Saturday, January 4, 2014

ಗುಡಿಯ ನೋಡಿರಣ್ಣಾ, ದೇಹದ ಗುಡಿಯ ನೋಡಿರಣ್ಣಾ............ಶಿಶುನಾಳ ಶರೀಫರು



ಗುಡಿಯ ನೋಡಿರಣ್ಣಾ ದೇಹದ         
ಗುಡಿಯ ನೋಡಿರಣ್ಣಾ                    ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ                     ||ಅ.ಪ.||

ಮೂರು ಮೂಲೆಯಾ ಕಲ್ಲು ಅದರೊಳು           
ಜಾರುತಿಹದು ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ                    ||೧||

ಆರು ಮೂರನು ಕಟ್ಟಿ ಮೇಲಕೆ
ಏರುವವನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ                    ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿರಾಜ ಶಿಶುನಾಳಧೀಶನ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ                    ||೩||

ಮುನ್ನೋಟ:
ಮಾನವಶರೀರವು ವಿಜ್ಞಾನಿಗಳಿಗೆ ಒಂದು ಭೌತಿಕ ವಸ್ತು ಮಾತ್ರ. ಈ ವಸ್ತುವನ್ನು ಅವರು ತುಂಡುತುಂಡಾಗಿ ಸಿಗಿದು ಅಭ್ಯಸಿಸುತ್ತಾರೆ. ವಿರಕ್ತರಿಗೆ ಈ ದೇಹವು ಹೇಯ ವಿಷಯ. ಅಕ್ಕಮಹಾದೇವಿಯು ಇದನ್ನು ‘ಮಲಮೂತ್ರದ ಗುಂಡಿ’ ಎಂದು ಕರೆದಿದ್ದಾಳೆ. ಪುರಂದರದಾಸರೂ ಸಹ ‘ನಂಬದಿರು ಈ ದೇಹ ನಿತ್ಯವಲ್ಲ; ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ| ಎಲವು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ; ಒಳಗೆ ಮಲಮೂತ್ರಾದಿ ಕ್ರಿಮಿಗಳಿರವು’ ಎಂದು ಜರೆದಿದ್ದಾರೆ. ಕನಕದಾಸರಂತೂ ‘ಘೋರ ನರಕದ ತನುವೆಂದು ತನ್ನಲಿ ತಿಳಿದು…’ ಎಂದು ಉದ್ಗರಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಆದರೆ ಕೆಲವು ಸಾಧಕರಿಗೆ ಈ ದೇಹವು ಒಂದು ಉಪಕರಣ. ಅಷ್ಟೇ ಅಲ್ಲ, ಈ ದೇಹದಲ್ಲಿರುವದು ಪವಿತ್ರವಾದ  ಭಗವತ್ ಚೈತನ್ಯ. ಸಾಧನೆಯಿಂದಲೇ ಆ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎನ್ನುವುದು ಅವರ ಮತ. ಇಂತಹ ಸಾಧಕರನ್ನು ಯೋಗಿಗಳು ಹಾಗು ತಾಂತ್ರಿಕರು ಎಂದು ವಿಂಗಡಿಸಬಹುದು. ತಾಂತ್ರಿಕರಲ್ಲಿ ವಾಮಮಾರ್ಗಿಗಳು, ದಕ್ಷಿಣಮಾರ್ಗಿಗಳು ಹಾಗು ಮಿಶ್ರರು ಎನ್ನುವ ಮೂರು ವಿಭಾಗಗಳನ್ನು ಮಾಡಬಹುದು. ಇದಲ್ಲದೆ ಕಠಿಣ ಶಾರೀರಕ ಸಾಧನೆಯ ಹಠಯೋಗಿಗಳನ್ನೂ ನಾವು ಇಲ್ಲಿ ಕಾಣಬಹುದು.

ಅರವಿಂದ ಮಹರ್ಷಿಗಳು ಯೋಗಿಗಳಾಗಿದ್ದರು. ರಾಮಕೃಷ್ಣ ಪರಮಹಂಸರು ತಾಂತ್ರಿಕ ಸಿದ್ಧಿಯನ್ನು ಪಡೆದವರಾಗಿದ್ದರು. ಶಿಶುನಾಳ ಶರೀಫರೂ ಸಹ ಹತ್ತೊಂಬತ್ತನೆಯ ಶತಮಾನದ ಸಾಧಕವರೇಣ್ಯರಾಗಿದ್ದರು. ತಮ್ಮ ದೇಹದಲ್ಲಿಯೇ ಭಗವತ್ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಂಡ ಸಿದ್ಧರಾಗಿದ್ದರು.

ಕವನದ ತಾತ್ವಿಕ ಹಿನ್ನೆಲೆ:
ವಿಶ್ವದ ಸೃಷ್ಟಿಗೆ ಮೊದಲು ಇದ್ದಂತಹ ಒಂದೇ ಭಗವತ್ ಚೈತನ್ಯವು ಸೃಷ್ಟಿಯ ಉದ್ದೇಶದಿಂದ ಪುರುಷ ಹಾಗು ಪ್ರಕೃತಿ ಎಂದು ಎರಡು ಭಾಗವಾಯಿತು. ಪುರುಷ ಎಂದರೆ ಪುಲ್ಲಿಂಗ ಎನ್ನುವ ಅರ್ಥವಲ್ಲ. ಪುರುಷ ಎಂದರೆ the experiencing self. ( ಪುರೇ ಶೀಯತೆ ಇತಿ ಪುರುಷ: = The self who stays in a body.)

