Sunday, January 12, 2014

ಮೋಹನಸ್ವಾಮಿ.....ವಸುಧೇಂದ್ರ



ವಸುಧೇಂದ್ರರು ಬರೆದ ‘ಮೋಹನಸ್ವಾಮಿ’ ಕಥಾಸಂಕಲನದಲ್ಲಿ ೧೧ ಕತೆಗಳಿವೆ. ಇವುಗಳಲ್ಲಿ ೬ ಕಥೆಗಳು ಸಲಿಂಗಕಾಮಕ್ಕೆ ಸಂಬಂಧಿಸಿದ ಕಥೆಗಳಾಗಿವೆ. ಇವುಗಳ ಪೈಕಿ ೫ ಕಥೆಗಳಲ್ಲಿ ಮೋಹನಸ್ವಾಮಿಯೇ ನಾಯಕ (ಕಿ)! ಮೋಹನಸ್ವಾಮಿ ಎನ್ನುವ ಹೆಸರೇ ಈ ಕಥೆಗಳ ಆಂತರ್ಯವನ್ನು ಸೂಚಿಸುವಂತಿದೆ! ಸಲಿಂಗಕಾಮದ ಬಗೆಗೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಂದ ಬಳಿಕ, ಈ ವಿಷಯದಲ್ಲಿ ಸಾಕಷ್ಟು ಪರ ಹಾಗು ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ವಸುಧೇಂದ್ರರು ಈ ಕತೆಗಳನ್ನು ಈ ವಿವಾದದ ನಂತರ ಬರೆದದ್ದಲ್ಲ. ಈ ಸಂಕಲನದಲ್ಲಿ ಪ್ರಕಟವಾದ ‘ಇಂತಹ’ ಎರಡು ಕಥೆಗಳನ್ನು ೨೦೦೯ನೆಯ ಇಸವಿಯಲ್ಲಿಯೇ ಅವರು ಬರೆದಿದ್ದಾರೆ. ಸಲಿಂಗಕಾಮಕ್ಕೆ ಸಂಬಂಧಿಸಿದ ಅವರ ಮತ್ತೊಂದು ಕಥೆಯು ಈಗಾಗಲೇ ಬೇರೊಂದು ಕಥಾಸಂಕಲನದಲ್ಲಿ ಪ್ರಕಟವಾಗಿದೆ. ೨೦೧೧ರಲ್ಲಿ ಬರೆದ ಎರಡು ಕಥೆಗಳು ಹಾಗು ೨೦೧೩ರಲ್ಲಿ ಬರೆದ ಮೂರು ಕಥೆಗಳು ಈ ಸಂಕಲನದಲ್ಲಿ ಅಡಕವಾಗಿವೆ. ಸಲಿಂಗಕಾಮದದ ಬಗೆಗೆ ಇಷ್ಟು ವಿಪುಲವಾಗಿ ಬರೆಯಲು  ವಸುಧೇಂದ್ರರಿಗೆ ಇರುವ (ಸಾಹಿತ್ಯಕ) ಆಕರ್ಷಣೆ ಏನು? ನನಗೆ ಅನಿಸುವುದು ಹೀಗೆ:

ವಸುಧೇಂದ್ರರ ಇತರ ಕಥಾಸಂಕಲನಗಳಲ್ಲಿ ಇರುವ ಬೇರೆ ಬೇರೆ ಕಥೆಗಳನ್ನು ಓದಿದಾಗ, ಅವರ ಮನೋಧರ್ಮದ ಒಂದು ವಿಶೇಷತೆಯ ಅರಿವು ಮೂಡುತ್ತದೆ. ಅಸಹಾಯಕತೆಯನ್ನು ಕಂಡಾಗ ವಸುಧೇಂದ್ರರ ಕರಳು ಮಿಡಿಯುತ್ತದೆ. ಈ ಅಸಹಾಯಕತೆಯು (೧)ಸಾಮಾಜಿಕ ಕ್ರೂರತೆಯ ಅಥವಾ (೨)ವೈಯಕ್ತಿಕ ಪರಿಸ್ಥಿತಿಯ ಅಥವಾ (೩)ಮಾನಸಿಕ ಗುಣವಿಶೇಷದ ಪರಿಣಾಮವಾಗಿರಬಹುದು. ವಸುಧೇಂದ್ರರು ಆ ಅಸಹಾಯಕ ವ್ಯಕ್ತಿಯನ್ನು ಅನುಕಂಪಮಾತ್ರದಿಂದ ನೋಡುತ್ತಾರೆ. ಮೋಹನಸ್ವಾಮಿಯ ಕಥೆಗಳಲ್ಲಿ ವಸುಧೇಂದ್ರರಿಗೆ ತಮ್ಮ ನಾಯಕನು(ಕಿಯು) ಸಲಿಂಗಕಾಮಿಯಾಗುವ ಮಾನಸಿಕ ಅಥವಾ ವೈದ್ಯಕೀಯ ಕಾರಣಗಳು ಅಗಣ್ಯ. ಈ ವ್ಯಕ್ತಿಯು ಪಡುವ ಅಸಹನೀಯ ಪಾಡು ಅವರ ಕಥೆಗಳ ಅಂತರಂಗವಾಗಿದೆ. ಅವರ ಇತರ ಕಥೆಗಳಲ್ಲಿಯೂ ಸಹ, ಕಥಾನಾಯಕರು ಬಹುತೇಕವಾಗಿ ಅಸಹಾಯಮೂರ್ತಿಗಳು. ಅವರ ಸ್ತ್ರೀಪಾತ್ರಗಳು ಬದುಕನ್ನು ನೇರ್ಪಡಿಸಲು ಇನ್ನಿಲ್ಲದಂತೆ ಒದ್ದಾಡುತ್ತಿರುವ ಸಹಿಷ್ಣುಗಳು.

ವಸುಧೇಂದ್ರರ ಕಥೆಗಳ ವೈಶಿಷ್ಟ್ಯವೇನೆಂದರೆ, ಕಥಾವಸ್ತು ಇಲ್ಲಿ ಅಮುಖ್ಯ. ಈ ಕಥೆಗಳಲ್ಲಿ ಬರುವ ಪಾತ್ರಗಳ ಸ್ವಭಾವ, ಸ್ವರೂಪಗಳೇ ಇಲ್ಲಿ ಪ್ರಧಾನವಾಗಿರುತ್ತವೆ. ಆ ಸ್ವಭಾವದ ಸುತ್ತಲೂ ಕಥೆಗಳು ಬೆಳೆಯುತ್ತವೆ. ನನಗೆ ಅತ್ಯಂತ ಇಷ್ಟವಾದ ಅವರ ಕಥೆ ‘ಹೊಟ್ಟೆಯೊಳಗಿನ ಗುಟ್ಟು’ ಮತ್ತು ‘ಸೀಳು ಲೋಟ’ ಈ ವೈಶಿಷ್ಟ್ಯದ ಉತ್ಕೃಷ್ಟ ಮಾದರಿಗಳಾಗಿವೆ ಎನ್ನಬಹುದು.

ಮೋಹನಸ್ವಾಮಿಯ ಕಥೆಗಳಲ್ಲಿಯೂ ಸಹ ಈತ ಒಬ್ಬ ಮೆತುಗ ಸಲಿಂಗಕಾಮಿ. ಸಲಿಂಗಕಾಮಿಗಳಲ್ಲಿಯೂ ಎರಡು ಬಗೆಗಳಿವೆಯಲ್ಲವೆ? ಗಂಡಿನ ಪಾತ್ರವನ್ನು ವಹಿಸುವ ಅಥವಾ ಹೆಣ್ಣಿನ ಪಾತ್ರವನ್ನು ವಹಿಸುವ ಸಲಿಂಗಕಾಮಿಗಳು. ಮೋಹನಸ್ವಾಮಿ ಹೆಣ್ಣಿಗ, ಸದೃಢ ಗಂಡಸನ್ನು ಕಂಡರೆ ಆಸೆಪಡುವವನು. ನಮ್ಮ ಸಮಾಜವು ಯಾವ ಗುಣಗಳನ್ನು ಹೆಣ್ಣಿನ ಮೇಲೆ ಆರೋಪಿಸಿದೆಯೋ ಆ ಗುಣಗಳನ್ನು ಹೊಂದಿರುವವನು. ಇಂತಹ ಪಾತ್ರವನ್ನು ಸಮರ್ಪಕವಾಗಿ ಸೃಷ್ಟಿಸುವ ಉದ್ದೇಶದಿಂದ ಲೇಖಕರು, ಮೋಹನಸ್ವಾಮಿಯು ಮಾಡಲು ಬಯಸುವ ಅನೇಕ ಗೃಹಕೃತ್ಯಗಳನ್ನು ಹಾಗು ಸೇವಾಕಾರ್ಯಗಳನ್ನು ಸವಿವರವಾಗಿ ಬಣ್ಣಿಸುತ್ತಾರೆ. ಮೋಹನಸ್ವಾಮಿ ಹಾಗು ಆತನ ಗೆಣೆಯನ ನಡುವೆ ಹೆಂಡತಿ ಹಾಗು ಗಂಡನ ನಡುವಿನ ತರಹದ ಸಂಬಂಧವಿತ್ತು ಎನ್ನುವದನ್ನು ಚಿತ್ರಿಸುವ ವರ್ಣನೆಯು ಶೃಂಗಾರಪೂರ್ಣವಾಗಿದೆ ಎಂದು ಹೇಳಬಹುದು!

