ತ್ರಿವೇಣಿಯವರು (ಜನನ: ೧-೯-೧೯೨೮; ಮರಣ: ೨೯-೭-೧೯೬೩) ನಿಧನರಾಗಿ ಇಂದಿಗೆ ೫೫ ವರ್ಷಗಳಾದವು.
ಅವರ ಕಾದಂಬರಿಗಳು ಮಾತ್ರ ಇನ್ನೂ
ಪುನರ್ಮುದ್ರಣವಾಗುತ್ತಲೇ ಇವೆ. ಕನ್ನಡ ಕಾದಂಬರಿಕಾರರಲ್ಲಿ ಇವರಷ್ಟು ಜನಪ್ರಿಯತೆ
ಪಡೆದವರು ಬಹುಶಃ ಬೇರಾರೂ ಇರಲಿಕ್ಕಿಲ್ಲ.
ತ್ರಿವೇಣಿಯವರ
ಕಾದಂಬರಿಗಳಿಗೆ ಕೆಲವು ಪ್ರಧಾನ ಬಾಹ್ಯಲಕ್ಷಣಗಳಿವೆ. ಇವರ ಕಾದಂಬರಿಗಳ ಶೈಲಿ
ಸರಳವಾದದ್ದು, ಲಲಿತವಾದದ್ದು. ಕಾದಂಬರಿಯ ಪಾತ್ರಗಳನ್ನು ಎರಡೇ
ಆಯಾಮದ ಪಾತ್ರಗಳು ಎನ್ನಬಹುದು, ಅವುಗಳಲ್ಲಿ ಸಂಕೀರ್ಣತೆ ಇಲ್ಲ. ಕಥಾನಕವೂ ಸಹ ಸರಳವಾಗಿಯೇ
ಇರುತ್ತದೆ. ರೇಲವೇ ಹಳಿಗಳ ಮೇಲೆ ಸಮಗತಿಯಲ್ಲಿ ಚಲಿಸುವ ಟ್ರೇನಿನಂತೆ, ಕಾದಂಬರಿಯು ಒಂದನೆಯ ಪುಟದಿಂದ
ಕೊನೆಯ ಪುಟದವರೆಗೂ ಸರಾಗವಾಗಿ ಸಾಗುತ್ತದೆ. ಇಂತಹ ಶೈಲಿಯ ಒಂದು ಅನುಕೂಲತೆ ಎಂದರೆ ಪಾತ್ರಗಳಲ್ಲಿ ಒಂದಾಗುವುದು ಓದುಗನಿಗೆ ಕಷ್ಟವಾಗುವುದಿಲ್ಲ. ಎಲ್ಲಕ್ಕೂ
ಮುಖ್ಯವಾಗಿ ತ್ರಿವೇಣಿಯವರ ಕಾದಂಬರಿಗಳಲ್ಲಿ ನವಿರು ರೋಮಾನ್ಸ್ ತುಂಬಿರುತ್ತದೆ. ವಾತಾವರಣದಲ್ಲಿ ರೋಮಾನ್ಸ್ ಹರಡಿದೆ
ಅನ್ನುತ್ತಾರಲ್ಲ, ಆ ರೀತಿಯಲ್ಲಿ! ಅವರ ಕೆಲವೊಂದು ಕಾದಂಬರಿಗಳಲ್ಲಿ ೮-೧೦ ಪುಟಗಳನ್ನು ಓದುವಷ್ಟರಲ್ಲಿಯೇ, ನಾಯಕ-ನಾಯಕಿಯರ ಪುಳಕಿತಗೊಳಿಸುವ ರೋಮ್ಯಾಂಟಿಕ್
ಸಂಭಾಷಣೆಗಳು ಪ್ರಾರಂಭವಾಗಿ
ಬಿಡುತ್ತವೆ. ರೋಮ್ಯಾಂಟಿಕ್ ಸಂಭಾಷಣೆಗಳನ್ನು ಬರೆಯುವದರಲ್ಲಿ ತ್ರಿವೇಣಿಯವರು ಅನನ್ಯರು. ಬಹುಶಃ ಇದು ಅವರ ಸ್ವಭಾವಜನ್ಯ
ಸಿದ್ಧಿಯಾಗಿರಬಹುದು!
ಇವೆಲ್ಲ ಅವರ ಕಾದಂಬರಿಗಳ ಬಾಹ್ಯಲಕ್ಷಣಗಳು. ತ್ರಿವೇಣಿಯವರ ಕಾದಂಬರಿಗಳ
ಜನಪ್ರಿಯತೆಗೆ ಈ ಬಾಹ್ಯಲಕ್ಷಣಗಳ ಕೊಡುಗೆ ಇಲ್ಲವೆಂತಲ್ಲ. ಆದರೆ ಅವರ ಕಾದಂಬರಿಗಳ ಆಂತರ್ಯವೇ ಅವರ ಸಾಹಿತ್ಯದ
ಜನಪ್ರಿಯತೆಗೆ ನೈಜ ಕಾರಣವಾಗಿದೆ. ತ್ರಿವೇಣಿಯವರಿಗಿಂತಲೂ ಮೊದಲು ಬರೆದ ಲೇಖಕಿಯರೂ ಸಹ ಮಹಿಳಾಸಮಸ್ಯೆಯನ್ನು
ಕುರಿತು ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಆದರೆ ತ್ರಿವೇಣಿಯವರು ಕೇವಲ ಸಮಸ್ಯೆಗಳನ್ನಷ್ಟೇ ಬಣ್ಣಿಸಿ
ತೃಪ್ತರಾಗಲಿಲ್ಲ. ಸಾಂಪ್ರದಾಯಕ ಸಮಾಜವು ಆಧುನಿಕತೆಯತ್ತ ಮುಖ ಮಾಡಿದಂತಹ ಕಾಲಘಟ್ಟವನ್ನು ಚಿತ್ರಿಸುವ
ಸಾಹಿತ್ಯವಿದು. ಇಂತಹ ಅವಧಿಯ ಅವರ ನಾಯಕಿಯರಿಗೆ ಕನಸುಗಳಿವೆ,ಆಶೋತ್ತರಗಳಿವೆ. ಈ ಒಂದು ವಿಷಯದಲ್ಲಿ
ತ್ರಿವೇಣಿಯವರು ಉಳಿದೆಲ್ಲ ಸಾಹಿತಿಗಳಿಗಿಂತ ಭಿನ್ನರಾಗಿದ್ದಾರೆ.
