Tuesday, February 4, 2014

ಯೋಗೇಶ ಮಾಸ್ಟರ ರಚಿಸಿದ ‘ಢುಂಢಿ’ ಕಾದಂಬರಿ


ಯೋಗೇಶ ಮಾಸ್ಟರ ರಚಿಸಿದ ‘ಢುಂಢಿ’ ಕಾದಂಬರಿಯು ಬಿಡುಗಡೆಯ ಭಾಗ್ಯವನ್ನೇ ಪಡೆಯಲಿಲ್ಲ. ಅನಂತಮೂರ್ತಿಯವರು ಅದನ್ನು ಲೋಕಾರ್ಪಣೆಗೈಯುವ ಕಾರ್ಯಕ್ರಮ ನಡೆದಾಗಲೇ, ಅದರ ವಿರುದ್ಧವಾಗಿ ಪ್ರತಿಭಟನೆ ನಡೆದದ್ದರಿಂದ ಕಾರ್ಯಕ್ರಮವು ಸ್ಥಗಿತವಾಯಿತು.

ಪುರಾತನ ಭಾರತದ ಇತಿಹಾಸದ ಬಗೆಗೆ ಇದಮಿತ್ಥಂ ಎಂದು ಹೇಳುವ ಹಾಗಿಲ್ಲ. ಆಧುನಿಕ ಸಂಶೋಧಕರು ಪುರಾಣ ಹಾಗು ಮಹಾಕಾವ್ಯಗಳನ್ನು ಆಧರಿಸಿ ಇತಿಹಾಸದ ಪುನರ್ರಚನೆಯನ್ನು ಮಾಡಲು ಪ್ರಯತ್ನಿಸಿದ್ದಾರೆ. ಇದೇ ಕಾರ್ಯವನ್ನು ಲೇಖಕರೂ ಸಹ ಮಾಡಿದ್ದಾರೆ. ಇರಾವತಿ ಕರ್ವೆಯವರ ‘ಯುಗಾಂತ’ ಕಾದಂಬರಿಯನ್ನು ಹಾಗು ಎಸ್.ಎಲ್.ಭೈರಪ್ಪನವರ ‘ಪರ್ವ’ ಕಾದಂಬರಿಯನ್ನು ಇಲ್ಲಿ ಉದಾಹರಿಸಬಹುದು. ಆದರೆ ಸೃಜನಶೀಲ ಸಾಹಿತ್ಯದ ಈ ಲೇಖಕರು ಕೇವಲ ಇತಿಹಾಸದ ಮರುಸೃಷ್ಟಿಯನ್ನಷ್ಟೇ ತಮ್ಮ ಉದ್ದೇಶವನ್ನಾಗಿ ಇಟ್ಟುಕೊಳ್ಳದೆ, ಜೀವನದ ಮೌಲ್ಯಗಳ ಹುಡುಕಾಟವನ್ನೂ ಈ ಕಾದಂಬರಿಗಳ ಮೂಲಕ ಮಾಡಿದ್ದಾರೆ.

ಯೋಗೇಶ ಮಾಸ್ಟರರ ‘ಢುಂಢಿ’ ಕಾದಂಬರಿ ಸಹ ಇಂತಹ ಒಂದು ಕೃತಿಯಾಗಿದೆ. ಈ ಕಾದಂಬರಿ ಕೆಲವು ಗ್ರಹಿಕೆಗಳನ್ನು ಆಧರಿಸಿದೆ:
ಭಾರತದ ಮೇಲೆ ಆರ್ಯ ಜನಾಂಗದ ಆಕ್ರಮಣ ಜರುಗಿತು. ಆ ಸಮಯದಲ್ಲಿ ಭಿನ್ನ ಭಿನ್ನ ಅನಾರ್ಯ ಜನಾಂಗಗಳು ಹಿಮಾಲಯದ ಕೆಳಭಾಗದಲ್ಲಿ ಹಾಗು ಆರ್ಯಾವರ್ತದಲ್ಲಿ ವಾಸಿಸುತ್ತಿದ್ದವು. ಈ ಆರ್ಯ ಹಾಗು ಅನಾರ್ಯ ಕುಲಗಳ ನಡುವೆ ಕೆಲವೊಮ್ಮೆ ತಿಕ್ಕಾಟ, ಕೆಲವೊಮ್ಮೆ ಹೊಂದಾಣಿಕೆ ಸಂಭವಿಸಿದವು. ಕಾಲಾಂತರದಲ್ಲಿ ಆರ್ಯ ಹಾಗು ಅನಾರ್ಯ ಜನಾಂಗಗಳು ಒಂದರೊಡನೊಂದು ಕೂಡಿಕೊಂಡವು. ಎಲ್ಲ ಇತಿಹಾಸಕಾರರೂ ಈ ಗ್ರಹಿಕೆಗಳನ್ನು ಒಪ್ಪುತ್ತಾರೆ ಎಂದಲ್ಲ; ಕೆಲವು ಇತಿಹಾಸಕಾರರು ಒಪ್ಪುತ್ತಾರೆ, ಕೆಲವರು ಒಪ್ಪುವದಿಲ್ಲ.

