Thursday, April 4, 2019

ಜಯಶ್ರೀ ದೇಶಪಾಂಡೆಯವರ ಸಾಹಿತ್ಯ....ಭಾಗ ೧

ಶ್ರೀಮತಿ ಜಯಶ್ರೀ ದೇಶಪಾಂಡೆಯವರ ಸಾಹಿತ್ಯದ ವೈವಿಧ್ಯವು ಬೆರಗು ಹುಟ್ಟಿಸುವಂತಹದು. ಕವಿತೆ, ಕಾದಂಬರಿ, ಪ್ರಬಂಧ, ಹರಟೆ ಮೊದಲಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಜಯಶ್ರೀಯವರ ಅನಾಯಾಸ ಪ್ರತಿಭೆಯು ಇಪ್ಪತ್ತೈದು ವರ್ಷಗಳಿಂದಲೂ ಪ್ರಕಾಶಮಾನವಾಗಿದೆ. ಇತ್ತೀಚಿಗೆ ಅವರ ಮೂರು ಕೃತಿಗಳು ಪ್ರಕಟಗೊಂಡವು. ಬೆಂಗಳೂರಿನ ಮಾಧ್ಯಮ ಅನೇಕಎನ್ನುವ ಪ್ರಕಾಶನ ಸಂಸ್ಥೆಯ ಚೊಚ್ಚಲು ಪ್ರಕಟಣೆಗಳಿವು:
() ಯತ್ಕಿಂಚಿತ್ (ಕವನ ಸಂಕಲನ)
() ಮಾಯಿ ಕೆಂದಾಯಿ (ಸ್ಮೃತಿ ಲಹರಿ)
() ಸ್ಥವಿರ ಜಂಗಮಗಳಾಚೆ (ಕಥಾಸಂಕಲನ)

ಈ ಮೂರು ಕೃತಿಗಳಲ್ಲಿ ನಾನು ಮೊದಲು ಓದಿದ್ದು: ‘ಮಾಯಿ ಕೆಂದಾಯಿ’.
ಕೃತಿಯನ್ನು ಜಯಶ್ರೀಯವರುಸ್ಮೃತಿ ಲಹರಿಎಂದು ಕರೆದಿದ್ದಾರೆ. ಇದರಲ್ಲಿಯ ಬಹುತೇಕ ಲೇಖನಗಳು ಲೇಖಕಿಯ ಬಾಲ್ಯದ ಸ್ಮರಣೆಗಳಾಗಿವೆ.

ತಮ್ಮ ಅನುಭವಗಳನ್ನು ಓದುಗನ ಅನುಭವಗಳನ್ನಾಗಿ ಮಾಡುವಂತಹ ಲೇಖನ ಸಾಮರ್ಥ್ಯ ಎಲ್ಲರಿಗೂ ಸಾಧಿಸುವಂತಹದಲ್ಲ. ಜಯಶ್ರೀಯವರಿಗೆ ಈ ಕಲೆ ಸಿದ್ಧಿಸಿದೆ. ಇದು ಪ್ರಯತ್ನದಿಂದ ಬರುವಂತಹ ಕಲೆ ಅಲ್ಲ. ಈ ಕಲೆಯನ್ನು ವರ್ಣಿಸಬೇಕಾದರೆ, ಕೆ.ಎಸ್. ನರಸಿಂಹಸ್ವಾಮಿಯವರ ಕವನದ ಸಾಲೊಂದನ್ನು ಉದ್ಧರಿಸಬೇಕಾದೀತು: ‘ಕ್ವಿಂಕ್ ಇಂಕಿನೊಂದು ಗೆರೆ ಕಾವ್ಯಧಾರೆ.’! ಪೆನ್ನಿನಲ್ಲಿ ಕ್ವಿಂಕ್ ಇಂಕು ಎಷ್ಟು ಸಲೀಸಾಗಿ ಹರಿಯುತ್ತದೆಯೋ ಅಷ್ಟೇ ಸರಾಗವಾಗಿದೆ ಜಯಶ್ರೀಯವರ ಪ್ರತಿಭಾಪೂರ್ಣ ಬರಹದ ಧಾರೆ.

