Monday, April 6, 2015

ಶಾಸಕರ ಹೊಣೆಗಾರಿಕೆ



ರಾಹುಲ ಗಾಂಧಿಯವರು ಅಮೇಠಿ ಕ್ಷೇತ್ರದಿಂದ ಚುನಾಯಿತರಾದ ಶಾಸಕರು. ಆ ಕ್ಷೇತ್ರದ ಜನತೆಗೆ ಇವರು ಜವಾಬುದಾರರು ಹಾಗು ಲೋಕಸಭೆಯು ನಿಗದಿಪಡಿಸಿದ ಕರ್ತವ್ಯಗಳಿಗೆ ಇವರು ಬಾಧ್ಯಸ್ಥರು. ಆದರೆ ಇವರು ಇತ್ತೀಚೆಗೆ ‘ಕಾಣದಂತೆ ಮಾಯವಾದನೊ ಶಿವಾ’ ಎಂದು ಮಾಯವಾಗಿ ಬಿಟ್ಟಿದ್ದಾರೆ. ಇದು ಅಕ್ಷಮ್ಯ ಕರ್ತವ್ಯಚ್ಯುತಿ. ಲೋಕಸಭೆಯ ಸದಸ್ಯರಾಗಿ ಇವರು ವೇತನ, ಭತ್ತೆ ಹಾಗು ಇತರ ಅನೇಕ  ಹೆಚ್ಚುವರಿ ಸೌಲಭ್ಯಗಳನ್ನು ಪಡೆಯುತ್ತಾರೆ. ತಮ್ಮ ದೀರ್ಘಕಾಲೀನ ಅನುಪಸ್ಥಿತಿಯಲ್ಲಿ ಈ ‘ಸಂಪಾದನೆ’ಯನ್ನು ಅವರು ತ್ಯಾಗ ಮಾಡುತ್ತಾರೆಯೆ?

ಒಬ್ಬ ಚುನಾಯಿತ ಶಾಸಕನು ತನ್ನ ಸಂಪೂಱ್ಣ ಸಮಯವನ್ನು ತನ್ನ ಕರ್ತವ್ಯಗಳಿಗೆ ಮೀಸಲಿಡಬೇಕು. ಯಾಕೆಂದರೆ ಅವನು ‘ಅರೆಕಾಲೀನ ಶಾಸಕ’ನಲ್ಲ. ಅವರು ತಾವು ಗಳಿಸಿದ ಆಸ್ತಿಯ ಬಗೆಗೆ ಪಾರದಱ್ಶಕರಾಗಿದ್ದರೆ ಸಾಲದು; ತಮ್ಮ ಸಮಯವಿನಿಯೋಗದ ಬಗೆಗೂ ಅವರು ಪಾರದಱ್ಶಕರಾಗಿರಬೇಕು. ಆದರೆ ನಮ್ಮ ಅನೇಕ ಶಾಸಕರು ಶಾಸನಸಭೆಯ ಅವಧಿಯಲ್ಲಿ ಮಾತ್ರ ರಾಜಧಾನಿಯಲ್ಲಿ ಇರುತ್ತಾರೆ. ಉಳಿದ ಸಮಯದಲ್ಲಿ ಅವರು ಎಲ್ಲಿ ಇರುತ್ತಾರೆ, ಏನು ಮಾಡುತ್ತಾರೆ ಎನ್ನುವುದು ನಮಗಾರಿಗೂ ತಿಳಿದಿರುವುದಿಲ್ಲ. ಕೇವಲ ಆಕಸ್ಮಿಕವಾಗಿ ಅವರ ‘ಹಾಲಿ ವಸ್ತಿ’ ನಮಗೆ ತಿಳಿದು ಬಿಡುತ್ತದೆ. ಉದಾಹರಣೆಗೆ ನಮ್ಮ ಶಾಸಕರೊಬ್ಬರು ಕೆಲ ವಱ್ಷಗಳ ಹಿಂದೆ ವಿದೇಶಪ್ರಯಾಣ ಮಾಡಿದ್ದು ತಿಳಿದು ಬಂದ ಕಾರಣವೆಂದರೆ, ಆ ದೇಶದಲ್ಲಿ ಅವರು ಏನೋ ತೊಂದರೆಯನ್ನು ಎದುರಿಸಿ, ಸರಕಾರದ ನೆರವನ್ನು ಕೋರಿದ್ದು!

