Tuesday, August 6, 2019

ಬಂದಿಕಾರಾ ಶ್ರಾವಣಾ.........ದ. ರಾ. ಬೇಂದ್ರೆ



ಬಂದಿಯೊಳಗಿದ್ದವರ ಬಂಧನವ ಬಿಡಿಸುವಾ
ಬಂದಿಕಾರಾ ಶ್ರಾವಣಾ
ಬಂಧನದೊಳಿಹರೊ ಜಗವಂದಿತರನಿಂದಿತರು
ಬಂದೆ ಬಿಡಿಸೈ ಶ್ರಾವಣಾ
ಅಂಧಕಾರವಿದಲ್ಲ ಮಂದೇಹ ಸಂಘವಿದೆ
ಸಂದೇಹವೇ ಶ್ರಾವಣಾ?
ಅಂದು ಗಾಯತ್ರಿ ಮನದಂದು ಕಿವಿದುಂಬಿಸಿದೆ
ಇಂದಾವದೊ ಶ್ರಾವಣಾ?

ಬಂದು ಗೀತೆಯ ಹಾಡಿನೊಂದು ಯೋಗವ ಹೇಳಿ
ಒಂದುಗೂಡೋ ಶ್ರಾವಣಾ.
ಒಂದು ಶ್ರುತಿಯವ ನೀನಮಂದ ನಂದನವಾಸಿ
ಮಂದಹಾಸಾ ಶ್ರಾವಣಾ.
ನಂದಗೋಪನ ಕಾಂತೆಗಂದೊಪ್ಪಿಸಿದೆ ತಾನೆ
ಬಂಧಮುಕ್ತನ ಶ್ರಾವಣಾ.
ಇಂದು ಬಂದಿಹುದು ಮತ್ತೊಂದು ಸಮಯವು ಅಂತೆ
ತಂದೆ ಬಿಡಿಸೈ ಶ್ರಾವಣಾ.

ಮುಂದಿರುವ ಹೊಲಗಳಲಿ ಇಂದಿರೆಯೆ ನಲಿವಂತೆ
ಚೆಂದವೇನೋ ಶ್ರಾವಣಾ
ಬಂಧು ನೀ ಬೆಳೆಗೆ ಉಕ್ಕಂದ ನೀ ಹೊಳೆಗೆ ಆ-
ನಂದಸಿಂಧೋ ಶ್ರಾವಣಾ.
ಚಂಡರಾಹುಗ್ರಾಸದಿಂದ ಬಿಡಿಸೈ ಜಗದ
ಚಂದಿರನನೇ ಶ್ರಾವಣಾ.
ನಿಂದಿಸುತ ಬಾಯ್ಮುಚ್ಚಿ ಸ್ಫುಂದಿಸುತ ಬಡವರಾ-
ಕ್ರಂದಿಸುವರೋ ಶ್ರಾವಣಾ.

ಬಂಧಮುಕ್ತಿಯ ದಿನವೆ ಬಂದೆಯಾ ಬಾ ಬಳಿಗೆ
ಎಂದು ಕರೆಯೋ ಶ್ರಾವಣಾ,
ದುಂದು-ಕಂಸನ ಕೊಂದು, ತಂದೆ-ತಾಯ್ ಹೊರತಂದ
ಕಂದನ್ನ ಕರೆ ಶ್ರಾವಣಾ.
ಕೇದಗೆಯ ಹೊಡೆ ತೂರಿ ಊದು ನಿನ್ನ ತುತೂರಿ
ಮೋದ ಬೀರೋ ಶ್ರಾವಣಾ.
ನಾದವಿದು ಯಾವುದೋ ಅಗಾಧ ತಳದಿಂ ಬಂತು
ಊದೋದಿದೋ ಶ್ರಾವಣಾ.

ಅಷ್ಟಮಿಯ ದಿನ ಮಧ್ಯರಾತ್ರಿ ಜನರಿಗೆ ಜಾತ್ರಿ
ಇಷ್ಟದವನಿಷ್ಟರಲ್ಲಿ
ಹುಟ್ಟಿ ಬರುವನೊ ಚಂದ್ರ ಕುಟ್ಟಿ ಬಂದಂತೆ ತಮ
ದಿಟ್ಟಿ ದಿಟವಾಗುವಲ್ಲಿ.
ಕತ್ತಲೆಯ ತುಟ್ಟತುದಿ ಹತ್ತಿರುವೆ ಬೆಳಕು ಬದಿ
ಎಂದು ಸಾರೋ ಶ್ರಾವಣಾ,
ಮುಂದೆ ಬರುವ ಸ್ವತಂತ್ರ ವಂದಿಮಾಗಧ ನೀನು
ಬಂಧುರಾಂಗಾ ಶ್ರಾವಣಾ.
************************************

ಬಂದಿಯೊಳಗಿದ್ದವರ ಬಂಧನವ ಬಿಡಿಸುವಾ
ಬಂದಿಕಾರಾ ಶ್ರಾವಣಾ
ಬಂಧನದೊಳಿಹರೊ ಜಗವಂದಿತರನಿಂದಿತರು
ಬಂದೆ ಬಿಡಿಸೈ ಶ್ರಾವಣಾ
ಅಂಧಕಾರವಿದಲ್ಲ ಮಂದೇಹ ಸಂಘವಿದೆ
ಸಂದೇಹವೇ ಶ್ರಾವಣಾ?
ಅಂದು ಗಾಯತ್ರಿ ಮನದಂದು ಕಿವಿದುಂಬಿಸಿದೆ
ಇಂದಾವದೊ ಶ್ರಾವಣಾ?

ಶ್ರಾವಣಮಾಸವು ಬೇಂದ್ರೆಯವರಿಗೆ ಅತ್ಯಂತ ಪ್ರಿಯವಾದ ಮಾಸ. ಇದು ನಿಸರ್ಗಪ್ರೇಮದ ಲೌಕಿಕ ಸಾಕ್ಷಾತ್ಕಾರವಷ್ಟೇ ಅಲ್ಲ; ಬೇಂದ್ರೆಯವರು ಶ್ರಾವಣದಲ್ಲಿ ಅಲೌಕಿಕತೆಯನ್ನೂ ಕಾಣುತ್ತಾರೆ. ಇದೇ ಮಾಸದಲ್ಲಿ ಜಗದ್ಗುರು ಶ್ರೀಕೃಷ್ಣನ ಜನನವೂ ಆಯಿತು. ಬೇಂದ್ರೆಯವರು ಹಾಗು ಅವರ ಗೆಳೆಯರು ತಮ್ಮ ಗುರುವೆಂದು ಭಾವಿಸಿದ ಶ್ರೀ ಅರವಿಂದರು ಕೋಲಕತ್ತೆಯಲ್ಲಿ ಜನಿಸಿದ ದಿನವೂ ಸಹ ೧೫--೧೮೭೨ರಂದು.

