ಸೂಜಿಯೇ
ನೀನು ಸೂಜಿಯೇ
ಈ
ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ ||ಪಲ್ಲ||
ಹರಿಯ
ಶಿರದ ಮ್ಯಾಲೆ ಮೆರೆದಂಥ ಸೂಜಿಯೇ
ಹರನ
ಕಪಾಲದಿ ಬೆರೆದಂಥ ಸೂಜಿಯೇ
ಮರವಿಯ
ಅರವಿಯ ಹೊಲಿದಂಥ ಸೂಜಿಯೇ
ಮರೆ
ಮೋಸವಾಗಿ ಮಾಯವಾದಂಥ ಸೂಜಿಯೇ ||೧||
ತಂಪುಳ್ಳ
ಉಕ್ಕಿನೋಳ್ ಹುಟ್ಟಿದ ಸೂಜಿಯೇ
ಶಿಂಪಿಗರಣ್ಣಗೆ
ಬಲವಾದ ಸೂಜಿಯೇ
ಇಂಪುಳ್ಳ
ದಾರಕ್ಕೆ ಸೊಂಪುಗೂಡಿಸುವಂಥ
ಕಂಪನಿ
ಸರಕಾರ ವಶವಾದ ಸೂಜಿಯೇ ||೨||
ಅಂಗಳ
ಬೈಲೊಳು ಹೋದಂಥ ಸೂಜಿಯೇ
ಸಿಂಗಾರದಂಗಿಯ
ಹೊಲಿವಂಥ ಸೂಜಿಯೇ
ತುಂಗಶಿಶುನಾಳಧೀಶನ
ಸೇವಕ
ರಂಗಿಲಿ
ಹುಡುಕಲು ಸಿಗದಂಥ ಸೂಜಿಯೇ ||೩||
ಶಿಶುನಾಳ
ಶರೀಫರ ಬಹುತೇಕ ಗೀತೆಗಳು ಭೌತಿಕ ವರ್ಣನೆಯಿಂದ ಪ್ರಾರಂಭವಾಗಿ ಪಾರಭೌತಿಕ ವರ್ಣನೆಯಲ್ಲಿ ಕೊನೆಗೊಳ್ಳುತ್ತವೆ.
ಆದರೆ ಈ ಕವನವು ಪ್ರಾರಂಭವಾಗುವುದು ಪೌರಾಣಿಕ ವರ್ಣನೆಯಿಂದ; ಮಧ್ಯದಲ್ಲಿ ವರ್ಣಿಸುವುದು ಪ್ರಸ್ತುತ
ವ್ಯಾವಹಾರಿಕ ಕಾಲದ ಮಾತನ್ನು. ಅಂತ್ಯಗೊಳ್ಳುವುದು ಪಾರಮಾರ್ಥಿಕ ಸಂದೇಶದೊಂದಿಗೆ. ಈ ವಿಪರ್ಯಾಸಕ್ಕೆ
ಕಾರಣ ಇಂತಿದೆ:
ಸೂಜಿ
ಎಂದರೆ ಒಂದು ಪುಟ್ಟ ಭೌತಿಕ ವಸ್ತು. ಆದರೆ ಅದರ ಮೂಲಕ
ಶರೀಫರು ಒಂದು ಮಹತ್ವದ ವಿಷಯವನ್ನು ತಿಳಿಸಹೊರಟಿದ್ದಾರೆ. ಆದುದರಿಂದ ಶರೀಫರು ಈ ಪುಟ್ಟ ಸೂಜಿಯನ್ನು
ನಮ್ಮ ಪೌರಾಣಿಕ ದೇವತೆಗಳ ಸಂಗಾತಿಯನ್ನಾಗಿ ಮಾಡಿ, ಆ ಸೂಜಿಗೆ ಘನತೆಯನ್ನು ತಂದು ಕೊಡುತ್ತಿದ್ದಾರೆ.
