Wednesday, November 5, 2014

‘ಕುರುಬರೋ ನಾವು ಕುರುಬರೋ’-----ಶಿಶುನಾಳ ಶರೀಫರುಕುರುಬರೋ ನಾವು ಕುರುಬರೋ
ಏನು ಬಲ್ಲೇವರಿ ಆತ್ಮದ ಅನುಭವವೋ                ||ಪಲ್ಲ||

ಮುನ್ನೂರು ಅರುವತ್ತು ಕುರಿ ಮೇಸಿಕೊಂಡು
ಸುಮ್ಮನೇ ಬರುವಂಥಾ                                   ||ಅನುಪಲ್ಲ||

ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ
ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚಿ
ಈಡೆಂಬ ಬಾಗಿಲ ಹಾಕೇವ್ರಿ ಗಟ್ಟಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ                   ||೧||

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬು ಚೆಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ವಾಕ್ಯವು ಹಾಲಿನ ಗಡಗಿ
ನಮ್ಮ ಕೈಯಲ್ಲಿ ಇರುವುದೋ ಮುಕ್ತಿ ಎಂಬೋ ಬಡಗಿ  ||೨||

ಸ್ಮಶಾನಭೂಮಿ ಇದು ಖರೆ
ನಾವು ಮೇಸಾಕ ಬಂದೇವರಿ ಕುರಿಯೇ
ತೋಳ ಮುರಿದು ಹತ್ತು ಕುರಿಯೇ
ನಾಗಲಿಂಗ ಅಜ್ಜ ಹೇಳಿದ ಪರಿಯೇ                       ||೩||


ಶರೀಫರು ಈ ಗೀತೆಯಲ್ಲಿ ಪ್ರಾಪಂಚಿಕರ ಬದುಕಿನ ಪರಿಯನ್ನು ಹಾಗು ಅಂತಹ ಬದುಕನ್ನು ಬದಲಾಯಿಸುವ ಬಗೆಯನ್ನು ವರ್ಣಿಸುತ್ತಿದ್ದಾರೆ. ಈ ವರ್ಣನೆಯು ಸಮಸ್ತ ಲೌಕಿಕರಿಗೆ ಅನ್ವಯಿಸುವದರಿಂದ, ಅವರು ‘ನಾನು’ ಎನ್ನುವ ಬದಲಾಗಿ ‘ನಾವು’ ಎನ್ನುವ ಸಮಸ್ತ ಪದವನ್ನು ಗೀತೆಯ ಪಲ್ಲದಲ್ಲಿಯೇ ಬಳಸಿದ್ದಾರೆ.
ಕುರುಬರೋ ನಾವು ಕುರುಬರೋ
ಏನು ಬಲ್ಲೇವರಿ ಆತ್ಮದ ಅನುಭವವೋ

ಕುರುಬರು ಎಂದರೆ ಯಾರು? ಕುರಿಗಳನ್ನು ಸಾಕುವವರು ಕುರುಬರು. ಈ ಕುರಿಗಳ ವಿವರಣೆ ಮುಂದಿನ ನುಡಿಯಲ್ಲಿ ಬರುತ್ತದೆ. ಶರೀಫರ ಕಾಲದಲ್ಲಿ ಶಿಕ್ಷಣ ಹಾಗು ವಿದ್ಯೆ ಸಾರ್ವತ್ರಿಕವಾಗಿರಲಿಲ್ಲ. ಆದುದರಿಂದ ಕುರುಬರು ಎನ್ನುವ ಪದವನ್ನು ಸಾಮಾನ್ಯರು ಅಥವಾ ಪಾಮರರು ಎನ್ನುವ ಅರ್ಥದಲ್ಲಿ ಶರೀಫರು ಬಳಸಿದ್ದಾರೆ. ಆದರೆ ಶರೀಫರು ಇಲ್ಲಿ ಹೇಳುತ್ತಿರುವ ವಿದ್ಯೆ ಪ್ರಾಪಂಚಿಕ ವಿದ್ಯೆ ಅಲ್ಲ; ಅದು ಆತ್ಮಜ್ಞಾನ. ಆದುದರಿಂದ ‘ನಾವು’ ಅಂದರೆ ಪ್ರಾಪಂಚಿಕರು, ಆತ್ಮಜ್ಞಾನವಿಲ್ಲದ ಪಾಮರರು ಎಂದು ಶರೀಫರು ಹೇಳುತ್ತಾರೆ. ಇದಿಷ್ಟು ಪಲ್ಲದಲ್ಲಿಯ ಎರಡು ಸಾಲುಗಳ ಅರ್ಥ.

