ವಸುಧೇಂದ್ರರು
ಬರೆದ ‘ಮೋಹನಸ್ವಾಮಿ’ ಕಥಾಸಂಕಲನದಲ್ಲಿ ೧೧ ಕತೆಗಳಿವೆ. ಇವುಗಳಲ್ಲಿ ೬ ಕಥೆಗಳು ಸಲಿಂಗಕಾಮಕ್ಕೆ ಸಂಬಂಧಿಸಿದ
ಕಥೆಗಳಾಗಿವೆ. ಇವುಗಳ ಪೈಕಿ ೫ ಕಥೆಗಳಲ್ಲಿ ಮೋಹನಸ್ವಾಮಿಯೇ ನಾಯಕ (ಕಿ)! ಮೋಹನಸ್ವಾಮಿ ಎನ್ನುವ ಹೆಸರೇ
ಈ ಕಥೆಗಳ ಆಂತರ್ಯವನ್ನು ಸೂಚಿಸುವಂತಿದೆ! ಸಲಿಂಗಕಾಮದ ಬಗೆಗೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು
ಹೊರಬಂದ ಬಳಿಕ, ಈ ವಿಷಯದಲ್ಲಿ ಸಾಕಷ್ಟು ಪರ ಹಾಗು ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ವಸುಧೇಂದ್ರರು
ಈ ಕತೆಗಳನ್ನು ಈ ವಿವಾದದ ನಂತರ ಬರೆದದ್ದಲ್ಲ. ಈ ಸಂಕಲನದಲ್ಲಿ ಪ್ರಕಟವಾದ ‘ಇಂತಹ’ ಎರಡು ಕಥೆಗಳನ್ನು
೨೦೦೯ನೆಯ ಇಸವಿಯಲ್ಲಿಯೇ ಅವರು ಬರೆದಿದ್ದಾರೆ. ಸಲಿಂಗಕಾಮಕ್ಕೆ ಸಂಬಂಧಿಸಿದ ಅವರ ಮತ್ತೊಂದು ಕಥೆಯು
ಈಗಾಗಲೇ ಬೇರೊಂದು ಕಥಾಸಂಕಲನದಲ್ಲಿ ಪ್ರಕಟವಾಗಿದೆ. ೨೦೧೧ರಲ್ಲಿ ಬರೆದ ಎರಡು ಕಥೆಗಳು ಹಾಗು ೨೦೧೩ರಲ್ಲಿ
ಬರೆದ ಮೂರು ಕಥೆಗಳು ಈ ಸಂಕಲನದಲ್ಲಿ ಅಡಕವಾಗಿವೆ. ಸಲಿಂಗಕಾಮದದ ಬಗೆಗೆ ಇಷ್ಟು ವಿಪುಲವಾಗಿ ಬರೆಯಲು ವಸುಧೇಂದ್ರರಿಗೆ ಇರುವ (ಸಾಹಿತ್ಯಕ) ಆಕರ್ಷಣೆ ಏನು? ನನಗೆ
ಅನಿಸುವುದು ಹೀಗೆ:
ವಸುಧೇಂದ್ರರ
ಇತರ ಕಥಾಸಂಕಲನಗಳಲ್ಲಿ ಇರುವ ಬೇರೆ ಬೇರೆ ಕಥೆಗಳನ್ನು ಓದಿದಾಗ, ಅವರ ಮನೋಧರ್ಮದ ಒಂದು ವಿಶೇಷತೆಯ ಅರಿವು
ಮೂಡುತ್ತದೆ. ಅಸಹಾಯಕತೆಯನ್ನು ಕಂಡಾಗ ವಸುಧೇಂದ್ರರ ಕರಳು ಮಿಡಿಯುತ್ತದೆ. ಈ ಅಸಹಾಯಕತೆಯು (೧)ಸಾಮಾಜಿಕ
ಕ್ರೂರತೆಯ ಅಥವಾ (೨)ವೈಯಕ್ತಿಕ ಪರಿಸ್ಥಿತಿಯ ಅಥವಾ (೩)ಮಾನಸಿಕ ಗುಣವಿಶೇಷದ ಪರಿಣಾಮವಾಗಿರಬಹುದು.
ವಸುಧೇಂದ್ರರು ಆ ಅಸಹಾಯಕ ವ್ಯಕ್ತಿಯನ್ನು ಅನುಕಂಪಮಾತ್ರದಿಂದ ನೋಡುತ್ತಾರೆ. ಮೋಹನಸ್ವಾಮಿಯ ಕಥೆಗಳಲ್ಲಿ
ವಸುಧೇಂದ್ರರಿಗೆ ತಮ್ಮ ನಾಯಕನು(ಕಿಯು) ಸಲಿಂಗಕಾಮಿಯಾಗುವ ಮಾನಸಿಕ ಅಥವಾ ವೈದ್ಯಕೀಯ ಕಾರಣಗಳು ಅಗಣ್ಯ.
