Wednesday, July 1, 2015

ವಂದೇ ಭಾರತಮ್-೫.....ವೀರಮಾತೆಯರುಐದು ಸಾವಿರ ವರ್ಷಗಳ ಹಿಂದೆ ಇದ್ದ ಮಹಾಭಾರತದ ಕುಂತೀದೇವಿಗೂ, ನಾಲ್ಕುನೂರು ವರ್ಷಗಳ ಹಿಂದೆ ಇದ್ದ ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಗೂ ಇರುವ ಸಾಮ್ಯವೇನು?----ಈ ಇಬ್ಬರೂ ತಾಯಂದಿರು ತಮ್ಮ ವೈಯಕ್ತಿಕ ಹಿತಕ್ಕಿಂತ ಸಮಷ್ಟಿಯ ಹಿತವೇ ಹೆಚ್ಚೆಂದು ಬಗೆದು, ತಮ್ಮ ಮಕ್ಕಳನ್ನು ಅಪಾಯದ ಬಾಯಿಗೆ ತಳ್ಳಿದರು.

ನರಭಕ್ಷಕ ಬಕಾಸುರನ ಕತೆ ನಮಗೆಲ್ಲರಿಗೂ ಗೊತ್ತು. ಏಕಚಕ್ರನಗರದ ಹೊರವಲಯದ ಕಾಡಿನಲ್ಲಿ ಇರುತ್ತಿದ್ದ ಈತನಿಗೆ ಆಹಾರವೆಂದು ಪ್ರತಿದಿನವೂ ಒಬ್ಬ ಮನುಷ್ಯನನ್ನು ಹಾಗು ಒಂದು ಬಂಡಿ ಅನ್ನವನ್ನು ನಗರವಾಸಿಗಳು ಪಾಳಿಯ ಪ್ರಕಾರ ಕಳುಹಿಸಿಕೊಡುತ್ತಿದ್ದರು. ಭಿಕ್ಷುಕರ ವೇಷದಲ್ಲಿದ್ದ ಪಾಂಡವರ ತಾಯಿ ಕುಂತಿಗೆ ಅಕಸ್ಮಾತ್ತಾಗಿ ಈ ವ್ಯವಸ್ಥೆಯ ಅರಿವಾಯಿತು. ಅವಳು ತನ್ನ ನೆರೆಮನೆಯ ಹೆಣ್ಣುಮಗಳಿಗೆ ‘ನಿನ್ನ ಮಗನ ಬದಲಾಗಿ ನನ್ನ ಮಗನನ್ನು ಕಳುಹಿಸಿಕೊಡುವೆ, ದುಃಖಿಸಬೇಡ’ ಎಂದು ಸಂತೈಸಿದಳು.

ಕುಂತಿ ಹೀಗೇಕೆ ಮಾಡಿದಳು? ಅವಳದು ಎಂತಹ ಧೈರ್ಯ? ಬಕಾಸುರನೇನು ಕಡಿಮೆ ಬಲಶಾಲಿಯೆ? ತನ್ನ ಮಗ ಭೀಮಸೇನನೆ ಆ ರಾಕ್ಷಸನಿಗೆ ಬಲಿಯಾಗಬಹುದಲ್ಲ ಎನ್ನುವ ಹೆದರಿಕೆ ಬೇಡವೆ ಕುಂತಿಗೆ? ತನ್ನ ಗಂಡನನ್ನು, ತನ್ನ ರಾಜ್ಯವನ್ನು ಕಳೆದುಕೊಂಡ ಕುಂತಿಯು ತನ್ನ ಅತ್ಯಂತ ಬಲಶಾಲಿಯಾದ ಮಗನನ್ನು ಕಳೆದುಕೊಳ್ಳುವ ಅಪಾಯವನ್ನು ಏಕೆ ಎದುರಿಸಿದಳು? ಇಷ್ಟಕ್ಕೂ ಆ ನಗರವಾಸಿಗಳ ರಕ್ಷಣೆಯ ಹೊಣೆಗಾರಿಕೆ ಕುಂತಿಗೆ ಏಕೆ ಬೇಕು? ಏಕಚಕ್ರನಗರಕ್ಕೆ ಒಬ್ಬ ರಾಜನಿದ್ದ. ಅವನಿಗೆ ಒಂದು ಸೈನ್ಯವಂತೂ ಇತ್ತು. ಬಕಾಸುರನೆದುರಿಗೆ ಇವರು ಮಂಡಿಯೂರಿದ್ದರೆ?