ಸಾಂಪ್ರದಾಯಕ ಹೆಂಡತಿಯು ಗಂಡನನ್ನು ಮೆಚ್ಚಿಸಲು ಯಾವ ರೀತಿಯಲ್ಲಿ ಆತನ ವೈಯಕ್ತಿಕ ಸೇವೆಯನ್ನು ಹಾಗು ಆತ ಬಯಸುವ ರುಚಿ ರುಚಿ ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುವುಳೊ, ಮೋಹನಸ್ವಾಮಿಯು ಅದನ್ನೆಲ್ಲ ಮಾಡುತ್ತಿರುತ್ತಾನೆ.
ಇಲ್ಲಿ ಒಂದು ಪ್ರಶ್ನೆ ಬರುತ್ತದೆ. ಗಂಡನಿಗೆ ಅಡಿಯಾಳಾಗಿ ಇರುವದೇ ಹೆಣ್ಣಿಗೆ ಆದರ್ಶವೆ? ವಸುಧೇಂದ್ರರ ಅಭಿಪ್ರಾಯ ಹಾಗಿರಲಿಕ್ಕಿಲ್ಲ; ಆದರೆ ಈ ಕಥೆಯಲ್ಲಿಯ ಪಾತ್ರದ ಮನೋಧರ್ಮ ಹಾಗಿದೆ ಎಂದು ನಾನು ಭಾವಿಸುತ್ತೇನೆ. ಮೋಹನಸ್ವಾಮಿಯ ಕಥೆಗಳ ಬಗೆಗೆ ಹೆಚ್ಚಿನ ವಿವರಗಳನ್ನು ಕೊಟ್ಟರೆ, ಇನ್ನು ಮುಂದೆ ಓದುವಂತಹ ವಾಚಕರಿಗೆ ಕಥೆಗಳ ಸ್ವಾರಸ್ಯವು ಭಂಗವಾದೀತೆನ್ನುವ ಭಯದಿಂದ, ನಾನು ವಿವರಗಳನ್ನು ಇಲ್ಲಿಗೇ ನಿಲ್ಲಿಸುತ್ತೇನೆ.

ಈ ಸಂಕಲನವನ್ನು ವಸುಧೇಂದ್ರರು ಅರ್ಪಣೆ ಮಾಡಿದ್ದು ಈ ರೀತಿಯಾಗಿದೆ:
                                                 ಮೋಹನಸ್ವಾಮಿಯ ಗೆಳೆಯರಿಗೆ
        ಮೋಹನಸ್ವಾಮಿಯ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗೆ
                              ಮೋಹನಸ್ವಾಮಿಯ ಅಪ್ಪ, ಅಜ್ಜ, ಮುತ್ತಜ್ಜರಿಗೆ

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಲೇಖಕರು ಮೋಹನಸ್ವಾಮಿಗೆ ಮಕ್ಕಳನ್ನು ದಯಪಾಲಿಸಿದ್ದಾರೆ. ಅರ್ಥಾತ್ ಮೋಹನಸ್ವಾಮಿಯು ಕಾಲಾನುಕ್ರಮದಲ್ಲಿ ಸಲಿಂಗಕಾಮವನ್ನು ಬಿಟ್ಟು ‘ಸಹಜ ವ್ಯಕ್ತಿ’ಯಾಗುತ್ತಾನೆ; ಮದುವೆಯಾಗಿ (?) ಅಥವಾ ಆಗದೆ (!) ಮಕ್ಕಳನ್ನು ಪಡೆಯುತ್ತಾನೆ ಇತ್ಯಾದಿ.  ಹಾಗಿದ್ದರೆ, ತಮ್ಮ ಅರ್ಪಣೆಯ ಮೂಲಕ ವಸುಧೇಂದ್ರರು ವಾಚಕರಿಗೆ ಏನು ಸಂದೇಶ ನೀಡಬಯಸುತ್ತಿದ್ದಾರೆ? ಸಲಿಂಗಕಾಮಿಯು ವಿಲಿಂಗಕಾಮಿಯಾಗುವುದು ಸಹಜಸ್ವಭಾವ ಎಂದಲ್ಲವೆ? ಅಥವಾ ಇದು ನಮ್ಮ ಸಮಾಜವ್ಯವಸ್ಥೆಯಲ್ಲಿ ಅನಿವಾರ್ಯ ಎಂದೆ? ಅದಲ್ಲದೆ, ಮುತ್ತಜ್ಜರನ್ನು ಹಾಗು ಮರಿಮೊಮ್ಮಕ್ಕಳನ್ನು ಉಲ್ಲೇಖಿಸುವ ಮೂಲಕ ಸಲಿಂಗಕಾಮವು ಅನಾದಿ-ಅನಂತವಾಗಿದೆ ಎಂದು ವಸುಧೇಂದ್ರರು ಸೂಚಿಸುತ್ತಿದ್ದಾರೆಯೆ? ಅಥವಾ ಇದು ‘ಅಸಹಜ ವ್ಯಕ್ತಿಗಳ’ ಬಗೆಗೆ ಅವರು ತೋರುತ್ತಿರುವ ಸಹಾನುಭೂತಿಯೆ?

ಈ ಕಥಾಸಂಕಲನದ ಮೋಹನಸ್ವಾಮಿಯ ಕಥೆಗಳ ಸರಣಿಯಲ್ಲಿ ‘ತುತ್ತ ತುದಿಯಲ್ಲಿ ಮೊತ್ತ ಮೊದಲು’ ಎನ್ನುವುದು ಮೊದಲನೆಯ ಕಥೆ; ‘ಕಿಲಿಮಂಜಾರೊ’ ಕೊನೆಯ ಕಥೆ. ಮೊದಲನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ತೊಳಲಾಟದ ಚಿತ್ರವಿದ್ದರೆ ಕೊನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ಹೋರಾಟದ ದರ್ಶನ ನಮಗಾಗುತ್ತದೆ. ತನ್ನ ವಿಭಿನ್ನ ವರ್ತನೆಯಿಂದಾಗಿ ಸಮಾಜಕ್ಕೆ ಹೆದರುತ್ತ, ಮಖೀನ ವ್ಯಕ್ತಿಯಾದ ಮೋಹನಸ್ವಾಮಿ ಇಲ್ಲಿ ಕಿಲಿಮಂಜಾರೊ ಪರ್ವತದ ದುರ್ಗಮ ಶಿಖರವನ್ನು ಚಾರಣಿಸುವಲ್ಲಿ ಯಶಸ್ವಿಯಾಗುತ್ತಾನೆ.

ಈ ಮೂಲಕ ಲೇಖಕರು ಕೊಡುವ ಸಂದೇಶವೇನು?—‘ಆತ ತನ್ನನ್ನು ತಾನೇ ಗೆದೆಯುತ್ತಾನೆ’ ಎಂದಲ್ಲವೆ? ತನ್ನ ಭಿನ್ನ ವ್ಯಕ್ತಿತ್ವದಿಂದ ಇತರರು ತನ್ನನ್ನು ಕೀಳಾಗಿ ನೋಡುವದನ್ನು ನಾನು ಲೆಕ್ಕಿಸುವದಿಲ್ಲ ಎನ್ನುವ ಭಾವ ಇದರಲ್ಲಿದೆಯೆ?

ಮೋಹನಸ್ವಾಮಿ ತುಂಬ ಪ್ರೀತಿಸಬಹುದಾದ ಪಾತ್ರ. (ಅಯ್ಯೊ, ನಾನು ಸಲಿಂಗಕಾಮಿಯಲ್ಲ!) ಅವನಿಗೆ ನಾವು ಹೇಳಬಹುದಾದ ಕೊನೆಯ ಮಾತೊಂದು ಹೀಗಿದೆ: ಹಕೂನ ಮಟಾಟಾ!

‘ತಗಣಿ’ ಈ ಸಂಕಲನದ ಮತ್ತೊಂದು ಸಲಿಂಗಕಾಮಿ ಕಥೆ. ಹೊರಗಿನ ಯಾವುದೇ ಒತ್ತಡವಿಲ್ಲದೆ, ದೈಹಿಕವಾಗಿ ದಷ್ಟಪುಷ್ಟ ಗಂಡಸಾಗಿದ್ದರೂ ಸಹ ಮಾನಸಿಕವಾಗಿ ಹೆಣ್ಣಾಗಿರುವ ವ್ಯಕ್ತಿಯ ದುರಂತ ಕಥೆ ಇದು. ಸಮಾಜದಲ್ಲಿ ಹಾಗು ತನ್ನ ಕುಟುಂಬದಲ್ಲಿ ಆತ ಯಾವ ರೀತಿಯಲ್ಲಿ ಅವಹೇಳನೆಗೆ ಈಡಾಗುತ್ತಾನೆ ಎನ್ನುವ ಚಿತ್ರ ಇಲ್ಲಿದೆ.


ಈ ಕಥಾಸಂಕಲನದಲ್ಲಿ ನಾನು ಬಹಳವಾಗಿ ಮೆಚ್ಚಿದ ಎರಡು ಕಥೆಗಳೆಂದರೆ: (೧) ದುರ್ಭಿಕ್ಷ ಕಾಲ ಮತ್ತು (೨) ಪೂರ್ಣಾಹುತಿ
ವರ್ತಮಾನ ಸಮಾಜದ ವಿಶಿಷ್ಟ ಚಿತ್ರಣ ಈ ಎರಡು ಕಥೆಗಳಲ್ಲಿದೆ.

ಈ ಸಂಕಲನದ ಕಥೆಗಳ ಬಗೆಗೆ ನಾನು ಸ್ವಲ್ಪ ವಿವರವಾಗಿ ಬರೆದರೂ ಸಹ ಇನ್ನು ಮುಂದಿನ ವಾಚಕರಿಗೆ ರಸಭಂಗವಾದೀತು 
ಎನ್ನುವ ಭಯದಿಂದ ನಾನು ಇಲ್ಲಿಗೇ ಮುಕ್ತಾಯಗೊಳಿಸುತ್ತಿದ್ದೇನೆ. ವಸುಧೇಂದ್ರರಿಗೆ ಅಭಿನಂದನೆಗಳು.

