ವಸುಧೇಂದ್ರರು
ಬರೆದ ‘ಮೋಹನಸ್ವಾಮಿ’ ಕಥಾಸಂಕಲನದಲ್ಲಿ ೧೧ ಕತೆಗಳಿವೆ. ಇವುಗಳಲ್ಲಿ ೬ ಕಥೆಗಳು ಸಲಿಂಗಕಾಮಕ್ಕೆ ಸಂಬಂಧಿಸಿದ
ಕಥೆಗಳಾಗಿವೆ. ಇವುಗಳ ಪೈಕಿ ೫ ಕಥೆಗಳಲ್ಲಿ ಮೋಹನಸ್ವಾಮಿಯೇ ನಾಯಕ (ಕಿ)! ಮೋಹನಸ್ವಾಮಿ ಎನ್ನುವ ಹೆಸರೇ
ಈ ಕಥೆಗಳ ಆಂತರ್ಯವನ್ನು ಸೂಚಿಸುವಂತಿದೆ! ಸಲಿಂಗಕಾಮದ ಬಗೆಗೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು
ಹೊರಬಂದ ಬಳಿಕ, ಈ ವಿಷಯದಲ್ಲಿ ಸಾಕಷ್ಟು ಪರ ಹಾಗು ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ವಸುಧೇಂದ್ರರು
ಈ ಕತೆಗಳನ್ನು ಈ ವಿವಾದದ ನಂತರ ಬರೆದದ್ದಲ್ಲ. ಈ ಸಂಕಲನದಲ್ಲಿ ಪ್ರಕಟವಾದ ‘ಇಂತಹ’ ಎರಡು ಕಥೆಗಳನ್ನು
೨೦೦೯ನೆಯ ಇಸವಿಯಲ್ಲಿಯೇ ಅವರು ಬರೆದಿದ್ದಾರೆ. ಸಲಿಂಗಕಾಮಕ್ಕೆ ಸಂಬಂಧಿಸಿದ ಅವರ ಮತ್ತೊಂದು ಕಥೆಯು
ಈಗಾಗಲೇ ಬೇರೊಂದು ಕಥಾಸಂಕಲನದಲ್ಲಿ ಪ್ರಕಟವಾಗಿದೆ. ೨೦೧೧ರಲ್ಲಿ ಬರೆದ ಎರಡು ಕಥೆಗಳು ಹಾಗು ೨೦೧೩ರಲ್ಲಿ
ಬರೆದ ಮೂರು ಕಥೆಗಳು ಈ ಸಂಕಲನದಲ್ಲಿ ಅಡಕವಾಗಿವೆ. ಸಲಿಂಗಕಾಮದದ ಬಗೆಗೆ ಇಷ್ಟು ವಿಪುಲವಾಗಿ ಬರೆಯಲು ವಸುಧೇಂದ್ರರಿಗೆ ಇರುವ (ಸಾಹಿತ್ಯಕ) ಆಕರ್ಷಣೆ ಏನು? ನನಗೆ
ಅನಿಸುವುದು ಹೀಗೆ:
ವಸುಧೇಂದ್ರರ
ಇತರ ಕಥಾಸಂಕಲನಗಳಲ್ಲಿ ಇರುವ ಬೇರೆ ಬೇರೆ ಕಥೆಗಳನ್ನು ಓದಿದಾಗ, ಅವರ ಮನೋಧರ್ಮದ ಒಂದು ವಿಶೇಷತೆಯ ಅರಿವು
ಮೂಡುತ್ತದೆ. ಅಸಹಾಯಕತೆಯನ್ನು ಕಂಡಾಗ ವಸುಧೇಂದ್ರರ ಕರಳು ಮಿಡಿಯುತ್ತದೆ. ಈ ಅಸಹಾಯಕತೆಯು (೧)ಸಾಮಾಜಿಕ
ಕ್ರೂರತೆಯ ಅಥವಾ (೨)ವೈಯಕ್ತಿಕ ಪರಿಸ್ಥಿತಿಯ ಅಥವಾ (೩)ಮಾನಸಿಕ ಗುಣವಿಶೇಷದ ಪರಿಣಾಮವಾಗಿರಬಹುದು.
