Thursday, June 16, 2011

ಬೇಂದ್ರೆಯವರ ‘ಚಳಿಯಾಕೆ’


ಸೀಗೆ ಹುಣ್ಣಿವೆ ಮುಂದೆ
ಸೋಗಿನ ಚಂದ್ರಮ
ಸಾಗಿ ಬರುವೊಲು ಬರುವ ಚಳಿಯಾಕೆ.
ಹೊನ್ನ ಸೇವಂತಿಗೆಯ
ಹೆರಳು ಬಂಗಾರದ
ಬೆಳ್ಳಿ ಸೇವಂತಿಗೆಯ ಬಳಿಯಾಕೆ.

ಮುಗಿಲಲ್ಲಾಡುವ
ಬಾವಿಲಿ ಮಲ್ಲಿಗೆ
ಕಿವಿಗೊಪ್ಪು ಓಲೆಕೊಪ್ಪು ಚಳತುಂಬ
ಹೊಳೆಹೊಂಡದುಸಿರನ್ನೆ
ನಯವಾಗಿ ನೆಯ್ದಂಥ
ಮಂಜಿನ ಮೇಲ್ಸೆರಗು ಮೈತುಂಬ.

ಹೊಂಗಡಲು ಹೊಯ್ದಾಡಿ-
ದೊಲು ನೆಲ್ಲು ತಲೆದೂಗೆ,
ಅದರಲ್ಲಿ ಬಾ ಸುಮ್ಮನೀಸಾಡಿ.
ತೆನೆಹಾಲು ದಕ್ಕಲಿ
ಕಕ್ಕಿಸಬೇಡದನು
ನಿನ್ನ ನಂಜಿನ ಸೆರಗ ಬೀಸಾಡಿ.

ಕಣ್ಣಿಗೆ ಕಾಣದೆ
ಮೈಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ.
ಅಡಿಗೊಮ್ಮೆ ನಡುನಡುಗಿ
ಇರುಳ ಬೆಳದಿಂಗಳಕೆ
ಬಿಳಿಮೋಡ ನಗುವಂತೆ ನಗುವಾಕೆ.

ಉಸುರುಸಿರಿಗೆ ಮರುಕ
ಹೆಜ್ಜೆಹೆಜ್ಜೆಗೆ ಬೆಡಗು
ಮೆಲ್ಲಗೆ ಮುಂಗಯ್ಯ ಹಿಡಿವಾಕೆ.
ಯಾವ ಜಾತಿಯ ಹೆಣ್ಣೊ
ಹಾವ ಭಾವವೆ ಬೇರೆ
ಅಪ್ಪಿದ ಅಪ್ಪಿಗೆ ಬಿಡದಾಕೆ.
………………………………………………………...........................................


 ‘ಚಳಿಯಾಕೆ’ ಕವನದಲ್ಲಿ ಓದುಗರು ಒಂದು  Etheric feeling ಅನ್ನು ಅನುಭವಿಸುತ್ತಾರೆ. ಇದು ಬೇಂದ್ರೆಯವರ ‘ಕಾವ್ಯಪ್ರತಿಭೆಯ’ ನಿದರ್ಶನ. ಕವನದ ಪ್ರತಿ ನುಡಿಯಲ್ಲಿ ಅವರು ಸೃಷ್ಟಿಸುವ ಉಪಮಾಲಂಕಾರಗಳು ಅವರ ಕಾವ್ಯರಚನಾ ಪ್ರತಿಭೆಯ ನಿದರ್ಶನಗಳಾಗಿವೆ.

ಈ ಕವನದ ಹಿನ್ನೆಲೆ ಹೀಗಿದೆ:
ಭಾದ್ರಪದ ಮಾಸದ ಕೊನೆಗೆ ವರ್ಷಾ ಋತು ಮುಗಿದು, ಶರತ್ ಋತುವಿನ ಮೊದಲ ಮಾಸವಾದ ಆಶ್ವೀನ ಮಾಸ ಪ್ರಾರಂಭವಾಗುತ್ತದೆ. ಮಳೆಗಾಲದ ಕಾರ್ಮೋಡಗಳು ಕರಗಿ ಹೋಗಿರುತ್ತವೆ. ಅಲ್ಲೊಂದು ಇಲ್ಲೊಂದು ಬಿಳಿಯ ಮೋಡಗಳ ತುಣುಕುಗಳು ಕಾಣುತ್ತಿರುತ್ತವೆ. ಹಗಲು ಕಡಿಮೆಯಾಗುತ್ತ, ರಾತ್ರಿಯು ದೀರ್ಘವಾಗುತ್ತಿರುತ್ತದೆ. ಮುಂಗಾರು ಪೈರಿನಲ್ಲಿ ತೆನೆಗಳು ಮೂಡಿರುತ್ತವೆ. ಕೆರೆ, ಬಾವಿಗಳು ತುಂಬಿಕೊಂಡಿರುತ್ತವೆ.

ಇದು ಎಲ್ಲರಿಗೂ ಉಲ್ಲಾಸದ ಕಾಲ. ಆದುದರಿಂದ ಈ ಮಾಸದ ಮೊದಲ ದಿನದಿಂದಲೇ ಹಬ್ಬಗಳು ಪ್ರಾರಂಭವಾಗುತ್ತವೆ.  ಅಷ್ಟಮಿ ತಿಥಿಯಂದು ದುರ್ಗಾಪೂಜೆ, ಮಹಾನವಮಿಯಂದು ಬನ್ನೀಪೂಜೆ, ವಿಜಯದಶಮಿಯಂದು ಬನ್ನಿ-ಬಂಗಾರದ ವಿನಿಮಯ!

ಸೀಗೆ ಹುಣ್ಣಿವೆಯ ದಿವಸ ‘ಚರಗ’ ಚೆಲ್ಲುತ್ತಾರೆ; ಅಂದು ರಾತ್ರಿ ‘ಕೋಜಾಗರಿ’, ಅಂದರೆ ಬೆಳದಿಂಗಳ ಊಟ! ಬೇಂದ್ರೆಯವರ ಕಾಲದ ಹಳ್ಳಿಗಳಲ್ಲಿ ಹಾಗು ಅನೇಕ ಊರುಗಳಲ್ಲಿ ವಿದ್ಯುತ್ ದೀಪ ಇರುತ್ತಿರಲಿಲ್ಲ. ಕುಟುಂಬದ ಸದಸ್ಯರೆಲ್ಲ ರಾತ್ರಿಯ ಊಟವನ್ನು ಮುಗಿಸಿದ ನಂತರ, ಪ್ರಶಾಂತ ವಾತಾವರಣದಲ್ಲಿ ಮನೆಯ ಅಂಗಳದಲ್ಲಿ ಹರಟೆ ಹೊಡೆಯುತ್ತ ಕೂತುಕೊಂಡಿರುತ್ತಿದ್ದರು. ಹುಣ್ಣಿವೆಯ ಬೆಳದಿಂಗಳ ಸೊಬಗನ್ನು ಸವಿಯುತ್ತ , ಚಳಿಯಲ್ಲಿ ನಡುಗುತ್ತ, ಪ್ರಕೃತಿಯಲ್ಲಿ ಸಮರಸರಾಗಿ ಹೋಗುವ ಪರಿ ಇದು. ಇಂತಹ ಸೊಬಗನ್ನು ಬೇಂದ್ರೆಯವರು ಬಣ್ಣಿಸುವದು ಹೀಗೆ:

