Wednesday, June 6, 2018

ಮನೋಹರ ಗ್ರಂಥಮಾಲೆಯ ಎರಡು ಕೃತಿಗಳು‘ಮ್ಯೂಟೇಶನ್’ ಇದು ಮನೋಹರ ಗ್ರಂಥಮಾಲೆಯು ಪ್ರಕಟಿಸಿದ ೨೦೧೭ನೆಯ ಇಸವಿಯ ಎರಡನೆಯ ಗ್ರಂಥ. ಇದರ ಲೇಖಕರು ಎಸ್. ಎಫ್. ಯೋಗಪ್ಪನವರ. ಈ ಕಥಾಸಂಕಲನದಲ್ಲಿ ಆರು ಕಥೆಗಳಿವೆ.  ಇಲ್ಲಿರುವ ಕಥೆಗಳನ್ನು ವಿಮರ್ಶಿಸಲು ನಾನು ಈ ಲೇಖನವನ್ನು ಬರೆಯುತ್ತಿಲ್ಲ. ಆದರೆ ಈ ಸಂಕಲನದ ಕೊನೆಯ ಕಥೆಯಾದ ‘ತಂಗಿಯ ಮನೆ’ಯನ್ನು ಓದಿದಾಗ, ನನಗೆ ನೆನಪಾದ ಮತ್ತೊಂದು ಕಥೆಗೂ, ಈ ಕಥೆಗೂ ಇರುವ ಸಾಮ್ಯವನ್ನು ಕಂಡು ಚಕಿತನಾಗಿ, ಈ ಲೇಖನವನ್ನು ಬರೆಯುತ್ತಿದ್ದೇನೆ.

ಸುಮಾರು ಐವತ್ತು ವರ್ಷಗಳ ಹಿಂದೆ ಇರಬಹುದು. Readers’ Digest ಮಾಸಪತ್ರಿಕೆಯಲ್ಲಿ ಒಂದು ಸತ್ಯಕಥೆ ಪ್ರಕಟವಾಗಿತ್ತು. ಆ ಲೇಖನವು ಪೂರ್ಣವಾಗಿ ನನಗೆ ನೆನಪಿನಲ್ಲಿಲ್ಲ . ಅದರ ತಿರುಳು ನನಗೆ ನೆನಪಿರುವ ಮಟ್ಟಿಗೆ ಹೀಗಿದೆ:

ಯಾವುದೋ ಒಂದು ಹಳ್ಳಿಯಲ್ಲಿರುವ ಕುಟುಂಬದ ಒಬ್ಬ ಹದಿಹರಯದ ಹುಡುಗನು ತನ್ನ ಮನೆಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. (ಅಥವಾ ಒಂದು ಅಪರಾಧದಲ್ಲಿ ಸಿಲುಕಿ ಸೆರೆಮನೆಗೆ ಹೋಗಿರುತ್ತಾನೆ.) ಆತ ಮರಳಿ ಬರುವಾಗ, ಆತನ ಮನಸ್ಸಿನಲ್ಲಿ ಒಂದು ಚಡಪಡಿಕೆ. ತನ್ನ ಮನೆಯವರು ತನ್ನನ್ನು ಸ್ವಾಗತಿಸುತ್ತರೊ ಇಲ್ಲವೊ ಎನ್ನುವ ಸಂದೇಹ ಅವನಿಗಿರುತ್ತದೆ. ಆತ ತನ್ನ ಮನೆಯವರಿಗೆ ಪತ್ರ ಬರೆದು, ತನ್ನ ಸಂಶಯವನ್ನು ನಿವೇದಿಸುತ್ತಾನೆ. ಅಲ್ಲದೆ ಒಂದು ವಿನಂತಿಯನ್ನು ಅವರೆದುರಿನಲ್ಲಿ ಇಡುತ್ತಾನೆ. ‘ಅವರು ಹಳೆಯದೆಲ್ಲವನ್ನು ಮರೆತು ತನ್ನನ್ನು ಸ್ವಾಗತಿಸುವದಾದರೆ, ತಮ್ಮ ಮನೆಯ ಮೇಲೆ ಹಸಿರು ಬಾವುಟವನ್ನು ಹಚ್ಚಬೇಕು. ಅಂದರೆ ತಾನು ಮನೆಯ ಒಳಗೆ ಬರುತ್ತೇನೆ. ಇಲ್ಲವಾದರೆ ಹಾಗೆಯೇ ಹೊರಟು ಬಿಡುತ್ತೇನೆ’.