ಅನುಪಲ್ಲದಲ್ಲಿ ಶರೀಫರು ತಮ್ಮ ಕುರಿಗಳ ವರ್ಣನೆಯನ್ನು ಮಾಡುತ್ತಾರೆ.
ಮುನ್ನೂರು ಅರುವತ್ತು ಕುರಿ ಮೇಸಿಕೊಂಡು
ಸುಮ್ಮನೇ ಬರುವಂಥಾ
ಒಂದು ವರ್ಷದಲ್ಲಿ (ಸಾಂಪ್ರದಾಯಕ ಪಂಚಾಂಗದ ಮೇರೆಗೆ) ಮುನ್ನೂರು ಅರುವತ್ತು ದಿನಗಳಿರುವುದು ನಮಗೆಲ್ಲರಿಗೂ ತಿಳಿದಿದೆ. ಸಾಮಾನ್ಯ ವ್ಯಕ್ತಿಗೆ ಪ್ರತಿ ದಿನವೂ ಒಂದಿಲ್ಲೊಂದು ಪ್ರಾಪಂಚಿಕ ಚಿಂತೆ ಇರುವಂತಹದೇ. ಆದುದರಿಂದಲೇ, ಪುರಂದರದಾಸರು ‘ಅನುಗಾಲವೂ ಚಿಂತೆ ಮನಕೆ ’ಎಂದು ಹಾಡಿದ್ದಾರೆ. ಬದುಕಿಗೆ ದುಡ್ಡು ಬೇಕು, ಈ ದುಡ್ಡನ್ನು ಹೇಗೆ ಗಳಿಸಬೇಕು ಎನ್ನುವುದು ಒಂದು ಚಿಂತೆ; ಮಕ್ಕಳ ಉದ್ಧಾರ ಹೇಗೆ ಎನ್ನುವುದು ನಿರಂತರ ಚಿಂತೆ. ವರ್ಷಪೂರ್ತಿಯಾಗಿ ಈ ಲೌಕಿಕ ಚಿಂತೆಗಳು ಇರುವುದರಿಂದ ಶರೀಫರು ಈ ಚಿಂತೆಗಳಿಗೆ ಮುನ್ನೂರು ಅರುವತ್ತು ಕುರಿಗಳ ಸಾಮತಿಯನ್ನು ಕೊಟ್ಟಿದ್ದಾರೆ. ಈ ಚಿಂತೆಗಳನ್ನು ನಾವು ಪೋಷಿಸುತ್ತಲೇ ಹೋಗುತ್ತೇವೆ; ಅವುಗಳನ್ನು ಬಿಟ್ಟು ಬಿಡುವ ಪ್ರಯತ್ನವನ್ನು ಮಾಡುವುದಿಲ್ಲ ಎನ್ನುವುದನ್ನು ಶರೀಫರು ಅನುಪಲ್ಲದಲ್ಲಿ ಹೇಳುತ್ತಿದ್ದಾರೆ.                                                

ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ
ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚಿ
ಈಡೆಂಬ ಬಾಗಿಲ ಹಾಕೇವ್ರಿ ಗಟ್ಟಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ             

