Monday, April 8, 2013

ನ್ಯಾಯವಿವೇಚನೆ-೨



ಸರ್ವಸಮಾನವಾದ ಹಾಗು ಧರ್ಮನಿರಪೇಕ್ಷವಾದ ನ್ಯಾಯನಿರ್ಣಯವು ಆಧುನಿಕ ನ್ಯಾಯವಿವೇಚನೆಯ ಪ್ರಮುಖ ಲಕ್ಷಣವಾಗಿದೆ. ೧೮೬೧ನೆಯ ಇಸವಿಯಲ್ಲಿ ಬ್ರಿಟಿಶರು ಮುಂಬಯಿ ಪ್ರಾಂತದಲ್ಲಿ Criminal Procedure Code‍ಅನ್ನು ಜಾರಿಗೆ ತಂದರು. ಇದರಿಂದಾಗಿ ಅಪರಾಧಿಯ ಧರ್ಮ,ಜಾತಿ ಅಥವಾ ಅಂತಸ್ತನ್ನು ಗಣನೆಗೆ ತಾರದೆ, ನಿರ್ದಿಷ್ಟ ಅಪರಾಧಕ್ಕೆ ನಿರ್ದಿಷ್ಟ ಶಿಕ್ಷೆ ಎಂದು ನಿರ್ಧರಿಸುವುದು ಸಾಧ್ಯವಾಯಿತು. ಆದರೆ ಸರ್ವಸಮಾನ ಸಿವಿಲ್ ಕೋಡ್‍ಅನ್ನು ಜಾರಿಗೆ ತರುವ ದರ್ದು ಅವರಿಗೆ ಇರಲಿಲ್ಲ. ಈಗಂತೂ ಅದು ರಾಜಕೀಯ ಆಟವಾಗಿದೆ.

ಕೊನೆಯ ಪಕ್ಷ ಕ್ರಿಮಿನಲ್ ಅಪರಾಧಗಳಲ್ಲಿಯಾದರೂ, ಶಾಸನ ಹಾಗು ನ್ಯಾಯದಾನ ಇವೆರಡೂ ಧರ್ಮನಿರಪೇಕ್ಷವಾಗಿ ಇರಬೇಕೆನ್ನುವ ಕಲ್ಪನೆ ಕೆಲವೊಂದು ಧರ್ಮಾಧಾರಿತ ರಾಷ್ಟ್ರಗಳಲ್ಲಿ ಇಲ್ಲವೇ ಇಲ್ಲ. ಅನೇಕ ವರ್ಷಗಳ ಹಿಂದೆ The Illustrated Weekly of India ಎನ್ನುವ ಇಂಗ್ಲಿಶ್ ಭಾಷೆಯ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನವು ಈ ಮಾತಿಗೆ ಉತ್ತಮ ಉದಾಹರಣೆಯಾಗಿದೆ. ಆ ಲೇಖನದ ವಿವರಗಳು ನನ್ನ ಸ್ಮರಣೆಯಿಂದ ಜಾರಿವೆ. ಆದುದರಿಂದ ನೆನಪಿನಲ್ಲಿ ಇದ್ದಷ್ಟನ್ನೇ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಕೊಲ್ಲಿ ರಾಷ್ಟ್ರವೊಂದರ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದ ಬಡ ಭಾರತೀಯ ಕಾರ್ಮಿಕನ ಕತೆ ಇದು. ಆ ಕಾರಖಾನೆಯಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಗ್ರೀಕ ರಾಷ್ಟ್ರೀಯನೊಬ್ಬನು, ಕಾರಖಾನೆಯ ಒಳಭಾಗದಲ್ಲಿ, ಕಾರಖಾನೆಯ ಉಸ್ತುವಾರಿ ವಾಹನವನ್ನು ಓಡಿಸಿಕೊಂಡು ಬರುತ್ತಿದ್ದಾಗ, ತನ್ನ ಅಜಾಗರೂಕತೆಯಿಂದ ಭಾರತೀಯ ಕಾರ್ಮಿಕನ ಮೇಲೆ ವಾಹನ ಚಲಾಯಿಸಿ ಬಿಟ್ಟ. ಭಾರತೀಯ ಕಾರ್ಮಿಕನಿಗೆ ತೀವ್ರ ಸ್ವರೂಪದ ಜಖಮ್ ಆಯಿತು. ಆತನಿಗೆ ಪರಿಹಾರ ಸಿಗಬೇಕಲ್ಲ. ಆದುದರಿಂದ ನ್ಯಾಯಾಲದಲ್ಲಿ ಪ್ರಕರಣ ದಾಖಲಾಯಿತು. ಪರಿಹಾರದ ಮೊತ್ತವು ಎಷ್ಟಿತ್ತು ಎನ್ನುವುದು ನನಗೆ ನೆನಪಿಲ್ಲ. ಆದುದರಿಂದ ನ್ಯಾಯಾಧೀಶರು ಪರಿಹಾರಕ್ಕಾಗಿ ಪರಿಗಣಿಸಿದ ಅಂಶಗಳನ್ನಷ್ಟೇ ಇಲ್ಲಿ ನೀಡುತ್ತಿದ್ದೇನೆ.

