ಎಂಟನೆಯ ಅಂಕ:
ಏಳನೆಯ ಅಂಕದ ಕೊನೆಯಲ್ಲಿ ಚಾರುದತ್ತ ಹಾಗು ಮೈತ್ರೇಯರು
ರಂಗದಿಂದ ನಿರ್ಗಮಿಸಿದ್ದನ್ನು ನೋಡಿದೆವು. ಓರ್ವ ಬೌದ್ಧ ಭಿಕ್ಷುವನ್ನು ನೋಡಿದ ಇವರು ‘ಇದೊಂದು ಅಪಶಕುನ’ ಎಂದು ಭಾವಿಸಿ, ವಿರುದ್ಧ ದಿಕ್ಕಿನಲ್ಲಿ ನಡೆದು ಹೋದರು. ಒಂದು ವೇಳೆ ಇವರು ಆ ಭಿಕ್ಷುವು ಬರುವ ದಿಕ್ಕಿನಲ್ಲಿಯೇ ನಡೆದಿದ್ದರೆ, ಈ ಕಥೆಯು ಬೇರೇನೊ ಆಗುತ್ತಿತ್ತು.
ಎಂಟನೆಯ ಅಂಕವು ಈ ‘ಅಪಶಕುನದ ಬೌದ್ಧ ಭಿಕ್ಷು’ವಿನ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ. ಈತನು ಆ ಉದ್ಯಾನದಲ್ಲಿದ್ದ
ಪುಷ್ಕರಿಣಿಯಲ್ಲಿ ತನ್ನ ಶಾಟಿಯನ್ನು ಒಗೆದುಕೊಳ್ಳಲು ಬರುತ್ತಿದ್ದಾನೆ. ಈ ಸಮಯದಲ್ಲಿ ಅಲ್ಲಿದ್ದ ಶಕಾರನು
ಈತನನ್ನು ನೋಡುತ್ತಾನೆ. ಶಕಾರನು ಹುಂಬನಷ್ಟೇ ಅಲ್ಲ, ಹಿಂಸಾವಿನೋದಿಯೂ ಹೌದು. ಬೌದ್ಧ ಭಿಕ್ಷುವನ್ನು ಹೀಯಾಳಿಸುವುದು, ಆತನಿಗೆ ಹಿಂಸೆಯನ್ನು ಕೊಡುವುದು ಶಕಾರನಿಗೆ ಮನರಂಜನೆಯನ್ನು ನೀಡುತ್ತದೆ.
ಬಹು ಕಷ್ಟದಿಂದ ಭಿಕ್ಷುವು ಅವನಿಂದ ತಪ್ಪಿಸಿಕೊಂಡು ಹೋಗುತ್ತಾನೆ. (ನಮ್ಮ ನಾಟಕಕಾರನು ಎಷ್ಟೆಲ್ಲ ಮನೋಪ್ರವೃತ್ತಿಯ
ಪಾತ್ರಗಳನ್ನು ಸೃಷ್ಟಿಸಿದ್ದಾನೆ, ನೋಡಿ!)
ಹೊತ್ತು ಏರುತ್ತಿದೆ. ‘ತನ್ನ ಗಾಡಿಯ ಚಾಲಕನು ಗಾಡಿಯೊಂದಿಗೆ ಇನ್ನೂ ಬಂದಿಲ್ಲವಲ್ಲ’ ಎಂದು ಶಕಾರನು ಯೋಚಿಸುತ್ತಿದ್ದಾನೆ. ಅಷ್ಟರಲ್ಲಿ ಗಾಡಿಯನ್ನು ವೇಗವಾಗಿ
ಓಡಿಸುತ್ತ ಬರುವ ಸ್ಥಾವರಕನು ಕಾಣಿಸುತ್ತಾನೆ. ತಡವಾಗಿದ್ದಕ್ಕೆ ಎಲ್ಲಿ ಶಕಾರನಿಂದ ಏಟು ತಿನ್ನಬೇಕಾಗುವುದೊ
ಎನ್ನುವುದು ಅವನ ಹೆದರಿಕೆ. ಆತ ತನ್ನ ಹೆದರಿಕೆಯನ್ನು ಪ್ರಕಾಶವಾಗಿಯೇ ಉಸುರುತ್ತಾನೆ. (‘ರಾಜನ ಮೈದುನ ಶಕಾರನು ನನ್ನ ಮೇಲೆ ಸಿಟ್ಟಾಗದಿದ್ದರೆ ಸಾಕು, ಆದುದರಿಂದ ಬೇಗನೇ ಗಾಡಿಯನ್ನು ಓಡಿಸುತ್ತೇನೆ’.)
