Thursday, October 23, 2014

ವಂದೇ ಭಾರತಮ್-೩ಪ್ರಾಗೈತಿಹಾಸಿಕ ಭಾರತದ ಸ್ಮರಣೀಯ ವ್ಯಕ್ತಿಗಳಲ್ಲಿ ಶ್ರೀರಾಮಚಂದ್ರನಿಗೇ ಪ್ರಧಾನ ಸ್ಥಾನ ಇರುವುದು ಸಹಜವಾಗಿದೆ. ಧರ್ಮದ ಮೂರ್ತರೂಪನಿವನು. ಪಿತೃವಾಕ್ಯಪಾಲನೆ, ಏಕಪತ್ನೀವ್ರತ ಮೊದಲಾದ ವೈಯಕ್ತಿಕ ಆದರ್ಶಗಳಲ್ಲದೇ, ಒಬ್ಬ ರಾಜನಿರಗಿರಬೇಕಾದ ನ್ಯಾಯವಿವೇಚನೆ ಸಹ ಶ್ರೀರಾಮಚಂದ್ರನ ಶ್ರೇಷ್ಠ ಗುಣವಾಗಿದೆ. ರಾಜನ ಹೆಂಡತಿಯು ಸಂಶಯಾತೀತಳಾಗಿರಬೇಕು ಎನ್ನುವ ಉದ್ದೇಶದಿಂದಲೇ ಶ್ರೀರಾಮಚಂದ್ರನು ಸೀತೆಯನ್ನು ಕಾಡಿಗಟ್ಟಿದ. ಆದುದರಿಂದಲೇ ‘ರಾಮರಾಜ್ಯ’ ಎನ್ನುವುದು ಈಗಲೂ ಭಾರತೀಯರ ಆದರ್ಶವಾಗಿದೆ. ಶ್ರೀರಾಮನ ಕಾಲದಲ್ಲಿ ಅವನ ರಾಜ್ಯವಿಸ್ತರಣೆಯು ಸ್ನೇಹಸಂಧಾನಗಳಿಂದ ಆದದ್ದನ್ನು ನೋಡಬಹುದು. ಇದು ತ್ರೇತಾಯುಗದ ಕತೆ. ದ್ವಾಪರಯುಗದ ಸಮಯದಲ್ಲಿ ಆರ್ಯಾವರ್ತದಲ್ಲಿ ನೂರಾರು ಜಗಳಗಂಟ ಪಾಳೆಯಗಾರರು ಹುಟ್ಟಿದರು. ಅವರ ಕತೆಯೇ ಮಹಾಭಾರತ. ಈ ಅವಧಿಯ ಅತ್ಯಂತ ವರ್ಣರಂಜಿತ ವ್ಯಕ್ತಿತ್ವವೆಂದರೆ ಶ್ರೀಕೃಷ್ಣನದು.

ಶ್ರೀಕೃಷ್ಣನು ಅಪ್ಪಟ ಕನ್ನಡಿಗನೆಂದರೆ ದಯವಿಟ್ಟು ಹುಬ್ಬೇರಿಸಬೇಡಿ. ಕೃಷ್ಣ ಎನ್ನುವುದು ಸಂಸ್ಕೃತದ ಒಂದು ವಿಶೇಷಣ ಪದ ಅಷ್ಟೇ. ಇದರರ್ಥ ಕಪ್ಪು. ಈತನು ಕಪ್ಪು ಬಣ್ಣದವನು ಎನ್ನುವದೇ ಈತನು ಆರ್ಯೇತರನಾಗಿರಬಹುದು ಎನ್ನುವ ಅನುಮಾನವನ್ನು ಹುಟ್ಟಿಸುತ್ತದೆ. ಕೃಷ್ಣನಿಗೆ ಕನ್ನಯ್ಯ ಎಂದೂ ಕರೆಯುತ್ತಾರೆ.  ಆರ್ಯಭಾಷೆಗಳಲ್ಲಿ ಕೃಷ್ಣ ಪದವು ಕಿಶನ್ ಎಂದು ಅಪಭ್ರಂಶಗೊಳ್ಳುತ್ತದೆ; ಕನ್ನಡದಲ್ಲಿ ಕಿಟ್ಟಣ್ಣ ಎಂದಾಗುತ್ತದೆ. ಆದುದರಿಂದ ಕಣ್ಣ ಮತ್ತು ಅದರದೇ ರೂಪವಾದ ಕನ್ನಯ್ಯ ಇವು ಕೃಷ್ಣ ಪದದ ರೂಪಗಳಲ್ಲ; ಇವು ಸಂಪೂರ್ಣವಾಗಿ ಸ್ವತಂತ್ರವಾದ ಕನ್ನಡ ಪದಗಳು.  

ಕೃಷ್ಣನು ಜೀವಿಸಿದ ಅವಧಿಯಲ್ಲಿ ಆರ್ಯೇತರರು(-ನಮ್ಮ ಮಟ್ಟಿಗೆ ಕನ್ನಡಿಗರು-) ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿದ್ದರು. ಇದಕ್ಕೆ ಒಂದು ಬಲವಾದ ಸಾಕ್ಷಿ ಎಂದರೆ, ನೇಪಾಳದ ಯುವರಾಜ ಸಿದ್ಧಾರ್ಥನ (ಬುದ್ಧನ) ಸಾರಥಿಯ ಹೆಸರು ಚೆನ್ನ ಎಂದಿರುವುದು. ಈ ಹೆಸರು ನನ್ನ ಕಲ್ಪನೆ ಅಂತೂ ಅಲ್ಲ. ನೀವು ಯಾವುದೇ ಕಥೆ ಅಥವಾ ಪುರಾಣ ಅಥವಾ ಸಂಶೋಧನೆಯನ್ನು ನೋಡಿದರೂ ಸಹ ಚೆನ್ನ ಎನ್ನುವವನೇ ಸಿದ್ಧಾರ್ಥನ ಅರ್ಥಾತ್ ಬುದ್ಧನ ಸಾರಥಿಯಾಗಿದ್ದ ಎನ್ನುವ ದಾಖಲೆ ದೊರೆಯುತ್ತದೆ.