(೧) ಮೊದಲ ಹಂತದಲ್ಲಿ ನಿರ್ಧರಿಸಲಾದ ಪರಿಹಾರ ಹಾಗು ಪರಿಗಣಿಸಲಾದ ಅಂಶಗಳು:
‘ಈ ಕಾರ್ಮಿಕನು ಭಾರತೀಯನಿರುವುದರಿಂದ ಈತನಿಗೆ ಹೆಚ್ಚಿನ ಪರಿಹಾರ ನೀಡುವ ಕಾರಣವಿಲ್ಲ. ಆದುದರಿಂದ ಈತನಿಗೆ ‘ಇಷ್ಟು’ ಪರಿಹಾರ ಕೊಟ್ಟರೆ ಸಾಕು!’
(೨) ಅಷ್ಟರಲ್ಲಿಯೇ ಈ ಭಾರತೀಯ ಕಾರ್ಮಿಕನು ಹಿಂದೂ ಧರ್ಮದವನು ಎನ್ನುವ ಅಂಶವನ್ನು ನ್ಯಾಯಾಧೀಶರ ಗಮನಕ್ಕೆ ತರಲಾಯಿತು. ಆಗ ನ್ಯಾಯಾಧೀಶರು, ಹೀಗೋ! ಹಾಗಿದ್ದರೆ ಈಗ ಹೇಳಲಾದ ಪರಿಹಾರದ ೨/೩ದಷ್ಟು ಮಾತ್ರ ಪರಿಹಾರವನ್ನು ಕೊಡಬಹುದು” ಎನ್ನುವ ನ್ಯಾಯನಿರ್ಣಯವನ್ನು ನೀಡಿದರು.

ಇಲ್ಲಿ ಮಾನವನೊಬ್ಬನ ಬೆಲೆಯನ್ನು ಅವನ ರಾಷ್ಟ್ರೀಯತೆ, ಧರ್ಮ ಹಾಗು ಅಂತಸ್ತುಗಳ ಮೇಲೆ ನಿರ್ಧರಿಸಲಾಗಿದೆ. ಇದೆಂತಹ ನ್ಯಾಯದಾನ? ಭಾರತದಲ್ಲಿಯ ಕತೆ ಇನ್ನೂ ಸ್ವಾರಸ್ಯಕರವಾಗಿದೆ. ನ್ಯಾಯಾಧೀಶರೇನೋ ಅಪರಾಧಿಗೆ ತಕ್ಕ ಶಿಕ್ಷೆಯನ್ನು ವಿಧಿಸುತ್ತಾರೆ. ಆದರೆ ಅಪರಾಧಿಯು ಫಿಲ್ಮ್ ಸ್ಟಾರ್ ಆಗಿದ್ದರೆ, ಆತನಿಗೆ ಕ್ಷಮಾದಾನ ದೊರಕಿಸಲು ಲಾಗ ಹಾಕುವ ಕೋಡಂಗಿಗಳೇ ಇಲ್ಲಿ ಸಾಕಷ್ಟಿದ್ದಾರೆ.

