Friday, January 2, 2015

ವಂದೇ ಭಾರತಮ್--೪

                          ಕನ್ನಡಿಗರ ಪೂರ್ವೇತಿಹಾಸ
ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ ಮೊದಲಾದವು ಪುಟ್ಟ ಕುಟುಂಬ(!)ದಲ್ಲಿ ಜೀವಿಸಿದರೆ, ಸಸ್ಯಾಹಾರಿ ಪ್ರಾಣಿಗಳು (ಚಿಗರಿ, ಆನೆ ಮೊದಲಾದವುಗಳು) ದೊಡ್ಡ ಗುಂಪುಗಳಲ್ಲಿ ಜೀವಿಸುತ್ತವೆ. ಮಾನವಜೀವಿಯಾದರೊ ದೈಹಿಕವಾಗಿ ತುಂಬ ದುರ್ಬಲ ಜೀವಿಯಾಗಿದ್ದ. ಹೀಗಾಗಿ ಗುಂಪಾಗಿ, ಕೂಡಿಕೊಂಡು ಬದುಕುವುದು ಆತನಿಗೆ ಅನಿವಾರ್ಯವೇ ಆಗಿತ್ತು. ಧ್ವನಿಸಂಕೇತಗಳನ್ನು ರೂಢಿಸಿಕೊಂಡ ಬಳಿಕ, ಇಂತಹ ವಾಸಸ್ಥಳಗಳನ್ನು ಆತನು  ‘ಗೂಡು, ಗುಂಪು’ ಎಂದು ಗುರುತಿಸಿದ. ಕರ್ನಾಟಕದ ತುಂಬೆಲ್ಲ ಇಂತಹ ಗೂಡುಗಳನ್ನು, ಗುಂಪು, ಗುಂಪಿಗಳನ್ನು ನೋಡಬಹುದು. ಉದಾಹರಣೆಗೆ ಶಿರ ಎನ್ನುವ ಕುಲದವರ ವಾಸಸ್ಥಳಕ್ಕೆ ಶಿರಗುಪ್ಪಿ, ಸಿರಗುಂಪಾ ಎಂದೂ, ಗೊಂಡರ ವಾಸಸ್ಥಳಕ್ಕೆ ಗೊಂದಿಕುಪ್ಪಿ ಎಂದು ಹೆಸರಿರುವದನ್ನು ಗಮನಿಸಬಹುದು.

ಮುಂದಿನ ಹಂತದಲ್ಲಿ, ಈ ಮಾನವಜೀವಿಗೆ ತಾನು ಆವು ಹಾಗು ಎಮ್ಮೆಯನ್ನು ಕೇವಲ ಮಾಂಸಕ್ಕಾಗಿ ಬಳಸದೆ, ಹಾಲಿಗಾಗಿ ಸಹ ಸಾಕಬಹುದು ಎನ್ನುವ ಅರಿವು ಆಯಿತು. ಮಾನವನ ಆಹಾರಕ್ಕಾಗಿ ಸಸ್ಯಗಳು ಹಾಗು ಬೇಟೆಗಳು ಬೇಕು. ಆತನ ಸಾಕುಪ್ರಾಣಿಗಳಿಗೆ ಮೇಯಲು ಹುಲ್ಲು ಬೇಕು. ಇವೆಲ್ಲವನ್ನು ಹುಡುಕುತ್ತ ಹೋಗುತ್ತಿದ್ದ ಆತನು, ತಾತ್ಪೂರಿಕ ಬೀಡುಗಳನ್ನು ತನ್ನ ವಾಸಕ್ಕಾಗಿ ಆರಿಸಿಕೊಳ್ಳುತ್ತಿದ್ದ. ಈ ತಾತ್ಪೂರ್ತಿಕ  ಬಿಡಾರಗಳೇ ಪಾಡಿಗಳು. ಪಾಡಿಯು ಹಾಡಿ, ವಾಡಿ, ಹಟ್ಟಿ ಎಂದೆಲ್ಲ ರೂಪಾಂತರಗೊಂಡಿದೆ. ಪಟ್ಟಿ ಎನ್ನುವ ಪದದಲ್ಲಿ ಪಟ್ಟುಕೊಂಡಿರುವ ಅಂದರೆ ಈಗ ಇದ್ದ ಸ್ಥಳ ಎನ್ನುವ ಅರ್ಥ ಬರುವುದೇ ಹೊರತು, ಊರು, ನೆಲೆ, ನಾಡು ಪದಗಳಲ್ಲಿ ಇರುವ `ಸ್ಥಿರವಾದ ವಾಸ’ ಎನ್ನುವ ಅರ್ಥ ಬರುವುದಿಲ್ಲ. ಆದುದರಿಂದ ಪಟ್ಟಿ ಎನ್ನುವ ಪದವು ನಮ್ಮ ನಾಡವರ ದನಗಾರಿಕೆಯ ಕಾಲದ ಬಿಡಾರ ಎನ್ನುವುದು ನಿಶ್ಚಿತವಾಗುತ್ತದೆ. ಸ್ಥಿರವಾದ ‘ಊರು’ ಎನ್ನುವ ಅರ್ಥವು ಇದಕ್ಕೆ ಕಾಲಾಂತರದಲ್ಲಿ ದೊರೆಯಿತು.

ಭಾರತದ ತುಂಬೆಲ್ಲ ಹಟ್ಟಿ, ಪಟ್ಟಿ, ಪಾಡಾ ಎನ್ನುವ ಪದಗಳಿಂದ ಕೊನೆಯಾಗುವ ಅನೇಕ ಊರುಗಳಿವೆ. ಉದಾಹರಣೆಗೆ ಕರ್ನಾಟಕದಲ್ಲಿರುವ ಶಿರಹಟ್ಟಿ, ಆಸಾಮದ ರಾಜಧಾನಿ ಗುವಾಹಾತಿ ಅರ್ಥಾತ್ ಗೋಹಟ್ಟಿ, ಓಡಿಸಾದಲ್ಲಿರುವ ವಿಷ್ಣುಪಾಡಾ ಇತ್ಯಾದಿ. ಕೆಲವೊಮ್ಮೆ ಹಳೆಯ ಹೆಸರಿನ ಜೊತೆಗೆ ಹೊಸದಾದ ಪದವು ಕೂಡಿಕೊಂಡಾಗ ಒಂದು ಜೋಡುಪದ ಹುಟ್ಟಿಕೊಳ್ಳುತ್ತದೆ. ಉದಾಹರಣೆಗೆ ಕಾಶ್ಮೀರದಲ್ಲಿರುವ ಕುಪವಾಡಾ ಎನ್ನುವ ಪಟ್ಟಣವನ್ನು ಗಮನಿಸಿರಿ. ಈ ಪದದಲ್ಲಿರುವ ‘ಕುಪ’ವು ಕುಪ್ಪಿಯ ರೂಪಾಂತರವಾಗಿದ್ದರೆ, ವಾಡಾ ಇದು ಪಾಡಿಯ ರೂಪಾಂತರ. [‘ಕುಪ್ಪಿ’ಯ (= ‘ಗುಂಪಿ’ನ) ಪ್ರಮುಖನಿಗೆ ‘ಕುಪೇಂದ್ರ’ ಎನ್ನುವ ಅಭಿಧಾನವನ್ನು ನೀಡಲಾಗುತ್ತಿತ್ತು. ಕುಪೇಂದ್ರ ಎನ್ನುವದು ಈಗಲೂ ಬಳಕೆಯಲ್ಲಿರುವ ಹೆಸರಾಗಿದೆ.]