ವಸುಧೇಂದ್ರರು ಆ ಅಸಹಾಯಕ ವ್ಯಕ್ತಿಯನ್ನು ಅನುಕಂಪಮಾತ್ರದಿಂದ ನೋಡುತ್ತಾರೆ. ಮೋಹನಸ್ವಾಮಿಯ ಕಥೆಗಳಲ್ಲಿ
ವಸುಧೇಂದ್ರರಿಗೆ ತಮ್ಮ ನಾಯಕನು(ಕಿಯು) ಸಲಿಂಗಕಾಮಿಯಾಗುವ ಮಾನಸಿಕ ಅಥವಾ ವೈದ್ಯಕೀಯ ಕಾರಣಗಳು ಅಗಣ್ಯ.
ಈ ವ್ಯಕ್ತಿಯು ಪಡುವ ಅಸಹನೀಯ ಪಾಡು ಅವರ ಕಥೆಗಳ ಅಂತರಂಗವಾಗಿದೆ. ಅವರ ಇತರ ಕಥೆಗಳಲ್ಲಿಯೂ ಸಹ, ಕಥಾನಾಯಕರು
ಬಹುತೇಕವಾಗಿ ಅಸಹಾಯಮೂರ್ತಿಗಳು. ಅವರ ಸ್ತ್ರೀಪಾತ್ರಗಳು ಬದುಕನ್ನು ನೇರ್ಪಡಿಸಲು ಇನ್ನಿಲ್ಲದಂತೆ ಒದ್ದಾಡುತ್ತಿರುವ
ಸಹಿಷ್ಣುಗಳು.
ವಸುಧೇಂದ್ರರ
ಕಥೆಗಳ ವೈಶಿಷ್ಟ್ಯವೇನೆಂದರೆ, ಕಥಾವಸ್ತು ಇಲ್ಲಿ ಅಮುಖ್ಯ. ಈ ಕಥೆಗಳಲ್ಲಿ ಬರುವ ಪಾತ್ರಗಳ ಸ್ವಭಾವ,
ಸ್ವರೂಪಗಳೇ ಇಲ್ಲಿ ಪ್ರಧಾನವಾಗಿರುತ್ತವೆ. ಆ ಸ್ವಭಾವದ ಸುತ್ತಲೂ ಕಥೆಗಳು ಬೆಳೆಯುತ್ತವೆ. ನನಗೆ ಅತ್ಯಂತ
ಇಷ್ಟವಾದ ಅವರ ಕಥೆ ‘ಹೊಟ್ಟೆಯೊಳಗಿನ ಗುಟ್ಟು’ ಮತ್ತು ‘ಸೀಳು ಲೋಟ’ ಈ ವೈಶಿಷ್ಟ್ಯದ ಉತ್ಕೃಷ್ಟ ಮಾದರಿಗಳಾಗಿವೆ
ಎನ್ನಬಹುದು.
ಮೋಹನಸ್ವಾಮಿಯ
ಕಥೆಗಳಲ್ಲಿಯೂ ಸಹ ಈತ ಒಬ್ಬ ಮೆತುಗ ಸಲಿಂಗಕಾಮಿ. ಸಲಿಂಗಕಾಮಿಗಳಲ್ಲಿಯೂ ಎರಡು ಬಗೆಗಳಿವೆಯಲ್ಲವೆ? ಗಂಡಿನ
ಪಾತ್ರವನ್ನು ವಹಿಸುವ ಅಥವಾ ಹೆಣ್ಣಿನ ಪಾತ್ರವನ್ನು ವಹಿಸುವ ಸಲಿಂಗಕಾಮಿಗಳು. ಮೋಹನಸ್ವಾಮಿ ಹೆಣ್ಣಿಗ,
ಸದೃಢ ಗಂಡಸನ್ನು ಕಂಡರೆ ಆಸೆಪಡುವವನು. ನಮ್ಮ ಸಮಾಜವು ಯಾವ ಗುಣಗಳನ್ನು ಹೆಣ್ಣಿನ ಮೇಲೆ ಆರೋಪಿಸಿದೆಯೋ
ಆ ಗುಣಗಳನ್ನು ಹೊಂದಿರುವವನು. ಇಂತಹ ಪಾತ್ರವನ್ನು ಸಮರ್ಪಕವಾಗಿ ಸೃಷ್ಟಿಸುವ ಉದ್ದೇಶದಿಂದ ಲೇಖಕರು,
ಮೋಹನಸ್ವಾಮಿಯು ಮಾಡಲು ಬಯಸುವ ಅನೇಕ ಗೃಹಕೃತ್ಯಗಳನ್ನು ಹಾಗು ಸೇವಾಕಾರ್ಯಗಳನ್ನು ಸವಿವರವಾಗಿ ಬಣ್ಣಿಸುತ್ತಾರೆ.
