Sunday, April 19, 2020

ಟೊಂಕದ ಮ್ಯಾಲ ಕೈ ಇಟಗೊಂಡು............ದ.ರಾ. ಬೇಂದ್ರೆ

ಟೊಂಕದ ಮ್ಯಾಲ ಕೈ ಇಟಗೊಂಡು
ಬಿಂಕದಾಕಿ ಯಾರ ಈಕಿ?
ಒಂಕೀತೋಳ ತೋರಸತಾಳ
ಸುಂಕದ ಕಟ್ಟ್ಯವಗ.

ಯಣ್ಣಾ, ಮಾವಾ ಅಂತ ರಮಿಸಿ
ಬಣ್ಣದ ಮಾತು ಆಡಿಕೋತ
ಕಣ್ಣಾಗ ಮಣ್ಣ ತೂರುವಾಕಿ
ಸಣ್ಣನ್ನ  ನಡದಾಕಿ.

ಕಮ್ಮಗ ನಾಲಿಗಿ ಚಾಚತಾಳ
ಸುಮ್ಮಸುಮ್ಮಗ ನಾಚತಾಳ
ದಮ್ಮಡಿ ಕೂಡ ಕೊಡದ ಹಾಂಗs
ಬಿಮ್ಮಗ ಹೊಂಟಾಕಿ.

ಮೆಂತೆದ ಸಿವುಡು ಕಟ್ಟಿಕೊಂಡು
ಸಂತಿ ಪ್ಯಾಟಿ ಮಾಡಲಿಕ್ಕೆ
ಅಂತೂ ಇಂತು ಎಲ್ಲರಕಿಂತ
ಮುಂಚಿಗಿ ಬಂದಾಕಿ.
……………………………………………………………….
ಕವನವನ್ನು ನಾನು ಮೊದಲು ಓದಿದ್ದುಅರಳು ಮರಳುಕವನಸಂಕಲನದಲ್ಲಿ. ಸಮಯದಲ್ಲಿ ನಾನು ಬೇಂದ್ರೆಯವರ ಸೂಕ್ಷ್ಮ ನಿರೀಕ್ಷಕ ದೃಷ್ಟಿಯನ್ನು ಗಮನಿಸಿ ಬೆರಗಾಗಿದ್ದೆ. ಆನಂತರವೇಈ ಕವನವುಮಂದೀ ಮಕ್ಕಳುಎನ್ನುವ ನಾಟಕಕ್ಕೆ ಬೇಂದ್ರೆಯವರು ಬರೆದ ಒಂದು ಹಾಡು ಎಂದು ತಿಳಿದದ್ದು!

ಬೇಂದ್ರೆಯವರು ವರಕವಿಗಳೆಂದೇ ಪ್ರಖ್ಯಾತರು. ಅವರು ನಾಟಕಗಳನ್ನೂ ಬರೆದದ್ದು ಖ್ಯಾತಿಯಲ್ಲಿ ಮಸುಕಾಗಿ ಬಿಟ್ಟಿದೆ. ಅವರ ನಾಟಕಗಳಲ್ಲಿ ಅನೇಕ ಹಾಡುಗಳು ಬರುತ್ತಿದ್ದವು. ಕೆಲವೊಮ್ಮೆ ಹಾಡುಗಳನ್ನು ಮೊದಲೇ ಬರೆದು ನಾಟಕಗಳನ್ನು ಬರೆಯದೇ ಬಿಟ್ಟದ್ದೂ ಉಂಟು!