ಸೀಗೆ ಹುಣ್ಣಿವೆ ಮುಂದೆ
ಸೋಗಿನ ಚಂದ್ರಮ
ಸಾಗಿ ಬರುವೊಲು ಬರುವ ಚಳಿಯಾಕೆ.
ಹೊನ್ನ ಸೇವಂತಿಗೆಯ
ಹೆರಳು ಬಂಗಾರದ
ಬೆಳ್ಳಿ ಸೇವಂತಿಗೆಯ ಬಳಿಯಾಕೆ.

ಬೇಂದ್ರೆಯವರ ಕವನ ‘ಸೋಗಿನ ಚಂದ್ರಮ’ನಿಂದ ಪ್ರಾರಂಭವಾಗುತ್ತದೆ. ಏಕೆಂದರೆ ಇಡೀ ವಾತಾವರಣವೇ ಸೋಗಿನಿಂದ ತುಂಬಿದೆ. ಹರಟೆ ಹೊಡೆಯುವ ದೊಡ್ಡವರ ಸೋಗು ಒಂದು ರೀತಿಯದಾದರೆ, ಕಳ್ಳಾಟದ ಹುಡುಗರ ಸೋಗು ಒಂದು ರೀತಿಯದು. ಇದಕ್ಕೆಲ್ಲ ಪ್ರೇರಣೆ ನೀಡುವ ಚಂದ್ರನಂತೂ ಸೋಗಿನ ಪ್ರಮುಖ ಆಟಗಾರನಾಗಿದ್ದಾನೆ.

ಆಶ್ವೀನ ಮಾಸದಲ್ಲಿ ಬಿಳಿಯ ಮೋಡಗಳ ತುಣುಕುಗಳು ಅಲ್ಲಲ್ಲಿ ಸಾಗುತ್ತಿರುತ್ತವೆ. ಇವುಗಳ ನಡುವಿನ ಅಂತರದಲ್ಲಿ, ಸೀಗೆ ಹುಣ್ಣಿವೆಯ ಪೂರ್ಣಚಂದ್ರನು ಒಮ್ಮೆ ಪ್ರಕಾಶಿಸುವದು, ಒಮ್ಮೆ ಕಣ್ಮರೆಯಾಗುವದು ನಡೆದಿರುತ್ತದೆ. ಇದೇ ಚಂದ್ರನ ಕಣ್ಣುಮುಚ್ಚಾಲೆಯಾಟ ಅಂದರೆ ಸೋಗಿನಾಟ! ಬೇಂದ್ರೆಯವರ ಚಳಿಯಾಕೆಯೂ ಸಹ ಚಂದ್ರಮನ ಸೋಗಿನಾಟಕ್ಕೆ ತಕ್ಕ ಕಳ್ಳಹೆಜ್ಜೆ ಇಡುತ್ತ ಮೆಲ್ಲಮೆಲ್ಲನೆ ಎಲ್ಲವನ್ನೂ ಆವರಿಸುತ್ತಿದ್ದಾಳೆ. ಚಂದ್ರನನ್ನು ಹಾಗು ಚಳಿಯನ್ನು ಒಟ್ಟಾರೆಯಾಗಿ ನಿರೂಪಿಸುವ ವರಕವಿಯ ಕುಶಲತೆಯನ್ನು ಇಲ್ಲಿ ಕಾಣಬಹುದು. ಚಂದ್ರ, ಚಳಿಯಾಕೆ, ಪ್ರಕೃತಿ ಹಾಗು ಮಾನವರು ಇಲ್ಲಿ ಒಂದಾಗಿ ಬೆರತಿದ್ದಾರೆ.

ಪ್ರಕೃತಿಯ ಚೆಲುವನ್ನು ಆಸ್ವಾದಿಸುತ್ತ ಕುಳಿತ ಬೇಂದ್ರೆಯವರು, ಆ ಚೆಲುವನ್ನೆಲ್ಲ ತಮ್ಮ ಚಳಿಯಾಕೆಗೆ ತೊಡಿಸದೆ ಇರಲು ಸಾಧ್ಯವೆ? ವರಕವಿಯ ಕಣ್ಣಿಗೆ ಚಂದ್ರ ಹಾಗು ತಾರೆಗಳು ತಮ್ಮ ಚಳಿಯಾಕೆಯ ಆಭೂಷಣಗಳಾಗಿ ಕಾಣುತ್ತವೆ. ಅಂತಲೇ ಇವಳು ‘ಹೊನ್ನ ಸೇವಂತಿಗೆ’ ಹಾಗು  ‘ಹೆರಳು ಬಂಗಾರ’ ಎನ್ನುವ ಒಡವೆಗಳನ್ನು ಧರಿಸಿದ್ದಾಳೆ. ಹೆಣ್ಣುಮಕ್ಕಳು ಹೊನ್ನ ಸೇವಂತಿಗೆಯನ್ನು ತುರುಬಿನಲ್ಲಿ ಧರಿಸುತ್ತಾರೆ ಹಾಗು ಹೆರಳು ಬಂಗಾರವನ್ನು ಜಡೆಯಲ್ಲಿ ಸಿಕ್ಕಿಸಿಕೊಳ್ಳುತ್ತಾರೆ. ಈ ಚಳಿಯಾಕೆಗೆ ನಸುಹಳದಿ ಬಣ್ಣದ ದುಂಡು ಚಂದ್ರನೇ ಹೊನ್ನಸೇವಂತಿಗೆ ಹಾಗು ಅಲ್ಲಲ್ಲಿ ಮಿನುಗುತ್ತಿರುವ ಚಿಕ್ಕೆಗಳೇ ಹೆರಳುಬಂಗಾರ.  ಕೆಲವೊಮ್ಮೆ ಚಂದ್ರನ ಸುತ್ತಲೂ ಕಟ್ಟಬಹುದಾದ ‘ಕೆರೆ’ಯೇ ಇವಳ ಬೆಳ್ಳಿಸೇವಂತಿಗೆಯ ಕೈಬಳೆ!

