Sunday, July 12, 2015

ನಾಗದೇವತೆಯ ನ್ಯಾಯ



ಅಜ್ಜಿ ಹೇಳುವ ಕತೆಗಳು ಚಿಕ್ಕ ಮಕ್ಕಳಿಗೆ ತುಂಬ ಪ್ರಿಯವಾದ ಕತೆಗಳು. ಈ ಕತೆಗಳಲ್ಲಿ ಬರುವ ಪ್ರಾಣಿ ಹಾಗು ಪಕ್ಷಿಗಳು ಮನುಷ್ಯರಂತೆ ವರ್ತಿಸುತ್ತವೆ, ಮನುಷ್ಯರಂತೆ ಮಾತನಾಡುತ್ತವೆ. ಇಂತಹ ಕತೆಗಳಲ್ಲಿ ಅತಿ ಸುರಮ್ಯವಾದ ಕತೆಯೊಂದು ನಾಗರ ಹಾವಿಗೆ ಸಂಬಂಧಿಸಿದ ಕತೆಯಾಗಿದೆ. ಈ ಕತೆಯನ್ನು ನೀವೆಲ್ಲರೂ ಬಾಲ್ಯದಲ್ಲಿ ಕೇಳಿರಬಹುದು. ಇದೇ ಕತೆಯನ್ನು ಆಧರಿಸಿ ಗಿರೀಶ ಕಾರ್ನಾಡರು ‘ನಾಗಮಂಡಲ’ ಎನ್ನುವ ಚಲನಚಿತ್ರವನ್ನು ನಿರ್ಮಿಸಿದರು. ನನ್ನ ಅಜ್ಜಿಯಿಂದ ನಾನು ಕೇಳಿದ ಕತೆಗೆ ಹಾಗು ಕಾರ್ನಾಡರ ‘ನಾಗಮಂಡಲ’ದ ಕತೆಗೆ ಕೆಲವು ವ್ಯತ್ಯಾಸಗಳಿವೆ. ಆದರೆ ಕತೆಯ ಕೊನೆ ಮಾತ್ರ ಒಂದೇ ಆಗಿದೆ. ಪ್ರಸಿದ್ಧ ನಾಟಕಕಾರ ಹಾಗು ಚಿಂತಕರಾದ ಶ್ರೀ ವ್ಯಾಸ ದೇಶಪಾಂಡೆಯವರು ಕೆಲವು ದಿನಗಳ ಹಿಂದೆ ಈ ಕತೆಯ ಕೊನೆಯಲ್ಲಿ ಅಡಗಿರುವ ನ್ಯಾಯಸೂಕ್ಷ್ಮತೆ ಹಾಗು ಧರ್ಮಸೂಕ್ಷ್ಮತೆಗಳ ಬಗೆಗೆ ಕೆಲವು ಮಾತುಗಳನ್ನು ತಿಳಿಸಿದರು. ಆ ಸೂಕ್ಷ್ಮತೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಮೊದಲು ಈ ಕತೆಯ ಸಾರಾಂಶವನ್ನು ಹೇಳುವುದು ಉಚಿತವಾದೀತು.