ಆ ಹುಡುಗ ಅನುಮಾನಿಸುತ್ತಲೇ ತನ್ನ ಹಳ್ಳಿಗೆ ಕಾಲಿಟ್ಟಾಗ, ಆತನಿಗೆ ಕಾಣುವದೇನು? ಇಡೀ ಹಳ್ಳಿಯ ಎಲ್ಲ ಮನೆಗಳ ಮೇಲೂ ಹಸಿರು ಬಾವುಟಗಳು ಹಾರಾಡುತ್ತಿರುತ್ತವೆ!

ಇದು ಸತ್ಯಕಥೆ. ಆದುದರಿಂದ ಕೇವಲ ಎರಡು-ಮೂರು ಪುಟಗಳಲ್ಲಿ ಮುಗಿದಿರಬಹುದಾದ ಒಂದು ಚಿಕ್ಕ ಕಥೆ. ಇನ್ನು ಯೋಗಪ್ಪನವರು ಬರೆದ ಕಥೆಗೂ, ಈ ಕಥೆಗೂ ಸಾಮ್ಯತೆ ಎಲ್ಲಿದೆ ಎನ್ನುವುದನ್ನು ಹೇಳಬಯಸುತ್ತೇನೆ. ಯೋಗಪ್ಪನವರು ಬರೆದ ಕಥೆ ಇಪ್ಪತ್ತುನಾಲ್ಕು ಪುಟಗಳ ಕಥೆ. ಕಥೆಯನ್ನು ಹೇಳುತ್ತಿರುವವನ ತಂಗಿಯು ಒಬ್ಬ ಸದ್ಗೃಹಿಣಿ; ತನ್ನ ಉಪಕಾರಿ ಸ್ವಭಾವದಿಂದ ಊರಿನವರಿಗೆಲ್ಲ ಬೇಕಾದವಳು. ಅವಳೀಗ ಮರಣಿಸಿದ್ದಾಳೆ. ಅವಳ ಅಪರಕರ್ಮಗಳ ವಿವರಣೆಯಿಂದ ಕಥೆ ಪ್ರಾರಂಭವಾಗುತ್ತದೆ. ಆ ಬಳಿಕ flash backನಲ್ಲಿ ತಂಗಿಯ ಬಾಲ್ಯದ ವಿವರಗಳು, ಆಕೆಯ ಉಪಕಾರಬುದ್ಧಿ, ಅಣ್ಣನಿಗೂ ತಂಗಿಗೂ ಇರುವ ನಿಕಟ ಬಾಂಧವ್ಯ ಮೊದಲಾದವುಗಳ ಸವಿಸ್ತಾರ ವರ್ಣನೆಯಿದೆ. ಯೋಗಪ್ಪನವರು ಒಳ್ಳೆಯ ಲೇಖಕರು. ಹೀಗಾಗಿ ಈ ವರ್ಣನೆಯು ಓದುಗನನ್ನು ಸೆರೆ ಹಿಡಿಯುತ್ತದೆ. ಕ್ರಿಯಾಕರ್ಮ ಮಾಡಿಸಿದ ಆಚಾರ್ಯರು ಮೃತಳ ಆತ್ಮದ ಪರಲೋಕಪ್ರಯಾಣದ ಬಗೆಗೆ ವಿವರಿಸುತ್ತಾರೆ. ಆದರೆ ಅವಳ ಅಣ್ಣನಿಗೆ ಅವಳು ತಮ್ಮನ್ನು ಬಿಟ್ಟು ಪರಲೋಕಕ್ಕೆ ಹೋಗಿಲ್ಲ ಎಂದು ಭಾಸವಾಗುತ್ತದೆ.  ಆತ ಮನೆಯ ಎಲ್ಲ ಲೈಟುಗಳನ್ನು ಹಚ್ಚಿ, ಮನೆಯ ಬಾಗಿಲಿಗೆ, ‘ತಂಗಿಯ ಮನೆ—ಸ್ವಾಗತ’ ಎಂದು ಬರೆಯುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಹಿರಿಯ ಮುದುಕಿಯೊಬ್ಬಳು, ಒಂದು ದೀಪವನ್ನು ಹೊಚ್ಚಲಲ್ಲಿಟ್ಟು ಹೋಗುತ್ತಾಳೆ. ಆಚಾರ್ಯರನ್ನು ಭೆಟ್ಟಿಯಾಗಬಯಸಿದ ಅಣ್ಣನು ತಮ್ಮ ಮನೆಯಿಂದ ಹೊರಬರುತ್ತಾನೆ. ಅವನಿಗೆ ಕಾಣುವದೇನು?..............ಹಳ್ಳಿಯ ಎಲ್ಲ ಮನೆಗಳಲ್ಲಿಯೂ ದೀಪಗಳು ಉರಿಯುತ್ತಿವೆ. ‘ತಂಗಿಯ ಮನೆ—ಸ್ವಾಗತ’ ಎಂದು ಎಲ್ಲ ಮನೆಗಳ ಮೇಲೂ ಬರೆದಿದೆ.