ಇಷ್ಟಾದರೆ ಸಾಕೆ?
ಬೇಂದ್ರೆಯವರು ಚಳಿಯಾಕೆಯ ಕರ್ಣಾಭರಣಗಳ ಹಾಗು ಉಡುಗೆಯ ವರ್ಣನೆಯನ್ನು ಎರಡನೆಯ ನುಡಿಯಲ್ಲಿಯೂ ಮುಂದುವರೆಸುತ್ತಾರೆ. ಈ ರೀತಿಯಾಗಿ ಚಳಿಯ ಮಾನುಷೀಕರಣ ಮಾಡುತ್ತ, ಚಂದ್ರತಾರೆಗಳನ್ನು ಆಭರಣಗಳನ್ನಾಗಿ ಮಾಡುವದರಿಂದ, ಇವೆರಡನ್ನೂ ಒಟ್ಟಾಗಿ ವರ್ಣಿಸುವದು ಸುಲಭವಾಗುತ್ತದೆ. ಇದೊಂದು ಸಾಹಿತ್ಯಕೌಶಲ್ಯ.

ಮುಗಿಲಲ್ಲಾಡುವ
ಬಾವಿಲಿ ಮಲ್ಲಿಗೆ
ಕಿವಿಗೊಪ್ಪು ಓಲೆಕೊಪ್ಪು ಚಳತುಂಬ
ಹೊಳೆಹೊಂಡದುಸಿರನ್ನೆ
ನಯವಾಗಿ ನೆಯ್ದಂಥ
ಮಂಜಿನ ಮೇಲ್ಸೆರಗು ಮೈತುಂಬ.

ಬಿಳಿಯ ತುಂಡುಮೋಡಗಳು ಕೆಳಗೆ ಚಲಿಸುತ್ತಿದ್ದರೆ, ಚಂದ್ರ ಹಾಗು ಚಿಕ್ಕೆಗಳು ಆ ಮೋಡಗಳ ಮೇಲ್ಭಾಗದಲ್ಲಿ ಕಾಣಿಸುತ್ತವೆ. ಇದರಿಂದಾಗಿ ಆಕಾಶವು ತಲೆಕೆಳಗಾದ ‘ಬಾವಿ’ಯಂತೆ ಕಾಣುವದು! ಮೋಡಗಳ ಚಲನೆಯಿಂದಾಗಿ, ಈ ಬಾವಿ ಅಲ್ಲಾಡಿದಂತೆ ತೋರುವದು. ಈ ಅಲ್ಲಾಡುತ್ತಿರುವ ಬಾವಿಯಲ್ಲಿಯ ಮಲ್ಲಿಗೆ ಹೂವುಗಳನ್ನು ಅಂದರೆ ಚಿಕ್ಕಿಗಳನ್ನು ಧರಿಸಿದ್ದಾಳೆ ನಮ್ಮ ಚಳಿಯಾಕೆ! ಈ ಆಕಾಶಮಲ್ಲಿಗೆಗಳೆಲ್ಲ ಅವಳಿಗೆ ಓಲೆಕೊಪ್ಪು ಹಾಗು ಚಳತುಂಬ ಎನ್ನುವ ಕರ್ಣಭೂಷಣಗಳಾಗಿವೆ. ಇನ್ನು ಅವಳು ಮೈತುಂಬ ಹೊದ್ದುಕೊಂಡಂತಹ ಮೇಲ್ಸೆರಗು ಎಂತಹದು?

ತುಂಬಿತುಳುಕುತ್ತಿರುವ ಹೊಳೆ ಹಾಗು ಹೊಂಡಗಳ ನೀರು ಬಾಷ್ಪೀಭವನವಾಗುವದನ್ನು ಬೇಂದ್ರೆಯವರು ಹೊಳೆ,ಹೊಂಡಗಳ ‘ಉಸಿರು’ ಎಂದು ಬಣ್ಣಿಸುತ್ತಾರೆ. ಈ ‘ಉಸಿರ’ನ್ನೇ ನಯವಾಗಿ ನೇಯ್ದಾಗ ಅದು ಮಂಜಾಗುತ್ತದೆ. ಅದೇ ಚಳಿಯಾಕೆಯು ಹೊದ್ದುಕೊಂಡ ತೆಳ್ಳನೆಯ ಮೇಲ್ಸೆರಗು. ವಾಸ್ತವತೆಯನ್ನೇ ಚಮತ್ಕಾರದ ಕಲ್ಪನೆಯನ್ನಾಗಿ ಮಾರ್ಪಡಿಸುವ ಬೇಂದ್ರೆಪ್ರತಿಭೆಯ ಉದಾಹರಣೆ ಇದು!

ಇಲ್ಲಿ ಮತ್ತೊಂದು ಚಮತ್ಕಾರವನ್ನು ಗಮನಿಸಬೇಕು. ಚಳಿಯಾಕೆ ತೊಟ್ಟ ಆಭರಣಗಳು ಆಕಾಶದಲ್ಲಿದ್ದರೆ, ಅವಳು ಉಟ್ಟ ಉಡುಪು ಭೂಮಿಯ ಕೊಡುಗೆ. ಈ ರೀತಿಯಾಗಿ ಅವಳು ಭೂಮಿ ಹಾಗು ಆಕಾಶಗಳನ್ನು ವ್ಯಾಪಿಸಿದ್ದಾಳೆ.

ಮೂರನೆಯ ನುಡಿ ಹೀಗಿದೆ:

ಹೊಂಗಡಲು ಹೊಯ್ದಾಡಿ-
ದೊಲು ನೆಲ್ಲು ತಲೆದೂಗೆ,
ಅದರಲ್ಲಿ ಬಾ ಸುಮ್ಮನೀಸಾಡಿ.
ತೆನೆಹಾಲು ದಕ್ಕಲಿ
ಕಕ್ಕಿಸಬೇಡದನು
ನಿನ್ನ ನಂಜಿನ ಸೆರಗ ಬೀಸಾಡಿ.

