Sunday, May 29, 2016

ಮೃಚ್ಛಕಟಿಕಮ್-೧೦



ಅಂಕ ೯:
ಮೃಚ್ಛಕಟಿಕಮ್ ನಾಟಕದ ಮೊದಲಿನ ಎಂಟು ಅಂಕಗಳಲ್ಲಿ, ವಸಂತಸೇನೆ ಹಾಗು ಚಾರುದತ್ತರ ಪ್ರಣಯವು ಅರಳುವುದನ್ನು ನೋಡಿದೆವು. ಅದಕ್ಕೂ ಮುಖ್ಯವಾಗಿ, ಆ ಕಾಲದ ಉಜ್ಜಯಿನಿಯ ಸಾಮಾಜಿಕ ಸ್ಥಿತಿಗತಿಗಳನ್ನು ನೋಡಿದೆವು. ರಾಜನ ಸಂಬಂಧಿಗಳ ಏರಾಟವನ್ನು ಹಾಗು ಪ್ರಜೆಗಳ ಪ್ರತಿಭಟನೆಯ ಅಂಕುರವನ್ನು ಸಹ ಈ ಅಂಕಗಳಲ್ಲಿ ನೋಡಿದೆವು. ಒಂಬತ್ತನೆಯ ಅಂಕವು ಉಜ್ಜಯಿನಿಯಲ್ಲಿ ಆ ಸಮಯದಲ್ಲಿ ಪ್ರಚಲಿತವಿದ್ದ ನ್ಯಾಯವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಉಜ್ಜಯಿನಿಯಲ್ಲಿ ನ್ಯಾಯವ್ಯವಸ್ಥೆಯು ಆಡಳಿತವ್ಯವಸ್ಥೆಯ ಅಂಗವಾಗಿರದೆ, ಸ್ವತಂತ್ರವ್ಯವಸ್ಥೆಯಾಗಿತ್ತು. ಸಾಕ್ಷಿಗಳು ಅಪರಾಧನಿರ್ಣಯದಲ್ಲಿ ಮಹತ್ವದ ಪಾತ್ರವನ್ನು ಆಡುತ್ತಿದ್ದರು. ಆದರೆ ಆಗಲೂ ಸಹ ದೊಡ್ಡ ಮನುಷ್ಯರು ನ್ಯಾಯಾಧೀಶರ ಮೇಲೆ ಪ್ರಭಾವವನ್ನು ಬೀರಲು ಶಕ್ತರಾಗಿದ್ದರು. ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಿದ್ಧವಾದ ಬಳಿಕ ಯೋಗ್ಯವಾದ ಶಿಕ್ಷೆಯನ್ನು ಕೊಡುವುದು ರಾಜನ ಹೊಣೆಗಾರಿಕೆಯಾಗಿತ್ತು. ( ಈ ವ್ಯವಸ್ಥೆಯನ್ನು ಛತ್ರಪತಿ ಶಿವಾಜಿಯ ಕಾಲದಲ್ಲಿದ್ದ ಹಾಗು ತನ್ನಂತರ ಪೇಶವೆಯರ ಕಾಲದಲ್ಲಿದ್ದ ಮಹಾರಾಷ್ಟ್ರದ ನಿರ್ಭೀತ ಹಾಗು ನಿಷ್ಪಕ್ಷಪಾತ  ನ್ಯಾಯವ್ಯವಸ್ಥೆಗೆ ಹೋಲಿಸಿ ನೋಡಿರಿ. ಶಿವಾಜಿಯು ತನ್ನ ಮಗನಾದ ಸಂಭಾಜಿಗೆ ಸೆರೆಮನೆಯ ಶಿಕ್ಷೆಯನ್ನು ವಿಧಿಸಿದ್ದನು ಹಾಗು ಪೇಶವೆಯರ ಕಾಲದಲ್ಲಿದ್ದ ನ್ಯಾಯಮೂರ್ತಿ ರಾಮಾಶಾಸ್ತ್ರಿಯು ಆಳುವ ದೊರೆಯಾದ ಪೇಶವೆಗೆ ಮರಣದಂಡನೆಯನ್ನು ನೀಡಿದ್ದನು. )