ಬಕಾಸುರನ ಜೊತೆ ಮುಖಾಮುಖಿಯಾಗಿ ಸೋತು ಹೋದಾಗ, ಏಕಚಕ್ರನಗರದ ರಾಜನ ಎದುರಿಗೆ ಎರಡು ಆಯ್ಕೆಗಳು ಇದ್ದವು. ಒಂದು ಹೋರಾಟವನ್ನು ಮುಂದುವರೆಸಿ, ಎಲ್ಲರೂ ಸೋತು ಸತ್ತು ಹೋಗುವುದು; ಏಕಚಕ್ರನಗರವನ್ನು ಸ್ಮಶಾನವನ್ನಾಗಿ ಪರಿವರ್ತಿಸುವುದು. ಎರಡನೆಯದು ಅನ್ಯಾಯದ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು, ತನ್ನ ನಗರವನ್ನು ಉಳಿಸಿಕೊಳ್ಳುವುದು. ಏಕಚಕ್ರನಗರದ ರಾಜ ಎರಡನೆಯ ಆಯ್ಕೆಗೆ ಮೊರೆ ಹೋದ. ಬಹುಶಃ ಆ ನಗರನಿವಾಸಿಗಳೂ ಈ ಆಯ್ಕೆಯನ್ನೇ ಸಮ್ಮತಿಸಿರಬಹುದು(?) ಇಂತಹ ಹೇಡಿತನವನ್ನು ಕಂಡೇ ನಮ್ಮ ಹಳೆಯ ರಾಷ್ಟ್ರಾಧ್ಯಕ್ಷರಾದ ಅಬ್ದುಲ್ ಕಲಾಮರು, “Indians do not have a sense of retaliation” ಎಂದು ವಿಷಾದಿಸಿದ್ದು. ಘೋರಿ ಮಹಮ್ಮದನಂತಹ ಕ್ರೂರ,  ದರೋಡೆಕೋರನನ್ನು ಪೃಥ್ವೀರಾಜನು ೧೬ ಸಲ ಸೋಲಿಸಿ, ಕ್ಷಮಿಸಿ ಬಿಟ್ಟದ್ದೂ ಸಹ ಭಾರತೀಯರ ಒಂದು ಅವಗುಣವೇ ಸರಿ. ಭಾರತದ ತತ್ವಶಾಸ್ತ್ರಗಳೇ ಇಂತಹ ಮೂರ್ಖತನಕ್ಕೆ ಕಾರಣ ಎನ್ನೋಣವೆ? ರಾಜನು ಕ್ಷಮಾಶೀಲನಾಗಿರಬೇಕು, ಶರಣಾಗತರಿಗೆ ರಕ್ಷಣೆ ನೀಡಬೇಕು ಎನ್ನುವ ಪರಂಪರಾಗತ ದೊಡ್ಡಸ್ತನದ ವಿಜೃಂಭಣೆಯೇ ನಮ್ಮ ರಾಜರ ಅಪ್ರಬುದ್ಧ ನಡವಳಿಕೆಗೆ ಕಾರಣವಾಗಿರಬಹುದು. ಆದರೆ ಶತ್ರುವು ಬಲಾಢ್ಯನಾಗಿದ್ದಾಗ, ತನ್ನ ಸ್ವಂತ ಅಭಿಮಾನಕ್ಕಿಂತ ದೇಶದ ಹಿತವೇ ದೊಡ್ಡದಾದಾಗ, ವೈಯಕ್ತಿಕ ಅವಮಾನವನ್ನು ಸಹಿಸಿ, ಬಲಾಢ್ಯ ಶತ್ರುವಿನ ಜೊತೆಗೆ ರಾಜೀಯಾಗುವುದು ಅನಿವಾರ್ಯವಾಗುವುದೇನೊ? ಚಿತ್ತೂರಿನ ರಾಜನಾದ ರಾವಲ ರತನಸಿಂಗ ಇದಕ್ಕೊಂದು ಉತ್ತಮ ನಿದರ್ಶನವಾಗಿದ್ದಾನೆ.