ಇನ್ನು ಅಪರಾಧಿಯು ಪರರಾಷ್ಟ್ರೀಯನಾಗಿದ್ದರೆ, ನಮ್ಮ ರಾಜಕಾರಣಿಗಳು ತುಂಬ ಉದಾರಹೃದಯಿಗಳಾಗುತ್ತಾರೆ. ಭೋಪಾಲ ಹಾಗು ಪುರೂಲಿಯಾಗಳ ಖಳನಾಯಕರಿಗೆ ಇಲ್ಲಿ ರಾಜಾತಿಥ್ಯ ದೊರೆಯುತ್ತದೆ. ಅಂದ ಮೇಲೆ ಇಟಲಿಯ ಕೊಲೆಗಾರ ನಾವಿಕರಿಗೂ ಸಹ ಕ್ಷಮಾದಾನ ಸಿಗುವ ಸಾಧ್ಯತೆಗಳೇ ಹೆಚ್ಚಾಗಿವೆಯಲ್ಲವೆ?

19 comments:

Badarinath Palavalli said...

ಹಿಂದಿನ ಸಂಚಿಕೆಯ ಪ್ರಸ್ತಾವನೆಯಲ್ಲಿ ಎತ್ತಿದ ನ್ಯಾಯ ವಿವೇಚನೆಯ ಪ್ರಶ್ನೆಗಳು ಸಮಂಜಸವಾಗಿವೆ ಗುರುಗಳೇ.

ಮುಂದುವರೆದ ಭಾಗದಲ್ಲಿ ತಾವು ಉಲ್ಲೇಖಿಸಿದ ಪ್ರಕರಣ ಮತ್ತು ಇಂದಿನ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ರಾಜಕಾರಣಿ, ಹಣವಂತ ಮತ್ತು ತಾರೆಗಳಿಗೆ ದಕ್ಕುವ ಸುಲಭ ಅನುಕೂಲಗಳು ಬಡವನ ಪಾಲಿಗೆ ಗಗನ ಕುಸುಮವೇ.

ನಮ್ಮ ವಾಹಿನಿಯಲ್ಲಿ 'ಕೈದಿ' ಎನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಬಡ ಕೈದಿಗಳು ವರ್ಷಾಂತರ ಕಾಲ ವಿಚಾರಣಾ ಹಂತದಲ್ಲೇ ಇದ್ದು, ಅವರು ಮಾಡಿರಬಹುದಾದ ಅಪರಾಧದಾದ ಎರಡು ಪಟ್ಟು ವಿಚಾರಣಾ ಕೈದಿಯಾಗಿಯೇ ಜೈಲುಗಳಲ್ಲೇ ಕಳೆದುಬಿಟ್ಟಿರುತ್ತಾರೆ. ಅವರ ಆರ್ತಿಕ ಪರಿಸ್ಥಿತಿ ಮತ್ತು ಅವರ ಮನೆಯವರ ದುಸ್ಥಿತಿಯನ್ನು ನೆನಸಿಕೊಂಡರೆ ಅಳುವೇ ಬರುತ್ತದೆ.

ಸರ್ವಸಮ್ಮತ, ನಿಸ್ಪಕ್ಷಪಾತೀಯ ಅಥವಾ ಏಕರೂಪಿ ನ್ಯಾಯಾಧಿಕರಣ ಇನ್ನೂ ಕನಸಿನ ಮಾತೇ.

ಈ ಲೇಖನ ಮಾಲೆಯನ್ನು ದಯಮಾಡಿ ಮುಂದುವರೆಸಿರಿ...

Badarinath Palavalli said...

ಈ ಬ್ಲಾಗ್ ಪೋಸ್ಟಾನ್ನು ನನ್ನ ಫೇಸ್ ಬುಕ್ ಗೋಡೆಯಲ್ಲಿ ಹಂಚಿಕೊಂಡೆ.

Srikanth Manjunath said...