ಒಂಬತ್ತನೆಯ ಅಂಕದ ಪ್ರಾರಂಭದಲ್ಲಿ, ಶೋಧನಕ ಎನ್ನುವ ನ್ಯಾಯಾಲಯದ ಸೇವಕನು ನ್ಯಾಯಾಲಯದಲ್ಲಿ ಪೀಠಗಳನ್ನು ಅಣಿ ಮಾಡುತ್ತಿರುವಾಗ, ಶಕಾರನು ಪ್ರವೇಶಿಸುತ್ತಾನೆ. ನ್ಯಾಯಾಧೀಶರು ಇನ್ನೂ ಬಂದಿಲ್ಲ. ಶಕಾರನು ನ್ಯಾಯಾಲಯದ ಹೊರಭಾಗದಲ್ಲಿ, ತನ್ನ ಯೋಜನೆಗಳನ್ನು ರೂಪಿಸಿಕೊಳ್ಳುತ್ತ, ಹಲ್ಲು ಕಡಿಯುತ್ತ, ಆತುರದಿಂದ ಕುಳಿತುಕೊಂಡಿದ್ದಾನೆ. ಆಷ್ಟರಲ್ಲಿ ನ್ಯಾಯಾಧೀಶರು ಹಾಗು ನ್ಯಾಯಾಲಯದ ಇತರ ಅಧಿಕಾರಿಗಳು ಪ್ರವೇಶಿಸುತ್ತಾರೆ.

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ಮೊದಲು ಕೈಗೆತ್ತಿಕೊಳ್ಳಲು ಬಯಸಿದ ನ್ಯಾಯಾಧೀಶರು. ಶಕಾರನಿಗೆ ಮರುದಿನ ಬರಲು ಹೇಳಿ ಕಳಿಸಿದರು. ಆದರೆ ಶಕಾರನು ಈ ನ್ಯಾಯಾಧೀಶರನ್ನೇ ಬದಲಾಯಿಸಿ ಬಿಡುತ್ತೇನೆ ಎನ್ನುವ ಬೆದರಿಕೆಯನ್ನು ಹಾಕಿದಾಗ, ಹೆದರಿದ ನ್ಯಾಯಾಧೀಶರು ಈತನ ದೂರನ್ನೇ ಮೊದಲು ವಿಚಾರಿಸಲು ಒಪ್ಪಿಕೊಂಡರು. (ಈಗಲೂ ಸಹ ಕಾರಣಾಂತರಗಳಿಂದ ಪ್ರಭಾವಿತರಾಗುವ ನ್ಯಾಯಾಧೀಶರನ್ನು ನಾವು ನೋಡುತ್ತೇವೆ.)

ಇದರಿಂದ ಪ್ರೋತ್ಸಾಹಿತನಾದ ಶಕಾರನು, ತಾನು ಪುಷ್ಪಕರಂಡಕ ಉದ್ಯಾನಕ್ಕೆ ಹೋದಾಗ, ಓರ್ವ ತರುಣಿಯ ಮೃತದೇಹವನ್ನು ಕಂಡಿದ್ದಾಗಿಯೂ, ಅದು ವಸಂತಸೇನೆ ಎನ್ನುವ ವೇಶ್ಯೆಯದು ಎಂದು ತಾನು ಗುರುತಿಸಿದ್ದಾಗಿಯೂ ಹೇಳುತ್ತಾನೆ. ಯಾವನೊ ಒಬ್ಬ ನೀಚನು ಅವಳ ಆಭರಣಗಳ ಆಸೆಗಾಗಿ ಅವಳನ್ನು ಕೊಲೆ ಮಾಡಿರುವದಾಗಿಯೂ ಸೂಚಿಸುತ್ತಾನೆ. ‘ಆದರೆ ಕೊಲೆಗಾರನು ನಾನಲ್ಲ, ನಾನಲ್ಲ’ ಎನ್ನುತ್ತಾನೆ. ‘ಕಳ್ಳನ ಜೀವ ಹುಳ್ಳುಳ್ಳೊಳಗೆ’ ಎನ್ನುವ ಕನ್ನಡದ ಗಾದೆಯೊಂದಿದೆ. ಶಕಾರನ ಸ್ಥಿತಿಯೂ ಹೀಗೇ ಆಗಿರಬಹುದು. ಅದಲ್ಲದೆ, ಅವನ ಬುದ್ಧಿವಂತಿಕೆಯೂ ಸಹ ಕೆಳಮಟ್ಟದ್ದೇ ತಾನೆ? ಹೀಗಾಗಿ ‘ಕೊಲೆಗಾರನು ತಾನಲ್ಲ’ ಎನ್ನುವ ಅತಿ ಜಾಣತನವನ್ನು ಆತನು ತೋರಿಸುತ್ತಿದ್ದಾನೆ.