ತ್ರಿವೇಣಿಯವರು ಬರೆದ ೨೦ ಕಾದಂಬರಿಗಳಲ್ಲಿ ‘ಕೀಲುಗೊಂಬೆ’ ಹಾಗು ‘ಹೂವು-ಹಣ್ಣು’
ಈ ಎರಡು ಕಾದಂಬರಿಗಳು ಅವರ ಉಳಿದ ಕಾದಂಬರಿಗಳಿಗಿಂತ ಭಿನ್ನವಾಗಿವೆ. ಈ ಕಾದಂಬರಿಗಳ ನಾಯಕಿಯರಿಗೆ ಕನಸು
ಕಾಣುವ ಅವಕಾಶವೇ ಇಲ್ಲ. ‘ಕೀಲುಗೊಂಬೆ’ ಕಾದಂಬರಿಯ ನಾಯಕಿ(!)ಯಾದ, ಸೀತಮ್ಮನ ಮದುವೆಯು ಅವಳ ಹದಿನೆರಡನೆಯ
ವಯಸ್ಸಿನಲ್ಲಿಯೇ ಅಗುತ್ತದೆ. ಗೊಂಬೆಯಾಟವಾಡುವ ಹುಡುಗಿಗೆ ಎಂತಹ ಕನಸುಗಳು ಇದ್ದಾವು? ಇವಳು ತನ್ನ ಗಂಡನ ನಿರಂತರ ಕಾಮತೃಷೆಗೆ ಬಲಿಯಾದಂತಹ ಹೆಣ್ಣು. ಗಂಡ ಎಷ್ಟೇ ನೀಚನಾಗಿರಲಿ,
ಹೆಂಡತಿಗೆ ಅವನೇ
ಪರಮದೈವ ಎಂದು ನಂಬಿದ ಸಮಾಜದ ಚಿತ್ರಣ ಇಲ್ಲಿದೆ. ಆದರೆ ಕಾಲ ಬದಲಾಗುತ್ತಿರುವುದನ್ನು
ಕಾದಂಬರಿಯ ಕೊನೆಯಲ್ಲಿ ತ್ರಿವೇಣಿ ಸೂಚಿಸಿದ್ದಾರೆ. ಸೀತಮ್ಮನ ಮಗ ಮಧು ತನ್ನ ತಂದೆಯ ಪಶುವರ್ತನೆಗೆ
ಅಸಹ್ಯಪಡುತ್ತಾನೆ,
ರೇಗುತ್ತಾನೆ.
ಸೀತಮ್ಮ ಆಸ್ಪತ್ರೆಯಲ್ಲಿದ್ದಾಗ, ಅವಳ ಜೊತೆಗಿದ್ದ ವಿವಿಧ ರೋಗಿಗಳು
ವಿವಿಧ ಮನೋಧರ್ಮಗಳ
ಪ್ರತೀಕಗಳಾಗಿದ್ದಾರೆ. ಕಂದಾಚಾರದ ನಿಯಮಗಳನ್ನು ಮನಸಾ ಒಪ್ಪಿಕೊಳ್ಳುವ ರುಕ್ಮಿಣಮ್ಮ ಅಲ್ಲಿದ್ದರೆ,
ಮಧುರವಾಣಿಯಂತಹ
ಸುಶಿಕ್ಷಿತ ಆಧುನಿಕ ತರುಣಿಯೂ ಅಲ್ಲಿದ್ದಾಳೆ. ಮಧುರವಾಣಿ ಹಾಗು ಆಕೆಯ ಗಂಡ ಪರಸ್ಪರ
ಸಮಾನತೆಯಿಂದ ಹಾಗು
ಒಲವಿನಿಂದ ವರ್ತಿಸುವ ರೀತಿಯನ್ನು ತ್ರಿವೇಣಿ ನಮ್ಮ ಸಮಾಜಕ್ಕೆ ಒಂದು ಮಾದರಿಯನ್ನಾಗಿ ತೋರಿಸ ಬಯಸುತ್ತಾರೆ.
ಹೆಣ್ಣುಮಕ್ಕಳ ಕನಸುಗಳು ಹಾಗು ಆಶಯಗಳು
ಆ ಕಾಲಘಟ್ಟದಲ್ಲಿ ಚಿಗುರು ಬಿಡುತ್ತಿರುವುದನ್ನು ಮಧುರವಾಣಿ ಎನ್ನುವ, ಒಂದು ಪುಟದ ಚಿಕ್ಕ ಪಾತ್ರದ ಮೂಲಕ ತ್ರಿವೇಣಿ ತೋರಿಸುತ್ತಾರೆ. ಗಂಡನಿಗೆ ಹೆಂಡತಿಯ ಮೇಲೆ
ಬಲಾತ್ಕಾರ ಮಾಡುವ ಹಕ್ಕು ಇಲ್ಲವೆನ್ನುವ ಪ್ರತಿಪಾದನೆಯನ್ನು ತ್ರಿವೇಣಿಯವರು ಈ ಕಾದಂಬರಿಯಲ್ಲಿ
ಸುಮಾರು ೫೦ ವರ್ಷಗಳ ಹಿಂದೆಯೇ ಮಾಡಿದ್ದಾರೆ. ಈವರೆಗೂ ಇದು ಶಾಸನವಾಗದೇ ಇರುವುದು ನಮ್ಮ ಶಾಸಕರ ಅಹಂಕಾರ ತುಂಬಿದ ಪುರುಷಾಮೃಗ ಧೋರಣೆಯನ್ನು ತೋರಿಸುತ್ತದೆ. ಇಂತಹ
ಒಂದು ದುರಂತಮಯ ಕಾದಂಬರಿಯಲ್ಲಿಯೂ ಸಹ ರೋಮಾನ್ಸ್ ಇಲ್ಲದೇ ಇಲ್ಲ. ಸೀತಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡಲು
ಇಟ್ಟುಕೊಳ್ಳಲಾಗಿದ್ದ ರೋಹಿಣಿ ಎನ್ನುವ ಹುಡುಗಿಯಲ್ಲಿ, ಸೀತಮ್ಮನ ಮಗನಿಗೆ ಆಸ್ಥೆ ಹುಟ್ಟುವುದರ ಮೂಲಕ,
ರೋಮಾನ್ಸಿನ ಒಂದು ಸೆಳಕನ್ನು ತ್ರಿವೇಣಿಯವರು ಈ ಕಾದಂಬರಿಯಲ್ಲಿ ಬರೆಯದೆ ಬಿಟ್ಟಿಲ್ಲ.
‘ಹೂವು ಹಣ್ಣು’ ಕಾದಂಬರಿಯಲ್ಲಿ ಎಳೆವಯಸ್ಸಿನ ವಿಧವೆಯೊಬ್ಬಳು ಸೂಳೆಯಾಗುವಂತಹ ಪರಿಸ್ಥಿತಿಯ
ಚಿತ್ರಣವಿದೆ. ಕಾದಂಬರಿಯ ನಾಯಕಿಯು ತನ್ನ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಮಾಡುವ ತ್ಯಾಗದ ಚಿತ್ರಣ
ಈ ಕಾದಂಬರಿಯಲ್ಲಿದೆ. ಇಲ್ಲಿಯೂ ಸಹ ನಾಯಕಿಯ ಕನಸುಗಳು ಅಥವಾ ಆಶೋತ್ತರಗಳು ಅವಳ ಮಗುವಿನಲ್ಲಿ ಕೇಂದ್ರೀಕೃತವಾಗಿವೆಯೇ
ಹೊರತು ಸ್ವತಃ ತನ್ನಲ್ಲಿ ಅಲ್ಲ. ಈ ಕಾದಂಬರಿಯು ತ್ರಿವೇಣಿಯವರ ಮೊದಲ ಪ್ರಕಟಿತ ಕೃತಿ.
