Friday, January 30, 2015

‘ಎಂಥಾ ಮೋಜಿನ ಕುದರಿ’...........ಶಿಶುನಾಳ ಶರೀಫರು



ಎಂಥಾ ಮೋಜಿನ ಕುದರಿ
ಹತ್ತಿದ ಮ್ಯಾಲೆ ತಿರುಗುವುದು ಹನ್ನೊಂದು ಫೇರಿ ||ಪಲ್ಲ||

ಸಾರಿ ನಾನು ಹೇಳತೇನಿ ಸಟಿಯಲ್ಲ ಈ ಮಾತು
ಸತ್ಯಸದ್ಗುರುವಿನ ಪಾದ ಗಟ್ಯಾಗಿ ಮುಟ್ಟಿಸಿತು    ||ಅ.ಪ.||

ಹಚ್ಚನ್ನ ಕಡ್ಡವ ಹಾಕಲಿ ಬೇಕೋ
ನಿಚ್ಚಳ ನೀರು ಕುಡಿಸಲಿ ಬೇಕೋ
ಸಂಸ್ಕಾರ ಹಿಡಿದು ಹೊಡಿಯಲಿ ಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಲಿ ಬೇಕೋ  ||೧||

ತಪ್ಪುವುದಿಲ್ಲಪ್ಪಾ ಎರಡು ಹೊತ್ತಿನ ದಾಣಿ
ತಿಂದ ಮೇಲೆ ತಿರಗತೈತಿ ಮೇಲಿನ ಓಣಿ
ಖಾದರಲಿಂಗನು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ                      ||೨||

ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ
ಹೋಗುವಾಗ ಶಿಶುನಾಳಿಗೆ ಬಂತು
ಗೋವಿಂದ ನೋಡಿದ ತಾನೇ ತಾನಾತು                    ||೩||

ಶರೀಫರು ಗೋವಿಂದಭಟ್ಟರ ಶಿಷ್ಯರು. ಗೋವಿಂದಭಟ್ಟರು ತಂತ್ರಮಾರ್ಗದ ಸಾಧಕರು. ಹೀಗಾಗಿ ಗೋವಿಂದಭಟ್ಟರು ಶರೀಫರಿಗೆ ಯೋಗಸಾಧನೆಯ ಹಾಗು ತಂತ್ರಮಾರ್ಗದ ಅನೇಕ ವಿಧಾನಗಳನ್ನು ಕಲಿಸಿರಲಿಕ್ಕೆ ಸಾಕು. ಆ ಕಾರಣದಿಂದಲೇ ಶರೀಫರ ಗೀತೆಯಲ್ಲಿ “ಆರು ಮೂರನು ಕಟ್ಟಿ, ಮೇಲಕೆ ಏರಿದವನು ಘಟ್ಟಿ” ಎಂಬಂತಹ ಸಾಲುಗಳು ಬರುತ್ತವೆ. ಪ್ರಸ್ತುತ ‘ಎಂಥಾ ಮೋಜಿನ ಕುದರಿ’ ಎನ್ನುವದೂ ಸಹ ಇಂತಹದೇ ಒಂದು ಗೀತೆಯಾಗಿದೆ.

ಯೋಗ ಅಥವಾ ತಂತ್ರ ಇದರ ಉದ್ದೇಶವು ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸುವುದು. ಇದು ಸತತ ಅಭ್ಯಾಸದಿಂದ ಸಾಧ್ಯವಿದೆ. ಓರ್ವ ವ್ಯಕ್ತಿಯು ತನ್ನಲ್ಲಿ ಸುಪ್ತವಾಗಿ ಇರುವ ದೈವೀ ಚೈತನ್ಯವನ್ನು ಧ್ಯಾನದಿಂದ ಉದ್ದೀಪನಗೊಳಿಸಬಹುದು. ಯೋಗಸಾಧಕರು ಈ ಸುಪ್ತಶಕ್ತಿಯನ್ನು ‘ಕುಂಡಲಿನಿ’ ಎಂದು ಕರೆದಿದ್ದಾರೆ. ಈ ದೈವೀ ಶಕ್ತಿ ಅಥವಾ ಕುಂಡಲಿನೀ ಶಕ್ತಿ ಅಥವಾ ಯೋಗಶಕ್ತಿಯು ಸೂಕ್ಷ್ಮಶರೀರದಲ್ಲಿರುವ ಆರು ವಿಭಿನ್ನ ಚಕ್ರಗಳಲ್ಲಿ ಉದ್ದೀಪನಗೊಂಡಾಗ, ಆ ಸಾಧಕನು ವಿವಿಧ ಸಿದ್ಧಿಗಳನ್ನು ಪಡೆಯುವನೆಂದು ಹೇಳಲಾಗುತ್ತದೆ. ಸಾಧಕನು ವಿವೇಕಿಯಾಗಿದ್ದರೆ, ಈ ಶಕ್ತಿಯ ಸದುಪಯೋಗವಾಗುತ್ತದೆ. ಇಲ್ಲವಾದರೆ ಈ ಶಕ್ತಿಸಂಚಯವು ಸಾಧಕನನ್ನು ಹಾದಿಗೆಡಿಸುವ ಸಂಭವ ಇದ್ದೇ ಇರುತ್ತದೆ. ಆದುದರಿಂದಲೇ ಪತಂಜಲಿಯು ತನ್ನ ‘ಅಷ್ಟಾಂಗ ಯೋಗ’ದಲ್ಲಿ ಕೇವಲ ಆಸನ, ಪ್ರಾಣಾಯಾಮ ಮೊದಲಾದ  ಕ್ರಿಯೆಗಳನ್ನಷ್ಟೇ ಹೇಳದೆ, ಸಾಧಕನು ಪ್ರಯತ್ನಪೂರ್ವಕವಾಗಿ ಸಾಧಿಸಬೇಕಾದ ಹತ್ತು ನಿಗ್ರಹಗಳನ್ನು (ಅಹಿಂಸೆ, ಸತ್ಯ, ಅಸ್ತೇಯ,ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪ, ಸ್ವಾಧ್ಯಾಯ, ಈಶ್ವರ ಪ್ರಣಿಧಾನ) ನಿರೂಪಿಸಿದ್ದಾನೆ. ಶರೀಫರೂ ಸಹ ತಮ್ಮ ಈ ಗೀತೆಯಲ್ಲಿ ಯೋಗಸಾಧಕನಿಗೆ ಬೇಕಾದ ವಿವೇಕವನ್ನು ಹಾಗು ಯೋಗಸಾಧನೆಯ ಫಲಗಳನ್ನು ವರ್ಣಿಸಿದ್ದಾರೆ.

ಎಂಥಾ ಮೋಜಿನ ಕುದರಿ
ಹತ್ತಿದ ಮ್ಯಾಲೆ ತಿರುಗುವುದು ಹನ್ನೊಂದು ಫೇರಿ ||ಪಲ್ಲ||

ಮನಸ್ಸು ಒಂದು ಕುದುರೆ ಇದ್ದಂತೆ; ಯೋಗಶಕ್ತಿಯನ್ನು ಸಂಗ್ರಹಿಸಿದ ಮನಸ್ಸು ಒಂದು ಬಲಶಾಲಿ ಕುದುರೆ ಇದ್ದಂತೆ. ಇಂತಹ ಕುದುರೆಯ ಸವಾರನು ಮೋಜಿನಿಂದ, ಮಾಯಾಲೋಕದಲ್ಲೆಲ್ಲ ತಿರುಗಬಹುದು, ಅಂದರೆ ಅಷ್ಟಸಿದ್ಧಿಗಳನ್ನು ಪಡೆಯಬಹುದು ಹಾಗು ಮೂರು ಲೋಕಗಳ ಸಂಚಾರವನ್ನು ಮಾಡಬಹುದು. ಆದುದರಿಂದ ಶರೀಫರು ‘ತಿರುಗುವುದು ಹನ್ನೊಂದು ಫೇರಿ’ ಎಂದು ಹೇಳುತ್ತಾರೆ.

ಆದರೆ ಸಾಧಕನ ಮೂಲ ಉದ್ದೇಶವು ‘ಕೈವಲ್ಯ ಜ್ಞಾನ’ವಾಗಿರುತ್ತದೆ. ಈ ಜ್ಞಾನವನ್ನು ಪಡೆಯಲು ಸದ್ಗುರುವಿನ ಅನುಗ್ರಹವಾಗಬೇಕು. ಅಂತಹ ಗುರುವಿನ ಕರುಣೆಯಾಗಲು ಆತನ ಪಾದಗಳಿಗೆ ಸಾಧಕನು ಶರಣಾಗಬೇಕು. ಸಾಧಕನನ್ನು ಗುರುಪಾದಗಳ ಬಳಿಗೆ ಕರೆದೊಯ್ಯುವುದೇ ಈ ಕುದುರೆಯ ಅರ್ಥಾತ್ ಯೋಗಶಕ್ತಿಯನ್ನು ಪಡೆದ ಮನಸ್ಸಿನ ಕಾರ್ಯ. ಅದನ್ನೇ ಶರೀಫರು ಈ ಮಾತಿನಲ್ಲಿ ಹೇಳುತ್ತಾರೆ:
‘ಸಾರಿ ನಾನು ಹೇಳತೇನಿ ಸಟಿಯಲ್ಲ ಈ ಮಾತು
ಸತ್ಯಸದ್ಗುರುವಿನ ಪಾದ ಗಟ್ಯಾಗಿ ಮುಟ್ಟಿಸಿತು’    ||ಅ.ಪ.||

ಕುದುರೆಯು ಹೇಳೀ ಕೇಳಿ ಮೊಂಡ ಪ್ರಾಣಿ. ಸಾಧಕನು ಅದನ್ನು ಸರಿಯಾಗಿ ನೋಡಿಕೊಂಡರೆ ಮಾತ್ರ, ಕುದುರೆಯು ಸವಾರನನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವುದು; ಇಲ್ಲವಾದರೆ ಸವಾರನ ಗತಿ ಅಧೋಗತಿ! ಕುದುರೆಯನ್ನು ಜೋಪಾನ ಮಾಡುವ ರೀತಿಯನ್ನು ಶರೀಫರು ಹೀಗೆ ಹೇಳುತ್ತಾರೆ:
ಹಚ್ಚನ್ನ ಕಡ್ಡವ ಹಾಕಲಿ ಬೇಕೋ
ನಿಚ್ಚಳ ನೀರು ಕುಡಿಸಲಿ ಬೇಕೋ
ಸಂಸ್ಕಾರ ಹಿಡಿದು ಹೊಡಿಯಲಿ ಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಲಿ ಬೇಕೋ     ||೧||

ಕಡ್ಡ ಅಂದರೆ ದನಗಳಿಗೆ ಹಾಕುವ ಮೇವು. ಈ ಮೇವು ಒಣಗಿರಬಾರದು, ಹಚ್ಚನೆ ಅಂದರೆ ತಾಜಾ ಮೇವು ಆಗಿರಬೇಕು. ಅರ್ಥಾತ್ ಪ್ರತಿ ದಿನವೂ ನಾವು ಮಾಡುವ ದೈವೀ ಸ್ಮರಣೆಯು ಯಾಂತ್ರಿಕವಾಗಿರದೆ, ಭಾವಪೂರ್ಣವಾಗಿರಬೇಕು. ನಿಚ್ಚಳ ನೀರು ಅಂದರೆ ತಿಳಿ ನೀರು. ಮನಸ್ಸು ಕಲ್ಮಶಪೂರಿತವಾಗಿರಬಾರದು, ಮನಸ್ಸಿನಲ್ಲಿ ರಾಗದ್ವೇಷಗಳಿರಬಾರದು ಎಂದು ಶರೀಫರು ತಿಳಿ ನೀರಿನ ಸಂಕೇತದ ಮೂಲಕ ಹೇಳುತ್ತಾರೆ. ಇಷ್ಟಾದರೂ ಸಹ ಮೊಂಡು ಕುದುರೆಯು ಅಡ್ಡ ಹಾದಿ ಹಿಡಿಯಬಹುದು. ಅದನ್ನು ತಪ್ಪಿಸಲು ಸವಾರನು ಆ ಕುದುರೆಯನ್ನು ಅಂದರೆ ತನ್ನ ಮನಸ್ಸನ್ನು ‘ಉತ್ತಮ ಸಂಸ್ಕಾರ ಎನ್ನುವ ಚಾವಟಿ’ಯಿಂದ ಹೊಡೆಯುತ್ತಲೇ ಇರಬೇಕು.

