Friday, May 2, 2008

ನನ್ನೊಳಗಿನ ‘ಅವನು’

“ ನನ್ನೊಳಗಿನ ‘ಅವನು’ ” ಇದು ನನ್ನ ಹಿರಿಯ ಸ್ನೇಹಿತ ಶ್ರೀ ನಾರಾಯಣ ಕುಲಕರ್ಣಿ ಇವರು ಬರೆದ ಕವಿತೆ. ಇದೊಂದು ಸರಳ, ಸುಂದರ ಹಾಗೂ ಲಲಿತವಾದ ಕವಿತೆಯಾಗಿದೆ. ಈ ಕವಿತೆ ದಿ: ೨೫-೮-೨೦೦೨ರಂದು ‘ಕರ್ಮವೀರ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ನನ್ನೊಳಗಿನ ‘ಅವನು’

ನನ್ನ ಒಳಗೆ ಇರುವ ಅವನು
ಮಿಡಿಯುತಿರುವನು ಮನವನು
ಭವದ ಕತ್ತಲೆಯೊಳಗೆ ಇರುತಿರೆ
ಸೂಸುತಿರುವನು ಬೆಳಕನು.

ಸತ್ಯಪಥದಲಿ ನಿತ್ಯ ನಡೆಯಲು
ಮತ್ತೆ ಪ್ರೇರಣೆಗೈವನು
ಸತ್ವ ತೇಜದ ಬೆಳಕಿನಡಿಯಲಿ
ಬಾಳ ತೇರನು ಎಳೆವನು.

ಸಕಲ ಇಂದ್ರಿಯ ವಾಜಿಗಳನು
ಮೂಗುದಾರದಿ ಬಿಗಿವನು
ಸಡಿಲು ತೋರಲು ಚಾಟಿಯಿಂದಲಿ
ಸರಿಯ ದಾರಿಗೆ ತರುವನು.

ನುಡಿವ ನುಡಿಯಲಿ ನಡೆವ ನಡೆಯಲಿ
ತಪ್ಪನೆಂದಿಗೂ ಸಹಿಸನು
ಮುತ್ತು ಮಾತಿಗೆ ದಿಟ್ಟ ನಡತೆಗೆ
ಹೆಸರು ಮುಂದಕೆ ತರುವನು.

ದೀನ ಜನಗಳ ಆರ್ತ ಮೊರೆಗೆ
ಹೃದಯ ಕದವನು ತೆರೆವನು
ತನ್ನಲಿರುವ ಅಸನ-ವಸನವ
ಉಣಿಸಿ ತಣಿಸುತ ನಲಿವನು.

ಸುಳ್ಳು-ಕಳುವು ಮೋಸಗಳಿಗೆ
ಬಾಗಿಲನ್ನು ತೆರೆಯನು
ವನಿತೆ ಮೋಹದ ಜಾಲಗಳಿಗೆ
ಸಿಲುಕದಂತೆ ತಡೆವನು.

ಇಂತು ಹೃದಯದ ಪದ್ಮದಲ್ಲಿ
ಪದ್ಮನಾಭನು ಇರುವನು
ಅವನ ಇರುವನು ನೆನಸಿಕೊಂಡು
ಚಣಕು ಚಣಕು ಮಣಿವೆನು.

9 comments:

ಸುಪ್ತದೀಪ್ತಿ suptadeepti said...

ಕಾಕಾ, ಪುಟ್ಟ ಸಂದೇಹ...
"ವನಿತೆ ಮೋಹದ ಜಾಲಗಳಿಗೆ"- ಇಂಥ ಸಾಲುಗಳನ್ನು ಬರೆಯುವಾಗ ನಾವು ಮಹಿಳೆಯರು ಏನಂತ ಹೇಳಬೇಕು?

ಮಹನೀಯರಿಗೆ ಮಹಿಳೆ ಮೋಹದ ಮೋಸದ ಜಾಲ. ನಮಗೆ?

