Wednesday, December 30, 2015

ಬೈರಾಗಿಯ ಹಾಡು……………ದ. ರಾ. ಬೇಂದ್ರೆ


ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ  ||ಇಕೋ ನೆಲ……
......................................................................................................
ವರಕವಿ ಬೇಂದ್ರೆಯವರು ಬರೆದ ಎಂಟೇ ಸಾಲುಗಳ ಪುಟ್ಟ ಕವನವಾದ ಬೈರಾಗಿಯ ಹಾಡುಮನುಕುಲದ ಧರ್ಮವನ್ನು ಸಾರುತ್ತದೆ. ಓರ್ವ ವ್ಯಕ್ತಿಯ ವೈಯಕ್ತಿಕ ಸಾಧನೆ ಹಾಗು ಸಮುದಾಯದ ಒಳಿತು ಇವೆರಡಕ್ಕೂ ಸಮಾನವಾಗಿ ಅನುವು ಮಾಡಿಕೊಡುವ ನೀತಿಯೇ ಉತ್ತಮವಾದ ಸಮಾಜದ ನೀತಿಯಾಗಿದೆ. ಈ ಸಾಧನೆಯ ಹಾದಿಯಲ್ಲಿ ಯಾವ ಜೀವಿಗೂ ಹಾನಿಯಾಗಬಾರದು ಎನ್ನುವುದು ವಿಶ್ವಧರ್ಮವಾಗಿದೆ.

ಪ್ರಾಚೀನ ಕಾಲದಲ್ಲಿ ಮನುಜ ಸಮುದಾಯವು ಅಲೆಮಾರಿಯಾಗಿತ್ತು. ಆಹಾರವನ್ನು ಅರೆಸುತ್ತ ಕಾಡುಗಳಲ್ಲಿ ತಿರುಗುತ್ತಿತ್ತು. ಶಿಲಾಯುಧಗಳನ್ನು ಸಂಶೋಧಿಸಿದ ಬಳಿಕ ಮನುಜನು ನೆಲವನ್ನು ತೋಡಿ, ತೋಟ (ತೋಡು>ತೋಟ) ಮಾಡಲು ಕಲಿತನು. ಆ ಕಾಲದಲ್ಲಿ, ಅವನಿಗೆ ಹೊಸ ಭೂಮಿಯನ್ನು ಹುಡುಕುವುದು ಅನಿವಾರ್ಯವಾಗುತ್ತಿತ್ತು. ಈ ನೆಲದ ಮೇಲೆ ಒಡೆತನ ಸ್ಥಾಪಿಸಲು ಹೊಡೆದಾಡಬೇಕಾಗುತ್ತಿತ್ತು. ಈ ಒಳಜಗಳಗಳು, ಹೋರಾಟಗಳು, ಒಡೆತನ ಹಾಗು ಸಂಪತ್ತಿನ ಲಾಲಸೆ ಇವು ಅಶಾಂತಿ ಹಾಗು ವಿನಾಶಕ್ಕೆ ಕಾರಣವಾಗುತ್ತಿದ್ದವು. ಆದರೆ ಇಂತಹ ಪರಿಸ್ಥಿತಿಯಲ್ಲೂ ಸಹ ಕೆಲವು ವಿವೇಕಿಗಳು ತಿಳಿವಿನ ವಾಣಿಯನ್ನು ಮನುಕುಲಕ್ಕೆ ಸಾರುತ್ತಿದ್ದರು. ನಮಗೆ ಗೊತ್ತಿರುವ ಇತಿಹಾಸದ ಪ್ರಕಾರ, ಬುದ್ಧನು ಇಂತಹ ಸಂತರಲ್ಲಿ ಮೊದಲಿಗನು.