ತ್ರಿವೇಣಿಯವರು ಮೊದಲು ಬರೆದ ಕಾದಂಬರಿ ‘ಅಪಸ್ವರ’. ಈ ಕಾದಂಬರಿ ಪ್ರಕಾಶಕರಿಂದ
ತಿರಸ್ಕೃತವಾಯಿತು! ಸಾಮಾಜಿಕ ವಾಸ್ತವತೆಗೆ ಬಲಿಯಾದ ಹೆಣ್ಣು ಹೇಗೆ ತನ್ನ ಕನಸುಗಳನ್ನು ಸುಟ್ಟು ಹಾಕಬೇಕಾಗುತ್ತದೆ
ಎನ್ನುವುದು ಈ ಕಾದಂಬರಿಯ ತಿರುಳು. ಕಥಾನಾಯಕಿ ಮೀರಾ ತನ್ನ ಕಾಲದ
ಸಮಾಜದ ರೂಢಿಗಳ ಕೈಗೊಂಬೆಯಾದವಳು. ವೈದ್ಯಕೀಯ ಶಿಕ್ಷಣ ಪಡೆದು ಡಾ^ಕ್ಟರ್ ಆಗಬೇಕೆನ್ನುವುದು ಅವಳ ಮಹದಾಸೆ. ಆದರೆ
ತನ್ನ ಆಸೆಗೆ ವಿರುದ್ಧವಾಗಿ ಅವಳು ತನ್ನ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗುತ್ತದೆ. ಅವಳ ಮದುವೆಯು
ಹಳ್ಳಿಯ ಓರ್ವ ಶ್ರೀಮಂತ ಜಮೀನುದಾರ ಯುವಕನ ಜೊತೆಗೆ ಆಗುತ್ತದೆ. ಗಂಡ ಎಷ್ಟೇ ಒಳ್ಳೆಯವನಾದರೂ ಸಹ, ತನಗೆ
ಬೇಕಾದಾಗ ಹೆಂಡತಿಯ ಮೇಲೆ ಬಲಾತ್ಕಾರ ಮಾಡಲು ಹಿಂದೆ ಮುಂದೆ ನೋಡುವವನಲ್ಲ. ಗಂಡ ಹಳ್ಳಿಗ. ಹಳ್ಳಿಯಲ್ಲಿಯೆ
ಇರಬೇಕು ಎನ್ನುವವ; ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡಿದ ಹೆಂಡತಿಯ ಇಚ್ಛೆಗೆ ಬೆಲೆ ಇಲ್ಲ. ಮೀರಾಳ ಗೆಳತಿಯರು
ನಗರವಾಸಿಗಳು. ಮೀರಾಳಿಗಿರುವಂತೆಯೆ ಅವರಿಗೂ ಕನಸುಗಳಿವೆ. ಅವರ ಕನಸುಗಳು ಮದುವೆ ಎನ್ನುವ ಸಾಮಾಜಿಕ-ಕೌಟಂಬಿಕ
ವ್ಯವಸ್ಥೆಗೆ ಇನ್ನೂ ಸಿಲುಕಿಲ್ಲ . ಈ ಎಲ್ಲ ಪಾತ್ರಗಳು ಹೆಣ್ಣಿನ ವಿವಿಧ ಆಶಯಗಳ ಪ್ರತೀಕವಾಗಿವೆ. ಈ
ಕಾದಂಬರಿಯ ಮುಂದುವರೆದ ಭಾಗವಾದ ‘ಅಪಜಯ’ದಲ್ಲಿ ಮೀರಾ ಗಟ್ಟಿಯಾಗಿದ್ದಾಳೆ. ಹೆಣ್ಣು ಸೆಟೆದು ನಿಂತು,
ತನ್ನ ಆಶೋತ್ತರಗಳನ್ನು ಕೈಗೂಡಿಸಿಕೊಳ್ಳಬೇಕೆನ್ನುವುದು ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ಮೀರಾಳ
ಗಂಡ ತುಂಬ ಒಳ್ಳೆಯವನೇ. ಆತ ಸ್ವಾತಂತ್ರ್ಯವನ್ನು ಕೊಟ್ಟಿದ್ದರಿಂದಲೇ ಮೀರಾಳಿಗೆ ತನ್ನ ಕನಸುಗಳನ್ನು
ನನಸಾಗಿಸಲು ಸಾಧ್ಯವಾಯಿತು. ತನ್ನ ಗಂಡನನ್ನು ಹಳ್ಳಿಯಲ್ಲಿಯೇ ಬಿಟ್ಟು, ವೈದ್ಯಕೀಯ ಶಿಕ್ಷಣವನ್ನು ಕಲಿಯಲು
ನಗರಕ್ಕೆ ಹೋಗುವ ನಿರ್ಧಾರ ಮಾಡಿದ ಮೀರಾ, ತನ್ನ ಗಂಡನಿಗೆ ಹೇಳುವ ಮಾತುಗಳನ್ನು ನೋಡಿರಿ. ಸ್ತ್ರೀಯರಲ್ಲಿ
ಆಗಬೇಕಾದ ಬದಲಾವಣೆಯನ್ನು ಈ ಮಾತುಗಳು ತೋರಿಸುತ್ತವೆ ಎನ್ನಬಹುದು:
“ಈಗಂತೂ ಹಾಗೇ ಯೋಚಿಸಿದ್ದೀನಿ.
ಮುಂದೇನಾಗುವುದೋ ಹೇಳಲಾರೆ. ಈ ಗಳಿಗೆ ನಮ್ಮದು. ನಾಳೆಯಲ್ಲಿ ನನಗೆ ನಂಬಿಕೆಯಿಲ್ಲ. ಮೆಡಿಕಲ್ ಮುಗಿಯುವವರೆಗೆ
ನಾನು ಬದುಕಿದ್ದರೆ ಇಲ್ಲಿಗೇ-ನಿಮ್ಮಲ್ಲಿಗೇ ಬರುತ್ತೇನೆ. ಹೆಂಡತಿಯಂತಲ್ಲ-ಗೆಳತಿಯ ಹಾಗೆ. ಆದರೆ ನಾನು
ಯಾವ ಕೆಲಸವೂ ಇಲ್ಲದೆ ನಿಮ್ಮ ಸುಖವೇ ನನ್ನ ಸುಖ ಎಂದು ತಿಳಿದು ಇಲ್ಲಿಯೆ ಇರಲಾರೆ. ಗಂಡನೇ ನನ್ನ
ದೇವರು, ಅವನ ಸುಖವೇ ತನ್ನ ಸುಖ ಎಂದು ಭಾವಿಸುವ ಕಾಲ ಹೋಯಿತು. ಹೆಂಗಸು ತನ್ನ ಪತಿಗಿಂತಲೂ ತನ್ನ ವ್ಯಕ್ತಿತ್ವ,
ಅಭಿಪ್ರಾಯ, ಆತ್ಮವನ್ನು ಪ್ರೀತಿಸುತ್ತಾಳೆ. ನನ್ನ ಮಹದಾಸೆಯನ್ನು ನೀವು ಗೌರವಿಸುತ್ತಿರುವದಕ್ಕಾಗಿ
ನಾನು ಅತ್ಯಂತ ಕೃತಜ್ಞಳು.” (Highlighting ನನ್ನದು.)