ಕುರುಬರು ತಮ್ಮ ಕುರಿಗಳನ್ನು ಕಾಯ್ದುಕೊಳ್ಳಲು ಮಾಡುವ ಪ್ರಯತ್ನಗಳನ್ನು ಶರೀಫರು ಹೇಳುತ್ತಾರೆ. ಏಳುಸುತ್ತಿನ ಬೇಲಿ ಅಂದರೆ ಗಟ್ಟಿಯಾದ ಬೇಲಿ. ಈ ಕುರಿಗಳಿಗೆ ಯಾವುದೇ ಅಪಾಯ ಬರಬಾರದೆಂದು ಅಲ್ಲಿ ಅವುಗಳನ್ನು ಅಡಗಿಸಿ ಇಡಲಾಗಿದೆ. ಅಲ್ಲದೆ, ಒಳಗಿರುವ ಕುರಿಗಳು ಹೊರಗೆ ಹೋಗಬಾರದು. ಈ ಕಾರಣಗಳಿಂದಾಗಿ ದೊಡ್ಡಿಯ ಬಾಗಿಲನ್ನು ಈಡಾಗಿ ಎಂದರೆ ಗಟ್ಟಿಯಾಗಿ ಹಾಕಲಾಗಿದೆ ಹಾಗು ಈ ಕುರಿಗಳನ್ನು ಕಾಯಲು ನಾಯಿಯನ್ನು ಸಾಕಲಾಗಿದೆ. ಈ ಪ್ರಯತ್ನಗಳು ಪ್ರಾಪಂಚಿಕರಿಗೂ ಸಹ ಹೇಗೆ ಅನ್ವಯಿಸುತ್ತವೆ ಎನ್ನುವುದನ್ನು ನೋಡೋಣ. ಬದುಕಲು ಬೇಕಾದ ಗುಣಗಳನ್ನು ಹಾಗು ಸಂಸಾರದ ಚಿಂತೆಗಳನ್ನು ಪ್ರಾಪಂಚಿಕರು ಭದ್ರವಾಗಿ ಕಾಯ್ದುಕೊಳ್ಳುತ್ತಾರೆ. ಅಲ್ಲದೆ ತಮ್ಮ ವಿಚಾರಗಳು ಬದಲಾಗಬಾರದು ಎನ್ನುವ ಉದ್ದೇಶದಿಂದ, ಬೇರೆ ಬೇರೆ ಸೋಗು ಹಾಕುತ್ತ, ತಮ್ಮ ವಿಚಾರಗಳನ್ನು ಮುಚ್ಚಿಡುತ್ತಾರೆ. ಒಳ್ಳೆಯ ವ್ಯಕ್ತಿಗಳ ಸತ್ಸಂಗದಿಂದ ಈ ಪ್ರಾಪಂಚಿಕ ವಿಚಾರಗಳು ಬದಲಾಗಬಹುದೆನ್ನುವ ಹೆದರಿಕೆಯಿಂದ, ತಮ್ಮ ಮನಸ್ಸಿನ ಬಾಗಿಲನ್ನು ಗಟ್ಟಿಯಾಗಿ ಹಾಕಿಕೊಳ್ಳುತ್ತಾರೆ. ಯಾರಾದರೂ ಇವರಿಗೆ ಬುದ್ಧಿ ಹೇಳಲು ಬಂದರೆ, ಇವರ ಸಿಟ್ಟು ಎನ್ನುವ ನಾಯಿಯು ಅವರ ಮೇಲೆ ತಟ್ಟನೆ ಹಾರುತ್ತದೆ! ಇನ್ನು ಏಳು ಸುತ್ತಿನ ಕೋಟೆ ಎಂದರೆ ಈ ದೇಹ ಎನ್ನುವ ಮತ್ತೊಂದು ಅರ್ಥವಿದೆ. ತ್ವಚೆ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ವೀರ್ಯ ಎನ್ನುವ ಸಪ್ತಧಾತುಗಳಿಂದ ಈ ಶರೀರದ ನಿರ್ಮಾಣವಾಗಿದೆ. ಆದುದರಿಂದ ಈ ದೇಹವೇ ಏಳು ಸುತ್ತಿನ ಕೋಟೆಯಾಗಿದೆ. ಈ ಕೋಟೆಯಲ್ಲಿರುವ ಜೀವಾತ್ಮನೇ ಕುರುಬನು. ಈ ಜೀವಾತ್ಮನನ್ನು ಬಂಧಿಸಿರುವ ಪ್ರಾಪಂಚಿಕ ವಿಚಾರಗಳೇ ಆತನ ಕುರಿಗಳು. ಆ ಕುರಿಗಳನ್ನು ಹೊರಹೋಗದಂತೆ ಹಾಗು ಒಳ್ಳೆಯ ವಿಚಾರಗಳು ಒಳಬರದಂತೆ ಆತನು ಕೋಟೆಯನ್ನು ಭದ್ರಗೊಳಿಸಿದ್ದಾನೆ.

ಎರಡನೆಯ ನುಡಿಯಲ್ಲಿ ಶರೀಫರು ಈ ಸಂಸಾರದಿಂದ ಬಿಡುಗಡೆಯಾಗುವ ಬಗೆಯನ್ನು ವಿವರಿಸುತ್ತಿದ್ದಾರೆ:
ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬು ಚೆಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ವಾಕ್ಯವು ಹಾಲಿನ ಗಡಗಿ
ನಮ್ಮ ಕೈಯಲ್ಲಿ ಇರುವುದೋ ಮುಕ್ತಿ ಎಂಬೋ ಬಡಗಿ