{ಟಿಪ್ಪಣಿ: ಕಿತ್ತೂರಿನ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನು ಜನಿಸಿದ ದಿನವು ೧೫ ಅಗಸ್ಟ-- ಭಾರತದ ಸ್ವಾತಂತ್ರ್ಯದಿನ ; ಹಾಗು ಆತನನ್ನು ಗಲ್ಲಿಗೇರಿಸಿದ ದಿನವು ೨೬ ಜನೇವರಿ --ಭಾರತವು ಗಣರಾಜ್ಯವಾದ ದಿನ! ಎಂತಹ ಕಾಕತಾಲೀಯವಲ್ಲವೆ?}

ಹೀಗಾಗಿ ಬೇಂದ್ರೆಯವರು ಶ್ರಾವಣವನ್ನು ಪಾರಭೌತಿಕ ದೃಷ್ಟಿಯಿಂದ ನೋಡುತ್ತಿದ್ದಾರೆ, ಶ್ರಾವಣ ಮಾಸವನ್ನು ಮಾನುಷೀಕರಿಸಿದ್ದಾರೆ, ಅವನನ್ನು  ಮಂಗಲದ ಹರಿಕಾರನೆಂದು ಕರೆಯುತ್ತಾರೆ. ಇಡೀ ಕವನದಲ್ಲಿ ಶ್ರಾವಣಮಾಸವನ್ನು ಬೇಂದ್ರೆಯವರು ಓರ್ವ ವ್ಯಕ್ತಿಯಂತೆ, ಓರ್ವ ದೇವದೂತನಂತೆ ಸಂಬೋಧಿಸುತ್ತಿದ್ದಾರೆ ಹಾಗು ಆತನು ಮಾಡಬೇಕಾದ ಕಾರ್ಯವನ್ನು ಆತನಿಗೆ ನಯವಾಗಿ, ಆರ್ತಿಯಿಂದ ನೆನಪಿಸುತ್ತಿದ್ದಾರೆ.

ಶ್ರಾವಣಮಾಸ, ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ನಟ್ಟಿರುಳ ಹೊತ್ತಿನಲ್ಲಿ ಶ್ರೀಕೃಷ್ಣನು ಕಂಸನ ಕಾರಾಗೃಹದಲ್ಲಿ ಜನಿಸಿದನು. ತಕ್ಷಣವೇ ಆತನ ತಂದೆಯಾದ ವಸುದೇವನು ಆತನನ್ನು ಭೋರೆಂದು ಸುರಿಯುವ ಮಳೆಯಲ್ಲಿಯೇ, ಯಮುನಾ ನದಿಯನ್ನು ದಾಟಿಕೊಂಡೊಯ್ದು ನಂದಗೋಪನ ಮನೆಯಲ್ಲಿರಿಸಿದನು. ಈ ದೇವಶಿಶುವನ್ನು ಸೆರೆಯಿಂದ ಬಿಡುಗಡೆ ಮಾಡಲು ಶ್ರಾವಣಮಾಸವು ಬಂದಿಕಾರನಂತೆ ವರ್ತಿಸಿದೆ. (ಬಂದಿಕಾರ ಎಂದರೆ ರಾಜರು ಆಗಮಿಸುವಾಗ, ಅವರ ಮೊದಲಲ್ಲಿ, ಅವರ ಪರಾಕು ಹೇಳುತ್ತ ಸಾಗುವ ವಂದಿಮಾಗಧರು.ಇಲ್ಲಿಹರಿಕಾರಎನ್ನುವ ಅರ್ಥವು ಹೆಚ್ಚು ನಿಕಟವಾಗಿದೆ. ) ಆದುದರಿಂದಲೇ ಬೇಂದ್ರೆಯವರು ಶ್ರಾವಣನನ್ನು ಬಂದಿಯೊಳಗಿದ್ದವರ ಬಂಧನವ ಬಿಡಿಸುವಾ ಬಂದಿಕಾರಾ ಶ್ರಾವಣಾ ಎಂದು ಪ್ರಶಂಸಿಸುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನವೂ ಸಹ ಅಗಸ್ಟ ಹದಿನೈದು. ಆದರೆ ಬೇಂದ್ರೆಯವರು ಈ ಕವನವನ್ನು ಬರೆದಾಗ, ಭಾರತವು ಇನ್ನೂ ಸ್ವತಂತ್ರವಾಗಿರಲಿಲ್ಲ. ಇವೆಲ್ಲ ಘಟನೆಗಳಿಗೆ ಶ್ರಾವಣಮಾಸವು ಹರಿಕಾರನಂತೆ ವರ್ತಿಸಿದೆ. ಸ್ವಾತಂತ್ರ್ಯಚಳುವಳಿಯ ಹೋರಾಟಗಾರರಾದ ನೆಹರೂ, ಗಾಂಧೀ, ಅರವಿಂದರು, ಸುಭಾಸಚಂದ್ರರು, ಇವರಲ್ಲದೆ ಅನೇಕ ದೇಶಪ್ರೇಮಿಗಳು ಆ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಗಾಂಧೀಜಿಯವರ ಹೆಸರು ಮೋಹನದಾಸ.  ಮೋಹನ ಎನ್ನುವುದು ಕೃಷ್ಣನ ಹೆಸರೂ ಆಗುತ್ತದೆ ಎನ್ನುವುದನ್ನು ಗಮನಿಸಿರಿ. ಈ ಹೋರಾಟಗಾರರು ವಿಶ್ವವಂದಿತರು, ತಮ್ಮ ಪರಿಶುದ್ಧ ನಡತೆಯಿಂದಾಗಿ ನಿಷ್ಕಲಂಕ ಗೌರವ ಪಡೆದವರು. ಇಂಥವರ ಬಿಡುಗಡೆಯ ಹರಿಕಾರನಾಗಿ ಶ್ರಾವಣವು ಬರಲಿ ಎನ್ನುವುದು ಬೇಂದ್ರೆಯವರ ಹಾರೈಕೆ. ಆದುದರಿಂದಲೇ ಬೇಂದ್ರೆಯವರು ಬಂಧನದೊಳಿಹರೊ ಜಗವಂದಿತರು, ಅನಿಂದಿತರು, ಬಂದೆ ಬಿಡಿಸೈ ಶ್ರಾವಣಾಎನ್ನುತ್ತಾರೆ.

ಈ ಶ್ರಾವಣನಿಗೆ ಒಂದು ಸಂದೇಹವಿರಬಹುದು. ಜಗದ ತುಂಬೆಲ್ಲ ಅಂಧಕಾರ ತುಂಬಿದೆ. ಅಂದರೆ ಎಲ್ಲೆಡೆಗೂ ಸಾಮ್ರಾಜ್ಯಶಾಹಿಗಳಿಂದ ಶೋಷಣೆ ಹಾಗು ಅನಾಚಾರಗಳ ಅಟ್ಟಹಾಸ ನಡೆದಿವೆ. ಹೀಗಿರುವಾಗ, ಬಂಧಿತರ ಬಿಡುಗಡೆ ತನ್ನಿಂದ ಸಾಧ್ಯವೆ? ಈ ಮಾತಿಗೆ ಬೇಂದ್ರೆಯವರು ಸಮಾಧಾನ ಹೇಳುವ ರೀತಿ ಹೀಗಿದೆ: 
ಅಂಧಕಾರವಿದಲ್ಲ ಮಂದೇಹ ಸಂಘವಿದೆ
ಸಂದೇಹವೇ ಶ್ರಾವಣಾ?
ಅಂದು ಗಾಯತ್ರಿ ಮನದಂದು ಕಿವಿದುಂಬಿಸಿದೆ
ಇಂದಾವದೊ ಶ್ರಾವಣಾ?

