Thursday, April 21, 2016

ಮೃಚ್ಛಕಟಿಕಮ್-೫


ಮೃಚ್ಛಕಟಿಕಮ್ ನಾಟಕದ ಮೊದಲಿನ ಮೂರು ಅಂಕಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಸಾಕಷ್ಟು ಅಂಶಗಳೇನೊ ಇವೆ. ವಿಶೇಷವಾಗಿ ಶಕಾರನ ಸಂಭಾಷಣೆಗಳು ಹಾಗು ಗೀತೆಗಳು ನೋಡುಗರಲ್ಲಿ ಹಾಸ್ಯದ ಅಲೆಗಳನ್ನು ಎಬ್ಬಿಸುತ್ತವೆ. ಇಷ್ಟಾದರೂ ಸಹ ಚಾರುದತ್ತನ ಸಂಕಷ್ಟಗಳ ವರ್ಣನೆ, ಶಕಾರನು ವಸಂತಸೇನೆಯನ್ನು ಬೆನ್ನಟ್ಟುವುದು, ವಸಂತಸೇನೆಯ ಒಡವೆಗಳು ಚಾರುದತ್ತನ ಮನೆಯಿಂದ ಕಳುವಾಗುವುದು ಈ ಎಲ್ಲ ಘಟನೆಗಳು ಪ್ರೇಕ್ಷಕನಲ್ಲಿ ಉದ್ವಿಗ್ನ ಭಾವವನ್ನು ಉಂಟು ಮಾಡುವುದು ಸಹಜವಾಗಿದೆ. ಪ್ರೇಕ್ಷಕ ಮಹಾಶಯನನ್ನು ಈ ವಾತಾವರಣದಿಂದ ಹೊರತರುವುದು ಇದೀಗ ಅವಶ್ಯವಾಗಿದೆ. ಇಲ್ಲಿ ನಾವು ನಮ್ಮ ನಾಟಕಕಾರನ ಕೌಶಲ್ಯವನ್ನು ಮತ್ತೊಮ್ಮೆ ನೋಡುತ್ತೇವೆ.
  
ಹತ್ತು ಅಂಕಗಳ ಈ ನಾಟಕದಲ್ಲಿ ನಮ್ಮ ನಾಟಕಕಾರನು ನಡುವಿನ ಅಂಕಗಳನ್ನು ಅಂದರೆ ನಾಲ್ಕನೆಯ ಹಾಗು ಐದನೆಯ ಅಂಕಗಳನ್ನು ಚಮತ್ಕಾರಿಕ ಹಾಗು ಶೃಂಗಾರಮಯ ಅಂಕಗಳನ್ನಾಗಿ ಮಾಡಿದ್ದಾನೆ. ಪ್ರೇಕ್ಷಕರು ಈ ಮಾರ್ಪಾಟಿನಿಂದ ಉಲ್ಲಸಿತರಾಗುವುದು ಸಹಜ. ಚಾರುದತ್ತ ಹಾಗು ವಸಂತಸೇನೆ ಇವರ ನಡುವಿನ ಪ್ರಣಯವು ಸಫಲವಾಗುವುದೊ ಅಥವಾ ವಿಫಲವಾಗುವುದೊ ಎನ್ನುವುದಕ್ಕೂ ಇಲ್ಲಿ ಉತ್ತರವಿದೆ. ಅದೂ ಅಲ್ಲದೆ, ಚಾರುದತ್ತನ ಗೆಳೆಯನಾದ ಮೈತ್ರೇಯನ ವಿನೋದದ ಮಾತುಗಳು ಹಾಗು ವಸಂತಸೇನೆಯ ಬಗೆಗೆ ಅವನಿಗೆ ಇರುವ ಅಗೌರವದ ಭಾವನೆ ಇವೂ ಸಹ ಪ್ರೇಕ್ಷಕರನ್ನು ರಂಜಿಸುತ್ತವೆ.
                       
ಅಂಕದ ಪ್ರಾರಂಭದಲ್ಲಿ ವಸಂತಸೇನೆಯು ತನ್ನ ಮನೆಯ ಹೂದೋಟದಲ್ಲಿ ಚಾರುದತ್ತನ ಚಿತ್ರವನ್ನು ಬಿಡಿಸುತ್ತ ಕುಳಿತಿದ್ದಾಳೆ. ಆ ಸಮಯದಲ್ಲಿ  ಅವಳ ಸೇವಿಕೆ (ಮದನಿಕೆ) ಅಲ್ಲಿಗೆ ಬರುತ್ತಾಳೆ. ಮದನಿಕೆ ಹಾಗು ವಸಂತಸೇನೆ ಇವರ ನಡುವೆ ವಸಂತಸೇನೆಯ ಪ್ರೇಮಭಾವದ ಬಗೆಗೆ ಸರಸ ಸಲ್ಲಾಪ ನಡೆದಿರುತ್ತದೆ. ಆ ಸಮಯದಲ್ಲಿ ವಸಂತಸೇನೆಯ ಮತ್ತೊಬ್ಬ ಸೇವಿಕೆ ಅಲ್ಲಿಗೆ ಬಂದು, ವಸಂತಸೇನೆಯ ತಾಯಿಯ ಸಂದೇಶವನ್ನು ಅವಳಿಗೆ ತಿಳಿಸುತ್ತಾಳೆ. ಮಹಾರಾಜನ ಶ್ಯಾಲಕನಾದ ಶಕಾರನು, ವಸಂತಸೇನೆಯನ್ನು ಕರೆತರಲು, ಒಂದು ಬಂಡಿಯನ್ನು, ಜೊತೆಗೆ ಬಂಗಾರದ ಆಭರಣಗಳನ್ನು ಕಳುಹಿಸಿದ್ದಾನೆ. ಆದುದರಿಂದ ವಸಂತಸೇನೆಯು ತಕ್ಷಣವೇ ಶಕಾರನ ಬಳಿಗೆ ಹೋಗಬೇಕು ಎನ್ನುವುದೇ ಆ ಸಂದೇಶವಾಗಿದೆ.

