Thursday, December 13, 2012

ವಿಶ್ವೇಶ್ವರ ಭಟ್ಟರ ‘ಸತ್ಯ, ವಿಶ್ವಾಸಾರ್ಹತೆ ಹಾಗು ಧಿಮಾಕು’



೬-೧೨-೨೦೧೨ನೆಯ ದಿನಾಂಕದ ‘ಕನ್ನಡಪ್ರಭಾ’ ಪತ್ರಿಕೆಯಲ್ಲಿ ‘ಸತ್ಯ, ವಿಶ್ವಾಸಾರ್ಹತೆ, ಧಿಮಾಕು....ಹೀಗೊಂದು ಪದ ಮೆಲಕು’ ಎನ್ನುವ ಶೀರ್ಷಿಕೆಯನ್ನು ಹೊಂದಿದ ಲೇಖನವೊಂದು ಪ್ರಕಟವಾಗಿದೆ. ಲೇಖನವನ್ನು ಸಂಪಾದಕರಾದ ವಿಶ್ವೇಶ್ವರ ಭಟ್ಟರು ಬರೆದಿದ್ದಾರೆ. ಈ ಲೇಖನದಲ್ಲಿ ಕನ್ನಡ ಭಾಷೆಗೆ ಹಾಗು ಕನ್ನಡದ ಸರ್ವಕಾಲೀನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತರಿಗೆ ಅಪಚಾರವಾಗಿದೆ. ಇದರಿಂದಾಗಿ ನನ್ನ ಮನಸ್ಸಿಗೆ ವ್ಯಥೆಯಾದರೂ ಸಹ, ನಿಮ್ಮೆದುರಿಗೆ ಅದನ್ನಿಡುವ ಮೊದಲು ನಾನು ಸಾಕಷ್ಟು ಯೋಚಿಸಬೇಕಾಯಿತು. ೬ರಿಂದ ೧೨ನೆಯ ದಿನಾಂಕದವರೆಗೆ ಡೋಲಾಯಮಾನವಾಗಿದ್ದ ನನ್ನ ಮನಸ್ಸು ಕೊನೆಗೂ ಒಂದು ನಿರ್ಧಾರಕ್ಕೆ ಬಂದಿತು. ನಾನೀಗ ಸುಮ್ಮನಿದ್ದರೆ, ಅಶಂಕ ವ್ಯಕ್ತಿಗಳಿಗೆ ತಪ್ಪು ಮಾಹಿತಿ ರವಾನೆಯಾದೀತು, ಇದನ್ನು ತಪ್ಪಿಸಿ, ‘ನಿಜವಾದ ಸತ್ಯ’ವನ್ನು (!) ನಿಮ್ಮ ಗಮನಕ್ಕೆ ತರದೆ ಇರುವುದು ಕರ್ತವ್ಯಲೋಪವಾಗುತ್ತದೆ ಎನ್ನಿಸಿತು. ಆದುದರಿಂದ ಆ ಲೇಖನದ ಪ್ರಸ್ತುತ ಭಾಗವನ್ನು (ಮಾತ್ರ) ಇಲ್ಲಿ ಉದ್ಧರಿಸುತ್ತಿದ್ದೇನೆ. ಅದು ಹೀಗಿದೆ:

ಅಷ್ಟಕ್ಕೂ audacity ಎಂದರೆ ಏನು? ಡಿಕ್ಷನರಿ ಡಾಟ್ ಕಾಮ್‍ನಲ್ಲಿ ಈ ಪದಕ್ಕೆ ಈ ಅರ್ಥವನ್ನು ಕೊಟ್ಟಿದ್ದಾರೆ
audacity Boldness or daring especially with confidant or arrogant disregard for personal safety. ಧೈರ್ಯ ಅಥವಾ ಅದಮ್ಯ ವಿಶ್ವಾಸ ಅಥವಾ ಆತ್ಮರಕ್ಷಣೆಯನ್ನೂ ಲೆಕ್ಕಿಸದ ಗರ್ವ. ಮತ್ತೊಂದು ಅರ್ಥ Unusually harsh boldness with brashness. ಈ ಪದವನ್ನು ವಾಕ್ಯದಲ್ಲಿ ಹೀಗೆ ಬಳಸಲಾಗಿದೆ-- His student's audacity shocked the lecturer. ಕನ್ನಡದಲ್ಲಿ ಈ ಪದಕ್ಕೆ ಎದೆಗಾರಿಕೆ, ಪೊಗರು, ಧಿಮಾಕು ಎಂದೆಲ್ಲ ಅರ್ಥೈಸಬಹುದು. ತುಸು ಒರಟಾಗಿ ತಿಕಕೊಬ್ಬು ಎಂದೂ ಅರ್ಥೈಸಬಹುದು. ಎಲ್ಲರಿಗೂ ಈ audacity ಪದವನ್ನು ಬಳಸಲು ಆಗುವದಿಲ್ಲ. ಚೆನ್ನಾಗಿ ಓದಿಕೊಂಡ, ತನ್ನ ವಿದ್ವತ್ತಿನ ಬಗ್ಗೆ ಹೆಮ್ಮೆಯ ಜಂಭವನ್ನು ಪ್ರದರ್ಶಿಸುವ, ತುಸು ಗರ್ವಿಷ್ಠನಿಗೆ ಈ ಪದವನ್ನು ಬಳಸಬಹುದು. ವಿದ್ವತ್ತಿನ ಬೆಂಬಲ, ಬುದ್ಧಿಯ ಒಲವು ಗಳಿಸಿಕೊಂಡವ ತುಸು ಜಂಭದಿಂದ ನಡೆದುಕೊಂಡರೆ ಅದೇನು ಅಪರಾಧವಲ್ಲ, ಅಸಹನೀಯವೂ ಅಲ್ಲ. ಅಂಥ ಕೊಬ್ಬಿನ ವರ್ತನೆಯನ್ನು ಅನೇಕರು ಮೆಚ್ಚುತ್ತಾರೆ.

ಈ ಗುಣ ಶಿವರಾಮ ಕಾರಂತರಲ್ಲಿತ್ತು. ಅಧ್ಯಯನ, ಅನುಭವದ ಸಮಪಾಕದಲ್ಲಿ ಬೆಂದು ರೂಪುಗೊಂಡ ಅವರ ವ್ಯಕ್ತಿತ್ವದಲ್ಲಿ ಈ audacity ಚೆನ್ನಾಗಿ ಮನೆ ಮಾಡಿತ್ತು.ಹಿರಿಯ ಕವಿಯೊಬ್ಬರು ಶಿವರಾಮ ಕಾರಂತರನ್ನು ಭೇಟಿ ಮಾಡಿ, ತಮ್ಮ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ಕೋರಿದಾಗ, ನಿಮ್ಮ ಕವನ ಓದುವುದು ಹಾಗು ಕೇಳುವುದೆಂದರೆ ದೊಡ್ಡ ಶಿಕ್ಷೆ. ಅಂಥ ಭಾಗ್ಯವನ್ನು ನನಗೆ ಕರುಣಿಸಬೇಡಿ. ನಿಮ್ಮ ಕಾರ್ಯಕ್ರಮಕ್ಕೆ ಬಂದು ಟೈಮ್ ವೇಸ್ಟ್ ಮಾಡಲು ನನಗೆ ಮನಸ್ಸಿಲ್ಲ’ ಎಂದು ಖಂಡತುಂಡಾಗಿ ಹೇಳಿದ್ದರು. ಕಾರಂತರ ಈ  audacityಯನ್ನು , ಧಿಮಾಕಿನ ನಡೆಯನ್ನು ಯಾರೂ ತಪ್ಪಾಗಿ ಭಾವಿಸುತಿರಲಿಲ್ಲ.  .....................................................ಧಿಮಾಕನ್ನು ಸೊಕ್ಕು ಎಂದು ತಪ್ಪಾಗಿ ಭಾವಿಸುವವರು ಪಡಪೋಶಿಗಳು.

ಮೊದಲನೆಯದಾಗಿ audacityಗೆ ನಿಖರವಾದ ಕನ್ನಡ ಪದವೊಂದಿದೆ: ‘ಧಾರ್ಷ್ಟ್ಯ’.  (‘ಅದಟು’ ಎನ್ನುವ ಹಳೆಗನ್ನಡ ಪದ ಬಳಕೆಯಲ್ಲಿ ಇಲ್ಲ.) ‘ಎದೆಗಾರಿಕೆ’ ಎಂದು ಹೇಳಿದರೆ ತಪ್ಪಿಲ್ಲ. ಆದರೆ ‘ಪೊಗರು, ಧಿಮಾಕು’ ಎನ್ನುವುದು ಸರಿಯಾದ ಅರ್ಥವಲ್ಲ. ಅದು  ಅನರ್ಥ! ‘ತಿಕಕೊಬ್ಬು’ ಎನ್ನುವುದಂತೂ ಅಸಹ್ಯ. ಭಟ್ಟರು ಬರೆದಿರುವಂತೆ audacity ಅಥವಾ ಧಾರ್ಷ್ಟ್ಯವು ಚೆನ್ನಾಗಿ ಓದಿಕೊಂಡ, ಅದರ ಬಗೆಗೆ ಹೆಮ್ಮೆ ಇರುವಂಥ ವ್ಯಕ್ತಿಗೇ ಇರಬೇಕೆಂದಿಲ್ಲ. ತನಗೆ ಸರಿ ಅನ್ನಸಿದ್ದನ್ನು ಜನಪ್ರಿಯ ನಂಬುಗೆಯ ಅಥವಾ ಪಂಡಿತರ ಹಾಗು ಮಾನ್ಯರ ವಿರೋಧದ ನಡುವೆಯೂ ಹೇಳುವ ವ್ಯಕ್ತಿಗೆ ಈ ಗುಣ ಇರುತ್ತದೆ. ಶಿವರಾಮ ಕಾರಂತರಲ್ಲಿ ಈ ಗುಣ ಇದ್ದದ್ದು ನಿಜ. ಇದಕ್ಕೆ ಕಾರಣ ಅವರ ನೇರ ನಡೆ ಹಾಗು ನೇರ ನುಡಿ. ಆದರೆ ಭಟ್ಟರು ಕೊಟ್ಟ ಉದಾಹರಣೆ ತಪ್ಪು. ಹಿರಿಯ ಕವಿಗೆ ಕಾರಂತರು ಹೇಳುವ ಮಾತು ಅವರ ನಿಷ್ಠುರತೆಯನ್ನು ತೋರಿಸುವ ಉದಾಹರಣೆಯಾಗಿದೆ. ಇನ್ನು ಅವರ ಧಾರ್ಷ್ಟ್ಯವನ್ನು ತೋರಿಸುವ ಸರಿಯಾದ ಎರಡು ಉದಾಹರಣೆಗಳು ಹೀಗಿವೆ:

(೧)ಬೀದರ ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದಾಗ, ಆ ವರುಷ ಬರಗಾಲವಿದ್ದದ್ದರಿಂದ, ಸಮ್ಮೇಳನವನ್ನು ರದ್ದು ಪಡಿಸಬೇಕೆಂದು ಅನೇಕರು ಆಗ್ರಹಿಸಿದರು. ಆಗ ಶಿವರಾಮ ಕಾರಂತರು ಸಮ್ಮೇಳನವನ್ನು ಬೆಂಬಲಿಸಿ ಹೇಳಿದ ಮಾತು: ‘ಬರಗಾಲ ಇದೆಯೆಂದು ಜನ ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೆಯೆ?’

(೨)ಅಯೋಧ್ಯೆಯಲ್ಲಿ ಬಾಬರಿ ಮಸೀದೆಯನ್ನು ಕೆಡವಿದ ಘಟನೆ ಸಂಭವಿಸಿದ ಬಳಿಕ ಕರ್ನಾಟಕದ ಎಲ್ಲ ಸ್ವಘೋಷಿತ-ಜಾತ್ಯತೀತ ಬುದ್ಧಿಜೀವಿಗಳು ಈ ಘಟನೆಯನ್ನು ಖಂಡಿಸಿದರು. ಶಿವರಾಮ ಕಾರಂತರು ನಾಸ್ತಿಕರು. ದೇವರು ಹಾಗು ಧರ್ಮ ಇವೆರಡರಲ್ಲೂ ಅವರಿಗೆ ನಂಬಿಗೆ ಇರಲಿಲ್ಲ. ಹಾಗಿದ್ದರೂ ಸಹ ಅವರು ‘ಅದರಲ್ಲೇನು ತಪ್ಪಿದೆ?’ ಎಂದು ಕೇಳಿದರು. ಇಂತಹ ಹೇಳಿಕೆಯಿಂದ ತಮ್ಮ ಸಾಮಾಜಿಕ ಹಾಗು ಸಾಹಿತ್ಯಕ image ಹಾಳಾಗಬಹುದೆನ್ನುವ ಶಂಕೆ ಅವರಿಗೆ ಬರಲಿಲ್ಲವೆ? ಯಾವುದೇ ಸ್ವಾರ್ಥಕಾರಣವಿಲ್ಲದೆ, ತನಗೆ ಸರಿ ಎಂದು ಕಂಡದ್ದನ್ನೇ ತಾನು ಹೇಳುವೆ ಎನ್ನುವ ಈ ಗುಣಕ್ಕೆ ಧಾರ್ಷ್ಟ್ಯ ಎನ್ನಬೇಕು! ಈ ಗುಣಕ್ಕೆ ಯಾರಾದರೂ ‘ಪೊಗರು, ಧಿಮಾಕು ಅಥವಾ....(ಛೀ!) ತಿಕಕೊಬ್ಬು’ ಎನ್ನಬಹುದೆ?
ಪಡಪೋಶಿಗಳಷ್ಟೇ ಹಾಗೆ ಅಂದಾರು!

ಸಮಾಜದಲ್ಲಿ ಹರಡಿದ ಅಜ್ಞಾನದ ಬಗೆಗೆ ಶಿವರಾಮ ಕಾರಂತರಲ್ಲಿ ಬೇಸರವಿತ್ತು. ಡಂಭಾಚಾರದ ಬಗೆಗೆ ಅಸಹನೆ ಇತ್ತು. ಆದರೆ ತಮ್ಮ ನಂಬುಗೆಗೆ ವಿರುದ್ಧವಾದ ಅನ್ಯರ ನಂಬುಗೆಗಳನ್ನು ಆದರಿಸುವ ಗುಣವೂ ಅವರಲ್ಲಿ ಇತ್ತು. ಅವರ ಕಾದಂಬರಿಗಳಾದ ‘ಮರಳಿ ಮಣ್ಣಿಗೆ’ ಹಾಗು ‘ಮೂಕಜ್ಜಿಯ ಕನಸುಗಳು’ ಈ ಮಾತಿಗೆ ಸಾಕ್ಷಿಯಾಗಿವೆ. ಸಮಾಜದಲ್ಲಿ ಮಾನವೀಯತೆಯನ್ನು ನೆಲೆಗೊಳಿಸುವದೇ ಅವರ ಎಲ್ಲ ಕಾದಂಬರಿಗಳ ಉದ್ದೇಶವಾಗಿತ್ತು. ಆದುದರಿಂದಲೇ ಅವರ ಕಾದಂಬರಿಗಳಲ್ಲಿ ಪೊಳ್ಳು ಅಲಂಕಾರಿಕ ಶೈಲಿಯಿಲ್ಲ. ಸತ್ಯವನ್ನು ಅವರು ನೇರವಾಗಿ, ನಿರಾಡಂಬರವಾಗಿ ಹೇಳುತ್ತಿದ್ದರು. ಇಷ್ಟು ನಿರಾಲಂಕೃತರಾದ ಈ ವ್ಯಕ್ತಿ ಶ್ರೇಷ್ಠ ಕಲಾಜೀವಿಯೂ ಆಗಿದ್ದರು.

ನಾನು ಸುರತ್ಕಲ್ ಇಂಜನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಅವಧಿಯಲ್ಲಿ, ಅಂದರೆ ಸುಮಾರು ೪೫ ವರ್ಷಗಳ ಹಿಂದಿನ ಘಟನೆಯೊಂದನ್ನು ಹೇಳುತ್ತೇನೆ. ಕಾಲೇಜಿಗೆ ರಜೆ ಬಂದಿತ್ತು.  ನಾನು ಹಾಗು ನನ್ನ ಗೆಳೆಯನೊಬ್ಬ ಶಿವರಾಮ ಕಾರಂತರನ್ನು ಭೇಟಿಯಾಗುವ ಉದ್ದೇಶದಿಂದ ಪುತ್ತೂರಿಗೆ ಓಡಿದೆವು. ಅವರ ಮನೆ ಹುಡುಕುತ್ತಾ ಹೋದೆವು. ಸುಮಾರು ೧೧ ಗಂಟೆಯ ಸಮಯ. ಕಾರಂತರು ಹೊರಗೆಲ್ಲೊ ಹೋಗಲೆಂದು ಬರುತ್ತಿದ್ದರು. ನಾವು ಅವರನ್ನು ಕಂಡು ನಮ್ಮ ಉದ್ದೇಶವನ್ನು ತಿಳಿಸಿದೆವು.

ಕಾರಂತರು ಪೂರ್ವನಿಯೋಜನವಿಲ್ಲದೇ ಯಾರನ್ನೂ ಭೆಟ್ಟಿಯಾಗರು ಎನ್ನುವ ಖ್ಯಾತಿ ಉಳ್ಳವರು. ಆದರೆ ಈ ಇಬ್ಬರು ಹುಡುಗರನ್ನು ಅವರು ಆದರದಿಂದಲೇ ಬರ ಮಾಡಿಕೊಂಡು ತಮ್ಮ ಮನೆಯೆಡೆಗೆ ಕರೆದೊಯ್ದರು. ಅವರು ಕೆಲಸ ಮಾಡುವ ಕೊಠಡಿ, ಅವರ ನಿವಾಸದಿಂದ ಸುಮಾರು ೫೦ ಅಡಿ ದೂರದಲ್ಲಿದೆ. ನಿವಾಸದ ಹೊರಗಡೆ ಅವರ ಹೆಂಡತಿ ಹಾಗು ಮಗಳು ಕೂತಿದ್ದರು. ಅಟ್ಟದ ಮೇಲಿರುವ ತಮ್ಮ ಕೊಠಡಿಗೆ ಹೋಗುವಾಗಲೇ, ತಮ್ಮ ಹೆಂಡತಿಯತ್ತ ನೋಡುತ್ತ, ಕಾರಂತರು ಎರಡು ಬೆರಳು ತೋರಿಸಿದರು.

