Tuesday, May 20, 2014

‘ಸಾರಾಸಾರ ವಿಚಾರ ಮಾಡಿದರ............’ ---ಶ್ರೀಧರ ಖಾನೋಳಕರದಿವಂಗತ ಶ್ರೀಧರ ಖಾನೋಳಕರ ಇವರು ಬೇಂದ್ರೆಯವರ ಸಹಪಾಠಿಗಳಾಗಿದ್ದರು. ಜಾನಪದ ಸಾಹಿತ್ಯದಲ್ಲಿ ವಿಶೇಷ ಒಲವು ಹೊಂದಿದ ಇವರು ಉಪಯುಕ್ತ ಜಾನಪದ ಸಂಶೋಧನೆಗಳನ್ನು ಮಾಡಿದವರಾಗಿದ್ದರು. ‘ಸಾರಾಸಾರ ವಿಚಾರ ಮಾಡಿದರ............’ ಎನ್ನುವುದು ಇವರು ‘ಹರದೇಶಿ-ನಾಗೇಶಿ’ ಪದ್ಧತಿಯಲ್ಲಿ ರಚಿಸಿದ ಕನ್ನಡ ಕವಾಲಿಯಾಗಿದೆ. ಈ ಕವಾಲಿಯ ಒಂದು ನುಡಿಯನ್ನು ಹೆಂಗಸರ ಗುಂಪು ಹಾಗು ಮುಂದಿನ ನುಡಿಯನ್ನು ಗಂಡಸರ ಗುಂಪು ಹಾಡುತ್ತದೆ. ಇಂತಹ ಕವಾಲಿಗಳು ಒಂದು ಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ರಾತ್ರಿಯಿಡೀ ಜರಗುತ್ತಿದ್ದವು. ಎರಡೂ ಗುಂಪುಗಳ ನಡುವೆ ತುರುಸಿನ ಸ್ಪರ್ಧೆ ಇರುತ್ತಿತ್ತು.

ಶ್ರೀಧರ ಖಾನೋಳಕರರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು.  ಅವರು ರಚಿಸಿದ ಈ ಕವಾಲಿ ಒಂದು ಕಾಲದಲ್ಲಿ ತುಂಬ ಜನಪ್ರಿಯವಾಗಿತ್ತು.
(ಟಿಪ್ಪಣಿ: ‘ಪಿಂಜಾರ’ ಎಂದರೆ ಅರಳಿಯನ್ನು ಹಿಂಜಿ ಗಾದಿಯನ್ನು ತಯಾರಿಸುವವರು. ಇವರು ಮನೆಯಿಂದ ಮನೆಗೆ ತಿರುಗುತ್ತ ತಮ್ಮ ಕುಲಕಸಬನ್ನು ಮಾಡುತ್ತಿದ್ದರು. ಇವರು ಮುಸಲ್ಮಾನ ಧರ್ಮದವರು. ಈ ಕವಾಲಿಯಲ್ಲಿ ಪಿಂಜಾರ ಎಂದರೆ ಸೇವಕ ಎಂದು ಅರ್ಥೈಸಿಕೊಳ್ಳಬೇಕು.
ಖಾನಾವಳಿ ಎಂದರೆ ಊಟದ ಹೊಟೆಲ್.)
ಕವಾಲಿಯ ಪೂರ್ತಿಪಾಠ ಹೀಗಿದೆ:
 
ಸಾರಾಸಾರ ವಿಚಾರ ಮಾಡಿದರ
ಹೆಣ್ಣು ಆಳತದ ಸಂಸಾರಾ
ಸಾವಿರ ಕುದರಿ ಸರದಾರಾ
ಮನೀ ಹೆಂಡತಿ ಪಿಂಜಾರಾ || ಪಲ್ಲ ||

ಹೆಣ್ಣು : ಹೆಣ್ಣು ಇದ್ದರ ಹಬ್ಬ ಹುಣ್ಣವಿ
           ಹೆಣ್ಣು ಇದ್ದರ ಎಲ್ಲಾ ಪರಿವಾರ
 ಹೆಣ್ಣು ಇದ್ದರ ಮದುವಿ, ಮುಂಜಿವಿ
 ಹೆಣ್ಣಿದ್ದರ ಜೀವನ ಪೂರಾ || ೧ ||