ಮಾನವನಾಗರಿಕತೆಯು ಅನೇಕ ಮಜಲುಗಳಲ್ಲಿ ಹಾಯ್ದು ಬಂದಿದೆ. ಮನುಷ್ಯನು ಮನುಷ್ಯನನ್ನೇ ದಾಸನನ್ನಾಗಿ ಬಳಸುವ ಮಜಲೂ ಸಹ ಇವುಗಳಲ್ಲಿ ಒಂದು . ಈಜಿಪ್ತಿನ ಪ್ರಾಚೀನ ನಾಗರಿಕತೆಯಲ್ಲಿ ಯಹೂದಿಗಳನ್ನು ಗುಲಾಮರನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಈ ಯಹೂದಿಗಳ ಮುಂದಾಳಾದ ಮೋಶೆ ಅವರನ್ನು ದಾಸ್ಯದಿಂದ ಬಿಡಿಸಿ, ಹೊಸ ನಾಡಿಗೆ ಕರೆ ತಂದ. ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನುಎನ್ನುವುದು ಅವರ ಕನಸಾಗಿರಬಹುದು. ನಮ್ಮ ಶ್ರೀಕೃಷ್ಣನೂ ಸಹ ಮಥುರೆಯಿಂದ ಯಾದವರನ್ನು ಕಟ್ಟಿಕೊಂಡು, ಈಗಿನ ಗುಜರಾತದ ಕಡಲ ತೀರಕ್ಕೆ ಕರೆ ತಂದ.ಅವರೆಲ್ಲರೂ ಜೊತೆಯಾಗಿ  ದ್ವಾರಕಾ’ (The Door, The Portal) ಪಟ್ಟಣವನ್ನು ಕಟ್ಟಿಕೊಂಡರು.

ಶ್ರೀಕೃಷ್ಣ ಹಾಗು ಮೋಶೆ ಇವರು ತಮ್ಮ ಅನುಚರರಿಗೆ ಹೇಳಿದ ಸಂದೇಶ ಹೀಗಿರಬಹುದೆ?
ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ

ಅಣ್ಣ, ತಮ್ಮಂದಿರೆ, ಇಲ್ಲಿ ನೋಡಿರಿ. ನಮ್ಮ ಕಣ್ಣೆದುರಿಗೆ ವಿಶಾಲವಾದ ಭೂಮಿ ಹರಡಿದೆ. ನಮ್ಮ ತಣಿವಿಗೆ ಬೇಕಾಗುವಷ್ಟು ಗಂಗೆ ಇಲ್ಲಿ ಹರಿಯುತ್ತಿದ್ದಾಳೆ. ಸಮೃದ್ಧಳಾದ ಭೂತಾಯಿ ತನ್ನ ಮೈಯ ಮೇಲೆ ಸಸ್ಯಗಳನ್ನು ಹೊತ್ತು ನಿಂತಿದ್ದಾಳೆ. ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟು ಫಲಗಳನ್ನು ಈ ಸಸ್ಯಗಳಿಂದ ಪಡೆದುಕೊಳ್ಳಿರಿ. ಆದರೆ ಪ್ರಕೃತಿ ನೀಡುವ ಫಲವನ್ನು ಪಡೆಯಲು ಸತತ ದುಡಿಮೆ ಬೇಕು. ನೆಲವನ್ನು ಉತ್ತಿ, ಬಿತ್ತಿ ಫಲವನ್ನು ಪಡೆಯುವ ಛಲವು ನಿಮ್ಮಲ್ಲಿ ಬೇಕು. ಆಗ ಮಾತ್ರ, ಪ್ರಕೃತಿಯು ನಿಮಗೆ ಒಲಿಯುವುಳು.

ಈ ಮಾತುಗಳು ಮನುಷ್ಯನ ಸ್ವಾತಂತ್ರ್ಯಕ್ಕೆ, ಸದುದ್ದೇಶಕ್ಕೆ ಹಾಗು ಸಾಹಸಪ್ರವೃತ್ತಿಗೆ ಒತ್ತು ನೀಡುತ್ತವೆ. (ಶಿವರಾಮ ಕಾರಂತರ ಕಾದಂಬರಿಗಳ ನಾಯಕರು ಇಲ್ಲಿ ನೆನಪಾಗುತ್ತಾರೆ. ಅವರೂ ಸಹ ಸಾಹಸಪ್ರವೃತ್ತಿಯ ಜೀವನ್ಮುಖಿಗಳು.)