ಈ ವ್ಯಕ್ತಿಯು ಪಡುವ ಅಸಹನೀಯ ಪಾಡು ಅವರ ಕಥೆಗಳ ಅಂತರಂಗವಾಗಿದೆ. ಅವರ ಇತರ ಕಥೆಗಳಲ್ಲಿಯೂ ಸಹ, ಕಥಾನಾಯಕರು
ಬಹುತೇಕವಾಗಿ ಅಸಹಾಯಮೂರ್ತಿಗಳು. ಅವರ ಸ್ತ್ರೀಪಾತ್ರಗಳು ಬದುಕನ್ನು ನೇರ್ಪಡಿಸಲು ಇನ್ನಿಲ್ಲದಂತೆ ಒದ್ದಾಡುತ್ತಿರುವ
ಸಹಿಷ್ಣುಗಳು.
ವಸುಧೇಂದ್ರರ
ಕಥೆಗಳ ವೈಶಿಷ್ಟ್ಯವೇನೆಂದರೆ, ಕಥಾವಸ್ತು ಇಲ್ಲಿ ಅಮುಖ್ಯ. ಈ ಕಥೆಗಳಲ್ಲಿ ಬರುವ ಪಾತ್ರಗಳ ಸ್ವಭಾವ,
ಸ್ವರೂಪಗಳೇ ಇಲ್ಲಿ ಪ್ರಧಾನವಾಗಿರುತ್ತವೆ. ಆ ಸ್ವಭಾವದ ಸುತ್ತಲೂ ಕಥೆಗಳು ಬೆಳೆಯುತ್ತವೆ. ನನಗೆ ಅತ್ಯಂತ
ಇಷ್ಟವಾದ ಅವರ ಕಥೆ ‘ಹೊಟ್ಟೆಯೊಳಗಿನ ಗುಟ್ಟು’ ಮತ್ತು ‘ಸೀಳು ಲೋಟ’ ಈ ವೈಶಿಷ್ಟ್ಯದ ಉತ್ಕೃಷ್ಟ ಮಾದರಿಗಳಾಗಿವೆ
ಎನ್ನಬಹುದು.
ಮೋಹನಸ್ವಾಮಿಯ
ಕಥೆಗಳಲ್ಲಿಯೂ ಸಹ ಈತ ಒಬ್ಬ ಮೆತುಗ ಸಲಿಂಗಕಾಮಿ. ಸಲಿಂಗಕಾಮಿಗಳಲ್ಲಿಯೂ ಎರಡು ಬಗೆಗಳಿವೆಯಲ್ಲವೆ? ಗಂಡಿನ
ಪಾತ್ರವನ್ನು ವಹಿಸುವ ಅಥವಾ ಹೆಣ್ಣಿನ ಪಾತ್ರವನ್ನು ವಹಿಸುವ ಸಲಿಂಗಕಾಮಿಗಳು. ಮೋಹನಸ್ವಾಮಿ ಹೆಣ್ಣಿಗ,
ಸದೃಢ ಗಂಡಸನ್ನು ಕಂಡರೆ ಆಸೆಪಡುವವನು. ನಮ್ಮ ಸಮಾಜವು ಯಾವ ಗುಣಗಳನ್ನು ಹೆಣ್ಣಿನ ಮೇಲೆ ಆರೋಪಿಸಿದೆಯೋ
ಆ ಗುಣಗಳನ್ನು ಹೊಂದಿರುವವನು. ಇಂತಹ ಪಾತ್ರವನ್ನು ಸಮರ್ಪಕವಾಗಿ ಸೃಷ್ಟಿಸುವ ಉದ್ದೇಶದಿಂದ ಲೇಖಕರು,
ಮೋಹನಸ್ವಾಮಿಯು ಮಾಡಲು ಬಯಸುವ ಅನೇಕ ಗೃಹಕೃತ್ಯಗಳನ್ನು ಹಾಗು ಸೇವಾಕಾರ್ಯಗಳನ್ನು ಸವಿವರವಾಗಿ ಬಣ್ಣಿಸುತ್ತಾರೆ.
ಮೋಹನಸ್ವಾಮಿ ಹಾಗು ಆತನ ಗೆಣೆಯನ ನಡುವೆ ಹೆಂಡತಿ ಹಾಗು ಗಂಡನ ನಡುವಿನ ತರಹದ ಸಂಬಂಧವಿತ್ತು ಎನ್ನುವದನ್ನು
ಚಿತ್ರಿಸುವ ವರ್ಣನೆಯು ಶೃಂಗಾರಪೂರ್ಣವಾಗಿದೆ ಎಂದು ಹೇಳಬಹುದು!
ಸಾಂಪ್ರದಾಯಕ
ಹೆಂಡತಿಯು ಗಂಡನನ್ನು ಮೆಚ್ಚಿಸಲು ಯಾವ ರೀತಿಯಲ್ಲಿ ಆತನ ವೈಯಕ್ತಿಕ ಸೇವೆಯನ್ನು ಹಾಗು ಆತ ಬಯಸುವ ರುಚಿ
ರುಚಿ ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುವುಳೊ, ಮೋಹನಸ್ವಾಮಿಯು ಅದನ್ನೆಲ್ಲ ಮಾಡುತ್ತಿರುತ್ತಾನೆ.