ಓದುಗರೆ, ಸಾಮ್ಯವನ್ನು ನೋಡಿದಿರಷ್ಟೆ? Readers’ Digestದಲ್ಲಿಯ ಹುಡುಗನ ತಪ್ಪುಗಳನ್ನು ಊರವರು ಕ್ಷಮಿಸಿ, ಆತನನ್ನು ಮರಳಿ ಸ್ವಾಗತಿಸುತ್ತಿದ್ದಾರೆ.  ಯೋಗಪ್ಪನವರ ಕಥೆಯಲ್ಲಿ ತಂಗಿಯು ಮರಣ ಹೊಂದಿರುವದರಿಂದ ಹಾಗೆ ಮಾಡಲು ಸಾಧ್ಯವಿಲ್ಲ. ಇನ್ನು ಊರವರೆಲ್ಲ ಅವರ ತಂಗಿಯನ್ನು ಮೆಚ್ಚಬೇಕಾದರೆ, ಊರವರಿಗೆಲ್ಲ ಅವಳು ಬೇಕಾಗಿರುವ ಸದ್ಗೃಹಿಣಿಯಾಗಿರಬೇಕಾದರೆ (-ಇದು ಕಥೆಗೆ ಅನಿವಾರ್ಯ-), ಅವರ ತಂಗಿಯು ಪರೋಪಕಾರ ಬುದ್ಧಿಯನ್ನು ಹೊಂದಿರಲೇ ಬೇಕು. ಇನ್ನು ಅವಳನ್ನು ಊರವರು ಮರುಸ್ವಾಗತಿಸಬೇಕಾದರೆ, ಅವಳು ಮೊದಲು ಸಾಯುವುದೂ ಅನಿವಾರ್ಯವೇ. ಇಷ್ಟೆಲ್ಲ ಅನಿವಾರ್ಯತೆಗಳು ಇರುವ ಕಥೆಯನ್ನು ವಾಸ್ತವ ಶೈಲಿಯಲ್ಲಿ ಬರೆಯಲು ಸಾಧ್ಯವಿಲ್ಲ. ಆದುದರಿಂದ ಕಥೆಯು fable ಶೈಲಿಯಲ್ಲಿದೆ. ಇದು ಮತ್ತೊಂದು ಅನಿವಾರ್ಯತೆ!

Readers’ Digestದಲ್ಲಿ ಊರ ಜನ ಬಾವುಟ ಹಾರಿಸಿ ಹುಡುಗನನ್ನು ಸ್ವಾಗತಿಸಿದರೆ,  ಯೋಗಪ್ಪನವರ ಕಥೆಯಲ್ಲಿ ಊರಿನ ಪ್ರತಿ ಮನೆಯಲ್ಲಿ, ದೀಪ ಹಚ್ಚಿ, ‘ತಂಗಿಯ ಮನೆ—ಸ್ವಾಗತ’ ಎಂದು ಬರೆಯುವ ಮೂಲಕ, ತಂಗಿಯನ್ನು ಮರಳಿ ಸ್ವಾಗತಿಸಲಾಗುತ್ತಿದೆ. ಯೋಗಪ್ಪನವರು Readers’ Digestನಲ್ಲಿಯ ಕಥೆಯನ್ನು ಓದಿದ್ದರು; ಅದರಿಂದ ಪ್ರಭಾವಿತರಾಗಿ ಈ ಕಥೆಯನ್ನು ಬರೆದಿದ್ದಾರೆ ಎಂದು ನಾನು ಹೇಳುವುದು  ತಪ್ಪಾಗುತ್ತದೆ. ಅಲ್ಲದೆ, ಈ ಎರಡೂ ಕಥೆಗಳಲ್ಲಿ ವ್ಯತ್ಯಾಸಗಳೂ ಇವೆ. ಮೊದಲಿನದು ಸತ್ಯಕಥೆಯಾಗಿದ್ದರಿಂದ, ಕೇವಲ ೨-೩ ಪುಟಗಳಲ್ಲಿ ಮುಗಿದಿದೆ, ಇದು ಕಾಲ್ಪನಿಕ ಕಥೆಯಾದುದರಿಂದ ಇಪ್ಪತ್ತುನಾಲ್ಕು ಪುಟಗಳಷ್ಟಿದೆ. ಮೊದಲಿನ ಕಥೆಯ ಹುಡುಗನು ಜೀವಂತ ವ್ಯಕ್ತಿ. ಆದುದರಿಂದ ಆ ಕಥೆಗೆ ಬಣ್ಣ ಹಚ್ಚುವ ಅವಶ್ಯಕತೆ ಇಲ್ಲ. ಅದರೆ ಯೋಗಪ್ಪನವರ ಕಥೆಯಾದರೊ ಒಂದು ಕಾಲ್ಪನಿಕ ಕಥೆ. Fable ಶೈಲಿಯ ಕಥೆ. ಇಲ್ಲಿ ಬಣ್ಣ ಹಚ್ಚುವುದು ಅನಿವಾರ್ಯ!