ಈ ಗೀತೆಯ ಮೊದಲಿನ ನಾಲ್ಕು ಸಾಲುಗಳು ವೈಯಕ್ತಿಕ ಪ್ರಯತ್ನದ ಮಹತ್ವವನ್ನು ಹೇಳುತ್ತವೆ. ಬೆಳೆವಗೆ ನೆಲವೆಲ್ಲ ಹೊಲಎನ್ನುವ ಮಾತಿನಲ್ಲಿ, ‘ನಿಮ್ಮ ಪ್ರಯತ್ನಕ್ಕೆ ಸಾಲುವಷ್ಟು ಭೂಮಿ ಇಲ್ಲಿದೆಎನ್ನುವ ಅರ್ಥದ ಜೊತೆಗೇ  ಸೋಮಾರಿಯಾದವನಿಗೆ ಏನೂ ಸಿಗದುಎನ್ನುವ ಅರ್ಥವೂ ಅಡಗಿದೆ. ಆದರೆ ಓರ್ವ ವ್ಯಕ್ತಿ ಸುಖವಾಗಿ ಬಾಳಿದರೆ ಸಾಲದು. ಇಡೀ ಸಮುದಾಯವೇ ಸುಖ ಹಾಗು ನೆಮ್ಮದಿಯನ್ನು ಪಡೆಯಬೇಕು. ಕೇವಲ ಒಂದು ಸಮುದಾಯವೂ ಅಲ್ಲ. ಸಮುದ್ರವೇ ಭೂಮಿಯ ಸೀಮೆಯಾಗಿರುವದರಿಂದ, ಸಮುದ್ರಸೀಮಾಂತ ಭೂಮಿಯ ಮೇಲಿರುವ ಎಲ್ಲ ಸಮುದಾಯಗಳೂ ಸುಖಿಗಳಾಗಬೇಕು. ಕನ್ನಡದ ಆದಿಕವಿ ಪಂಪನು ಇದೇ ಮಾತನ್ನು ಮನುಜಕುಲಂ ತಾನೊಂದೆ ವಲಮ್ಎನ್ನುವ ಮೂಲಕ ಹೇಳಿದ್ದಾನೆ. ಬೈರಾಗಿಯ ಹಾಡುಕವನದ ಕೊನೆಯ ನಾಲ್ಕು ಸಾಲುಗಳು ಈ ಹಿತವಚನವನ್ನೇ ಘೋಷಿಸುತ್ತವೆ:
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ  ||ಇಕೋ ನೆಲ……

 ಭಾರತೀಯ ಧರ್ಮಶಾಸ್ತ್ರಗಳು ಈ ಸಂದೇಶ ನೀಡಿದ ಅತ್ಯಂತ ಹಳೆಯ ಗ್ರಂಥಗಳಾಗಿವೆ. ಈಶಾವಾಸ್ಯೋಪನಿಷತ್ತಿನ ಮೊದಲ ಶ್ಲೋಕವೇ ಈ ಹಿತವಚನವನ್ನು ಉದ್ಘೋಷಿಸಿದೆ:
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧ ಕಸ್ಯಸ್ವಿದ್ಧನಮ್
( ಈ ವಿಶ್ವವೆಲ್ಲ ಪರಮಾತ್ಮನ ಆವಾಸಸ್ಥಾನವಾಗಿದೆ, ಆತ ಕೊಟ್ಟಿದ್ದರಲ್ಲಿ ಸಂತೃಪ್ತನಾಗು, ಪರರ ಸೊತ್ತಿಗೆ ದುರಾಸೆ ಪಡಬೇಡ.) ಇದೇ ಮಾತನ್ನೇ ನಮ್ಮ ಬಸವಣ್ಣನವರು ಸಹ ಛಲ ಬೇಕು ಶರಣಂಗೆ ಪರಧನವನೊಲೆನೆಂಬಎನ್ನುವ ವಚನದ ಮೂಲಕ ಹೇಳಿದ್ದಾರೆ.