ಕವನದ  ಸಂದರ್ಭ:
ಮನೆಯ ಯಜಮಾನರು ರೇಡಿಯೋ ಆಲಿಸುತ್ತಿದ್ದಾರೆ; ರೇಡಿಯೋದಲ್ಲಿಟೊಂಕದ ಮ್ಯಾಲ…’ ಎನ್ನುವ ಹಾಡು ಕೇಳಿ ಬರುತ್ತಿದೆ. ಮನೆಯಲ್ಲಿಯ ಸೇವಕನೊಬ್ಬನು, ಯಜಮಾನರ ಕಣ್ಣಿಗೆ ಬೀಳದಂತೆ ಸೇವಕಿಯೊಬ್ಬಳನ್ನು ಛೇಡಿಸುತ್ತ ಹಾಡಿನ ಅಭಿನಯ ಮಾಡುತ್ತಿದ್ದಾನೆ. ನಾಟಕದಲ್ಲಿಯ ಅವನ ಅಂಗಚಲನೆಯನ್ನು ಕಲ್ಪಿಸುತ್ತ ಹಾಡನ್ನು ಓದಿಕೊಳ್ಳಬೇಕು. ಹಾಡಿನ ಛಂದಸ್ಸು ಅವನ ಅಭಿನಯಕ್ಕೆ ತಕ್ಕಂತಹ ಲಾಘವದ ಛಂದಸ್ಸಾಗಿದೆ. ಬೇಂದ್ರೆಯವರು ತಮ್ಮ ಕವನಗಳಿಗೆ ಬಳಸುವ ಛಂದಸ್ಸು ಯಾವಾಗಲೂ ಸನ್ನಿವೇಶಕ್ಕೆ ಸಮರ್ಪಕವಾದ ಛಂದಸ್ಸೇ ಆಗಿರುತ್ತದೆ ಎನ್ನುವುದನ್ನು ಗಮನಿಸಬೇಕು.

ಕವನದ ಸನ್ನಿವೇಶ:
ಮೊದಲ ನುಡಿ:
ಹಳ್ಳಿಯ ತರುಣಿಯೊಬ್ಬಳು ತನ್ನಲ್ಲಿಯ ಕಾಯಿಪಲ್ಲೆಯನ್ನು ಸಂತೆಯಲ್ಲಿ ಮಾರಾಟ ಮಾಡಲೆಂದು, ಪೇಟೆಗೆ ಹೋಗುತ್ತಿರುವಾಗ, ಅವಳು ಪೇಟೆಯ ಸುಂಕದ ಕಟ್ಟೆಯನ್ನು ದಾಟಿ ಹೋಗಬೇಕಷ್ಟೆ. ಇವಳಿಗೆ ತಾನು ಹೊತ್ತೊಯ್ಯುತ್ತಿರುವ ಮಾಲಿಗೆ ಸುಂಕವನ್ನು ಕೊಡಲು ಎಳ್ಳಷ್ಟೂ ಮನಸ್ಸಿಲ್ಲ. ಹಾಗಾಗಿ ಸುಂಕದ ಕಟ್ಟೆಯವನನ್ನು ತನ್ನ ಒನಪು ಒಯ್ಯಾರಗಳಿಂದ ಮರಳು ಮಾಡಿ, ಪುಕ್ಕಟೆಯಾಗಿ ಪಾರಾಗಲು ಪ್ರಯತ್ನಿಸುತ್ತಿದ್ದಾಳೆ. ಬೇಂದ್ರೆಯವರು ಕೊಡುವ ಅವಳ ಚಿತ್ರವನ್ನುನೋಡಿರಿ. ಅವಳು ಪಲ್ಲೇದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತಿದ್ದಾಳೆ. ಒಂದು ಕೈಯನ್ನು ಟೊಂಕದ ಮೇಲೆ ಇಟ್ಟು ಕೊಂಡಿದ್ದಾಳೆ. ಎರಡನೆಯ ಕೈಯನ್ನು ಮೇಲೆತ್ತಿ  ಸುಂಕದ ಕಟ್ಟೆಯವನಿಗೆ ತನ್ನ ಒಂಕಿಯ ತೋಳನ್ನು ಎತ್ತಿ ತೋರಿಸುತ್ತಿದ್ದಾಳೆ. ತನ್ನ ಸಮತೋಲವನ್ನು ಕಾಯ್ದುಕೊಳ್ಳುವ ಸಲುವಾಗಿ ಅತ್ತಿತ್ತ ಒನೆಯುತ್ತಿದ್ದಾಳೆ. ಇದರಿಂದಾಗಿ ಗಂಡು ಜೀವಿಗೆ ಇವಳ ಅರೆತೋಳಿನ ಚೆಲುವಿನ ದರ್ಶನವಾಗುವುದರ ಜೊತೆಗೆ, ಇವಳು ಕಡಿಮೆ ದರ್ಜೆಯವಳಲ್ಲ, ಸ್ವಲ್ಪಕಾಸಿದ್ದವಳುಎನ್ನುವ ಅರಿವು ಮೂಡುವುದಷ್ಟೆ! ‘ಎಲಲಾ, ಯಾರಪಾ ಈ ಬಿಂಕದ ಹುಡುಗಿ?’ ಎಂದು ಅವನಿಗೆ ಅನಿಸುವುದು ಸಹಜವೇ