ಪ್ರಕೃತಿ ಎಂದರೆ ಸ್ತ್ರೀಲಿಂಗವಲ್ಲ. ಇದು ಪುರುಷನಿಗೆ ವಿವಿಧ ಅನುಭವಗಳನ್ನು ಕೊಡುವ ಅವಸ್ಥೆ. ಆದುದರಿಂದ ನಮ್ಮ ದೇಹವು ನಮ್ಮ ಪ್ರಕೃತಿಯಾಗಿದೆ ಹಾಗು ಇದರಲ್ಲಿ ವಾಸಿಸುವ `ನಾನು’ (= ಆತ್ಮವು) ಪುರುಷವಾಗಿದೆ. ವಿವಿಧ ಪ್ರಕೃತಿಗಳಲ್ಲಿ ಅಂದರೆ ವಿವಿಧ ಯೋನಿಗಳಲ್ಲಿ ಹಾಗು ಭಿನ್ನ ಲಿಂಗಗಳಲ್ಲಿ ಜನಿಸಿದ ಪುರುಷವು ತಾನೇ ಅದು ಎನ್ನುವ ಭ್ರಮೆಯಲ್ಲಿ ಮುಳುಗಿರುತ್ತದೆ.  ಸಾಧಕನು ತನ್ನ ಸಾಧನೆಯ ಮೂಲಕ ಪ್ರಜ್ಞೆಯ ಮೇಲಿನ ಸ್ತರಗಳಿಗೆ ಹೋಗುತ್ತಾನೆ. ಈ ಪ್ರಯಾಣದಲ್ಲಿ ಅವನಿಗೆ ಅನೇಕ ಅನುಭವಗಳು ಆಗುತ್ತವೆ; ಅನೇಕ ಸಿದ್ಧಿಗಳೂ ಬರಬಹುದು. ಸಾಧಕನಿಗೆ ದೇಹಭಾವ ಹೋಗಿ ದೇವಭಾವವು ಬರಲು ತೊಡಗುತ್ತದೆ. ಆ ಸಮಯದಲ್ಲಿ ಆತನು ಪಡೆಯುವ ಅನುಭವವೆಂದರೆ: ಈ ದೇಹವು ಪರಾಚೈತನ್ಯದ ಆವಾಸವಾಗಿದೆ ಅಂದರೆ ದೇವರ ಗುಡಿಯಾಗಿದೆ. ಇದನ್ನೇ ಶರೀಫರು ಹೀಗೆ ಹಾಡಿದ್ದಾರೆ:
“ಗುಡಿಯ ನೋಡಿರಣ್ಣಾ ದೇಹದ        
ಗುಡಿಯ ನೋಡಿರಣ್ಣಾ”    ||ಪಲ್ಲ||

ಅನುಪಲ್ಲ:
ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ           

ಪೊಡವಿಗೆ ಒಡೆಯನೆಂದರೆ ಸೃಷ್ಟಿಕರ್ತ.  ಆತನು ಈ ದೇಹದಲ್ಲಿಯೇ ಇರುವದರಿಂದ ಈ ದೇಹವು ಆತನ ದೇವಸ್ಥಾನ. ಆದರೂ ಸಹ ಆತನ ಅಸ್ತಿತ್ವವು ನಮ್ಮ ಅನುಭವಕ್ಕೆ ಬರಲಾರದು. ಆದುದರಿಂದ ಆತನು ಈ ಗುಡಿಯಲ್ಲಿ ಅಡಗಿಕೊಂಡು ವಾಸಿಸುತ್ತಿದ್ದಾನೆ. ನಮ್ಮ ಎಲ್ಲ ಕ್ರಿಯೆಗಳನ್ನು ಆತನೇ ನಿಯಂತ್ರಿಸುತ್ತಿದ್ದಾನೆ. ಆದರೂ ಸಹ ಅದು ನಮ್ಮ ಅರಿವಿಗೆ ಬರುತ್ತಿಲ್ಲ. ಅದೂ ಅಲ್ಲದೆ, ಈ ಪರಮಾತ್ಮನೇ ಮಾಯಾಪರಿಭ್ರಾಮಿತನಾಗಿ ಜೀವಾತ್ಮನಾಗಿದ್ದಾನೆ. ಇದು ಒಂದು ಅತ್ಯಂತ ವಿಸ್ಮಯದ ಸಂಗತಿ.  ಆದುದರಿಂದ ಆತನು ‘ಕಡುಬೆಡಗಿ’ನಲ್ಲಿ ಇದ್ದಾನೆ!

ಮೊದಲ ನುಡಿ:
ಮೂರು ಮೂಲೆಯಾ ಕಲ್ಲು ಅದರೊಳು           
ಜಾರುತಿಹದು ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ       