ನಿನ್ನದಾದರೆ ತಪ್ಪು.. ನನ್ನದಾದರೆ ಪ್ರಯೋಗ ಎನ್ನುವಂತೆ ಕೆಲ ಹುಚ್ಚಾಟಕ್ಕೆ ಹೆಸರಾದ ಮಂಗ ಮುಸುಡಿಯ ನಾಯಕರು ಮಾಡುವ ಅಥವಾ ತೋರುವ ಅತಿ ಕೃಪಾಕಟಾಕ್ಷ (ತಮ್ಮ ಸ್ವಾರ್ಥ ಸಾಧನಕ್ಕೆ) ಅಮಾಯಕರನ್ನು ಬಲಿ ಹಾಕುತ್ತಾರೆ. ಸುಂದರವಾದ ಲೇಖನ.. ಮುಖ್ಯವಾದ ತಿರುಳನ್ನು ಹೇಳುತ್ತಲೇ ಮಾರ್ಮಿಕವಾಗಿ ಇಂದಿನ ಸ್ಥಿತಿಯನ್ನು ವಿವರಿಸಿದ್ದೀರ.

ಮನಸು said...

ಇಂತಹ ನ್ಯಾಯ ತೀರ್ಮಾನಗಳು ಬಹಳಷ್ಟು ನೆಡೆಯುತ್ತವೆ ಕಾಕ, ನಮ್ಮ ದೇಶದಲ್ಲಿ ಕಾನೂನುಗಳು ಬದಲಾಗಬೇಕು ಅವನು ರಾಜನೋ, ಹೊರದೇಶದವನೋ ಒಟ್ಟಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅಂತಹ ಕಾನೂನುಗಳು ಎಂದು ಬರುತ್ತವೋ ಕಾದು ನೋಡಬೇಕು.

ಚುಕ್ಕಿಚಿತ್ತಾರ said...

ಕಾಕ 'ಮುಖ ನೋಡಿ ಮಣೆ ಹಾಕು' ಅನ್ನುವ ತತ್ವವೇ ಎಲ್ಲಾ ಕಡೆಯಲ್ಲಿಯೂ ಪ್ರಮುಖವಾಗಿದೆ. ವಿವೇಚನಾ ರಹಿತ, ಪಕ್ಷಪಾತದಿಂದ ಕೂಡಿದ ವ್ಯಕ್ತಿಗಳೇ ಎಲ್ಲಾ ಕ್ಷೇತ್ರಗಳಲ್ಲೂ ಇರುವಾಗ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದೇ ಸಾಮಾನ್ಯ ಮನುಜನ ತಪ್ಪು... !!

sunaath said...

ಬದರಿನಾಥರೆ,
ವಿಚಾರಣಾಧೀನ ಕೈದಿಗಳು ನಿರಪರಾಧಿಗಳೆಂದು ಘೋಷಿತರಾದರೆ ಅವರಿಗೆ ಪರಿಹಾರ ಕೊಡುವ ವ್ಯವಸ್ಥೆಯಾಗಬೇಕು.
Facebookನಲ್ಲಿ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

sunaath said...

ಶ್ರೀಕಾಂತರೆ,
ರಾಜಕಾರಣಿಗಳು ನ್ಯಾಯವ್ಯವಸ್ಥೆಯಲ್ಲಿಯೂ ಕೈಹಾಕುತ್ತಿದ್ದಾರೆ. ಇದರಿಂದಾಗಿ ನ್ಯಾಯವ್ಯವಸ್ಥೆಯೂ ಹಾಳಾಗಿ ಹೋಗುತ್ತಿದೆ.
ತುರ್ತು ಪರಿಸ್ಥಿತಿಯಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಹಂಸರಾಜ ಖನ್ನಾರವರ ಜ್ಯೇಷ್ಠತೆಯನ್ನು ಕಡೆಗಣಿಸಿದ ಇಂದಿರಾ ಗಾಂಧಿಯವರು, ತಮ್ಮ ಬಾಲಬಡುಕರಾದ ಬೇಗ ಎನ್ನುವ ನ್ಯಾಯಾಧೀಶರಿಗೆ ಬಡತಿ ಕೊಡಿಸಿದರು!

sunaath said...