ನಮಗೆ ಕಾಣುವ ತಮಸ್ಸು ಅಂಧಕಾರದ ಪರಿಣಾಮವಲ್ಲ. ಇದು ಮಂದೇಹಸಂಘದ ಪರಿಣಾಮ. (ಮಂದೇಹರು ಎಂದರೆ ಒಂದು ಬಗೆಯ ರಾಕ್ಷಸರು. ಸೂರ್ಯ ಹಾಗು ಚಂದ್ರರನ್ನು ಗ್ರಹಣಕಾಲದಲ್ಲಿ ಮೂರು ಕೋಟಿ ಮಂದೇಹಗಳು ಮುತ್ತುತ್ತವೆ.) ಈ ರಾಕ್ಷಸರನ್ನು ಓಡಿಸಿ, ಸೂರ್ಯ-ಚಂದ್ರರನ್ನು ಗ್ರಹಣಮುಕ್ತರನ್ನಾಗಿ ಮಾಡಲು ಗಾಯತ್ರಿಜಪವನ್ನು ಮಾಡಲಾಗುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಶ್ರಾವಣನು ಗಾಯತ್ರಿಜಪವನ್ನು ಮನಃಪೂರ್ವಕವಾಗಿ ಜಪಿಸಿದ್ದಾನೆ. ಇದರಿಂದಾಗಿ ಸೂರ್ಯ ಹಾಗು ಚಂದ್ರರು ಗ್ರಹಣದಿಂದ ಮುಕ್ತಿ ಪಡೆದಿದ್ದಾರೆ. (ಶ್ರಾವಣದ ಭೋರ್ಗರೆಯುವ ಮಳೆಯ ಸದ್ದು ಬೇಂದ್ರೆಯವರಿಗೆ ಗಾಯತ್ರಿಜಪದಂತೆ ಕೇಳಿಸುತ್ತದೆ.) ‘ಶ್ರಾವಣನೆ, ನೀನು ಇಂದು ಏನನ್ನು ಮಾಡುವಿ?’ ಎಂದು ಬೇಂದ್ರೆಯವರು ಶ್ರಾವಣನನ್ನು ಕೇಳುತ್ತಾರೆ. ಶ್ರಾವಣ ಮಾಸವು ಹೇಗೆ ತಾನೆ ಹೋರಾಟಗಾರರನ್ನು ಬಂಧಮುಕ್ತ ಮಾಡಬಲ್ಲದು? ಭೌತಿಕ ಹೋರಾಟಕ್ಕೆ ಆಧ್ಯಾತ್ಮಿಕ ನೆರವು ಬೇಕೇ ಬೇಕು. ಶ್ರಾವಣ ಮಾಸವು ಗ್ರಹಣಕಾಲಗಳಲ್ಲಿ ಹಾಗು ಕೃಷ್ಣನ ಜನನಕಾಲದಲ್ಲಿ ಗಾಯತ್ರಿಮಂತ್ರವನ್ನು ಜಪಿಸಿದಂತೆ, ಇಂದು ಸಹ ಗಾಯತ್ರಿಜಪದ ಮೂಲಕ ಆಧ್ಯಾತ್ಮಿಕ ನೆರವನ್ನು ನೀಡಬೇಕು. ಶ್ರಾವಣವು ಏನನ್ನು ಮಾಡಬೇಕು ಎನ್ನುವುದನ್ನು ಬೇಂದ್ರೆಯವರು ಹೀಗೆ ಸೂಚಿಸುತ್ತಾರೆ:


ಬಂದು ಗೀತೆಯ ಹಾಡಿನೊಂದು ಯೋಗವ ಹೇಳಿ
ಒಂದುಗೂಡೋ ಶ್ರಾವಣಾ.
ಒಂದು ಶ್ರುತಿಯವ ನೀನಮಂದ ನಂದನವಾಸಿ
ಮಂದಹಾಸಾ ಶ್ರಾವಣಾ.
ನಂದಗೋಪನ ಕಾಂತೆಗಂದೊಪ್ಪಿಸಿದೆ ತಾನೆ
ಬಂಧಮುಕ್ತನ ಶ್ರಾವಣಾ.
ಇಂದು ಬಂದಿಹುದು ಮತ್ತೊಂದು ಸಮಯವು ಅಂತೆ
ತಂದೆ ಬಿಡಿಸೈ ಶ್ರಾವಣಾ.

ಶ್ರಾವಣಾ, ನೀ ಸಂದೇಹಮನಸ್ಕನಾಗಿ ನಿಶ್ಚಲಿತನಾಗಿ ನಿಲ್ಲಬೇಡ. ಇಲ್ಲಿಗೆ ಆಗಮಿಸು; ಭಗವದ್ಗೀತೆಯು ಅನೇಕ ಯೋಗಮಾರ್ಗಗಳನ್ನು ಹೇಳಿದೆ. ಅದರಲ್ಲಿಯ ಒಂದು ಯೋಗವನ್ನು ನೀನು ನಮಗೆ (ಭಾರತೀಯರಿಗೆ) ಹೇಳು. (ಈ ಯೋಗಮಾರ್ಗವುಕರ್ಮಯೋಗಅನ್ನುವುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಸ್ವಾತಂತ್ರ್ಯಹೋರಾಟ ಸಮಯದಲ್ಲಿ ಹೋರಾಟದ ಮುಂದಾಳುಗಳೆಲ್ಲ ಭಾರತೀಯರಿಗೆ ಕರ್ಮಯೋಗವನ್ನೇ (`Do or die’) ಬೋಧಿಸುತ್ತಿದ್ದರು.) ನೀನು ನಮ್ಮೊಳಗೊಬ್ಬವನಾಗಿ ಈ ಕರ್ಮಯೋಗವನ್ನು ಬೋಧಿಸು  ಎಂದು ಬೇಂದ್ರೆಯವರು ಶ್ರಾವಣನಿಗೆಹೋರಾಟದ ಮುಂದಾಳುವಿನ ದೀಕ್ಷೆಯನ್ನು ನೀಡುತ್ತಿದ್ದಾರೆ!

