Thursday, February 13, 2014

ಪದವಿನೋದ-೧



ಹೆಣ್ಣು ಕೂಸು ಎನ್ನುವ ಪದವು ಆಡುಭಾಷೆಯಲ್ಲಿ ‘ಹೆಂಗೂಸು’ ಎಂದಾಗಿ, ಕೊನೆಗೊಮ್ಮೆ ‘ಹೆಂಗಸು’ ಎಂದಾಯಿತು. ಗಂಡಸು ಎನ್ನುವ ಪದವೂ ಸಹ ಗಂಡುಕೂಸು ಎನ್ನುವ ಪದದ ಅಪಭ್ರಂಶವಾಗಿದೆ. ‘ಗಂಡ’ ಎನ್ನುವ ಪದವು ‘ಗಂಡು’ ಎನ್ನುವ ಪದದಿಂದ ಬಂದಿರುವುದು ಸಹಜವೇ. ಆದರೆ ಈ ಮಾರ್ಪಾಡು ಹೇಗಾಯಿತು ಅಂತೀರಾ? ಮದುವೆಯಾದ ಮೇಲೆ ಹೆಣ್ಣು ‘ಗಂಡು’ವಿನ ಬಾಲ ಕತ್ತರಿಸುತ್ತಾಳೆ ತಾನೆ? ಆದುದರಿಂದಲೇ ‘ಗಂಡು’  ‘ಗಂಡ’ನಾಗುವುದು!

ಗಂಡು ಪದದಿಂದ ಗಂಡ ಪದ ಬಂದಿದ್ದರೆ, ‘ಹೆಂಡತಿ’ ಎನ್ನುವ ಪದ ಹೇಗೆ ಬಂದಿತು? ಹೆಣ್ಣು ಪದದಿಂದ ‘ಹೆಣ್ಣತಿ’ ಪದ ಹುಟ್ಟಿ, ಅದೇ ‘ಹೇಣತಿ’ ಎಂದು ಬದಲಾಯಿಸಿರಬಹುದು. ಆದರೆ ‘ಹೇಣತಿ’ ಪದವು ‘ಹೆಂಡತಿ’ ಎಂದು ಬದಲಾಗಲು ಸಾಧ್ಯವಿಲ್ಲ. ಈಗ ನೋಡಿ, ಹೆಣ್ಣು ಕೋಳಿಗೆ ಹೇಂಟೆ ಎಂದೂ ಕರೆಯುತ್ತಾರಲ್ಲವೆ? ಈ ಹೇಂಟೆ ಎನ್ನುವ ಪದವು ಪಕ್ಷಿಗಳಲ್ಲಿಯ ಸ್ತ್ರೀವರ್ಗಕ್ಕೆ ಅನ್ವಯಿಸುತ್ತದೆ. ಅರ್ಥಾತ್ ಹೇಂಟೆ ಎಂದರೆ ಹೆಣ್ಣು. ‘ಹೇಂಟೆ+ತಿ’ ಕೂಡಿಕೊಂಡು ‘ಹೇಂಟತಿ’ ಎನ್ನುವ ಪದ ಹುಟ್ಟಿಕೊಂಡು ಅದೇ ಮುಂದೆ ‘ಹೆಂಡತಿ’ ಎಂದು ಬದಲಾಗಿದೆ.

ಆಡುಮಾತಿನಲ್ಲಿ ಪದಗಳ ಉಚ್ಚಾರವಷ್ಟೇ ಅಲ್ಲ, ವ್ಯಾಕರಣವೂ ಸಹ ಬದಲಾಗಿ ಬಿಡುತ್ತದೆ. ಉದಾಹರಣೆಗೆ ‘ಆಕಳು’. ‘ಆವು’ ಪದದ ಅರ್ಥವು ಗೋವು ಎಂದಾಗುತ್ತದೆ. ಬಹುವಚನದಲ್ಲಿ ‘ಆವು’ ಪದವು ‘ಆವುಗಳು’ ಆಗುತ್ತದೆ. ಗೊಲ್ಲರ ದೊಡ್ಡಿಯಲ್ಲಿ ಒಂದೇ ಆವು ಎಲ್ಲಿರುತ್ತದೆ? ಅಲ್ಲಿರುವವು ಆವುಗಳು. ಆವುಗಳು ಎನ್ನುವುದು ಬಹುಶಃ ಉಚ್ಚಾರಕ್ಕೆ ತೊಡಕಾಗುವುದರಿಂದ  ‘ಆವುಗಳು’ ಎನ್ನುವ ಪದವೇ ‘ಆಕಳು’ ಆಗಿ ಬದಲಾಗಿದೆ. ಇದೀಗ ಒಂದೇ ಆವಿಗೂ ನಾವು ಆಕಳು ಎಂದೇ ಕರೆಯುತ್ತೇವೆ ಹಾಗು ಅನೇಕ ಆವುಗಳಿಗೆ ಆಕಳುಗಳು ಎಂದು ಕರೆಯುತ್ತೇವೆ! ಇದೇ ರೀತಿಯಲ್ಲಿ ಮಗು ಪದದ ಬಹುವಚನವಾದ ಮಗುಗಳು ಎನ್ನುವ ಪದವು ಆಡುಮಾತಿನಲ್ಲಿ ಮಕ್ಕಳು ಎಂದಾಗಿದೆ.

ಸಿಂಪಿಗ ಎನ್ನುವ ಪದದ ಮೂಲವು ಸ್ವಾರಸ್ಯಪೂರ್ಣವಾಗಿದೆ. ಸಿಂಪು ಎಂದರೆ ಸಮುದ್ರದಾಳದ ಒಂದು ಅತಿಪುಟ್ಟ ಜೀವಿಯ ಕಠಿಣವಾದ ಹೊರಮೈ. ಉಚ್ಚಾರಭೇದದಿಂದಾಗಿ ಸಿಂಪು ಪದವನ್ನು ಚಿಪ್ಪು ಎಂದೂ ಹೇಳಬಹುದು. ಕನ್ನಡದಲ್ಲಿ ಚಿಪ್ಪು ಇದನ್ನು ಸ್ವಲ್ಪ ದೊಡ್ಡ ಪ್ರಾಣಿಗಳ ಒರಟಾದ ಹೊರಮೈಗೆ ಬಳಸುತ್ತಾರೆ, ಉದಾಹರಣೆಗೆ ಆಮೆಯ ಚಿಪ್ಪು. ತೆಂಗಿನಕಾಯಿಯ ಕವಚಕ್ಕೂ ಚಿಪ್ಪು ಎಂದೇ ಹೇಳುತ್ತಾರೆ. ಒಟ್ಟಿನಲ್ಲಿ ಚಿಪ್ಪು ಅಥವಾ ಸಿಂಪು ಅಂದರೆ ಕವಚ. ಈ ಕವಚವನ್ನು ಸಿದ್ಧಪಡಿಸುವವನೇ ಸಿಂಪಿಗ.