ಗಂಡು :  ಸಾರಾಸಾರ ವಿಚಾರ ಮಾಡಿದರ
            ಗಂಡು ಆಳತದ ಸಂಸಾರಾ
            ರತಿಯ ನಾಚಿಸುವ ರೂಪವಿದ್ದರೂ
            ಕುಂಕುಮ ಹೆಣ್ಣಿಗೆ ಸಿಂಗಾರಾ || ೨ ||

ಹೆಣ್ಣು : ಹೆಣ್ಣು ಇದ್ದರ ಬರ್ರೀ ರಾಯರ
            ಅಂತ ಕರಿಯತಾರ ಎಲ್ಲ ಜನ
            ಹೆಣ್ಣು ಇಲ್ಲದೆ ತಿರುಗುವ ಖೋಡಿಯ
            ಮಾರಿ ಸುರಿಯತದ ಭಣಭಣ || ೩ ||

ಗಂಡು :  ಮನೆತನವೆಂಬುವ ಅರಮನೆ ಇರುವಿಗೆ
            ಗಂಡುಗೋಡೆಗಳೆ ಆಧಾರ
            ಹೆಣ್ಣು ನೋಡಿದರ ಗೋಡೆಗಂಟಿಸಿದ
            ಬಗೆ ಬಗೆ ಬಣ್ಣದ ಚಿತ್ತಾರಾ || ೪ ||

ಹೆಣ್ಣು : ಹೆಣ್ಣು ಇದ್ದರ ಹೋಳಿಗೆ ತುಪ್ಪಾ
            ಕರಿದ ಕಡಬು ಶ್ಯಾವಿಗೆ ಖೀರು
            ಹೆಣ್ಣು ಇಲ್ಲದವನ ಬಾಯಿಗೆ ಹುಳಿ ಹುಳಿ
            ಖಾನಾವಳಿ ಮಜ್ಜಿಗೆ ನೀರಾ || ೫ ||

ಗಂಡು :  ಗಂಡೆಂಬುದೆ ದುಂಡು ಕುಂಕುಮಾ
            ಹೆಣ್ಣಿನ ಚಲುವಿನ ಚಂದ್ರಾಮಾ
            ಹೆಣ್ಣಿನ ಜನುಮದ ಮುಗಿಲು ಬೆಳಗುವುದು
            ಹುಣ್ಣಿಮೆ ಬೆಳದಿಂಗಳ ಬೆಳಕಾ || ೬ ||

ಹೆಣ್ಣು : ಹೆಣ್ಣು ಇದ್ದರ ಸೊಗಸು ಮನಿವಳಗ
            ಹೋಗಿ ಬರೋರಿಗೆ ತೆರಪಿಲ್ಲ
            ಹುಡುಗರು ಹುಪ್ಪಡಿ ತಿಂದು ಉಳಿಯತಾವ
            ನಕ್ಕು ನಲಿಯತಾವ ಹಗಲೆಲ್ಲ || ೭ ||

ಇಬ್ಬರೂ : ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಗಂಡೂ ಹೆಣ್ಣೂ ಕೂಡಿ ನಡೆದರ
ಬಾಳು ಆಗತದ ಬಂಗಾರಾ || ೮ ||
ಗಂಡು ಹೆಣ್ಣು ಕೂಡಿ ನಡೆದರ
            ಕೆನೆ ಹಾಲು ಸಕ್ಕರೆಯ ರುಚಿ
            ಕಬ್ಬಿನ ರಸದಾಗೆ ಜೇನು ಕೂಡಿದರ
            ಎನು ಹೇಳಬೇಕದರ ರುಚಿ || ೯ ||
           
ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ || ೧೦ ||
                                                ---ಶ್ರೀಧರ ಖಾನೋಳಕರ

7 comments:

Anil Talikoti said...

ಆಹಾ ಸುನಾಥ ಕಾಕಾ - ಇವು ಒಂಥರಾ ಒಗಟ ಇದ್ದಂಗ ಅವ. ಪ್ರೀತಿ ಆಳತದ ಸಂಸಾರಾ, ಇಲ್ಲದಿದ್ದರೆ ಅಳತದ ಸಂಸಾರ!