ಚಾಲಕನು ತನ್ನಲ್ಲಿಯೇ ಆಡಿಕೊಳ್ಳುವ ಈ ಮಾತುಗಳು
ವಸಂತಸೇನೆಯ ಕಿವಿಗೆ ಬೀಳುತ್ತವೆ. ಅವಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅವಳು ಭಯಗ್ರಸ್ತಳಾಗುತ್ತಾಳೆ.
ಆದರೆ ಕಾಲ ಮಿಂಚಿ ಹೋಗಿದೆ.
ಶಕಾರನು ಗಾಡಿಯನ್ನು ಹತ್ತಲು ಹೋದಾಗ, ಒಳಗೆ ಇರುವ ವ್ಯಕ್ತಿಯನ್ನು ಅಚಾನಕ್ಕಾಗಿ ಕಂಡು ಬೆಚ್ಚುತ್ತಾನೆ. ಶಕಾರನ
ಬುದ್ಧಿಯು ಸಾಮಾನ್ಯ ಮನುಷ್ಯನ ಬುದ್ಧಿಯಂತೆ ಓಡುವುದಿಲ್ಲ. ವಿಕೃತ ಮನಸ್ಸಿಗೆ, ಜಗವೆಲ್ಲ ವಿಕೃತವಾಗಿ ಕಾಣುವುದು ಸಹಜವಷ್ಟೇ. ಹಾಗಾಗಿ ಒಳಗೆ ಇರುವ ವಸಂತಸೇನೆಯು
ಇವನಿಗೆ ಒಬ್ಬ ರಾಕ್ಷಸಿಯಂತೆ ಕಾಣುತ್ತಾಳೆ. ಅವನು ‘ರಾಕ್ಷಸಿ’ ಎಂದು ಚೀರಿಕೊಳ್ಳುತ್ತ
ದೂರ ಸರಿಯುತ್ತಾನೆ. ಆದರೆ ಒಳಗೆ ಕುಳಿತಿರುವಳು ವಸಂತಸೇನೆ
ಎಂದು ತಿಳಿದಾಗ, ಅವಳನ್ನು ಒಲಿಸಿಕೊಳ್ಳಲು
ಅವಳ ಪಾದಗಳನ್ನು ಹಿಡಿಯುತ್ತಾನೆ.
ಶಕಾರನ ಬಗೆಗೆ ವಸಂತಸೇನೆಗೆ ತೀವ್ರವಾದ ತಾತ್ಸಾರವಿದೆ. ಅವನಿಂದ ಬಿಡಿಸಿಕೊಳ್ಳಲು ಆವಳು ತನ್ನ ಪಾದಗಳಿಂದ ಇವನಿಗೆ ಒದೆಯುತ್ತಾಳೆ.
ಇದರಿಂದ ಕುಪಿತನಾದ ಶಕಾರನ ಪ್ರತಿಕ್ರಿಯೆ ಏನು? ವಿವೇಕಬುದ್ಧಿ ಇಲ್ಲದ ಶಕಾರನು ವಸಂತಸೇನೆಯನ್ನು ಕೊಲ್ಲಲು ತನ್ನ ಸಹಚರನಿಗೆ
ಹೇಳುತ್ತಾನೆ. ಅವನು ಒಪ್ಪದಿದ್ದಾಗ, ತನ್ನ ಅನುಚರನಿಗೆ ಹೇಳುತ್ತಾನೆ. ಅವನೂ ಸಹ ಈ ಮಾತಿಗೆ ಒಪ್ಪುವದಿಲ್ಲ. ಶಕಾರನ ಅನುಚರರಲ್ಲಿಯೂ ಸಹ ಸ್ವಲ್ಪವಾದರೂ ಧರ್ಮಬುದ್ಧಿಯಿದೆ
ಎನ್ನುವುದನ್ನು ಇದು ತೋರಿಸುತ್ತದೆ. ಶಕಾರನ ಮಾತನ್ನು ತಿರಸ್ಕರಿಸುತ್ತ ಅವನ ಅನುಚರನು ಹೇಳುವುದನ್ನು
ಕೇಳಿರಿ: ‘ಅಯ್ಯಾ, ನೀನು ನನ್ನ ಶರೀರಕ್ಕೆ ಒಡೆಯನೇ ಹೊರತು, ನನ್ನ ಚಾರಿತ್ರ್ಯಕ್ಕಲ್ಲ. ನನಗೆ ಪರಲೋಕದ ಹೆದರಿಕೆ ಇದೆ.’