ಹತ್ತಿ ಬಟ್ಟೆಯ ಶೋಧನೆ ಆಗುವ ಮೊದಲು ಗಿಡದ ತೊಪ್ಪಲು ಅಥವಾ ಪ್ರಾಣಿಗಳ ತೊಗಲನ್ನೇ ಮಾನವರು ಮೇಲರಿವೆಯಾಗಿ ಧರಿಸುತ್ತಿದ್ದರು. ಅದಕ್ಕೆಂದೆ ನಮ್ಮ ದೇವಿ ಬನಶಂಕರಿಯು ‘ಶಾಕಾಂಬರಿ’ಯಾದರೆ, ಶಿವನು ಗಜಚರ್ಮಾಂಬರಧರನು! ಇಂಗ್ಲೀಶಿನಲ್ಲಿ  ಪ್ರಾಣಿಗಳ ತೊಗಲಿಗೆ hide ಎಂದೂ, coat ಎಂದೂ ಹೇಳುತ್ತಾರೆ. ಹೀಗಾಗಿ ಮಾನವರು ಧರಿಸುವ ಹೊರ ಅಂಗಿಯೂ ಸಹ ಅವರಲ್ಲಿ coat ಆಗಿರುವುದು ಸಹಜವಾಗಿದೆ. ಆದರೆ ಈ coatಅನ್ನು ಸಿದ್ಧಪಡಿಸುವವನು coater ಅಲ್ಲ; tailor! ಯಾಕಂತೀರಾ? ಇಂಗ್ಲೀಶ್ ಸಿನೆಮಾಗಳಲ್ಲಿ ಬರುವ ಹಳೆಯ ಕಾಲದ ಅತಿ ಉದ್ದನೆಯ ಕೋಟುಗಳನ್ನು ಗಮನಿಸಿರಿ. ಆ ಕೋಟಿನ ಕೊನೆಯು ಬಾಲದಂತೆ ಎರಡು ತುಂಡುಗಳಾಗಿರುವದನ್ನು ನೀವು ನೋಡಬಹುದು. ಹೀಗೆ ಕೋಟಿನ ಬಾಲವನ್ನು ಸ್ಟೈಲಿಶ್ ಆಗಿ ಸೃಷ್ಟಿಸುವವನೇ ‘ಬಾಲಿಗ, ಬಾಲಕಾರ’ ಅಥವಾ tailor!

ಬಾಲ ಎಂದಾಗ ನಮ್ಮ ‘ವಾಲಿ’ ನೆನಪಾಗುತ್ತಾನೆ. ವಾಲ ಅಂದರೆ ಬಾಲ. ಬಾಲ ಅಥವಾ ವಾಲ ಇದ್ದವನೇ ವಾಲಿ. ಇವನ ಕುಲವನ್ನೇ ರಾಮಾಯಣದಲ್ಲಿ ವಾನರಕುಲ ಎಂದು ಕರೆಯಲಾಗಿದೆ. ವಾನರ ಎಂದರೆ, ‘ವಾ+ನರ’ , ‘ಈತನು ಮನುಷ್ಯನೇ?’ ಎನ್ನುವ ಅರ್ಥ. ಅಡವಿಯಲ್ಲಿ ಮರಗಳ ಮೇಲೆ ವಾಸಿಸುತ್ತಿದ್ದ ಈ ಮನುಷ್ಯರನ್ನು ರಾಮಾಯಣ ಕಾಲದ ಆರ್ಯರು ಅಚ್ಚರಿಯಿಂದ ‘ವಾನರ’ ಎಂದು ಕರೆದಿರಬಹುದು. ಆದರೆ ಈ ವಾನರರಿಗೆ ನಿಜವಾಗಲೂ ಬಾಲ ಇರಲಿಲ್ಲ. ಇವರು ಮರಗಳ ಮೇಲೆ ವಾಸಿಸುತ್ತಿದ್ದರು. ಬಹುಶ:  ಮಂಗಗಳನ್ನು ಅನುಕರಿಸಿ, ಜಿಗಿದಾಟಕ್ಕೆ ಅನುಕೂಲವಾಗಲಿ ಎಂದು ಕೃತಕ ಬಾಲಗಳನ್ನು ಕಟ್ಟಿಕೊಂಡಿರಲೂ ಬಹುದು. ರಾವಣನು ಹನುಮಂತನನ್ನು ಬಂಧಿಸಿದಾಗ, ಆತನು ತನ್ನ ಬಾಲವನ್ನು ಬೆಳೆಸಿದನು ಎಂದು ಹೇಳುತ್ತಾರೆ. ಬಹುಶಃ ಅದು ಕೃತಕ ಬಾಲವೇ ಇರಬಹುದು. ಆದುದರಿಂದಲೇ ರಾಕ್ಷಸರು ಬಾಲಕ್ಕೆ ಬೆಂಕಿಯನ್ನು ಹಚ್ಚಿದಾಗಲೂ ಸಹ ಹನುಮಂತನಿಗೆ ಯಾವುದೇ ಅಪಾಯವಾಗಿರಲಿಕ್ಕಿಲ್ಲ.

ಕನ್ನಾಡಿನ ಅಪೂರ್ವ ಸಂಸ್ಕೃತಿ-ಸಂಶೋಧಕರಾದ ಶ್ರೀ ಶಂ.ಬಾ.ಜೋಶಿಯವರು ಮನುಷ್ಯರು ಮರಗಳ ಮೇಲೆ ವಾಸಿಸುವ ಕಾಲಖಂಡವನ್ನು ಗುರುತಿಸಿ, ಇವರನ್ನು ‘ಮರಹಟ್ಟ’ರು ಅಥವಾ ‘ಮರಹಾಡಿ’ಗಳು ಎಂದು ಕರೆದರು. ಈ ಮರಹಟ್ಟರ ದೇಶವೇ ಸಂಸ್ಕೃತೀಕರಣದ ನಂತರ ‘ಮಹಾರಾಷ್ಟ್ರ’ವಾಯಿತು! ಈ ಅನಾರ್ಯ ವಾನರರ ಭಾಷೆ ಕನ್ನಡ. ಇವರು ಆರ್ಯರ ಜೊತೆಗೆ ಸಂಭಾಷಿಸುವಾಗ ಬಳಸುವ ಮಿಶ್ರಿತ ಭಾಷೆಯನ್ನು ಆರ್ಯರು ‘ಮರಹಾಟೀ’ ಭಾಷೆ ಎಂದು ಕರೆದರು. ಈ ರೀತಿಯಾಗಿ ಮರ್ಹಾಠಿ ಭಾಷೆ ಹುಟ್ಟಿಕೊಂಡಿತು. ಆಧುನಿಕ ಕಾಲದಲ್ಲಿ ಈ ಮರಹಾಡಿ ಭಾಷೆಯು ಅಥವಾ ಮರಹಟ್ಟಿ ಭಾಷೆಯು ಅರ್ಥಾತ್ ಮರ್ಹಾಠಿ ಭಾಷೆಯು ಮರಾಠೀ ಎಂದು ಬದಲಾಗಿದೆ. ಈ ಮರಹಟ್ಟರ ಬಹುಪಾಲು ಜನ ಮೊದಲು ಕನ್ನಡಿಗರೇ. ಆರ್ಯಸಂಪರ್ಕದಿಂದಾಗಿ ಮರಾಠಿಗರಾದರಷ್ಟೆ.

