Monday, June 10, 2019

ಕಾರ್ನಾಡರ ಗಬ್ಬುನಾತದ ನಾಟಕ: ರಕ್ಕಸ ತಂಗಡಿ!ಗಿರೀಶ ಕಾರ್ನಾಡರು ಬರೆದ ನಾಟಕ, ‘ರಕ್ಕಸ ತಂಗಡಿ’ಯ ಬಗೆಗೆ ನಾನು ಮೊದಲೇ ಬರೆಯಬೇಕೆಂದುಕೊಂಡಿದ್ದೆ. ಅವರ ನಿಧನದ ನಂತರ ಇದೀಗ ನಾನು ಬರೆಯುತ್ತಿರುವುದು ನನಗೆ ಬೇಸರದ ವಿಷಯವಾಗಿದೆ. ಏಕೆಂದರೆ ಈ ನಾಟಕವು ಕಾರ್ನಾಡರ ಒಂದು ಪೂರ್ವಾಗ್ರಹದ ಗಬ್ಬುನಾತವನ್ನು ಪಸರಿಸುತ್ತಿದೆ! ಅವರು ನಿಧನರಾಗಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಗಬ್ಬುನಾತವನ್ನು ‘ಪರಿಮಳ’ ಎಂದು ಹೊಗಳುವುದು ವಂಚನೆಯಾಗುತ್ತದೆ. 

ಈ ನಾಟಕವು ಇತಿಹಾಸಕ್ಕಿಂತ ಹೆಚ್ಚಾಗಿ ಕಾರ್ನಾಡರ ಮನೋಧರ್ಮವನ್ನು ತಿಳಿಸುವಂಥ ನಾಟಕವಾಗಿದೆ. ಇದರಲ್ಲಿ ವಿಜಯನಗರದ ಕೊನೆಯ ಶಾಸಕ ರಾಮರಾಯನನ್ನು ಒಬ್ಬ ಕುತ್ಸಿತ ಸಂಚುಕಾರ ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ. ಅದಷ್ಟೇ ಆಗಿದ್ದರೆ ಸುಮ್ಮನಿರಬಹುದಾಗಿತ್ತು. ಆದರೆ ರಾಮರಾಯನನ್ನು ಹೀಗಳೆಯುವ ಭರದಲ್ಲಿ, ಕಾರ್ನಾಡರು ತಮ್ಮ ಕಲ್ಪನೆಯ ಒಂದು ಘಟನೆಯನ್ನು ಹೀಗೆ ಬರೆದಿದ್ದಾರೆ. ರಾಮರಾಯನು ದರಬಾರಿನಲ್ಲಿ ಇದ್ದಾಗ ಉಚ್ಚೆ ಹೊಯ್ದುಕೊಂಡನಂತೆ. ಅದು ಹಾಗೆ ಹರಿಯುತ್ತ ಹೋಗಿ, ಗಬ್ಬುನಾತವು ಹರಡಿದರೂ ಸಹ, ಯಾರಿಗೂ ಬಾಯ್ಬಿಡುವ ಧೈರ್ಯವೇ ಆಗಲಿಲ್ಲವಂತೆ! ರಾಮರಾಯನು ಈ ಪ್ರಸಂಗವನ್ನು enjoy ಮಾಡುತ್ತಿದ್ದನಂತೆ ಹಾಗು ಇದನ್ನು ತನ್ನ ಆಪ್ತರೆದುರಿಗೆ ವಿಜೃಂಭಿಸುತ್ತಿದ್ದನಂತೆ.

ಕಾರ್ನಾಡರು ರಾಮರಾಯನ ಬಗೆಗೆ ತಾವು ಮಾಡಿದ ಸಂಶೋಧನೆಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. ಯಾವ ಸಂಶೋಧನಾಕೃತಿಯಲ್ಲಿ ಈ ಘಟನೆ ವರ್ಣಿತವಾಗಿದೆಯೋ ದೇವರೇ ಬಲ್ಲ. ರಾಮರಾಯನ ಈ ಕುತ್ಸಿತ, ವಂಚಕ, ಕಪಟ ಸಂಚುಗಾರಿಕೆಯ in contrast ದಕ್ಷಿಣದ ಸುಲ್ತಾನರು ಎಷ್ಟು ಒಳ್ಳೆಯವರಾಗಿದ್ದರು, ಆವರು ರಾಮರಾಯನ ಸಂಚಿನಿಂದ ತಮ್ಮನ್ನು ಉಳಿಸಿಕೊಳ್ಳುವ ಸಲುವಾಗಿ ಹೇಗೆ ಪ್ರತಿಸಂಚನ್ನು ಅನಿವಾರ್ಯವಾಗಿ ಹೂಡಿದರು ಎನ್ನುವದನ್ನು ಕಾರ್ನಾಡರು ಈ ನಾಟಕದಲ್ಲಿ ವಿವರಿಸಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? 