ಇಂತಹ ಮಂಜಿನ ಉಡುಗೆಯನ್ನು ಉಟ್ಟ ಚಳಿಯಾಕೆ ಬಿರುಸಾಗಿ ಬಂದರೆ, ಭೂಮಿಯ ಮೇಲಿನ ಬದುಕು ಏನಾಗಬೇಡ?
ಭತ್ತದ ಪೈರು ಬೆಳೆದು ನಿಂತಿರುವ ಕಾಲವಿದು.  ಸಾಲುಸಾಲಾಗಿ ಹಬ್ಬಿರುವ ಇದರ ತೆನೆಗಳು, ಬೆಳದಿಂಗಳಿನಲ್ಲಿ ಬಂಗಾರದ ಕಡಲಿನ ತೆರೆಗಳಂತೆ ಶೋಭಿಸುತ್ತವೆ. ಕಡಲ ತೆರೆಗಳು ಹೊಯ್ದಾಡಿದಂತೆ ಇವು ಗಾಳಿಗೆ ತಲೆದೂಗುತ್ತಲಿವೆ! ಭತ್ತದ ಈ ಕಡಲಿನಲ್ಲಿ ಚಳಿಯಾಕೆ ತನ್ನ ನಂಜಿನ ಸೆರಗಾದ ಮಂಜನ್ನು ಬೀಸಾಡಿದರೆ, ತೆನೆಹಾಲೆಲ್ಲ ಕಕ್ಕಿ ಹೋದೀತು. ಆದುದರಿಂದ, ‘ಈ ಹೊಂಗಡಲಿನಲ್ಲಿ ಸಾವಕಾಶವಾಗಿ ಈಜಿದಂತೆ ಬಾ’, ಎಂದು ಬೇಂದ್ರೆಯವರು ಚಳಿಯಾಕೆಯನ್ನು ಪ್ರಾರ್ಥಿಸುತ್ತಾರೆ.
(ಸೀಗೆ ಹುಣ್ಣಿವೆಯ ಹಗಲಿನಲ್ಲಿ ರೈತರೆಲ್ಲ ತಮ್ಮ ಹೊಲಗಳಲ್ಲಿ ‘ಚರಗ ಚೆಲ್ಲಿ’ ಬರುವದರ ಕಾರಣವೂ ಇದೇ ಆಗಿದೆ. ನಿಸರ್ಗದ ಚೈತನ್ಯಗಳು ಬೆಳೆದು ನಿಂತ ಪೈರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿ, ‘ಭೂತಬಲಿ’ಯನ್ನು ನೀಡುವದರ ಸಂಕೇತವಿದು.)
(ಈ ತೆನೆಹಾಲು ಭತ್ತದ ಬೆಳೆಯ ಶೈಶವಾವಸ್ಥೆಯ ಹಾಲು. ಹಾಲು ಕುಡಿಯುತ್ತಿರುವ ಕಂದಮ್ಮನ ಬಾಯಿಯಿಂದ ಕೆಲವೊಮ್ಮೆ ಹಾಲು ಹೊರಚೆಲ್ಲುವುದುಂಟು. ಆವಾಗ, ‘ಕೂಸು ಹಾಲನ್ನು ಕಕ್ಕಿತು’ ಎನ್ನುತ್ತಾರೆ. ಆದುದರಿಂದಲೇ ಬೇಂದ್ರೆಯವರು ‘ತೆನೆಹಾಲು ದಕ್ಕಲಿ, ಕಕ್ಕಿಸಬೇಡದನು’ ಎಂದು ಚಳಿಯಾಕೆಗೆ ಪ್ರಾರ್ಥಿಸುತ್ತಾರೆ.)

ನಾಲ್ಕನೆಯ ನುಡಿ:

ಕಣ್ಣಿಗೆ ಕಾಣದೆ
ಮೈಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ.
ಅಡಿಗೊಮ್ಮೆ ನಡುನಡುಗಿ
ಇರುಳ ಬೆಳದಿಂಗಳಕೆ
ಬಿಳಿಮೋಡ ನಗುವಂತೆ ನಗುವಾಕೆ.

ಈ ಚಳಿಯಾಕೆ ಬಲು ಚಾಲಾಕಿ ಹೆಣ್ಣು! ನಿಮ್ಮ ಕಣ್ಣಿಗೆ ಬೀಳದೆಯೆ, ನಿಮ್ಮ ಮೈ ಮುಟ್ಟುತ್ತಾಳೆ. ಆಗ ನಿಮ್ಮ ಮೈ ರೋಮಾಂಚನಗೊಳ್ಳುತ್ತದೆ. ನಿಮ್ಮ ತುಟಿಗೆ ಅವಳು ಸೋಂಕಿದರೆ, ನಿಮ್ಮ ಬಾಯಿ ‘ಅಹಹ’ ಎಂದು ನಡುಗುವದು! ತಾನು ಸ್ವಲ್ಪವೂ ಮಿಸುಕದೆ, ನಿಮಗೆ ತಿಳಿಯಲಾರದಂತೆ ನೀವು ಹೊತ್ತುಕೊಂಡ ಹೊದ್ದಿಕೆಯಲ್ಲಿ ಈ ಅದೃಶ್ಯವನಿತೆ ಸೇರಿಕೊಳ್ಳುತ್ತಾಳೆ! ನೀವು ಚಳಿಯಾಯಿತೆಂದು ನಡುಗುತ್ತ, ಕಾಲು ಮಡಚಿಕೊಂಡು ಮುದ್ದೆಯಾಗುತ್ತೀರಿ. ಆಗ ಈ ಚಳಿಯಾಕೆ ನಗುತ್ತಾಳೆ. ಅವಳ ನಗುವು ಎಷ್ಟು ಚೆಲುವಾಗಿದೆ ಎನ್ನುತ್ತೀರಾ?  ಹುಣ್ಣಿವೆಯ ರಾತ್ರಿಯ ಬೆಳದಿಂಗಳನ್ನು ಹೀರಿಕೊಂಡು, ಅದನ್ನೇ ಎಲ್ಲೆಡೆ ಪ್ರತಿಫಲಿಸುವ ಬಿಳಿಮೋಡದ ನಗುವಿನಂತೆ ಈ ಚಳಿಯಾಕೆ ನಿಶ್ಶಬ್ದವಾಗಿ ನಗುತ್ತಾಳೆ. ಬೇಂದ್ರೆಯವರು ಎಂತಹ ರಮ್ಯ ಪ್ರಣಯಿನಿಯನ್ನು ಸೃಷ್ಟಿಸಿದ್ದಾರಲ್ಲವೆ!

ಐದನೆಯ ನುಡಿ:
ಉಸುರುಸಿರಿಗೆ ಮರುಕ
ಹೆಜ್ಜೆಹೆಜ್ಜೆಗೆ ಬೆಡಗು
ಮೆಲ್ಲಗೆ ಮುಂಗಯ್ಯ ಹಿಡಿವಾಕೆ.
ಯಾವ ಜಾತಿಯ ಹೆಣ್ಣೊ
ಹಾವ ಭಾವವೆ ಬೇರೆ
ಅಪ್ಪಿದ ಅಪ್ಪಿಗೆ ಬಿಡದಾಕೆ.