ಆರ್ಯರು ಬರುವ ಮೊದಲು ಭಾರತದಲ್ಲಿ ಕುದುರೆಗಳು ಇರಲಿಲ್ಲ. In fact ಕುದುರೆ ಎನ್ನುವ ಕನ್ನಡ ಪದವು ಈಜಿಪ್ತಿನ hytr ಎನ್ನುವ ಪದದಿಂದ ಹುಟ್ಟಿದೆ ಎಂದು ಹೇಳುತ್ತಾರೆ. ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿದ್ದ ಅನಾರ್ಯರು ಕುದುರೆಯ ಬದಲಾಗಿ ಗೂಳಿಗಳನ್ನು ಸಂಚಾರಕ್ಕಾಗಿ ಬಳಸುತ್ತಿದ್ದರು. ನಮ್ಮ ಶಿವನ ಪ್ರೀತಿಯ ವಾಹನವು ವೃಷಭವೇ ತಾನೆ? ಆರ್ಯಭಾಷೆಯಲ್ಲಿ ಕುದುರೆಗೆ ಆಶ್ವ ಎಂದು ಕರೆಯುತ್ತಾರೆ. ಘೋಟಕ ಎನ್ನುವುದು ಆಶ್ವದ ಬದಲಿ ಪದ. ಬೇಂದ್ರೆಯವರ ಕವನವೊಂದರ ಸಾಲುಗಳು ಹೀಗಿವೆ:

                                    ಘುರ್ರೆ ಘುರ್ರೆ ಘೋಟಕಾ
                                    ನಡೆ ಅಂತಃಸ್ಫೋಟಕಾ!

ಬೇಂದ್ರೆಯವರ ಪದಚಮತ್ಕಾರವನ್ನು ಈ ಸಾಲುಗಳಲ್ಲಿ ಕಾಣಬಹುದು. ಘೋಟಕ ಪದದಿಂದಲೇ ‘ಘೋಡಾ’ ಎನ್ನುವ ಹಿಂದೀ ಪದ ಬಂದಿದೆ. ಘುರ್ರೆ ಇದು ಕುದುರೆಯ ಕೆನೆತದ ಧ್ವನಿ. ಘುರ್ರೆ ಇದು ಕುರ್ರೆ ಎಂದು ಬದಲಾಗಿ, ತೆಲುಗು ಭಾಷೆಯ ಕುರ್ರಂ ಎಂದಾಗುತ್ತದೆ. ತೆಲುಗಿನಲ್ಲಿ ಕುರ್ರಂ ಎಂದರೆ ಕುದುರೆ! ಈ ರೀತಿಯಾಗಿ ಬೇಂದ್ರೆಯವರು ಕುದುರೆಯ ಅರ್ಥದ ಸಂಸ್ಕೃತ ಪದಗಳನ್ನು ಬಳಸುತ್ತಲೇ, ಹಿಂದಿ ಹಾಗು ತೆಲಗು ಭಾಷೆಯ ಛಾಯಾಪದಗಳನ್ನು ಸಹ ಸೂಚಿಸುತ್ತಾರೆ!

ಬೇಂದ್ರೆಯವರ ಪದಭಾಂಡಾರವೇ ಅಪಾರವಾದದ್ದು. ಅವರ ಕವನವೊಂದರ ಈ ಸಾಲುಗಳನ್ನು ನೋಡಿರಿ:
                                   
                                    ತಾಯಿ ಕನಿಮನಿಯೆ, ನೀ ಅಕ್ಕ ಅಕ್ಕರತೆಯೆ,
                                    ಬಾ ಎನ್ನ ತಂಗಿ, ಬಾ ಮುದ್ದು ಬಂಗಾರವೆ…

ಈ ‘ಕನಿಮನೆ’ಯ ಅರ್ಥವನ್ನು ನಾನು ಪದಕೋಶಗಳಲ್ಲಿ ಹುಡುಕಬೇಕಾಯಿತು. ‘ಕನಿ’ ಇದರ ಅರ್ಥ ಪ್ರೀತಿ, ವಾತ್ಸಲ್ಯ ಇತ್ಯಾದಿ. ಆದುದರಿಂದ ‘ಕನಿಮನೆ’ ಎಂದರೆ ಪ್ರೀತಿಯ ಭಾಂಡಾರ. ಎಷ್ಟೋ ವರ್ಷಗಳ ನಂತರ ಪತ್ರಿಕೆಗಳಲ್ಲಿ ಕರುಣಾನಿಧಿಯವರ ಮಗಳ ಹೆಸರನ್ನು ಓದಿದೆ: ‘ಕನಿಮೋಳಿ’ ಎಂದು. ಥಟ್ಟನೆ ನೆನಪಾದದ್ದು ಬೇಂದ್ರೆಯವರ ಕನಿಮನೆ. ಕನಿಮೋಳಿ ಹೆಸರಿನ ಅರ್ಥ ಆಗ ಹೊಳೆಯಿತು. ಕನಿ ಎಂದರೆ ಪ್ರೀತಿ. ಮೋಳಿ ಎನ್ನುವ ಪದಕ್ಕೆ ತಮಿಳು ಹಾಗು ಮಲೆಯಾಳಂದಲ್ಲಿ ಹೆಣ್ಣು ಮಗು ಎನ್ನುವ ಅರ್ಥವಿದೆ. ಕನ್ನಡದಲ್ಲಿ ‘ಪೋರಿ’ ಎಂದು ಹೇಳಿದಂತೆ. ಆದುದರಿಂದ ಕನಿಮೋಳಿ ಎನ್ನುವುದರ ಅರ್ಥ: ಪ್ರೀತಿಯ ಪುಟ್ಟಿ ಎಂದು!
ಆಧುನೀಕರಣದ ಜೊತೆಗೆ ನಮ್ಮ ಬದುಕಿನ ಪದ್ಧತಿಯೇ ಬದಲಾಯಿತಲ್ಲವೆ? ಮೊದಲೆಲ್ಲ ನಮ್ಮ ಹಳ್ಳಿಗಳಲ್ಲಿ ‘ಅಲ್ಲಿಪಾಕ’ ಎನ್ನುವ ಸಣ್ಣ ತಿನಿಸನ್ನು ಚಪ್ಪರಿಸುತ್ತಿದ್ದರು. ಪೇಪರ್‍ಮೆಂಟುಗಳು ಬಂದ ಮೇಲೆ, ಅಲ್ಲೀಪಾಕ ಹಳ್ಳ ಹಿಡಿಯಿತು. ಆದರೆ ಅಲ್ಲಿಪಾಕ ಹಾಗು ಪೇಪರ್‍ಮೆಂಟುಗಳಲ್ಲಿ ಭಾಷಾಸಾಮ್ಯತೆ ಹಾಗು ರಚನಾಸಾಮ್ಯತೆ ಇವೆ. ಅಲ್ಲಾ ಪದದ ಅರ್ಥ ಹಸಿ ಶುಂಠಿ. ಈ ಹಸಿ ಶುಂಠಿಯನ್ನು ಬೆಲ್ಲದ ಪಾಕದ ಜೊತೆಗೆ ಬೆರಸಿ ತಯಾರಿಸಿದ್ದ ತಿನಿಸೇ ಅಲ್ಲೀಪಾಕ. ಪೇಪರ್‍ಮೆಂಟ ಎನ್ನುವುದು pepper-mint ಅರ್ಥಾತ್ pepper ಅಂದರೆ ಮೆಣಸಿನ ಕಾಳನ್ನು ಸಕ್ಕರೆಯ ಪಾಕದಲ್ಲಿ mint ಅಂದರೆ ಅಚ್ಚು ಹಾಕಿ ತಯಾರಿಸುವ ತಿನಿಸು. ಆಧುನಿಕ ಪೇಪರಮೆಂಟಿನ ಹೊರಗಿನ ಬೆರಗಿಗೆ ಮರುಳಾಗಿ ನಮ್ಮವರು ಪೌಷ್ಟಿಕವಾದ ಅಲ್ಲೀಪಾಕವನ್ನು ಕೈಬಿಟ್ಟರು.