ಸಾಹಿತ್ಯಾಸಕ್ತರಿಗೆ ಈ ಎರಡೂ ಕಥೆಗಳ ಸಾಮ್ಯ, ವೈಷಮ್ಯಗಳು ಕುತೂಹಲ ಹುಟ್ಟಿಸುವದರಲ್ಲಿ ಸಂಶಯವಿಲ್ಲ.

ಮನೋಹರ ಗ್ರಂಥಮಾಲೆಯು ಪ್ರಕಟಿಸಿದ ಮತ್ತೊಂದು (ಹಳೆಯ) ಪ್ರಬಂಧಸಂಕಲನದ ಲೇಖಕರು ಗಿರಡ್ಡಿ ಗೋವಿಂದರಾಜರು. ಗಿರಡ್ಡಿಯವರು ಕನ್ನಡದ ಖ್ಯಾತ ವಿಮರ್ಶಕರು. ಇವರ ಪ್ರಬಂಧಸಂಕಲನದಲ್ಲಿಯ ಒಂದು ಲೇಖನ ಓದಿದಾಗ ನನಗೆ ಇದನ್ನು ಈ ಮೊದಲು ಎಲ್ಲಿಯೋ ಓದಿದ್ದೇನಲ್ಲ ಎಂದು ಭಾಸವಾಯಿತು.

‘ಕಸ್ತೂರಿ’ ಮಾಸಪತ್ರಿಕೆಯು ೧೯೫೬ರಲ್ಲಿ ಪ್ರಾರಂಭವಾಯಿತು. ೧೯೫೬-೫೮ರ ಅವಧಿಯಲ್ಲಿ ಅದರಲ್ಲಿ ಒಂದು ತಿಳಿಹಾಸ್ಯದ ಲೇಖನ ಪ್ರಕಟವಾಗಿತ್ತು. (ಆಗ ನಾನು ಸುಮಾರು ಹತ್ತು ವರ್ಷದವನಿರಬಹುದು.) ಕಲಕತ್ತಾ ನಗರದಲ್ಲಿಯ ಜೇಬುಗಳ್ಳರ ಬಗೆಗಿನ ವಿನೋದ ಲೇಖನವಿದು. ಗಿರಡ್ಡಿಯವರ ಲೇಖನಕ್ಕೂ ಇದಕ್ಕೂ ಸಾಕಷ್ಟು ಸಾಮ್ಯಗಳಿದ್ದವು. (ಕಲಕತ್ತಾ ನಗರವೊಂದನ್ನು ಬಿಟ್ಟು). ಅಯ್ಯಪ್ಪಾ, ಇದೇನು, ಗಿರಡ್ಡಿಯವರ ಲೇಖನವು ಆ ಲೇಖನದ ‘ಜುಡವಾ’ ಇದ್ದಂತೆ ಇದೆಯಲ್ಲ ಎಂದು ನನಗನಿಸಿದ್ದು ಸುಳ್ಳಲ್ಲ. ಗಿರಡ್ಡಿಯವರ ಮೇಲೆ ಕೃತಿಚೌರ್ಯದ ಆರೋಪ ಹೊರಸುವಷ್ಟು ನಾನು ದೊಡ್ಡವನಲ್ಲ, ತಿಳಿದವನೂ ಅಲ್ಲ. ಆದರೆ ಕಸ್ತೂರಿಯಲ್ಲಿಯ ಹಳೆಯ ಲೇಖನದ ಪ್ರಭಾವವು ಅವರ ಕೃತಿಯ ಮೇಲೆ ಆಗಿರುವ ಸಾಧ್ಯತೆಗಳಿವೆ. ಕಸ್ತೂರಿಯಲ್ಲಿಯ ಲೇಖನ ಪ್ರಕಟವಾದಾಗ ಗಿರಡ್ಡಿಯವರು ಬಹುಶಃ ೧೮-೧೯ ವರ್ಷದವರು ಇದ್ದಿರಬಹುದು. ಇದು ಪ್ರಭಾವಕ್ಕೆ ಒಳಗಾಗುವ ವಯಸ್ಸೇ ಅಲ್ಲವೆ?