ವಸಂತಸೇನೆಯೆ ತಾಯಿಯು ವೇಶ್ಯಾವೃತ್ತಿಯ ಆಚರಣೆಗಳನ್ನು ಪಾಲಿಸುತ್ತಲೇ ಬಂದಿರುವಳು. ಉದರಪೋಷಣೆಗೆ ಇದು ಅನಿವಾರ್ಯ.  ಆದರೆ ವಸಂತಸೇನೆಯು  ಚಾರುದತ್ತನಲ್ಲಿ ಅನುರಕ್ತಳಾಗಿದ್ದಾಳೆ. ಇದು ವೇಶ್ಯಾವೃತ್ತಿಗೆ ವಿರೋಧವಾದ ಧರ್ಮ. ಇಷ್ಟಾದರೂ ಸಹ ಅವಳು ತನ್ನ ತಾಯಿಯ ಆಜ್ಞೆಯನ್ನು ಧಿಕ್ಕರಿಸಿ, ‘ಇನ್ನೊಮ್ಮೆ ಇಂತಹ ಸಂದೇಶವನ್ನು ಕಳುಹಿದರೆ, ನನ್ನನ್ನು ಜೀವಸಹಿತವಾಗಿ ನೋಡಲಾರಿರಿಎನ್ನುವ ಮರುಸಂದೇಶವನ್ನು ಕಳುಹಿಸುತ್ತಾಳೆ!  (ಶಕಾರನ ಈ ಪ್ರಕರಣದಿಂದ ವಸಂತಸೇನೆಯು ಮಾನಸಿಕವಾಗಿ ಹೈರಾಣಾಗಿರಬಹುದು. ಬೀಸಣಿಗೆಯ ತಂಗಾಳಿಯು ತನ್ನ ಮನಸ್ಸಿಗೂ ತಂಪೆನ್ನೆರದೀತು  ಎಂದು ಅವಳಿಗೆ ಅನಿಸಿರಬಹುದು;) ಆದುದರಿಂದ ಬೀಸಣಿಗೆಯನ್ನು ತರಲು ಮದನಿಕೆಯನ್ನು ಕಳುಹಿಸಿ, ತಾನು ಹೂದೋಟದ ಅಂಚಿಗೆ ಬರುತ್ತಾಳೆ. ಇದೀಗ ನಮ್ಮ ನಾಟಕಕಾರನು ಸೃಷ್ಟಿಸುವ ಚಮತ್ಕಾರವನ್ನು ಗಮನಿಸಿ:

ಕಳ್ಳ ಶರ್ವಿಲಕನೂ ಸಹ ಅದೇ ಸಮಯದಲ್ಲಿ ವಸಂತಸೇನೆಯ ಮನೆಗೆ ಬರುತ್ತಾನೆ. ಬಂಗಾರದ ಒಡವೆಗಳನ್ನು ವಸಂತಸೇನೆಗೆ ಕೊಟ್ಟು, ತನ್ನ ಪ್ರೇಯಸಿಯಾದ ಮದನಿಕೆಯನ್ನು ದಾಸ್ಯಮುಕ್ತಳನ್ನಾಗಿ ಮಾಡಬೇಕೆನ್ನುವುದು ಆತನ ಹಂಬಲ. ಬೀಸಣಿಗೆಯ ಜೊತೆಗೆ ಮರಳುತ್ತಿರುವ ಮದನಿಕೆಯನ್ನು ಶರ್ವಿಲಕನು ಅಲ್ಲಿ ನೋಡುತ್ತಾನೆ.  ತುಂಬ ಸಂತೋಷದಿಂದ ಆತನು ಮದನಿಕೆಗೆ, ‘ಮದನಿಕೆ ನಿನ್ನ ಒಡತಿಗೆ ಈ ಆಭರಣಗಳನ್ನು ಕೊಟ್ಟರೆ ಅವಳು ನಿನ್ನನ್ನು ದಾಸ್ಯಮುಕ್ತಳನ್ನಾಗಿ ಮಾಡುವಳೆ?’ ಎಂದು ಕೇಳುತ್ತಾನೆ. ವಸಂತಸೇನೆಯ ಉದಾರ ಹಾಗು ಸುಶೀಲ ಸ್ವಭಾವವನ್ನು ಅರಿತ ಮದನಿಕೆಯು, ‘ತನ್ನ ಒಡತಿ ವಸಂತಸೇನೆಯು ದಾಸ್ಯಮುಕ್ತಿಗಾಗಿ ಏನನ್ನೂ ಅಪೇಕ್ಷಿಸುವದಿಲ್ಲಎಂದು ಶರ್ವಿಲಕನಿಗೆ ಹೇಳುತ್ತಾಳೆ.  