‘ಢುಂಢಿ’ ಕಾದಂಬರಿಯು ಆ ಸಮಯದಲ್ಲಿ ಇದ್ದಂತಹ ಅನಾರ್ಯ ಕುಲಗಳ ಬದುಕಿನ ರೀತಿ ಹಾಗು ಆರ್ಯಕುಲಗಳ ಜೊತೆಗಿನ ಅವರ ಸಂಬಂಧಗಳನ್ನು ವಿವರಿಸಲು ಪ್ರಯತ್ನಿಸಿದೆ. ಆರ್ಯಕುಲಗಳು ನಗರಿಗಳನ್ನು ಕಟ್ಟಿಕೊಂಡು ಹೆಚ್ಚಿನ ಸೌಲಭ್ಯಗಳೊಂದಿಗೆ ಜೀವಿಸುತ್ತಿದ್ದವು. ಅನಾರ್ಯಕುಲಗಳು ಅಡವಿಗಳಲ್ಲಿ ವಾಸಿಸುತ್ತಿದ್ದವು. ಅವರದು ಕಾಡಿನ ಬದುಕು. ಆರ್ಯರಲ್ಲಿ ಚಿಕ್ಕಪುಟ್ಟ ರಾಜ್ಯಗಳು ಹಾಗು ರಾಜಪ್ರಭುತ್ವವು ಈಗಾಗಲೇ ಬಂದು ಬಿಟ್ಟಿತ್ತು. ಅನಾರ್ಯಕುಲಗಳಲ್ಲಿ ವಿವಿಧ  ಗಣಗಳು ಅಡವಿಗಳಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದು, ಗಣದಲ್ಲಿಯ ಬಲಿಷ್ಠ ಮುಂದಾಳು ಒಬ್ಬನು ಆ ಗಣದ ‘ಗಣೇಶ’ನಾಗುತ್ತಿದ್ದನು. (ಉತ್ತರಪೂರ್ವ ಭಾರತದಲ್ಲಿ ಅನೇಕ ಗಣರಾಜ್ಯಗಳು ಇದ್ದುದನ್ನು ನೆನೆಯಬಹುದು.) ಆರ್ಯರು ತಮ್ಮ ನಾಡನ್ನು ವಿಸ್ತರಿಸುತ್ತಿದ್ದಂತೆ, ಅನಾರ್ಯರು ಕಾಡಿನಲ್ಲಿ ಒಳಒಳಗೆ ದೂರ ಸರಿಯುತ್ತಿದ್ದರು. ಇದು ಈ ಕಾದಂಬರಿಯಲ್ಲಿ ಬರುವ ರಾಜಕೀಯ ವಿಶ್ಲೇಷಣೆ.

ಆರ್ಯಕುಲಗಳಲ್ಲಿ  ವಿವಾಹದ ಅನೇಕ ಮಾದರಿಗಳು ರೂಢವಾಗತೊಡಗಿದ್ದವು. ಅನಾರ್ಯ ಕುಲಗಳಲ್ಲಿ ಗಂಡು ಹೆಣ್ಣುಗಳ ನಡುವೆ ಸ್ವಚ್ಛಂದ ಕೂಟವಿತ್ತು. ಅನಾರ್ಯ ಸ್ತ್ರೀಯರು ಬಲಿಷ್ಠರಾಗಿದ್ದು, ಸ್ತ್ರೀಗಣಗಳು ಯುದ್ಧಸಿದ್ಧರಾಗಿರುತ್ತಿದ್ದರು. ಕೆಲವು ಸಲ ಆರ್ಯಕುಲಗಳು ಹಾಗು ಅನಾರ್ಯ ಕುಲಗಳು ಇತರ ಕುಲಗಳ ವಿರುದ್ಧ ಜೊತೆಯಾಗಿ ಹೋರಾಡಿದ್ದು ಇದೆ. ಈ ಕಾಳಗಗಳಲ್ಲಿ ಅನಾರ್ಯ ಸ್ತ್ರೀಗಣಗಳೂ ಸಹ ಭಾಗವಹಿಸಿವೆ. ಇದು ಯೋಗೀಶರು ಮಾಡಿರುವ ಸಾಮಾಜಿಕ ಸ್ಥಿತಿಯ ವಿಶ್ಲೇಷಣೆ.