ಚಳಿಯಿಂದ ನಡುಗುತ್ತಿರುವ ನೀವು ಕ್ಷಿಪ್ರವಾಗಿ ಉಸಿರಾಡಿಸುವಾಗ, ಚಳಿಯಾಕೆ ನಿಮ್ಮ ಮೇಲೆ ಮರುಕ ತೋರಿ ಒಂದು ಕ್ಷಣ ಹಿಂದೆಗೆಯುತ್ತಾಳೆ. ಮರು ಉಸಿರಿನಲ್ಲಿ ಮತ್ತೆ ನಿಮ್ಮ ಬಳಿ ಸಾರಿರುತ್ತಾಳೆ. ಈ ರೀತಿಯಾಗಿ ಹಿಂದೆ ಮುಂದೆ ಹೆಜ್ಜೆ ಇಡುತ್ತ ತನ್ನ ಬೆಡಗನ್ನು ತೋರಿಸುತ್ತಲೇ, ನಿಮಗೆ ಅರಿವಾಗದಂತಲೇ, ನಿಮ್ಮ ಮುಂಗೈಯನ್ನು ಹಿಡಿದುಕೊಳ್ಳುತ್ತಾಳೆ. ಇನ್ನು ಇವಳಿಂದ ಬಿಡುಗಡೆಯನ್ನು ಪಡೆಯುವದು ಸಾಧ್ಯವಿಲ್ಲ! ಬೇಂದ್ರೆಯವರು ಈ ಸತ್ಯವನ್ನು ಈಗ ಒಪ್ಪಿಕೊಂಡು ಬಿಟ್ಟರು. ಆದುದರಿಂದ ಇವಳು ತೋರಿಸಿದ ಹಾವಭಾವಗಳಿಂದ ಚಕಿತರಾದ ಅವರು ಇವಳು ಯಾವ ಜಾತಿಯ ಹೆಣ್ಣೊ ಎಂದು ಉದ್ಗಾರ ತೆಗೆಯುತ್ತಾರೆ. ಪ್ರಣಯಕಾಮಿನಿಯರಲ್ಲಿ ‘ಪದ್ಮಿನಿ,ಚಿತ್ತಿನಿ,ಹಸ್ತಿನಿ’ ಮೊದಲಾದ ಜಾತಿಗಳಿವೆ ಎಂದು ನಮ್ಮ ಶಾಸ್ತ್ರಕಾರರು ಹೇಳಿದ್ದಾರೆ. ತನ್ನನ್ನು ಬಿಡದಂತೆ ಬಿಗಿದಪ್ಪಿಕೊಂಡ ಈ ಚಳಿಯಾಕೆ ಯಾವ ಪ್ರಕಾರಕ್ಕೆ ಸೇರಿದವಳು ಎನ್ನುವದು ಬೇಂದ್ರೆಯವರನ್ನು ಅಚ್ಚರಿಗೀಡು ಮಾಡಿದೆ!
...................................................................................

‘ಚಳಿಯಾಕೆ’ ಕವನದಲ್ಲಿ ಬೇಂದ್ರೆಯವರು ಅನೇಕ ಉಪಮೆಗಳನ್ನು ಬಳಸಿಕೊಂಡಿದ್ದಾರೆ. ಕವನದ ಪ್ರತಿಯೊಂದು ನುಡಿಯಲ್ಲಿಯೂ ಮೈ ಜುಮ್ಮೆನ್ನುವ ಉಪಮೆಗಳಿವೆ.  ಉಪಮಾನಗಳಿಗೂ ವಿಶೇಷಣಗಳನ್ನು ಜೋಡಿಸಿದ್ದು ಇಲ್ಲಿಯ ವೈಶಿಷ್ಟ್ಯ. ಹೀಗಾಗಿ ಇಲ್ಲಿಯ ಚಂದ್ರ ‘ಸೋಗಿನ ಚಂದ್ರಮ’. ಇಲ್ಲಿಯ ಮುಗಿಲು ‘ಅಲ್ಲಾಡುವ’ ಬಾವಿ. ಭತ್ತದ ತೆನೆಗಳ ಹೊಯ್ದಾಟವು ಇಲ್ಲಿ ಹೊನ್ನ ಕಡಲಿನ ತೆರೆಗಳಂತೆ ತೋರುತ್ತವೆ. ಚಳಿಯಾಕೆಯ ನಗುವೂ ಸಹ ಬೆಳದಿಂಗಳನ್ನು ಹೀರಿಕೊಂಡ ಬಿಳಿಮೋಡದ ನಗುವಿನಂತೆ ಕಾಣುತ್ತದೆ. ಪ್ರಕೃತಿಯಲ್ಲಿಯ ವಾಸ್ತವ ವಸ್ತುಗಳನ್ನು (ಚಂದ್ರ, ಚಿಕ್ಕೆಗಳು, ಹೊಳೆ ಹೊಂಡ ಇ.) ಅನುಭವಕ್ಕೆ ಮಾತ್ರ ಸಿಗುವ ವಸ್ತುವಾದ ಚಳಿಯ ಜೊತೆಗೆ ಜೋಡಿಸುತ್ತ ಬೇಂದ್ರೆಯವರು ಒಂದು ಮಾಯಾಸೃಷ್ಟಿಯ ನಿರ್ಮಾಣವನ್ನೇ ಮಾಡಿದ್ದಾರೆ. ಪ್ರಕೃತಿಯಲ್ಲಿ ಸಮರಸವಾಗುವ ಸುಖವನ್ನು ಈ ಕವನದ ಮೂಲಕ ತೋರಿಸಿದ್ದಾರೆ.

ಆಂಗ್ಲ ಕವಿ ಶೆಲ್ಲಿಯ ಕವನವೊಂದರಲ್ಲಿ ಬೆಳದಿಂಗಳಿನಲ್ಲಿ ಹಾಡು ಕೇಳುತ್ತಿರುವ ಸುಖವೊಂದು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಆ ಕವನದ ಕೊನೆಯ ನುಡಿ ಹೀಗಿದೆ:
Sing again, with your dear voice 
Revealing a tone
Of some world far from ours
Where music and moonlight and feeling are one.

ಇದು ಒಂದು Etheric feeling ಅನ್ನು ಹೇಳುತ್ತದೆ.
ಚಳಿಯಾಕೆ ಕವನವು ‘ಗರಿ’ ಸಂಕಲನದಲ್ಲಿ ಅಡಕವಾಗಿದೆ. 

49 comments:

Keshav.Kulkarni said...

ತುಂಬಾ ತುಂಬಾ ಚೆನ್ನಾಗಿ ಪದರು ಪದರಾಗಿ ಬಿಡಿಸಿ ಬಿಡಿಸಿ ಮಕ್ಕಳಿಗೆ ಪಾಠ ಹೇಳುವಂತೆ ....ಭಾಳ ಖುಷಿ ಆತು. ಈ ಪದ್ಯ ನನಗ ಅರ್ಥಾನ ಆಗಿರಲಿಲ್ಲ.

ಸೀತಾರಾಮ. ಕೆ. / SITARAM.K said...

adbhuta vivarane. ii haadu halavaaru sari odi gunugunugisiddaru idara artha vyaapti ishttideyendu nimma tippane odidaagale tiliyitu. dhanyavaadagalu bendreyavara kavanagala samagra maggalu parichayisittiruvadakke..

umesh desai said...

ಕಾಕಾ ಬೆಂಗಳೂರ ಭಾಷಾದಾಗ ಹೇಳೂದಾದ್ರ ಸಕ್ಕತ್ .
ನೀವು ಹೇಳಿದಂಗ ಬೆಳದಿಂಗಳ ಊಟ,ರಾತ್ರಿ ಹೊಡೆಯುವ ಹರಟಿ, ಚಾಷ್ಟಿ
ಎಲ್ಲ ಎಷ್ಟು ಸೊಗಸಿತ್ತು ಆ ದಿನಮಾನ.
ಈ ಕವಿತಾ ಹಾಗೂ ಅದನ್ನ ನೀವು ವಿಶ್ಲೇಷಣೆ ಮಾಡಿದ ರೀತಿ
"ಸೋನೆ ಪೆ ಸುಹಾಗಾ"

ತೇಜಸ್ವಿನಿ ಹೆಗಡೆ said...