ಆರ್ಯರು ಭಾರತವನ್ನು ಪ್ರವೇಶಿಸಿದ ಸಮಯದಲ್ಲಿ ಅವರಿಗೆ ಮುಖಾಮುಖಿಯಾದವರು ಅಲೆಮಾರಿ ಪಶುಸಂಗೋಪಕರು. ಇವರು ಕನ್ನಡದ ಹಟ್ಟಿಕಾರರು. ಈ ಸಮುದಾಯಕ್ಕೆ ಹಟ್ಟಿಕಾರರು ಎನ್ನುವ ಹೆಸರನ್ನು ಕೊಟ್ಟವರು ಕೀರ್ತಿಶೇಷ ಶಂ.ಬಾ.ಜೋಶಿಯವರು. ಹಟ್ಟಿ ಎಂದರೆ ಗುಡಿಸಲು; ಹಟ್ಟಿ ಎಂದರೆ ದನಗಳ ಕೊಟ್ಟಿಗೆಯೂ ಹೌದು.  ಗೋಕುಲ, ವ್ರಜ, ಘೋಷ ಎನ್ನುವ ಸಂಸ್ಕೃತ ಪದಗಳಿಗೆ ಇದು ಸಮಾನಾರ್ಥಕವಾದ ಪದವಾಗಿದೆ. ಹಟ್ಟಿಯು ತುರುಕಾರ-ದನಗಾರರ ಮೊದಲ ಆವಾಸಸ್ಥಾನ. ಹಟ್ಟಿಕಾರರು ತಮ್ಮ ಗೋವುಗಳಿಗೆ ಹುಲ್ಲುಗಾವಲುಗಳನ್ನು ಹುಡುಕುತ್ತ ಅಲೆಯುತ್ತಿದ್ದ ಕಾಲದಲ್ಲಿ, ಬೀಡು ಬಿಟ್ಟ ಸ್ಥಳಗಳ ಹೆಸರುಗಳಿವು. ಇವು ಸ್ಥಿರವಾದ ನೆಲೆಯನ್ನು ಸೂಚಿಸುವದಿಲ್ಲ. ದನಗಳನ್ನು ಕಾಯುತ್ತ ಅಲೆಯುವ ಈ ಹಟ್ಟಿಕಾರರನ್ನು ಆರ್ಯರು ‘ಧನಗರ’ (=ದನಗರ) ಎಂದು ಕರೆದರು. ಹಟ್ಟಿ ಪದದ ಮೊದಲ ರೂಪವು ಪಟ್ಟಿ. ‘ತುರುಪಟ್ಟಿ’ ಎನ್ನುವ ಪದವು ನಯಸೇನನ ‘ಧರ್ಮಾಮೃತಮ್‍’ದಲ್ಲಿ ಬರುತ್ತದೆ. ಇದರರ್ಥ ‘ಗೋಹಟ್ಟಿ’ ಅಥವಾ ‘ಗೋಕುಲ’.

ಆರ್ಯರು ಬರುವ ಮೊದಲು ಸಿಂಧ-ಪಂಜಾಬಗಳಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ಯದು-ತುರ್ವರೂ, ಕುರುವರೂ, ಪಣಿಗಳೂ ನೆಲೆಸಿದ್ದರು. ಇವರು ಹರಪ್ಪಾ, ಮೊಹೆಂಜೊದಾರೊಗಳ ನಿವಾಸಿಗಳಾಗಿರುವ ಸಂಭವವಿದೆ. ಋಗ್ವೇದದ ೨ನೆಯ ಮಂಡಲದಿಂದ ಏಳನೆಯ ಮಂಡಲದವರೆಗಿನ ಆರು ಮಂಡಲಗಳು ಅತಿ ಪುರಾತನ ಕಾಲದವು (ಕ್ರಿ.ಪೂ.೨೫೦೦ರಿಂದ ೫೦೦ರವರೆಗೆ). ಇವುಗಳಲ್ಲಿ ಬರುವ ವರ್ಣನೆಗಳಲ್ಲಿ ಆರ್ಯರ ಹಾಗು ಯದು-ತುರ್ವರ ವೈರವು ವಿಶೇಷವಾಗಿ ಕಂಡು ಬರುವುದು. ಬಳಿಕ ರಚಿತವಾದ ಒಂದನೆಯ ಹಾಗು ಎಂಟರಿಂದ ಹತ್ತನೆಯ ಮಂಡಲಗಳಲ್ಲಿ ಈ ವೈರವು ಕಡಿಮೆಯಾಗುತ್ತ ಹೋಗಿದೆ.

ನೇಪಾಳದಲ್ಲಿರುವ ಧನಗರ ಕುಲದ ಭಾಷೆಗೆ ಕುಡುಕ್ ಭಾಷೆ ಎನ್ನುತ್ತಾರೆ. ಇದೂ ಸಹ ದ್ರಾವಿಡ ಭಾಷೆಯಾಗಿದ್ದು, ಬ್ರಾಹುಯಿ ಎನ್ನುವ ದ್ರಾವಿಡ ಭಾಷೆಗೆ ಸಂಬಂಧ ಪಟ್ಟಿದೆ. ಕುಡುಕ್ ಭಾಷೆಯನ್ನು ಮಾತನಾಡುವವರು ನೇಪಾಳ, ಭೂತಾನ, ಬಂಗ್ಲಾದೇಶ, ಬಂಗಾಲ, ಬಿಹಾರ, ಓಡಿಸಾ, ಮಧ್ಯಪ್ರದೇಶ ಮೊದಲಾದ ಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಬ್ರಾಹುಯಿ ಭಾಷೆಯನ್ನು ಆಡುವ ಒಂದು ಪುಟ್ಟ ಅಲ್ಪಸಂಖ್ಯಾಕ ಜನಾಂಗವು  ಪಾಕಿಸ್ತಾನದ ಭಾಗವಾಗಿರುವ ಬಲೂಚಿಸ್ತಾನದಲ್ಲಿ ಇದೆ. ಈ ಜನಾಂಗದಲ್ಲಿ ಪರಂಪರಾಗತ ಜಾನಪದ ಗೀತೆಗಳನ್ನು ಹಾಡುವ ಒಂದು ಸಮುದಾಯವಿದೆ. ಈ ಸಮುದಾಯದವರನ್ನು ‘ಡೊಂಬ’ ಎಂದು ಕರೆಯುತ್ತಾರೆ. ಈ ಡೊಂಬರು ನಮ್ಮ ಕನ್ನಡದ ಡೊಂಬರೇ ಅಲ್ಲವೆ?  ಕನ್ನಡದ ಡೊಂಬರೂ ಕೂಡ ತಮ್ಮ ಕುಣಿತ ಹಾಗು ಸಾಹಸ ಪ್ರದರ್ಶನಗಳ ಮೂಲಕ ಜನರನ್ನು ರಂಜಿಸುತ್ತ, ತಮ್ಮ ಹೊಟ್ಟೆಯನ್ನು ಹೊರೆಯುತ್ತಿದ್ದರಲ್ಲವೆ? ಬ್ರಾಹುಯೀ ಭಾಷೆಯಲ್ಲಿ ತಾಯಿಗೆ ‘ಅಮ್ಮ’ ಎನ್ನುವ ಪದವಿದೆ; ‘ಗುರ್ ಅನ್ನು’ ಎನ್ನುವ ಪದಕ್ಕೆ ‘ಗುರ್ರರ್’ ಎನ್ನುವ ಪದವಿದೆ. ಬ್ರಾಹುಯಿ ಹಾಗು ಕುಡುಕ್ ಭಾಷೆಗಳನ್ನು ಭಾಷಾತಜ್ಞರು ದ್ರಾವಿಡ ಭಾಷೆಗಳು ಎಂದು ಗುರುತಿಸಿದ್ದಾರೆ. ಕನ್ನಡ ಭಾಷೆಯ ಜ್ಞಾನವಿಲ್ಲದ ಸಂಶೋಧಕರು ‘ದ್ರಾವಿಡ’ ಎನ್ನುವ ಪದವನ್ನು ಬಳಸಿದ್ದು ಸಹಜವಾಗಿದೆ. ದ್ರಾವಿಡ ಎಂದರೆ ತಮಿಳು ಎನ್ನುವ ಗ್ರಹಿಕೆಯಿಂದಾಗಿ, ಸಿಂಧಿ, ಬ್ರಾಹುಯಿ ಹಾಗು ತಮಿಳು ಭಾಷೆಗಳಲ್ಲಿ ಹೋಲಿಕೆಯಿದೆ ಎಂದು ಭಾಷಾತಜ್ಞರು ಹೇಳುತ್ತಲಿದ್ದಾರೆ.

ಮಂಗೋಲ ಹಾಗು ಇರಾಣದಿಂದ ಭಾರತವನ್ನು ಪ್ರವೇಶಿಸಿದ ಆರ್ಯರು ಬೇಟೆಕಾರರಾದ ಅಲೆಮಾರಿಗಳು; ಹಟ್ಟಿಕಾರ ಜನಾಂಗದವರು ಗೋವಳರು. ಆರ್ಯರ ದಾಳಿಯಿಂದಾಗಿ ಕೆಲವು ಹಟ್ಟಿಕಾರ ಸಮುದಾಯಗಳು ದಕ್ಷಿಣಕ್ಕೆ ಚದುರಿದವು. ಹೀಗೆ ದಕ್ಷಿಣಕ್ಕೆ ಸರಿದು ಹೋದ ಸಮುದಾಯವನ್ನು ತಮಿಳು ಸಮುದಾಯದ ಮೂಲಿಗರು ಎಂದು ಊಹಿಸಬಹುದು. ಉತ್ತರ ಹಾಗು ದಕ್ಷಿಣ ಭಾರತಗಳ ನಡುವೆ ಒಂದು ಕಾಲದಲ್ಲಿ ಅಭೇದ್ಯ ಗೋಡೆಯಾಗಿ ನಿಂತಿದ್ದ ವಿಂಧ್ಯ ಪರ್ವತವನ್ನು ಮೊದಲಿಗೆ ದಾಟಿದವನು ಅಗಸ್ತ್ಯ ಋಷಿ. ತಮಿಳರು ಅಗಸ್ತ್ಯ ಋಷಿಗೆ ತಮ್ಮ ಮೂಲಿಗ ಎಂದು ಹೇಳುತ್ತಾರೆ ಎನ್ನುವುದನ್ನು ಗಮನಿಸಿರಿ.

