Saturday, November 15, 2014

‘ಅಪ್ಪು ಆತ್ಮನನು ಆತ್ಮನೆ ಅಪ್ಪೆ’...............ದ.ರಾ.ಬೇಂದ್ರೆ



ಅಪ್ಪು ಆತ್ಮನನು, ಆತ್ಮನೆ ಅಪ್ಪೆ
ನಿನ್ನನು ಒಪ್ಪದೆ ನನ್ನನು ಒಪ್ಪೆ

ತಿಳಿವಳಿಕೆಯ ತುದಿ ನಾವೂ ನೀವೂ
ತಿಳಿಯೆನು ಎನ್ನುವ ಹಠವೇ ಸಾವು

ತಿಳಿಸಿರಿ ಎನುವಲಿ ತಿಳಿವಿರಬೇಕು
ನೀರಿನ ಕದಡೂ ಇಳಿದಿರಬೇಕು

ಬಲ್ಲೆನು ಎನುವುದು ಗರ್ವವು ನೋಡಾ
ತಿಳಿಯಲು ಬಲ್ಲೆನು ನೀನೆನಬೇಡಾ

ಬಲಗಡೆಯಿಂದ ಎಡಗಡೆ ಓದು
ಜಾಜಾ ಮಂತ್ರಾ ಮಾತಿನ ಜಾಡು

ಹೊರಮೈ ಒಳಮೈ ಒಂದೇ ದೇಹ
ಇರುವಿನ ಅರಿವಿನ ಹರಿವೇ ಸ್ನೇಹ

ಸುತ್ತೂ ಕಡೆಗೆ ಎಲ್ಲೂ ಇಲ್ಲಾ
ಬೆಳಕೇ ಬೆಲ್ಲಾ ಕತ್ತಲೆ ಅಲ್ಲಾ

ಲ್ಲಾಅಲೆತ್ತಕ ಲ್ಲಾಬೆ ಕೆಳಬೆ
ಲ್ಲಾಇ ಲ್ಲೂಎ ಗೆಡಕ ತ್ತೂಸು


ಕವಿ ಬದಲಾಗುತ್ತ ಹೋದಂತೆ, ಅವನ ಕಾವ್ಯವೂ ಬದಲಾಗುತ್ತ ಹೋಗುತ್ತದೆ. ಬೇಂದ್ರೆಯವರು ಈ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ. ‘ಅರಳು ಮರಳು’ ನಂತರದ ಬೇಂದ್ರೆ-ಕಾವ್ಯವು ಕಾವ್ಯವೇ ಅಲ್ಲ ಎಂದು ಕೆಲವರು ವಿಮರ್ಶಕರು ಹೇಳಿದ್ದುಂಟು. ‘ಅರಳು ಮರಳು’ವಿನ ಮೊದಲಿನ ಬೇಂದ್ರೆಯವರು ನವೋದಯದ ಆದರ್ಶಗಳ ಕನಸು ಕಂಡ ಕವಿ. ಅವರ ದೃಷ್ಟಿ ಅಧ್ಯಾತ್ಮಿಕವಾಗುತ್ತ ಹೋದಂತೆ ಅವರ ಕಾವ್ಯ ಬದಲಾಗುತ್ತ ಹೋಯಿತು. ಅವರು ಶ್ರೇಷ್ಠ ಕವಿಯಾಗಿದ್ದರೂ ಸಹ ಆಧ್ಯಾತ್ಮಿಕ ಸಾಧನೆಯ ಪಥದಲ್ಲಿ ಇನ್ನೂ ದೂರ ಕ್ರಮಿಸಿರಲಿಲ್ಲ. ಹೀಗಾಗಿ ಆಧ್ಯಾತ್ಮಿಕ ಅನುಭವದ ಅವರ ಕವನಗಳು ಈ ಅವಧಿಯಲ್ಲಿ ಉತ್ಕಟ ಕಾವ್ಯವಾಗಲಿಲ್ಲ. ಅವರ ಸಾಧನೆ ಹೆಚ್ಚಾದಂತೆ, ಕವನಗಳು, ತೋರಿಕೆಗೆ ಸರಳವಾದರೂ ಸಹ, ಹೆಚ್ಚು ಗೂಢವಾದವು. ಇಲ್ಲಿರುವ ಕವನವು ಅಂತಹ ಒಂದು ಕವನ. ಇನ್ನು ಈ ಕವನವನ್ನು ಹೇಗೆ ಅನುಭವಿಸಬೇಕು? ಕನ್ನಡವನ್ನು ಓದಲಿಕ್ಕೆ ಕನ್ನಡ ಲಿಪಿಯನ್ನು ಕಲಿಯಬೇಕು. ಇಂಗ್ಲಿಶ್‍ಅನ್ನು ಓದಲು ಇಂಗ್ಲಿಶ್ ಲಿಪಿ ಬರಬೇಕು. ಅದರಂತೆ ವಿಭಿನ್ನ ಕವಿಗಳನ್ನು (--ಅವರು ಒಳ್ಳೆಯ ಕವಿಗಳೇ ಇರಲಿ, ಕೆಟ್ಟ ಕವಿಗಳೇ ಇರಲಿ—) ಅರ್ಥೈಸಿಕೊಳ್ಳಲು ಅವರ ಕಾವ್ಯಭಾಷೆಯನ್ನು ನಾವು ತಿಳಿಯಬೇಕು.