ಸಂಗ್ರಹ ಯೋಗ್ಯ ಲೇಖನ... ಸಂಗ್ರಹಯೋಗ್ಯ ಕವನ... ಓದಲೇಬೇಕಾದ್ದು...

ಕಾಕಾ.... ಅದೆಷ್ಟು ಸರಳವಾಗಿ, ಸುಂದರವಾಗಿ, ಸವಿವರವಾಗಿ ಪದರಪದರವಾಗಿ ಬಿಡಿಸಿಟ್ಟೀದ್ದೀರಾ ಬೇಂದ್ರೆ ಅಜ್ಜರ ಈ ಮಾಯಾಸೃಷ್ಟಿಯನ್ನು. ತುಂಬಾ ಸುಂದರ ಕವಿತೆ... ಅತ್ಯುತ್ತಮ ಉಪಮೆಗಳನ್ನು ಅದರೊಳಗೆ ಚಮತ್ಕಾರಗಳನ್ನು ಬಳಸಿ ಅವರು ರಚಿಸಿದ ಈ ಕವಿತೆ ತುಂಬಾ ಇಷ್ಟವಾಯ್ತು.

ಪ್ರಾಮಾಣಿಕವಾಗಿ ಹೇಳ್ತೀನಿ.. ಹಾಗೇ ಓದಿದ್ದರೆ ಅಷ್ಟು ಸರಿಯಾಗಿ ಅರ್ಥವಾಗುತ್ತಿತ್ತೋ ಇಲ್ಲವೋ.. ನಿಮ್ಮ ವಿವವರಣೆಯಿಂದ ತುಂಬಾ ಹತ್ತಿರವಾಯ್ತು...

ತುಂಬಾ ಧನ್ಯವಾದಗಳು.

Unknown said...

ಕಾಕಾ,
ನೀವು "ಜೀನಿಯಸ್" ಇದ್ದೀರಿ. ಬೇಂದ್ರೆ ಮಾಸ್ತರ್ರೇ ನಿಮ್ಮ ತಲೆ ಮೇಲೆ ಕೈಯಿಟ್ಟರಬೇಕು!
ಇಂಥ ಬರಹಗಳ ಮೂಲಕ ಸಂತೋಷಪಡಿಸುತ್ತಿರುವುದಕ್ಕೆ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ತೇಜಸ್ವಿನಿ ಹೆಗಡೆ said...

Kaaka,

I second Madhu :)

Madhu,

Double liked ur comment...:)

Manjunatha Kollegala said...

ಬಹು ಸೊಗಸಾದ ನಿರೂಪಣೆ, ಎಂದಿನಂತೆ

deeepalatha said...

ಕವನ ಓದುತ್ತಿದ್ದರೇನೆ ಮೈ ನವಿರೆಬ್ಬಿಸುತ್ತಾಳೆ ಚಳಿಯಾಕೆ. ಅವಳಿಗೂ, ಅವಳನ್ನು ನಮ್ಮ ಅನುಭವಕ್ಕೆ ತಂದ ಬೇಂದ್ರೆಯವರಿಗೂ ನಮೋನಮಃ. ನೀವು ಬಹಳ ಸೊಗಸಾಗಿ ಅರ್ಥೈಸಿದ್ದೀರಿ. ಅಭಿನಂದನೆಗಳು.

V.R.BHAT said...

ಬೇಂದ್ರೆಯವರ ಕವನಗಳನ್ನು ಅರ್ಥಮಾಡಿಕೊಳ್ಳುವಾತ ರಸಋಷಿಯಾಗಿರಬೇಕಾಗುತ್ತದೆ. ಅವರ ಯಾವ ಕಾವ್ಯಗಳೂ ಕೂಡ ಸಮಾನ್ಯವಾಗಿ ಶಬ್ದಶಹ ಅರ್ಥಗಳನ್ನು ಬಿಟ್ಟು ಹಲವು ಗೂಡಾರ್ಥಗಳನ್ನು ಹೊಂದಿರುತ್ತವೆ. ಅಂತಹ ಗಹನವಾದ ಅರ್ಥವ್ಯಾಖ್ಯಾನವನ್ನು ಕೊಡಬಲ್ಲ ಮಹತ್ತರ ಕಾವ್ಯಗಳ ರಚನೆಯೇ ಬೇಂದ್ರೆಯವರನ್ನು ’ವರಕವಿ’ ಎನ್ನಿಸಿದೆ. ಕವಿಮನದ ಭಾವಗಳಿಗೆ ಅವರನ್ನು ಕಂಡ ಜನ ಭಾಷ್ಯ ಬರೆದರೆ ಅದು ರುಚಿಕಟ್ಟಾಗಿರುತ್ತದೆ. ತಿಂದರೆ ಮತ್ತೆ ತಿನ್ನುವ ಉಂಡರೆ ಮತ್ತಷ್ಟು ಬಡಿಸಿಕೊಳ್ಳುವ ಬಯಕೆ ಕೇಳುಗನ/ಓದುಗನ ಮನದಲ್ಲಿ ಒಡಮೂಡುತ್ತದೆ. ರಾಮಾಯಣ ಪಾರಾಯಣ/ಪ್ರವಚನ ನಡೆಯುವಲ್ಲಿ ಆಂಜನೇಯ ಸ್ವತಃ ಹಾಜರಿದ್ದು ಮತ್ತೆ ಮತ್ತೆ ಭಾಷ್ಪಾಂಜಲಿ ಹಿಡಿದು ಆನಂದಭಾಷ್ಪ ಸುರಿಸುತ್ತಾನಂತೆ; ಆತನಿಗೋ ರಾಮಾಯಣ ಕೇಳಿ ಮುಗಿಯದ ಕಥೆ! ಅದೇ ರೀತಿ ಬೇಂದ್ರೆಯವರ ಕವನ-ವ್ಯಾಖ್ಯಾನ ಒಬ್ಬೊಬ್ಬರ ಬಾಯಲ್ಲಿ ಒಂದೊಂದು ರೀತಿಯಲ್ಲಿ/ಶೈಲಿಯಲ್ಲಿ ಬರುತ್ತದೆ. ತಮ್ಮ ಸರಳ ಶೈಲಿಯ ವಿಶ್ಲೇಷಣೆ ಬಹಳ ಇಷ್ಟವಾಗುತ್ತದೆ; ಪುನರಪಿ ಕೇಳುವ ಆಸೆ ಹುಟ್ಟುತ್ತದೆ. ಈ ಕೆಲಸವನ್ನು ಅವ್ಯಾಹತವಾಗಿ ನಡೆಸುತ್ತಿರುವ ನಿಮಗೆ ಅಡ್ಡಬೀಳುತ್ತೇನೆ.

