ದ.ರಾ.ಬೇಂದ್ರೆಯವರಿಗೆ ೧೯೫೬ರಲ್ಲಿ ೬೦ ವರ್ಷಗಳು ತುಂಬಿದವು. ೧೯೫೮ರಲ್ಲಿ ಅವರ
‘ಅರಳು ಮರಳು’ ಎನ್ನುವ ಕವನಸಂಕಲನವು ಪ್ರಕಟಿತವಾಯಿತು. ಆ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ
ಬಹುಮಾನವೂ ದೊರೆಯಿತು. ಈ ಎರಡೂ ಕಾರಣಗಳಿಂದ ಬೇಂದ್ರೆಯವರಿಗೆ ಕರ್ನಾಟಕದ ಅನೇಕ ಕಡೆ ಸನ್ಮಾನಸಮಾರಂಭಗಳು
ಜರಗುತ್ತಿದವು. ೧೯೫೯ರಲ್ಲಿ ನಾನು ಸವದತ್ತಿಯ ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದೆ. ನಮ್ಮ ಶಾಲೆಯಲ್ಲೂ
ಸಹ ಅವರಿಂದ ಒಂದು ಉಪನ್ಯಾಸವನ್ನು ಏರ್ಪಡಿಸಿ, ಅವರಿಗೆ ಸತ್ಕರಿಸಲು ನಿಶ್ಚಯಿಸಲಾಗಿತ್ತು.
ನಿಶ್ಚಿತ ದಿನದಂದು ಬೇಂದ್ರೆ ನಮ್ಮಲ್ಲಿಗೆ ಬಂದರು. ಅತಿ ಸಾದಾ ಧೋತರ, ಕೋಟು
ಹಾಗು ರುಮಾಲನ್ನು ಧರಿಸಿದ ಅವರನ್ನು ವರಕವಿ ಎಂದು ಗುರುತಿಸುವುದು ಅಸಾಧ್ಯದ ಸಂಗತಿಯಾಗಿತ್ತು. ಆದರೆ
ಅವರ ಭಾಷಣವನ್ನು ಕೇಳುತ್ತಿರುವಂತೆ, ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಮಂತ್ರಮುಗ್ಧರಾದರು.
ಬೇಂದ್ರೆಯವರು ವಿದ್ಯಾರ್ಥಿಗಳಿಗಾಗಿ ಭಾಷಣ ಮಾಡಬೇಕಾಗಿತ್ತಷ್ಟೆ. ತಮ್ಮ
ಕೋಟಿನಿಂದ ಚಿಕ್ಕದೊಂದು ಗ್ಲೋಬ್ಅನ್ನು ಬೇಂದ್ರೆ ಹೊರತೆಗೆದು ವಿದ್ಯಾರ್ಥಿಗಳಿಗೆ ತೋರಿಸಿದರು. ಕರ್ನಾಟಕ
ಹಾಗು ಭಾರತ ಇವು ಈ ವಿಶಾಲವಾದ ಪೃಥ್ವಿಯ ಒಂದು ಭಾಗ ಎಂದು ಹೇಳುತ್ತ, ‘ಕರ್ನಾಟಕದ ವಿಸ್ತಾರವೇನು?’
ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ‘ಕಾವೇರಿಯಿಂದ ಗೋದಾವರಿಯವರೆಗೆ’ ಎಂದು ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಕೂಗಿದರು. ಬೇಂದ್ರೆಯವರು
ನಸುನಕ್ಕರು. ‘ನಿಮಗ ಇತಿಹಾಸ ಗೊತ್ತದ, ಭೂಗೋಲ ಗೊತ್ತಿಲ್ಲ’, ಎಂದು ಚೇಷ್ಟೆ ಮಾಡಿದರು. ಆ
ಬಳಿಕ ‘ಅರಳು ಮರಳು’ ಕವನಸಂಕಲನದಲ್ಲಿದ್ದ ಒಂದು ಕವನದ ನುಡಿಯೊಂದನ್ನು ನಮ್ಮೆದುರಿಗೆ ಗಾನಿಸಿದರು:
’ಕನ್ನಡ ನುಡಿದಿತು ಕನ್ನಡ ಹಕ್ಕಿ
ಕನ್ನಡವೆಂದಿತು ಆ-ಗೋದೆ
ಕಾವೇರಿಯು ತಂಪಾಯಿತು, ಕನ್ನಡ
ಗಾಳಿಯು ಉಸಿರಿತು ಈ ಬೋಧೆ.’