ಮೋಹನಸ್ವಾಮಿ ಹಾಗು ಆತನ ಗೆಣೆಯನ ನಡುವೆ ಹೆಂಡತಿ ಹಾಗು ಗಂಡನ ನಡುವಿನ ತರಹದ ಸಂಬಂಧವಿತ್ತು ಎನ್ನುವದನ್ನು
ಚಿತ್ರಿಸುವ ವರ್ಣನೆಯು ಶೃಂಗಾರಪೂರ್ಣವಾಗಿದೆ ಎಂದು ಹೇಳಬಹುದು!
ಸಾಂಪ್ರದಾಯಕ
ಹೆಂಡತಿಯು ಗಂಡನನ್ನು ಮೆಚ್ಚಿಸಲು ಯಾವ ರೀತಿಯಲ್ಲಿ ಆತನ ವೈಯಕ್ತಿಕ ಸೇವೆಯನ್ನು ಹಾಗು ಆತ ಬಯಸುವ ರುಚಿ
ರುಚಿ ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುವುಳೊ, ಮೋಹನಸ್ವಾಮಿಯು ಅದನ್ನೆಲ್ಲ ಮಾಡುತ್ತಿರುತ್ತಾನೆ.
ಇಲ್ಲಿ
ಒಂದು ಪ್ರಶ್ನೆ ಬರುತ್ತದೆ. ಗಂಡನಿಗೆ ಅಡಿಯಾಳಾಗಿ ಇರುವದೇ ಹೆಣ್ಣಿಗೆ ಆದರ್ಶವೆ? ವಸುಧೇಂದ್ರರ ಅಭಿಪ್ರಾಯ
ಹಾಗಿರಲಿಕ್ಕಿಲ್ಲ; ಆದರೆ ಈ ಕಥೆಯಲ್ಲಿಯ ಪಾತ್ರದ ಮನೋಧರ್ಮ ಹಾಗಿದೆ ಎಂದು ನಾನು ಭಾವಿಸುತ್ತೇನೆ. ಮೋಹನಸ್ವಾಮಿಯ
ಕಥೆಗಳ ಬಗೆಗೆ ಹೆಚ್ಚಿನ ವಿವರಗಳನ್ನು ಕೊಟ್ಟರೆ, ಇನ್ನು ಮುಂದೆ ಓದುವಂತಹ ವಾಚಕರಿಗೆ ಕಥೆಗಳ ಸ್ವಾರಸ್ಯವು
ಭಂಗವಾದೀತೆನ್ನುವ ಭಯದಿಂದ, ನಾನು ವಿವರಗಳನ್ನು ಇಲ್ಲಿಗೇ ನಿಲ್ಲಿಸುತ್ತೇನೆ.