ಇಲ್ಲಿ
ಒಂದು ಪ್ರಶ್ನೆ ಬರುತ್ತದೆ. ಗಂಡನಿಗೆ ಅಡಿಯಾಳಾಗಿ ಇರುವದೇ ಹೆಣ್ಣಿಗೆ ಆದರ್ಶವೆ? ವಸುಧೇಂದ್ರರ ಅಭಿಪ್ರಾಯ
ಹಾಗಿರಲಿಕ್ಕಿಲ್ಲ; ಆದರೆ ಈ ಕಥೆಯಲ್ಲಿಯ ಪಾತ್ರದ ಮನೋಧರ್ಮ ಹಾಗಿದೆ ಎಂದು ನಾನು ಭಾವಿಸುತ್ತೇನೆ. ಮೋಹನಸ್ವಾಮಿಯ
ಕಥೆಗಳ ಬಗೆಗೆ ಹೆಚ್ಚಿನ ವಿವರಗಳನ್ನು ಕೊಟ್ಟರೆ, ಇನ್ನು ಮುಂದೆ ಓದುವಂತಹ ವಾಚಕರಿಗೆ ಕಥೆಗಳ ಸ್ವಾರಸ್ಯವು
ಭಂಗವಾದೀತೆನ್ನುವ ಭಯದಿಂದ, ನಾನು ವಿವರಗಳನ್ನು ಇಲ್ಲಿಗೇ ನಿಲ್ಲಿಸುತ್ತೇನೆ.
ಈ
ಸಂಕಲನವನ್ನು ವಸುಧೇಂದ್ರರು ಅರ್ಪಣೆ ಮಾಡಿದ್ದು ಈ ರೀತಿಯಾಗಿದೆ:
ಮೋಹನಸ್ವಾಮಿಯ ಗೆಳೆಯರಿಗೆ
ಮೋಹನಸ್ವಾಮಿಯ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗೆ
ಮೋಹನಸ್ವಾಮಿಯ ಅಪ್ಪ, ಅಜ್ಜ, ಮುತ್ತಜ್ಜರಿಗೆ
ಇಲ್ಲಿ
ಗಮನಿಸಬೇಕಾದ ವಿಷಯವೆಂದರೆ, ಲೇಖಕರು ಮೋಹನಸ್ವಾಮಿಗೆ ಮಕ್ಕಳನ್ನು ದಯಪಾಲಿಸಿದ್ದಾರೆ. ಅರ್ಥಾತ್ ಮೋಹನಸ್ವಾಮಿಯು
ಕಾಲಾನುಕ್ರಮದಲ್ಲಿ ಸಲಿಂಗಕಾಮವನ್ನು ಬಿಟ್ಟು ‘ಸಹಜ ವ್ಯಕ್ತಿ’ಯಾಗುತ್ತಾನೆ; ಮದುವೆಯಾಗಿ (?) ಅಥವಾ
ಆಗದೆ (!) ಮಕ್ಕಳನ್ನು ಪಡೆಯುತ್ತಾನೆ ಇತ್ಯಾದಿ. ಹಾಗಿದ್ದರೆ,
ತಮ್ಮ ಅರ್ಪಣೆಯ ಮೂಲಕ ವಸುಧೇಂದ್ರರು ವಾಚಕರಿಗೆ ಏನು ಸಂದೇಶ ನೀಡಬಯಸುತ್ತಿದ್ದಾರೆ? ಸಲಿಂಗಕಾಮಿಯು
ವಿಲಿಂಗಕಾಮಿಯಾಗುವುದು ಸಹಜಸ್ವಭಾವ ಎಂದಲ್ಲವೆ? ಅಥವಾ ಇದು ನಮ್ಮ ಸಮಾಜವ್ಯವಸ್ಥೆಯಲ್ಲಿ ಅನಿವಾರ್ಯ
ಎಂದೆ? ಅದಲ್ಲದೆ, ಮುತ್ತಜ್ಜರನ್ನು ಹಾಗು ಮರಿಮೊಮ್ಮಕ್ಕಳನ್ನು ಉಲ್ಲೇಖಿಸುವ ಮೂಲಕ ಸಲಿಂಗಕಾಮವು ಅನಾದಿ-ಅನಂತವಾಗಿದೆ
ಎಂದು ವಸುಧೇಂದ್ರರು ಸೂಚಿಸುತ್ತಿದ್ದಾರೆಯೆ? ಅಥವಾ ಇದು ‘ಅಸಹಜ ವ್ಯಕ್ತಿಗಳ’ ಬಗೆಗೆ ಅವರು ತೋರುತ್ತಿರುವ
ಸಹಾನುಭೂತಿಯೆ?