ಕಾರಂತರ ಕೊಠಡಿಯಲ್ಲಿ ಹೆಚ್ಚಿಗೆ ವಸ್ತುಗಳು ಇರಲಿಲ್ಲ. ಇರುವ ಒಂದೆರಡು ವಸ್ತುಗಳೇ ಅವರ ಕಲಾಭಿಜ್ಞತೆಯನ್ನು ತೋರಿಸುತ್ತಿದ್ದವು. ಕರ್ನಾಟಕದ ಔದ್ಯೋಗಿಕ ಪ್ರಗತಿ ಹೇಗಾದೀತು ಎನ್ನುವ ನಮ್ಮ ಹುಚ್ಚು ಪ್ರಶ್ನೆಗೆ ಕಾರಂತರು ಸುಮಾರು ಒಂದು ಗಂಟೆಯವರೆಗೆ ತಿಳಿಸಿ ಹೇಳಿದರು. ಈ ನಡುವೆ ಅವರ ಮಗಳು ಎರಡು ಲೋಟಾ ಪಾನಕ ತಂದು ಕೊಟ್ಟಳು. ಕಾರಂತರು ಎರಡು ಬೆರಳು ತೋರಿಸಿದ್ದರ ಅರ್ಥ ಆಗ ಹೊಳೆಯಿತು.

ಶಿವರಾಮ ಕಾರಂತರ ಮಾನವೀಯ ಗುಣದ ಬಗೆಗೆ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಒಂದು ಪುಟ್ಟ ಬರಹ ಪ್ರಕಟವಾಗಿತ್ತು. ಪುತ್ತೂರಿನ ರಸ್ತೆಯಲ್ಲಿ ಹೆಂಗಸೊಬ್ಬಳು ಭಾರವಾದ ಚೀಲವೊಂದನ್ನು ಹೊತ್ತುಕೊಂಡು ಒಯ್ಯುತ್ತಿರುವಾಗ, ಅದನ್ನು ಕಂಡ ಕಾರಂತರು, ಆ ಅಪರಿಚಿತ ಹೆಣ್ಣು ಮಗಳ ಕೈಯಿಂದ ಭಾರವನ್ನು ಕಸಿದುಕೊಂಡು, ಅವಳ ಜೊತೆಗೆ ನಡೆದರು ಎನ್ನುವುದು ಆ ಬರಹದ ಸಾರಾಂಶವಾಗಿತ್ತು.

ಇಂತಹ ಕಾರಂತರಲ್ಲಿಯ ಯಾವ ಗುಣವು ವಿಶ್ವೇಶ್ವರ ಭಟ್ಟರಿಗೆ ಪೊಗರು ಅಥವಾ (ಛೀ!) ತಿಕಕೊಬ್ಬಿನಂತೆ ಕಂಡಿರಬಹುದು?

ವಿಶ್ವೇಶ್ವರ ಭಟ್ಟರು ಕನ್ನಡದಲ್ಲಿ ಗಣ್ಯರಾದ ಪತ್ರಿಕಾಸಂಪಾದಕರು. ಅವರು ಬರೆದದ್ದನ್ನು ಅಮಾಯಕರು ನಿಶ್ಶಂಕರಾಗಿ ನಂಬುತ್ತಾರೆ. ಆದುದರಿಂದ ಪತ್ರಿಕೆಯ ಓದುಗರ (--ವಿಶೇಷತಃ ಎಳೆಯ ಓದುಗರ--) ಹಾದಿಯನ್ನು ತಪ್ಪಿಸಬಾರದೆನ್ನುವ ಎಚ್ಚರಿಕೆಯು ಸಂಪಾದಕರಿಗೆ ಇರಬೇಕು. ಪದಗಳ ಬಳಕೆಯ ಬಗೆಗೆ ಹಾಗು ವ್ಯಕ್ತಿಗಳ ಬಗೆಗೆ ಬರೆಯುವಾಗ ಅಪಚಾರವಾಗದಂತೆ ಜಾಗೃತರಾಗಿರಬೇಕು. ಇದು ಅವರಿಗೆ ನನ್ನ ಸವಿನಯ ಪ್ರಾರ್ಥನೆ.

48 comments:

Anonymous said...

ಈ ವಿಶ್ವೇಶ್ವರ ಭಟ್ಟನಿಗೆ "ಭಟ್ಟರು" "ಗಣ್ಯರಾದ ಪತ್ರಿಕಾಸಂಪಾದಕರು" ಎಂಬಿತ್ಯಾದಿ ಅನಗತ್ಯ ಗೌರವ ಸೂಚಿಸಿದ್ದೀರಿ. ಆದರೆ ಈತನಿಗೆ ಅವ್ಯಾವುಗಳನ್ನು ಪಡೆಯುವ ಅರ್ಹತೆಯೂ ಇಲ್ಲ. ಈತನಿಗೆ ರವಿ ಬೆಳಗೆರೆಯಂತಹ "ವ್ಯಕ್ತಿ"ಯಿಂದ ತೇಜೋವಧೆ ಮಾಡಿಸಿಕೊಳ್ಳುವುದೇ ಸರಿಯಾದ ಶಿಕ್ಷೆ. ರವಿ ಬೆಳಗೆರೆಯ ವೆಬ್ಸೈಟಿಗೆ ಭೇಟಿ ಕೊಟ್ಟರೆ ಈತನ ಕುರಿತು ಹೆಚ್ಚಿನ ಮಾಹಿತಿ ಸಿಗ್ತದೆ (ತಪ್ಪೋ ಸರಿಯೋ ಗೊತ್ತಿಲ್ಲ).

ಸಭ್ಯ, ಅಸಭ್ಯಗಳ ಗಂಧಗಾಳಿಯೇ ಗೊತ್ತಿಲ್ಲದ ಈ ಐಲು-ಭಟ್ಟನಿಗೆ ಶಿವರಾಮ ಕಾರಂತರಂಥ ಧೀಮಂತ ಸಾಹಿತಿಯ ನೂರನೇ ಒಂದಂಶದ ಯೋಗ್ಯತೆಯೂ ಇಲ್ಲ. ಹೀಗಿದ್ದರೂ ಈತನಿಗೇ ತಿಕಕೊಬ್ಬು ಜಾಸ್ತಿಯಾಗಿ ಅವಾಂತರಕಾರಿ ಲೇಖನ ಬರೀತಿರ್ತಾನೆ. ಇಂಟರ್ನೆಟ್-ನಲ್ಲಿ ಅಲ್ಲಿಂದ ಇಲ್ಲಿಂದ ಹುಡುಕಿ ಕನ್ನಡಕ್ಕೆ ತರ್ಜುಮೆ ಮಾಡುವುದೇ ದೊಡ್ಡ ಸಾಧನೆ ಎಂದು ಇವರೆಲ್ಲಾ ತಿಳಿದುಕೊಂಡಿದ್ದಾರೆ. "ವಿಕಲ ಚೇತನ"ದಂಥ ವಿಕೃತ ಶಬ್ದವನ್ನು ಸೃಷ್ಟಿಸಿ ತನ್ನ ಪತ್ರಿಕೆಯಲ್ಲಿಯೂ "ಜನಪ್ರಿಯ"ಗೊಳಿಸಿದ ಈತನ ಸೃಷ್ಟಿಕಾರ್ಯ ಪ್ರೌಢಿಮೆ ಎಲ್ಲರಿಗೂ ಗೊತ್ತಿರುವಂಥದ್ದೇ.

ಅಂದಹಾಗೆ ಈ ಕೆಳಗೆ ಕೊಟ್ಟಿರುವ ಲಿಂಕ್- ನೋಡಿದ್ದೀರಾ?
http://www.deccanherald.com/content/184820/mining-kickbacks-some-names-ring.html

ಇದರಲ್ಲಿರುವ ಪಟ್ಟಿಯಲ್ಲಿ V.Bhat, R.B., ಅಂದರೆ ಯಾರೆಂದು ಊಹಿಸಬಲ್ಲಿರಾ? ವಿಜಯ ಕರ್ನಾಟಕ ಪತ್ರಿಕೆಯಿಂದ ಹೊರತಳ್ಳಿಸಿಕೊಂಡದ್ದಕ್ಕೆ ಬಹುಶಃ ಇದೇ ಮುಖ್ಯ ಕಾರಣವಿರಬಹುದೋ ಏನೋ. ಇಂಥವರೆಲ್ಲಾ ಇಂದಿನ ಕರ್ನಾಟಕ ಪತ್ರಿಕೋದ್ಯಮದ ಅಗ್ರ ಸಂಪಾದಕರೆಂದು ಪರಿಗಣಿತರಾಗಿರುವುದು ಕನ್ನಡಿಗರಿಗೆಲ್ಲಾ ದುರಾದೃಷ್ಟ.

ಚಿನ್ಮಯ ಭಟ್ said...