ಒಂದು ಹಳ್ಳಿ. ಆ ಹಳ್ಳಿಯಲ್ಲಿ ಗಂಡ ಹಾಗು ಹೆಂಡತಿ ಮಾತ್ರ ಇರುವ ಒಂದು ಕುಟುಂಬ. ಗಂಡನಿಗೆ ವಿಪರೀತ ಹೊರಚಾಳಿ. ಹೀಗಾಗಿ ಹೆಂಡತಿಯೊಡನೆ ಆತ ಮಲಗಿಯೇ ಇಲ್ಲ. ಹೆಂಡತಿ ಹಳ್ಳಿಯಲ್ಲಿರುವ ಜಾಣ ಮುದುಕಿಯೊಬ್ಬಳ ಎದುರಿಗೆ ತನ್ನ ಸಂಕಟವನ್ನು ತೋಡಿಕೊಂಡಾಗ, ಆ ಮುದುಕಿಯು ಇವಳಿಗೆ ಒಂದು ವಶೀಕರಣದ ಮದ್ದನ್ನು ತಯಾರಿಸಿ ಕೊಡುತ್ತಾಳೆ. ‘ಈ ಮದ್ದನ್ನು ಹಾಲಿನಲ್ಲಿ ಬೆರಸಿ, ಗಂಡನಿಗೆ ಕುಡಿಸಿದರೆ, ಆತ ಹೆಂಡತಿಯಲ್ಲಿ ಮೋಹಗೊಳ್ಳುತ್ತಾನೆ’ ಎಂದು ಹೇಳುತ್ತಾಳೆ. ಆ ರಾತ್ರಿ ಈ ಹುಡುಗಿ ಹಾಲಿನಲ್ಲಿ ಮದ್ದನ್ನು ಬೆರಸುತ್ತಾಳೆ; ಆದರೆ ತನ್ನ ಗಂಡನಿಗೆ ಕೊಟ್ಟರೆ, ಏನಾದರೂ ಕೆಡುಕಿನ ಪರಿಣಾಮವಾದೀತು ಎನ್ನುವ ಕೊನೆಯ ಗಳಿಗೆಯ ಹೆದರಿಕೆಯಿಂದ, ಆ ಮದ್ದನ್ನು ಹಿತ್ತಲಿನ ಹೊರಗೆ ಹೋಗಿ ಚೆಲ್ಲಿ ಬಿಡುತ್ತಾಳೆ. ಕತ್ತಲಿನಲ್ಲಿ ಅವಳಿಗೆ ತಿಳಿಯದಂತೆ ಆ ಮದ್ದು ಒಂದು ಹುತ್ತದ ಒಳಗೆ ಬೀಳುತ್ತದೆ. ಆ ಹುತ್ತದ ಒಳಗೆ ಒಂದು ನಾಗದೇವತೆ ವಾಸವಾಗಿರುತ್ತದೆ. ಮದ್ದು ಬೆರೆಸಿದ ಆ ಹಾಲು ಅಪ್ರಯತ್ನವಾಗಿ ಆ ನಾಗನ ಬಾಯಿಯಲ್ಲಿ ಬೀಳುತ್ತದೆ.

ಮನುಷ್ಯನಾಗಲಿ, ಹಾವಾಗಲೀ ವಶೀಕರಣದ ಮದ್ದಿನ ಪರಿಣಾಮಕ್ಕೆ ಒಳಗಾಗಲೇ ಬೇಕಲ್ಲ! ಆ ಹೆಣ್ಣಿನಲ್ಲಿ ಮೋಹಗೊಂಡ ಈ ನಾಗದೇವತೆ, ಆ ರಾತ್ರಿ ಅವಳ ಗಂಡನ ರೂಪದಲ್ಲಿ ಅವಳ ಮನೆಗೆ ಹೋಗಿ, ಅವಳ ಜೊತೆಗೆ ಸುಖಿಸುತ್ತದೆ. ಪಾಪ, ಆ ಹುಡುಗಿಗೆ ಈ ವಂಚನೆ ಗೊತ್ತಾಗುವದೇ ಇಲ್ಲ. ತನ್ನ ಗಂಡನ ಸ್ವಭಾವದಲ್ಲಿ ಅಚಾನಕ್ ಆದ ಬದಲಾವಣೆಯಿಂದಾಗಿ, ಅವಳು ಸಂಭ್ರಮ ಪಡುತ್ತಾಳೆ. ಅನೇಕ ರಾತ್ರಿಗಳವರೆಗೆ ಇದು ಹೀಗೆಯೇ ಮುಂದುವರಿಯುತ್ತದೆ. ಕೆಲ ಕಾಲದ ನಂತರ ಈ ಹುಡುಗಿ ಬಸಿರಾಗುತ್ತಾಳೆ.

ಅವಳ ಗಂಡನಿಗೆ ಇದೊಂದು ಆಘಾತಕಾರಿ ಸಮಾಚಾರ. ತನ್ನ ಸಂಪರ್ಕವಿಲ್ಲದೆ ತನ್ನ ಹೆಂಡತಿ ಬಸಿರಾಗಿದ್ದಾಳೆ, ಅರ್ಥಾತ್ ಅವಳು ಹಾದರ ಮಾಡಿದ್ದಾಳೆ ಎಂದು ಅವನು ಸಂಶಯಿಸುತ್ತಾನೆ. ಇವನು ಎಷ್ಟೇ ಸತಾಯಿಸಿದರೂ ಸಹ, ಅವಳು ಕಣ್ಣೀರು ಹಾಕುತ್ತ, ಇದು ನಿಮ್ಮದೇ ಫಲ ಎಂದು ಹೇಳುತ್ತಾಳೆ. ಕೊನೆಗೊಮ್ಮೆ ಆತ ಈ ಜಗಳವನ್ನು ಹಳ್ಳಿಯ ಪಂಚಾಯತಿಗೆ ಒಯ್ಯುತ್ತಾನೆ.