ಹೆಣ್ಣನ್ನು ಹತ್ತಿಕ್ಕುವ ಕಂದಾಚಾರದ
ವ್ಯವಸ್ಥೆಯಿಂದ ಹೆಣ್ಣು ಹೊರಬರಬೇಕೆನ್ನುವ ಆಶಯವನ್ನು ಹಾಗು ಆ ಸಂಧಿಕಾಲವನ್ನು ತ್ರಿವೇಣಿ ಈ ಮಾತುಗಳ
ಮೂಲಕ ಸೂಚಿಸುತ್ತಿದ್ದಾರೆ.
ತ್ರಿವೇಣಿಯವರ ನಾಯಕಿಯರು ರೋಮ್ಯಾಂಟಿಕ್
ಸ್ವಭಾವದವರು. ಕ್ಷಿಪ್ರವಾಗಿ ಗಂಡಿನ ಪ್ರೀತಿಯಲ್ಲಿ ಸಿಲುಕುವವರು. ಇದು ತ್ರಿವೇಣಿ-ಕಾದಂಬರಿಗಳ ಬಹುತೇಕ
ನಾಯಕಿಯರ ಒಂದು ವ್ಯಕ್ತಿತ್ವ ವಿಶೇಷ. ಹಾಗೆಂದು ಅವರ ನಾಯಕಿಯರು ಎಲ್ಲಿಯೂ stereo-type ಆಗಿಲ್ಲ.
ಅವರ ಕಾದಂಬರಿ ‘ಕಂಕಣ’ ಹಾಗು ಅದರ ಎರಡನೆಯ ಭಾಗವಾದ ‘ಮುಕ್ತಿ’ಯಲ್ಲಿ ೬ ಜನ ನಾಯಕಿಯರಿದ್ದಾರೆ. ಈ ಎಲ್ಲ
ನಾಯಕಿಯರು ಕಾ^ಲೇಜಿನ ಸಹಪಾಠಿಗಳು. ಇವರೆಲ್ಲರ ಸಾಮಾಜಿಕ, ಕೌಟಂಬಿಕ ಪರಿಸ್ಥಿತಿಗಳು ಭಿನ್ನವಾಗಿವೆ.
ಇವರ ಮನೋಧರ್ಮಗಳೂ ಸಹ ವಿಭಿನ್ನವಾಗಿವೆ. ಆದರೆ ಕಾ^ಲೇಜಿನ ವಿದ್ಯಾಭ್ಯಾಸವನ್ನು ಪೂರೈಸಿ, ಒಂದು ಪದವಿಯನ್ನು
ದೊರಕಿಸಿದ ಬಳಿಕ ಈ ಹುಡುಗಿಯರಿಗೆ ಇರುವುದು ಎರಡೇ ಎರಡು destiny: ಮದುವೆ ಅಥವಾ ಉದ್ಯೋಗ. ಮದುವೆಯೇ ಇವರೆಲ್ಲರ ಪ್ರಥಮ ಆಯ್ಕೆ.
ಕೆಲವೊಂದು ಆಧುನಿಕ ಕುಟುಂಬಗಳಲ್ಲಿ ಅಥವಾ ಬಡತನದ ಕುಟುಂಬಗಳಲ್ಲಿ ಮದುವೆಯಾಗದ ಹುಡುಗಿ ಉದ್ಯೋಗಕ್ಕಾಗಿ
ಪ್ರಯತ್ನಿಸಬಹುದು. ಆದರೆ ಸಾಂಪ್ರದಾಯಕ ಕುಟುಂಬಗಳಲ್ಲಿ ಇಂತಹ ಹೆಣ್ಣು ‘ಕಡತರ ಮುಲ್ಲಿ’ಯಾಗಿ ಮನೆಯಲ್ಲಿ
ಮುಸುರೆ ತಿಕ್ಕುತ್ತ ಮೂಲೆಯೊಂದರಲ್ಲಿ ಬದುಕು ಸವೆಸಬೇಕು. ಇದು ಆ ಕಾಲದ (ಹಾಗು ಈ ಕಾಲದ್ದೂ ಸಹ!) ಕಟು
ವಾಸ್ತವತೆ. ಈ ಕಾದಂಬರಿಯಲ್ಲಿಯ ಒಬ್ಬ ನಾಯಕಿಯು ಹೇಳುವ
ಮಾತುಗಳು ಈ ವಾಸ್ತವತೆಯ ಪ್ರತಿಬಿಂಬವಾಗಿವೆ:
“… ಮನುಷ್ಯ ಯಾವ ಬಗೆಯ ಆಸೆಗಳನ್ನೂ
ಇಟ್ಟುಕೊಳ್ಳದಿದ್ದರೆ, ಅವನಿಗೆ ನಿರಾಸೆಯಾಗುವುದಿಲ್ಲ. ನನ್ನಗಂಡ ಸುರೂಪಿಯಾಗಿರಬೇಕು, ಕುಬೇರನಾಗಿರಬೇಕು,
ರಸಿಕನಾಗಿರಬೇಕು ಎಂದು ಕನಸು ಕಟ್ಟಿ ಅನಂತರ ಅದು ಭಗ್ನವಾದರೆ ಸಹಜವಾಗಿ ನಮಗೆ ನಿರಾಸೆಯಾಗುತ್ತದೆ….”
ಹಾಗೆಂದು ಈ ಯುವತಿಯರಿಗೆ ಕನಸುಗಳು ಇಲ್ಲವೆಂತಲ್ಲ. ಸರ್ವಜ್ಞನ ವಚನವೊಂದನ್ನು ಸ್ವಲ್ಪ
ಮಾರ್ಪಡಿಸಿ ಹೇಳುವದಾದರೆ:
“ಬೆಚ್ಚನಾ ಮನೆಯಾಗಿ, ವೆಚ್ಚಕ್ಕೆ
ಹೊನ್ನಾಗಿ
ಇಚ್ಛೆಯಾನರಿವ ಪತಿಯೊಬ್ಬ ದೊರೆತರೆ
ಹೆಚ್ಚೇನು ಬೇಕು ಸರ್ವಜ್ಞ”
(!)