ಕುರಿಗಳು ವಿಸರ್ಜಿಸಿದ ಹಿಕ್ಕಿಯನ್ನು ಉಡುಗಿ ಹಾಕಿ, ಅವನ್ನೆಲ್ಲ ಬುಟ್ಟಿಯಲ್ಲಿ ತುಂಬಿ ಚೆಲ್ಲುವುದು ಮೊದಲನೆಯ ಕೆಲಸ. ಅಂದರೆ ನಮ್ಮ ದೇಹವನ್ನು ನಿಯಂತ್ರಿಸುತ್ತಿರುವ ನಮ್ಮ ಕೊಳಕು ಭಾವನೆಗಳನ್ನು ಸ್ವಚ್ಛಗೊಳಿಸುವುದು ನಮ್ಮ ಆದ್ಯ ಕರ್ತವ್ಯ. ಇಷ್ಟಾದ ಮೇಲೆ  ಗುರುವಿನ ಕೃಪೆಯಾಗುವುದು.  ಗುರುವಿನ ಉಪದೇಶವು ಹಾಲು ಇದ್ದಂತ. ಆ ಹಾಲನ್ನು ಸೇವಿಸುವದರಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುವುದು.

ಕೊನೆಯ ನುಡಿಯಲ್ಲಿ ಶರೀಫರು ಒಂದು ತತ್ವವನ್ನು ಹೇಳುತ್ತಾರೆ:
ಸ್ಮಶಾನಭೂಮಿ ಇದು ಖರೆ
ನಾವು ಮೇಸಾಕ ಬಂದೇವರಿ ಕುರಿಯೇ
ತೋಳ ಮುರಿದು ಹತ್ತು ಕುರಿಯೇ
ನಾಗಲಿಂಗ ಅಜ್ಜ ಹೇಳಿದ ಪರಿಯೇ

ಈ ಪ್ರಪಂಚವು ಒಂದು ಸ್ಮಶಾನಭೂಮಿ. ಏಕೆಂದರೆ ಇಲ್ಲಿ ಇರುವ ಜೀವಿಗಳೆಲ್ಲವೂ ತಮ್ಮ ದೇಹವನ್ನು ಒಂದಿಲ್ಲೊಂದು ದಿನ ಬಿಟ್ಟು ಹೋಗಲೇ ಬೇಕು. ನಾವು ಇಲ್ಲಿಗೆ ಬರುವುದು ನಮ್ಮ ಕುರಿಗಳನ್ನು ಪಾಲಿಸಲು ಅಂದರೆ ಸಂಸಾರವನ್ನು ಮಾಡಲು. ಈ ರೀತಿಯಾಗಿ ನಮ್ಮ ಕುರಿಗಳನ್ನು ಪಾಲಿಸುತ್ತಿರುವಾಗ, ಒಂದು ತೋಳವು ಬಂದು ಹತ್ತು ಕುರಿಗಳನ್ನು ಮುರಿದು ಹಾಕಿತು ಎಂದು ಶರೀಫರು ಹೇಳುತ್ತಾರೆ. ತೋಳವೆಂದರೆ ಗುರು. ಗುರೂಪದೇಶದ ಫಲವಾಗಿಯೇ ನಮ್ಮ ಪ್ರಾಪಂಚಿಕ ವಿಚಾರಗಳು ಅಂದರೆ ಕುರಿಗಳು ಸಾಯುತ್ತವೆ ಎನ್ನುವುದು ಶರೀಫರ ಅನುಭವದ ಮಾತು. ಶರೀಫರು ಇದು ನಾಗಲಿಂಗ ಅಜ್ಜನವರ ಮಾತು ಎಂದು ಹೇಳುತ್ತಿದ್ದಾರೆ. ನವಲಗುಂದದ ನಾಗಲಿಂಗ ಅಜ್ಜ, ಗರಗದ ಮಡಿವಾಳಪ್ಪ ಹಾಗು ಶಿಶುನಾಳದ ಶರೀಫರು ಸಮಕಾಲೀನರು. ಹುಬ್ಬಳ್ಳಿಯ ಸಿದ್ಧಾರೂಢರು ಶರೀಫರಿಗಿಂತ ಚಿಕ್ಕವರು. ನಾಗಲಿಂಗ ಅಜ್ಜನವರು ವಿಕ್ಷಿಪ್ತ ವ್ಯಕ್ತಿಗಳು. ಶರೀಫರು ಪ್ರಾಪಂಚಿಕ ವಿಚಾರಗಳನ್ನು ದೂರ ಮಾಡಲು ನಾಗಲಿಂಗ ಅಜ್ಜನವರ ಉಪದೇಶವನ್ನು ಅನುಸರಿಸಬೇಕು ಎಂದು ಹೇಳುತ್ತಿದ್ದಾರೆ.