ಇನ್ನು ಕೆಲವು ಹಟ್ಟಿಕಾರ ಸಮುದಾಯಗಳು ಆರ್ಯರನ್ನು ಎದುರಿಸಿ ನಿಂತು, ಸೋತು ಹೋಗಿ, ಅವರೊಡನೆ ಸಹಜೀವನ ನಡೆಯಿಸಿದವು. (ಬೇಟೆಗಾರರಿಗೆ ಹಾಗು ಗೋವಳರಿಗೆ ಹೊಡೆದಾಟಗಳಾದರೆ, ಸೋಲುವವರು ಗೋವಳರೇ ಅಲ್ಲವೆ?)  ಹೀಗೆ ಅವರೊಡನೆ ಸೋತು ಸಹಜೀವನ ನಡೆಯಿಸಿದ ಹಟ್ಟಿಕಾರ ಸಮುದಾಯಗಳು ಆರ್ಯ-ಹಟ್ಟಿಕಾರ ಸಮ್ಮಿಶ್ರ ಸಂಸ್ಕೃತಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದವು.

ಆರ್ಯ ದ್ರಾವಿಡರ ಸಮ್ಮಿಲನವು ಋಗ್ವೇದ ಕಾಲದಿಂದಲೇ ಪ್ರಾರಂಭವಾಯಿತೆಂದು ಪ್ರಿಲಸ್ಕಿ ಮೊದಲಾದ ವಿದ್ವಾಂಸರು ಊಹಿಸುತ್ತಾರೆ.  ವೇದ, ಉಪನಿಷತ್ತು, ಬ್ರಾಹ್ಮಣ ಮೊದಲಾದ ಗ್ರಂಥಗಳಲ್ಲಿ ಎಷ್ಟೋ ದ್ರಾವಿಡ ಪದಗಳು ದೊರೆತಿವೆ. ಹಟ್ಟಿಕಾರರ ಅರ್ಯೀಕರಣವು ಈ ಕಾಲದಲ್ಲಿಯೇ ಪ್ರಾರಂಭವಾಗಿ ದ್ರಾವಿಡವರ್ಗದಲ್ಲಿ ಎರಡು ಕವಲುಗಳು ಆಗಿರಬಹುದು. ಕಳವರು ಎನ್ನುವವರು ಮೂಲದ್ರಾವಿಡರು; ಕಣ್ಣರು ಎನ್ನುವವರು ಆರ್ಯದ್ರಾವಿಡರು. ಈ ಬಗೆಯ ಮಿಶ್ರಣದ ಫಲವೇ ಕರ್ಣಾಟ ಸಂಸ್ಕೃತಿ. ತಮಿಳರು ಕಳವರನ್ನು ಮರವರು, ವಡುಕರು ಎಂದು ಕರೆದಿದ್ದಾರೆ. ಇವರೇ ಅಥರ್ವ ವೇದದ ಸ್ತೇನರು. ವೇದಗಳಲ್ಲಿ ಸಿಕ್ಕುವ ಹಲವು ಪದಗಳ ಆಧಾರದಿಂದ ಪಂಜಾಬಿನಲ್ಲಿ ಆರ್ಯರು ಬರುವ ಮೊದಲು ದ್ರಾವಿಡರು ನೆಲಸಿದ್ದರು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಕನ್ನಡ ಮತ್ತು ತಮಿಳು ಜನಾಂಗಗಳಾದ ವೆಳ್ಳರು, ರಡ್ಡಿಗಳು, ಗಂಗಡಿಕಾರರು ಮೊದಲಾದ ಕುಲದವರಲ್ಲಿ ತಾವು ಉತ್ತರದಿಂದ ಹರಿದು ಬಂದವರು ಎನ್ನುವ ಪರಂಪರೆ ಇದ್ದುದು ಕಂಡು ಬರುತ್ತದೆ. ಇನ್ನು ಯಜುರ್ವೇದದಲ್ಲಿ ಉಲ್ಲೇಖಿತರಾದ  ಪತ್ತಿಗಳು ಎಂದರೆ ಪಟ್ಟಿ-ಪಾಡಿಗಳು ಅಥವಾ ಹಟ್ಟಿಕಾರರು; ಹಟ್ಟಿಕಾರರು ಗೋವಳರು. ಋಗ್ವೇದದ ಯದು-ತುರ್ವಶರೂ ಆರ್ಯೇತರರಾದ ಗೋವಳರು. ಇವರೀರ್ವರೂ ಒಂದೇ, ಬೇರೆಯಲ್ಲ.

ಕರ್ಣಾಟ ಹೆಸರಿನ ಪ್ರಾಚೀನತಮ ಉಲ್ಲೇಖವು ಮಹಾಭಾರತದಲ್ಲಿದೆ. ಈಗಿನ ಮಹಾಭಾರತದ ರಚನಾಕಾಲವು ಕ್ರಿ.ಪೂ.೨-೩ನೆಯ ಶತಮಾನವೆಂದು ವಿದ್ವಾಂಸರ ಅಭಿಪ್ರಾಯವಿದೆ. ಕ್ರಿ.ಪೂ.೨ನೆಯ ಶತಮಾನದ ಸುಮಾರಿಗೆ ಬರೆಯಲ್ಪಟ್ಟ ‘ಮೃಚ್ಛಕಟಿಕಮ್’ ನಾಟಕದಲ್ಲಿ ಕರ್ಣಾಟರ ಉಲ್ಲೇಖವಿದೆ. ಇದೇ ಸುಮಾರಿಗೆ ಬರೆಯಲ್ಪಟ್ಟ ಒಂದು ಗ್ರೀಕ ಪ್ರಹಸನದಲ್ಲಿ  ಕನ್ನಡ ಮಾತುಗಳು ಬಂದಿವೆ. ಸ್ಕಂದ ಪುರಾಣದಲ್ಲಿ ಕರ್ಣಾಟನೆಂಬ ರಾಕ್ಷಸನು ಈ ನಾಡಿನ ಸಂಸ್ಥಾಪಕನೆಂದು ಹೇಳಲಾಗಿದೆ.

ಮನುವು ತನ್ನ ಕಾಲದ ವ್ರಾತ್ಯ ಕ್ಷತ್ರಿಯರ ಪಂಗಡಗಳನ್ನು ವಿವರಿಸುತ್ತ ಅವರಲ್ಲಿ ಕರಣರು ಮತ್ತು ನಟರು ಎಂದು ಎರಡು ಬಗೆಗಳು ಇದ್ದುದನ್ನು ಹೇಳುತ್ತಾನೆ. ಮನುಸ್ಮೃತಿಯಲ್ಲಿ ಉಲ್ಲೇಖಿತರಾದ ಕರಣರು ಹಾಗು ಮತ್ಸ್ಯಪುರಾಣದ ಕರ್ಣರು ಬೇರೆಯಲ್ಲ. ಮತ್ಸ್ಯಪುರಾಣದಲ್ಲಿ ಇವರನ್ನು ತುರ್ವಸುವಿನ ಪೀಳಿಗೆಯವರೆಂದು ಕರೆಯಲಾಗಿದೆ. ಕರ್ಣರು ಚೋಳ, ಪಾಂಡ್ಯ ಹಾಗು ಕೇರಳರ ನೆರೆಯಲ್ಲಿ ನೆಲೆಸಿದವರು ಎಂದು ವರ್ಣಿಸಲಾಗಿದೆ.