ಸರ್ ನಿಮ್ಮ ಲೇಖನವನ್ನು ಓದಿದೆ...
ಇಷ್ಟವಾಯ್ತು....
ಹಮ್..ವಿಶ್ವೇಶ್ವರ ಭಟ್ಟರೋ,ಶಿವರಾಮ ಕಾರಂತರೋ,ನೀವೋ ಇನ್ನಿತರರೋ ಎಲ್ಲರೂ ನನಗಿಂತ ವಯಸ್ಸಿನಲ್ಲಿ ಅನುಭವದಲ್ಲಿ,ಸಾಧನೆಯಲ್ಲಿ ದೊಡ್ಡವರು..ಹಾಗಾಗಿ ಈ ವಿಚಾರಗಳೆಲ್ಲಾ ನನಗೆ ತಿಳಿಯದು ನಾನು ಹೇಳುವುದೂ ಸೂಕ್ತವಲ್ಲ..
ನನಗೆ ಗೊತ್ತಿರುವುದಿಷ್ಟೇ...
ಪ್ರತಿಯೊಬ್ಬರಲ್ಲೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ..ಅದು ಸೃಷ್ಟಿಯ ಸಹಜ ನಿಯಮ..ಕಾರಂತರ ಮಾತಿನಲ್ಲೇ ಹೇಳುವುದಾದರೆ "ಜನನಾವಸ್ಥೆ"...
ಮಾವಿನಹಣ್ಣಿನಲ್ಲೂ ಸೋನೆ ಹಣ್ಣು ಇರುತ್ತದೆಯಲ್ಲಾ ಅದರಲ್ಲಿ ಹಣ್ಣನ್ನಷ್ಟೇ ತಿಂದು ಉಳಿದದ್ದು ಇಷ್ಟವಾಗದಿದ್ದರೆ ಬಿಟ್ಟು ಬಿಡಿ ಎಂಬುದನ್ನು ನಂಬಿದವ ನಾನು..
ದೊಡ್ಡವರ ಸಣ್ಣತನದ ಬಗ್ಗೆ ಮಾತನಾಡುವುದು ಸಣ್ಣತನವಾದೀತು..ಅವರ ಉತ್ತಮ ಅಂಶಗಳನ್ನಷ್ಟೇ ಅಳವಡಿಕೊಳ್ಳೋಣ ಎನ್ನುವುದು ನನ್ನ ಅನಿಸಿಕೆ...
ಧನ್ಯವಾದಗಳು ಸಾರ್...
ನಮಸ್ತೆ...

sunaath said...

Anonymusರೇ,
ವಿಶ್ವೇಶ್ವರ ಭಟ್ಟರನ್ನು ನಾನು ವೈಯಕ್ತಿಕವಾಗಿ ಮೆಚ್ಚುವುದಿಲ್ಲ.ಅರಸನ ಕಿರೀಟದ ಮೇಲೆ ಕುಳಿತ ನೊಣವೊಂದು ತಾನು ಜಂಬೂಸವಾರಿ ಮಾಡಿದೆ ಎಂದು ಹೊಗಳಿಕೊಳ್ಳುತ್ತಿತ್ತಂತೆ. ಭಟ್ಟರು ಅದೇ ರೀತಿಯಲ್ಲಿ ಪರಪ್ರಕಾಶಪಂಡಿತರಾಗಿದ್ದಾರೆ. ಆದರೆ ಪತ್ರಿಕೆಯನ್ನು ರಂಜನೀಯವಾಗಿ ಮಾಡುವುದರಲ್ಲಿ, ಓದುಗರನ್ನು ಸೆಳೆಯುವಲ್ಲಿ ಅವರಿಗೆ ಪ್ರತಿಭೆ ಇದೆ. ಕನ್ನಡಪ್ರಭಾ ಪತ್ರಿಕೆಯ ಸಂಪಾದಕರು ಯಾರೇ ಇರಲಿ, ಅವರು ಗಣ್ಯರೇ!

sunaath said...

ಚಿನ್ಮಯ ಭಟ್ಟರೆ,
ಮುತ್ತಿನಂತಹ ಮಾತನ್ನು ಹೇಳಿದಿರಿ. ಭಟ್ಟರ ದೋಷಗಳು ಏನೇ ಇದ್ದರೂ, ಅವರ ಗುಣಗಳನ್ನು (ಇವೆ!)ಸ್ವಾಗತಿಸೋಣ.

ಸಂಧ್ಯಾ ಶ್ರೀಧರ್ ಭಟ್ said...

ಧನ್ಯವಾದ ಸರ್ ,,,. ಪದದ ಅರ್ಥವನ್ನು ಸರಿಯಾಗಿ ತಿಳಿಸಿಕೊಟ್ಟಿದ್ದಕ್ಕೆ ..

ನನಗೆ ಕಾರಂತರ ವ್ಯಕ್ತಿತ್ವ ತುಂಬಾ ಇಷ್ಟ.. ಮೊನ್ನೆ ಲೇಖನ ಓದಿದಾಗ ಅವರ ವ್ಯಕ್ತಿತ್ವದ ಬಗ್ಗೆ ಈ ಶಬ್ದ ಪ್ರಯೋಗ ಮಾಡಿದ್ದು ಸ್ವಲ್ಪ ಬೇಸರ ತಂದಿತ್ತು.

Swarna said...

ಕಾರಂತರ ಬಗ್ಗೆ ಬರೆದಿದ್ದನ್ನ ಓದಿಲ್ಲ ಓದ್ತೇನೆ.
ಪದಗಳನ್ನ ಜಾಗರೂಕತೆಯಿಂದ ಬಳಸಬೇಕು ಅಂತ ಮತ್ತೆ ಗೊತ್ತಾಯಿತು

ಮನಸು said...

ಯಾವುದೇ ವ್ಯಕ್ತಿ ಇನ್ನೊಬ್ಬರನ್ನು ಅರ್ಥೈಸಿಕೊಳ್ಳದೇ ತಮಗೆ ತೋಚಿದಂತೆ ಬರೆಯುವುದು ನಿಜಕ್ಕೂ ಖಂಡನೀಯಾ... ಇಂತಹ ವಿಷಯವನ್ನು ನೀವು ಬ್ಲಾಗ್ ನಲ್ಲಿ ಬರೆದು ಒಳ್ಳೆಯ ಕೆಲಸ ಮಾಡಿದ್ದೀರಿ ಕಾಕ...

ಶಿವರಾಮ ಕಾರಂತರು ಅಬ್ಬಾ ಆ ಹೆಸರೇ ಪುಳಕ ಇನ್ನು ಆ ಹೆಸರಿಗೇಕೆ ಇಲ್ಲ ಸಲ್ಲದ ಅರ್ಥ ತಿಳಿಯದು...

ದಿನಕರ ಮೊಗೇರ said...

ಸುನಾಥ್ ಸರ್,
ನಿಮ್ಮ ಎಲ್ಲಾ ಮಾತುಗಳಿಗ ನನ್ನ ಸಹಮತವಿದೆ. ದೊಡ್ಡವರ ದಡ್ಡತನಕ್ಕೆ ಏನೆನ್ನೋಣ. ನಮ್ಮ ನಿಮ್ಮ ಅನಿಸಿಕೆ ದಾಖಲಿಸೋಣ... ಅವರು ನಿಮ್ಮ ಲೇಖನ ಓದಿದರೆ ಒಳ್ಳೆಯದು.. ಓದಲಿ ಎಂದು ಆಶಿಸೋಣ....

sunaath said...

ಸಂಧ್ಯಾ,
ಕಾರಂತರಂತಹ ವ್ಯಕ್ತಿ ಮತ್ತೊಮ್ಮೆ ಹುಟ್ಟಲಿಕ್ಕಿಲ್ಲ!

sunaath said...

ಸ್ವರ್ಣಾ,
೬-೧೨-೧೨ರ ಕನ್ನಡಪ್ರಭಾ ಪತ್ರಿಕೆಯಲ್ಲಿ ವಿ.ಭಟ್ಟರ ಲೇಖನ ಪ್ರಕಟವಾಗಿದೆ. ಓದಿ ನೋಡಿ!

sunaath said...

ಮನಸು,
ಕಾರಂತರು ಅದ್ಭುತ ವ್ಯಕ್ತಿ. ಅವರ ಬಗೆಗೆ ಬರೆಯುವಾಗ ಭಟ್ಟರು ಎಚ್ಚರಿಕೆಯಿಂದ ಬರೆಯಬೇಕಾಗಿತ್ತು.

sunaath said...

ದಿನಕರ,
ಭಟ್ಟರು ಕಾರಂತರನ್ನು ಅರ್ಥೈಸಿಕೊಂಡ ಪರಿಯನ್ನು ನೋಡಿದರೆ ವಿಷಾದವಾಗುತ್ತದೆ. ತಮ್ಮ ತಿಳಿವಳಿಕೆಗೆ ತಕ್ಕಂತಹ ಲೇಖನವನ್ನು ಬರೆದಿದ್ದಾರೆ ಎನ್ನಬೇಕಷ್ಟೆ!

ಸುಬ್ರಮಣ್ಯ said...

ಭಟ್ಟರ ಲೇಖನದಲ್ಲಿ ಅಂಥಾ ಮಹಾಪರಾದ ಕಾಣುತ್ತಿಲ್ಲ.

Anonymous said...

"ವಿಕಲ ಚೇತನ" ಕ್ಕಿಂತ ಮೊದಲು ಇನ್ನೊಂದು ವಿಕೃತ ಪದವಿತ್ತು. ಅದನ್ನು ನಾನು ಬರೆದು ಆಕ್ಷೇಪಿಸಿದ ಮೇಲೆ ಈ ವಿಕೃತಿಯು ಬಳಕೆಗೆ ಬಂತು. ವಿಕಲ ಚೇತನ = ಸತ್ತ ವ್ಯಕ್ತಿ.

Anonymous said...

no..

ಸಿಂಧು sindhu said...