ಮೇಲಿನ ಗ್ರಹಿಕೆಗಳನ್ನು ಆಧರಿಸಿ ಯೋಗೀಶ ಮಾಸ್ಟರರು ‘ಢುಂಢಿ’ ಕಾದಂಬರಿಯನ್ನು ಹೆಣೆದಿದ್ದಾರೆ. ಕಾದಂಬರಿಯು ಶಂಬರ ಎನ್ನುವ ಓರ್ವ ಒಬ್ಬಂಟಿ ಅನಾರ್ಯನ ಕಥೆಯಾಗಿ ಪ್ರಾರಂಭವಾಗಿದೆ. ಶಂಬರನು ಒಂಟಿ ತಾಯಿಯ ಮಗ. ಇವರಿಬ್ಬರು ನಗರಕ್ಕೆ ಹತ್ತಿರವಿರುವ ಅರಣ್ಯದಲ್ಲಿ ವಾಸಿಸುತ್ತಿರುತ್ತಾರೆ. ಶಂಬರನ ತಾಯಿ ಅಲ್ಲಿ ಹಾಯ್ದು ಹೋಗುವ ಪ್ರವಾಸಿಗಳಿಗೆ ಊಟೋಪಚಾರ ಹಾಗು ವಸತಿಯನ್ನು ಕಲ್ಪಿಸಿ ತನ್ನ ಬದುಕು ಸಾಗಿಸುತ್ತಿರುತ್ತಾಳೆ. ಅಲ್ಲದೆ ಅವಳ ಬಳಿ ಸ್ವಲ್ಪ ಗೋವುಗಳೂ ಇರುತ್ತವೆ. ಹೀಗಿರಲಾಗಿ, ಶಂಬರನ ತಾಯಿಯ ಗೆಳತಿಯೊಬ್ಬಳು ಅಲ್ಲಿಗೆ ಬರುತ್ತಾಳೆ. ತನ್ನ ತವರುನಾಡಿನಲ್ಲಿ (ಪೂರ್ವೋತ್ತರದಲ್ಲಿ) ತನ್ನ ಅಗತ್ಯವಿರುವುದನ್ನು ಅರಿತುಕೊಂಡ ಅವಳು ಚಿಕ್ಕ ವಯಸ್ಸಿನ ಶಂಬರನನ್ನು ಬಿಟ್ಟು ತನ್ನ ತವರುನಾಡಿಗೆ ಹೊರಟು ಹೋಗುತ್ತಾಳೆ. ಶಂಬರನು ತರುಣನಾದ ಬಳಿಕ ಒಂದು ಅನುಕೂಲ ಸಂದರ್ಭ ಒದಗಿದಾಗ, ತನ್ನ ತಾಯಿಯನ್ನು ಹುಡುಕಲು ಹೊರಡುತ್ತಾನೆ. ಆ ಸಮಯದಲ್ಲಿ ಆತನು ಅನೇಕ ಅನಾರ್ಯ ಹಾಗು ಆರ್ಯಕುಲಗಳ ವಸತಿಯನ್ನು ದಾಟುತ್ತಾನೆ. ಇಲ್ಲಿಯವರೆಗೆ ಹೊರ ಜಗತ್ತಿನ ಹತ್ತಿರದ ಪರಿಚಯವಿರದ ಶಂಬರನು ಇದೀಗ ಅವರೆಲ್ಲರ ಜೀವನಪದ್ಧತಿಗಳನ್ನು ನೋಡುತ್ತಾನೆ. ಇದೇ ಸಮಯದಲ್ಲಿ ಶಂಬರನಿಗೆ ಅನಾರ್ಯಕುಲದ  ವದೀರಜ್ಜ ಎನ್ನುವ ಹಿರಿಯನೊಬ್ಬನ ಪರಿಚಯವಾಗುತ್ತದೆ. ಈ ಹಿರಿಯನು ಶಂಬರನಿಗೆ ‘ಢುಂಡಿ ಗಣೇಶ’ನ ಪೂರ್ವಾಪರ ವಿವರಗಳನ್ನು ಹೇಳುತ್ತಾನೆ.

ಈ ರೀತಿಯಾಗಿ ಢುಂಢಿ ಗಣೇಶನ ಕಥೆಯು ಹಿನ್ನೋಟದಲ್ಲಿ ಪ್ರಾರಂಭವಾಗುತ್ತದೆ. ಪರ್ವತರಾಜನ ಮಗಳು ಪಾರ್ವತಿ ಶಿವನನ್ನು ಮೆಚ್ಚಿ ಮದುವೆಯಾಗಿರುತ್ತಾಳೆ. ಈ ಶಿವನು ತಾಂತ್ರಿಕ ಯೋಗಿ, ರತಿಕ್ರೀಡೆಯಲ್ಲಿ ವೀರ್ಯಪತನವನ್ನು ಮಾಡುತ್ತಿರುವದಿಲ್ಲ. ಹೀಗಾಗಿ ಪಾರ್ವತಿಗೆ ಸಂತಾನವಾಗಲಿಲ್ಲ. ಅವಳು ತನ್ನ ಗೆಳತಿಯ ಮಗನೊಬ್ಬನನ್ನು ಪಾಲಿಸಲು ಇಚ್ಛಿಸುತ್ತಾಳೆ. ಆ ಶಿಶು ದೊಡ್ಡವನಾದ ಮೇಲೆ ಪಾರ್ವತಿಗೆ ಲಭ್ಯನಾಗುತ್ತಾನೆ. ಅವನೇ ನಮಗೆಲ್ಲರಿಗೂ ಚಿರಪರಿಚಿತನಾದ ದೇವರು: ಗಣೇಶ. ಪಾರ್ವತಿಯು ಆತನಿಗೆ ಢುಂಢಿ ಎಂದು ನಾಮಕರಣ ಮಾಡಿ  ಅವನನ್ನು ಎಲ್ಲ ಗಣಗಳ ಅಧಿಪತಿಯನ್ನಾಗಿ ಪಟ್ಟ ಕಟ್ಟಿ ‘ಗಣೇಶ’ನನ್ನಾಗಿ ಮಾಡುತ್ತಾಳೆ.

ಶಂಬರ ಹಾಗು ವದೀರಜ್ಜರ ಪ್ರವಾಸಸಮಯದಲ್ಲಿ ಈ ಕಥೆ ಮುಂದುವರಿಯುತ್ತದೆ. ಪ್ರವಾಸಸಮಯದಲ್ಲಿ ಶಂಬರನು ಬದುಕಿನ ಭಿನ್ನ ರೀತಿಗಳ ಅನೇಕ ಕುಲಗಳನ್ನು ನೋಡುತ್ತಾನೆ. ಈ ಕುಲಗಳ ರಾಜಕೀಯ ಸ್ನೇಹ ಹಾಗು ವೈರಗಳ ಪರಿಚಯ ಆತನಿಗಾಗುತ್ತದೆ. ಇದೇ ರೀತಿಯಾಗಿ ಕಾದಂಬರಿ ಮುಂದುವರೆಯುತ್ತದೆ.