ಶರೀಫರು ಹೆಳುವ ಈ ಮಾತು ಎಲ್ಲ ದೇಶ-ಕಾಲಗಳಿಗೆ ಅನ್ವಯಿಸುವಂತಿದೆ. ಸದ್ಯದ ಭಾರತೀಯ ಸಮಾಜವನ್ನೇ ನೋಡಿರಿ. ನಮ್ಮ ಪ್ರಜೆಗಳ ಅವ್ಯವಹಾರಗಳಿಗೆ, ಹೆಣ್ಣು ಮಕ್ಕಳ ಮೇಲೆ ಆಗುವ ಅತ್ಯಾಚಾರಗಳಿಗೆ  ಮುಖ್ಯ ಕಾರಣವೆಂದರೆ ನಾವು ನಮ್ಮ ಮಕ್ಕಳನ್ನು ‘ಸಂಸ್ಕಾರಹೀನ’ರನ್ನಾಗಿ ಮಾಡಿರುವುದೇ ಆಗಿದೆ. ದೊಡ್ಡವರು ತಮ್ಮ ಒಳ್ಳೆಯ ನಡತೆಯಿಂದ ಕಿರಿಯರಿಗೆ ಅನುಕರಣೀಯ ಮಾದರಿಯಾಗಬೇಕು. ಕಿರಿಯರು ಹಾದಿಗೆಡದಂತೆ ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕೊಡುವುದು ಹಿರಿಯರ ಕರ್ತವ್ಯವಾಗಿದೆ. ನಾವು ಅಂದರೆ ದೊಡ್ಡವರು ತಪ್ಪಿದ್ದೇವೆ. ನಮ್ಮ ಸಮಾಜವು ನಮ್ಮ ತಪ್ಪಿನ ಫಲವನ್ನು ಉಣ್ಣುತ್ತಲಿದೆ.

ಅಚ್ಯುತ ಅಂದರೆ ದೇವರು ಹೌದು, ಆದರೆ ಎಂತಹ ದೇವರು? ಚ್ಯುತನಾಗದವನು ಅಂದರೆ ಸನ್ಮಾರ್ಗವನ್ನು ತಪ್ಪದಂಥವನು ಅಚ್ಯುತನು. ಆದುದರಿಂದ ಕೆಟ್ಟ ಗುಣಗಳನ್ನು ಚಾಟಿ ಏಟಿನಿಂದ ದೂರ ಮಾಡುವಂತೆಯೇ, ಒಳ್ಳೆಯ ಗುಣಗಳಿಂದ ನಮ್ಮ ಮನಸ್ಸೆಂಬ ಕುದುರೆಯನ್ನು ದಿನವೂ ಮಾಲೀಸು ಮಾಡಬೇಕು!

ಒಳ್ಳೆಯ ನಡತೆಯಿಂದ ನಡೆಯುವವನು ಮನಸ್ಸಿನ ತಳಾತಳದಲ್ಲಿ ಒಳ್ಳೆಯವನೇ ಇರುತ್ತಾನೆ ಎಂದು ಹೇಳಲು ಬಾರದು. ಅದಕ್ಕಾಗಿಯೇ ಬಸವಣ್ಣನವರು ‘ಬಹಿರಂಗ ಶುದ್ಧಿ ಹಾಗು ಅಂತರಂಗ ಶುದ್ಧಿ’ ಎಂದು ಹೇಳಿದರು. ಗೀತೆಯ ಎರಡನೆಯ ನುಡಿಯಲ್ಲಿ ಶರೀಫರು ಆಚಾರವನ್ನು ತಿದ್ದಿಕೊಂಡಂತೆ ವಿಚಾರವನ್ನೂ ಸಹ ಹೇಗೆ ತಿದ್ದಿಕೋಬೇಕು ಎನ್ನುವುದನ್ನು ಹೇಳುತ್ತಿದ್ದಾರೆ:
ತಪ್ಪುವುದಿಲ್ಲಪ್ಪಾ ಎರಡು ಹೊತ್ತಿನ ದಾಣಿ
ತಿಂದ ಮೇಲೆ ತಿರಗತೈತಿ ಮೇಲಿನ ಓಣಿ
ಖಾದರಲಿಂಗನು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ             ||೨||

ಮನಸ್ಸೆಂಬ ಕುದುರೆಗೆ ದಿನವೂ ಎರಡು ಹೊತ್ತು ದಾಣಿಯನ್ನು (ಅಂದರೆ ಕುದುರೆಗೆ ತಿನ್ನಿಸುವ ಕಾಳನ್ನು) ಹಾಕಬೇಕಾಗುತ್ತದೆ. ಹಾಗಾದಾಗ ಮಾತ್ರ ಈ ಕುದುರೆಯು ‘ಮೇಲಿನ ಓಣಿ’ಯಲ್ಲಿ ತಿರುಗುತ್ತದೆ. ಇಲ್ಲಿ ದಾಣಿ ಎಂದರೆ ಧ್ಯಾನ, ಜಪ ಇತ್ಯಾದಿ. ಮುಂಜಾನೆ ಹಾಗು ಸಂಜೆ ಎರಡೂ ಹೊತ್ತಿನಲ್ಲಿ ದೇವರ ಧ್ಯಾನದಲ್ಲಿ, ಭಜನೆಯಲ್ಲಿ ನಿರತನಾದ ಸಾಧಕನ ಮನಸ್ಸು ಮಾತ್ರ ಅವನನ್ನು ‘ಮೇಲಿನ ಓಣಿ’ಯಲ್ಲಿ ನಡೆಯಿಸುವುದು. ಈ ಮೇಲಿನ ಓಣಿಗೆ ಅನೇಕ ಅರ್ಥಗಳನ್ನು ಹೇಳಬಹುದು.

ಆಧುನಿಕ ಮನೋವಿಜ್ಞಾನದ ಪಿತಾಮಹನಾದ ಫ್ರಾಯ್ಡ ಹೇಳುವಂತೆ ಮನಸ್ಸಿನ ಮೂಲವಸ್ತು (Id) ಪ್ರಾಣಿಸಹಜವಾದ ವರ್ತನೆಯನ್ನು ಪಡೆದಿರುತ್ತದೆ. ಮನಸ್ಸಿನ ಉನ್ನತಭಾಗವು (superconscious) ವಿವೇಚನೆಯನ್ನು ತೋರಿಸುತ್ತದೆ. ಮಹರ್ಷಿ ಅರವಿಂದರು ಪೂರ್ಣತೆಯನ್ನು ಪಡೆದ ಮನಸ್ಸಿಗೆ ‘ಸುಪ್ರಮಾನಸ’ (supramental) ಎಂದು ಕರೆದಿದ್ದಾರೆ. ಬೇಂದ್ರೆಯವರೂ ಸಹ ತಮ್ಮ ಒಂದು ಕವನದಲ್ಲಿ ‘ಎತ್ತರಕ್ಕೆ ನಡೆಯಣ್ಣ, ಅಲ್ಲೆ ನೀ ಪಡೆವುದನ್ನು ಪಡೆವೆ’ ಎಂದಿದ್ದಾರೆ. ಒಟ್ಟಿನಲ್ಲಿ, ದೈಹಿಕ, ಐಹಿಕ ಆಮಿಷಗಳಿಂದ ದೂರವಾಗಿ, ದೈವಿಕ ಭಾವನೆಗಳಿಗೆ ಹತ್ತಿರವಾದ ಮಾರ್ಗವನ್ನು ‘ಮೇಲಿನ ಓಣಿ’ ಎಂದು ಕರೆಯಬಹುದು.

ಕುದುರೆಯನ್ನು ಜೋಪಾನ ಮಾಡಿದರೆ ಸಾಲದು. ಅದರ ಸವಾರಿಯನ್ನು ಮಾಡಬೇಕಾದರೆ, ಅದರ ಮೇಲೆ ಜೀನನ್ನು ಹಾಕಿ ಹತ್ತಬೇಕಾಗುತ್ತದೆ. (ಒಳ್ಳೆಯ ಜೀನನ್ನು ಹಾಕುವುದು ಸಿರಿವಂತರಿಗೆ ಅಥವಾ ಸೈನಿಕರಿಗೆ ಮಾತ್ರ ಸಾಧ್ಯ. ಸಾಮಾನ್ಯರು ಗೋಣಿ ಬಟ್ಟೆಯನ್ನೇ ಅಂದರೆ ಸಣಬಿನ ಬಟ್ಟೆಯನ್ನೇ ಜೀನಿನಂತೆ ಉಪಯೋಗಿಸುತ್ತಿದ್ದರು.) ಶರೀಫರು ಬಳಸುವ ಜೀನು ಯಾವುದು? ಖಾದರಲಿಂಗ ಅಂದರೆ ಗುರು ಹೇಳಿದ ಉಪದೇಶವೇ ಶರೀಫರು ಬಳಸುವ ಜೀನು!

(ಶಿಶುನಾಳದ ಹತ್ತಿರ ಇರುವ ಹುಲಗೂರಿನಲ್ಲಿ  ಖಾದರ ಶಾವಲಿ ಎನ್ನುವ ಸಂತರೊಬ್ಬರ ಸಮಾಧಿ ಇದೆ. ಶರೀಫರ ತಂದೆ-ತಾಯಿ ಈ ಸಂತರ ಸಮಾಧಿಗೆ ನಡೆದುಕೊಂಡ ಬಳಿಕ ಶರೀಫರು ಹುಟ್ಟಿದರು. ಶರೀಫರು ತಮ್ಮ ಗೀತೆಗಳಲ್ಲಿ ಈ ಸಂತರನ್ನು ‘ಖಾದರಲಿಂಗ’ ಎಂದೇ ಸಂಬೋಧಿಸಿದ್ದಾರೆ. ಖಾದರಲಿಂಗ ಗುರುವಿನ ಬೋಧನೆಯನ್ನು ಸೋಸಿ ಅಂದರೆ ತಿಳಿದುಕೊಂಡು ಬಳಸುವುದೇ, ಶರೀಫರು ಉಪಯೋಗಿಸುವ ಜೀನು!)

ಸಾಧಕನು ಹಾಗು ಆತನ ಸಾಧನೆ ಒಂದು ಜನ್ಮದ್ದಲ್ಲ. ಇದನ್ನೇ ಶ್ರೀಕೃಷ್ಣನು ಅರ್ಜುನನಿಗೆ, “ಅರ್ಜುನಾ, ನಾನು ಹಾಗು ನೀನು ಅನೇಕ ಜನ್ಮಗಳನ್ನು ಕಳೆದಿದ್ದೇವೆ. ಅವೆಲ್ಲವೂ ನನಗೆ ಗೊತ್ತು; ನೀನು ಅವುಗಳನ್ನು ಅರಿಯೆ.” ಎಂದು ಹೇಳಿದ್ದಾನೆ. ಶರೀಫರು ತಾವು ಪೂರ್ವಜನ್ಮದಲ್ಲಿ ಪಾಂಡವರ ಪಾಗಾದಲ್ಲಿ (= ಕುದುರೆ ಲಾಯದಲ್ಲಿ) ಕುದುರೆಯಾಗಿದ್ದೆ ಎಂದು ಹೇಳುತ್ತಿದ್ದಾರೆ. ಇದು ವಾಸ್ತವಿಕವಾಗಿರಬಹುದು ಅಥವಾ ಸಾಂಕೇತಿಕವಾಗಿರಬಹುದು. ಪಾಂಡವರು ಧರ್ಮಚಾರಿಗಳು. ಅವರ ಸಹವಾಸದಿಂದಾಗಿ ಈ ಕುದುರೆಯೂ ಸಹ ಪುಣ್ಯಕರ್ಮಿಯಾಗಿದೆ. ಆದರೂ ಸಹ ಈ ಕುದುರೆ ಅಲ್ಲಿ ಇರಲಾರದೆ, ತನಗೆ ಕಟ್ಟಿದ ಹಗ್ಗವನ್ನು ಕಿತ್ತುಕೊಂಡು ಓಡಿ ಹೋಯಿತು. ಜನ್ಮಜನ್ಮಾಂತರಗಳಲ್ಲಿ ಸಂಚರಿಸುತ್ತ, ತನ್ನ ಪುಣ್ಯಬಲದಿಂದ ಶಿಶುನಾಳಿಗೆ ಬಂದಿತು:
( ದೀಪಕ್ ಚಂದ್ರಶೇಖರ್ ಅವರು ಈ ವಿಷಯದ ಬಗೆಗೆ ಹೀಗೆ ವ್ಯಾಖ್ಯಾನಿಸುತ್ತಾರೆ: ’’ಪಾಂಡವರ ಮನಿಯೊಳಗ ಪಾಗಾದಾಗಿತ್ತು ಪಾಗಾದ ಗೂಟವ ಕಿತ್ತು ಓಡ”...... ಶರೀಫರು ತಾವು ಪೂರ್ವಜನ್ಮದಲ್ಲಿ ಪಾಂಡವರ ಪಾಗಾದಲ್ಲಿ (= ಕುದುರೆ ಲಾಯದಲ್ಲಿ) ಕುದುರೆಯಾಗಿದ್ದೆ ಎಂದು ಹೇಳುತ್ತಿದ್ದಾರೆ.!! ಈ ಸಾಲುಗಳ ಮೇಲೆ ನನ್ನದೊಂದು ಸಣ್ಣ ಭಿನ್ನಬಿಪ್ರಾಯ! ಪಾಂಡವರು ಅಂದರೆ ಐದು ಜನ - ಪಂಚೇಂದ್ರಿಯಗಳು! ಪಂಚೇಂದ್ರಿಯಗಳ ಮನೆ - ಈ ದೇಹ! ಪಾಗು - ಮನಸ್ಸು! ನಮ್ಮ ಚೈತನ್ಯ/ಬುದ್ದಿ ಮನಸಿನ ಹತೋಟಿಗೆ ಸಿಗದೇ (ಅಂದರೆ ಇಂದ್ರೀಯ ಸುಖಕ್ಕೆ ಪಕ್ಕಾಗಿ) ಪಂಚೆದ್ರಿಯಗಳ ಮೇಲೆ ಹತೋಟಿ ಸಿಗದೇ (ಪಾಗಾದ ಗೂಟವ ಕಿತ್ತು ಓಡಿ) ಓಡಾಡುತಿದ್ದಾಗ, ಅಲ್ಲಿ ಗುರು ಗೋವಿಂದರ ಕೃಪಾದೃಷ್ಟಿ ಬಿತ್ತು. ಇದು ಪೂರ್ವ ಜನ್ಮದ ಅಥವಾ ಜನ್ಮಾಂತರದ ಬಗ್ಗೆ ಅಲ್ಲವೆಂದು (ಸಾಂಕೇತಿಕವಾಗಿಯೂ ಅಲ್ಲ), ನನ್ನ ಅಭಿಪ್ರಾಯ!)
ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ
ಹೋಗುವಾಗ ಶಿಶುನಾಳಿಗೆ ಬಂತು
ಗೋವಿಂದ ನೋಡಿದ ತಾನೇ ತಾನಾತು              ||೩||

ಅಲ್ಲಿ ಗುರು ಗೋವಿಂದರ ಕೃಪಾದೃಷ್ಟಿ ಈ ಕುದುರೆಯ ಮೇಲೆ ಬೀಳುವದೇ ತಡ, ಈ ಕುದುರೆಯು ‘ತಾನೇ ತಾನಾತು’ ಅಂದರೆ
‘ಸ್ವ-ಜ್ಞಾನ’ವನ್ನು ಅರ್ಥಾತ್ ಆತ್ಮಜ್ಞಾನವನ್ನು ಪಡೆಯಿತು.