ಆ ಆಭರಣಗಳನ್ನು ನೋಡುತ್ತಲೇ, ಮದನಿಕೆಗೆ ಸಂದೇಹ ಹುಟ್ಟುತ್ತದೆ. ನಿಜ ಹೇಳು, ನೀನು ಈ ಆಭರಣಗಳನ್ನು ಎಲ್ಲಿಂದ ತಂದಿರುವೆಎಂದು ಅವಳು ಶರ್ವಿಲಕನನ್ನು ಪ್ರಶ್ನಿಸುತ್ತಾಳೆ. ತಾನು ಆ ಆಭರಣಗಳನ್ನು ಕಳ್ಳತನದಿಂದ ತಂದಿರುವೆ ಹಾಗು ಆ ಮನೆಯು ಚಾರುದತ್ತ ಎನ್ನುವವನ ಮನೆ ಎನ್ನುವುದು ತನಗೆ ಆಬಳಿಕ ತಿಳಿಯಿತುಎಂದು ಶರ್ವಿಲಕನು ಮದನಿಕೆಗೆ ತಿಳಿಸುತ್ತಾನೆ. ಹೂದೋಟದ ಅಂಚಿಗೆ ಬಂದಿರುವ ವಸಂತಸೇನೆಯ ಕಿವಿಗೂ ಈ ಮಾತುಗಳು ಬೀಳುತ್ತವೆ. ಶರ್ವಿಲಕನ ಹೇಳಿಕೆಯನ್ನು ಕೇಳುತ್ತಲೆ ಇತ್ತ ಮದನಿಕೆ ಹಾಗು ಅತ್ತ ವಸಂತಸೇನೆ ಇಬ್ಬರೂ ಮೂರ್ಛಿತರಾಗುತ್ತಾರೆ. ಎಚ್ಚತ್ತ ಮದನಿಕೆಯು, ‘ನೀನು ಆ ಮನೆಯಲ್ಲಿ ಯಾರನ್ನೂ ಹೊಡೆದಿಲ್ಲ ತಾನೆಎಂದು ಕೇಳುತ್ತಾಳೆ.

ಈ ಮಾತಿಗೆ ಶರ್ವಿಲಕನ ಪ್ರತಿಕ್ರಿಯೆಯನ್ನು ಗಮನಿಸಿದ ಪ್ರೇಕ್ಷಕರಿಗೆ ನಮ್ಮ ನಾಟಕಕಾರನು ಮಾನವಸ್ವಭಾವವನ್ನು ಎಷ್ಟು ಚೆನ್ನಾಗಿ ಅಭ್ಯಾಸ ಮಾಡಿದ್ದಾನೆ ಎನ್ನುವುದು ಅರಿವಾಗುವುದು. ಶರ್ವಿಲಕನು ಚತುರ್ವೇದೀ ಬ್ರಾಹ್ಮಣರ ಮಗನಾದರೂ ಸಹ, ವೇಶ್ಯೆಯ ದಾಸಿಯ ಪ್ರೇಮದಲ್ಲಿ ಸಿಲುಕಿದ್ದಾನೆ. ಅವಳನ್ನು ದಾಸ್ಯಮುಕ್ತಳನ್ನಾಗಿ ಮಾಡಲು, ಕಳ್ಳತನಕ್ಕೆ ಇಳಿಯುತ್ತಾನೆ. ಇಂತಹ ಮನುಷ್ಯನು ಶೀಘ್ರವಾಗಿ ಉದ್ರಿಕ್ತನಾಗುವ ಸ್ವಭಾವದನು. ಆದುದರಿಂದ ಮೂರ್ಛಿತಳಾದ ಮದನಿಕೆಯನ್ನು ಕಂಡು ಶರ್ವಿಲಕನಲ್ಲಿ ತಪ್ಪು ಕಲ್ಪನೆ ಹುಟ್ಟುತ್ತದೆ. ಇವಳು ಚಾರುದತ್ತನ ಪ್ರೇಮಿ ಎಂದು ಅವನು ಭಾವಿಸುತ್ತಾನೆ. ದುಡುಕು ಬುದ್ಧಿಯವನಾದ ಶರ್ವಿಲಕನು ಚಾರುದತ್ತನನ್ನು ಮುಗಿಸಿ ಬಿಡುವೆಎಂದು ಹೊರಡುತ್ತಾನೆ. ಆಗ ಮದನಿಕೆಯು ಅವನನ್ನು ತಡೆದು, ಈ ಆಭರಣಗಳು ವಸಂತಸೇನೆಯ ಆಭರಣಗಳು ಎಂದು ಸ್ಪಷ್ಟೀಕರಿಸುತ್ತಾಳೆ.  ಹಾಗು ಆ ಆಭರಣಗಳನ್ನು ಚಾರುದತ್ತನಿಗೆ ಮರಳಿಸಲು ಹೇಳುತ್ತಾಳೆ. ಶರ್ವಿಲಕನು ಪಶ್ಚಾತ್ತಾಪ ಪಡುತ್ತಾನೆ ಆದರೆ ಆಭರಣಗಳನ್ನು ಮರಳಿಸಲು ಚಾರುದತ್ತನ ಬಳಿಗೆ ಹೋಗಲು ಆತನು ಒಪ್ಪುವುದಿಲ್ಲ. (ಹಾಗೆ ಮಾಡಿದರೆ ತನ್ನನ್ನು ಕಳ್ಳನನ್ನಾಗಿ ಗುರುತಿಸಲಾಗುವುದು ಎನ್ನುವುದು ಅವನ ಹೆದರಿಕೆಯಾಗಿರಬಹುದು. ಶೂದ್ರಕನು ಮಾನವಸ್ವಭಾವವನ್ನು ಎಷ್ಟು ಚೆನ್ನಾಗಿ ತಿಳಿದಿದ್ದಾನೆ ಎನ್ನುವುದು ಇದರಿಂದ ಅರಿವಾಗುವುದು.) ಹಾಗಿದ್ದರೆ, ವಸಂತಸೇನೆಯ ಬಳಿಗೆ ಹೋಗು; ಈ ಆಭರಣಗಳನ್ನು ತನ್ನ ಸಂಬಂಧಿಯಾದ ಚಾರುದತ್ತನು ನಿನಗೆ ಮರಳಿಸಲು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಹೇಳುಎಂದು ಮದನಿಕೆಯು ಶರ್ವಿಲಕನಿಗೆ ಹೇಳುತ್ತಾಳೆ. ಈ ಮಾತುಗಳೆಲ್ಲವೂ ವಸಂತಸೇನೆಗೆ ಕೇಳಿಸಿವೆ. ಶರ್ವಿಲಕನು ವಸಂತಸೇನೆಗೆ ಆಭರಣಗಳನ್ನು ಮರಳಿಸುತ್ತಾನೆ.