ಕಾಕಾ,
ನಿಮ್ಮ ಲೇಖನ ಓದಿದ ಮೇಲೆ ಅನ್ನಿಸುತ್ತಿದೆ.
ತನ್ನದೇ ಉದಾಹರಣೆ ಕೊಟ್ಟುಕೊಳ್ಳುವ ಬದಲು ಭಟ್ಟರು ನಮ್ಮ ಭಾರ್ಗವ ಶಿವರಾಮಕಾರಂತರ ಉದಾಹರಣೆ ಕೊಟ್ಟಿದ್ದಾರೆಂದು.

ನಾನು ಕಾರಂತರ ವೈಯಕ್ತಿಕ ಪರಿಚಯ ಇರದ ಅವರ ಓದುಗಳು. ಅವರ ಎಲ್ಲ ಬರಹಗಳಲ್ಲಿನ ನಿಖರತೆ,ಪ್ರಾಮಾಣಿಕತೆ ಮತ್ತು ಸರಳತೆ ಅವರ ವ್ಯಕ್ತಿತ್ವವನ್ನ ನನಗೆ ಅರ್ಥ ಮಾಡಿಸಿದೆ. ಇದನ್ನ ನಿಮ್ಮಂತಹ ಹಿರಿಯ ಚೇತನರು, ಅವರ ಬಗೆಗಿನ ಒಡನಾಟದ ಕ್ಷಣಗಳನ್ನು ತಿಳಿಸಿ ಆಗಾಗ ಧೃಡ ಪಡಿಸುತ್ತಿರುತ್ತೀರಿ. ಇತ್ತೀಚೆಗೆ ಬೆಳಗೆರೆ ಕೃಷ್ಣಶಾಸ್ತ್ರಿಯವರ ಮರೆಯಲಾದೀತೇ ಪುಸ್ತಕ ಓದುತ್ತಿದ್ದೆ. ಅಲ್ಲಿಯೂ ಕಾರಂತರ ಇಂತಹ ಸಹಜ ಗುಣವಿಶೇಷಗಳನ್ನ ಹಿರಿಯ ಜೀವ ಕೃಷ್ಣ ಶಾಸ್ತ್ರಿಯವರು ಸೊಗಸಾಗಿ ಬರೆದಿದ್ದಾರೆ.
ನಿಮ್ಮಗಳ ಕೈಮರವಿಲ್ಲದೆ ಇದ್ದರೆ ನಾವು ಕಿರಿಯರ ಓದು,ಅವಗಾಹನೆ,ಮತ್ತು ಅರ್ಥೈಸುವಿಕೆಗೆ ದಿಕ್ಕು ತಪ್ಪುತ್ತದೆ.

ಪ್ರೀತಿಯಿಂದ,ಸಿಂಧು

Anonymous said...

ವಿಶ್ವೇಶ್ವರ ಭಟ್ಟರು ಎಲ್ಲೆಯು ನಾನು ಇಂಥ ವ್ಯಕ್ತಿ ಎಂದು ಹೇಳಿಕೊಂಡಿಲ್ಲ.ಅವರು ಶಿವರಾಮ ಕಾರಂತರ ಬಗ್ಗೆ ಬರೆದಿರುವಿದು ಕೇವಲ ಒಂದು ಪ್ಯಾರಾ ಮಾತ್ರ, ಅದರಲ್ಲಿ ಮೊದಲನೇ ಪ್ಯಾರಾದಲ್ಲಿ ವಿದ್ವತ್ತಿನ ಬೆಂಬಲ,ಬುದ್ಧಿಯ ಒಲವು ಗಳಿಸಿಕೊಂಡವ ತುಸು ಜಂಭದಿಂದ ನಡೆದುಕೊಂಡರೆ ಅದೇನು ಅಪರಾಧವಿಲ್ಲ.ಎಂದು ಬರೆದಿದ್ದಾರೆ ಇದರಲ್ಲಿ ತಪ್ಪೇನು ಇಲ್ಲಾ.ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿ ಮೇಲ್ಮಟ್ಟಕ್ಕೆ ಏರಿದಾಗ ಅವನಿಗೆ ಸ್ವಲ್ಪವಾದರೂ ಜಂಭ ಬಂದೆ ಬರುತ್ತೆ..ರವಿ ಬೆಳಗೆರೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಪ್ರತಾಪ ಸಿಂಹ ವೆಬ್ಸೈಟ್ ನೋಡಿ..

sunaath said...

ಸುಬ್ರಹ್ಮಣ್ಯರೆ,
ಮೊದಲ ಅಪಚಾರವಿರುವುದು audacity ಪದದ ಅರ್ಥವನ್ನು ಪೊಗರು ಹಾಗು ತಿಕಕೊಬ್ಬು ಎಂದು ಹೇಳಿರುವದರಲ್ಲಿ. ಎರಡನೆಯ ಅಪಚಾರವಿರುವುದು ಕಾರಂತರಲ್ಲಿ audacity ಇತ್ತು ಎಂದು ಹೇಳಿರುವದರಲ್ಲಿ. ಇದರ ಅರ್ಥ ಏನಾಗತ್ತೆ, ನೀವೇ ನೋಡಿ. ಮೂರನೆಯ ಅಪಚಾರವಿರುವುದು ಕಾರಂತರಲ್ಲಿ ಜಂಭ ಇತ್ತು ಎನ್ನುವ implicationದಲ್ಲಿ. ಯಾಕೆಂದರೆ ಕಾರಂತರಲ್ಲಿ ಜಂಭ ಇರಲಿಲ್ಲ. ನಾಲ್ಕನೆಯ ಅಪಚಾರವಿರುವುದು ಕಾರಂತರ ನಿಷ್ಠುರತೆಯನ್ನು audacity ಎಂದು ಸಮೀಕರಿಸಿದ್ದರಲ್ಲಿ!

sunaath said...

Anonymus,
ವಿಕಲಚೇತನ ಪದದ ಅರ್ಥವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.

sunaath said...

Anonymus,
no..ಎಂದಿದ್ದೀರಿ. ಅರ್ಥವಾಗಲಿಲ್ಲ!

sunaath said...

ಸಿಂಧು,
ಕಾರಂತರಲ್ಲಿ ಸ್ವಾರ್ಥಕಾರಣ ಇರಲಿಲ್ಲ.ವಿಶ್ವೇಶ್ವರ ಭಟ್ಟರಲ್ಲಿ ಅದು ಧಾರಾಳವಾಗಿ ಇದ್ದೀತು ಎಂದು ತೋರುತ್ತದೆ.

sunaath said...

Anonymus,
ರವಿ ಬೆಳಗೆರೆಯವರ ಜಾಲತಾಣದ ಸೂಚನೆ ಕೊಟ್ಟಿದ್ದಕ್ಕೆ ಧನ್ಯವಾದಗಳು.

Manjunatha Kollegala said...

ಕ್ಯಾ.ಗೋಪೀನಾಥರ simplyfly ಉದ್ಯಮಕಥನದ ಕನ್ನಡಾನುವಾದ "ಬಾನಯಾನ" ನಿಜಕ್ಕೂ ವಿಶ್ವೇಶ್ವರ ಭಟ್ಟರದೋ ಅಥವಾ ಯಾವನಾದರೂ ಲೇಖನಪಿಶಾಚಿಯದೋ (ghost writer) ಎಂದು ಅನುಮಾನಿಸುತ್ತಿದ್ದೆ. ಆದರೆ audacityಗೆ ಭಟ್ಟರು ಕೊಟ್ಟ ವಿಶೇಷಾರ್ಥಗಳನ್ನು ನೋಡಿದ ಮೇಲೆ ಈ ಪುಸ್ತಕದ ಅನುವಾದವೂ ಭಟ್ಟರದೇ ಎಂದು ನಂಬಿಕೆ ಬಂದಿದೆ. ಈ ಗ್ರಂಥರತ್ನಾಕರದಿಂದ ಹೆಕ್ಕಿತೆಗೆದ ಒಂದು ಆಣಿಮುತ್ತು ಇಲ್ಲಿದೆ ನೋಡಿ (ಪು ೨೮೮):

"ಪರಿಣಾಮಕಾರಿ ಜಾಹೀರಾತು ಎಂಬುದು ಸತತವಾಗಿ ಮುಂದುವರೆಯುವ ದ್ವಂದ್ವವಾಗಿದೆ. ಜಾಹೀರಾತು ಕ್ಷೇತ್ರದ ಗುರು ಡೇವಿಡ್ ಒಗಿಲ್ವಿ, ನಾನು ಬಹಳವಾಗಿ ಗೌರವಿಸುವ ವ್ಯಕ್ತಿ. ಒಗಿಲ್ವಿ ಒಮ್ಮೆ ಹೇಳುತ್ತಿದ್ದರು ’ಒಮ್ಮೆ ನಾನು ಜಾಹೀರಾತು ಬರೆದಾಗ ಅದರಲ್ಲಿ ಸೃಜನಶೀಲ ಅಂಶ ಏನಿದೆ ಎಂದು ನೀವು ನನಗೆ ಹೇಳುವ ಅಗತ್ಯವಿಲ್ಲ. ಅದೆಷ್ಟು ಆಕರ್ಷಕವಾಗಿರಬೇಕು ಎಂದರೆ, ನೀವು ಆ ಉತ್ಪನ್ನವನ್ನು ಖರೀದಿಸುವಂತಾಗಬೇಕು. ಏಶೈನ್ಸ್ ಮಾತನಾಡುವಾಗ ’ಅದೆಷ್ಟು ಚೆನ್ನಾಗಿ ಮಾತನಾಡುತ್ತದೆ’ ಎಂದಿದ್ದರು. ಆದರೆ ಡೆಮಾಸ್ಥೀನ್ಸ್ ಮಾತನಾಡುವಾಗ ’ನಾವು ಫಿಲಿಪ್ಸ್ ವಿರುದ್ಧ ನಡೆಯೋಣ’ ಎಂದಿದ್ದರು. ರೈಯಾನ್ ಏರ್ ನ ಮುಖ್ಯ ಕಾರ್ಯನಿರ್ವಾಹಕ ಅಧಕಾರಿ ಸಹ ಇದೇ ಮಾದರಿಯ ಮಾತು ಹೇಳಿದ್ದರು. ಕೆಲವು ಸೃಜನಶೀಲ ಮೂರ್ಖತೆಯನ್ನು ಉಣಬಡಿಸುವ ಎಲ್ಲ ಜುಟ್ಟುಗಳನ್ನು ಮರೆತುಬಿಡಿ..."

