Thursday, January 30, 2014

ಲಂಕೇಶರ ‘ಅವ್ವ’



ತಮ್ಮ ತಾಯಿ ನಿಧನರಾದಾಗ, ಪಿ.ಲಂಕೇಶರು ಬರೆದ ಕವನ:  ಅವ್ವ’.

ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟುಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ.
……………………………………………………………………………..


ಕವಿಯು ಉಪಶಾಂತ ಸ್ಥಿತಿಗೆ ಇಳಿದಾಗ ಸಂಭವಿಸುವ ಭಾವನೆಗಳ ಮರುಜೋಡಣೆಯೇ ಕಾವ್ಯ ಎಂದು ಆಂಗ್ಲ ಕವಿ ವರ್ಡ್ಸವರ್ಥ ಹೇಳುತ್ತಾನೆ. ಇಂತಹ ಕವನವು—ಶೋಕಗೀತವಾಗಿದ್ದರೂ ಸಹ-- ಕಾವ್ಯದ ನಿಯಮಗಳನ್ನು ಅನುಸರಿಸುತ್ತದೆ. ಉದಾಹರಣೆಗೆ ಪುರಂದರದಾಸರ ‘ಗಿಳಿಯು ಪಂಜರದೊಳಿಲ್ಲಾ’ ಕವನವನ್ನು ನೋಡಬಹುದು. ಲಂಕೇಶರ ‘ಅವ್ವ’ ಕವನವು ಕಾವ್ಯದ ಈ ಚೌಕಟ್ಟನ್ನು ಮುರಿದು ಹಾಕಿದೆ. ಬಿಕ್ಕಿ ಬಿಕ್ಕಿ ಬರುತ್ತಿರುವ ದುಃಖದ ಅಲೆಗಳಂತೆ, ಈ ಕವನದ ಸಾಲುಗಳು ಉಮ್ಮಳಿಸಿ ಬರುತ್ತಿವೆ. ಇದು ಉಪಶಾಂತ ಸ್ಥಿತಿಯ ಕವನವಲ್ಲ; ಶೋಕದಲ್ಲಿ ಮುಳುಗೇಳುತ್ತಿರುವ ಸ್ಥಿತಿ. ಉದಾಹರಣೆಗೆ ಕವನದ ನುಡಿಗಳನ್ನೇ ಗಮನಿಸಿರಿ. ಕೆಲವೊಮ್ಮೆ ಐದು, ಕೆಲವೊಮ್ಮೆ ಆರು, ಕೆಲವೊಮ್ಮೆ ಏಳು, ಒಮ್ಮೆಯಂತೂ ಎಂಟು ಸಾಲುಗಳ ನುಡಿ ಇಲ್ಲಿವೆ. ಈ ಸಾಲುಗಳಿಗೂ ಒಂದೇ ಛಂದಸ್ಸು ಎನ್ನುವುದಿಲ್ಲ.

ತಾಯಿಯನ್ನು ಕೃತಜ್ಞತೆಯಿಂದ ಸ್ಮರಿಸುವ, ತಾಯಿಯ ಹೆಚ್ಚುಗಾರಿಕೆಯನ್ನು ಹೊಗಳುವ, ತಾಯಿಯನ್ನು ದೇವತೆಯಂತೆ ಪೂಜಿಸುವ ಕವನಗಳಿಗೆ ಜಾಗತಿಕ ಸಾಹಿತ್ಯದಲ್ಲಿ ಕೊರತೆ ಇಲ್ಲ. ಆದರೆ ಲಂಕೇಶರ ಈ ಕವನವು ತಾಯಿಯನ್ನು ಚುಚ್ಚುವ ವಾಸ್ತವದಲ್ಲಿ ನೋಡುತ್ತದೆ. ಲಂಕೇಶರ ಅವ್ವ ನಮ್ಮ ನಾಡಿನ ಸಾವಿರಾರು ಹೆಣ್ಣುಮಕ್ಕಳಂತೆ ಮಣ್ಣಿನ ಮಗಳು. ಈಕೆ ಮಣ್ಣಿನಲ್ಲಿಯೇ ಹುಟ್ಟಿ, ಮಣ್ಣಿನಲ್ಲಿಯೇ ಬದುಕು ಮಾಡಿ, ಮಣ್ಣಿನಲ್ಲಿಯೇ ಮಣ್ಣಾದವಳು. ಅವಳ ಉರುಟು ಬದುಕಿನಂತೆಯೇ ಇಲ್ಲಿ ಬಳಸಿದ ಭಾಷೆಯೂ ಉರುಟು. ಲಂಕೇಶರು ತಮ್ಮ ತಾಯಿಗೆ ಕೊಡುವ ಹೋಲಿಕೆಗಳಂತೂ  ಓದುಗನನ್ನು ಬೆಚ್ಚಿ ಬೀಳಿಸುತ್ತವೆ. ಅವಳು ಕಪ್ಪು ಹೊಲ, ಕಾಡು ಕರಡಿ, ನೊಂದ ನಾಯಿ ಹಾಗು ಕೆರೆದಾಡುವ ಕೋತಿ. ಈ ಗುಣಗಳು ಹೆಣ್ಣುಮಗಳೊಬ್ಬಳ ಒಂಟಿ ಹೋರಾಟದ ಬದುಕಿನಲ್ಲಿ ಅನಿವಾರ್ಯವಾದ ಗುಣಗಳೇ ಸೈ.