ಟಿಪ್ಪಣಿ:
(೧) ನಾಗಲಿಂಗ ಅಜ್ಜನವರು ವಿಕ್ಷಿಪ್ತ ಯೋಗಿಗಳು. ಕೆಲವೊಮ್ಮೆ ಅವರು ಶಿಷ್ಯರು ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಸಾಗುತ್ತಿದ್ದರು. ಈ ನೋಟವನ್ನು ನೋಡಿದ ಶರೀಫರು ನಾಗಲಿಂಗ ಅಜ್ಜನವರನ್ನು ಲೇವಡಿ ಮಾಡಿ, ಹಾಡಿದ ಗೀತೆ ಹೀಗಿದೆ:
ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ   ||ಪಲ್ಲ||
ದುರಿತಭವದ ಯೋಗದಿಂದ ವಾದವ್ಯಾತಕೆ
ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ  ||೧||
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ
ಬಗಳಾಮುಖಿಯ ಮಗನ  ಕೂಡ ರಗಳಿಯಾತಕೆ  ||೨||
ಹಸಿವು ತೃಷಿಯಗಳನು ಬಯಸುವದ್ಯಾತಕೆ
ಶಿಶುನಾಳಾಧೀಶನ ಮರಿತು ಕುಸಿಯುವದ್ಯಾತಕೆ  ||೩||
ಈ ಗೀತೆಯನ್ನು ಕೇಳಿ ನಾಗಲಿಂಗ ಅಜ್ಜನ ಶಿಷ್ಯರು ಕೆರಳಿ, ಶರೀಫರನ್ನು ಚೆನ್ನಾಗಿ ತದುಕಿದರು! ಹೀಗಿದ್ದರೂ ಸಹ ಶರೀಫರು ನಾಗಲಿಂಗ ಅಜ್ಜನವರನ್ನು ಗೌರವಿಸುವ ರೀತಿಯು ‘ನಾಗಲಿಂಗ ಅಜ್ಜ ಹೇಳಿದ ಪರಿಯೇ ಎನ್ನುವ ಸಾಲಿನಲ್ಲಿ ವ್ಯಕ್ತವಾಗಿದೆ.

(೨) ಪ್ರತಿಯೊಬ್ಬ ಸಾಧಕನು ಪರಮಾತ್ಮನೊಡನೆ ಅಥವಾ ತನ್ನ ಗುರುವಿನೊಡನೆ ವಿಶಿಷ್ಟವಾದ ಸಂಬಂಧವನ್ನು ಹೊಂದಿರುತ್ತಾನೆ. ಅಕ್ಕ ಮಹಾದೇವಿಯು ಶಿವನೇ ತನ್ನ ಗಂಡ ಎಂದಳು; ಅರ್ಜುನನು ಕೃಷ್ಣನನ್ನು ಸಖ್ಯಭಾವದಿಂದ ಪೂಜಿಸಿದನು. ಶರೀಫರು ಪರಮಾತ್ಮನನ್ನು demanding ಗಂಡ ಎಂದು ನೋಡುತ್ತಾರೆ. (---‘ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ’---)
ಅದರಂತೆ ಗುರೂಪದೇಶವನ್ನು ತೋಳ, ಹಾವು, ಚೇಳು ಮೊದಲಾದ ನೋವು ಕೊಡುವ ವಿಷಯವನ್ನಾಗಿ ಭಾವಿಸುತ್ತಾರೆ.
ನೂರು ಸಾಧಕರು, ನೂರು ಬಗೆ! ಶ್ರೀಕೃಷ್ಣನಿಗೆ ಹದಿನಾರುಸಾವಿರ ಹೆಂಡಂದಿರು ಇದ್ದರು ಎಂದು ಹೇಳುವುದು ಬಹುಶಃ ಈ ಕಾರಣಕ್ಕಾಗಿಯೇ ಇರಬಹುದೇನೊ?

20 comments:

ಮನಸಿನಮನೆಯವನು said...

ನಮ್ಮಲ್ಲಿ ಹುಟ್ಟುವ ಎಲ್ಲ ತರದ ಬಣ್ಣಬಣ್ಣದ ವಿಚಾರದ ಕುರಿಗಳನ್ನ ಬಚ್ಚಿಟ್ಟುಕೊಳ್ಳದೆ ಬಯಲಿಗೆ ಬಿಟ್ಟು ನೋಡಬೇಕು ಎಂಬುದು ನನ್ನ ಆಸೆ..

sunaath said...

ಮನಸಿನ ಮನೆಯವರೆ,
ಇದು ಉತ್ತಮವಾದ ವಿಚಾರವಾಗಿದೆ. ನಿಮಗೆ ಶುಭ ಹಾರೈಕೆಗಳು!