ಇದನ್ನು ಅರ್ಥ ಮಾಡಿಕೊಳ್ಳಲು, ಕಾರ್ನಾಡರು ಈ ನಾಟಕಕ್ಕೂ ಮೊದಲು ಬರೆದ ‘ಟಿಪ್ಪೂಸುಲ್ತಾನನ ಕನಸುಗಳು’ ಎನ್ನುವ ನಾಟಕವನ್ನು ಓದಬೇಕು. ಕಾರ್ನಾಡರು ‘ಬಿ.ಬಿ.ಸಿ’ಯ ಕೋರಿಕೆಯ ಮೇರೆಗೆ ಬರೆದುಕೊಟ್ಟ ನಾಟಕವಿದು. ಹೀಗಾಗಿ ಈ ನಾಟಕದಲ್ಲಿ ಬ್ರಿಟಿಶರನ್ನು ನಿಂದಿಸುವುದು ಅವರಿಂದ ಸಾಧ್ಯವಾಗಿಲ್ಲ. ಆದರೆ ಟಿಪ್ಪೂನನ್ನು ಹೊಗಳುವುದು ಅವರಿಗೆ ಇಷ್ಟದ ವಿಷಯವಲ್ಲವೆ! ಆದುದರಿಂದ ಅವನು ಸರ್ವಧರ್ಮಸಹಿಷ್ಣು ಎನ್ನುವಂತೆ ಅವನನ್ನು ಚಿತ್ರಿಸಿದ್ದಾರೆ. ಮುಖ್ಯವಾಗಿ ಅವನಿಗೆ ಬೀಳುತ್ತಿರುವ ಕನಸುಗಳನ್ನು ಅವನು ದಾಖಲಿಸುತ್ತಿದ್ದನು ಹಾಗು ಅವು ಲಭ್ಯವಿವೆ ಎಂದು ಹೇಳಿದ್ದಾರೆ. ಇದ್ದೀತು; ಆದರೆ ಈ ಕನಸುಗಳಿಗೆ ಕಾರ್ನಾಡರು ತಮ್ಮದೇ ಆದ ಅರ್ಥವನ್ನು ಹೇಳುತ್ತ, ಟಿಪ್ಪೂನನ್ನು ವೈಭವೀಕರಿಸಿದ್ದಾರೆ.

ಕಾರ್ನಾಡರು ಹಿಂದೂವಿರೋಧಿ ಹಾಗು ಮುಸ್ಲಿಮ್ ಪಕ್ಷಪಾತಿಗಳಾಗಿದ್ದರೆ? ಅವರು ಬರೆದ ಎರಡು ಕಥೆಗಳು ಸಹ ಇದೇ ಧಾಟಿಯಲ್ಲಿವೆ. ಒಂದರಲ್ಲಿ ಹೈದರಾಬಾದದಲ್ಲಿ ದಂಗೆ ನಡೆದಾಗ, ಒಬ್ಬ ಮುಸ್ಲಿಮನು ಓರ್ವ ಹಿಂದು ಮಹಿಳೆಯನ್ನು ರಕ್ಷಿಸಿದ ವರ್ಣನೆ ಇದೆ. ಮತ್ತೊಂದು ಕಥೆಯಲ್ಲಿ, ಮುಸ್ಲೀಮರು ತಮ್ಮ ಚಾಳದ ಮೇಲೆ ಏರಿ ಬರುವವರಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ, ಆ ಚಾಳಿನ ಹಿಂದೂ ಜನರೆಲ್ಲ ಒಟ್ಟಾಗಿ ಮನೆಯನ್ನು ಕಾಯುವದನ್ನು ಹಾಸ್ಯಾಸ್ಪದವಾಗಿ ಬಣ್ಣಿಸಿದ್ದಾರೆ.