ಬೇಂದ್ರೆಯವರ ‘ನಾಕು ತಂತಿ’ ಕವನವನ್ನು ನೋಡಿರಿ: ನಾನು, ನೀನು, ಅವನು, ತಾನು ಎನ್ನುವುದೇ ಈ ವಿಶ್ವಸಂಸಾರದ ನಾಲ್ಕು ತಂತಿಗಳು. ಆದರೆ, ವಿಶ್ವವು ಭಿನ್ನವಾಗಿ ಒಡೆಯುವ ಮೊದಲು, ಈ ಎಲ್ಲ ತಂತಿಗಳು ಒಂದೇ, ಅಭಿನ್ನ ರೂಪ. ಬೇಂದ್ರೆಯವರು ಈ ತತ್ವವನ್ನು ಈ ಕವನದಲ್ಲಿ ಅನುಭವಿಸುತ್ತಿದ್ದಾರೆ. ಮೊದಲು ವಿಘಟಿತ ವಿಶ್ವವನ್ನು ನಾಲ್ಕು ತಂತಿಗಳ ಮೂಲಕ ನೋಡಿದ ಬೇಂದ್ರೆಯವರು, ಈಗ ಅದೇ ವಿಶ್ವವನ್ನು ಒಂದೇ ರೂಪದಲ್ಲಿ ನೋಡುತ್ತಿದ್ದಾರೆ.

ಆತ್ಮ ಎಂದರೆ self. ತನ್ನನ್ನು ತಿಳಿದುಕೊಳ್ಳಬಯಸುವ ವ್ಯಕ್ತಿಯು ತನ್ನನ್ನು ಅಪ್ಪಿಕೊಳ್ಳಬೇಕು. ಈ ಮಾತಿಗೆ ಏನರ್ಥ? ತನ್ನನ್ನು ತಾನು ಧ್ಯಾನಿಸಿಕೊಳ್ಳಬೇಕು ಎಂದಲ್ಲವೆ? ತನ್ನನ್ನು ತಾನು ಧ್ಯಾನಿಸಿಕೊಂಡಾಗ, ‘ತಾನು’ ಎಂದು ತಿಳಿದುಕೊಂಡಿರುವ ಮನಸ್ಸು ಅಥವಾ ಪ್ರಜ್ಞೆಯು ತನ್ನನ್ನೇ ಅಪ್ಪಿಕೊಳ್ಳುತ್ತದೆ ಅಂದರೆ ತನ್ನಲ್ಲೇ ಸಮರಸವಾಗುತ್ತದೆ. ಇದೇ ಮಾತನ್ನು ಅಲ್ಲಮಪ್ರಭುಗಳು ತಮ್ಮ ಒಂದು ವಚನದಲ್ಲಿ, ‘ಗುಹೇಶ್ವರ ಸತ್ತ, ನಾನು ಉಳಿದೆ’ ಎಂದು ಹೇಳಿದ್ದಾರೆ.

ಆದರೆ ವಿಘಟಿತ ವಿಶ್ವದಲ್ಲಿ ‘ನಾನು’ ಮಾತ್ರ ಇರುವುದಿಲ್ಲ. ನಾಲ್ಕು ತಂತಿಯ ಎರಡನೆಯ ತಂತಿಯಾದ ‘ನೀನು’ ಅಲ್ಲಿ ಇರಲೇಬೇಕು. ಅದರ ಇರುವನ್ನು ‘ನಾನು’ ಅನುಭವಿಸಬೇಕು. ‘ನಿನ್ನನ್ನು’ ನಾನು ‘ನಾನು’ ಎಂದು ತಿಳಿದಾಗಲೇ, ನನ್ನನ್ನು ನಾನು ತಿಳಿದುಕೊಂಡಂತೆ. ಆದುದರಿಂದಲೆ, ಬೇಂದ್ರೆಯವರು ‘ನಿನ್ನನು ಒಪ್ಪದೆ, ನನ್ನನು ಒಪ್ಪೆ’ ಎಂದು ಹೇಳುತ್ತಿದ್ದಾರೆ. ಅರ್ಥಾತ್ ನಾನು ಹಾಗು ನೀನು ಎರಡೂ ಒಂದೇ. ಈ ಮಾತು ಆಧ್ಯಾತ್ಮಿಕವಾಗಿ ಮಾತ್ರವಲ್ಲ, ವ್ಯಾವಹಾರಿಕವಾಗಿಯೂ ಸತ್ಯವಾಗಿದೆ. ಲೌಕಿಕ ಜಗತ್ತಿನಲ್ಲಿ ನಾನು ನನಗೆ ಕೊಡುವ ಸ್ಥಾನವನ್ನು ನನಗೆ ಎದುರಾದ ‘ನಿನ’ಗೂ ಕೊಡಲೇ ಬೇಕು. ಈ ತಿಳಿವೇ ಅಂತಿಮ ಸತ್ಯ. ಪರಮಾತ್ಮನು  ಸತ್ಯದ ಮೂಲವಾದರೆ, ನಾನು ಹಾಗು ನೀನು ಈ ಸತ್ಯದ ವ್ಯಕ್ತ ಕೊನೆಗಳು; ವೃಕ್ಷದ ಕಾಂಡ ಹಾಗು ರೆಂಬೆಗಳು ಇದ್ದಂತೆ. ನಾವೆಲ್ಲರೂ ಆ ಅವ್ಯಕ್ತ ಪರಮಾತ್ಮನ ವ್ಯಕ್ತರೂಪಗಳು ಎನ್ನುವುದನ್ನು ತಿಳಿಯಲು ನಿರಾಕರಿಸಿದರೆ, ನಮ್ಮ ಅಸ್ತಿತ್ವಕ್ಕೆ ಅರ್ಥವಿಲ್ಲ ಅರ್ಥಾತ್ ನಾವು ಇದ್ದರೂ ಸಹ ಸತ್ತಂತೆಯೇ.