ಅಪೂರ್ವ ರೂಪಸಿಯಾದ ಚಿತ್ತೂರಿನ ರಾಣಿ ಪದ್ಮಿನಿಯನ್ನು ತನ್ನ ಜನಾನಾಗೆ ಸೇರಿಸುವ ಉದ್ದೇಶದಿಂದ ಅಲ್ಲಾಉದ್ದೀನ ಖಿಲಜಿ ಚಿತ್ತೂರಿನ ಮೇಲೆ ದಂಡೆತ್ತಿ ಬಂದ. ಕಾಳಗದಲ್ಲಿ ಯಾರೂ ಸೋಲಲಿಲ್ಲ. ಚಿತ್ತೂರಿನ ವಿಧ್ವಂಸವನ್ನು ತಡೆಗಟ್ಟಲು, ರಾವಲ ರತನಸಿಂಗ ತನ್ನ ಹೆಂಡತಿ ಪದ್ಮಿನಿಯನ್ನು ಖಿಲಜಿಗೆ ಕನ್ನಡಿಯಲ್ಲಿ ತೋರಿಸುವ ಶರತ್ತಿನ ಮೇಲೆ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಪಟ್ಟ. ಒಬ್ಬ ರಾಜನಿಗೆ ಇದು ಅತ್ಯಂತ ಹೇಯಕರವಾದ ಶರತ್ತು. ಆದರೆ ಈ ಶರತ್ತಿಗೆ ಒಪ್ಪದಿದ್ದರೆ, ಖಿಲಜಿಯ ಸೈನಿಕರು ಚಿತ್ತೂರಿನ ಸಂಪೂರ್ಣ ರಾಜ್ಯವನ್ನೇ ಸುಟ್ಟು ಬೂದಿ ಮಾಡುತ್ತಿದ್ದರು. ಅಲ್ಲಿ ಸಿಕ್ಕ ಎಲ್ಲ ಪದ್ಮಿನಿಯರ ಮೇಲೂ ಅತ್ಯಾಚಾರ ನಡೆಯುತ್ತಿತ್ತು. ಇದನ್ನು ತಪ್ಪಿಸುವುದು ರಾಜನ ಕರ್ತವ್ಯವಾಗಿತ್ತು. ಆದುದರಿಂದ ವೈಯಕ್ತಿಕವಾಗಿ ತನಗಾಗುತ್ತಿರುವ ಅವಹೇಳನೆಯನ್ನು ಸಹಿಸಿಕೊಂಡರೂ ಸರಿಯೆ, ಪ್ರಜೆಗಳು ಸಂಕಷ್ಟಕ್ಕೆ ಈಡಾಗದಿರಲಿ ಎಂದು, ರತನಸಿಂಗನು ಈ ಅಪಮಾನಕ್ಕೆ ಒಪ್ಪಿಕೊಂಡಿರಬಹುದು. ಇದರಂತೆಯೇ ಏಕಚಕ್ರನಗರದ ಸಂಪೂರ್ಣ ವಿಧ್ವಂಸವನ್ನು ತಡೆಯಲೆಂದೇ, ಅಲ್ಲಿನ ರಾಜ ಹಾಗು ಪ್ರಜೆಗಳು ಬಕಾಸುರನೊಡನೆ ಒಂದು ಒಪ್ಪಂದಕ್ಕೆ ಬಂದಿರಬಹುದು. ಪರಿಸ್ಥಿತಿಯೇ ಹೀಗಿರುವಾಗ ಕುಂತೀದೇವಿ ತನ್ನ ಮಗನನ್ನು ಸಾವಿನ ಬಾಯಿಗೆ ಏಕೆ ತಳ್ಳಿದಳು? ‘ಕುಲದ ಸಲುವಾಗಿ ಅಂದರೆ ಸಮುದಾಯದ ಸಲುವಾಗಿ ಒಬ್ಬ ವ್ಯಕ್ತಿಯನ್ನು ತ್ಯಜಿಸಬೇಕು’ ಎನ್ನುವ ಸುಭಾಷಿತ ಒಂದಿದೆ. ಅದಕ್ಕಾಗಿ ಅವಳು ಭೀಮಸೇನನನ್ನು ಬಲಿ ಕೊಡಲು ಸಿದ್ಧಳಾದಳೆ? ಅದೂ ಅಲ್ಲದೆ ಕುಂತೀದೇವಿಯು ರಾಣಿಯಾಗಿ ಹಸ್ತಿನಾಪುರವನ್ನು ಆಳಿದವಳು. ಅವಳಲ್ಲಿ ರಾಜಧರ್ಮದ ಹಾಗು ಕ್ಷಾತ್ರಧರ್ಮದ ಪ್ರಜ್ಞೆ ಹೆಡೆಯಾಡುತ್ತಿರಬಹುದು. ಏಕಚಕ್ರನಗರದ ಜನತೆ ಸೋತರೇನಾಯಿತು, ಕುಂತೀದೇವಿ ಸೋಲುವುದಿಲ್ಲ ಎನ್ನುವುದು ಅವಳ ಸಂಕಲ್ಪವಾಗಿರಬಹುದು!