‘ಮೂರು ಮೂಲೆಯಾ ಕಲ್ಲು’ ಇದನ್ನು ಅನೇಕ ರೀತಿಗಳಲ್ಲಿ ಅರ್ಥೈಸಬಹುದು. ಬಯಲಿನಲ್ಲಿ ಒಲೆ ಹೂಡುವಾಗ, ಮೂರು ಕಲ್ಲುಗಳನ್ನು ಇಡುತ್ತಾರೆ. ಈ ಕಲ್ಲಿನಲ್ಲಿ ಅಗ್ನಿ ಧಗಧಗಿಸುತ್ತದೆ. ಇದರಂತೆಯೇ ಸ್ತ್ರೀಶರೀರದಲ್ಲಿಯೂ ಸಹ ಮೂರು ಮೂಲೆಗಳ ಯೋನಿ ಇದೆ. (ಕುಟುಂಬನಿಯಂತ್ರಣದ ಕೆಂಪು ತ್ರಿಕೋಣವನ್ನು ನೆನಪಿಸಿಕೊಳ್ಳಿರಿ!) ಈ ಯೋನಿಯಲ್ಲಿ ಜಾರುತ್ತಿರುವ ಕಲ್ಲು ಎಂದರೆ ಪುರುಷಲಿಂಗ.  ಇದು ಸ್ಥೂಲಶರೀರದ ವಿವರಣೆಯಾಯಿತು. ಆದರೆ ಪ್ರತಿಯೊಂದು ಜೀವಿಗೆ ಸ್ಥೂಲಶರೀರವಲ್ಲದೆ, ಸೂಕ್ಷ್ಮಶರೀರ ಹಾಗು ಕಾರಣಶರೀರ ಎನ್ನುವ ಇನ್ನೂ ಎರಡು ಶರೀರಗಳು ಇರುತ್ತವೆ. ನಮ್ಮ ಸೂಕ್ಷ್ಮಶರೀರವು ನಮ್ಮ ಗುಣಗಳಿಂದ ಹಾಗು ನಮ್ಮ ಕರ್ಮಗಳಿಂದ ರೂಪಿತವಾಗಿರುತ್ತದೆ. ಕಾರಣಶರೀರವೆಂದರೆ causative impulse.

ಇನ್ನು ಯೋಗಶಾಸ್ತ್ರದ ಮೇರೆಗೆ ಹೀಗೆ ಹೇಳಬಹುದು:
ಈ ಕಾರಣಶರೀರವೇ ಒಂದು ಶ್ರೀಚಕ್ರ. ಈ ಚಕ್ರದ ಮಧ್ಯದಲ್ಲಿ ಯೋನಿ ಎನ್ನುವ ತ್ರಿಕೋನವಿದೆ. ಈ ತ್ರಿಕೋನದಲ್ಲಿ ಅಗ್ನಿ ಅಡಕವಾಗಿದೆ. ಇದಕ್ಕೆ ಪೂರಕವಾಗಿ ಲಲಿತಾಸಹಸ್ರನಾಮದಲ್ಲಿ ಬರುವ ‘ತ್ರಿಕೋಣಾಂತರದೀಪಿಕಾ’ ಎನ್ನುವ ಮಾತನ್ನು ನೆನಪಿಸಿಕೊಳ್ಳಬಹುದು. ಇದರಲ್ಲಿ ಜಾರುತಿರುವ ಕಲ್ಲು ಎಂದರೆ, ಪ್ರಕೃತಿಯಲ್ಲಿ ಸದಾ ವರ್ತಿಸುತ್ತಿರುವ ಪುರುಷ (The self interacting with nature).  ಈ ಪುರುಷನನ್ನು ಶರೀಫರು ‘ಧೀರ ನಿರ್ಗುಣ’ ಎಂದು ಕರೆಯುತ್ತಾರೆ.

ಈಗ ನಾವು ಒಂದು ದೈವಶಾಸ್ತ್ರದ ಪ್ರಶ್ನೆಗೆ ಬರುತ್ತೇವೆ. ದೇವರು ಜಗತ್ತನ್ನು ಹುಟ್ಟಿಸಿದನು ಎಂದು ಅನೇಕ ಧರ್ಮಗಳು ಹೇಳುತ್ತವೆ. ಆದರೆ ಸನಾತನ ಧರ್ಮವು  ಇಷ್ಟಕ್ಕೇ ಸುಮ್ಮನಿರದೆ, ‘ಸೃಷ್ಟಿಸುವ ಅಪೇಕ್ಷೆ ದೇವರಿಗೆ ಆಗಬಾರದು; ಯಾವುದೆ ತರಹದ  ‘ಗುಣ’ ಇದ್ದವನು ದೇವರಾಗಲಾರನು; ದೇವನು ನಿರ್ಗುಣನು’ ಎಂದು ತರ್ಕಿಸುತ್ತದೆ. ಈ ಸಮಸ್ಯೆಯನ್ನು ಬಿಡಿಸಲು ಶಂಕರಾಚಾರ್ಯರು ಎರಡು ಪ್ರಮೇಯಗಳನ್ನು ಮುಂದಿಟ್ಟರು:
(೧) ದೇವನ ‘ಸ್ಫುರಣೆ’ಯಿಂದಲೇ ಸತ್ ಮತ್ತು ಅಸತ್ ಎನ್ನುವ ವಿಶ್ವಗಳ ಭಾಸವಾಗುತ್ತದೆ.
(೨) ಈ ‘ಪುರುಷ’ನು ಸ್ವಪ್ನ, ಜಾಗೃತಿ ಹಾಗು ಸುಷುಪ್ತಿ ಎನ್ನುವ ಮೂರು ಅವಸ್ಥೆಗಳಲ್ಲಿ ಮಾಯೆಯ ಭ್ರಮೆಗೆ ಒಳಗಾಗಿರುತ್ತಾನೆ.
ಇದನ್ನು ಶಂಕರಾಚಾರ್ಯರ ‘ಮಾಯಾವಾದ’ ಎಂದು ಹೇಳಲಾಗುತ್ತದೆ.