ಮಾಯಿ ಕೆಂದಾಯಿಯಲ್ಲಿ  ‘ಮಾಯಿಎಂದರೆ ಲೇಖಕಿಯ ಅಜ್ಜಿ. ‘ಕೆಂದಾಯಿಅಂದರೆ ಯಾರು ಅಂತೀರಾ? ಕೆಂದಾಯಿ ಅಂದರೆ ಒಂದು ಆಕಳು, ಕೆಂಚು ಬಣ್ಣದ ಈ ಆಕಳು ಮಾಯಿಯಷ್ಟೇ ಪ್ರಾಧಾನ್ಯವನ್ನು ಹೊಂದಿದೆ! ಅಂತಃಕರಣದ ಹರವು ಹಾಗು ಹರಿವು ಮಾನವರನ್ನಷ್ಟೇ ಅಲ್ಲ, ಪ್ರಾಣಿಗಳನ್ನೂ ಸಹ ವ್ಯಾಪಿಸುತ್ತದೆ ಎನ್ನುವುದಕ್ಕೆಕೆಂದಾಯಿಯೇ ಸಾಕ್ಷಿಯಾಗಿದೆ. ಆದುದರಿಂದಲೇ ಈ ಕೃತಿಗೆಮಾಯಿ ಕೆಂದಾಯಿಎನ್ನುವ ನಾಮಕರಣ ಸಾರ್ಥಕವಾಗಿದೆ.