ಈ ಕಾದಂಬರಿಯಲ್ಲಿ ಎರಡು ವಿಷಯಗಳನ್ನು ಪೂರ್ವಾಗ್ರಹವಿಲ್ಲದೆ ಗಮನಿಸಬೇಕು:
(೧) ಕಾದಂಬರಿಯಲ್ಲಿ ಬಳಸಲಾದ ಪೂರ್ವಗ್ರಹಿಕೆಗಳು ಹಾಗು ಕಲ್ಪನೆಗಳು ಒಪ್ಪಬಹುದಾದಂತಹವೆ?
(೨) ಕಾದಂಬರಿಯ ರಚನಾವಿಧಾನ ಹೇಗಿದೆ?

ಯೋಗೀಶ ಮಾಸ್ಟರರು ತಮ್ಮ ಮುನ್ನುಡಿಯಲ್ಲಿ ಹೇಳಿದ ಮೇರೆಗೆ, ಅವರು ಪೂರ್ವೇತಿಹಾಸದ ವಿದ್ಯಾರ್ಥಿಗಳಲ್ಲ; ಹೀಗಾಗಿ ಅವರ ಗ್ರಹಿಕೆಗಳಲ್ಲಿ ಹಾಗು ಕಲ್ಪನೆಗಳಲ್ಲಿ ತಪ್ಪುಗಳು ನುಸಳಿರಬಹುದು. ಈ ಸಂದರ್ಭದಲ್ಲಿ ನಾವು ಎಸ್. ಎಲ್. ಭೈರಪ್ಪನವರು ಬರೆದ ‘ಪರ್ವ’ ಕಾದಂಬರಿಯನ್ನು ನೆನಪಿಸಿಕೊಳ್ಳೋಣ. ಭೈರಪ್ಪನವರಿಗೆ ಅಲ್ಲಿ ಒಂದು ಅನುಕೂಲತೆ ಇದೆ. ಮಹಾಭಾರತದ ಕಥೆಯ ಬಗೆಗೆ ಭಾರತದಲ್ಲಿ ಸರ್ವಸಾಧಾರಣವಾದ ಒಂದು ತಿಳಿವು ಇದೆ, ಒಂದು ನಿಖರತೆ ಇದೆ. ಆದುದರಿಂದ ಭೈರಪ್ಪನವರು ಆ ಕಥೆಯನ್ನು ಆಮೂಲಾಗ್ರವಾಗಿ ಹೆಣೆಯಬೇಕಾಗಿಲ್ಲ. ಯಾವ ಘಟನೆಗಳನ್ನು ಜನ ದೈವಿಕ ಎಂದು ಭಾವಿಸಿರುವರೊ, ಆ ಘಟನೆಗಳಿಗೆ ಭೈರಪ್ಪನವರು ಲೌಕಿಕ ವಾಸ್ತವದ ವಿವರಣೆಗಳನ್ನು ನೀಡಿದರೆ ಸಾಕು. ಉದಾಹರಣೆಗೆ ಯಮಧರ್ಮ, ವಾಯು, ಇಂದ್ರ ಹಾಗು ಅಶ್ವಿನಿ ಅವಳಿಗಳು ಕುಂತಿ ಹಾಗು ಮಾದ್ರಿಯರಿಗೆ ಗರ್ಭಾದಾನ ಮಾಡಿದ ವಿಷಯ. ಈ ದೇವತೆಗಳು ಹಿಮಾಲಯದ ಒಂದು ಭಾಗದಲ್ಲಿ ಇರುತ್ತಿದ್ದ ಮಾನವ ಜನಾಂಗವೆಂದು ಭೈರಪ್ಪನವರು ಪ್ರತಿಪಾದಿಸುತ್ತಾರೆ. ಈ ವಿವರಣೆಯನ್ನು ನಾವು ಮುಗುಮ್ಮಾಗಿ ಒಪ್ಪಿಕೊಳ್ಳುತ್ತೇವೆ. ಆಸ್ತಿಕ ಮಹಾಶಯರು ಭೈರಪ್ಪನವರ ವಿರುದ್ಧ ಪ್ರತಿಭಟನೆಯನ್ನು ಮಾಡುವುದಿಲ್ಲ.

ಇಂತಹ ಒಂದು ಅನುಕೂಲತೆಯು ಯೋಗೀಶ ಮಾಸ್ಟರರಿಗೆ ಇಲ್ಲ. ಆರ್ಯಕುಲದ ವಿಜಯದ ನಂತರ ಆ ಕುಲದ  ಹಿರಿಮೆಯನ್ನು ಸಾರುವ ರಾಮಾಯಣ, ಮಹಾಭಾರತಗಳು ರಚನೆಯಾದವು ಎಂದು ಹೇಳಲಾಗುತ್ತದೆ. ಅನಾರ್ಯಕುಲಗಳ ಕತೆಗಳಿಗೆ ಈ ಸೌಭಾಗ್ಯವಿರಲಿಲ್ಲ. ಆದರೆ, ಆರ್ಯ ಹಾಗು ಅನಾರ್ಯರ ಸಮ್ಮಿಲನವಾದ ಬಳಿಕ, ಅನಾರ್ಯ ದೇವತೆಗಳು, ಆರ್ಯದೇವತೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡವು ಹಾಗು ಹೊಸ, ಹೊಸ ಪುರಾಣಗಳು ಹುಟ್ಟಿದವು ಎಂದು ಹೇಳಲಾಗುತ್ತದೆ. (ಬುದ್ಧಜಾತಕ ಕಥೆಗಳು ರಚನೆಯಾದ ಬಳಿಕವೇ, ಹಿಂದೂ ಪುರಾಣಗಳು ರಚನೆಯಾದವು ಎಂದೂ ಹೇಳಲಾಗುತ್ತದೆ.)