ವಸಂತಸೇನೆಯೂ ಸಹ ಚತುರಳೇ. ಈ ಆಭರಣಗಳನ್ನು ತಂದೊಪ್ಪಿಸುವವನಿಗೇ ನೀನು ಮದನಿಕೆಯನ್ನು ಒಪ್ಪಿಸಬೇಕು ಎಂದು ಆರ್ಯ ಚಾರುದತ್ತನು ನನಗೆ ಹೇಳಿದ್ದಾನೆ. ಆದುದರಿಂದ ನಿನಗೆ ಮದನಿಕೆಯನ್ನು ನಾನೀಗ ಕೊಡುತ್ತಿದ್ದೇನೆ, ಸ್ವೀಕರಿಸುಎಂದು ಅವಳು ಶರ್ವಿಲಕನಿಗೆ ಹೇಳುತ್ತಾಳೆ. ಈ ರೀತಿಯಲ್ಲಿ ವಸಂತಸೇನೆಯು ತಾನಾಗಿಯೇ ಮದನಿಕೆಯನ್ನು ದಾಸ್ಯಮುಕ್ತಗೊಳಿಸಿ, ಶರ್ವಿಲಕನಿಗೆ ಒಪ್ಪಿಸುತ್ತಾಳೆ. ಇಷ್ಟೇ ಅಲ್ಲ, (ಇನ್ನು ಮೇಲೆ ಪತ್ನಿಯ ಸ್ಥಾನವನ್ನು ಪಡೆಯುವವಳಾದುದರಿಂದ), ಮದನಿಕೆಯು ತನಗಿಂತ ಹೆಚ್ಚಿನವಳು ಎಂದು ಹೇಳಿ, ಅವಳಿಗೆ ಗೌರವ ಸಲ್ಲಿಸಿ, ಒಂದು ಬಂಡಿಯನ್ನು ತರಿಸಿ ಅವರನ್ನು ಬೀಳ್ಕೊಡುತ್ತಾಳೆ.

ಔದಾರ್ಯದಲ್ಲಿ, ಸುಶೀಲತೆಯಲ್ಲಿ ವಸಂತಸೇನೆಯು ಚಾರುದತ್ತನಿಗಿಂತ ಎಳ್ಳಷ್ಟೂ ಕಡಿಮೆಯಲ್ಲ ಎನ್ನುವುದನ್ನು ಈ ಘಟನೆಯು ಬಿಂಬಿಸುತ್ತದೆ. ಚಾರುದತ್ತ ಹಾಗು ವಸಂತಸೇನೆಯರು ತಮ್ಮಲ್ಲಿರುವ ಸುಗುಣಗಳಿಂದ ಪರಸ್ಪರ ಆಕರ್ಷಿತರಾದರೇ ಹೊರತು, ಕೀಳು ಕಾಮನೆಯಿಂದಲ್ಲ ಎನ್ನುವದನ್ನೂ ಸಹ ಈ ಘಟನೆಯು ತೋರಿಸುತ್ತದೆ.
                                                                                   