ಮನುಷ್ಯ ಜಾತಿಯಲ್ಲಿಯೇ ಒಬ್ಬ ವ್ಯಕ್ತಿಯ ತದ್ರೂಪಿಯಂತೆ ಮತ್ತೊಬ್ಬ ವ್ಯಕ್ತಿ ಕಾಣುವ ಸಂಭಾವ್ಯತೆ ಲಕ್ಷದಲ್ಲಿ ಒಂದು ಇದೆಯಂತೆ. ಇನ್ನು ಲೇಖನಗಳಲ್ಲಿ ಕೇಳಬೇಕೆ?

6 comments:

Srikanth Manjunath said...

ಪ್ರಪಂಚದಲ್ಲಿ ಒಂದೇ ರೂಪದ ಏಳು ಮಂದಿ ಇರುತ್ತಾರೆ ಎನ್ನುತ್ತದೆ ಲೋಕೋಕ್ತಿ.. ಓದಿದ ನೆನಪು.. ದೇಶದ ಎಲ್ಲಾ ಸಾಹಿತಿಗಳನ್ನು, ಲೇಖಕರನ್ನು ಸಾಲಾಗಿ ನಿಲ್ಲಿಸಿದರೆ ಒಬ್ಬರ ಕೈ ಇನ್ನೊಬ್ಬರ ಜೇಬಿನಲ್ಲಿರುತ್ತದೆ..

ಈ ರೀತಿಯ ಅನುಭವಗಳು ಒಂದು ರೀತಿಯ ಮಿಶ್ರ ಪ್ರತಿಕ್ರಿಯೆ ನೀಡುತ್ತದೆ.. ತಪ್ಪೋ ಒಪ್ಪೋ ಹೇಳೋಕೆ ಆಗದ ಸಂದಿಗ್ಧ..

ಅಚಾನಕ್ ನಮ್ಮನ್ನು ಅರವತ್ತು ವರ್ಷಗಳ ಹಿಂದಕ್ಕೆ ಕರೆದೊಯ್ಯುವ ನಿಮ್ಮ ಲೇಖನ ಸೂಪರ್ ಗುರುಗಳೇ.. ಅದರ ಸಾಮ್ಯತೆಯ ತುಣುಕುಗಳನ್ನು ಪರಿಪರಿಯಾಗಿ ಬಿಡಿಸಿಟ್ಟ ಬಗೆ ಇಷ್ಟವಾಗುತ್ತದೆ..

ಸುಂದರ ಲೇಖನ ಗುರುಗಳೇ

sunaath said...

ಧನ್ಯವಾದಗಳು, ಶ್ರೀಕಾಂತರೆ. ಕೆಲವು ಲೇಖಕರು ತಾವು ಮಾಡಿದ ಅನುಕರಣೆಗಳನ್ನು, ಅನುಸರಣೆಗಳನ್ನು ಹಾಗು ಪ್ರೇರಣೆಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಕೆಲವರು ತಮ್ಮ ಮೇಲಾದ ಪ್ರಭಾವಗಳನ್ನು ಬಹಿರಂಗವಾಗಿ ಹೇಳುತ್ತಾರೆ. ಎರಡನೆಯವರ ಗುಂಪಿನಲ್ಲಿ ಬೇಂದ್ರೆಯವರು ಬರುತ್ತಾರೆ. ಬೇಂದ್ರೆಯವರ ಮೇಲೆ ಅಲ್ಲಮಪ್ರಭುಗಳ ತಾತ್ವಿಕ ಹಾಗು ಭಾಷಿಕ ಪ್ರಭಾವ ಸಾಕಷ್ಟಾಗಿತ್ತು. ಬೇಂದ್ರೆಯವರ ಕೆಲವು ಕವನಗಳಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಬೇಂದ್ರೆಯವರ ಪ್ರತಿಭೆ ಎಷ್ಟಿದೆಯೆಂದರೆ, ನಿಮ್ಮ ಕವನವನ್ನು ಅವರು ತಮ್ಮದೇ ಕವನವೆನ್ನುವಷ್ಟು ಚೆನ್ನಾಗಿ ಮಾರ್ಪಡಿಸಿ ಬರೆಯಬಲ್ಲವರಾಗಿದ್ದರು!

