Sunday, May 25, 2008

ಕೋಲರು, ಮುಂಡರು, ನಾಗರು, ಮಹಿಷರು

ದೇವಿಪುರಾಣದಲ್ಲಿ ಕಾಣಸಿಗುವ ಎರಡು ಮಹತ್ವದ ಸಮುದಾಯಗಳೆಂದರೆ ಕೋಲರು ಹಾಗು ಮುಂಡರು. ಕೋಲರು ಈಗ ತಮಿಳುನಾಡಿನಲ್ಲಿರುವ ನೀಲಗಿರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರಾಡುವ ಭಾಷೆ ತಮಿಳು ಹಾಗು ಕನ್ನಡ ಕೂಡಿದ ಭಾಷೆ. ಓಡಿಸಾದಲ್ಲಿರುವ ಒಂದು ಸಮುದಾಯಕ್ಕೂ ಕೋಲ ಎನ್ನುವ ಹೆಸರಿದೆ. ಈ ಸಮುದಾಯದ ಇತರ ಹೆಸರುಗಳು: ಕುಂಟಮ್, ಕುಡ, ಕೋರ, ಮಿರ್ಧ, ಮೊರ್ಭ, ಬಿರ್ಹೋರ ಮತ್ತು ನಾಗೇಸಿಯ. ಇವರ ಭಾಷೆ ದ್ರಾವಿಡ. ಕರ್ನಾಟಕದಲ್ಲಿಯ ಒಂದು ಸಮುದಾಯಕ್ಕೆ ಕುಡಒಕ್ಕಲಿಗರು ಎಂದು ಕರೆಯಲಾಗುತ್ತಿದೆ. ಇದರಂತೆ ಕೋಲರ ಮತ್ತೊಂದು ಹೆಸರಾದ ನಾಗೇಸಿಯ ಎನ್ನುವದು ದ್ರಾವಿಡ ಸಮುದಾಯಗಳಿಗೂ ನಾಗ ಸಮುದಾಯಕ್ಕೂ ಇರುವ ಸಂಬಂಧವನ್ನು ತೋರಿಸುತ್ತದೆ.

ವೈದಿಕ ದೇವತೆಯಾದ ಇಂದ್ರನು ರಚಿಸಿದ ದೇವಿಸ್ತುತಿಯಲ್ಲಿ ಈ ರೀತಿಯ ವರ್ಣನೆ ಇದೆ:
“ ನಮಸ್ತೇ ಗರುಡಾರೂಢೆ, ಕೋಲಾಸುರ ಭಯಂಕರೀ|
ಸರ್ವದುಃಖಹರೇ ದೇವಿ, ಮಹಾಲಕ್ಷ್ಮಿ ನಮೋಸ್ತುತೇ||

ವೈದಿಕ ದೇವತೆಯಾದ ಇಂದ್ರನು ಪಿತೃಪ್ರಧಾನ ಜನಾಂಗದ ದೇವತೆ. ದೇವಿಯು ಮಾತೃಪ್ರಧಾನ ಜನಾಂಗದ ದೇವತೆಯಾಗಿದ್ದಾಳೆ. ಯಾವ ಕಾರಣಕ್ಕಾಗಿ ವೈದಿಕ ಧರ್ಮಾನುಯಾಯಿಗಳಾದ, ಪಿತೃಪ್ರಧಾನ ಆರ್ಯರು, ಅವೈದಿಕ ಸಂಪ್ರದಾಯದ, ಮಾತೃಪ್ರಧಾನ, ಆರ್ಯೇತರ ಜನಾಂಗದ ನೆರವನ್ನು ಪಡೆದರು ಎನ್ನುವದು ನಿಗೂಢವಾಗಿದೆ. ಈ ದೇವಿಯು ಕೋಲ ಸಮುದಾಯವನ್ನಲ್ಲದೆ, ಮುಂಡ ಸಮುದಾಯವನ್ನೂ ಸಹ ಸಂಹರಿಸಿದಳು.

“ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|”
…………………(ಲಲಿತಾ ಸಹಸ್ರನಾಮ)

ಕರ್ನಾಟಕದಲ್ಲಿ ಕೋಲ ಪದದಿಂದ ಪ್ರಾರಂಭವಾಗುವ ೪೫ ಹಾಗು ಕೋರ ಪದದಿಂದ ಪ್ರಾರಂಭವಾಗುವ ೨೨, ಅಂದರೆ ಒಟ್ಟಿನಲ್ಲಿ ೬೭ ಗ್ರಾಮಗಳಿವೆ. ಕೆಲವು ಉದಾಹರಣೆಗಳು: ಕೋಲಾರ, ಕೋರಮಂಗಲ. ಕರ್ನಾಟಕದ ಹೊರಗೂ ಸಹ ಕೋಲ/ಕೋರ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧ ಹೆಸರೆಂದರೆ ಮಹಾರಾಷ್ಟ್ರ ರಾಜ್ಯದಲ್ಲಿಯ ಕೊಲ್ಲಾಪುರ ಹಾಗೂ ಕೋರೆಗಾವ.

ಮುಂಡ ಸಮುದಾಯವು ಸದ್ಯಕ್ಕೆ ಝಾರಖಂಡ, ಛತ್ತೀಸಘಡ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಇವರ ಜನಸಂಖ್ಯೆ ಸುಮಾರು ೨೦ ಲಕ್ಷದಷ್ಟಿದೆ. ಇವರ ಭಾಷೆ ಮುಂಡಾರಿ. ಇದು ಆಸ್ಟ್ರೋ-ಏಶಿಯಾಟಿಕ್ ಭಾಷೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ ಭಾರತೀಯರಲ್ಲಿ ಮುಂಡ ಜನಾಂಗದ ‘ ಕರಿಯ ಮುಂಡ ’ ಎನ್ನುವವನೇ ಮೊದಲಿಗನು. ಈತ ಮಧ್ಯಪ್ರದೇಶದವನು. ಕರಿಯ ಎನ್ನುವ ಈತನ ಹೆಸರನ್ನು ಗಮನಿಸಿರಿ. ಇದು ದ್ರಾವಿಡ ಹೆಸರು. ಕರ್ನಾಟಕದಲ್ಲಿ ಮುಂಡ ಪದದಿಂದ ಪ್ರಾರಂಭವಾಗುವ ೨೫ ಗ್ರಾಮಗಳಿವೆ. ಉದಾಹರಣೆಗಳು: ಮುಂಡರಗಿ, ಮುಂಡಗೋಡ, ಮುಂಡರಟ್ಟಿ ಇತ್ಯಾದಿ. ಆದರೆ ಸದ್ಯದಲ್ಲಿ ಮುಂಡ ಜನಾಂಗವು ಕರ್ನಾಟಕದಲ್ಲಿ ಉಳಿದಿಲ್ಲ.

ಜನಾಂಗಸೂಚಕ ಸ್ಥಳನಾಮಗಳಲ್ಲಿ ಮಲ್ಲರ ನಂತರದ ಸ್ಥಾನ ಸಿಗುವದು ನಾಗ ಪದಕ್ಕೆ. ಕರ್ನಾಟಕದಲ್ಲಿ ನಾಗ ಪದದಿಂದ ಪ್ರಾರಂಭವಾಗುವ ೩೧೩ ಗ್ರಾಮಗಳಿವೆ. ಪುರಾಣಗಳ ಪ್ರಕಾರ ನಾಗರೂ ಸಹ ಹಿಮಾಲಯದ ಅಡಿಯಲ್ಲಿದ್ದವರು. ಇಂದ್ರನು ದೇವಿಸ್ತುತಿಯಲ್ಲಿ ದೇವಿಯನ್ನು ‘ಗರುಡಾರೂಢೇ’ ಎಂದು ಬಣ್ಣಿಸುತ್ತಾನೆ. ಗರುಡಪಕ್ಷಿಯು ನಾಗರ ವೈರಿ ಎನ್ನುವದು ಸರ್ವವಿದಿತವಿದೆ. ಈಗಲೂ ಸಹ ಭಾರತದ ಈಶಾನ್ಯ ಭಾಗದಲ್ಲಿ ನಾಗ ಜನಾಂಗದವರಿದ್ದಾರೆ. ಶಂ. ಬಾ. ಜೋಶಿಯವರು ಋಗ್ವೇದಲ್ಲಿ ದೊರೆಯುವ ನಾಗಪ್ರತಿಮೆಗಳ ಬಗೆಗೆ ಆಳವಾದ ಅಧ್ಯಯನವನ್ನೇ ಮಾಡಿದ್ದಾರೆ. ಆದರೆ ನಾಗರಿಗೂ ಕರ್ನಾಟಕಕ್ಕೂ ಏನಾದರೂ ಸಂಬಂಧವಿದೆಯೆ? ಕರ್ನಾಟಕದ ಎಲ್ಲ ಭಾಗದಲ್ಲಿಯೂ ನಾಗ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಕೆಲವು ಉದಾಹರಣೆಗಳು: ನಾಗನೂರು, ನಾಗರಭಾವಿ, ನಾಗರಾಳ, ನಾಗಮಂಗಲ ಇತ್ಯಾದಿ.