ತಿಳಿವಳಿಕೆ ಇಲ್ಲದ ವ್ಯಕ್ತಿ ತಿಳಿವಳಿಕೆ ಇದ್ದ ಗುರುವನ್ನು ಆಶ್ರಯಿಸಿ, ‘ತಿಳಿಸಿರಿ’ ಎಂದು ಪ್ರಾರ್ಥಿಸಬೇಕು. ಆ ಯಾಚಕನ ಮನಸ್ಸು ತಿಳಿಯಾಗಿರಬೇಕು ಅಂದರೆ ಅವನ ಮನಸ್ಸಿನಲ್ಲಿ ಅಹಂಕಾರ ಇರಕೂಡದು, ಯಾವುದೇ ಕಲ್ಮಶಗಳು ಇರಬಾರದು.  ಕದಡಿದ ನೀರಿನಲ್ಲಿ ರಾಡಿ ಇರುತ್ತದೆ. ಆದರೆ ನೀರು ನಿಶ್ಚಲವಾದಾಗ ರಾಡಿ ಇಳಿದು ಹೋಗುತ್ತದೆ. ಅದರಂತೆ ಚಂಚಲತೆ ಹಾಗು ಉದ್ವಿಗ್ನತೆಯಿಂದ ಕದಡಿದ ಮನಸ್ಸಿಗೆ ಗುರುವಾಕ್ಯವನ್ನು ಗ್ರಹಿಸಲು ಅಸಾಧ್ಯವಾಗುತ್ತದೆ. ಆದುದರಿಂದ ಮನಸ್ಸನ್ನು ಸ್ವಚ್ಛಗೊಳಿಸಿ, ನಿಗ್ರಹದಲ್ಲಿ ತಂದು ಗುರುವಾಕ್ಯವನ್ನು ಆಲಿಸಬೇಕು. ತನಗೆ ತಿಳಿದೇ ಬಿಟ್ಟಿದೆ ಎಂದು ತಿಳಿದುಕೊಂಡವನು ಗುರುವಿನಿಂದ ಏನನ್ನು ಪಡೆಯಲು ಸಾಧ್ಯ? ಅದರಂತೆ, ತಿಳಿಯುವ ಸಾಮರ್ಥ್ಯವು ತನ್ನಲ್ಲಿ ಇದೆ ಎಂದುಕೊಳ್ಳುವುದೂ ಸಹ ಅಹಂಕಾರವೇ. ಅದುದರಿಂದ ಪಾರಮಾರ್ಥಿಕ ಸತ್ಯವು ತನಗೆ ತಿಳಿದಿಲ್ಲ; ಗುರುಕೃಪೆಯಿಂದ ಮಾತ್ರ ಆ ಸತ್ಯವನ್ನು ತಿಳಿದುಕೊಳ್ಳಬಹುದು ಎನ್ನುವ ಅರಿವು ಯಾಚಕನಿಗೆ ಬೇಕು.