ಇದರ ಹಿನ್ನೆಲೆ ಹೀಗಿದೆ:
ಬ್ರಿಟಿಶರು
ಭಾರತವನ್ನು ಆಕ್ರಮಿಸುತ್ತಿದ್ದಂತೆ, ಭಾರತದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿ, ಬ್ರಿಟನ್ನದ ತಿಜೋರಿಯನ್ನು
ತುಂಬಲು ಪ್ರಾರಂಭಿಸಿದರು. ಭಾರತೀಯರು ಕೇವಲ ಕಚ್ಚಾ ವಸ್ತುಗಳನ್ನು ಉತ್ಪಾದಿಸಿ, ಬ್ರಿಟನ್ನಿಗೆ ಸೋವಿಯಾಗಿ
ಒದಗಿಸಬೇಕು. ಬ್ರಿಟನ್ನಿನಲ್ಲಿ ಉತ್ಪಾದಿಸಿದ ವಸ್ತುಗಳು ದುಬಾರಿ ದರದಲ್ಲಿ ಭಾರತದಲ್ಲಿ ಮಾರಾಟವಾಗಬೇಕು.
ಇಂತಹ ರಕ್ತಶೋಷಣೆಯ ಅರ್ಥನೀತಿಯನ್ನು ಬ್ರಿಟಿಶ್ ಪ್ರಭುತ್ವವು ತಮ್ಮ ವಸಾಹತುಗಳಲ್ಲಿ ಪ್ರಾರಂಭಿಸಿತು.
ಗಾಂಧೀಜಿಯವರ ಚರಕಾ ಚಳವಳಿಯು ಇಂತಹ ಕುಹಕ ನೀತಿಗೆ ಸೆಡ್ಡು ಹೊಡೆದು ನಿಂತಿದ್ದು ನಮ್ಮ ಸ್ವಾತಂತ್ರ್ಯ
ಹೋರಾಟದ ಒಂದು ಭಾಗವಾಗಿದೆ.
ಈ
ನೀತಿಯ ದುಷ್ಪರಿಣಾಮವನ್ನು ಅನುಭವಿಸಿದವರು ಅನೇಕರು. ಉದಾಹರಣೆಗೆ ಭದ್ರಾವತಿಯ(-- ಆ ಕಾಲದಲ್ಲಿ ಇದರ
ಹೆಸರು ‘ಬೆಂಕಿಪುರ’ ಎಂದಿತ್ತು--) ಆಸುಪಾಸಿನ ಕಬ್ಬಿಣದ ಕೈಗಾರಿಕೆಗಳನ್ನು ಬ್ರಿಟಿಶರು ನಿರ್ಬಂಧಿಸಿದರು.
ಅದರಿಂದಾಗಿ ಅನೇಕ ಕಮ್ಮಾರರು ತಮ್ಮ ಬದುಕನ್ನೇ ಕಳೆದುಕೊಂಡರು. ಇಂತಹ ದುಷ್ಕೃತ್ಯಗಳನ್ನು ಕಂಡು, ಪರಿತಪಿಸಿದವರಲ್ಲಿ
ಶರೀಫರೂ ಒಬ್ಬರು. ಭಾರತದಲ್ಲಿ ಸೂಜಿಗಳನ್ನು ಸಹ ತಯಾರಿಸಕೂಡದು; ಒಂದು ಪುಟ್ಟ ಸೂಜಿಯೂ ಸಹ ಬ್ರಿಟನ್ನಿನಿಂದಲೇ
ಭಾರತಕ್ಕೆ ಆಮದಾಗಿ ಬರಬೇಕು ಎನ್ನುವ ಕಟ್ಟಳೆಯನ್ನು ಬ್ರಿಟಿಶರು ವಿಧಿಸಿದಾಗ ಸೂಜಿ ತಯಾರಕರು ಮೌನವಾಗಿ
ಈ ಕಟ್ಟಳೆಗೆ ಶರಣಾಗಿರಬಹುದು. ಆದರೆ ಶರೀಫರು ಮಾತ್ರ, ತಮ್ಮ ವ್ಯಥೆಗೆ ಕವನದ ರೂಪವನ್ನು ಕೊಟ್ಟರು.
ಮಾಯದ ಸೂಜಿಯು ಅವರ ಗೀತೆಯಲ್ಲಿ ಮಾಯವಾದ ಸೂಜಿಯಾಯಿತು!