ಈ ಅನುವಾದಗಳನ್ನು ’ಅರ್ಥ’ಮಾಡಿಕೊಳ್ಳಬೇಕಾದರೆ ಮೂಲ ಇಂಗ್ಲಿಶ್ ಪುಸ್ತಕವನ್ನು ಓದಲೇಬೇಕು. ವಿಶ್ವೇಶ್ವರಾ ನೀನೇ ಕಾಪಾಡಪ್ಪ!!

sunaath said...

ಮಂಜುನಾಥರೆ,
ಈ ಪರಿಚ್ಛೇದದ ಅರ್ಥವನ್ನು ಹೇಳಲು ವಿಶ್ವೇಶ್ವರನಿಗೂ ಸಾದ್ಯವಿಲ್ಲ!ಇದು ವಾಹ್,ಕನ್ನಡ!

ಆಸು ಹೆಗ್ಡೆ said...

ಓರ್ವ ವ್ಯಕ್ತಿಯ ಎಲ್ಲಾ ಗುಣಗಳೂ ಎಲ್ಲರಿಗೂ ಮೆಚ್ಚುಗೆಯಾಗಬೇಕೆಂದೇನಿಲ್ಲ.
ಓರ್ವ ವ್ಯಕ್ತಿಯ ಎಲ್ಲಾ ನಡೆಗಳನ್ನು ಎಲ್ಲರೂ ಒಂದೇ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೆಂದೇನೂ ಇಲ್ಲ.

V.R.BHAT said...

ಸುನಾಥರೇ, ತಮ್ಮ ಲೇಖನಕ್ಕೆ ಇಲ್ಲೇ ಉತ್ತರಿಸುವ ಬದಲು ಬೇರೊಂದು ಲೇಖನ ಬರೆದು ಉತ್ತರಿಸುವುದು ಸಮಂಜಸ ಎನಿಸುತ್ತದೆ. ಕನ್ನಡ ಪ್ರಭ ಸಂಪಾದಕರಾದ ಮಾತ್ರಕ್ಕೆ ವ್ಯಕ್ತಿ ಗಣ್ಯ ಎಂದು ತೀರ್ಮಾನಿಸುವುದಾದರೆ ಸಂಪಾದಕರೆಲ್ಲರೂ ಗಣ್ಯರೇ ಎಂಬ ಶಿರೋನಾಮೆ ತಗುಲಿಸಿ ಕೊಳ್ಳಬಹುದು ಎನಿಸುತ್ತಿದೆ, ಒಂದೆರಡು ದಿನಗಳಲ್ಲಿ ಸದ್ರಿ ವಿಶ್ವೇಶ್ವರ ಭಟ್ಟರು ಮತ್ತು ಇನ್ನೊಂದಿಬ್ಬರ ಬಗ್ಗೆ ಲೇಖನದಲ್ಲಿ ಭಾಗಶಃ ಬರೆಯುವ ಪ್ರಯತ್ನ ಮಾಡುತ್ತೇನೆ, ಅನುಕೂಲವಾದಾಗ ತಾವು ಓದಬಹುದಾಗಿದೆ. ಧನ್ಯವಾದಗಳು.

sunaath said...

ಆಸು ಹೆಗಡೆಯವರೆ,
ತಮ್ಮದು ಸರಿಯಾದ ಮಾತು. ಒಪ್ಪಿಕೊಳ್ಳುತ್ತೇನೆ.

sunaath said...

ಭಟ್ಟರೆ,
ತಮ್ಮ ಲೇಖನಕ್ಕಾಗಿ ಕಾಯುತ್ತಿರುತ್ತೇನೆ.

Subrahmanya said...

ವಿಶ್ವೇಶ್ವರ ಭಟ್ಟರ ಭಾಷಾ ಪ್ರತಿಭೆಯನ್ನು ಕಂಡು ದಂಗಾದೆ !. (ಬಾನಯಾನ ವನ್ನು ೩೦ ಪುಟ ಓದಿ ಪಕ್ಕಕ್ಕಿಟ್ಟು ಮತ್ತೆ simplyfly ಓದಿ ಸಮಾಧಾನ ಪಟ್ಟುಕೊಂಡೆ). ಕಾರಂತರಿಗೆ ತಿಕಕೊಬ್ಬು ಇತ್ತೋ ಇಲ್ಲವೋ (ಇದ್ದಿದ್ದರೆ ಅದನ್ನೂ ಅವರು ಹೇಳಿಕೊಂಡಿರುತ್ತಿದ್ದರು) ಈ ಸಂಪಾದಕರಿಗಂತೂ "ಅದು" ಇದೆ ಅನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

sunaath said...

ಸುಬ್ರಹ್ಮಣ್ಯರೆ,
ವಿಶ್ವೇಶ್ವರ ಭಟ್ಟರಿಗೆ ಅವರೇ ಸಾಟಿ!

vaishu said...

ಸುನಾತ್ ಕಾಕಾ ಕನ್ನಡದ ಆಸ್ತಿ ಕಾರಂತಜ್ಜರಂತಹ ಹಿರಿಯ ಜ್ಞಾನಿಗಳ ವ್ಯಕ್ತಿತ್ವ ವರ್ಣಿಸುವಾಗ audacity ಪದದ ಬಳಕೆ ಮಾಡಿದ್ದು ಮನಸಿಗೆ ನೋವಾಯ್ತು.Also ones character cant be judged based on single instance.ಕಲಾಸೇವಕ ಕಡಲ ತೀರದ ಭಾರ್ಗವ ಕಾರಂತಜ್ಜ ಸರಳ ಸೌಜನ್ಯಾ ವ್ಯಕ್ತಿತ್ವದ ಮನುಷ್ಯರಾಗಿದ್ದ ಬಗ್ಗೆ ಸಾಕಷ್ಟು ಕುರುಹು ನಿದರ್ಶನಗಳಿದ್ದಾವೆ.ಇದು ಸಹ, ಹಿಂದೆ ನಾವುಗಳೇ ಆರಾಧಿಸಿಕೊಂಡು ಬಂದಿರುವಂತಹ ಪುರಾಣ ಐತಿಹಾಸಿಕ ಪುಟಗಳಿಂದ ಆಯ್ದ ಗಣ್ಯ ಮಹಾತ್ಮರೆನಿಸಿಕೊಂಡವರ ವ್ಯಕ್ತಿತ್ವಕ್ಕೆ ಕೆಸರೆರೆಚುವ,ಅವರ ಕೊಡುಗೆಗಳ ಬಗ್ಗೆಗೆ ಸಂಶಯ ವ್ಯಕ್ತವಾಗುತಿರುವ ಟ್ರೆಂಡ್ ನ ಭಾಗವೆನ್ನಬಹುದಾ? ಮತ್ತೆ ಇಂತದ್ದು ಥೇಟ್ ಪ್ರಳಯದಂತೆ..... ಚರ್ಚೆಗಳಿಗೆ ವೇದಿಕೆಯಾಗಬಹುದು,ಪ್ರಚಾರದ ಸರಕುಗಳಾಗಬಹುದಷ್ಟೇ ಹೊರತು ಹೊಸದೊಂದು ಇತಿಹಾಸ ರಚಿಸಲಾರದು! noting,we are in a time where any kind of publicity for tat matter even the most inflammatory ones are considered as good publicity.According to me all good it does is resurrect the forgotten and helps rekindle our thought process about the old interests.;-) :D

sunaath said...

ವೈಶು,
ಗರುಡನನ್ನು ಟೀಕಿಸುವ ಗುಬ್ಬಿಯಂತಿದೆ ಈ ಘಟನೆ!

Ashok.V.Shetty, Kodlady said...