ಶಕಾರನು ಹುಂಬನೂ, ಅಪರಾಧಿ ಪ್ರವೃತ್ತಿಯವನೂ ಆಗಿರಬಹುದು. ಆದರೆ ಇಂಥವರಲ್ಲಿಯೂ ಸಹ ಒಂದು ತರಹದ
ವಿಚಿತ್ರ ಬುದ್ಧಿವಂತಿಕೆ ಇರುತ್ತದೆ. ಶಕಾರನು ತನ್ನ ಅನುಚರರನ್ನು ದೂರ ಕಳುಹಿಸಿ, ಮೊದಲಿಗೆ ವಸಂತಸೇನೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ವಸಂತಸೇನೆಯು
ಇವನನ್ನೇ ನಿಂದಿಸುತ್ತಾಳೆ. ಸಭ್ಯತೆ ಹಾಗು ಸ್ವಾಭಿಮಾನ ಇರುವ ಯಾವ ಮನುಷ್ಯನಾದರೂ ಇಂತಹ ಸಂದರ್ಭದಲ್ಲಿ
ಆ ಹೆಣ್ಣನ್ನು ತಿರುಗಿ ನೋಡದೆ ಹೋಗಿಯಾನು. ಆದರೆ ಶಕಾರನು ಮನುಷ್ಯ ರೂಪದಲ್ಲಿರುವ ವಿಕೃತ ಸ್ವಭಾವದ
ಪಶು. ವಸಂತಸೇನೆಯ ತಿರಸ್ಕಾರದಿಂದ ಕುಪಿತನಾದ ಶಕಾರನು
ಅವಳ ಮೇಲೆ ಕೈಯೆತ್ತಲು ಹೇಸುವದಿಲ್ಲ. ಕೊನೆಗೊಮ್ಮೆ
ಶಕಾರನು ಅವಳ ಕುತ್ತಿಗೆಯನ್ನು ಹಿಸುಕಿದಾಗ, ಅವಳು ಮೂರ್ಛಿತಳಾಗುತ್ತಾಳೆ. ವಸಂತಸೇನೆ ಸತ್ತಳು ಎಂದು ಭಾವಿಸಿದ ಶಕಾರನು,
‘ಸತ್ತು ಹೋಗು, ತೊತ್ತಿನ ಮಗಳೆ.’ ಎಂದು ಬೈಯುತ್ತ, ಅವಳ ಸಾವಿನಲ್ಲಿಯೂ ಸಹ ತನ್ನ ನೀಚತನದಲ್ಲಿ ವಿಜೃಂಭಿಸುತ್ತಾನೆ.