ಮನಸು,
ಶಾಸನಗಳು ಎಷ್ಟೇ ಕಠಿಣವಾಗಿರಲಿ, ರಾಜಕಾರಣಿಗಳು ಕಾನೂನನ್ನು ಹಾಳುಗೆಡವುತ್ತಿರುವ ನಿದರ್ಶನಗಳನ್ನು ಪ್ರತಿ ದಿನವೂ ಕಾಣುತ್ತಲೇ ಇದ್ದೇವೆ!

sunaath said...

ಚುಕ್ಕಿ,
ನಿಮ್ಮ ಮಾತು ಖರೇ ಅದ!

Badarinath Palavalli said...

ತಮ್ಮ ಮಾತು ಸರ್ವತ್ರ ನಿಜ. ಅವರು ನಿರಪರಾಧಿಗಳೆಂದು ನ್ಯಾಯ ದೊರೆತರೆ ಅವರಿಗೆ ಪರಿಹಾರವೂ ದೊರಕಬೇಕು.

VENU VINOD said...

ಸುನಾಥರೇ,
ನ್ಯಾ.ವಿ 1, 2 ಎರಡನ್ನೂ ಓದಿದೆ. ಅರ್ಥವತ್ತಾದ ವಿಶ್ಲೇಷಣೆ. ಈಗೀಗ ಸಂವಿಧಾನದ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗಳಂತೆಯೇ ನ್ಯಾಯಾಂಗ ಎಂಬಂತಹ ತೀರ್ಪುಗಳು ಬರತೊಡಗಿವೆ,ನಮ್ಮ ನಾಲ್ಕನೇ ಸ್ತಂಭ ಮಾಧ್ಯಮರಂಗವೂ ಅದಕ್ಕೆ ಭಿನ್ನವಾಗೇನಿಲ್ಲ!

ಸತೀಶ್ ನಾಯ್ಕ್ said...

//ಮಾನವನೊಬ್ಬನ ಬೆಲೆಯನ್ನು ಅವನ ರಾಷ್ಟ್ರೀಯತೆ, ಧರ್ಮ ಹಾಗು ಅಂತಸ್ತುಗಳ ಮೇಲೆ ನಿರ್ಧರಿಸಲಾಗಿದೆ.// ನ್ಯಾಯಾಂಗ ವ್ಯವಸ್ತೆಯಲ್ಲಿನ ಹುಳುಕುಗಳು ಇದಕ್ಕಿಂತ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಇಲ್ಲ. ಅವನು ವಿದೇಶಿಗ.. ಅದರಲ್ಲೂ ಭಾರತೀಯ.. ಅದರಲ್ಲೂ ಹಿಂದೂ ಎಂದು ತಿಳಿದು ಅವನ ಪರಿಹಾರವನ್ನ ಅವನ ಪರವಾಗಿನ ನ್ಯಾಯವನ್ನೇ ಮೊಟಕುಗೊಳಿಸುವ ಪರಿ ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿದ್ದು ಯಾಕೆ ಅನ್ನುವುದಕ್ಕೆ ಪುರಾವೆಗಳನ್ನ ಒದಗಿಸುತ್ತದೆ. ಕಡೆ ತನಕ ಕಿವಿಯಲ್ಲಿ ಒಂದೇ ಹಾಡು ರಿಂಗಣಿಸುತ್ತದೆ ನ್ಯಾಯ ಎಲ್ಲಿದೆ..? ಜೊತೆಗೆ ಇನ್ನೊಂದು ಪ್ರಶ್ನೆಯೂ ಮೂಡುತ್ತದೆ ನ್ಯಾಯ ಹೇಗಿದೆ ಜೊತೆಗೆ ಯಾಕಿದೆ..??

umesh desai said...

ನಿಮ್ಮ ಬ್ಲಾಗಿನ ಇತ್ತೀಚೆಗಿನ ಎರಡೂ ಲೇಖನ ಒಟ್ಟಿಗೆ ಓದಿದೆ..
ನೀವು ಎತ್ತಿರುವ ಪ್ರಶ್ನೆ ಸಕಾಲಿಕ ಹಾಗೂ ಮರ್ಮದಿಂದ ಕೂಡಿದ್ದುದಾಗಿದೆ..
ಭೋಪಾಲ್ ದುರಂತ ನಮ್ಮ ದೇಶದ ವ್ಯವಸ್ಥೆಗೆ ಹಿಡಿದ ಕೈ ಗನ್ನಡಿ ಸತ್ತವರು ಬರೀ ಮನುಷ್ಯರಾಗಿದ್ರು..
ರಾಜಕಾರಣಿ, ಸಿನೆನಟ, ಕ್ರಿಕೆಟ್ ಹೀರೊಗಳಾಗಿರಲಿಲ್ಲ..

sunaath said...