ಶರ್ವಿಲಕನು ಮದನಿಕೆಯ ಜೊತೆಗೆ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, ರಾಜಭಟರು ಹೆದ್ದಾರಿಯಲ್ಲಿ ಡಂಗುರ ಸಾರುತ್ತಿರುವುದು, ಕಿವಿಗೆ ಬೀಳುತ್ತದೆ: ಆರ್ಯಕನೆನ್ನುವ ಗೋವಳರ ಹುಡುಗ ರಾಜನಾಗುತ್ತಾನೆ ಎನ್ನುವ ಕಣಿಯನ್ನು ಕೇಳಿದ ರಾಜನು ಅವನನ್ನು ಬಂಧಿಸಿ ಸೆರೆಯಲ್ಲಿ ಇಟ್ಟಿದ್ದಾನೆ. ಎಲ್ಲರೂ ಎಚ್ಚರದಿಂದ ಇರಬೇಕು.’ಇದು ನಾಟಕಕ್ಕೆ ತಿರುವು ಕೊಡುವ ಒಂದು ಮಹತ್ವದ ಘಟನೆಯಾಗಿದೆ.

ಈ ಡಂಗುರವನ್ನು ಕೇಳಿದ ಶರ್ವಿಲಕನು ತಾನು ಆರ್ಯಕನನ್ನು ಪಾರು ಮಾಡುವ ಸಲುವಾಗಿ  ಆತನ ಜೊತೆಗಾರರನ್ನು ಕೂಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾನೆ. ಮದನಿಕೆಯನ್ನು ತನ್ನ ಗೆಳೆಯನಾದ ರೇಭಿಲನ ಮನೆಗೆ ಕಳುಹಿಸಿಕೊಡುತ್ತಾನೆ. (ಈ ಶರ್ವಿಲಕನು ಕೊನೆಯ ಅಂಕದಲ್ಲಿ ಮತ್ತೆ ಬಂದು ಮಹತ್ವದ ಒಂದು ಕಾರ್ಯವನ್ನು ಮಾಡುತ್ತಾನೆ.)

ಇತ್ತ ಆಭರಣಗಳನ್ನು ಕಳೆದುಕೊಂಡ ಚಾರುದತ್ತನು, ತನ್ನ ಹೆಂಡತಿ ಧೂತಾದೇವಿಯ ಮುತ್ತಿನ ಹಾರವನ್ನು ವಸಂತಸೇನೆಗೆ ಕೊಡಲು, ತನ್ನ ಗೆಳೆಯನಾದ ಮೈತ್ರೇಯನನ್ನು ಅವಳ ಮನೆಗೆ ಕಳುಹಿಸುತ್ತಾನೆ. ಆದರೆ, ಆಭರಣಗಳು ಕಳುವಾಗಿವೆ ಎಂದು ಆತನು ಅವಳಿಗೆ ಹೇಳತಕ್ಕದ್ದಲ್ಲ. (ಇದು ಅವಳಲ್ಲಿ ಮರುಕ ಹುಟ್ಟಿಸಬಹುದು. ಅವಳು ಮುತ್ತಿನ ಹಾರವನ್ನು ತೆಗೆದುಕೊಳ್ಳಲಿಕ್ಕಿಲ್ಲ ಎನ್ನುವುದು ಚಾರುದತ್ತನ ಭಾವನೆಯಾಗಿರಬಹುದು.)

ಚಾರುದತ್ತನು ಜೂಜಾಟದಲ್ಲಿ ವಸಂತಸೇನೆಯ ಆಭರಣಗಳನ್ನು ಕಳೆದುಕೊಂಡಿದ್ದಾನೆ. ಅದರ ಬದಲಾಗಿ ಈ ಮುತ್ತಿನ ಹಾರವನ್ನು ಕಳುಹಿಸುತ್ತಿದ್ದಾನೆ ಎಂದು ಮೈತ್ರೇಯನು ವಸಂತಸೇನೆಗೆ ಹೇಳಬೇಕು ಎನ್ನುವುದು ಚಾರುದತ್ತನ ಸಂದೇಶವಾಗಿರುತ್ತದೆ.