ಆತ್ಮಜ್ಞಾನವನ್ನು ಪಡೆಯುವವರೆಗೂ, ‘ಶಕ್ತಿಸಂಚಯವಾದ ಮನಸ್ಸೆನ್ನುವ ಕುದುರೆಯು’ ಮೋಜಿನ ಕುದುರೆಯಾಗಿ ಎಲ್ಲೆಲ್ಲಿಯೋ ತಿರುಗಬಹುದು. ಸಾಧಕನೆನ್ನುವ ಸವಾರನು ತನ್ನ ಆತ್ಮಜ್ಞಾನದ ಉದ್ದೇಶದಿಂದ ಈ ಕುದುರೆಯನ್ನು ‘ಮೇಲಿನ ಮಾರ್ಗ’ದಲ್ಲಿ ನಡೆಯಿಸಿಕೊಂಡು ಹೋದಾಗ ಸಾಧಕನಿಗೆ ಸದ್ಗತಿ ದೊರೆಯುವುದು.

Thursday, January 22, 2015

ವಿಶ್ವ ಪರಿಸರ ದಿನಾಚರಣೆ.........ತನ್ಮಯಿಯ ಕವನ

ಪ್ರತಿ ವರುಷ ಜೂನ್ ೫ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತನ್ಮಯಿ ಶೂರ್ಪಾಲಿ ಎನ್ನುವ ೮ನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಈ ವಿಷಯದ ಮೇಲೆ ಇಂಗ್ಲೀಶಿನಲ್ಲಿ  ಆಶುಕವನ ರಚಿಸಿ, ದ್ವಿತೀಯ ಬಹುಮಾನವನ್ನು ಪಡೆದ ಕವನವೊಂದು ಇತ್ತೀಚೆಗೆ ನನಗೆ ಲಭ್ಯವಾಯಿತು. ಕವನ ಸುಂದರವಾಗಿದೆ. ನಿಮ್ಮ  ವಾಚನಸುಖಕ್ಕಾಗಿ ಅದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸುತ್ತಿದ್ದೇನೆ:



SAVE ENVIRONMENT

We all have but one land
Which gave us birth,
Let’s join our hands
And save our mother earth.

Look at the beautiful trees
On which feed the busy bees,
Let’s not just cut and harm
But also wonder at their charm.

Green is our earth
And blue is the sky
Let’s not harm them
So we don’t have to cry.

We all have but one land
Which gave us birth,
Let’s join our hands
And save our mother earth.

-Tanamyi Shurpali
VIII class,

Saturday, January 17, 2015

ಸಾಹಿತ್ಯಸುಖ-೨



ಭಾಸ (ಕ್ರಿ.ಶ.೩೦೦), ಶೂದ್ರಕ (ಕ್ರಿ.ಶ.೪೦೦) ಹಾಗು ಕಾಲೀದಾಸ  (ಕ್ರಿ.ಶ.೪೦೦) ಇವರು ವಿಶ್ವದ ಶ್ರೇಷ್ಠ ನಾಟಕಕಾರರಲ್ಲಿ ಅಗ್ರಗಣ್ಯರಾಗಿದ್ದಾರೆ. ಈ ಮೂವರ ನಾಟಕರಚನಾಶೈಲಿಗಳು ತುಂಬ ಭಿನ್ನವಾಗಿವೆ. ಆದರೆ ಇವರ ನಾಟಕಗಳು ಓದುಗನಿಗಾಗಲೀ, ಪ್ರೇಕ್ಷಕನಿಗಾಗಲೀ ನೀಡುವ ರಸಾನುಭವ ಮಾತ್ರ ಅವರ್ಣನೀಯವಾದದ್ದು.

ನಾಟಕೀಯತೆಯು ನಾಟಕದ ಚೆಲುವನ್ನು ಇಮ್ಮಡಿಗೊಳಿಸುತ್ತದೆ ಎನ್ನುವುದಾದರೆ, ಈ ವಿಷಯದಲ್ಲಿ ಭಾಸನನ್ನು ಮೀರಿಸಿದವರು ಯಾರೂ ಇಲ್ಲ. ‘ಪ್ರತಿಮಾ ನಾಟಕ’, ‘ಮಧ್ಯಮವ್ಯಾಯೋಗ’ ಹಾಗು ‘ಸ್ವಪ್ನವಾಸವದತ್ತಾ’ ಈ ಮೂರು ನಾಟಕಗಳು ನಾಟಕೀಯತೆಯ ಶಿಖರಗಳಾಗಿವೆ. ಅದರಲ್ಲೂ ‘ಮಧ್ಯಮವ್ಯಾಯೋಗ’ ಎನ್ನುವ ಪುಟ್ಟ ನಾಟಕದ ಕೊನೆಯಲ್ಲಿ ಬರುವ ‘ನಿಶ್ಶಬ್ದಸಂವಾದ’ವು ಜಗತ್ತಿನ ಯಾವ ನಾಟಕದಲ್ಲೂ ಇರಲಿಕ್ಕಿಲ್ಲ!

ಮಧ್ಯಮವ್ಯಾಯೋಗದ ಕತೆ ಹೀಗಿದೆ:
ವನವಾಸಸಂಚಾರದಲ್ಲಿರುವ ಪಾಂಡವರು, ಮಾರ್ಗಮಧ್ಯದಲ್ಲಿ ವಿಶ್ರಾಂತಿಗಾಗಿ ಬೀಡು ಬಿಟ್ಟಿದ್ದಾರೆ. ಭೀಮಸೇನನೊಬ್ಬನನ್ನು ಕುಟೀರದ ಕಾವಲಿಗಾಗಿ ಬಿಟ್ಟು ಉಳಿದ ಪಾಂಡವರು ಯಜ್ಞವೊಂದನ್ನು ನೋಡುವುದಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಓರ್ವ ಬ್ರಾಹ್ಮಣನು ತನ್ನ ಹೆಂಡತಿ ಹಾಗು ಮೂವರು ಗಂಡುಮಕ್ಕಳೊಡನೆ ಅಡವಿಯ ಮಾರ್ಗದಲ್ಲಿ ನಡೆಯುತ್ತ ಬರುತ್ತಿದ್ದಾನೆ. ಆಯಾಸವನ್ನು ಪರಿಹರಿಸಿಕೊಳ್ಳಲು, ಇವರೆಲ್ಲರೂ ಕುಳಿತುಕೊಳ್ಳುತ್ತಾರೆ. ಗಂಡುಮಕ್ಕಳಲ್ಲಿ ನಡುವಿನ ಹುಡುಗನು ನೀರು ತರಲು ಕೆರೆಯನ್ನು ಹುಡುಕುತ್ತ ಹೋಗುತ್ತಾನೆ.

ಅಷ್ಟರಲ್ಲಿ ಒಂದು ಅನಿರೀಕ್ಷಿತ ಘಟನೆ ಸಂಭವಿಸುತ್ತದೆ. ತರುಣ ವಯಸ್ಸಿನ ರಾಕ್ಷಸನೊಬ್ಬನು ಅಲ್ಲಿಗೆ ಬಂದು, ಈ ಪ್ರದೇಶವು ತನ್ನ ತಾಯಿಯ ಒಡೆತನಕ್ಕೆ ಸೇರಿರುವದೆಂದೂ, ಅಲ್ಲಿ ಕುಳಿತಿರುವರಲ್ಲಿ ಒಬ್ಬರನ್ನು ತನ್ನ ತಾಯಿಯ ಭಕ್ಷಣೆಗಾಗಿ ಕೊಡಲೇಬೇಕೆಂದೂ ಗದರಿಸುತ್ತಾನೆ.

ಬ್ರಾಹ್ಮಣ ಹಾಗು ಅವನ ಹೆಂಡತಿ ಇಬ್ಬರೂ ವಯಸ್ಸಾದವರು; ಆದುದರಿಂದ ಭಕ್ಷಣೆಗೆ ನಿರುಪಯುಕ್ತರು. ಗಂಡು ಹುಡುಗರಲ್ಲಿ ಮೊದಲನೆಯವನು ತಂದೆಗೆ ಪ್ರೀತಿಪಾತ್ರನಾದವನು; ಅಲ್ಲದೆ ತಂದೆ-ತಾಯಿಯರ ಸಾವಿನ ನಂತರ ಅವರ ಅಪರ ಕರ್ಮಾದಿಗಳನ್ನು ಮಾಡುವ ಅಧಿಕಾರಿಯು. ಕೊನೆಯವನು ತಾಯಿಯ ಮುದ್ದಿನ ಮಗು. ಆದುದರಿಂದ ನಡುವಿನವನನ್ನೇ ಬಲಿಯಾಗಿ ಕೊಡಲು ಅವರು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಆದರೆ ಅವನನ್ನು ತಾವೇ ಕೂಗಿ ಕರೆಯಲು ಅಥವಾ ಅವನ ಹೆಸರನ್ನು ರಾಕ್ಷಸನಿಗೆ ತಿಳಿಸಲು ಅವರಿಂದ ಸಾಧ್ಯವಾದೀತೆ? ಕುಟುಂಬದ ಸದಸ್ಯರು ಮುಂದಾಗದಿರಲು, ರಾಕ್ಷಸನೇ ‘ಮಧ್ಯಮಾ! ಮಧ್ಯಮಾ!’ ಎಂದು ಕೂಗಿ ಕರೆಯುತ್ತಾನೆ.

ನಾಟಕೀಯತೆಯು ಪ್ರಾರಂಭವಾಗುವುದೇ ಈ ಕ್ಷಣದಿಂದ. ರಾಕ್ಷಸನ ಕೂಗು ದೂರದ ಕುಟೀರದಲ್ಲಿರುವ ಭೀಮನ ಕಿವಿಗೂ ಬೀಳುತ್ತದೆ.  ಪಾಂಡವರಲ್ಲಿ ಭೀಮನೇ ಮಧ್ಯಮನು ತಾನೇ! ತಕ್ಷಣವೇ ಭೀಮನು ಧ್ವನಿ ಬಂದ ದಿಕ್ಕಿಗೆ ತೆರಳುತ್ತಾನೆ. ಅಲ್ಲಿ ರಾಕ್ಷಸನ ಹಿಡಿತಕ್ಕೆ ಸಿಲುಕಿದ ಕುಟುಂಬದ ರಕ್ಷಣೆಯನ್ನು ತನ್ನ ಹೊಣೆಗಾರಿಕೆ ಎಂದು ಭಾವಿಸಿದ ಭೀಮನು ಆ ರಾಕ್ಷಸನನ್ನು ಹೋರಾಟಕ್ಕೆ ಆಹ್ವಾನಿಸುತ್ತಾನೆ.