ಗೋವಿಂದ ಭಟ್ಟರು ಶಂಕರಮತದ ಅನುಯಾಯಿಗಳು. ಗೋವಿಂದಭಟ್ಟರ ಶಿಷ್ಯರಾದ ಶರೀಫರೂ ಸಹ ಇದೇ ಪಂಥದವರು. ಆದುದರಿಂದಲೇ ಅವರು ಆ ‘ಭಗವತ್ ಪುರುಷ’ನನ್ನು ‘ಧೀರ ನಿರ್ಗುಣ’ ಎಂದು ಕರೆಯುತ್ತಿದ್ದಾರೆ. ಈ ಪುರುಷನು ಸಗುಣವಾದ ಅಂದರೆ ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳಿಂದ ಸಹಿತವಾದ ಮಾಯೆಯಿಂದ ಭ್ರಮಿತನಾಗಿ ಅನೇಕ ಜನ್ಮಗಳಲ್ಲಿ  ಅನೇಕ ದೇಹಗಳನ್ನು ಪಡೆಯುತ್ತಾನೆ. ಆ ಸಮಯದಲ್ಲಿ ‘ನಾನು’ ಎನ್ನುವುದು ಪ್ರಜ್ಞೆಯ ಅತ್ಯಂತ ಕೆಳಸ್ತರದಲ್ಲಿ ಇರುತ್ತದೆ ಹಾಗು ಅತ್ಯಂತ ಮೇಲ್ ಸ್ತರದಲ್ಲಿರುವ ‘ನಾನು’ ನಿರ್ಗುಣವಾದ ಭಗವಂತನೇ ಆಗಿರುತ್ತದೆ.

ನಮ್ಮ ಅನುಭವಕ್ಕೆ ಬರುವ ಪ್ರಜ್ಞಾಲೋಕದಲ್ಲಿ ಕೆಳಸ್ತರದಲ್ಲಿರುವ ‘ನಾನು’ ವ್ಯಕ್ತವಾಗಿರುತ್ತದೆ (ಅಂದರೆ ‘ತೋರುತ್ತದೆ’) ಹಾಗು ಮೇಲ್ ಸ್ತರದಲ್ಲಿ ಅದು ನಮಗೆ ಅವ್ಯಕ್ತವಾಗಿರುತ್ತದೆ (ಅಂದರೆ ‘ಅಡಗಿ’ರುತ್ತದೆ.) ಈ ಎರಡೂ ‘ನಾನು’ಗಳು ಒಂದೇ ಆದರೂ ಸಹ ಬೇರೆಯೇ ಆಗಿರುತ್ತವೆ: ಒಂದು ಕೆಳಪ್ರಜ್ಞೆಯಲ್ಲಿರುವ ನಾನು ಅರ್ಥಾತ್ ಜೀವಾತ್ಮ ಹಾಗು ಮತ್ತೊಂದು ಮೇಲ್‍ಪ್ರಜ್ಞೆಯಲ್ಲಿರುವ ನಾನು ಅರ್ಥಾತ್ ಪರಮಾತ್ಮ.
ಪರಮಾತ್ಮನು ಕೆಳಪ್ರಜ್ಞೆಯಲ್ಲಿರುವ ನಮಗೆ ಅವ್ಯಕ್ತವಾಗಿ, ತಾನು ಮೇಲ್‍ಪ್ರಜ್ಞೆಯಲ್ಲಿ ವಾಸಿಸುವದರಿಂದ, ಅವನನ್ನು ಧರಿಸಿದ ಈ ದೇಹವು ದೇವಾಲಯವೇ ಹೌದು.
[ಟಿಪ್ಪಣಿ: ಅಲ್ಲಮಪ್ರಭುಗಳ ಒಂದು ವಚನದಲ್ಲಿ ‘ಗುಹೇಶ್ವರ ಸತ್ತ, ನಾನು ಉಳಿದೆ’ ಎನ್ನುವ ಮಾತು ಬರುತ್ತದೆ. ದೇವರು ಹಾಗು ಭಕ್ತನ ನಡುವಿನ ಅಂತರ ಅಳಿಸಿ ಹೋಗಿ, ಭಕ್ತನು ಸತ್-ಚಿತ್-ಆನಂದ ಸ್ಥಿತಿಯನ್ನು ತಲುಪಿದಾಗ ಅನಿಸುವ ಸತ್ಯವಿದು.]

ಎರಡನೆಯ ನುಡಿ:
ಆರು ಮೂರನು ಕಟ್ಟಿ ಮೇಲಕೆ
ಏರುವವನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ                   