ಅಂದ ಹಾಗೆ ‘ಆಧುನೀಕರಣ’ ಎನ್ನುವ ಪದವು ಸರಿಯಾದದ್ದು; `ಆಧುನಿಕೀಕರಣ’ ತಪ್ಪಾದ ಪದ. ಏಕೆಂದರೆ, ಅಧುನಾ ಎನ್ನುವ ಸಂಸ್ಕೃತ ಪದದ ಅರ್ಥ: `ಈಗ, now’ ಎನ್ನುವುದು. ಆಧುನಿಕ ಪದದ ಅರ್ಥ up to date ವ್ಯಕ್ತಿ ಎಂದಾಗುತ್ತದೆ. ಆಧುನೀಕರಣವೆಂದರೆ keeping up to date!

‘ನಿಮ್ಮ ದೇಹಸ್ಥಿತಿಯು ಚೆನ್ನಾಗಿದೆಯೆ’ ಎಂದು ಕೇಳಲು ಕನ್ನಡಿಗರು ‘ ಏನ್ರೀ, ಆರೋಗ್ಯವಾಗಿದ್ದೀರಾ?’ ಎಂದು ಕೇಳುವರು. ಇಂಗ್ಲೀಶಿನಲ್ಲಿ ಕೇಳುವವರು ‘How is your health?’ ಎಂದು ಕೇಳುವರು. ಈ ಪದಗಳ ಮೂಲವನ್ನು ಪರೀಕ್ಷಿಸಿದರೆ, ಎರಡೂ ಧೋರಣೆಗಳಲ್ಲಿಯ ಭೇದವು ಅಚ್ಚರಿಯನ್ನು ಹುಟ್ಟಿಸುತ್ತದೆ. ‘ಆರೋಗ್ಯ’ ಪದದ ಅರ್ಥವು ‘ರೋಗ ಇಲ್ಲದೆ ಇರುವುದು’ ಎಂದಾಗುತ್ತದೆ. ‘Health’ ಪದವು Heal ಅಂದರೆ ‘ಗುಣಪಡಿಸು’ ಎನ್ನುವ ಪದದಿಂದ ಬಂದಿದೆ. ಮೊದಲು ರೋಗವು ಇದ್ದರೆ ಮಾತ್ರ ಗುಣಪಡಿಸಲು ಸಾಧ್ಯ, ಅಲ್ಲವೆ!?

ಇಂತಹ ಧೋರಣಾಭೇದವನ್ನು ಮದುವೆಯ ನಿಶ್ಚಯದಲ್ಲೂ ನೋಡಬಹುದು. ಮದುವೆಯನ್ನು ಒಮ್ಮೆನಿಶ್ಚಯಿಸಿದ ಬಳಿಕ ಅದನ್ನು ರದ್ದು ಪಡಿಸುವಂತಿಲ್ಲ. ಇದು ನಮ್ಮ ‘ನಿಶ್ಚಯ’ ಪದದ ಅರ್ಥ. ಉತ್ತರ ಭಾರತದವರು ನಿಶ್ಚಯಕಾರ್ಯವನ್ನು ‘ಮಾಂಗನಿ’ ಎಂದು ಕರೆಯುತ್ತಾರೆ. ‘ಮಾಂಗನಾ’ ಎನ್ನುವ ಹಿಂದಿ ಪದದ ಅರ್ಥ ‘ಬೇಡುವುದು’. ವರಪಕ್ಷದವರು ವರದಕ್ಷಿಣೆಯನ್ನು ಬೇಡುತ್ತಾರೆ. ಅದು ಒಪ್ಪಿಗೆಯಾದರೆ ಮಾತ್ರ ಮದುವೆ ನಡೆಯುವುದು. ಆದುದರಿಂದ ಅವರಲ್ಲಿ ನಿಶ್ಚಯವು ‘ಮಾಂಗನಿ’ ಆಗಿದೆ.  ಪಾಶ್ಚಿಮಾತ್ಯರಲ್ಲಿ ಇದು engagement. ಗಂಡು ಹಾಗು ಹೆಣ್ಣು ಒಂದು ಕರಾರಿಗೆ ಒಳಪಡುತ್ತಾರೆ. ಒಬ್ಬರಿಗೆ engage ಆದವರು ಬೇರೊಬ್ಬರನ್ನು ಮದುವೆಯಾಗಲಾರರು.

ನಾವು ಬಳಸುವ ಪದಗಳು ನಮ್ಮ  ಸಾಂಸ್ಕೃತಿಕ ಭೇದಕ್ಕೆ ಹಿಡಿದ ಕನ್ನಡಿಯಾಗಿವೆ!

Tuesday, February 4, 2014

ಯೋಗೇಶ ಮಾಸ್ಟರ ರಚಿಸಿದ ‘ಢುಂಢಿ’ ಕಾದಂಬರಿ


ಯೋಗೇಶ ಮಾಸ್ಟರ ರಚಿಸಿದ ‘ಢುಂಢಿ’ ಕಾದಂಬರಿಯು ಬಿಡುಗಡೆಯ ಭಾಗ್ಯವನ್ನೇ ಪಡೆಯಲಿಲ್ಲ. ಅನಂತಮೂರ್ತಿಯವರು ಅದನ್ನು ಲೋಕಾರ್ಪಣೆಗೈಯುವ ಕಾರ್ಯಕ್ರಮ ನಡೆದಾಗಲೇ, ಅದರ ವಿರುದ್ಧವಾಗಿ ಪ್ರತಿಭಟನೆ ನಡೆದದ್ದರಿಂದ ಕಾರ್ಯಕ್ರಮವು ಸ್ಥಗಿತವಾಯಿತು.