Saturday, January 4, 2014

ಗುಡಿಯ ನೋಡಿರಣ್ಣಾ, ದೇಹದ ಗುಡಿಯ ನೋಡಿರಣ್ಣಾ............ಶಿಶುನಾಳ ಶರೀಫರು



ಗುಡಿಯ ನೋಡಿರಣ್ಣಾ ದೇಹದ         
ಗುಡಿಯ ನೋಡಿರಣ್ಣಾ                    ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ                     ||ಅ.ಪ.||

ಮೂರು ಮೂಲೆಯಾ ಕಲ್ಲು ಅದರೊಳು           
ಜಾರುತಿಹದು ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ                    ||೧||

ಆರು ಮೂರನು ಕಟ್ಟಿ ಮೇಲಕೆ
ಏರುವವನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ                    ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿರಾಜ ಶಿಶುನಾಳಧೀಶನ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ                    ||೩||

ಮುನ್ನೋಟ:
ಮಾನವಶರೀರವು ವಿಜ್ಞಾನಿಗಳಿಗೆ ಒಂದು ಭೌತಿಕ ವಸ್ತು ಮಾತ್ರ. ಈ ವಸ್ತುವನ್ನು ಅವರು ತುಂಡುತುಂಡಾಗಿ ಸಿಗಿದು ಅಭ್ಯಸಿಸುತ್ತಾರೆ. ವಿರಕ್ತರಿಗೆ ಈ ದೇಹವು ಹೇಯ ವಿಷಯ. ಅಕ್ಕಮಹಾದೇವಿಯು ಇದನ್ನು ‘ಮಲಮೂತ್ರದ ಗುಂಡಿ’ ಎಂದು ಕರೆದಿದ್ದಾಳೆ. ಪುರಂದರದಾಸರೂ ಸಹ ‘ನಂಬದಿರು ಈ ದೇಹ ನಿತ್ಯವಲ್ಲ; ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ| ಎಲವು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ; ಒಳಗೆ ಮಲಮೂತ್ರಾದಿ ಕ್ರಿಮಿಗಳಿರವು’ ಎಂದು ಜರೆದಿದ್ದಾರೆ. ಕನಕದಾಸರಂತೂ ‘ಘೋರ ನರಕದ ತನುವೆಂದು ತನ್ನಲಿ ತಿಳಿದು…’ ಎಂದು ಉದ್ಗರಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಆದರೆ ಕೆಲವು ಸಾಧಕರಿಗೆ ಈ ದೇಹವು ಒಂದು ಉಪಕರಣ. ಅಷ್ಟೇ ಅಲ್ಲ, ಈ ದೇಹದಲ್ಲಿರುವದು ಪವಿತ್ರವಾದ  ಭಗವತ್ ಚೈತನ್ಯ. ಸಾಧನೆಯಿಂದಲೇ ಆ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎನ್ನುವುದು ಅವರ ಮತ. ಇಂತಹ ಸಾಧಕರನ್ನು ಯೋಗಿಗಳು ಹಾಗು ತಾಂತ್ರಿಕರು ಎಂದು ವಿಂಗಡಿಸಬಹುದು. ತಾಂತ್ರಿಕರಲ್ಲಿ ವಾಮಮಾರ್ಗಿಗಳು, ದಕ್ಷಿಣಮಾರ್ಗಿಗಳು ಹಾಗು ಮಿಶ್ರರು ಎನ್ನುವ ಮೂರು ವಿಭಾಗಗಳನ್ನು ಮಾಡಬಹುದು. ಇದಲ್ಲದೆ ಕಠಿಣ ಶಾರೀರಕ ಸಾಧನೆಯ ಹಠಯೋಗಿಗಳನ್ನೂ ನಾವು ಇಲ್ಲಿ ಕಾಣಬಹುದು.

ಅರವಿಂದ ಮಹರ್ಷಿಗಳು ಯೋಗಿಗಳಾಗಿದ್ದರು. ರಾಮಕೃಷ್ಣ ಪರಮಹಂಸರು ತಾಂತ್ರಿಕ ಸಿದ್ಧಿಯನ್ನು ಪಡೆದವರಾಗಿದ್ದರು. ಶಿಶುನಾಳ ಶರೀಫರೂ ಸಹ ಹತ್ತೊಂಬತ್ತನೆಯ ಶತಮಾನದ ಸಾಧಕವರೇಣ್ಯರಾಗಿದ್ದರು. ತಮ್ಮ ದೇಹದಲ್ಲಿಯೇ ಭಗವತ್ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಂಡ ಸಿದ್ಧರಾಗಿದ್ದರು.

ಕವನದ ತಾತ್ವಿಕ ಹಿನ್ನೆಲೆ:
ವಿಶ್ವದ ಸೃಷ್ಟಿಗೆ ಮೊದಲು ಇದ್ದಂತಹ ಒಂದೇ ಭಗವತ್ ಚೈತನ್ಯವು ಸೃಷ್ಟಿಯ ಉದ್ದೇಶದಿಂದ ಪುರುಷ ಹಾಗು ಪ್ರಕೃತಿ ಎಂದು ಎರಡು ಭಾಗವಾಯಿತು. ಪುರುಷ ಎಂದರೆ ಪುಲ್ಲಿಂಗ ಎನ್ನುವ ಅರ್ಥವಲ್ಲ. ಪುರುಷ ಎಂದರೆ the experiencing self. ( ಪುರೇ ಶೀಯತೆ ಇತಿ ಪುರುಷ: = The self who stays in a body.)

ಪ್ರಕೃತಿ ಎಂದರೆ ಸ್ತ್ರೀಲಿಂಗವಲ್ಲ. ಇದು ಪುರುಷನಿಗೆ ವಿವಿಧ ಅನುಭವಗಳನ್ನು ಕೊಡುವ ಅವಸ್ಥೆ. ಆದುದರಿಂದ ನಮ್ಮ ದೇಹವು ನಮ್ಮ ಪ್ರಕೃತಿಯಾಗಿದೆ ಹಾಗು ಇದರಲ್ಲಿ ವಾಸಿಸುವ `ನಾನು’ (= ಆತ್ಮವು) ಪುರುಷವಾಗಿದೆ. ವಿವಿಧ ಪ್ರಕೃತಿಗಳಲ್ಲಿ ಅಂದರೆ ವಿವಿಧ ಯೋನಿಗಳಲ್ಲಿ ಹಾಗು ಭಿನ್ನ ಲಿಂಗಗಳಲ್ಲಿ ಜನಿಸಿದ ಪುರುಷವು ತಾನೇ ಅದು ಎನ್ನುವ ಭ್ರಮೆಯಲ್ಲಿ ಮುಳುಗಿರುತ್ತದೆ.  ಸಾಧಕನು ತನ್ನ ಸಾಧನೆಯ ಮೂಲಕ ಪ್ರಜ್ಞೆಯ ಮೇಲಿನ ಸ್ತರಗಳಿಗೆ ಹೋಗುತ್ತಾನೆ. ಈ ಪ್ರಯಾಣದಲ್ಲಿ ಅವನಿಗೆ ಅನೇಕ ಅನುಭವಗಳು ಆಗುತ್ತವೆ; ಅನೇಕ ಸಿದ್ಧಿಗಳೂ ಬರಬಹುದು. ಸಾಧಕನಿಗೆ ದೇಹಭಾವ ಹೋಗಿ ದೇವಭಾವವು ಬರಲು ತೊಡಗುತ್ತದೆ. ಆ ಸಮಯದಲ್ಲಿ ಆತನು ಪಡೆಯುವ ಅನುಭವವೆಂದರೆ: ಈ ದೇಹವು ಪರಾಚೈತನ್ಯದ ಆವಾಸವಾಗಿದೆ ಅಂದರೆ ದೇವರ ಗುಡಿಯಾಗಿದೆ. ಇದನ್ನೇ ಶರೀಫರು ಹೀಗೆ ಹಾಡಿದ್ದಾರೆ:
“ಗುಡಿಯ ನೋಡಿರಣ್ಣಾ ದೇಹದ        
ಗುಡಿಯ ನೋಡಿರಣ್ಣಾ”    ||ಪಲ್ಲ||

ಅನುಪಲ್ಲ:
ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ           

ಪೊಡವಿಗೆ ಒಡೆಯನೆಂದರೆ ಸೃಷ್ಟಿಕರ್ತ.  ಆತನು ಈ ದೇಹದಲ್ಲಿಯೇ ಇರುವದರಿಂದ ಈ ದೇಹವು ಆತನ ದೇವಸ್ಥಾನ. ಆದರೂ ಸಹ ಆತನ ಅಸ್ತಿತ್ವವು ನಮ್ಮ ಅನುಭವಕ್ಕೆ ಬರಲಾರದು. ಆದುದರಿಂದ ಆತನು ಈ ಗುಡಿಯಲ್ಲಿ ಅಡಗಿಕೊಂಡು ವಾಸಿಸುತ್ತಿದ್ದಾನೆ. ನಮ್ಮ ಎಲ್ಲ ಕ್ರಿಯೆಗಳನ್ನು ಆತನೇ ನಿಯಂತ್ರಿಸುತ್ತಿದ್ದಾನೆ. ಆದರೂ ಸಹ ಅದು ನಮ್ಮ ಅರಿವಿಗೆ ಬರುತ್ತಿಲ್ಲ. ಅದೂ ಅಲ್ಲದೆ, ಈ ಪರಮಾತ್ಮನೇ ಮಾಯಾಪರಿಭ್ರಾಮಿತನಾಗಿ ಜೀವಾತ್ಮನಾಗಿದ್ದಾನೆ. ಇದು ಒಂದು ಅತ್ಯಂತ ವಿಸ್ಮಯದ ಸಂಗತಿ.  ಆದುದರಿಂದ ಆತನು ‘ಕಡುಬೆಡಗಿ’ನಲ್ಲಿ ಇದ್ದಾನೆ!