 
ತಾಯಿಯೆಂದೊಡನೆ ಲಂಕೇಶರಿಗೆ ಮೊದಲು ನೆನಪಾಗುವುದು ತನ್ನ ಹಾಗು ಅವಳ ವಾತ್ಸಲ್ಯದ ಸಂಬಂಧ. ಇವರು ಮಗು, ಅವಳು ಅವ್ವ. ಆದುದರಿಂದಲೇ ಮಾತೃತ್ವದ ಸಂಕೇತವಾದ ಕಪ್ಪು ಹೊಲವು ಅವರ ಕಣ್ಣಿಗೆ ಕಟ್ಟುತ್ತದೆ. ಹಳ್ಳಿಗಳಲ್ಲಿರುವ ನಮ್ಮ ಹೆಣ್ಣುಮಕ್ಕಳನ್ನು ನೋಡಿರಿ. ದುಡಿತ, ಹಡೆತ ಇವು ಅವರನ್ನು ಅಂಟಿಕೊಂಡ ಕರ್ಮಗಳು. ಫಲವತ್ತಾದ ಕಪ್ಪು ಹೊಲದಂತೆ ಈ ಹೆಣ್ಣು ಮಕ್ಕಳು ದೇವರು (=ಗಂಡ) ಕೊಟ್ಟಷ್ಟು ಮಕ್ಕಳನ್ನು ಹಡೆಯುತ್ತಲೇ ಹೋಗುತ್ತಾರೆ. ( ಇದು ಲಂಕೇಶರ ಕಾಲದ ವಾಸ್ತವ. ಈಗ ಪರಿಸ್ಥಿತಿ ಬದಲಾಗಿದೆ, ಎನ್ನಿ!) ಫಲವತ್ತಾದ ಹೊಲದಂತೆ ಇವರು ತಮ್ಮ ಮಕ್ಕಳನ್ನು ನಿರ್ವ್ಯಾಜವಾಗಿ, ಸ್ವಲ್ಪವೂ ಕೊರತೆಯಾಗದಂತೆ ಪೋಷಿಸುತ್ತಲೇ ಹೋಗುತ್ತಾರೆ.  ಬಣ್ಣ ಹಾಗು ಗುಣಗಳಲ್ಲಿ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಕಪ್ಪು ಭೂತಾಯಿಯೇ ಹೌದು! ತಾಯಿ ಹಾಗು ಭೂತಾಯಿ ಇವರು ಒದ್ದಷ್ಟು, ಗುದ್ದಿದಷ್ಟು ತಮ್ಮ ಪ್ರೀತಿಯನ್ನು ಹೆಚ್ಚಿಸುತ್ತಾರೆ. ಇಂತಹ ಅವ್ವ, ತನ್ನ ಮಕ್ಕಳಿಗಾಗಿ ತನ್ನ ಕೊನೆಯ ಉಸಿರಿನವರೆಗೆ ದುಡಿದೇ ದುಡಿದಳು.  ‘ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ’!  ಮೊದಲ ನುಡಿಯ ಈ ಕೊನೆಯ ಸಾಲು ಲಂಕೇಶರ ಜೊತೆಗೆ ನಮ್ಮ ಕಣ್ಣಿನಲ್ಲೂ ನೀರು ತರಿಸುತ್ತದೆ!

ಮೊದಲನೆಯ ನುಡಿಯಲ್ಲಿ ತನ್ನ ಹಾಗು ತನ್ನ ಅವ್ವನ ನಡುವಿನ ಸಂಬಂಧವನ್ನು ನೆನಪಿಸಿಕೊಂಡ ಲಂಕೇಶರು, ಆಬಳಿಕ ಅವಳ ಸ್ವಂತ ಬದುಕನ್ನು ಅಂದರೆ ತನ್ನ ಅವ್ವ ಮದುವೆಯಾಗಿ ತನ್ನ ಅತ್ತೆಯ ಮನೆಗೆ ಬಂದಾಗಿನ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ. ಹೊಸ ಮದುವಣಗಿತ್ತಿಗೆ ಯಾವ ಅತ್ತೆಯ ಮನೆಯಲ್ಲೂ ರಾಜೋಪಚಾರ ಸಿಗುವುದಿಲ್ಲ. ತನ್ನ ದುಡಿತದಿಂದಲೇ ಅವಳು ತನ್ನ ಅತ್ತೆ, ಮಾವ ಹಾಗು ಇತರರ  ಮನವನ್ನು ಗೆಲ್ಲಬೇಕಾಗುತ್ತದೆ. ಗಂಡಸಿನ ಹಾಗೆ ಒಂದು ಪಲ್ಲ ಜೋಳವನ್ನು ಈಕೆ ಎತ್ತಿ ತೋರಿಸಿದಾಗಲೇ, ಗಂಡನಿಂದ ಇವಳಿಗೆ ಸಮ್ಮಾನ, ತೋಳಬಂದಿಯ ಕೊಡುಗೆ! ಅದೇನೂ ಬೇಂದ್ರೆಯವರು ಹಾಡಿರುವ ಪ್ರೀತಿಯ ‘ತೋಳಬಂದಿ’ಯಾಗಿರಲಿಕ್ಕಿಲ್ಲ. ಇವಳ ದುಡಿತಕ್ಕೆ ಕಟ್ಟಿದ ಕಿಮ್ಮತ್ತಾಗಿರಬಹುದು ಅದು. ಅಷ್ಟಕ್ಕೇ ಇವಳು ಹಿಗ್ಗಿ ಹೀರೆಕಾಯಿಯಾಗಿ ಹೆಚ್ಚಿನ ದುಡಿತದಲ್ಲಿ ತೊಡಗಿಕೊಳ್ಳುತ್ತಾಳೆ! 