Badarinath Palavalli said...

ನಿಜ ಹೇಳಬೇಕೆಂದರೇ ಈ ಮೂಢನಿಗೆ ದಿ. ಶ್ರೀಧರ ಖಾನೋಳಕರ ಅವರಂತ ಕವಿಯೊಬ್ಬ ಇದ್ದರು ಎನ್ನುವ ಅರಿವಾದದ್ದೇ ಇದೀಗ, ನಿಮ್ಮ ಬರಹದ ಮೂಲಕ!

‘ಹರದೇಶಿ-ನಾಗೇಶಿ’ ಪದ್ಧತಿಯು ಜಾನಪದ ಶೈಲಿಯ ಹಾಡುಗಾರಿಕೆ ಎಂದು ಕೇಳಿದ್ದೆ, ಅದು ಕವಾಲಿ ಎನ್ನುವುದು ಈಗ ಮನದಟ್ಟಾಯಿತು. . ಅದು ಸರಿಯೇ?

ಹಿಂದೊಮ್ಮೆ ಪಿಂಜಾರ ಪೋಲ್ ಎನ್ನುವ ಪದ ಪುಂಜ ಕೇಳಿದ್ದೇ.

'ಹೆಣ್ಣು ನೋಡಿದರ ಗೋಡೆಗಂಟಿಸಿದ
ಬಗೆ ಬಗೆ ಬಣ್ಣದ ಚಿತ್ತಾರಾ'
ವಾವ್ ಕವಿಯೇ!!!

ಇನ್ನುಮೇಲೆ ನಾನೂ 'ಸಾರಾಸಾರ ವಿಚಾರ ಮಾಡಿ'ಯೇ ನೋಡುತ್ತೇನೆ ಸರ.

sunaath said...

ಅನಿಲರೆ,
‘ಪ್ರೀತಿ ಆಳತದ ಸಂಸಾರ, ಇಲ್ಲದಿದ್ದರೆ ಅಳತದ ಸಂಸಾರಾ’ ಎನ್ನುವ ಮೂಲಕ ನೀವು ಖಾನೋಳಕರರ ಈ ಕವನಕ್ಕೆ ಹೊಸದೊಂದು ರುಚಿಯನ್ನು ಸೇರಿಸಿದ್ದೀರಿ!

sunaath said...

ಬದರಿನಾಥರೆ,
ಶ್ರೀಧರ ಖಾನೋಳಕರರು ಜಾನಪದ ವಿಷಯದಲ್ಲಿ ಬಹಳಷ್ಟು ಕೆಲಸ ಮಾಡಿದವರು. ಅಕಾಲಿಕ ನಿಧನದಿಂದಾಗಿ ಅವರೊಡನೆ ಅವರ ಕಾರ್ಯವೂ ಕಣ್ಮರೆಯಾಯಿತು. ‘ಪಿಂಜಾರಪೋಲ್’ ಅನ್ನುವುದು ಸರಿಯಾದ ಪದವಲ್ಲ. ‘ಪಾಂಜರಪೋಳ’ ಎನ್ನುವುದು ಸರಿಯಾದ ಪದ. ಇದರ ಅರ್ಥ ‘ಕೊಂಡವಾಡೆ’.

Badarinath Palavalli said...

ಧನ್ಯವಾದಗಳು ಸಾರ್
:)

Kalavatimadhisudan said...

sunaath sir hosatagi vishesha jaanapada kaviyobbara parichayisiddakkaagi dhanyavaadagalu.haagu E kavtege vicharapoornavagi pratikriyisiruva
badarinaath palavalliyavarigoo,anilravrigu Athmiya dhanyavaadagalu.

sunaath said...

ಕಲಾವತಿಯವರೆ,
ಶ್ರೀಧರ ಖಾನೋಳಕರರು ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡದ್ದರಿಂದ, ಅವರು ಮಾಡಿದ ಕಾರ್ಯ ಹಾಗು ಅವರ ಹೆಸರು ಮಸಕಾಗಿ ಹೋದವು.
ಪ್ರತಿಕ್ರಿಯೆಗಾಗಿ ಧನ್ಯವಾದಗಳು.