ಈ
ಕಥಾಸಂಕಲನದ ಮೋಹನಸ್ವಾಮಿಯ ಕಥೆಗಳ ಸರಣಿಯಲ್ಲಿ ‘ತುತ್ತ ತುದಿಯಲ್ಲಿ ಮೊತ್ತ ಮೊದಲು’ ಎನ್ನುವುದು ಮೊದಲನೆಯ
ಕಥೆ; ‘ಕಿಲಿಮಂಜಾರೊ’ ಕೊನೆಯ ಕಥೆ. ಮೊದಲನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ತೊಳಲಾಟದ ಚಿತ್ರವಿದ್ದರೆ
ಕೊನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ಹೋರಾಟದ ದರ್ಶನ ನಮಗಾಗುತ್ತದೆ. ತನ್ನ ವಿಭಿನ್ನ ವರ್ತನೆಯಿಂದಾಗಿ
ಸಮಾಜಕ್ಕೆ ಹೆದರುತ್ತ, ಮಖೀನ ವ್ಯಕ್ತಿಯಾದ ಮೋಹನಸ್ವಾಮಿ ಇಲ್ಲಿ ಕಿಲಿಮಂಜಾರೊ ಪರ್ವತದ ದುರ್ಗಮ ಶಿಖರವನ್ನು
ಚಾರಣಿಸುವಲ್ಲಿ ಯಶಸ್ವಿಯಾಗುತ್ತಾನೆ.
ಈ
ಮೂಲಕ ಲೇಖಕರು ಕೊಡುವ ಸಂದೇಶವೇನು?—‘ಆತ ತನ್ನನ್ನು ತಾನೇ ಗೆದೆಯುತ್ತಾನೆ’ ಎಂದಲ್ಲವೆ? ತನ್ನ ಭಿನ್ನ
ವ್ಯಕ್ತಿತ್ವದಿಂದ ಇತರರು ತನ್ನನ್ನು ಕೀಳಾಗಿ ನೋಡುವದನ್ನು ನಾನು ಲೆಕ್ಕಿಸುವದಿಲ್ಲ ಎನ್ನುವ ಭಾವ ಇದರಲ್ಲಿದೆಯೆ?
ಮೋಹನಸ್ವಾಮಿ
ತುಂಬ ಪ್ರೀತಿಸಬಹುದಾದ ಪಾತ್ರ. (ಅಯ್ಯೊ, ನಾನು ಸಲಿಂಗಕಾಮಿಯಲ್ಲ!) ಅವನಿಗೆ ನಾವು ಹೇಳಬಹುದಾದ ಕೊನೆಯ
ಮಾತೊಂದು ಹೀಗಿದೆ: ಹಕೂನ ಮಟಾಟಾ!
‘ತಗಣಿ’
ಈ ಸಂಕಲನದ ಮತ್ತೊಂದು ಸಲಿಂಗಕಾಮಿ ಕಥೆ. ಹೊರಗಿನ ಯಾವುದೇ ಒತ್ತಡವಿಲ್ಲದೆ, ದೈಹಿಕವಾಗಿ ದಷ್ಟಪುಷ್ಟ
ಗಂಡಸಾಗಿದ್ದರೂ ಸಹ ಮಾನಸಿಕವಾಗಿ ಹೆಣ್ಣಾಗಿರುವ ವ್ಯಕ್ತಿಯ ದುರಂತ ಕಥೆ ಇದು. ಸಮಾಜದಲ್ಲಿ ಹಾಗು ತನ್ನ
ಕುಟುಂಬದಲ್ಲಿ ಆತ ಯಾವ ರೀತಿಯಲ್ಲಿ ಅವಹೇಳನೆಗೆ ಈಡಾಗುತ್ತಾನೆ ಎನ್ನುವ ಚಿತ್ರ ಇಲ್ಲಿದೆ.
ಈ ಕಥಾಸಂಕಲನದಲ್ಲಿ
ನಾನು ಬಹಳವಾಗಿ ಮೆಚ್ಚಿದ ಎರಡು ಕಥೆಗಳೆಂದರೆ: (೧) ದುರ್ಭಿಕ್ಷ ಕಾಲ ಮತ್ತು (೨) ಪೂರ್ಣಾಹುತಿ
ವರ್ತಮಾನ
ಸಮಾಜದ ವಿಶಿಷ್ಟ ಚಿತ್ರಣ ಈ ಎರಡು ಕಥೆಗಳಲ್ಲಿದೆ.
ಈ ಸಂಕಲನದ
ಕಥೆಗಳ ಬಗೆಗೆ ನಾನು ಸ್ವಲ್ಪ ವಿವರವಾಗಿ ಬರೆದರೂ ಸಹ ಇನ್ನು ಮುಂದಿನ ವಾಚಕರಿಗೆ ರಸಭಂಗವಾದೀತು
ಎನ್ನುವ ಭಯದಿಂದ
ನಾನು ಇಲ್ಲಿಗೇ ಮುಕ್ತಾಯಗೊಳಿಸುತ್ತಿದ್ದೇನೆ. ವಸುಧೇಂದ್ರರಿಗೆ ಅಭಿನಂದನೆಗಳು.
23 comments:
Sunath Kaka,
You are right, Mohanaswamyannu odiruve. Manasige tumbaa hattiravaadaru Mohanaswamy. Avara tholalaata, mugdhate, asahayakate, samaaja avarannu exploit maaduva udharaNegaLu, ellavannoo Vasudhendrara pustakadalli, avarade shailiyalli manasige naatuvante hELiddaare. Kelavarige idu maahiti yaadare, innu kelavara chintanege vasthuvaagide, manasthitigaLanna tiddikoLLaloo saha maarghavaagide. I loved the book and the way you have summarised it.
Nanagoo saha "Poornahuti" bahaLa ishtavaayitu.