ಈ ಉತ್ಸಾಹದ ಕೆಲಸದಲ್ಲಿ ಅವಳಿಗೆ ಅವಳ ಗಂಡ ಸಹಕಾರವನ್ನು ಕೊಟ್ಟನೆ? ಅವಳಿಗೆ ತಾನು ಜೊತೆಯಾಗಿ ನಿಂತನೆ? ಕೊನೆಯ ಪಕ್ಷ ರಂಟೆ ಕುಂಟೆಗಳಂತಹ ಜೋಡಣೆಗಳನ್ನಾದರೂ ಒದಗಿಸಿದನೆ? ಊಂಹೂಂ. ಬಹುಶಃ ಅನೇಕ ಗಂಡಸರಂತೆ ಅವನೂ ಯಾವುದೋ ಕಟ್ಟೆಯ ಮೇಲೆ ಬೀಡಿ ಸೇದುತ್ತ ಕುಳಿತಿರಬಹುದು. ತನ್ನ ಖಯಾಲಿಗಳಿಗಾಗಿ, ತನ್ನ ಶೋಕಿಗಾಗಿ ದುಡ್ಡು ಖರ್ಚು ಮಾಡುತ್ತಿರಬಹುದು.  ಆದರೆ ಅವಳಿಗೆ ಆಕ್ಷೇಪವಿಲ್ಲ, ನಿರುತ್ಸಾಹವಿಲ್ಲ. ಅವಳು ತನ್ನ ದುಡಿತದಲ್ಲಿ ಖುಶಿಯಾಗಿಯೇ ಇದ್ದಾಳೆ. ತನ್ನಲ್ಲಿ ಕಸುವು ಇರುವವರೆಗೆ ದುಡಿಯುತ್ತಲೇ ಹೋಗುತ್ತಾಳೆ. ಅವಳ ಯೌವನವೆಲ್ಲ ಈ ದುಡಿತದಲ್ಲೇ ಕಳೆದು ಹೋಗುತ್ತದೆ. ಇದಕ್ಕೆಲ್ಲ ಅವಳಿಗೆ ಸಿಗುವ ಪ್ರತಿಫಲವೆಂದರೆ ಒಂದು ಹರಕು ಸೀರೆ. ಅವಳ ಮಟ್ಟಿಗೆ ಅವಳ ಶ್ರಮವೆಲ್ಲ  ಪ್ರೀತಿಯ ಕಾಯಕ ಮಾತ್ರ.

ತನ್ನ ಅವ್ವ ಹೊಸ ಮದುವಣಗಿತ್ತಿಯಾಗಿ ಗಂಡನ ಮನೆಗೆ ಬಂದಾಗ, ಅವಳಿಗೆ ಎಷ್ಟೆಲ್ಲ ಕನಸು ಇದ್ದಿರಬಹುದು ಎಂದು ಲಂಕೇಶರು ಯೋಚಿಸುತ್ತಾರೆ. ಆದರೆ ಅವಳ ಸ್ವಂತದ ಕನಸುಗಳು ನೋಡುತ್ತಿರುವಂತೆಯೇ ಕರಗಿ ಮಾಯವಾಗಿವೆ. ಅವಳ ಸಂಭ್ರಮವೆಲ್ಲ ತನ್ನ ಮಕ್ಕಳಿಗೆ ಉಣಿಸಿ, ತಿನ್ನಿಸಿ ಹಬ್ಬಗಳನ್ನು ಅವರಿಗಾಗಿ ಆಚರಿಸುವದರಲ್ಲೇ ಕಳೆದು ಹೋಗುತ್ತದೆ.

ಅವಳ ಬದುಕೋ ನಿತ್ಯ ಸಂಕಟಮಯ. ಎಮ್ಮೆ ತಪ್ಪಿಸಿಕೊಂಡು ಹೋಗಿರುತ್ತದೆ, ಕರು ಸತ್ತಿರುತ್ತದೆ, ಪೀಕು ಹಾಳಾಗಿರುತ್ತದೆ. ಇದಕ್ಕೆಲ್ಲ ಪೇಚಾಡುವವಳು ಈ ಅವ್ವನೇ. ತನ್ನ ಗಂಡ ಹಾಗು ಮಕ್ಕಳಿಗಾಗಿ ತಾನು ಕಟ್ಟುತ್ತಿರುವ ಬದುಕು ಹಾಳಾಗಬಾರದೆನ್ನುವ ದುಗುಡ ಇರುವುದು ಇವಳಿಗೇ! ಹಾದಿ ತಪ್ಪುತ್ತಿರುವ ತನ್ನ ಗಂಡ ಹಾಗು ಮಕ್ಕಳನ್ನು ಸರಿದಾರಿಗೆ ಎಳೆತರುವ ಸಂಕಟವೂ ಅವಳ ಬದುಕಿನ ಅನಿವಾರ್ಯ ಭಾಗ.