ನಮ್ಮ ಮುಖ್ಯ ಮಂತ್ರಿ ಒಬ್ಬರು ಒಮ್ಮೆ ಸಿಂಗಪೂರಕ್ಕೆ ತೆರಳುತ್ತಿದ್ದವರು, ತುಱ್ತು ಕಾರಣದಿಂದ ಪ್ರಯಾಣವನ್ನು ರದ್ದುಗೊಳಿಸಿ, ಬೆಂಗಳೂರು ವಿಮಾನನಿಲ್ದಾಣದಲ್ಲಿಯೇ ಮರಳಿದರು. ಸೂಟು, ಬೂಟು ಹಾಕಿಕೊಂಡು ಮಿರಮಿರ ಮಿಂಚುತ್ತ,ಅವರು ಯಾವುದೋ ಖಾಸಗಿ ಉದ್ದೇಶದಿಂದ ವಿದೇಶಪ್ರವಾಸ ಕೈಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಅದು ಆರಂಭದಲ್ಲಿಯೇ ಮೊಟಕುಗೊಂಡಿತು. ಆ ಸಮಾಚಾರವನ್ನು ಹಾಗು ಅವರ ಮರಳುತ್ತಿರುವ ಚಿತ್ರವನ್ನು ನೋಡಿರದಿದ್ದರೆ, ನಮಗೆ ಅಂದರೆ ಕಱ್ನಾಟಕದ ಪ್ರಜೆಗಳಿಗೆ ಈ ವಿಷಯ ತಿಳಿಯುತ್ತಲೇ ಇರಲಿಲ್ಲ.

ಶಾಸಕರ ಸಮಯದ ಮೇಲೆ ಕ್ಷೇತ್ರದ ಜನತೆಗೆ ಅನಿಱ್ಬಂಧಿತ ಹಕ್ಕು ಇದೆ. ಆದುದರಿಂದ ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಎನ್ನುವದನ್ನು ತಿಳಿಯುವುದು ಪ್ರಜೆಗಳ ಅಧಿಕಾರವಾಗಿದೆ. ಅವರ ಪ್ರಯಾಣವು ಸರಕಾರಿ ಉದ್ದೇಶದ ಪ್ರಯಾಣವೊ ಅಥವಾ ಖಾಸಗಿ ಉದ್ದೇಶದ ಪ್ರಯಾಣವೊ ಎನ್ನುವುದನ್ನು ಅವರು ಸ್ಪಷ್ಟ ಪಡಿಸಬೇಕು. ಖಾಸಗಿ ಉದ್ದೇಶದ ಪ್ರಯಾಣವಾಗಿದ್ದರೆ, ಶಾಸಕರು ಆ ಖರ್ಚನ್ನು ತಮ್ಮ ಸ್ವಂತ ಜೇಬಿನಿಂದ ನಿಭಾಯಿಸುತ್ತಿದ್ದಾರೊ ಅಥವಾ ಬೇರೊಬ್ಬರಿಂದ ಪ್ರಾಯೋಜಿತರಾಗುತ್ತಿದ್ದಾರೊ ಎನ್ನುವುದನ್ನು ಪ್ರಜೆಗಳಿಗೆ ತಿಳಿಸಬೇಕು. ಸ್ವಂತ ಖಱ್ಚಾದರೆ, ಅಷ್ಟು ಹಣವನ್ನುಅವರು ಖಱ್ಚು ಮಾಡಲು ಹೇಗೆ ಶಕ್ತರಾದರು ಎನ್ನುವುದನ್ನು ಜನತೆ ತಿಳಿಯಬೇಕು. ಒಂದು ವೇಳೆ, ಖಾಸಗಿ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ಪ್ರಾಯೋಜಿತ ಪ್ರವಾಸವಾಗಿದ್ದರೆ, ಇದರಲ್ಲಿ ಏನಾದರೂ ‘ಪರಸ್ಪರ ಲಾಭ’ವಿದೆಯೋ (quid pro quo) ಎನ್ನುವುದರ ತನಿಖೆಯಾಗಬೇಕು.