ಪುರಾತನ ಭಾರತದ ಇತಿಹಾಸದ ಬಗೆಗೆ ಇದಮಿತ್ಥಂ ಎಂದು ಹೇಳುವ ಹಾಗಿಲ್ಲ. ಆಧುನಿಕ ಸಂಶೋಧಕರು ಪುರಾಣ ಹಾಗು ಮಹಾಕಾವ್ಯಗಳನ್ನು ಆಧರಿಸಿ ಇತಿಹಾಸದ ಪುನರ್ರಚನೆಯನ್ನು ಮಾಡಲು ಪ್ರಯತ್ನಿಸಿದ್ದಾರೆ. ಇದೇ ಕಾರ್ಯವನ್ನು ಲೇಖಕರೂ ಸಹ ಮಾಡಿದ್ದಾರೆ. ಇರಾವತಿ ಕರ್ವೆಯವರ ‘ಯುಗಾಂತ’ ಕಾದಂಬರಿಯನ್ನು ಹಾಗು ಎಸ್.ಎಲ್.ಭೈರಪ್ಪನವರ ‘ಪರ್ವ’ ಕಾದಂಬರಿಯನ್ನು ಇಲ್ಲಿ ಉದಾಹರಿಸಬಹುದು. ಆದರೆ ಸೃಜನಶೀಲ ಸಾಹಿತ್ಯದ ಈ ಲೇಖಕರು ಕೇವಲ ಇತಿಹಾಸದ ಮರುಸೃಷ್ಟಿಯನ್ನಷ್ಟೇ ತಮ್ಮ ಉದ್ದೇಶವನ್ನಾಗಿ ಇಟ್ಟುಕೊಳ್ಳದೆ, ಜೀವನದ ಮೌಲ್ಯಗಳ ಹುಡುಕಾಟವನ್ನೂ ಈ ಕಾದಂಬರಿಗಳ ಮೂಲಕ ಮಾಡಿದ್ದಾರೆ.

ಯೋಗೇಶ ಮಾಸ್ಟರರ ‘ಢುಂಢಿ’ ಕಾದಂಬರಿ ಸಹ ಇಂತಹ ಒಂದು ಕೃತಿಯಾಗಿದೆ. ಈ ಕಾದಂಬರಿ ಕೆಲವು ಗ್ರಹಿಕೆಗಳನ್ನು ಆಧರಿಸಿದೆ:
ಭಾರತದ ಮೇಲೆ ಆರ್ಯ ಜನಾಂಗದ ಆಕ್ರಮಣ ಜರುಗಿತು. ಆ ಸಮಯದಲ್ಲಿ ಭಿನ್ನ ಭಿನ್ನ ಅನಾರ್ಯ ಜನಾಂಗಗಳು ಹಿಮಾಲಯದ ಕೆಳಭಾಗದಲ್ಲಿ ಹಾಗು ಆರ್ಯಾವರ್ತದಲ್ಲಿ ವಾಸಿಸುತ್ತಿದ್ದವು. ಈ ಆರ್ಯ ಹಾಗು ಅನಾರ್ಯ ಕುಲಗಳ ನಡುವೆ ಕೆಲವೊಮ್ಮೆ ತಿಕ್ಕಾಟ, ಕೆಲವೊಮ್ಮೆ ಹೊಂದಾಣಿಕೆ ಸಂಭವಿಸಿದವು. ಕಾಲಾಂತರದಲ್ಲಿ ಆರ್ಯ ಹಾಗು ಅನಾರ್ಯ ಜನಾಂಗಗಳು ಒಂದರೊಡನೊಂದು ಕೂಡಿಕೊಂಡವು. ಎಲ್ಲ ಇತಿಹಾಸಕಾರರೂ ಈ ಗ್ರಹಿಕೆಗಳನ್ನು ಒಪ್ಪುತ್ತಾರೆ ಎಂದಲ್ಲ; ಕೆಲವು ಇತಿಹಾಸಕಾರರು ಒಪ್ಪುತ್ತಾರೆ, ಕೆಲವರು ಒಪ್ಪುವದಿಲ್ಲ.

‘ಢುಂಢಿ’ ಕಾದಂಬರಿಯು ಆ ಸಮಯದಲ್ಲಿ ಇದ್ದಂತಹ ಅನಾರ್ಯ ಕುಲಗಳ ಬದುಕಿನ ರೀತಿ ಹಾಗು ಆರ್ಯಕುಲಗಳ ಜೊತೆಗಿನ ಅವರ ಸಂಬಂಧಗಳನ್ನು ವಿವರಿಸಲು ಪ್ರಯತ್ನಿಸಿದೆ. ಆರ್ಯಕುಲಗಳು ನಗರಿಗಳನ್ನು ಕಟ್ಟಿಕೊಂಡು ಹೆಚ್ಚಿನ ಸೌಲಭ್ಯಗಳೊಂದಿಗೆ ಜೀವಿಸುತ್ತಿದ್ದವು. ಅನಾರ್ಯಕುಲಗಳು ಅಡವಿಗಳಲ್ಲಿ ವಾಸಿಸುತ್ತಿದ್ದವು. ಅವರದು ಕಾಡಿನ ಬದುಕು. ಆರ್ಯರಲ್ಲಿ ಚಿಕ್ಕಪುಟ್ಟ ರಾಜ್ಯಗಳು ಹಾಗು ರಾಜಪ್ರಭುತ್ವವು ಈಗಾಗಲೇ ಬಂದು ಬಿಟ್ಟಿತ್ತು. ಅನಾರ್ಯಕುಲಗಳಲ್ಲಿ ವಿವಿಧ  ಗಣಗಳು ಅಡವಿಗಳಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದು, ಗಣದಲ್ಲಿಯ ಬಲಿಷ್ಠ ಮುಂದಾಳು ಒಬ್ಬನು ಆ ಗಣದ ‘ಗಣೇಶ’ನಾಗುತ್ತಿದ್ದನು. (ಉತ್ತರಪೂರ್ವ ಭಾರತದಲ್ಲಿ ಅನೇಕ ಗಣರಾಜ್ಯಗಳು ಇದ್ದುದನ್ನು ನೆನೆಯಬಹುದು.) ಆರ್ಯರು ತಮ್ಮ ನಾಡನ್ನು ವಿಸ್ತರಿಸುತ್ತಿದ್ದಂತೆ, ಅನಾರ್ಯರು ಕಾಡಿನಲ್ಲಿ ಒಳಒಳಗೆ ದೂರ ಸರಿಯುತ್ತಿದ್ದರು. ಇದು ಈ ಕಾದಂಬರಿಯಲ್ಲಿ ಬರುವ ರಾಜಕೀಯ ವಿಶ್ಲೇಷಣೆ.