ಆದುದರಿಂದ ಯೋಗೀಶ ಮಾಸ್ಟರರು ತಮ್ಮ ಕಾದಂಬರಿಯನ್ನು ಅನೇಕ ಸಾಧ್ಯತೆಗಳ, ಅನೇಕ ಸಂಭಾವ್ಯತೆಗಳ ನಡುವಿನ ಒಂದು ಸಾಧ್ಯತೆ ಅಥವಾ ಸಂಭಾವ್ಯತೆ ಎಂದು ಹೇಳಬೇಕಾಗುತ್ತದೆ. ಇಂತಹ ಸಂಭಾವ್ಯತೆಯನ್ನು ಬರೆದಾಗ ಕೆಲವರ ಕಣ್ಣು ಕೆಂಪಾಗುವುದು ಸಹಜ. ಆದರೆ ಲೇಖಕರು ಎಲ್ಲಿಯೂ ಯಾರ ಅವಹೇಳನೆಯನ್ನೂ ತಮ್ಮ ಉದ್ದೇಶವನ್ನಾಗಿ ಇಟ್ಟುಕೊಂಡಿಲ್ಲ. ನಿಜ ಹೇಳಬೇಕೆಂದರೆ ತಮ್ಮ ‘ಪರ್ವ’ ಕಾದಂಬರಿಯಲ್ಲಿಯೇ, ಮಹಾಭಾರತದ ಘಟಾನುಘಟಿ ನಾಯಕರನ್ನು ಭೈರಪ್ಪನವರು ಚಿಲ್ಲರೆಯಾಗಿ ಚಿತ್ರಿಸಿದ್ದಾರೆ ಎಂದು ಹೇಳುವುದು ಸಮಂಜಸವಾದೀತು. ಯೋಗೀಶರು ಈ ಕಾದಂಬರಿಯಲ್ಲಿ ಯಾವ ಪಾತ್ರವನ್ನೂ (-ಆರ್ಯರೇ ಇರಲಿ, ಅನಾರ್ಯರೇ ಇರಲಿ-) ಲಘುವಾಗಿ ಚಿತ್ರಿಸಿಲ್ಲ. ಹಾಗೆ ನೋಡಿದರೆ ಸ್ವಲ್ಪ ಮುಖ್ಯ ಪಾತ್ರವಾದ ಬ್ರಾಹ್ಮಣನೊಬ್ಬನು ವಿದೂಷಕನ ತರಹ ಕಾಣುತ್ತಿದ್ದದ್ದು ಲೇಖಕರ ವಿನೋದಪ್ರಯತ್ನವೆಂದು ಭಾವಿಸಬಹುದು!

ಇನ್ನು ರಚನಾವಿಧಾನದ ಬಗೆಗೆ ಒಂದು ಮಾತು. ಆ ಸಮಯದ ದೇಶವಾಸಿಗಳ ಭಿನ್ನ ಜೀವನಪದ್ಧತಿಗಳನ್ನು ವರ್ಣಿಸಲು ಯೋಗೀಶರು ಶಂಬರನ ಪ್ರವಾಸವನ್ನು ಬಳಸಿಕೊಂಡಿದ್ದಾರೆ. ಆರ್ಯ, ಅನಾರ್ಯ ಕುಲಗಳ ತಿಕ್ಕಾಟ ಹಾಗು ಹೊಂದಾಣಿಕೆಗಳನ್ನು ವಿವರಿಸಲು, ಢುಂಢಿಯ ಜೀವನಕಥೆಯನ್ನು ಬಳಸಿಕೊಂಡಿದ್ದಾರೆ. ಇದು ಉತ್ತಮ ರಚನಾವಿಧಾನವೇನೊ ಹೌದು. ಆದರೆ ಯೋಗೀಶರ ಬರವಣಿಗೆಯಲ್ಲಿ ಸಂಯಮ ಇದೆಯೇ ಹೊರತು ಬಲ ಇಲ್ಲ. ಭೈರಪ್ಪನವರ ಕಾದಂಬರಿಗಳ singular ವೈಶಿಷ್ಟ್ಯವೆಂದರೆ passion. ಆ ಏಕೈಕ ಗುಣವೇ ಅವರ ಸಾಹಿತ್ಯವು ಜನರ ಮೆಚ್ಚುಗೆ ಪಡೆಯಲು ಕಾರಣವಾಗಿದೆ ಎನ್ನಬಹುದು!