ಚೆನ್ನ ಎನ್ನುವುದು ನೂರಕ್ಕೆ ನೂರರಷ್ಟು ಕನ್ನಡ ಹೆಸರಾಗಿದೆ. ಇದು ತಮಿಳು ಹೆಸರು ಏಕಾಗಿರಬಾರದು ಎಂದು ಕೆಲವರು ವಾದಿಸಬಹುದು. ಆದರೆ ಕನ್ನಡದ ‘ಚೆನ್ನ’ ಎನ್ನುವ ಪದವು ತಮಿಳಿನಲ್ಲಿ `ಶೆನ್’ ಎಂದಾಗುತ್ತದೆ. ಕನ್ನಡದ ಚೆಲುವಿ ತಮಿಳಿನಲ್ಲಿ ಶೆಲ್ವಿ ಆಗುತ್ತಾಳೆ. ಆದುದರಿಂದ ಸುಮಾರು ಎರಡೂವರೆ ಸಾವಿರ ವರ್ಷಗಳ ಪೂರ್ವದಲ್ಲಿ, ಹಿಮಾಲಯದ ಭಾಗವಾದ ನೇಪಾಳದಲ್ಲಿ ಕನ್ನಡಿಗರು ವಾಸವಾಗಿದ್ದರು ಎನ್ನುವುದು ಖಚಿತವಾಗುತ್ತದೆ. ಹಾಗಾದರೆ ಇಲ್ಲಿ ತಮಿಳರು ಇರಲಿಲ್ಲವೆ?

ಕನ್ನಡ ಮತ್ತು ತಮಿಳಿಗೆ ಇರಬಹುದಾದ ಪೂರ್ವರೂಪಕ್ಕೆ ಶಂ. ಬಾ. ಜೋಶಿಯವರು ಕಂದಮಿಳು ಎಂದು ಕರೆಯುತ್ತಾರೆ. ಆರ್ಯಭಾಷೆಯ ಸಂಪರ್ಕದಿಂದ ಕನ್ನಡವು ಬದಲಾಯಿತು; ಇದರಿಂದ ಕನ್ನಡಕ್ಕೆ ಒಳ್ಳೆಯದೇ ಆಯಿತು. ಆರ್ಯಾವರ್ತದಿಂದ ಕೆಳಗೆ ಸರಿದು ಹೋದ ಕಂದಮಿಳರ ಭಾಷೆ ಪೂರ್ಣವಾಗಿ ಬದಲಾಗಲಿಲ್ಲ. ಇದರಿಂದಾಗಿ ತಮಿಳಿಗೆ ನಷ್ಟವೇ ಆಗಿದೆ. ಇದರ ಚರ್ಚೆಯನ್ನು ಮತ್ತೊಮ್ಮೆ ಮಾಡೋಣ. ಇದೀಗ ಕೃಷ್ಣನ ಪೂರ್ವಾಪರಗಳನ್ನಷ್ಟೇ ನೋಡೋಣ.

ಕೃಷ್ಣ ಅಥವಾ ಕನ್ನಯ್ಯನು ಕನ್ನಡಿಗ ಎನ್ನುವುದಕ್ಕೆ ಇನ್ನಿಷ್ಟು ಉದಾಹರಣೆಗಳನ್ನು ನೋಡೋಣ. ಕನ್ನ ಅಥವಾ ಕಣ್ಣ ಎನ್ನುವ ಹೆಸರಿನ ಅನೇಕ ಕನ್ನಡಿಗರಿದ್ದಾರೆ. ಬೇಡರ ಕಣ್ಣಪ್ಪನಂತೂ (--ರಾಜಕುಮಾರರ ಸಿನೆಮಾದಿಂದಾಗಿ--) ಖ್ಯಾತನಾಗಿದ್ದಾನೆ. ‘ಕನ್ನೇಶ್ವರ ರಾಮ’ ಎನ್ನುವ ಸಿನೆಮಾವನ್ನು ಸಹ ಇಲ್ಲಿ ನೆನಪಿಸಬಹುದು. ಇನ್ನು ಕನ್ನೇಗೌಡ ಹೆಸರಿನ ವ್ಯಕ್ತಿಗಳೂ ಸಹ ನಮ್ಮಲ್ಲಿ ಇದ್ದಾರೆ. ಆರ್ಯರಿಗೆ ಕನ್ನಡ ಪದಗಳನ್ನು ದೀರ್ಘೀಕರಿಸಿ ಉಚ್ಚರಿಸುವ ಅಭ್ಯಾಸವಿದೆ. ಆದುದರಿಂದಲೇ ಕನ್ನಡಿಗರ ‘ಲಠ್ಠ’ ಹಿಂದಿಯಲ್ಲಿ ‘ಲಾಟ’ ಆಗಿದೆ. ನಮ್ಮಲ್ಲಿ ಲಟ್ಟಣಿಗೆಯಾಗಿರುವುದು ಅವರಲ್ಲಿ ಲಾಠಿಯಾಗಿದೆ. ನಮ್ಮ ‘ಸಂಗವಳ್ಳಿ’ ಅವರಲ್ಲಿ ‘ಸಾಂಗ್ಲಿ’ಯಾಗಿದೆ. ನಮ್ಮ ದಂಡಿಹಳ್ಳಿ ಅವರ ಬಾಯಲ್ಲಿ ದಾಂಡೇಲಿ ಆಗಿದೆ. ನಮ್ಮ ಕಂದಹಾಳ ಅವರಲ್ಲಿ ಕಾಂಡ್ಲಾ ಆಗಿದೆ. ಅದರಂತೆಯೇ ನಮ್ಮ ‘ಕನ್ನ’ನು ಅವರಲ್ಲಿ ‘ಕಾನ್ಹಾ’ ಆಗಿದ್ದಾನೆ,  ‘ಖನ್ನಾ’ ಆಗಿದ್ದಾನೆ. ಆದುದರಿಂದ ರಾಜೇಶ ಖನ್ನಾ ಎನ್ನುವ ಸೂಪರ್‍ಸ್ಟಾರ್‍ನ ಪೂರ್ವಜರು ಸಾವಿರಾರು ವರ್ಷಗಳ ಪೂರ್ವದಲ್ಲಿ ಕನ್ನಡಿಗರೇ ಆಗಿರಬೇಕು! ಇನ್ನೂ ಸಂಶಯವೆ? ಹಾಗಿದ್ದರೆ ‘ಖಾನದೇಶ’ ಎನ್ನುವ ಪದವನ್ನು ಗಮನಿಸಿರಿ. ೧೯೫೬ನೆಯ ಇಸವಿಯ ಮೊದಲು, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ‘ಮುಂಬಯಿ ರಾಜ್ಯ’ದ ಭಾಗವಾಗಿದ್ದಾಗ , ವಿದ್ಯಾರ್ಥಿಗಳು ಕಲಿಯುತ್ತಿದ್ದ  ಭೂಗೋಲಶಾಸ್ತ್ರದಲ್ಲಿ, ‘ಖಾನದೇಶ’ದ ಪ್ರಸ್ತಾಪ ಬರುತ್ತಿತ್ತು. ಖಾನದೇಶ ಇದು ಮಹಾರಾಷ್ಟ್ರದ ವಾಯವ್ಯ ಭಾಗದಲ್ಲಿದೆ. ನಾನು ಚಿಕ್ಕವನಿದ್ದಾಗ ಭೂಗೋಲದ ಪಠ್ಯದಲ್ಲಿ ‘ಖಾನದೇಶ’ ಪದವನ್ನು ನೋಡಿ ಗಲಿಬಿಲಿಗೊಂಡೆ. ಖಾನ ಎನ್ನುವ ತುರುಕ ಮನುಷ್ಯನ ಪ್ರದೇಶವು ಖಾನಾಬಾದ, ಖಾನಿಸ್ತಾನ ಇತ್ಯಾದಿಯಾಗಿ ಆಗಬೇಕೆ ಹೊರತು ಖಾನದೇಶ ಎನ್ನುವ ಅರಿಸಮಾಸವಾಗಲಾರದು ಎಂದು ಗೊಂದಲಗೊಂಡಿದ್ದೆ. ಅನೇಕ ವರ್ಷಗಳ ನಂತರ ಶಂ. ಬಾ. ಜೋಶಿಯವರ ಸಂಶೋಧನೆಗಳನ್ನು ಓದಿದ ನಂತರವೇ, ಈ ಖಾನ ಇದು ಕನ್ನ ಎನ್ನುವ ಪದದ ದೀರ್ಘೀಕರಣ ಹಾಗು ಮಹಾಪ್ರಾಣೀಕರಣವಾಗಿದೆ ಎನ್ನುವುದು ಹೊಳೆಯಿತು. ಭಾರತದ ತುಂಬೆಲ್ಲ ಕನ್ನ ಅಥವಾ ಖನ್ನ ಅಥವಾ ಖಾನ ಪದದಿಂದ ಪ್ರಾರಂಭವಾಗಿ, ‘ಊರು’ ಎನ್ನುವ ಅರ್ಥವನ್ನು ಕೊಡುವ ಅನೇಕ ಪದಗಳಿರುವುದೂ ಸಹ ನನ್ನ ಅರಿವಿಗೆ ಬಂದಿತು, ಉದಾ: ಖಾನಾಪುರ(=ಕನ್ನಪುರ), ಖನ್ನೂರು(=ಕನ್ನೂರು) ಇತ್ಯಾದಿ. ಮುಂಬಯಿಯ ಸುತ್ತಲೂ ಇರುವ ಹಳ್ಳಿಗಳಂತೂ ಕನ್ನಡ ಹೆಸರುಗಳ ದೀರ್ಘೀಕರಣಗಳೇ ಆಗಿವೆ. ಉದಾ: ಕಾನ್ಹೇರಿ (=ಕನ್ನೇರಿ), ಖಂಡಾಲಾ (=ಕಂದಹಾಳ), ಡೊಂಬಿವಿಲಿ (=ಡೊಂಬವಳ್ಳಿ) ಇತ್ಯಾದಿ. ಕರ್ನಾಟಕದಲ್ಲಿಯೇ ಇಂತಹ ೧೬೯ಕ್ಕೂ ಹೆಚ್ಚು ಊರುಗಳ ಹೆಸರು ಲಭ್ಯವಿವೆ. ಭಾರತದ ಇತರತ್ರ ಸಹ ಇಂತಹ ಅನೇಕ ಊರುಗಳಿವೆ. ಪಾಕಿಸ್ತಾನದಲ್ಲಿಯೂ ಸಹ ಒಂದು ಖಾನಪುರ ಇರುವುದು ನನಗೆ ತಿಳಿದಿದೆ.