Subrahmanya said...

ನಿಮ್ಹಂಗ ಹೇಳಾಕ ನಿಮ್ಮಿಂದ ಕೇಳಾಕ ಪಡೆದು ಬಂದವ ಬೇಕೋ ಗುರುದೇವ !

ಅನಂತ್ ರಾಜ್ said...

ರಸ ಋಶಿಯ ಭಾವಗಳನ್ನು ನವಿರಾಗಿ ಬಿಡಿಸಿ ಸುಲಭವಾಗಿ ಅರ್ಥೈಸಿಕೊಳ್ಳುವ ಹಾಗೆ ನಿರೂಪಿಸುವ ತಮ್ಮ ಶೈಲಿಗೆ ನಮೋ ನಮ: ಸುನಾತ್ ಸರ್. ಅಭಿನ೦ದನೆಗಳು.

ಅನ೦ತ್

sunaath said...

ಕೇಶವ,
ತುಂಬ ಧನ್ಯವಾದಗಳು.

sunaath said...

ಸೀತಾರಾಮರೆ,
ಬೇಂದ್ರೆಯವರ ಕವನಗಳ ಅರ್ಥ ತಿಳಿದಷ್ಟೂ ಹಿಗ್ಗುತ್ತಲೇ ಹೋಗುತ್ತದೆ!

sunaath said...

ದೇಸಾಯರ,
ಎಲ್ಲಿ ಹೋದವೊ ಗೆಳೆಯಾ ಆ ಕಾಲ!

sunaath said...

ತೇಜಸ್ವಿನಿ,
ಪರಸ್ಪರ ಚರ್ಚೆ, ವಿಚಾರ ವಿನಿಮಯಗಳಿಂದಲೇ ಖುಶಿ ಸಿಗುವದು!

sunaath said...

ಮಧು,
ಪ್ರತಿಭೆ ಇರೋದು ಬೇಂದ್ರೆಯವರಲ್ಲಿ! ನನಗೆ ಕಂಡದ್ದನ್ನು ನಾನು ನಿಮಗೆ ತೋರಿಸ್ತಾ ಇದ್ದೇನಿ.

sunaath said...

ತೇಜಸ್ವಿನಿ,
I beg to differ!

sunaath said...

ಮಂಜುನಾಥರೆ,
ಧನ್ಯವಾದಗಳು.

sunaath said...

ದೀಪಲತಾ,
ನಿಮ್ಮ ಲೇಖನಗಳನ್ನು ಓದಲು ಉತ್ಸುಕನಾಗಿದ್ದೇನೆ, ಯಾವಾಗ ಹೊರತರುವಿರಿ?

sunaath said...

ಭಟ್ಟರೆ,
ಅಡ್ಡ ಬೀಳೋದು ಬ್ಯಾಡರೆಪ್ಪಾ! ಸುಮ್ಮನೆ ಸುಮುಖರಾಗಿ ನಿಲ್ಲೋಣ!

sunaath said...

ಪುತ್ತರ್,
‘ಬೇಂದ್ರೆಯವರು ಕರ್ನಾಟದ ಗುರುದೇವರು’ ಎನ್ನಬಹುದೇನೊ!

sunaath said...

ಅನಂತರಾಜರೆ,
ರಸಋಷಿಯ ಕವನಗಳು ಜೇನು ನೆಕ್ಕಿದಂತೆ. ನೆಕ್ಕಿದಷ್ಟೂ ಸಿಹಿಯೇ!

ಚುಕ್ಕಿಚಿತ್ತಾರ said...

kaaka..

channaagi vivarisiddeeri..

thanks

ಮನಮುಕ್ತಾ said...

ಕಾಕಾ...ಅರ್ಥವಿವರಣೆಯನ್ನು ತು೦ಬಾ ಚೆನ್ನಾಗಿ ಮಾಡಿದ್ದೀರಿ..

ಮನಸು said...

ಕಾಕಾ ನಿಮಗೆ ನಮೋನಮಃ.. ಎಂತಹಾ ವಿಶೇಷ ಅಡಗಿದೆ ನಿಮ್ಮಲ್ಲಿ. ಪ್ರತಿ ಸಾಲುಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಬಿಚ್ಚಿಟ್ಟಿದ್ದೀರಿ... ಬೇಂದ್ರೆಯವರು ನಿಮ್ಮ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾರೆ ನಿಮ್ಮ ಲೇಖನಗಳನ್ನು ಓದುವ ನಾವೇ ಧನ್ಯರು...

sunaath said...

ವಿಜಯಶ್ರೀ,
ಧನ್ಯವಾದಗಳು.

sunaath said...

ಮನಸು,
ಬೇಂದ್ರೆಯವರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯಾರಿಗೆ ಸಾಧ್ಯವಿದೆ?

ಮಂಜುಳಾದೇವಿ said...

ಎಂದಿನಂತೆ ಅತ್ಯುತ್ತಮವಾದ ಅರ್ಥ ವಿವರಣೆ ನೀಡಿದ್ದೀರಿ. ಧನ್ಯವಾದಗಳು.

ಜಲನಯನ said...

ಸುನಾಥಣ್ಣ,
ಸರಳತೆಯನ್ನೇ ಮರಳುಮಾಡಿ ಸಜ್ಜನಿಕೆಯ ಪ್ರತಿರೂಪ ಬೇಂದ್ರೆಯವರಾಗಿದ್ದರೆ ಅವರ ಕವನ-ಕಾವ್ಯದ ಗಾಢಾರ್ಥ್ಗಗಳ ಸವಿ ಅಡುಗೆಯನ್ನು ಉಣಬಡಿಸುವ ನಿಮ್ಮನ್ನು ಮುಖತಃ ಕಂಡು ಮಾತನಾಡಿಸಬೇಕೆಂದಿದ್ದ ನನ್ನ ಬಯಕೆ ಅದೃಷ್ಟವಶಾತ್ ೧೨ ಜೂನ್ ಗೆ ಕೂಡಿಬಂದದ್ದು ನನಗೆ ಸಂತೃಪ್ತಿ ತಂದದಿನ..ಅದು ಜೂನ್ ನ ಭಾನುವಾರ...
ಇಲ್ಲಿ ಮತ್ತದೇ ರಸದೌತಣ...ಧನ್ಯವಾದ ಸುನಾಥಣ್ಣ

sunaath said...

ಮಂಜುಳಾದೇವಿಯವರೆ,
ಬೇಂದ್ರೆಯವರ ಕವನಗಳ ಸೊಬಗನ್ನು ರಸಿಕರು ಸವಿದರೆ ನಾನು ಧನ್ಯ.

sunaath said...