ಆರ್ಯಕುಲಗಳಲ್ಲಿ  ವಿವಾಹದ ಅನೇಕ ಮಾದರಿಗಳು ರೂಢವಾಗತೊಡಗಿದ್ದವು. ಅನಾರ್ಯ ಕುಲಗಳಲ್ಲಿ ಗಂಡು ಹೆಣ್ಣುಗಳ ನಡುವೆ ಸ್ವಚ್ಛಂದ ಕೂಟವಿತ್ತು. ಅನಾರ್ಯ ಸ್ತ್ರೀಯರು ಬಲಿಷ್ಠರಾಗಿದ್ದು, ಸ್ತ್ರೀಗಣಗಳು ಯುದ್ಧಸಿದ್ಧರಾಗಿರುತ್ತಿದ್ದರು. ಕೆಲವು ಸಲ ಆರ್ಯಕುಲಗಳು ಹಾಗು ಅನಾರ್ಯ ಕುಲಗಳು ಇತರ ಕುಲಗಳ ವಿರುದ್ಧ ಜೊತೆಯಾಗಿ ಹೋರಾಡಿದ್ದು ಇದೆ. ಈ ಕಾಳಗಗಳಲ್ಲಿ ಅನಾರ್ಯ ಸ್ತ್ರೀಗಣಗಳೂ ಸಹ ಭಾಗವಹಿಸಿವೆ. ಇದು ಯೋಗೀಶರು ಮಾಡಿರುವ ಸಾಮಾಜಿಕ ಸ್ಥಿತಿಯ ವಿಶ್ಲೇಷಣೆ.

ಮೇಲಿನ ಗ್ರಹಿಕೆಗಳನ್ನು ಆಧರಿಸಿ ಯೋಗೀಶ ಮಾಸ್ಟರರು ‘ಢುಂಢಿ’ ಕಾದಂಬರಿಯನ್ನು ಹೆಣೆದಿದ್ದಾರೆ. ಕಾದಂಬರಿಯು ಶಂಬರ ಎನ್ನುವ ಓರ್ವ ಒಬ್ಬಂಟಿ ಅನಾರ್ಯನ ಕಥೆಯಾಗಿ ಪ್ರಾರಂಭವಾಗಿದೆ. ಶಂಬರನು ಒಂಟಿ ತಾಯಿಯ ಮಗ. ಇವರಿಬ್ಬರು ನಗರಕ್ಕೆ ಹತ್ತಿರವಿರುವ ಅರಣ್ಯದಲ್ಲಿ ವಾಸಿಸುತ್ತಿರುತ್ತಾರೆ. ಶಂಬರನ ತಾಯಿ ಅಲ್ಲಿ ಹಾಯ್ದು ಹೋಗುವ ಪ್ರವಾಸಿಗಳಿಗೆ ಊಟೋಪಚಾರ ಹಾಗು ವಸತಿಯನ್ನು ಕಲ್ಪಿಸಿ ತನ್ನ ಬದುಕು ಸಾಗಿಸುತ್ತಿರುತ್ತಾಳೆ. ಅಲ್ಲದೆ ಅವಳ ಬಳಿ ಸ್ವಲ್ಪ ಗೋವುಗಳೂ ಇರುತ್ತವೆ. ಹೀಗಿರಲಾಗಿ, ಶಂಬರನ ತಾಯಿಯ ಗೆಳತಿಯೊಬ್ಬಳು ಅಲ್ಲಿಗೆ ಬರುತ್ತಾಳೆ. ತನ್ನ ತವರುನಾಡಿನಲ್ಲಿ (ಪೂರ್ವೋತ್ತರದಲ್ಲಿ) ತನ್ನ ಅಗತ್ಯವಿರುವುದನ್ನು ಅರಿತುಕೊಂಡ ಅವಳು ಚಿಕ್ಕ ವಯಸ್ಸಿನ ಶಂಬರನನ್ನು ಬಿಟ್ಟು ತನ್ನ ತವರುನಾಡಿಗೆ ಹೊರಟು ಹೋಗುತ್ತಾಳೆ. ಶಂಬರನು ತರುಣನಾದ ಬಳಿಕ ಒಂದು ಅನುಕೂಲ ಸಂದರ್ಭ ಒದಗಿದಾಗ, ತನ್ನ ತಾಯಿಯನ್ನು ಹುಡುಕಲು ಹೊರಡುತ್ತಾನೆ. ಆ ಸಮಯದಲ್ಲಿ ಆತನು ಅನೇಕ ಅನಾರ್ಯ ಹಾಗು ಆರ್ಯಕುಲಗಳ ವಸತಿಯನ್ನು ದಾಟುತ್ತಾನೆ. ಇಲ್ಲಿಯವರೆಗೆ ಹೊರ ಜಗತ್ತಿನ ಹತ್ತಿರದ ಪರಿಚಯವಿರದ ಶಂಬರನು ಇದೀಗ ಅವರೆಲ್ಲರ ಜೀವನಪದ್ಧತಿಗಳನ್ನು ನೋಡುತ್ತಾನೆ. ಇದೇ ಸಮಯದಲ್ಲಿ ಶಂಬರನಿಗೆ ಅನಾರ್ಯಕುಲದ  ವದೀರಜ್ಜ ಎನ್ನುವ ಹಿರಿಯನೊಬ್ಬನ ಪರಿಚಯವಾಗುತ್ತದೆ. ಈ ಹಿರಿಯನು ಶಂಬರನಿಗೆ ‘ಢುಂಡಿ ಗಣೇಶ’ನ ಪೂರ್ವಾಪರ ವಿವರಗಳನ್ನು ಹೇಳುತ್ತಾನೆ.

ಈ ರೀತಿಯಾಗಿ ಢುಂಢಿ ಗಣೇಶನ ಕಥೆಯು ಹಿನ್ನೋಟದಲ್ಲಿ ಪ್ರಾರಂಭವಾಗುತ್ತದೆ. ಪರ್ವತರಾಜನ ಮಗಳು ಪಾರ್ವತಿ ಶಿವನನ್ನು ಮೆಚ್ಚಿ ಮದುವೆಯಾಗಿರುತ್ತಾಳೆ. ಈ ಶಿವನು ತಾಂತ್ರಿಕ ಯೋಗಿ, ರತಿಕ್ರೀಡೆಯಲ್ಲಿ ವೀರ್ಯಪತನವನ್ನು ಮಾಡುತ್ತಿರುವದಿಲ್ಲ. ಹೀಗಾಗಿ ಪಾರ್ವತಿಗೆ ಸಂತಾನವಾಗಲಿಲ್ಲ. ಅವಳು ತನ್ನ ಗೆಳತಿಯ ಮಗನೊಬ್ಬನನ್ನು ಪಾಲಿಸಲು ಇಚ್ಛಿಸುತ್ತಾಳೆ. ಆ ಶಿಶು ದೊಡ್ಡವನಾದ ಮೇಲೆ ಪಾರ್ವತಿಗೆ ಲಭ್ಯನಾಗುತ್ತಾನೆ. ಅವನೇ ನಮಗೆಲ್ಲರಿಗೂ ಚಿರಪರಿಚಿತನಾದ ದೇವರು: ಗಣೇಶ. ಪಾರ್ವತಿಯು ಆತನಿಗೆ ಢುಂಢಿ ಎಂದು ನಾಮಕರಣ ಮಾಡಿ  ಅವನನ್ನು ಎಲ್ಲ ಗಣಗಳ ಅಧಿಪತಿಯನ್ನಾಗಿ ಪಟ್ಟ ಕಟ್ಟಿ ‘ಗಣೇಶ’ನನ್ನಾಗಿ ಮಾಡುತ್ತಾಳೆ.