ಸುಮಾರು ಐವತ್ತು ವರ್ಷಗಳಿಗೂ ಮೊದಲಿನ ಕಾಲಘಟ್ಟದ ಚಿತ್ರಣಗಳು ಇಲ್ಲಿವೆ. ಆ ಕಾಲದಲ್ಲಿಯ ಜನರನ್ನು ಈಗಿನ ಆಧುನಿಕರು ಸಂಪ್ರದಾಯಬದ್ಧರೆಂದು ಕರೆಯಬಹುದು. ಆದರೆ ಆ ರೂಢಿಬಂಧಿತರಲ್ಲಿದ್ದ ಮಾನವೀಯ ಅಂತಃಕರಣವು ಸಂಪ್ರದಾಯವನ್ನು ಮೀರಿದ್ದು; ಈ ಅಂತಃಕರಣವು ಎಲ್ಲ ಜೀವಸಂಕುಲವನ್ನು ಸಮಾನವಾಗಿ ವ್ಯಾಪಿಸಿದ್ದು ಎನ್ನುವುದು ಈ ಪ್ರೇಮಪೂರ್ಣ ನೆನಪುಗಳ ಮೂಲದ್ರವ್ಯವಾಗಿದೆ. ಈ ಅಂತಃಕರಣದ ಅನಂತಸ್ರೋತವಾದಮಾಯಿಯೇ ಇಲ್ಲಿಯ ಕೇಂದ್ರಪಾತ್ರ. ಅವಳ ಜೊತೆಗಿರುವ ಅವಳ ಮಕ್ಕಳು, ಮೊಮ್ಮಕ್ಕಳು, ಬಂಧು ಬಳಗ, ನೆರೆಹೊರೆಯವರು, ದನಕರುಗಳು ಸಹ ಈ ಅಂತಃಕರಣದ ಪ್ರವಾಹದಲ್ಲಿ ಮಿಂದವರೇ. ಇವರೆಲ್ಲರೂ ಸಹ ಆ ಕಾಲಘಟ್ಟಕ್ಕೆ ಸಹಜವಾದ ಗುಣಭಾವಗಳನ್ನು ಹೊಂದಿದವರೇ. ಆದರೆ, ‘ಲೋಕೋ ಭಿನ್ನರುಚಿಃಎನ್ನುತ್ತಾರಲ್ಲ, ಆ ರೀತಿಯಲ್ಲಿ ಒಬ್ಬೊಬ್ಬ ವ್ಯಕ್ತಿಯದು ಒಂದೊಂದು ವಿಶಿಷ್ಟ ಸ್ವಭಾವ, ರೀತಿ ಹಾಗು ನೀತಿ. ಈ ವ್ಯಕ್ತಿವೈಶಿಷ್ಟ್ಯವನ್ನು ಅರಿಯುವುದು, ಆ ಮೂಲಕ ಮಾನವಸ್ವಭಾವವನ್ನು ಅರಿತುಕೊಳ್ಳುವುದು ಈ ಲೇಖನಗಳ ಪ್ರಮೇಯವಾಗಿದೆ. ಜಯಶ್ರೀಯವರು ತಮ್ಮ ಈಅರಿತುಕೊಳ್ಳುವಪ್ರಯತ್ನವನ್ನು ಲೌಕಿಕ ಪಾತ್ರಗಳಿಗೆ ಸೀಮಿತವಾಗಿಸಿಲ್ಲ. ರಾಮಾಯಣದ ಅಯೋನಿಜೆಯಾದ ಸೀತೆ, ಮಹಾಭಾರತದ ಸೌಗಂಧಿಕಾಭಿಲಾಷಿ ದ್ರೌಪದಿ ಇವರ ಅಂತರಾಳವನ್ನೂ ಸಹ ಲೇಖಕಿ ತಡಕಾಡಿದ್ದಾರೆ. ಈ ಪುರಾಣಪಾತ್ರಗಳ ಅನ್ವೇಷಣೆಯ ಮೂಲಕ ಮಾನವಸ್ವಭಾವದ ವಿವಿಧ ಭಾವಗಳಿಗೆ ಕನ್ನಡಿ ಹಿಡಿದಿದ್ದಾರೆ. ಹಾಗೆಂದು ಈ ಲೇಖನಗಳು ಘನಗಂಭೀರವಾದ ಲೇಖನಗಳಲ್ಲ. ಓದುತ್ತಿರುವಂತೆ ಮಂದಹಾಸವೊಂದು ಓದುಗನ ಮುಖದಲ್ಲಿ ನೆಲೆಗೊಳ್ಳುವುದು ಇಲ್ಲಿಯ ವಿಶಿಷ್ಟತೆ.

ಒಂದು ಕೃತಿಯಲ್ಲಿ ಬಳಸಿದ ಭಾಷೆಯ ಮೂಲಕ ಆ ಕೃತಿಕಾರಳನ್ನು ಅರಿತುಕೊಳ್ಳಬಹುದೆ? ಇಂತಹ ಪ್ರಯತ್ನ ಸಮಂಜಸವಲ್ಲ ಎಂದು ಟೀಕಾಕಾರರು ಹೇಳಬಹುದು. ಆದರೆ ಜಯಶ್ರೀಯವರು ಬಳಸಿದ ಭಾಷೆಯನ್ನು ಆಸ್ವಾದಿಸಿದ ಓದುಗರು, ಆ ಭಾಷೆಯ ಬಗೆಗೆವಾಹ್!’ ಎನ್ನದೆ, ಮೂಕರಾಗಿ ಸುಮ್ಮನಿರಲು ಸಾಧ್ಯವಿಲ್ಲ.  (ಇಲ್ಲಿಯ ಭಾಷೆಯನ್ನು ರುಚಿಕಟ್ಟಾದ ಪ್ರಾದೇಶಿಕ ಭಾಷೆ ಎಂದು ಕರೆಯಬಹುದು.) ಇನ್ನು ಕೃತಿಕಾರಳ ಬಗೆಗೆ ಏನು ಹೇಳಬಹುದು? ಎಲ್ಲವನ್ನು ಕಣ್ಣು ತೆರೆದು ನೋಡುತ್ತಿರುವಂತೆಯೇ, ತಾನು ತಾನಾಗಿಯೇ ಇರುವ ಒಬ್ಬ ಪ್ರಬುದ್ಧ ಸ್ತ್ರೀಯ ಪ್ರತಿಮೆಯೂ ಸಹ ಕೃತಿಕಾರಳ ಬಗೆಗೆ ನಮ್ಮ ಚಿತ್ತದಲ್ಲಿ ಮೂಡುತ್ತದೆ.