ಮನುಸ್ಮೃತಿಯಲ್ಲಿ ಕರಣರೊಡನೆ ಝಲ್ಲ, ಮಲ್ಲ, ದ್ರವಿಡರ ಉಲ್ಲೇಖವಿದೆ. ಇವರೆಲ್ಲ ವ್ರಾತ್ಯಕ್ಷತ್ರಿಯರೆನ್ನಲಾಗಿದೆ. ಶ್ರೀ ರಾಜವಾಡೆಯವರ ಅಭಿಪ್ರಾಯದ ಮೇರೆಗೆ ಕರಣರು ಮತ್ತು ನಟರು ಸೇರಿ ಒಂದೇ ಜನಾಂಗವಾಗಿ, ಅದುವೆ ಕರ್ಣಾಟವಾಯಿತು. (ಬೌದ್ಧಗ್ರಂಥಗಳಲ್ಲಿಮಹಾವೀರನಿಗೆ ‘ನಾಟ್ಟಪುತ್ತ’ ಎಂದು ಕರೆಯಲಾಗಿದೆ.) ನಾಟ್ಟರೆ ನಾಡವರು. ಇವರೇ ಈ ದೇಶದ ಮೂಲನಿವಾಸಿಗಳು. ‘ನಾಟಃ ಕರ್ಣಾಟದೇಶೇ’ ಎಂದು ‘ಶಬ್ದರತ್ನಾಕರ’ವು ಹೇಳುತ್ತದೆ. ಕನ್ನಡ ನಾಟರು ಅಂದರೆ ನಾಡವರು ಅಂದರೆ ರಾಷ್ಟ್ರಿಕರು ಸೌರಾಷ್ಟ್ರದವರೆಗೆ ಇದ್ದುದರಿಂದಲೇ ಒಮ್ಮೆ ದ್ವಾರಕೆಯವರೆಗಿನ ನಾಡು ಕುಂತಲ ಎಂದು ಗಣಿಸಲ್ಪಡುತ್ತಿತ್ತು.

ನಕಾರವು ಲಕಾರವಾಗಿ ಪರಿಣಮಿಸುವುದನ್ನು ನೋಡಿದ್ದೇವೆ. ಆದುದರಿಂದ ಲಾಟ ಇದು ನಾಟ(=ನಾಡು) ಎನ್ನುವ ಪದದಿಂದ ಬಂದಿರಬೇಕು. ಲಾಟ ಇದರ ಮೂಲರೂಪವು ಲಟ್ಟ ಎಂದಿರುವ ಸಂಭವವಿದೆ. ರಾಷ್ಟ್ರಕೂಟರ ಹಲವು ಶಾಸನಗಳಲ್ಲಿ ಬರುವ ‘ಲಟ್ಟಲೂರು’ ಇದು ಈಗಿನ ‘ಲಾತೂರು’ ಆಗಿರಬಹುದೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ರಟ್ಟ ಎನ್ನುವ ಪದವೇ ಅಪಭ್ರಂಶವಾಗಿ ಲಟ್ಟ-ಲಾಟ ಎಂದು ಆಗಿರಬಹುದೆಂದು ತೋರುತ್ತದೆ.  ರಠಿಕ ಎನ್ನುವ ಶಬ್ದವೇ ರಟ್ಟ ಎಂದು ಆಗಿರಬಹುದು. ಈ ರಠಿಕ ಪದವನ್ನು ಭಿನ್ನ ಭಿನ್ನ ಶಾಸನಗಳಲ್ಲಿ ರಠಕ, ಧೌಲಿ, ರಿಷ್ಟಿಕ ಎಂದೆಲ್ಲ ಬರೆಯಲಾಗಿದೆ. (ಬಂಗಾಲದಲ್ಲಿ ಒಂದು ಪ್ರಾಚೀನ ಲಾಟ ದೇಶವಿತ್ತು. ಈ ಹೆಸರು  ಲಾಡ, ರಾಡ, ರಾಧ ಎಂದೆಲ್ಲ ಬದಲಾಗಿದೆ.)  ಈ ರಟ್ಟರೇ ರಾಷ್ಟ್ರಕೂಟರು. ತಮ್ಮ ಶಾಸನಗಳಲ್ಲಿ ಅವರು ತಮ್ಮನ್ನು ‘ರಟ್ಟವಂಶೋದ್ಭವ:’ ಎಂದು ಹೇಳಿಕೊಂಡಿದ್ದಾರೆ. ಆದಕಾರಣ ಲಾಟದೇಶವು ರಾಷ್ಟ್ರಕೂಟರ ಮೂಲಸ್ಥಾನವಾಗಿತ್ತು ಎನ್ನಲು ಅಡ್ಡಿ ಇಲ್ಲ. ರಾಷ್ಟ್ರಕೂಟರು ತಮ್ಮನ್ನು ‘ಕುಟುಂಬಿಗಳು’ ಎಂದು ಹೇಳಿಕೊಂಡಿದ್ದಾರೆ.  ಕುಟುಂಬಿಗಳು ಎಂದರೆ ‘ಕುಡುವರು’ ಅರ್ಥಾತ್ ಒಕ್ಕಲಿಗರು. ಮಹಾರಾಷ್ಟ್ರದಲ್ಲಿ ಇವರು ಕುಳುಂಬಿಗಳು ಮತ್ತು ಗುಜರಾತದಲ್ಲಿ ಕುಣಬಿಗಳು. ಛತ್ರಪತಿ ಶಿವಾಜಿಯ ರಾಜ್ಯದ ಉತ್ತರ ಭಾಗದಲ್ಲಿ, ಅಂದರೆ ಮುಂಬಯಿಯಿಂದ ಸೂರತದವರೆಗಿದ್ದ ದೇಶದಲ್ಲಿ  ‘ಕೋಳಿನಾಡು’ ಎನ್ನುವ ಪ್ರದೇಶವು ಸೇರಿಕೊಂಡಿತ್ತು. ಕೋಳಿ ಹಾಗು ನಾಡು ಇವೆರಡೂ ಕನ್ನಡ ಪದಗಳು ಎನ್ನುವುದನ್ನು ಗಮನಿಸಿರಿ. ಗುಜರಾತದಲ್ಲಿ ಸಹ ‘ಕೋಳಿನಾಡ’ ಎನ್ನುವ ವ್ಯಕ್ತಿಗಳಿದ್ದಾರೆ. ನಮ್ಮಲ್ಲಿ ‘ಕೋಳಿವಾಡ’ ಎನ್ನುವ ಊರಿದ್ದು, ಅದೇ ಅಡ್ಡಹೆಸರಿನ ವ್ಯಕ್ತಿಗಳಿದ್ದಾರೆ.  

ಪ್ರಾಚೀನತಮ ಉಲ್ಲೇಖಗಳಲ್ಲಿ ರಾಷ್ಟ್ರಿಕರ ಹಾಗು ಭೋಜಕರ ಹೆಸರುಗಳು ಬರುತ್ತವೆ. ಭೋಜಕರು ಯದುವಂಶಕ್ಕೆ ಸಂಬಂಧಪಟ್ಟವರು ಎಂದು ಪುರಾಣಗಳು ಹೇಳುತ್ತವೆ. ಇವರು ವರಾಡದಲ್ಲಿ ಆಳುತ್ತಿದ್ದರು. ಭೋಜಕರಿಗೆ ಹತ್ತಿರದಲ್ಲಿಯೆ ರಾಷ್ಟ್ರಿಕರ ನಾಡು. ವಾಲ್ಮೀಕಿ ರಾಮಾಯಣದಲ್ಲಿ ‘ವಿದರ್ಭಾನ್ ಋಷಿಕಾನ್ ಚೈವ’ ಎಂದಿದೆ. ಈ ವಿದರ್ಭರು ಭೋಜಕರು. ಆದುದರಿಂದ ಋಷಿಕರೆಂದರೆ ರಾಷ್ಟ್ರಿಕರು.

ಪ್ರಾಚೀನ ಕಾಲದಲ್ಲಿ ಬಂಗಾಳದ ಒಂದು ಪ್ರದೇಶಕ್ಕೆ ಗೌಡ ಎನ್ನುವ ಹೆಸರಿತ್ತು. ಈ ಹೆಸರು ಬರಲು ಕಾರಣರಾದ  ಗೌಡರು(=ಗೌಳರು) ಯಾರು?  ಬಂಗಾಲದಲ್ಲಿ ಪಟ್ಟಿ, ಪಾಡಾ, ಪಾರಾ, ಪಾಟಕ, ಹಟ್ಟಿ, ಊರು, ಸಂತಿ, ಕಂಡಿ, ಗಡ್ಡಾ, ಪೊಲ ಎನ್ನುವ ಗ್ರಾಮನಾಮಗಳಿಗೆ ಕಾರಣರಾದ ಪಟ್ಟಿಗಳು (ಪತ್ತಿಗಳು) ಎಂದರೆ ಹಟ್ಟಿಕಾರ ಗೋವಳರಿಂದಲೇ ಆ ನಾಡಿಗೆ ಗೌಡ ಎನ್ನುವ ಹೆಸರು ಬಂದಿರಬೇಕು. ಇನ್ನು ಬಂಗಾಲವನ್ನು ಆಳಿದ ಸೇನ ಬಲ್ಲಾಳರು ಕರ್ಣಾಟರು.   