ಮೃತದೇಹವು ವಸಂತಸೇನೆಯದು ಎಂದು ಶಕಾರನು ಹೇಳಿದ್ದರಿಂದ, ನ್ಯಾಯಾಧೀಶರು ವಸಂತಸೇನೆಯ ತಾಯಿಯನ್ನು ನ್ಯಾಯಾಲಯಕ್ಕೆ ಕರೆಸುತ್ತಾರೆ. ‘ಅವಳ ಮಗಳು ಎಲ್ಲಿದ್ದಾಳೆ ಹಾಗು ಆಕೆಯ ಸ್ನೇಹಿತನು ಯಾರು’ ಎಂದು ನ್ಯಾಯಾಲಯವು ವಸಂತಸೇನೆಯ ತಾಯಿಯನ್ನು ಪ್ರಶ್ನಿಸುತ್ತದೆ. ವಸಂತಸೇನೆಯ ತಾಯಿಗೂ ಸಹ ಚಾರುದತ್ತನ ಬಗೆಗೆ ಗೌರವವಿದೆ. ತನ್ನ ಮಗಳು ಚಾರುದತ್ತ ಎನ್ನುವ ಗೌರವಾನ್ವಿತ ವ್ಯಕ್ತಿಯ ಜೊತೆಗೆ ಇರುವಳು ಎಂದು ವಸಂತಸೇನೆಯ ತಾಯಿಯು ಹೇಳುತ್ತಾಳೆ.

ಚಾರುದತ್ತನನ್ನು ಕರೆತರಲು ನ್ಯಾಯಾಧೀಶರು ಶೋಧನಕನನ್ನು ಕಳುಹಿಸಿದರು ಹಾಗು ಚಾರುದತ್ತನ ಜೊತೆಗೆ ಗೌರವದಿಂದ ನಡೆದುಕೊಳ್ಳಬೇಕೆನ್ನುವ ಸೂಚನೆಯನ್ನು ಇತ್ತರು. ಚಾರುದತ್ತನು ನ್ಯಾಯಾಲಯಕ್ಕೆ ಬರುತ್ತಾನೆ. ವಸಂತಸೇನೆಯ ಜೊತೆಗೆ ಏನಾದರೂ ಸಂಬಂಧವಿದೆಯೆ ಎನ್ನುವ ನ್ಯಾಯಾಧೀಶರ ಪ್ರಶ್ನೆಗೆ ಅವನು ಸಂಕೋಚದಿಂದಲೇ ಒಪ್ಪಿಕೊಳ್ಳುತ್ತಾನೆ. ‘ವಸಂತಸೇನೆ ಎಲ್ಲಿರುವಳು?’ ಎನ್ನುವ ನ್ಯಾಯಾಧೀಶರ ಪ್ರಶ್ನೆಗೆ, ‘ಆಕೆ ತನ್ನ ಮನೆಗೆ ಹೋಗಿರುವಳು’ ಎಂದು ಹೇಳಲು ಮಾತ್ರ ಚಾರುದತ್ತನಿಗೆ ಸಾಧ್ಯವಾಗುತ್ತದೆ. ವಸಂತಸೇನೆಯ ತಾಯಿಯಂತೂ, ಬೆಲೆ ಬಾಳುವ ಮುತ್ತಿನ ಹಾರವನ್ನು ಕೊಟ್ಟಂತಹ ಚಾರುದತ್ತನು, ಆಭರಣಗಳ ಆಸೆಯಿಂದ ತನ್ನ ಮಗಳ ಕೊಲೆ ಮಾಡಲು ಸಾಧ್ಯವಿಲ್ಲ ಎಂದೇ ಹೇಳುತ್ತಾಳೆ. ಆದರ ಶಕಾರನು ಮಾತ್ರ ಚಾರುದತ್ತನೇ ಕೊಲೆಗಾರ ಎಂದು ಕೂಗಿಕೊಳ್ಳುತ್ತಲೇ ಇರುತ್ತಾನೆ.

ವಿಧಿಯು ಚಾರುದತ್ತನ ವಿರೋಧಿಗಳನ್ನು ಹೇಗೆ ಒಂದುಗೂಡಿಸುತ್ತಿದೆ ಎನ್ನುವುದನ್ನು ನೋಡಿರಿ. ಈ ಸಂದರ್ಭದಲ್ಲಿ ವೀರಕನ ಪ್ರವೇಶವಾಗುತ್ತದೆ. ‘ತೆರೆಯಿಂದ ಮುಚ್ಚಲ್ಪಟ್ಟ ಒಂದು ಗಾಡಿಯು ದಾರಿಯಲ್ಲಿ ಹೋಗುತ್ತಿರುವಾಗ, ನಾನು ಅದನ್ನು ತಡೆದೆ. ಗಾಡಿಯ ಚಾಲಕನು ಇದು  ಚಾರುದತ್ತನ ಗಾಡಿ, ಇದರಲ್ಲಿ ವಸಂತಸೇನೆ ಇದ್ದಾಳೆ. ಇವಳನ್ನು ಚಾರುದತ್ತನೊಡನೆ ವಿಹರಿಸಲೆಂದು ಉದ್ಯಾನಕ್ಕೆ ಕರೆದೊಯ್ಯುತ್ತಿರುವೆ ಎಂದು ಹೇಳಿದನು’, ಎನ್ನುತ್ತಾನೆ. (ಅಂಕ ಆರನ್ನು ನೆನಪಿಸಿಕೊಳ್ಳಿರಿ. ವಾಸ್ತವದಲ್ಲಿ ಆ ಬಂಡಿಯಲ್ಲಿ ಇದ್ದವನು ಆರ್ಯಕ ಎನ್ನುವ ರಾಜವಿರೋಧೀ ಬಂಡುಖೋರ.)