ಶಂಬರ ಹಾಗು ವದೀರಜ್ಜರ ಪ್ರವಾಸಸಮಯದಲ್ಲಿ ಈ ಕಥೆ ಮುಂದುವರಿಯುತ್ತದೆ. ಪ್ರವಾಸಸಮಯದಲ್ಲಿ ಶಂಬರನು ಬದುಕಿನ ಭಿನ್ನ ರೀತಿಗಳ ಅನೇಕ ಕುಲಗಳನ್ನು ನೋಡುತ್ತಾನೆ. ಈ ಕುಲಗಳ ರಾಜಕೀಯ ಸ್ನೇಹ ಹಾಗು ವೈರಗಳ ಪರಿಚಯ ಆತನಿಗಾಗುತ್ತದೆ. ಇದೇ ರೀತಿಯಾಗಿ ಕಾದಂಬರಿ ಮುಂದುವರೆಯುತ್ತದೆ.

ಈ ಕಾದಂಬರಿಯಲ್ಲಿ ಎರಡು ವಿಷಯಗಳನ್ನು ಪೂರ್ವಾಗ್ರಹವಿಲ್ಲದೆ ಗಮನಿಸಬೇಕು:
(೧) ಕಾದಂಬರಿಯಲ್ಲಿ ಬಳಸಲಾದ ಪೂರ್ವಗ್ರಹಿಕೆಗಳು ಹಾಗು ಕಲ್ಪನೆಗಳು ಒಪ್ಪಬಹುದಾದಂತಹವೆ?
(೨) ಕಾದಂಬರಿಯ ರಚನಾವಿಧಾನ ಹೇಗಿದೆ?

ಯೋಗೀಶ ಮಾಸ್ಟರರು ತಮ್ಮ ಮುನ್ನುಡಿಯಲ್ಲಿ ಹೇಳಿದ ಮೇರೆಗೆ, ಅವರು ಪೂರ್ವೇತಿಹಾಸದ ವಿದ್ಯಾರ್ಥಿಗಳಲ್ಲ; ಹೀಗಾಗಿ ಅವರ ಗ್ರಹಿಕೆಗಳಲ್ಲಿ ಹಾಗು ಕಲ್ಪನೆಗಳಲ್ಲಿ ತಪ್ಪುಗಳು ನುಸಳಿರಬಹುದು. ಈ ಸಂದರ್ಭದಲ್ಲಿ ನಾವು ಎಸ್. ಎಲ್. ಭೈರಪ್ಪನವರು ಬರೆದ ‘ಪರ್ವ’ ಕಾದಂಬರಿಯನ್ನು ನೆನಪಿಸಿಕೊಳ್ಳೋಣ. ಭೈರಪ್ಪನವರಿಗೆ ಅಲ್ಲಿ ಒಂದು ಅನುಕೂಲತೆ ಇದೆ. ಮಹಾಭಾರತದ ಕಥೆಯ ಬಗೆಗೆ ಭಾರತದಲ್ಲಿ ಸರ್ವಸಾಧಾರಣವಾದ ಒಂದು ತಿಳಿವು ಇದೆ, ಒಂದು ನಿಖರತೆ ಇದೆ. ಆದುದರಿಂದ ಭೈರಪ್ಪನವರು ಆ ಕಥೆಯನ್ನು ಆಮೂಲಾಗ್ರವಾಗಿ ಹೆಣೆಯಬೇಕಾಗಿಲ್ಲ. ಯಾವ ಘಟನೆಗಳನ್ನು ಜನ ದೈವಿಕ ಎಂದು ಭಾವಿಸಿರುವರೊ, ಆ ಘಟನೆಗಳಿಗೆ ಭೈರಪ್ಪನವರು ಲೌಕಿಕ ವಾಸ್ತವದ ವಿವರಣೆಗಳನ್ನು ನೀಡಿದರೆ ಸಾಕು. ಉದಾಹರಣೆಗೆ ಯಮಧರ್ಮ, ವಾಯು, ಇಂದ್ರ ಹಾಗು ಅಶ್ವಿನಿ ಅವಳಿಗಳು ಕುಂತಿ ಹಾಗು ಮಾದ್ರಿಯರಿಗೆ ಗರ್ಭಾದಾನ ಮಾಡಿದ ವಿಷಯ. ಈ ದೇವತೆಗಳು ಹಿಮಾಲಯದ ಒಂದು ಭಾಗದಲ್ಲಿ ಇರುತ್ತಿದ್ದ ಮಾನವ ಜನಾಂಗವೆಂದು ಭೈರಪ್ಪನವರು ಪ್ರತಿಪಾದಿಸುತ್ತಾರೆ. ಈ ವಿವರಣೆಯನ್ನು ನಾವು ಮುಗುಮ್ಮಾಗಿ ಒಪ್ಪಿಕೊಳ್ಳುತ್ತೇವೆ. ಆಸ್ತಿಕ ಮಹಾಶಯರು ಭೈರಪ್ಪನವರ ವಿರುದ್ಧ ಪ್ರತಿಭಟನೆಯನ್ನು ಮಾಡುವುದಿಲ್ಲ.

ಇಂತಹ ಒಂದು ಅನುಕೂಲತೆಯು ಯೋಗೀಶ ಮಾಸ್ಟರರಿಗೆ ಇಲ್ಲ. ಆರ್ಯಕುಲದ ವಿಜಯದ ನಂತರ ಆ ಕುಲದ  ಹಿರಿಮೆಯನ್ನು ಸಾರುವ ರಾಮಾಯಣ, ಮಹಾಭಾರತಗಳು ರಚನೆಯಾದವು ಎಂದು ಹೇಳಲಾಗುತ್ತದೆ. ಅನಾರ್ಯಕುಲಗಳ ಕತೆಗಳಿಗೆ ಈ ಸೌಭಾಗ್ಯವಿರಲಿಲ್ಲ. ಆದರೆ, ಆರ್ಯ ಹಾಗು ಅನಾರ್ಯರ ಸಮ್ಮಿಲನವಾದ ಬಳಿಕ, ಅನಾರ್ಯ ದೇವತೆಗಳು, ಆರ್ಯದೇವತೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡವು ಹಾಗು ಹೊಸ, ಹೊಸ ಪುರಾಣಗಳು ಹುಟ್ಟಿದವು ಎಂದು ಹೇಳಲಾಗುತ್ತದೆ. (ಬುದ್ಧಜಾತಕ ಕಥೆಗಳು ರಚನೆಯಾದ ಬಳಿಕವೇ, ಹಿಂದೂ ಪುರಾಣಗಳು ರಚನೆಯಾದವು ಎಂದೂ ಹೇಳಲಾಗುತ್ತದೆ.)