Vasudhendrara abhimaani sanghada adhyakshe andukoLLi :)
Roopa
ಕಾಕಾ,
ಮೋಹನ ಸ್ವಾಮಿ ಓದಿಲ್ಲ. ಓದಬೇಕು ಅಂತ ಅನ್ನಿಸುವ ಹಾಗೆ ಮಾಡಿದ್ದಕ್ಕಾಗಿ ವಂದನೆಗಳು.
ಸ್ವರ್ಣಾ
ಈ ಹೊತ್ತಿಗೆಯನ್ನು ನಾನೂ ಓದಬೇಕಿದೆ.
ತಮ್ಮ ಟಿಪ್ಪಣಿಯನ್ನೇ ಗಮನಿಸುತ್ತಾ ನನಗೆ ಅನಿಸಿದ್ದು,
ತುಸು ಎಚ್ಚರ ತಪ್ಪಿದರೂ ಮತ್ತೊಂದು ಶೃಂಗಾರ ಸಾಹಿತ್ಯವಾಗುವಂತಹ ಅಪಾಯವಿರುವ ವಸ್ತುವನ್ನು ಬಲು ಸೂಕ್ಷ್ಮವಾಗಿ ವಸುದೇಂಧ್ರರು handle ಮಾಡಿದ್ದಾರೆ ಎನಿಸುತ್ತದೆ.
ಪಾತ್ರಗಳೇ ಮೇಲುಗೈ ಆಗಿ ನಿರೂಪಿಸಲ್ಪಡುವ ಕಥನಗಳು ಓದುಗನಿಗೂ ಆಪ್ತವಾದ ಸರಕು.
ಧನ್ಯವಾದಗಳು ಕಾಕ,
ನಾನು ಕಾಯುತ್ತಿದ್ದೇನೆ ಬೆಂಗಳೂರಿಗೆ ಹೋದ ಕೂಡಲೇ ಕೊಂಡು ಓದಬೇಕು.
ರೂಪಾ,
ವಸುಧೇಂದ್ರರು ಯಾವ ವಸ್ತುವನ್ನೇ ಆರಿಸಿಕೊಂಡು ಬರೆಯಲಿ, ಅಲ್ಲಿಯ ಪಾತ್ರಗಳು ಮನಸ್ಸಿಗೆ ಹತ್ತಿರವಾಗುತ್ತವೆ. ನೀವು ವಸುಧೇಂದ್ರ ಅಭಿಮಾನಿ ಸಂಘದ ಅಧ್ಯಕ್ಷೆಯಾದರೆ, ನನ್ನನ್ನು ಸದಸ್ಯ ಎಂದು ಭಾವಿಸಿ. ಧನ್ಯವಾದಗಳು.
ಸ್ವರ್ಣಾ,
ಮೋಹನಸ್ವಾಮಿ ಕತೆಗಳು ಮನಸ್ಸನ್ನು ಕಲಕುತ್ತವೆ. ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಜರುಗಿದ ಪ್ರತಿಭಟನೆ ಇತ್ಯಾದಿಗಳಿಂದ, ಈ ವಸ್ತುವಿಗೆ ಸಾಮಯಿಕತೆ ಹಾಗು ಹೆಚ್ಚಿನ ಸ್ವಾರಸ್ಯ ಬಂದಿದೆ.
ಬದರಿನಾಥರೆ,
ನೀವು ಗಮನಿಸಿದ ವಿಷಯ ಸರಿಯಾಗಿದೆ. Erotic ಎನ್ನಿಸುವ ಸಾಮಗ್ರಿಯನ್ನು handle ಮಾಡುವುದು, ಸರಳವಾದ ಕೆಲಸವಲ್ಲ!
ಮನಸು,
ಸ್ವದೇಶಕ್ಕೆ ಸುಸ್ವಾಗತ. ಶುಭಾಶಯಗಳು.
ತುಂಬಾ ಚರ್ಚೆಗಳನ್ನು ನೋಡುತ್ತಿದ್ದೇನೆ ಕಾಕಾ.. ಅದರೊಂದಿಗೆ ನಿಮ್ಮ ಲೇಖನವನ್ನೂ. ಮೋಹನಸ್ವಾಮಿಯನ್ನು ಓದಿ ಪುನಃ ಕಮೆಂಟ್ ಮಾಡಿದರೆ ಒಳ್ಳೆಯದು ಅಲ್ವೆ. ಶುಭ ಸಂಕ್ರಾಂತಿ.
ಈಶ್ವರ ಭಟ್ಟರೆ,
ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು.
ನಿಮ್ಮ ಅಭಿಪ್ರಾಯಗಳನ್ನು ಓದಿದ ಮೇಲೆ ಆದಷ್ಟು ಬೇಗ ಪುಸ್ತಕವನ್ನು ಓದಲೇ ಬೇಕು ಎನ್ನಿಸುತ್ತಿದೆ ಕಾಕ
ಪ್ರೀತಿಯ ಕಾಕಾ,
ಪೋಸ್ಟಿನ ಟೈಟಲ್ಲು ನೋಡಿ ಸ್ವಲ್ಪ ಅಳುಕಿನಿಂದಲೇ ಓದಲು ಶುರುಮಾಡಿದೆ.