ನೋಡಲು ಸರಳವಾಗಿ ಕಾಣುತ್ತಿರುವ ಈ ನುಡಿಯನ್ನು ಅವರು ವಿವರಿಸಿದಾಗಲೇ, ಅದರ
ಅರ್ಥ ನಮಗೆ ಹೊಳೆದದ್ದು. ಆ ಸಮಯದಲ್ಲಿ ಅವರು ಹೇಳಿದ ಪೂರ್ಣ ವಿವರಣೆ ನನಗೆ ಈಗ ನೆನಪಿಲ್ಲ. ಆದರೆ ಅದರ
ಮುಖ್ಯ ಭಾಗ ಹೀಗಿದೆ:
ಗೋದಾವರಿ ನದಿಯ ದಂಡೆಯ ಮೇಲೆ ‘ಕನ್ನಡ’ ಎನ್ನುವ ಹೆಸರಿನ ಒಂದು ಹಳ್ಳಿ ಇದೆ.
ಅಲ್ಲಿಯ ಜನರು ಮಾತನಾಡುವುದು ಕನ್ನಡವನ್ನೇ. ಒಂದು ಕಾಲದಲ್ಲಿ ಕನ್ನಡ ನಾಡು ‘ಕಾವೇರಿಯಿಂದ ಗೋದಾವರಿಯವರೆಗೆ’
ಹರಡಿತ್ತು. ಈಗ ಕನ್ನಡದ ಮರ್ಯಾದೆ ಕುಗ್ಗಿದೆ. ಅದು ಪುನಃ ‘ಆಗೋದೆ!’ ಎನ್ನಬೇಕು; ರಾಜಕೀಯವಾಗಿ ಅಲ್ಲದಿದ್ದರೂ
ಸಾಂಸ್ಕೃತಿಕವಾಗಿ ಆಗಬೇಕು. ಈ ಹುಮ್ಮಸ್ಸು ಕನ್ನಡಿಗರಲ್ಲಿ ಬೇಕು. ಆದರೆ ಕನ್ನಡಿಗರ ಸ್ವಭಾವ ಹೇಗಿದೆ
ಎಂದರೆ, ‘ಕಾವೇರಿಯು ತಂಪಾಯಿತು’; ಅವರಿಗೆ ತತ್ಕ್ಷಣಕ್ಕೆ ಕಾವು ಏರುತ್ತದೆ, ಹಾಗೆಯೇ ಇಳಿದೂ ಬಿಡುತ್ತದೆ. ಕಾವಿನಲ್ಲಿ ಹುಚ್ಚಾಟ ಮಾಡಬಾರದು ಎನ್ನುವದು ಕನ್ನಡ ಜನತೆಯ
ಸ್ವಾಭಾವಿಕ ತಿಳಿವು ಆಗಿದೆ.
ಸ್ವತಃ ವರಕವಿಯ ಬಾಯಿಯಿಂದಲೇ ಅವರ ಕವನದ ವಿವರಣೆಯನ್ನು ಕೇಳಿದ್ದು ನಮ್ಮೆಲ್ಲರ
ಭಾಗ್ಯವಾಗಿತ್ತು. ಬೇಂದ್ರೆಯವರ ಕವನಗಳನ್ನು ಹೇಗೆ
ಅರ್ಥೈಸಿಕೊಳ್ಳಬೇಕೆನ್ನುವುದರ ಮೊದಲ ಪಾಠವೂ ಇದಾಗಿತ್ತು.
11 comments:
ಅವರು ಬಳಸುವ ಪ್ರತಿ ಪದದಲ್ಲೂ ವಿಸ್ತಾರವಾದ ಅರ್ಥವನ್ನೇ ಅಡಗಿಸಿ ಇಟ್ಟಿದ್ದಾರೆ.
ವರ ಕವಿಯ ಭಾಷಣವನ್ನು ಕೇಳುವ ಸೌಭಾಗ್ಯ ತಮಗಾದರೂ ದೊರೆಯಿತು. ತಮ್ಮ ದಯೆಯಿಂದ ಅವರ ಕಾವ್ಯದ ಒಳ ನೋಟ ನಮಗೂ ಸಿಗುತ್ತಿರುವುದೇ ನಮ್ಮ ಭಾಗ್ಯ.
