ನವೋದಯ ಕಾಲದಲ್ಲಿ ಕನ್ನಡ ಸಾಹಿತಿಗಳು ಕನ್ನಡ ಭಾಷೆಯನ್ನು ಕಟ್ಟಿದಂತೆ, ಬೆಳಸಿದಂತೆ, ಪತ್ರಿಕಾಕರ್ತರೂ ಸಹ ಕನ್ನಡ ಭಾಷೆಯನ್ನು ಬೆಳಸುತ್ತಲೇ ಬಂದಿದ್ದಾರೆ. ಕನ್ನಡ ಪತ್ರಿಕೆಗಳು ಪ್ರಾರಂಭವಾಗಿ ಅರ್ಧ ಶತಕಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿವೆ. ಕನ್ನಡದ ಮೊದಲ ಸಮಾಚಾರಪತ್ರಿಕೆ ‘ತಾಯಿನಾಡು’ ೧೯೨೭ರಲ್ಲಿ ಪ್ರಾರಂಭವಾಯಿತು. ‘ಸಂಯುಕ್ತ ಕರ್ನಾಟಕ’ ಪತ್ರಿಕೆ ೧೯೩೩ರಲ್ಲಿ ಪ್ರಾರಂಭವಾಯಿತು. ‘ಪ್ರಜಾವಾಣಿ’ ಪತ್ರಿಕೆಯು ೧೯೪೮ರಲ್ಲಿ ಪ್ರಾರಂಭವಾಯಿತು.
ಈ
ಎಲ್ಲ ಪತ್ರಿಕೆಗಳು ಹೆಮ್ಮೆಪಡುವಂತಹ ಪತ್ರಿಕಾಶೈಲಿಯನ್ನು ನಿರ್ಮಿಸಿದವು. ಅನೇಕ ಹೊಸ ಪತ್ರಿಕಾಪದಗಳನ್ನು
ಸೃಷ್ಟಿಸಿದವು. ಉದಾಹರಣೆಗೆ lead articleಗೆ ‘ಅಗ್ರಲೇಖನ’ವೆಂದು ಹೆಸರಿಸಿದರು. Vested
interestಅನ್ನು ‘ಪಟ್ಟಭದ್ರ ಹಿತಾಸಕ್ತಿ’ ಎಂದು ಕರೆದರು. ಆಂಗ್ಲ ಭಾಷೆಯಲ್ಲಿರುವ ಅನೇಕ ಪತ್ರಿಕಾಪದಗಳನ್ನು
ನಮ್ಮ ಪತ್ರಕರ್ತರು ತುಂಬ ಸಮರ್ಥವಾಗಿ ಕನ್ನಡೀಕರಿಸಿದ್ದಾರೆ. ಇದೊಂದು ಗಂಭೀರವಾದ ಕಾರ್ಯ. ಒಟ್ಟಿನಲ್ಲಿ
ಒಂದು ಸಮಾಚಾರಪತ್ರಿಕೆಯು ಮಾಡಬೇಕಾದ ಮೂರು ಅವಶ್ಯಕ ಮುಖ್ಯ ಕಾರ್ಯಗಳನ್ನು ಇವು ಸಮರ್ಪಕವಾಗಿ ನಿರ್ವಹಿಸಿದವು:
(೧)
ನಿಷ್ಪಕ್ಷಪಾತವಾಗಿ ಸಮಾಚಾರವನ್ನು ನೀಡುವುದು,
(೨)
ಚಿಂತನಪರ ಲೇಖನಗಳನ್ನು ನೀಡುವುದು,
(೩)
ಪತ್ರಿಕಾಕನ್ನಡವನ್ನು ಬೆಳೆಸುವುದು.
ಪತ್ರಿಕಾಕರ್ತರಷ್ಟೇ
ಅಲ್ಲ ನಮ್ಮ ಸರಕಾರಿ ನೌಕರರು ಸಹ ‘ಸರಕಾರಿ’ ಹಾಗು ತಾಂತ್ರಿಕ ಪದಗಳನ್ನು ತುಂಬ ಅರ್ಥಪೂರ್ಣವಾಗಿ ಭಾಷಾಂತರಿಸಿದ್ದಾರೆ.