ಪಂಚರಿಗೆ ಇದೊಂದು ದೊಡ್ಡ ಸಮಸ್ಯೆ. ಗಂಡ ಹಾಗು ಹೆಂಡತಿ ಇಬ್ಬರೂ ಪ್ರಾಮಾಣಿಕ ಪ್ರತಿಜ್ಞೆಯನ್ನೇ ಮಾಡುತ್ತಿದ್ದಾರೆ. ಆದುದರಿಂದ, ಈ ಸಮಸ್ಯೆಯನ್ನು ಅಗ್ನಿದಿವ್ಯದ ಮೂಲಕ ಬಗೆಹರಿಸುವುದು ಸರಿ ಎಂದುಕೊಂಡ ಪಂಚರು, ಆ ಹುಡುಗಿಗೆ ಕೈಯಲ್ಲಿ ಬೆಂಕಿಯನ್ನು ಹಿಡಿದುಕೊಂಡು ಆಣೆ ಮಾಡಿ ಹೇಳು ಎನ್ನುತ್ತಾರೆ. ಅವಳೇನೋ ತಕ್ಷಣವೇ ಸಿದ್ಧಳಾಗುತ್ತಾಳೆ. ಆದರೆ ಆಕೆಯ ಗಂಡನು ‘ಅಗ್ನಿದಿವ್ಯವು ಈ ಹಾದರಗಿತ್ತಿಯ ಕೈಯನ್ನಷ್ಟೇ ಸುಡುತ್ತದೆ; ಅವಳು ಸಾಯಬೇಕಾದರೆ ನಾಗದಿವ್ಯವೇ ಸರಿಯಾದದ್ದು’, ಎನ್ನುತ್ತಾನೆ. ಸರಿ, ಅಲ್ಲಿಯೇ ಇದ್ದಂತಹ ನಾಗರಹಾವಿನ ಹುತ್ತದಿಂದ ನಾಗರ ಹಾವನ್ನು ಹೊರತೆಗೆದು, ತನ್ನ ಕೈಯಲ್ಲಿ ಹಿಡಿದುಕೊಂಡು ಆಣೆ ಮಾಡಲು ಅವಳಿಗೆ ಸೂಚಿಸಲಾಗುತ್ತದೆ. ಹುಡುಗಿ ಪತಿವ್ರತೆಯೇ ಆಗಿದ್ದರೆ, ಆ ನಾಗರಹಾವು ತನ್ನ ಹೆಡೆಯನ್ನು ಅವಳ ತಲೆಯ ಮೇಲೆ ಕಿರೀಟದಂತೆ ಬಿಚ್ಚುತ್ತದೆ; ಹಾಗಿಲ್ಲದೆ ಹೋದರೆ ಇವಳನ್ನು ಕಡಿದು ಸಾಯಿಸುತ್ತದೆ ಎನ್ನುವುದು ಅಲ್ಲಿಯ ಜನರ ನಂಬಿಕೆ.  ತನ್ನ ಪಾತಿವ್ರತ್ಯದ ಬಗೆಗೆ ಪ್ರಾಮಾಣಿಕ ನಂಬಿಕೆ ಇದ್ದ ಆ ಹುಡುಗಿ, ಹಾಗೆಯೇ ಮಾಡುತ್ತಾಳೆ. “ಈ ಹಾವನ್ನು ಬಿಟ್ಟು ನಾನು ಯಾವ ಪರಪುರುಷನನ್ನು ಮುಟ್ಟಿಲ್ಲ. ನನ್ನ ಮಾತು ಸುಳ್ಳಾಗಿದ್ದರೆ, ಈ ಹಾವು ನನ್ನನ್ನು ಕಡಿದು ಸಾಯಿಸಲಿ” ಎಂದು ಅವಳು ಉದ್ಗರೆಯುತ್ತಾಳೆ. ಅವಳು ಹುತ್ತದಿಂದ ಹೊರತೆಗೆದು ಹಿಡಿದುಕೊಂಡ ನಾಗರಹಾವು ಅವಳ ಜೊತೆಗೆ ಸುಖಿಸಿದ ನಾಗದೇವತೆಯೇ ಆಗಿರುತ್ತದೆ. ಅದು ತನ್ನ ಹೆಡೆಯನ್ನು ಅವಳಿಗೆ ಕೊಡೆ ಮಾಡಿ ಹಿಡಿಯುತ್ತದೆ. ನಾಗದಿವ್ಯವನ್ನು ನೋಡಲು ಕೂಡಿದ ಜನರು ಹರ್ಷೋದ್ಗಾರವನ್ನು ಮಾಡುತ್ತಾರೆ. ಇವಳು ದೈವೀ ಪ್ರಭಾವವುಳ್ಳ ಪತಿವ್ರತೆ ಎನ್ನುತ್ತ ಅವಳಿಗೆ ಭಕ್ತಿಯಿಂದ  ನಮಿಸುತ್ತಾರೆ. ಅವಳ ಗಂಡನಿಗೆ ದಿಗ್ಭ್ರಮೆ. ಬಹುಶಃ ಇವಳು ಪುರುಷಸಂಪರ್ಕವಿಲ್ಲದೆ ಬಸಿರಾದ ಮಹಾತ್ಮಳಿರಬಹುದು ಎಂದುಕೊಂಡ ಗಂಡನು ಪಶ್ಚಾತ್ತಾಪ ಪಟ್ಟು, ಅವಳಲ್ಲಿ ಆತ್ಮೀಯತೆಯನ್ನು ತಳೆಯುತ್ತಾನೆ.