ಇಂತಹ ಮತ್ತೊಬ್ಬ ವೀರಮಾತೆಯ ದರ್ಶನ ನಮಗಾಗುವುದು ಸುಮಾರು ೪೦೦ ವರ್ಷಗಳ ಹಿಂದೆ. ಇವಳು ಜೀಜಾಬಾಯಿ. ಶಹಾಜಿ ಭೋಸಲೆಯ ಹೆಂಡತಿ. ಆದರೆ ಗಂಡ, ಹೆಂಡತಿ ಕೂಡಿ ಇದ್ದದ್ದೇ ಅಪರೂಪ. ಜೀಜಾಬಾಯಿಯ ಮಗ ಶಿವಾಜಿ ತಾಯಿಯ ಪೋಷಣೆ ಹಾಗು ಮಾರ್ಗದರ್ಶನದಲ್ಲಿಯೇ ಬೆಳೆದ. ಭಾರತದ ಗಡಿಯಾಚೆಯಿಂದ ನುಗ್ಗಿದ ಕಟುಕ ದರೋಡೆಖೋರರನ್ನು ಜೀಜಾಬಾಯಿ ನೋಡಿದ್ದಳು. ಇಲ್ಲಿ ರಾಜ್ಯ ಸ್ಥಾಪಿಸಿ, ಇಲ್ಲಿಯ ಜನತೆಯನ್ನು ಹಿಂಡುತ್ತಿದ್ದಂತಹ, ಇಲ್ಲಿಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಂತಹ ವಿದೇಶಿ ದಾಳಿಕಾರರ ಅಡಿಯಲ್ಲಿಯೇ ಅವಳ ತಂದೆ ಹಾಗು ಅವಳ ಗಂಡ ಊಳಿಗ ಮಾಡುತ್ತಿದ್ದರು. ನಾಡ ಜನತೆಯ ಮೇಲೆ ನಡೆಯುವ ದಬ್ಬಾಳಿಕೆಯನ್ನು ಪ್ರತ್ಯಕ್ಷವಾಗಿ ಕಂಡ ಜೀಜಾಬಾಯಿ ಈ ನಾಡವರ ರಾಜ್ಯಕ್ಕಾಗಿ, ಭಾರತೀಯರ ಸ್ವರಾಜಕ್ಕಾಗಿ ತನ್ನ ಮಗ ಶಿವಾಜಿಗೆ ಪ್ರೇರಣೆ ಇತ್ತಳು.