ಗುರುಕೃಪೆಯಿಂದ ದೊರೆಯುವ ಈ ಪರಮ ಸತ್ಯವನ್ನು ಯಾವ ಕಡೆಯಿಂದ ನೋಡಿದರೂ ಒಂದೇ ಆಗಿರುತ್ತದೆ. ಈ ಪರಮ ಸತ್ಯವನ್ನು ಅನೇಕರು ಅನೇಕ ಬಗೆಗಳಲ್ಲಿ ಹೇಳುತ್ತಾರೆ:  ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’. ಸತ್ಯಾರ್ಥಿಯು ಈ ಸತ್ಯವನ್ನು ಎಡದಿಂದ ಬಲಕ್ಕೆ ಓದಲಿ ಅಥವಾ ಬಲದಿಂದ ಎಡಕ್ಕೆ ಓದಲಿ, ಅದರ ಅರ್ಥ ಬದಲಾಗುವದಿಲ್ಲ.  ಈ ಮಾತಿಗೆ ಒಂದು ಉದಾಹರಣೆಯನ್ನು ಕೊಡಬಹುದು. ಕನಕ ಎನ್ನುವ ಪದವನ್ನು ಎಡಗಡೆಯಿಂದಲೇ ಓದಲಿ ಅಥವಾ ಬಲಗಡೆಯಿಂದಲೇ ಓದಲಿ, ಅದು ಕನಕವಾಗಿಯೇ ಅಂದರೆ ಬಂಗಾರವಾಗಿಯೇ ಉಳಿಯುವುದು.ಇದನ್ನು ಬೇಂದ್ರೆಯವರು ‘ಜಾಜಾ ಮಂತ್ರ’ ಎನ್ನುತ್ತಾರೆ. ‘ಜಾಜಾ ಮಂತ್ರ’ ಇದು ಹುಡುಗರು ಆಡುವಾಗ ಬಳಸುವ ಮಾತು. ತಮ್ಮ ಬಲಗೈಯಲ್ಲಿದ್ದ ಬಳಪವನ್ನು ‘ಜಾಜಾ’ ಎನ್ನುತ್ತ ಹುಡುಗರು ಎಡಗೈಗೆ ಬದಲಾಯಿಸುತ್ತಾರೆ. ಅಂದರೆ ಬಾಲಕರಂತೆ ಸರಳವಾದ ಮನಸ್ಸನ್ನು ಹೊಂದಿದವರಿಗೆ, ಈ ಸತ್ಯಶೋಧನೆ ಜಾಜಾ ಮಂತ್ರದಷ್ಟೇ ಸುಲಭವಾದ ಕಾರ್ಯ.

ಮೊದಲು ಎಡ ಹಾಗು ಬಲಗಳು ಒಂದೇ ಎಂದು ಹೇಳಿದ ಬೇಂದ್ರೆಯವರು, ಈಗ ಹೊರಮೈ ಹಾಗು ಒಳಮೈ ಒಂದೇ ಎಂದು ಹೇಳುತ್ತಾರೆ. ಪಾರಮಾರ್ಥಿಕ ಸತ್ಯಕ್ಕೆ ಒಳ ಹಾಗು ಹೊರ ಎನ್ನುವ ಭೇದವೇ ಇರುವುದಿಲ್ಲ. ಈ ಸತ್ಯಕ್ಕೆ ಇರುವುದು, ಇರುವು, ಅರಿವು ಹಾಗು ಸ್ನೇಹ. ಇರುವು ಎಂದರೆ ‘ಸತ್’, ಅರಿವು ಅಂದರೆ ‘ಚಿತ್’ ಅಥವಾ ಜ್ಞಾನ, ಸ್ನೇಹ ಎಂದರೆ ಪ್ರೀತಿ ಅಥವಾ ಆನಂದ. ಹರಿವು ಎಂದರೆ ವಿಸ್ತಾರ; ಹರಿವು ಎಂದರೆ ಚಲನೆಯೂ ಹೌದು. ಈ ವಿಶ್ವವೆಂದರೆ ಸಚ್ಚಿದಾನಂದದ ಸದಾ ಚಲನ. ಬೇಂದ್ರೆಯವರು ಈ ಮಾತನ್ನು ಕೇವಲ ಹೇಳುತ್ತಿಲ್ಲ, ಆದರೆ ಅನುಭವಿಸುತ್ತಿದ್ದಾರೆ.  ಆದುದರಿಂದಲೇ ಅವರು ಇದು ನಮ್ಮ ಹೊರಗೆ, ನಮ್ಮ ಸುತ್ತಮುತ್ತಲೂ ಇಲ್ಲ, ಆದರೆ ನಮ್ಮಲ್ಲೇ, ನಮ್ಮ ಒಳಗೇ ಇದೆ ಎಂದು ಹೇಳುತ್ತಿದ್ದಾರೆ. ಈ ಅರಿವೇ ಬೆಲ್ಲದಂತೆ ಸಿಹಿಯಾದದ್ದು ಹಾಗು ಪೋಷಕವಾದದ್ದು. ಅಜ್ಞಾನ ಅಂದರೆ ಈ ಅರಿವಿನ ಅಭಾವ. ಅದು ಎಂದಿಗೂ ಪರಮಾರ್ಥ ಸಾಧಕನಿಗೆ ಸಿಹಿಯಾಗಲಾರದು.