ಶರೀಫರು ತಂತ್ರಶಾಸ್ತ್ರದಲ್ಲಿ ವಿವರಿಸಿರುವ ಸಾಧನೆಯ ಅನುಭವವನ್ನು ಹೇಳುತ್ತಿದ್ದಾರೆ.
‘ಆರು’ ಎಂದರೆ ಸೂಕ್ಷ್ಮಶರೀರದಲ್ಲಿರುವ ಷಟ್ಚಕ್ರಗಳು. ‘ಮೂರು’ ಎಂದರೆ ಮೂರು ಗ್ರಂಥಿಗಳು ಎಂದು ಆಗಬಹುದು ಅಥವಾ ಮೂರು ನಾಡಿಗಳು ಎಂದೂ ಆಗಬಹುದು.
ಆರು ಚಕ್ರಗಳು ಹೀಗಿವೆ:
(೧) ಮೂಲಾಧಾರ
(೨) ಸ್ವಾಧಿಷ್ಠಾನ
(೩) ಮಣಿಪೂರ
(೪) ಅನಾಹತ
(೫) ವಿಶುದ್ಧಿ
(೬) ಆಜ್ಞಾ
ಮೂರು ಗ್ರಂಥಿಗಳು ಎಂದರೆ:
(೧) ಮೂಲಾಧಾರ ಚಕ್ರದಲ್ಲಿ ಇರುವ ಬ್ರಹ್ಮಗ್ರಂಥಿ
(೨) ಮಣಿಪೂರ ಚಕ್ರದ ಮೇಲೆ ಇರುವ ವಿಷ್ಣುಗ್ರಂಥಿ
(೩) ಆಜ್ಞಾಚಕ್ರದಲ್ಲಿರುವ ರುದ್ರಗ್ರಂಥಿ
ಮೂರು ನಾಡಿಗಳು ಎಂದರೆ:
(೧) ಎಡಗಡೆಯಲ್ಲಿರುವ ಇಡಾ
(೨ ಬಲಗಡೆಯಲ್ಲಿರುವ ಪಿಂಗಲಾ
(೩) ಮಧ್ಯದಲ್ಲಿರುವ ಸುಷುಮ್ನಾ

ಯೋಗಸಾಧಕನು ಈ ಆರು ಚಕ್ರಗಳನ್ನು ಭೇದಿಸಿ, ಸುಷುಮ್ನಾ ನಾಡಿಯಲ್ಲಿ ಪ್ರಾಣಸಂಚಾರವನ್ನು ಮಾಡಿ, ಕೊನೆಯ ಸ್ಥಾನಕ್ಕೆ ಅಂದರೆ ಸಹಸ್ರಾರದಲ ಪದ್ಮಕ್ಕೆ ತಲುಪಿದಾಗ, ಆತನಿಗೆ ಸುನಾದ ಕೇಳುವುದು ಹಾಗು ಚಂದ್ರನಂತೆ ತಂಪಾದ ಆದರೆ ಸೂರ್ಯನಂತೆ ಪ್ರಖರವಾದ ಬೆಳಕು ಕಾಣಿಸುವುದು. ಅಲ್ಲಿ ಆತನು ಪರಮಾನಂದವನ್ನು ಅನುಭವಿಸುತ್ತಾನೆ. ಈ ಸಾವಿರದಳಗಳ ಕೊನೆಯ ಚಕ್ರದಲ್ಲಿಯೇ ಧೀರ ನಿರ್ಗುಣನು ಹಾಗು ಸಗುಣರೂಪ ಪ್ರಕೃತಿಯು ಒಂದಾಗಿ  ‘ಬಿಂದು’ಸ್ಥಲದಲ್ಲಿ ಇರುತ್ತಾರೆ. ಇದುವೇ ಪರಮ ಪ್ರಜ್ಞೆಯ ಆವಾಸಸ್ಥಾನ.

ಆರು ಮೂರುಗಳನ್ನು ಇನ್ನೂ ಒಂದು ರೀತಿಯಲ್ಲಿ ಅರ್ಥೈಸಬಹುದು. ಆರು ಎಂದರೆ ಅರಿಷಡ್ವೈರಿಗಳು (ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗು ಮತ್ಸರ ಎನ್ನುವ ಗುಣಗಳು) ಮತ್ತು ಮೂರು ಎಂದರೆ ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳು. ಇವುಗಳನ್ನು ನಿಯಂತ್ರಣಕ್ಕೆ ತಂದವನೇ ಯೋಗಸಾಧನೆಯನ್ನು ಮಾಡಲು ಶಕ್ತನಾಗುತ್ತಾನೆ.

ಕೊನೆಯ ನುಡಿ:
ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿರಾಜ ಶಿಶುನಾಳಧೀಶನ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ       
ಶರೀಫರು ಯೋಗಸಾಧನೆಯಲ್ಲಿ ಅನೇಕ ದಿನಗಳನ್ನು ಕಳೆದರು. ಈಗ ಅವರಿಗೆ ಚೈತನ್ಯದ ದರುಶನವಾಗಿದೆ. ಇದೀಗ ಸಿಹಿಯನ್ನು (=ಪಾಯಸವನ್ನು) ತಿಂದು, ಭಗವಂತನಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಸಂಭ್ರಮಿಸುವ ದಿನ ಬಂದಿದೆ. ಶರೀಫರ ಇಷ್ಟದೈವನಾದ ಶಿಶುನಾಳಾಧೀಶನೇ ತನ್ನ ಶರೀರದಲ್ಲಿಯೂ ಸಹ ಪರಬ್ರಹ್ಮರೂಪದಲ್ಲಿ ನೆಲೆಸಿದ್ದಾನೆ. ತನ್ನ ಭಕ್ತರಿಗೆ ಯೋಗಮಾರ್ಗದಲ್ಲಿ ಮುನ್ನಡೆಸುವ ಗುರು ಆತ. ಆದುದರಿಂದ ಆತನು ಯೋಗಿರಾಜ. ಆತನ ಸ್ಥಾನವಾದ ಈ ಶರೀರವೇ ಆತನ ಗುಡಿ.
ಇದು ಶರೀಫರು ಅನುಭವಿಸುತ್ತಿರುವ ಸತ್ಯ! ಈ ಸತ್ಯವನ್ನು ತಮ್ಮ ಗೀತೆಯ ಮೂಲಕ ಅವರು ನಮಗೆಲ್ಲರಿಗೂ ಸಾರುತ್ತಿದ್ದಾರೆ.