ಒಂದು ಶ್ರುತಿಯವ ನೀನುಎಂದು ಬೇಂದ್ರೆಯವರು ಶ್ರಾವಣನಿಗೆ ಹೇಳುತ್ತಾರೆ. ಹಾಗೆಂದರೇನು? ಬೇಂದ್ರೆಯವರ ಪದಗಳಿಗೆ ವಿವಿಧಾರ್ಥಗಳು ಇರುತ್ತವೆ, ನೋಡಿ! ಶ್ರಾವಣಮಾಸದಲ್ಲಿ ಮಳೆಭೋರೆಂದು ಸುರಿಯುತ್ತದೆಯಲ್ಲವೆ? ಇದು ಒಂದು ಅರ್ಥ. ನೀನು ನಿಶ್ಚಯವನ್ನು ಬದಲಾಯಿಸುವದಿಲ್ಲ ಎಂದು ಮತ್ತೊಂದು ಅರ್ಥ. ಶ್ರುತಿಗಳಲ್ಲಿ ಹೇಳಿದ ಸಂದೇಶವನ್ನು ಪಾಲಿಸು ಎನ್ನುವುದೂ ಒಂದು ಅರ್ಥ! ಶ್ರಾವಣನನ್ನು ಈ ರೀತಿ ಪ್ರಶಂಸಿಸಲು ಕಾರಣವೆಂದರೆ ಈತನುಅಮಂದ ನಂದನವಾಸಿ’. ಅಮಂದ ಇದು ಮಂದ ಪದದ ವಿರುದ್ಧಪದ. ಇಲ್ಲಿಶ್ರೇಷ್ಠವಾದ ಎನ್ನುವ ಅರ್ಥವನ್ನು ಭಾವಿಸಬಹುದು. ಶ್ರಾವಣನು ಶ್ರೇಷ್ಠವಾದನಂದನದ ನಿವಾಸಿಯಾಗಿದ್ದಾನೆ. ನಂದನವು ಶ್ರೀಕೃಷ್ಣನ ನೆಲೆವೀಡಷ್ಟೇ. ಬೇಂದ್ರೆಯವರು ಶ್ರಾವಣನೂ ಸಹ ನಂದನವಾಸಿಯೇ ಎನ್ನುತ್ತಾರೆ. ಏಕೆಂದರೆ, ಮಥುರೆಯ ಸೆರೆಯಿಂದ ಬಿಡಿಸಿ, ಗೋಕುಲದ ನಂದನಕ್ಕೆ ಕರೆತರಲು ಹಾಗು ನಂದಗೋಪನ ಕಾಂತೆಯಾದ ಯಶೋದೆಗೆ ದೇವಶಿಶುವನ್ನು ಸಲ್ಲಿಸಲು ಸಹಕಾರಿಯಾದವನು ಶ್ರಾವಣನೇ ತಾನೇ. ಈ ಬಂಧಮುಕ್ತಿಯ ಕಾರ್ಯವು ಅವನಿಗೇ ಅಂದರೆ ಶ್ರಾವಣನಿಗೇ ಸಮಾಧಾನವನ್ನು ಹಾಗು ತೃಪ್ತಿಯನ್ನು ತಂದಿದೆ. ತತ್ಕಾರಣವಾಗಿ ಶ್ರಾವಣನ ಮುಖದ ಮೇಲೆ ಒಂದು ಮಂದಹಾಸ ನೆಲೆಸಿದೆ. ಅದು ದ್ವಾಪರಯುಗದ ಮಾತಾಯಿತು. ಇದೀಗ ಬಂಧಮುಕ್ತಿಯ ಅಂತಹದೇ ಮತ್ತೊಂದು ಕಾರ್ಯವು ನಿನ್ನ ಪಾಲಿಗೆ ಬಂದಿದೆ. ಅದು ಸೆರೆಯಾದ ಹೋರಾಟಗಾರರ ಮುಕ್ತಿಯೂ ಹೌದು ಹಾಗು ಭಾರತದ ಸ್ವಾತಂತ್ರ್ಯವೂ ಹೌದು. ಬೇಂದ್ರೆಯವರು ಶ್ರಾವಣನನ್ನು ಆರ್ತಭಾವದಿಂದತಂದೆಎಂದು ಕರೆಯುತ್ತ, ಈ ಬಿಡುಗಡೆಯ ಕಾರ್ಯವನ್ನು ಪೂರ್ಣಗೊಳಿಸು ಎಂದು ಹೇಳುತ್ತಾರೆ. ತಂದೆ ಎನ್ನುವುದನ್ನು ಕ್ರಿಯಾಪದವೆಂದು ಭಾವಿಸಿದಾಗ, ‘ಮೊದಲೊಮ್ಮೆ ಇಂತಹ ಬಂಧಮುಕ್ತಿಯ  ಸಮಯವನ್ನು ನೀನು ತಂದಿದ್ದೆ, ಇದೀಗ ಮತ್ತೊಮ್ಮೆ ಅಂತಹ ಸಮಯವನ್ನು ನೀನು ತಂದಿರುವೆ; ಆದುದರಿಂದ ಸ್ವಾತಂತ್ರ್ಯಹೋರಾಟಗಾರರನ್ನು ಬಂಧಮುಕ್ತರನ್ನಾಗಿ ಮಾಡುಎಂದು ಬೇಂದ್ರೆಯವರು ಶ್ರಾವಣನಿಗೆ ಕರೆ ಕೊಡುತ್ತಾರೆ.

ಮುಂದಿರುವ ಹೊಲಗಳಲಿ ಇಂದಿರೆಯೆ ನಲಿವಂತೆ
ಚೆಂದವೇನೋ ಶ್ರಾವಣಾ
ಬಂಧು ನೀ ಬೆಳೆಗೆ ಉಕ್ಕಂದ ನೀ ಹೊಳೆಗೆ ಆ-
ನಂದಸಿಂಧೋ ಶ್ರಾವಣಾ.
ಚಂಡರಾಹುಗ್ರಾಸದಿಂದ ಬಿಡಿಸೈ ಜಗದ
ಚಂದಿರನನೇ ಶ್ರಾವಣಾ.
ನಿಂದಿಸುತ ಬಾಯ್ಮುಚ್ಚಿ ಸ್ಫುಂದಿಸುತ ಬಡವರಾ-
ಕ್ರಂದಿಸುವರೋ ಶ್ರಾವಣಾ.