ಶರೀಫರ
ತತ್ವಪದಗಳಲ್ಲಿ ವ್ಯಂಗ್ಯ ಇರುವದಿಲ್ಲ. ಆದರೆ ಈ ಗೀತೆಯು ತತ್ವಪದವಲ್ಲ. ಆದುದರಿಂದ ವ್ಯಂಗ್ಯವು ಈ ಗೀತೆಯ
ಪಲ್ಲದಲ್ಲಿಯೇ ಕಾಣುತ್ತದೆ. ‘ಈ ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ’ ಎಂದು ಹಾಡುವಾಗ, ಶರೀಫರು ಬ್ರಿಟಿಶ್
ಪ್ರಭುತ್ವವನ್ನು ಅಣಕಿಸುತ್ತಿದ್ದಾರೆ. ಬ್ರಿಟಿಶ್ ಸರಕಾರವು ಒಂದು ಸೂಜಿಯನ್ನೂ ಸಹ ಬಿಡದೆ, ತನ್ನ ನಿರಂಕುಶ
ಅಧಿಕಾರವನ್ನು ಭಾರತದಲ್ಲೆಲ್ಲ ಚಲಾಯಿಸಿದೆ ಎನ್ನುವುದು ಒಂದು ಅರ್ಥವಾದರೆ, ಈ ‘ತೇಜ’ ಅಂದರೆ ಈ ‘ಬಿಸಿ’ಯು
ಭಾರತೀಯರನ್ನು ತಟ್ಟಿದೆ ಎನ್ನುವುದು ವಿಶೇಷ ಅರ್ಥವಾಗಿದೆ.
ಸೂಜಿ
ನೋಡಲಿಕ್ಕೆ ಚಿಕ್ಕದು; ಅದರ ನಿರ್ಬಂಧದ ಹಿಂದಿನ ದುರ್ನೀತಿ ಮಹತ್ವದ್ದು ಎನ್ನುವುದನ್ನು ಅನ್ಯೋಕ್ತಿಯಿಂದ
ತಿಳಿಸಲೆಂದೇ ಶರೀಫರು ಒಂದನೆಯ ನುಡಿಯಲ್ಲಿ ಈ ಕ್ಷುಲ್ಲಕ ಸೂಜಿಯ ಅಲೌಕಿಕ ಕಾರ್ಯವನ್ನು ವಿವರಿಸುತ್ತಾರೆ.
ಸೃಷ್ಟಿಯ ನಿರ್ವಹಣೆಯು ಹರಿಯ ಕಾರ್ಯ. ಸೂಜಿಯ ಕಾರ್ಯವೂ ಸಹ ಬಟ್ಟೆಯ ನಿರ್ವಹಣೆ. ಆದುದರಿಂದಲೇ ಲೌಕಿಕ
ಮಾಯಾವಸನದ ಅಂದರೆ ಮಾಯಾಪ್ರಪಂಚದ ನಿರ್ವಹಣೆಯನ್ನು
ಮಾಡುತ್ತಿರುವುದು ಈ ಸೂಜಿ. ಸೃಷ್ಟಿಯನ್ನು ಲಯಗೊಳಿಸುವುದು ಹರನ ಕೆಲಸ. ಶಿವನು ಬ್ರಹ್ಮನ ಒಂದು ಕಪಾಲವನ್ನು
ತರಿದಾಗ, ಆ ಕಪಾಲವು ಅವನ ಹಸ್ತಕ್ಕೆ ಅಂಟಿಕೊಂಡಿತು. ಶರೀಫರು ಈ ಕಾರ್ಯದಲ್ಲಿಯೂ ಸಹ ಸೂಜಿಯು ಶಿವನೊಡನೆ
ಭಾಗಿಯಾಗಿತ್ತು ಎಂದು ತಮಾಶೆ ಮಾಡುತ್ತಾರೆ. ಇಂತಹ ಸೂಜಿಯ ಸಹಾಯದಿಂದಲೇ ಶಿವನು ಮಾಯಾಪ್ರಪಂಚವನ್ನು
ಲಯಗೊಳಿಸುತ್ತಾನೆ. ಎಂಥಾ ಮಹತ್ವದ ಸೂಜಿ ಇದು! ಇದೀಗ ಈ ಸೂಜಿಯು ಮರೆ, ಮೋಸದಿಂದ ಮಾಯವಾಗಿ ಹೋಗಿದೆ.
ಈ ಕೈವಾಡವು ಬ್ರಿಟಿಶರದು ಎಂದು ಬಿಚ್ಚಿ ಹೇಳಬೇಕಾಗಿಲ್ಲ.