ಬೆಳಗಾವಿ ಪ್ರದೇಶದ ಭಾಷೆ, ಆ ಭಾಗದ ಜನರ ರಹನ-ಸಹನ ಇಲ್ಲಿಯ ಲೇಖನಗಳಲ್ಲಿ ಹಾಸು ಮತ್ತು ಹೊಕ್ಕುಗಳಂತೆ ಒಂದಾಗಿವೆ. ಈ ವಿಷಯದಲ್ಲಿ ಲೇಖಕಿಯ ಚಿತ್ರಣಶಕ್ತಿಯನ್ನು ನೋಡಬೇಕಾದರೆ, ಬೆಳಗಾವಿಯಲ್ಲಿ ನಡೆದ ಕನ್ನಡ ಹಾಗು ಮರಾಠಿ ಶಾಲೆಗಳ ನಡುವೆ ನಡೆದಹುಡತೂತುಪಂದ್ಯದ ಅನುಭವ-ವರ್ಣನೆಯನ್ನು ಓದಬೇಕು. ಈ ಪ್ರಸಂಗವನ್ನು ನಾನು ಮೊದಲು ಓದಿದ್ದು ಫೇಸ್-ಬುಕ್ಕಿನಲ್ಲಿ. ಓದುತ್ತಿದ್ದಂತೆ, ಈ ಲೇಖಕಿಯು ಒಬ್ಬ ಹಾಯ್-ಸ್ಕೂಲ್ ಹುಡುಗಿಯಂತೆ ನನ್ನ ಒಳಗಣ್ಣಿನೆದುರಿಗೆ ಚಿತ್ರಿತಳಾದಳೇ ಹೊರತು, ಓರ್ವ ಪ್ರೌಢ ಲೇಖಕಿಯಂತಲ್ಲ! ಅಷ್ಟು ಗಾಢವಾದ ಚಿತ್ರಣವದು!

ಓದುಗನ ಗಮನಕ್ಕೆ ಬರುವ ಮತ್ತೊಂದು ಅಂಶವೆಂದರೆ ಜಯಶ್ರೀಯವರು ತುಂಬ ವಿದ್ವತ್ ಉಳ್ಳ ಲೇಖಕಿ. ಇಲ್ಲಿಯ ಲೇಖನಗಳಲ್ಲಿ ಅವರು ಅನಾಯಾಸವಾಗಿ ಉದ್ಧರಿಸುವ ವಿವಿಧ ಕವನಗಳ, ಶ್ಲೋಕಗಳ, ಜಾನಪದ ಗೀತೆಗಳ, ನುಡಿಗಟ್ಟುಗಳ ಸಾಲುಗಳನ್ನು ನೋಡಿದಾಗ, ಸಂಪ್ರದಾಯದ ಹಾಗು ಆಧುನಿಕತೆಯ  ಅವರ ಅಪಾರವಾದ ತಿಳಿವು  ಹಾಗು ಅವರು ಅದನ್ನು ತಮ್ಮಲ್ಲಿ ಒಳಗು ಮಾಡಿಕೊಂಡ ರೀತಿ ಅರ್ಥವಾಗುತ್ತವೆ.