ಅರ್ಜುನನು ಖಾಂಡವವನದಿಂದ ಉತ್ಪಾಟಿಸಿದ್ದು ನಾಗಕುಲವನ್ನು. ಈ ನಾಗರು ಕರ್ನಾಟಕಕ್ಕೆ ಬಂದು ನೆಲಸಿದರೆ?
ಕರ್ನಾಟಕದಲ್ಲಿ ನಾಗರಖಂಡವೆನ್ನುವ ಪ್ರದೇಶವಿದೆ. ಕರ್ನಾಟಕದ ಕರಾವಳಿ ಹಾಗು ಘಟ್ಟ ಪ್ರದೇಶದಲ್ಲಿ ನಾಗಪೂಜೆಯ ಬಲವಾದ ಸಂಪ್ರದಾಯವಿದೆ. ಇದು ನಾಗ ಜನಾಂಗದ ಕೊಡುಗೆಯೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೆ ನಾಗಪೂಜೆಯನ್ನು ಪುತ್ರಲಾಭಕ್ಕಾಗಿ ಮಾಡುವದನ್ನು ಗಮನಿಸಿರಿ. ಕೆಲವು ಪಂಡಿತರ ಅಭಿಪ್ರಾಯದ ಪ್ರಕಾರ ಕಂದ ಶಬ್ದದಿಂದ ಸ್ಕಂದ ಶಬ್ದ ಬಂದಿರುವ ಶಕ್ಯತೆ ಇದೆ. ಕಂದ ಜನಾಂಗದ ನಿವಾಸವೇ ಖಾಂಡವವನವಾಗಿರುವದರಿಂದ, ಕಂದರು ಹಾಗು ನಾಗರು ಪರ್ಯಾಯ ಪದಗಳಾಗಿರುವ ಸಂಭಾವ್ಯತೆ ಕಂಡು ಬರುತ್ತದೆ. ಅಥವಾ ಸೋದರ ಸಮುದಾಯದವರಾಗಿರಬಹುದು. ಆದುದರಿಂದ ನಾಗರು ಕರ್ನಾಟಕಕ್ಕೆ ಬಂದು ನೆಲಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ.

ಮಾತೃಸೈನ್ಯದಿಂದ ಸೋಲಿಸಲ್ಪಟ್ಟ ಮತ್ತೊಂದು ಅಸುರಕುಲದವರೆಂದರೆ ಮಹಿಷಕುಲ. ಇವರು ಎಮ್ಮೆಗಳ ಹೈನುಗಾರಿಕೆಯಲ್ಲಿ ತೊಡಗಿಕೊಂಡವರು. ಕರ್ನಾಟಕದಲ್ಲಿ ಮಹಿಷಿ, ಮಹಿಷವಾಡಗಿ, ಮೈಸಾವಿ(=ಮ್ಹೈಸಾವಿ), ಮೈಸಾಳಗಾ(=ಮ್ಹೈಸಾಳಗಾ), ಮೈಸವಳ್ಳಿ(=ಮ್ಹೈಸವಳ್ಳಿ), ಮೈಸೂರು(=ಮ್ಹೈಸೂರು) ಮೊದಲಾದ ಸ್ಥಳನಾಮಗಳು, ಈ ಪ್ರದೇಶದಲ್ಲಿ ವ್ಯಾಪಕವಾಗಿ ನೆಲೆಸಿದ್ದ ಮಹಿಷ ಸಮುದಾಯವನ್ನು ತೋರಿಸುತ್ತವೆ. ಇದರಂತೆ ಎಮ್ಮೆ ಅಥವಾ ಕೋಣ ಪದದಿಂದ ಪ್ರಾರಂಭವಾಗುವ ೫೮ ಸ್ಥಳಗಳು (ಉದಾಹರಣೆಗೆ ಎಮ್ಮಿಗನೂರು, ಕೋಣಾಜೆ, ಕೋಣಂದೂರು ಇತ್ಯಾದಿ) ಕರ್ನಾಟಕದಲ್ಲಿವೆ.