ಮೈತ್ರೇಯನು ವಸಂತಸೇನೆಯ ಮನೆಗೆ ಬರುತ್ತಾನೆ. ಅವಳ ಮನೆಗೆ ಎಂಟು ಆವರಣಗಳಿವೆ. ಒಂದೊಂದು ಆವರಣವೂ ದಂಗು ಬಡಿಸುವಂತಹ ವಿವಿಧ ವೈಭೋಗಗಳಿಂದ, ಹೂದೋಟಗಳಿಂದ, ಸಾಕುಪ್ರಾಣಿ ಹಾಗು ಪಕ್ಷಿಗಳಿಂದ
ತುಂಬಿದೆ. ಮೈತ್ರೇಯನು ಒಂದೊಂದೇ ಆವರಣವನ್ನು ಬಣ್ಣಿಸುತ್ತ, ಅಚ್ಚರಿಪಡುತ್ತ ಹೋಗುತ್ತಿರುವಾಗ, ವಸಂತಸೇನೆಯ ಭವನವು ಕುಬೇರನ ಅಲಕಾವತಿಯನ್ನು ಹೋಲುತ್ತಿದೆ ಎಂದು ಪ್ರೇಕ್ಷಕನಿಗೆ ಭಾಸವಾಗುತ್ತದೆ.  ಸ್ವರ್ಗಸದೃಶ ಭವನದ ಈ ವರ್ಣನೆಯನ್ನು ಮಾಡುವುದರಲ್ಲಿ ನಾಟಕಕಾರನಿಗೆ ಏನು ಉದ್ದೇಶವಿರಬಹುದು? ಮೊದಲನೆಯದಾಗಿ, ಇಷ್ಟೆಲ್ಲ ಇದ್ದರೂ ಸಹ ವಸಂತಸೇನೆಯು, ಗುಣಗಳೇ ವೈಭೋಗವಾಗಿರುವ ಚಾರುದತ್ತನಿಗೆ ಮನಸೋಲುತ್ತಾಳೆ ಎಂದು ಹೇಳುವುದು ನಾಟಕಕಾರನ ಉದ್ದೇಶವಾಗಿರಬಹುದು. ಎರಡನೆಯದಾಗಿ, ಉಜ್ಜಯಿನಿಯ ಗಣಿಕೆಯರ ಸಿರಿಯನ್ನು ತೋರಿಸುವ ಉದ್ದೇಶವೂ ನಾಟಕಕಾರನಿಗೆ ಇರಬಹುದು. ಮೂರನೆಯದಾಗಿ ಪ್ರೇಕ್ಷಕನಿಗೆ ವಿಭಿನ್ನ ರಸಗಳನ್ನು ಉಣಬಡಿಸಿ, ರಂಜಿಸುವುದು ನಾಟಕಕಾರನ ಉದ್ದೇಶವಾಗಿರಬಹುದು.

ವಸಂತಸೇನೆಯ ಭವನದಲ್ಲಿ ಕುಳಿತಿರುವ ಅವಳ ಸೋದರನನ್ನು ಹಾಗು ತಾಯಿಯನ್ನು ಮೈತ್ರೇಯನು ತುಂಬ ಹಾಸ್ಯದಿಂದ  ವರ್ಣಿಸಿದ್ದಾನೆ.  ಇದೆಲ್ಲವೂ ಪ್ರೇಕ್ಷಕನನ್ನು ರಂಜಿಸುವುದರಲ್ಲಿ ಸಂದೇಹವಿಲ್ಲ.  ಕೇವಲ ಉದ್ವಿಗ್ನತೆಯಿಂದ ಕೂಡಿದ ನಾಟಕದಲ್ಲಿ ನಡುನಡುವೆ ಹಾಸ್ಯ, ವಿನೋದ ಮೊದಲಾದ ರಂಜನೆಗಳು ಬೇಕು ಎನ್ನುವುದನ್ನು ನಮ್ಮ ನಾಟಕಕಾರ ಅರಿತಿದ್ದಾನೆ.

ಮೈತ್ರೇಯನಿಗೆ ವಸಂತಸೇನೆಯ ಭೆಟ್ಟಿಯು ಅವಳ ಹೂದೋಟದಲ್ಲಿ ಆಗುತ್ತದೆ. ಚಾರುದತ್ತನು ಜೂಜಿನಲ್ಲಿ ವಸಂತಸೇನೆಯ ಒಡವೆಗಳನ್ನು ಕಳೆದುಕೊಂಡಿದ್ದರಿಂದ ಅದರ ಬದಲಾಗಿ ಮುತ್ತಿನ ಹಾರವನ್ನು ಕಳುಹಿಸಿದ್ದಾನೆ ಎಂದು  ಮೈತ್ರೇಯನು ಹೇಳುತ್ತಾನೆ. ವಸಂತಸೇನೆಗಾದರೊ ವಾಸ್ತವದ ಅರಿವಿದೆ. ಚಾರುದತ್ತನನ್ನು ಭೆಟ್ಟಿಯಾಗಲು ಇದೇ ಒಂದು ಸುಸಂಧಿ ಹಾಗು ವಾಸ್ತವವನ್ನು ಚಾರುದತ್ತನಿಗೆ ತಿಳಿಸಿ, ಅವನ ಮುತ್ತಿನ ಹಾರವನ್ನು ಅವನಿಗೆ ಮರಳಿಸಲು ಸಾಧ್ಯವಾದೀತು ಎನ್ನುವ ಉದ್ದೇಶದಿಂದ, ಅವಳು ಚಾರುದತ್ತನನ್ನು ಅವನ ತೋಪಿನ ಮನೆಯಲ್ಲಿ ಸಾಯಂಕಾಲದಲ್ಲಿ ಸಂಧಿಸಲು ಮೈತ್ರೇಯನೊಡನೆ ಸಂದೇಶವನ್ನು ಕಳುಹಿಸುತ್ತಾಳೆ.