ಶಕಾರನ ಸಹಚರ ಹಾಗು ಸೇವಕರು ಅಲ್ಲಿಗೆ ಮರಳಿ ಬಂದಾಗ, ವಸಂತಸೇನೆ ನಿಶ್ಚೇಷ್ಟಿತಳಾಗಿ ಬಿದ್ದುದ್ದನ್ನು ನೋಡಿದರು. ಶಕಾರನ ಸ್ವರಕ್ಷಣೆಯ
ಬುದ್ಧಿವಂತಿಕೆಯನ್ನಷ್ಟು ನೋಡಿರಿ. ಈ ಕೊಲೆಯ ಹೊಣೆಯನ್ನು ಹೊತ್ತುಕೊಳ್ಳುವಂತೆ ಆತನು ತನ್ನ ಅನುಚರರನ್ನು
ಕೇಳಿಕೊಳ್ಳುತ್ತಾನೆ. ಆದರೆ, ಇವನ ಮಾತಿಗೆ ಒಪ್ಪದ
ಅವರು,
ತಾವು ಶರ್ವಿಲಕ ಹಾಗು ಚಂದನಕರ ಜೊತೆಗೆ ಸೇರಿಕೊಳ್ಳುವುದಾಗಿ
ಘೋಷಿಸಿ ಹೊರಟು ಬಿಡುತ್ತಾರೆ. ( ಈ ಕಾಲದಲ್ಲಿಯೂ ಸಹ ವಾಹನವನ್ನು ಯರ್ರಾಬಿರ್ರಿಯಾಗಿ ಚಲಾಯಿಸುತ್ತ, ಅಪಘಾತ ಹಾಗು ಮಾನವಹತ್ಯೆಗೆ ಕಾರಣರಾದ ಮಾಲಕರು, ಈ ಹೊಣೆಯನ್ನು ಹೊರಲು ತಮ್ಮ ವಾಹನಚಾಲಕರನ್ನು ಪುಸಲಾಯಿಸಿ, ತಾವು ಶಿಕ್ಷೆಯಿಂದ ಪಾರಾಗುವ ಘಟನೆಗಳನ್ನು ನೋಡುತ್ತಲೇ ಇದ್ದೇವೆ. ಇದೊಂದು
ಸಾರ್ವಕಾಲಿಕ ವಾಸ್ತವವೆ?)
ಕೊಲೆಯ ಹೊಣೆಗಾರಿಕೆಯನ್ನು ಇನ್ನು ಯಾರಾದರೊಬ್ಬರ
ಮೇಲೆ ಹೊರಿಸಿ, ತಾನು ತಪ್ಪಿಸಿಕೊಳ್ಳುವುದು
ಇದೀಗ ಶಕಾರನ ತಂತ್ರವಾಗಿದೆ. ತನ್ನ ಸೇವಕನಿಗೆ ಆಭರಣಗಳನ್ನು ಕೊಡುವ ಆಸೆಯನ್ನು ತೋರಿಸಿ, ಬಂಡಿಯನ್ನು ಹೊಡೆದುಕೊಂಡು ಹೋಗು ಎಂದು ಅವನನ್ನು ಕಳಿಸಿ ಬಿಡುತ್ತಾನೆ.
ತನ್ನಂತರ ಆ ಸೇವಕನನ್ನು ತನ್ನ ಅರಮನೆಯ ಒಂದು ಕೋಣೆಯಲ್ಲಿ ಬಂಧಿಸಿ ಇಡುವ ಉಪಾಯ ಶಕಾರನದು. ಈ ರೀತಿಯಾಗಿ
ವಸಂತಸೇನೆಯ ಕೊಲೆಗೆ ಸಾಕ್ಷಿಯಾದ ತನ್ನ ಸೇವಕನನ್ನು ಮಾಯ ಮಾಡಿ, ವಸಂತಸೇನೆಯನ್ನು
ಅವಳ ಆಭರಣಗಳ ಆಸೆಗಾಗಿ ಚಾರುದತ್ತನೇ ಕೊಲೆಗೈದಿದ್ದಾನೆ ಎಂದು ನ್ಯಾಯಾಲಯದಲ್ಲಿ ದೂರು ಕೊಡಲು ನಿರ್ಧರಿಸುತ್ತಾನೆ.
ವಸಂತಸೇನೆಯನ್ನು ತರಗೆಲೆಗಳಿಂದ ಮುಚ್ಚಿ ಅಲ್ಲಿಂದ ಹೊರಡುತ್ತಾನೆ. ಶೂದ್ರಕನ ಕಾಲದಲ್ಲಿಯೂ ಸಹ, ಅಪರಾಧ ಹಾಗು ಸಾಕ್ಷಿನಿರ್ಣಯಗಳು ನಮ್ಮ ಆಧುನಿಕ ಕಾಲದಲ್ಲಿ ನಡೆಯುತ್ತಿರುವಂತೆಯೇ ನಡೆಯುತ್ತಿದ್ದವಲ್ಲ ಎಂದು ಆಶ್ಚರ್ಯವಾಗದಿರದು.