ಉದಾಹರಣೆಗೆ ‘ಪಬ್ಲಿಕ್ ವರ್ಕ್ಸ್ ಡಿಪಾರ್ಟಮೆಂಟ್’ ಎನ್ನುವುದು ‘ಲೋಕೋಪಯೋಗಿ ಇಲಾಖೆ’ ಆಯಿತು , ‘ಬೆನಿಫಿಶರಿ’ಯು
‘ಫಲಾನುಭವಿ’ ಆದನು. ‘ಸ್ಪೀಡ್ ಬ್ರೆಕರ್’ ಎನ್ನುವುದು
‘ರಸ್ತೆದಿಬ್ಬ’ ಆಯಿತು. ಪತ್ರಕರ್ತರು, ಸರಕಾರಿ ನೌಕರರು ಹಾಗು ಜನಸಾಮಾನ್ಯರು ಇಂತಹ ಅನೇಕ ಪದಗಳನ್ನು
ಅನುವಾದಿಸಿದ್ದಾರೆ ಅಥವಾ ಮರುಸೃಷ್ಟಿಸಿದ್ದಾರೆ. ಅಂತಹ ಕೆಲವು ಪದಗಳು ಹೀಗಿವೆ:
Protocol......................ಶಿಷ್ಟಾಚಾರ
Ordinanace.................ಸುಗ್ರೀವಾಜ್ಞೆ
Green
revolution........ ಹಸಿರು ಕ್ರಾಂತಿ
Transgenic..................ಕುಲಾಂತರಿ
anasthesia...................ಅರಿವಳಿಕೆ
Inferiority
complex.......ಕೀಳರಿಮೆ
Unconscious................ಸುಪ್ತಪ್ರಜ್ಞೆ
Dedicated
to people....ಲೋಕಾರ್ಪಣೆ
Preface........................ಮುನ್ನುಡಿ
ಇಂತಹ
ಅನುವಾದ ಕಾರ್ಯವೇನೊ ಹೊಸದಾಗಿ ಪ್ರಾರಂಭವಾದದ್ದು. ನೂರಾರು ವರ್ಷಗಳಿಂದ ಕನ್ನಡದಲ್ಲಿಯೇ ಸುಂದರವಾದ
ಅನೇಕ ಪದಪುಂಜಗಳು ಸೃಷ್ಟಿಯಾಗಿವೆ. ಉದಾಹರಣೆಗೆ:
ಉದರವೈರಾಗ್ಯ
ಸ್ಮಶಾನಶಾಂತಿ
ಲೋಕಮಾನ್ಯ
ಭಾರತದಲ್ಲಿ
ರಾಜಪ್ರಭುತ್ವವಿದ್ದಂತಹ ಕಾಲದಲ್ಲಿ, ರಾಜರ ಅನುಯಾಯಿಗಳಾದ ಕೆಲವು ಗಣ್ಯರಿಗೆ ‘ರಾಜಮಾನ್ಯ’ ಎನ್ನುವ ಬಿರುದು
ದೊರೆಯುತ್ತಿತ್ತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಶರ ವಿರುದ್ಧ ಸಮರ ಸಾರಿದ ಬಾಲಗಂಗಾಧರ ತಿಲಕರಿಗೆ
ಜನಸಾಮಾನ್ಯರೇ ‘ಲೋಕಮಾನ್ಯ’ ಎನ್ನುವ ಬಿರುದನ್ನು ಇತ್ತರು. ಇಂತಹ ಸುಂದರವಾದ ಪದಗಳ ಸೃಷ್ಟಿಕರ್ತರು
ಸಾಮಾನ್ಯ ಅನಾಮಧೇಯರು. ಇವರನ್ನು ಹುಡುಕಿ ಗೌರವಿಸುವುದು ನಮ್ಮಿಂದ ಸಾಧ್ಯವಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ
ನಮ್ಮ ಇತ್ತೀಚಿನ ಕೆಲವು ಪತ್ರಿಕಾಸಂಪಾದಕರ ಗುಣಪರೀಕ್ಷೆಯನ್ನು ಮಾಡೋಣ!
ಶ್ರೀ
ವಿಶ್ವೇಶ್ವರ ಭಟ್ಟರು ಮೊದಲು ‘ವಿಜಯಕರ್ನಾಟಕ’ ಪತ್ರಿಕೆಯ, ತನ್ನಂತರ ‘ಕನ್ನಡಪ್ರಭಾ’ ಪತ್ರಿಕೆಯ ಸಂಪಾದಕರಾದರು.