ವಸಂತಸೇನೆಯ ದಾಸಿಯು ತೀವ್ರವಾಗಿ ಬೀಸುತ್ತಿರುವ ಬಿರುಗಾಳಿಯ ಕಡೆಗೆ ವಸಂತಸೇನೆಯ ಗಮನವನ್ನು ಸೆಳೆಯುತ್ತಾಳೆ. ವಸಂತಸೇನೆಯು ಅದನ್ನು ನಿರ್ಲಕ್ಷಿಸಿ ಮುತ್ತಿನ ಹಾರವನ್ನು ತೆಗೆದುಕೊಂಡು ಬರಲು ತನ್ನ ದಾಸಿಗೆ ಹೇಳುತ್ತಾಳೆ. (ಮುತ್ತಿನ ಹಾರವನ್ನು ಮರಳಿಸುವದಷ್ಟೇ ವಸಂತಸೇನೆಯ ಉದ್ದೇಶವಾಗಿತ್ತೆ?)

ಇತ್ತ ವಸಂತಸೇನೆಯ ಬಗೆಗೆ ಸಂಶಯಭಾವನೆಯನ್ನೇ ಹೊಂದಿದ ಮೈತ್ರೇಯನಿಗೆ ‘ಇವಳು ಚಾರುದತ್ತನಿಂದ ಇನ್ನೂ ಅಧಿಕ ಮೌಲ್ಯದ ವಸ್ತುಗಳನ್ನು ಅಪೇಕ್ಷಿಸಬಹುದು’ ಎನ್ನುವ ಅನುಮಾನ ಉಂಟಾಗುತ್ತದೆ. ಮುಂದಿನ ಅಂದರೆ ಐದನೆಯ ಅಂಕದಲ್ಲಿ ತನ್ನ ಸಂಶಯವನ್ನು ಅವನು ಚಾರುದತ್ತನೆದುರಿಗೆ ಅತಿ ಸ್ಪಷ್ಟವಾಗಿ ತಿಳಿಸುತ್ತಾನೆ ಹಾಗು ತೋಪಿನ ಮನೆಗೆ ಸಾಯಂಕಾಲದಲ್ಲಿ ಬರಲು ವಸಂತಸೇನೆಯು ನೀಡಿದ ಸಂದೇಶವನ್ನು ಆತನಿಗೆ ತಲುಪಿಸುತ್ತಾನೆ.

6 comments:

ರಾಘವೇಂದ್ರ ಜೋಶಿ said...

'
ಮೃಚ್ಛಕಟಿಕಮ್'ನಲ್ಲಿ ಇದೊಂದು ಚಮತ್ಕಾರಿಕ ಜೋಡಣೆ ಅಂತನಿಸುತ್ತದೆ. ಹಿಂದೊಮ್ಮೆ ಆಂಗ್ಲದ ಒಂದು ತಮಾಷೆ ಜೋಕ್ ಓದಿದ್ದೆ.

ಒಂದು ಕಂಪೆನಿಯ ಬಾಸ್ ಗೆ ತನ್ನ ಸೆಕ್ರೆಟರಿಯ ಮೇಲೆ ಮೋಹವಿದೆ. ಸೆಕ್ರೆಟರಿಗೆ ತನ್ನ ಸಹೋದ್ಯೋಗಿ ಹುಡುಗನ ಬಗ್ಗೆ ಮೋಹವಿದೆ. ಆ ಹುಡುಗನಿಗೆ ತನ್ನ ಪಕ್ಕದ ಮನೆಯವಳ ಮೇಲೆ ಮೋಹವಿದೆ. ಆ ಪಕ್ಕದ ಮನೆಯ ಹುಡುಗಿಗೆ ಇನ್ಯಾರೋ ಹುಡುಗನ ಮೇಲೆ ಮೋಹ. ಈ ಹುಡುಗನಿಗೋ ಬಾಸ್ ಹೆಂಡತಿಯ ಜೊತೆ ಸಂಬಂಧವಿದೆ. ಮೋಹದ ಈ ಸರಪಳಿಯಲ್ಲಿ ಎಲ್ಲವೂ ಟೆಂಪರರಿ. ತನ್ನ ಹೆಂಡತಿಯಿಂದ ಗಿಫ್ಟ್ ಪಡೆದಿರುವ ಬಾಸ್ ಅದನ್ನು ಸೆಕ್ರೆಟರಿಗೆ ಹೊಸ ಗಿಫ್ಟ್ ಎಂಬಂತೆ ಕೊಡುತ್ತಾನೆ. ಸೆಕ್ರೆಟರಿ ತನ್ನ ಸಹೋದ್ಯೋಗಿ ಹುಡುಗನಿಗೆ ಅದನ್ನು ನೀಡುತ್ತಾಳೆ. ಸರಪಳಿ ಮುಂದುವರೆಯುತ್ತ ಕೊನೆಗೆ ಅದು ಬಾಸ್ ಹೆಂಡತಿಯ ಕೈಗೇ ಸೇರುತ್ತದೆ!