ರಾಹುಲ ಗಾಂಧಿಯವರು ತಮ್ಮ ಕ್ಷೇತ್ರವಾದ ಅಮೇಠಿಯಿಂದ ಹಾಗು ಲೋಕಸಭೆಯ ಕಲಾಪಗಳಿಂದ ದೀಱ್ಘಕಾಲದವರೆಗೆ ದೂರವಾಗಿ ಉಳಿದಿದ್ದಾರೆ. ಅವರ ಹೊಗಳುಭಟ್ಟರು ಈ ಅನುಪಸ್ಥಿತಿಗೆ ಅನೇಕ ಪ್ರಶಂಸನೀಯ ಕಾರಣಗಳನ್ನು (ಉದಾಹರಣೆಗೆ ಆತ್ಮಾವಲೋಕನ, ಜ್ಞಾನಾರ್ಜನೆ ಇತ್ಯಾದಿ) ಕೊಡುತ್ತಿದ್ದಾರೆ. ಆದರೆ ಜನತೆ ಇದನ್ನು ನಂಬುವುದೆ? ಸೋನಿಯಾರಿಗೆ ಆದಂತೆ ರಾಹುಲ ಗಾಂಧಿಯವರಿಗೂ ಏನಾದರೂ ರೋಗವಾಗಿದೆಯೆ, ಅಥವಾ ಅವರು ಕೇವಲ ವಿಶ್ರಾಂತಿಗಾಗಿ ‘ಯಾರಿಗೂ ಹೇಳೋಣ ಬ್ಯಾಡಾ’ ಎಂದು ಎಲ್ಲಾದರೂ ಜಿಗಿದಿದ್ದಾರೆಯೊ ಎನ್ನುವಂತಹ ಸಂಶಯಗಳು ಜನರ ಮನಸ್ಸಿನಲ್ಲಿ ಏಳುವುದು ಸ್ವಾಭಾವಿಕವಾಗಿದೆ. ಅಥವಾ ಅವರು ನಿಜವಾಗಿಯೂ ಬೋಧಿವೃಕ್ಷದ ಕೆಳಗೆ ತಪಸ್ಸು ಮಾಡಲು ತೆರಳಿದ್ದಾರೊ? ಈ ಪ್ರಹಸನವನ್ನು ನೋಡಿದಾಗ, ವರಕವಿ ಬೇಂದ್ರೆಯವರ ಸಾಲೊಂದು ನೆನಪಿಗೆ ಬರುತ್ತದೆ:
‘ಬುದ್ಧ—
ಜಗವೆಲ್ಲ ಮಲಗಿರಲು, ಇವನೊಬ್ಬ ಎದ್ದ!’
ಸಿದ್ಧಾರ್ಥನು ಬುದ್ಧನಾದಂತೆ, ಸಿದ್ಧಾರ್ಥನ ಮಗನ ಹೆಸರನ್ನು ಇಟ್ಟುಕೊಂಡ ರಾಹುಲರೂ ಸಹ ಪ್ರಬುದ್ಧರಾಗಲಿ ಎಂದು ಹಾರೈಸುತ್ತೇನೆ. ನಮ್ಮ ಎಲ್ಲ ಶಾಸಕರು ಸಂಪೂಱ್ಣವಾಗಿ ಪಾರದಱ್ಶಕರಾಗಲಿ ಹಾಗು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

8 comments:

Badarinath Palavalli said...