ನಿಮ್ಮ ಬರಹ, ಒಳನೋಟಗಳು ಮತ್ತು ವಸುಧೇಂದ್ರರ ಕಥಾನಿರೂಪಣೆ ಎರಡೂ ನಂಗೆ ತುಂಬ ಇಷ್ಟ. ಈ ಪೋಸ್ಟೆಲ್ಲಿ ನನ್ನ ಇಬ್ಬರ ನಡುವೆ ಸಿಕ್ಕಿಸಿಬಿಡುತ್ತೋ ಅಂದುಕೊಂಡೆ.
ಉಂಹುಂ. ಪೂರ್ವಾಗ್ರಹ ಸತ್ತುಹೋಯಿತು. :)
ಮೋಹನಸ್ವಾಮಿ ಓದಿದ್ದೇನೆ ನಾನೂ. ಎಲ್ಲ ಕಥೆಗಳೂ ನೀವು ಸಮರ್ಥವಾಗಿ ಅರುಹಿದಂತೆ ತೊಳಲಾಟ, ಅಸಹಾಯಕತನ, ಸಹಿಷ್ಣುತೆ ಮತ್ತು ಮೆದುತನದ ವಿಸ್ತ್ರತ ರೂಪಗಳು.
ನಮ್ಮದೇ ಬಲೆಯಲ್ಲಿ ನಾವೇ ಸಿಲುಕಿಕೊಳ್ಳುವ ಅಸಹಾಯಕತೆಯನ್ನ, ಮತ್ತು ನಾವು ಈ ಬಲೆಯನ್ನ ಹೇಗೆ ಗಟ್ಟಿಯಾಗಿ ನೇಯುತ್ತಾ ಬಂದುಬಿಟ್ಟಿದೇವೆ ಎಂಬ ವಿವರಗಳನ್ನ
ವಸುಧೇಂದ್ರ ಚಿತ್ರಕವಾಗಿ ಕಟ್ಟಿಕೊಡುತ್ತಾರೆ.
ಸಂಕಲನದ ಎಲ್ಲ ಕತೆಗಳೂ ಸ್ಟ್ರಾಂಗ್ ಡೋಸ್ ಅನಿಸಿದವು. ದುರ್ಭಿಕ್ಷ ಕಾಲ ಕಣ್ಣಲ್ಲಿ ನೀರು ಬರಿಸಿಬಿಟ್ಟಿತು.
ಪೂರ್ಣಾಹುತಿಯಂತೂ.. ನಾನು ಒಂದೆರಡು ಗಂಟೆ ಕಳವಳಗೊಂಡುಬಿಟ್ಟಿದ್ದೆ.
ನಮ್ಮ ಮುಂದಿನ ಪೀಳಿಗೆ ತನ್ನ ಸವಲತ್ತುಗಳನ್ನ ಯಾವುದೇ ಜವಾಬ್ದಾರಿಯಿಲ್ಲದೆ ಬೇಕಾಬಿಟ್ಟಿ ಬಳಸಿ ತನ್ನ ವಿನಾಶ ತಂದುಕೊಳ್ಳುವುದೇನೋ ಅನಿಸುವ ಹೊತ್ತಿಗೆ, ನಾವು ಹಳಬರು
ಹೊಸತನ್ನ ಒಂದು ಮಾರು ದೂರವಿಟ್ಟು ಮಡಿಯಾಗಿದ್ದುಕೊಂಡು ಅಪ್ರಸ್ತುತವಾಗಿಹೋಗುತ್ತೇವೇನೋ ಅನ್ನಿಸಿಬಿಟ್ಟಿತು.
ತಗಣಿ - ಅನ್ವರ್ಥ ನಾಮದ ಕಥೆ.
ಒಂದೆರಡು ಕಥೆಗಳು ಸ್ವಲ್ಪ ಸಿನಿಮೀಯ ಅಂತ್ಯ ಅನ್ನಿಸಿದರೂ ಆ ಕತೆಗಳಿಗೆ ಒಂದು ಗೌರವಪೂರ್ಣ ಅಂತ್ಯ ಕೊಡಲು ಅದು ಬೇಕೇನೋ.
ಸಂಕಲನದ ಕೊನೆಗೆ ಬೆನ್ನುಡಿಯಾಗಿ ಬರೆದ ಮೋಹನಸ್ವಾಮಿ ಮತ್ತವನ/ಳ ಸಂಕಟ ಮತ್ತು ಶಾಪ, ಈ ಬಗೆಯ ಬದುಕನ್ನು ಬದುಕುವವರನ್ನು ಸಹಾನುಭೂತಿಯಿಂದ ನೋಡುವ ಎಚ್ಚರವನ್ನು ಕೊಡುತ್ತದೆ.
ಹೌದು ಶೃಂಗಾರಹೊತ್ತಿಗೆಯಾಗಬಹುದಾದದ್ದನ್ನು ತುಂಬ ಎಚ್ಚರದ ನಿಭಾವಣೆ ಮಾಡಿ ಅವರ ಅಂತರಂಗ ತೆರೆದಿಟ್ಟಿದ್ದಾರೆ ಲೇಖಕರು.