ಈ ಸಂಭ್ರಮ, ಈ ಪೇಚಾಟದ ದ್ವಂದ್ವಗಳಲ್ಲೇ ಅವಳ ಪ್ರಾಯ ತಿಳಿಯದಂತೆ ಕಳೆದು ಹೋಗಿ, ಅವಳು ಮುದುಕಿಯಾಗಿದ್ದಾಳೆ! ನೋಡುನೋಡುತ್ತಿರುವಂತೆಯೇ ಮಣ್ಣಿನಲ್ಲಿ ಕಣ್ಮರೆಯಾಗಿದ್ದಾಳೆ. ಇವಳ ಬದುಕು ಇಷ್ಟೇ. ಮೋಡದಂತೆ ಮಳೆ ಸುರಿಸಿ ಮೋಡದಂತೆ ಕರಗಿ ಹೋಗುವುದೇ ಈ ಎಲ್ಲ ಅವ್ವಂದಿರ ಹಣೆಬರಹ!

ಹಾಗಿದ್ದರೆ ಇವಳ ಬದುಕಿನ ಅರ್ಥವೇನು? ಜೀವನದ ಮೌಲ್ಯವೇನು? ಇವಳ ಆದರ್ಶಗಳೇನು? ಇವಳ ಮಹತ್ ಸಾಧನೆಗಳೇನು? ಲಂಕೇಶರು ಹೇಳುತ್ತಾರೆ: ಈ ಎಲ್ಲ ದೊಡ್ಡ ಮಾತುಗಳು ಇವಳಿಗೆ ಬೇಡ. ಇವಳೊಬ್ಬ ಸಾಧಾರಣ ಹೆಂಗಸು. ನಮ್ಮ ಚರಿತ್ರೆ, ಪುರಾಣಗಳಲ್ಲಿ ಬರುವಂತಹ ಮಹಾಸತಿಯಲ್ಲ ಇವಳು. ಇವಳ ಒದ್ದಾಟ, ಗುದ್ದಾಟವೆಲ್ಲ ತನ್ನ ಸಂಸಾರವನ್ನು ಸುಸೂತ್ರವಾಗಿ ಸಾಗಿಸಿಕೊಂಡು ಹೋಗಲು ಮಾತ್ರ. ಈ ಹಳ್ಳಿಯ ಹೆಂಗಸು ಯಾವ ತತ್ವಶಾಸ್ತ್ರವನ್ನೂ ತಿಳಿದವಳಲ್ಲ. ಇವಳು ತಿಳಿದಿರುವ ತತ್ವವೆಂದರೆ ಇದೊಂದೇ: ತನ್ನ ಸರೀಕರಲ್ಲಿ ತನ್ನ ಮನೆತನದ ಮೂಗು ಮುಕ್ಕಾಗಬಾರದು. ತನ್ನ ಗಂಡ ಹಾಗು ಮಕ್ಕಳು ತಮ್ಮ ಹಳ್ಳಿಯಲ್ಲಿ ತಲೆ ಎತ್ತಿ ನಡೆಯಬೇಕು.ಈ ಸಂದರ್ಭದಲ್ಲಿ ಲಂಕೇಶರು ಇವಳನ್ನು ಕಾಡು ಕರಡಿಗೆ ಹೋಲಿಸುತ್ತಾರೆ. ತನ್ನ ಚಿಕ್ಕ ಮಕ್ಕಳನ್ನು ಬೆಳೆಸಿ, ತನ್ನ ಸಂಸಾರವನ್ನು ಜೋಪಾನ ಮಾಡುವದರಲ್ಲಿ ಇವಳು ಅಡವಿಯ ಕರಡಿ ಇದ್ದಂತೆ. ಎದುರಾದವರನ್ನು ಗುರ್ ಎನ್ನುತ್ತ ಎದುರಿಸುವವಳು ಈಕೆಯೇ. ತನ್ನವರ ಮೇಲೆ ನಾಯಿಗಿರುವಂತಹ ನಿಷ್ಠೆ ಇವಳಿಗೆ. ತನ್ನವರೇ ಒದ್ದಾಗ, ಒದೆಸಿಕೊಂಡ ನಾಯಿಯಂತೆ ಕುಂಯ್‍ಗುಟ್ಟಿ ಸುಮ್ಮನಾಗುವವಳು ಈಕೆಯೇ. ತಾಯ್ತನವೇ ಇವಳಿಗಿರುವ ದೊಡ್ಡಸ್ತನ! ತಮ್ಮನ್ನು ಹೊತ್ತು, ಹೆತ್ತು ತನ್ನ ಬದುಕೆನ್ನಲ್ಲ ತನ್ನ ಗಂಡ ಹಾಗು ಮಕ್ಕಳಿಗಾಗಿ ಸವೆಸಿದ  ಅವ್ವನನ್ನು ನೆನಪಿಸಿಕೊಂಡ ಲಂಕೇಶರಿಗೆ ಕೃತಜ್ಞತೆಯ ಕಣ್ಣೀರು ಬರುವುದು ಸಹಜವೇ ಆಗಿದೆ.