ಶಕಾರನಿಂದ ಹೊಡೆಸಿಕೊಂಡು ಓಡಿ ಹೋಗಿದ್ದ ನಮ್ಮ ಬೌದ್ಧಭಿಕ್ಷುವು
ಇದೀಗ ಮರಳಿ ರಂಗದ ಮೇಲೆ ಬರುತ್ತಾನೆ. ಅಲ್ಲಿ ತರಗೆಲೆಗಳ ಚಲನೆ ಹಾಗು ಒಂದು ಕೈಯನ್ನು ಕಂಡ ಭಿಕ್ಷುವು
ಚಕಿತನಾಗಿ, ತರಗೆಲೆಗಳನ್ನು ಸರಿಸಿದಾಗ
ವಸಂತಸೇನೆಯನ್ನು ಕಾಣುತ್ತಾನೆ. ಈ ಬೌದ್ಧ ಭಿಕ್ಷುವು ಮತ್ತಾರೂ ಅಲ್ಲ; ಜೂಜುಖೋರರ ದಾಳಿಯಿಂದ ತಪ್ಪಿಸಿಕೊಂಡು, ವಸಂತಸೇನೆಯಿಂದ ರಕ್ಷಿಸಲ್ಪಟ್ಟ
ಸಂವಾಹಕ ಎನ್ನುವವನು; ಒಂದು ಕಾಲದಲ್ಲಿ ಚಾರುದತ್ತನ
ಸೇವಕನಾಗಿದ್ದವನು. (ಎರಡನೆಯ ಅಂಕವನ್ನು ನೋಡಿರಿ.) ಹಿಂದಿನ ಅಂಕದಲ್ಲಿ ಇದೇ ಬೌದ್ಧ ಭಿಕ್ಷುವನ್ನು ಅಪಶಕುನ ಎಂದು ಭಾವಿಸಿ, ಚಾರುದತ್ತ ಹಾಗು ಮೈತ್ರೇಯರು ಬೇರೊಂದು ದಿಕ್ಕಿನಲ್ಲಿ ಹೋಗಿರುತ್ತಾರೆ.
ಭಿಕ್ಷುವು ವಸಂತಸೇನೆಯನ್ನು ಉಪಚರಿಸುತ್ತಾನೆ. ‘ನಿನಗೆ ಈ ಗತಿ ಏಕಾಯಿತಮ್ಮ?’ ಎಂದು ಆತನು ವಸಂತಸೇನೆಗೆ ಕೇಳುತ್ತಾನೆ.
‘ಸೂಳೆಯರಿಗೆ ಇದೇ ಗತಿ ಬರುತ್ತದೆ’ ಎನ್ನುವ ವಸಂತಸೇನೆಯ ಕರುಣಾಜನಕ ಉತ್ತರವು, ನಮ್ಮ ಸಮಾಜವ್ಯವಸ್ಥೆಯ
ವಿಪರ್ಯಾಸವನ್ನು ತೋರಿಸುತ್ತದೆ.
ಭಿಕ್ಷುವು ಅವಳನ್ನು ಸನ್ಯಾಸಿನಿಯೊಬ್ಬಳು ಇರುವ
ವಿಹಾರಕ್ಕೆ ಕರೆದುಕೊಂಡು ಹೋಗುತ್ತಾನೆ. ವಸಂತಸೇನೆಯು ಅಲ್ಲಿ ತಾತ್ಪೂರ್ತಿಕವಾಗಿ ಆಸರೆಯನ್ನು ಪಡೆಯುತ್ತಾಳೆ.
ಚಾರುದತ್ತನ ಮೇಲೆ ಕೊಲೆಯ ಆರೋಪವನ್ನು ಹೊರಿಸಲು ಇತ್ತ ಶಕಾರನು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾನೆ.
ಮರುದಿನದ ಬೆಳಗು ಚಾರುದತ್ತನ ಬದುಕು-ಸಾವುಗಳ ನಡುವಿನ ನಿರ್ಣಾಯಕ ದಿನವಾಗಿದೆ.
ಮೃಚ್ಛಕಟಿಕಮ್ ನಾಟಕವು ಈವರೆಗೆ ವಿನೋದ, ಶೃಂಗಾರ ಹಾಗು ಕರುಣಾರಸಗಳಿಂದ ಕೂಡಿದ ಕೋಮಲ ನಾಟಕವಾಗಿತ್ತು. ಇನ್ನು
ಮುಂದಿನ ಎರಡು ಅಂಕಗಳಲ್ಲಿ ಈ ಕೋಮಲತೆ ಮಾಯವಾಗುತ್ತದೆ. ಇದು ಪ್ರೇಕ್ಷಕನನ್ನು ಅಲ್ಲಾಡಿಸುವ ಹಾಗು ಕಣ್ಣೀರಿಡಿಸುವ ನಾಟಕವಾಗುತ್ತದೆ.