ಕೊನೆಯದಾಗಿ ಒಂದು ಮಾತು. ‘ಢುಂಢಿ’ ಕಾದಂಬರಿಯ ಬಗೆಗೆ ಯಾವ ಕಾರಣಕ್ಕಾಗಿ ಇಂತಹ ಗಲಾಟೆಯನ್ನು ಎಬ್ಬಿಸಲಾಯಿತೊ ನನಗೆ ಅರ್ಥವಾಗುತ್ತಿಲ್ಲ. ನಮ್ಮ ಸಾಮಾಜಿಕ ಅಸಹಿಷ್ಣುತೆಯನ್ನು ಹಾಗು ಬೌದ್ಧಿಕ ಅಪ್ರಬುದ್ಧತೆಯನ್ನು ಇದು ತೋರಿಸುತ್ತದೆ. ಬಂಜಗೆರೆ ಜಯಪ್ರಕಾಶರ ‘ಆನು ದೇವಾ ಹೊರಗಣವನು’ ಪುಸ್ತಕವನ್ನು ನಿಷೇಧಿಸಲಾಯಿತು. ಅದರಂತೆ ಡ್ಯಾನ್ ಬ್ರೌನನ ‘ಡಾ ವಿಂಚಿ ಕೋಡ್’ನ ವಿರುದ್ಧ ಪ್ರತಿಭಟನೆಗಳಾದವು. ತಸ್ಲೀಮಾ ನಸ್ರೀನ್ ಅವರು ಬಂಗ್ಲಾ ದೇಶದಲ್ಲಿಯ ಧಾರ್ಮಿಕ ದುರ್ವರ್ತನೆಗಳ ಬಗೆಗೆ ಬರೆದರೆ, ಭಾರತದಲ್ಲಿ ಅವರ ವಿರುದ್ಧ ಗಲಭೆಗಳಾದವು! ಕೆಲವೇ ಕೆಲವು ದಂಗೆಖೋರರಿಂದಾಗಿ  ಭಾರತೀಯರೆಲ್ಲರಿಗೂ ಅಪ್ರಬುದ್ಧ, ಅಸಹಿಷ್ಣುಗಳೆನ್ನುವ ಹಣೆಪಟ್ಟಿ ದೊರೆತಿದೆ!

‘ಢುಂಢಿ’ ಕಾದಂಬರಿಯು ಅಲ್ಪ ಗುಬ್ಬಿಯಂತಿದೆ. ಅದನ್ನು ಹದ್ದಿನಂತೆ ಚಿತ್ರಿಸುವ ಅವಶ್ಯಕತೆ ಇಲ್ಲ. ಈ ಕಾದಂಬರಿಯನ್ನು ಓದಬಯಸುವವರು ಈ ಲಿಂಕ್‍ಅನ್ನು ಬಳಸಿರಿ:
https://dl.dropboxusercontent.com/u/4687276/Dhundhi_Yogesh%20Master.pdf

17 comments:

Badarinath Palavalli said...

ದುರಂತವೆಂದರೆ ಇಂದಿನ ದೊಡ್ಡ ಗಂಟಲಿನ ಸ್ವಯಂ ಘೋಷಿತ ಬುದ್ದಿ ಜೀವಿಗಳ ಏಕ ಪಕ್ಷೀಯ ವಾದಗಳೇ ಗೆಲ್ಲುತ್ತವೆ. ಅವರ ಜೊತೆ ಆಡಳಿತಾಂಗವೂ ಸೇರಿಕೊಳ್ಳಿತ್ತದೆ.

ನಾನು ಯೋಗೇಶ ಮಾಸ್ಟರರ ‘ಢುಂಢಿ’ ಕಾದಂಬರಿ ಕುರಿತ ಚರ್ಚೆಯಲ್ಲಿ ಛಾಯಾಗ್ರಾಕನಾಗಿ ಕೆಲಸ ಮಾಡಿದ್ದೇ. ಲೇಖಕರು ಬಂದಿದ್ದರು. ಅವರು ಬಾಯೇ ಬಿಡದಂತೆ ಉಳಿದ ಅತಿಥಿಗಳು ಹಾರಾಡಿ ಚೀರಾಡಿ ರಂಪಾಟ ಮಾಡಿದರು.

ಹಾಗೆ ಎಗರಾಡಿದ ಒಬ್ಬೇಒಬ್ಬ ಅತಿಥಿಯೂ ಕಾದಂಬರಿ ಓದಿಯೇ ಇರಲಿಲ್ಲ!

ನಿಮ್ಮ ಈ ಬರಹವು ಲೇಖಕರ ಬರವಣೊಿಗೆಯ ವೃತ್ತಿ ಸ್ವಾತಂತ್ರ್ಯಕ್ಕೆ ನೀಡಿದ ಗೌರವವಾಗಿದೆ.

sunaath said...

ಬದರಿನಾಥರೆ,
ನೀವೇ ಆ ಘಟನೆಗೆ ಸಾಕ್ಷಿಗಳಾಗಿದ್ದಿರಿ ಎಂದಾಯ್ತು. ನಿಮ್ಮ ಸ್ಪಂದನೆಗೆ ಧನ್ಯವಾದಗಳು.

ಈಶ್ವರ said...

ಕೆಲವೊಂದು ಪೂರ್ವಾಗ್ರಹ ನನಗೂ ಇತ್ತು, ಇದೆ. ಅದನ್ನು ನಿವಾರಿಸಿದ್ದಕ್ಕೆ ಶರಣು ಸುನಾಥ ಕಾಕಾ.. ನಾನೂ ಓದುತ್ತಿದ್ದೇನೆ. ಯಾರಿಗಾದರೂ PDF ಕಾಪಿ ಬೇಕಾದಲ್ಲಿ ನಾನೂ ಕಳುಹಿಸಬಲ್ಲೆ.