ನಿಮ್ಮ ಈ ವಿಶ್ಲೇಷಣಾ ಬರಹ ನನಗೆ ತುಂಬ ಇಷ್ಟವಾಯಿತು ಮತ್ತು ಮತ್ತೊಮ್ಮೆ ವಸು ಕಥಾಲೋಕದಲ್ಲಿ ಓಡಾಡಿ ಬಂದ ಅನುಭವ ಆಯಿತು.
ಪ್ರೀತಿಯಿಂದ,
ಸಿಂಧು
ಸುಮಾ,
‘ಮೋಹನಸ್ವಾಮಿ’ಯನ್ನು ಓದಿ ನೀವು ಖುಶಿ ಪಡುವಿರೆಂದು ಆಶಿಸುತ್ತೇನೆ.
ಸಿಂಧು,
ನಿಮ್ಮ ಪ್ರತಿಸ್ಪಂದನವೂ ಸಹ ವಿಮರ್ಶಾತ್ಮಕವಾಗಿಯೇ ಇರುತ್ತದೆ. ಆದುದರಿಂದ ನಾನೂ ಸಹ ಎಚ್ಚರದಿಂದಲೇ ಓದುತ್ತಿರುತ್ತೇನೆ. ನೀವು ಈ ಲೇಖನವನ್ನು ಒಪ್ಪಿಕೊಂಡಿದ್ದಕ್ಕಾಗಿ ನನಗೆ ಖುಶಿಯಾಗಿದೆ.
ನಿಮ್ಮ ಲೇಖನವನ್ನು ಓದಿದ ಬಳಿಕ ನನಗೂ ಸಹ ಈ ಪುಸ್ತಕವನ್ನು ಓದಬೇಕೆನ್ನಿಸುತ್ತಿದೆ.....Thank you sir..
ಕಾಕ. ನನಗೆ ವಸುದೆಂದ್ರರ ಕಥೆಗಳು ಇಷ್ಟವಾಗುತ್ತವೆ.. ನೀವು ಅರ್ಥೈಸಿದಂತೆ ಅವರ ಕಥೆಗಳಲ್ಲಿ ಮೃದು ತನ ಹೆಚ್ಚಾಗಿ ಕಾಣುತ್ತದೆ .. ಮನುಷ್ಯರ ಹುಳುಕನ್ನೂ , ಒಳ್ಳೆಯತನವನ್ನೂ , ಮುಗ್ಧತೆಯನ್ನೂ ನಿರೂಪಿಸುವಲ್ಲಿ ಅವರು ನನಗೆ ತೇಜಸ್ವಿಯನ್ನು ನೆನಪಿಸುತ್ತಾರೆ. ತೇಜಸ್ವಿ ಸ್ವಲ್ಪ ಇನ್ನೂ ನೇರ ಮತ್ತು ವಸುಧೇಂದ್ರ ನೇರವಂತಿಗೆ ಯನ್ನು ಮೃದುವಾಗಿ ವ್ಯಕ್ತಪಡಿಸುತ್ತಾರೆನ್ನುವುದು ನನ್ನ ಅಭಿಪ್ರಾಯ. ನಾನು ಮೋಹನ ಸ್ವಾಮಿಯನ್ನು ಓದಿಲ್ಲ .. ಈಗ ಓದಲೇ ಬೇಕೆನ್ನುವ ತುಡಿತ ಹೆಚ್ಚಾಯಿತು .. ಒಳ್ಳೆಯ ವಿಮರ್ಶೆಗೆ ಧನ್ಯವಾದಗಳು ಕಾಕ.
ಚುಕ್ಕಿಚಿತ್ತಾರ,
ನೀವು ಹೇಳುವುದು ಸರಿಯಾಗಿದೆ. ತೇಜಸ್ವಿಯವರ ಬರಹದಲ್ಲಿ ಗಡಸುತನ ಕಂಡು ಬಂದರೆ, ವಸುಧೇಂದ್ರರ ಬರಹದಲ್ಲಿ ಮೃದುತ್ವವಿದೆ. ಇಬ್ಬರೂ ವಿಭಿನ್ನ ಶೈಲಿಯ ಉತ್ತಮ ಲೇಖಕರು.
ಸುನಾಥರೆ
ವಸುಧೇಂದ್ರರ 'ಮೋಹನಸ್ವಾಮಿ' ಇನ್ನೂ ಓದಿಲ್ಲ. ಅಲ್ಲಿ ಬಂದಾಗ ಓದಬಹುದೇನೋ. ನೀವಿಲ್ಲಿ ಹೇಳಿರುವ 'ತುತ್ತ ತುದಿಯಲ್ಲಿ ಮೊತ್ತ ಮೊದಲು' ಹಾಗೂ 'ಕಿಲಿಮಂಜಾರೊ' ಕಥೆಯ ಬಗ್ಗೆ ಕೇಳಿ ಅಚ್ಚರಿ ಮತ್ತು ಗಾಭರಿಯಾಗುತ್ತಿದೆ. ಮೊನ್ನೆ ನಾನು 'ಅವಧಿ'ಯಲ್ಲಿ ಸಲಿಂಗಕಾಮದ ಬಗ್ಗೆ ಬರೆದದ್ದರಲ್ಲಿನ ಪಾತ್ರದಲ್ಲಿ ಪರ್ವತಾರೋಹಿ, ಕೊಟ್ಟ ಕೊನೆ, ತುತ್ತ ತುದಿ ಉಪಮೇಯಗಳಿವೆ. I am amazed. ಸಾಧ್ಯವಾದಾಗ ಓದಿ.
http://avadhimag.com/2014/01/15/%E0%B2%9C%E0%B3%81%E0%B2%97%E0%B2%BE%E0%B2%B0%E0%B2%BF-%E0%B2%95%E0%B3%8D%E0%B2%B0%E0%B2%BE%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%B2%E0%B2%BF%E0%B2%82/
ಇದೀಗ ಭಾಗ ೨ ಕಳಿಸಿದ್ದೇನೆ 'ಅವಧಿ'ಗೆ.