kalsakri said...

ನಾನೂ ಸಾಮ್ಯ ಇರುವ ಎರಡು ಜತೆ ಕತೆಗಳನ್ನು 20-25 ವರುಷಗಳ ಅಂತರದಲ್ಲಿ ಮಯೂರ / ತುಷಾರ / ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಓದಿದ್ದೇನೆ.

1) ಒಂದು ಜತೆ ಕತೆಗಳಲ್ಲಿ ಒಂದು ಮಠ, ಅಲ್ಲಿನ ತಾಳೆಗರಿಗಳಿಗೆ ಬಲು ಗೌರವ. ಯಾರೂ ಓದಿಲ್ಲ. ಒಬ್ಬ ಸಂಶೋಧಕ ಅದನ್ನು ಕಷ್ಟಪಟ್ಟು ಪಡೆದು ಓದಿದರೆ .... ಅಲ್ಲಿದ್ದದ್ದು ಜಂಕ್! ಮೂಲ ಕತೆಯಲ್ಲಿ ನ ಮಠದ ಹೆಸರು ಸುದ್ದಂಗಿ ಅಂತ ನೆನಪಿದೆ.

2) ಇನ್ನೊಂದು ಜತೆ ಕತೆಗಳಲ್ಲಿ ಎಳೆಯ ಮಗು ತಾಯಿಯನ್ನು ಹುಡುಕುತ್ತದೆ. ಸ್ವಲ್ಪ ಹೊತ್ತಿನ ನಂತರ ತಾಯಿ ತಂದೆ ಸರಸ ಮುಗಿಸಿ ಬರುತ್ತಾರೆ !

ಪುಟ್ಟ ನ ಅರಿವಿನ ಬಟ್ಟಲಿಗೆ .... ಅಂತಲೋ ಮಗುವಿನ ಜಗತ್ತಿಗೆ ತಾಯಿಯೇ ಕೇಂದ್ರ ' ಆದರೆ .... ಎಂಬ ಟಿಪ್ಪಣಿಗಳಿದ್ದವು

sunaath said...

kalasakriಯವರೆ, ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
ಇಂತಹ ಲೇಖನಗಳನ್ನು ಬರೆಯುವವರು ಕೊನೆಯ ಪಕ್ಷದಲ್ಲಿ, ‘ಆಧಾರಿತ, ಪ್ರೇರಿತ’ ಎಂದಾದರೂ ನಮೂದಿಸಿದರೆ, ಅಷ್ಟರ ಮಟ್ಟಿಗೆಯಾದರೂ ಪ್ರಾಮಾಣಿಕರಾಗುತ್ತಾರೆ. ನನ್ನ ಮತ್ತೊಂದು ಅನುಭವವನ್ನು ನಿಮಗೆ ಹೇಳುತ್ತೇನೆ. ಬಹುಶಃ ೧೯೬೮ನೆಯ ಇಸವಿಯಲ್ಲಿ ನಾನು ‘ಮಯೂರ’ ಮಾಸಪತ್ರಿಕೆಯಲ್ಲಿ ಒಂದು ‘ಸತ್ಯಕಥೆ’ಯನ್ನು ಒದಿದೆ. ಕೆಲವು ವರ್ಷಗಳ ಹಿಂದೆ Readers' Digestದಲ್ಲಿ ಪ್ರಕಟಿತವಾದ First Prson Account ಶೀರ್ಷಿಕೆಯಲ್ಲಿ ಪ್ರಕಟವಾದ ವೈದ್ಯಕೀಯ ಅನುಭವವೆ ಇದೀಗ ಡಾಕ್ಟರ್ ಶಿವಣ್ಣ ಎನ್ನುವವರ ಹೆಸರಿನಲ್ಲಿ ಪ್ರಕಟವಾಗಿತ್ತು. ನಾನು Readers' Digestನ ಸಂಪಾದಕರಿಗೆ ಪತ್ರ ಬರೆದು ಈ ವಿಷಯವನ್ನು ತಿಳಿಸಿದೆ. ಅವರು ಬಹುಶಃ ಇದೊಂದು Case of plagiarism ಇರಬಹುದು ಎಂದಷ್ಟೆ ನನಗೆ ಉತ್ತರಿಸಿದರು. ಅವರು ಏನಾದರೂ ಕ್ರಮ ತೆಗೆದುಕೊಂಡರೊ ಎನ್ನುವುದು ನನಗೆ ಗೊತ್ತಿಲ್ಲ!