ಈ ಬಂಧಮುಕ್ತಿಯ ಹೊರತಾಗಿ, ಶ್ರಾವಣನು ಮಾಡಬೇಕಾದ ಕರ್ತವ್ಯಗಳು ಇನ್ನೂ ಸಾಕಷ್ಟಿವೆ. ಮಳೆ ಬಂದರೆ ತಾನೇ ಬೆಳೆ. ನಮ್ಮ ನಾಡಿನ ಹೊಲಗದ್ದೆಗಳಲ್ಲಿ ಮಳೆಯನ್ನು ಸುರಿಸು. ಅವುಗಳಲ್ಲಿ ಇಂದಿರೆಯೆ ನಲಿವಂತೆ ಕಾಣಬೇಕು. ಜಗದೊಡೆಯ ವಿಷ್ಣುವಿಗೆ ಶ್ರೀದೇವಿ ಹಾಗು ಭೂದೇವಿ ಎನ್ನುವ ಈರ್ವರು ಹೆಂಡಂದಿರು. ಭೂದೇವಿಯ ಮೇಲೆ ಬೆಳೆಯು ಕಂಗೊಳಿಸಿದಾಗ, ಐಶ್ವರ್ಯದ ಶ್ರೀದೇವಿ (ಅಂದರೆ ಇಂದಿರೆ) ಅಲ್ಲಿ ನಲಿಯುವಂತಾಗಬೇಕು, ಸಂಪತ್ತು ವೃದ್ಧಿಸುವಂತಾಗಬೇಕು. ಶ್ರಾವಣನ್ನು ಬೇಂದ್ರೆಯವರು ನೀನುಬೆಳೆಯ ಬಂಧುಎಂದು ಕರೆಯುತ್ತಾರೆ. ‘ಶ್ರಾವಣಾ, ನೀನು ಬೆಳೆಯ ಬಂಧುಎನ್ನುವುದು ಕೇವಲ ಒಂದು statement ಅಲ್ಲ; ಇದು ವಿಜ್ಞಾಪನವೂ ಹೌದು. ಶ್ರಾವಣವು ಬೆಳೆಗೆ ಬಂಧುವಷ್ಟೇ ಅಲ್ಲ; ಹೊಳೆಗಳಿಗೆ ಉಕ್ಕಂದವೂ (=ಪ್ರವಾಹ) ಸಹ ಹೌದು. (ಉಕ್ಕಂದವನ್ನು ಉಕ್ಕುವ ಅಂದ (=ಚೆಲುವು) ಎಂದೂ ಅರ್ಥೈಸಬಹುದು,) ಬೆಳೆಗಳು ಸೊಂಪಾಗಿ ಬೆಳೆದು ನಿಂತರೆ, ಹೊಳೆಗಳು ಉಕ್ಕಿ ಹರಿದರೆ, ಯಾರಿಗೆ ತಾನೆ ಆನಂದವಾಗಲಿಕ್ಕಿಲ್ಲ? ಆದುದರಿಂದ ಶ್ರಾವಣನು ಆನಂದವನ್ನು ಕೊಡುವಆನಂದದ ಸಮುದ್ರನಾಗಿದ್ದಾನೆ. ಇವೆಲ್ಲ ಆತನ ಋತುಮಾನಸಹಜ ಕಾರ್ಯಗಳಾದವು. ಇವುಗಳ ಹೊರತಾಗಿ ಆತನು ಮಾಡಲೇಬೇಕಾದ ಕರ್ತವ್ಯವಿದೆ. ಅದೆಂದರೆ ಚಂಡರಾಹುವಿನಿಂದ ಹಿಡಿಯಲ್ಪಟ್ಟ ಅಂದರೆ ಬ್ರಿಟಿಶರ ಆಕ್ರಮಣಕ್ಕೆ ಒಳಗಾದ ಹಾಗುಜಗದ ಚಂದಿರನಾದ (=ಸ್ವಾತಂತ್ರ್ಯ)ವನ್ನು ಬಿಡಿಸೈ ಶ್ರಾವಣಾ ಎಂದು ಬೇಂದ್ರೆಯವರು ಕೋರುತ್ತಾರೆ. ಚಂದಿರನು ಹೇಗೆ ಧರೆಗೆ ತಂಪನ್ನು ಸೊಗವನ್ನು ಕೊಡುತ್ತಾನೋ, ಅದೇ ರೀತಿಯಲ್ಲಿ ಸ್ವಾತಂತ್ರ್ಯವೂ ಸಹ ನಾಡಿಗೆ ಸುಖವನ್ನು ಕೊಡುವುದು ಎನ್ನುವುದು ಬೇಂದ್ರೆಯವರ ಅಭಿಪ್ರಾಯ. ‘ಜಗದ ಚಂದಿರಎಂದರೆ ಗಾಂಧೀಜಿ ಎನ್ನುವ ಅರ್ಥವನ್ನೂ ಮಾಡಿಕೊಳ್ಳಬಹುದು. ಇನ್ನು ಶ್ರಾವಣನು ತನ್ನಋತುಸಹಜ ಕಾರ್ಯವನ್ನು ಮಾಡದಿದ್ದರೆ, ಬೆಳೆಯ ಅಭಾವದಿಂದ ಬಡಜನತೆಯು ನಿನ್ನನ್ನೇ ನಿಂದಿಸುತ್ತಾರೆ, ಬಾಯ್ಮುಚ್ಚಿಕೊಂಡೇ ಸ್ಫುಂದಿಸುವರು ಅಂದರೆ ಹೋಳಾಗಿ ಸಿಡಿಯುವರು. ಏನೂ ಮಾಡಲಾರದ್ದಕ್ಕಾಗಿ ಸುಮ್ಮನೇ ಕುಳಿತು ಅಳುವರು (ಆಕ್ರಂದಿಸುವರು). ಗಾಂಧೀಜಿಯವರ ಬಿಡುಗಡೆಯಾಗದಿದ್ದರೂ ಸಹ ಇದೇ ರೀತಿಯ ಆಕ್ರಂದನವಾಗುವುದು ಎಂದು ಭಾವಿಸಬಹುದು.

ಬಂಧಮುಕ್ತಿಯ ದಿನವೆ ಬಂದೆಯಾ ಬಾ ಬಳಿಗೆ
ಎಂದು ಕರೆಯೋ ಶ್ರಾವಣಾ,
ದುಂದು-ಕಂಸನ ಕೊಂದು, ತಂದೆ-ತಾಯ್ ಹೊರತಂದ
ಕಂದನ್ನ ಕರೆ ಶ್ರಾವಣಾ.
ಕೇದಗೆಯ ಹೊಡೆ ತೂರಿ ಊದು ನಿನ್ನ ತುತೂರಿ
ಮೋದ ಬೀರೋ ಶ್ರಾವಣಾ.
ನಾದವಿದು ಯಾವುದೋ ಅಗಾಧ ತಳದಿಂ ಬಂತು
ಊದೋದಿದೋ ಶ್ರಾವಣಾ.


ಶ್ರಾವಣನೇ ನೀನು ಬಂಧಮುಕ್ತಿಯ ದಿನವೇ ಬಂದಿದ್ದೀಯಾ; ಕೃಷ್ಣಶಿಶುವನ್ನುಬಾ ಬಳಿಗೆಎಂದು ವಾತ್ಸಲ್ಯದಿಂದ ಕರೆ ಎಂದು ಬೇಂದ್ರೆಯವರು ಶ್ರಾವಣನಿಗೆ ಅನುನಯದಿಂದ ಬಿನ್ನವಿಸುತ್ತಿದ್ದಾರೆ. ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿಯ ತಿಥಿಯಂದು ಸೆರೆಮನೆಯಿಂದ ಕೃಷ್ಣಶಿಶುವಿನ ಬಂಧಮುಕ್ತಿಯಾಗುತ್ತದೆ. ಕೃಷ್ಣಶಿಶುಎಂತಹದು? ‘ದುಂದು-ಕಂಸನನ್ನು ಕೊಂದು ತನ್ನ ತಂದೆಯಾಯಿಗಳಾದ ವಸುದೇವ ಹಾಗು ದೇವಕಿಯರನ್ನು ಬಿಡಿಸಿದಂತಹ ಕೂಸು. ದುಂದು ಪದಕ್ಕೆ extravagant ಎನ್ನುವ ಅರ್ಥವಿದೆ. ಕಂಸನುದುಂದುಹೇಗಾಗುತ್ತಾನೆ? ಕಂಸ ಮೊದಲಾದ ರಾಕ್ಷಸದೊರೆಗಳು ಹಿಂಸಾಮನೋವೃತ್ತಿಯ
 ಸಮಾಜಪೀಡಕರು. ಬಡಜನರ ದುಡಿಮೆಯಲ್ಲಿ ವೈಭವೋಪೇತ ಭೋಗಜೀವನ ನಡೆಸುವರು, ನಿರಂಕುಶಾಧಿಕಾರಿಗಳು. ಇವರ ವಿರುದ್ಧವಾಗಿ ಗಾಂಧೀಜಿಯವರದು ಹಾಗು ಇತರ ಸ್ವಾತಂತ್ರ್ಯಹೋರಾಟಗಾರರದು ತ್ಯಾಗಮಯ ಯೋಗಜೀವನ. ಸೃಷ್ಟಿಯ ಸಾಮರಸ್ಯವನ್ನು ಈ ಸ್ವಾರ್ಥಿ ಭೋಗಜೀವನವು ಹಾಳು ಮಾಡುತ್ತದೆ. ಆದುದರಿಂದ ಈ ವಿನಾಶಕ್ಕೆ ಕಾರಣರಾದ ರಾಕ್ಷಸರನ್ನು ಇಲ್ಲಿ  ದುಂದು-ಕಂಸಎಂದು ಬೇಂದ್ರೆಯವರು ಸಂಕೇತಿಸುತ್ತಾರೆ.