ಎರಡನೆಯ
ನುಡಿಯಲ್ಲಿ ಶರೀಫರು ಪಾರಲೌಕಿಕದಿಂದ ಲೌಕಿಕಕ್ಕೆ ಇಳಿಯುತ್ತಾರೆ. ಸೂಜಿಯನ್ನು (ಆ ಕಾಲದಲ್ಲಿ ಭಾರತೀಯರು)
ನಿರ್ಮಿಸುತ್ತಿದ್ದ ವಿಧಾನವೇನು? ಉಕ್ಕನ್ನು ಕಾಯಿಸಿ, ಹದವಾಗಿ ತಂಪುಗೊಳಿಸಿ ಸೂಜಿಯನ್ನು ನಿರ್ಮಿಸಬೇಕಾಗುತ್ತದೆ.
ಈ ರೀತಿಯಾಗಿ ತಯಾರಾದ ಸೂಜಿಯನ್ನು ಉಪಯೋಗಿಸುವವನು ಬಟ್ಟೆ ಹೊಲಿಯುವ ಸಿಂಪಿಗನು. ಈ ಎಲ್ಲ ಕೆಲಸಗಳು ನಿರಾಳವಾಗಿ ಸಾಗುತ್ತಿದ್ದಾಗ, ಈ ಸೂಜಿಯು
ಕಂಪನಿ ಸರಕಾರದ ವಶವಾಗಿರುವುದು ದುರದೃಷ್ಟಕರ.
ಕೊನೆಯ
ನುಡಿಯಲ್ಲಿ ಶರೀಫರು ಮತ್ತೆ ತಮ್ಮ ಪಾರಮಾರ್ಥಿಕ ತತ್ವಕ್ಕೆ ಮರಳುತ್ತಾರೆ. ಬಯಲಾಗಿ ಹೋಗುವುದು ಎಂದರೆ
ಮಾಯವಾಗುವುದು. ಲೌಕಿಕವಾಗಿ ಭಾರತೀಯರ ಕೈಯಿಂದ ಈ ಸೂಜಿ ಮಾಯವಾಗಿ ಬ್ರಿಟಿಶರ ಕೈವಶವಾಯಿತು. ಆದರೆ ಪಾರಲೌಕಿಕವಾಗಿ
ಈ ಸೂಜಿ ನಮ್ಮಲ್ಲಿಯೇ ಇದೆ; ‘ಸಿಂಗಾರದ ಅಂಗಿ’ಯನ್ನು
ಅಂದರೆ ಅಲೌಕಿಕ ಅಂಗಿಯನ್ನು ಅದು ಹೊಲೆಯುತ್ತಲೇ ಇದೆ. ಆದರೆ ಅದು ಲೌಕಿಕ ಕಣ್ಣಿಗೆ ಬೀಳುವ ಸೂಜಿಯಲ್ಲ.
ಶಿಶುನಾಳಾಧೀಶನ ಸೇವಕರಲ್ಲಿ ಹುಡುಕಿದರೂ ಸಹ, ಆ ಸೂಜಿಯು ಅಂದರೆ ಪರಮಾತ್ಮನ ಆ ಉಪಕರಣವು ಅದೃಶ್ಯವಾಗಿಯೇ
ಇರುತ್ತದೆ.
ಈ
ಕವನದ ಮೂಲಕ ಶರೀಫರು ತಮ್ಮ ಸುತ್ತಲಿನ ಸಾಮಾಜಿಕ ಹಾಗು ರಾಜಕೀಯ ಪರಿಸ್ಥಿತಿಯನ್ನು ಹೇಗೆ ಗ್ರಹಿಸುತ್ತಿದ್ದರು
ಎನ್ನುವುದನ್ನು ನೋಡಬಹುದು. ಶರೀಫರ ಪ್ರಾಪಂಚಿಕ ಗ್ರಹಿಕೆ ಏನೇ ಇರಲಿ, ಅವರ ಮನಸ್ಸು ಸದಾಕಾಲ ಪಾರಮಾರ್ಥಿಕ
ಒಳ ಅರ್ಥದ ಕಡೆಗೆ ಹರಿಯುತ್ತಿರುವುದು ಅವರ ಮನೋಧರ್ಮದ ಹಾಗು ಅವರ ಗೀತೆಗಳ ವೈಶಿಷ್ಟ್ಯವಾಗಿದೆ. ಆದುದರಿಂದಲೇ
ಮಾಯವಾದ ಸೂಜಿಯು ಮಾಯದ ಸೂಜಿಯಾಗಿ ಅವರ ಕವನವನ್ನು ಹೆಣೆದಿದೆ!