ಅಬುಲ್ ಫಜಲ್ ಎನ್ನುವ ಮುಸ್ಲಿಮ್ ಇತಿಹಾಸಕಾರನು ಬರೆದ ‘ಐನೆ ಅಕಬರಿ’ಯ ಮೇರೆಗೆ, ಖಾನದೇಶ ಪದದ ಹುಟ್ಟು ಹೀಗಿದೆ: ಗುಜರಾತದ ದೊರೆ ಅಹಮದ-೧ ಇವನು ಫರೂಕಿ ವಂಶದ ಮಲಿಕ ನಾಸೀರ ಎನ್ನುವವನಿಗೆ ‘ಖಾನ’ ಎನ್ನುವ ಬಿರುದನ್ನು ಕೊಟ್ಟ ಬಳಿಕ (೧೪ನೆಯ ಶತಮಾನ) , ಮಲಿಕ ನಾಸೀರನ ಆಧೀನದಲ್ಲಿದ್ದ ಪ್ರದೇಶಕ್ಕೆ ‘ಖಾನದೇಶ’ ಎನ್ನುವ ಹೆಸರು ಬಂದಿತು.  ನನಗೆ ಅನಿಸುವ ಮಟ್ಟಿಗೆ ಇದು ಸರಿಯಲ್ಲ. ಖಾನದೇಶ ಎನ್ನುವುದು ಒಂದು ಪ್ರದೇಶದ ಹೆಸರೇ ಹೊರತು ಒಂದು ಊರಿನ ಹೆಸರಲ್ಲ. ಒಂದು ವಿಸ್ತಾರವಾದ ಪ್ರದೇಶಕ್ಕೆ ಖಾನದೇಶ ಎಂದು ಮೊದಲಿನಿಂದಲೂ ಕರೆಯುತ್ತಿದ್ದರೆ ಮಾತ್ರ, ಆ ಹೆಸರು ಮುಂದುವರೆಯುವದೇ ಹೊರತು, ಯಾವುದೋ ಒಬ್ಬ ಆಕ್ರಮಣಕಾರನಿಗೆ ‘ಖಾನ’ ಎನ್ನುವ ಬಿರುದು ದೊರೆತ ಕಾರಣಕ್ಕಾಗಿ, ಆ ಪ್ರದೇಶವು ಖಾನದೇಶ ಆಗುವದಿಲ್ಲ. ತುರುಕರು ತಾವು ಗೆದ್ದ ಊರುಗಳಿಗೆ ತಮ್ಮ ಹೆಸರನ್ನು ಕೊಟ್ಟಿರುವುದು ಸಹಜವಾಗಿದೆ. ಉದಾಹರಣೆಗೆ ತುಘಲಕಾಬಾದ, ಸಿಕಂದರಾಬಾದ ಇತ್ಯಾದಿ. ಆದರೆ ರಾಜಸ್ತಾನ, ಮಾರವಾಡ ಮೊದಲಾದ ಪ್ರದೇಶಗಳು ಖಾನಸ್ತಾನ ಅಥವಾ ಖಾನವಾಡ ಎಂದು ಬದಲಾಗಲಾರವು. ಇನ್ನು ದೇಶ ಎನ್ನುವ ಪದಕ್ಕೆ ಇನ್ನೂ ಒಂದು ವಿಶಿಷ್ಟ ಅರ್ಥವಿದೆ. ದೇಶವೆಂದರೆ ಪ್ರದೇಶವೆನ್ನುವ ಸಹಜ ಅರ್ಥವಲ್ಲದೆ, ಮಹಾರಾಷ್ಟ್ರ ಹಾಗು ಉತ್ತರ ಕರ್ನಾಟಕದ ಕೆಲವೊಂದು ನಿರ್ದಿಷ್ಟ ಪ್ರದೇಶವನ್ನೂ ‘ದೇಶ’ ಎಂದು ಗುರುತಿಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, ಈ ವಿಶಿಷ್ಟ ಭಾಗದಲ್ಲಿರುವ ಬ್ರಾಹ್ಮಣರನ್ನು ದೇಶಸ್ಥ ಬ್ರಾಹ್ಮಣರು ಎನ್ನುತ್ತಾರೆ. ಕೊಂಕಣ ಭಾಗದಲ್ಲಿರುವ ಬ್ರಾಹ್ಮಣರು ಕೊಂಕಣಸ್ಥ ಬ್ರಾಹ್ಮಣರು, ಕರಹಾಡ ಭಾಗದಲ್ಲಿರುವ ಬ್ರಾಹ್ಮಣರು ಕರ್ಹಾಡ ಬ್ರಾಹ್ಮಣರು ಇತ್ಯಾದಿ. ಆದುದರಿಂದ ಖಾನ ಎನ್ನುವ ತುರುಕನಿಂದಾಗಿ ಖಾನದೇಶ ಎನ್ನುವ ಹೆಸರು ಬಂದಿರುವುದು ಸಂಭವನೀಯವಲ್ಲ.