ಎರಡನೆಯ ನುಡಿ:
ಇಷ್ಟರಿಂದಲೇ ಸುಂಕದ ಕಟ್ಟೆಯವನು ಇವಳ ಬಲೆಗೆ ಬೀಳುತ್ತಾನೆಯೆ? ಇವಳು ಯಾರಾದರೆ ತನಗೇನು ಎನ್ನುವ ಮುಖಭಾವವನ್ನು ಆತ ಪ್ರದರ್ಶಿಸುತ್ತಾನೆ.  ಸರಿ, ಇವಳು ಅವನ ಜೊತೆಗೆ ಒಂದು ಸಂಬಂಧವನ್ನು ಬೆಸೆಯಲು ಪ್ರಯತ್ನಿಸುತ್ತಾಳೆ. ಅವನಿಗೆ ಪ್ರೀತಿಯಿಂದಯಣ್ಣಾ!’ ಎನ್ನುತ್ತಾಳೆ. ಇವಳಿಗೆ ಅಣ್ಣನಾಗಲು ಅವನಿಗೇನು ಹುಚ್ಚು ಹಿಡಿದಿದೆಯೆ?! ಆದುದರಿಂದ ಈಗವಳು ಎರಡನೆಯ ಡಾವನ್ನು ಹಾಕುತ್ತಾಳೆ! ‘ಮಾವಾಎಂದು ಕರೆಯುತ್ತಾಳೆ. ಮಾವ ಅಂದರೆ ಸೋದರಮಾವ. ಸೋದರಮಾವನು ತನ್ನ ಸೋದರ ಸೊಸೆಯನ್ನು ಮದುವೆಯಾಗಬಹುದು. ಸಂಬಂಧವನ್ನು ಸೂಚಿಸಿದರೆ, ಸುಂಕದ ಕಟ್ಟೆಯವನು ಒಂದು ಆಕರ್ಷಣೆಗೆ ಒಳಗಾಗಬಹುದು, ಆತ ಮಿದುವಾಗಬಹುದು ಎಂದವಳ ಭಾವನೆ. ಆತನ ನೋಟ ಸಾವಕಾಶವಾಗಿ ಇವಳ ಮೇಲೆಲ್ಲ ಹರಿದಾಡುತ್ತಿರುತ್ತದೆ. ಇನ್ನಷ್ಟು ಬಣ್ಣದ ಮಾತುಗಳನ್ನು ಆಡುತ್ತ ಆಕೆ ಇವನಿಗೆ ಬಲೆ ಬೀಸುತ್ತಿದ್ದಾಳೆ. ಇಷ್ಟಾದ ಮೇಲೆ ಮಿಕ ಬಲೆಗೆ ಬಿದ್ದಂತೆಯೇ. ಆತನ ನೋಟ ಇದೀಗ ಇವಳ ನಡುಭಾಗಕ್ಕೆ ಸರಿಯುತ್ತಿದೆ. ಅಲ್ಲಿಯೂ ಸಹ ಅವನಿಗೆ ಬೆರಕೀ ಹುಡುಗಿಯ ಸಣ್ಣನ್ನ ಟೊಂಕ ಮರಳು ಮಾಡುತ್ತದೆ. ಅಂದರೆ ಇವನ ಕಣ್ಣಿಗೆ ಮಣ್ಣು ತೂರುವ ಅವಳ ಕೆಲಸ ಸಾಧಿಸಿದಂತಾಯಿತು!