ತರುಣ ರಾಕ್ಷಸ ಹಾಗು ಭೀಮಸೇನನ ನಡುವೆ ಹೋರಾಟ ನಡೆಯುತ್ತದೆ. ಆತನ ಮಾತುಗಳಿಂದ ಆತನು ತನ್ನ ಹಾಗು ಹಿಡಂಬಿಯ ಮಗನಾದ ಘಟೋತ್ಕಚನೆನ್ನುವುದು ಭೀಮನಿಗೆ ತಿಳಿದು ಹೋಗುತ್ತದೆ! ತನ್ನ ಮಗನ ಬಲವನ್ನು, ಶೌರ್ಯವನ್ನು ಕಂಡು ಭೀಮಸೇನನು ಹಿಗ್ಗುತ್ತಾನೆ. ಆದರೆ ಘಟೋತ್ಕಚನಿಗೆ ಈ ಅಪರಿಚಿತನು ತನ್ನ ತಂದೆ ಭೀಮಸೇನನೆನ್ನುವುದು ತಿಳಿಯದು. ಈ ಅಪರಿಚಿತ ಮನುಷ್ಯನ ಬಲವನ್ನು ಕಂಡು ಘಟೋತ್ಕಚನಿಗೆ ಆಶ್ಚರ್ಯವೋ ಆಶ್ಚರ್ಯ! ಕೊನೆಗೊಮ್ಮೆ ಘಟೋತ್ಕಚನು ಭೀಮನನ್ನು ತನ್ನ ಮಾಯಾಪಾಶದಿಂದ ಬಂಧಿಸಿ, ತನ್ನ ತಾಯಿಯ ಬಳಿಗೆ ಕರೆದೊಯ್ಯುತ್ತಾನೆ. ಈ ಸಮಯದಲ್ಲಿ ಇವರೀರ್ವರ ನಡುವಿನ ಚಮತ್ಕಾರಿಕ ಸಂಭಾಷಣೆಯು ಭಾಸನ ಪ್ರತಿಭೆಗೆ ಸಾಕ್ಷಿಯಾಗಿದೆ.

ಹಿಡಂಬಿಯು ಘಟೋತ್ಕಚನಿಗೆ ಭೀಮಸೇನನು ಆತನ ತಂದೆಯೆಂದು ತಿಳಿಸುತ್ತಾಳೆ. ಘಟೋತ್ಕಚನು ಭೀಮನ ಕಾಲಿಗೆ ಎರಗುತ್ತಾನೆ. ಹಿಡಿಂಬೆಯು ಭೀಮಸೇನನ ಕಿವಿಯಲ್ಲಿ ಏನೋ ಉಸುರುತ್ತಾಳೆ. ಭೀಮಸೇನನು ಅವಳ ಉಸುರುವಿಕೆಗೆ ಸ್ಪಂದಿಸುತ್ತ, “ಹಿಡಿಂಬೆ, ನೀನು ರಾಕ್ಷಸಕುಲದವಳಾದರೂ, ಆರ್ಯಗುಣವುಳ್ಳವಳು” ಎಂದು ಹೇಳುತ್ತಾನೆ. ಇಲ್ಲಿಗೆ ನಾಟಕ ಕೊನೆಯಾಗುತ್ತದೆ, ಹಿಡಿಂಬೆಯ ಅಶ್ರಾವ್ಯ ಮಾತಿನೊಂದಿಗೆ!

ಭಾಸನು ಪ್ರತ್ಯಕ್ಷವಾಗಿ ಹೇಳದೆ,  ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು ಹೀಗಿದೆ:
ಪಾಂಡವರು ಅಡವಿಯ ಮಾರ್ಗವಾಗಿ ಸಂಚರಿಸುತ್ತ ಬರುತ್ತಿರುವುದು ಹಿಡಿಂಬೆಗೆ ಮೊದಲೇ ತಿಳಿದಿತ್ತು. ಆದರೆ ಅರಣ್ಯಪ್ರದೇಶದ ಒಡತಿಯಾದ ಅವಳಿಗೆ ತಾನೇ ಅವರಿದ್ದಲ್ಲಿಗೆ ಹೋಗಿ, ಅವರನ್ನು ಸ್ವಾಗತಿಸುವುದು ಶಿಷ್ಟಾಚಾರವಿರೋಧ ಎನ್ನಿಸುತ್ತಿತ್ತು. ಆದುದರಿಂದಲೇ ಅವಳು ಘಟೋತ್ಕಚನನ್ನು ನರಭಕ್ಷಣೆಯ ನೆವದಿಂದ ಭೀಮನಿದ್ದಲ್ಲಿಗೆ ಕಳುಹುತ್ತಾಳೆ. ಇನ್ನು ಅವಳು ಭೀಮನ ಕಿವಿಯಲ್ಲಿ ಗುಟ್ಟಾಗಿ ಉಸಿರಿದ್ದೇನು? ಇದು ಪ್ರೇಕ್ಷಕರ ತರ್ಕಕ್ಕೆ ಬಿಟ್ಟಿದ್ದು! ಆದರೆ ಭೀಮಸೇನನು ಹಿಡಿಂಬೆಯನ್ನು ‘ಸತ್ಕುಲಲಕ್ಷಣೆ’ ಎಂದು ಪ್ರಶಂಸಿರುವುದು ಪ್ರೇಕ್ಷಕರಿಗೆ ಒಂದು ಸುಳಿವನ್ನು ಕೊಡುತ್ತದೆ! ಈ ಸುಳಿವಿನ ಜಾಡನ್ನು ಹಿಡಿದು, ನೀವು ಹಿಡಿಂಬೆಯು ಭೀಮನ ಕಿವಿಯಲ್ಲಿ ಉಸಿರಿದ್ದನ್ನು ಊಹಿಸಬಹುದು!

ಮಿತ್ರರೆ, ಸಂಭಾಷಣೆಯೊಂದು ಪ್ರೇಕ್ಷಕರಿಗೆ ಕೇಳದಂತೆ, ಕಿವಿಯುಸಿರಿನಲ್ಲಿಯೇ ಕೊನೆಗೊಳ್ಳುವ ನಾಟಕವನ್ನು ನೀವೆಲ್ಲಿಯಾದರೂ ನೋಡಿದ್ದೀರಾ? ಕೇಳಿದ್ದೀರಾ? ಓದಿದ್ದೀರಾ? ಬಹುಶಃ ವಿಶ್ವನಾಟಕಗಳಲ್ಲಿ ಇದೊಂದೇ ಅಂತಹ ನಾಟಕವೆಂದು ಭಾಸವಾಗುತ್ತದೆ.

ಭಾಸನಂತಹ ನಾಟಕಚತುರರು ಮೊದಲು ಬಂದಿಲ್ಲ; ಇನ್ನು ಮುಂದೆ ಬಂದಾರೆಂದು ಹೇಳುವಂತಿಲ್ಲ! ಭಾರತೀಯರಿಗೆ ಶ್ರೇಷ್ಠ ನಾಟಕಗಳನ್ನು, ತನ್ಮೂಲಕ ಸಾಹಿತ್ಯಸುಖವನ್ನು, ರಸಾನುಭವವನ್ನು ನೀಡಿದ ಭಾಸನಿಗೆ ನಮ್ಮ ಅನಂತ ಕೃತಜ್ಞತೆಗಳನ್ನು ಸಲ್ಲಿಸೋಣ.

Friday, January 2, 2015

ವಂದೇ ಭಾರತಮ್--೪

                          ಕನ್ನಡಿಗರ ಪೂರ್ವೇತಿಹಾಸ
ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ ಮೊದಲಾದವು ಪುಟ್ಟ ಕುಟುಂಬ(!)ದಲ್ಲಿ ಜೀವಿಸಿದರೆ, ಸಸ್ಯಾಹಾರಿ ಪ್ರಾಣಿಗಳು (ಚಿಗರಿ, ಆನೆ ಮೊದಲಾದವುಗಳು) ದೊಡ್ಡ ಗುಂಪುಗಳಲ್ಲಿ ಜೀವಿಸುತ್ತವೆ. ಮಾನವಜೀವಿಯಾದರೊ ದೈಹಿಕವಾಗಿ ತುಂಬ ದುರ್ಬಲ ಜೀವಿಯಾಗಿದ್ದ. ಹೀಗಾಗಿ ಗುಂಪಾಗಿ, ಕೂಡಿಕೊಂಡು ಬದುಕುವುದು ಆತನಿಗೆ ಅನಿವಾರ್ಯವೇ ಆಗಿತ್ತು. ಧ್ವನಿಸಂಕೇತಗಳನ್ನು ರೂಢಿಸಿಕೊಂಡ ಬಳಿಕ, ಇಂತಹ ವಾಸಸ್ಥಳಗಳನ್ನು ಆತನು  ‘ಗೂಡು, ಗುಂಪು’ ಎಂದು ಗುರುತಿಸಿದ. ಕರ್ನಾಟಕದ ತುಂಬೆಲ್ಲ ಇಂತಹ ಗೂಡುಗಳನ್ನು, ಗುಂಪು, ಗುಂಪಿಗಳನ್ನು ನೋಡಬಹುದು. ಉದಾಹರಣೆಗೆ ಶಿರ ಎನ್ನುವ ಕುಲದವರ ವಾಸಸ್ಥಳಕ್ಕೆ ಶಿರಗುಪ್ಪಿ, ಸಿರಗುಂಪಾ ಎಂದೂ, ಗೊಂಡರ ವಾಸಸ್ಥಳಕ್ಕೆ ಗೊಂದಿಕುಪ್ಪಿ ಎಂದು ಹೆಸರಿರುವದನ್ನು ಗಮನಿಸಬಹುದು.

ಮುಂದಿನ ಹಂತದಲ್ಲಿ, ಈ ಮಾನವಜೀವಿಗೆ ತಾನು ಆವು ಹಾಗು ಎಮ್ಮೆಯನ್ನು ಕೇವಲ ಮಾಂಸಕ್ಕಾಗಿ ಬಳಸದೆ, ಹಾಲಿಗಾಗಿ ಸಹ ಸಾಕಬಹುದು ಎನ್ನುವ ಅರಿವು ಆಯಿತು. ಮಾನವನ ಆಹಾರಕ್ಕಾಗಿ ಸಸ್ಯಗಳು ಹಾಗು ಬೇಟೆಗಳು ಬೇಕು. ಆತನ ಸಾಕುಪ್ರಾಣಿಗಳಿಗೆ ಮೇಯಲು ಹುಲ್ಲು ಬೇಕು. ಇವೆಲ್ಲವನ್ನು ಹುಡುಕುತ್ತ ಹೋಗುತ್ತಿದ್ದ ಆತನು, ತಾತ್ಪೂರಿಕ ಬೀಡುಗಳನ್ನು ತನ್ನ ವಾಸಕ್ಕಾಗಿ ಆರಿಸಿಕೊಳ್ಳುತ್ತಿದ್ದ. ಈ ತಾತ್ಪೂರ್ತಿಕ  ಬಿಡಾರಗಳೇ ಪಾಡಿಗಳು. ಪಾಡಿಯು ಹಾಡಿ, ವಾಡಿ, ಹಟ್ಟಿ ಎಂದೆಲ್ಲ ರೂಪಾಂತರಗೊಂಡಿದೆ. ಪಟ್ಟಿ ಎನ್ನುವ ಪದದಲ್ಲಿ ಪಟ್ಟುಕೊಂಡಿರುವ ಅಂದರೆ ಈಗ ಇದ್ದ ಸ್ಥಳ ಎನ್ನುವ ಅರ್ಥ ಬರುವುದೇ ಹೊರತು, ಊರು, ನೆಲೆ, ನಾಡು ಪದಗಳಲ್ಲಿ ಇರುವ `ಸ್ಥಿರವಾದ ವಾಸ’ ಎನ್ನುವ ಅರ್ಥ ಬರುವುದಿಲ್ಲ. ಆದುದರಿಂದ ಪಟ್ಟಿ ಎನ್ನುವ ಪದವು ನಮ್ಮ ನಾಡವರ ದನಗಾರಿಕೆಯ ಕಾಲದ ಬಿಡಾರ ಎನ್ನುವುದು ನಿಶ್ಚಿತವಾಗುತ್ತದೆ. ಸ್ಥಿರವಾದ ‘ಊರು’ ಎನ್ನುವ ಅರ್ಥವು ಇದಕ್ಕೆ ಕಾಲಾಂತರದಲ್ಲಿ ದೊರೆಯಿತು.

ಭಾರತದ ತುಂಬೆಲ್ಲ ಹಟ್ಟಿ, ಪಟ್ಟಿ, ಪಾಡಾ ಎನ್ನುವ ಪದಗಳಿಂದ ಕೊನೆಯಾಗುವ ಅನೇಕ ಊರುಗಳಿವೆ. ಉದಾಹರಣೆಗೆ ಕರ್ನಾಟಕದಲ್ಲಿರುವ ಶಿರಹಟ್ಟಿ, ಆಸಾಮದ ರಾಜಧಾನಿ ಗುವಾಹಾತಿ ಅರ್ಥಾತ್ ಗೋಹಟ್ಟಿ, ಓಡಿಸಾದಲ್ಲಿರುವ ವಿಷ್ಣುಪಾಡಾ ಇತ್ಯಾದಿ. ಕೆಲವೊಮ್ಮೆ ಹಳೆಯ ಹೆಸರಿನ ಜೊತೆಗೆ ಹೊಸದಾದ ಪದವು ಕೂಡಿಕೊಂಡಾಗ ಒಂದು ಜೋಡುಪದ ಹುಟ್ಟಿಕೊಳ್ಳುತ್ತದೆ. ಉದಾಹರಣೆಗೆ ಕಾಶ್ಮೀರದಲ್ಲಿರುವ ಕುಪವಾಡಾ ಎನ್ನುವ ಪಟ್ಟಣವನ್ನು ಗಮನಿಸಿರಿ. ಈ ಪದದಲ್ಲಿರುವ ‘ಕುಪ’ವು ಕುಪ್ಪಿಯ ರೂಪಾಂತರವಾಗಿದ್ದರೆ, ವಾಡಾ ಇದು ಪಾಡಿಯ ರೂಪಾಂತರ. [‘ಕುಪ್ಪಿ’ಯ (= ‘ಗುಂಪಿ’ನ) ಪ್ರಮುಖನಿಗೆ ‘ಕುಪೇಂದ್ರ’ ಎನ್ನುವ ಅಭಿಧಾನವನ್ನು ನೀಡಲಾಗುತ್ತಿತ್ತು. ಕುಪೇಂದ್ರ ಎನ್ನುವದು ಈಗಲೂ ಬಳಕೆಯಲ್ಲಿರುವ ಹೆಸರಾಗಿದೆ.]