Swarna said...

ಸೊಗಸಾದ ವಿವರಣೆ ನಾವು ಕಾಯುತ್ತಿರುವುದು ಕುರಿಗಳನ್ನೇ
ಸಿಕ್ಕಿದ್ದನ್ನೆಲ್ಲಾ ತಿಂದು , ಮಂದೆಯ ಜೊತೆ ಹಾರಿ ಕುಣಿದು
ಕೊನೆಗೊಮ್ಮೆ ಯಾರ ಆಸೆಗೋ ಯಾರಿಗೋ ಬಲಿ.
ನಾಗಲಿಂಗಜ್ಜನ ಬಗ್ಗೆ ಸಾಧ್ಯವಾದರೆ ಹೆಚ್ಚು ಬರೆಯಿರಿ ಕಾಕಾ.
ವಂದನೆಗಳೊಂದಿಗೆ
ಸ್ವರ್ಣಾ

sunaath said...

ಧನ್ಯವಾದಗಳು, ಸ್ವರ್ಣಾ.

umesh desai said...

ಕಾಕಾ ಎಂದಿನ ಸೊಗಸಾದ ವಿಶ್ಲೇಷಣಾ ನಿಮ್ಮದು.
ಈ ಹಾಡು ಅಶ್ವಥ ಹಾಡಿದಾಗ "ಕುರುಬರೋ ನಾವು ಕುರುಬರೋ..ಏನ ಬಲ್ಲೆವು ಒಣ ಕಾರಬಾರೊ..."
ಅಂತ ಆಗೇದ ಅದು ಶರೀಪ್ ಬರೆದದ್ದು ಹೌದೊ ಅಲ್ಲವೊ ಗೊತ್ತಿಲ್ಲ...

ತೇಜಸ್ವಿನಿ ಹೆಗಡೆ said...

ಕುರಿಗಳು ವಿಸರ್ಜಿಸಿದ ಹಿಕ್ಕಿಯನ್ನು ಉಡುಗಿ ಹಾಕಿ, ಅವನ್ನೆಲ್ಲ ಬುಟ್ಟಿಯಲ್ಲಿ ತುಂಬಿ ಚೆಲ್ಲುವುದು ಮೊದಲನೆಯ ಕೆಲಸ. ಅಂದರೆ ನಮ್ಮ ದೇಹವನ್ನು ನಿಯಂತ್ರಿಸುತ್ತಿರುವ ನಮ್ಮ ಕೊಳಕು ಭಾವನೆಗಳನ್ನು ಸ್ವಚ್ಛಗೊಳಿಸುವುದು ನಮ್ಮ ಆದ್ಯ ಕರ್ತವ್ಯ. >> ಕಾಕಾ.. ಈಗಲೂ ಈ ಮಾತುಗಳು ಅದೆಷ್ಟು ಪ್ರಸ್ತುತ... ಹೆಚ್ಚಿನವರೆಲ್ಲಾ ಇಂದು ಕುರುಬರೇ ಎಂದೆನಿಸುತ್ತಿದೆ ನನಗೆ!

sunaath said...

ದೇಸಾಯರ,
ಈ ಪಠ್ಯವನ್ನು ನಾನು ಶ್ರೀ ಗುಬ್ಬಣ್ಣವರರು ಸಂಪಾದಿಸಿದ ಸಂಕಲನದಿಂದ ಎತ್ತಿಕೊಂಡಿದ್ದೇನೆ. ಹಾಡುಗಾರರ ಬಾಯಲ್ಲಿ ಪಠ್ಯಾಂತರಗಳಾಗುವುದು ಸಹಜ.

sunaath said...

ತೇಜಸ್ವಿನಿ,
ನಮ್ಮ ಕ್ಷೇತ್ರದ ತುಂಬೆಲ್ಲ ತುಂಬಿಕೊಂಡಿರುವ ಹಿಕ್ಕಿಗಳನ್ನು ಉಡುಗಿ ತೆಗೆಯುವುದು ಸರಳವಾದ ಕಾರ್ಯವೇ?! ಎಷ್ಟು ಜನ್ಮಗಳ ಪ್ರಯತ್ನ ಬೇಕೊ ಇದಕ್ಕೆ?

Badarinath Palavalli said...