ಮರುದಿನ ತನ್ನ ಹುತ್ತದ ಸಮೀಪದಲ್ಲಿ ಆ ನಾಗರಹಾವು ಸತ್ತು ಬಿದ್ದಿರುತ್ತದೆ. ಈ ಹುಡುಗಿ ಸ್ನಾನ ಮಾಡುವಾಗ, ಹರಿದು ಬಂದ ಅವಳ ಕೂದಲೊಂದನ್ನು ತನ್ನ ಕುತ್ತಿಗೆಗೆ ಬಿಗಿದುಕೊಂಡು ಅದು ಆತ್ಮಹತ್ಯೆ ಮಾಡಿಕೊಂಡಿರುತ್ತದೆ. ಕತೆಯು ಮುಗಿದ ಬಳಿಕ ವ್ಯಾಸ ದೇಶಪಾಂಡೆಯವರು ನನಗೊಂದು ಪ್ರಶ್ನೆಯನ್ನು ಹಾಕಿದರು: ‘ನಾಗದೇವತೆ ಆತ್ಮಹತ್ಯೆಯನ್ನು ಏಕೆ ಮಾಡಿಕೊಂಡಿತು?’
ನಾನು ಸ್ವಲ್ಪ ವಿಚಾರ ಮಾಡಿ ಹೇಳಿದೆ: ’ವಶೀಕರಣದ ಫಲವಾಗಿ ಆ ಹಾವು ಅವಳಲ್ಲಿ ಅತಿಯಾದ  ಮೋಹವನ್ನು ಬೆಳೆಯಿಸಿಕೊಂಡಿತ್ತು. ಇನ್ನು ಮೇಲೆ ಅವಳನ್ನು ಕೂಡುವುದು ಸಾಧ್ಯವಿಲ್ಲ ಎನ್ನುವ ಸಂಕಟದಿಂದ ಆ ಹಾವು ಅವಳದೇ ಕೂದಲಿನಿಂದ ಉರುಲು ಹಾಕಿಕೊಂಡು ಅತ್ಮಹತ್ಯೆಯನ್ನು ಮಾಡಿಕೊಂಡಿರಬಹುದು.’