ಆರ್ಯರು ಭಾರತವನ್ನು ಪ್ರವೇಶಿಸಿದ ಸಮಯದಲ್ಲಿ ಅವರಿಗೆ ಮುಖಾಮುಖಿಯಾದವರು ಅಲೆಮಾರಿ ಪಶುಸಂಗೋಪಕರು. ಇವರು ಕನ್ನಡದ ಹಟ್ಟಿಕಾರರು. ಈ ಸಮುದಾಯಕ್ಕೆ ಹಟ್ಟಿಕಾರರು ಎನ್ನುವ ಹೆಸರನ್ನು ಕೊಟ್ಟವರು ಕೀರ್ತಿಶೇಷ ಶಂ.ಬಾ.ಜೋಶಿಯವರು. ಹಟ್ಟಿ ಎಂದರೆ ಗುಡಿಸಲು; ಹಟ್ಟಿ ಎಂದರೆ ದನಗಳ ಕೊಟ್ಟಿಗೆಯೂ ಹೌದು.  ಗೋಕುಲ, ವ್ರಜ, ಘೋಷ ಎನ್ನುವ ಸಂಸ್ಕೃತ ಪದಗಳಿಗೆ ಇದು ಸಮಾನಾರ್ಥಕವಾದ ಪದವಾಗಿದೆ. ಹಟ್ಟಿಯು ತುರುಕಾರ-ದನಗಾರರ ಮೊದಲ ಆವಾಸಸ್ಥಾನ. ಹಟ್ಟಿಕಾರರು ತಮ್ಮ ಗೋವುಗಳಿಗೆ ಹುಲ್ಲುಗಾವಲುಗಳನ್ನು ಹುಡುಕುತ್ತ ಅಲೆಯುತ್ತಿದ್ದ ಕಾಲದಲ್ಲಿ, ಬೀಡು ಬಿಟ್ಟ ಸ್ಥಳಗಳ ಹೆಸರುಗಳಿವು. ಇವು ಸ್ಥಿರವಾದ ನೆಲೆಯನ್ನು ಸೂಚಿಸುವದಿಲ್ಲ. ದನಗಳನ್ನು ಕಾಯುತ್ತ ಅಲೆಯುವ ಈ ಹಟ್ಟಿಕಾರರನ್ನು ಆರ್ಯರು ‘ಧನಗರ’ (=ದನಗರ) ಎಂದು ಕರೆದರು. ಹಟ್ಟಿ ಪದದ ಮೊದಲ ರೂಪವು ಪಟ್ಟಿ. ‘ತುರುಪಟ್ಟಿ’ ಎನ್ನುವ ಪದವು ನಯಸೇನನ ‘ಧರ್ಮಾಮೃತಮ್‍’ದಲ್ಲಿ ಬರುತ್ತದೆ. ಇದರರ್ಥ ‘ಗೋಹಟ್ಟಿ’ ಅಥವಾ ‘ಗೋಕುಲ’.

ಆರ್ಯರು ಬರುವ ಮೊದಲು ಸಿಂಧ-ಪಂಜಾಬಗಳಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ಯದು-ತುರ್ವರೂ, ಕುರುವರೂ, ಪಣಿಗಳೂ ನೆಲೆಸಿದ್ದರು. ಇವರು ಹರಪ್ಪಾ, ಮೊಹೆಂಜೊದಾರೊಗಳ ನಿವಾಸಿಗಳಾಗಿರುವ ಸಂಭವವಿದೆ. ಋಗ್ವೇದದ ೨ನೆಯ ಮಂಡಲದಿಂದ ಏಳನೆಯ ಮಂಡಲದವರೆಗಿನ ಆರು ಮಂಡಲಗಳು ಅತಿ ಪುರಾತನ ಕಾಲದವು (ಕ್ರಿ.ಪೂ.೨೫೦೦ರಿಂದ ೫೦೦ರವರೆಗೆ). ಇವುಗಳಲ್ಲಿ ಬರುವ ವರ್ಣನೆಗಳಲ್ಲಿ ಆರ್ಯರ ಹಾಗು ಯದು-ತುರ್ವರ ವೈರವು ವಿಶೇಷವಾಗಿ ಕಂಡು ಬರುವುದು. ಬಳಿಕ ರಚಿತವಾದ ಒಂದನೆಯ ಹಾಗು ಎಂಟರಿಂದ ಹತ್ತನೆಯ ಮಂಡಲಗಳಲ್ಲಿ ಈ ವೈರವು ಕಡಿಮೆಯಾಗುತ್ತ ಹೋಗಿದೆ.

ನೇಪಾಳದಲ್ಲಿರುವ ಧನಗರ ಕುಲದ ಭಾಷೆಗೆ ಕುಡುಕ್ ಭಾಷೆ ಎನ್ನುತ್ತಾರೆ. ಇದೂ ಸಹ ದ್ರಾವಿಡ ಭಾಷೆಯಾಗಿದ್ದು, ಬ್ರಾಹುಯಿ ಎನ್ನುವ ದ್ರಾವಿಡ ಭಾಷೆಗೆ ಸಂಬಂಧ ಪಟ್ಟಿದೆ. ಕುಡುಕ್ ಭಾಷೆಯನ್ನು ಮಾತನಾಡುವವರು ನೇಪಾಳ, ಭೂತಾನ, ಬಂಗ್ಲಾದೇಶ, ಬಂಗಾಲ, ಬಿಹಾರ, ಓಡಿಸಾ, ಮಧ್ಯಪ್ರದೇಶ ಮೊದಲಾದ ಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಬ್ರಾಹುಯಿ ಭಾಷೆಯನ್ನು ಆಡುವ ಒಂದು ಪುಟ್ಟ ಅಲ್ಪಸಂಖ್ಯಾಕ ಜನಾಂಗವು  ಪಾಕಿಸ್ತಾನದ ಭಾಗವಾಗಿರುವ ಬಲೂಚಿಸ್ತಾನದಲ್ಲಿ ಇದೆ. ಈ ಜನಾಂಗದಲ್ಲಿ ಪರಂಪರಾಗತ ಜಾನಪದ ಗೀತೆಗಳನ್ನು ಹಾಡುವ ಒಂದು ಸಮುದಾಯವಿದೆ. ಈ ಸಮುದಾಯದವರನ್ನು ‘ಡೊಂಬ’ ಎಂದು ಕರೆಯುತ್ತಾರೆ. ಈ ಡೊಂಬರು ನಮ್ಮ ಕನ್ನಡದ ಡೊಂಬರೇ ಅಲ್ಲವೆ?  ಕನ್ನಡದ ಡೊಂಬರೂ ಕೂಡ ತಮ್ಮ ಕುಣಿತ ಹಾಗು ಸಾಹಸ ಪ್ರದರ್ಶನಗಳ ಮೂಲಕ ಜನರನ್ನು ರಂಜಿಸುತ್ತ, ತಮ್ಮ ಹೊಟ್ಟೆಯನ್ನು ಹೊರೆಯುತ್ತಿದ್ದರಲ್ಲವೆ? ಬ್ರಾಹುಯೀ ಭಾಷೆಯಲ್ಲಿ ತಾಯಿಗೆ ‘ಅಮ್ಮ’ ಎನ್ನುವ ಪದವಿದೆ; ‘ಗುರ್ ಅನ್ನು’ ಎನ್ನುವ ಪದಕ್ಕೆ ‘ಗುರ್ರರ್’ ಎನ್ನುವ ಪದವಿದೆ. ಬ್ರಾಹುಯಿ ಹಾಗು ಕುಡುಕ್ ಭಾಷೆಗಳನ್ನು ಭಾಷಾತಜ್ಞರು ದ್ರಾವಿಡ ಭಾಷೆಗಳು ಎಂದು ಗುರುತಿಸಿದ್ದಾರೆ. ಕನ್ನಡ ಭಾಷೆಯ ಜ್ಞಾನವಿಲ್ಲದ ಸಂಶೋಧಕರು ‘ದ್ರಾವಿಡ’ ಎನ್ನುವ ಪದವನ್ನು ಬಳಸಿದ್ದು ಸಹಜವಾಗಿದೆ. ದ್ರಾವಿಡ ಎಂದರೆ ತಮಿಳು ಎನ್ನುವ ಗ್ರಹಿಕೆಯಿಂದಾಗಿ, ಸಿಂಧಿ, ಬ್ರಾಹುಯಿ ಹಾಗು ತಮಿಳು ಭಾಷೆಗಳಲ್ಲಿ ಹೋಲಿಕೆಯಿದೆ ಎಂದು ಭಾಷಾತಜ್ಞರು ಹೇಳುತ್ತಲಿದ್ದಾರೆ.

ಮಂಗೋಲ ಹಾಗು ಇರಾಣದಿಂದ ಭಾರತವನ್ನು ಪ್ರವೇಶಿಸಿದ ಆರ್ಯರು ಬೇಟೆಕಾರರಾದ ಅಲೆಮಾರಿಗಳು; ಹಟ್ಟಿಕಾರ ಜನಾಂಗದವರು ಗೋವಳರು. ಆರ್ಯರ ದಾಳಿಯಿಂದಾಗಿ ಕೆಲವು ಹಟ್ಟಿಕಾರ ಸಮುದಾಯಗಳು ದಕ್ಷಿಣಕ್ಕೆ ಚದುರಿದವು. ಹೀಗೆ ದಕ್ಷಿಣಕ್ಕೆ ಸರಿದು ಹೋದ ಸಮುದಾಯವನ್ನು ತಮಿಳು ಸಮುದಾಯದ ಮೂಲಿಗರು ಎಂದು ಊಹಿಸಬಹುದು. ಉತ್ತರ ಹಾಗು ದಕ್ಷಿಣ ಭಾರತಗಳ ನಡುವೆ ಒಂದು ಕಾಲದಲ್ಲಿ ಅಭೇದ್ಯ ಗೋಡೆಯಾಗಿ ನಿಂತಿದ್ದ ವಿಂಧ್ಯ ಪರ್ವತವನ್ನು ಮೊದಲಿಗೆ ದಾಟಿದವನು ಅಗಸ್ತ್ಯ ಋಷಿ. ತಮಿಳರು ಅಗಸ್ತ್ಯ ಋಷಿಗೆ ತಮ್ಮ ಮೂಲಿಗ ಎಂದು ಹೇಳುತ್ತಾರೆ ಎನ್ನುವುದನ್ನು ಗಮನಿಸಿರಿ.

ಇನ್ನು ಕೆಲವು ಹಟ್ಟಿಕಾರ ಸಮುದಾಯಗಳು ಆರ್ಯರನ್ನು ಎದುರಿಸಿ ನಿಂತು, ಸೋತು ಹೋಗಿ, ಅವರೊಡನೆ ಸಹಜೀವನ ನಡೆಯಿಸಿದವು. (ಬೇಟೆಗಾರರಿಗೆ ಹಾಗು ಗೋವಳರಿಗೆ ಹೊಡೆದಾಟಗಳಾದರೆ, ಸೋಲುವವರು ಗೋವಳರೇ ಅಲ್ಲವೆ?)  ಹೀಗೆ ಅವರೊಡನೆ ಸೋತು ಸಹಜೀವನ ನಡೆಯಿಸಿದ ಹಟ್ಟಿಕಾರ ಸಮುದಾಯಗಳು ಆರ್ಯ-ಹಟ್ಟಿಕಾರ ಸಮ್ಮಿಶ್ರ ಸಂಸ್ಕೃತಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದವು.