ಇಚ್ಛೆಯಾನರಿವ ಈ ಗಂಡ ಹೇಗಿರಬೇಕು
ಎನ್ನುವದನ್ನು ಅರಿಯಲು ಈ ಕಾದಂಬರಿಯ ಮತ್ತೊಬ್ಬ ನಾಯಕಿ ಹೇಳುವ ಮಾತುಗಳನ್ನು ನೋಡೋಣ: “ನಾನು ಮೆಚ್ಚುವ ಗಂಡಸು ಹುಲಿಯಂತೆ ಕ್ರೂರನಾಗಿರಬೇಕು, ತೋಳನಂತೆ
ಹಸಿವುಳ್ಳವನಾಗಿರಬೇಕು, ಜಿಂಕೆಯಂತೆ ಸುಂದರನಾಗಿರಬೇಕು, ಮೊಲದಂತೆ ಸಾಧುವಾಗಿರಬೇಕು, ಸಲಗದಂತೆ ಪುಂಡನಾಗಿರಬೇಕು…”
ಇದು ಬಹುಶಃ ಆ ಸಂಧಿಕಾಲದ ಅನೇಕ ಯುವತಿಯರ ಕನಸಾಗಿರಬಹುದು!
ತ್ರಿವೇಣಿಯವರ ಕಾದಂಬರಿಗಳ ನಾಯಕಿಯರು
ಕನಸು ಕಾಣುತ್ತಾರೆ. ಸಹಜವಾಗಿಯೇ ಈ ಕನಸುಗಳು ಪ್ರೇಮಿಸುವ ಪತಿ, ನೆಮ್ಮದಿಯ ಬದುಕು ಇಂತಹ ವಿಷಯಗಳ ಬಗೆಗೆ
ಇವೆ. ಆದರೆ ತ್ರಿವೇಣಿಯವರ ಅತಿ ಮಹತ್ವದ ಪ್ರತಿಪಾದನೆ ಎಂದರೆ ಹೆಣ್ಣಿಗೆ ಇರಬೇಕಾದ ಪ್ರೇಮಸ್ವಾತಂತ್ರ್ಯ.
‘ಹೆಣ್ಣು ಕೇವಲ ಗಂಡಿನ ಕಾಮದ ಬೊಂಬೆ , ಅವಳೊಂದು ಹೆರಿಗೆ ಯಂತ್ರ ಮಾತ್ರ. ಎಲ್ಲ ಜೀವಿಗಳಲ್ಲಿ ಇರುವಂತೆ
ಪ್ರೇಮದ ಸಹಜ ಬಯಕೆ ಹಾಗು ಕಾಮಪ್ರವೃತ್ತಿ ಹೆಣ್ಣಿನಲ್ಲಿ ಇರತಕ್ಕದ್ದಲ್ಲ; ಇದು ನಾಚಿಕೆಗೇಡು’ ಎಂದು
ಭಾವಿಸಿದ ಕಾಲಘಟ್ಟದಲ್ಲಿ ತ್ರಿವೇಣಿಯವರು ಹೆಣ್ಣಿನ ಪ್ರಣಯಸ್ವಾತಂತ್ರ್ಯವನ್ನು ಎತ್ತಿ ಹಿಡಿದರು. ಇವರ
ಕಾದಂಬರಿಗಳ ನಾಯಕಿಯರು ಪ್ರೀತಿಸುವ ನಾಯಕರನ್ನು ನೋಡಿರಿ; ಎಷ್ಟು ವಿವಿಧತೆ ಇದೆ ಅವರಲ್ಲಿ. ಸಾಂಪ್ರದಾಯಕ ರೂಢಿಯ ಚೌಕಟ್ಟನ್ನು ಮೀರಿ ನಿಂತವರು ಈ ನಾಯಕಿಯರು.
ಇಂತಹ ಕೆಲವು ಕಾದಂಬರಿಗಳನ್ನು ನೋಡೋಣ:
‘ಹೃದಯಗೀತೆ’ ಎನ್ನುವ ಕಾದಂಬರಿಯಲ್ಲಿ,
ಕಾದಂಬರಿಯ ನಾಯಕಿಯು ತನ್ನ ಕಾ^ಲೇಜಿನ ಸಹಪಾಠಿಯ ತಂದೆಯನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಅವನ ವಯಸ್ಸು
ಇವಳ ಪ್ರೇಮದ ಹರಿವಿಗೆ ಅಡ್ಡವಾಗುವುದಿಲ್ಲ! ತ್ರಿವೇಣಿಯವರ
‘ಮುಕ್ತಿ’ ಕಾದಂಬರಿಯಲ್ಲಿ ಕಥಾನಾಯಕಿಯು ತನ್ನ ಪ್ರೇಮಿಯ ಪ್ರೇಮವನ್ನು ತಿರಸ್ಕರಿಸುತ್ತಾಳೆ. ಆತನಿಗೆ
ಈಗಾಗಲೇ ಮದುವೆಯಾಗಿದ್ದು, ಆತನ ಹೆಂಡತಿ ರೋಗಗ್ರಸ್ತೆಯಾಗಿರುತ್ತಾಳೆ. ಅವರೀರ್ವರ ನಡುವೆ ದೈಹಿಕ ಸಂಪರ್ಕವೇ
ಇರುವುದಿಲ್ಲ. ರೋಗ ಉಲ್ಬಣಿಸಿ, ಆಕೆ ತೀರಿಕೊಂಡ ಬಳಿಕ ಈತ ಮತ್ತೊಮ್ಮೆ ನಮ್ಮ ನಾಯಕಿಯಲ್ಲಿ ಪ್ರೇಮಯಾಚನೆ
ಮಾಡುತ್ತಾನೆ. ಈ ವಿಧುರನನ್ನು ನಮ್ಮ ನಾಯಕಿ ಒಪ್ಪಿಕೊಳ್ಳುತ್ತಾಳೆ!
ತ್ರಿವೇಣಿಯವರ ಮತ್ತೊಂದು ಕಾದಂಬರಿ
‘ತಾವರೆಕೊಳ’ವು ಆ ಕಾಲದ ಒಂದು ಕ್ರಾಂತಿಕಾರಿ ಕಾದಂಬರಿ ಎನ್ನಬಹುದು. ಕ್ರಾಂತಿಕಾರಿ ಎಂದರೆ ಕೇವಲ ವೈಚಾರಿಕವಾಗಿ
ಎನ್ನುವುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳೋಣ. ಈ ಕಾದಂಬರಿಯ ನಾಯಕಿಯು ಮುಂಬಯಿ ನಗರದ ನಿವಾಸಿ.