ವೇಣು,
ವಿಜಯ ತೆಂಡೂಲಕರರು ಬರೆದ ಮರಾಠಿ ನಾಟಕವನ್ನು ಆಧರಿಸಿದ ಚಲನಚಿತ್ರವೊಂದು ೧೯೭೫ರಲ್ಲಿ ಹೊರಬಂದಿತು. ಶ್ಯಾಮ ಬೆನಗಲ್ಲರು ಇದರ ನಿರ್ದೇಶಕರು. ಜಮೀನುದಾರನೊಬ್ಬನ ದೌರ್ಜನ್ಯದ ವಿರುದ್ಧ ಪರಿಹಾರ ಪಡೆಯಲು ಶಾಲಾಮಾಸ್ತರನೊಬ್ಬನು, ಸರಕಾರವನ್ನು, ನ್ಯಾಯಾಂಗವನ್ನು ಹಾಗು ಪತ್ರಿಕಾರಂಗವನ್ನು approach ಮಾಡಿ ವಿಫಲನಾಗುವ ನಾಟಕವನ್ನು ಇಲ್ಲಿ ಸಿನಿಮಾ ಮಾಡಲಾಗಿತ್ತು.
ನಮ್ಮ ಸದ್ಯದ ಪರಿಸ್ಥಿತಿ ಬೇರೆಯಾಗಿಲ್ಲ!

sunaath said...

ಸತೀಶರೆ,
ತುಂಬ ಮೂಲಭೂತ ಪ್ರಶ್ನೆಯನ್ನೇ ಕೇಳಿದ್ದೀರಿ: ‘ನ್ಯಾಯ ಎಲ್ಲಿದೆ, ನ್ಯಾಯ ಏಕಿದೆ?’!

sunaath said...

ದೇಸಾಯರ,
ಸತ್ತವರು ಮನುಷ್ಯರೇ ಆಗಿರಲಿಲ್ಲ!

ಮಂಜುಳಾದೇವಿ said...

"ನ್ಯಾಯ ವಿವೇಚನೆ ೧ ಮತ್ತು ೨ "ನ್ನು ಈಗ ಓದಿದೆ.ಸಕಾಲಿಕ ಬರಹಗಳು ಸಾರ್. ಧರ್ಮ,ಭಾಷೆ,ರಾಷ್ಟ್ರ‍ೀಯತೆ ಮತ್ತು ಅಂತಸ್ತನ್ನು ಮೀರಿ ಎಲ್ಲರೂ ಮಾನವರು ಎನ್ನುವ ಆಧಾರದ ಮೇಲೆ ನ್ಯಾಯ ನೀಡುವ ದಿನಗಳನ್ನು ನಾವು ಕಾಣುವುದು ಈ ವ್ಯವಸ್ಥೆಯಲ್ಲಿ ಸಾಧ್ಯವೇ...??

sunaath said...

ಮಂಜುಳಾದೇವಿಯವರೆ,
ಅನ್ಯಾಯ ತುಂಬಿದ ಈ ವ್ಯವಸ್ಥೆಯಲ್ಲಿ, ನ್ಯಾಯ ಸಿಗುವುದು ಕನಸಿನ ಮಾತೇ ಸರಿ!

prabhamani nagaraja said...

ನ್ಯಾಯ ವಿವೇಚನೆಯ ಬಗೆಗಿನ ನಿಮ್ಮ ಲೇಖನ ವಿಚಾರಪೂರ್ಣವಾಗಿದೆ ಸರ್. `ನ್ಯಾಯ'ಎನ್ನುವುದು ಎಷ್ಟೋ ಜನರ ಪಾಲಿಗೆ ಮರೀಚಿಕೆಯೇ ಆಗಿದೆ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು ಸರ್. ptahim