ಈ ಮಹಿಷ ಕುಲದವರು ಹಾಗು ಆಕಳ ಹೈನುಗಾರಿಕೆಯಲ್ಲಿ ತೊಡಗಿದ ಗೊಲ್ಲರು ಬೇರೆ ಬೇರೆ ಸಮುದಾಯದವರು. ಆಕಳ ಹೈನುಗಾರಿಕೆಯನ್ನು ಸೂಚಿಸುವ ೧೭೧ ಗ್ರಾಮಗಳು ಕರ್ನಾಟಕದಲ್ಲಿವೆ.
(ಉದಾ: ಗೋನಾಳ, ಗೋಹಟ್ಟಿ, ಗೋಕಾವಿ ಇತ್ಯಾದಿ.
ಟಿಪ್ಪಣಿ: ಗೋಗಾವ ಇದು ಗೋಕಾವಿಯಾಗಿ ಮಾರ್ಪಟ್ಟು, ತನ್ನಂತರ ಬ್ರಿಟಿಶ್ ಕಾಲದಲ್ಲಿ ಗೋಕಾಕ ಎಂದು ಬದಲಾವಣೆಯಾಗಿದೆ).

ಕರ್ನಾಟಕದ ಹೊರಗೂ ಸಹ, ಈ ಸ್ಥಳನಾಮಗಳು ದೊರೆಯುತ್ತಿದ್ದು, ‘ಗೋವಾ’ ಇದಕ್ಕೆ ಉತ್ತಮ ಉದಾಹರಣೆ.
ಮಹಿಷ ಕುಲದ ಗ್ರಾಮಗಳು ಮಹಾರಾಷ್ಟ್ರ, ಕರ್ನಾಟಕ ಹಾಗು ಆಂಧ್ರಪ್ರದೇಶದ ದೊಡ್ಡ ಭಾಗವನ್ನು ವ್ಯಾಪಿಸಿಕೊಂಡಿವೆ. ಆಂಧ್ರಪ್ರದೇಶದಲ್ಲಿಯ ‘ಎಮ್ಮಿಗನೂರು’ ಪ್ರಸಿದ್ಧ ಸ್ಥಳ. ಅದರಂತೆ, ಮಹಾರಾಷ್ಟ್ರದಲ್ಲಿಯೂ ಸಹ ‘ಮ್ಹೈಸಾಳ’ ಮೊದಲಾದ ಹೆಸರಿನ ಗ್ರಾಮಗಳಿವೆ. ಕರ್ನಾಟಕದ ಪಶ್ಚಿಮೋತ್ತರ ಭಾಗವನ್ನು ಹಾಗು ಮಹಾರಾಷ್ಟ್ರದ ದಕ್ಷಿಣ ಭಾಗವನ್ನು ಮಹಿಷಮಂಡಲ ಎಂದು ಕರೆಯಲಾಗುತ್ತದೆ.

ಮಾತೃಸೈನ್ಯವು ಆಕಳ ಹೈನುಗಾರಿಕೆಯ ಗೊಲ್ಲ ಕುಲದವರಿಗೆ ಹಾನಿ ಮಾಡದೆ, ಎಮ್ಮೆಯ ಹೈನುಗಾರಿಕೆಯಲ್ಲಿ ತೊಡಗಿಕೊಂಡ ಮಹಿಷ ಕುಲದವರನ್ನು ಸಂಹರಿಸಲು ಕಾರಣವೇನು? ಬಹುಶಃ, ಆರ್ಯ ಜನಾಂಗದವರಿಗೂ, ಮಾತೃಪ್ರಧಾನ ಆರ್ಯೇತರ ಜನಾಂಗದವರಿಗೂ ಒಪ್ಪಂದವಾಗಿರುವ ಸಾಧ್ಯತೆಗಳಿವೆ!

2 comments:

ಅಂತರ್ವಾಣಿ said...

ಸುನಾತ ಅವರೆ,

ನಿಮ್ಮ ಲೇಖನದಿಂದ ಒಳ್ಳೆ ಮಾಹಿತಿ ಒದಗಿತು. ಧನ್ಯವಾದಗಳು.

sunaath said...

ಧನ್ಯವಾದಗಳು, ಜಯಶಂಕರ. Keep visiting.