ರಾಘವೇಂದ್ರ ಜೋಶಿ said...

ನಮಸ್ಕಾರ ಸರ್,
ಸಾಹಿತ್ಯದಲ್ಲಿ ಈ ರೀತಿಯ ಸಾಮ್ಯತೆಗಳು ಸಾಮಾನ್ಯ ಎನಿಸುವಷ್ಟರಮಟ್ಟಿಗೆ ಪ್ರಚಲಿತದಲ್ಲಿವೆ. ಅನೇಕ ಸಂದರ್ಭಗಳಲ್ಲಿ ಇದು ಕೃತಿಚೌರ್ಯವೇ ಆಗಿರುತ್ತದೆ. ಅದೇ ರೀತಿ ದೇಶಕಾಲ ಬೇರೆಬೇರೆಯಾಗಿದ್ದರೂ ಒಬ್ಬರ ಕೃತಿಯನ್ನು ಇನ್ನೊಬ್ಬರು ಓದಿರಬಹುದಾದ ಸಂಭವಗಳು ಇಲ್ಲದೇ ಇದ್ದರೂ ಇಬ್ಬರ ಲೇಖಕರ ಸಾಹಿತ್ಯವು ಅಚ್ಚರಿ ಎನಿಸುವಷ್ಟು ಸಾಮ್ಯತೆಯಿಂದ ಕೂಡಿರುವದನ್ನು ನೋಡಿದ್ದೇನೆ. ಒಂಭತ್ತನೇ ತರಗತಿಯಲ್ಲಿದ್ದಾಗ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮೊದಲ ಹನಿಗವನ ಪಕ್ಕಾ ಕದ್ದಮಾಲೇ ಆಗಿತ್ತು. ಅದೇ ರೀತಿ ಒಂದೆರೆಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಾನು ಮತ್ತು ನನ್ನ ಸ್ನೇಹಿತರೊಬ್ಬರು ಬರೆದ ವಿಚಾರ ಒಂದೇ ಆಗಿತ್ತಲ್ಲದೇ ಇಬ್ಬರೂ ಪೋಸ್ಟ್ ಮಾಡಿದ ಸಮಯ ಸೆಕೆಂಡುಗಳೂ ಸೇರಿದಂತೆ ಒಂದೇ ಸಮಯವಾಗಿತ್ತು!ಅಷ್ಟೇ ಅಲ್ಲ, ಅದಕ್ಕೆ ಸಂಬಂಧಿಸಿದಂತೆ ನಾವು ಪರಸ್ಪರ ವ್ಯಕ್ತಪಡಿಸಿದ್ದ ಅಚ್ಚರಿಯ ಮಾತುಗಳೂ ಒಂದೇ ಸಮಯದಲ್ಲಿ ಒಂದೇ ತೆರನಾಗಿ ಮೂಡಿ ಬಂದಿದ್ದುಂಟು.