ಈ
ಸಂಕಲನವನ್ನು ವಸುಧೇಂದ್ರರು ಅರ್ಪಣೆ ಮಾಡಿದ್ದು ಈ ರೀತಿಯಾಗಿದೆ:
ಮೋಹನಸ್ವಾಮಿಯ ಗೆಳೆಯರಿಗೆ
ಮೋಹನಸ್ವಾಮಿಯ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗೆ
ಮೋಹನಸ್ವಾಮಿಯ ಅಪ್ಪ, ಅಜ್ಜ, ಮುತ್ತಜ್ಜರಿಗೆ
ಇಲ್ಲಿ
ಗಮನಿಸಬೇಕಾದ ವಿಷಯವೆಂದರೆ, ಲೇಖಕರು ಮೋಹನಸ್ವಾಮಿಗೆ ಮಕ್ಕಳನ್ನು ದಯಪಾಲಿಸಿದ್ದಾರೆ. ಅರ್ಥಾತ್ ಮೋಹನಸ್ವಾಮಿಯು
ಕಾಲಾನುಕ್ರಮದಲ್ಲಿ ಸಲಿಂಗಕಾಮವನ್ನು ಬಿಟ್ಟು ‘ಸಹಜ ವ್ಯಕ್ತಿ’ಯಾಗುತ್ತಾನೆ; ಮದುವೆಯಾಗಿ (?) ಅಥವಾ
ಆಗದೆ (!) ಮಕ್ಕಳನ್ನು ಪಡೆಯುತ್ತಾನೆ ಇತ್ಯಾದಿ. ಹಾಗಿದ್ದರೆ,
ತಮ್ಮ ಅರ್ಪಣೆಯ ಮೂಲಕ ವಸುಧೇಂದ್ರರು ವಾಚಕರಿಗೆ ಏನು ಸಂದೇಶ ನೀಡಬಯಸುತ್ತಿದ್ದಾರೆ? ಸಲಿಂಗಕಾಮಿಯು
ವಿಲಿಂಗಕಾಮಿಯಾಗುವುದು ಸಹಜಸ್ವಭಾವ ಎಂದಲ್ಲವೆ? ಅಥವಾ ಇದು ನಮ್ಮ ಸಮಾಜವ್ಯವಸ್ಥೆಯಲ್ಲಿ ಅನಿವಾರ್ಯ
ಎಂದೆ? ಅದಲ್ಲದೆ, ಮುತ್ತಜ್ಜರನ್ನು ಹಾಗು ಮರಿಮೊಮ್ಮಕ್ಕಳನ್ನು ಉಲ್ಲೇಖಿಸುವ ಮೂಲಕ ಸಲಿಂಗಕಾಮವು ಅನಾದಿ-ಅನಂತವಾಗಿದೆ
ಎಂದು ವಸುಧೇಂದ್ರರು ಸೂಚಿಸುತ್ತಿದ್ದಾರೆಯೆ? ಅಥವಾ ಇದು ‘ಅಸಹಜ ವ್ಯಕ್ತಿಗಳ’ ಬಗೆಗೆ ಅವರು ತೋರುತ್ತಿರುವ
ಸಹಾನುಭೂತಿಯೆ?
ಈ
ಕಥಾಸಂಕಲನದ ಮೋಹನಸ್ವಾಮಿಯ ಕಥೆಗಳ ಸರಣಿಯಲ್ಲಿ ‘ತುತ್ತ ತುದಿಯಲ್ಲಿ ಮೊತ್ತ ಮೊದಲು’ ಎನ್ನುವುದು ಮೊದಲನೆಯ
ಕಥೆ; ‘ಕಿಲಿಮಂಜಾರೊ’ ಕೊನೆಯ ಕಥೆ. ಮೊದಲನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ತೊಳಲಾಟದ ಚಿತ್ರವಿದ್ದರೆ
ಕೊನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ಹೋರಾಟದ ದರ್ಶನ ನಮಗಾಗುತ್ತದೆ. ತನ್ನ ವಿಭಿನ್ನ ವರ್ತನೆಯಿಂದಾಗಿ
ಸಮಾಜಕ್ಕೆ ಹೆದರುತ್ತ, ಮಖೀನ ವ್ಯಕ್ತಿಯಾದ ಮೋಹನಸ್ವಾಮಿ ಇಲ್ಲಿ ಕಿಲಿಮಂಜಾರೊ ಪರ್ವತದ ದುರ್ಗಮ ಶಿಖರವನ್ನು
ಚಾರಣಿಸುವಲ್ಲಿ ಯಶಸ್ವಿಯಾಗುತ್ತಾನೆ.