ಬೈರಾಗಿಯು ಅನ್ನವೆ ಧರ್ಮದ ಮೂಲಎಂದು ಹೇಳುತ್ತಾನೆ. ಏಕೆಂದರೆ ಹಸಿವೆಯ ತಣಿವು ಮಾನವನ ಅತ್ಯಂತ ಮೂಲ ಅವಶ್ಯಕತೆಯಾಗಿದೆ. ಈ ಹಸಿವನ್ನು ಶೋಷಣೆಗಾಗಿ ಬಳಸಿಕೊಳ್ಳುವ ಜಾಣರು ಇದ್ದೇ ಇದ್ದಾರೆ. ಇದು ಅನೈತಿಕತೆ. ಆದುದರಿಂದಲೇ ನಮ್ಮ ಸರ್ವಜ್ಞನು ಅನ್ನದಾನಕ್ಕಿಂತ ಇನ್ನು ದಾನಗಳಿಲ್ಲಎಂದು ಹಾಡಿದ್ದಾನೆ. ಅದನ್ನೇ ಅನ್ನವೆ ಧರ್ಮದ ಮೂಲಎಂದು ಈ ಗೀತೆಯಲ್ಲಿ ಬೈರಾಗಿಯು ಹೇಳುತ್ತಾನೆ. ( ಈ ಸಂದರ್ಭದಲ್ಲಿ ಚೀನಾದೇಶದ ಮಹಾನ್ ತತ್ವಜ್ಞಾನಿಯಾದ ಕನ್ಫ್ಯೂಶಿಯಸ್ ನುಡಿದ ಮಾತೊಂದನ್ನು ಇಲ್ಲಿ ಸೇರಿಸುವುದು ಅಪ್ರಸ್ತುತವಾಗಲಾರದು:
ಸಮಾಜವು ಶ್ರೀಮಂತವಿದ್ದಾಗ, ನಿರ್ಗತಿಕನಾಗಿರುವುದು ಅಪರಾಧ; ಸಮಾಜವು ನಿರ್ಗತಿಕವಾದ ಸಮಯದಲ್ಲಿ, ಶ್ರೀಮಂತನಾಗಿರುವುದು ಪಾಪ.’)

ಧರ್ಮ ಎನ್ನುವುದನ್ನು ಸಾಮಾಜಿಕ ನೀತಿಎಂದು ಹೇಳಬಹುದು. ಧರ್ಮ ಎನ್ನುವುದಕ್ಕೆ ಆಧ್ಯಾತ್ಮಿಕ ಅರ್ಥವನ್ನೂ ಕೊಡಬಹುದು.  ಸಾಮಾಜಿಕವೇ ಆಗಲಿ, ಧಾರ್ಮಿಕವೇ ಆಗಲಿ, ಈ ಧರ್ಮದ ಅಂತಿಮ ಪರಿಣಾಮ ಏನು ಎನ್ನುವ ಪ್ರಶ್ನೆಗೆ, ಉತ್ತರ ಹೀಗಿದೆ: 
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ  ||
ಇಲ್ಲಿ ಮೋಕ್ಷವೆಂದರೆ, ಆಧ್ಯಾತ್ಮಿಕ ಮುಕ್ತಿಯೂ ಆಗಬಹುದು. ಅಥವಾ ಸರ್ವರಿಗೂ ಸಮಪಾಲುಎನ್ನುವ ಸಾಮಾಜಿಕ liberation ಸಹ ಆಗಬಹುದು. ಬೇಂದ್ರೆಯವರು ಇದು ಎಲ್ಲ ಕಾಲಕ್ಕೂ ಅನ್ವಯವಾಗುವ ವಿಧಿಎಂದು ಹೇಳುತ್ತಾರೆ.

ಬೈರಾಗಿಯ ಹಾಡುಸಾರ್ವಕಾಲಿಕ ಸತ್ಯವನ್ನು ಹೇಳುವ ಮನುಕುಲದ ಹಾಡಾಗಿದೆ. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಈ ಹಿತವಚನವನ್ನು ಹೇಳುವವನು ಬೈರಾಗಿಯೇ ಏಕಾಗಬೇಕು? ಒಂದು ಸಮುದಾಯದ ಮುಂದಾಳು ಹೇಳಿದರೆ ಆಗದೆ?