ವಾಸ್ತವ
ಬದುಕಿನ ಕಠೋರತೆ ಹಾಗು ಸ್ವಾರ್ಥವನ್ನು ಇನ್ನು ಮುಂದೆ ನಾವು ನೋಡಲಿದ್ದೇವೆ.
4 comments:
ಅನುಪಮ ವಿಶ್ಲೇಷಣೆ. ಆ ಕಾಲದ ಆದರ್ಶಗಳು, ಘಾತುಕತನಗಳು ಇಂದಿಗೂ ಅಷ್ಟೇ ಅಥ್ವಾ ಜಾಸ್ತಿಯಾಗಿರುವದು ನಾಟಕಕಾರನ ಹೆಗ್ಗಳಿಕೆ ಮಾತ್ರವಲ್ಲ ನಮ್ಮ ಸಮಾಜದ ದುರ್ವಿಧಿ ಕೂಡಾ ಅನಿಸುತ್ತದೆ. ಮೊನ್ನೆ ಬಾಣ ಭಟ್ಟನ 'ಕಾದಂಬರಿ'ಯ ತುಣುಕುಗಳನ್ನು ಓದುತ್ತಿದ್ದೆ. ಅದರ ಮೇಲೆಯೂ ನಿಮ್ಮ ಸೊಗಸಾದ ವಿಶ್ಲೇಷಣೆಗೆ ಕಾಯುತ್ತಿದ್ದೇನೆ.
~ಅನಿಲ
ಬಾಣ ಭಟ್ಟನ ‘ಕಾದಂಬರಿ’ಯನ್ನು (ಕನ್ನಡ ಅನುವಾದವನ್ನು!) ಒಮ್ಮೆ ಓದಿದ್ದೆ. ಅದೀಗ ನನಗೆ ಲಭ್ಯವಿಲ್ಲ. ಬಾಣಭಟ್ಟನು ಏಳನೆಯ ಶತಮಾನದಲ್ಲಿ ‘ಕಾದಂಬರಿ’ಯನ್ನು ರಚಿಸಿದನು. ಆದರೆ ಇದು ಅಪೂರ್ಣವಾಗಿತ್ತು. ಶೇಷ ಭಾಗವನ್ನು ಬಾಣನ ಮಗನಾದ ಭೂಷಣಭಟ್ಟನು ರಚಿಸಿ, ‘ಕಾದಂಬರಿ’ಯನ್ನು ಪೂರ್ಣಗೊಳಿಸಿದನು. ಈ ಕಾದಂಬರಿಯೇ ವಿಶ್ವದ ಮೊದಲ ಕಾದಂಬರಿ ಎಂದು ಖ್ಯಾತವಾಗಬೇಕಾಗಿತ್ತು. ಆದರೆ ಆ ಸಮ್ಮಾನವನ್ನು ಮುರಾಸಾಕಿ ಶಿಕಿಬು ಎನ್ನುವ ಜಪಾನದ ಮಹಿಳೆಯು ೧೧ನೆಯ ಶತಮಾನದಲ್ಲಿ ರಚಿಸಿದ ‘ಗೆಂಜಿಯ ಕಥೆ’ ಎನ್ನುವ ಕಾದಂಬರಿಗೆ ಕೊಡಲಾಗಿದೆ. ಈ ಕೃತಿಯೂ ಸಹ ಅಪೂರ್ಣವಾಗಿದ್ದು. ಅವಳ ಮಗಳಾದ ದಾಯಿನಿಯು ಈ ಕಾದಂಬರಿಯನ್ನು ಪೂರ್ಣಗೊಳಿಸಿದಳು.
ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದೀರಿ
ಮನಸು,
ಪ್ರೀತಿಯಿಂದ ಓದಿ, ಪ್ರತಿಕ್ರಿಯಿಸುತ್ತಿರುವ ನಿಮಗೆ ಧನ್ಯವಾದಗಳು.
Post a Comment