ಕೊನೆಯ ಎರಡು ಸಾಲುಗಳಲ್ಲಿ ಬೇಂದ್ರೆಯವರು ಈ ಸತ್ಯವನ್ನು ತಿರುವು ಮುರುವು ಮಾಡಿ, ಮೇಲ್‍ಕೆಳಗೆ ಮಾಡಿ ಬರೆದಿದ್ದಾರೆ. ನಾವು ಹೇಗೇ ಓದಿದರೂ ಸಹ ಪರಮ ಸತ್ಯವು ಅದೇ ಆಗಿದೆ ಎನ್ನುವುದನ್ನು ಬೇಂದ್ರೆ ತಮ್ಮದೇ ಆದ ವಿಚಿತ್ರ ರೀತಿಯಲ್ಲಿ ತೋರಿಸುತ್ತಿದ್ದಾರೆ. ಕವಿಯ ಈ ವೈಚಿತ್ರ್ಯವನ್ನು ನಾವು ಒಪ್ಪಿಕೊಂಡಾಗಲೇ ಅವನ ಕವನವನ್ನು ಅಪ್ಪಿಕೊಳ್ಳಲು ಸಾಧ್ಯವಾದೀತು.

17 comments:

Badarinath Palavalli said...

ಸತ್ಯದ ಅರಿವನು ಹೊಂದದೆ ಜೀವ ಪಡೆಯದು ತಾ ಮುಕುತಿ.
ಅಪ್ಪದೇ ಆತ್ಮವನು ತಾ ಹೊಂದದು ವಿಮುಕ್ತೀ.

ಕವಿ ಹೃದಯ ಮಾಗಿದ ಹಾಗೆ, ತಾನು ಯೋಚಿಸುವ ರೀತಿ ಮತ್ತು ಅದನ್ನು ಬರವಣಿಗೆಯಲ್ಲಿ ತರುವ ರೀತಿಯಲ್ಲೂ ಪ್ರೌಢತೆ ಕಾಣ ಸಿಗುತ್ತದೆ. ಈ ಕವನವು ಅವರ ಉನ್ನತ ಯೋಚನಾ ಲಹರಿಗೆ ಹಿಡಿದ ಕನ್ನಡಿ.

sunaath said...

ಕವಿ ಬದಲಾದಂತೆ ಕವನವೂ ಬದಲಾಗುತ್ತದೆ. ಜೊತೆಜೊತೆಗೆ ಓದುಗನೂ ಬದಲಾಗಬೇಕಲ್ಲವೆ?

ಮನಸಿನಮನೆಯವನು said...

ಕವಿ ಬದಲಾಗುತ್ತ ಹೋದಂತೆ, ಅವನ ಕಾವ್ಯವೂ ಬದಲಾಗುತ್ತ ಹೋಗುತ್ತದೆ. ಖಂಡಿತವಾಗಿ, ನನಗೂ ಅನುಭವವಾದಂತಿದೆ.
ಸುಮ್ಮನೆ ಕೇಳುತ್ತೇನೆ, ಈ ವಾಕ್ಯದ ಕುರಿತು. "ಚಂಚಲತೆ ಹಾಗು ಉದ್ವಿಗ್ನತೆಯಿಂದ ಕದಡಿದ ಮನಸ್ಸಿಗೆ ಗುರುವಾಕ್ಯವನ್ನು ಗ್ರಹಿಸಲು ಅಸಾಧ್ಯವಾಗುತ್ತದೆ. ಆದುದರಿಂದ ಮನಸ್ಸನ್ನು ಸ್ವಚ್ಛಗೊಳಿಸಿ, ನಿಗ್ರಹದಲ್ಲಿ ತಂದು ಗುರುವಾಕ್ಯವನ್ನು ಆಲಿಸಬೇಕು"- ಮನಸ್ಸನ್ನು ಸ್ವಚ್ಚಗೊಳಿಸಬೇಕೆ ? ಹೇಗೆ? ಏಕೆ? ಚಂಚಲತೆ ಉದ್ವಿಗ್ನತೆಗಳಿಂದ ಕೂಡಿರುವುದು ಮನಸ್ಸಿನ ಕಾಯಕ, ಅದರ ಕಾಯಕವನ್ನು ನಿಲ್ಲಿಸಬೇಕೆ? ನನ್ನ ಪ್ರಕಾರ ಮನಸ್ಸನ್ನು ನಿಗ್ರಹ ಮಾಡುವುದರಲ್ಲಿ ಅರ್ಥವಿಲ್ಲ, ಕೆಲವು ಮಿತಿಗಳಿವೆ.

sunaath said...