ಎಲ್ಲಕ್ಕಿಂತ ತಮಾಷೆಯೆಂದರೆ, ತೀರ ಇತ್ತೀಚೆಗೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಚಹಾ ಸೇವಿಸುತ್ತಿದ್ದ ನಾನು ಒಬ್ಬ ವ್ಯಕ್ತಿಯನ್ನು ನೋಡುತ್ತಲೇ ಅಚ್ಚರಿಗೊಳಗಾಗಿದ್ದೆ. ತಡಮಾಡದೇ ಅವರಿಗೆ ಗೊತ್ತಾಗದಂತೆ ನನ್ನ ಮೊಬೈಲ್ ನಲ್ಲಿ ಅವರ ಫೋಟೋ ತೆಗೆದು ಊರಲಿದ್ದ ನನ್ನ ಲೆಕ್ಚರರ್ ಒಬ್ಬರಿಗೆ ರವಾನಿಸಿದ್ದೆ. ತಕ್ಷಣ ನನಗೆ ಪೋನಾಯಿಸಿದ್ದ ಆ ಲೆಕ್ಚರರು ತಾವು ಬೆಂಗಳೂರಿಗೆ ಕೆಲದಿನಗಳ ಹಿಂದೆ ಬಂದಿದ್ದನ್ನೂ ಹೇಳಿಕೊಂಡು, ತಮ್ಮನ್ನು ಹೀಗೆ ನೋಡಿದ್ದರೂ ಯಾಕೆ ತಮ್ಮನ್ನು ಮಾತನಾಡಿಸಲಿಲ್ಲವೆಂದೂ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು!
ಆಗ ನಾನು ಕುಶಾಲಿನಿಂದ 'ಗುರುಗಳೇ, ಫೋಟೋದಲ್ಲಿರುವದು ನೀವಲ್ಲ, ನಿಮ್ಮ ಲೀಲೆ! ನಾನೀಗ ನಿಮ್ಮೆದುರಿಗೇ ನಿಂತು ಚಹಾ ಕುಡಿಯುತ್ತಿದ್ದೇನೆ..' ಅಂತ ಅವರ ಕಾಲೆಳೆದಿದ್ದೆ.

ವಿಷಯ ಹೇಳಿದ ಮೇಲೆ ಸ್ವತಃ ಮೆಷ್ಟರೇ ಬೇಸ್ತುಬಿದ್ದಿದ್ದರು..

-ರಾಜೋ

sunaath said...

ರಾಜೋ, ನಿಮ್ಮಲ್ಲಿ ಕಾಲೆಳೆಯುವ ಪ್ರವೃತ್ತಿ ಇದೆ ಎನ್ನುವುದರ ಅರಿವಾಯಿತು. ಇನ್ನು ನಾನು ಎಚ್ಚರಿಕೆಯಿಂದ ಇರಬೇಕು! ವಿಭಿನ್ನ ದೇಶಗಳಲ್ಲಿ ವಿಭಿನ್ನ ಕಾಲಗಳಲ್ಲಿ ರಚಿತವಾದ ಸಾಹಿತ್ಯಕೃತಿಗಳಲ್ಲಿ ಮೂಡುವ ಸಾಮ್ಯತೆಯ ಬಗೆಗೆ ಹೇಳಿದ್ದೀರಲ್ಲ. ಅದರ ಒಂದು amazing ಉದಾಹರಣೆಯನ್ನು ಕೊಡುತ್ತೇನೆ. ನಮ್ಮ ಪುರಂದರದಾಸರ ಪ್ರಸಿದ್ಧ ಕೀರ್ತನೆ ನಿಮಗೆ ಗೊತ್ತಿದೆ:
“ಹೆಂಡತಿ ಸಂತತಿ ಸಾವಿರವಾಗಲಿ….”

ಇಂತಹದೇ ಒಂದು ಸಾಲು ಲೀ ಹಂಟ ಎನ್ನುವ ಆಂಗ್ಲ ಲೇಖಕನ ಒಂದು ಕೃತಿಯಲ್ಲಿ ಸಹ ಕಾಣುತ್ತದೆ:
“Abou Ben Adhem may his tribe increase.”

ಈ ಸಾಲುಗಳ ಸಂದರ್ಭ ಹಾಗು ಮಥಿತಾರ್ಥ ಬೇರೆ ಇರಬಹುದು. ಆದರೆ ಸಾಲುಗಳ ರಚನೆಯಲ್ಲಿ ಎಂಥಾ ಸಾಮ್ಯತೆ ಇದೆಯಲ್ಲವೆ? ದಾಸರ ಕಾಲ (೧೪೮೦-೧೫೬೪), ದೇಶ (ಕನ್ನಡ ನಾಡು); ಲೀ ಹಂಟನ ಕಾಲ(1784-1859), ದೇಶ ಯಾವುದು (ಇಂಗ್ಲಂಡ). ಆದರೆ ಈ ಸಾಲುಗಳ ನಡುವಿನ ಸಾಮ್ಯತೆ ಅಚ್ಚರಿ ಹುಟ್ಟಿಸುವಂತಹದು!