ಬೇಂದ್ರೆಯವರು ಹೇಗೆ ಒಂದು ಪದಕ್ಕೆ ವಿಶಾಲವಾದ ಅರ್ಥವನ್ನು ಹುಟ್ಟಿಸುತ್ತಾರೆ ಎನ್ನುವುದನ್ನು ಇಲ್ಲಿ ನೋಡಬಹುದು. ‘ದುಂದುಪದವು ತನ್ನ ಸಾಧಾರಣ ಅರ್ಥಕ್ಕಿಂತ ಹೆಚ್ಚಿನ ಅರ್ಥವನ್ನು ಇಲ್ಲಿ ಪಡೆದುಕೊಂಡಿರುವುದು ಬೇಂದ್ರೆಯವರ ಅಸಾಮಾನ್ಯ ಪ್ರತಿಭೆಯನ್ನು ತೋರಿಸುತ್ತದೆ. ಬೇಂದ್ರೆಯವರು ನಿಜವಾಗಿಯೂವರಕವಿಗಳು.


ಕೇದಗೆಯ ಹೊಡೆ ತೂರಿ ಊದು ನಿನ್ನ ತುತೂರಿ
ಮೋದ ಬೀರೋ ಶ್ರಾವಣಾ.
ನಾದವಿದು ಯಾವುದೋ ಅಗಾಧ ತಳದಿಂ ಬಂತು
ಊದೋದಿದೋ ಶ್ರಾವಣಾ.

ನಾಗರಪಂಚಮಿ ಬಂತೆಂದರೆ ಕೇದಗಿಯ ಹೊಡೆಗಳು ಅರಳುವ ಕಾಲ ಪ್ರಾರಂಭವಾಗುತ್ತದೆ. ಇದು ಶ್ರಾವಣದ ಕಾಲ. ಕೇದಿಗೆಗೆ ಮುಳ್ಳುಗಳು ಇರುವುದರಿಂದ ಈ ಹೊಡೆಗಳಲ್ಲಿ ತೂರಿಕೊಳ್ಳುವುದು ಕಷ್ಟದ ಕೆಲಸ. (ಹಾವುಗಳು ಇಲ್ಲಿ ವಾಸಿಸುತ್ತವೆ ಎಂದು ಹೇಳುತ್ತಾರೆ.) ಬೇಂದ್ರೆಯವರುಶ್ರಾವಣಾ, ಈ ಸುವಾಸನೆಪೂರಿತ ಕೇದಗೆಯ ಹೊಡೆಗಳಲ್ಲಿ ನೀನು ತೂರಿಕೊಂಡು, ತುತೂರಿಯನ್ನು ಊದುಎನ್ನುತ್ತಾರೆ. ಈ ಹೊಡೆಗಳಲ್ಲಿ ಶ್ರಾವಣದ ಗಾಳಿ ಬೀಸಿದಾಗ, ತುತೂರಿ ಊದಿದಂತೆ ಭಾಸವಾಗುತ್ತಿರಬಹುದು. ತುತೂರಿ ಎಂದರೆ rallying sound ಸಹ ಹೌದು. ನಿನ್ನ ತುತೂರಿಯನ್ನು ಊದು, ಅದನ್ನು ಕೇಳಲು ಒಟ್ಟಾಗುವ ಜನರಿಗೆ ಸುಖವನ್ನು ಕೊಡು ಎಂದು ಬೇಂದ್ರೆಯವರು ಶ್ರಾವಣನಿಗೆ ಬಿನ್ನವಿಸುತ್ತಾರೆ. ( ‘ಬೇಂದ್ರೆಯವರುತುತೂರಿಎನ್ನುವ ಕವನವನ್ನು ತಮ್ಮ ವಿದ್ಯಾರ್ಥಿಜೀವನದಲ್ಲಿ ಬರೆದಿದ್ದರು ಎನ್ನುವುದು ಇಲ್ಲಿ ಪ್ರಸ್ತುತವಾಗುತ್ತದೆ.)

ಶ್ರಾವಣನುಬಂದಿಕಾರಅಂದರೆ ವಂದಿಮಾಗಧನು ತಾನೆ? ರಾಜರ ಆಗಮನಕ್ಕಿಂತ ಮೊದಲು, ಅವರ ಎದುರಿನಲ್ಲಿ ಆತನು ತುತೂರಿಯನ್ನು ಊದುತ್ತ ಸಾಗಬೇಕು. ಅಲ್ಲದೆ ಆತನು ಹರಿಕಾರನೂ ಹೌದು. ಆದುದರಿಂದಲೂ ಆತನು ತುತ್ತೂರಿಯನ್ನು ಊದಬೇಕು. ‘ಈ ತುತ್ತೂರಿಯ ನಾದವು ಯಾವುದೋ ಅಗಾಧ ತಳದಿಂದ ಬಂದಿದೆ ಅರ್ಥಾತ್ ಇದು ಅಲೌಕಿಕವಾದ ನಾದ. ಜನತೆಯ ಹೃದಯದ ಆಳದಲ್ಲಿ ಅದುಮಿ ಹಿಡಿದಿರುವ ಸ್ವಾತಂತ್ರ್ಯದ ಬಯಕೆಯ ನಾದವಿದು. ಆದುದರಿಂದ ತುತೂರಿಯ ಈ ಉದ್ಘೋಷವನ್ನು ಊದೋ, ಊದೋ ಎಂದು ಬಿಡದಂತೆ ಮಾಡು ಎಂದು ಬೇಂದ್ರೆಯವರು ಶ್ರಾವಣನಿಗೆ ಬಿನ್ನವಿಸುತ್ತಾರೆ.