ಧನ್ಯವಾದ.

sunaath said...

ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದು? ಅವಹೇಳನ ಯಾವುದು ಎನ್ನುವುದನ್ನು ಪೂರ್ವಾಗ್ರಹವಿಲ್ಲದೆ ಪರೀಕ್ಷಿಸಬೇಕಲ್ಲವೆ,ಭಟ್ಟರೆ?
ಧನ್ಯವಾದಗಳು.

umesh desai said...

ಈಗೆಲ್ಲಾಕಡೆ ಗೌಡಿಕಿ ಮಾಡುವ ಮಂದಿ ತುಂಬ್ಯಾರ..ನಮ್ಮ ನಿಲುವು ಅದು ಸರಿಯೋ ತಪ್ಪೋ
ನಿರ್ಧರಿತವಾಗೋದು ನಾವು ಅದು ಮಂಡಿಸಿದಮೇಲೆ..ಈಗಿನ ಫೇಸಬುಕ್ಕು, ಮೀಡಿಯಾ ಇತ್ಯಾದಿಗಳಲ್ಲಿ
ವಿಭಿನ್ನ ನಿಲುವಿನ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ..ಇದು ಖಂಡನೀಯ ನಿಜ ಖಂದಿಸೋರು ಶಿಖಂಡಿಗಳಂತೂ ಅಲ್ಲ
ಆದರೆ ಅಲ್ಪ ಸಂಖ್ಯಾತರಂತೂ ಹೌದು ಇದು ನನ್ನ ಸ್ವಂತ ಅನುಭವ..

sunaath said...

ಖಂಡಿಸೋರು ಶಿಖಂಡಿಗಳಂತೂ ಅಲ್ಲ. ವಾಹ್! ವಾಹ್!
ಈ ಖಂಡನಾ-ಪಂಡಿತರಿಗೆ ಅಲ್ಪಸಂಖ್ಯಾತರ ವಿಶೇಷ ಹಕ್ಕುಗಳಿವೆ!

ವಿ.ರಾ.ಹೆ. said...

ರಚನಾ ತಂತ್ರ, ಕಥಾ(ಸಂಶೋಧನಾ!) ವಿಷಯ ಏನೇ ಇರಲಿ, ಆದರೆ ಅದರ ಪಾತ್ರಗಳು ಕೋಟ್ಯಂತರ ಜನರ ಆರಾಧನೆಯ/ಗೌರವಭಕ್ತಿಯ ಭಾಗವಾಗಿರುವಾಗ ನಿರೂಪಣೆಯ ಧಾಟಿ ಮತ್ತು ಭಾಷೆ ನೋವುಂಟು ಮಾಡುವಂತಿದ್ದರೆ ಅದಕ್ಕೆ ವಿರೋಧ ಸಹಜ! ಇದರಲ್ಲಿ ಶಿವಪಾರ್ವತಿಯ ಸನ್ನಿವೇಶಗಳು ಮತ್ತು ಗಣಪತಿಯ ಚಿತ್ರಗಳು, ಕೆಲವೊಮ್ಮೆ ವಿವರಣೆಗಳು ಓದುಗರ ಮನಸ್ಸಿಗೆ ನೋವೆನಿಸಿದ್ದಿರಬಹುದು! ಹಾಗಾಗಿ ಯಾವ ಕಾರಣಕ್ಕಾಗಿ ಗಲಾಟೆಯನ್ನು ಎಬ್ಬಿಸಲಾಯಿತು ಎಂಬುದು ಸರಳವಾಗಿ ಅರ್ಥವಾಗುವಂತದ್ದು! :)

sunaath said...

ವಿ.ರಾ.ಹೆ,
ನಿಮ್ಮ ಸ್ಪಂದನೆಗೆ ಧನ್ಯವಾದಗಳು.

ಚಿನ್ಮಯ ಭಟ್ said...

dhanyavada kaka...pustaka odteeni :)

sunaath said...

ಧನ್ಯವಾದಗಳು, ಚಿನ್ಮಯ!

Anonymous said...

ಸರ್,
ನಾನು ಪುಸ್ತಕ ಓದೀನಿ. ನಂಗ ಇಷ್ಟ ಆಯ್ತು.
"ಢುಂಢಿ"ಯೇ ಸ್ವತಂತ್ರವಾಗಿ ಒಳ್ಳೆಯ ಪುಸ್ತಕ. ಅದನ್ನ ಬೇರೆ ಪುಸ್ತಕಗಳಿಗೆ, ಯೋಗೇಶ್ ಅವರನ್ನ ಬೇರೆ ಲೇಖಕರಿಗೆ ಹೋಲಿಕೆ ಮಾಡೋದು ಬೇಕಿರಲಿಲ್ಲ ಅಂತ ನನ್ನ ಅನಿಸಿಕೆ.

- ಷಡಕ್ಷರಿ.

sunaath said...

ಷಡಕ್ಷರಿಯವರೆ,
ನಿಮ್ಮ ಪ್ರತಿಕ್ರಿಯೆಗಾಗಿ ಹಾಗು ನಿಮ್ಮ ಎಚ್ಚರಿಕೆಗಾಗಿ ಧನ್ಯವಾದಗಳು!

Unknown said...