26 comments:

Badarinath Palavalli said...

ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸಾರ್.

ವರ್ಷಾರಂಭಕ್ಕೆ ಮನೋ ಚಿಕಿತ್ಸಕ ಮತ್ತು ಮನೋದ್ಧಾರಕ ಲೇಖನ ಬರೆದುಕೊಟ್ಟ ನಿಮಗೆ ನಾವು ಕೃತಜ್ಞ.

ಹೆತ್ತ ತಂದೆ ತಾಯಿಗಳನ್ನ, ನಂಬಿದ ಮಡದಿ ಮಕ್ಕಳನ್ನ ಕಡೆಗಣಿಸಿ, ಸ್ವಂತ ಮನೆ ಹಾಳು ಬೀಳಿಸಿ - ಊರ ದೇಗುಲ ನಿರ್ಮಿಸುವ ಹೆಸರಿನಲ್ಲಿ ರಸೀದಿ ಪುಸ್ತಕ ಹಿಡಿದುಕೊಂಡು, ತಮ್ಮ ಜೋಳಿಗೆ ತುಂಬಿಕೊಂಡು, ಗಂಟು ಮಾಡಿಕೊಳ್ಳುತ್ತಾ, ಊರೂರು ಅಲಿಯುವ ಕಳ್ಳ ಭಕ್ತರು ನೆನಪಾದರು.

ತಾವು ಕೊಟ್ಟಿರುವ ಗ್ರಂಥಿಗಳು, ಚಕ್ರಗಳು ಮತ್ತು ನಾಡಿಗಳ ವಿವರಣೆ ನಮಗೆ ಉಪಯುಕ್ತವಾಗಿದೆ.

(ಅಂದಹಾಗೆ, 2014ರಲ್ಲಿ 2014 ಲೇಖನಗಳು ಬರಲಿ ಮತ್ತು ನಾನು ಮತ್ತು ತಾವು 2014 ಸರ್ತಿ ಭೇಟಿಯಾಗಲಿ ಎಂಬುದು ಹಾರೈಕೆ)

sunaath said...

ಬದರಿನಾಥರೆ,
ನಿಮಗೆ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯಗಳು. ಹೊಸ ವರ್ಷದಲ್ಲಿ ನಿಮ್ಮಿಂದ ಹೊಸ ಹೊಸ ಕವನಗಳ ಸುಗ್ಗಿ ಬರಲಿ ಎಂದು ಹಾರೈಸುತ್ತೇನೆ.

ಮಂಜುಳಾದೇವಿ said...

ಸಾರ್, ನೀವು ಸರಳವಾಗಿ ವಿವರಿಸಿ ಹೇಳಿದರೂ ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಯಿತು......!!ಆದರೂ ಮತ್ತೆ ಮತ್ತೆ ಓದಿ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.....!!

sunaath said...

ಮಂಜುಳಾದೇವಿಯವರೆ,
ಈ ತತ್ವಶಾಸ್ತ್ರ ಹಾಗು ತಂತ್ರಶಾಸ್ತ್ರದ ಪರಿಭಾಷೆ ಮೊದಮೊದಲಿಗೆ ಸ್ವಲ್ಪ ಕಷ್ಟಕರವೇ ಅನ್ನಿಸುವುದು. ಒಮ್ಮೆ ಅರಿವಿಗೆ ಬಂದ ನಂತರ, ಅದು ಸರಳವಾಗಿ ಬಿಡುತ್ತದೆ.

Swarna said...

ಕಾಕಾ,
ದೇಹದ ಒಳಗೆ ಅದೆನೇನಿದೆ ?
ಶರೀಫರಿಂದ , ಶಂಕರರು ಅಲ್ಲಿಂದ ಲಲಿತಾ ಸಹಸ್ರನಾಮದವರೆಗೆ ಹರಡಿರುವ
ನಿಮ್ಮ ವಿಚಾರಗಳನ್ನು , ಜ್ಞಾನವನ್ನು ಓದುವುದೇ ಸೊಗಸು.ದೇಹವೆಂಬುದು ಗುಡಿ ಎಂಬ ಅನುಭವವಾದ ದಿನ ಜಗತ್ತು ಅದೆಷ್ಟು ಸುಂದರವಾಗಬಹುದು?
ವಂದನೆಗಳೊಂದಿಗೆ ಸ್ವರ್ಣಾ

sunaath said...

ಸ್ವರ್ಣಾ,
ದೇಹವು ದೇಗುಲವೆನ್ನುವ ಅನುಭವವು ಎಲ್ಲ ಜೀವಿಗಳಿಗೂ ಒಮ್ಮಿಲ್ಲ ಒಮ್ಮೆ ಬಂದೇ ಬರಬೇಕಲ್ಲ!

Unknown said...

ಸುನಾಥರೆ
ವಿರಕ್ತರಿಗಿಂತ ಸಾಧಕರ ನೋಟವೆ ಇಷ್ಟವಾಯಿತು -ಇದು 'ಅರ್ಥ' ವನ್ನು ಬಗೆದಂತೆ - ಅರ್ಥ(ಹಣ)ದಿಂದ ಮನುಷ್ಯ ಮೃಗವಾಗಬಲ್ಲ ಅಂತೆಯೆ ಅರ್ಥ(ಬುದ್ಧಿ)ದಿಂದ ಪರಿಪೂರ್ಣವಾಗಲೂ ಬಲ್ಲ. ಮತ್ತೆ ಮತ್ತೆ ಓದಿಕೊಳ್ಳಬೇಕಾದ ಬರಹವಿದು.
-ಅನಿಲ

sunaath said...