ಮಾಯಿ ಕೆಂದಾಯಿಕೃತಿಯು ಓದುಗನಲ್ಲಿ ಒಂದು ಹಿತಾನುಭವವನ್ನು, , ಗತಕಾಲದ ಒಂದು ಸುಖಾನುಭವವನ್ನು ಸೃಷ್ಟಿಸುತ್ತದೆ. ಓದುಗನಿಗೆ ದೊರೆಯುವ ಸುಖವೇ ಆ ಕೃತಿಯ ಸಾರ್ಥಕತೆ ಎನ್ನುವದಾದರೆ, ಕೃತಿಯಲ್ಲಿ ಆ ಸಿದ್ಧಿಯಾಗಿದೆ ಎಂದು ನಿಸ್ಸಂದೇಹವಾಗಿ ಹೇಳಲೇಬೇಕು.
………………………………………………………………………………………….

ಈ ಮೂರೂ ಕೃತಿಗಳನ್ನು ಓದಬಯಸುವವರು ಸಂಪರ್ಕಿಸಬಹುದಾದ ಪ್ರಕಾಶಕರ ವಿಳಾಸ ಹೀಗಿದೆ:
ಮಾಧ್ಯಮ ಅನೇಕ ಪ್ರೈ.ಲಿ.’
# ೭೯೬, ೯ನೆಯ ಮೇನ್, ಮೆಟ್ರೋ ಸ್ಟೇಶನ್ ಹತ್ತಿರ
ಇಂದಿರಾನಗರ, ಬೆಂಗಳೂರು-೫೬೦ ೦೩೮.

…………………………………………………………………………………………

11 comments:

Swarna said...

ಮಾಯಿಯವರ ಬಗ್ಗೆ ಬಂದ ಕೆಲ ಬರಹಗಳನ್ನು ಫೆಸ್ಬುಕ್ಕಿನಲ್ಲಿ ಓದಿದ್ದೆ. ಸೊಗಸಾದ ಶೈಲಿ ಜಯಶ್ರೀ ಅವರದ್ದು. ಅವರು ಕೊಡುವ ಚಿಕ್ಕ ಚಿಕ್ಕ ವಿವರಗಳು ತುಂಬಾ ಇಷ್ಟವಾಗುತ್ತವೆ.ನಿಮ್ಮ ಬ್ಲಾಗಿನಲ್ಲಿ ಅವರ ಬರಹಗಳ ಬಗ್ಗೆ ಓದಿ ಸಂತಸವಾಯಿತು .

Jayashree Deshpande said...

ನನ್ನ ಪುಸ್ತಕಗಳ ಬಗ್ಗೆ ತಾವು ಇಷ್ಟು ಆತ್ಮೀಯವಾಗಿ ಬರೆದಿರುವುದು ನನ್ನ ಸುದೈವ ಸರ್.ಅನಂತಾನಂತ ಧನ್ಯವಾದಗಳು.ತುಂಬಾ ಸಂತೋಷವಾಗುತ್ತಿದೆ. 🙏 🙏

sunaath said...

ಸ್ವರ್ಣಾ,ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು. ಆದರೆ,ನಿಮ್ಮ ಬಗೆಗೆ ನನ್ನದೊಂದು ತಕರಾರು ಇದೆ. ನೀವೇಕೆ blog ಬರಹವನ್ನು ನಿಲ್ಲಿಸಿಬಿಟ್ಟಿದ್ದೀರಿ? ಮೊದಲೆಲ್ಲ ನಾನು ಉತ್ಸುಕತೆಯಿಂದ ನಿಮ್ಮ ಲೇಖನಗಳಿಗಾಗಿ ಎದರು ನೋಡುತ್ತಿದ್ದೆ!

sunaath said...

ಜಯಶ್ರೀ ಮೇಡಮ್, ನಿಮ್ಮ ಸಾಹಿತ್ಯವು ಓದುಗನಲ್ಲಿ ಆತ್ಮೀಯ ಭಾವವನ್ನು ಬೆಳೆಸುತ್ತದೆ. ಉತ್ತಮ ಸಾಹಿತ್ಯವನ್ನು ಕೊಟ್ಟದ್ದಕ್ಕಾಗಿ ಓದುಗರೇ ನಿಮಗೆ ಧನ್ಯವಾದಗಳನ್ನು ಹೇಳಬೇಕು.

prabhamani nagaraja said...