ಈ ಕವನವನ್ನು ಓದುವಾಗ ಅನ್ನಿಸುವುದು: ಈ ಕವನದ ‘ಅವ್ವ’ ಕೇವಲ ಲಂಕೇಶರ ಅವ್ವ ಅಲ್ಲ. ನಮ್ಮ ನಾಡಿನ ಎಲ್ಲ ಹೆಂಗಸರು ಬದುಕುವುದು ಹೀಗೆಯೇ. ಭಾರತದೇಶದ ಹಳ್ಳಿಗಳಲ್ಲೆಲ್ಲ ಇವಳೇ ಇದ್ದಾಳೆ. ಇವಳನ್ನೇ ನಾವು ಭಾರತಮಾತೆ ಎಂದು ಕರೆಯುವುದು. ಈ ಅವ್ವ ಕೇವಲ ಈ ಕವನದ ಸಾಲುಗಳಲ್ಲಿ ಅಡಗಿಲ್ಲ. ಈ ಕವನದ ಹೊರಗೂ ಅವಳಿದ್ದಾಳೆ. ಇದೇ ಈ ಕವನದ ದೊಡ್ಡಸ್ತಿಕೆ.

ಲಂಕೇಶರು ಕನ್ನಡದ ಶ್ರೇಷ್ಠ ಕತೆಗಾರರು; ಶ್ರೇಷ್ಠ ಕವಿಗಳೇನೂ ಅಲ್ಲ. ಆದರೆ ಅವರ ‘ಅವ್ವ’ ಕವನವು ಜಗತ್ತಿನ ಶ್ರೇಷ್ಠ ಕವನಗಳಲ್ಲಿ ಒಂದಾಗಿದೆ.

[ಟಿಪ್ಪಣಿ: ಈ ಕವನದ ಪಠ್ಯವನ್ನು http://kannadakavyakanaja.blogspot.com/2014/01/blog-post_10.html#ixzz2q1D8wkEq  ಇಲ್ಲಿಂದ ಎತ್ತಿಕೊಂಡಿದ್ದೇನೆ. ಸುಶ್ರೀ ‘ಕನಸು’ ಇವರಿಗೆ ನನ್ನ ಧನ್ಯವಾದಗಳು.]

Sunday, January 12, 2014

ಮೋಹನಸ್ವಾಮಿ.....ವಸುಧೇಂದ್ರ



ವಸುಧೇಂದ್ರರು ಬರೆದ ‘ಮೋಹನಸ್ವಾಮಿ’ ಕಥಾಸಂಕಲನದಲ್ಲಿ ೧೧ ಕತೆಗಳಿವೆ. ಇವುಗಳಲ್ಲಿ ೬ ಕಥೆಗಳು ಸಲಿಂಗಕಾಮಕ್ಕೆ ಸಂಬಂಧಿಸಿದ ಕಥೆಗಳಾಗಿವೆ. ಇವುಗಳ ಪೈಕಿ ೫ ಕಥೆಗಳಲ್ಲಿ ಮೋಹನಸ್ವಾಮಿಯೇ ನಾಯಕ (ಕಿ)! ಮೋಹನಸ್ವಾಮಿ ಎನ್ನುವ ಹೆಸರೇ ಈ ಕಥೆಗಳ ಆಂತರ್ಯವನ್ನು ಸೂಚಿಸುವಂತಿದೆ! ಸಲಿಂಗಕಾಮದ ಬಗೆಗೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಂದ ಬಳಿಕ, ಈ ವಿಷಯದಲ್ಲಿ ಸಾಕಷ್ಟು ಪರ ಹಾಗು ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ವಸುಧೇಂದ್ರರು ಈ ಕತೆಗಳನ್ನು ಈ ವಿವಾದದ ನಂತರ ಬರೆದದ್ದಲ್ಲ. ಈ ಸಂಕಲನದಲ್ಲಿ ಪ್ರಕಟವಾದ ‘ಇಂತಹ’ ಎರಡು ಕಥೆಗಳನ್ನು ೨೦೦೯ನೆಯ ಇಸವಿಯಲ್ಲಿಯೇ ಅವರು ಬರೆದಿದ್ದಾರೆ. ಸಲಿಂಗಕಾಮಕ್ಕೆ ಸಂಬಂಧಿಸಿದ ಅವರ ಮತ್ತೊಂದು ಕಥೆಯು ಈಗಾಗಲೇ ಬೇರೊಂದು ಕಥಾಸಂಕಲನದಲ್ಲಿ ಪ್ರಕಟವಾಗಿದೆ. ೨೦೧೧ರಲ್ಲಿ ಬರೆದ ಎರಡು ಕಥೆಗಳು ಹಾಗು ೨೦೧೩ರಲ್ಲಿ ಬರೆದ ಮೂರು ಕಥೆಗಳು ಈ ಸಂಕಲನದಲ್ಲಿ ಅಡಕವಾಗಿವೆ. ಸಲಿಂಗಕಾಮದದ ಬಗೆಗೆ ಇಷ್ಟು ವಿಪುಲವಾಗಿ ಬರೆಯಲು  ವಸುಧೇಂದ್ರರಿಗೆ ಇರುವ (ಸಾಹಿತ್ಯಕ) ಆಕರ್ಷಣೆ ಏನು? ನನಗೆ ಅನಿಸುವುದು ಹೀಗೆ:

ವಸುಧೇಂದ್ರರ ಇತರ ಕಥಾಸಂಕಲನಗಳಲ್ಲಿ ಇರುವ ಬೇರೆ ಬೇರೆ ಕಥೆಗಳನ್ನು ಓದಿದಾಗ, ಅವರ ಮನೋಧರ್ಮದ ಒಂದು ವಿಶೇಷತೆಯ ಅರಿವು ಮೂಡುತ್ತದೆ. ಅಸಹಾಯಕತೆಯನ್ನು ಕಂಡಾಗ ವಸುಧೇಂದ್ರರ ಕರಳು ಮಿಡಿಯುತ್ತದೆ. ಈ ಅಸಹಾಯಕತೆಯು (೧)ಸಾಮಾಜಿಕ ಕ್ರೂರತೆಯ ಅಥವಾ (೨)ವೈಯಕ್ತಿಕ ಪರಿಸ್ಥಿತಿಯ ಅಥವಾ (೩)ಮಾನಸಿಕ ಗುಣವಿಶೇಷದ ಪರಿಣಾಮವಾಗಿರಬಹುದು. ವಸುಧೇಂದ್ರರು ಆ ಅಸಹಾಯಕ ವ್ಯಕ್ತಿಯನ್ನು ಅನುಕಂಪಮಾತ್ರದಿಂದ ನೋಡುತ್ತಾರೆ. ಮೋಹನಸ್ವಾಮಿಯ ಕಥೆಗಳಲ್ಲಿ ವಸುಧೇಂದ್ರರಿಗೆ ತಮ್ಮ ನಾಯಕನು(ಕಿಯು) ಸಲಿಂಗಕಾಮಿಯಾಗುವ ಮಾನಸಿಕ ಅಥವಾ ವೈದ್ಯಕೀಯ ಕಾರಣಗಳು ಅಗಣ್ಯ. ಈ ವ್ಯಕ್ತಿಯು ಪಡುವ ಅಸಹನೀಯ ಪಾಡು ಅವರ ಕಥೆಗಳ ಅಂತರಂಗವಾಗಿದೆ. ಅವರ ಇತರ ಕಥೆಗಳಲ್ಲಿಯೂ ಸಹ, ಕಥಾನಾಯಕರು ಬಹುತೇಕವಾಗಿ ಅಸಹಾಯಮೂರ್ತಿಗಳು. ಅವರ ಸ್ತ್ರೀಪಾತ್ರಗಳು ಬದುಕನ್ನು ನೇರ್ಪಡಿಸಲು ಇನ್ನಿಲ್ಲದಂತೆ ಒದ್ದಾಡುತ್ತಿರುವ ಸಹಿಷ್ಣುಗಳು.

ವಸುಧೇಂದ್ರರ ಕಥೆಗಳ ವೈಶಿಷ್ಟ್ಯವೇನೆಂದರೆ, ಕಥಾವಸ್ತು ಇಲ್ಲಿ ಅಮುಖ್ಯ. ಈ ಕಥೆಗಳಲ್ಲಿ ಬರುವ ಪಾತ್ರಗಳ ಸ್ವಭಾವ, ಸ್ವರೂಪಗಳೇ ಇಲ್ಲಿ ಪ್ರಧಾನವಾಗಿರುತ್ತವೆ. ಆ ಸ್ವಭಾವದ ಸುತ್ತಲೂ ಕಥೆಗಳು ಬೆಳೆಯುತ್ತವೆ. ನನಗೆ ಅತ್ಯಂತ ಇಷ್ಟವಾದ ಅವರ ಕಥೆ ‘ಹೊಟ್ಟೆಯೊಳಗಿನ ಗುಟ್ಟು’ ಮತ್ತು ‘ಸೀಳು ಲೋಟ’ ಈ ವೈಶಿಷ್ಟ್ಯದ ಉತ್ಕೃಷ್ಟ ಮಾದರಿಗಳಾಗಿವೆ ಎನ್ನಬಹುದು.

ಮೋಹನಸ್ವಾಮಿಯ ಕಥೆಗಳಲ್ಲಿಯೂ ಸಹ ಈತ ಒಬ್ಬ ಮೆತುಗ ಸಲಿಂಗಕಾಮಿ. ಸಲಿಂಗಕಾಮಿಗಳಲ್ಲಿಯೂ ಎರಡು ಬಗೆಗಳಿವೆಯಲ್ಲವೆ? ಗಂಡಿನ ಪಾತ್ರವನ್ನು ವಹಿಸುವ ಅಥವಾ ಹೆಣ್ಣಿನ ಪಾತ್ರವನ್ನು ವಹಿಸುವ ಸಲಿಂಗಕಾಮಿಗಳು. ಮೋಹನಸ್ವಾಮಿ ಹೆಣ್ಣಿಗ, ಸದೃಢ ಗಂಡಸನ್ನು ಕಂಡರೆ ಆಸೆಪಡುವವನು. ನಮ್ಮ ಸಮಾಜವು ಯಾವ ಗುಣಗಳನ್ನು ಹೆಣ್ಣಿನ ಮೇಲೆ ಆರೋಪಿಸಿದೆಯೋ ಆ ಗುಣಗಳನ್ನು ಹೊಂದಿರುವವನು. ಇಂತಹ ಪಾತ್ರವನ್ನು ಸಮರ್ಪಕವಾಗಿ ಸೃಷ್ಟಿಸುವ ಉದ್ದೇಶದಿಂದ ಲೇಖಕರು, ಮೋಹನಸ್ವಾಮಿಯು ಮಾಡಲು ಬಯಸುವ ಅನೇಕ ಗೃಹಕೃತ್ಯಗಳನ್ನು ಹಾಗು ಸೇವಾಕಾರ್ಯಗಳನ್ನು ಸವಿವರವಾಗಿ ಬಣ್ಣಿಸುತ್ತಾರೆ. ಮೋಹನಸ್ವಾಮಿ ಹಾಗು ಆತನ ಗೆಣೆಯನ ನಡುವೆ ಹೆಂಡತಿ ಹಾಗು ಗಂಡನ ನಡುವಿನ ತರಹದ ಸಂಬಂಧವಿತ್ತು ಎನ್ನುವದನ್ನು ಚಿತ್ರಿಸುವ ವರ್ಣನೆಯು ಶೃಂಗಾರಪೂರ್ಣವಾಗಿದೆ ಎಂದು ಹೇಳಬಹುದು!