(ಶರೀಫರ ಈ ಗೀತೆಯನ್ನು ನನಗೆ ಒದಗಿಸಿ, ನನ್ನೊಂದಿಗೆ ಚರ್ಚಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.)
(ಶರೀಫರ ಈ ಗೀತೆಯನ್ನು ನನಗೆ ಒದಗಿಸಿ, ನನ್ನೊಂದಿಗೆ ಚರ್ಚಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.)
16 comments:
ಶರೀಫರ ಈ ಪದ್ಯ ಓದಿರರಲಿಲ್ಲ. ಧನ್ಯವಾದಗಳು.
ಪ್ರಜ್ಞಾ ಮೇಡಮ್,
ಶರೀಫರ ವಿವಿಧ ಗೀತೆಗಳು ಒಂದೇ ಸಂಕಲನದಲ್ಲಿ ಲಭ್ಯವಿಲ್ಲ. ಈ ಗೀತೆಯು ನನಗೆ ಇತ್ತೀಚೆಗೆ ಲಭ್ಯವಾಯಿತು. ಗೀತೆಯನ್ನು ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.
ಪುಟ್ಟ ಸೂಜಿಯ ಮೂಲಕ ಸಾಮಾಜಿಕ ವೈಪರಿತ್ಮಯಗಳು ಮತ್ತು ಪಾರಮಾರ್ಥಿಕ ವೈಚಾರಿಕತೆ ಹೀಗೆ ಸಮಸ್ತವನ್ನೂ ಕಟ್ಟಿಕೊಟ್ಟ ಶರೀಫರಿಗೆ ನಮನ.
ತಾವು ವಿವರಿಸುತ್ತಾ ಹೋದಂತೆಲ್ಲ ಕವನಗಳು ಮತ್ತಷ್ಟು ಆಪ್ತವಾಗುತ್ತಾ ಹೋಗುತ್ತಿವೆ. ಧನ್ಯವಾದಗಳು.
ಅಬ್ಬಾ ಸೂಜಿಯ ಬಗ್ಗೆನೂ ಕವಿತೆ ... ಶರೀಫ಼ಜ್ಜ ಸಮಾಜದ ನೋವಿಗೆ ಸ್ಪಂದಿಸಿದ ರೀತಿ ಅನನ್ಯ ಹಾಗೇ ನಿಮ್ಮ ವಿವರಣೆ ಸಹ.
ವಂದನೆಗಳು
ಬದರಿನಾಥರೆ,
ಶರೀಫರ ಗೀತೆಗಳು ಅನೇಕ ಸ್ತರಗಳನ್ನು ಒಳಗೊಂಡ ಗಾಢವಾದ ಗೀತೆಗಳಾಗಿವೆ. ತಿಳಿದಷ್ಟೂ ಅರ್ಥ ಅಲ್ಲಿ ಹೊಳೆಯುತ್ತದೆ!
ಸ್ವರ್ಣಾ,
ಶರೀಫರು ಕಣ್ಣಿಗೆ ಕಂಡದ್ದನ್ನು, ತಮ್ಮ ಒಳಗಣ್ಣಿಗೆ ಹೊಳೆದದ್ದನ್ನು ಹಾಡಿದ್ದಾರೆ. ಅವರ ಬೋಧನೆಯು ನಮಗೆ ಮುಟ್ಟಬೇಕಷ್ಟೆ!
ಶರೀಫರು ಬರೆದ ಉತ್ತಮವಾದ ಗೀತೆಯನ್ನು ಪರಿಚಯ ಮಾಡಿದ್ದಕ್ಕೆ ನಿಮೆಗೆ ಧನ್ಯವಾದಗಳು ಸಾರ್..... ಒಂದು ಚಿಕ್ಕ ಸೂಜಿಯ ವಿಷಯವನ್ನಿಟ್ಟುಕೊಂಡು ಬ್ರಿಟಿಷರನ್ನು ಚೆನ್ನಾಗಿಯೇ ತರಾಟೆ ತೆಗೆದುಕೊಂಡಿದ್ದಾರೆ.....!!!