ಪಟ್ಟಿ, ಪಾಡಿಯು ನಮ್ಮ ನಾಡಿನ ಮೊದಲಿಗರ ಆರಂಭದ ಸ್ಥಿತಿಯನ್ನು ಅಂದರೆ ದನಗಾರಿಕೆಯನ್ನು ತೋರಿಸಿದರೆ, ಕುಡಿ ಅಥವಾ ಕುಡು ಎನ್ನುವುದು ಅದರ ಮುಂದಿನ ಸ್ಥಿತಿಯನ್ನು ತೋರಿಸುವುದು. ಕುಡಿ ಅಥವಾ ಕುರುಡು ಎನ್ನುವುದು ಒಕ್ಕಲುತನದ ಆರಂಭವನ್ನು ಹೇಳುವ ಸ್ಥಿತಿ. ಒಕ್ಕಲಿಕ್ಕು ಎಂದರೆ ಕಡಿ, ಕತ್ತರಿಸು. (ಒಕ್ಕು ಎಂದರೆ ತೆನೆಗಳನ್ನು ಕತ್ತರಿಸಿ ಗುಂಪು ಮಾಡುವುದು.)

ಕುಡುವ ಎಂದರೆ ಒಕ್ಕಲು; ಒಕ್ಕಲು ಎಂದರೆ ಕುಡುವ. ಇವರೇ ನಮ್ಮ ನಾಡಿನ ಕುಳಗಳು; ಸಂಸ್ಕೃತದಲ್ಲಿ ಕುಟುಂಬಿಗಳು
(--ಮೂಲರೂಪವು ಕುಡು ಪದದಲ್ಲಿದೆ--). ಇವರನ್ನು ಮರಾಠಿಯಲ್ಲಿ ಕುಣಬಿ, ಕುಳಬಿ ಎಂದು ಕರೆದರೆ, ಗುಜರಾತಿಯಲ್ಲಿ ಕಣಬಿ ಎನ್ನುತ್ತಾರೆ. ( ‘ಕುಡು’ವಿನಿಂದ ಕುಡುಂಬ ಹಾಗು ಕುಟುಂಬ; ‘ಕುಳ’ದಿಂದ ಕುಳುಂಬ>> ಕುರುಂಬ>>ಕುರುಬ.)

ಸಸ್ಯಾದಿಗಳನ್ನು ಕಡಿದು, ತೆನೆಗಳನ್ನು ಒಕ್ಕಿ, ಒಕ್ಕಲಾಗತೊಡಗಿದ ಪಟ್ಟಿಕಾರನು ಒಕ್ಕಲಿಗನಾದನು; ಕುಡಿಗಳನ್ನು ಕಟ್ಟಿಕೊಂಡನು.
ಪಾಡಿಗಳು, ನಂದಗ್ರಾಮಗಳು, ಗೋಪಾಡಿಗಳು, ಕುರಿಗ್ರಾಮಗಳು ಮೊದಲಾದವು ನಮ್ಮ ನಾಡಿನ ದನಗಾರಿಕೆಯನ್ನು ಸೂಚಿಸುವಂತೆ, ಕುಡಿ, ಗುಡಿಗಳು ಒಕ್ಕಲುತನವನ್ನು ಸೂಚಿಸುತ್ತವೆ. ಉದಾ: ಕುಡಚಿ, ಗೊಡಚಿ, ಗುಡಿಬಂಡೆ, ಗುಡಿಸಾಗರ ಇತ್ಯಾದಿ. ಸಂಸ್ಕೃತದ ಖೇಡ ಸಹ ಇದೇ ಅರ್ಥವನ್ನು ಹೊಂದಿದೆ.

ಕುಡಿಯ ನಂತರ ಪೊಲ, ಪೊಳಲುಗಳು ಬೆಳೆದು ಬಂದವು. ಪೊಲ ಇದು ಪುಲ್ ಅಂದರೆ ಹುಲ್ಲು ಎನ್ನುವುದರಿಂದ ಬಂದಿದೆ.  ಪೊಳಲ್ ಎಂದರೆ ತಮಿಳಿನಲ್ಲಿ ತೋಟ. ಕೆರೆ, ಕಟ್ಟೆ, ಕೊಳ, ಹೊಂಡ  ಇತ್ಯಾದಿ ಒಕ್ಕಲುತನಕ್ಕೆ ಆಧಾರವಾದ ಬೆಳವಣಿಗೆಗಳು.  ಕುಡುವರ ಏಳ್ಗೆಯಾದಂತೆ ಪಟ್ಟಿಯು ವ್ಯಾಪಾರಕ್ಕೆ ಎಡೆಯಾಗಿ, ಪೇಟೆಯಾಯಿತು.

ಆರ್ಯ ಮತ್ತು ಹಟ್ಟಿಕಾರರ ನಡುವಿನ ವಿವಾಹಸಂಬಂಧಗಳಿಂದ ಆರಿಯ ಎನ್ನುವ ಮಿಶ್ರಕುಲದ ನಿರ್ಮಾಣವಾಯಿತು. ಈ ಮಿಶ್ರಕುಲದ ಭಾಷೆಯೇ ಪ್ರಾಕೃತ ಭಾಷೆ. ಆರ್ಯರ ಭಾಷೆಗೆ ನಾನು ‘ಸಂಸ್ಕೃತ ಭಾಷೆ’ ಎಂದು ಕರೆಯುವದಿಲ್ಲ. ಇದಕ್ಕೆ ಒಂದು ಕಾರಣವಿದೆ. ‘ಸಂಸ್ಕೃತ’ ಈ ಪದದ ಅರ್ಥ processed, refined ಎಂದು ಆಗುತ್ತದೆ. ಆಡುಮಾತಿಗೂ, ವ್ಯಾಕರಣಶುದ್ಧ ಭಾಷೆಗೂ ತುಂಬ ಅಂತರವಿದೆ. ಸಂಸ್ಕೃತ ವೈಯಾಕರಣಿಗಳು ಆಡುನುಡಿಗೆ ‘ಪ್ರಾಕೃತ’(=ಪ್ರಕೃತಿಸಹಜವಾದದ್ದು=natural) ಎಂದೂ, ವ್ಯಾಕರಣಶುದ್ಧ ಭಾಷೆಗೆ ಸಂಸ್ಕೃತ ಎಂದೂ ಕರೆದರು. ವಾಸ್ತವವಾಗಿ ಇದು ಕೇವಲ ಆರ್ಯಭಾಷೆ.

ಆಧುನಿಕ ಪ್ರಾಕೃತ ಭಾಷೆಯ ಹುಟ್ಟಿಗೆ, ಆರ್ಯೀಕರಣ ಹೊಂದಿದ ಹಟ್ಟಿಕಾರ ಜನರೆ ಅಂದರೆ ಕನ್ನಡಿಗರೆ ಕಾರಣರು. ಆರ್ಯರ ಪ್ರಭಾವಕ್ಕೆ, ಪ್ರಭುತ್ವಕ್ಕೆ ಒಳಗಾದ ಹಟ್ಟಿಕಾರರು ಅಂದರೆ ಕನ್ನಾಡವರ ಮೊದಲಿಗರಾದ ಯದು-ತುರ್ವರು ಸಂಸ್ಕೃತ-ಪ್ರಾಕೃತಗಳಿಗೆ ಮನ ಸೋತರು. ಇವರು ಆರ್ಯಭಾಷೆಯನ್ನು ತಮ್ಮದಾಗಿ ಮಾಡಿಕೊಳ್ಳುವಾಗ ವ್ರಜಭಾಷೆಯು ಹುಟ್ಟಿತು. ಯದು-ತುರ್ವರ ಹಟ್ಟಿಗಳಿದ್ದ ಯಮುನಾ ನದಿಯ ದಂಡೆಯ ಊರಿನ ಹೆಸರು ಮಥುರಾ, ಅಂದರೆ ಮಥೂರು! ಇದನ್ನು ಮತ್ತೂರಿನೊಡನೆ ಹೋಲಿಸಿರಿ. ‘ಮಾ’ ಎಂದರೆ ದನಗಳು ಎನ್ನುವ ಅರ್ಥದ ಪದವೊಂದು ತಮಿಳಿನಲ್ಲಿದೆ.  ಮಥುರಾ ಅಥವಾ ಮತ್ತೂರು ಎಂದರೆ ದನಗಳ ಹಟ್ಟಿ.  ವೃಂದಾವನದಲ್ಲಿಯ ‘ವೃಂದ’ ಪದಕ್ಕೆ ಗುಂಪು ಎನ್ನುವ ಅರ್ಥವೂ ಇದೆ. ವೃಂದಾವನವೆಂದರೆ ಗುಂಪಾಗಿ ಇರುವ ವನಭಾಗ. ಮಥುರೆಯ ಸಮೀಪದಲ್ಲಿ ಗ್ವಾಲೇರಿ ಇದೆ. ಗ್ವಾಲೇರಿ ಎಂದರೆ ಗೌಳಿ-ಏರಿ.  ಇದು ಸಿಂಧರ ರಾಜಧಾನಿ. ಈ ಸಿಂದರು ಪಾಟೀಲರು. ಮಹದಾಜಿ ಸಿಂದನು ಪಾಟೀಲ-ಬುವಾ ಎಂದು ಹೆಸರಾಗಿದ್ದನು. ಪಾಟೀಲ ಎಂದರೆ ‘ಪಟ್ಟಿ’ಯಲ್ಲಿ ಇರುವ ವ್ಯಕ್ತಿ. ಈ ಪದವು ತನ್ನಂತರದಲ್ಲಿ ‘ಗ್ರಾಮಪ್ರಮುಖ’ ಎನ್ನುವ ಅರ್ಥವನ್ನು ಪಡೆಯಿತು. 