ಜಲನಯನ,
ಜೂನ್ ೧೨ ನನಗೂ ಸುದಿನ. ನಿಮ್ಮ ಬ್ಲಾಗ್ ಲೇಖನಗಳಿಂದ ಆಕರ್ಷಿತನಾದ ನನಗೆ ನಿಮ್ಮ ಹಾಗು ಶಿವು ಅವರೊಡನೆ ಭೇಟಿಯಾಗುವ,ಮಾತನಾಡುವ ಸಂದರ್ಭ ಲಭಿಸಿದ್ದು ತುಂಬ ಖುಶಿಯನ್ನು ತಂದಿದೆ. I look forward to more such opportunities.

Raghu said...

Nice one..!
Raghu

sunaath said...

Raghu,
Thank you!

Krishnanand said...

ಬೇಂದ್ರೆ ಅವರ ಕೆಲವು ಕವನಗಳ 'ಪ್ರಾಸ'ವನ್ನಷ್ಟೇ ಅನುಭವಿಸುತ್ತಿದ್ದ ನಾವು, ಬೇಂದ್ರೆಯವರಿಗೆ ಬಹಳ ಅವಮಾನ ಮಾಡುತ್ತಿದ್ದೆವು ಎಂದು ನೀವು ಕವನ ತಿಳಿಸಿದ ಮೇಲೆ ಅನಿಸುತ್ತಇದೆ . ನಿಮ್ಮ 'ಬೇಂದ್ರೆ ಕಾವ್ಯ ಪರಿಚಯದ' ಅಲ್ಲಲ್ಲ 'ಬೇಂದ್ರೆ ಕಾವ್ಯ ಪರಿಣಯ'ದ ಬಗ್ಗೆ ಪುಸ್ತಕ ಬಂದರೆ ಅದು ಸಂಗ್ರಹ ಯೋಗ್ಯವಾಗಿರುತ್ತದೆ ಅನಿಸುತ್ತಿದೆ

ನಿಮಗೆ ನಮಸ್ಕಾರಗಳು...

sunaath said...

ಕೃಷ್ಣಾನಂದರೆ,
ಬೇಂದ್ರೆಯವರ ಪ್ರಾಸಗಳು ಸುಂದರವಷ್ಟೇ ಅಲ್ಲ ಅರ್ಥಗರ್ಭಿತವೂ ಆಗಿವೆ. ಉದಾಹರಣೆಗೆ ಅವರ ‘ಪಾತರಗಿತ್ತಿ ಪಕ್ಕಾ’ ಕವನದ ಕೊನೆಯ ಸಾಲುಗಳನ್ನು ನಿರುಕಿಸಿ:
"ಇನ್ನು ಎಲ್ಲಿಗೋಟ?
ನಂದನದ ತೋಟ!"
ಪ್ರಾಸಸೌಂದರ್ಯವನ್ನು ಪಡೆದ ಈ ಸಾಲುಗಳು, ಪಾತರಗಿತ್ತಿಯ delightful flightದ ಪರಮವರ್ಣನೆಯಾಗಿರುವಂತೆಯೇ, ಅವುಗಳ brief lifeದ ಚರಮವರ್ಣನೆಯೂ ಆಗಿವೆ!

prabhamani nagaraja said...

ಬೇಂದ್ರೆಯವರ ‘ಚಳಿಯಾಕೆ’ ಯನ್ನು ಎಲ್ಲರ ಅ೦ತರ೦ಗದ ಗೆಳತಿಯಾಗಿಸಿದ್ದೀರಿ ಸರ್, ‘ಚಳಿಯಾಕೆ’ ಈಗಾಗಲೇ ನಮ್ಮ ಹಾಸನದ ಜನತೆಯನ್ನು ನಡುಗಿಸುತ್ತಿದ್ದಾಳೆ! ನಿಮ್ಮ ಬರಹ ಸ೦ಗ್ರಹ ಯೋಗ್ಯವಾಗಿದೆ. ಧನ್ಯವಾದಗಳು.

ಆನಂದ said...

ಕಾಕಾ, ಧನ್ಯವಾದಗಳು. ಎಂದಿನಂತೆ :)

ನಾಗರಾಜ್ .ಕೆ (NRK) said...

Poem and your explanation -Excellent, wonderful and all the synonyms for both. what else i can say ?

sunaath said...

ಪ್ರಭಾಮಣಿಯವರೆ,
ಬೇಂದ್ರೆಯವರ ಚಳಿಯಾಕೆಗಿಂತ ಹಾಸನದ ಚಳಿಯಾಕೆಯೇ ಜೋರಾಗಿದ್ದಾಳೆ!

sunaath said...

ಆನಂದ,
ನಿಮಗೂ ಧನ್ಯವಾದಗಳು!

sunaath said...

NRK,
Thank you so much.

shivu.k said...

ಸುನಾಥ್ ಸರ್,
ಬೇಂದ್ರೆಯವರ ಮತ್ತೊಂದು ಕವನದ ಅನಾವರಣ..ಹೀಗೆ ಎಲ್ಲಾ ವಿಚಾರವನ್ನು ಸೂಕ್ಷ್ಮವಾಗಿ ಬಿಡಿಸಿ ವಿವರಿಸಿ ಹೇಳುವವರು ಸದ್ಯಕ್ಕೆ ನೀವೊಬ್ಬರೇ ಅನ್ನಿಸುತ್ತದೆ.

sunaath said...

ಶಿವು,
ಬೇಂದ್ರೆಯವರ ಕಾವ್ಯವನ್ನು ತಿಳಿದುಕೊಂಡವರು ಸಾಕಷ್ಟು ಜನರಿದ್ದಾರೆ. ಎಲ್ಲರೂ ಸಕ್ರಿಯರಾಗಿರಲಿಕ್ಕಿಲ್ಲ!

Narayan Bhat said...

ಬೇಂದ್ರೆಯವರ ಕವನವೊಂದನ್ನು ಅರ್ಥ ಮಾಡಿಕೊಳ್ಳುವ ಸುಖ ಬಣ್ಣಿಸಲಸಾಧ್ಯ..ನಿಮಗೆ ಮತ್ತೊಮ್ಮೆ ಕೃತಜ್ಞತೆಗಳು.

sunaath said...

ಭಟ್ಟರೆ,
ಸರಿಯಾಗಿ ಹೇಳಿದಿರಿ. ಬೇಂದ್ರೆಯವರ ಕವನವನ್ನು ಅರ್ಥ ಮಾಡಿಕೊಳ್ಳುವದು ನಿಜವಾಗಿಯೂ ಸುಖಕರ!

ಗಿರೀಶ್.ಎಸ್ said...

very nice explanation sir....liked it !!!

sunaath said...

Thank you, Girish.

KalavathiMadhusudan said...

sunaath sir,varakavi bendreyavara sundara kaavyada sogasaada varnanegaagi dhanyavaadagalu.

sunaath said...

ಕಲಾವತಿಯವರೆ,
ನಿಮಗೂ ಧನ್ಯವಾದಗಳು.