ಅನಿಲರೆ,
ಜೀವನದ ಅರ್ಥ ನಿಮಗೆ ಹೊಳೆದಿದೆ!

ಸಿಂಧು sindhu said...

ಪ್ರೀತಿಯ ಕಾಕಾ

ತುಂಬ ಒಳ್ಳೆಯ ಲೇಖನ. ಬಹಳ ಇಷ್ಟ ಆಯಿತು.
ಇದು ಮತ್ತು ಸೋರುತಿಹುದು ಮನಿಯ ಮಾಳಿಗಿ...ಎರಡೂ ನಂಗೆ ತುಂಬ ಇಷ್ಟವಾದ ಶರೀಫರ ಕವಿತೆಗಳು.
ನಾ ತುಂಬ ಸಣ್ಣವಳಿದ್ದಾಗ ಅಶ್ವತ್ಥರು ಶರೀಫರ ಗೀತೆಗಳಿಗೆ ರಾಗ ಸಂಯೋಜಿಸಿ ಕ್ಯಾಸೆಟ್ಟು ಮಾಡಿದ್ದರು. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ ಮತ್ತು ರತ್ನಮಾಲರ ದನಿಸಿರಿಯಲ್ಲಿ ಈ ಕಾವ್ಯಸಿರಿ ಕೇಳಿದ್ದು ನನ್ನ ಬಾಲ್ಯದ ಹೊನ್ನೆನಪುಗಳಲ್ಲೊಂದು.
ಕೆಲವೊಂದು ಗೀತೆಗಳ ಅರ್ಥ ಆ ಕಾಲದಲ್ಲಿ ಆಗದಿದ್ದರೂ ಅವುಗಳ ಮಾಧುರ್ಯ ಮತ್ತು ವಿಶಿಷ್ಟ ಪದಕಟ್ಟೋಣ ನನ್ನನ್ನು ಸೆಳೆದಿದ್ದವು.
ಈಗೀಗ ವಯಸ್ಸಾದ ಮೇಲೆ ಮತ್ತು ಅಲ್ಲಲ್ಲಿ ಹಿರಿಯರ ಮಾತುಕತೆ ಓದುಗಳ ಮೂಲಕ ಈ ಗೀತೆಗಳ ಹೂರಣದ ಸಿಹಿ, ಮತ್ತು ಗಟ್ಟಿತನ ಎರಡೂ ನನ್ನನ್ನು ಹಿಡಿದಿಟ್ಟಿವೆ.
ನೀವು ಬರೆದ ವ್ಯಾಖ್ಯಾನವಂತೂ.. ಕಬ್ಬಿನ ಹಾಲೆ. ಜಗಿಯುವ ಕಷ್ಟವೂ ಇಲ್ಲದ ಹಾಗೆ!
ಕಗ್ಗ, ಶರೀಫರ ಗೀತೆಗಳು ಮತ್ತು ಕೆಲವು ಉಪನಿಷತ್ ಸಾರ ಎಲ್ಲವೂ ಒಂದೇ ಸತ್ಯದ ಹಲವು ಆಯಾಮಗಳನ್ನ ಬೇರೆ ಬೇರೆ ಹಂತದಲ್ಲಿ ವಿವರಿಸಿ ತೋರುವ ಪರಿ, ನಮ್ಮ ನಮ್ಮದೇ ಬದುಕಿನ ಗುಟ್ಟುಗಳನ್ನ ಕೇಳಿಸಿಕೊಂಡರೆ ಮಾತ್ರ ನಮಗೆ ಉಸುರಿ ಹೋಗುವ ವೈಶಿಷ್ಟ್ಯ ಎಲ್ಲವೂ ಒಂದ್ರೀತಿಯ ಅಚ್ಚರಿ ನನಗೆ.
ಅದನ್ನೇ ನೀವು ಇಲ್ಲಿ ಹಂಚಿದೀರಿ.
ಶರಣು.

ಪ್ರೀತಿಯಿಂದ,
ಸಿಂಧು

Subrahmanya said...

ತುಂಬ ಸರಳವೆನಿಸುವ ಪದಗಳಲ್ಲಿ ಅನೇಕ ಸಂಗತಿಗಳನ್ನು ತಿಳಿಸಿಕೊಡುವ ಶರೀಫರ ಕವನಗಳನ್ನು ಅರ್ಥಮಾಡಿಕೊಳ್ಳುವುದೂ ಒಂದು ರೀತಿಯ ಸುಖವೆ.

ಪುರುಷ-ಪ್ರಕೃತಿಯ ಬಗೆಗಿನ ವಿವರಣೆಯನ್ನು ಕೊಟ್ತಿದ್ದಕ್ಕೆ ಧನ್ಯವಾದಗಳು.

ಮನಸು said...

ಕಾಕ, ಇಷ್ಟೆಲ್ಲಾ ವಿಶೇಷಗಳು ಗೊತ್ತೇ ಇರಲಿಲ್ಲ. ತತ್ವ ಮತ್ತು ತಂತ್ರಗಳ ಬಗ್ಗೆ ಬಹಳಷ್ಟು ತಿಳಿಯಬೇಕಿದೆ.

sunaath said...