ಆರ್ಯರ ನಂತರವೂ ಸಹ ಅನೇಕ ಜನಾಂಗಗಳು ಭಾರತಕ್ಕೆ ಹೊರಗಿನಿಂದ ಬಂದವು. ಆಭೀರರು ಭಾರತೀಯರಲ್ಲವಾದರೂ, ಈ ದೇಶದಲ್ಲಿ ಬಂದು ನೆಲೆಸಿದ ಬಳಿಕ, ತಾವು ಯದುವಂಶೀಯರೆಂದು ಹೇಳಿಕೊಳ್ಳಲಾರಂಭಿಸಿದರು. ಎಮ್ಮಿಗರು ಒಂದು ಕಾಲಕ್ಕೆ ಬೇರೆ ಪಂಗಡದವರಾಗಿದ್ದರೂ, ಮುಂದೆ ತುರುಕಾರರಲ್ಲಿ ಬೆರೆತಿರಬೇಕು. ನರ್ಮದಾ ನದಿತೀರದಲ್ಲಿಮಾಹಿಷ್ಮತಿ ಪಟ್ಟಣವಿದ್ದರೆ, ದಕ್ಷಿಣದಲ್ಲಿ ಮೈಸೂರು ಇದೆ.(ಮ್ಹೈಸೂರು=ಎಮ್ಮೆಗಳ ಊರು). ಮಾಹಿಷ್ಮತಿ ಪಟ್ಟಣದ ರಾಜನು ಕಾರ್ತವೀರ್ಯಾರ್ಜುನನಾಗಿದ್ದರೆ, ಮೈಸೂರಿನ ಒಡೆಯನು ಮಹಿಷಾಸುರ ಎನ್ನುವ ರಾಕ್ಷಸನು. ಈ ಎರಡು ಊರುಗಳ ನಡುವೆ ಮ್ಹೈಸಾಳ, ಎಮ್ಮಿಗನೂರು  ಮೊದಲಾದ ಹೆಸರಿನ ಅನೇಕ ಊರುಗಳಿವೆ.

ಇಂದ್ರನು ಮೊದಲು ಪರ್ವತದ ವೈರಿ. ಆತನು ತನ್ನ ವಜ್ರದಿಂದ ಪರ್ವತಗಳ ಪಕ್ಕಗಳನ್ನು ಕಡಿದ ಕತೆಯಿದೆ. ಆದರೆ ಋಗ್ವೇದದಲ್ಲಿ ‘ಇಂದ್ರಾ-ಪರ್ವತಾ’ ಎನ್ನುವ ಜೋಡಿ ದೇವತೆಗಳ ವರ್ಣನೆ ಇರುವುದು, ಹಟ್ಟಿಕಾರರ ಹಾಗು ಆರ್ಯರ ಸಮ್ಮಿಲನವಾಗಿರುವುದನ್ನು ತೋರಿಸುತ್ತದೆ.

ಯಾದವರು ಇಂದ್ರನ ಪೂಜೆ ಮಾಡದೆ ಗಿರಿಪೂಜೆಯನ್ನು ಮಾಡಿರುವುದು, ಅವರ ವೈರವನ್ನು ತೋರಿಸುವುದು. ದಕ್ಷನ ಮಗಳಾದ ಸತಿಯು ಗಿರಿವಾಸಿ ಶಿವನನ್ನು ಮದುವೆ ಮಾಡಿಕೊಂಡಾಗ, ದಕ್ಷನು ಶಿವನನ್ನು ಯಜ್ಞಕ್ಕೆ ಆಹ್ವಾನಿಸಲಿಲ್ಲ. ವೀರಭದ್ರರು ಆ ಯಜ್ಞವನ್ನು ಹಾಳು ಮಾಡಿದರು. ವೀರಭದ್ರನು ಕುರುಬರ ದೇವತೆ.

ಮಲೆಯರೆಂದು ಪರ್ವತೇಯರಿಗೆ ಹೆಸರು. ಎಲ್ಲ ಹಟ್ಟಿಕಾರರು ಇಂದ್ರನಿಗೆ ತಲೆವಾಗಲಿಲ್ಲ. ಇಂತಹವರೊಡನೆ ಆದ ಕಲಹದ ಕತೆಯೆ (ಮಲ್ಲಾಸುರನನ್ನು ಸಂಹರಿಸಿದ ಕತೆ), ‘ಮಲ್ಲಾರಿ ಪುರಾಣ’ದಲ್ಲಿದೆ. ಮಲ್ಲಾಸುರ ಎನ್ನುವುದು  ಮಲ್ಲ ಕುಲದವರ ಸಂಕೇತ. ‘ಮಲ್ಹಾರಿ’ ಎನ್ನುವುದು ಆರಿಯರ ಪರಂಪರೆಯಲ್ಲಿ ಇರುವ ಹೆಸರು. ಇದೇ ದೇವತೆಗೆ ಹಟ್ಟಿಕಾರರು ಮಲ್ಲಯ್ಯನೆಂದು ಕರೆಯುತ್ತಾರೆ. ಈ ಮಲ್ಲಾರಿ ದೇವತೆಯು ಶಿವನ ಅವತಾರವೆಂದು ಗ್ರಹಿಕೆ ಇದ್ದರೂ, ಆ ದೇವತೆಯ ವಾಹನಗಳನ್ನು ನೋಡಿದರೆ, ಅದರಲ್ಲಿ ಇಂದ್ರನ ಕುರುಹುಗಳೂ ಕಾಣುವುವು. ಹಟ್ಟಿಕಾರರಲ್ಲಿ ಕುರುವರು ಈ ದೇವತೆಯ ಉಪಾಸಕರು. ಮರಾಠರು ಮಲ್ಲಾರಿ ಅಥವಾ ಖಂಡೋಬನೆಂದು  ಈ ದೇವತೆಯನ್ನು ಪೂಜಿಸುತ್ತಾರೆ. ಸೋತವರು ಗೆದ್ದವರ ದೇವತೆಗಳನ್ನು ಸ್ವೀಕರಿಸುವ ರೀತಿಯನ್ನು ಇಲ್ಲಿ ಕಾಣಬಹುದು. ಆದರೆ ಸೋತಂತಹ ಈ ಹಟ್ಟಿಕಾರರು ತುಂಬ ಚಾಣಾಕ್ಷತನದಿಂದ ತಮ್ಮ ದೇವತೆಗಳನ್ನು ಆರ್ಯದೇವತೆಗಳಲ್ಲಿ ಸೇರಿಸಿದರು ಎಂದು ಶ್ರೀ ಶಂ.ಬಾ. ಜೋಶಿಯವರು ಸಿದ್ಧ ಮಾಡಿ ತೋರಿಸಿದ್ದಾರೆ.