ಒಂದು ಕಾನ್ಸೆಪ್ಟ್ ಹೇಗೆ ಪಯಣಿಸುತ್ತದೆ ಅಂತ ಅಚ್ಚರಿಯಾಗುತ್ತದೆ. ವಸಂತಸೇನೆಯ ಆಭರಣ ಎಲ್ಲೆಲ್ಲೋ ಹೋಗಿ ಮತ್ತೇ ವಸಂತಸೇನೆಯ ಬಳಿಗೇ ಬರುತ್ತದೆ. ಆಭರಣದ ಈ ಪಯಣದಲ್ಲಿ ಎದುರಾಗುವ ಸನ್ನಿವೇಶಗಳು, ಮನುಷ್ಯ ಸ್ವಭಾವಗಳು ಕುತೂಹಲಕಾರಿಯಾಗಿವೆ.
-Rj

sunaath said...

ನಿಜ, RJಯವರೆ.ವಸಂತಸೇನೆಯ ಆಭರಣಗಳು ಪಯಣಿಸುವ ರೀತಿಯಲ್ಲಿಯೇ ನಾಟಕವೂ ಪಯಣಿಸುತ್ತ, ಓದುಗನನ್ನು ವಿಚಿತ್ರ ಸಂದರ್ಭಗಳಿಗೆ ಕರೆದೊಯ್ಯುತ್ತದೆ. ನೀವು ಹೇಳಿರುವ ವಿನೋದವೂ ಸ್ವಾರಸ್ಯಕರವಾಗಿದೆ. ಇದೇ ರೀತಿಯ ಶ್ಲೋಕವೊಂದನ್ನು ಭರ್ತೃಹರಿಯೂ ಬರೆದಿದ್ದಾನೆ:
याम् चिन्तयामि सततम् मयि सा विरक्ता
साप्यन्यमिच्छति जनम् स जनोsन्यसक्तः।
अस्मत्क्रिते च परिशुष्यति काचिदन्या।
धिक् ताम् च तम् च मदनम् च इमाम् च माम् च॥

ನಾನು ಯಾವಳನ್ನು ಸತತವೂ ಚಿಂತಿಸುತ್ತಿದ್ದೇನೆಯೊ, ಅವಳಿಗೆ ನನ್ನಲ್ಲಿ ಪ್ರೀತಿಯಿಲ್ಲ; ಬೇರೊಬ್ಬನನ್ನು ಅವಳು ಬಯಸುತ್ತಿದ್ದಾಳೆ. ಅವನಿಗೊ ಇವಳಲ್ಲಿ ಪ್ರೇಮವಿಲ್ಲ, ಅವನ ಅನುರಾಗ ಮತ್ತೊಬ್ಬಳಲ್ಲಿ. ಆ ಚದುರೆಯ ಪ್ರೀತಿಯೊ ಅವನನ್ನಲ್ಲಿ ಅಲ್ಲ, ನನ್ನ ಮೇಲೆ.
ಅವಳಿಗೆ, ಅವನಿಗೆ, ಇವನಿಗೆ, ನನಗೆ ಹಾಗು ಕಾಮದೇವನಿಗೆ ಧಿಕ್ಕಾರವಿರಲಿ.

Unknown said...

ಸುನಾಥ ಅವರೆ,
ನಾಟಕದ ಓಟ- ನಿಮ್ಮ ನೋಟ ಎರಡು ಚೆನ್ನಾಗಿವೆ - ಧನ್ಯವಾದಗಳು
~ಅನಿಲ

sunaath said...

ಅನಿಲರೆ,
ಆ ಮಹಾನ್ ನಾಟಕದ ಪ್ರತಿಬಿಂಬವನ್ನು ನಾನು ನನ್ನ ಮಸಕು ಕನ್ನಡಿಯಲ್ಲಿ ತೋರಿಸುತ್ತಿದ್ದೇನೆ. ಹಾಗಿದ್ದರೂ ಸಹ ಇದು ರಂಜಿಸಿದರೆ, ಆ ಶ್ರೇಯಸ್ಸು ಶೂದ್ರಕನಿಗೇ ಹೋಗಬೇಕು!

hamsanandi said...

ಭರ್ತೃಹರಿಯ ಆ ಸುಭಾಷಿತವು ಅವನದ್ದೇ ಸ್ವಂತ ಕಥೆಯ ಮೇಲೆ ಪ್ರೇರೇಪಿತವಾಗಿದೆ ಎಂದು ಜನಜನಿತವಾದ ನಂಬಿಕೆ ಇದೆ.

ಇದನ್ನೇ ಎಷ್ಟೋ ಸಿನೆಮಾ ನಾಟಕಗಳಲ್ಲಿ ಬಳಸಿರುವುದನ್ನು ನೋಡಬಹುದು.

sunaath said...

ಹೌದು, ರಾಮಪ್ರಸಾದರೆ. ಇದು ಭರ್ತೃಹರಿಯ ಜೀವನದ ಕಥೆಯೇ ಆಗಿದೆ ಎಂದು ಕೇಳಿದ್ದೇನೆ.