ಈ ಮೂಲಕವಾದರೂ ಪ್ರತಿ ಕನ್ನಡಿಗನ ಒಳ ಭಾಷಾ ಪ್ರೇಮ ಕಾವೇರಲಿ. ಕನ್ನಡವೇ ಉಸಿರಾಗಲಿ.
ನೀವೇ ಧನ್ಯ.. :)
ಬದರಿನಾಥರೆ,
ಬೇಂದ್ರೆಯವರ ಒಂದಾದರೂ ಭಾಷಣವನ್ನು ಕೇಳುವ ಭಾಗ್ಯ ನನ್ನದಾಯಿತಲ್ಲ ಎನ್ನುವ ಖುಶಿ ನನಗಿದೆ!
ಶಿವಪ್ರಕಾಶರೆ,
ದೊಡ್ಡವರ ಸಾನ್ನಿಧ್ಯ ದೊರೆಯುವುದು ಪುಣ್ಯದ ಮಾತು. ಬೇಂದ್ರೆ ಆ ದಿನ ನನ್ನೆದುರಿಗೆ ಮಿಂಚಿ ಮಾಯವಾದರು. ಆ ಮಿಂಚಿನ ಬೆಳಕು ಇನ್ನೂ ನನ್ನ ಕಣ್ಣುಗಳಿಗೆ ಬೆಳಕು ನೀಡುತ್ತಿದೆ.
ಹೀಗೆ , ಒಂದೊಂದೆ ಘಟನೆಯೊಂದಿಗೆ ನಿಮ್ಮ ನೆನಪಿನ ಬುತ್ತಿ ಬಿಚ್ಚಿಡಲು ಇದು ಸಕಾಲ ಎನಿಸುತ್ತಿದೆ. ಒಂದೊಂದಾಗಿ ಬರೆಯಿರಿ ದಯವಿಟ್ಟು.
ತಥಾಸ್ತು, ಪುತ್ತರ್!
ಈ ಪೋಸ್ಟು ಸೂಪರ್ರಾಗಿದೆ..ಕಾಕಾ.
ಬೇಂದ್ರೆಯವರ ವ್ಯಾಖ್ಯಾನ ಅದ್ಭುತ. ತಲೆಬಾಗುವುದೆ ಅದಕ್ಕೆ ಸಲ್ಲಿಸುವ ಗೌರವ.
ಕಾವೇರಿಯು ತಂಪಾಯಿತು...! ಎಂಥೆಂಥ ಅರ್ಥ ವಿಸ್ತಾರ!
ಪ್ರೀತಿಯಿಂದ,
ಸಿಂಧು
ಕಾವೇರಿಯಿಂದ ಮೇಣ್ ಗೋದಾವರಿ...ವರೆಗೆ ಅಂತ ಕವಿತೆಗಳಲ್ಲಿ ಓದಿದ ನೆನಪು. ಅಜ್ಜ ಅದಕ್ಕೊಂದು ಹೊಸ ಅರ್ಥ ಕೊಟ್ಟಿದ್ದಾರೆ . ನೀವದನ್ನು ಸಶಕ್ತವಾಗಿ ನಮಗೆ ತಿಳಿಸಿದ್ದೀರಿ. ಧನ್ಯವಾದಗಳು ಕಾಕಾ.
ವಂದನೆಗಳೊಂದಿಗೆ
ಸ್ವರ್ಣಾ
ಹಾಂ ಸುಬ್ರಮಣ್ಯ ಅವರು ಹೇಳಿದಂತೆ ಇನ್ನಷ್ಟು ನೆನಪುಗಳನ್ನು ಬರೆಯಿರಿ :)
ಬೇಂದ್ರೆ ಎಂದರೆ ಪದ-ಗಾರುಡಿಗ ಅಲ್ಲವೆ, ಸಿಂಧು?
ಸ್ವರ್ಣಾ,
ಬೇಂದ್ರೆಯವರು ಪ್ರತಿ ಪದದಲ್ಲಿಯೂ ಅನೇಕ ಅರ್ಥಗಳನ್ನು ನೋಡುವ ಪ್ರತಿಭಾಶಾಲಿಗಳು!
ನನ್ನ ನೆನಪುಗಳ ಕೋಶ ದೊಡ್ಡದೇನಿಲ್ಲ. ನೆನಪಿಸಿಕೊಂಡು ಬರೆಯಲು ಪ್ರಯತ್ನಿಸುವೆ!
Post a Comment