‘ಕುಂಬಾರನಿಗೆ
ಒಂದು ವರ್ಷ, ಡೊಣ್ಣೆಗೆ ಒಂದು ನಿಮಿಷ’ ಎನ್ನುವಂತೆ. ನಮ್ಮ ಪತ್ರಿಕಾಪೂರ್ವಜರ ಮಹತ್ಸಾಧನೆಯನ್ನು ಭಟ್ಟರು
ನುಚ್ಚುನೂರು ಮಾಡುತ್ತಿದ್ದಾರೆ. ಒಂದು ಸಮಾಚಾರಪತ್ರಿಕೆಯಲ್ಲಿ ರಂಜನೆಗೂ ಸ್ಥಾನವಿರಲೇ ಬೇಕು. ಆದರೆ
ಅದೇ ಪ್ರಧಾನವಾಗಬಾರದು. ಹಾಗಾದಾಗ, ಪತ್ರಿಕಾಶೈಲಿಯು ಭರತನಾಟ್ಯವಾಗುವ ಬದಲು ‘ತಮಾಶಾ, ನೌಟಂಕಿ’ ಕುಣಿತವಾಗುತ್ತದೆ.
ವಿಶ್ವೇಶ್ವರಭಟ್ಟರು ತಮ್ಮ ವಿಚಿತ್ರ ಪದಪ್ರಯೋಗಗಳ ಮೂಲಕಇದನ್ನು ಸಾಧಿಸುತ್ತಿದ್ದಾರೆ. ಉದಾಹರಣೆಗೆ ‘ಹತ್ಯಾಚಾರ’ ಎನ್ನುವ
ಪದಪ್ರಯೋಗವನ್ನು ನೋಡಿರಿ. ಅತ್ಯಾಚಾರದ ಬಳಿಕ ಮಾಡಿದ ಹತ್ಯೆಯನ್ನು ಸೂಚಿಸಲು ಭಟ್ಟರು ‘ಹತ್ಯಾಚಾರ’
ಎಂದು ಬರೆಯುತ್ತಾರೆ. ಇದನ್ನೇ ‘ಅತ್ಯಾಚಾರ ಹಾಗು ಕೊಲೆ’ ಎಂದರೆ ಆಗದೆ? ತಾವು ಹೊಸ ಪದವೊಂದನ್ನು ಟಂಕಿಸಿರುವದಾಗಿ
ಭಟ್ಟರು ತಮ್ಮನ್ನು ತಾವೇ ಹೊಗಳಿಕೊಳ್ಳಬಹುದು. ಆದರೆ ಇದನ್ನು ನಾನು ‘ಪಂಕ್ ಪ್ರಯೋಗ’ ಎಂದು ಕರೆಯುತ್ತೇನೆ.
ತಲೆಯ ಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡು ತಿರುಗಾಡುವ, ‘ಪಂಕ್’ ಎಂದು ಕರೆಯಿಸಿಕೊಳ್ಳುವ ಯುವಕರನ್ನು
ನೀವು ನೋಡಿರಬಹುದು. ಜನರ ಗಮನ ಸೆಳೆಯಲು ಈ ಹುಚ್ಚಾಟವನ್ನು ಅವರು ಮಾಡುತ್ತಾರೆ. ಇದೊಂದು ತರಹದ ಮನೋರೋಗ.
ವಿಶ್ವೇಶ್ವರ ಭಟ್ಟರು ಕನ್ನಡ ಭಾಷೆಯನ್ನು ‘ಪಂಕ್’ ಮಾಡುತ್ತಿದ್ದಾರೆ. ಆದರೆ ಇದು ಪತ್ರಿಕೆಯಲ್ಲಿ ಬಳಸಲು
ಯೋಗ್ಯವಾದ ಪ್ರಯೋಗವಲ್ಲ.

ಪತ್ರಿಕಾಕನ್ನಡವನ್ನು
ಆಡುಭಾಷೆಯ ಕನ್ನಡವನ್ನಾಗಿ ಮಾಡುವ ದೊಡ್ಡಸ್ತಿಕೆಯೆ ಇದು? ಹಾಗಿದ್ದರೆ, ‘ಮಹಾರಾಜರು ಸಿಂಹಾಸನದ ಮೇಲೆ
ಕುಳಿತರು’ ಅನ್ನುವ ವಾಕ್ಯವನ್ನು ‘ಮಾರಾಜರು ಸಿಂಆಸನದ ಮ್ಯಾಲೆ ಕುಂತರು’ ಎಂದು ಇವರು ಬರೆಯಬಹುದೇನೊ?