ಸುಪ್ತದೀಪ್ತಿ suptadeepti said...

ನೀವಂದಂತೆಯೇ ಕವನ ಸರಳವಾಗಿದೆ. ಹೇಳಬೇಕಾದ್ದನ್ನು ನೇರವಾಗಿ, ಮನಮುಟ್ಟುವಂತೆ ಹೇಳುತ್ತಿದೆ. ಧನ್ಯವಾದಗಳು.

Unknown said...

ಸುಪ್ತದೀಪ್ತಿಯವರ ಸೂಕ್ಷ್ಮಗ್ರಹಣವು ಮೆಚ್ಚಿಗೆಯಾಯಿತು. ಭೋಗದ ಮೋಹವಿರುವದು ತನ್ನ ಅಂತರಂಗದಲ್ಲಿಯೇ ಹೊರತು,ಮೋಹದ ವಸ್ತುವಿನಲ್ಲಿ ಅಲ್ಲ.ಸರಿಯೆ, ಸುನಾಥರೆ?

sunaath said...

ಜ್ಯೋತಿ,
ನಿನ್ನ ಸಂದೇಹ ಸರಿಯಾಗಿಯೇ ಇದೆ.ಈ ಸಾಲು ಓದುವಾಗ, ನನಗೂ ಸಹ ಅಪಥ್ಯವೆನಿಸಿತು. ಆದರೆ ಇದನ್ನು ಮತ್ತೊಂದು ದೃಷ್ಟಿಕೋನದಿಂದ ನೋಡೋಣ:

ಸ್ತ್ರೀ-ಪುರುಷರ ಪರಸ್ಪರ ಆಕರ್ಷಣೆ ನೈಸರ್ಗಿಕವಾದದ್ದು. ಈ ಆಕರ್ಷಣೆ ನೈತಿಕ ಕಟ್ಟಳೆಗಳನ್ನು ಮೀರದಿರಲಿ ಎನ್ನುವದು ಕವಿಯ ಆಶಯವಿದ್ದೀತು. ಅಥವಾ ಭಾರತೀಯ ಸಾಂಪ್ರದಾಯಿಕ ಮನೋಧರ್ಮದ ಕವಿಯು,ಗೃಹಸ್ಥಾಶ್ರಮದ ಉದ್ದೇಶಗಳು ಫಲಿತವಾದ ಬಳಿಕ, ತನ್ನ ಮನಸ್ಸು ಆ ಆಕರ್ಷಣೆಯಿಂದ ಹೊರಬರಲಿ ಎನ್ನುವದಿದ್ದೀತು.

ಇನ್ನು, ಭಾರತೀಯ ಶಾಸನಗಳಲ್ಲಿ ಹೇಳಿದಂತೆ, 'ಅವನು' ಎಂದು ಬರೆದಲ್ಲೆಲ್ಲ, 'ಅವಳು' ಎಂದೂ ಸಹ ಅರ್ಥೈಸಿಕೊಳ್ಳಬೇಕು. ಆದುದರಿಂದ ಮಹಿಳೆಗೆ ಪುರುಷನೇ ಮೋಹ(ಸ)ದ ಜಾಲ! ಅಕ್ಕಮಹಾದೇವಿಯೂ ಸಹ, ಅನುಭವಮಂಟಪದಲ್ಲಿಯ ಶರಣರನ್ನು ಇದೇ ರೀತಿ ಛೇಡಿಸಿದ್ದಾಳೆ!

sunaath said...

ವನಮಾಲಾ,
ಮೇಲಿನ ಉತ್ತರವು ನಿಮ್ಮ ಪ್ರಶ್ನೆಗೂ ಸರಿ ಹೊಂದುತ್ತದೆಯೆ?

ಸುಪ್ತದೀಪ್ತಿ suptadeepti said...