ಮೊದಲ ನುಡಿ:
ಮೂರು ಮೂಲೆಯಾ ಕಲ್ಲು ಅದರೊಳು           
ಜಾರುತಿಹದು ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ       

‘ಮೂರು ಮೂಲೆಯಾ ಕಲ್ಲು’ ಇದನ್ನು ಅನೇಕ ರೀತಿಗಳಲ್ಲಿ ಅರ್ಥೈಸಬಹುದು. ಬಯಲಿನಲ್ಲಿ ಒಲೆ ಹೂಡುವಾಗ, ಮೂರು ಕಲ್ಲುಗಳನ್ನು ಇಡುತ್ತಾರೆ. ಈ ಕಲ್ಲಿನಲ್ಲಿ ಅಗ್ನಿ ಧಗಧಗಿಸುತ್ತದೆ. ಇದರಂತೆಯೇ ಸ್ತ್ರೀಶರೀರದಲ್ಲಿಯೂ ಸಹ ಮೂರು ಮೂಲೆಗಳ ಯೋನಿ ಇದೆ. (ಕುಟುಂಬನಿಯಂತ್ರಣದ ಕೆಂಪು ತ್ರಿಕೋಣವನ್ನು ನೆನಪಿಸಿಕೊಳ್ಳಿರಿ!) ಈ ಯೋನಿಯಲ್ಲಿ ಜಾರುತ್ತಿರುವ ಕಲ್ಲು ಎಂದರೆ ಪುರುಷಲಿಂಗ.  ಇದು ಸ್ಥೂಲಶರೀರದ ವಿವರಣೆಯಾಯಿತು. ಆದರೆ ಪ್ರತಿಯೊಂದು ಜೀವಿಗೆ ಸ್ಥೂಲಶರೀರವಲ್ಲದೆ, ಸೂಕ್ಷ್ಮಶರೀರ ಹಾಗು ಕಾರಣಶರೀರ ಎನ್ನುವ ಇನ್ನೂ ಎರಡು ಶರೀರಗಳು ಇರುತ್ತವೆ. ನಮ್ಮ ಸೂಕ್ಷ್ಮಶರೀರವು ನಮ್ಮ ಗುಣಗಳಿಂದ ಹಾಗು ನಮ್ಮ ಕರ್ಮಗಳಿಂದ ರೂಪಿತವಾಗಿರುತ್ತದೆ. ಕಾರಣಶರೀರವೆಂದರೆ causative impulse.

ಇನ್ನು ಯೋಗಶಾಸ್ತ್ರದ ಮೇರೆಗೆ ಹೀಗೆ ಹೇಳಬಹುದು:
ಈ ಕಾರಣಶರೀರವೇ ಒಂದು ಶ್ರೀಚಕ್ರ. ಈ ಚಕ್ರದ ಮಧ್ಯದಲ್ಲಿ ಯೋನಿ ಎನ್ನುವ ತ್ರಿಕೋನವಿದೆ. ಈ ತ್ರಿಕೋನದಲ್ಲಿ ಅಗ್ನಿ ಅಡಕವಾಗಿದೆ. ಇದಕ್ಕೆ ಪೂರಕವಾಗಿ ಲಲಿತಾಸಹಸ್ರನಾಮದಲ್ಲಿ ಬರುವ ‘ತ್ರಿಕೋಣಾಂತರದೀಪಿಕಾ’ ಎನ್ನುವ ಮಾತನ್ನು ನೆನಪಿಸಿಕೊಳ್ಳಬಹುದು. ಇದರಲ್ಲಿ ಜಾರುತಿರುವ ಕಲ್ಲು ಎಂದರೆ, ಪ್ರಕೃತಿಯಲ್ಲಿ ಸದಾ ವರ್ತಿಸುತ್ತಿರುವ ಪುರುಷ (The self interacting with nature).  ಈ ಪುರುಷನನ್ನು ಶರೀಫರು ‘ಧೀರ ನಿರ್ಗುಣ’ ಎಂದು ಕರೆಯುತ್ತಾರೆ.

ಈಗ ನಾವು ಒಂದು ದೈವಶಾಸ್ತ್ರದ ಪ್ರಶ್ನೆಗೆ ಬರುತ್ತೇವೆ. ದೇವರು ಜಗತ್ತನ್ನು ಹುಟ್ಟಿಸಿದನು ಎಂದು ಅನೇಕ ಧರ್ಮಗಳು ಹೇಳುತ್ತವೆ. ಆದರೆ ಸನಾತನ ಧರ್ಮವು  ಇಷ್ಟಕ್ಕೇ ಸುಮ್ಮನಿರದೆ, ‘ಸೃಷ್ಟಿಸುವ ಅಪೇಕ್ಷೆ ದೇವರಿಗೆ ಆಗಬಾರದು; ಯಾವುದೆ ತರಹದ  ‘ಗುಣ’ ಇದ್ದವನು ದೇವರಾಗಲಾರನು; ದೇವನು ನಿರ್ಗುಣನು’ ಎಂದು ತರ್ಕಿಸುತ್ತದೆ. ಈ ಸಮಸ್ಯೆಯನ್ನು ಬಿಡಿಸಲು ಶಂಕರಾಚಾರ್ಯರು ಎರಡು ಪ್ರಮೇಯಗಳನ್ನು ಮುಂದಿಟ್ಟರು:
(೧) ದೇವನ ‘ಸ್ಫುರಣೆ’ಯಿಂದಲೇ ಸತ್ ಮತ್ತು ಅಸತ್ ಎನ್ನುವ ವಿಶ್ವಗಳ ಭಾಸವಾಗುತ್ತದೆ.
(೨) ಈ ‘ಪುರುಷ’ನು ಸ್ವಪ್ನ, ಜಾಗೃತಿ ಹಾಗು ಸುಷುಪ್ತಿ ಎನ್ನುವ ಮೂರು ಅವಸ್ಥೆಗಳಲ್ಲಿ ಮಾಯೆಯ ಭ್ರಮೆಗೆ ಒಳಗಾಗಿರುತ್ತಾನೆ.
ಇದನ್ನು ಶಂಕರಾಚಾರ್ಯರ ‘ಮಾಯಾವಾದ’ ಎಂದು ಹೇಳಲಾಗುತ್ತದೆ.

ಗೋವಿಂದ ಭಟ್ಟರು ಶಂಕರಮತದ ಅನುಯಾಯಿಗಳು. ಗೋವಿಂದಭಟ್ಟರ ಶಿಷ್ಯರಾದ ಶರೀಫರೂ ಸಹ ಇದೇ ಪಂಥದವರು. ಆದುದರಿಂದಲೇ ಅವರು ಆ ‘ಭಗವತ್ ಪುರುಷ’ನನ್ನು ‘ಧೀರ ನಿರ್ಗುಣ’ ಎಂದು ಕರೆಯುತ್ತಿದ್ದಾರೆ. ಈ ಪುರುಷನು ಸಗುಣವಾದ ಅಂದರೆ ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳಿಂದ ಸಹಿತವಾದ ಮಾಯೆಯಿಂದ ಭ್ರಮಿತನಾಗಿ ಅನೇಕ ಜನ್ಮಗಳಲ್ಲಿ  ಅನೇಕ ದೇಹಗಳನ್ನು ಪಡೆಯುತ್ತಾನೆ. ಆ ಸಮಯದಲ್ಲಿ ‘ನಾನು’ ಎನ್ನುವುದು ಪ್ರಜ್ಞೆಯ ಅತ್ಯಂತ ಕೆಳಸ್ತರದಲ್ಲಿ ಇರುತ್ತದೆ ಹಾಗು ಅತ್ಯಂತ ಮೇಲ್ ಸ್ತರದಲ್ಲಿರುವ ‘ನಾನು’ ನಿರ್ಗುಣವಾದ ಭಗವಂತನೇ ಆಗಿರುತ್ತದೆ.

ನಮ್ಮ ಅನುಭವಕ್ಕೆ ಬರುವ ಪ್ರಜ್ಞಾಲೋಕದಲ್ಲಿ ಕೆಳಸ್ತರದಲ್ಲಿರುವ ‘ನಾನು’ ವ್ಯಕ್ತವಾಗಿರುತ್ತದೆ (ಅಂದರೆ ‘ತೋರುತ್ತದೆ’) ಹಾಗು ಮೇಲ್ ಸ್ತರದಲ್ಲಿ ಅದು ನಮಗೆ ಅವ್ಯಕ್ತವಾಗಿರುತ್ತದೆ (ಅಂದರೆ ‘ಅಡಗಿ’ರುತ್ತದೆ.) ಈ ಎರಡೂ ‘ನಾನು’ಗಳು ಒಂದೇ ಆದರೂ ಸಹ ಬೇರೆಯೇ ಆಗಿರುತ್ತವೆ: ಒಂದು ಕೆಳಪ್ರಜ್ಞೆಯಲ್ಲಿರುವ ನಾನು ಅರ್ಥಾತ್ ಜೀವಾತ್ಮ ಹಾಗು ಮತ್ತೊಂದು ಮೇಲ್‍ಪ್ರಜ್ಞೆಯಲ್ಲಿರುವ ನಾನು ಅರ್ಥಾತ್ ಪರಮಾತ್ಮ.
ಪರಮಾತ್ಮನು ಕೆಳಪ್ರಜ್ಞೆಯಲ್ಲಿರುವ ನಮಗೆ ಅವ್ಯಕ್ತವಾಗಿ, ತಾನು ಮೇಲ್‍ಪ್ರಜ್ಞೆಯಲ್ಲಿ ವಾಸಿಸುವದರಿಂದ, ಅವನನ್ನು ಧರಿಸಿದ ಈ ದೇಹವು ದೇವಾಲಯವೇ ಹೌದು.
[ಟಿಪ್ಪಣಿ: ಅಲ್ಲಮಪ್ರಭುಗಳ ಒಂದು ವಚನದಲ್ಲಿ ‘ಗುಹೇಶ್ವರ ಸತ್ತ, ನಾನು ಉಳಿದೆ’ ಎನ್ನುವ ಮಾತು ಬರುತ್ತದೆ. ದೇವರು ಹಾಗು ಭಕ್ತನ ನಡುವಿನ ಅಂತರ ಅಳಿಸಿ ಹೋಗಿ, ಭಕ್ತನು ಸತ್-ಚಿತ್-ಆನಂದ ಸ್ಥಿತಿಯನ್ನು ತಲುಪಿದಾಗ ಅನಿಸುವ ಸತ್ಯವಿದು.]