ಇನ್ನೂ ಒಂದು ನೆವ ಭಟ್ಟರ ಬತ್ತಳಿಕೆಯಲ್ಲಿ ಇರಬಹುದು: ಲಭ್ಯವಿರುವ ಸ್ಥಳದಲ್ಲಿ ಸಮಾಚಾರವನ್ನು ಹೊಂದಿಸುವ
ಸಲುವಾಗಿ, ಈ ರೀತಿಯಲ್ಲಿ ಬರೆಯಲಾಗಿದೆ, ಎಂದು ಅವರು ಹೇಳಬಹುದು. ಇದು ಒಪ್ಪಲು ಅಸಾಧ್ಯವಾದ ಕುಂಟುನೆವ.
ಅಕ್ಷರಗಳ ಅಳತೆಯನ್ನು ಕಡಿಮೆ ಮಾಡಿದರೆ, ಸ್ಥಳಾವಕಾಶಕ್ಕೇನು ಕೊರತೆಯಾದೀತು? ನಿಜ ಹೇಳಬೇಕೆಂದರೆ ಓದುಗರನ್ನು
ಆಕರ್ಷಿಸಲು ಭಟ್ಟರು ಮಾಡುತ್ತಿರುವ ಡೊಂಬರಾಟವಿದು!
ಭಟ್ಟರು
ಇಷ್ಟಕ್ಕೇ ಸುಮ್ಮನಾಗಿಲ್ಲ. ಆಂಗ್ಲ ಪದಗಳಿಗೆ ತಪ್ಪು ಕನ್ನಡ ಪದಗಳನ್ನು ಸೂಚಿಸುವ ತೆವಲು ಅವರಲ್ಲಿದೆ.
ಭಟ್ಟರು ಈ ಮೊದಲೊಮ್ಮೆ audacity ಪದವನ್ನು ‘ತಿಕಕೊಬ್ಬು’ ಎಂದು ವರ್ಣಿಸಿದಾಗ, ಅದನ್ನು ಖಂಡಿಸಿ ನಾನು
ಇಲ್ಲಿ ಬರೆದಿದ್ದೆ. ಅಂತಹದೇ ತಪ್ಪನ್ನು ಭಟ್ಟರು ಮತ್ತೊಮ್ಮೆ ಮಾಡಿದ್ದಾರೆ. ಅದು ಹೀಗಿದೆ:

ಭಟ್ಟರೆ,
ನೀವು ಇಂಗ್ಲಿಶ್ ಪದಗಳನ್ನೇ ಬಳಸಿರಿ ಅಥವಾ ಕನ್ನಡ ಪದಗಳನ್ನೇ ಬಳಸಿರಿ, ‘ಕನ್ನಡಪ್ರಭಾ’ದ ಓದುಗರಿಗೆ
ಅರ್ಥವಾಗುತ್ತದೆ. ದಯವಿಟ್ಟು ಇಂಗ್ಲಿಶ್ ಪದವನ್ನು ಬಳಸಿ ಅದಕ್ಕೆ ತಪ್ಪು ಕನ್ನಡ ಪದವನ್ನು ಸೂಚಿಸಬೇಡಿ.
ಅದು ಅಮಾಯಕ ಓದುಗರಿಗೆ, ವಿಶೇಷತಃ ವಿದ್ಯಾರ್ಥಿಗಳಿಗೆ ದಾರಿ ತಪ್ಪಿಸಬಹುದು.


ನೀವು ಎಷ್ಟೇ ತಿಳಿಹೇಳಿದರೂ ಭಟ್ಟರು ಎರಡೇ ವಾಕ್ಯಗಳಲ್ಲಿ ನಿಮ್ಮನ್ನು ಚಿತ್ ಮಾಡಿ ಬಿಡುತ್ತಾರೆ: `ಪ್ರತಿಯೊಂದು ಪತ್ರಿಕೆಗೂ ಒಂದು stylesheet ಇರುತ್ತದೆ ; ಇದು ಕನ್ನಡಪ್ರಭಾ ಪತ್ರಿಕೆಯ stylesheet !’
‘ನೀಟಾದ ಸೂಟಿನ ಬಟ್ಟೆ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತೀಯಪ್ಪಾ’
ಎಂದು ನೀವು ಒಬ್ಬ ಎಬಡನಿಗೆ ಹೇಳಿದರೆ, ಆತನು ‘ಲಂಗೋಟಿಯೇ ನನ್ನ style !’ ಎಂದು ಹೇಳಿದನಂತೆ. ಇದೂ
ಹಾಗೆಯೇ!