ಈ ತರ್ಕವನ್ನು ಬದಿಗಿಟ್ಟು ಮತ್ತೊಂದು ಬಲವಾದ ಸಾಕ್ಷಿಯನ್ನು ನೋಡೋಣ: ಈ ಪ್ರದೇಶವು ಮೊದಲು ‘ಅಹಿರ’(=ಅಭೀರ) ಎನ್ನುವ ಗುಡ್ಡಗಾಡು ಜನಾಂಗದ ಆಧೀನದಲ್ಲಿತ್ತು. ಈ ಜನಾಂಗದವರು ಯಾದವ ಹಾಗು ನಂದವಂಶಿ ಎನ್ನುವ ಅಡ್ಡಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಇವರ ಮೂಲ ಉದ್ಯೋಗ ಹೈನುಗಾರಿಕೆ. ಆದುದರಿಂದ ಇವರಿಗೆ ಗವಳಿ ಹಾಗು ಧನಗರ ಎನ್ನುವ ಹೆಸರುಗಳೂ ಇವೆ. ಶಂ. ಬಾ. ಜೋಶಿಯವರು ‘ಧನಗರ’ ಪದವು ‘ದನಗರ’ (=ದನ ಕಾಯುವವರು) ಪದದ ಆರ್ಯೀಕರಣ ಎನ್ನುವುದನ್ನು ತೋರಿಸಿದ್ದಾರೆ. ನಮ್ಮ ಕೃಷ್ಣ ಕನ್ನಯ್ಯನು ಯಾದವ ಕುಲ ಸಂಜಾತ ಹಾಗು ನಂದಗೋಪನ ಮನೆಯಲ್ಲಿ ಬೆಳೆದವನು. ಈ ಸಮುದಾಯದ ಕೆಲಸ ಹೈನುಗಾರಿಕೆಯಾಗಿತ್ತು. ಆದುದರಿಂದ ಖಾನದೇಶವು ನಮ್ಮ ಕನ್ನಯ್ಯನ ‘ಕನ್ನದೇಶ(>ಖಾನದೇಶ)’ವೇ ಹೊರತು ಖಾನನ ದೇಶವಲ್ಲ.

ಏನೇ ಇರಲಿ, ಮಹಾಭಾರತದ ರಾಜಕಾರಣದಲ್ಲಿ ಕೃಷ್ಣನಂತಹ ಮಹತ್ವದ ವ್ಯಕ್ತಿ ಇಲ್ಲವೆನಬೇಕು. ತನ್ನ ಬಾಲ್ಯಕಾಲದಿಂದಲೇ ಕೃಷ್ಣನು ತನ್ನ ಕುಲದವರ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತ ಬಂದಿದ್ದಾನೆ. ಆರ್ಯರ ವೇದಕಾಲೀನ ದೇವತೆಯಾದ ಇಂದ್ರನ ಪೂಜೆಗೆ ಕೃಷ್ಣ ವಿರೋಧಿಯಾಗಿದ್ದ. ಇಂದ್ರನ ಆಕ್ರಮಣದಿಂದ ತನ್ನವರನ್ನು ರಕ್ಷಿಸಲು ಗೋವರ್ಧನ ಗಿರಿಯ ಗುಹೆಗಳಲ್ಲಿ ಅವರಿಗೆ ಆಶ್ರಯ ದೊರಕಿಸಿ ಕೊಟ್ಟ. ಗೋಕುಲ ಹಾಗು ಗೋವರ್ಧನ(=ಗೋವುಗಳು ಹೆಚ್ಚಾಗಲಿ) ಎನ್ನುವ ಪದಗಳನ್ನು ಗಮನಿಸಿರಿ. ಅಲ್ಲಿಯ ನಿವಾಸಿಗಳು ಎಂದರೆ ನಂದಕುಲದವರು ಹೈನುಗಾರಿಕೆಯನ್ನು ಅವಲಂಬಿಸಿದ್ದದ್ದನ್ನು  ಈ ಪದಗಳು ಎತ್ತಿ ತೋರಿಸುತ್ತದೆ. ಆರ್ಯೇತರರು ವೃಕ್ಷಪೂಜಕರು ಹಾಗು ಗಿರಿಪೂಜಕರು. ಕೃಷ್ಣನು ತನ್ನ ಕುಲದವರಿಗೆ ಗೋವರ್ಧನ ಗಿರಿಯನ್ನು ಪೂಜಿಸಲು ಹೇಳುತ್ತಾನೆ. ಭಗವದ್ಗೀತೆಯಲ್ಲಿ ಕೃಷ್ಣನು ‘ನಾನು ವೃಕ್ಷಗಳಲ್ಲಿ ಬಿಲ್ವ’ ಎಂದು ಹೇಳಿಕೊಂಡಿದ್ದಾನೆ.