ಎರಡನೆಯ ನುಡಿ:
ಆರು ಮೂರನು ಕಟ್ಟಿ ಮೇಲಕೆ
ಏರುವವನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ                   

ಶರೀಫರು ತಂತ್ರಶಾಸ್ತ್ರದಲ್ಲಿ ವಿವರಿಸಿರುವ ಸಾಧನೆಯ ಅನುಭವವನ್ನು ಹೇಳುತ್ತಿದ್ದಾರೆ.
‘ಆರು’ ಎಂದರೆ ಸೂಕ್ಷ್ಮಶರೀರದಲ್ಲಿರುವ ಷಟ್ಚಕ್ರಗಳು. ‘ಮೂರು’ ಎಂದರೆ ಮೂರು ಗ್ರಂಥಿಗಳು ಎಂದು ಆಗಬಹುದು ಅಥವಾ ಮೂರು ನಾಡಿಗಳು ಎಂದೂ ಆಗಬಹುದು.
ಆರು ಚಕ್ರಗಳು ಹೀಗಿವೆ:
(೧) ಮೂಲಾಧಾರ
(೨) ಸ್ವಾಧಿಷ್ಠಾನ
(೩) ಮಣಿಪೂರ
(೪) ಅನಾಹತ
(೫) ವಿಶುದ್ಧಿ
(೬) ಆಜ್ಞಾ
ಮೂರು ಗ್ರಂಥಿಗಳು ಎಂದರೆ:
(೧) ಮೂಲಾಧಾರ ಚಕ್ರದಲ್ಲಿ ಇರುವ ಬ್ರಹ್ಮಗ್ರಂಥಿ
(೨) ಮಣಿಪೂರ ಚಕ್ರದ ಮೇಲೆ ಇರುವ ವಿಷ್ಣುಗ್ರಂಥಿ
(೩) ಆಜ್ಞಾಚಕ್ರದಲ್ಲಿರುವ ರುದ್ರಗ್ರಂಥಿ
ಮೂರು ನಾಡಿಗಳು ಎಂದರೆ:
(೧) ಎಡಗಡೆಯಲ್ಲಿರುವ ಇಡಾ
(೨ ಬಲಗಡೆಯಲ್ಲಿರುವ ಪಿಂಗಲಾ
(೩) ಮಧ್ಯದಲ್ಲಿರುವ ಸುಷುಮ್ನಾ

ಯೋಗಸಾಧಕನು ಈ ಆರು ಚಕ್ರಗಳನ್ನು ಭೇದಿಸಿ, ಸುಷುಮ್ನಾ ನಾಡಿಯಲ್ಲಿ ಪ್ರಾಣಸಂಚಾರವನ್ನು ಮಾಡಿ, ಕೊನೆಯ ಸ್ಥಾನಕ್ಕೆ ಅಂದರೆ ಸಹಸ್ರಾರದಲ ಪದ್ಮಕ್ಕೆ ತಲುಪಿದಾಗ, ಆತನಿಗೆ ಸುನಾದ ಕೇಳುವುದು ಹಾಗು ಚಂದ್ರನಂತೆ ತಂಪಾದ ಆದರೆ ಸೂರ್ಯನಂತೆ ಪ್ರಖರವಾದ ಬೆಳಕು ಕಾಣಿಸುವುದು. ಅಲ್ಲಿ ಆತನು ಪರಮಾನಂದವನ್ನು ಅನುಭವಿಸುತ್ತಾನೆ. ಈ ಸಾವಿರದಳಗಳ ಕೊನೆಯ ಚಕ್ರದಲ್ಲಿಯೇ ಧೀರ ನಿರ್ಗುಣನು ಹಾಗು ಸಗುಣರೂಪ ಪ್ರಕೃತಿಯು ಒಂದಾಗಿ  ‘ಬಿಂದು’ಸ್ಥಲದಲ್ಲಿ ಇರುತ್ತಾರೆ. ಇದುವೇ ಪರಮ ಪ್ರಜ್ಞೆಯ ಆವಾಸಸ್ಥಾನ.

ಆರು ಮೂರುಗಳನ್ನು ಇನ್ನೂ ಒಂದು ರೀತಿಯಲ್ಲಿ ಅರ್ಥೈಸಬಹುದು. ಆರು ಎಂದರೆ ಅರಿಷಡ್ವೈರಿಗಳು (ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗು ಮತ್ಸರ ಎನ್ನುವ ಗುಣಗಳು) ಮತ್ತು ಮೂರು ಎಂದರೆ ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳು. ಇವುಗಳನ್ನು ನಿಯಂತ್ರಣಕ್ಕೆ ತಂದವನೇ ಯೋಗಸಾಧನೆಯನ್ನು ಮಾಡಲು ಶಕ್ತನಾಗುತ್ತಾನೆ.

ಕೊನೆಯ ನುಡಿ:
ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿರಾಜ ಶಿಶುನಾಳಧೀಶನ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ       
ಶರೀಫರು ಯೋಗಸಾಧನೆಯಲ್ಲಿ ಅನೇಕ ದಿನಗಳನ್ನು ಕಳೆದರು. ಈಗ ಅವರಿಗೆ ಚೈತನ್ಯದ ದರುಶನವಾಗಿದೆ. ಇದೀಗ ಸಿಹಿಯನ್ನು (=ಪಾಯಸವನ್ನು) ತಿಂದು, ಭಗವಂತನಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಸಂಭ್ರಮಿಸುವ ದಿನ ಬಂದಿದೆ. ಶರೀಫರ ಇಷ್ಟದೈವನಾದ ಶಿಶುನಾಳಾಧೀಶನೇ ತನ್ನ ಶರೀರದಲ್ಲಿಯೂ ಸಹ ಪರಬ್ರಹ್ಮರೂಪದಲ್ಲಿ ನೆಲೆಸಿದ್ದಾನೆ. ತನ್ನ ಭಕ್ತರಿಗೆ ಯೋಗಮಾರ್ಗದಲ್ಲಿ ಮುನ್ನಡೆಸುವ ಗುರು ಆತ. ಆದುದರಿಂದ ಆತನು ಯೋಗಿರಾಜ. ಆತನ ಸ್ಥಾನವಾದ ಈ ಶರೀರವೇ ಆತನ ಗುಡಿ.
ಇದು ಶರೀಫರು ಅನುಭವಿಸುತ್ತಿರುವ ಸತ್ಯ! ಈ ಸತ್ಯವನ್ನು ತಮ್ಮ ಗೀತೆಯ ಮೂಲಕ ಅವರು ನಮಗೆಲ್ಲರಿಗೂ ಸಾರುತ್ತಿದ್ದಾರೆ.

Friday, December 13, 2013

ಅಪಾಯಕಾರಿ ಸ್ವೇಚ್ಛಾಚಾರ



ಸಮಾಜ ಹಾಗು ವ್ಯಕ್ತಿ ಇವುಗಳ ನಡುವಿನ ಸಂಬಂಧದ ಚರ್ಚೆ ಇಂದು ನಿನ್ನೆಯದಲ್ಲ. ವ್ಯಕ್ತಿಯ ಸ್ವಾತಂತ್ರ್ಯ ಅಪರಿಮಿತವಾದದ್ದೊ ಅಥವಾ ಸಮಾಜದ ಅಧಿಕಾರ ಹೆಚ್ಚಿನದೊ ಎನ್ನುವ ತಿಕ್ಕಾಟ ನಡದೇ ಇದೆ. ಸಮಾಜವನ್ನು ತಲ್ಲಣಗೊಳಿಸಿ, ಸಾಮಾಜಿಕ ಸಂಸ್ಥೆಗಳನ್ನು ಛಿದ್ರಗೊಳಿಸುವ ವ್ಯಕ್ತಿಸ್ವಾತಂತ್ರ್ಯವನ್ನು ಅಪಾಯಕಾರಿ ಸ್ವೇಚ್ಛಾಚಾರ ಎಂದೇ ಕರೆಯಬೇಕಾಗುವುದು.

ಸಂತಾನಾಭಿವೃದ್ಧಿಯೇ ರತಿಕ್ರೀಡೆಯ ನೈಸರ್ಗಿಕ ಉದ್ದೇಶ. ಇದು ಸೃಷ್ಟಿಯ ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ. ಆದುದರಿಂದಲೇ ರತಿಕ್ರೀಡೆಯು ಪೂರಕಲಿಂಗಿಗಳಲ್ಲಿ ಮಾತ್ರ ನಡೆಯುತ್ತದೆ. ಇದಕ್ಕೆ ವಿರುದ್ಧವಾದ ರತಿಕ್ರೀಡೆಯು ಅನೈಸರ್ಗಿಕವಾದದ್ದು. ನಿಸರ್ಗದಲ್ಲಿರುವ ಕೆಳ ತರಗತಿಯ ಜೀವಿಗಳಲ್ಲಿ ಸಲಿಂಗರತಿಯನ್ನು ಕಾಣಲು ಸಾಧ್ಯವೇ ಇಲ್ಲ. ಮಾನವ ಪರಿಸರವು ಸಮತೋಲನದ ಬದುಕಿನಿಂದ ದೂರ ಸರಿದಂತೆಲ್ಲ, ಮನೋರೋಗಗಳು ಹೆಚ್ಚಾಗತೊಡಗಿದವು. ಸಲಿಂಗಕಾಮ, ಪಶುರತಿ, ಅತ್ಯಾಚಾರ ಇವೆಲ್ಲ ಮನೋರೋಗದ ಉದಾಹರಣೆಗಳೇ. ಆದುದರಿಂದಲೇ ನಮ್ಮ ಧರ್ಮಶಾಸ್ತ್ರಗಳು ಹಾಗು ನಮ್ಮ ವಿಧಾಯಕರು ಇವನ್ನೆಲ್ಲ ಅಪರಾಧಗಳು ಎಂದು ಸಾರಿದ್ದು.