ನ್ಯಾಯಾಧೀಶರಿಗೂ ಸಹ ಚಾರುದತ್ತನ ಮೇಲೆ ಗೌರವವಿದೆ. ಆದರೆ ಸಾಂದರ್ಭಿಕ ಸಾಕ್ಷಿಗಳು ಅವನ ವಿರುದ್ಧ ಹೋಗುತ್ತಿವೆ. ಇದರಿಂದಾಗಿ ಅವರೂ ಚಿಂತಿತರಾದರು. ಉದ್ಯಾನದಲ್ಲಿ ಸ್ತ್ರೀಯೊಬ್ಬಳ ಮೃತದೇಹ ಇರುವದೇ ಎಂದು ನೋಡಿ ಬಾ ಎಂದು ಅವರು ವೀರಕನಿಗೆ ಆದೇಶಿಸುತ್ತಾರೆ.

ವೀರಕನು ಹೋದಂತೆ ಮಾಡಿ, ತಿರುಗಿ ಬಂದು, ‘ನಾಯಿ ನರಿಗಳು ಎಳೆದಾಡುತ್ತಿರುವ ಒಂದು ಹೆಣ್ಣಿನ ದೇಹವನ್ನು ನೋಡಿದೆನು’ ಎಂದು ಸುಳ್ಳು ಹೇಳಿಕೆಯನ್ನು ಕೊಡುತ್ತಾನೆ. (‘ಸತ್ಯಮೇವ ಜಯತೇ’ ಎನ್ನುವ ನಮ್ಮ ನಾಡಿನಲ್ಲಿ ಸುಳ್ಳಿನ ತಾಂಡವ ನೃತ್ಯವನ್ನು ನೋಡಿದಿರಾ? ಆಗಿನಂತೆ ಈಗಲೂ ಸಹ ನ್ಯಾಯಾಲಯಗಳಲ್ಲಿ ಸುಳ್ಳು ಸಾಕ್ಷಿಗಳು ಪ್ರಕರಣಗಳನ್ನು ತಿರುಚುವದನ್ನು ನೋಡುತ್ತಲೇ ಇದ್ದೇವೆ.)

ವೀರಕನ ಸಾಕ್ಷಿಯಿಂದ ಪ್ರಭಾವಿತರಾದ ನ್ಯಾಯಾಧೀಶರು ಬಹಳ ಸಂತಾಪಗೊಂಡು, ನಿಜವನ್ನೇ ಹೇಳಲು ಚಾರುದತ್ತನಿಗೆ ಆಗ್ರಹ ಮಾಡುತ್ತಾರೆ. ಚಾರುದತ್ತನಾದರೊ ಈ ಆರೋಪವನ್ನು ನಿರಾಕರಿಸುತ್ತಲೇ ಇದ್ದಾನೆ. ಇತ್ತ ಖುಶಿಗೊಂಡ ಶಕಾರನು, ‘ನಾನು ಮಾಡಿದ ಪಾಪವನ್ನು ಎಷ್ಟು ಸರಳವಾಗಿ ಮತ್ತೊಬ್ಬನ ತಲೆಗೆ ಕಟ್ಟಿಬಿಟ್ಟೆ. ಚಾರುದತ್ತನೇ, ಈಗಲಾದರೂ ‘ನಾನೇ ಕೊಲೆಗಾರ’ ಎಂದು ಒಪ್ಪಿಕೊ’ ಎನ್ನುತ್ತಿದ್ದಾನೆ. ಈ ರೀತಿಯಾಗಿ ನ್ಯಾಯಾಲಯದಲ್ಲಿಯೂ ಸಹ ಶಕಾರನು ತನ್ನ ಹುಂಬತನವನ್ನು ಪ್ರದರ್ಶಿಸುತ್ತಿದ್ದಾನೆ.