ತಮ್ಮ ಜನಾಂಗದ ದೈವಗಳನ್ನು ಪೂಜಿಸಲು ಹೇಳುವ ಕೃಷ್ಣನು, ಆರ್ಯದೈವಗಳನ್ನು ಪೂಜಿಸದೆ ಇರಲು ಹೇಳುವುದು ಸಹ ಸ್ಪಷ್ಟವಿದೆ. ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಕೊಡುವ ಉಪದೇಶವನ್ನು ಗಮನಿಸಿರಿ:
‘ತ್ರಯ್ಯಂತವಿಷಯಾ ವೇದಾಃ
ನಿಸ್ತ್ರೈಗುಣ್ಯೋ ಭವಾರ್ಜುನ’
(ಅರ್ಜುನನೇ, ವೇದಗಳು ಮೂರು ಫಲಗಳನ್ನು ಕೊಡುತ್ತವೆ. ನೀನು ಇವುಗಳನ್ನು ದಾಟಿ ಹೋಗು.)
ವೇದಗಳನ್ನು ಉಪೇಕ್ಷಿಸು ಎನ್ನುವುದು ಈ ಉಪದೇಶದ ಗೂಢಾರ್ಥವಲ್ಲವೆ?  ಇಂತಹ ಉಪದೇಶಗಳು ಇಲ್ಲಿ ಸಾಕಷ್ಟಿವೆ:
‘ಪತ್ರಂ ಪುಷ್ಪಂ ಫಲಂ ತೋಯಮ್
ಯೋ ಮೇ ಭಕ್ತ್ಯಾ ಪ್ರಯಚ್ಛತಿ’
ನನ್ನನ್ನು ಒಲಿಸಿಕೊಳ್ಳಲು, ಹೂವು, ಹಣ್ಣು, ಅಥವಾ ನೀರನ್ನು ಸಮರ್ಪಿಸಿದರೆ ಸಾಕು ಎನ್ನುವ ಈ ಮಾತಿನಲ್ಲಿ, ಯಜ್ಞ, ಯಾಗಾದಿಗಳನ್ನು ಬಿಟ್ಟುಬಿಡು ಎನ್ನುವ ಸಂದೇಶವೇ ಅಡಗಿಕೊಂಡಿದೆ.
ಭಕ್ತಿಯಿಂದ ನನ್ನನ್ನು ಭಜಿಸಿದವರು ಶೂದ್ರರಾದರೂ ಸಹ, ನನ್ನನ್ನು ಹೊಂದುತ್ತಾರೆ ಎನ್ನುವುದು, ಆರ್ಯೇತರರಿಗೆ ಕೃಷ್ಣನು ನೀಡುವ ಭರವಸೆಯೇ ಆಗಿದೆ.
‘ನನಗೆ ಐಹಿಕ ಸಂಪತ್ತನ್ನು ನೀಡು’ ಎನ್ನುವ ಪ್ರಾರ್ಥನೆ ಆರ್ಯರದಾದರೆ (ಉದಾ: ಶ್ರೀಸೂಕ್ತ), ಸುಖದುಃಖಗಳಲ್ಲಿ ಸಮಚಿತ್ತನಾಗಿರಬೇಕು ಎನ್ನುವುದು ಶ್ರೀಕೃಷ್ಣನು ಹೇಳುವ ತತ್ವವಾಗಿದೆ!

ಕೃಷ್ಣನ ಬಾಲ್ಯವು ಗೋಕುಲದಲ್ಲಿ ಒಂದು ಯಕ್ಷಲೋಕವನ್ನೇ ರಚಿಸಿತು. ಕಂಸಸಂಹಾರಕ್ಕಾಗಿ ಗೋಕುಲವನ್ನು ತ್ಯಜಿಸಿದ ಕೃಷ್ಣನು ಮತ್ತೆ ತನ್ನೂರಿಗೆ ಮರಳಲಿಲ್ಲ. ಈ ವಿಷಯವನ್ನು ಪುತಿನ ಅವರು ತಮ್ಮ ‘ಗೋಕುಲನಿರ್ಗಮನ’ ಎನ್ನುವ ಗೀತನಾಟಕದಲ್ಲಿ ಹೃದಯಂಗಮವಾಗಿ ನಿರೂಪಿಸಿದ್ದಾರೆ. ಕಂಸನ ಸ್ನೇಹಿತರಾಜರೊಡನೆ ವೈರತ್ವವನ್ನು ಕಟ್ಟಿಕೊಂಡ ಕೃಷ್ಣನ ಮೇಲೆ ಅನೇಕ ದಾಳಿಗಳಾದವು. ಪ್ರತಿ ಸಲವೂ ಕೃಷ್ಣ ರಣರಂಗದಿಂದ ಓಡಿಹೋಗುತ್ತಿದ್ದ. ಆದುದರಿಂದಲೇ ಗುಜರಾತಿಗಳು ಕೃಷ್ಣನನ್ನು ‘ರಣಛೋಡಜಿ ಮಹಾರಾಜ’ ಎನ್ನುವ ಹೆಸರಿನಲ್ಲಿ ಆರಾಧಿಸುತ್ತಾರೆ! ಇಂತಹ ಒಂದು ದುರ್ಧರ ಸಮಯದಲ್ಲಿ, ತನ್ನ ಕುಲದವರ ರಕ್ಷಣೆಗಾಗಿ ಕೃಷ್ಣ ಒಂದು ಕಠಿಣ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು. ತನ್ನ ಸಹಚರರೊಡನೆ ಕೃಷ್ಣನು ಭಾರತದ ಪಶ್ಚಿಮ ಸೀಮೆಗೆ ಗುಳೇ ಹೋದ! (ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣವಾದ ನಂತರ ಮಥುರೆಯಿಂದ ದ್ವಾರಕಾದವರೆಗಿನ ದೂರವು ಇದೀಗ ೧೩೦೦ ಕಿಲೋಮೀಟರುಗಳಷ್ಟಾಗಿದೆ.) ಆ ಕಾಲದಲ್ಲಿ ಮಥುರೆಯಿಂದ ಪಶ್ಚಿಮಕಡಲತೀರದವರೆಗಿನ ಸುಮಾರು ೧೫೦೦ ಕಿಲೋಮೀಟರುಗಳಿಗೂ ಹೆಚ್ಚಿನ ದೀರ್ಘವಾದ, ದುರ್ಗಮವಾದ ಮಾರ್ಗವನ್ನು ಕಾಡುಮೇಡುಗಳಲ್ಲಿ ಅಲೆಯುತ್ತ, ಕಾಡುಪ್ರಾಣಿಗಳನ್ನು ಹಾಗು ಕಳ್ಳಕಾಕರನ್ನು ಎದುರಿಸುತ್ತ ಕ್ರಮಿಸಿದ ಕೃಷ್ಣ ಹಾಗು ಆತನ ಸಹಚರರು ಪಶ್ಚಿಮ ಸಮುದ್ರತೀರವನ್ನು ತಲುಪಿದರು; ದ್ವಾರಕಾ ಎನ್ನುವ ಪಟ್ಟಣವನ್ನು ಸ್ಥಾಪಿಸಿದರು. ದ್ವಾರಕಾ ಎಂದರೆ ಬಾಗಿಲು. ಇದು ಪ್ರಾಗೈತಿಹಾಸ ಕಾಲದ ಮೊದಲ Gateway of India ಆಗಿರಬಹುದು. ಪರದೇಶಗಳ ಜೊತೆಗೆ ವ್ಯಾಪಾರವನ್ನು ಕೈಗೊಂಡ ದ್ವಾರಕಾ ಸಮೃದ್ಧವಾಗಿ ಬೆಳೆಯಿತು. ಸಮುದ್ರದಲ್ಲಿ ಮುಳುಗಿದ ದ್ವಾರಕಾದ ಶೋಧವನ್ನು ಮಾಡಿದವರು ಶ್ರೀ ಎಸ್. ಆರ್.ರಾವ ಎನ್ನುವ ಪ್ರಾಚ್ಯಸಂಶೋಧಕರು.