ಮೂರನೆಯ ನುಡಿ:
ಮಿಕವೇನೋ ಬಲೆಗೆ ಬಿದ್ದಿದೆ. ಆದರೆ ಸುಂಕದ ಕಟ್ಟೆಯ ಮಿಂಡನಿಗೂ ಸಹ ಮಾತಿನ ಚಾಪಲ್ಯವಿದ್ದೇ ಇರುತ್ತದೆ, ಅಲ್ಲವೆ? ಅವಳನ್ನು ಹುಡುಗಾಟಕ್ಕೆ ಎಳೆಯುತ್ತ, ‘ಚೌಕಾಶಿಮಾಡುತ್ತ, ತನ್ನ ಚಾಪಲ್ಯವನ್ನು ತೀರಿಸಿಕೊಳ್ಳುವುದು ಅವನ ಹಂಚಿಕೆಯಾಗಿರಬೇಕುಇದೆಲ್ಲ ಅವಳಿಗೂ ತಿಳಿದದ್ದೇ. ಆದುದರಿಂದಲೇ ತರುಣಿಕಮ್ಮಗ ನಾಲಿಗೆ ಚಾಚತಾಳ’. ನಾಲಿಗಿ ಹೊರಚಾಚುವುದು ಅಂದರೆ ಬೆರಕಿ ಮಾತನಾಡುವುದು; ಇದು ಜಾಬಾಲ ಮಂದಿಯ ಲಕ್ಷಣ. ಇದು ಎರಡು ನಾಲಗೆಗಳಿದ್ದ ಹಾವಿನ ಲಕ್ಷಣವೂ ಹೌದು. ಮಾತುಗಳನ್ನು ಬೇಕಾದ ಹಾಗೆ ಬದಲಾಯಿಸಲು ಎರಡು ನಾಲಗೆಗಳು ಬೇಕೇ ಬೇಕು! ಇನ್ನುಕಮ್ಮನೆಎಂದರೆ ಏನು? ಕಮ್ಮನೆ ಎನ್ನುವುದಕ್ಕೆ ವಿಶಿಷ್ಟವಾದ ಅರ್ಥಗಳಿವೆ. ರುಚಿರುಚಿಯಾದದ್ದು ಎನ್ನುವುದು ಒಂದು ಅರ್ಥ. ಮತ್ತೊಂದು ಅರ್ಥಕ್ಕಾಗಿ, ಬೇಂದ್ರೆಯವರಯುಗಾದಿಕವನದಲ್ಲಿಯಕಮ್ಮನೆ ಬಾಣಕ್ಕೆ ಸೋತುಎನ್ನುವ ಸಾಲನ್ನು ಗಮನಿಸಿರಿ. ಇಲ್ಲಿ ಕಮ್ಮನೆ ಬಾಣ ಅಂದರೆ ಕಾಮದೇವನ ಆಕರ್ಷಕವಾದ ಬಾಣ ಚಂಚಲ ತರುಣಿಯು ನಮ್ಮ ಸುಂಕದ ಕಟ್ಟೆಯವನಿಗೆ ರತಿಮೂರ್ತಿಯಾಗಿ ಕಾಣುತ್ತಿದ್ದಾಳೆ. ಅದರಲ್ಲೂ ಅವಳುಸುಮ್ಮ ಸುಮ್ಮನೆನಾಚಿದರಂತೂ ಅವನಿಗೆ ಹೃದಯಸ್ತಂಭನವೇ ಆಗಬೇಕು! ಅಂದ ಮೇಲೆ ಆಕೆಗೆಏನೂ ಬ್ಯಾಡ ಹೋಗಬೇಎಂದು ಆತ ಹೇಳಿದರೆ ಆಶ್ಚರ್ಯವಾಗಬಾರದು. ಮುಂದಿನ ವಾರ ಇವಳು ಮತ್ತೆ ಬಂದಾಗ, ‘ಗೆಣೆತನವನ್ನು ಇನ್ನಷ್ಟು ವಿಸ್ತರಿಸಬಹುದು ಎನ್ನುವುದು ಅವನ ಮುಂದಾಲೋಚನೆಯಾಗಿರಬಹುದು! ಅವನ ಕಲ್ಪನೆ ಏನೇ ಇರಲಿ, ಒಂದು ದಮ್ಮಡಿ ಸುಂಕವನ್ನು ಸಹ ಬಿಚ್ಚದೆ ಹೋಗುವ ಇವಳುಬಿಂಕದ ಸಿಂಗಾರಿಯೇ ಸೈ!