ವಸಂತಸೇನೆಯು ತನ್ನ ಆಭರಣಗಳನ್ನು ಮಣ್ಣಿನ ಬಂಡಿಯಲ್ಲಿ ಹಾಕಿ ಚಾರುದತ್ತನ ಮಗನಾದ ರೋಹಸೇನನಿಗೆ ಕೊಟ್ಟಿದ್ದಳಷ್ಟೆ. ಆ ಒಡವೆಗಳನ್ನು ವಸಂತಸೇನೆಗೆ ಮರಳಿ ಕೊಡಲು, ಚಾರುದತ್ತನ ಗೆಳೆಯನಾದ ಮೈತ್ರೇಯನು ಹೊರಟಿದ್ದಾನೆ. ದಾರಿಯಲ್ಲಿ ಆತನಿಗೆ ಶರ್ವಿಲಕನ ಗೆಳೆಯನಾದ ರೇಭಿಲನ ಭೆಟ್ಟಿಯಾಗುತ್ತದೆ. ಆತನ ಮೂಲಕ, ಚಾರುದತ್ತನನ್ನು ನ್ಯಾಯಾಲಯಕ್ಕೆ ಎಳೆಯಲಾಗಿದೆ ಎನ್ನುವುದು ತಿಳಿದು ಬರುತ್ತದೆ. ಗಾಬರಿಗೊಂಡ ಮೈತ್ರೇಯನು ನ್ಯಾಯಾಲಯಕ್ಕೆ ಧಾವಿಸಿ ಬರುತ್ತಾನೆ.

ಅಲ್ಲಿ ಉದ್ರಿಕ್ತನಾದ ಮೈತ್ರೇಯನಿಗೂ ಶಕಾರನಿಗೂ ಜಗಳವಾಗುತ್ತದೆ. ಚಾರುದತ್ತನ ಪ್ರಾಣಸ್ನೇಹಿತನಾದ ಮೈತ್ರೇಯನಿಂದಲೇ, ಚಾರುದತ್ತನ ಪ್ರಾಣ ಹೋಗುವಂತಹ ಘಟನೆಯೊಂದು ಈಗ ಸಂಭವಿಸುತ್ತದೆ. ಮೈತ್ರೇಯ ಹಾಗು ಶಕಾರರ ಕಲಹದ ಸಂದರ್ಭದಲ್ಲಿ, ಮೈತ್ರೇಯನು ಹಿಡಿಕೊಂಡಿದ್ದ ವಸಂತಸೇನೆಯ ಆಭರಣಗಳ ಗಂಟು ಕೆಳಗೆ ಬಿದ್ದು, ಒಡವೆಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತವೆ. ಶಕಾರನು ‘ಇವೇ ನೋಡಿ, ವಸಂತಸೇನೆಯ ಆಭರಣಗಳು. ಇವುಗಳಿಗಾಗಿಯೇ ಚಾರುದತ್ತನು ಅವಳ ಕೊಲೆ ಮಾಡಿದ್ದಾನೆ’ ಎಂದು ಕೂಗಿಕೊಳ್ಳುತ್ತಾನೆ!

ಚಾರುದತ್ತನು ಕೊಲೆಗಾರನಾಗಲು ಸಾಧ್ಯವಿಲ್ಲ ಎಂದು ನಂಬಿದ ವಸಂತಸೇನೆಯ ತಾಯಿಯು ಅವನನ್ನು ರಕ್ಷಿಸಲು, ‘ಈ ಆಭರಣಗಳು ನನ್ನ ಮಗಳವಲ್ಲ’ ಎಂದು ಹೇಳುತ್ತಾಳೆ. ಆದರೆ ಚಾರುದತ್ತನು ಮಾತ್ರ, ‘ಈ ಆಭರಣಗಳು ವಸಂತಸೇನೆಯವೇ ಹೌದು’ ಎಂದು ಸ್ವತಃ ಘೋಷಿಸುತ್ತಾನೆ. (ನಾಲ್ಕನೆಯ ಅಂಕದಲ್ಲಿ ಮೈತ್ರೇಯನು ವಸಂತಸೇನೆಯ ತಾಯಿಯನ್ನು ಎಷ್ಟು ಹಾಸ್ಯಾಸ್ಪದವಾಗಿ ವರ್ಣಿಸಿದ್ದ ಎನ್ನುವುದನ್ನು ನೆನಪಿಸಿಕೊಳ್ಳಿ. ಅಂಥವಳೂ ಸಹ, ಇದೀಗ ತನ್ನ ಮಗಳ ಕೊಲೆಯ ಆರೋಪವನ್ನು ಹೊತ್ತ ಚಾರುದತ್ತನನ್ನು ರಕ್ಷಿಸಬಯಸುತ್ತಾಳೆ. ಇದು ಚಾರುದತ್ತನ ಘನತೆಯನ್ನು ತೋರಿಸುವದರ ಜೊತೆಗೆ, ಒಬ್ಬ ಗಣಿಕೆಯ ಘನತೆಯನ್ನೂ ತೋರಿಸುತ್ತದೆ.)