ಕಾಕಾ, ಕವನದ ಇಂಗಿತ ಅರಿತಿದ್ದೆ. ಅಲ್ಲಿನ ಪಾರಮಾರ್ಥಿಕ ಚಿಂತನೆ ಅರ್ಥವಾಗದ್ದೇನಲ್ಲ. ಸುಮ್ಮನೇ ತಮಾಷೆಗೆ ಹಾಗಂದೆ, ಅಷ್ಟೇ.

ಮಾನವ, ಪುರುಷ, ಮನುಷ್ಯ- ಇವೆಲ್ಲ ಪುಲ್ಲಿಂಗ ಪದಗಳಾಗಿದ್ದು,
ಮಾಯೆ, ಪ್ರಕೃತಿ, ಮೋಹ- ಇವೆಲ್ಲ ಸ್ತ್ರೀಲಿಂಗ ಪದಗಳಾಗಿದ್ದು,
ಈ ವ್ಯಾಕರಣ ನಮ್ಮ ಜೀವನದೊಳಗೆ ಸಾಮಾಜಿಕ ಗೊಂದಲ ಹುಟ್ಟಿಸಿದೆ.

ಸಾಮಾನ್ಯವಾಗಿ ಮಹಿಳೆಯರು ಬರೆಯುವಾಗ "ಲೋಕದ (ಲೌಕಿಕ) ಮೋಹದಿಂದ ಬಿಡುಗಡೆ, ಮಾಯೆಯಿಂದ ಮುಕ್ತಿ" ಅಂತೆಲ್ಲ ಬರೆಯುತ್ತಾರೆ; ಮಹನೀಯರು ಸರಳವಾಗಿ "ಮಾನಿನಿಯಿಂದ..." ಅಂದುಬಿಡುತ್ತಾರೆ. ಸ್ತ್ರೀವಾದಿಗಳಿಗೆ ಅಷ್ಟೇ ಸಾಕಾಗುತ್ತದೆ.

ನನ್ನ ಮೊದಲಿನ ಪ್ರತಿಕ್ರಿಯೆ ಟೀಕೆಯದ್ದಲ್ಲ, ಸಣ್ಣವಳಾಗಿರುವ ಕಾರಣದಿಂದ ಕೀಟಲೆಯದ್ದು. ಚಿಕ್ಕಪ್ಪನ ಕಾಲೂ ಎಳೆಯಲು ನೋಡಿದ್ದಕ್ಕೆ ಕ್ಷಮೆಯಿದೆ ತಾನೆ?

ಕುಕೂಊ.. said...

ಕಾಕಾ "ನನ್ನೊಳಗೆ 'ಅವನು" ಕವನ ನನಗೆ ತುಂಬಾ ಇಷ್ಟವಾಯಿತು,

ಧನ್ಯವಾದಗಳೊಂದಿಗೆ
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ

sunaath said...

ಜ್ಯೋತಿ,
ನನಗೆ ಅನಿಸಿತ್ತು: ನೀನು ಛೇಡಿಸುತ್ತಾ ಇದ್ದೀಯಾ ಅಂತ;
I like that!
ಆದರೆ ನನಗೂ ಸಹ ಅಪಥ್ಯವಾದ ಸಾಲಿಗೆ ನಾನೇ ಸಮಾಧಾನ ಕೊಟ್ಟುಕೊಂಡ ಹಾಗೆ!
-ಕಾಕಾ

sunaath said...

ಕುಮಾರಸ್ವಾಮಿಯವರೆ,
ನಿಮ್ಮ ಮೆಚ್ಚಿಕೆಯನ್ನು ಶ್ರೀ ಎನ್.ಎಲ್.ಕುಲಕರ್ಣಿಯವರಿಗೆ ತಲುಪಿಸಿದ್ದೇನೆ. ಅವರ ಧನ್ಯವಾದಗಳನ್ನು ದಯವಿಟ್ಟು ಸ್ವೀಕರಿಸಿ.