ಮೊಹೆಂಜೊದಾರೊದಲ್ಲಿ ದೊರೆತ ಕಲ್ಲಿನ ಎರಡು ಅರ್ಧ ಪುತ್ತಳಿಗಳು ಧ್ಯಾನಮೂರ್ತಿಗಳಾಗಿವೆ ಎಂದು ಕೋಲಕತ್ತೆಯ ಆರ್ಕಿಯಾಲಾಜಿಕಲ ಮ್ಯೂಜಿಯಮ್ಮಿನ ಸುಪರಿಂಟೆಂಡಂಟರಾದ  ಚಂದಾ ಅವರು ಅಭಿಪ್ರಾಯಪಟ್ಟಿದ್ದಾರೆ. ಯೋಗಸಿದ್ಧರು, ಜಂಗಮ ಯತಿಗಳು ಮೊದಲಾದವು ವೇದಪೂರ್ವ ಪದ್ಧತಿಗಳಾಗಿವೆ. ಕನ್ನಾಡಿನಲ್ಲಿರುವ ಅನೇಕ ಊರುಗಳ ಹೆಸರುಗಳು ಈ ಸಿದ್ಧಪುರುಷರ ಪ್ರಭಾವಸೂಚಕವಾಗಿವೆ. ಕುರುವರು ವೀರಶಿವನ ಭಕ್ತರು. ಇವರು ವೀರ‘ನಾಯಕ’ರು. ಈ ವೀರನೇ ‘ಬೀರ’ನಾಗಿ ಮತ್ತೆ ಸಂಸ್ಕೃತರೂಪ ತಾಳಿ ಭೈರವೇಶ್ವರನಾಗಿರಬಹುದು. ಭೈರವೇಶ್ವರನು ಕ್ಷೇತ್ರಪಾಲಕ. ಅಂದರೆ ಊರ ಕಾವಲುಗಾರ, ಅಂದರೆ ಹಳಬ-ಕುರುಬ. ಮಹಾರಾಷ್ಟ್ರದಲ್ಲಿ ‘ಹಳಬ’ ಕುಲಗಳಿವೆ. ಇವರ ಕೆಲಸ ಊರ ಗೌಡರು ಹೇಳಿದ ಊರ ಕೆಲಸಗಳ ನಿರ್ವಹಣೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಹಳೆಪೈಕ’ರಿದ್ದಾರೆ. ಮೈಲಾರಗಳು ಬಹುತೇಕವಾಗಿ ಗುಡ್ಡದ ಮೆಲೆ ಅಥವಾ ಪಕ್ಕದಲ್ಲಿವೆ.  ಕಲ್ಲೇಶ, ಕಲ್ಲಿನಾಥ, ಕಲ್ಲೇಶ್ವರ ಇವು ನಿಜವಾಗಿಯೂ ‘ಕಳ್ಳು’ ಅಂದರ ‘ಹಾಲಿ’ಗೆ ಸಂಬಂಧಿಸಿದವು. ಕಲ್ಲಪ್ಪನೆಂದರೆ, ಕಳ್ಳಪ್ಪ ಅರ್ಥಾತ್ ಹಾಲಪ್ಪ.  ಕಲ್ಲಿನಾಥನ ದೇವಸ್ಥಾನಗಳಿಗೇ ಮೂಲಸ್ಥಾನದ ದೇವರು ಎನ್ನುವ ಪರ್ಯಾಯ ನಾಮವಿದ್ದದ್ದು ಅರ್ಥಪೂರ್ಣವಾಗಿದೆ.  ಕಳವರು ಈ ನಾಡ ಮೂಲಿಗರು. ಇದು ಅವರ ಮೂಲಸ್ಥಾನದ ದೇವರು.

ಗಣಗಳು ಹಟ್ಟಿಕಾರರ ವೈಶಿಷ್ಟ್ಯ. ಪುರಾತನಕಾಲದ ಯಾದವರಲ್ಲಿ ಇದೇ ಬಗೆಯಾದ ನಡೆವಳಿ ಇದ್ದಿತು.  ವೃಷ್ಣಿಗಳಲ್ಲಿ ರಾಜನಿಲ್ಲ. ದ್ರಾವಿಡ ಭಾಷೆಯಲ್ಲಿ ‘ರಾಜ’ ಶಬ್ದವಿಲ್ಲ. ಕೃಷ್ಣನು ಯಾದವರ ಒಂದು ಗುಂಪಿನ ಅಧ್ಯಕ್ಷನಾಗಿದ್ದನು. ‘ಹಿಂದು ಪೊಲಿಟಿ’ ಎನ್ನುವ ಗ್ರಂಥದಲ್ಲಿ ಜಯಸ್ವಾಲರು ಇದನ್ನು ಸವಿಸ್ತಾರವಾಗಿ ಚರ್ಚಿಸಿದ್ದಾರೆ.

ಹಟ್ಟಿಕಾರರಲ್ಲಿ ಹೆಣ್ಣುದೇವರ ಆರಾಧನೆ ವಿಶೇಷ. ಮಾತೃಪ್ರಧಾನ ಕುಟುಂಬ ಪದ್ಧತಿಯು ಹಟ್ಟಿಕಾರರದು. ಕುರುವರಲ್ಲಿ ಮತ್ತು ಯಾದವರಲ್ಲಿ ತಾಯಿಯಿಂದ ಹೆಸರು ಹೇಳುವ ಪದ್ಧತಿ ಇದೆ. ಆದುದರಿಂದಲೇ ಶ್ರೀಕೃಷ್ಣನು ದೇವಕೀನಂದನನಾಗಿದ್ದಾನೆ. ರೇವಾ (=ನರ್ಮದಾ) ತೀರದಿಂದ ಮೈಸೂರವರೆಗೂ ಎಲ್ಲಮ್ಮನ ಭಕ್ತರಿದ್ದಾರೆ. ಖಾನದೇಶ-ವರ್ಹಾಟದಲ್ಲಿ ‘ಎಲ್ಲೂ ಆಯಿ’ ಎನ್ನುವ ದೇವತೆ ಇದ್ದಾಳೆ. ‘ಎಲ್ಲೋರಾ’ದ ಸರಿಯಾದ ಹೆಸರು ‘ಎಲ್ಲೂರು’.  ಎಲ್ಲಮ್ಮನ ಪೂಜೆ ಭೂದೇವಿಯ ಪೂಜೆ ಎಂದು ಶ್ರೀ ಅರಟಾಳ ರುದ್ರಗೌಡರು ಬರೆದಿದ್ದಾರೆ. ಅದು ನಿಜವಿದೆ. ಚಳಿಗಾಲದಲ್ಲಿ ಬೆಳೆ ಕೊಯ್ದಾಗ ರಂಡೆಹುಣ್ಣಿವೆ; ಚೈತ್ರದ ವಸಂತಾಗಮದಲ್ಲಿ ‘ಮುತ್ತೈದಿ ಹುಣ್ಣಿವೆ’.  ತನ್ನ ನಾಡನ್ನು ಸುಲಿಗೆಗಯ್ದದ್ದಕ್ಕಾಗಿ ಪರುಶರಾಮನು ದೇಶಾಭಿಮಾನದಿಂದ ಕ್ರೋಧಿತನಾಗಿ, ಕಾರ್ತವೀರ್ಯನ ಮೇಲೆ ಸೇಡು ತೀರಿಸಿಕೊಂಡಿದ್ದು ವಸ್ತುಸ್ಥಿತಿ.

ಇದು ನಮ್ಮ ಪುರಾಣಗಳಲ್ಲಿ ಕಾಣಸಿಗುವ ನಮ್ಮ ಇತಿಹಾಸ, ಕನ್ನಡಿಗರ ಪೂರ್ವೇತಿಹಾಸ!

[ಟಿಪ್ಪಣಿ: ಶ್ರೀ ಶಂ.ಬಾ. ಜೋಶಿಯವರು ಧಾರವಾಡದಲ್ಲಿಯ ಒಂದು ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಭಾಷಾಶಾಸ್ತ್ರ ಹಾಗು ವೇದ-ಪುರಾಣಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಸಂಶೋಧಿಸಿದವರಲ್ಲಿ ಇವರು ಅಗ್ರಗಣ್ಯರು. ತಮ್ಮಲ್ಲಿದ್ದ ಅಲ್ಪ-ಸ್ವಲ್ಪ ಹಣವನ್ನೇ ಸಂಶೋಧನೆಯ ಸಲುವಾಗಿ ಖರ್ಚು ಮಾಡಿ, ಆಸಾಮ, ಗುಜರಾತ ಮೊದಲಾದ ರಾಜ್ಯಗಳಲ್ಲಿ ಕನ್ನಡದ ನೆಲೆಗಳನ್ನು ಹುಡುಕಿ ತೋರಿಸಿದರು. ಈ ಲೇಖನವು ಆ ಮಹಾನುಭಾವರ ಸಂಶೋಧನೆಯನ್ನು ಆಧರಿಸಿದೆ. ಅಕಸ್ಮಾತ್, ಏನಾದರೂ ಲೋಪ-ದೋಷಗಳು ಆಗಿದ್ದರೆ, ಅವು ನನ್ನವು.)

10 comments:

Badarinath Palavalli said...

ಸ್ಥಳ ನಾಮಗಳ ಕುರಿತಂತೆ ಅಪಾರ ತಿಳುವಳಿಕೆ ಹೊಂದಿರುವ ನಿಮ್ಮ ವಿಶ್ಲೇಷಣೆಗಳನ್ನು ಓದುವುದೇ ಒಂದು ಸಂಭ್ರಮ ಸಾರ್.

ನಮ್ಮ ಕಛೇರಿಯಲ್ಲಿ ಕುಪೇಂದ್ರ ಹೆಸರಿನವರು ಇದ್ದಾರೆ. ಈಗ ಅವರ ಹೆಸರಿನ ಮೂಲ ಅರಿತಂತಾಯಿತು.

’ಭಾ ಇಲ್ಲಿ ಸಂಭವಿಸು....’ ಕವನದ ತುರುಪಟ್ಟಿ ನೆನಪಾಯಿತು.