ಸುನಾಥರೆ
ನೀವು ಕೊಟ್ಟ ಲಿಂಕಿನಿಂದ ಕಾದಂಬರಿ ಓದಲು ಸಾಧ್ಯವಾಯಿತು ಅದಕ್ಕಾಗಿ ಧನ್ಯವಾದಗಳು. ಇಷ್ಟವಾಗಲಿಲ್ಲ ಎಂದು ಹೇಳಲಾರೆ, ಚೆನ್ನಾಗಿಯೆ ಇದೆ. ಸೃಜನಶೀಲ ಸಾಹಿತ್ಯದ ಎಲ್ಲ ಮಜಲುಗಳನ್ನು ಯಾವದೇ ಪೂರ್ವಾಗ್ರಹಗಳಿಲ್ಲದೆ ಬೆಂಬಲಿಸಬೇಕು ಎಂಬ ಅಭಿಪ್ರಾಯ ನನ್ನದು. ಆರ್ಯ-ಅನಾರ್ಯದ ಏಕಮುಖಿ ಗ್ರಹಿಕೆಗಳು, ಅನಗತ್ಯವಾದ, ಬೇಕೆಂದೆ ತುರುಕಿದ ಕಾಮಕ್ರೀಡೆಗಳ ವಿವರಗಳು ಇದರ ಸೋಲು ಎನಿಸುತ್ತದೆ ನನಗೆ. ನಿಮ್ಮ ಮಾತುಗಳೆಲ್ಲ ಒಪ್ಪುವಂತಹವೆ ಆದರೂ ಭೈರಪ್ಪನವರ ‘ಪರ್ವ’ ಕ್ಕೆ ಇದು ಎಲ್ಲಿಯೂ ಸಮನಾಗಿ ನಿಲ್ಲದು -ನನ್ನ ಮಟ್ಟಿಗೆ. ನಮ್ಮವರ 'ಅಪ್ರಬುದ್ಧ', 'ಅಸಹಿಷ್ಣು' ಹೇಳಿಕೆಗಳ ಬಗ್ಗೆ ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತಿ ಇದೆ.
-ಅನಿಲ

sunaath said...

ಅನಿಲರೆ,
ಢುಂಢಿ ಕಾದಂಬರಿ ಸಾಹಿತ್ಯಕವಾಗಿ ಸಾಮಾನ್ಯ ಕಾದಂಬರಿಯೇ ಅಹುದು. ಆದರೆ it is based on certain probable assumptions. ಆದುದರಿಂದ ಇದರ ವಿರುದ್ಧ ಪ್ರತಿಭಟನೆ ಮಾಡುವಂತಹದು ಏನೂ ಇರಲಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸಿನಮನೆಯವನು said...

ನಾನೂ ಓದಿದೆ.
ಯಾವುದನ್ನು ಸುಮ್ಮನೆ ಒಪ್ಪದೆ ಪ್ರಶ್ನಿಸುವ ಮನಸ್ಸುಗಳಿಂದ ಸೃಷ್ಟಿಯಾಗಬಲ್ಲ ಬರಹವಿದು.
ದೇವರು ಧರ್ಮಗಳ ವಿಷಯದಲ್ಲಿ ಪ್ರಶ್ನಿಸಲು ಭಯವಿರುವ ಜನಗಳು ಇದನ್ನು ಓದಲಾರರು, ತಾಳಲಾರರು ಎಂದು ಓದುವಾಗಲೇ ಅನಿಸಿತು.
ಅವರು ರೆಫರೆನ್ಸ್ ನಲ್ಲಿ ಕೊಟ್ಟಿರುವ ಬರಹಗಳನ್ನು ಓದಬೇಕಿದೆ.
ಭಾವನೆಗಳಿಗೆ ನೋವಾಗುತ್ತಿದೆಯೆಂದರೆ ಆ ಭಾವನೆಗಳು ದುರ್ಬಲವಾದವು

sunaath said...

ಮನಸಿನ ಮನೆಯವರೆ, ಭಿನ್ನಾಭಿಪ್ರಾಯದ ಬರಹಗಳನ್ನು ನಾವು ಸ್ವಾಗತಿಸಬೇಕು. ಆದರೆ ಉದ್ದೇಶಪೂರ್ವಕವಾಗಿ ಮಾಡುವ ಅವಹೇಳನೆಯು ಸಲ್ಲದು. ‘ಧುಂಢಿ’ಕಾದಂಬರಿಯಲ್ಲಿ ಇತಿಹಾಸದ ಸಂಭಾವ್ಯತೆ ಇದೆ. ಬಂಜಗೆರೆಯವರ ಸಂಸೋಧನಾ ಕೃತಿಯಲ್ಲಿ ಸಂಭಾವ್ಯತೆ ಇದೆ. ಇಂತಹ ಕೃತಿಗಳನ್ನು ನಾವು ಸ್ವಾಗತಿಸಬೇಕು ಹಾಗು ನಮ್ಮ ವಿರೋಧವೇನಾದರೂ ಇದ್ದರೆ ಅದನ್ನು ಪತ್ರಿಕಾಮಾಧ್ಯಮದ ಮೂಲಕ ತಿಳಿಸಬೇಕಷ್ಟೆ!? ನೀವು ಹೇಳಿದಂತೆ ಭಾವನೆಗಳಿಗೆ ನೋವಾಗುತ್ತಿದ್ದರೆ, ಅದು ದುರ್ಬಲರ ಭಾವನೆಯಷ್ಟೆ!

Unknown said...

Plz send m