ವಿಶ್ವನಾಥ ಚಕ್ರವರ್ತಿ ಠಾಕೂರ ಎನ್ನುವವರ ಮೇರೆಗೆ ಕೃಷ್ಣನು ಗೋಕುಲದಲ್ಲಿ ಇದ್ದ ಸಮಯ ಕೇವಲ ಮೂರು ವರ್ಷ ನಾಲ್ಕು ತಿಂಗಳು. ಮುಂದಿನ ಮೂರು ವರ್ಷ ನಾಲ್ಕು ತಿಂಗಳುಗಳನ್ನು ಆತನು ವೃಂದಾವನದಲ್ಲಿ ಕಳೆದನು. ಹತ್ತು ವರ್ಷದವನಾಗುವವರೆಗೆ ಕೃಷ್ಣನು ನಂದಗ್ರಾಮದಲ್ಲಿ ವಾಸಿಸಿದನು. ಅಲ್ಲಿಂದ ಮಥುರೆಗೆ ತೆರಳಿದ ಕೃಷ್ಣನು ೧೮ ವರ್ಷ ನಾಲ್ಕು ತಿಂಗಳುಗಳ ಅವಧಿಯನ್ನು ಮಥುರೆಯಲ್ಲಿ ಕಳೆದನು. ತನ್ನ ಸಹಚರರ ಜೊತೆಗೆ ಮಥುರೆಯಿಂದ ದ್ವಾರಕೆಗೆ ತೆರಳಿದ ಕೃಷ್ಣನು ತನಗೆ ಒಂದುನೂರಾ ಇಪ್ಪತ್ತೈದು ವರ್ಷಗಳಾಗುವವರೆಗೆ ದ್ವಾರಕೆಯಲ್ಲಿ ವಾಸಿಸಿದನು.

ಯಹೂದಿಗಳ ಮುಖಂಡನಾದ ಮೋಶೆ, ತನ್ನ ಸಹಚರರ ಜೊತೆಗೆ ಈಜಿಪ್ತಿನಿಂದ ಇಸ್ರೇಲವರೆಗೆ ಕ್ರಮಿಸಿದ ಪ್ರಯಾಣವನ್ನು, ಕೃಷ್ಣನ ಮಥುರಾ-ದ್ವಾರಕಾ ಪ್ರಯಾಣದೊಡನೆ ಹೋಲಿಸಿರಿ. ಗೋಶೆನ್‍ದಿಂದ ಜೆರಿಕೊವರೆಗೆ ಮೋಶೆ ಕ್ರಮಿಸಿದ ಮಾರ್ಗ ಸುಮಾರು ೧೫೦೦ ಕಿಮಿ. ಆದರೆ ಮೋಶೆಯ ಪ್ರಯಾಸಕರ ಮಾರ್ಗಕ್ರಮಣದ ದಾಖಲೆಗಳು ಬೈಬಲ್ಲಿನಲ್ಲಿ ದಾಖಲಾಗಿವೆ. ನಮ್ಮ ದುರ್ದೈವಕ್ಕೆ, ಕೃಷ್ಣನ ಕಠಿಣ ಮಾರ್ಗಕ್ರಮಣದ ಗುರುತುಗಳು ನಮ್ಮ ಪುರಾಣಗಳಲ್ಲಿ ದಾಖಲಾಗಿಲ್ಲ. ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆಯ ಅಭಾವವಿರುವದನ್ನು ಇದು ತೋರಿಸುತ್ತಿರಬಹುದು. ಏನೇ ಇರಲಿ, ಒಬ್ಬ ಮುಂದಾಳು ಹೇಗಿರಬೇಕು ಎನ್ನುವುದನ್ನು ಈ ಪ್ರಸಂಗಗಳು ತೋರಿಸುತ್ತವೆ. ಅಂತಹ ಮುಂದಾಳಿನಲ್ಲಿ ಆತನ ಅನುಚರರು ಇಡುವ ನಿಷ್ಠೆಯನ್ನೂ ಈ ಪ್ರಸಂಗಗಳು ತೋರಿಸುತ್ತವೆ.

ಕಂಸನನ್ನು ಅವನ ಆಸ್ಥಾನದಲ್ಲಿಯೇ ಮುಖಾಮುಖಿಯಾಗಿ ಸಂಹರಿಸಿದ ಎಳೆಯ ಕೃಷ್ಣನ ಧೈರ್ಯವನ್ನು ಮೆಚ್ಚಲೇ ಬೇಕು. ಜರಾಸಂಧನ ವಧೆಯನ್ನು ಮಾಡುವಾಗಲೂ ಸಹ ಕೃಷ್ಣ, ಭೀಮ ಹಾಗು ಅರ್ಜುನ ಈ ಮೂವರೇ ಅವನ ರಾಜಧಾನಿಗೆ ಹೋಗಿದ್ದರು. ಕೌರವಸಂಹಾರಕ್ಕೂ ಸಹ ಕೃಷ್ಣನೇ ಕಾರಣನಾದನು. ಇಂತಹ ಕೃಷ್ಣನಿಗೆ ತನ್ನ ದ್ವಾರಕಾವಾಸಿಗಳ ಮೇಲೆ ನಿಯಂತ್ರಣವಿಡಲು ಸಾಧ್ಯವಾಗಲಿಲ್ಲ. ಸಂಪತ್ತು ಹಾಗು ಶಕ್ತಿಯಿಂದ ಮದೋನ್ಮತ್ತರಾದ ದ್ವಾರಕಾವಾಸಿಗಳು ‘ಯಾದವೀಕಲಹ’ದಲ್ಲಿ ನಿರ್ನಾಮರಾದರು. ಅರಣ್ಯಪ್ರದೇಶದಲ್ಲಿ ಏಕಾಕಿಯಾಗಿ ತೆರಳುತ್ತಿದ್ದ ಕೃಷ್ಣನು ಬೇಡನೋರ್ವನ ತಪ್ಪು ಗ್ರಹಿಕೆಗೆ ಬಲಿಯಾಗಿ ಶರಾಘಾತದಿಂದ ಮೃತನಾದನು.
ಎಂತಹ ಮಹಾನುಭಾವನಿಗೆ, ಎಂತಹ ಮರಣ!