ಅಷ್ಟಮಿಯ ದಿನ ಮಧ್ಯರಾತ್ರಿ ಜನರಿಗೆ ಜಾತ್ರಿ
ಇಷ್ಟದವನಿಷ್ಟರಲ್ಲಿ
ಹುಟ್ಟಿ ಬರುವನೊ ಚಂದ್ರ ಕುಟ್ಟಿ ಬಂದಂತೆ ತಮ
ದಿಟ್ಟಿ ದಿಟವಾಗುವಲ್ಲಿ.
ಕತ್ತಲೆಯ ತುಟ್ಟತುದಿ ಹತ್ತಿರುವೆ ಬೆಳಕು ಬದಿ
ಎಂದು ಸಾರೋ ಶ್ರಾವಣಾ,
ಮುಂದೆ ಬರುವ ಸ್ವತಂತ್ರ ವಂದಿಮಾಗಧ ನೀನು
ಬಂಧುರಾಂಗಾ ಶ್ರಾವಣಾ.

ಶ್ರಾವಣ ಮಾಸದ ಕೃಷ್ಣಪಕ್ಷದ  ಅಷ್ಟಮಿ ತಿಥಿಯಂದು ಮಧ್ಯರಾತ್ರಿಯ ಸಮಯವು ಭಕ್ತಜನರಿಗೆ ಜಾತ್ರೆಯಂತಹ ಸಮಯ. ಏಕೆಂದರೆ ಇದು ಕೃಷ್ಣಜನನದ ಕಾಲ. ‘ಇಷ್ಟದವನುಎಂದು ಬೇಂದ್ರೆಯವರು ಕೃಷ್ಣನನ್ನು ಕರೆಯುತ್ತಾರೆ. ಈತ ಎಲ್ಲ ಸಜ್ಜನರಿಗೂ ಬೇಕಾದವನಲ್ಲವೆ? ಆದುದರಿಂದ ಅವನುಇಷ್ಟದವನು’.

ಇಷ್ಟದವನಿಷ್ಟರಲ್ಲಿಪದವನ್ನು   ಇಷ್ಟದವನು+ಇಷ್ಟರಲ್ಲಿಎಂದು ವಿಭಜಿಸಿರಿ. ಆಗ ಈ ಪದಕ್ಕೆನಮ್ಮ ಪ್ರೀತಿಪಾತ್ರ ಕೃಷ್ಣನು ಇಷ್ಟರಲ್ಲಿಯೇ ಹುಟ್ಟಿ ಬರುವನುಎನ್ನುವ ಅರ್ಥವಾಗುತ್ತದೆ. ಬೇಂದ್ರೆಯವರು ಈ ಸ್ವರಲೋಪ ಸಂಧಿಯನ್ನು ಬೇರೊಂದು ರೀತಿಯಲ್ಲಿಯೂ ವಿಭಜಿಸುತ್ತಾರೆ. ‘ಇಷ್ಟದವನು+ಅನಿಷ್ಟರಲ್ಲಿ’. ಇಲ್ಲಿ ಅನಿಷ್ಟರು ಎಂದರೆ ಕಂಸ ಹಾಗು ಅವನ ಆಪ್ತರು; ಕಾರಾಗೃಹದ ಕಾವಲುಗಾರರು. ಇವರ ನಡುವಿನಲ್ಲಿ ಕೃಷ್ಣ ಹುಟ್ಟುವ ಪರಿ ಹೇಗೆ? ಚಂದ್ರನು ತಮಸ್ಸನ್ನು ಅಂದರೆ ಅಂಧಕಾರವನ್ನು ಕುಟ್ಟಿ ಬಂದಂತೆ, ಕೃಷ್ಣನು ಜಗದ ಅಂಧಕಾರವನ್ನು, ರಕ್ಕಸರ ತಮಸ್ಸನ್ನು ಕುಟ್ಟಿ ಬರುವನು. ಇಲ್ಲಿ ಕುಟ್ಟಿ ಎನ್ನುವ ಪದದಲ್ಲಿಯ ಆವೇಶವನ್ನು ಗಮನಿಸಿರಿ.

ಚಂದ್ರನ ಬರುವಿಕೆಯಿಂದ ಆಗುವುದೇನು? ಜಗದ ಜನರಿಗೆ ಬೆಳಕು ಹಾಗು ತಂಪು ದೊರೆಯುವುದೇ ಈ ಬಾಲಚಂದ್ರನ ಆಗಮನದ ಲಾಭ. ‘ದಿಟ್ಟಿ ದಿಟವಾಗುವಲ್ಲಿಎಂದು ಬೇಂದ್ರೆ ಹೇಳುತ್ತಾರೆ. ದಿಟ್ಟಿ ಎಂದರೆ ದೃಷ್ಟಿ, ಅಂದರೆ ಕಾಣ್ಕೆ = vision. ಈ ಕಾಣ್ಕೆಯು ಬರಿ ಕನಸಾಗಿ ಉಳಿಯದೆ ನನಸಾಗುವ ಸಮಯವಿದು ಎಂದು ಬೇಂದ್ರೆ ಹೇಳುತ್ತಾರೆ.

ಈ ಕಾಣ್ಕೆಯು ಭಕ್ತಜನರ ಆಶಯ ಹಾಗು ಕಾಣ್ಕೆ. ಅವರಲ್ಲಿ ತಮ್ಮ ಈ ಆಶಯವು ದಿಟವಾಗುವುದು ಎನ್ನುವ ನಂಬಿಕೆ ಬೇಕಲ್ಲವೆ? ಶ್ರಾವಣನು ಅದನ್ನು ಜನರಿಗೆ ಸಾರಿ ಹೇಳುವುದು ಹೀಗೆ: ಕತ್ತಲೆಯ ತುಟ್ಟತುದಿ, ಹತ್ತಿರುವೆ ಬೆಳಕು ಬದಿ
ಎಂದು ಸಾರೋ ಶ್ರಾವಣಾ. ನಿರಂಕುಶಾಧಿಕಾರಿಗಳ ದುರಾಡಳಿತದಲ್ಲಿ ಬೆಂದಿರುವ, ಬಳಲಿರುವ, ಹೋರಾಟದಲ್ಲಿ ತೊಳಲಿರುವ, ತೊಡಗಿರುವ ಜನಸಮೂಹವೆ, ನಿರಾಶರಾಗದಿರಿ. ನೀವು ಕತ್ತಲೆಯ ತುದಿಯನ್ನು ತಲುಪಿರುವಿರಿ. ಆದುದರಿಂದ ಆ ತುದಿಯ ಮತ್ತೊಂದು ಭಾಗದಲ್ಲಿಯೇ ಬೆಳಕಿದೆ.’  ಈ ರಿತಿಯಾಗಿ ಜನರಿಗೆ ಅಭಯವನ್ನು, ಭರವಸೆಯನ್ನು ನೀಡುಎಂದು ಬೇಂದ್ರೆಯವರು ಶ್ರಾವಣನಿಗೆ ಬಿನ್ನವಿಸುತ್ತಾರೆ.

ಶ್ರಾವಣನಿಗೇ ಏಕೆ ಇಂತಹ ಬಿನ್ನಹ? ಏಕೆಂದರೆ ಈತ ಮುಂದೆ ಬರುವ ಸ್ವಾತಂತ್ರ್ಯದ ವಂದಿಮಾಗಧ (=ಬಂದಿಕಾರ) ಆಗಿದ್ದಾನೆ. ಸ್ವಾತಂತ್ರ್ಯದ ಹರಿಕಾರನಾಗಿರುವದರಿಂದಲೇ ಈತ ಬಂಧುರಾಂಗನು (=ಚೆಲುವನು).