‘ಮೃಚ್ಛಕಟಿಕಮ್’ ನಾಟಕದ ಕನ್ನಡ ಭಾವಾನುವಾದ ಯಾರಾದರೂ ಮಾಡಿದ್ದಾರೆಯೇ?

’ಕರಣರು ಮತ್ತು ನಟರು ಸೇರಿ ಒಂದೇ ಜನಾಂಗವಾಗಿ, ಅದುವೆ ಕರ್ಣಾಟವಾಯಿತು’ ಎನ್ನುವ ಮಾತನ್ನು ಯಾವತ್ತೂ ನಾನು ಗುರುತು ಇಟ್ಟುಕೊಳ್ಳುತ್ತೇನೆ.

ಈ ಮೂಲಕ ನಾವು ಶ್ರೀಯುತ. ಶಂ.ಬಾ. ಜೋಶಿಯವರಿಗೆ ನಮನ ಸಲ್ಲಿಸುತ್ತಿದ್ದೇವೆ.

shared at as guest post at:
https://www.facebook.com/photo.php?fbid=602047969839656&set=gm.483794418371780&type=1&theater

Subrahmanya said...

This is an informative and wonderfull article. Please keep writing Kaaka.

Thank U.

sunaath said...

ಬದರಿನಾಥರೆ,
‘ಮೃಚ್ಛಕಟಿಕಮ್’ ಒಂದು ಅದ್ಭುತವಾದ ನಾಟಕ. ಇದರ ಕನ್ನಡ ಅನುವಾದವು ಇದೆ. ಅನುವಾದಕರು ಯಾರು ಎನ್ನುವುದು ನೆನಪಿಲ್ಲ. ಈ ನಾಟಕವು ನಿಮಗೆ ಅತಿ ಹಳೆಯ ಪುಸ್ತಕಗಳನ್ನು ಮಾರುವ ಅಂಗಡಿಗಳಲ್ಲಿ ಅಥವಾ ಗ್ರಂಥಾಲಯದಲ್ಲಿ ಮಾತ್ರ ದೊರಕಬಹುದು.

sunaath said...

ಸುಬ್ರಹ್ಮಣ್ಯರೆ, ಧನ್ಯವಾದಗಳು. ಇತ್ತೀಚಿಗೆ ನಿಮ್ಮಿಂದ ಲೇಖನ ಬಂದಿಲ್ಲ. ಬೇಗನೇ ಬರಲಿ ಎನ್ನುವ ಹಕ್ಕೊತ್ತಾಯ ಮಾಡಲೆ?!

avyaktalakshana said...

ಸರ್,

ನಿಮ್ಮಲ್ಲಿ ಒಂದು ಕೋರಿಕೆ. ಫೇಸ್ ಬುಕ್ ನಲ್ಲಿ ಸಾಹಿತ್ಯಾಸಕ್ತ ಸ್ನೇಹಿತರು ಆಗಾಗ ಬರಹಗಳನ್ನು ಆಹ್ವಾನಿಸುತ್ತಿರುತ್ತಾರೆ. ಮೊನ್ನೆ ಹೀಗೆ ಆಯಿತು. ಕೆ.ಎಸ್.ನ ಅವರ ಸುಮಾರು ನೂರು ಕವಿತೆಗಳಬಗ್ಗೆ (ಒಬ್ಬೊಬ್ಬರು ಒಂದೊಂದು ಕವಿತೆ ಆಯ್ದುಕೊಂಡು) ಬರೆದು ಕೊಡಿ ಎಂದು ಆಹ್ವಾನಿಸಿದಾಗ ನನಗೆ ನಿಮ್ಮ ನೆನಪಾಯಿತು. ನೀವು ಅಲ್ಲಿ ಇಲ್ಲವೆಂದು ಕಾಣುತ್ತದೆ. ಆದರೆ ನಿಮ್ಮನ್ನು ಹೇಗೆ ತಲುಪಬೇಕೆಂದೇ ತಿಳಿಯದಾಯಿತು. ನನ್ನ ಸ್ನೇಹಿತರಿಗೆ ನಿಮ್ಮ ವಿಚಾರ ಹೇಳಿದೆ. ಅವರಿಗೂ ಗೊತ್ತಾಗಲಿಲ್ಲ. ಹಾಗಾಗಿ ಮುಂದೆ ಅಂತಹ ಸಂದರ್ಭಗಳಿದ್ದರೆ ನಿಮ್ಮನ್ನು ಸಂಪರ್ಕಿಸಲೋಸುಗ ಇಮೇಲ್ ಐಡಿ ಕೊಡಿ. ಇಲ್ಲಿ ಹೀಗೆ ಕೇಳಿದ್ದಕ್ಕೆ ನನಗೂ ಮುಜುಗರ ಆಗುತ್ತಿದೆ. ಆದರೆ ಬೇರೆ ಉಪಾಯ ಕಾಣಲಿಲ್ಲ! ಇದನ್ನು ಓದಿ ಬೇಕಾದರೆ ಡಿಲೀಟ್ ಮಾಡಿ. ಆಧರೆ ಇಮೇಲ್ ಐಡಿ ಕೊಡಿ. ನನ್ನದು @lsprajna@gmail.com

sunaath said...

ಪ್ರಜ್ಞಾ ಅವರೆ,
ನನ್ನ ID ಹೀಗಿದೆ:
sunaath@gmail.com
ನಿಮ್ಮ ವಿಶ್ವಾಸಕ್ಕೆ ಋಣಿಯಾಗಿದ್ದೇನೆ.

Badarinath Palavalli said...

ಹುಡುಕುತ್ತೇನೆ ಸಾರ. :-)

hamsanandi said...

ಸುನಾಥರೆ, ನೀವಿನ್ನೂ ಮಂಗೋಲಿಯಾ ಮತ್ತೆ ಇರಾಣದಿಂದ ದಾಳಿ ಮಾಡಿದ ಬೇಟೆಗಾರ ಆರ್ಯ ಜನಾಂಗ ಅಂತ ಹೇಳುವುದು ಸ್ವಲ್ಪ ಅಚ್ಚರಿಯಾಗುವಂತಿದೆ. ಒಂದು ಶತಮಾನದ ಹಿಂದೆ ಆ ಅಭಿಪ್ರಾಯವಿತ್ತೇನೋ ನಿಜ - ಆದರೆ ಇಂದು ತಿಳಿದಿರುವ ವಿಚಾರಗಳನ್ನು ನೋಡುವಾಗ, ಶಂಬಾ ಅವರ ಹಲವು ವಿಚಾರಗಳನ್ನು ಮತ್ತೆ ಹೊಸ ನೋಟದಲ್ಲಿ ನೋಡಬೇಕಾಗುತ್ತೆ.


ಮೃಚ್ಛ್ಹಕಟಿಕದ್ದು ಒಂದಕ್ಕಿಂತ ಹೆಚ್ಚು ಅನುವಾದಗಳಿವೆ ಕನ್ನಡದಲ್ಲಿ. ೧೯೭೦-೮೦ ರ ದಶಕದಲ್ಲಿ ಪರ್ವತವಾಣಿಯವರದ್ದೂ ಒಂದು ಅನುವಾದವಿದೆ. ಅವರ ಶಾಕುಂತಲ ಮತ್ತೆ ಮೃಚ್ಛ್ಹಕಟಿಕದ ಅನುವಾದಗಳು ಒಂದೇ ಪುಸ್ತಕದಲ್ಲಿ ಲಭ್ಯವಿತ್ತು.

hamsanandi said...

ಬದರೀನಾಥರೆ,

ನನಗೆ ನೆನಪಿರುವಂತೆ ಮೃಚ್ಛಕಟಿಕದಲ್ಲಿ, ಒಂದು ಪಾತ್ರದ ಮಾತುಗಳಲ್ಲಿ , "ಕರ್ಣಾಟ ಕಲಹಂ ಕರೋಮಿ" ಅಂತ ಒಂದು ಸಾಲು ಬರುತ್ತೆ. ಅದೇ ಇಲ್ಲಿರುವ ಪ್ರಸ್ತಾಪ. ಅದಕ್ಕಿಂತ ಹೆಚ್ಚಿಗೆ ಅಲ್ಲಿ ಏನೂ ವಿವರಗಳು ಇಲ್ಲ.

sunaath said...

ರಾಮಪ್ರಸಾದರೆ,
ಹೊಸ ವಿಚಾರಗಳು ಬಂದಿವೆ. ಆದರೆ ಹಳೆಯ ಅಭಿಪ್ರಾಯಗಳನ್ನು ತೆಗೆದು ಹಾಕಲು ಸಮರ್ಥವಾಗಿಲ್ಲ!