ಮಹಾಭಾರತದ ಮತ್ತೋರ್ವ ಧೀರಪುರುಷ ಭೀಷ್ಮನು ರಣರಂಗದಲ್ಲಿ, ಶರಪಂಜರದ ಮೇಲೆ ಸ್ವ‍ಇಚ್ಛೆಯಿಂದ ಮರಣ ಹೊಂದಿದ್ದನ್ನು , ಕೃಷ್ಣನ ಅನಾಥ ಮರಣದೊಂದಿಗೆ ಹೋಲಿಸಿರಿ. ಆಂಗ್ಲ ಕವಿ ಈಲಿಯಟ್‍ನ ಕವನವೊಂದರ ಸಾಲನ್ನು ಸ್ವಲ್ಪ ಬದಲಾಯಿಸಿ, ಇಲ್ಲಿ ಹೇಳಬಹುದು: This is the way the life ends…not with a bang, but a whimper.

ಬಿಹಾರವು ಯಾದವರ ನೆಲೆವೀಡಾಗಿದೆ. ಇಲ್ಲಿ ನಂದರಾಜರ ಆಳಿಕೆ ಇತ್ತು. ಈ ನಂದರನ್ನು ಸೋಲಿಸಿದವನು ಚಂದ್ರಗುಪ್ತ. ಈ ಯಾದವರು ಹಾಗು ನಂದರು ಕೃಷ್ಣನ ಕುಲದವರೇ ಇರಬೇಕಷ್ಟೆ. ಆರ್ಯರೊಡನೆಯ ಸಂಘರ್ಷದಲ್ಲಿ ಸೋತು ಹೋದ ಇವರೆಲ್ಲ ತಮ್ಮ ತಾಯಿನುಡಿ ಕನ್ನಡವನ್ನು ಬದಿಗಿಟ್ಟು ಆರ್ಯೀಕರಣ ಹೊಂದಿರಬಹುದು. ಒಳ್ಳೆಯದೇ ಆಯಿತು ಬಿಡಿ. ಈಗಿನ ಬಿಹಾರದ ರಾಜಕೀಯವನ್ನು ನೋಡಿದರೆ, ಅವರ ಪೂರ್ವಜರು ಕನ್ನಡಿಗರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ.

ನೇಪಾಲ ಹಾಗು ಬಂಗಾಲವನ್ನು ಆಳಿದವರು ಮಲ್ಲ ಕುಲದ ರಾಜರು. ಇವರು ಕನ್ನಡಿಗರು ಎನ್ನುವುದನ್ನು ಇತಿಹಾಸತಜ್ಞರು ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿ ಇರುವ ಅನೇಕ ಊರುಗಳು (ಉದಾ: ಮಲ್ಲಾಪುರ, ಮಲ್ಲೇಶ್ವರಮ್ ಇತ್ಯಾದಿ) ಇವರಿಂದಲೇ ಬಂದಿವೆ. ವಾಸ್ತವದಲ್ಲಿ, ಮಲಪ್ರಭಾ ನದಿಯು ಮಲ್ಲಪ್ರಭಾ ಆಗಿದ್ದು, ಜನರ ಬಾಯಿಯಲ್ಲಿ ಮಲಪ್ರಭಾ ಆಗಿದೆ. ಇಂತಹ ಮಲ್ಲರು ತಮ್ಮ ರಾಜ್ಯವನ್ನು ಕಳೆದುಕೊಂಡ ನಂತರ ಶೂದ್ರರಾದರು. ಕುಪ್ರಸಿದ್ಧ ದರೋಡೆಖೋರಿಣಿ ಫೂಲನ್ ದೇವಿಯು ಮಲ್ಲ ಕುಲದವಳು. ಮಲ್ಲರ ಉಲ್ಲೇಖವು ಋಗ್ವೇದ ಹಾಗು ಮಹಾಭಾರತದಲ್ಲಿ ಬರುತ್ತದೆ. ಆದುದರಿಂದ ಈ ಮಲ್ಲಕುಲವು ಯಾದವ ಕುಲದ ಸಮಕಾಲೀನವಾಗಿರಬೇಕು. ಈ ಎರಡೂ ಕುಲಗಳು ಕನ್ನಡಿಗ ಕುಲಗಳು. ಕೃಷ್ಣನಂತಹ ಮುಂದಾಳು ದೊರಕಿದ್ದರಿಂದ ಯಾದವರು ಈವರೆಗೂ ಪ್ರಬಲರಾಗಿಯೇ ಉಳಿದರೇನೊ? ಮಲ್ಲರು ಮಾತ್ರ ಅವನತಿಯನ್ನು ಹೊಂದಿದರು.

ಭಾರತದ ಇತಿಹಾಸವನ್ನು ಬದಲಿಸಿದ ಕೃಷ್ಣನು, ಭಾರತೀಯರಿಗೆ ಭಗವದ್ಗೀತೆಯನ್ನು ಕೊಟ್ಟ ಕೃಷ್ಣನು, ಯಾದವರನ್ನು ಮಥುರೆಯಿಂದ ಪಶ್ಚಿಮ ಸಮುದ್ರತೀರಕ್ಕೆ ಕರೆದೊಯ್ದು, ಅವರಿಗೆ ದ್ವಾರಕೆಯನ್ನು ಕಟ್ಟಿಕೊಟ್ಟ ಕೃಷ್ಣನು ಕನ್ನಡಿಗನು.
ಅವನಿಗೆ ನನ್ನ ಸಾವಿರ ನಮಸ್ಕಾರಗಳು.
ಕೃಷ್ಣಂ ವಂದೇ ಜಗದ್ಗುರುಮ್!

11 comments:

Badarinath Palavalli said...

ತ್ರೇತಾ ಮತ್ತು ದ್ವಾಪರ ಯುಗಗಳ ವಿಭಿನ್ನತೆ ಚೆನ್ನಾಗಿ ಗುರುತಿಸಿದ್ದೀರ.

ಕಂದಮಿಳಿನ ಬಗ್ಗೆ ಹಿಂದೊಮ್ಮೆ ಓದಿದ್ದೆ. ಇದರ ಬಗ್ಗೆಯೇ ತಾವು ನಮಗಾಗಿ ಒಂದು ಲೇಖನ ಬರೆದುಕೊಡಿ, ಉಪಕಾರವಾಗುವುದು.

ಕೃಷ್ಣನ ಅಸಲೀ ಮೂಲದ ಬಗ್ಗೆ ತಮ್ಮ ಅನ್ವೇಷಣೆಯಲ್ಲಿ ಸತ್ಯವಿದೆ.

ಕನ್ನಡ ಹೆಸರುಗಳಿದ್ದ ಸ್ಥಳ ನಾಮಗಳು ಈಗ ಬದಲಾದ್ದು, ಕನ್ನಡದ ವಿಸ್ತೀರ್ಣ ಭೂಪ್ರದೇಶಕ್ಕೆ ಮತ್ತಷ್ಡು ಪುಷ್ಟಿಕೊಟ್ಟಿತು. ‘ಕನ್ನದೇಶ(>ಖಾನದೇಶ)’ exactly.