ಒಬ್ಬ ಅಪ್ರಬುದ್ಧ ರಾಜಕಾರಣಿಯನ್ನು ಆರಿಸಿ ಕಳುಹಿಸಿದ ಅಮೇಠಿ ಕೊರಗುವಂತಿದೆ. ಜನ ಪ್ರತಿನಿಧಿ ಜನರಿಗೆ ಅಲಭ್ಯವಾದಾಗ ಖುರ್ಚಿಯಿಂದ ಕೆಳಗಿಳಿಸಿ, ಕೋರ್ಟ್ ಮಾರ್ಷಲ್ ಮಾಡುವ ಅವಕಾಶ ಮತಾಧೀಶನಿಗೆಂದು ಸಿಗುವುದೋ?

ಆರಿಸಿ ಕಳುಹಿಸಿದವ ಮೋಜು ಮಸ್ತಿಯಲ್ಲಿ ತೊಡಗಿದರೆ, ಅಂಕೆ ಎಂತೋ?

sunaath said...

ಜನತೆಗೆ ಬುದ್ಧಿ ಬರುವವರೆಗೆ, ಜನಪ್ರತಿನಿಧಿಗಳಿಗೆ ಹಬ್ಬ!

ಗಿರೀಶ್.ಎಸ್ said...

ಈ ವಿಷಯದಲ್ಲಿ ಅವರ ಹೋಗಳು ಭಟ್ಟರು ಕೊಡುತ್ತಿರುವ ಸಮರ್ಥನೆ ನಿಜಕ್ಕೂ ನಾಚಿಕೆಗೇಡು .. ಸಂಸತ್ ಅಧಿವೇಶನ ಶುರು ಆಗುವ ೨ ದಿನ ಮೊದಲೇ ಈ ರೀತಿ ರಜೆಯ ಮೇಲೆ ವೇಷಾಂತರ ಹೋಗಿರುವುದು ಜವಾಬ್ದಾರಿ ನಾಯಕನ ಲಕ್ಷಣ ಅಲ್ಲ. ಇಂಥ ನಾಯಕ (?) ನನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಹವಣಿಸಿದರಲ್ಲ ಅವರು

sunaath said...

ಇದೀಗ ರಾಹುಲ ಹೊಸ ಅವತಾರವನ್ನು ಎತ್ತಿ ದರ್ಶನ ಕೊಡುವರಿದ್ದಾರೆ ಎಂದು ಹೊ.ಭ. ಡಿಗ್ಗಿ ಹೇಳಿದ್ದಾರೆ.!

Archu said...

ಸರಿಯಾಗಿ ಬರೆದಿದ್ದೀರಿ ಸುನಾಥ ಕಾಕಾ..

sunaath said...

ಅಱ್ಚು,
ಧನ್ಯವಾದಗಳು.

Swarna said...

ಕಾಕಾ ,
ಮತದಾರ ತನ್ನ ಜವಾಬ್ದಾರಿ ಅರಿಯುವವರೆಗೆ ಇವರದ್ದೇ ಆಟ.ನಾಯಕರನ್ನು ಪ್ರಶ್ನಿಸಿದರೆ ಅವರ ಭಟ್ಟಂಗಿಗಳು , ಭಕ್ತರು ಉತ್ತರಿಸುವ ಮಾತು ಹಾಗಿರಲಿ ಚರ್ಚೆಯನ್ನೂ ಮಾಡುವುದಿಲ್ಲ . ಪಾಪ ಭಾರತಾಂಬೆ
ವಂದನೆಗಳೊಂದಿಗೆ
ಸ್ವರ್ಣಾ

sunaath said...

ಧನ್ಯವಾದಗಳು, ಸ್ವಱ್ಣಾ!