ಶಿವಾಜಿಯು ತನ್ನ ಸ್ವರಾಜವನ್ನು ವಿಸ್ತರಿಸುತ್ತ ಹೋದಂತೆ, ವಿಜಯಪುರದ ಆದಿಲಶಾಹಿ ಚಿಂತಿತನಾದ. ಶಿವಾಜಿಯ ನಿಗ್ರಹಕ್ಕಾಗಿ ಆತ ಅಫಝಲಖಾನನನ್ನು ಕಳಿಸಿಕೊಟ್ಟ. ಅಫಝಲಖಾನ ಸಾಮಾನ್ಯನಲ್ಲ. ಅಫಘಾನ ಮೂಲದ ಈತ ಆದಿಲಶಾಹಿಯ ನೆಚ್ಚಿನ ಸೇನಾಪತಿ. ಶಿವಾಜಿಯನ್ನು ಪುಣೆಯಲ್ಲಿ ಎದುರಿಸಿ, ಕೊಚ್ಚಿ ಹಾಕಲು ಅಫಝಲಖಾನ ಬಯಸಿದ್ದ. ಆದರೆ ಶಿವಾಜಿ ಉದ್ದೇಶಪೂರ್ವಕವಾಗಿ ಪ್ರತಾಪಗಡಕ್ಕೆ ತೆರಳಿದ. ಅಫಝಲಖಾನನ ಸೈನ್ಯ ಪ್ರತಾಪಗಡವನ್ನು ದೀರ್ಘ ಕಾಲದವರೆಗೆ ಮುತ್ತಿಗೆ ಹಾಕಿದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಮೈತ್ರಿಯ ಒಪ್ಪಂದಕ್ಕೆ ಅಫಝಲಖಾನ ತನ್ನ ದೂತನನ್ನು ಕಳುಹಿದ. ಶಿವಾಜಿ ಈ ಭೇಟಿಗೆ ಒಪ್ಪಿದ. ಇವರಿಬ್ಬರೂ ನಿಶ್ಶಸ್ತ್ರರಾಗಿ ಸಂಧಿಸಬೇಕು. ಜೊತೆಗೆ ಇಬ್ಬರು ಸಶಸ್ತ್ರ ಅಂಗರಕ್ಷಕರು ಮಾತ್ರ ಇರಬೇಕು ಎನ್ನುವ ಶರತ್ತಿನೊಡನೆ ಭೆಟ್ಟಿಯ ಸಿದ್ಧತೆಗಳಾದವು. ಅಫಝಾಲಖಾನ ಈ ಮೊದಲೊಮ್ಮೆ ಕಸ್ತೂರಿರಂಗ ಎನ್ನುವ ರಾಜನನ್ನು ಇಂತಹದೇ ನೆವದಲ್ಲಿ ಮೋಸದಿಂದ ಕೊಂದಿದ್ದ. ಆದುದರಿಂದ ಶಿವಾಜಿಯ ಹಿತವರ್ಗದವರೆಲ್ಲರೂ ಈ ಭೆಟ್ಟಿಗೆ ಒಪ್ಪದಿರಲು ಆತನಿಗೆ ಸಲಹೆ ನೀಡಿದರು. ಜೀಜಾಬಾಯಿ ಮಾತ್ರ ಶಿವಾಜಿಗೆ ಸಮ್ಮತಿ ನೀಡಿದಳು. (ಜೀಜಾಬಾಯಿಯ ಮೊದಲನೆಯ ಮಗ ಸಂಭಾಜಿ ಕಾಳಗವೊಂದರಲ್ಲಿ ಅಫಝಲಖಾನನಿಂದಲೇ ಹತನಾಗಿದ್ದ. ಹೀಗಿದ್ದರೂ ಸಹ ಜೀಜಾಬಾಯಿ ತನ್ನ ಉಳಿದೊಬ್ಬ ಮಗನನ್ನು ಅಫಝಲಖಾನನ ಭೆಟ್ಟಿಗೆ ಕಳುಹಿಸಿಕೊಡುತ್ತಾಳೆ!)

ಭೆಟ್ಟಿಗೆ ಹೋಗುವ ಮುಹೂರ್ತದಲ್ಲಿ ಶಿವಾಜಿಗೆ ಆರತಿ ಬೆಳಗಿ ತಿಲಕವನ್ನಿಡಬೇಕಲ್ಲ. ಶಿವಾಜಿಯ ಹೆಂಡತಿಯ ಕೈ ಆರತಿ ಎತ್ತುವಾಗ ಕಂಪಿಸಿತು. ಜೀಜಾಬಾಯಿ ತಾನೇ ಆರತಿ ಎತ್ತಿ, ತಿಲಕವನ್ನಿತ್ತು, ಆಶೀರ್ವದಿಸಿ ಕಳುಹಿಸಿದಳು. ಮುಂದಿನ ಕತೆ ಎಲ್ಲರಿಗೂ ಗೊತ್ತು. ಆದರೆ ತನ್ನ ಒಬ್ಬನೇ ಮಗನನ್ನು ಒಬ್ಬಂಟಿಯಾಗಿ ಹುಲಿಯ ಬಾಯಿಗೆ ಕಳುಹಿಸಿಲು ಅವಳಿಗೆ ಇದ್ದ ಪ್ರೇರಣೆ ಯಾವುದು?