ಆದುದರಿಂದ ಯೋಗೀಶ ಮಾಸ್ಟರರು ತಮ್ಮ ಕಾದಂಬರಿಯನ್ನು ಅನೇಕ ಸಾಧ್ಯತೆಗಳ, ಅನೇಕ ಸಂಭಾವ್ಯತೆಗಳ ನಡುವಿನ ಒಂದು ಸಾಧ್ಯತೆ ಅಥವಾ ಸಂಭಾವ್ಯತೆ ಎಂದು ಹೇಳಬೇಕಾಗುತ್ತದೆ. ಇಂತಹ ಸಂಭಾವ್ಯತೆಯನ್ನು ಬರೆದಾಗ ಕೆಲವರ ಕಣ್ಣು ಕೆಂಪಾಗುವುದು ಸಹಜ. ಆದರೆ ಲೇಖಕರು ಎಲ್ಲಿಯೂ ಯಾರ ಅವಹೇಳನೆಯನ್ನೂ ತಮ್ಮ ಉದ್ದೇಶವನ್ನಾಗಿ ಇಟ್ಟುಕೊಂಡಿಲ್ಲ. ನಿಜ ಹೇಳಬೇಕೆಂದರೆ ತಮ್ಮ ‘ಪರ್ವ’ ಕಾದಂಬರಿಯಲ್ಲಿಯೇ, ಮಹಾಭಾರತದ ಘಟಾನುಘಟಿ ನಾಯಕರನ್ನು ಭೈರಪ್ಪನವರು ಚಿಲ್ಲರೆಯಾಗಿ ಚಿತ್ರಿಸಿದ್ದಾರೆ ಎಂದು ಹೇಳುವುದು ಸಮಂಜಸವಾದೀತು. ಯೋಗೀಶರು ಈ ಕಾದಂಬರಿಯಲ್ಲಿ ಯಾವ ಪಾತ್ರವನ್ನೂ (-ಆರ್ಯರೇ ಇರಲಿ, ಅನಾರ್ಯರೇ ಇರಲಿ-) ಲಘುವಾಗಿ ಚಿತ್ರಿಸಿಲ್ಲ. ಹಾಗೆ ನೋಡಿದರೆ ಸ್ವಲ್ಪ ಮುಖ್ಯ ಪಾತ್ರವಾದ ಬ್ರಾಹ್ಮಣನೊಬ್ಬನು ವಿದೂಷಕನ ತರಹ ಕಾಣುತ್ತಿದ್ದದ್ದು ಲೇಖಕರ ವಿನೋದಪ್ರಯತ್ನವೆಂದು ಭಾವಿಸಬಹುದು!

ಇನ್ನು ರಚನಾವಿಧಾನದ ಬಗೆಗೆ ಒಂದು ಮಾತು. ಆ ಸಮಯದ ದೇಶವಾಸಿಗಳ ಭಿನ್ನ ಜೀವನಪದ್ಧತಿಗಳನ್ನು ವರ್ಣಿಸಲು ಯೋಗೀಶರು ಶಂಬರನ ಪ್ರವಾಸವನ್ನು ಬಳಸಿಕೊಂಡಿದ್ದಾರೆ. ಆರ್ಯ, ಅನಾರ್ಯ ಕುಲಗಳ ತಿಕ್ಕಾಟ ಹಾಗು ಹೊಂದಾಣಿಕೆಗಳನ್ನು ವಿವರಿಸಲು, ಢುಂಢಿಯ ಜೀವನಕಥೆಯನ್ನು ಬಳಸಿಕೊಂಡಿದ್ದಾರೆ. ಇದು ಉತ್ತಮ ರಚನಾವಿಧಾನವೇನೊ ಹೌದು. ಆದರೆ ಯೋಗೀಶರ ಬರವಣಿಗೆಯಲ್ಲಿ ಸಂಯಮ ಇದೆಯೇ ಹೊರತು ಬಲ ಇಲ್ಲ. ಭೈರಪ್ಪನವರ ಕಾದಂಬರಿಗಳ singular ವೈಶಿಷ್ಟ್ಯವೆಂದರೆ passion. ಆ ಏಕೈಕ ಗುಣವೇ ಅವರ ಸಾಹಿತ್ಯವು ಜನರ ಮೆಚ್ಚುಗೆ ಪಡೆಯಲು ಕಾರಣವಾಗಿದೆ ಎನ್ನಬಹುದು!

ಕೊನೆಯದಾಗಿ ಒಂದು ಮಾತು. ‘ಢುಂಢಿ’ ಕಾದಂಬರಿಯ ಬಗೆಗೆ ಯಾವ ಕಾರಣಕ್ಕಾಗಿ ಇಂತಹ ಗಲಾಟೆಯನ್ನು ಎಬ್ಬಿಸಲಾಯಿತೊ ನನಗೆ ಅರ್ಥವಾಗುತ್ತಿಲ್ಲ. ನಮ್ಮ ಸಾಮಾಜಿಕ ಅಸಹಿಷ್ಣುತೆಯನ್ನು ಹಾಗು ಬೌದ್ಧಿಕ ಅಪ್ರಬುದ್ಧತೆಯನ್ನು ಇದು ತೋರಿಸುತ್ತದೆ. ಬಂಜಗೆರೆ ಜಯಪ್ರಕಾಶರ ‘ಆನು ದೇವಾ ಹೊರಗಣವನು’ ಪುಸ್ತಕವನ್ನು ನಿಷೇಧಿಸಲಾಯಿತು. ಅದರಂತೆ ಡ್ಯಾನ್ ಬ್ರೌನನ ‘ಡಾ ವಿಂಚಿ ಕೋಡ್’ನ ವಿರುದ್ಧ ಪ್ರತಿಭಟನೆಗಳಾದವು. ತಸ್ಲೀಮಾ ನಸ್ರೀನ್ ಅವರು ಬಂಗ್ಲಾ ದೇಶದಲ್ಲಿಯ ಧಾರ್ಮಿಕ ದುರ್ವರ್ತನೆಗಳ ಬಗೆಗೆ ಬರೆದರೆ, ಭಾರತದಲ್ಲಿ ಅವರ ವಿರುದ್ಧ ಗಲಭೆಗಳಾದವು! ಕೆಲವೇ ಕೆಲವು ದಂಗೆಖೋರರಿಂದಾಗಿ  ಭಾರತೀಯರೆಲ್ಲರಿಗೂ ಅಪ್ರಬುದ್ಧ, ಅಸಹಿಷ್ಣುಗಳೆನ್ನುವ ಹಣೆಪಟ್ಟಿ ದೊರೆತಿದೆ!

‘ಢುಂಢಿ’ ಕಾದಂಬರಿಯು ಅಲ್ಪ ಗುಬ್ಬಿಯಂತಿದೆ. ಅದನ್ನು ಹದ್ದಿನಂತೆ ಚಿತ್ರಿಸುವ ಅವಶ್ಯಕತೆ ಇಲ್ಲ. ಈ ಕಾದಂಬರಿಯನ್ನು ಓದಬಯಸುವವರು ಈ ಲಿಂಕ್‍ಅನ್ನು ಬಳಸಿರಿ:
https://dl.dropboxusercontent.com/u/4687276/Dhundhi_Yogesh%20Master.pdf