ಮಂಜುಳಾದೇವಿಯವರೆ,
ಶರೀಫರು ಬ್ರಿಟಿಶರ ಮೋಸದಾಟವನ್ನು ಅರ್ಥ ಮಾಡಿಕೊಳ್ಳುತ್ತಿದ್ದರೆನ್ನುವುದು, ಅವರು ಸಂತರಷ್ಟೇ ಅಲ್ಲ, ಆದರೆ ರಾಜಕೀಯ ಹಾಗು ಸಾಮಾಜಿಕ ವಿಶ್ಲೇಷಕರೂ ಆಗಿದ್ದರು ಎನ್ನುವುದನ್ನು ಸೂಚಿಸುತ್ತದೆ.
ಪ್ರೀತಿಯ ಕಾಕಾ
ಇದು ಒಂದು ಹೊಸ ದೃಷ್ಟಿ, ಆಲೋಚನೆ.
ತುಂಬ ಇಷ್ಟ ಆಯ್ತು.
ಇದನ್ನ (ನಿಮ್ಮ ಬ್ಲಾಗ್ ಲಿಂಕನ್ನ) ಫೇಸ್ಬುಕ್ಕಲ್ಲಿ ಹಾಕ್ಬಿಟ್ಟಿದೀನಿ. ನಿಮ್ಮನ್ನ ಕೇಳದೆಯೇ ಕ್ಷಮಿಸಿ.
ಪ್ರೀತಿಯಿಂದ,
ಸಿಂಧು
sunath sir sharif ravara arthapoornavada rachaneyannu mattu adara vivaravannu Apthavaagisiddakkaagi tumbaa dhanyavaadagalu.ondondu anuvigoo tannade Adantaha vishesha vyaktitvaviruttadembudu E rachaneyalli vedyavaagide.namma kaaryakramakke tamminda labhyavada amulya rachanegaagi hrithpoorvaka dhanyavaadagalu.
ಸಿಂಧು,
ಕೃತಿಸ್ವಾಮ್ಯ ಶರೀಫರದು! ಕಾಕಾನ ಲೇಖನವನ್ನು ಯಾವ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಅಧಿಕಾರ ನಿಮಗಿದೆ!
ಕಲಾವತಿಯವರೆ,
ನನ್ನಿಂದ ಏನಾದರೂ ಉಪಯೋಗವಾದರೆ, ನಾನು ಧನ್ಯ!
ಸುನಾಥರೆ
ಶಿಶುನಾಳ ಶರೀಫರು ಬ್ರಿಟಿಶ ಬಲೂನಿಗೆ ಚೆನ್ನಾಗಿ ಸೂಜಿ ತಾಕಿಸಿದ್ದಾರೆ.
ಅನಿಲರೆ,
ಶರೀಫರ ವ್ಯವಹಾರ ಜ್ಞಾನವನ್ನು ಇದು ಸೂಚಿಸುತ್ತದೆ!
ಬಹುಶಃ ಕನ್ನಡದಲ್ಲೇ ಅರ್ಥ ಒಳಾರ್ಥಗಳಿರುವ ಅನೇಕ ಗೀತೆಗಳಿವೆ .. ಓದಿದರೆ ಅಯ್ಯೋ ಅರ್ಥ ಆಗ್ಲಿಲ್ಲ ಅಂತ ಸುಮ್ನೆ ಕೂರುತ್ತೇವೆ ನಮ್ಮಂಥವರು ...
ಆದರೆ ಅಂಥ ಒಳ್ಳೆಯ ಗೀತೆಗಳ ಅರ್ಥಗಳನ್ನು ಎಷ್ಟು ಸಲೀಸಾಗಿ ಅರ್ಥವಾಗುವಂತೆ ಕಟ್ಟಿಕೊಡುತ್ತೀರಿ ಕಾಕ ..
ಖುಷಿಯಾಯ್ತು ಗೀತೆ ಮತ್ತು ಅರ್ಥ ಎರಡೂ
ಧನ್ಯವಾದಗಳು,ಸಂಧ್ಯಾ!
Post a Comment