ಕುಂತಿ ಏಕಚಕ್ರನಗರದ ಪ್ರಜೆಗಳ ಹಿತರಕ್ಷಣೆಗಾಗಿ ಭೀಮಸೇನನನ್ನು ಕಳೆದುಕೊಳ್ಳುವ ಅಪಾಯವನ್ನು ಹೇಗೆ ಎದುರಿಸಿದಳೊ, ಅದೇ ರೀತಿಯಲ್ಲಿ ಜೀಜಾಬಾಯಿಯೂ ಸಹ ಜನಹಿತರಕ್ಷಣೆಗಾಗಿ ತನ್ನ ಒಬ್ಬನೇ ಮಗ ಶಿವಾಜಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಿದಳು. ನಮ್ಮ ನಾಡಿನಲ್ಲಿ ಇಂತಹ ಅಸಂಖ್ಯ ವೀರಮಾತೆಯರು ಆಗಿ ಹೋಗಿದ್ದಾರೆ. ಇವರಿಂದಾಗಿಯೇ ಭಾರತ ಇನ್ನೂ ಜೀವಂತವಿದೆ.

ಈ ಸಂದರ್ಭದಲ್ಲಿ ಕುವೆಂಪು ರಚಿಸಿದ ಗೀತೆಯೊಂದರ ಸಾಲುಗಳು ನೆನಪಿಗೆ ಬರುತ್ತಿವೆ:
“ನಾನಳಿವೆ, ನೀನಳಿವೆ ನಮ್ಮೆಲವುಗಳ ಮೇಲೆ
ಮೂಡುವುದು, ಮೂಡುವುದು ಭಾರತದ ಲೀಲೆ
ನವಭಾರತದ ಲೀಲೆ!”

ನಾಡಿಗಾಗಿ ಪುತ್ರಬಲಿಯನ್ನು ಅರ್ಪಿಸಲು ಹಿಂಜರಿಯದ ಅನೇಕಾನೇಕ ವೀರಮಾತೆಯರಿಗೆ ನನ್ನ ನಮ್ರ ನಮನಗಳು.

4 comments:

Swarna said...

ನಮಸ್ತೆ ಕಾಕಾ ,
ಸೈನಿಕರ ತಾಯಂದಿರು ಕೂಡ ಇಂಥವರೇ ಅಲ್ಲವೇ ? ಶಿವಾಜಿ ಹುಟ್ಟಲಿ ಆದರೆ ಪಕ್ಕದ ಮನೆಯಲ್ಲಿ ಅಂತ ತಮಾಷೆಯಾಗಿ ಹೇಳೋದು ನೆನಪಾಯ್ತು.
ಕುಂತಿ , ಜೀಜಾ ಬಾಯರ ಅಗತ್ಯ ಈಗ ಹಿಂದೆಂದಿಗಿಂತಲೂ ಇದೆ ಅನ್ನಿಸ್ತಾ ಇದೆ.
ವಂದನೆಗಳೊಂದಿಗೆ
ಸ್ವರ್ಣಾ

sunaath said...

ನಿಜ, ಸ್ವರ್ಣಾ. ನಮ್ಮ ಸೈನಿಕರ ತಾಯಂದಿರೂ ಸಹ ಜೀಜಾಬಾಯಿ ಆಗಿದ್ದಾರೆ. ಆದರೆ ಹುತಾತ್ಮ ಸೈನಿಕರ ಕುಟೂಂಬಕ್ಕೆ ನಮ್ಮ ಸರಕಾರ ತೋರಿಸುವ ಅಸಡ್ಡೆಯನ್ನು ಕಂಡರೆ ಬೇಜಾರಾಗುತ್ತದೆ.

ಸುಬ್ರಮಣ್ಯ said...

ಉತ್ತಮ ಲೇಖನ

sunaath said...

ಧನ್ಯವಾದಗಳು, ಸುಬ್ರಹ್ಮಣ್ಯರೆ!