ಇವಳ ಗಂಡನ ಹಳೆಯ ಗೆಳೆಯನೊಬ್ಬನು ಮೈಸೂರಿನವನು. ಆತನ ತಮ್ಮ ಒಬ್ಬ ಕಾ^ಲೇಜು ವಿದ್ಯಾರ್ಥಿ. ಆತ ಖಿನ್ನತೆಯಲ್ಲಿ
ಮುಳುಗಿದ್ದಾನೆ. ಅವನನ್ನು ಸುಧಾರಿಸಲು ಅವನನ್ನು ಮೈಸೂರಿನಿಂದ ಮುಂಬಯಿಗೆ ಕಳುಹಿಸಲಾಗಿದೆ. ಮುಂಬಯಿಯ
ನಿವಾಸಿಗಳು ಹೇಳೀ ಕೇಳೀ ಆಧುನಿಕರು. ಈ ಮುಂಬಯಿ ಕುಟುಂಬದ ಪರಿಚಯದ ಒಬ್ಬ ಲೋಕಲ್ ಹುಡುಗಿಯನ್ನು ಈ ಹುಡುಗನಿಗೆ
ಜೋಡಿ ಮಾಡುವ ವಿಚಾರಗಳೂ ಆ ಕುಟುಂಬಕ್ಕೆ ಇವೆ. ಆದರೆ ಕಾದಂಬರಿಯ ನಾಯಕಿಯೆ ತನಗಿಂತ ಚಿಕ್ಕವನಾದ ಈ ಹುಡುಗನನ್ನು
ಸಾವಕಾಶವಾಗಿ ಪ್ರೀತಿಸಲು ಪ್ರಾರಂಭಿಸುತ್ತಾಳೆ. ತಾವರೆಯ ಕೊಳದಲ್ಲಿ ಇಳಿದವರು ತಾವರೆಯ ಬಳ್ಳಿಗಳಲ್ಲಿ
ಸಿಕ್ಕಿ ಹಾಕಿಕೊಳ್ಳುತ್ತಾರೆ. ಬಿಡಿಸಿಕೊಂಡು ಹೊರಬರುವುದು ಅವರಿಗೆ ಸಾಧ್ಯವಾಗಲಾರದು. ಪ್ರೇಮದಲ್ಲಿ
ಸಿಲುಕಿಕೊಳ್ಳುವರ ಪರಿಸ್ಥಿತಿಯೂ ಅಷ್ಟೇ!
ಸಾವಕಾಶವಾಗಿ ಆ ಹುಡುಗನ ಮನೋಸ್ಥಿತಿಯಲ್ಲಿ
ಸುಧಾರಣೆಯಾಗುತ್ತದೆ. ಆತ ತನ್ನ ಊರಿಗೆ ಮರಳುತ್ತಾನೆ. ಆದರೆ ಆತನ ನೆನಪು ನಾಯಕಿಯಲ್ಲಿ ಗಟ್ಟಿಯಾಗಿ
ಉಳಿದು ಬಿಡುತ್ತದೆ. ಈ ಇಬ್ಬರಲ್ಲಿ ಯಾವುದೇ ಪ್ರಣಯ ಸಂಭವಿಸುವದಿಲ್ಲ. ಯಾಕೆಂದರೆ ಆ ಕಾಲದಲ್ಲಿ ಅದು
ಕಲ್ಪನಾತೀತ ಹಾಗು ಸ್ವತಃ ಲೇಖಕಿಗೆ ಒಪ್ಪಿಗೆಯಾಗದ ಮಾತು. ಈ ಪ್ರೇಮವ್ಯವಹಾರವು ನಮ್ಮ ನಾಯಕಿಯ ಮನೋರಂಗದಲ್ಲಿ ನಡೆಯುವ
ಭಾವಲಹರಿ ಮಾತ್ರ. ಕಾದಂಬರಿಯ ಕೊನೆಯಲ್ಲಿ, ಆ ಹುಡುಗನು ತನ್ನ ಊರಿಗೆ ಮರಳಿ ಹೋದ ದಿನದಂದು, ನಾಯಕಿಯಲ್ಲಿ ಆ ಹುಡುಗನ ನೆನಪು ಎಷ್ಟು ತೀವ್ರವಾಗಿದೆ ಎಂದರೆ,
ಆ ರಾತ್ರಿ ಅವಳು ತನ್ನ ಪತಿಯ ಪ್ರಣಯಯಾಚನೆಗೆ ಸ್ಪಂದಿಸುವುದಿಲ್ಲ.
ಹೆಣ್ಣಿಗೆ ಇರಬೇಕಾದ ಸ್ವಾತಂತ್ರ್ಯದ ಎಲ್ಲ ಮಗ್ಗಲುಗಳನ್ನು ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ
ತೋರಿಸಿದ್ದಾರೆ ಎನ್ನಲು ಈ ಕಾದಂಬರಿ ಒಂದು ಉತ್ತಮ ಉದಾಹರಣೆ. (ಈ ಕಾದಂಬರಿಗೆ ಸಾಹಿತ್ಯ ಅಕ್ಯಾಡೆಮಿಯ
ಪುರಸ್ಕಾರ ಸಿಕ್ಕಿದೆ ಎನ್ನುವುದು ನನ್ನ ನೆನಪು.)
ಹೆಣ್ಣಿನ ಕಾಮದ ಬಯಕೆಯನ್ನು
ತ್ರಿವೇಣಿಯವರು ನಿಸ್ಸಂಕೋಚವಾಗಿ ಎತ್ತಿ ಹಿಡಿಯುತ್ತಾರೆ; ಆದರೆ ವಿವಾಹಬಾಹಿರ ಕಾಮವನ್ನು ಅವರು ಎಂದೂ
ಪುರಸ್ಕರಿಸಿಲ್ಲ. ಅವರ ‘ಸೋತು ಗೆದ್ದವಳು’ ಕಾದಂಬರಿಯಲ್ಲಿ ನಾಯಕಿಯು ತನ್ನ ಗಂಡನ ದೀರ್ಘಾವಧಿಯ ವಿರಹಕಾಲದಲ್ಲಿ
ಮತ್ತೊಬ್ಬ ಗಂಡಿನ ಕಾಮಕ್ಕೆ ಬಲಿಯಾಗುತ್ತಾಳೆ ಎನ್ನುವುದೇನೊ ನಿಜ. ಆದರೆ ಅವಳು ಇದಕ್ಕಾಗಿ ಪರಿತಪಿಸುತ್ತಾಳೆ.