ನಾವು ವಾಸಿಸುತ್ತಿರುವ ದೇಹವು ನಮ್ಮ ಮನಸ್ಸಿಗೆ ಒಂದು ಮಿತಿಯನ್ನು ಹಾಕಿದೆ. ಆದುದರಿಂದ ದೇಹದ ಬೇಡಿಕೆಗಳ ಹೊರತಾಗಿ, ಮನಸ್ಸಿಗೆ ಬೇರೆ ಏನೂ ಕಾಣದು. ಸತತ ಪ್ರಯತ್ನದಿಂದ ಹಾಗು ಸತತವಾಗಿ ಸೋಲುತ್ತಿದ್ದರೂ ಸಹ, ಮನೋನಿಗ್ರಹಕ್ಕಾಗಿ ಪ್ರಯತ್ನಿಸುವದರಿಂದ, ಕೊನೆಗೊಮ್ಮೆ ನಾವು ಎಂದೂ ಕಂಡರಿಯದಂತಹ ಸೊಗಸು ನಮಗೆ ಕಾಣುತ್ತದೆ.ಇದು ಬಹುಶಃ ಒಂದೇ ಜನ್ಮದಲ್ಲಿ ಸಾಧ್ಯವಾಗಲಿಕ್ಕಿಲ್ಲ! ಅಲ್ಲಿಯವರೆಗೂ ಲೌಕಿಕಕ್ಕೆ ಹಾಗು ಅಲೌಕಿಕಕ್ಕೆ balance ಮಾಡುತ್ತ, ಸಮಾಧಾನದಿಂದ ಪ್ರಯತ್ನಿಸುತ್ತ ಹೋಗಬಹುದೇನೋ?

ಅಪ್ಪ-ಅಮ್ಮ(Appa-Amma) said...

ಸುನಾಥ ಕಾಕಾ,

ಹೊರಮೈ ಒಳಮೈ .. ಎರಡು ಒಂದೇ ಎನ್ನುವ ನಿಲುವು ವಿಶಿಷ್ಟವಾಗಿದೆ.
ದೇಹವೆಂಬುದು ನಶ್ವರ.. ಆತ್ಮ ಶಾಶ್ವತ ಅನ್ನುವುದನ್ನು ಎಲ್ಲೋ ಓದಿದ ನೆನಪು.

ನಿಮ್ಮ ಅಭಿಪ್ರಾಯವೇನು ?

sunaath said...

ಅಪ್ಪ-ಅಮ್ಮ,
ಪರಮಾತ್ಮನೆಂದರೆ ಅನಂತ ಸಮುದ್ರವಿದ್ದಂತೆ. ಈ ಸಮುದ್ರಕ್ಕೆ ಒಳಗು ಹಾಗು ಹೊರಗು ಎರಡೂ ಒಂದೇ. ಈ ಸಮುದ್ರದ ಒಂದು ಹನಿ ಎಂದರೆ ಜೀವಾತ್ಮವಿದ್ದಂತೆ. ಹನಿಯನ್ನು ಸುತ್ತುವರಿದಿರುವ ಅಹಂಕಾರವೆನ್ನುವ ಕೋಶವು ಹನಿಯನ್ನು ಸಮುದ್ರದಿಂದ ಬೇರ್ಪಡಿಸುತ್ತದೆ.ಅಹಂಕಾರವು ಎಷ್ಟೇ ಹಿಗ್ಗಿದರೂ ಸಹ ಅನಂತ ಸಮುದ್ರದಷ್ಟು ಆಗಲಾರದು. ಆದರೆ ಅಹಂಕಾರದ ಸುತ್ತುಮೈ ಹರಿದು ಹೋದಾಗ, ಹನಿಯು ಸಮುದ್ರದಲ್ಲಿ ಬೆರೆತು ಹೋಗುತ್ತದೆ. ಆ ಸಂದರ್ಭದಲ್ಲಿ ಜೀವಾತ್ಮನು ಪರಮಾತ್ಮನನ್ನು ಅಪ್ಪಿಕೊಂಡು ಒಂದಾಗಿ ಬಿಡುತ್ತಾನೆ.

ಆತ್ಮವು ಶಾಶ್ವತವಾದದ್ದೇ. ಜನ್ಮಜನ್ಮಾಂತರಗಳಲ್ಲಿ, ದೇಹಗಳು ಬದಲಾಗುತ್ತವೆ; ಆತ್ಮ ಬದಲಾಗದೇ ಉಳಿಯುತ್ತದೆ. ದೇಹವೆಂದರೆ ಭೌತಿಕ ಶರೀರವಷ್ಟೇ ಅಲ್ಲ, ನಮ್ಮ ಮನಸ್ಸು, ನಮ್ಮ ಅಹಂಕಾರ ಇವೂ ಸಹ ಸೂಕ್ಷ್ಮದೇಹಗಳೇ. ಭಗವದ್ಗೀತೆಯಲ್ಲಿ, ‘ವಾಸಾಂಸಿ ಜೀರ್ಣಾಯ ಯಥಾ ವಿಹಾಯ, ನವಾನಿ ಗೃಹ್ಣಾತಿ ನವೋಪರಾಣಿ’ ಅಂದರೆ ‘ಹಳೆಯ ಬಟ್ಟೆಗಳನ್ನು ಬಿಸುಟು, ಹೊಸ ಬಟ್ಟೆಗಳನ್ನು ಧರಿಸುವಂತೆ..’ಎಂದು ಕೃಷ್ಣನು ಹೇಳುತ್ತಾನೆ. ಆದುದರಿಂದ ಆತ್ಮವು ಪ್ರತಿ ಜನ್ಮದಲ್ಲೂ ಹೊಸ ವೇಷವನ್ನು ತೊಡುತ್ತದೆ ಎನ್ನಬಹುದು.