ನಾಲ್ಕನೆಯ ನುಡಿ:
ಇದೀಗ ಬೇಂದ್ರೆಯವರು ಈ ಹಾಡಿನ conclusion ಭಾಗಕ್ಕೆ ಬಂದಿದ್ದಾರೆ. ಈ ಹುಡುಗಿಯು ಸಂತೆಯಲ್ಲಿ ಮಾರಲಿಕ್ಕೆ ತಂದದ್ದು ಒಂದು ಬುಟ್ಟಿ ಮೆಂತೇ ಸೊಪ್ಪು. ಇತರ ಮಾರಾಟಗಾರರಿಗಿಂತ ಮೊದಲೇ ಬಂದು, ತನ್ನ ಮಾಲನ್ನು ಎಲ್ಲರಿಗಿಂತ ಮೊದಲೇ ಮಾರಿ, ದುಡ್ಡು ಮಾಡಿಕೊಂಡು ಹೋಗುವುದು ಇವಳ ಬೇತು. ಆದುದರಿಂದಲೇ  ‘ಅಂತೂ ಇಂತೂ ಎಲ್ಲರಿಗಿಂತ ಮುಂಚಿಗಿ ಬಂದಾಕಿಎಂದು ಬೇಂದ್ರೆಯವರು ಇವಳ ಚಾತುರ್ಯಕ್ಕೆ ಆಶ್ಚರ್ಯ ತೋರಿಸುತ್ತಿದ್ದಾರೆ.

ಬೇಂದ್ರೆಯವರ ಸೂಕ್ಷ್ಮ ನಿರೀಕ್ಷಣೆಯನ್ನು ಈ ಕವನದಲ್ಲಿ ನೋಡಬಹುದು. ಜೊತೆಗೇ ಈ ನಿರೀಕ್ಷಣೆಯಯನ್ನು ಕಲ್ಪನೆಯಲ್ಲಿ ಜೋಡಿಸುವ ಅವರ ಪ್ರತಿಭೆಯನ್ನೂ ಕಾಣಬಹುದು. ನಾಟಕಕ್ಕೆ ಹೊಂದುವಂತಹ ಪದವನ್ನು ಬರೆಯಬೇಕಲ್ಲವೆ? ಛಂದಸ್ಸು ಅಂದರೆ ಕವನದ ಗತಿ ಈ ದೃಶ್ಯಕ್ಕೆ ಹೊಂದಿಕೊಳ್ಳುವಂತಿರಬೇಕು. ಇದೆಲ್ಲವನ್ನೂ ನಾವು ಈ ಹಾಡಿನಲ್ಲಿ ಕಾಣಬಹುದು.
……………………………………………………………
ಸಂಬಂಧವಿಲ್ಲದ ಒಂದು ಟಿಪ್ಪಣಿ:
ಗಿರೀಶ ಕಾರ್ನಾಡರು ಬೇಂದ್ರೆಯವರ ಮೇಲೆ ಒಂದು documentary filmಅನ್ನು ಮಾಡಿದ್ದಾರೆ. ಈ ಹಾಡಿನ ಹಿನ್ನೆಲೆಯಲ್ಲಿ, ಬೇಂದ್ರೆಯವರು ತಮ್ಮ ಮನೆಗೆ ಕಾಯಿಪಲ್ಲೆ ಮಾರಲು ಬಂದ ಹಳ್ಳಿಯ ತರುಣಿಯನ್ನು ನೋಡುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ.  ಈ ಹಾಡಿನಲ್ಲಿಯ ಆ ಹಳ್ಳಿಯ ತರುಣಿ ಎಂತಹ ಸೀರೆ, ಕುಪ್ಪುಸ ಧರಿಸಿರಬಹುದೆಂದು ಕಲ್ಪಿಸಿಕೊಳ್ಳಿರಿ. ಮೈ ಮುಚ್ಚುವ ಸಾದಾ ಸೀರೆ, ತುಂಬು ತೋಳಿನ ಕುಪ್ಪುಸ, ತಲೆಯ ಮೇಲೆ ಹೊತ್ತ ಸೆರಗು ಇವು ಅವಳ ಉಡುಗೆಯಾಗಿರಬೇಕಲ್ಲವೆ? ಆದರೆ ಕಾರ್ನಾಡರಿಗೆ ,ಹೆಣ್ಣುಗಳನ್ನು ---ಅವಶ್ಯಕತೆ ಇರಲಿ, ಬಿಡಲಿ---ಅರೆಬೆತ್ತಲೆಯಾಗಿ ತೋರಿಸುವ ಹುಮ್ಮಸ್ಸಿದೆ. ಇಲ್ಲಿಯೂ ಸಹ, ಆ ತರುಣಿಯ ಸೆರಗು ಅವಳ ಎದೆಯ ಒಂದೇ ಭಾಗವನ್ನು ಮುಚ್ಚುವಂತೆ ಚಿತ್ರೀಕರಿಸಿದ್ದಾರೆ. ‘ಹೋಗಲಿ ಬಿಡಿ, ಇದು ಕಾರ್ನಾಡರ ರಸಿಕತೆ’ ಎಂದು ಅನ್ನಬಹುದು. ಆದರೆ ಬೇಂದ್ರೆ ಅಜ್ಜ ಅದನ್ನೆಲ್ಲ ಕಣ್ಣು ಕಣ್ಣು ಬಿಟ್ಟು ನೋಡುತ್ತಿರುವಂತಹ ನೋಟ ಮಾತ್ರ ಕಾರ್ನಾಡರ ಬಗೆಗೆ ತಿರಸ್ಕಾರವನ್ನು ಹುಟ್ಟಿಸುತ್ತದೆ.