ತನ್ನ ಗಂಡ ವಿದೇಶದಿಂದ ಮರಳಿದ ಬಳಿಕ ತನ್ನ ‘ತಪ್ಪನ್ನು’ ಒಪ್ಪಿಕೊಳ್ಳುತ್ತಾಳೆ. ವಿದೇಶದಲ್ಲಿದ್ದಾಗ
ಆತನೂ ಸಹ ಕಾಲು ಜಾರಿರುತ್ತಾನೆ. ಹೀಗಿರುವಾಗ ಗಂಡಿಗೆ ಒಂದು ನಿಯಮ, ಹೆಣ್ಣಿಗೆ ಒಂದು ನಿಯಮ ಎನ್ನುವುದು
ಸರಿಯಲ್ಲ ಎನ್ನುವ ತಿಳಿವಳಿಕೆಯಿಂದ, ನಾಯಕನು ನಾಯಕಿಯ ‘ತಪ್ಪ’ನ್ನು ಕ್ಷಮಿಸಿ ಬಿಡುತ್ತಾನೆ! ಈ ಕಾದಂಬರಿಯಲ್ಲಿ
ವಿವಾಹಬಾಹಿರ ಕಾಮವನ್ನು ತ್ರಿವೇಣಿಯವರು ಪುರಸ್ಕರಿಸಿಲ್ಲ. In fact ಅವರ ಮತ್ತೊಂದು ಕಾದಂಬರಿಯಲ್ಲಿ
ವಿವಾಹಪೂರ್ವ ಪ್ರಣಯದಲ್ಲಿ ಸಿಲುಕಿದ ತರುಣಿಯೊಬ್ಬಳು, ಆ ಕಾರಣದಿಂದಾಗಿ ತನ್ನ ಮನೋಸ್ವಾಸ್ಥ್ಯವನ್ನೇ
ಕಳೆದುಕೊಂಡಿದ್ದರ ಚಿತ್ರಣವಿದೆ. ಆ ಕಾದಂಬರಿ : ಶರಪಂಜರ! ಪುಟ್ಟಣ್ಣ ಕಣಗಾಲರ ಅದ್ಭುತ ನಿರ್ದೇಶನದಲ್ಲಿ
ಇದೊಂದು ಅಪರೂಪದ ಚಲನಚಿತ್ರವಾಯಿತು.
ತ್ರಿವೇಣಿಯವರ ‘ಮೊದಲ ಹೆಜ್ಜೆ’
ಕಾದಂಬರಿ ನನ್ನ ನೆಚ್ಚಿನ ಕಾದಂಬರಿ. ಈ ಕಾದಂಬರಿ ಮೂರು ವಿಭಾಗಗಳಲ್ಲಿದೆ. ಮೊದಲನೆಯ ವಿಭಾಗದಲ್ಲಿ ಕಾದಂಬರಿಯ ನಾಯಕಿ ತನ್ನ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾಳೆ.
ಇವಳು ತನ್ನ ಶಾಲಾಮಾಸ್ತರ ಅಪ್ಪನ ಮೊದಲನೆಯ ಮಗಳು. ಕಪ್ಪು ಹುಡುಗಿ ಎನ್ನುವ ಕಾರಣಕ್ಕಾಗಿ ಇವಳ ತಂದೆ,
ತಾಯಿಗೆ ಇವಳಲ್ಲಿ ಅಕರಾಸ್ತೆ ಕಡಿಮೆ. ಇವಳ ತಂಗಿ ಬೆಳ್ಳಗಿನ ಹುಡುಗಿ. ಆದುದರಿಂದ ಅವಳ ಮದುವೆಯೇ ಮೊದಲು
ಜರಗುತ್ತದೆ. ಬಾಣಂತಿ ತಂಗಿಗೆ ನೆರವಾಗಲು, ಮದುವೆಯಾಗದ ಅಕ್ಕ ಅವಳ ಜೊತೆಗೆ, ಅವಳ ಮನೆಗೆ ಹೋಗುತ್ತಾಳೆ.
ಎರಡನೆಯ ವಿಭಾಗದಲ್ಲಿ ಕಾ^ಲೇಜಿನ ಹುಡುಗನೊಬ್ಬನ ಸ್ವ-ಕಥನವಿದೆ.
ಆತ ಈ ತಂಗಿಯ ಮನೆಯ ಹೊರಕೋಣೆಯಲ್ಲಿ ಬಾಡಿಗೆಗೆ ಇದ್ದವನು. ಸ್ವಲ್ಪ ಶೋಕಿ ಹುಡುಗ. ಮದುವೆಯಾಗದ ಈ ಹುಡುಗಿಯನ್ನು
ಆತ ತನ್ನ ಬಲೆಗೆ ಬೀಳಿಸುತ್ತಾನೆ. ಇವಳೂ ಸಹ ಹಸಿದ ಹುಡುಗಿಯೇ. ಆತನ ಬಲೆಗೆ ಸುಲಭವಾಗಿ
ಬೀಳುತ್ತಾಳೆ. ‘ಹಿಟ್ಟು ಹಳಸಿತ್ತು; ನಾಯಿ ಹಸಿದಿತ್ತು’ ಎನ್ನುವ ಮಾತಿನ ಮೂಲಕ ಹೆಂಗಸರಲ್ಲೂ ಸಹ ಕಾಮದ
ಬಯಕೆ ಗಂಡಿಗಿರುವಷ್ಟೇ ಸಹಜವಾದದ್ದು ಎನ್ನುವುದನ್ನು ತ್ರಿವೇಣಿ ಸ್ಪಷ್ಟ ಪಡಿಸುತ್ತಾರೆ.
ಮೂರನೆಯ ವಿಭಾಗವು ಒಂದು ಜೈಲಿನ ಒಳಭಾಗದಲ್ಲಿ ನಡೆಯುತ್ತದೆ.
ನಮ್ಮ ಕಪ್ಪು ಹುಡುಗಿಯೇ ಈ ವಿಭಾಗವನ್ನು ಹೇಳುವ
ನಾಯಕಿ! ಕಳ್ಳಬಸಿರಿನ ಫಲವನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದಾಕೆ! ಪ್ರಣಯದ ವ್ಯವಹಾರದಲ್ಲಿ
ಇವಳದು ಅರ್ಧ ಮಾತ್ರ ತಪ್ಪೆಂದು ಹೇಳಬಹುದಾದರೂ ಸಹ, ಇವಳು ಅನುಭವಿಸಿದ ಶಿಕ್ಷೆಯನ್ನು ನೋಡಿದಾಗ, ವಿವಾಹಪೂರ್ವ
ಕಾಮವನ್ನು ತ್ರಿವೇಣಿಯವರು ತಿರಸ್ಕರಿಸುತ್ತಾರೆ ಎಂದು ಹೇಳಬಹುದು.