ಕಾಕಾ,

audacity ಎನ್ನುವ ಪದದ ಸರಿಯಾದ ಅರ್ಥ ತಿಳಿದುಕೊಂಡ ಮೇಲೆ ಅಂತಹ ಪದದ ಬಳಕೆಯನ್ನು ಶಿವರಾಮ ಕಾರಂತ ರಂತ ಕವಿ ಮಹಾಶಯರಿಗೆ ಬಳಸಿದ್ದು ನಿಜವಾಗಿಯೂ ನೋವನ್ನುಂಟು ಮಾಡಿತು....ನಾನು ಕಾರಂತರ ಬರಹಗಳು ಮಾತ್ರವಲ್ಲ ಅವರ ವ್ಯಕ್ತಿತ್ವ ದ ಕೂಡ ಅಭಿಮಾನಿ.....ನಮ್ಮ ಕುಂದಾಪುರದವರು ಎಂಬ ಅಭಿಮಾನ ಇನ್ನೊಂದೆಡೆ.....ನಾವು ಏನು ಬರೆದರೂ ಜನ ಓದುತ್ತಾರೆ, ಮೆಚ್ಚುತ್ತಾರೆ ಎಂದು ದುರಹಂಕಾರದಿಂದ ಮೆರೆಯುವ ಇಂತಹ ಪತ್ರಿಕ ಬರಹಗಾರರು ಹೆಚ್ಚಾಗಿರುವುದು ಕನ್ನಡಿಗರ ದುರಾದೃಷ್ಟ. ಹಾಗೆಯೇ ಓದುಗರು ಕೂಡ ಯಾರು ಬರೆದಿದ್ದಾರೆ ಎನ್ನುವುದಕ್ಕಿಂತ ಏನು ಬರೆದಿದ್ದಾರೆ ಎನ್ನುವುದನ್ನು ಅರ್ಥಮಾಡಿ ಕೊಳ್ಳಬೇಕು .....ಇಂತಹ ಬರಹಗಳು ಕಿರಿಯ ಓದುಗರಲ್ಲಿ , ಸಾಹಿತ್ಯಾಭಿಮಾನಿಗಳಲ್ಲಿ ಕಾರಂತರಂತ ಮಹಾನ್ ವ್ಯಕ್ತಿತ್ವವುಳ್ಳ ಕವಿಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸುವುದು ನಿಜ.....ನೀವು ಅದನ್ನು ಖಂಡಿಸಿ ಬರೆದಿರುವುದು ಪ್ರಶಂಶನೀಯ.....ಧನ್ಯವಾದಗಳು ಸರ್.....

Anonymous said...

ನಮಸ್ಕಾರಗಳು ಸರ್.

ಬ್ರಾಹ್ಮಣರೊಳಗೇ ಹಲವಾರು ಉಪಜಾತಿಗಳಿದ್ದು, ಅವುಗಳೊಳಗೇ ಮದುವೆಗೆ ವಿರೋಧವಿದ್ದ ಕಾಲವೊಂದಿತ್ತು. (ಈ ಡಿಜಿಟಲ್ ಯುಗದಲ್ಲಿಯೂ ಇದೆ). ಪುರೋಹಿತರ ಮಗನಾಗಿ, ಆ ಕಾಲದಲ್ಲಿಯೇ ಯಾರಿಗೂ ಹೆದರದೇ ತಮ್ಮ ಮನಸಿಗೆ ಹಿಡಿಸಿದ ಅಬ್ರಾಹ್ಮಣ-ಜಾತಿಯ ಹುಡುಗಿಯನ್ನು ಜಾತಿಯ ಹಂಗಿಲ್ಲದೇ ಮದುವೆಯಾದ ನಿಷ್ಠುರವಾದಿ, ನಮ್ಮ ಕಾರಂತರು. ಖುದ್ದು ಗಾಂಧೀಜಿಯವರ ಸ್ವನಿಯಂತ್ರಿತ ಬಹ್ಮಚರ್ಯವೇ ಮೊದಲಾದ ವಿಚಾರಧಾರೆಗಳನ್ನು ಒಪ್ಪದೇ ಟೀಕಿಸದವರು ಕಾರಂತರು. ಹೀಗೆ ಖಾಸಗಿ ಜೀವನದಲ್ಲಿರಲಿ, ರಾಜಕೀಯವಿರಲಿ, ಯಕ್ಷಗಾನವಿರಲಿ, ಯಾ ನಮಗೆಲ್ಲರಿಗೂ ಹೆಚ್ಚು ಪರಿಚಿತರಾದ ಸಾಹಿತಿ ಕಾರಂತರಿರಲಿ ತಮ್ಮ ಮನಸ್ಸಿನಲ್ಲಿದ್ದದ್ದನ್ನ ನೇರವಂತಿಕೆಯ ಮೂಲಕ ಹೊರಹಾಕುತ್ತಿದ್ದವರವರು.

ಇವರನ್ನು ಟೀಕಿಸುವ ಯಾ ಚಾರಿತ್ರ್ಯವಧೆ ಮಾಡುವ ಮಟ್ಟದ ಘನಂಧಾರಿ ಸಾಧನೆಯನ್ನು ಮೂರೂರು, ಅಲ್ಲಲ್ಲ, ಮೂರ್ಕಾಸು ವಿಶ್ವೇಶ್ವರ ಭಟ್ಟ ಇಲ್ಲಿಯವರೆಗಂತೂ ಮಾಡಿಲ್ಲ, ಮುಂದೆ ಮಾಡುವ ಕುರುಹುಗಳು ಇದುವರೆಗೂ ಸಿಕ್ಕಿಲ್ಲ. ಹೆಚ್ಚೆಂದರೆ ಈತನ ಇಲ್ಲಿಯವರೆಗಿನ ಸಾಧನೆಗಳೆಂದರೆ ಅನಂತ ಕುಮಾರನ ಮೀಡಿಯಾ ಸೆಕ್ರೆಟರಿಯಾಗಿದಿದ್ದು (ಮಂತ್ರಿಯಾಗಿರುವವರೆಗೆ); ವಿಜಯ ಕರ್ನಾಟಕವನ್ನು "ರೂಪಾಯಿಗೊಂದು ಪತ್ರಿಕೆ"ಯ ಪ್ರೈಸ್-ವಾರ್ ಮೂಲಕ ಜನಪ್ರಿಯಗೊಳಿಸಿದ್ದು; ಗಣಿಧಣಿಗಳ ಬಗ್ಗೆ ಪುಂಖಾನುಪುಂಖವಾಗಿ ಹೊಗಳಿ ವಾರಗಟ್ಟಲೇ ವರದಿ ಪ್ರಕಟಿಸಿದ್ದು (ವಿ.ಕ.ದ ಸಾಧನೆ-ವೇದನೆ ನೆನಪಿದೆಯೇ); ವಿ.ಕ.ದಿಂದ ಹೊರಬಿದ್ದು ಈಗ ಮಲೆಯಾಳಿ ಒಡೆತನದ ಕ.ಪ್ರ. /ಸುವರ್ಣದಲ್ಲಿ ತಳವೂರಿದ್ದು, ಇಷ್ಟು ಮಾತ್ರ.

ಜೀವನದುದ್ದಕ್ಕೂ ಕಾಂಪ್ರಮೈಸುಗಳ ಸರಮಾಲೆಯನ್ನೆ ಮಾಡಿ ಬೆಳೆದು ಬಂದಿರುವ ಇಂಥಾ ತಿಗಣೆಗಳಿಗೆ ಕಾರಂತರಿಗೆ "ತಿಕಕೊಬ್ಬು" ಇದೆ ಎಂದು ಅನಿಸಿದ್ದಲ್ಲಿ ಅಸಹಜಾದದ್ದೇನೂ ಇಲ್ಲ.

sunaath said...

ಅಶೋಕರೆ,
ಕಾರಂತರ ಅನೇಕ ಮುಖದ ವ್ಯಕ್ತಿತ್ವಗಳಲ್ಲಿ ಕಲಾಪ್ರೇಮವೂ ಒಂದು ಮುಖ್ಯ ಮುಖವಾಗಿದೆ. ಅವರನ್ನು ಸ್ವತಃ ಭೆಟ್ಟಿಯಾದ ಸಂದರ್ಭದಲ್ಲಿ, ಈ ಮುಖದ ಪರಿಚಯವಾಗಿ ನಾನು ಚಕಿತನಾದೆ. ಎಂತಹ ಮೇರುಸದೃಶ ವ್ಯಕ್ತಿತ್ವ! ಅಷ್ಟೇ ಸರಳ ವ್ಯಕ್ತಿ!

umesh desai said...

kaka, it ironical that Journalists behaving like Godmen and are issuing opinions, feelings about respected people, whom they cant even think of matching.

sunaath said...

Anonymusರೇ,
ಕಾರಂತರ ಸಾಹಿತ್ಯವನ್ನು ಸ್ಮರಿಸಬೇಕೆ, ಅಗಾಧ ಜ್ಞಾನಕ್ಕೆ ಅಚ್ಚರಿಪಡಬೇಕೆ, ಕಲಾಪ್ರೇಮಕ್ಕೆ ಮರುಳಾಗಬೇಕೆ ಎಂದೆಲ್ಲ ಯೋಚಿಸಿದಾಗ, ಕೊನೆಗೆ ಹೊಳೆಯುವುದು ಅವರ ಮಾನವೀಯತೆ, ಅವರ ನೇರತನ. ಸಂಕೀರ್ಣ ವ್ಯಕ್ತಿತ್ವದ ಈ ಸರಳ ಮಾನವನನ್ನು ನಮ್ಮ ಚಿತ್ತದಲ್ಲಿ ತುಂಬಿಕೊಳ್ಳುವುದೇ ಕಷ್ಟ!

sunaath said...

Umesh,
Devil turning into a Godman!

ಈಶ್ವರ said...