ಕೃಷ್ಣನ ಸಂಪೂರ್ಣ ವ್ಯಕ್ತಿತ್ವದ ಕಿರು ನೋಟ ಇಲ್ಲಿಂದ ನನಗೆ ದೊರೆಯಿತು.

ಕೃಷ್ಣಂ ವಂದೇ ಜಗದ್ಗುರುಮ್!
ಕಿಟ್ಟನೊಬ್ಬನೇ ಜಗದ ಗುರುವು!

ಮನಸಿನಮನೆಯವನು said...

ತುಂಬಾ ಮಾಹಿತಿಪೂರ್ಣ ಲೇಖನ.. ಗೀತೊಪದೇಶದಲ್ಲಿ ಒಳ ಅರ್ಥಗಳನ್ನು ತಿಳಿಸಿದ ಮೇಲೆ ಮನಸ್ಸಿಗೆ ಹೊಸ ಆಲೋಚನೆಗಳು ಬರುತ್ತಿವೆ, ಹೊಸ ಅರ್ಥಗಳಾಗುತ್ತಿವೆ.

Unknown said...

ವಾವ್ ,ಕನ್ನಡಿಗ ಕೃಷ್ಣ. ಅನುಪಮ ಲೇಖನ. ನಿಮ್ಮ ಸಮರ್ಥನೆಗಳು ಮನಮೋಹಕ. '‘ರಣಛೋಡಜಿ ಮಹಾರಾಜ’ ಕನ್ನಡಿಗರ ವಿಶಾಲತಕ್ಕೆ, ಗದ್ದಲವಿರುವಲ್ಲಿ ಹೊಡೆದಾಡುವದಕ್ಕಿಂತ ಎದ್ದು ಬೇರೆ ಕಡೆಗೆ ಹೋಗಿ ಬದುಕು ಕಟ್ಟಿಕೊಳ್ಳುವದಕ್ಕೆ ಪ್ರೇರಣೆಯೂ ಆಗಿರಬೇಕೇನೋ -ನನ್ನ ದೃಷ್ಟಿಯಲ್ಲಿ ಇದು ಅತ್ಯಂತ ಸಾತ್ವಿಕ, ಒಳ್ಳೆಯ, ಅಂತಿಮವಾಗಿ ಗೆಲ್ಲುವ ಗುಣ.

Unknown said...

ವಿಶಾಲತಕ್ಕೆ ಬದಲು ವೈಶಾಲ್ಯತೆಗೆ ಎಂದಿರಬೇಕಿತ್ತು.

sunaath said...

ಬದರಿನಾಥರೆ,
ಭಾರತವು ಅನೇಕ ಜನಾಂಗಗಳ ನೆಲೆವೀಡಾಗಿತ್ತು, ಉದಾಹರಣೆಗೆ ನಾಗರು,ಗೊಂಡರು ಇತ್ಯಾದಿ. ಇವರಲ್ಲಿ ಕೆಲವು ಸಮುದಾಯಗಳ ಬಗೆಗೆ ಸಂಶೋಧನೆ ಆಗಿದೆ. ಆದರೆ ಸಮಗ್ರ ಸಂಶೋಧನೆಯು ಇನ್ನೂ ಆಗಬೇಕಾಗಿದೆ.

sunaath said...

ಮನಸಿನ ಮನೆಯವರೆ,
ಧನ್ಯವಾದಗಳು.

sunaath said...

ಅನಿಲರೆ,
ತನ್ನ ಸದ್ಗುಣಗಳ ಕಾರಣದಿಂದಲೇ ಕೃಷ್ಣ ಅವತಾರ ಪುರುಷನಾದನಲ್ಲವೆ! ಅದು ಕನ್ನಡಿಗರಿಗೂ ಹೆಮ್ಮೆಯ ವಿಷಯವೇ!

Swarna said...

ಎಷ್ಟು ದಿಸೆಯಿಂದ ಎಷ್ಟು ಮಾಹಿತಿ ಪುರಾಣ , ಪದವ್ಯುತ್ಪತ್ತಿ ಎಷ್ಟೆಲ್ಲಾ ತಿಳಿಸುತ್ತಿರಿ ಕಾಕಾ.
ಕೃಷ್ಣ , ರಾಮರ ವ್ಯಕ್ತಿತ್ವದ ಬಗ್ಗೆ ದಯವಿಟ್ಟು ಬರೆಯಿರಿ.
ಧನ್ಯವಾದಗಳು ಮತ್ತು ವಂದನೆಗಳು
ಸ್ವರ್ಣಾ

sunaath said...

ಸ್ವರ್ಣಾ,
ಧನ್ಯವಾದಗಳು.

Sachin Bhat said...

ಹರೇ ಕೃಷ್ಣ.
ವಿದ್ವತ್ಪೂರ್ಣ ಲೇಖನ.
ಸಂಸ್ಕೃತದಲ್ಲಿ ಕೃಷ್ಣ ಶಬ್ದಕ್ಕೆ ಮೂರು ಅರ್ಥಗಳಿವೆ. ಮೊದಲನೇಯದು ’ಕರ್ಷತಿ ಇತಿ ಕೃಷ್ಣಃ’ - ಭಕ್ತರ ಹೃದಯ ಕ್ಷೇತ್ರದಲ್ಲಿ ಕೃಷಿ ಮಾಡುವವನು ಎಂದು. ’ಕರ್ಷತಿ ಇತಿ ಕೃಷ್ಣಃ’ ಎಂಬ ಎರಡನೇ ಅರ್ಥ ಸಕಲರನ್ನೂ ಆಕರ್ಷಿಸುವವನೆಂದು. ’ಕುಷ್ಯತಿ ಇತಿ ಕೃಷ್ಣಃ’ ಸದಾ ಆನಂದಮಯನೆಂಬುದು ಮೂರನೇ ಅರ್ಥ. ಅದಕ್ಕೂ ಕನ್ನಡ ಶಬ್ದಗಳಿಗೂ ತಾಳೆಯಾಗುತ್ತಿಲ್ಲ. ಜೊತೆಗೆ ಕೃಷ್ಣನ ಬಣ್ಣ ಅನಂತಾಕಾಶದ, ಸಹಸ್ರಾರ ಚಕ್ರದ ಪ್ರತೀಕವಾದ ನೀಲಿಯೇ ಹೊರತೂ ಕಪ್ಪಲ್ಲ.

sunaath said...

ಸಚಿನರೆ,
ಕೃಷ್ಣ ಪದದ ವಿಶೇಷ ಅರ್ಥವಿವರಣೆಯಿಂದ ಖುಶಿಯಾಯಿತು. ಧನ್ಯವಾದಗಳು.