ಆರ್ಯ ದ್ರಾವಿಡರ ಸಮ್ಮಿಲನವು ಋಗ್ವೇದ ಕಾಲದಿಂದಲೇ ಪ್ರಾರಂಭವಾಯಿತೆಂದು ಪ್ರಿಲಸ್ಕಿ ಮೊದಲಾದ ವಿದ್ವಾಂಸರು ಊಹಿಸುತ್ತಾರೆ.  ವೇದ, ಉಪನಿಷತ್ತು, ಬ್ರಾಹ್ಮಣ ಮೊದಲಾದ ಗ್ರಂಥಗಳಲ್ಲಿ ಎಷ್ಟೋ ದ್ರಾವಿಡ ಪದಗಳು ದೊರೆತಿವೆ. ಹಟ್ಟಿಕಾರರ ಅರ್ಯೀಕರಣವು ಈ ಕಾಲದಲ್ಲಿಯೇ ಪ್ರಾರಂಭವಾಗಿ ದ್ರಾವಿಡವರ್ಗದಲ್ಲಿ ಎರಡು ಕವಲುಗಳು ಆಗಿರಬಹುದು. ಕಳವರು ಎನ್ನುವವರು ಮೂಲದ್ರಾವಿಡರು; ಕಣ್ಣರು ಎನ್ನುವವರು ಆರ್ಯದ್ರಾವಿಡರು. ಈ ಬಗೆಯ ಮಿಶ್ರಣದ ಫಲವೇ ಕರ್ಣಾಟ ಸಂಸ್ಕೃತಿ. ತಮಿಳರು ಕಳವರನ್ನು ಮರವರು, ವಡುಕರು ಎಂದು ಕರೆದಿದ್ದಾರೆ. ಇವರೇ ಅಥರ್ವ ವೇದದ ಸ್ತೇನರು. ವೇದಗಳಲ್ಲಿ ಸಿಕ್ಕುವ ಹಲವು ಪದಗಳ ಆಧಾರದಿಂದ ಪಂಜಾಬಿನಲ್ಲಿ ಆರ್ಯರು ಬರುವ ಮೊದಲು ದ್ರಾವಿಡರು ನೆಲಸಿದ್ದರು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಕನ್ನಡ ಮತ್ತು ತಮಿಳು ಜನಾಂಗಗಳಾದ ವೆಳ್ಳರು, ರಡ್ಡಿಗಳು, ಗಂಗಡಿಕಾರರು ಮೊದಲಾದ ಕುಲದವರಲ್ಲಿ ತಾವು ಉತ್ತರದಿಂದ ಹರಿದು ಬಂದವರು ಎನ್ನುವ ಪರಂಪರೆ ಇದ್ದುದು ಕಂಡು ಬರುತ್ತದೆ. ಇನ್ನು ಯಜುರ್ವೇದದಲ್ಲಿ ಉಲ್ಲೇಖಿತರಾದ  ಪತ್ತಿಗಳು ಎಂದರೆ ಪಟ್ಟಿ-ಪಾಡಿಗಳು ಅಥವಾ ಹಟ್ಟಿಕಾರರು; ಹಟ್ಟಿಕಾರರು ಗೋವಳರು. ಋಗ್ವೇದದ ಯದು-ತುರ್ವಶರೂ ಆರ್ಯೇತರರಾದ ಗೋವಳರು. ಇವರೀರ್ವರೂ ಒಂದೇ, ಬೇರೆಯಲ್ಲ.

ಕರ್ಣಾಟ ಹೆಸರಿನ ಪ್ರಾಚೀನತಮ ಉಲ್ಲೇಖವು ಮಹಾಭಾರತದಲ್ಲಿದೆ. ಈಗಿನ ಮಹಾಭಾರತದ ರಚನಾಕಾಲವು ಕ್ರಿ.ಪೂ.೨-೩ನೆಯ ಶತಮಾನವೆಂದು ವಿದ್ವಾಂಸರ ಅಭಿಪ್ರಾಯವಿದೆ. ಕ್ರಿ.ಪೂ.೨ನೆಯ ಶತಮಾನದ ಸುಮಾರಿಗೆ ಬರೆಯಲ್ಪಟ್ಟ ‘ಮೃಚ್ಛಕಟಿಕಮ್’ ನಾಟಕದಲ್ಲಿ ಕರ್ಣಾಟರ ಉಲ್ಲೇಖವಿದೆ. ಇದೇ ಸುಮಾರಿಗೆ ಬರೆಯಲ್ಪಟ್ಟ ಒಂದು ಗ್ರೀಕ ಪ್ರಹಸನದಲ್ಲಿ  ಕನ್ನಡ ಮಾತುಗಳು ಬಂದಿವೆ. ಸ್ಕಂದ ಪುರಾಣದಲ್ಲಿ ಕರ್ಣಾಟನೆಂಬ ರಾಕ್ಷಸನು ಈ ನಾಡಿನ ಸಂಸ್ಥಾಪಕನೆಂದು ಹೇಳಲಾಗಿದೆ.

ಮನುವು ತನ್ನ ಕಾಲದ ವ್ರಾತ್ಯ ಕ್ಷತ್ರಿಯರ ಪಂಗಡಗಳನ್ನು ವಿವರಿಸುತ್ತ ಅವರಲ್ಲಿ ಕರಣರು ಮತ್ತು ನಟರು ಎಂದು ಎರಡು ಬಗೆಗಳು ಇದ್ದುದನ್ನು ಹೇಳುತ್ತಾನೆ. ಮನುಸ್ಮೃತಿಯಲ್ಲಿ ಉಲ್ಲೇಖಿತರಾದ ಕರಣರು ಹಾಗು ಮತ್ಸ್ಯಪುರಾಣದ ಕರ್ಣರು ಬೇರೆಯಲ್ಲ. ಮತ್ಸ್ಯಪುರಾಣದಲ್ಲಿ ಇವರನ್ನು ತುರ್ವಸುವಿನ ಪೀಳಿಗೆಯವರೆಂದು ಕರೆಯಲಾಗಿದೆ. ಕರ್ಣರು ಚೋಳ, ಪಾಂಡ್ಯ ಹಾಗು ಕೇರಳರ ನೆರೆಯಲ್ಲಿ ನೆಲೆಸಿದವರು ಎಂದು ವರ್ಣಿಸಲಾಗಿದೆ.

ಮನುಸ್ಮೃತಿಯಲ್ಲಿ ಕರಣರೊಡನೆ ಝಲ್ಲ, ಮಲ್ಲ, ದ್ರವಿಡರ ಉಲ್ಲೇಖವಿದೆ. ಇವರೆಲ್ಲ ವ್ರಾತ್ಯಕ್ಷತ್ರಿಯರೆನ್ನಲಾಗಿದೆ. ಶ್ರೀ ರಾಜವಾಡೆಯವರ ಅಭಿಪ್ರಾಯದ ಮೇರೆಗೆ ಕರಣರು ಮತ್ತು ನಟರು ಸೇರಿ ಒಂದೇ ಜನಾಂಗವಾಗಿ, ಅದುವೆ ಕರ್ಣಾಟವಾಯಿತು. (ಬೌದ್ಧಗ್ರಂಥಗಳಲ್ಲಿಮಹಾವೀರನಿಗೆ ‘ನಾಟ್ಟಪುತ್ತ’ ಎಂದು ಕರೆಯಲಾಗಿದೆ.) ನಾಟ್ಟರೆ ನಾಡವರು. ಇವರೇ ಈ ದೇಶದ ಮೂಲನಿವಾಸಿಗಳು. ‘ನಾಟಃ ಕರ್ಣಾಟದೇಶೇ’ ಎಂದು ‘ಶಬ್ದರತ್ನಾಕರ’ವು ಹೇಳುತ್ತದೆ. ಕನ್ನಡ ನಾಟರು ಅಂದರೆ ನಾಡವರು ಅಂದರೆ ರಾಷ್ಟ್ರಿಕರು ಸೌರಾಷ್ಟ್ರದವರೆಗೆ ಇದ್ದುದರಿಂದಲೇ ಒಮ್ಮೆ ದ್ವಾರಕೆಯವರೆಗಿನ ನಾಡು ಕುಂತಲ ಎಂದು ಗಣಿಸಲ್ಪಡುತ್ತಿತ್ತು.

ನಕಾರವು ಲಕಾರವಾಗಿ ಪರಿಣಮಿಸುವುದನ್ನು ನೋಡಿದ್ದೇವೆ. ಆದುದರಿಂದ ಲಾಟ ಇದು ನಾಟ(=ನಾಡು) ಎನ್ನುವ ಪದದಿಂದ ಬಂದಿರಬೇಕು. ಲಾಟ ಇದರ ಮೂಲರೂಪವು ಲಟ್ಟ ಎಂದಿರುವ ಸಂಭವವಿದೆ. ರಾಷ್ಟ್ರಕೂಟರ ಹಲವು ಶಾಸನಗಳಲ್ಲಿ ಬರುವ ‘ಲಟ್ಟಲೂರು’ ಇದು ಈಗಿನ ‘ಲಾತೂರು’ ಆಗಿರಬಹುದೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ರಟ್ಟ ಎನ್ನುವ ಪದವೇ ಅಪಭ್ರಂಶವಾಗಿ ಲಟ್ಟ-ಲಾಟ ಎಂದು ಆಗಿರಬಹುದೆಂದು ತೋರುತ್ತದೆ.  ರಠಿಕ ಎನ್ನುವ ಶಬ್ದವೇ ರಟ್ಟ ಎಂದು ಆಗಿರಬಹುದು. ಈ ರಠಿಕ ಪದವನ್ನು ಭಿನ್ನ ಭಿನ್ನ ಶಾಸನಗಳಲ್ಲಿ ರಠಕ, ಧೌಲಿ, ರಿಷ್ಟಿಕ ಎಂದೆಲ್ಲ ಬರೆಯಲಾಗಿದೆ. (ಬಂಗಾಲದಲ್ಲಿ ಒಂದು ಪ್ರಾಚೀನ ಲಾಟ ದೇಶವಿತ್ತು. ಈ ಹೆಸರು  ಲಾಡ, ರಾಡ, ರಾಧ ಎಂದೆಲ್ಲ ಬದಲಾಗಿದೆ.)  ಈ ರಟ್ಟರೇ ರಾಷ್ಟ್ರಕೂಟರು. ತಮ್ಮ ಶಾಸನಗಳಲ್ಲಿ ಅವರು ತಮ್ಮನ್ನು ‘ರಟ್ಟವಂಶೋದ್ಭವ:’ ಎಂದು ಹೇಳಿಕೊಂಡಿದ್ದಾರೆ. ಆದಕಾರಣ ಲಾಟದೇಶವು ರಾಷ್ಟ್ರಕೂಟರ ಮೂಲಸ್ಥಾನವಾಗಿತ್ತು ಎನ್ನಲು ಅಡ್ಡಿ ಇಲ್ಲ. ರಾಷ್ಟ್ರಕೂಟರು ತಮ್ಮನ್ನು ‘ಕುಟುಂಬಿಗಳು’ ಎಂದು ಹೇಳಿಕೊಂಡಿದ್ದಾರೆ.  ಕುಟುಂಬಿಗಳು ಎಂದರೆ ‘ಕುಡುವರು’ ಅರ್ಥಾತ್ ಒಕ್ಕಲಿಗರು. ಮಹಾರಾಷ್ಟ್ರದಲ್ಲಿ ಇವರು ಕುಳುಂಬಿಗಳು ಮತ್ತು ಗುಜರಾತದಲ್ಲಿ ಕುಣಬಿಗಳು. ಛತ್ರಪತಿ ಶಿವಾಜಿಯ ರಾಜ್ಯದ ಉತ್ತರ ಭಾಗದಲ್ಲಿ, ಅಂದರೆ ಮುಂಬಯಿಯಿಂದ ಸೂರತದವರೆಗಿದ್ದ ದೇಶದಲ್ಲಿ  ‘ಕೋಳಿನಾಡು’ ಎನ್ನುವ ಪ್ರದೇಶವು ಸೇರಿಕೊಂಡಿತ್ತು. ಕೋಳಿ ಹಾಗು ನಾಡು ಇವೆರಡೂ ಕನ್ನಡ ಪದಗಳು ಎನ್ನುವುದನ್ನು ಗಮನಿಸಿರಿ. ಗುಜರಾತದಲ್ಲಿ ಸಹ ‘ಕೋಳಿನಾಡ’ ಎನ್ನುವ ವ್ಯಕ್ತಿಗಳಿದ್ದಾರೆ. ನಮ್ಮಲ್ಲಿ ‘ಕೋಳಿವಾಡ’ ಎನ್ನುವ ಊರಿದ್ದು, ಅದೇ ಅಡ್ಡಹೆಸರಿನ ವ್ಯಕ್ತಿಗಳಿದ್ದಾರೆ.  

ಪ್ರಾಚೀನತಮ ಉಲ್ಲೇಖಗಳಲ್ಲಿ ರಾಷ್ಟ್ರಿಕರ ಹಾಗು ಭೋಜಕರ ಹೆಸರುಗಳು ಬರುತ್ತವೆ. ಭೋಜಕರು ಯದುವಂಶಕ್ಕೆ ಸಂಬಂಧಪಟ್ಟವರು ಎಂದು ಪುರಾಣಗಳು ಹೇಳುತ್ತವೆ. ಇವರು ವರಾಡದಲ್ಲಿ ಆಳುತ್ತಿದ್ದರು. ಭೋಜಕರಿಗೆ ಹತ್ತಿರದಲ್ಲಿಯೆ ರಾಷ್ಟ್ರಿಕರ ನಾಡು. ವಾಲ್ಮೀಕಿ ರಾಮಾಯಣದಲ್ಲಿ ‘ವಿದರ್ಭಾನ್ ಋಷಿಕಾನ್ ಚೈವ’ ಎಂದಿದೆ. ಈ ವಿದರ್ಭರು ಭೋಜಕರು. ಆದುದರಿಂದ ಋಷಿಕರೆಂದರೆ ರಾಷ್ಟ್ರಿಕರು.