12 comments:

Badarinath Palavalli said...

ನಾಟಕ, ಕವನದ ಹೂರಣ ಮತ್ತು ಸಾಕ್ಷ್ಯ ಚಲನಚಿತ್ರ ಈ ಮೂರು ಕೋನಗಳಿಂದ ಕವನವನ್ನು ತೆರೆದಿಟ್ಟ ಈ ಬರಹ ಬಹಳ ಇಷ್ಟವಾಯಿತು.

ಬೇಂದ್ರೆಯವರ ಕವನಗಳಲ್ಲಿನ 'ನಿರೀಕ್ಷಣೆ' ಭಾವ ಪ್ರಮುಖವಾದದ್ದು.

sunaath said...

ಬದರಿನಾಥರೆ, ನಿಮ್ಮ ಸ್ಪಂದನವೂ ಕೂಡ ಕವನದಷ್ಟೇ ಆಕರ್ಷಕವಾಗಿದೆ!

Satish said...

ಬೇಂದ್ರೆಯವರ ರೂಪಕಗಳೇ ಸುಂದರ, ನಮ್ಮ ಮೇಷ್ಟ್ರು ಇಂಥ ಕವನಗಳನ್ನ ಅನುವಾದಕರ ನೈಟ್‌ಮೇರ್ ಎಂದು ಹೇಳುತ್ತಿದ್ದರು... "ಒಂದು, ದಮ್ಮಡೀ ಕಾಸೂ ಕೊಡೋದಿಲ್ಲ... ಹೋಗ್" ಅಂತಾ ಹಿಂದಿನವರು ಬೈಯುತ್ತಿದ್ದಾಗ, ನಾವೆಲ್ಲ ಅದನ್ನು ಒಂದು ದುಡ್ಡಿನ ಯುನಿಟ್ ಎಂದು ಗುರುತಿಸುತ್ತಿದ್ದೆವು, ನನ್ನ ಊಹೆಯ ಪ್ರಕಾರ ಅದು ಹಿಂದಿನ ಕಾಲದಲ್ಲಿ ಚಲಾವಣೆಯಲ್ಲಿದ್ದ (ಚರ್ಮದಲ್ಲಿ ಮಾಡಿದ?) "ನಾಣ್ಯ"ವಿರಬಹುದು!

sunaath said...

ಸತೀಶರೆ, ನೀವು ಹೇಳಿದ ಹಾಗೆ ದಮ್ಮಡಿ ಎಂದರೆ ದುಡ್ಡಿನ ಯುನಿಟ್ ಎನ್ನುವುದು ಸರಿಯೇ. ಅದು ಚರ್ಮದ್ದೋ ಎನ್ನುವುದು ನನಗೆ ತಿಳಿಯದು!

gronline said...

ಮಾನ್ಯರೆ
ಬೇಂದ್ರೆಯವರ ಕವನಗಳ ಬಗ್ಗೆ ತಮ್ಮ ಬರಹಗಳನ್ನು ಓದಿದ ಮೇಲೆ ಅನೇಕ ಅಂಶಗಳು ಮನದಟ್ಟಾಯಿತು. ಇದರಿಂದ ಉಪಕ್ಕತನಾಗಿದ್ದೇನೆ.
ಈ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಮನದಲ್ಲೇ ಉಳಿದ ಬಯಕೆ ತಿಳಿಸಬಹುದೆಂದು ಅನಿಸಿದೆ. ಬೇಂದ್ರೆಯವರ
ಶಾಂಭವಿ ಹಾಗೂ ನಿಬು೯ದ್ಧ
ಕವನಗಳ ಕುರಿತಂತೆ ಪೂಣ೯ ಕವನ ಹಾಗೂ ವಿವರಣೆ ನೀಡುವಂತೆ ವಿನಯದಿಂದ ಕೋರುತ್ತೇನೆ
ವಂದನೆಗಳು
ರಾಘವೇ೦ದ್ರ ಜಿ

sunaath said...