ವ್ಯಾಸ ದೇಶಪಾಂಡೆಯವರು ಹೇಳಿದರು: “ಸರಿ, ಇದು ಒಂದು ಸಂಭಾವ್ಯತೆ. ಇನ್ನೂ ಒಂದು ಸಂಭಾವ್ಯತೆ ಇರಬಹುದಲ್ಲವೆ? ನೋಡಿ, ಈ ಹಾವು ಸಾಧಾರಣ ಹಾವಲ್ಲ. ಇದು ನಾಗದೇವತೆ. ದೇವತೆಯಾದ ಈ ಹಾವು ಮನುಷ್ಯರೊಡನೆ ಪ್ರಣಯವ್ಯವಹಾರವನ್ನು ಮಾಡಬಾರದು. ಇದು ನಾಗದೇವತೆ ಮಾಡಿದ ಮೊದಲನೆಯ ತಪ್ಪು. ಆ ತಪ್ಪಿನ ಫಲವಾಗಿ ಒಂದು ಬಗೆಹರಿಯದ ಸಮಸ್ಯೆ ಅಲ್ಲಿ ಹುಟ್ಟಿಕೊಂಡಿತು. ಆ ಹುಡುಗಿಯದು ತಪ್ಪಿಲ್ಲವೆಂದು ನಾಗದೇವತೆಗೆ ಗೊತ್ತಿದೆ. ಈ ನಾಗರಹಾವಿನ ಹೊರತಾಗಿ ಬೇರೊಬ್ಬ ಪರಪುರುಷನನ್ನು ಮುಟ್ಟಿಲ್ಲವೆಂದು ಅವಳು ಸತ್ಯವನ್ನೇ ನುಡಿದಿದ್ದಾಳೆ. ಆದುದರಿಂದ ಅವಳನ್ನು ಕಚ್ಚುವಂತಿಲ್ಲ.  ಆದರೂ ಅವಳು ತಿಳಿಯದೆಯೇ ಹಾದರ ಮಾಡಿದ್ದು ನಿಜವಲ್ಲವೆ? ಆ ಪಾಪಕ್ಕೆ ಶಿಕ್ಷೆಯನ್ನು ಕೊಡಲೆಂದು ಅವಳನ್ನು ಕಚ್ಚಿದ್ದರೆ, ತಾನು ಮಾಡಿದ ಅಪರಾಧಕ್ಕಾಗಿ ಅವಳಿಗೆ ಶಿಕ್ಷೆ ಕೊಟ್ಟಂತಾಗುತ್ತಿರಲಿಲ್ಲವೆ? ಅಲ್ಲದೆ ವಾಸ್ತವತೆಯನ್ನು ಅವಳ ಗಂಡನಿಂದ ಹಾಗು ಹಳ್ಳಿಯ ಸಮಸ್ತರಿಂದ ಮರೆಮಾಚಿದ್ದು ನಾಗದೇವತೆ ಮಾಡಿದ ಎರಡನೆಯ ಅನಿವಾರ್ಯ ಅಪರಾಧವಲ್ಲವೆ? ‘ತನ್ನ ಪಾಪಕ್ಕೆ ತಕ್ಕ ಶಿಕ್ಷೆಯನ್ನು ತಾನೇ ಅನುಭವಿಸಬೇಕು. ನಾಗದಿವ್ಯದಂತಹ ವಿಧಿಗೆ ತಾನಿನ್ನು ಅಯೋಗ್ಯ’ ಎನ್ನುವ ಮನೋಕ್ಷೋಭೆಯ ಪರಿಣಾಮವಾಗಿ ಅದು ಆತ್ಮಹತ್ಯೆಯನ್ನು ಮಾಡಿಕೊಂಡಿರಬಹುದು!”

ವ್ಯಾಸ ದೇಶಪಾಂಡೆ ಮುಂದುವರೆಸಿ ಹೇಳಿದರು: “ಇಲ್ಲಿ ಮತ್ತೊಂದು ಪ್ರಶ್ನೆಯೂ ಬರುತ್ತದೆ. ನಾಗದೇವತೆಯು ವಶೀಕರಣಕ್ಕೆ ಒಳಗಾಗಿ ತಪ್ಪನ್ನು ಮಾಡಿತು. ಅದೇನೂ ಸ್ವಇಚ್ಛೆಯಿಂದ ಹಾಗೆ ಮಾಡಿರಲಿಲ್ಲವಲ್ಲ ಎಂದು ತರ್ಕಿಸಬಹುದು. ಇದನ್ನೇ ದೈವಜ್ಞರು ವಿಧಿ ಎಂದು ಕರೆಯುತ್ತಾರೆ. ದೇವತೆಗಳನ್ನು, ಮನುಷ್ಯರನ್ನು, ಪ್ರಾಣಿ-ಪಕ್ಷಿಗಳನ್ನು ಆಟವಾಡಿಸುವುದೇ ಅ ವಿಧಿ, ಅದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ”