ಪ್ರಾಚೀನ ಕಾಲದಲ್ಲಿ ಬಂಗಾಳದ ಒಂದು ಪ್ರದೇಶಕ್ಕೆ ಗೌಡ ಎನ್ನುವ ಹೆಸರಿತ್ತು. ಈ ಹೆಸರು ಬರಲು ಕಾರಣರಾದ  ಗೌಡರು(=ಗೌಳರು) ಯಾರು?  ಬಂಗಾಲದಲ್ಲಿ ಪಟ್ಟಿ, ಪಾಡಾ, ಪಾರಾ, ಪಾಟಕ, ಹಟ್ಟಿ, ಊರು, ಸಂತಿ, ಕಂಡಿ, ಗಡ್ಡಾ, ಪೊಲ ಎನ್ನುವ ಗ್ರಾಮನಾಮಗಳಿಗೆ ಕಾರಣರಾದ ಪಟ್ಟಿಗಳು (ಪತ್ತಿಗಳು) ಎಂದರೆ ಹಟ್ಟಿಕಾರ ಗೋವಳರಿಂದಲೇ ಆ ನಾಡಿಗೆ ಗೌಡ ಎನ್ನುವ ಹೆಸರು ಬಂದಿರಬೇಕು. ಇನ್ನು ಬಂಗಾಲವನ್ನು ಆಳಿದ ಸೇನ ಬಲ್ಲಾಳರು ಕರ್ಣಾಟರು.   

ಪಟ್ಟಿ, ಪಾಡಿಯು ನಮ್ಮ ನಾಡಿನ ಮೊದಲಿಗರ ಆರಂಭದ ಸ್ಥಿತಿಯನ್ನು ಅಂದರೆ ದನಗಾರಿಕೆಯನ್ನು ತೋರಿಸಿದರೆ, ಕುಡಿ ಅಥವಾ ಕುಡು ಎನ್ನುವುದು ಅದರ ಮುಂದಿನ ಸ್ಥಿತಿಯನ್ನು ತೋರಿಸುವುದು. ಕುಡಿ ಅಥವಾ ಕುರುಡು ಎನ್ನುವುದು ಒಕ್ಕಲುತನದ ಆರಂಭವನ್ನು ಹೇಳುವ ಸ್ಥಿತಿ. ಒಕ್ಕಲಿಕ್ಕು ಎಂದರೆ ಕಡಿ, ಕತ್ತರಿಸು. (ಒಕ್ಕು ಎಂದರೆ ತೆನೆಗಳನ್ನು ಕತ್ತರಿಸಿ ಗುಂಪು ಮಾಡುವುದು.)

ಕುಡುವ ಎಂದರೆ ಒಕ್ಕಲು; ಒಕ್ಕಲು ಎಂದರೆ ಕುಡುವ. ಇವರೇ ನಮ್ಮ ನಾಡಿನ ಕುಳಗಳು; ಸಂಸ್ಕೃತದಲ್ಲಿ ಕುಟುಂಬಿಗಳು
(--ಮೂಲರೂಪವು ಕುಡು ಪದದಲ್ಲಿದೆ--). ಇವರನ್ನು ಮರಾಠಿಯಲ್ಲಿ ಕುಣಬಿ, ಕುಳಬಿ ಎಂದು ಕರೆದರೆ, ಗುಜರಾತಿಯಲ್ಲಿ ಕಣಬಿ ಎನ್ನುತ್ತಾರೆ. ( ‘ಕುಡು’ವಿನಿಂದ ಕುಡುಂಬ ಹಾಗು ಕುಟುಂಬ; ‘ಕುಳ’ದಿಂದ ಕುಳುಂಬ>> ಕುರುಂಬ>>ಕುರುಬ.)

ಸಸ್ಯಾದಿಗಳನ್ನು ಕಡಿದು, ತೆನೆಗಳನ್ನು ಒಕ್ಕಿ, ಒಕ್ಕಲಾಗತೊಡಗಿದ ಪಟ್ಟಿಕಾರನು ಒಕ್ಕಲಿಗನಾದನು; ಕುಡಿಗಳನ್ನು ಕಟ್ಟಿಕೊಂಡನು.
ಪಾಡಿಗಳು, ನಂದಗ್ರಾಮಗಳು, ಗೋಪಾಡಿಗಳು, ಕುರಿಗ್ರಾಮಗಳು ಮೊದಲಾದವು ನಮ್ಮ ನಾಡಿನ ದನಗಾರಿಕೆಯನ್ನು ಸೂಚಿಸುವಂತೆ, ಕುಡಿ, ಗುಡಿಗಳು ಒಕ್ಕಲುತನವನ್ನು ಸೂಚಿಸುತ್ತವೆ. ಉದಾ: ಕುಡಚಿ, ಗೊಡಚಿ, ಗುಡಿಬಂಡೆ, ಗುಡಿಸಾಗರ ಇತ್ಯಾದಿ. ಸಂಸ್ಕೃತದ ಖೇಡ ಸಹ ಇದೇ ಅರ್ಥವನ್ನು ಹೊಂದಿದೆ.

ಕುಡಿಯ ನಂತರ ಪೊಲ, ಪೊಳಲುಗಳು ಬೆಳೆದು ಬಂದವು. ಪೊಲ ಇದು ಪುಲ್ ಅಂದರೆ ಹುಲ್ಲು ಎನ್ನುವುದರಿಂದ ಬಂದಿದೆ.  ಪೊಳಲ್ ಎಂದರೆ ತಮಿಳಿನಲ್ಲಿ ತೋಟ. ಕೆರೆ, ಕಟ್ಟೆ, ಕೊಳ, ಹೊಂಡ  ಇತ್ಯಾದಿ ಒಕ್ಕಲುತನಕ್ಕೆ ಆಧಾರವಾದ ಬೆಳವಣಿಗೆಗಳು.  ಕುಡುವರ ಏಳ್ಗೆಯಾದಂತೆ ಪಟ್ಟಿಯು ವ್ಯಾಪಾರಕ್ಕೆ ಎಡೆಯಾಗಿ, ಪೇಟೆಯಾಯಿತು.

ಆರ್ಯ ಮತ್ತು ಹಟ್ಟಿಕಾರರ ನಡುವಿನ ವಿವಾಹಸಂಬಂಧಗಳಿಂದ ಆರಿಯ ಎನ್ನುವ ಮಿಶ್ರಕುಲದ ನಿರ್ಮಾಣವಾಯಿತು. ಈ ಮಿಶ್ರಕುಲದ ಭಾಷೆಯೇ ಪ್ರಾಕೃತ ಭಾಷೆ. ಆರ್ಯರ ಭಾಷೆಗೆ ನಾನು ‘ಸಂಸ್ಕೃತ ಭಾಷೆ’ ಎಂದು ಕರೆಯುವದಿಲ್ಲ. ಇದಕ್ಕೆ ಒಂದು ಕಾರಣವಿದೆ. ‘ಸಂಸ್ಕೃತ’ ಈ ಪದದ ಅರ್ಥ processed, refined ಎಂದು ಆಗುತ್ತದೆ. ಆಡುಮಾತಿಗೂ, ವ್ಯಾಕರಣಶುದ್ಧ ಭಾಷೆಗೂ ತುಂಬ ಅಂತರವಿದೆ. ಸಂಸ್ಕೃತ ವೈಯಾಕರಣಿಗಳು ಆಡುನುಡಿಗೆ ‘ಪ್ರಾಕೃತ’(=ಪ್ರಕೃತಿಸಹಜವಾದದ್ದು=natural) ಎಂದೂ, ವ್ಯಾಕರಣಶುದ್ಧ ಭಾಷೆಗೆ ಸಂಸ್ಕೃತ ಎಂದೂ ಕರೆದರು. ವಾಸ್ತವವಾಗಿ ಇದು ಕೇವಲ ಆರ್ಯಭಾಷೆ.

ಆಧುನಿಕ ಪ್ರಾಕೃತ ಭಾಷೆಯ ಹುಟ್ಟಿಗೆ, ಆರ್ಯೀಕರಣ ಹೊಂದಿದ ಹಟ್ಟಿಕಾರ ಜನರೆ ಅಂದರೆ ಕನ್ನಡಿಗರೆ ಕಾರಣರು. ಆರ್ಯರ ಪ್ರಭಾವಕ್ಕೆ, ಪ್ರಭುತ್ವಕ್ಕೆ ಒಳಗಾದ ಹಟ್ಟಿಕಾರರು ಅಂದರೆ ಕನ್ನಾಡವರ ಮೊದಲಿಗರಾದ ಯದು-ತುರ್ವರು ಸಂಸ್ಕೃತ-ಪ್ರಾಕೃತಗಳಿಗೆ ಮನ ಸೋತರು. ಇವರು ಆರ್ಯಭಾಷೆಯನ್ನು ತಮ್ಮದಾಗಿ ಮಾಡಿಕೊಳ್ಳುವಾಗ ವ್ರಜಭಾಷೆಯು ಹುಟ್ಟಿತು. ಯದು-ತುರ್ವರ ಹಟ್ಟಿಗಳಿದ್ದ ಯಮುನಾ ನದಿಯ ದಂಡೆಯ ಊರಿನ ಹೆಸರು ಮಥುರಾ, ಅಂದರೆ ಮಥೂರು! ಇದನ್ನು ಮತ್ತೂರಿನೊಡನೆ ಹೋಲಿಸಿರಿ. ‘ಮಾ’ ಎಂದರೆ ದನಗಳು ಎನ್ನುವ ಅರ್ಥದ ಪದವೊಂದು ತಮಿಳಿನಲ್ಲಿದೆ.  ಮಥುರಾ ಅಥವಾ ಮತ್ತೂರು ಎಂದರೆ ದನಗಳ ಹಟ್ಟಿ.  ವೃಂದಾವನದಲ್ಲಿಯ ‘ವೃಂದ’ ಪದಕ್ಕೆ ಗುಂಪು ಎನ್ನುವ ಅರ್ಥವೂ ಇದೆ. ವೃಂದಾವನವೆಂದರೆ ಗುಂಪಾಗಿ ಇರುವ ವನಭಾಗ. ಮಥುರೆಯ ಸಮೀಪದಲ್ಲಿ ಗ್ವಾಲೇರಿ ಇದೆ. ಗ್ವಾಲೇರಿ ಎಂದರೆ ಗೌಳಿ-ಏರಿ.  ಇದು ಸಿಂಧರ ರಾಜಧಾನಿ. ಈ ಸಿಂದರು ಪಾಟೀಲರು. ಮಹದಾಜಿ ಸಿಂದನು ಪಾಟೀಲ-ಬುವಾ ಎಂದು ಹೆಸರಾಗಿದ್ದನು. ಪಾಟೀಲ ಎಂದರೆ ‘ಪಟ್ಟಿ’ಯಲ್ಲಿ ಇರುವ ವ್ಯಕ್ತಿ. ಈ ಪದವು ತನ್ನಂತರದಲ್ಲಿ ‘ಗ್ರಾಮಪ್ರಮುಖ’ ಎನ್ನುವ ಅರ್ಥವನ್ನು ಪಡೆಯಿತು. 

ಆರ್ಯರ ನಂತರವೂ ಸಹ ಅನೇಕ ಜನಾಂಗಗಳು ಭಾರತಕ್ಕೆ ಹೊರಗಿನಿಂದ ಬಂದವು. ಆಭೀರರು ಭಾರತೀಯರಲ್ಲವಾದರೂ, ಈ ದೇಶದಲ್ಲಿ ಬಂದು ನೆಲೆಸಿದ ಬಳಿಕ, ತಾವು ಯದುವಂಶೀಯರೆಂದು ಹೇಳಿಕೊಳ್ಳಲಾರಂಭಿಸಿದರು. ಎಮ್ಮಿಗರು ಒಂದು ಕಾಲಕ್ಕೆ ಬೇರೆ ಪಂಗಡದವರಾಗಿದ್ದರೂ, ಮುಂದೆ ತುರುಕಾರರಲ್ಲಿ ಬೆರೆತಿರಬೇಕು. ನರ್ಮದಾ ನದಿತೀರದಲ್ಲಿಮಾಹಿಷ್ಮತಿ ಪಟ್ಟಣವಿದ್ದರೆ, ದಕ್ಷಿಣದಲ್ಲಿ ಮೈಸೂರು ಇದೆ.(ಮ್ಹೈಸೂರು=ಎಮ್ಮೆಗಳ ಊರು). ಮಾಹಿಷ್ಮತಿ ಪಟ್ಟಣದ ರಾಜನು ಕಾರ್ತವೀರ್ಯಾರ್ಜುನನಾಗಿದ್ದರೆ, ಮೈಸೂರಿನ ಒಡೆಯನು ಮಹಿಷಾಸುರ ಎನ್ನುವ ರಾಕ್ಷಸನು. ಈ ಎರಡು ಊರುಗಳ ನಡುವೆ ಮ್ಹೈಸಾಳ, ಎಮ್ಮಿಗನೂರು  ಮೊದಲಾದ ಹೆಸರಿನ ಅನೇಕ ಊರುಗಳಿವೆ.

ಇಂದ್ರನು ಮೊದಲು ಪರ್ವತದ ವೈರಿ. ಆತನು ತನ್ನ ವಜ್ರದಿಂದ ಪರ್ವತಗಳ ಪಕ್ಕಗಳನ್ನು ಕಡಿದ ಕತೆಯಿದೆ. ಆದರೆ ಋಗ್ವೇದದಲ್ಲಿ ‘ಇಂದ್ರಾ-ಪರ್ವತಾ’ ಎನ್ನುವ ಜೋಡಿ ದೇವತೆಗಳ ವರ್ಣನೆ ಇರುವುದು, ಹಟ್ಟಿಕಾರರ ಹಾಗು ಆರ್ಯರ ಸಮ್ಮಿಲನವಾಗಿರುವುದನ್ನು ತೋರಿಸುತ್ತದೆ.