ಸಿಂಧು sindhu said...

ಪ್ರೀತಿಯ ಕಾಕಾ,
ತುಂಬ ಚನಾಗಿರುವ ವಿಶ್ಲೇಷಣೆ.
ಈ ಕವಿತೆಯ ವಿಷಯದ ಬಗ್ಗೆ ಕಮೆಂಟು ಮಾಡಲು ನಾನು ಚಿಕ್ಕವಳು. ಇದರಲ್ಲಿ ಹೆಚ್ಚಿನ ಅಧ್ಯಯನ ನನ್ನದು ಆಗಿಲ್ಲ.
ಇದನ್ನು ಓದುವಾಗ ನೆನಪಿಗೆ ಬಂದಿದ್ದು, ಬೇಂದ್ರೆಯವರ ಕವಿತೆಯದೇ ಒಂದು ಸಾಲು. - "ನಿನ್ನ ಕಿರಣ ನಿನಗೆ ಹಗಲು, ಉಳಿದವರಿಗೆ ಕತ್ತಲು"
ಯಾವ ಕವಿತೆ ಎಂದು ನೆನಪಿಲ್ಲ. ಎಂದೋ ಲೈಬ್ರರಿಯಲ್ಲಿ ಕೋಟ್ ಮಾಡಿ ಬರಕೊಂಡಿದ್ದು.
ಕವಿತೆ ಕೆಲಿಡೋಸ್ಕೋಪಿನ ಹಾಗೆ. ನಮ್ಮ ಕೋನ(ಆಂಗಲ್) ಏನೋ ಮತ್ತು ತೂರಿದ ಬೆಳಕೆಷ್ಟೋ ಎನ್ನುವುದರ ಮೇಲೆ ನಮಗೆ ಸಿಗುವ ರೂಪ. ಅಲ್ಲವಾ?

ಪ್ರೀತಿಯಿಂದ,
ಸಿಂಧು

sunaath said...

ಸಿಂಧು,
ನೀವು ನೆನಪಿಸಿಕೊಂಡ ಸಾಲು ‘ಅಷ್ಟು ಪ್ರೀತಿ ಇಷ್ಟು ಪ್ರೀತಿ..’ ಎನ್ನುವ ಕವನದ ಸಾಲು. ಆ ಕವನದ ಮೊದಲ ನುಡಿಯು ಹೀಗಿದೆ:

ಅಷ್ಟು ಪ್ರೀತಿ, ಇಷ್ಟು ಪ್ರೀತಿ ಎಣಸಿ ಕಷ್ಟಪಡದಿರು,
ಒಲಿದು ಒಲಿಸಿ ಸುಖದಿರು;
ಎಷ್ಟೆ ಇರಲಿ ಅಷ್ಟೆ ಮಿಗಿಲು,ತಮ್ಮ ಕಿರಣ ತಮಗೆ ಹಗಲು
ಉಳಿದ ಬೆಳಕು ಕತ್ತಲು;
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.

ಸಿಂಧು sindhu said...

oh Kaaka,
Thank you very much.

Full verse of that poem please.

sindhu

KalavathiMadhusudan said...

sir, entahaa adbhutavada prabhddha vshleshane nimminda matrave sadhya,haageye,pratikriyegalu saha prabhuddhavaagiye ive.dhanyavaadagalu.

Subrahmanya said...

'ಪಂಡಿತರು' ಏನೇ ಹೇಳಲಿ , ಬೇಂದ್ರೆಯವರ ಕವನಗಳ ಒಂದಂಶದಷ್ಟಾನ್ನಾದರೂ ಸ್ವತಂತ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾದರೆ ಆತನಿಗೆ ಕಾವ್ಯದ ಒಳತೋಟಿ ತಿಳಿದಿದೆ ಎಂದೇ ಅರ್ಥ!. ಈಗಿನವರು ಇಂತಹ ಕವನಗಳಿಂದ ಕಲಿಯುವುದು ತುಂಬ ಇದೆ, ಇಲ್ಲ-ಸಲ್ಲಗಳನ್ನು ಬದಿಗಿಟ್ಟು.

sunaath said...

ಕಲಾವತಿಯವರೆ,
ನೀವು ಓದಿ ಸ್ಪಂದಿಸುವದೇ ನನಗೆ ಹೆಚ್ಚಿನ ಪ್ರೇರಣೆಯನ್ನು ನೀಡುತ್ತದೆ. ನಿಮಗೆ ಧನ್ಯವಾದಗಳು.

sunaath said...

ಸುಬ್ರಹ್ಮಣ್ಯರೆ,
ಕನ್ನಡದೇವಿಯು ನಮಗೆ ಪಂಪ, ರನ್ನರನ್ನು ದಯಪಾಲಿಸಿದಂತೆಯೇ, ಬೇಂದ್ರೆಯವರನ್ನು ಸಹ ನೀಡಿದ್ದಾಳೆ. ಕನ್ನಡಿಗರು ಧನ್ಯರು.