ಬೈರಾಗಿ ಎಂದರೆ ವಿರಕ್ತ. ಆತ ಸಂಸಾರವನ್ನು ತ್ಯಜಿಸಿದ ಅಲೆಮಾರಿ. ಪ್ರಪಂಚವನ್ನು ನೋಡುತ್ತ ತಿರುಗುವ ಇವನಿಗೆ ಒಳಿತು, ಕೆಡಕುಗಳ ತಿಳಿವಳಿಕೆ ಇದೆ. ಮನುಜರಿಗೆ ಉಪದೇಶ ಮಾಡುವ ಅನುಭವ ಹಾಗು ಅಧಿಕಾರ ಎರಡೂ ಇವನಿಗಿವೆ. ಸಂಕುಚಿತ ಸಂಸಾರದಲ್ಲಿ ಬದುಕುವ ವ್ಯಕ್ತಿಯ ನೋಟವೂ ಸೀಮಿತವಾಗಿರುತ್ತದೆ. ಆದರೆ ಮನೆಯಿಲ್ಲದ ಬೈರಾಗಿಯ ಕಣ್ಣಿಗೆ ವಿಶಾಲವಾದ ಭೂಮಿ ಕಾಣುತ್ತಿರುತ್ತದೆ. ವಸುಧೈವ ಕುಟುಂಬಕಮ್ಎನ್ನುವುದು ಬೈರಾಗಿಯ ನೀತಿ. ಅದಕ್ಕೆಂದೇ  ಭಾರತೀಯ ಸಮಾಜವು ಬೈರಾಗಿಗೆ ಅತಿ ಹೆಚ್ಚಿನ ಗೌರವವನ್ನು ಕೊಡುತ್ತದೆ. (ಬೇಂದ್ರೆಯವರ ಈ ಬೈರಾಗಿಯು ನಮ್ಮ ಸರ್ವಜ್ಞನನ್ನು ನೆನಪಿಸುತ್ತಾನೆ.) ಆದುದರಿಂದಲೇ ಬೇಂದ್ರೆಯವರು ಈ ಕವನಕ್ಕೆ ಬೈರಾಗಿಯ ಹಾಡುಎನ್ನುವ ಹೆಸರನ್ನು ಕೊಟ್ಟಿದ್ದು ಸಾರ್ಥಕವಾಗಿದೆ.

ಬೈರಾಗಿಯ ಹಾಡುಕವನವು ಸಖೀಗೀತಕವನಸಂಕಲನದಲ್ಲಿದೆ. ಈ ಕವನಕ್ಕೆ ಮನುಜಗೀತೆಎಂದೂ ಕರೆಯಬಹುದಲ್ಲವೆ? ಈ ಕವನಸಂಕಲನದ ಮೊದಲ ಗೀತೆಯಾದ ಸಖೀಗೀತವು ಬೇಂದ್ರೆಯವರ ವೈಯಕ್ತಿಕ ಬದುಕಿನ ದಾಂಪತ್ಯಗೀತೆಯಾಗಿದ್ದರೆ, ಕೊನೆಯ ಕವನವಾದ ಬೈರಾಗಿಯ ಹಾಡುಸಂಸಾರವಿರಕ್ತನಾದ ಬೈರಾಗಿಯು ಹಾಡುವ ಮನುಕುಲದ ಗೀತೆಯಾಗಿದೆ.

6 comments:

Anil Talikoti said...

ಎಂಟು ಸಾಲುಗಳ ಕರದಂಟು
ಅದೆಂತಹ ಸರಳ ಚೆಲುವುಂಟು
ಇಂಪ್ಲಿಮೆಂಟಲೆಕಿಷ್ಟು ಗಂಟುಂಟು?
ಬೈರಾಗಿಗಷ್ಟೆ ಇದರ ಅರಿವುಂಟು!
~ಅನೀಲ

sunaath said...

ಅನಿಲರೆ,
ಬೇಂದ್ರೆಯವರ ಕರದಂಟನ್ನು ಸವಿದು, ಅದರ ರುಚಿಯನ್ನು ಚುಟುಕಾಗಿಯೇ ಹೇಳಿದ್ದೀರಿ. ಧನ್ಯವಾದಗಳು. ಇನ್ನು ಇದರ ಇಂಪ್ಲಿಮೆಂಟು ಮಾಡಲು ಬೈರಾಗಿಗಳೇ ಬೇಕು!

ರಾಘವೇಂದ್ರ ಜೋಶಿ said...