ಪಾಶ್ಚಾತ್ಯ ದೇಶಗಳಲ್ಲಿ ಸಂಪತ್ತು ತುಂಬಿ ತುಳುಕಾಡುತ್ತಿದೆ ಮತ್ತು ಅಲ್ಲಿಯ ಸಾಮಾಜಿಕ ಕಟ್ಟುಪಾಡುಗಳು ಶಿಥಿಲವಾಗಿವೆ. ಅಲ್ಲಿಯ ನಿವಾಸಿಗಳು ತಮ್ಮ ಆಚಾರವಿಚಾರಗಳೇ ಶ್ರೇಷ್ಠ ಎಂದು ನಂಬಿದ್ದಾರೆ. ಆದುದರಿಂದ ತಮ್ಮಂತೆಯೇ ಇತರ ದೇಶಗಳೂ ಆಚರಿಸಬೇಕು ಎನ್ನುವ ಅಹಮ್ಮು ಅವರಿಗಿದೆ. ಅದಲ್ಲದೆ ತಮ್ಮ ದೇಶವಾಸಿಗಳು ಪರದೇಶಗಳಿಗೆ ಪ್ರವಾಸ ಕೈಗೊಂಡಾಗ, ಸಲಿಂಗಕಾಮದ ಅಪರಾಧದಲ್ಲಿ ಸಿಲುಕಬಾರದು ಎನ್ನುವ ದುರುದ್ದೇಶವೂ ಅವುಗಳಿಗೆ ಇದೆ. ಆದುದರಿಂದ ‘ಮಾನವ ಹಕ್ಕುಗಳು’ ಎನ್ನುವ ಸೋಗಿನಲ್ಲಿ ಇತರ ದೇಶಗಳ ಮೇಲೆ ಅವು ಅನೈಸರ್ಗಿಕ ರತಿಯನ್ನು ಹೇರುತ್ತಿವೆ. ಆದುದರಿಂದಲೇ ಬಡದೇಶಗಳಿಗೆ ನೆರವು ನೀಡುವ ಸಂದರ್ಭದಲ್ಲಿ ಈ ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳು  ‘ಮಾನವ ಹಕ್ಕುಗಳ ಪಾಲನೆ’ಯನ್ನು ಒಂದು ಶರತ್ತನ್ನಾಗಿ ಮಾಡುತ್ತಿವೆ. ಮಾನವ ಹಕ್ಕುಗಳ ಪಾಲನೆಯಲ್ಲಿ ಸಲಿಂಗಕಾಮವನ್ನೂ ಸಹ ಅವು ಸೇರಿಸಿವೆ. ಆಫ್ರಿಕಾ ಖಂಡದಲ್ಲಿರುವ ಮಾಲವಿ ಎನ್ನುವ ಬಡರಾಷ್ಟ್ರಕ್ಕೆ ಇಂಗ್ಲಂಡ ತಾನು ಕೊಡಮಾಡುತ್ತಿದ್ದ ೧೯ ಮಿಲಿಯನ್ ಪೌಂಡ್ ನೆರವನ್ನು ಇಂತಹ ಮಾನವ ಹಕ್ಕುಗಳ ನೆವದಲ್ಲಿಯೇ ನಿರಾಕರಿಸಿತು.

 ಇದೇ ಉದ್ದೇಶದಿಂದಲೇ ೧೯೭೩ನೆಯ ಇಸವಿಯಲ್ಲಿ  ಅಮೇರಿಕಾದ ಮನೋರೋಗ ವಿಜ್ಞಾನಿಗಳ ಮಂಡಳಿಯು ತನ್ನ ಕೈಪಿಡಿಯಿಂದ ಸಲಿಂಗಕಾಮವನ್ನು ತೆಗೆದು ಹಾಕಿತು. ಆದರೆ ಅಲ್ಲಿಯ ಅನೇಕ ಮನೋರೋಗವಿಜ್ಞಾನಿಗಳು ಗುಟ್ಟಿನಲ್ಲಿಯೇ ಆಗಲಿ, ಸಲಿಂಗಕಾಮವನ್ನು ಮನೋರೋಗವೆಂದೇ ಪರಿಗಣಿಸುತ್ತಾರೆ ಹಾಗು ಆ ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ.

ಈ ಸಲಿಂಗಕಾಮಿಗಳಿಗೆ ‘ಅಲ್ಪಸಂಖ್ಯಾತರು’ ಎನ್ನುವ ನಾಮಕರಣ ಮಾಡಿ, ಆ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳು ಎಂದು ವಿಶ್ಲೇಷಿಸುವ ಬುದ್ಧಿವಂತಿಕೆಯೊಂದು ಪ್ರಾರಂಭವಾಗಿದೆ. ಸ್ವಾಮಿ, ನಿಜವಾದ ಅಲ್ಪಸಂಖ್ಯಾತರ ಒಳ್ಳೆಯ ವೈಶಿಷ್ಟ್ಯಗಳನ್ನು ಉಳಿಸಿ, ಬೆಳೆಯಿಸುವ ಉದ್ದೇಶದಿಂದ ಅವರಿಗೆ ವಿಶೇಷ ಸೌಲಭ್ಯ ನೀಡಬೇಕೆ ಹೊರತು, ದುರಾಚಾರಗಳನ್ನು ಹರಡುವದಕ್ಕಾಗಿ ಅಲ್ಲ. ಈ ತರ್ಕವನ್ನೇ ಮುಂದುವರೆಸಿದರೆ, ಕಳ್ಳರು, ಸುಳ್ಳರು, ಅತ್ಯಾಚಾರಿಗಳು, ಲಂಚಬಡಕರು ಎಲ್ಲರೂ ಅಲ್ಪಸಂಖ್ಯಾತರೇ ಆಗುವರು.  (ಹೌದೆ?)

ವ್ಯಕ್ತಿಸ್ವಾತಂತ್ರ್ಯದ ಪರಮಾಧಿಕಾರವನ್ನು ಸಾರುವ ಬುದ್ಧಿಜೀವಿಗಳು ಹೆರಯಿನ್ ಮೊದಲಾದ ಮಾದಕದ್ರವ್ಯಗಳ ಸೇವನೆಯನ್ನೂ ಸಹ ವ್ಯಕ್ತಿಸ್ವಾತಂತ್ರ್ಯ ಎಂದು ಹೇಳಬೇಕಲ್ಲವೆ?  ಪಾಶ್ಚಾತ್ಯ ರಾಷ್ಟ್ರಗಳಿಗೆ ಈ ಮಾದಕದ್ರವ್ಯಗಳ ಸೇವನೆ ಬೇಡವಾಗಿದೆ. ಅಲ್ಲಿ ಅವುಗಳನ್ನು ನಿಷೇಧಿಸಿದ ಕಾರಣದಿಂದಲೇ, ನಮ್ಮಲ್ಲಿಯ ಬುದ್ಧಿಜೀವಿಗಳು ಈ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುವದು.
ಅಂದರೆ ಅಲ್ಲಿ ಸಲ್ಲುವುದು ಮಾತ್ರ ಇಲ್ಲಿ ಸಲ್ಲುವುದು ಎಂದಂತಾಯಿತಲ್ಲವೆ?

ಈ ವಿಷಯದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ವಿರುದ್ಧ ಈ ‘ಅಲ್ಪಸಂಖ್ಯಾತ’ರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ರಾಜಕಾರಣಿಗಳೂ ಸಹ ಸರ್ವೋಚ್ಚ ನ್ಯಾಯಾಲಯವು ತಪ್ಪು ಮಾಡಿದೆ ಎನ್ನುವ ಹೇಳಿಕೆ ಕೊಟ್ಟು ‘ದೊಡ್ಡ ಮನುಷ್ಯ’ರಾಗುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವು “ಸಲಿಂಗಕಾಮವನ್ನು ಸಕ್ರಮಗೊಳಿಸುವ ಶಾಸನವನ್ನು ಮಾಡುವ ಅಧಿಕಾರ ತನಗಿಲ್ಲ. ಅದನ್ನು ಲೋಕಸಭೆ ಮಾಡಬಹುದು” ಎಂದಷ್ಟೇ ಹೇಳಿದೆ. ಹಾಗಿದ್ದಾಗ, ‘ಅಲ್ಪಸಂಖ್ಯಾತ’ರು ಹಾಗು ಕೆಲವು ರಾಜಕಾರಣಿಗಳು (ಜನಪ್ರಿಯತೆಗಾಗಿ) ಸರ್ವೋಚ್ಚ ನ್ಯಾಯಾಲಯವನ್ನು ಹೀಗಳೆಯುತ್ತಿರುವುದು ತಪ್ಪಲ್ಲವೆ? 