ಷರೀಫ್ ಸಾಹೇಬರು ಪಕ್ಕಾ ನನ್ನಂತಹ ಮಡ್ಡಿಗಾಗಿಯೇ ಬರೆದ ಕವನವಿದು.
"ಮುನ್ನೂರು ಅರುವತ್ತು ಕುರಿ ಮೇಸಿಕೊಂಡು
ಸುಮ್ಮನೇ ಬರುವಂಥಾ"
ನಲವತ್ತ ನಾಲ್ಕು ಗುಡ್ಡಗಳನು ಏರಿ ಇಳಿದು ಬಸವಳಿದ ಕುರಿಯಂತ ಕವಿ ನಾನು!

ಒಳ ತ್ಯಾಜ್ಯಗಳನು ತಿಪ್ಪೆಗೊಟ್ಟಿ, ಗುರುವಿನಾಮೃತ ಕುಡಿಯುವ ದಿನ ನನಗೂ ಬರಲಿ ಎಂದು ಅನುಗ್ರಹಿಸಿರಿ.

ನಾಗಲಿಂಗ ಅಜ್ಜನ ಬಗ್ಗೆ ತಿಳಿಕೊಟ್ಟಿರಿ.

ಅಜ್ಜನ ಬಗ್ಗೆ ಲೇವಡಿ ಕವತೆ ಬರೆದಿದ್ದರೂ ಸಹ, ಅಜ್ಜನ ಒಳ್ಳೆಯ ಭಾವವನ್ನೂ ಗ್ರಹಿಸಿದ ಷರೀಫರ ದೊಡ್ಡತನ ಕಾಣಬಹುದು.

ಶರೀಫರು ಪರಮಾತ್ಮನನ್ನು demanding ಗಂಡ ಎಂದು ನೋಡುತ್ತಾರೆ. (---‘ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ’---) : interesting ಅಲ್ಲವೇ!your blog post has been shared at:
https://www.facebook.com/photo.php?fbid=602047969839656&set=gm.483794418371780&type=1&theater

sunaath said...

ಬದರಿನಾಥರೆ,
ಏನೂ ತಿಳಿಯದವನು ತಾನು ಎಲ್ಲವನ್ನೂ ತಿಳಿದಿದ್ದೇನೆ ಎಂದುಕೊಳ್ಳುತ್ತಾನೆ. ಎಲ್ಲ ತಿಳಿದವನು ತನಗೆ ಏನೂ ತಿಳಿದಿಲ್ಲ ಎಂದುಕೊಳ್ಳುತ್ತಾನೆ. ಇದು ಬುದ್ಧನು ಹೇಳಿದ ಮಾತು. ಮಡ್ಡಿ ಎಂದು ನೀವು ಕರೆದುಕೊಳ್ಳುವುದು ನಿಮ್ಮ ವಿನಯವನ್ನು ತೋರಿಸುತ್ತದೆ.

ರವಿ ತಿರುಮಲೈ said...

ನನ್ನಂತಹ 'ಮಡ್ಡಿ ' ಗಳಿಗೆ ಅರ್ಥವಾಗದ ಮಾನ್ಯ ಶಿಶುನಾಳ ಶರೀಫರ ಪದ್ಯವನ್ನು ಅತೀ ಸುಲಲಿತವಾಗಿ ನಮಗಾಗಿ ಬಿಚ್ಚಿಟ್ಟ ನಿಮ್ಮ ಪರಿ ಬಹಳ ಶ್ಲಾಘನೀಯ. 'ಸುನಾಥ' ಎಂಬ ಅನ್ವರ್ಥ ನಾಮವನ್ನು ಧರಿಸಿರುವ ನೀವು ನಿಜಕ್ಕೂ 'ಸು-ನಾಥ' ಎಂದರೆ ಒಳ್ಳೆಯದಕ್ಕೆ ಅಧಿಪತಿ ಎಂದರೆ ತಪ್ಪಾಗಲಾರದು. ಶರೀಫರ ಎಲ್ಲ ಪದ್ಯಗಳಿಗೂ ಈ ರೀತಿಯ ವ್ಯಾಖ್ಯಾನವನ್ನು ಮಾಡಿ ಕನ್ನಡಿಗರಿಗೆ ರಸದೌತಣದ ಊಟವನ್ನು ದಯಮಾಡಿ ಬಡಿಸಿ ಎಂದು ತಮ್ಮಲ್ಲಿ ಕಳಕಳಿಯ ಮನವಿ. ನಿಮ್ಮ ಈ ಪ್ರಯತ್ನಕ್ಕೆ ನಾವೂ ಸಹ ಕೈಗೂಡಿಸುವೆವೆಂಬ ಭರವಸೆಯನ್ನು ನೀಡುತ್ತೇವೆ- ನಮಸ್ಕಾರ

sunaath said...