ಸಾಂಪ್ರದಾಯಕ ಹೆಂಡತಿಯು ಗಂಡನನ್ನು ಮೆಚ್ಚಿಸಲು ಯಾವ ರೀತಿಯಲ್ಲಿ ಆತನ ವೈಯಕ್ತಿಕ ಸೇವೆಯನ್ನು ಹಾಗು ಆತ ಬಯಸುವ ರುಚಿ ರುಚಿ ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುವುಳೊ, ಮೋಹನಸ್ವಾಮಿಯು ಅದನ್ನೆಲ್ಲ ಮಾಡುತ್ತಿರುತ್ತಾನೆ.
ಇಲ್ಲಿ ಒಂದು ಪ್ರಶ್ನೆ ಬರುತ್ತದೆ. ಗಂಡನಿಗೆ ಅಡಿಯಾಳಾಗಿ ಇರುವದೇ ಹೆಣ್ಣಿಗೆ ಆದರ್ಶವೆ? ವಸುಧೇಂದ್ರರ ಅಭಿಪ್ರಾಯ ಹಾಗಿರಲಿಕ್ಕಿಲ್ಲ; ಆದರೆ ಈ ಕಥೆಯಲ್ಲಿಯ ಪಾತ್ರದ ಮನೋಧರ್ಮ ಹಾಗಿದೆ ಎಂದು ನಾನು ಭಾವಿಸುತ್ತೇನೆ. ಮೋಹನಸ್ವಾಮಿಯ ಕಥೆಗಳ ಬಗೆಗೆ ಹೆಚ್ಚಿನ ವಿವರಗಳನ್ನು ಕೊಟ್ಟರೆ, ಇನ್ನು ಮುಂದೆ ಓದುವಂತಹ ವಾಚಕರಿಗೆ ಕಥೆಗಳ ಸ್ವಾರಸ್ಯವು ಭಂಗವಾದೀತೆನ್ನುವ ಭಯದಿಂದ, ನಾನು ವಿವರಗಳನ್ನು ಇಲ್ಲಿಗೇ ನಿಲ್ಲಿಸುತ್ತೇನೆ.

ಈ ಸಂಕಲನವನ್ನು ವಸುಧೇಂದ್ರರು ಅರ್ಪಣೆ ಮಾಡಿದ್ದು ಈ ರೀತಿಯಾಗಿದೆ:
                                                 ಮೋಹನಸ್ವಾಮಿಯ ಗೆಳೆಯರಿಗೆ
        ಮೋಹನಸ್ವಾಮಿಯ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗೆ
                              ಮೋಹನಸ್ವಾಮಿಯ ಅಪ್ಪ, ಅಜ್ಜ, ಮುತ್ತಜ್ಜರಿಗೆ

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಲೇಖಕರು ಮೋಹನಸ್ವಾಮಿಗೆ ಮಕ್ಕಳನ್ನು ದಯಪಾಲಿಸಿದ್ದಾರೆ. ಅರ್ಥಾತ್ ಮೋಹನಸ್ವಾಮಿಯು ಕಾಲಾನುಕ್ರಮದಲ್ಲಿ ಸಲಿಂಗಕಾಮವನ್ನು ಬಿಟ್ಟು ‘ಸಹಜ ವ್ಯಕ್ತಿ’ಯಾಗುತ್ತಾನೆ; ಮದುವೆಯಾಗಿ (?) ಅಥವಾ ಆಗದೆ (!) ಮಕ್ಕಳನ್ನು ಪಡೆಯುತ್ತಾನೆ ಇತ್ಯಾದಿ.  ಹಾಗಿದ್ದರೆ, ತಮ್ಮ ಅರ್ಪಣೆಯ ಮೂಲಕ ವಸುಧೇಂದ್ರರು ವಾಚಕರಿಗೆ ಏನು ಸಂದೇಶ ನೀಡಬಯಸುತ್ತಿದ್ದಾರೆ? ಸಲಿಂಗಕಾಮಿಯು ವಿಲಿಂಗಕಾಮಿಯಾಗುವುದು ಸಹಜಸ್ವಭಾವ ಎಂದಲ್ಲವೆ? ಅಥವಾ ಇದು ನಮ್ಮ ಸಮಾಜವ್ಯವಸ್ಥೆಯಲ್ಲಿ ಅನಿವಾರ್ಯ ಎಂದೆ? ಅದಲ್ಲದೆ, ಮುತ್ತಜ್ಜರನ್ನು ಹಾಗು ಮರಿಮೊಮ್ಮಕ್ಕಳನ್ನು ಉಲ್ಲೇಖಿಸುವ ಮೂಲಕ ಸಲಿಂಗಕಾಮವು ಅನಾದಿ-ಅನಂತವಾಗಿದೆ ಎಂದು ವಸುಧೇಂದ್ರರು ಸೂಚಿಸುತ್ತಿದ್ದಾರೆಯೆ? ಅಥವಾ ಇದು ‘ಅಸಹಜ ವ್ಯಕ್ತಿಗಳ’ ಬಗೆಗೆ ಅವರು ತೋರುತ್ತಿರುವ ಸಹಾನುಭೂತಿಯೆ?