ಎಂದಿನಂತೆ ಒಳ್ಳೆಯ ಲೇಖನ ನಿಮ್ಮಿಂದ.
-ಅನಿಲ
ಅನಿಲರೆ,
ಈ ವಿಷಯದಲ್ಲಿ ಇವು ಸಹಜ ಉಪಮೆಗಳು ಎಂದು ಅನಿಸುತ್ತಿದೆ!
ನಿಮ್ಮ ಲೇಖನವನ್ನು ನಿಮ್ಮ blogನಲ್ಲಿ ಹಾಗು ‘ಅವಧಿ’ಯಲ್ಲಿ ಓದಿದೆ. ಈ ವಿಚಾರದಲ್ಲಿ ವಿಸ್ತೃತ ಚರ್ಚೆಯ ಅಗತ್ಯವಿದೆ.
ಮೋಹನಸ್ವಾಮಿಯನ್ನು ಓದಬೇಕಿದೆ. ನೀವು ವಸುಧೇಂದ್ರರ ಪುಸ್ತಕವನ್ನು ಓದುವುದರಲ್ಲಿ ಬೆಳಗಿನ ವೇಗವನ್ನು ಮೀರಿಸುವವರಿದ್ದೀರಿ ! :).
ಯಾವ ಪಂಥಕ್ಕೂ ಸೇರದೆ, ನವಿರಾದ ಭಾವದಲ್ಲಿ ಓದಿಸಿಕೊಂಡು ಸಮಾಧಾನದ ಉಸಿರು ಬಿಡಬಹುದಾದ ವಸುಧೇಂದ್ರರ ಕತೆಗಳು ಎಂದಿಗೂ ಚೆಂದವೆ.
(ನನ್ನ ಬ್ಲಾಗ್ ಅನ್ನು ಸದ್ಯದಲ್ಲೇ update ಮಾಡಲಿದ್ದೇನೆ. ಕಾದು-ಕಾದು ನಿರೀಕ್ಷಿಸಿ ಎಂದೇನೂ ಹೇಳುವುದಿಲ್ಲ :) )
ಸುಬ್ರಹ್ಮಣ್ಯರೆ,
ನಿಮ್ಮ blog postಅನ್ನು update ಮಾಡುತ್ತಿರುವ ಸುದ್ದಿ ಸಿಹಿಯಾಗಿದೆ. ಕಾಯುತ್ತಿರುತ್ತೇನೆ ಎಂದು ಹೇಳಬೇಕಿಲ್ಲವಷ್ಟೆ!
ಪ್ರಿಯ ಕಾಕಾ,
ಮೋಹನಸ್ವಾಮಿ ಕಥಾಸಂಕಲನವನ್ನೋದದೇ ಯಾವುದೇ ವಿಮರ್ಶೆಯನ್ನೋದಬಾರದೆಂದು ನಿರ್ಧರಿಸಿದ್ದೆ. ಅಂತೆಯೇ ಓದಿ ನನ್ನ ಅನಿಸಿಕೆಗಳನ್ನು ಬ್ಲಾಗಲ್ಲಿ ಹಂಚಿಕೊಂಡ ಮೇಲೇ ನಿಮ್ಮದನ್ನೂ ಓದಿದೆ. ನನ್ನ ಅಭಿಪ್ರಾಯಗಳಿಗೆ ಕೆಲವು ಪುಷ್ಟಿಕೊಡುವಂತಹ... ಗೊಂದಲಗಳಿಗೆ ಕೆಲವು ಸ್ಪಷ್ಟನೆ ಕೊಡೂವಂತಹ ವಿಮರ್ಶೆಯನ್ನು ನಿಮ್ಮಲ್ಲಿ ಕಂಡೆ. ಬಲು ಇಷ್ಟವಾಯಿತು. :)
ತೇಜಸ್ವಿನಿ,
ನಿಮ್ಮ ವಿಮರ್ಶೆಯನ್ನು ಓದಿದೆ. ವಿಭಿನ್ನ ರೀತಿಯ ಅಧ್ಯಯನ ಹಾಗು ವಿಮರ್ಶೆಯನ್ನು ಕಂಡು ಮೆಚ್ಚುಗೆಯಾಯಿತು. ನನ್ನ ಲೇಖನದ ಕೊರತೆಯೂ ಸಹ ನನಗೆ ಸ್ಪಷ್ಟವಾಯಿತು. ಧನ್ಯವಾದಗಳು.
Post a Comment