ರವಿ,
ನಿಮ್ಮ ಪ್ರೀತಿಗೆ ಹಾಗು ಸ್ಪಂದನೆಗೆ ಧನ್ಯವಾದಗಳು. ಆ ಮಹಾನುಭಾವನ ಗೀತೆಗಳನ್ನು ಸಾಧ್ಯವಾದಷ್ಟು ವ್ಯಾಖ್ಯಾನಿಸುತ್ತಿದ್ದೇನೆ; ಸಾಗರವನ್ನು ಬೊಗಸೆಯಲ್ಲಿ ಅಳೆದಂತೆ!

Kalavatimadhisudan said...

vcharapoornavaada kavitege nimma sogasada vshleshanege dhanyavaadagalu sunath sir.

sunaath said...

ಧನ್ಯವಾದಗಳು, ಕಲಾವತಿಯವರೆ!

'ವಿದ್ಯಾರ್ಥಿ ಕೇಂದ್ರ' said...

ಕಾಕಾ ನಿಮ್ಮ ಬ್ಲಾಗಿನ ಪ್ರತಿಯೊಂದು ಲೇಖನವನ್ನು ಓದುವುದು ಎಂದರೆ ನನಗೆ ಒಂದು ರೀತಿಯ ಹಬ್ಬದೂಟ ಮಾಡಿದಂತೆ . ನಮ್ಮ ದೇಹವನ್ನು ನಿಯಂತ್ರಿಸುತ್ತಿರುವ ನಮ್ಮ ಕೊಳಕು ಭಾವನೆಗಳನ್ನು ಸ್ವಚ್ಛಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ .

ಎಂದಿನಂತೆ ಸೊಗಸಾದ ವಿಶ್ಲೇಷಣೆ .

sunaath said...

ಪ್ರಿಯ ವಿದ್ಯಾರ್ಥಿ,
ಶರೀಫರು, ಬೇಂದ್ರೆಯವರು ಹಬ್ಬದ ಅಡುಗೆಯನ್ನು ಮಾಡಿ ಇಟ್ಟಿದ್ದಾರೆ. ನಿಮಗೆ ಉಣಬಡಿಸುವದಷ್ಟೇ ನನ್ನ ಕೆಲಸ. ನಿಮ್ಮ ಪ್ರೀತಿಗಾಗಿ ಧನ್ಯವಾದಗಳು.

ಮಂಜುಳಾದೇವಿ said...

ಮನಮುಟ್ಟಿದ ವಿವರಣೆ ಸಾರ್......!!ಬಹಳ ದಿನಗಳಿಂದ ಬ್ಲಾಗಿಗೆ ಬಾರದ ಕಾರಣ ನಿಮ್ಮ ಕೆಲವು ಬರಹಗಳನ್ನು ಓದಿರಲಿಲ್ಲ..ಇಂದು ಅವುಗಳನ್ನೆಲ್ಲ ಓದಿದ ಸಂತಸ ನನ್ನದು....! ಧನ್ಯವಾದಗಳು ಸಾರ್...

sunaath said...

ಮಂಜುಳಾದೇವಿಯವರೆ,
ಬ್ಲಾಗಿಗೆ ನೀವು ಮರಳಿದ್ದು ಸಂತಸದ ವಿಷಯ. ನಿಮಗೆ ಧನ್ಯವಾದಗಳು.

Anil Talikoti said...

ಆಹಾ, ಎಂಥ ಸೊಗಸಾದ, practical ವಿಶ್ಲೇಷಣೆ ಸುನಾಥರೆ. ಎರಡನೆ ಪಂಕ್ತಿಯಲ್ಲಿ ಬರುವ 'ಗಡಗಿ' ಹಾಗೂ 'ಬಡಗಿ' ಒಂದು ಥರದಲ್ಲಿ ಪಾಮರರು ಆತ್ಮಜ್ಞಾನ ಎಂದೂ ಅರ್ಜಿಸದೆ , ಗುರು ಕೊಟ್ಟದನ್ನು ಒಡೆದು ಹಾಕುವಂಥವರು ಎಂಬ ದ್ವನಿ ಕೇಳಿತು- ಅದೇಕೋ?
~ಅನಿಲ

sunaath said...

ಅನಿಲರೆ,
ಬಡಗಿಯು ಗಡಗಿಯನ್ನು ಒಡೆಯಲೂಬಹುದು ಅಥವಾ ಕುರಿಗಳನ್ನು ಬೆದರಿಸಲೂ ಬಹುದು!