ಇದೆಲ್ಲವನ್ನು ನೋಡಿದಾಗ ಕಾರ್ನಾಡರಿಗೆ ಬಹುಶಃ Muslim fixation ಇದ್ದಿರಬಹುದು ಎಂದು ಭಾಸವಾಗುತ್ತದೆ. ಅದು ಅವರ ಸಾಹಿತ್ಯದಲ್ಲಿ ತಕ್ಕ ಮಟ್ಟಿಗೆ ಪ್ರತಿಬಿಂಬಿಸಿದೆ. ಏನೇ ಆಗಲಿ, ಕನ್ನಡದ ಓರ್ವ ನಿಶಿತ ಬುದ್ಧಿಯ ವ್ಯಕ್ತಿಯಾದ ಗಿರೀಶ ಕಾರ್ನಾಡರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.

4 comments:

ಸುದರ್ಶನ said...

ಕಾರ್ನಾಡ್ ಮೇಲೆ ನಾನೊಂದು ಲೇಖನ ಬರೆದಿದ್ದೇನೆ, ಪ್ರಕಟಿಸುವಿರಾ?

sunaath said...

ಸುದರ್ಶನರೆ,
ನಿಮ್ಮ ಲೇಖನಕ್ಕೆ ಸ್ವಾಗತವಿದೆ. sunaath@gmail.comಗೆ ಕಳುಹಿಸಿಕೊಡಿ.

Arathi said...

ಮೊನ್ನೆ ಕಾರ್ನಾಡರ ಒಂದು ಸಂದರ್ಶನ ಇದೆ ನಾಟಕದ ಬಗ್ಗೆ you tube ನಲ್ಲಿ ನೋಡ್ತಾ ಇದ್ದೆ.. ತಾಳಿಕೊಟೆ , ವಿಜಯನಗರದ ಅಳಿಯ ರಾಮರಾಯ ಅವನ ‌ಸುತ್ತ ಮುತ್ತ ನಡೆಯುವ ಘಟನೆಗಳು ಎಲ್ಲಾ ಹಂಚಿಕೊಳ್ತಾ ಇದ್ರು ..ಆದರೆ ಅವರ ಮಾತು ‌‌‌‌‌ ಅಧ್ಯಯನ ದಲ್ಲೆ ಎಷ್ಟು ಪೂರ್ವಾಗ್ರಹ ಪೀಡಿತ ವಿಚಾರ ತುಂಬಿತ್ತು ಎನ್ನುವುದು ಸ್ಪಷ್ಟ ವಾಗ್ತಾ ಇತ್ತು..
ಹಾಗಾಗಿ ನಮಗೆ ಇಂತಾ ಇತಿಹಾಸಗಳ ಮೇಲೆ ರಚಿತವಾದ ಕೃತಿ ಇಂತಾ ಬುದ್ದಿ ಜೀವಿಗಳ ದ್ರಷ್ಟಿಕೊನದಿಂದಲೆ ಬರೆದರವರಿಂದ ಓದುವ , ಕೇಳುವ ಅನಿವಾರ್ಯತೆ ಬಂದಿರುವುದು ದುರದೃಷ್ಟಕರ ಸರ್.

sunaath said...

ಆರತಿ ಮೇಡಮ್,
ಕಾರ್ನಾಡರ ಸಾಹಿತ್ಯಕೃತಿಗಳನ್ನು ಓದಿದವರಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅವರಿಗೆ ಹಿಂದೂ-ವಿರೋಧಿ ಪೂರ್ವಾಗ್ರಹವಿದೆ. ಮುಸ್ಲಿಮರೆಂದರೆ ತುಂಬ ಒಳ್ಳೆಯ ವ್ಯಕ್ತಿಗಳು ಎನ್ನುವ ಅಭಿಪ್ರಾಯವನ್ನೂ ತಮ್ಮ ಕೃತಿಗಳಲ್ಲಿ ಅವರು ತುರುಕುತ್ತಿದ್ದಾರೆ. ಬಹುಶಃ ಅವರ ಬಾಲ್ಯದ ಘಟನೆಗಳು ಅವರ ಈ ಪೂರ್ವಾಗ್ರಹಕ್ಕೆ ಕಾರಣವಿರಬಹದು? ಅದಲ್ಲದೇ, ‘ಬುದ್ಧಿಜೀವಿಗಳು’ ಎಂದರೆ, ಹೀಗೆಯೇ ಇರಬೇಕಲ್ಲವೆ!