ಪ್ರಿಯ gronlineರೆ,
ನಿರ್ಬುದ್ಧ ಕವನ ನನ್ನ ಹತ್ತಿರ ಇರಬಹುದು; ಹುಡುಕಿ ನೋಡುತ್ತೇನೆ. ಶಾಂಭವಿ ಕವನ ಬಹುಶಃ ಇಲ್ಲ. ಏನೇ ಇರಲಿ, ನಿಮ್ಮ ಆಸಕ್ತಿಯು ಖುಶಿಯನ್ನು ತರುತ್ತಿದೆ. ಕವನಗಳು ಲಭ್ಯವಾದ ತಕ್ಷಣ, ಅವುಗಳನ್ನು ಪ್ರಸ್ತುತಪಡಿಸುತ್ತೇನೆ.
ವಂದನೆಗಳು.

gronline said...

ಸಹೃದಯವಂತರಿಗೆ ಧನ್ಯವಾದಗಳು

Arathi said...

ಕಮ್ಮನೆ ನಾಲಗಿ ಚಾಚತ್ತಾಳ ಅನ್ನೊದರ ಹಿಂದೆ ಎಷ್ಟೆಲ್ಲಾ ಅರ್ಥಗಳಿವೆ ಸರ್‌.ಪ್ಯಾಟ್ಯಾಗ್ ಪಲ್ಯ ಮಾರುವಂತ ಹೆಣ್ಣುಮಕ್ಕಳ ಮನವನ್ನು ಇಂಚಿಂಚಾಗಿ ಗೃಹಿಸಿ , ಅಷ್ವೆ ಅಲ್ಲಾ ಕೆಲವು ಕಡೆ ಸುಂದರವಾಗಿ ಊಹಿಸಿರುವ ಅವರ ಕಾವ್ಯ ನೋಟಕ್ಕೆ ನಮೋ ಎನ್ನಬೇಕು.
ನಿಮ್ಮ ವಿಶ್ಲೇಷಣೆ ಆ ಕವನವನ್ನು ಇನ್ನಷ್ಟು ಒಳನೋಟಗಳಿಂದ ಚಂದಗಾಣಿಸಿದೆ ಸರ್.

sunaath said...

ಬೇಂದ್ರೆಯವರ ಪ್ರತಿಭೆ ಆಗಾಧವಾದದ್ದು, ಆರತಿ ಮೇಡಮ್!ಅವರ ಗ್ರಹಣಶಕ್ತಿ, ಪದಭಾಂಡಾರ ಇವಷ್ಟೇ ಅಲ್ಲ, ಕವನಗಳು ಅವರ ಒಳಗಿನಿಂದ ಚಿಲುಮೆಯಂತ ಚಿಮ್ಮುತ್ತಿದ್ದವು.ಅಂತಹ ಕವಿಯನ್ನು ಪಡೆದ ಕನ್ನಡಿಗರ ಪುಣ್ಯಕ್ಕೆ ಎಣೆ ಇಲ್ಲ!

Arathi said...

ನಿಜಕ್ಕೂ ಸರ್ ಅಂತಹ ಮೇರು ಕವಿವರ್ಯರನ್ನು ಪಡೆದ ಕನ್ನಡಿಗರು ಪುಣ್ಯವಂತರೆ ಸರಿ .
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಒಂದೇ ಸಾಲಿನಲ್ಲಿ ಬದುಕಿನ ಅರ್ಥವನ್ನೆಲ್ಲ ಕಟ್ಟಿಕೊಟ್ಟ
ವರಕವಿ ಬೇಂದ್ರೆಯವರಿಗೆ, ಕಾವ್ಯ ಸಾಹಿತ್ಯದ ವಿರಾಟ ಸ್ವರೂಪವನ್ನು ತೋರಿಸಿದ ಧಾರವಾಡದ ಪ್ರೀತಿಯ ಬೇಂದ್ರೆ ಅಜ್ಜರಿಗೆ ಮನದಾಳದ ನಮನಗಳು !

Unknown said...

ಎಷ್ಟೊಂದು ಚೆನ್ನಗಿನ ವಿವರಣೆ !

sunaath said...

ಧನ್ಯವಾದಗಳು, Unnownರೆ!