ಯಾದವರು ಇಂದ್ರನ ಪೂಜೆ ಮಾಡದೆ ಗಿರಿಪೂಜೆಯನ್ನು ಮಾಡಿರುವುದು, ಅವರ ವೈರವನ್ನು ತೋರಿಸುವುದು. ದಕ್ಷನ ಮಗಳಾದ ಸತಿಯು ಗಿರಿವಾಸಿ ಶಿವನನ್ನು ಮದುವೆ ಮಾಡಿಕೊಂಡಾಗ, ದಕ್ಷನು ಶಿವನನ್ನು ಯಜ್ಞಕ್ಕೆ ಆಹ್ವಾನಿಸಲಿಲ್ಲ. ವೀರಭದ್ರರು ಆ ಯಜ್ಞವನ್ನು ಹಾಳು ಮಾಡಿದರು. ವೀರಭದ್ರನು ಕುರುಬರ ದೇವತೆ.

ಮಲೆಯರೆಂದು ಪರ್ವತೇಯರಿಗೆ ಹೆಸರು. ಎಲ್ಲ ಹಟ್ಟಿಕಾರರು ಇಂದ್ರನಿಗೆ ತಲೆವಾಗಲಿಲ್ಲ. ಇಂತಹವರೊಡನೆ ಆದ ಕಲಹದ ಕತೆಯೆ (ಮಲ್ಲಾಸುರನನ್ನು ಸಂಹರಿಸಿದ ಕತೆ), ‘ಮಲ್ಲಾರಿ ಪುರಾಣ’ದಲ್ಲಿದೆ. ಮಲ್ಲಾಸುರ ಎನ್ನುವುದು  ಮಲ್ಲ ಕುಲದವರ ಸಂಕೇತ. ‘ಮಲ್ಹಾರಿ’ ಎನ್ನುವುದು ಆರಿಯರ ಪರಂಪರೆಯಲ್ಲಿ ಇರುವ ಹೆಸರು. ಇದೇ ದೇವತೆಗೆ ಹಟ್ಟಿಕಾರರು ಮಲ್ಲಯ್ಯನೆಂದು ಕರೆಯುತ್ತಾರೆ. ಈ ಮಲ್ಲಾರಿ ದೇವತೆಯು ಶಿವನ ಅವತಾರವೆಂದು ಗ್ರಹಿಕೆ ಇದ್ದರೂ, ಆ ದೇವತೆಯ ವಾಹನಗಳನ್ನು ನೋಡಿದರೆ, ಅದರಲ್ಲಿ ಇಂದ್ರನ ಕುರುಹುಗಳೂ ಕಾಣುವುವು. ಹಟ್ಟಿಕಾರರಲ್ಲಿ ಕುರುವರು ಈ ದೇವತೆಯ ಉಪಾಸಕರು. ಮರಾಠರು ಮಲ್ಲಾರಿ ಅಥವಾ ಖಂಡೋಬನೆಂದು  ಈ ದೇವತೆಯನ್ನು ಪೂಜಿಸುತ್ತಾರೆ. ಸೋತವರು ಗೆದ್ದವರ ದೇವತೆಗಳನ್ನು ಸ್ವೀಕರಿಸುವ ರೀತಿಯನ್ನು ಇಲ್ಲಿ ಕಾಣಬಹುದು. ಆದರೆ ಸೋತಂತಹ ಈ ಹಟ್ಟಿಕಾರರು ತುಂಬ ಚಾಣಾಕ್ಷತನದಿಂದ ತಮ್ಮ ದೇವತೆಗಳನ್ನು ಆರ್ಯದೇವತೆಗಳಲ್ಲಿ ಸೇರಿಸಿದರು ಎಂದು ಶ್ರೀ ಶಂ.ಬಾ. ಜೋಶಿಯವರು ಸಿದ್ಧ ಮಾಡಿ ತೋರಿಸಿದ್ದಾರೆ.

ಮೊಹೆಂಜೊದಾರೊದಲ್ಲಿ ದೊರೆತ ಕಲ್ಲಿನ ಎರಡು ಅರ್ಧ ಪುತ್ತಳಿಗಳು ಧ್ಯಾನಮೂರ್ತಿಗಳಾಗಿವೆ ಎಂದು ಕೋಲಕತ್ತೆಯ ಆರ್ಕಿಯಾಲಾಜಿಕಲ ಮ್ಯೂಜಿಯಮ್ಮಿನ ಸುಪರಿಂಟೆಂಡಂಟರಾದ  ಚಂದಾ ಅವರು ಅಭಿಪ್ರಾಯಪಟ್ಟಿದ್ದಾರೆ. ಯೋಗಸಿದ್ಧರು, ಜಂಗಮ ಯತಿಗಳು ಮೊದಲಾದವು ವೇದಪೂರ್ವ ಪದ್ಧತಿಗಳಾಗಿವೆ. ಕನ್ನಾಡಿನಲ್ಲಿರುವ ಅನೇಕ ಊರುಗಳ ಹೆಸರುಗಳು ಈ ಸಿದ್ಧಪುರುಷರ ಪ್ರಭಾವಸೂಚಕವಾಗಿವೆ. ಕುರುವರು ವೀರಶಿವನ ಭಕ್ತರು. ಇವರು ವೀರ‘ನಾಯಕ’ರು. ಈ ವೀರನೇ ‘ಬೀರ’ನಾಗಿ ಮತ್ತೆ ಸಂಸ್ಕೃತರೂಪ ತಾಳಿ ಭೈರವೇಶ್ವರನಾಗಿರಬಹುದು. ಭೈರವೇಶ್ವರನು ಕ್ಷೇತ್ರಪಾಲಕ. ಅಂದರೆ ಊರ ಕಾವಲುಗಾರ, ಅಂದರೆ ಹಳಬ-ಕುರುಬ. ಮಹಾರಾಷ್ಟ್ರದಲ್ಲಿ ‘ಹಳಬ’ ಕುಲಗಳಿವೆ. ಇವರ ಕೆಲಸ ಊರ ಗೌಡರು ಹೇಳಿದ ಊರ ಕೆಲಸಗಳ ನಿರ್ವಹಣೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಹಳೆಪೈಕ’ರಿದ್ದಾರೆ. ಮೈಲಾರಗಳು ಬಹುತೇಕವಾಗಿ ಗುಡ್ಡದ ಮೆಲೆ ಅಥವಾ ಪಕ್ಕದಲ್ಲಿವೆ.  ಕಲ್ಲೇಶ, ಕಲ್ಲಿನಾಥ, ಕಲ್ಲೇಶ್ವರ ಇವು ನಿಜವಾಗಿಯೂ ‘ಕಳ್ಳು’ ಅಂದರ ‘ಹಾಲಿ’ಗೆ ಸಂಬಂಧಿಸಿದವು. ಕಲ್ಲಪ್ಪನೆಂದರೆ, ಕಳ್ಳಪ್ಪ ಅರ್ಥಾತ್ ಹಾಲಪ್ಪ.  ಕಲ್ಲಿನಾಥನ ದೇವಸ್ಥಾನಗಳಿಗೇ ಮೂಲಸ್ಥಾನದ ದೇವರು ಎನ್ನುವ ಪರ್ಯಾಯ ನಾಮವಿದ್ದದ್ದು ಅರ್ಥಪೂರ್ಣವಾಗಿದೆ.  ಕಳವರು ಈ ನಾಡ ಮೂಲಿಗರು. ಇದು ಅವರ ಮೂಲಸ್ಥಾನದ ದೇವರು.

ಗಣಗಳು ಹಟ್ಟಿಕಾರರ ವೈಶಿಷ್ಟ್ಯ. ಪುರಾತನಕಾಲದ ಯಾದವರಲ್ಲಿ ಇದೇ ಬಗೆಯಾದ ನಡೆವಳಿ ಇದ್ದಿತು.  ವೃಷ್ಣಿಗಳಲ್ಲಿ ರಾಜನಿಲ್ಲ. ದ್ರಾವಿಡ ಭಾಷೆಯಲ್ಲಿ ‘ರಾಜ’ ಶಬ್ದವಿಲ್ಲ. ಕೃಷ್ಣನು ಯಾದವರ ಒಂದು ಗುಂಪಿನ ಅಧ್ಯಕ್ಷನಾಗಿದ್ದನು. ‘ಹಿಂದು ಪೊಲಿಟಿ’ ಎನ್ನುವ ಗ್ರಂಥದಲ್ಲಿ ಜಯಸ್ವಾಲರು ಇದನ್ನು ಸವಿಸ್ತಾರವಾಗಿ ಚರ್ಚಿಸಿದ್ದಾರೆ.

ಹಟ್ಟಿಕಾರರಲ್ಲಿ ಹೆಣ್ಣುದೇವರ ಆರಾಧನೆ ವಿಶೇಷ. ಮಾತೃಪ್ರಧಾನ ಕುಟುಂಬ ಪದ್ಧತಿಯು ಹಟ್ಟಿಕಾರರದು. ಕುರುವರಲ್ಲಿ ಮತ್ತು ಯಾದವರಲ್ಲಿ ತಾಯಿಯಿಂದ ಹೆಸರು ಹೇಳುವ ಪದ್ಧತಿ ಇದೆ. ಆದುದರಿಂದಲೇ ಶ್ರೀಕೃಷ್ಣನು ದೇವಕೀನಂದನನಾಗಿದ್ದಾನೆ. ರೇವಾ (=ನರ್ಮದಾ) ತೀರದಿಂದ ಮೈಸೂರವರೆಗೂ ಎಲ್ಲಮ್ಮನ ಭಕ್ತರಿದ್ದಾರೆ. ಖಾನದೇಶ-ವರ್ಹಾಟದಲ್ಲಿ ‘ಎಲ್ಲೂ ಆಯಿ’ ಎನ್ನುವ ದೇವತೆ ಇದ್ದಾಳೆ. ‘ಎಲ್ಲೋರಾ’ದ ಸರಿಯಾದ ಹೆಸರು ‘ಎಲ್ಲೂರು’.  ಎಲ್ಲಮ್ಮನ ಪೂಜೆ ಭೂದೇವಿಯ ಪೂಜೆ ಎಂದು ಶ್ರೀ ಅರಟಾಳ ರುದ್ರಗೌಡರು ಬರೆದಿದ್ದಾರೆ. ಅದು ನಿಜವಿದೆ. ಚಳಿಗಾಲದಲ್ಲಿ ಬೆಳೆ ಕೊಯ್ದಾಗ ರಂಡೆಹುಣ್ಣಿವೆ; ಚೈತ್ರದ ವಸಂತಾಗಮದಲ್ಲಿ ‘ಮುತ್ತೈದಿ ಹುಣ್ಣಿವೆ’.  ತನ್ನ ನಾಡನ್ನು ಸುಲಿಗೆಗಯ್ದದ್ದಕ್ಕಾಗಿ ಪರುಶರಾಮನು ದೇಶಾಭಿಮಾನದಿಂದ ಕ್ರೋಧಿತನಾಗಿ, ಕಾರ್ತವೀರ್ಯನ ಮೇಲೆ ಸೇಡು ತೀರಿಸಿಕೊಂಡಿದ್ದು ವಸ್ತುಸ್ಥಿತಿ.

ಇದು ನಮ್ಮ ಪುರಾಣಗಳಲ್ಲಿ ಕಾಣಸಿಗುವ ನಮ್ಮ ಇತಿಹಾಸ, ಕನ್ನಡಿಗರ ಪೂರ್ವೇತಿಹಾಸ!

[ಟಿಪ್ಪಣಿ: ಶ್ರೀ ಶಂ.ಬಾ. ಜೋಶಿಯವರು ಧಾರವಾಡದಲ್ಲಿಯ ಒಂದು ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಭಾಷಾಶಾಸ್ತ್ರ ಹಾಗು ವೇದ-ಪುರಾಣಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಸಂಶೋಧಿಸಿದವರಲ್ಲಿ ಇವರು ಅಗ್ರಗಣ್ಯರು. ತಮ್ಮಲ್ಲಿದ್ದ ಅಲ್ಪ-ಸ್ವಲ್ಪ ಹಣವನ್ನೇ ಸಂಶೋಧನೆಯ ಸಲುವಾಗಿ ಖರ್ಚು ಮಾಡಿ, ಆಸಾಮ, ಗುಜರಾತ ಮೊದಲಾದ ರಾಜ್ಯಗಳಲ್ಲಿ ಕನ್ನಡದ ನೆಲೆಗಳನ್ನು ಹುಡುಕಿ ತೋರಿಸಿದರು. ಈ ಲೇಖನವು ಆ ಮಹಾನುಭಾವರ ಸಂಶೋಧನೆಯನ್ನು ಆಧರಿಸಿದೆ. ಅಕಸ್ಮಾತ್, ಏನಾದರೂ ಲೋಪ-ದೋಷಗಳು ಆಗಿದ್ದರೆ, ಅವು ನನ್ನವು.)