ಕೊನೆಯದಾಗಿ ಹೇಳಬೇಕೆಂದರೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ, ಆರೋಗ್ಯವಂತರಾದ ಬಹುಸಂಖ್ಯಾತರು ಬೇಕಾಗುವರೇ ಹೊರತು ಅಲ್ಪಸಂಖ್ಯಾತರ ಸೋಗಿನ ಮನೋರೋಗಿಗಳಲ್ಲ. ಇಂತಹವರನ್ನು ಕರುಣೆಯಿಂದ ನೋಡಿ, ಇವರ ಮನೋರೋಗಕ್ಕೆ ಚಿಕಿತ್ಸೆ ನೀಡುವುದೇ ಒಳ್ಳೆಯದು.

Friday, December 6, 2013

ಇಲಸ್ಟ್ರೇಟೆಡ್ ವೀಕ್ಲಿ ಆ*ಫ್ ಇಂಡಿಯಾ……..ನೆನಪುಗಳು



ಭಾರತ ಆಂಗ್ಲಭಾಷಾ ಪತ್ರಿಕೆಗಳಲ್ಲಿ The Illustrated Weekly of Indiaಕ್ಕೆ ಮಹತ್ವದ ಸ್ಥಾನವಿದೆ. ೧೮೯೦ರಿಂದ Times of India ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಾಗಿ ಪ್ರಕಟವಾಗುತ್ತಿದ್ದ ಈ ಪತ್ರಿಕೆ, The Illustrated Weekly of India ಎನ್ನುವ ಹೆಸರನ್ನು ಪಡೆದದ್ದು ೧೯೨೩ರಲ್ಲಿ. ೧೯೯೩ರಲ್ಲಿ ಈ ಪತ್ರಿಕೆ ಮುಚ್ಚಿತು. ಆ ಕಾಲದಲ್ಲಿ  ಇಂಗ್ಲಿಶ್ ಪತ್ರಿಕೆಗಳ ಸಂಖ್ಯೆಯೇ ವಿರಳವಾದದ್ದರಿಂದ ಈ ಪತ್ರಿಕೆ ಸುಮಾರಾಗಿ ಜನಪ್ರಿಯವಾಗಿತ್ತು ಹಾಗು ಇಂಗ್ಲಿಶ್ ಓದುಗರಿಗೆ ಅನಿವಾರ್ಯವಾದ ಪತ್ರಿಕೆಯಾಗಿತ್ತು. ಈ ಪತ್ರಿಕೆಯಲ್ಲಿ ಪ್ರಕಟವಾದ ಕೆಲ ಲೇಖನಗಳು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿವೆ. ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ:

(೧) ಮುಂಬಯಿಯ ಕೊಳೆಗೇರಿಗಳ ನಿವಾಸಿಗಳನ್ನು ಸಂಘಟಿತ ಗುಂಡಾಗಳು ಶೋಷಿಸುವುದು ಹೊಸತೇನಲ್ಲ. ಪ್ರಧಾನಿ ಇಂದಿರಾ ಗಾಂಧಿಯವರು  ಫಕರುದ್ದೀನ ಅಲಿ ಅಹಮದ ಇವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದಾಗಲೂ ಸಹ (೧೯೭೪- ೧೯೭೭) ಈ ಶೋಷಣೆ ನಡೆಯುತ್ತಲೇ ಇತ್ತು. ಅದಕ್ಕಾಗಿ ಯಾರನ್ನೂ ನಾನು ದೂರುತ್ತಿಲ್ಲ. ಆದರೆ ಈ ಅವಧಿಯಲ್ಲಿ ಸಾಮಾಜಿಕ ಒಳಿತಿಗೆ ಬದ್ಧಳಾದ ಓರ್ವ ಅಮಾಯಕ ಯುವತಿಯ ಬರ್ಬರ ಹತ್ಯೆಯ ಬಗೆಗೆ ಓದಿದ ಬಳಿಕ ನನ್ನ ಜೀವ ಹಿಂಡಿ ಹೋಯಿತು. ಈ ಪ್ರಕರಣದಲ್ಲಿ ನಾವು ಯಾರನ್ನು ದೂರಬೇಕು ಎನ್ನುವುದೇ ತಿಳಿಯುವದಿಲ್ಲ.  The Illustrated Weekly of Indiaದಲ್ಲಿ ಪ್ರಕಟವಾದ ಆ ಪ್ರಕರಣ ಹೀಗಿದೆ:

ಸಮಾಜಶಾಸ್ತ್ರ ವಿಷಯದಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಓರ್ವ ಹುಡುಗಿಗೆ ತನ್ನ ಅಧ್ಯಯನದ ಕಾರಣಗಳಿಂದಾಗಿ ಸಂಘಟಿತ ಗುಂಡಾಗಳ ಬಗೆಗೆ ಒಂದಿಷ್ಟು ಮಾಹಿತಿ ದೊರೆಯುತ್ತದೆ.  ದೊರೆತ ಮಾಹಿತಿಯನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಸುಮ್ಮನೆ ಕೂತಿದ್ದರೆ ಈ ಹುಡುಗಿ ಜಾಣಳಾಗುತ್ತಿದ್ದಳು. ಆದರೆ ಈ ದಡ್ಡ ಹುಡುಗಿ ಭಾರತದ ರಾಷ್ಟ್ರಪತಿಗಳಿಗೆ ಒಂದು ‘ರಹಸ್ಯ ಪತ್ರ’ವನ್ನು ಬರೆಯುತ್ತಾಳೆ. ಮುಂದೆ ಏನಾಯಿತು, ಅಂತೀರಾ? ಆ ಗುಂಡಾಗಳನ್ನು ಬಂಧಿಸಲು ರಾಷ್ಟ್ರಪತಿಯವರು ಆದೇಶ ಕಳುಹಿಸಿದರೆ? ಆ ಗುಂಡಾ ಧಂಧೆ ಬಂದಾಗಿ ಹೋಯಿತೆ? No… ಈ ‘ರಹಸ್ಯ ಪತ್ರ’ ಬರೆದ ಕೆಲವೇ ದಿನಗಳಲ್ಲಿ ಆ ಹುಡುಗಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಯಿತು. ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಈ ಹುಡುಗಿಯ ಮೊದಲಿನ ಫೋಟೋ ಹಾಗು ಚಿತ್ರಹಿಂಸೆಯ ನಂತರದ ಫೋಟೋವನ್ನು ಅಕ್ಕಪಕ್ಕದಲ್ಲಿ ಪ್ರಕಟಿಸಲಾಗಿತ್ತು. ಕರಳು ಹಿಂಡುವ ದೃಶ್ಯ.

ವಿಷಯ ಅದಲ್ಲ. ‘ರಹಸ್ಯ ಪತ್ರ’ದಲ್ಲಿದ್ದ ಮಾಹಿತಿ ಗುಂಡಾಗಳಿಗೆ ತಕ್ಷಣದಲ್ಲಿ ತಿಳಿದದ್ದು ಹೇಗೆ? ರಾಷ್ಟ್ರಪತಿಯವರ ಅಧಿಕಾರಿಗಳು ಇದನ್ನು ಬಯಲು ಮಾಡಿದರೆ? ಹಾಗಿದ್ದರೆ, ರಾಷ್ಟ್ರಪತಿಗಳು ಆ ನೀಚರ ಮೇಲೆ ಕ್ರಮ ಕೈಗೊಂಡರೆ? ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಇದರ ಬಗೆಗೆ ಏನೂ ಮಾಹಿತಿ ಇರಲಿಲ್ಲ. ಆ ಎರಡು ಫೋಟೋಗಳನ್ನು ನೆನಸಿಕೊಂಡಾಗ, ಈಗಲೂ ನನಗೆ ಕಣ್ಣೀರು ಬರುವುದು ನಿಂತಿಲ್ಲ.

(೨) ಭಾರತವು ಧರ್ಮನಿರಪೇಕ್ಷ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ
            (ಅ) ಭಾರತೀಯ ಶಾಸನಗಳು ಧರ್ಮನಿರಪೇಕ್ಷವಾಗಿವೆ.
            (ಆ) ಭಾರತೀಯ ನ್ಯಾಯದಾನವು ಧರ್ಮನಿರಪೇಕ್ಷವಾಗಿದೆ.
ಎಲ್ಲಾ ದೇಶಗಳಲ್ಲಿ ನಾವು ಇಂತಹ ಸ್ಥಿತಿಯನ್ನು ಕಾಣುವದಿಲ್ಲ. ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ಲೇಖನವು ಕೊಲ್ಲಿ ದೇಶಗಳ ಶಾಸನ ಹಾಗು ನ್ಯಾಯದಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಕೊಲ್ಲಿ ದೇಶದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕನ ಮೇಲೆ, ಅಕಸ್ಮಾತ್ತಾಗಿ ವಾಹನವೊಂದು ಚಲಿಸಿ, ಆ ಕಾರ್ಮಿಕ ಸಾವನ್ನಪ್ಪುತ್ತಾನೆ. ನ್ಯಾಯಾಲಯವು “ಈತ ಭಾರತೀಯನಾದುದರಿಂದ ಇಷ್ಟೇ ಪರಿಹಾರ ಸಾಕು” ಎನ್ನುವ ತೀರ್ಪನ್ನು ನೀಡುತ್ತದೆ. ಅಷ್ಟರಲ್ಲಿಯೇ ಈತನು ಹಿಂದು ಧರ್ಮದವನು ಎನ್ನುವುದು ಗೊತ್ತಾದಾಗ, ಪರಿಹಾರದಲ್ಲಿ ಮತ್ತೆ ಒಂದು ಮೂರಾಂಶವನ್ನು ಕಡಿತಗೊಳಿಸಲಾಗುತ್ತದೆ.