ಬೇಂದ್ರೆಯವರ ಈ ಕಾಣ್ಕೆಯು ಮುಂದೆ ನನಸಾಯಿತು. ಶ್ರಾವಣಮಾಸದಲ್ಲಿಯೇ ಅಂದರೆ ಶ್ರಾವಣಮಾಸ  ಕೃಷ್ಣಪಕ್ಷ ಅಮವಾಸ್ಯೆಯ ದಿನ ರಾತ್ರಿಯ ಹನ್ನೆರಡರಂದು ಅಂದರೆ ಬೆಳಗಿನ ಶೂನ್ಯ ಗಂಟೆಯಲ್ಲಿ, ೧೫--೧೯೪೭ರಂದು, ಕೆಂಪುಕೋಟೆಯ ಮೇಲೆ ಬ್ರಿಟನ್ನಿನ ಧ್ವಜ ಕೆಳಗಿಳಿದು, ಭಾರತದ ತ್ರಿವರ್ಣ ಧ್ವಜ ಹಾರಾಡಿತು.

ಬಂದಿಕಾರಾ ಶ್ರಾವಣಾಕವನದ ಶೈಲಿಯ ಬಗೆಗೆ ಒಂದು ಮಾತನ್ನು ಹೇಳಬೇಕು. ವರಕವಿಗಳ ಕವನ ಹಾಗು ಶೈಲಿ ಅಂದರೆ ಕವನದ ಪದಗಳು, ಕವನದ meter ಇವೆಲ್ಲ ಕವನಕ್ಕೆ ಸಂಪೂರ್ಣ ಪೂರಕವಾಗಿರುತ್ತವೆ. ಉದಾಹರಣೆಗೆಪಾತರಗಿತ್ತಿ ಪಕ್ಕಾಕವನವನ್ನೇ ನೋಡಿರಿ. ಪಾತರಗಿತ್ತಿಯ ಪಕ್ಕಗಳು ಎಷ್ಟು ಕ್ಷಿಪ್ರವಾಗಿ flutter ಮಾಡುತ್ತವೆಯೊ, ಕವನದ ರಚನೆಯೂ ಸಹ ಅಷ್ಟೇ ಕ್ಷಿಪ್ರವಾಗಿದೆ, ಪ್ರತಿಯೊಂದು ಸಾಲೂ very brief ಆಗಿದೆ. ತನ್ನ ಪಕ್ಕಗಳ brief flutteringದಲ್ಲಿಯೇ ಪಾತರಗಿತ್ತಿಯು ದೀರ್ಘ ದೂರವನ್ನು ಕ್ರಮಿಸುವದಲ್ಲವೆ, ಅದರಂತೆಯೇ ಬೇಂದ್ರೆಯವರ ಕವನವೂ ಸಹ ದೀರ್ಘವಾಗಿದೆ

ಕವನದ ಐದೂ ನುಡಿಗಳ ನಲವತ್ತು ಸಾಲುಗಳು ಸುಂದರವಾದ ಆದಿಪ್ರಾಸದಿಂದ ಬಂಧಿಸಲ್ಪಟ್ಟಿವೆ ಎನ್ನುವುದು ಈ ಕವನದ ಗರಿಮೆಗೆ ಕಿರೀಟ ತೊಡಿಸಿವೆ! 

ಬಂದಿಕಾರಾ ಶ್ರಾವಣಾಕವನವು ಒಂದು ಅಲೌಕಿಕ, ದೇವರೂಪ ವ್ಯಕ್ತಿತ್ವಕ್ಕೆ ವರಕವಿಗಳು ಮಾಡುವ ಅನುನಯದ ಒತ್ತಾಸೆಯಾಗಿದೆ. ಆದುದರಿಂದ ಇಲ್ಲಿಯ ಮೀಟರ್ ಸಹ ಈ ಅನುನಯಕ್ಕೆ ಪೂರಕವಾಗಿದೆ. ಕವನದಲ್ಲಿ ಬಳಸಿದ ಪದಗಳು ಲಲಿತವಾಗಿವೆ. ಸಂಸ್ಕೃತ ಪದಗಳ ಉಚಿತ ಮಿಶ್ರಣವಿದೆ. ಸೆರೆಯಲ್ಲಿದ್ದ ಶ್ರೀಕೃಷ್ಣ ಶಿಶುವಿನ ಹಾಗು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಚತುರ ಹೋಲಿಕೆಯಿದೆ. ಈ ಎಲ್ಲ ಅಂಶಗಳುಬಂದಿಕಾರಾ ಶ್ರಾವಣಾಕವನವನ್ನು ಒಂದು ಶ್ರೇಷ್ಠ ಕವನವನ್ನಾಗಿ ಮಾಡಿವೆ.

(ಬೇಂದ್ರೆಯವರ ಈ ಕವನವುಗಂಗಾವತರಣಸಂಕಲನದಲ್ಲಿ ಅಡಕವಾಗಿದೆ.)
 

2 comments:

Badarinath Palavalli said...

ಒಂದು ಮಾಸವನ್ನು ಮಾನುಷೀಕರಿಸುವ ಕವಿ ಮನಸು ನಮಗೂ ಮಾರ್ಗದರ್ಶಕವಾಗಿದೆ.

ಮಳೆಯ ಸದ್ದೇ ಗಾಯತ್ರಿ ಮಂತ್ರ,ಸ್ವಾತಂತ್ರ್ಯಹೋರಾಟಗಾರರನ್ನು ಬಂಧಮುಕ್ತರನ್ನಾಗಿ ಮಾಡು ಎಂದು ಶ್ರಾವಣನನ್ನು ಬೇಡಿಕೊಳ್ಳುವ ಪರಿ ಮತ್ತು ಕರ್ಮ ಯೋಗವನ್ನು ಬೋಧಿಸುವ ಮೂಲಕ ಜನಾಂಗವನ್ನು ಬಡಿದೆಬ್ಬಿಸು ಎಂದು ಕೇಳಿಕೊಳ್ಳುವ ಅಥವಾ ಯೋಚಿಸುವ ಕವಿ ಮನಸಿಗೆ ನಮ್ಮ ಶರಣು.

sunaath said...

ಧನ್ಯವಾದಗಳು, ಬದರಿನಾಥರೆ. ವರಕವಿಗಳ ಪ್ರತಿಭೆಯನ್ನು ಸೂಚಿಸುವ ಕವನವಿದಾಗಿದೆ. ಕವನದಲ್ಲಿ ಬರುವ ಅನುರಣನವನ್ನೂ ಸಹ ಗಮನಿಸಿದಾಗ ಬೇಂದ್ರೆಯವರ ಪ್ರತಿಭೆ ಎಷ್ಟು ಅಗಾಧವಾಗಿತ್ತು ಎನ್ನುವುದು ಹೊಳೆಯುತ್ತದೆ!