ಅವಿವಾಹಿತ ಕನ್ಯೆಯರ ಪ್ರಣಯಸ್ವಾತಂತ್ರ್ಯಕ್ಕೆ
ಮಾತ್ರ ತ್ರಿವೇಣಿಯವರ ಕಾದಂಬರಿಗಳು ಪರಿಮಿತವಾಗಿಲ್ಲ. ‘ಮುಚ್ಚಿದ ಬಾಗಿಲು’ ಹಾಗು ‘ಹಣ್ಣೆಲೆ ಚಿಗುರಿದಾಗ’
ಕಾದಂಬರಿಗಳಲ್ಲಿ ವಿಧವೆಯರಿಗೂ ಸಹ ಪ್ರೇಮದ ಕನಸುಗಳು ಇರುತ್ತವೆ; ಅವರೂ ಸಹ ಮರುಮದುವೆಯಾಗಿ, ಮತ್ತೊಬ್ಬ
ಗಂಡಿನೊಡನೆ ದಾಂಪತ್ಯಜೀವನವನ್ನು ಮತ್ತೊಮ್ಮೆ ಅನುಭವಿಸಲು ಬಯಸುತ್ತಾರೆ ಎನ್ನುವದನ್ನು ತ್ರಿವೇಣಿ ನಿರೂಪಿಸಿದ್ದಾರೆ.
‘ಹಣ್ಣೆಲೆ ಚಿಗುರಿದಾಗ’ ಇದು ತೋರಿಕೆಗೆ ವಿನೋದಮಯ ಕಾದಂಬರಿಯಾಗಿದ್ದರೂ, ಆಂತರ್ಯದಲ್ಲಿ ಇದು ಹೆಣ್ಣಿನ
ಮನೋರಂಗವನ್ನು ಪ್ರತಿಬಿಂಬಿಸುವ ಕಾದಂಬರಿಯೇ ಆಗಿದೆ. ಈ ಕಾದಂಬರಿಯಲ್ಲಿ ಓರ್ವ ವಿಧವೆಯ ಮದುವೆಯಾಗುವುದು
ಮತ್ತೋರ್ವ ವಿಧುರನ ಜೊತೆಗೆ. ಆದರೆ ‘ಮುಚ್ಚಿದ ಬಾಗಿಲು’ ಕಾದಂಬರಿಯಲ್ಲಿ ಓರ್ವ ವಿಧವೆಯ ಮದುವೆಯಾಗುವುದು
ಅವಿವಾಹಿತ ತರುಣನ ಜೊತೆಗೆ.
ಪ್ರಣಯದ ಬಯಕೆಯಂತೆಯೇ ಪ್ರಣಯದ
ನಿರಾಕರಣೆಯೂ ಸಹ ಹೆಣ್ಣಿನ ಹಕ್ಕಾಗಿದೆ. ‘ಬೆಳ್ಳಿ ಮೋಡ’ ಕಾದಂಬರಿಯಲ್ಲಿ ವ್ಯವಹಾರಸ್ಥ ಗಂಡಸನ್ನು ಕಾದಂಬರಿಯ
ನಾಯಕಿಯು ತಿರಸ್ಕರಿಸುತ್ತಾಳೆ! ಕಾಲ ಕಳೆದಂತೆ ದಾಂಪತ್ಯಪ್ರೇಮವು ಮಸುಕಾಗುವದನ್ನು ‘ಬಾನು ಬೆಳಗಿತು’
ಕಾದಂಬರಿಯಲ್ಲಿ ನೋಡಬಹುದು.
After all ಹೆಣ್ಣು ಎಂತಹ ಗಂಡನ್ನು
ಬಯಸುತ್ತಾಳೆ? ‘ಮುಚ್ಚಿದ ಬಾಗಿಲು’ ಹಾಗು ‘ಬೆಕ್ಕಿನ ಕಣ್ಣು’ ಕಾದಂಬರಿಗಳಲ್ಲಿ ಇದರ ಸುಳಿವು ಸಿಗುತ್ತದೆ.
ಎಂತಹ ಪರಿಸ್ಥಿತಿಯಲ್ಲಿಯೂ ತನಗೆ ಮಾನಸಿಕ ಆಲಂಬನೆಯನ್ನು ಕೊಡುವ ಗಂಡಸನ್ನು ಹೆಣ್ಣು ಬಯಸುತ್ತಾಳೆ ಎನ್ನುವುದನ್ನು
ತ್ರಿವೇಣಿಯವರ ಕಾದಂಬರಿಗಳಲ್ಲಿ ನೋಡಬಹುದು. ಹೆಣ್ಣಿನ ಅಂತರಂಗವನ್ನು, ಅವಳ ಕನಸುಗಳನ್ನು, ಅವಳ ಆಶೋತ್ತರಗಳನ್ನು
ತ್ರಿವೇಣಿ ತಮ್ಮ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ. ಇಂತಹ ಉತ್ತಮ ಲೇಖಕಿಗೆ ಜನಪ್ರಿಯತೆ ಧಾರಾಳವಾಗಿ
ದೊರೆಯುವದರಲ್ಲಿ ಆಶ್ಚರ್ಯವಿಲ್ಲ. ಆದರೆ ತ್ರಿವೇಣಿಯವರಿಗೆ ವಿಮರ್ಶಕರಿಂದ ಸರಿಯಾದ ಸನ್ಮಾನ ದೊರೆತಿಲ್ಲ
ಎನ್ನುವುದು ಖೇದದ ಸಂಗತಿ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರಂತೂ ತ್ರಿವೇಣಿಯವರ
ಕಾದಂಬರಿಗಳನ್ನು ಅಪಕ್ವ ಕನಸುಗಳ ಸಾಹಿತ್ಯ ಎಂದು ಕರೆದಿದ್ದಾರೆ. ಈ ಅನ್ಯಾಯದ ಮಾತಿಗಾಗಿ ಕುರ್ತಕೋಟಿಯವರನ್ನು
ನಾನು ಅಪಕ್ವ ವಿಮರ್ಶಕ ಎಂದು ಕರೆಯಲು ಹಿಂಜರಿಯುವದಿಲ್ಲ! ತ್ರಿವೇಣಿಯವರ ನಾಯಕಿಯರ ಅಂತರಂಗವನ್ನು ಕುರ್ತಕೋಟಿಯವರು
ಅರಿಯದೇ ಹೋದದ್ದು , ವಿಮರ್ಶೆಯಲ್ಲಿ ಅವರು ಎಡವಿದ್ದನ್ನು ತೋರಿಸುತ್ತದೆ ಎನ್ನಬಹುದು.
ಹೆಣ್ಣು ಕಂದಾಚಾರದ ಪಂಜರದಲ್ಲಿ
ಸಿಲುಕಿದ ಕಾಲಘಟ್ಟದಲ್ಲಿ, ಈ ಪಂಜರದ ಪಕ್ಷಿಗೆ ಭಾವನೆಗಳ ಸ್ವಾತಂತ್ರ್ಯವಿದೆ, ಹಾಡುವ ಸ್ವಾತಂತ್ರ್ಯವಿದೆ
ಎನ್ನುವುದನ್ನು ತ್ರಿವೇಣಿ ತೋರಿಸಿದರು. ಕನ್ನಡ ಸಾಹಿತ್ಯದಲ್ಲಿ ಅವರನ್ನು ಅಮರಗೊಳಿಸಲು ಇದೊಂದೇ ಕಾರಣವು
ಸಾಕು.