ಈ ಕಥಾಸಂಕಲನದ ಮೋಹನಸ್ವಾಮಿಯ ಕಥೆಗಳ ಸರಣಿಯಲ್ಲಿ ‘ತುತ್ತ ತುದಿಯಲ್ಲಿ ಮೊತ್ತ ಮೊದಲು’ ಎನ್ನುವುದು ಮೊದಲನೆಯ ಕಥೆ; ‘ಕಿಲಿಮಂಜಾರೊ’ ಕೊನೆಯ ಕಥೆ. ಮೊದಲನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ತೊಳಲಾಟದ ಚಿತ್ರವಿದ್ದರೆ ಕೊನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ಹೋರಾಟದ ದರ್ಶನ ನಮಗಾಗುತ್ತದೆ. ತನ್ನ ವಿಭಿನ್ನ ವರ್ತನೆಯಿಂದಾಗಿ ಸಮಾಜಕ್ಕೆ ಹೆದರುತ್ತ, ಮಖೀನ ವ್ಯಕ್ತಿಯಾದ ಮೋಹನಸ್ವಾಮಿ ಇಲ್ಲಿ ಕಿಲಿಮಂಜಾರೊ ಪರ್ವತದ ದುರ್ಗಮ ಶಿಖರವನ್ನು ಚಾರಣಿಸುವಲ್ಲಿ ಯಶಸ್ವಿಯಾಗುತ್ತಾನೆ.

ಈ ಮೂಲಕ ಲೇಖಕರು ಕೊಡುವ ಸಂದೇಶವೇನು?—‘ಆತ ತನ್ನನ್ನು ತಾನೇ ಗೆದೆಯುತ್ತಾನೆ’ ಎಂದಲ್ಲವೆ? ತನ್ನ ಭಿನ್ನ ವ್ಯಕ್ತಿತ್ವದಿಂದ ಇತರರು ತನ್ನನ್ನು ಕೀಳಾಗಿ ನೋಡುವದನ್ನು ನಾನು ಲೆಕ್ಕಿಸುವದಿಲ್ಲ ಎನ್ನುವ ಭಾವ ಇದರಲ್ಲಿದೆಯೆ?

ಮೋಹನಸ್ವಾಮಿ ತುಂಬ ಪ್ರೀತಿಸಬಹುದಾದ ಪಾತ್ರ. (ಅಯ್ಯೊ, ನಾನು ಸಲಿಂಗಕಾಮಿಯಲ್ಲ!) ಅವನಿಗೆ ನಾವು ಹೇಳಬಹುದಾದ ಕೊನೆಯ ಮಾತೊಂದು ಹೀಗಿದೆ: ಹಕೂನ ಮಟಾಟಾ!

‘ತಗಣಿ’ ಈ ಸಂಕಲನದ ಮತ್ತೊಂದು ಸಲಿಂಗಕಾಮಿ ಕಥೆ. ಹೊರಗಿನ ಯಾವುದೇ ಒತ್ತಡವಿಲ್ಲದೆ, ದೈಹಿಕವಾಗಿ ದಷ್ಟಪುಷ್ಟ ಗಂಡಸಾಗಿದ್ದರೂ ಸಹ ಮಾನಸಿಕವಾಗಿ ಹೆಣ್ಣಾಗಿರುವ ವ್ಯಕ್ತಿಯ ದುರಂತ ಕಥೆ ಇದು. ಸಮಾಜದಲ್ಲಿ ಹಾಗು ತನ್ನ ಕುಟುಂಬದಲ್ಲಿ ಆತ ಯಾವ ರೀತಿಯಲ್ಲಿ ಅವಹೇಳನೆಗೆ ಈಡಾಗುತ್ತಾನೆ ಎನ್ನುವ ಚಿತ್ರ ಇಲ್ಲಿದೆ.


ಈ ಕಥಾಸಂಕಲನದಲ್ಲಿ ನಾನು ಬಹಳವಾಗಿ ಮೆಚ್ಚಿದ ಎರಡು ಕಥೆಗಳೆಂದರೆ: (೧) ದುರ್ಭಿಕ್ಷ ಕಾಲ ಮತ್ತು (೨) ಪೂರ್ಣಾಹುತಿ
ವರ್ತಮಾನ ಸಮಾಜದ ವಿಶಿಷ್ಟ ಚಿತ್ರಣ ಈ ಎರಡು ಕಥೆಗಳಲ್ಲಿದೆ.

ಈ ಸಂಕಲನದ ಕಥೆಗಳ ಬಗೆಗೆ ನಾನು ಸ್ವಲ್ಪ ವಿವರವಾಗಿ ಬರೆದರೂ ಸಹ ಇನ್ನು ಮುಂದಿನ ವಾಚಕರಿಗೆ ರಸಭಂಗವಾದೀತು 
ಎನ್ನುವ ಭಯದಿಂದ ನಾನು ಇಲ್ಲಿಗೇ ಮುಕ್ತಾಯಗೊಳಿಸುತ್ತಿದ್ದೇನೆ. ವಸುಧೇಂದ್ರರಿಗೆ ಅಭಿನಂದನೆಗಳು.