ಸುನಾಥ ಕಾಕಾ, ನಿಮ್ಮ ಲೇಖನ ಸರಿಯಾಗಿದೆ. ನೀವು ಹೇಳಿದ್ದು ಕೂಡಾ ಅತ್ಯಂತ ಸರಿಯಾದ ಕಡೆ ತಾಗಬೇಕು. ನಾನೂ ಒಂದು ಕಾಲಕ್ಕೆ ವಿಶ್ವೇಶ್ವರಭಟ್ಟರ ಅಭಿಮಾನಿ. ಯಾವತ್ತು ಎಸ್ಸೆಮ್ಮೆಸ್ಸು ವಕ್ರವಾಗಿ ತುಂಡಾಯಿತೋ ಆಗ ಗೊತ್ತಾಗುತ್ತಾ ಬಂತು.
ಶಿವರಾಮ ಕಾರಂತರಂತಹ ದೈತ್ಯ ಪ್ರತಿಭೆ, ನಮ್ಮ ಹೆಮ್ಮೆ ಒಂದುವೇಳೆ ಅದೇ ಅರ್ಥದಲ್ಲಿ ಹೇಳಿದ್ದರೂ ಅದನ್ನ ಕೋಟ್ ಮಾಡುವ ಅರ್ಹತೆ ಇವರಿಗಿಲ್ಲ.

sunaath said...

ಭಟ್ಟರೆ,
ಸರಿಯಾಗಿ ಹೇಳಿದಿರಿ. ‘ಕಹಾಂ ರಾಜಾ ಭೋಜ, ಕಹಾಂ ಗಂಗೂ ತೇಲಿ?’

ರಾಘವೇಂದ್ರ ಜೋಶಿ said...

ಸರ್, ಭಟ್ಟರ ಲೇಖನದ ಬಗ್ಗೆ ನಾನು ಏನೂ ಹೇಳಲಾರೆ.ಅದನ್ನು ಇಲ್ಲಿರುವ ಎಲ್ಲರೂ ಹೇಳಿಯಾಗಿದೆ.ಅದಕ್ಕೆ ತಕ್ಕಂತೆ ನೀವೂ ಕೂಡ ವಿವರಿಸಿ ಹೇಳಿದ್ದೀರಿ.ಆದರೆ,ಭಟ್ಟರು ಹುಟ್ಟುಹಾಕಿದ 'ವಿಕಲ ಚೇತನ' ಎಂಬ ಪದದ ಬಗ್ಗೆ ನನಗೆ ತುಂಬ ಬೇಸರವಿದೆ.ಎಂಥ ದುರಂತ ನೋಡಿ,ಅಂಗವಿಕಲ ಎನ್ನುವ ಪದ ಮನುಷ್ಯನ ವಿಕಲತೆಯನ್ನು ಮತ್ತು ಒಂದು ರೀತಿಯ ಹೀನತೆಯನ್ನು ಎತ್ತಿ ತೋರಿಸುತ್ತದೆ ಎಂಬ ಕಾರಣಕ್ಕಾಗಿಯೇ ಭಟ್ಟರು ಬೇರೆ ಪದ ಹುಟ್ಟುಹಾಕಿದ್ದು.ಆದರೆ ಹಾಗೆ ಹುಟ್ಟುಹಾಕಿದ ಪದ,ವ್ಯಕ್ತಿಯೊಬ್ಬನ ಅಂಗವೈಕಲ್ಯವನ್ನು ಮೀರಿ ಆತನ ಘನತೆ ಮತ್ತು ಶಕ್ತಿಯನ್ನು ತೋರ್ಪಡಿಸುವ ಪದವಾಗಬೇಕಿತ್ತು.ಆದರೆ "ಎಲ್ಲ ಬಿಟ್ಟು ಭಂಗಿ ನೆಟ್ಟ.." ಎಂಬಂತೆ ಇವರು ಹುಟ್ಟು ಹಾಕಿದ ಪದ: ವಿಕಲಚೇತನ! ಮನುಷ್ಯನೊಬ್ಬನ ಊನತೆ ಕಣ್ಣಿಗೆ ಗೋಚರಿಸಬಹುದು ಮತ್ತು ಅದು ನಿಜವಿರಲೂಬಹುದು.ಆದರೆ ಆತನ ಚೇತನ ಯಾವತ್ತಾದರೂ ಊನವಾಗಲು ಸಾಧ್ಯವೇ? ಅಂಗಗಳೆಲ್ಲ ಸರಿಯಿದ್ದೂ,ಕೆಟ್ಟ ಮನಸ್ಸಿನ ಜೀವಗಳಿಗೆ 'ವಿಕಲಚೇತನ'ವೆಂದು ಕರೆಯಬಹುದೇನೋ..
-Rj

sunaath said...

RJ,
ಪತ್ರಿಕಾಕರ್ತರು ಹೊಸ ಪದಗಳನ್ನು ಅವಸರದಲ್ಲಿ ಸೃಷ್ಟಿಸಬಾರದು. ಇಂಗ್ಲಿಶ್ ಭಾಷೆಯಲ್ಲಿ ಮೊದಲು handicapped ಇದ್ದದ್ದು, ಆಮೇಲೆ disabled ಆಗಿ, ಬಳಿಕ differently abled ಆದದ್ದರ ಹಿಂದೆ ಮಾನವೀಯ ಸಂವೇದನೆಯ ಇತಿಹಾಸವಿದೆ. ಭಟ್ಟರು ವಿಕಲಚೇತನ ಎಂದು ಹೇಳುವ ಮೂಲಕ, ತಮ್ಮ ಭಾಷಾಮೌಢ್ಯತೆಯನ್ನು ಹಾಗು insensitivityಯನ್ನು ಪ್ರದರ್ಶಿಸಿದ್ದಾರೆ! ಇವರಿಗೆ ಪತ್ರಿಕಾಕರ್ತರು ಎನ್ನಬಹುದೆ?

ಜಲನಯನ said...

ಸುನಾಥಣ್ಣ, ನನ್ನ ಅನಿಸಿಕೆ ಅಷ್ಟೇ..
ಎಂತಹ ಮೇರು ವ್ಯಕ್ತಿತ್ವ ಆಗಿದ್ದರೂ ಕೆಲ ದೋಷ ಕೊರತೆಗಳು ಇರಲೇಬೇಕು..ಹಾಗಿಲ್ಲದಿದ್ದರೆ ಅವನು ದೇವರಾಗಿಬಿಡುತ್ತಾನೆ. ಹಾಗಂತೆ ಎತ್ತರದ ವ್ಯಕ್ತಿತ್ವದ ಸಾಸಿವೆಗಳನ್ನು ಬಂಡೆಗಳಂತೆ ಚಿತ್ರಿಸುವುದರಿಂದ ಆ ಮೇರುವಿಗೆ ಏನೂ ಆಗದು...ಆದರೆ ಹಾಗೆ ದರ್ಶಿಸಿದವರ ಮನಸ್ಥಿತಿ ಬಗ್ಗೆ ಜಗಜ್ಜಾಹೀರಾಗುತ್ತೆ. ಹೌದು ನಿಮ್ಮ ಮಾತು ನಿಜ, ಪತ್ರಿಕೆಯ ಸಂಪಾದಕರಂತಹ ಗುರುತರ ಹುದ್ದೆಯಲ್ಲಿದ್ದು ಮಹಾನ್ ವ್ಯಕ್ತಿತ್ವಗಳ ಬಗ್ಗೆ ಬರೆಯುವಾಗ ಹೆಚ್ಚು ಜಾಗರೂಕತೆಯಿಂದ ಪದಬಳಕೆ ಮಾಡುವುದು ಸೂಕ್ತ.

sunaath said...

ಜಲನಯನ,
ನಮ್ಮ ಹಳೆಯ ಪತ್ರಿಕಾಸಂಪಾದಕರನ್ನು ಈಗಿನವರಿಗೆ ಹೋಲಿಸಿದರೆ ಆಶ್ಚರ್ಯವಾಗುತ್ತದೆ. ಮೊಹರೆ ಹನುಮಂತರಾಯರು, ಟಿ.ಎಸ್. ಆರ್. ಇವರೆಲ್ಲ ಪತ್ರಿಕೆಗಳನ್ನು ಯಾವ ಮಟ್ಟಕ್ಕೆ ಕೊಂಡಯ್ದೊದಿದ್ದರು, ಈಗಿನವರು ಯಾವ ಮಟ್ಟಕ್ಕೆ ಇಳಿಸುತ್ತಿದ್ದಾರೆ ಎಂದು ನೋಡಿದಾಗ ಬೇಜಾರಾಗುತ್ತದೆ!

Ashok Shettar (ಅಶೋಕ ಶೆಟ್ಟರ್) said...

ಸುನಾಥ್ ಅವರಿಗೆ, ನಮನಗಳು
ನಾವು ಒಮ್ಮೆ ಭೇಟಿ ಆಗಬಹುದೆನ್ನಿಸುತ್ತದೆ.ನಿಮ್ಮ ಮನೆ ಎಲ್ಲಿ ಅಂತ ಗೊತ್ತಿಲ್ಲ,ನನ್ನ ಫೋನ್ ಸಂಖ್ಯೆ ೯೯೦೦೬೯೭೯೨೦.ಪ್ರೀತಿಯಿಂದ
ಅಶೋಕ ಶೆಟ್ಟರ್

sunaath said...
This comment has been removed by the author.
ತೇಜಸ್ವಿನಿ ಹೆಗಡೆ said...

ಕಾಕಾ,

ಅಲ್ಪ ಸ್ವಲ್ಪ ಗೊತ್ತಿದ್ದ ವಿಷಯವನ್ನೇ ಚೆನ್ನಾಗಿ ತಿಳಿಸಿದ್ದೀರ.... ಮತ್ತಷ್ಟು ತಿಳಿಯಾಗಿ :)

sunaath said...

ತೇಜಸ್ವಿನಿ,
ನಾನು ತಿಳಿದದ್ದೂ ಅಲ್ಪಸ್ವಲ್ಪವೇ!