ಬಹಳ ದಿನಗಳ ನಂತರ ಸಲ್ಲಾಪದಲ್ಲಿ ನಿಮ್ಮ ಲೇಖನ ನೋಡಿ ಸಂತಸವಾಯಿತು ಸರ್. ಮಾಯಿ ಕೆಂದಾಯಿಯನ್ನು ನಿಮ್ಮ ಸಹಜ ಆತ್ಮೀಯ ಶೈಲಿಯಲ್ಲಿ ಉತ್ತಮವಾಗಿ ಪರಿಚಯಿಸಿದ್ದೀರಿ.ವಂದನೆಗಳು.

sunaath said...

ಧನ್ಯವಾದಗಳು, ಪ್ರಭಾಮಣಿ ಮೇಡಮ್. ನಾನು ಕಳೆದ ನಾಲ್ಕು ತಿಂಗಳುಗಳಿಂದ ಊರಲ್ಲಿ ಇರಲಿಲ್ಲ. ಹೀಗಾಗಿ blogಗಳನ್ನು ನೋಡಲು ಹಾಗು ಬರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಮರಳಿ ಬಂದಿದ್ದೇನೆ. ಇನ್ನು ಮುಂದೆ ಮೊದಲಿನಂತೆ ಓದು ಹಾಗು ಬರಹ!

Badarinath Palavalli said...

‘ಮಾಯಿ ಕೆಂದಾಯಿ’ಯಲ್ಲಿ ಬರುವ ಮನುಜ ಮತ್ತು ಮನೆ ಆಕಳಿನ ಸತ್ಸಂಬಂಧ ನನಗೆ ನನ್ನ ಹಳ್ಳಿಯ ಬಾಲ್ಯದ ಸವಿನೆನಪುಗಳನ್ನು ಮರುಕಳಿಸಿತು.

ನಮ್ಮ ಪ್ರದೇಶದ ಭಾಷೆಯನ್ನು ಬಳಸುವತ್ತ ನನಗೆ ಜಯಶ್ರೀಯವರು ದಾರಿ ತೋರಿದ್ದಾರೆ ಎಂದು ಎಣಿಸುತ್ತೇನೆ. ನಾನೂ ಈ ನಿಟ್ಟಿನಲ್ಲಿ ತುಸು ಪ್ರಯತ್ನ ಮಾಡುವೆ.

ಲೇಖನದ ಕಡೆಯಲ್ಲಿ ಪುಸ್ತಕ ದೊರೆಯುವ ವಿಳಾಸಕೊಟ್ಟಿದ್ದು ಒಳಿತಾಯಿತು.

sunaath said...

ಧನ್ಯವಾದಗಳು,ಬದರಿನಾಥರೆ. ನಿಮ್ಮಿಂದ ಲೇಖನವು ಬೇಗನೇ ಹೊರಬರಲಿ ಎಂದು ಹಾರೈಸುತ್ತೇನೆ.

Jayashree Deshpande said...

ಧನ್ಯವಾದಗಳು ಬದರೀನಾಥ ಪಾಲವಳ್ಳಿ ಸರ್.

Jayashree Deshpande said...

ಧನ್ಯವಾದಗಳು ಪ್ರಭಾಮಣಿ ನಾಗರಾಜ ಮೇಡಂ..

Jayashree Deshpande said...

ಧನ್ಯವಾದಗಳು ಸ್ವರ್ಣಾ.. ನಾನೂ ನಿಮ್ಮ ಲೇಖನಗಳಿಗಾಗಿ ಕಾಯುತ್ತಿರುತ್ತೇನೆ.