ಚಾರುದತ್ತನೇ ಹಾಗೆ ಹೇಳಿದ ಬಳಿಕ, ಶಕಾರನು ಸುಮ್ಮನಿದ್ದಾನೆಯೆ? ತಾನು ಮಾಡಿದ ತಪ್ಪನ್ನು ಒಬ್ಬ ನಿರಪರಾಧಿಯ ಮೇಲೆ ಹೊರಿಸಿ, ಅವನನ್ನು ದಂಡನೆಗೆ ಗುರಿ ಮಾಡಿದ ಶಕಾರನು, ಈ ಪರಿಸ್ಥಿತಿಯಲ್ಲಿಯೂ ಸಹ ಚಾರುದತ್ತನನ್ನು ಹೀಯಾಳಿಸುವ ರೀತಿಯನ್ನು ನೋಡಿರಿ: ‘ಈ ದರಿದ್ರ ಚಾರುದತ್ತನ ದೇಹಕ್ಕೆ ದಂಡನೆ ವಿಧಿಸೋಣವಾಗಲಿ.’

ಈ ಕ್ಷಣದಲ್ಲೂ ಸಹ ವಸಂತಸೇನೆಯ ತಾಯಿಯು ನ್ಯಾಯಾಧೀಶರಲ್ಲಿ ಬಿನ್ನವಿಸುತ್ತಾಳೆ: ‘ಸ್ವಾಮಿ, ದಯಮಾಡಿ ಪ್ರಸನ್ನರಾಗಿರಿ. ನನ್ನ ಮಗಳಂತೂ ಹೋಗಿ ಬಿಟ್ಟಳು. ಈ ಸಜ್ಜನನು ಬದುಕಿಕೊಳ್ಳಲಿ.’ ಬಹುಶಃ ನಮ್ಮ ನಾಟಕಕಾರನು ಸಮಾಜದಲ್ಲಿ ಉಚ್ಚ ತರಗತಿಯಲ್ಲಿ ಇರುವ ಹಾಗು ರಾಜಸಂಬಂಧಿಯಾದ ಶಕಾರನ ನಡತೆಯನ್ನು, ಸಾಮಾಜಿಕವಾಗಿ ಕೆಳಮಟ್ಟದಲ್ಲಿರುವ ಓರ್ವ ವೇಶ್ಯೆಯ ತಾಯಿಯ ನಡತೆಯೊಡನೆ ಹೋಲಿಸಿ ತೋರಿಸಲು ವಸಂತಸೇನೆಯ ತಾಯಿಯಿಂದ ಹೀಗೆ ಹೇಳಿಸಿರಬಹುದು.

ನ್ಯಾಯಾಧೀಶನು ಚಾರುದತ್ತನನ್ನು ದೋಷಿ ಎಂದು ನಿರ್ಣಯಿಸಿದ ಬಳಿಕ, ಶಿಕ್ಷೆಯನ್ನು ನಿರ್ಧರಿಸಲು ರಾಜನ ಬಳಿಗೆ ಕಳುಹಿಸುತ್ತಾನೆ. ರಾಜನು ಚಾರುದತ್ತನಿಗೆ ಮರಣಶಿಕ್ಷೆಯನ್ನು ವಿಧಿಸಿದನು: ‘ಪುಡಿಗಾಸಿನ ಆಸೆಗಾಗಿ ವಸಂತಸೇನೆಯನ್ನು ಕೊಂದ ಇವನ ಕುತ್ತಿಗೆಯ ಸುತ್ತ ಅದೇ ಆಭರಣಗಳನ್ನು ಬಿಗಿಯಿರಿ, ಡೋಲು ಬಾರಿಸುತ್ತ ಇವನನ್ನು ತೆಂಕಣ ದಿಕ್ಕಿನಲ್ಲಿರುವ ಮಸಣಕ್ಕೆ ಒಯ್ದು, ಶೂಲಕ್ಕೇರಿಸಿ.’

ಚಾರುದತ್ತನು ಯಾವುದೇ ತಪ್ಪು ಮಾಡಿರದಿದ್ದರೂ, ಶೂಲಕ್ಕೆ ಸಿದ್ಧನಾದನು. ಅದಕ್ಕೂ ಮೊದಲು ಮೈತ್ರೇಯನನ್ನು ಕರೆದು, ತನ್ನ ತಾಯಿಗೆ ತನ್ನ ಕೊನೆಯ ನಮಸ್ಕಾರವನ್ನು ಹೇಳುವಂತೆ ತಿಳಿಸಿದನು. ಕೊನೆಯ ಕ್ಷಣದಲ್ಲೂ ಸಹ, ಚಾರುದತ್ತನು ತನ್ನ ತಾಯಿಯನ್ನು ನೆನಪಿಸಿಕೊಳ್ಳುವುದು, ಅವಳಿಗೆ ಗೌರವ ಸಲ್ಲಿಸುವುದು ಇವು ಭಾರತೀಯ ಸಂಸ್ಕೃತಿಯ ಉಚ್ಚ ಲಕ್ಷಣಗಳಾಗಿವೆ. ಆನಂತರ ತನ್ನ ಮಗನಾದ ರೋಹಸೇನನನ್ನು ನೋಡಿಕೊಳ್ಳಲು ಮೈತ್ರೇಯನಿಗೆ ತಿಳಿಸಿದನು.