ಈ
ಮೂಲಕ ಲೇಖಕರು ಕೊಡುವ ಸಂದೇಶವೇನು?—‘ಆತ ತನ್ನನ್ನು ತಾನೇ ಗೆದೆಯುತ್ತಾನೆ’ ಎಂದಲ್ಲವೆ? ತನ್ನ ಭಿನ್ನ
ವ್ಯಕ್ತಿತ್ವದಿಂದ ಇತರರು ತನ್ನನ್ನು ಕೀಳಾಗಿ ನೋಡುವದನ್ನು ನಾನು ಲೆಕ್ಕಿಸುವದಿಲ್ಲ ಎನ್ನುವ ಭಾವ ಇದರಲ್ಲಿದೆಯೆ?
ಮೋಹನಸ್ವಾಮಿ
ತುಂಬ ಪ್ರೀತಿಸಬಹುದಾದ ಪಾತ್ರ. (ಅಯ್ಯೊ, ನಾನು ಸಲಿಂಗಕಾಮಿಯಲ್ಲ!) ಅವನಿಗೆ ನಾವು ಹೇಳಬಹುದಾದ ಕೊನೆಯ
ಮಾತೊಂದು ಹೀಗಿದೆ: ಹಕೂನ ಮಟಾಟಾ!
‘ತಗಣಿ’
ಈ ಸಂಕಲನದ ಮತ್ತೊಂದು ಸಲಿಂಗಕಾಮಿ ಕಥೆ. ಹೊರಗಿನ ಯಾವುದೇ ಒತ್ತಡವಿಲ್ಲದೆ, ದೈಹಿಕವಾಗಿ ದಷ್ಟಪುಷ್ಟ
ಗಂಡಸಾಗಿದ್ದರೂ ಸಹ ಮಾನಸಿಕವಾಗಿ ಹೆಣ್ಣಾಗಿರುವ ವ್ಯಕ್ತಿಯ ದುರಂತ ಕಥೆ ಇದು. ಸಮಾಜದಲ್ಲಿ ಹಾಗು ತನ್ನ
ಕುಟುಂಬದಲ್ಲಿ ಆತ ಯಾವ ರೀತಿಯಲ್ಲಿ ಅವಹೇಳನೆಗೆ ಈಡಾಗುತ್ತಾನೆ ಎನ್ನುವ ಚಿತ್ರ ಇಲ್ಲಿದೆ.
ಈ ಕಥಾಸಂಕಲನದಲ್ಲಿ
ನಾನು ಬಹಳವಾಗಿ ಮೆಚ್ಚಿದ ಎರಡು ಕಥೆಗಳೆಂದರೆ: (೧) ದುರ್ಭಿಕ್ಷ ಕಾಲ ಮತ್ತು (೨) ಪೂರ್ಣಾಹುತಿ
ವರ್ತಮಾನ
ಸಮಾಜದ ವಿಶಿಷ್ಟ ಚಿತ್ರಣ ಈ ಎರಡು ಕಥೆಗಳಲ್ಲಿದೆ.
ಈ ಸಂಕಲನದ
ಕಥೆಗಳ ಬಗೆಗೆ ನಾನು ಸ್ವಲ್ಪ ವಿವರವಾಗಿ ಬರೆದರೂ ಸಹ ಇನ್ನು ಮುಂದಿನ ವಾಚಕರಿಗೆ ರಸಭಂಗವಾದೀತು
ಎನ್ನುವ ಭಯದಿಂದ
ನಾನು ಇಲ್ಲಿಗೇ ಮುಕ್ತಾಯಗೊಳಿಸುತ್ತಿದ್ದೇನೆ. ವಸುಧೇಂದ್ರರಿಗೆ ಅಭಿನಂದನೆಗಳು.