ಸುನಾಥ ಸರ್,
ನೀವೇ ಹೇಳಿದಂತೆ ಬೇಂದ್ರೆಯವರ ಈ ಕವಿತೆ ಮನುಕುಲದ ಧರ್ಮವನ್ನೇ ಸಾರುತ್ತಲಿದೆ. ಜೊತೆಗೆ ಮನುಕುಲದ ಮರ್ಮವನ್ನೂ. "ಬೆಳೆವಗೆ ನೆಲವೆಲ್ಲ ಹೊಲ.." ಅನ್ನುವ ಮಾತು ಬರಬರುತ್ತ ಯೂಟೋಪಿಯನ್ ಕಾಲಘಟ್ಟಕ್ಕಷ್ಟೇ ಸೀಮಿತವಾದಂತೆ ತೋರುತ್ತಿದೆ. ನಾವು ಇದನ್ನು ಕೊಂಚ ತಪ್ಪಾಗಿ ಅರ್ಥೈಸಿಕೊಂಡು, 'ಎಲ್ಲವೂ ನನ್ನದೇ..' ಅನ್ನುವಲ್ಲಿಗೆ ಬಂದು ನಿಂತಿದ್ದೇವೆ.
ಕೇವಲ ತನ್ನ ನಿದ್ದೆಗೆ ಸಾಕಾಗುವಷ್ಟು ಮಾತ್ರ ಜಾಗದಲ್ಲಿ ಹಕ್ಕಿ ಗೂಡು ಕಟ್ಟುತ್ತದೆ. ಮಿಕ್ಕಂತೆ ಅದರ ಗಮ್ಯವೇನಿದ್ದರೂ ಆಕಾಶದ ವಿಶಾಲತೆಯತ್ತ. ಇದಕ್ಕೆ ಪ್ರತಿಬಿಂಬವಾಗಿ ನಮ್ಮ ಸ್ವಾರ್ಥ ವಿಶಾಲವಾಗುತ್ತಿದೆ, ಗಮ್ಯ ಕಿರಿದಾಗುತ್ತಿದೆ..

(ಹೊಸ ವರುಷದ ಮುಂಗಡ ಶುಭಾಶಯಗಳು ಸರ್. ಹೊಸ ವರ್ಷ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಸುಖ, ನೆಮ್ಮದಿ ಮತ್ತು ಆರೋಗ್ಯ ಕರುಣಿಸಲೆಂಬ ಕಿರಿಯನ ಹಾರೈಕೆ..) :-)
-Rj

sunaath said...

RJ,
ಮೊದಲಿಗೆ ಹೊಸ ವರ್ಷದ ಶುಭಾಶಯಗಳು. ನೀವು ಹೇಳಿದಂತೆ ಬೆಳೆವವನಿಗೆ ಹೊಲ ಎನ್ನುವುದಕ್ಕೆ ಹೊಸ ಅರ್ಥ ಬಂದಿದೆ. ನೀವು ನೀಡಿದ ಹಕ್ಕಿಯ ಪ್ರತಿಮೆ ತುಂಬ ಅರ್ಥಪೂರ್ಣವಾಗಿದೆ!

Shashi Dodderi said...

Thanks for this poem. It reminded me of Kagga, often Bendre doesn't try to give wise words, but he make us think. In that direction, this poem is unique and unusually small. But you have described it amazingly beautiful with examples from different thinkers. Do you have any plans of bringing a book containing all your blogs on Bendre?
Thanks
Shashi

sunaath said...

ಶಶಿ,
ಬೇಂದ್ರೆಯವರ ಶೈಲಿಯನ್ನು ಸರಿಯಾಗಿ ಹೇಳಿದ್ದೀರಿ. ನಾನು ಬೇಂದ್ರೆ ಹಾಗು ಶರೀಫರ ಕೆಲವು ಕವನಗಳ ಬಗೆಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಈಗಾಗಲೇ ಒಂದು ಪುಸ್ತಕವನ್ನು ಮಾಡಲಾಗಿದೆ. (ಬೇಂದ್ರೆ-ಶರೀಫರ ಕಾವ್ಯಯಾನ). ಈ ಪುಸ್ತಕವು ಪ್ರಕಾಶಕರ ಬಳಿಯಲ್ಲಿ ಲಭ್ಯವಿರಬಹುದು:
ಸೃಷ್ಟಿ ನಾಗೇಶ,
ದೇಸಿ ಪುಸ್ತಕ
ನಂ:೧೨೧, ೧೩ನೆಯ ಮುಖ್ಯ ರಸ್ತೆ,
ಎಮ್.ಸಿ. ಲೇಔಟ,
ವಿಜಯನಗರ,
ಬೆಂಗಳೂರು-೫೬೦ ೦೪೦
ದೂರವಾಣಿ: ೦೮೦-೨೩೧೫೩೫೫೮