ಚಾರುದತ್ತನು ತನ್ನ ತಾಯಿ ಹಾಗು ಮಗನ ಬಗೆಗೆ ಮೈತ್ರೇಯನಿಗೆ  ತನ್ನ ಕೊನೆಯ ಮಾತುಗಳನ್ನು ಹೇಳಿದನು . ತನ್ನ ಪ್ರೇಯಸಿಯಾದ ವಸಂತಸೇನೆ ಸತ್ತಿರುವಳು ಎಂದೇ ಆತ ತಿಳಿದಿದ್ದಾನೆ. ಇನ್ನು ಆತನ ಕುಟುಂಬದಲ್ಲಿ ಉಳಿದಿರುವವರು ಯಾರು? ಆತನ ಧರ್ಮಪತ್ನಿ ಧೂತಾದೇವಿ ತಾನೆ? ಅವಳ ಬಗೆಗೆ ಆತನು ಮೈತ್ರೇಯನಿಗೆ ಯಾಕೆ ಏನೂ ಹೇಳುವುದಿಲ್ಲ? ಚಾರುದತ್ತನು ತನ್ನ ಸ್ವಯಂಕೃತಾಪರಾಧದಿಂದಾಗಿ, ಧೂತಾದೇವಿಯನ್ನು ಕೊನೆಯಿಲ್ಲದ ಸಂಕಟಕ್ಕೆ ಹಾಗು ಅಪಖ್ಯಾತಿಗೆ ನೂಕುತ್ತಿರುವಾಗ, ಹೇಳಲು ಆತನಿಗೆ ಉಳಿದಿರುವದಾದರೂ ಏನು, ಎನ್ನೋಣವೆ?

‘ನನ್ನನ್ನು ಕ್ಷಮಿಸು. ನಾನು ಬದುಕಿದ್ದಾಗ ನನ್ನ ಹುಚ್ಚುತನದಿಂದಾಗಿ ನಿನಗೆ ಅನೇಕ ದುಃಖಗಳನ್ನು ಕೊಟ್ಟೆ. ನನ್ನ ಹುಚ್ಚುತನದಿಂದಲೇ ನಾನೀಗ ಸಾಯುತ್ತಿರುವಾಗ ಸಹ, ನಿನಗೆ ದುಃಖವನ್ನು ಕೊಡುತ್ತಿದ್ದೇನೆ’ ಎಂದು ಚಾರುದತ್ತನು ಧೂತಾದೇವಿಗೆ ಹೇಳಬಹುದಾಗಿತ್ತಲ್ಲವೆ? ಅಥವಾ ಭಾರತೀಯ ಗಂಡಸರು ಯಾವ ಸಂವೇದನೆಗೂ ತಮ್ಮ ಹೆಂಡತಿಯರು ಅನರ್ಹರು ಎಂದು ಭಾವಿಸುತ್ತಿದ್ದರೊ? ಹಾಗಿಲ್ಲದೆ ಹೋಗಿದ್ದರೆ ನಮ್ಮ ನಾಟಕಕಾರನು ಮೃದುಹೃದಯಿಯಾದ ಚಾರುದತ್ತನ ಮುಖದಿಂದ ಒಂದು ಮಾತನ್ನಾದರೂ ಧೂತಾದೇವಿಯ ಬಗೆಗೆ ಹೇಳಿಸದೆ ಇರುತ್ತಿರಲಿಲ್ಲ!

ಚಾರುದತ್ತನಿಗೆ ರಾಜನ ನಿರ್ಣಯದ ಬಗೆಗೆ, ತನಗಾದ ಅನ್ಯಾಯದ ಬಗೆಗೆ ಅಸಮಾಧಾನ ಇರಲಿಲ್ಲ ಎಂದೇನಲ್ಲ. ರಂಗದಿಂದ ನಿರ್ಗಮಿಸುವಾಗ ಆತನು ರಾಜನ ಬಗೆಗೆ ನುಡಿಯುವ ಆಕ್ರೋಶಭರಿತ ಮಾತುಗಳನ್ನು ನೋಡಿ:
‘ಹಗೆಯಾದವನ ಮಾತನ್ನೆ ನಂಬಿ ನೀನು ನನ್ನನ್ನು ಕೊಲ್ಲಲು ಹೊರಟಿರುವೆ. ನೀನು, ನಿನ್ನ ಮಕ್ಕಳು ಹಾಗು ಮೊಮ್ಮಕ್ಕಳೊಡನೆ ನರಕದ ದಾರಿಯನ್ನು ತೆರೆದುಕೊಂಡಿರುವಿ.’