ಪುಣ್ಯಕ್ಕೆ ನಮ್ಮಲ್ಲಿ ಹಾಗಿಲ್ಲ. ಭಾರತೀಯ ನ್ಯಾಯವ್ಯವಸ್ಥೆಯು ದೇಶ ಹಾಗು ಧರ್ಮಗಳ ಆಧಾರದ ಮೇಲೆ ಭೇದವನ್ನು ಮಾಡುವುದಿಲ್ಲ. ಇನ್ನು ಮುಂದೆಯೂ ಸಹ ಅದು ಹಾಗೆ ಉಳಿದೀತೆ? ಈ ಸಂದೇಹಕ್ಕೆ ಕಾರಣವೇನೆಂದರೆ ಕೇಂದ್ರಸರಕಾರವು ಪ್ರಸ್ತಾವಿಸುತ್ತಿರುವ ‘ಜಾತೀಯ ಹಿಂಸಾಚಾರದ ಮಸೂದೆ.’ ಬಹುಶಃ ಇದು ಚುನಾವಣಾ-ಡೊಂಬರಾಟ ಇರಬಹುದು ಎಂದುಕೊಳ್ಳೋಣ. ಒಂದು ವೇಳೆ ಇದು ಶಾಸನವಾದರೆ, ನಮ್ಮ ಜಾತ್ಯತೀತತೆಯು ಅಲ್ಲಿಗೆ ಶಾಸನಬದ್ಧವಾಗಿ ಅಂತ್ಯಗೊಂಡಂತೆ!

(೩) ಯೇಶು ಕ್ರಿಸ್ತನ ಜನನದ ಬಗೆಗೆ ‘ವೀಕ್ಲಿ’ಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಕೆಲವು ಸಂಶೋಧಕರು ಯೇಶು ಯಹೂದಿ ವೇಶ್ಯೆಯೊಬ್ಬಳಿಗೆ ರೋಮನ್ ನಾವಿಕನಲ್ಲಿ ಹುಟ್ಟಿದ ಮಗ ಎಂದು ಬರೆದದ್ದನ್ನು ಅಲ್ಲಿ ಪ್ರಸ್ತಾವಿಸಲಾಗಿತ್ತು. ಆ ಲೇಖನದ ವಿರುದ್ಧ ಭಾರತದಲ್ಲೇ ಅಗಲಿ, ಯುರೋಪ ಅಥವಾ ಅಮೆರಿಕಾದಲ್ಲಿಯೇ ಆಗಲಿ, ಆ ಸಮಯದಲ್ಲಿ ಯಾವುದೇ ಪ್ರತಿಭಟನೆ ಆಗಲಿಲ್ಲ. ಈಗಲಾದರೋ ಎಂತೆಂಥಾ ಕಾರಣಗಳಿಗಾಗಿ ನಮ್ಮ ಜನ ಪ್ರತಿಭಟನೆ ಮಾಡುತ್ತಿದ್ದಾರೆ! ಬಂಜಗೆರೆಯವರು ಬಸವಣ್ಣನ ಬಗೆಗೆ ಬರೆದ ಸಂಶೋಧನಾ ಲೇಖನದ ವಿರುದ್ಧ, ಗಣಪತಿಯ ಅನಾರ್ಯತ್ವದ ವಿರುದ್ಧ, ಡ್ಯಾನ್ ಬ್ರೌನನ ‘ಡಾ ವಿಂಚಿ ಕೋಡ್’ ಕಾದಂಬರಿಯ ವಿರುದ್ಧ….!

ಹದಿನೆಂಟನೆಯ ಶತಮಾನದಲ್ಲಿ ಬದುಕಿದ್ದ ಫ್ರೆಂಚ ಸಾಹಿತಿ ವೋಲ್ಟೇರನ ವಿಚಾರವನ್ನು ಪ್ರಜ್ಞಾವಂತ ಭಾರತೀಯರೇ (ಜ್ಞಾನಪೀಠಿಗಳನ್ನು ಒಳಗೊಂಡು) ಮರೆಯುತ್ತಿರುವುದು ಸೋಜಿಗದ ಸಂಗತಿ: “ನೀನು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ಹಾಗೆ ಹೇಳಲು ನಿನಗಿರುವ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ.”
ಈಗಿನ ನಮ್ಮ ಭಾರತೀಯ ‘ನಾಗರಿಕರು’ ವಿರೋಧಿಗಳ ಜೀವ ತೆಗೆಯುವುದನ್ನೇ ಇಷ್ಟಪಡುತ್ತಾರೆ! (ಗಿರೀಶ ಕಾರ್ನಾಡರು ಮುಂಬಯಿಯ ಅಂತರರಾಷ್ಟ್ರೀಯ ಸಾಹಿತ್ಯಮೇಳದಲ್ಲಿ ಸಲ್ಮಾನ ರಶ್ದಿಯ ವಿರುದ್ಧ ಕೆಂಡ ಕಾರಿದ್ದನ್ನು ನೆನಪಿಸಿಕೊಳ್ಳಿರಿ.)

ಈ ಸಂದರ್ಭದಲ್ಲಿ ನಮ್ಮ ಸಂವೇದನೆಗಳು ಸೀಮಿತವಾಗುತ್ತಿರುವುದನ್ನೂ ಸಹ ನಾವು ಲಕ್ಷಿಸಬೇಕು. ಯಾವುದೋ ಒಂದು ಧರ್ಮದ ಪ್ರಾರ್ಥನಾ ಮಂದಿರವನ್ನು ಕಿಡಿಗೇಡಿಗಳು ಹಾನಿಗೊಳಿಸಿದಾಗ, ಕೇವಲ ಆ ಸಮುದಾಯದವರಷ್ಟೇ ಪ್ರತಿಭಟನಾ ಮೆರವಣಿಗೆಯನ್ನು ಮಾಡುತ್ತಾರೆ. ಹೀಗೇಕೆ? ಇಂತಹ ದುರುಳ ಕೃತ್ಯವು ಇತರರಲ್ಲಿ ಅಸಮಾಧಾನವನ್ನು ಏಕೆ ಹುಟ್ಟಿಸಬಾರದು? ನಾಗರಿಕರೆನ್ನಿಸಿಕೊಳ್ಳುವವರೆಲ್ಲ ಒಟ್ಟಾಗಿ ಏಕೆ ಪ್ರತಿಭಟಿಸಬಾರದು?

(೪) ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ನಗೆಹನಿಯು ಅನೇಕ ವರ್ಷಗಳ ಬಳಿಕ ವಿಪರ್ಯಾಸವಾಗಿ ರೂಪಾಂತರಗೊಂಡಿದ್ದು ಆಶ್ಚರ್ಯದ ಸಂಗತಿಯಾಗಿದೆ. ಆ ನಗೆಹನಿ ಹೀಗಿದೆ:
ರಶಿಯಾದಲ್ಲಿ ಮಹಾಕ್ರಾಂತಿ ಜರುಗಿದ ನಂತರ ಕಮ್ಯುನಿಸ್ಟ ಅಧಿಕಾರಿಯೊಬ್ಬನು ಓರ್ವ ಪ್ರಜೆಗೆ ಪ್ರಶ್ನೆ ಕೇಳುತ್ತಿದ್ದಾನೆ.
ಅಧಿಕಾರಿ: ರಶಿಯದ ಮಹಾಕ್ರಾಂತಿ ಜರುಗುವ ಮೊದಲು ನೀನು ಯಾವ ಊರಿನಲ್ಲಿದ್ದಿ?
ಪ್ರಜೆ: ಸೇಂಟ ಪೀಟರ್ಸಬರ್ಗನಲ್ಲಿದ್ದೆ, ಸ್ವಾಮಿ.
ಅಧಿಕಾರಿ: ಕ್ರಾಂತಿ ಜರಗುವ ಅವಧಿಯಲ್ಲಿ?
ಪ್ರಜೆ: ಪೆಟ್ರೋಗ್ರ್ಯಾಡ್‍ನಲ್ಲಿ, ಸ್ವಾಮಿ.
ಅಧಿಕಾರಿ: ಕ್ರಾಂತಿಯ ನಂತರ?
ಪ್ರಜೆ: ಲೆನಿನ್‍ಗ್ರ್ಯಾಡ್‍ನಲ್ಲಿ ಇದ್ದೇನೆ, ಸ್ವಾಮಿ.
ಅಧಿಕಾರಿ: ಈ ಮೂರು ಶಹರಗಳಲ್ಲಿ ನಿನಗೆ ಅತಿ ಮೆಚ್ಚಿಗೆಯಾಗುವ ಊರು ಯಾವುದು?
ಪ್ರಜೆ: ಸೇಂಟ ಪೀಟರ್ಸಬರ್ಗ, ಸ್ವಾಮಿ!
(ಟಿಪ್ಪಣಿ: ಸೇಂಟ ಪೀಟರ್ಸಬರ್ಗ ಎನ್ನುವ ಪಟ್ಟಣದ ಹೆಸರನ್ನು ೧೯೧೪ರಲ್ಲಿ ಪೆಟ್ರೋಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. ೧೯೨೪ರಲ್ಲಿ ಲೆನಿನ್‍ಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. !)

ವೀಕ್ಲಿ ಈ ನಗೆಹನಿಯನ್ನು ಪ್ರಕಟಿಸಿ ಸುಮಾರು ೨೦-೨೫ ವರ್ಷಗಳ ನಂತರ ರಶಿಯಾ ದೇಶ glasnost ಹಾಗು perestroikaದ ಪರಿಣಾಮದಿಂದ ಒಡೆದು ತುಂಡಾಯಿತು. ಲೆನಿನ್‍ಗ್ರ್ಯಾಡ್ ಎನ್ನುವ ಹೆಸರನ್ನು ೧೯೯೧ರಲ್ಲಿ ಮತ್ತೊಮ್ಮೆ ಸೇಂಟ ಪೀಟರ್ಸಬರ್ಗ ಎಂದು ಬದಲಾಯಿಸಲಾಯಿತು.
ಎಂತಹ ವಿಪರ್ಯಾಸ!