Anil Talikoti said...

ಅರಳು ಮರಳು’ ನಂತರದ ಬೇಂದ್ರೆ ನಿರಂತರ ಹುಡುಕಾಟದಲ್ಲಿ ಏನೆಲ್ಲಾ ಚಿಂತಿಸಿದ್ದಾರೆ- ತಮ್ಮ ಕವಿತ್ವವನ್ನು, ನಿಲುವುಗಳನ್ನು ಸವಾಲಿಗೆ ತಳ್ಳಿದ್ದಾರೆ ಎನಿಸುತ್ತದೆ -ಸತ್ಯವನ್ನು ತಿರುವು ಮುರುವು ಮಾಡಿ. ಇಂಥಹದೆ ಆದ ಅವರ ಸಂಖ್ಯಾಶಾಸ್ತ್ರದ ಕವಿತೆಗಳ ಬಗ್ಗೆ ನಿಮ್ಮಿಂದ ತಿಳಿಯುವ ಆಶೆ. "When confronted with the question, what is the truth of existence, the desire to hold the secret in words and measure it by numbers grows strong" ಎಂಬ ಅರ್ಥದಲ್ಲಿ ಅಮೂರರು ಃಎಳಿದ್ದಾರೆ ಅಲ್ಲವೆ?
~ಅನಿಲ

sunaath said...

ಅನಿಲರೆ,
ಆಮೂರರು ಸತ್ಯವನ್ನೇ ಹೇಳಿದ್ದಾರೆ!

Ramakant Hegde said...

ತುಂಬಾ ಚನ್ನಾಗಿ ಬೇಂದ್ರೆಯವರನ್ನು ಅರ್ಥೈಸಿದ್ದೀರಿ! (ಮೊದಲಿನಂತೆ ಈಗಲೂ ಕೂಡ!)
ಒಂದು ಪ್ರಶ್ನೆ. ’ಗುರುಕ್ರುಪೆ’ಯ ಕುರಿತು (ನನ್ನ ಟೈಪಿಂಗ್ ಅಸಾಮರ್ಥ್ಯವನ್ನು ಕ್ಷಮಿಸಿ).
’ನಾಕು’ ತಂತಿಗಳಲ್ಲಿ ಗುರುವಿನ ಸ್ಥಾನಕ್ಕೆ ಅದು ಇಂಥದ್ದೇ ಎಂಬ ನಿಗದಿ ಇಲ್ಲ.
’self'ಗೆ self ತಾನೇ ’ಪರಮ’ಗುರುವಲ್ಲವೇ? ಈ ಅದ್ವೈತಭಾವ ಬರುವದು self ಎಂಬುದು ಸಚ್ಚಿದಾನಂದವನ್ನು ಗುರಿಯಾಗಿಸಿ, ಸಮೀಪಿಸಿ, ’ಅದು’ ’ಇದು’, ’ಅವನು’, ’ಇವನು’ ’ನಾನು’ ’ನೀನು’ಗಳನ್ನು ಅತಿಕ್ರಮಿಸಿ, ತಾನೇ ತಾನೆಂಬದರಿಂದ ಹೊರಬಂದರೆ ಮಾತ್ರ ಸತ್ಯ!

sunaath said...

ರಮಾಕಾಂತ ಹೆಗಡೆಯವರೆ,
ನನ್ನ ಗಣಕಯಂತ್ರ ನಾದುರುಸ್ತ ಇದ್ದುದರಿಂದ ನಿಮಗೆ ಸ್ಪಂದಿಸಲು ವಿಳಂಬವಾಯಿತು; ಕ್ಷಮಿಸಿ. ತನಗೆ ತಾನೇ ಗುರು ಎನ್ನುವುದನ್ನು ಭಾರತೀಯ ಶಾಸ್ತ್ರಗಳಲ್ಲಿ, ಮುಖ್ಯವಾಗಿ ಭಗವದ್ಗೀತೆಯಲ್ಲಿ ಹೇಳಿದ್ದಾರೆ. ‘ನಾನು’ ‘ಅವನೇ’ ಎನ್ನುವ ಅರಿವು ಬರಲು, ಸಾಧನೆಯ ಪ್ರಾರಂಭದಲ್ಲಿ apparently ಬೇರೊಬ್ಬ ಗುರುವಿನ ಅವಶ್ಯಕತೆ ಇದ್ದೇ ಇದೆ!
‘ಕೃಪೆ’ಯನ್ನು ಕನ್ನಡದಲ್ಲಿ ಟೈಪಿಸಲು ಹೀಗೆ ಮಾಡಿರಿ:
kಅನ್ನು ಟೈಪಿಸಿ, shift ಹಿಡಿದು rಅನ್ನು ಟೈಪಿಸಿ. ಆ ಬಳಿಕ uಅನ್ನು ಟೈಪಿಸಿ.
ವಂದನೆಗಳು.