ನಂತರ ತಮಿಳು. ಅಲ್ಲಿಯ ಕನ್ನಡಿಗರೆಲ್ಲರೂ ಮಾತನಾಡುವದು ಇಂಗ್ಲಿಷ್. ಉತ್ತರ ಕರ್ನಾಟಕದವರು ಮಾತ್ರ ಮಾತನಾಡುವದು ಕನ್ನಡ. ಅಲ್ಲಿ, ಕರ್ನಾಟಕ ಸಂಘದ ಕಲಾಪಗಳು ನಡೆಯುವದು ಇಂಗ್ಲಿಷ್‍ನಲ್ಲಿ. ಇದಕ್ಕಿಂತಲೂ ಹೆಚ್ಚಿಗೆ ಬೇಕೆ ನಮ್ಮ ಕನ್ನಡಾಭಿಮಾನಕ್ಕೆ ಸಾಕ್ಷಿ ?

ಶ್ರೀನಿವಾಸ ಮ. ಕಟ್ಟಿ said...

ಕನ್ನಡವೂ ನುಡಿದಂತೆ ಬರೆಯುವ ಭಾಷೆ ಎನ್ನುವದು ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಒತ್ತಕ್ಷರಗಳನ್ನು ನೋಡಿ ! ಉದಾಹರಣೆ : ಅದ್ಭುತ = ಅ + ದ್ + ಭ್ + ಉ + ತ್ + ಅ. ಆದರೆ ನಾವು ಕನ್ನಡದಲ್ಲಿ ಬರೆಯುವದು ಅದ್‍ಭುತ ಎಂದಲ್ಲ. ಉ ಸ್ವರವು ಭ್ ದ ಬದಲು ದ್ ಕ್ಕೆ ಬರೆಯುವೆವು. ಈ ಸಮಸ್ಯೆಯನ್ನು ನಾನು ಕನ್ನಡ ೬ನೇ ವರ್ಗದಲ್ಲಿ ಇರುವಾಗ ನಮ್ಮ ಗುರುಗಳಿಗೆ ಕೇಳಿ, "ಬಹಳ ಬುದ್ಧಿವಂತನಾಗಬೇಡ" ಎಂದು ಬೈಸಿಕೊಂಡದ್ದು ನೆನಪಿದೆ.

sunaath said...

ಕಟ್ಟಿಯವರೆ,
ಕನ್ನಡಿಗರು ಕರ್ನಾಟಕದಲ್ಲಿ ತಾತ್ಪೂರ್ತಿಕವಾಗಿ ಪಯಣಿಸುತ್ತಿರುವ ಪರಭಾಷಿಕರಿಗೆ ತೋರುವ ಔದಾರ್ಯವನ್ನು ನಾವು ಮೆಚ್ಚಬಹುದು. ಆದರೆ ಇಲ್ಲಿಯೇ ನೆಲೆಸಿದ ಪರಭಾಷಿಕರು ಕನ್ನಡಿಗರೊಂದಿಗೆ ಕನ್ನಡೇತರ ಭಾಷೆಯಲ್ಲಿ ಮಾತನಾಡುವದು ವಿಚಿತ್ರವೆನಿಸುತ್ತದೆ. ಇದನ್ನು ಕನ್ನಡಿಗರು ಕನ್ನಡಮ್ಮನಿಗೆ ತೊಡಿಸಿದ ‘ಔದಾರ್ಯದ ಉರುಳು’ ಎನ್ನಬಹುದೆ?

sunaath said...

ಕಟ್ಟಿಯವರೆ,
೬ನೆಯ ತರಗತಿಯಲ್ಲಿದ್ದಾಗಲೇ ನೀವು ತೋರಿಸಿದ ತರ್ಕಬದ್ಧ ವಿಚಾರಸರಣಿಯು ಪ್ರಶಂಸನೀಯವಾಗಿದೆ. ಏನೇ ಆದರೂ, ಕೊಂಬು ಅಥವಾ ಬಾಲವನ್ನು ಒತ್ತಕ್ಷರದ ಕೊನೆಯ ಧ್ವನಿಸಂಕೇತಕ್ಕೆ ತಗಲಿಸುವದು ಸಮಸ್ಯಾತ್ಮಕವಾಗುವದರಿಂದ ನಮ್ಮ ಹಿರಿಯರು ಮೊದಲ ಧ್ವನಿಸಂಕೇತಕ್ಕೇನೆ ತಗಲಿಸುತ್ತಿರಬಹುದು!

Ashok.V.Shetty, Kodlady said...

Sundara vidambanaathmaka baraha, tumbaa vishaygalannu tumbaa chennagi vivarisiddiri....Dhanyavadagalu...

Manjunatha Kollegala said...

ನನ್ನ ತಲೆಯಲ್ಲಿ ಕುಣಿಯುತ್ತಿದ್ದ ಅನೇಕ ವಿಷಯಗಳನ್ನು ನೀವು ಬರೆದಿದ್ದೀರಿ. ಕನ್ನಡಮ್ಮನನ್ನು ಹರಿದು ತಿನ್ನುವ ಪಿಚಾಚಿಗಳಿಗಿಂತ ಈ ಪಿಶಾಚಿ ಎಷ್ಟೋ ವಾಸಿ.

ಪರಿಣಾಮಕಾರಿ ಬರಹ.

ಶಿವಪ್ರಕಾಶ್ said...

ಅದ್ಭುತ ಲೇಖನ......!!!

Karthik Kamanna said...

ನಿಮ್ಮ ಕ.ಪಿ.ಯ ಸಂದರ್ಶನಗಳು ನನ್ನ ಕಚೇರಿಯ ಕೆಲ ನಿರಭಿಮಾನಿ ಕನ್ನಡಿಗರ ಕಣ್ಣು ತೆರೆಸಿವೆ :)

ಸೀತಾರಾಮ. ಕೆ. / SITARAM.K said...

vidambaneyondige kannada bhaashe saagi banda daari chennaagi vivarisiddiraa...dhanyavaadagalu sunaathare!

Harisha - ಹರೀಶ said...

ಕನ್ನಡಮ್ಮನ ಕಾಲು ಬಾಲ ಕತ್ತರಿಸಲು ಯತ್ನಿಸುತ್ತಿರುವ ಪಿಶಾಚಿಗಳಿಗೆ ಸರಿಯಾಗೆ ಬಿಸಿ ಮುಟ್ಟಿಸಿದ್ದೀರಿ. ಮುಂದುವರೆಯಲಿ ಈ ಸರಣಿ