ಮೃತ್ಯುಮುಖದಲ್ಲಿದ್ದಾಗ ಚಾರುದತ್ತನಂತಹ ಸಂಯಮಿಗೂ ಉದ್ವೇಗದ ಕಟ್ಟೆ ಒಡೆಯಬಹುದು ಎನ್ನುವುದನ್ನು ಶೂದ್ರಕನು ಇಲ್ಲಿ ಸರಿಯಾಗಿಯೇ ತೋರಿಸಿದ್ದಾನೆ.  ಮುಂದಿನ ಅಂಕವೇ ಈ ನಾಟಕದ ಕೊನೆಯ ಅಂಕ. ಚಾರುದತ್ತನನ್ನು ವಧಾಸ್ಥಾನಕ್ಕೆ ಎಳೆದೊಯ್ಯುವ ದೃಶ್ಯವನ್ನು ಈ ಅಂಕದಲ್ಲಿ ಭೀಭತ್ಸವಾಗಿ ತೋರಿಸಲಾಗಿದೆ.

3 comments:

ಮನಸು said...

ನ್ಯಾಯಾದೀಶರನ್ನು ಬದಲಿಸುವಂತಹ ಬೆದರಿಕೆಗಳು ಆಗಲೂ ನಡೆಯುತ್ತಲಿದ್ದವು ಎಂದಾಯಿತು. ಈಗಿನಂತೆಯೇ ಆಗಲೂ ನಿರಪರಾಧಿಗಳಿಗೆ ಶಿಕ್ಷೆಯಾಗುತ್ತಿತ್ತು. ಕಾಲ ಬದಲಾದರೂ ಮೋಸ ವಂಚನೆಗಳು ಬದಲಾಗುವುದಿಲ್ಲ. ಮುಂದಿನ ಸಂಚಿಕೆಗೆ ಕಾತುರಳಾಗಿ ಕಾಯುತ್ತಿದ್ದೇನೆ. ಅದ್ಭುತ ವಿವರಣೆ...

sunaath said...

ಮನಸು,
Intelligent Society ಪ್ರಾರಂಭವಾದಾಗಿನಿಂದಲೂ ಮೋಸ, ವಂಚನೆ ನಡೆಯುತ್ತಲೇ ಇವೆ. ಇದಕ್ಕೊಂದು ಉದಾಹರಣೆ ಹೀಗಿದೆ: ಅನೇಕ ವರ್ಷಗಳ ಹಿಂದೆ, ಜಪಾನಿನಲ್ಲಿ ವಿಜ್ಞಾನಿಗಳು ‘ಪ್ರಾಣಿಗಳ ಬುದ್ಧಿಮತ್ತೆ’ಯ ಬಗೆಗೆ ಸಂಶೋಧನೆ ನಡೆಸುತ್ತಿದ್ದರು. ಮಂಗಗಳು ಅವರ ಸಂಶೋಧನೆಯ ಪ್ರಾಣಿಗಳಾಗಿದ್ದವು. ಸಮುದ್ರದ ದಂಡೆಯ ಮೇಲೆ ಸೇಂಗಾ ಬೀಜಗಳನ್ನು ಚೆಲ್ಲಿದಾಗ, ಕೆಲವು ಮಂಗಗಳು ಸೇಂಗಾ ಹಾಗು ಉಸಕನ್ನು ಬೇರೆ ಮಾಡಲು ಪ್ರಯತ್ನಿಸಿ ಸೋಲುತ್ತಿದ್ದವು. ಒಂದು ಜಾಣ ಮಂಗವು ಸಮುದ್ರದ ತೆರೆಯಲ್ಲಿ ಈ ಮಿಶ್ರಣವನ್ನು ತೂರಿ, ಕೆಳಗೆ ಬೀಳುವಾಗ, ಶುದ್ಧವಾಗಿ ಬಂದ ಸೇಂಗಾಗಳನ್ನು ಹಿಡಿದುಕೊಳ್ಳುತ್ತಿತ್ತು. ಇದನ್ನು ನೋಡಿದ ಉಳಿದ ಕೆಲವು ಮಂಗಗಳು ಏನು ಮಾಡಿದವು ಗೊತ್ತೆ? ಈ ಮಂಗವು ತೂರಿದ ಮಿಶ್ರಣವನ್ನು, ತಾವು ನಡುವೆ ಕೈಹಾಕಿ ಕಬಳಿಸಲು ತೊಡಗಿದವು. ಇಂತಹ ಮಂಗಗಳೇ ಮನುಷ್ಯರ ಪೂರ್ವಸಂಬಂಧಿಗಳಲ್ಲವೆ?

ಮನಸು said...

ಮಂಗನಿಂದ ಮಾನವ ಅನ್ನುತ್ತಾರಲ್ಲ ಹಾಗೆ ಮಂಗಗಳ ಗುಣ ಮನುಷ್ಯನಲ್ಲೂ ಚಾಲ್ತಿಯಲ್ಲಿದೆ ಅಂದಹಾಗೆ ಆಯ್ತು.