ಸಿಂಧು,
ಉಪನಿಷತ್ ಅಂದರೆ ಕಬ್ಬು, ಕಗ್ಗ ಎಂದರೆ ಬೆಲ್ಲ ಹಾಗು ಶರೀಫರ ಹಾಡುಗಳೆಂದರೆ ಕಬ್ಬಿನ ಹಾಲಿದ್ದಂತೆ, ಅಲ್ಲವೆ?

sunaath said...

ಸುಬ್ರಹ್ಮಣ್ಯರೆ,
ಸರಳ ಪದಗಳಲ್ಲಿ ಸಂಕೀರ್ಣ ಅರ್ಥ ಹೇಳುವ ವಿಷಯದಲ್ಲಿ ಶರೀಫರಿಗೆ ಹಾಗು ಬೇಂದ್ರೆಯವರಿಗೆ ಹೋಲಿಕೆ ಇದೆ ಎನ್ನಬಹುದು. (ಬಹಳ ದಿನಗಳಿಂದ ಬ್ಲಾಗ್ ಬರೆದಿಲ್ಲವಲ್ಲ, ಏಕೆ?)

sunaath said...

ಮನಸು,
ಶರೀಫರು ತಮ್ಮ ಕವನಗಳನ್ನು ಬರೆಯುವಾಗ ಪ್ರತೀಕಗಳನ್ನು ಬಳಸುತ್ತಾರೆ. ಲೌಕಿಕ ಪ್ರತೀಕದಿಂದ ಅಲೌಕಿಕ ಅರ್ಥದ ಕಡೆಗೆ ಸಾಗುವುದು ಅವರ ವೈಶಿಷ್ಟ್ಯವಾಗಿದೆ!

ಕುಬೇರನಾಯ್ಕ ಎಸ್ said...

ಇಷ್ಟು ಚೆನ್ನಾಗಿರುವ ಮಾಹಿತಿ ಎಲ್ಲೂ ಸಿಕ್ಕಿರಲಿಲ್ಲ. ಧನ್ಯವಾದಗಳು...

sunaath said...

ಧನ್ಯವಾದಗಳು, ನಾಯ್ಕರೆ.

Sai Baba Astrologer said...

ಶರೀಪರು 12 ನೇ ಶತಮಾನದವರು.ಅವರ ಜೀವನ ಚರಿತ್ರೆ ನಾ ಓದಿರುವೆ.ಅವರು ಯಾವೂದೇ,ವೇದ,ಗ್ರಂಥ, ಇತ್ಯಾದಿಗಳನ್ನು ಓದಿದವರಲ್ಲ... ಆದರೂ ಈ ಗೀತೆಗೆ ತಾವು ತಮ್ಮದೇ ಜ್ಞಾನದಿಂದ ವಿಸ್ತಾರವಾದ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು.
ಆದರೆ,,,ಗೀತೆಯ ಪ್ರಾರಂಭದಿಂದ ಕೊನೆಯವರೆಗೂ ಬರುವ ಶಬ್ಧಗಳ ಅನುಸಾರ,,,ಪ್ರತಿ ಶಬ್ಧದ ಅರ್ಥವನ್ನು ಗ್ರಹಿಸುತ್ತಾ ಹೋದಾಗ,,,ಹಾಡಿನ ಅರ್ಥವೇ ಬೇರೆಯಾಗಿ ಕಾಣುತ್ತದೆ.


ತಾವೊಮ್ಮೆ ಹಾಡಿನ ಎಲ್ಲಾ ಶಬ್ಧಗಳ ಅರ್ಥ ತಿಳಿಸಬೇಕಾಗಿ ವಿನಂತಿ.🙏🙏

sunaath said...

ಧನ್ಯವಾದಗಳು,Sai Baba Astrologer ಅವರೆ. ಎಲ್ಲ ಪದಗಳ ಅರ್ಥವನ್ನು ಬರೆಯಲು ಪ್ರಯತ್ನಿಸುವೆ.

Anonymous said...

sir please if you have this summary in English please send me this my number 7619335262

sunaath said...

Dear Anonymus,
I do not have the English summary. It is not easy for me to write the summary in English. It may take more than a month for me as my health is also not robust. I shall try however. Please bear with me.

Anonymous said...

ನಮ್ಮಗೆ ಷರೀಫ್ ಅಜ್ಜಾರ...ರಸಾಯನ ಪುಸ್ತಕ ಬೇಕೂ... ನಿಮ್ಮಲ್ಲಿ.ಇದ್ರೇ helli

sunaath said...

Anonymousರೆ, ಹುಡುಕಾಡಿದೆ. ನನಗೆ ದೊರೆಯಲಿಲ್ಲ. ಕ್ಷಮಿಸಿ.

Anonymous said...

ಮೋಹದ ಬಲೆಯಲ್ಲಿ ಸಿಲುಕಿದ ಮನುಜ ಕುಲಕ್ಕೆ ಶೂನ್ಯ ಬದುಕಿನ ಕುರಿತು ....

sunaath said...

Anonymous, you are right!

Anonymous said...

ನಿಮಗೆ ತುಂಬಾ ಧನ್ಯವಾದಗಳು 🙏

Anonymous said...

ತುಂಬಾ ಅರ್ಥಪೂರ್ಣ ಹಾಡಿಗೆ ತುಂಬಾ ಸರಳವಾದ ರೀತಿಯಲ್ಲಿ ವಿವರಿಸಿದ್ದಕ್ಕೆ ಧನ್ಯವಾದಗಳು ಸರ್...!