‘ನಮ್ಮ ಅಜ್ಜಿಯ ಕತೆಗಳಲ್ಲೂ ಸಹ ಧರ್ಮಸೂಕ್ಷ್ಮತೆ ಹಾಗು ನ್ಯಾಯಸೂಕ್ಷ್ಮತೆಯನ್ನು ಹೇಗೆ ಅಳವಡಿಸಲಾಗಿರುತ್ತದೆ, ನೋಡಿದಿರಾ? ನಮ್ಮ ಅಜ್ಜಿ ಹೇಳುವ ಜಾನಪದ ಕತೆಗಳಿಂದ ನಾವು ನೀತಿಪಾಠವನ್ನು ಕಲಿತೆವು. ಈಗಿನ ಚಿಕ್ಕ ಮಕ್ಕಳು ಗಣಕಯಂತ್ರದ ಕಾರ್ಟೂನುಗಳಲ್ಲಿ ಕೇವಲ ಅನೀತಿ ಹಾಗು ಹಿಂಸಾಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ,ಅಲ್ಲವೆ?’, ವ್ಯಾಸ ದೇಶಪಾಂಡೆ ಕೇಳಿದರು.
ನನ್ನಲ್ಲಿ ಉತ್ತರವಿರಲಿಲ್ಲ.

4 comments:

Swarna said...

ಎಷ್ಟು ಚಂದದ ಕಥೆ ಕಾಕಾ . ಇದು ಹಿಂದಿಯಲ್ಲಿ ಪಹೇಲಿ ಅಂತಲೂ ಸಿನೆಮಾವಾಗಿತ್ತು ಆದರೆ ಅಲ್ಲಿ ಭೂತ ಅಂತೇನೋ ಆಗಿ ಸ್ವಲ್ಪ ಬದಲಾಗಿತ್ತು .ಹೌದು,ಈಗ ಮಕ್ಕಳು ಕಾರ್ಟೂನ್ಗಳನ್ನು ಹೆಚ್ಚಾಗಿ ನೋಡುತ್ತಾರೆ . ಆದರೆ ನಾನು ಕಂಡಂತೆ ನಾವು ಕಥೆಹೇಳಿದರೆ ಖುಷಿಯಾಗಿ ಕೇಳುತ್ತಾರೆ. ಇಂತಹ ಕಥೆಗಳು ಅವರ ಖುಷಿಯಾಗಲಿ.
ಎಂದಿನಂತೆ ಚಂದದ ಬರಹ .
ವಂದನೆಗಳೊಂದಿಗೆ
ಸ್ವರ್ಣಾ

sunaath said...

ಧನ್ಯವಾದಗಳು, ಸ್ವರ್ಣಾ. ‘ಪಹೇಲಿ’ ಸಿನೆಮಾದಲ್ಲಿ ಅಮಿತಾಭ ಬಚ್ಚನ ಭೂತ ಆಗಿದ್ದರು. ತುಂಬ ಮನೋರಂಜಕವಾದ ಸಿನೆಮಾ ಆಗಿತ್ತದು. ರಘುವೀರ ಯಾದವರ ಹಾಸ್ಯಪಾತ್ರವಂತೂ ಸೂಪರ್!

Subrahmanya said...

ನಾಗಮಂಡಲ ಸಿನಿಮಾ ನೋಡಿದಾಗ ಏನೇನೋ ಕಲ್ಪನೆಗಳು ಹುಟ್ಟಿಕೊಂಡಿದ್ದವು. ನಿಮ್ಮಿಬ್ಬರ ಸಂಭಾಷಣೆಯಿಂದ ಕಲ್ಪನೆಗಳಿಗೆ ಹೊಸ ಆಯಾಮ ಬಂದಿತು. ಅಜ್ಜಿಕತೆಗಳು ಯಾವತ್ತೂ ಹಸಿರು ಹಸಿರೇ :)

sunaath said...

ಸುಬ್ರಹ್ಮಣ್ಯರೆ,
ವ್ಯಾಸ ದೇಶಪಾಂಡೆಯವರು ನನ್ನೆದುರಿಗೆ ಯಾವಾಗಲೂ ಹೊಸ ಹೊಸ ಚಿಂತನೆಗಳನ್ನು ಇಡುತ್ತಿರುತ್ತಾರೆ. ಅವರಿಗೆ ಧನ್ಯವಾದಗಳು.